ದೇವರಿಗೆ—ಭಯಪಡುವವರೊಂದಿಗೆ ಒಟ್ಟುಗೂಡುವುದು
“ಎಲ್ಲೆಡೆಯೂ ಜನರು ಭಯ—ಹಿಂಸಾಕೃತ್ಯದ ಭಯ, ನಿರುದ್ಯೋಗದ ಭಯ, ಮತ್ತು ಗಂಭೀರವಾದ ಕಾಯಿಲೆಯ ಭಯ— ದಿಂದ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಾರೆ. ಆ ಹಂಬಲದಲ್ಲಿ ನಾವು ಪಾಲಿಗರಾಗಿದ್ದೇವೆ. . . . ಹಾಗಾದರೆ, ಭಯವನ್ನು ಹೇಗೆ ಬೆಳೆಸಿಕೊಳ್ಳಬೇಕೆಂದು ನಾವು ಏಕೆ ಚರ್ಚಿಸುತ್ತಿದ್ದೇವೆ?” ಕುತೂಹಲ ಕೆರಳಿಸುವ ಆ ಪ್ರಶ್ನೆಯು, ಜೂನ್ 1994 ರಲ್ಲಿ ಆರಂಭಗೊಂಡ ಪ್ರತಿಯೊಂದು “ದಿವ್ಯ ಭಯ” ಜಿಲ್ಲಾ ಅಧಿವೇಶನಗಳಲ್ಲಿ ಮುಖ್ಯ ಭಾಷಣಕಾರನಿಂದ ಎಬ್ಬಿಸಲ್ಪಟ್ಟಿತು.
ಹಾಜರಾದ ಲಕ್ಷಾಂತರ ಜನರು—ಮೊದಲು ಉತ್ತರ ಅಮೆರಿಕದಲ್ಲಿ, ತದನಂತರ ಯೂರೋಪ್, ಮಧ್ಯ ಮತ್ತು ದಕ್ಷಿಣ ಅಮೆರಿಕ, ಆಫ್ರಿಕ, ಏಷಿಯ, ಮತ್ತು ಸಮುದ್ರದ ದ್ವೀಪಗಳಲ್ಲಿ—ಇಂತಹ ಭಯವನ್ನು ಹೇಗೆ ಬೆಳೆಸಿಕೊಳ್ಳುವುದೆಂದು ಕಲಿಯಲು ಆತುರವುಳ್ಳವರಾಗಿದ್ದರು. ಏಕೆ? ಏಕೆಂದರೆ, ಯೆಹೋವ ದೇವರು ತನ್ನ ಜನರಿಗಾಗಿ ಮೀಸಲಾಗಿಟ್ಟಿರುವ ಆಶೀರ್ವಾದಗಳಲ್ಲಿ ನಮ್ಮ ಪಾಲ್ಗೊಳ್ಳುವಿಕೆಯು, ನಮ್ಮಲ್ಲಿ ದಿವ್ಯ ಭಯ ಇರುವುದರ ಮೇಲೆ ಅವಲಂಬಿಸಿದೆ. ದಿವ್ಯ ಭಯದ ಕುರಿತು ಕಲಿಯಲು ಅಧಿವೇಶನ ಸದಸ್ಯರು ಕೂಡಿ ಬಂದರು, ಮತ್ತು ಮೂರು ದಿನದ ಕಾರ್ಯಕ್ರಮದಲ್ಲಿ, ಈ ಆವಶ್ಯಕ ಕ್ರೈಸ್ತ ಗುಣದ ಕುರಿತು ಹೆಚ್ಚನ್ನು ಅವರು ಕಲಿತರು.
‘ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳಿರಿ’
ಅದು, ಪ್ರಸಂಗಿ 12:13ರ ಮೇಲೆ ಆಧಾರಿತವಾಗಿದ್ದು, ಅಧಿವೇಶನದ ಪ್ರಥಮ ದಿನದ ಮುಖ್ಯವಿಷಯವಾಗಿತ್ತು. ದೇವರಿಗೆ ಭಯಪಡುವುದರ ಅರ್ಥವೇನು? ಕಾರ್ಯಕ್ರಮದ ಪ್ರಥಮ ಭಾಗದಲ್ಲೇ, ದಿವ್ಯ ಭಯವು ಯೆಹೋವನಿಗಾಗಿ ಭಯಭಕ್ತಿಯನ್ನು ಮತ್ತು ಗಾಢವಾದ ಪೂಜ್ಯಭಾವನೆಯನ್ನು ಅಷ್ಟೇ ಅಲ್ಲದೆ ಆತನನ್ನು ಮನನೋಯಿಸುವ ಬಗ್ಗೆ ಹಿತಕರವಾದ ಭೀತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅಧಿವೇಶನದ ಅಧ್ಯಕ್ಷರು ವಿವರಿಸಿದರು. ಇಂತಹ ದಿವ್ಯ ಭಯವು ವ್ಯಾಧಿಕಾರಕವಾಗಿಲ್ಲ; ಅದು ಆರೋಗ್ಯಕರವೂ ಯೋಗ್ಯವೂ ಆಗಿದೆ.
ಈ ಆರೋಗ್ಯಕರ ಭಯವು ನಮ್ಮನ್ನು ಹೇಗೆ ಪ್ರಯೋಜನಪಡಿಸುತ್ತದೆ? ದೇವರ ಆಜ್ಞೆಗಳನ್ನು ಆನಂದದಿಂದ ಪಾಲಿಸುವಂತೆ ದಿವ್ಯ ಭಯವು ನಮ್ಮನ್ನು ಪ್ರಚೋದಿಸುವುದೆಂದು, “ಆಯಾಸಗೊಂಡು ಬಿಟ್ಟುಬಿಡಬೇಡಿ” ಎಂಬ ಮುಂದಿನ ಭಾಷಣವು ವಿವರಿಸಿತು. ದೇವರಿಗಾಗಿ ಮತ್ತು ನೆರೆಯವರಿಗಾಗಿರುವ ಪ್ರೀತಿಯೊಂದಿಗೆ, ಇಂತಹ ಭಯವು ನಮ್ಮನ್ನು ಆತ್ಮಿಕ ಶಕಿಯ್ತಿಂದ ತುಂಬುವುದು. ಹೌದು, ಅನಂತ ಕಾಲದ ಜೀವಿತಕ್ಕಾಗಿರುವ ಓಟದ ಪಂದ್ಯದಲ್ಲಿ ನಿಧಾನಿಸುವುದನ್ನು ತೊರೆಯಲು, ದಿವ್ಯ ಭಯವು ನಮಗೆ ಸಹಾಯ ಮಾಡಬಲ್ಲದು.
ಕಾರ್ಯಕ್ರಮದಲ್ಲಿ ಮುಂದಿನ ವಿಷಯವು ಇಂಟರ್ವ್ಯೂಗಳಾಗಿದ್ದವು. ದಿವ್ಯ ಭಯವು ನಮ್ಮನ್ನು ಪೋಷಿಸಬಲ್ಲದು ಎಂಬುದಕ್ಕೆ ಇವು ಜೀವಂತ ಸಾಕ್ಷ್ಯವನ್ನು ಸಾದರಪಡಿಸಿದವು. ಪೂಜ್ಯಭಾವನೆಯಿಂದ ಕೂಡಿದ ದೇವರ ಭಯವು ಹೇಗೆ ಶುಶ್ರೂಷೆಯಲ್ಲಿ ನಿರಾಸಕ್ತಿ, ಉಪೇಕ್ಷೆ, ಅಥವಾ ಹಿಂಸೆಯ ಹೊರತೂ ಮುಂದುವರಿಯುವಂತೆ ಅವರನ್ನು ಪ್ರಭಾವಿಸಿತೆಂದು ಮತ್ತು ಕಠಿನವಾದ ವೈಯಕ್ತಿಕ ಪರೀಕ್ಷೆಗಳ ಎದುರಿನಲ್ಲಿಯೂ ತಾಳಿಕೊಳ್ಳುವಂತೆ ಅವರಿಗೆ ಸಹಾಯ ನೀಡಿತೆಂದು, ಇಂಟರ್ವ್ಯೂ ಮಾಡಲ್ಪಟ್ಟವರು ಹೇಳಿದರು.
ಆದರೂ ಕೆಲವು ಜನರಲ್ಲಿ ದಿವ್ಯ ಭಯವಿದ್ದು ಇತರರಲ್ಲಿ ಇಲ್ಲದೆ ಇರುವುದೇಕೆ? “ದಿವ್ಯ ಭಯವನ್ನು ಬೆಳೆಸಿಕೊಳ್ಳುವುದು ಮತ್ತು ಅದರಿಂದ ಪ್ರಯೋಜನ ಪಡೆಯುವುದು” ಎಂಬ ಭಾಷಣದಲ್ಲಿ, ಯೆರೆಮೀಯ 32:37-39 ರಲ್ಲಿ ಯೆಹೋವನು ತನ್ನ ಜನರಿಗೆ, ದೇವರಿಗೆ ಭಯಪಡುವ ಹೃದಯವನ್ನು ಕೊಡುವೆನೆಂದು ವಾಗ್ದಾನಿಸಿದ್ದಾನೆಂದು ಮುಖ್ಯ ಭಾಷಣಕಾರನು ವಿವರಿಸಿದನು. ನಮ್ಮ ಹೃದಯಗಳಲ್ಲಿ ಯೆಹೋವನು ದಿವ್ಯ ಭಯವನ್ನು ನೆಡುತ್ತಾನೆ. ಹೇಗೆ? ಆತನ ಪವಿತ್ರಾತ್ಮ ಮತ್ತು ಆತನ ಪ್ರೇರಿತ ವಾಕ್ಯವಾದ ಬೈಬಲಿನ ಮೂಲಕ. ಹಾಗಿದ್ದರೂ, ದೇವರ ವಾಕ್ಯವನ್ನು ಅಭ್ಯಸಿಸಲು ಮತ್ತು ಆತನು ಮಾಡಿರುವ ಹೇರಳವಾದ ಆತ್ಮಿಕ ಒದಗಿಸುವಿಕೆಗಳ ಪೂರ್ಣ ಲಾಭವನ್ನು ಪಡೆಯಲು, ನಾವು ಮನಃಪೂರ್ವಕವಾದ ಪ್ರಯತ್ನವನ್ನು ಮಾಡಬೇಕು ಎಂಬುದು ಸ್ಪಷ್ಟ. ಇವು, ಆತನಿಗೆ ಭಯಪಡುವುದು ಹೇಗೆಂದು ನಮಗೆ ಕಲಿಸಲು ಸಹಾಯ ಮಾಡುವ ನಮ್ಮ ಅಧಿವೇಶನಗಳನ್ನು ಮತ್ತು ಸಭಾ ಕೂಟಗಳನ್ನು ಒಳಗೊಳ್ಳುತ್ತವೆ.
ಯೆಹೋವನಲ್ಲಿ ಮತ್ತು ಆತನ ವಾಕ್ಯದಲ್ಲಿ ಭರವಸೆಯಿಡಬೇಕೆಂಬ ಬುದ್ಧಿವಾದದೊಂದಿಗೆ ಅಪರಾಹ್ಣದ ಕಾರ್ಯಕ್ರಮವು ಆರಂಭಗೊಂಡಿತು. ಇದು ಕ್ರೈಸ್ತರೋಪಾದಿ ನಮ್ಮ ಜೀವಿತಗಳನ್ನು ರಾಜ್ಯವು ಪ್ರಭಾವಿಸಬೇಕಾದ ಪ್ರಧಾನ ವಿಧಗಳ ಚರ್ಚೆಯಿಂದ ಹಿಂಬಾಲಿಸಲ್ಪಟ್ಟಿತು.
ಅನಂತರ ಅಧಿವೇಶನದಲ್ಲಿ ಸಾದರಪಡಿಸಲಾದ ಮೂರು ಭಾಷಣಮಾಲೆಗಳಲ್ಲಿನ ಪ್ರಥಮ ಭಾಷಣಮಾಲೆಯು ಆರಂಭವಾಯಿತು. ಈ ಭಾಷಣಮಾಲೆಯ ಮುಖ್ಯವಿಷಯವು, “ದೈವಿಕ ಆವಶ್ಯಕತೆಗಳಿಗೆ ವಿಧೇಯರಾಗುವಂತೆ ದಿವ್ಯ ಭಯವು ನಮ್ಮನ್ನು ಪ್ರೇರೇಪಿಸುತ್ತದೆ” ಎಂದಾಗಿತ್ತು. ಇದು ಕುಟುಂಬದ ಮೇಲೆ ಗಮನವನ್ನು ಕೇಂದ್ರೀಕರಿಸಿತು. ಮುಂದಿನ ವಿಷಯವು, ನೀಡಲ್ಪಟ್ಟ ಶಾಸ್ತ್ರೀಯ—ಹಾಗೂ ಪ್ರಾಯೋಗಿಕ—ಬುದ್ಧಿವಾದದ ಒಂದು ಮಾದರಿಯಾಗಿದೆ.
◻ ಗಂಡಂದಿರಿಗೆ: ತನ್ನ ಹೆಂಡತಿಯನ್ನು ತನ್ನ ಸ್ವಂತ ದೇಹದಂತೆ ಪ್ರೀತಿಸಲು, ದಿವ್ಯ ಭಯವು ಒಬ್ಬ ಪುರುಷನನ್ನು ಪ್ರೇರೇಪಿಸಬೇಕು. (ಎಫೆಸ 5:28, 29) ಒಬ್ಬ ಪುರುಷನು ಉದ್ದೇಶಪೂರ್ವಕವಾಗಿ ತನ್ನ ಸ್ವಂತ ದೇಹವನ್ನು ಗಾಯಪಡಿಸಿಕೊಳ್ಳುವುದಿಲ್ಲ, ಮಿತ್ರರ ಮುಂದೆ ತನ್ನ ಅಪಮಾನಮಾಡಿಕೊಳ್ಳುವುದಿಲ್ಲ, ಅಥವಾ ತನ್ನ ಸ್ವಂತ ಕುಂದುಗಳ ಕುರಿತು ಹರಟೆ ಹೊಡೆಯುವುದಿಲ್ಲ. ಹಾಗಾದರೆ, ತನಗೆ ತಾನು ನೀಡಿಕೊಳ್ಳುವ ಘನತೆ ಮತ್ತು ಮರ್ಯಾದೆಯನ್ನು ತನ್ನ ಹೆಂಡತಿಗೆ ಅವನು ನೀಡಬೇಕು.
◻ ಹೆಂಡತಿಯರಿಗೆ: ಯೇಸುವಿನ ದಿವ್ಯ ಭಯವು ‘ದೇವರನ್ನು ಯಾವಾಗಲೂ ಮೆಚ್ಚಿಸುವಂತೆ’ ಅವನನ್ನು ಪ್ರೇರೇಪಿಸಿತು. (ಯೋಹಾನ 8:29) ಹೆಂಡತಿಯರಿಗೆ ತಮ್ಮ ಗಂಡಂದಿರೊಂದಿಗೆ ವ್ಯವಹರಿಸುವಾಗ ಅನುಸರಿಸಲಿಕ್ಕಾಗಿರುವ ಒಂದು ಉತ್ತಮ ಆತ್ಮವು ಇದಾಗಿದೆ.
◻ ಹೆತ್ತವರಿಗೆ: ಕ್ರೈಸ್ತ ಹೆತ್ತವರು ತಮ್ಮ ಮಕ್ಕಳನ್ನು ಯೆಹೋವನಿಂದ ಬಂದ ಒಂದು ಸ್ವಾಸ್ತ್ಯದಂತೆ ವೀಕ್ಷಿಸುತ್ತಾ, ಹೆತ್ತವರಿಗಿರುವ ಜವಾಬ್ದಾರಿಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಮೂಲಕ, ದಿವ್ಯ ಭಯವನ್ನು ತೋರಿಸಬಲ್ಲರು. (ಕೀರ್ತನೆ 127:3) ಯಥಾರ್ಥ ಕ್ರೈಸ್ತರಾಗುವಂತೆ ತಮ್ಮ ಮಕ್ಕಳನ್ನು ಬೆಳೆಸುವುದು ಹೆತ್ತವರ ಪ್ರಧಾನ ಗುರಿಯಾಗಿರತಕ್ಕದ್ದು.
◻ ಮಕ್ಕಳಿಗೆ: “ಕರ್ತನಲ್ಲಿರುವವರಿಗೆ ತಕ್ಕ ಹಾಗೆ . . . ತಂದೆತಾಯಿ” ಗಳಿಗೆ ಮಕ್ಕಳು ವಿಧೇಯರಾಗಬೇಕೆಂದು ಯೆಹೋವನು ಉಪದೇಶಿಸುತ್ತಾನೆ. (ಎಫೆಸ 6:1) ಆದಕಾರಣ, ತಮ್ಮ ಹೆತ್ತವರಿಗೆ ವಿಧೇಯರಾಗುವುದು, ದೇವರಿಗೆ ವಿಧೇಯರಾಗುವಂತಿದೆ.
ದಿನದ ಸಮಾಪ್ತಿಯ ಭಾಷಣವು ನಮ್ಮ ಭಾವಾವೇಶಗಳನ್ನು ಪ್ರಭಾವಿಸಿತು, ಅದು ಮರಣದಲ್ಲಿ ಒಬ್ಬ ಪ್ರಿಯ ವ್ಯಕ್ತಿಯನ್ನು ಕಳೆದುಕೊಂಡಾಗ ನಾವೆಲ್ಲರೂ ಅನುಭವಿಸುವ ಆಳವಾದ ಅನಿಸಿಕೆಗಳನ್ನು ಚರ್ಚಿಸಿತು. ಆದರೆ ಭಾಷಣದ ಮಧ್ಯಭಾಗದಲ್ಲಿ, ಆಶ್ಚರ್ಯವೊಂದು ಕಾದಿತ್ತು. ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ ಎಂಬ ಹೊಸ ಬ್ರೋಷರಿನ ಬಿಡುಗಡೆಯನ್ನು ಪ್ರಕಟಿಸುವ ಮೂಲಕ, ಭಾಷಣಕಾರನು ಸಭಿಕರನ್ನು ಸಂತೋಷಪಡಿಸಿದನು. ಈ 32 ಪುಟದ, ಪೂರ್ಣ ರಂಜಿತ ಪ್ರಕಾಶನವು, ಒಬ್ಬ ಪ್ರಿಯ ವ್ಯಕ್ತಿಯ ಮರಣವನ್ನು ಹಿಂಬಾಲಿಸಿ ಕಾಣಿಸಿಕೊಳ್ಳುವ ಅನಿಸಿಕೆಗಳನ್ನು ಮತ್ತು ಭಾವಾವೇಶಗಳನ್ನು ಅರ್ಥಮಾಡಿಕೊಳ್ಳುವಂತೆ ಮತ್ತು ನಿರ್ವಹಿಸುವಂತೆ ದುಃಖಿಸುವವರಿಗೆ ಸಹಾಯ ಮಾಡಬಲ್ಲ ಹೆಚ್ಚಿನ ವಿಷಯವನ್ನು ಹೇಳುತ್ತದೆ. ವಿಯೋಗಹೊಂದಿದ ವ್ಯಕ್ತಿಗೆ ಏನು ಹೇಳಬೇಕೆಂದು ತಿಳಿಯದೆ ನೀವು ಎಂದಾದರೂ ದಿಗ್ಭ್ರಾಂತರಾಗಿದ್ದೀರೊ? ದುಃಖಪಡುತ್ತಿರುವವರಿಗೆ ನಾವು ಹೇಗೆ ಸಹಾಯ ಮಾಡಬಲ್ಲವೆಂದು ಈ ಬ್ರೋಷರಿನ ಒಂದು ಭಾಗವು ಚರ್ಚಿಸುತ್ತದೆ. ಭಾಷಣಕಾರನಿಗೆ ಕಿವಿಗೊಡುತ್ತಿರುವಾಗ, ಸಭಿಕರಲ್ಲಿ ಅನೇಕರು ಈ ಹೊಸ ಬ್ರೋಷರಿನಿಂದ ಪ್ರಯೋಜನ ಪಡೆಯಬಹುದಾಗಿದ್ದ ಯಾರೊ ಒಬ್ಬರ ಕುರಿತು ಯೋಚಿಸುತ್ತಿದ್ದರು.
‘ಪವಿತ್ರ ಸೇವೆಯನ್ನು ದಿವ್ಯ ಭಯದಿಂದಲೂ ಭಯಭಕ್ತಿಯಿಂದಲೂ ಸಲ್ಲಿಸಿರಿ’
ಅದು ಇಬ್ರಿಯ 12:28ರ ಮೇಲೆ ಆಧಾರಿತವಾಗಿದ್ದು, ಎರಡನೆಯ ದಿನದ ಮುಖ್ಯವಿಷಯವಾಗಿತ್ತು. ಬೆಳಗ್ಗಿನ ಕಾರ್ಯಕ್ರಮದಲ್ಲಿ, “ಯೆಹೋವನ ಭಯದಲ್ಲಿ ನಡೆಯುತ್ತಿರುವ ಸಭೆಗಳು” ಎಂಬ ಎರಡನೆಯ ಭಾಷಣೆಮಾಲೆಯಿತ್ತು. ಮೊದಲನೆಯ ಭಾಗವು ಕೂಟಗಳನ್ನು ಹಾಜರಾಗುವ ವಿಷಯದೊಂದಿಗೆ ನಿರ್ವಹಿಸಿತು. ಕೂಟಗಳಲ್ಲಿ ನಮ್ಮ ಇರುವು ದೇವರಿಗಾಗಿ ಮತ್ತು ಆತನ ಆತ್ಮಿಕ ಒದಗಿಸುವಿಕೆಗಳಿಗಾಗಿ ನಮ್ಮ ಗೌರವವನ್ನು ಪ್ರದರ್ಶಿಸುತ್ತದೆ. ಹಾಜರಾಗುವ ಮೂಲಕ, ನಾವು ಆತನ ಹೆಸರಿಗೆ ಭಯಪಡುತ್ತೇವೆಂದು ಮತ್ತು ಆತನ ಚಿತ್ತದೊಂದಿಗೆ ಅನುವರ್ತಿಸಲು ಆತುರವುಳ್ಳವರಾಗಿದ್ದೇವೆಂದು ತೋರಿಸುತ್ತೇವೆ. (ಇಬ್ರಿಯ 10:24, 25) ಸಭೆಯು ಇಡೀಯಾಗಿ ಯೆಹೋವನ ಭಯದಲ್ಲಿ ನಡೆಯುವುದಕ್ಕಾಗಿ, ಉತ್ತಮ ನಡತೆಯನ್ನು ಕಾಪಾಡುವುದರಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಪಾತ್ರವನ್ನು ನಿರ್ವಹಿಸಬೇಕೆಂದು ಎರಡನೆಯ ಭಾಷಣಕಾರನು ವಿವರಿಸಿದನು. ಎಲ್ಲ ಕ್ರೈಸ್ತರಿಗೆ ಇರುವ ಒಂದು ಸುಯೋಗ ಮತ್ತು ಕರ್ತವ್ಯ—ಎಡೆಬಿಡದೆ ಸುವಾರ್ತೆಯನ್ನು ಘೋಷಿಸುವುದರ ಕುರಿತು ಅಂತಿಮ ಭಾಷಣಕಾರನು ವಿವರಿಸಿದನು. ಎಷ್ಟರ ವರೆಗೆ ಸಾರುವುದನ್ನು ನಾವು ಮುಂದುವರಿಸುವೆವು? ಸಾಕು ಎಂದು ಯೆಹೋವನು ಹೇಳುವ ತನಕ.—ಯೆಶಾಯ 6:11.
ಈ ಪತ್ರಿಕೆಯಲ್ಲಿ ಈಗ ಅಭ್ಯಾಸ ಲೇಖನಗಳಲ್ಲಿ ಆವರಿಸಲ್ಪಡುತ್ತಿರುವ “ಯೆಹೋವನ ಆನಂದವು ನಿಮ್ಮ ಆಶ್ರಯದುರ್ಗವಾಗಿದೆ” ಎಂಬ ವಿಷಯವು, ಮುಂದಿನ ಭಾಷಣದ ಮುಖ್ಯವಿಷಯವಾಗಿತ್ತು. (ನೆಹೆಮೀಯ 8:10) ಯೆಹೋವನ ಜನರು ಆನಂದಭರಿತರಾಗಿರುವುದು ಏಕೆ? ಹಲವಾರು ಕಾರಣಗಳನ್ನು ಭಾಷಣಕಾರನು ರೇಖಿಸಿದನು. ಬಹಳ ಮಹತ್ವದ ಒಂದು ಕಾರಣವು ಏನೆಂದರೆ, ದೇವರೊಂದಿಗೆ ನಿಕಟವಾದೊಂದು ಸಂಬಂಧವು, ಭೂಮಿಯಲ್ಲಿ ನಮ್ಮನ್ನು ಅತ್ಯಂತ ಆನಂದಭರಿತ ಜನರನ್ನಾಗಿ ಮಾಡುತ್ತದೆ. ಯೇಸು ಕ್ರಿಸ್ತನ ಕಡೆಗೆ ಯೆಹೋವನು ಸೆಳೆದಿರುವ ಜನರ ಮಧ್ಯೆ ಇರುವ ಸುಯೋಗವು ನಮಗಿರುವುದರ ಕುರಿತು ಕೇವಲ ಯೋಚಿಸಿರಿ, ಎಂದು ಭಾಷಣಕಾರನು ಅಧಿವೇಶನದ ಸದಸ್ಯರಿಗೆ ಜ್ಞಾಪಕ ಹುಟ್ಟಿಸಿದನು. (ಯೋಹಾನ 6:44) ಆನಂದಕ್ಕಾಗಿ ಎಂತಹ ಶಕ್ತಿಶಾಲಿ ಕಾರಣ!
ಪ್ರತಿಯೊಂದು ಅಧಿವೇಶನದ ಅತ್ಯುಜಲ್ವ ಭಾಗವು ದೀಕ್ಷಾಸ್ನಾನವಾಗಿದೆ, ಮತ್ತು “ದಿವ್ಯ ಭಯ” ಅಧಿವೇಶನಗಳು ಇದಕ್ಕೆ ಹೊರತಾಗಿರಲಿಲ್ಲ. “ಯೆಹೋವನ ಭಯದಲ್ಲಿ ಸಮರ್ಪಣೆ ಮತ್ತು ದೀಕ್ಷಾಸ್ನಾನ” ಎಂಬ ಭಾಷಣದಲ್ಲಿ, ದೀಕ್ಷಾಸ್ನಾನ ಪಡೆದಿರುವ ಎಲ್ಲ ವ್ಯಕ್ತಿಗಳ ವೈಯಕ್ತಿಕ ಹಂಗುಗಳು ನಾಲ್ಕರಷ್ಟು ಇವೆ ಎಂದು ಭಾಷಣಕಾರನು ವಿವರಿಸಿದನು: (1) ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುವ ಪ್ರಕಾಶನಗಳ ನೆರವಿನಿಂದ ನಾವು ದೇವರ ವಾಕ್ಯವನ್ನು ಅಭ್ಯಸಿಸಬೇಕು ಮತ್ತು ಅದನ್ನು ಅನ್ವಯಿಸಿಕೊಳ್ಳಬೇಕು; (2) ನಾವು ಪ್ರಾರ್ಥಿಸಬೇಕು; (3) ಸಭಾ ಕೂಟಗಳಲ್ಲಿ ನಾವು ಜೊತೆ ವಿಶ್ವಾಸಿಗಳೊಂದಿಗೆ ಜೊತೆಗೂಡಬೇಕು; ಮತ್ತು (4) ನಾವು ಯೆಹೋವನ ನಾಮ ಮತ್ತು ರಾಜ್ಯಕ್ಕೆ ಸಾಕ್ಷಿಯನ್ನು ನೀಡಬೇಕು.
ಶನಿವಾರ ಅಪರಾಹ್ಣದ ಕಾರ್ಯಕ್ರಮವು “ಯೆಹೋವನಿಂದ ತ್ಯಜಿಸಲ್ಪಡದ ಒಂದು ಜನಾಂಗ” ಎಂಬ ಪುನರಾಶ್ವಾಸನೆಯನ್ನು ನೀಡುವ ವಿಷಯದೊಂದಿಗೆ ತೊಡಗಿತು. ಮೂವತ್ತೈದು ಶತಮಾನಗಳ ಹಿಂದೆ, ಇಸ್ರಾಯೇಲ್ ಜನಾಂಗವು ಕಠಿನ ಸಮಯಗಳನ್ನು ಎದುರಿಸಿದಾಗ, ಮೋಶೆಯ ಮುಖಾಂತರ ಹೀಗೆ ಹೇಳುತ್ತಾ, ಯೆಹೋವನು ಒಂದು ಖಾತರಿಯನ್ನು ಕೊಟ್ಟನು: “ನಿಮ್ಮ ದೇವರಾದ ಯೆಹೋವನು, . . . ನಿಮ್ಮನ್ನು ತೊರೆಯುವುದಿಲ್ಲ ಅಥವಾ ಸಂಪೂರ್ಣವಾಗಿ ಬಿಟ್ಟುಬಿಡುವುದಿಲ್ಲ.” (ಧರ್ಮೋಪದೇಶಕಾಂಡ 31:6, NW) ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸಿ ಅದನ್ನು ಸ್ವಾಧೀನ ಪಡಿಸಿಕೊಂಡಾಗ, ಅವರನ್ನು ರಕ್ಷಿಸುವ ಮೂಲಕ ಆ ಖಾತರಿಗೆ ತಾನು ನಿಷ್ಠಾವಂತನೆಂದು ಯೆಹೋವನು ಸ್ಥಾಪಿಸಿದನು. ಇಂದು, ಕಠಿನ ಪರೀಕ್ಷೆಗಳನ್ನು ಎದುರಿಸುವಾಗ, ನಾವು ಆತನಿಗೆ ನಿಕಟವಾಗಿ ಅಂಟಿಕೊಂಡು ಆತನ ವಾಕ್ಯದ ಬುದ್ಧಿವಾದವನ್ನು ಆಲಿಸುವುದಾದರೆ, ಯೆಹೋವನು ನಮ್ಮನ್ನು ತೊರೆಯುವುದಿಲ್ಲ ಎಂಬ ಪೂರ್ಣ ಭರವಸೆಯು ನಮ್ಮಲ್ಲಿಯೂ ಇರಬಲ್ಲದು.
ಬೈಬಲನ್ನು ಓದುವುದರಲ್ಲಿ ನೀವು ಹರ್ಷವನ್ನು ಹೇಗೆ ಕಂಡುಕೊಳ್ಳಬಲ್ಲಿರಿ? “ದೇವರ ವಾಕ್ಯವಾದ ಪವಿತ್ರ ಬೈಬಲನ್ನು ದಿನನಿತ್ಯ ಓದಿರಿ” ಎಂಬ ಭಾಷಣದಲ್ಲಿ, ವಿಚಾರಶೀಲ ಮನಸ್ಸಿನೊಂದಿಗೆ ಓದುವುದನ್ನು ಮತ್ತು ಈ ರೀತಿಯ ಪ್ರಶ್ನೆಗಳನ್ನು ಕೇಳಿಕೊಳ್ಳುವುದನ್ನು ಭಾಷಣಕಾರನು ಸೂಚಿಸಿದನು: ಯೆಹೋವನ ಗುಣಗಳ ಮತ್ತು ಮಾರ್ಗಗಳ ಕುರಿತು ಈ ದಾಖಲೆಯು ನನಗೆ ಏನನ್ನು ಕಲಿಸುತ್ತದೆ? ಈ ವಿಷಯಗಳಲ್ಲಿ ನಾನು ಹೆಚ್ಚಾಗಿ ಯೆಹೋವನಂತಿರಲು ಹೇಗೆ ಸಾಧ್ಯ? ಈ ವಿಧದಲ್ಲಿ ಬೈಬಲನ್ನು ಓದುವುದು ಒಂದು ಹರ್ಷಕರ ಹಾಗೂ ಪ್ರತಿಫಲದಾಯಕ ಅನುಭವವಾಗಿದೆ.
ಗಮನವನ್ನು ಮುಂದೆ, ಕಾರ್ಯಕ್ರಮದ ಮೂರನೆಯ ಭಾಷಣಮಾಲೆಯಾದ “ಯೆಹೋವನಿಗೆ ಭಯಪಡುವವರನ್ನು ಸಹಾಯಿಸಲಿಕ್ಕಾಗಿರುವ ಒದಗಿಸುವಿಕೆಗಳು” ಎಂಬ ವಿಷಯದ ಮೇಲೆ ಕೇಂದ್ರೀಕರಿಸಲಾಯಿತು. ಯೆಹೋವನು ತನ್ನ ಸೇವಕರ ಪರವಾಗಿ ಇಂದು ಅದ್ಭುತಕಾರ್ಯಗಳನ್ನು ಮಾಡದಿದ್ದರೂ, ಆತನು ಖಂಡಿತವಾಗಿಯೂ ಆತನಿಗೆ ಭಯಪಡುವವರಿಗೆ ಸಹಾಯವನ್ನು ನೀಡುತ್ತಾನೆ. (2 ಪೇತ್ರ 2:9) ಈ ಕಠಿನ ಸಮಯಗಳಲ್ಲಿ ನಮಗೆ ಸಹಾಯ ಮಾಡಲು ಯೆಹೋವನಿಂದ ಬರುವ ನಾಲ್ಕು ಒದಗಿಸುವಿಕೆಗಳನ್ನು ಈ ಭಾಷಣಮಾಲೆಯು ಪರಿಗಣಿಸಿತು: (1) ತನ್ನ ಆತ್ಮದ ಮೂಲಕ ಯೆಹೋವನು, ನಮ್ಮ ಸ್ವಂತ ಶಕ್ತಿಗೆ ಅತೀತವಾಗಿರುವ ಕೆಲಸಗಳನ್ನು ಸಾಧಿಸುವಂತೆ ನಮ್ಮನ್ನು ಶಕ್ತಗೊಳಿಸುತ್ತಾನೆ. (2) ತನ್ನ ವಾಕ್ಯದ ಮೂಲಕ, ನಮಗಾಗಿ ಸಲಹೆ ಮತ್ತು ಮಾರ್ಗದರ್ಶನವನ್ನು ಆತನು ಒದಗಿಸುತ್ತಾನೆ. (3) ಪ್ರಾಯಶ್ಚಿತದ್ತ ಮೂಲಕ, ನಮಗೊಂದು ಶುದ್ಧವಾದ ಮನಸ್ಸಾಕ್ಷಿಯನ್ನು ಆತನು ದಯಪಾಲಿಸುತ್ತಾನೆ. (4) ತನ್ನ ಸಂಸ್ಥೆಯ ಮೂಲಕ, ಹಿರಿಯರನ್ನು ಸೇರಿಸಿ, ಆತನು ನಮಗೆ ನಿರ್ದೇಶನ ಮತ್ತು ಸಂರಕ್ಷಣೆಯನ್ನು ಒದಗಿಸುತ್ತಾನೆ. (ಲೂಕ 11:13; ಎಫೆಸ 1:7; 2 ತಿಮೊಥೆಯ 3:16; ಇಬ್ರಿಯ 13:17) ಈ ಒದಗಿಸುವಿಕೆಗಳ ಪೂರ್ಣ ಲಾಭವನ್ನು ಪಡೆಯುವ ಮೂಲಕ, ನಾವು ತಾಳಿಕೊಳ್ಳಲು ಮತ್ತು ಹೀಗೆ ಯೆಹೋವನ ಮೆಚ್ಚಿಗೆಯನ್ನು ಪಡೆಯಲು ಶಕ್ತರಾಗಿರುವೆವು.
ಶನಿವಾರ ಅಪರಾಹ್ಣದ ಅಂತಿಮ ಭಾಷಣವು, ಮಲಾಕಿಯ ಪ್ರವಾದನೆಯ ಮೇಲೆ ಆಧಾರಿತವಾಗಿದ್ದು, “ಯೆಹೋವನ ಭಯ ಹುಟ್ಟಿಸುವ ದಿನವು ಹತ್ತಿರವಿದೆ” ಎಂಬುದಾಗಿತ್ತು. ಗತ ಇತಿಹಾಸದಲ್ಲಿ, ಉದಾಹರಣೆಗೆ ಸಾ.ಶ. 70 ರಲ್ಲಿ ಯೆರೂಸಲೇಮಿನ ಮೇಲೆ ನ್ಯಾಯತೀರ್ಪು ವಿಧಿಸಲ್ಪಟ್ಟ ಸಮಯದಂತೆ, ಭಯ ಹುಟ್ಟಿಸುವ ದಿನಗಳು ಇದ್ದವು. ಆದರೆ ಎಲ್ಲ ಮಾನವ ಅನುಭವದಲ್ಲಿನ ಅತ್ಯಂತ ಭಯ ಹುಟ್ಟಿಸುವ ದಿನವು, ‘ನಮ್ಮ ಕರ್ತನಾದ ಯೇಸುವು ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರವನ್ನು ಸಲ್ಲಿಸುವ’ ಯೆಹೋವನ ಬರುವಂತಹ ದಿನವಾಗಿರುವುದು. (2 ಥೆಸಲೊನೀಕ 1:6-8) ಅದು ಎಷ್ಟು ಬೇಗನೆ ಸಂಭವಿಸಲಿರುವುದು? ಭಾಷಣಕಾರನು ಹೇಳಿದ್ದು: “ಅಂತ್ಯವು ನಿಕಟವಾಗಿದೆ! ಯೆಹೋವನಿಗೆ ಆ ದಿನ ಮತ್ತು ಕಾಲ ಗೊತ್ತಿದೆ. ತನ್ನ ವೇಳಾಪಟ್ಟಿಯನ್ನು ಆತನು ಬದಲಿಸಲಾರನು. ಸೈರಣೆಯಿಂದ ತಾಳಿಕೊಳ್ಳುವಂತೆ ನಾವು ಕೇಳಿಕೊಳ್ಳಲ್ಪಡುತ್ತೇವೆ.”
ಎರಡು ದಿನಗಳು ಈಗಾಗಲೇ ಕಳೆದುಹೋಗಿದ್ದವೆಂದು ನಂಬಲು ಕಠಿನವಾಗಿತ್ತು. ಅಂತಿಮ ದಿನವು ಏನನ್ನು ತರಲಿತ್ತು?
“ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ”
ಮೂರನೆಯ ದಿನದ ಮುಖ್ಯವಿಷಯವು ಪ್ರಕಟನೆ 14:7ರ ಮೇಲೆ ಆಧರಿಸಿತ್ತು. ಬೆಳಗ್ಗಿನ ಕಾರ್ಯಕ್ರಮದಲ್ಲಿ, ಯೆಹೋವನ ಸಾಕ್ಷಿಗಳನ್ನು ಇತರ ಎಲ್ಲ ಧಾರ್ಮಿಕ ಸಂಸ್ಥೆಗಳಿಂದ ಪ್ರತ್ಯೇಕವಾಗಿಡುವ ಕೆಲವೊಂದು ತಾತ್ವಿಕ ಬೋಧನೆಗಳನ್ನು, ಭಾಷಣಗಳ ಒಂದು ಸರಣಿಯು ಎತ್ತಿತೋರಿಸಿತು.
“ನೀತಿವಂತರ ಪುನರುತ್ಥಾನವೊಂದಿರುವುದು” ಎಂಬ ಭಾಷಣದಲ್ಲಿ, ಭಾಷಣಕಾರನು ಕುತೂಹಲಜನಕವಾದೊಂದು ಪ್ರಶ್ನೆಯನ್ನು ಎಬ್ಬಿಸಿದನು: “ಸಹಸ್ರ ವರ್ಷದ ಆ ನ್ಯಾಯತೀರ್ಪಿನ ದಿನದಲ್ಲಿ, ಸೈತಾನನ ವಿಷಯಗಳ ವ್ಯವಸ್ಥೆಯ ಈ ಅಂತಿಮ ವರ್ಷಗಳಲ್ಲಿ ನಂಬಿಗಸ್ತರಾಗಿ ಮರಣ ಹೊಂದಿದವರು ಯಾವಾಗ ಪುನರುತ್ಥಾನಗೊಳಿಸಲ್ಪಡುವರು?” ಉತ್ತರವು ಏನಾಗಿದೆ? “ಬೈಬಲ್ ಹೇಳುವುದಿಲ್ಲ” ಎಂದು ಭಾಷಣಕಾರನು ವಿವರಿಸಿದನು. “ಹಾಗಿದ್ದರೂ, ನಮ್ಮ ದಿನದಲ್ಲಿ ಮರಣ ಹೊಂದುವವರು, ನ್ಯಾಯತೀರ್ಪಿನ ದಿನದ ಉದ್ದಕ್ಕೂ ನಡೆಯಲಿರುವ ಅಪರಿಮಿತ ಶೈಕ್ಷಣಿಕ ಕೆಲಸದಲ್ಲಿ, ಅರ್ಮಗೆದೋನನ್ನು ಪಾರಾದ ಮಹಾ ಸಮೂಹದವರೊಂದಿಗೆ ಭಾಗವಹಿಸಲು ಮೊದಲು ಪುನರುತ್ಥಾನಗೊಳಿಸಲ್ಪಡುವರೆಂಬುದು ತರ್ಕಸಮ್ಮತವಾಗಿರುವುದಿಲ್ಲವೊ? ನಿಶ್ಚಯವಾಗಿಯೂ ಹೌದು!” ಬದುಕಿ ಉಳಿಯುವವರು ಇರುವರೊ? ಖಂಡಿತವಾಗಿಯೂ ಇರುವರು. ಈ ವಿಷಯದ ಕುರಿತು ನಮಗೆ ಆಶ್ವಾಸನೆಯನ್ನು ನೀಡುವ ಬೈಬಲ್ ಬೋಧನೆಗಳು ಮತ್ತು ಉದಾಹರಣೆಗಳು, “ಮಹಾ ಸಂಕಟದಿಂದ ಜೀವಂತ ರಕ್ಷಿಸಲ್ಪಡುವುದು” ಎಂಬ ಮುಂದಿನ ಭಾಷಣದಲ್ಲಿ ಸ್ಪಷ್ಟವಾಗಿಗಿ ವಿವರಿಸಲ್ಪಟ್ಟವು.
ಬೈಬಲು ಎರಡು ಅಂತ್ಯಫಲಗಳನ್ನು—ಅಸಂಖ್ಯಾತ ಲಕ್ಷಾಂತರ ಜನರಿಗೆ ಪ್ರಮೋದವನ ಭೂಮಿಯಲ್ಲಿ ಅನಂತಕಾಲದ ಜೀವನವನ್ನು ಮತ್ತು ಕ್ರಿಸ್ತನೊಂದಿಗೆ ಅವನ ರಾಜ್ಯದಲ್ಲಿ ಆಳುವ ಒಂದು ಸೀಮಿತ ಸಂಖ್ಯೆಗೆ ಅಮರ ಸ್ವರ್ಗೀಯ ಜೀವನವನ್ನು—ಎತ್ತಿಹಿಡಿಯುತ್ತದೆ ಎಂದು ಯೆಹೋವನ ಸಾಕ್ಷಿಗಳು ಬಹಳ ಹಿಂದೆಯೇ ಅರ್ಥಮಾಡಿಕೊಂಡಿದ್ದಾರೆ. “ಚಿಕ್ಕ ಹಿಂಡೇ, ಹೆದರಬೇಡ” ಎಂಬ ಭಾಷಣದಲ್ಲಿ ಸ್ವರ್ಗೀಯ ನಿರೀಕ್ಷೆಯ ಕುರಿತು ಚರ್ಚಿಸಲಾಯಿತು. (ಲೂಕ 12:32) ಪ್ರಚಲಿತ ಲೋಕ ಸನ್ನಿವೇಶದ ನೋಟದಲ್ಲಿ, ಚಿಕ್ಕ ಹಿಂಡು ಭಯರಹಿತವಾಗಿರಬೇಕು; ಅವರಲ್ಲಿ ಪ್ರತಿಯೊಬ್ಬರು ಕೊನೆಯ ತನಕ ತಾಳಿಕೊಳ್ಳಬೇಕು. (ಲೂಕ 21:19) “ಅವರ ಧೈರ್ಯವು” ಭಾಷಣಕಾರನು ಹೇಳಿದ್ದು, “ಮಹಾ ಸಮೂಹದವರನ್ನು ಉತ್ತೇಜಿಸಲು ಕಾರ್ಯಮಾಡುತ್ತದೆ. ಭೂಮಿಯು ಎಂದಿಗೂ ಕಂಡಿರದ ತೊಂದರೆಯ ಅತ್ಯಂತ ಮಹಾ ಸಮಯದಲ್ಲಿ ಬಿಡುಗಡೆಯನ್ನು ಅವರು ನಿರೀಕ್ಷಿಸಿದಂತೆ, ಅವರೂ ಧೈರ್ಯದ ಮನೋಭಾವವನ್ನು ಬೆಳೆಸಿಕೊಳ್ಳತಕ್ಕದ್ದು.”
ಬೆಳಗ್ಗಿನ ಕಾರ್ಯಕ್ರಮದ ಸಮಾಪ್ತಿಯಲ್ಲಿ, ನೀವು ಎದುರಿಸುವ ಆಯ್ಕೆಗಳು ಎಂಬ ಬೈಬಲ್ ಡ್ರಾಮವನ್ನು ಸಭಿಕರು ಹರ್ಷದಿಂದ ವೀಕ್ಷಿಸಿದರು. ಯೆಹೋಶುವನ ದಿನಗಳಲ್ಲಿ ಮತ್ತು ಪ್ರವಾದಿಯಾದ ಎಲೀಯನ ದಿನಗಳಲ್ಲಿಯೂ, ಇಸ್ರಾಯೇಲ್ಯರು ಒಂದು ಸಂದಿಗ್ಧ ಪರಿಸ್ಥಿತಿಯಲಿದ್ದರು. ಒಂದು ಆಯ್ಕೆಯನ್ನು ಮಾಡಲೇ ಬೇಕಾಗಿತ್ತು. ಎಲೀಯನು ಹೇಳಿದ್ದು: “ನೀವು ಎಷ್ಟರ ವರೆಗೆ ಎರಡು ಮನಸ್ಸುಳ್ಳವರಾಗಿರುವಿರಿ? ಯೆಹೋವನು ದೇವರಾಗಿದ್ದರೆ ಆತನನ್ನೇ ಹಿಂಬಾಲಿಸಿರಿ; ಬಾಳನು ದೇವರಾಗಿದ್ದರೆ ಅವನನ್ನೇ ಹಿಂಬಾಲಿಸಿರಿ.” (1 ಅರಸು 18:21) ಇಂದು ಕೂಡ ಮಾನವಜಾತಿಯು ಒಂದು ಸಂದಿಗ್ಥ ಪರಿಸ್ಥಿತಿಯಲ್ಲಿದೆ. ಭಿನ್ನವಾದ ಅಭಿಪ್ರಾಯಗಳ ಮೇಲೆ ಎರಡು ಮನಸ್ಸುಳ್ಳವರಾಗಿರುವ ಸಮಯವು ಇದಾಗಿರುವುದಿಲ್ಲ. ಸರಿಯಾದ ಆಯ್ಕೆಯು ಏನಾಗಿದೆ? ಹಳೆಯ ಕಾಲದ ಯೆಹೋಶುವನು ಮಾಡಿದ ಆಯ್ಕೆಯೇ. ಅವನಂದದ್ದು: “ನಾನೂ ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು.”—ಯೆಹೋಶುವ 24:15.
ಇದ್ದಕ್ಕಿದ್ದಹಾಗೆ, ಅದು ಆದಿತ್ಯವಾರದ ಅಪರಾಹ್ಣವೆಂದೂ, “ಸತ್ಯ ದೇವರಿಗೆ ಈಗ ಭಯಪಡುವ ಕಾರಣ” ಎಂಬ ಸಾರ್ವಜನಿಕ ಭಾಷಣದ ಸಮಯವೆಂದೂ ಭಾಸವಾಯಿತು. ಪ್ರಕಟನೆ 14:6, 7 ರಲ್ಲಿ ಇಡೀ ಮಾನವಜಾತಿಯು ಹೀಗೆ ಪ್ರೋತ್ಸಾಹಿಸಲ್ಪಟ್ಟಿದೆ: “ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ.” ದೇವರಿಗೆ ಈಗ ಭಯಪಡುವುದು, ಜರೂರಾದ ವಿಷಯವಾಗಿದೆ ಏಕೆ? ಏಕೆಂದರೆ, “ಆತನು ನ್ಯಾಯತೀರ್ಪುಮಾಡುವ ಗಳಿಗೆಯು ಬಂದಿದೆ,” ಎಂದು ಶಾಸ್ತ್ರವಚನವು ಮುಂದೆ ಹೇಳುತ್ತದೆ. ದೇವರ ಸ್ವರ್ಗೀಯ ರಾಜ್ಯದ ರಾಜನೋಪಾದಿ ಈಗ ಸಿಂಹಾಸನಾರೂಢನಾಗಿರುವ ಆತನ ಮಗನ ಮೂಲಕ, ಯೆಹೋವನು ಪ್ರಸ್ತುತ ಅಶುದ್ಧ, ಪ್ರತಿಭಟಿಸುವ ವಿಷಯಗಳ ವ್ಯವಸ್ಥೆಯನ್ನು ಒಂದು ಸಮಾಪ್ತಿಗೆ ತರುವನು. ದೇವರಿಗೆ ಭಯಪಡುವವರಿಗಾಗಿ ಪರಿಹಾರವನ್ನು ತರುವ, ಅಷ್ಟೇ ಅಲ್ಲದೆ ಭೂಗೃಹವನ್ನು ಕಾಪಾಡಿ ಉಳಿಸುವ ಏಕೈಕ ಮಾರ್ಗವು ಇದಾಗಿದೆ ಎಂದು ಭಾಷಣಕಾರನು ವಿವರಿಸಿದನು. ಇವು ಈ ವಿಷಯಗಳ ವ್ಯವಸ್ಥೆಯ ಕೊನೆಯ ದಿನಗಳಾಗಿರುವುದರಿಂದ, ಸತ್ಯ ದೇವರಿಗೆ ಈಗ ಭಯಪಡುವುದು ಜರೂರಾದ ವಿಷಯವಾಗಿದೆ!
ಆ ವಾರಕ್ಕಾಗಿದ್ದ ಕಾವಲಿನಬುರುಜು ಪಾಠದ ಸಾರಾಂಶವನ್ನು ಹಿಂಬಾಲಿಸಿ, ಅಂತಿಮ ಭಾಷಣಕಾರನು ತನ್ನ ಭಾಷಣವನ್ನು ನೀಡಲು ವೇದಿಕೆಯ ಮೇಲೆ ಬಂದನು. ಅಧಿವೇಶನದ ಕಾರ್ಯಕ್ರಮದ ಫಲಿತಾಂಶವಾಗಿ, ಅಧಿವೇಶನದ ಸದಸ್ಯರಿಗೆ ದಿವ್ಯ ಭಯವು ಹೆಚ್ಚಿನ ಅರ್ಥವುಳ್ಳದ್ದಾಗಿತ್ತು ಎಂದು ಅವನು ವಿವರಿಸಿದನು. ದೇವರಿಗೆ ಭಯಪಡುವ ಜನರಿಗೆ ಬರುವ ಅನೇಕ ಪ್ರಯೋಜನಗಳನ್ನು ಅವನು ಒತ್ತಿಹೇಳಿದನು. ದೈವಿಕ ಬೋಧನೆಯಿಂದ ಒಂದುಗೂಡಿಸಲ್ಪಟ್ಟದ್ದು ಎಂಬ ಹೊಸ ವಿಡೀಯೊವಿನ ಬಿಡುಗಡೆಯನ್ನು ಭಾಷಣಕಾರನು ಪ್ರಕಟಿಸಿದನು. 1993-94 ರಲ್ಲಿ ಜರುಗಿದ “ದೈವಿಕ ಬೋಧನೆ” ಅಂತಾರಾಷ್ಟ್ರೀಯ ಅಧಿವೇಶನಗಳ ಅಪೂರ್ವ ಅಂಶಗಳನ್ನು ಅದು ಎತ್ತಿತೋರಿಸುತ್ತದೆ. ಭಾಷಣವು ಮುಕ್ತಾಯಕ್ಕೆ ಬರುತ್ತಿದ್ದಂತೆ, ‘ಮುಂದಿನ ವರ್ಷಕ್ಕೆ ನಾವು ಏನನ್ನು ಎದುರುನೋಡಬಲ್ಲೆವು’ ಎಂದು ಅನೇಕರು ಕುತೂಹಲಪಟ್ಟರು. ಅನೇಕ ಸ್ಥಳಗಳಲ್ಲಿ ಮೂರು ದಿನದ ಜಿಲ್ಲಾ ಅಧಿವೇಶನಗಳು.
ಸಮಾಪ್ತಿಯಲ್ಲಿ, ಭಾಷಣಕಾರನು ಮಲಾಕಿಯ 3:16ನ್ನು ಸೂಚಿಸಿದನು. ಅದು ಹೇಳುವುದು: “ಇಂಥ ಮಾತುಗಳನ್ನು ಕೇಳಿ ಯೆಹೋವನ ಭಕ್ತರು ಒಬ್ಬರಿಗೊಬ್ಬರು ಮಾತಾಡಿಕೊಳ್ಳಲು ಯೆಹೋವನು ಕಿವಿಗೊಟ್ಟು ಆಲಿಸಿ ಭಯಭಕ್ತಿಯಿಂದ ತನ್ನ ನಾಮಸ್ಮರಣೆಮಾಡುವವರ ಹೆಸರುಗಳನ್ನು ತನ್ನ ಮುಂದೆ ಜ್ಞಾಪಕದ ಪುಸ್ತಕದಲ್ಲಿ ಬರೆಯಿಸಿದನು.” ಯೆಹೋವನ ಹೆಸರನ್ನು ಸ್ಮರಿಸುವ ಮತ್ತು ಆತನನ್ನು ದಿವ್ಯ ಭಯದಿಂದ ಸೇವಿಸುವ ಸ್ಪಷ್ಟವಾಗಿದ ನಿರ್ಧಾರದಿಂದ ಅಧಿವೇಶನದ ಸದಸ್ಯರು ಬೀಳ್ಕೊಂಡರು.
[ಪುಟ 24 ರಲ್ಲಿರುವ ಚಿತ್ರ]
ದೀಕ್ಷಾಸ್ನಾನದ ಅಭ್ಯರ್ಥಿಗಳು “ದಿವ್ಯ ಭಯ” ವನ್ನು ಪ್ರದರ್ಶಿಸುವುದನ್ನು ಮುಂದುವರಿಸುವುದು ಅಗತ್ಯ
[ಪುಟ 25 ರಲ್ಲಿರುವ ಚಿತ್ರ]
“ನೀವು ಎದುರಿಸುವ ಆಯ್ಕೆಗಳು” ಎಂಬ ಡ್ರಾಮ, ಯೆಹೋವನನ್ನು ಸೇವಿಸುವುದರ ಕುರಿತು ನಿರ್ಣಾಯಕವಾಗಿರುವ ಅಗತ್ಯವನ್ನು ಕೇಳುಗರ ಮೇಲೆ ಮನದಟ್ಟು ಮಾಡಿತು
[ಪುಟ 26 ರಲ್ಲಿರುವ ಚಿತ್ರ]
“ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ” ಎಂಬ ಹೊಸ ಬ್ರೋಷರನ್ನು ಪಡೆಯಲು ಅಧಿವೇಶನದ ಸದಸ್ಯರು ಹರ್ಷಿಸಿದರು