ರಾಜ್ಯ ಘೋಷಕರು ವರದಿಮಾಡುತ್ತಾರೆ
ಯೆಹೋವನು ತನ್ನ ಶತ್ರುಗಳಿಗಿಂತ ಹೆಚ್ಚು ಬಲಶಾಲಿಯಾಗಿದ್ದಾನೆ
ಪಿಶಾಚನು ಮತ್ತು ಅವನ ದೆವ್ವಗಳು ಸುಳ್ಳು ಧರ್ಮ ಮತ್ತು ಪ್ರೇತಾರಾಧನೆಯ ಮೂಲಕ ಸುವಾರ್ತೆಯ ಸಾರುವಿಕೆಯನ್ನು ತಡೆಗಟ್ಟಲು ಬಹು ಕಾಲದಿಂದ ಪ್ರಯತ್ನಿಸಿವೆ. ಬೈಬಲು 2 ಕೊರಿಂಥ 4:4 ರಲ್ಲಿ ಸೈತಾನನ ದುಷ್ಟ ಹೇತುವಿನ ಕುರಿತಾಗಿ ಮಾತಾಡುತ್ತದೆ. ಅದು ಅಲ್ಲಿ ತಿಳಿಸುವದೇನಂದರೆ “ದೇವರ ಪ್ರತಿರೂಪವಾಗಿರುವ ಕ್ರಿಸ್ತನ ಪ್ರಭಾವವನ್ನು ತೋರಿಸುವ ಸುವಾರ್ತೆಯ ಪ್ರಕಾಶವು ಉದಯವಾಗಬಾರದೆಂದು ಈ ಪ್ರಪಂಚದ ದೇವರು ನಂಬಿಕೆಯಿಲ್ಲದವರ ಮನಸ್ಸನ್ನು ಮಂಕುಮಾಡಿದನು.”
ಆದರೆ ಯೆಹೋವ ದೇವರು ಸೈತಾನನಿಗಿಂತ ಹೆಚ್ಚು ಬಲವುಳ್ಳವನಾಗಿದ್ದಾನೆ. “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂದು” ಇರುವ ಆತನ ದೈವಿಕ ಚಿತ್ತದ ಪೂರ್ಣಗೊಳಿಸುವಿಕೆಯನ್ನು ನಿಲ್ಲಿಸಲು ಯೆಹೋವನ ಶತ್ರುಗಳು ಮಾಡಬಹುದಾದಂಥದ್ದೇನೂ ಇಲ್ಲ. (1 ತಿಮೊಥೆಯ 2:4) ಆಸ್ಟ್ರೇಲಿಯದಲ್ಲಿರುವ ರಾಜ್ಯ ಘೋಷಕರಿಂದ ಬಂದ ಮುಂದಿನ ವರದಿಗಳು ಇದನ್ನು ಒತ್ತಿಹೇಳುತ್ತವೆ.
▫ 20 ವರ್ಷ ಧರ್ಮದಿಂದ ದೂರವಿದ್ದ ಬಳಿಕ, ಒಬ್ಬ ಹೆಂಗಸು ಬೈಬಲನ್ನು ಪುನಃ ಓದಲು ಆರಂಭಿಸಿದಳು. ಬೈಬಲಿನಲ್ಲಿ ಈ ನವೀಕರಿಸಲ್ಪಟ್ಟ ಆಶೆಯು ಅವಳಲ್ಲಿ ಹಲವಾರು ಪ್ರಶ್ನೆಗಳನ್ನು ಉಂಟುಮಾಡಿತು, ಆದುದರಿಂದ ಉತ್ತರಗಳನ್ನು ಕಂಡುಹಿಡಿಯುವಂತೆ ಸಹಾಯಮಾಡಲು ಅವಳು ದೇವರಿಗೆ ಪ್ರಾರ್ಥಿಸಿದಳು. ಅವಳು ಸತ್ಯಕ್ಕಾಗಿ ಅನ್ವೇಷಿಸಲು ಬಯಸಿದಳು, ಆದರೆ ಅವಳ ಹಳೆಯ ಧರ್ಮಕ್ಕೆ ಹಿಂದಿರುಗುವದು ಅವಳ ಸಮಸ್ಯೆಗಳನ್ನು ಪರಿಹರಿಸಲಾರದೆಂದು ಅವಳಿಗೆ ತಿಳಿದಿತ್ತು. ಅದರ ಬದಲು, ಹಳೆಯ ಪುಸ್ತಕಗಳ ಅಂಗಡಿಯನ್ನು ಸಂದರ್ಶಿಸಿ ಧರ್ಮದ ಕುರಿತಾಗಿ ಏನಾದರೂ ಪುಸ್ತಕಗಳು ಇವೆಯೋ ಎಂದು ಕೇಳುವ ಮೂಲಕ ಅವಳ ಅನ್ವೇಷಣೆಯನ್ನು ಆರಂಭಿಸಿದಳು.
ಅಂಗಡಿಯಲ್ಲಲ್ಲ, ಆದರೆ ಮನೆಯಲ್ಲಿ ಒಂದು ಧಾರ್ಮಿಕ ಪುಸ್ತಕ ಅವಳಲ್ಲಿತ್ತು ಎಂದು ಅಂಗಡಿಯ ಮಾಲೀಕಳು ನೆನಪಿಸಿಕೊಂಡಳು. ಪುಸ್ತಕದ ಶೀರ್ಷಿಕೆ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂದಾಗಿತ್ತು, ಮತ್ತು ಅದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿತ್ತು. ಆ ಹೆಂಗಸು ಆ ಪುಸ್ತಕವನ್ನು ಆತುರದಿಂದ ಓದಿದಳು ಮತ್ತು ಅವಳ ಅನೇಕ ಬೈಬಲ್ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿದಳು. ಟೆಲಿಫೋನ್ ಪುಸ್ತಕದಲ್ಲಿ ಯೆಹೋವನ ಸಾಕ್ಷಿಗಳಿಗಾಗಿ ಹುಡುಕಿದ ನಂತರ, ಅವಳು ಕೊನೆಗೆ ಅವರನ್ನು ಸಂಪರ್ಕಿಸಿದಳು ಮತ್ತು ಬೈಬಲಿನ ಒಂದು ಕ್ರಮವಾದ ಅಭ್ಯಾಸವನ್ನು ಆರಂಭಿಸಿದಳು.
▫ ಒಬ್ಬ ಯುವ ಸ್ತ್ರೀ ಒಂದು ತಾಯಿತದ ಮಾರಾಟವನ್ನು ಜಾಹೀರುಪಡಿಸಲು ಸ್ಥಳಿಕ ವಾರ್ತಾಪತ್ರವೊಂದನ್ನು ಉಪಯೋಗಿಸಿದಳು. ಜಾಹೀರಾತು ಅದಕ್ಕೆ ಸೂಚಿಸಿ ‘ಬಹಳ ಶಕ್ತಿಯುತವಾಗಿರುವ ಒಂದು ಮಧ್ಯಯುಗದ ತಾಯಿತ’ ವೆಂದು ಹೇಳಿತು. ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳು ಆ ಜಾಹೀರಾತನ್ನು ಗಮನಿಸಿದಳು. ಕೊಡಲ್ಪಟ್ಟ ಟೆಲಿಫೋನ್ ನಂಬರನ್ನು ಸಂಪರ್ಕಿಸಿ ಆ ತಾಯಿತದ ಶಕ್ತಿಯ ಮೂಲವೆಂದು ಹೇಳಲಾಗಿರುವ ವಿಷಯದ ಕುರಿತಾಗಿ ಮಾತಾಡಲು ನಿರ್ಧರಿಸಿದಳು. ದೆವ್ವಗಳ ಚಟುವಟಿಕೆಯ ಕುರಿತಾದ ಬೈಬಲಿನ ನೋಟದ ಕುರಿತು ಒಂದು ಚರ್ಚೆಯು ಹಿಂಬಾಲಿಸಿತು. ಕೇವಲ ಒಂದು ದಿವಸದ ಮುಂಚೆ, ದೆವ್ವಗಳೊಂದಿಗೆ ಅವಳಿಗಿರುವ ಸಮಸ್ಯೆಗಳೊಂದಿಗೆ ಸಹಾಯ ಮಾಡಲು ಅವಳು ದೇವರಿಗೆ ಪ್ರಾರ್ಥಿಸಿದ್ದಳೆಂದು ತಾಯಿತವಿದ್ದ ಆ ಯುವ ಹೆಂಗಸು ಪ್ರಕಟಪಡಿಸಿದಳು. ಸಾಕ್ಷಿಯು ಟಿಲಿಫೋನಿನಲ್ಲಿ ಇನ್ನೊಂದು ಚರ್ಚೆಗಾಗಿ ಏರ್ಪಾಡುಗಳನ್ನು ಮಾಡಿದಳು.
ಅವಳು ಟೆಲಿಫೋನ್ ಮಾಡಿದಾಗ, ಆ ಯುವ ಹೆಂಗಸು ಮನೆಯಲ್ಲಿರಲಿಲ್ಲ. ಅವಳ ತಾಯಿ ಟೆಲಿಫೋನನ್ನು ಎತ್ತಿದಳು ಮತ್ತು ಹೀಗೆ ಹೇಳಿದ್ದು: “ನೀವು ನನ್ನ ಮಗಳಿಗೆ ಏನು ಹೇಳಿದಿರೆಂದು ನನಗೆ ಗೊತ್ತಿಲ್ಲ, ಆದರೆ ಏನು ನಡೆದಿದೆಯೋ ಅದು ಒಂದು ಅದ್ಭುತವಾಗಿದೆ!” ಪ್ರಥಮ ಟೆಲಿಫೋನ್ ಕರೆಯ ನಂತರ, ಅವಳ ಮಗಳು ತನ್ನ ಎಲ್ಲಾ ಸೈತಾನ ಸಂಬಂಧಿತ ಚಿತ್ರಗಳನ್ನು ಮತ್ತು ಪುಸ್ತಕಗಳನ್ನು ಬಿಸಾಡಿ ಬೈಬಲನ್ನು ಓದಲು ಆರಂಭಿಸಿದಳು ಎಂದು ಅವಳು ಹೇಳಿದಳು.
ಅನಂತರ ಬೇಗನೇ, ಆ ಯುವ ಹೆಂಗಸಿಗೆ ಒಂದು ವೈಯಕ್ತಿಕ ಭೇಟಿಯನ್ನು ಕೊಡಲು ಏರ್ಪಾಡುಗಳನ್ನು ಮಾಡಲಾಯಿತು. ಅವಳು ತತ್ಕ್ಷಣ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲಿನ ಒಂದು ಕ್ರಮವಾದ ಅಭ್ಯಾಸವನ್ನು ಸ್ವೀಕರಿಸಿದಳು. ಅವರ ಕ್ರೈಸ್ತ ಕೂಟಗಳನ್ನು ಹಾಜರಾಗುವ ಮೂಲಕ ಅವಳು ಸಾಕ್ಷಿಗಳೊಂದಿಗೆ ಸಹವಸಿಸಲೂ ಆರಂಭಿಸಿದಳು. ಬೈಬಲ್ ಸತ್ಯತೆಗಳ ನಿಷ್ಕೃಷ್ಟ ಜ್ಞಾನವು ಪ್ರಕಾಶಿಸುವಂತೆ ಮಾಡುವದರ ಮೂಲಕ, ಯೆಹೋವನು ಪುನಃ ದೆವ್ವಗಳನ್ನು ಸೋಲಿಸಿದನು.