ಸಮಗ್ರತೆಯನ್ನು ಕಾಪಾಡಿಕೊಂಡು ಜೀವಿಸಿ!
“ದೇವರನ್ನು ದೂಷಿಸಿ ಸಾಯಿ!” ಆ ಮಾತುಗಳಿಂದ ಯೋಬನ ಮೇಲೆ ವಾಗ್ದಾಳಿ ಮಾಡಿದ ಅವನ ಹೆಂಡತಿಯನ್ನು ನಮ್ಮ ಪತ್ರಿಕೆಯ ಮುಖಪುಟವು ಚಿತ್ರಿಸುತ್ತದೆ. ಅದು ಸುಮಾರು 3,600 ವರ್ಷಗಳ ಹಿಂದಿನ ವಿಷಯ. ಆದರೂ ದೇವರ ನಂಬಿಗಸ್ತ ಸೇವಕನ ಮೇಲೆ ಮಾಡಲಾದ ಆ ಶಾಬ್ದಿಕ ಆಕ್ರಮಣವು, ಈ ದಿನದ ತನಕ ಮಾನವಜಾತಿಯನ್ನು ಎದುರಿಸುವ ಒಂದು ವಿವಾದಾಂಶವನ್ನು ಎತ್ತಿತೋರಿಸುತ್ತದೆ. ನಂಬಿಗಸ್ತ ಯೋಬನು ಭಯಂಕರವಾದ ನಷ್ಟಗಳನ್ನು—ತನ್ನ ಜಾನುವಾರು, ತನ್ನ ಮನೆ, ತನ್ನ ಹತ್ತು ಮಂದಿ ಮಕ್ಕಳು—ಅನುಭವಿಸಿದ್ದನು. ಅವನ ತಾಳ್ಮೆಯ ಮಿತಿಯನ್ನು ಪರೀಕ್ಷಿಸುತ್ತಾ, ಈಗ ಅವನ ದೇಹವು ಅಸ್ಥಿಗತವಾದೊಂದು ರೋಗದಿಂದ ಹಿಂಸಿಸಲ್ಪಡುತ್ತಿತ್ತು. ಕಾರಣವು ಏನಾಗಿತ್ತು? ತೀವ್ರವಾದ ಪರೀಕ್ಷೆಯ ಕೆಳಗೆ ಮನುಷ್ಯನು ದೇವರ ಕಡೆಗೆ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ ಎಂಬ ಪಂಥಾಹ್ವಾನವನ್ನು, ದೇವರ ಮತ್ತು ಮನುಷ್ಯನ ಪರಮಶತ್ರುವಾದ ಪಿಶಾಚನಾದ ಸೈತಾನನು ಬೆನ್ನಟ್ಟುತ್ತಿದ್ದನು.—ಯೋಬ 1:11, 12; 2:4, 5, 9, 10.
ಇಂದು, ಯೋಬನ ದಿನದಲ್ಲಿದ್ದಂತೆ, “ಲೋಕವೆಲ್ಲವು ಕೆಡುಕನ,” ಪಿಶಾಚನಾದ ಸೈತಾನನ “ವಶದಲ್ಲಿ ಬಿದಿದ್ದೆ.” (1 ಯೋಹಾನ 5:19) ನಿಶ್ಚಯವಾಗಿಯೂ ಇಂದು ಅದು ಇನ್ನೂ ಅಧಿಕ ಸತ್ಯವಾಗಿದೆ, ಯಾಕೆಂದರೆ ಈಗ “ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ . . . ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ” ವನು ಸ್ವರ್ಗದಿಂದ ಈ ಭೂಮಿಗೆ ದೊಬ್ಬಲ್ಪಟ್ಟಿದ್ದಾನೆ. (ಪ್ರಕಟನೆ 12:9) ನಮ್ಮ ಸಮಯದಲ್ಲಿ ಮಾನವಜಾತಿಯನ್ನು ಬಾಧಿಸುವ ತೀಕ್ಷೈವಾದ ಸಂಕಟಗಳಿಗೆ ಇದು ಕಾರಣವಾಗಿದೆ. ಪ್ರಥಮ ಲೋಕ ಯುದ್ಧವು 1914 ರಲ್ಲಿ ಆರಂಭಗೊಳ್ಳುತ್ತಾ, ಈ 20 ನೆಯ ಶತಮಾನದೊಳಗೆ ಆಳವಾಗಿ ಮುಂದುವರಿದಿರುವ “ಪ್ರಸವವೇದನೆಯ ಪ್ರಾರಂಭ” ವನ್ನು ಗುರುತಿಸಿತು.—ಮತ್ತಾಯ 24:7, 8.
ಈ ಕ್ರೂರವಾದ, ಕೀಳ್ಮಟ್ಟದ ಲೋಕದಲ್ಲಿ, ಮಾನವ ತಾಳ್ಮೆಯ ಮಿತಿಗೆ ನೀವು ಬಂದಿರುವಿರೆಂದು ನಿಮಗೆಂದಾದರೂ ಅನಿಸುತ್ತದೊ? ‘ಜೀವಿತಕ್ಕೆ ಯಾವ ಉದ್ದೇಶವಾದರೂ ಇದೆಯೊ?’ ಎಂದು ನೀವು ಯಾವಾಗಲಾದರೂ ವಿಸ್ಮಯಪಡುತ್ತೀರೊ? ಯೋಬನಿಗೆ ಆ ರೀತಿ ಅನಿಸಿರಬಹುದು, ಆದರೆ ಅವನೆಂದಿಗೂ ದೇವರಲ್ಲಿದ್ದ ನಂಬಿಕೆಯನ್ನು—ತಪ್ಪುಗಳನ್ನು ಅವನು ಮಾಡಿದನಾದರೂ—ಕಳೆದುಕೊಳ್ಳಲಿಲ್ಲ. ಈ ಮಾತುಗಳಲ್ಲಿ ಅವನು ತನ್ನ ದೃಢಸಂಕಲ್ಪವನ್ನು ವ್ಯಕ್ತಪಡಿಸಿದನು: “ಸಾಯುವ ತನಕ ನನ್ನ ಯಥಾರ್ಥತ್ವದ (ಸಮಗ್ರತೆಯ, NW) ಹೆಸರನ್ನು ಕಳಕೊಳ್ಳೆನು.” ದೇವರು ‘ತನ್ನ ಸಮಗ್ರತೆಯನ್ನು ತಿಳಿದುಕೊಳ್ಳುವನೆಂಬ’ ಭರವಸೆ ಅವನಿಗಿತ್ತು.—ಯೋಬ 27:5; 31:6.
ದೇವರ ಸ್ವಂತ ಮಗನಾದ ಯೇಸು ಕ್ರಿಸ್ತನು ಸಹ, ಭೂಮಿಯಲ್ಲಿರುವಾಗ ಪರೀಕ್ಷೆಗಳನ್ನು ತಾಳಿಕೊಳ್ಳಬೇಕಿತ್ತು. ಸೈತಾನನು ಯೇಸುವನ್ನು ವಿವಿಧ ರೀತಿಗಳಲ್ಲಿ ಆಕ್ರಮಿಸಿದನು. ಯೇಸುವಿನ ಶಾರೀರಿಕ ಅಗತ್ಯಗಳ ಪ್ರಯೋಜನವನ್ನು ಅವನು ಪಡೆದನು ಮತ್ತು ಶೋಧನೆಯ ಪರ್ವತದಲ್ಲಿ ಮಾಡಿದಂತೆ ದೇವರ ವಾಕ್ಯದ ಮೇಲೆ ಅವನ ಭರವಸೆಯನ್ನು ಪರೀಕ್ಷಿಸಿದನು. (ಮತ್ತಾಯ 4:1-11) ಧರ್ಮಭ್ರಷ್ಟ ಶಾಸ್ತ್ರಿಗಳು ಮತ್ತು ಫರಿಸಾಯರು ಮತ್ತು ಅವರಿಂದ ಮೋಸಹೋದವರು ಯೇಸುವನ್ನು ಹಿಂಸಿಸುವಂತೆ, ದೇವದೂಷಣೆಯ ಕುರಿತಾಗಿ ಅವನನ್ನು ದೂಷಿಸುವಂತೆ, ಮತ್ತು ಅವನನ್ನು ಕೊಲ್ಲಲು ಒಳಸಂಚು ನಡೆಸುವಂತೆ ಮಾಡುವ ಮೂಲಕ, ಸೈತಾನನು ಯೇಸುವನ್ನು ಪೀಡಿಸಿದನು. (ಲೂಕ 5:21; ಯೋಹಾನ 5:16-18; 10:36-39; 11:57) ಯೋಬನೊಂದಿಗೆ ಆ ಮೂವರು ಸುಳ್ಳು ಸಮಾಧಾನಕಾರರು ವರ್ತಿಸಿದ ರೀತಿಗಿಂತ ಹೆಚ್ಚು ಕೆಟ್ಟದ್ದಾಗಿ ಯೇಸುವಿನೊಂದಿಗೆ ಅವರು ವರ್ತಿಸಿದರು.—ಯೋಬ 16:2; 19:1, 2.
ಗೆತ್ಸೇಮನೆ ತೋಟದಲ್ಲಿ ಯೇಸು ತನ್ನ ಪರೀಕ್ಷೆಯ ತುತ್ತ ತುದಿಯನ್ನು ಸಮೀಪಿಸಿದಂತೆ, ತನ್ನ ಶಿಷ್ಯರಿಗೆ ಅವನಂದದ್ದು: “ನನ್ನ ಪಾಣವು ಸಾಯುವಷ್ಟು ದುಃಖಕ್ಕೆ ಒಳಗಾಗಿದೆ.” ಆಮೇಲೆ “ಬೋರಲ ಬಿದ್ದು—ನನ್ನ ತಂದೆಯೇ, ಸಾಧ್ಯವಾಗಿದ್ದರೆ ಈ ಪಾತ್ರೆಯು ನನ್ನನ್ನು ಬಿಟ್ಟುಹೋಗಲಿ; ಹೇಗೂ ನನ್ನ ಚಿತ್ತದಂತಾಗದೆ ನಿನ್ನ ಚಿತ್ತದಂತೆಯೇ ಆಗಲಿ ಎಂದು ದೇವರನ್ನು ಪ್ರಾರ್ಥಿಸಿದನು.” ಅಂತಿಮವಾಗಿ, ಯಾತನಾ ಸ್ತಂಭದ ಮೇಲೆ, ಕೀರ್ತನೆ 22:1ರ ಪ್ರವಾದನಾ ಮಾತುಗಳ ನೆರವೇರಿಕೆಯಲ್ಲಿ, ಯೇಸು ಕೂಗಿದ್ದು: “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ?” ಆದರೆ ಕೊನೆಯಲ್ಲಿ ದೇವರು ಯೇಸುವನ್ನು ತೊರೆಯಲಿಲ್ಲ ಯಾಕೆಂದರೆ, ಹಿಂಬಾಲಿಸುವಂತೆ ಎಲ್ಲ ಸತ್ಯ ಕ್ರೈಸ್ತರಿಗೆ ಒಂದು ಮಾದರಿಯನ್ನು ಒದಗಿಸುತ್ತಾ ಯೇಸು ದೇವರ ಕಡೆಗೆ ಪರಿಪೂರ್ಣ ಸಮಗ್ರತೆಯನ್ನು ಕಾಪಾಡಿಕೊಂಡನು. ಯೇಸುವಿನ ಸಮಗ್ರತೆಗೆ ಯೆಹೋವನು, ಅವನನ್ನು ಪುನರುತ್ಥಾನಗೊಳಿಸುವ ಮೂಲಕ ಮತ್ತು ಅತ್ಯುನ್ನತ ಸ್ವರ್ಗಗಳಿಗೆ ಅವನನ್ನು ಏರಿಸುವ ಮೂಲಕ ಪ್ರತಿಫಲ ನೀಡಿದನು. (ಮತ್ತಾಯ 26:38, 39; 27:46; ಅ. ಕೃತ್ಯಗಳು 2:32-36; 5:30; 1 ಪೇತ್ರ 2:21) ತದ್ರೀತಿಯಲ್ಲಿ ಆತನ ಕಡೆಗೆ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಇತರರೆಲ್ಲರಿಗೆ ದೇವರು ಪ್ರತಿಫಲ ನೀಡುವನು.
ಯೇಸುವಿನ ಸಮಗ್ರತೆಯು ಸೈತಾನನ ಪಂಥಾಹ್ವಾನಕ್ಕೆ ಸಂಪೂರ್ಣವಾದೊಂದು ಉತ್ತರವನ್ನು ಕೊಟ್ಟಿತು ಮಾತ್ರವಲ್ಲ ಅವನ ಪರಿಪೂರ್ಣ ಮಾನವ ಜೀವದ ಬಲಿಯು ಪ್ರಾಯಶ್ಚಿತವ್ತನ್ನು ಒದಗಿಸಿತು. ಇದರ ಆಧಾರದ ಮೇಲೆ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಮಾನವರು ನಿತ್ಯ ಜೀವವನ್ನು ಪಡೆಯಬಹುದು. (ಮತ್ತಾಯ 20:28) ಪ್ರಥಮವಾಗಿ, ಸ್ವರ್ಗದ ರಾಜ್ಯದಲ್ಲಿ ಅವನೊಂದಿಗೆ ಸಹಬಾಧ್ಯಸ್ಥರಾಗುವ ಅಭಿಷಿಕ್ತ “ಚಿಕ್ಕ ಹಿಂಡ”ನ್ನು ಯೇಸು ಒಟ್ಟುಗೂಡಿಸುತ್ತಾನೆ. (ಲೂಕ 12:32) ಇದಾದಮೇಲೆ, ಭೂಮಿಯಲ್ಲಿ ದೇವರ ರಾಜ್ಯದ ಕ್ಷೇತ್ರದಲ್ಲಿ ಅನಂತ ಜೀವವನ್ನು ಪಡೆಯಲು, “ಮಹಾ ಹಿಂಸೆಯನ್ನು” ಪಾರಾಗಿ, ಅದರಿಂದ ಹೊರ ಬರುವ ಒಂದು “ಮಹಾ ಸಮೂಹ” ದವರು ಒಟ್ಟುಗೂಡಿಸಲ್ಪಡುತ್ತಾರೆ.—ಪ್ರಕಟನೆ 7:9, 14-17.
ಸಮಗ್ರತೆಯನ್ನು ಕಾಪಾಡಿಕೊಂಡ ಯೋಬನು, ಆ ಶಾಂತಿಭರಿತ “ಹೊಸ ಭೂಮಿ”ಯ ಸಮಾಜದ ಭಾಗವಾಗಲು ಆಗ ಪುನರುತ್ಥಾನಗೊಳಿಸಲ್ಪಡುವ ಲಕ್ಷಾಂತರ ಸತ್ತ ಜನರಲ್ಲಿ ಒಬ್ಬನಾಗಿರುವನು. (2 ಪೇತ್ರ 3:13; ಯೋಹಾನ 5:28, 29) ನಮ್ಮ ಪತ್ರಿಕೆಯ ಹಿಂದುಗಡೆಯ ಪುಟದಲ್ಲಿ ಚಿತ್ರಿಸಲಾದಂತೆ, ಯೆಹೋವನು “ಯೋಬನ ಮೊದಲನೆಯ ಸ್ಥಿತಿಗಿಂತಲೂ ಅವನ ಕಡೆಯ ಸ್ಥಿತಿಯನ್ನು . . . ಆಶೀರ್ವದಿಸಿ” ದಾಗ, ಯೋಬನಿಗೆ ತನ್ನ ಸಮಗ್ರತೆಗಾಗಿ ಪ್ರತಿಫಲ ದೊರಕಿತು. ‘ತನ್ನ ತುಟಿಗಳಿಂದ ಪಾಪವನ್ನು ಮಾಡದವನಾಗಿ’ ಅವನು ಆತ್ಮಿಕ ಬಲವನ್ನು ಪಡೆದಿದ್ದನು. ದೇವರು ಅವನ ಜೀವಿತವನ್ನು ಇನ್ನೂ 140 ವರ್ಷ ಹೆಚ್ಚಿಸಿದನು. ಪ್ರಾಪಂಚಿಕವಾಗಿ, ಯೋಬನಿಗಿದ್ದ ಎಲ್ಲ ವಿಷಯಗಳ ಎರಡರಷ್ಟನ್ನು ಆತನು ಅವನಿಗೆ ಕೊಟ್ಟನು, ಮತ್ತು ಯೋಬನಿಗೆ “ಏಳು ಮಂದಿ ಗಂಡುಮಕ್ಕಳೂ ಮೂರು ಮಂದಿ ಹೆಣ್ಣು ಮಕ್ಕಳೂ ಆದರು,” ಹೆಣ್ಣು ಮಕ್ಕಳು ಇಡೀ ದೇಶದಲ್ಲಿ ಅತ್ಯಂತ ಸುಂದರಿಯರೆಂದು ಪರಿಗಣಿಸಲ್ಪಟ್ಟರು. (ಯೋಬ 2:10; 42:12-17) ಆದರೆ ಈ ಎಲ್ಲ ಏಳಿಗೆಯು “ಹೊಸ ಭೂಮಿ”ಯ ಪ್ರಮೋದವನದಲ್ಲಿ ಸಮಗ್ರತೆಯನ್ನು ಕಾಪಾಡಿಕೊಳ್ಳುವವರು ಅನುಭವಿಸುವ ಆಶೀರ್ವಾದಗಳ ಕೇವಲ ಒಂದು ಮುನ್ಸೂಚನೆಯಾಗಿತ್ತು. ಮುಂದಿನ ಪುಟಗಳು ವಿವರಿಸುವಂತೆ ನೀವು ಸಹ ಆ ಆನಂದದಲ್ಲಿ ಭಾಗಿಗಳಾಗಬಲ್ಲಿರಿ!
[ಪುಟ 4 ರಲ್ಲಿರುವ ಚಿತ್ರ]
ಸಮಗ್ರತೆಯನ್ನು ಕಾಪಾಡುವವನೋಪಾದಿ ಯೇಸು ಪರಿಪೂರ್ಣ ಮಾದರಿಯನ್ನಿಟ್ಟನು