ಬಡವರು ಇನ್ನೆಷ್ಟು ದೀರ್ಘ ಸಮಯ ಕಾಯಬೇಕಾದೀತು?
“ಸ್ವತಂತ್ರ ಸಮಾಜವೊಂದು ಬಡವರಾಗಿರುವ ಅನೇಕರಿಗೆ ಸಹಾಯ ಮಾಡಸಾಧ್ಯವಾಗದಿದ್ದರೆ, ಶ್ರೀಮಂತರಾಗಿರುವ ಕೆಲವರನ್ನು ಅದು ಉಳಿಸಲಾರದು.”—ಜಾನ್. ಎಫ್. ಕೆನಡಿ.
“ಎಲ್ಲರಿಗೂ ಭವಿಷ್ಯವು ಉಜ್ವಲವಾಗಿರಲು—ಬಡತನವಿಲ್ಲದ, ಮನೆಯಿಲ್ಲದ ಜನರು ಇಲ್ಲದ, ಒಂದು ಪ್ರಮೋದವನವಾಗಿರಲು ನಾನು ಬಯಸುತ್ತೇನೆ!” ಬ್ರೆಸಿಲ್ನ ಸೌವುನ್ ಪಾವ್ವೂವಿನ 12 ವರ್ಷ ಪ್ರಾಯದ ಹುಡುಗನೊಬ್ಬನು ಹೀಗೆ ನುಡಿದನು. ಆದರೆ ಬಡತನವನ್ನು ನಿರ್ಮೂಲ ಮಾಡುವುದು ಸಾಧ್ಯವೋ? ಬಡವರು ಇನ್ನೆಷ್ಟು ದೀರ್ಘ ಸಮಯ ಕಾಯಬೇಕಾದೀತು?
ತಾವು ಬಯಸುವಂತಹ ವಸ್ತುಗಳನ್ನು ತಾವು ಖರೀದಿಸಲಾರೆವೆಂಬ ಕಾರಣದಿಂದ ಕೆಲವರು ತಮ್ಮನ್ನು ಬಡವರೆಂದು ಪರಿಗಣಿಸಿಕೊಳ್ಳುತ್ತಾರೆ. ಆದರೂ, ನಿಜವಾಗಿ ಬಡತನವಡಸಿದವರ ದುಃಖಕರ ಅವಸ್ಥೆಯ ಕುರಿತಾಗಿ ಯೋಚಿಸಿರಿ. ಅಂತಹ ಜನರ ವಿಪರೀತ ಕಷ್ಟ ಮತ್ತು ಅಸಂತೋಷವನ್ನು ನೀವು ಊಹಿಸಬಲ್ಲಿರೋ? ಕೆಲವರು ಆಹಾರಕ್ಕಾಗಿ ಕಸದ ತಿಪ್ಪೆಗಳಲ್ಲಿ ಹುಡುಕುತ್ತಿರುವಂತೆಯೇ ಪಕ್ಷಿಗಳು ಹಾಗೂ ಇಲಿಗಳೊಂದಿಗೆ ಸ್ಪರ್ಧಿಸಬೇಕಾಗುತ್ತದೆ! ಇಂತಹ ಬಡತನವು ಎಷ್ಟರ ತನಕ ಮಾನವಕುಲವನ್ನು ಬಾಧಿಸುವುದು? ಯುನೆಸ್ಕೊವಿನ (ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ, ಮತ್ತು ಸಾಂಸ್ಕೃತಿಕ ಸಂಸ್ಥೆ) ಡೈರೆಕ್ಟ್ರ-ಜೆನೆರಲ್ ಆಗಿರುವ ಫೆಡೆರೀಕೊ ಮಾಯೋರ್ ರವರ ಬೇಡಿಕೆಯು ತಕ್ಕದ್ದಾಗಿದೆ: “ಸಹಿಸಲಾಗದಂತಹ ವಿಷಯಗಳಾದ, ಸಂಕಟ, ಕ್ಷಾಮ, ಕೋಟಿಗಟ್ಟಲೆ ಮಾನವ ಜೀವಿಗಳ ಕಷ್ಟಾನುಭವವನ್ನು ನಾವು ಸಹಿಸುವಂತೆ ಮಾಡುವ ಆ ಸಂಶಯಾಸ್ಪದವಾದ ಸಹಿಷ್ಣುತೆಯನ್ನು ನಾವು ತೊರೆದುಬಿಡೋಣ.”
ಸಾರ್ವತ್ರಿಕ ಕ್ಷೇಮದ ಕುರಿತಾದ ಸ್ವಪ್ನವು ನೆರವೇರುವುದೋ? ಬಡವರಿಗೆ ಯಾವ ನಿರೀಕ್ಷೆಯಿದೆ?
ಬಡವರಿಗೆ ಯಾವ ಅವಕಾಶಗಳಿವೆ?
ಸದ್ಭಾವನೆಯ ನಾಯಕರು ಹೆಚ್ಚಿನ ನೌಕರಿಗಳನ್ನು, ಉತ್ತಮವಾದ ಸಂಬಳಗಳನ್ನು, ಅಭಿವೃದ್ಧಿಗೊಂಡಿರುವ ಸಾಮಾಜಿಕ ಕಾರ್ಯಕ್ರಮಗಳನ್ನು, ಮತ್ತು ಜಮೀನು ಸುಧಾರಣೆಗಳನ್ನು ಪ್ರಸ್ತಾಪಿಸುತ್ತಾರೆ. ಅವರು ಅಮೆರಿಕದ ಹಿಂದಿನ ಅಧ್ಯಕ್ಷರಾದ ಜಾನ್. ಎಫ್. ಕೆನಡಿಯವರೊಂದಿಗೆ ಒಪ್ಪಬಹುದು: “ಸ್ವತಂತ್ರ ಸಮಾಜವೊಂದು ಬಡವರಾಗಿರುವ ಅನೇಕರಿಗೆ ಸಹಾಯ ಮಾಡಸಾಧ್ಯವಾಗದಿದ್ದರೆ, ಶ್ರೀಮಂತರಾಗಿರುವ ಕೆಲವರನ್ನು ಅದು ಉಳಿಸಲಾರದು.” ಆದರೆ ಒಳ್ಳೇ ಹೇತುಗಳು, ಬಡತನವನ್ನು ಕಿತ್ತುಹಾಕಲು ಸಾಕಾಗುವುದಿಲ್ಲ. ಉದಾಹರಣೆಗಾಗಿ, ಆರ್ಥಿಕ ಸ್ಥಿತಿಯ ಅಭಿವೃದ್ಧಿಯು ಸಾಮಾನ್ಯವಾಗಿ ಬಡವರಿಗೆ ಸಹಾಯ ಮಾಡುವುದೋ? ಇಲ್ಲ. ಮಾಜಿ ಭಾರತೀಯ ನಾಯಕರಾಗಿದ್ದ ಜವಾಹರ್ಲಾಲ್ ನೆಹರೂ ಹೇಳಿದ್ದು: “ಧನಿಕ ಸಮಾಜದ ಶಕ್ತಿಗಳು ಅಂಕೆಯಲ್ಲಿಡಲ್ಪಡದೆ ಹೋದಲ್ಲಿ, ಶ್ರೀಮಂತರನ್ನು ಇನ್ನೂ ಹೆಚ್ಚು ಶ್ರೀಮಂತರನ್ನಾಗಿ ಮತ್ತು ಬಡವರನ್ನು ಇನ್ನೂ ಹೆಚ್ಚು ಬಡವರನ್ನಾಗಿ ಮಾಡುವ ಪ್ರವೃತ್ತಿಯುಳ್ಳವುಗಳಾಗಿವೆ.” ಆದಾಗಲೂ, ಕಷ್ಟ ಮತ್ತು ಕೊರತೆಯ ಹೊರತು, ಅನರ್ಹತೆಯ ಒಂದು ಭಾವನೆಯು ಬಡವರ ಭಾರವನ್ನು ಹೆಚ್ಚಿಸುತ್ತದೆ. ಬಡವರು ಅಸಹಾಯಕತೆ ಮತ್ತು ನಿರೀಕ್ಷಾಹೀನತೆಯ ಅನಿಸಿಕೆಗಳನ್ನು ಜಯಿಸುವಂತೆ ಮಾನವ ಧುರೀಣರು ಸಹಾಯಮಾಡಬಲ್ಲರೋ?
ನಿಜವಾಗಿ, ವಿಪರೀತವಾಗಿ ಬಡವರಾಗಿದ್ದವರಲ್ಲಿ ಅನೇಕರು ಬಡತನವನ್ನು ನಿಭಾಯಿಸಲು ಮತ್ತು ಹಣದ ಚಲಾವಣೆಯ ಉಬ್ಬರ ಮತ್ತು ನಿರುದ್ಯೋಗದಂತಹ, ಮಹತ್ತಾದ ಕಷ್ಟಗಳ ಎದುರಿನಲ್ಲಿ ಕೀಳಾದ ಆತ್ಮಗೌರವದ ಅನಿಸಿಕೆಗಳನ್ನು ಜಯಿಸಲು ಕಲಿತಿದ್ದಾರೆ. ಇನ್ನೂ ಹೆಚ್ಚಾಗಿ, ಕ್ಷಾಮ, ವಸತಿರಾಹಿತ್ಯ, ಮತ್ತು ಸಂಕಟವು ತಪ್ಪದೇ ನಿರ್ಮೂಲ ಮಾಡಲ್ಪಡುವುದು. ಇದು ನಿಮ್ಮನ್ನು ಆಶ್ಚರ್ಯಗೊಳಿಸುತ್ತದೋ? “ಬೇಗನೇ, ಯಾರೊಬ್ಬನೂ ಬಡವನಾಗಿರನು!” ಎಂಬ ಮುಂದಿನ ಲೇಖನವನ್ನು ಓದುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ.