ದೇವರನ್ನು ಸೇವಿಸಲು ನಿಮ್ಮನ್ನು ಯಾವುದು ಪ್ರೇರಿಸುತ್ತದೆ?
“ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ಪೂರ್ಣ ಆತ್ಮದಿಂದಲೂ ಪೂರ್ಣ ಮನಸ್ಸಿನಿಂದಲೂ ಪೂರ್ಣ ಶಕಿಯ್ತಿಂದಲೂ ಪ್ರೀತಿಸಬೇಕು.”—ಮಾರ್ಕ 12:30, NW.
1, 2. ಸಾರುವ ಕಾರ್ಯದ ಸಂಬಂಧದಲ್ಲಿ ಯಾವ ರೋಮಾಂಚಕ ವಿಷಯಗಳು ನಿರ್ವಹಿಸಲ್ಪಡುತ್ತಿವೆ?
ಒಂದು ವಾಹನದ ನಿಜ ಮೌಲ್ಯವು ಅದರ ಹೊರ ತೋರಿಕೆಯಿಂದ ಮಾತ್ರವೆ ನಿರ್ಧರಿಸಲ್ಪಡುವುದಿಲ್ಲ. ಬಣ್ಣ ಬಳಿತವು ಅದರ ಬಾಹ್ಯ ನೋಟವನ್ನು ವರ್ಧಿಸಬಹುದು, ಮತ್ತು ತಂತ್ರಗಾರಿಕೆಯ ರಚನೆಯು ಸಂಭವನೀಯ ಗಿರಾಕಿಯನ್ನು ಆಕರ್ಷಿಸಬಹುದು; ಆದರೆ ಎಷ್ಟೊ ಹೆಚ್ಚು ಪ್ರಾಮುಖ್ಯವಾದದ್ದು ಸುಲಭವಾಗಿ ಕಾಣದೆ ಇರುವ ಸಂಗತಿಗಳು—ವಾಹನವನ್ನು ಮುಂದೂಡುವ ಎಂಜಿನು, ಮತ್ತು ಅದನ್ನು ನಿಯಂತ್ರಿಸುವ ಬೇರೆಲ್ಲ ಸಲಕರಣೆಗಳು.
2 ಒಬ್ಬ ಕ್ರೈಸ್ತನು ಸಲ್ಲಿಸುವ ದೇವರ ಸೇವೆಯೂ ತದ್ರೀತಿಯದ್ದಾಗಿದೆ. ಯೆಹೋವನ ಸಾಕ್ಷಿಗಳು ದೈವಿಕ ಕಾರ್ಯಗಳಲ್ಲಿ ಸಮೃದ್ಧರಾಗಿದ್ದಾರೆ. ಪ್ರತಿ ವರ್ಷ ನೂರು ಕೋಟಿ ತಾಸುಗಳಿಗಿಂತಲೂ ಹೆಚ್ಚನ್ನು ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ಕಳೆಯಲಾಗುತ್ತದೆ. ಅಷ್ಟಲ್ಲದೆ, ಲಕ್ಷಾಂತರ ಬೈಬಲ್ ಅಧ್ಯಯನಗಳು ನಡಿಸಲ್ಪಡುತ್ತಿವೆ, ಮತ್ತು ದೀಕ್ಷಾಸ್ನಾನ ಪಡೆಯುವವರ ಸಂಖ್ಯೆಯು ಲಕ್ಷಾಂತರಕ್ಕೇರುತ್ತಿದೆ. ನೀವು ಸುವಾರ್ತೆಯ ಘೋಷಕರಲ್ಲಿ ಒಬ್ಬರಾಗಿರುವುದಾದರೆ, ಈ ರೋಮಾಂಚಕ ಸಂಖ್ಯಾ ಸಂಗ್ರಹಣದಲ್ಲಿ—ಚಿಕ್ಕದಾಗಿ ತೋರಿದರೂ ಸಹ—ನಿಮಗೂ ಒಂದು ಪಾಲಿದೆ. ಮತ್ತು “ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ” ಎಂಬ ಆಶ್ವಾಸನೆ ನಿಮಗಿರಸಾಧ್ಯವಿದೆ.—ಇಬ್ರಿಯ 6:10.
3. ಕ್ರಿಯೆಗಳ ಜೊತೆಯಲ್ಲಿ ಬೇರೆ ಯಾವುದು ಕ್ರೈಸ್ತರಿಗೆ ಪ್ರಾಮುಖ್ಯ ಚಿಂತೆಯಾಗಿರಬೇಕು, ಮತ್ತು ಏಕೆ?
3 ಆದರೂ, ಸಾಮುದಾಯಿಕವಾಗಿ ಯಾ ವ್ಯಕ್ತಿಪರವಾಗಿ, ನಮ್ಮ ಸೇವೆಯ ನಿಜ ಮೌಲ್ಯವು ಕೇವಲ ಅಂಕೆಗಳಲ್ಲಿ ಅಳೆಯಲ್ಪಡುವುದಿಲ್ಲ. ಸಮುವೇಲನಿಗೆ ಹೇಳಲ್ಪಟ್ಟ ಪ್ರಕಾರ, “ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ.” (1 ಸಮುವೇಲ 16:7) ಹೌದು, ನಾವು ಆಂತರ್ಯದಲ್ಲಿ ಏನಾಗಿದ್ದೇವೊ ಅದನ್ನು ದೇವರು ಪರಿಗಣಿಸುತ್ತಾನೆ. ಕ್ರಿಯೆಗಳು ಅತ್ಯಾವಶ್ಯಕ ನಿಜ. ದಿವ್ಯ ಭಕ್ತಿಯ ಕ್ರಿಯೆಗಳು ಯೆಹೋವನ ಬೋಧನೆಯನ್ನು ಅಂದಗೊಳಿಸಿ ಸಂಭವನೀಯ ಶಿಷ್ಯರನ್ನು ಆಕರ್ಷಿಸುತ್ತವೆ. (ಮತ್ತಾಯ 5:14-16; ತೀತ 2:10; 2 ಪೇತ್ರ 3:11) ಆದರೂ ನಮ್ಮ ಕ್ರಿಯೆಗಳು ಇಡೀ ಚರಿತ್ರೆಯನ್ನು ತಿಳಿಸುವುದಿಲ್ಲ. ಅವರ ಸತ್ಕಾರ್ಯಗಳ ದಾಖಲೆಯಿದ್ದಾಗ್ಯೂ, ಎಫೆಸದ ಸಭೆಯ ಸಂಬಂಧದಲ್ಲಿ ಚಿಂತಿಸಲಿಕ್ಕೆ ಪುನುರುತಿತ್ಥ ಯೇಸುವಿಗೆ ಕಾರಣವಿತ್ತು. “ನಿನ್ನ ಕೃತ್ಯಗಳನ್ನು . . . ಬಲ್ಲೆನು” ಎಂದು ಆತನು ಅವರಿಗೆ ಹೇಳಿದನು. “ಆದರೆ ಮೊದಲು ನಿನಗಿದ್ದ ಪ್ರೀತಿಯನ್ನು ನೀನು ಬಿಟ್ಟುಬಿಟ್ಟಿದ್ದೀಯೆಂದು ನಾನು ನಿನ್ನ ಮೇಲೆ ತಪ್ಪುಹೊರಿಸಬೇಕಾಗುತ್ತದೆ.”—ಪ್ರಕಟನೆ 2:1-4.
4. (ಎ) ಯಾವ ವಿಧದಲ್ಲಿ ನಮ್ಮ ದೇವರ ಸೇವೆಯು ಕರ್ತವ್ಯಪೂರ್ತಿಯ ರೂಢಿಯಂತಾಗಸಾಧ್ಯವಿದೆ? (ಬಿ) ಆತ್ಮಪರೀಕ್ಷಣೆಯ ಅಗತ್ಯವಿದೆಯೇಕೆ?
4 ಒಂದು ಅಪಾಯವು ಅಸ್ತಿತ್ವವಿರುತ್ತದೆ. ಒಂದು ಕಾಲಾವಧಿಯು ದಾಟಿದ ಮೇಲೆ ನಮ್ಮ ದೇವರ ಸೇವೆಯು ಒಂದು ಕರ್ತವ್ಯಪೂರ್ತಿಯ ರೂಢಿಯಾಗಿ ಪರಿಣಮಿಸಬಲ್ಲದು. ಒಬ್ಬಾಕೆ ಕ್ರೈಸ್ತ ಸ್ತ್ರೀಯು ಅದನ್ನು ಈ ರೀತಿ ವರ್ಣಿಸಿದ್ದಾಳೆ: “ನಾನು ಸೇವೆಗೆ ಹೋದೆ, ಕೂಟಗಳಿಗೆ ಹಾಜರಾದೆ, ಅಭ್ಯಾಸ ಮಾಡಿದೆ, ಪ್ರಾರ್ಥಿಸಿದೆ—ಆದರೆ ಅದೆಲ್ಲವನ್ನು ಯಾವ ಭಾವಾವೇಶದ ಅನಿಸಿಕೆಯೂ ಇಲ್ಲದೆ, ಬರಿಯ ಯಂತ್ರ ಸದೃಶವಾಗಿ ನಾನು ಮಾಡಿದೆ.” ದೇವರ ಸೇವಕರು “ಕೆಡವಲ್ಪಟ್ಟವರಾಗಿ” ಅಥವಾ “ದೀನಾವಸ್ಥೆಯಲ್ಲಿ” ರುವ ಭಾವವುಳ್ಳವರಾಗಿದ್ದಾಗ್ಯೂ, ಅವರು ತಮ್ಮನ್ನು ಶ್ರಮಿಸಿಕೊಳ್ಳುವಾಗ ಪ್ರಶಂಸಿಸಲ್ಪಡಬೇಕೆಂಬುದು ನಿಶ್ಚಯ. (2 ಕೊರಿಂಥ 4:9; 7:6) ಆದರೂ, ನಮ್ಮ ಕ್ರೈಸ್ತ ದಿನಚರಿಯು ಜಡಗೊಂಡು ಮಂದವಾಗುವಾಗ, ನಾವು ಒಳಗೆ ಎಂಜಿನನ್ನೋ ಎನ್ನುವಂತೆ ಇಣಿಕಿ ನೋಡುವ ಅಗತ್ಯವಿದೆ. ಅತಿ ಉತ್ತಮ ವಾಹನಕ್ಕೂ ನಿಯತಕಾಲಿಕ ದುರುಸ್ತಾಗಿಡುವಿಕೆ ಅಗತ್ಯ. ತದ್ರೀತಿ, ಕ್ರೈಸ್ತರೆಲ್ಲರು ಕ್ರಮದ ಆತ್ಮಪರೀಕ್ಷೆಯನ್ನು ಮಾಡಿಕೊಳ್ಳುವ ಅಗತ್ಯವಿದೆ. (2 ಕೊರಿಂಥ 13:5) ಇತರರು ನಮ್ಮ ಕಾರ್ಯಗಳನ್ನು ನೋಡಬಲ್ಲರು, ಆದರೆ ನಮ್ಮ ಕ್ರಿಯೆಗಳನ್ನು ಪ್ರೇರಿಸುವಂಥದು ಯಾವುದು ಎಂದವರು ಗ್ರಹಿಸಲಾರರು. ಆದುದರಿಂದ ನಮ್ಮಲ್ಲಿ ಪ್ರತಿಯೊಬ್ಬರು ಈ ಪ್ರಶ್ನೆಯ ಕುರಿತು ಚಿಂತಿತರಾಗಬೇಕು: ‘ದೇವರನ್ನು ಸೇವಿಸಲು ಯಾವುದು ನನ್ನನ್ನು ಪ್ರೇರಿಸುತ್ತದೆ?’
ಯೋಗ್ಯ ಪ್ರೇರಣೆಗೆ ಅಡಿಗ್ಡಳು
5. ಎಲ್ಲ ಆಜ್ಞೆಗಳಿಗಿಂತ ಮೊದಲನೆಯ ಆಜ್ಞೆಯು ಯಾವುದೆಂದು ಯೇಸು ಹೇಳಿದ್ದಾನೆ?
5 ಇಸ್ರಾಯೇಲಿಗೆ ಕೊಡಲ್ಪಟ್ಟ ಎಲ್ಲಾ ಆಜ್ಞೆಗಳಲ್ಲಿ ಮೊದಲನೆಯದು ಯಾವುದು ಎಂದು ಕೇಳಲಾಗಿ, ಬಾಹ್ಯ ತೋರಿಕೆಯನ್ನಲ್ಲ, ಆಂತರ್ಯದ ಹೇತುವಿನ ಮೇಲೆ ಕೇಂದ್ರೀಕರಿಸಿದ ಒಂದು ಆಜ್ಞೆಯನ್ನು ಯೇಸು ಉದ್ಧರಿಸಿದನು: “ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ಪೂರ್ಣ ಆತ್ಮದಿಂದಲೂ ಪೂರ್ಣ ಮನಸ್ಸಿನಿಂದಲೂ ಪೂರ್ಣ ಶಕಿಯ್ತಿಂದಲೂ ಪ್ರೀತಿಸಬೇಕು.” (ಮಾರ್ಕ 12:28-30, NW) ಹೀಗೆ ದೇವರಿಗಿರುವ ನಮ್ಮ ಸೇವೆಯ ಹಿಂದುಗಡೆ ಯಾವುದು ಚಾಲಕ ಶಕ್ತಿಯಾಗಿ ಇರಬೇಕೊ ಅದನ್ನು—ಪ್ರೀತಿ—ಯೇಸು ಗುರುತಿಸಿದನು.
6, 7. (ಎ) ಯಾವ ರೀತಿಯಲ್ಲಿ ಸೈತಾನನು ಕುಟುಂಬ ವೃತ್ತವನ್ನು ತಂತ್ರದಿಂದ ಆಕ್ರಮಿಸಿದ್ದಾನೆ, ಮತ್ತು ಏಕೆ? (2 ಕೊರಿಂಥ 2:11) (ಬಿ) ಒಬ್ಬನ ಪಾಲನೆ ಪೋಷಣೆಯು, ದಿವ್ಯ ಅಧಿಕಾರಕ್ಕೆ ಅವನ ಮನೋಭಾವವನ್ನು ಹೇಗೆ ಪ್ರಭಾವಿಸಬಲ್ಲದು?
6 ಈ ಪ್ರಾಮುಖ್ಯ ಗುಣವಾದ ಪ್ರೀತಿಯನ್ನು ಬೆಳೆಸಿಕೊಳ್ಳುವುದಕ್ಕೆ ನಮಗಿರುವ ಸಾಮರ್ಥ್ಯವನ್ನು ತಡೆಯಲು ಸೈತಾನನು ಬಯಸುತ್ತಾನೆ. ಈ ಗುರಿಯನ್ನು ಪೂರೈಸಲು ಅವನು ಬಳಸಿರುವ ಒಂದು ವಿಧಾನವು ಕುಟುಂಬ ವೃತ್ತವನ್ನು ಆಕ್ರಮಿಸುವುದೆ. ಯಾಕೆ? ಯಾಕಂದರೆ ಪ್ರೀತಿಯ ಕುರಿತಾದ ನಮ್ಮ ಮೊದಲನೆಯ ಮತ್ತು ಅತ್ಯಂತ ಶಾಶ್ವತ ಮನದಟ್ಟುಗಳು ಇಲ್ಲಿಯೆ ರೂಪುಗೊಳ್ಳುತ್ತವೆ. ಬಾಲ್ಯದಲ್ಲಿ ಏನನ್ನು ಕಲಿಯಲಾಗುತದ್ತೊ ಅದು ಪ್ರೌಢ ವಯಸ್ಸಿನಲ್ಲಿ ಮೌಲ್ಯವುಳ್ಳದ್ದಾಗಿ ಇರಸಾಧ್ಯವಿದೆಯೆಂಬ ಬೈಬಲ್ ಸೂತ್ರವು, ಸೈತಾನನಿಗೆ ಚೆನ್ನಾಗಿ ತಿಳಿದಿದೆ. (ಜ್ಞಾನೋಕ್ತಿ 22:6) ಚಿಕ್ಕ ಪ್ರಾಯದಿಂದಲೆ ಪ್ರೀತಿಯ ಕುರಿತ ನಮ್ಮ ಕಲ್ಪನೆಯನ್ನು ವಕ್ರಗೊಳಿಸುವುದಕ್ಕೆ ಅವನು ಕುತಂತ್ರದಿಂದ ಪ್ರಯತ್ನಿಸುತ್ತಾನೆ. ಅನೇಕರು ಪ್ರೀತಿಯ ಬೀಡಾಗಿರುವ ಮನೆಗಳಲ್ಲಿ ಅಲ್ಲ—ದ್ವೇಷ, ಕ್ರೋಧ, ಮತ್ತು ನಿಂದಾತ್ಮಕ ಮಾತುಗಳ ರಣಭೂಮಿಗಳಾಗಿರುವ ಮನೆಗಳಲ್ಲಿ ಬೆಳೆಯುವಾಗ, “ಈ ವಿಷಯಗಳ ವ್ಯವಸ್ಥೆಯ ದೇವರು” ಆಗಿರುವ ಸೈತಾನನು ತನ್ನ ಉದ್ದೇಶಗಳ ಕಾರ್ಯಸಾಧಕತೆಯನ್ನು ಕಾಣುತ್ತಾನೆ.—2 ಕೊರಿಂಥ 4:4, NW; ಎಫೆಸ 4:31, 32; 6:4, ಪಾದಟಿಪ್ಪಣಿ; ಕೊಲೊಸ್ಸೆ 3:21.
7 ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು ಎಂಬ ಪುಸ್ತಕವು ಗಮನಿಸಿದ್ದೇನಂದರೆ, ಒಬ್ಬ ತಂದೆಯು ತನ್ನ ಪಿತೃತ್ವದ ಪಾತ್ರವನ್ನು ನಿರ್ವಹಿಸುವ ರೀತಿಯು, “ಮಾನುಷ ಮತ್ತು ದೈವಿಕ—ಎರಡೂ ಅಧಿಕಾರದ ಕಡೆಗೆ ತನ್ನ ಮಕ್ಕಳ, ಮುಂದಣ ಮನೋಭಾವದ ಮೇಲೆ ಒಂದು ಪ್ರಭಾವಿತ ಪರಿಣಾಮ ಬೀರಸಾಧ್ಯವಿದೆ.”a ಒಬ್ಬ ಕಠೋರ ತಂದೆಯ ದರ್ಪದ ಅಧಿಕಾರದ ಕೆಳಗೆ ಬೆಳೆಸಲ್ಪಟ್ಟ ಒಬ್ಬ ಕ್ರೈಸ್ತ ಮನುಷ್ಯನು ಒಪ್ಪಿಕೊಳ್ಳುವುದು: “ಯೆಹೋವನಿಗೆ ವಿಧೇಯನಾಗುವುದು ನನಗೆ ಸುಲಭ; ಆತನನ್ನು ಪ್ರೀತಿಸುವುದು ಎಷ್ಟೋ ಹೆಚ್ಚು ಕಷ್ಟ.” ವಿಧೇಯತೆಯು ಪ್ರಾಮುಖ್ಯ ನಿಶ್ಚಯ, ಯಾಕಂದರೆ ದೇವರ ದೃಷ್ಟಿಯಲ್ಲಿ “ಯಜ್ಞವನ್ನರ್ಪಿಸುವದಕ್ಕಿಂತ ಮಾತುಕೇಳುವದು [ವಿಧೇಯತೆ] ಉತ್ತಮವಾಗಿದೆ.” (1 ಸಮುವೇಲ 15:22) ಆದರೆ ಬರಿಯ ವಿಧೇಯತೆಗಿಂತ ಇನ್ನೂ ಮುಂದಕ್ಕೆ ಚಲಿಸಿ, ಯೆಹೋವನಿಗಾಗಿ ಪ್ರೀತಿಯನ್ನು ನಮ್ಮ ಆರಾಧನೆಯ ಹಿಂದಿರುವ ಪ್ರೇರೇಪಕ ಶಕ್ತಿಯಾಗಿ ಬೆಳೆಸಿಕೊಳ್ಳಲು ನಮಗೆ ಯಾವುದು ಸಹಾಯ ಮಾಡಬಲ್ಲದು?
“ಕ್ರಿಸ್ತನ ಪ್ರೀತಿಯು ನಮಗೆ ಒತ್ತಯಾಮಾಡುತ್ತದೆ”
8, 9. ಯೇಸುವಿನ ಪ್ರಾಯಶ್ಚಿತ್ತ ಯಜ್ಞವು ಯೆಹೋವನೆಡೆಗೆ ನಮ್ಮ ಪ್ರೀತಿಯನ್ನು ಹೇಗೆ ಹುರಿದುಂಬಿಸಬೇಕು?
8 ಯೆಹೋವನಲ್ಲಿ ಪೂರ್ಣ ಹೃದಯದ ಪ್ರೀತಿಯನ್ನು ಬೆಳೆಸಿಕೊಳ್ಳುವ ಅತ್ಯಂತ ಹೆಚ್ಚಿನ ಪ್ರಚೋದನೆಯು ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞಕ್ಕಾಗಿ ಗಣ್ಯತೆಯೆ. “ದೇವರು ತನ್ನ ಒಬ್ಬನೇ ಮಗನನ್ನು ನಾವು ಆತನ ಮೂಲಕ ಜೀವಿಸುವದಕ್ಕಾಗಿ ಲೋಕಕ್ಕೆ ಕಳುಹಿಸಿಕೊಟ್ಟದರಲ್ಲಿಯೇ ದೇವರ ಪ್ರೀತಿಯು ನಮ್ಮಲ್ಲಿ ಪ್ರತ್ಯಕ್ಷವಾಗಿದೆ.” (1 ಯೋಹಾನ 4:9) ಒಮ್ಮೆ ನಾವು ಅದನ್ನು ತಿಳಿದುಕೊಂಡು ಗಣ್ಯಮಾಡಿದೆವೆಂದರೆ, ಈ ಪ್ರೀತಿಯ ಕೃತ್ಯವು, ಪ್ರೀತಿಯ ಒಂದು ಪ್ರತಿಕ್ರಿಯೆಯನ್ನು ಹೊರಸೆಳೆಯುತ್ತದೆ. “ದೇವರು [ಯೆಹೋವನು] ಮೊದಲು ನಮ್ಮನ್ನು ಪ್ರೀತಿಸಿದರ್ದಿಂದ ನಾವು ಪ್ರೀತಿಸುತ್ತೇವೆ.”—1 ಯೋಹಾನ 4:19.
9 ಮನುಷ್ಯನ ರಕ್ಷಕನಾಗಿ ಸೇವೆಮಾಡುವ ತನ್ನ ನೇಮಕವನ್ನು ಯೇಸು ಸಿದ್ಧಮನಸ್ಸಿನಿಂದ ಸ್ವೀಕರಿಸಿದನು. “ಕ್ರಿಸ್ತನು ನಮಗೋಸ್ಕರ ಪ್ರಾಣವನ್ನು ಕೊಟ್ಟದರಲ್ಲಿಯೇ ಪ್ರೀತಿ ಇಂಥದೆಂದು ನಮಗೆ ತಿಳಿದುಬಂದದೆ.” (1 ಯೋಹಾನ 3:16; ಯೋಹಾನ 15:13) ಯೇಸುವಿನ ಸ್ವತ್ಯಾಗದ ಪ್ರೀತಿಯು ನಮ್ಮಲ್ಲಿ ಒಂದು ಗಣ್ಯತಾಪೂರ್ವಕ ಪ್ರತಿಕ್ರಿಯೆಯನ್ನು ಎಬ್ಬಿಸಬೇಕು. ದೃಷ್ಟಾಂತಕ್ಕಾಗಿ: ನೀವು ಮುಳುಗಿ ಸಾಯುವುದರಿಂದ ರಕ್ಷಿಸಲ್ಪಟ್ಟಿದ್ದೀರಿ ಎಂದು ನೆನಸಿರಿ. ನೀವು ಕೇವಲ ಎದ್ದು ಮನೆಗೆ ಹೋಗಿ, ಒರಸಿಕೊಂಡು, ಅದರ ಕುರಿತು ಮರೆತುಬಿಡುತ್ತೀರೊ? ನಿಶ್ಚಯವಾಗಿಯೂ ಇಲ್ಲ! ನಿಮ್ಮನ್ನು ಮುಳುಗುವುದರಿಂದ ಬದುಕಿಸಿದ ಆ ವ್ಯಕ್ತಿಗೆ ಋಣಿಯಾಗಿರುವ ಭಾವವುಳ್ಳವರಾಗುವಿರಿ. ಎಷ್ಟೆಂದರೂ ನಿಮ್ಮ ಜೀವಕ್ಕಾಗಿ ನೀವು ಆ ವ್ಯಕ್ತಿಗೆ ಹಂಗುಳ್ಳವರು. ಹೀಗಿರುವಾಗ, ಯೆಹೋವ ದೇವರಿಗೆ ಮತ್ತು ಯೇಸು ಕ್ರಿಸ್ತನಿಗೆ ನಾವು ಏನಾದರೂ ಕಡಿಮೆ ಹಂಗುಳ್ಳವರೊ? ಆ ಪ್ರಾಯಶ್ಚಿತದ್ತ ಹೊರತು ನಾವು ಪ್ರತಿಯೊಬ್ಬರು, ಪಾಪ ಮತ್ತು ಮರಣದಲ್ಲಿ ಮುಳುಗುವವರೊ ಎನ್ನುವಂತಿದೆವ್ದು. ಬದಲಿಗೆ, ಪ್ರೀತಿಯ ಈ ಮಹಾ ಕೃತ್ಯದಿಂದಾಗಿ, ಒಂದು ಪ್ರಮೋದವನ ಭೂಮಿಯಲ್ಲಿ ಸದಾ ಜೀವಿಸುವ ಪ್ರತೀಕ್ಷೆಯು ನಮಗಿದೆ.—ರೋಮಾಪುರ 5:12, 18; 1 ಪೇತ್ರ 2:24.
10. (ಎ) ಪ್ರಾಯಶ್ಚಿತವ್ತನ್ನು ನಾವು ಹೇಗೆ ಒಂದು ವ್ಯಕ್ತಿಪರ ಸಂಗತಿಯನ್ನಾಗಿ ಮಾಡಬಲ್ಲೆವು? (ಬಿ) ಕ್ರಿಸ್ತನ ಪ್ರೀತಿಯು ನಮ್ಮನ್ನು ಹೇಗೆ ಒತ್ತಯಾಮಾಡುತ್ತದೆ?
10 ಪ್ರಾಯಶ್ಚಿತದ್ತ ಕುರಿತು ಧ್ಯಾನಿಸಿರಿ. ಪೌಲನು ಮಾಡಿದಂತೆ, ಪ್ರಾಯಶ್ಚಿತದ್ತ ವ್ಯಕ್ತಿಪರ ಅನ್ವಯವನ್ನು ಮಾಡಿಕೊಳ್ಳಿರಿ: “ಈಗ ಶರೀರದಲ್ಲಿರುವ ನಾನು ಜೀವಿಸುವದು ಹೇಗಂದರೆ ದೇವಕುಮಾರನ ಮೇಲಣ ನಂಬಿಕೆಯಲ್ಲಿಯೇ. ಆತನು ನನ್ನನ್ನು ಪ್ರೀತಿಸಿ ನನಗೋಸ್ಕರ ತನ್ನನ್ನು ಒಪ್ಪಿಸಿಬಿಟ್ಟನು.” (ಗಲಾತ್ಯ 2:20) ಅಂತಹ ಧ್ಯಾನವು ಹೃದಯಪೂರ್ವಕವಾದ ಪ್ರೇರೇಪಣೆಯನ್ನು ಉತ್ತೇಜಿಸುವುದು, ಯಾಕಂದರೆ ಪೌಲನು ಕೊರಿಂಥದವರಿಗೆ ಬರೆದದ್ದು: “ಕ್ರಿಸ್ತನ ಪ್ರೀತಿಯು ನಮಗೆ ಒತ್ತಯಾಮಾಡುತ್ತದೆ; . . . ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೆ ತಮಗೋಸ್ಕರ ಎದ್ದು ಬಂದಾತನಿಗಾಗಿ ಜೀವಿಸಬೇಕೆಂತಲೇ ಆತನು ಎಲ್ಲರಿಗೋಸ್ಕರ ಸತ್ತನು.” (2 ಕೊರಿಂಥ 5:14, 15) ಕ್ರಿಸ್ತನ ಪ್ರೀತಿಯು “ನಮ್ಮನ್ನು ಭಾವಪರವಶಮಾಡುತ್ತದೆ” ಎಂದು ಜೆರೂಸಲೇಮ್ ಬೈಬಲ್ ಹೇಳುತ್ತದೆ. ನಾವು ಕ್ರಿಸ್ತನ ಪ್ರೀತಿಯ ಕುರಿತು ಆಲೋಚಿಸುವಾಗ, ನಾವು ಒತ್ತಾಯಿಸಲ್ಪಡುತ್ತೇವೆ, ಆಳವಾಗಿ ಪ್ರೇರಿಸಲ್ಪಡುತ್ತೇವೆ, ಭಾವಪರವಶರೂ ಆಗುತ್ತೇವೆ. ಅದು ನಮ್ಮ ಹೃದಯವನ್ನು ಸ್ಪರ್ಶಿಸುತ್ತದೆ ಮತ್ತು ಕ್ರಿಯೆನಡಿಸಲು ಪ್ರಚೋದಿಸುತ್ತದೆ. ಜೆ. ಬಿ. ಫಿಲಿಫ್ಸ್ ತರ್ಜುಮೆಯು ಅದನ್ನು ಸಾರಾಂಶಿಸುವ ಪ್ರಕಾರ, “ನಮ್ಮ ಕ್ರಿಯೆಗಳ ಪ್ರೇರಕವು ತಾನೆ ಕ್ರಿಸ್ತನ ಪ್ರೀತಿಯಾಗಿದೆ.” ಫರಿಸಾಯರ ಉದಾಹರಣೆಯಲ್ಲಿ ತೋರಿಸಲ್ಪಟ್ಟ ಪ್ರಕಾರ, ಬೇರೆ ಯಾವುದೆ ರೀತಿಯ ಪ್ರೇರಣೆಯು ಶಾಶ್ವತವಾದ ಫಲವನ್ನು ನಮ್ಮಲ್ಲಿ ಹುಟ್ಟಿಸಲಾರದು.
“ಫರಿಸಾಯರ ಹುಳಿ ಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ”
11. ಧಾರ್ಮಿಕ ಕ್ರಿಯೆಗಳ ಕಡೆಗಿನ ಫರಿಸಾಯರ ಮನೋಭಾವವನ್ನು ವರ್ಣಿಸಿರಿ.
11 ಫರಿಸಾಯರು ದೇವರ ಆರಾಧನೆಯೊಳಗಿನ ಸಾರವನ್ನೆಲ್ಲಾ ತೆಗೆದುಬಿಟ್ಟರು. ದೇವರ ಪ್ರೀತಿಗೆ ಒತ್ತುಹಾಕುವ ಬದಲಾಗಿ ಅವರು ಆತ್ಮಿಕತೆಯ ಗಜಕಡ್ಡಿಯಾಗಿ ಕ್ರಿಯೆಗಳಿಗೆ ಪ್ರಾಧಾನ್ಯ ಕೊಟ್ಟರು. ಸವಿಸ್ತಾರವಾದ ನಿಯಮಗಳಲ್ಲಿ ಅವರ ತಲ್ಲೀನತೆಯು ಅವರನ್ನು ಹೊರಗೆ ನೀತಿವಂತರನ್ನಾಗಿ ತೋರಿಸಿತು, ಆದರೆ ಅವರು ಒಳಗೆ “ಸತ್ತವರ ಎಲುಬುಗಳಿಂದಲೂ ಎಲ್ಲಾ ಹೊಲಸಿನಿಂದಲೂ” ತುಂಬಿದ್ದರು.—ಮತ್ತಾಯ 23:27.
12. ಯೇಸು ಒಬ್ಬ ಮನುಷ್ಯನನ್ನು ಗುಣಪಡಿಸಿದ ಬಳಿಕ, ಫರಿಸಾಯರು ತಮ್ಮನ್ನು ಕಲ್ಲು ಹೃದಯದವರಾಗಿ ತೋರಿಸಿದ್ದು ಹೇಗೆ?
12 ಒಂದು ಸಂದರ್ಭದಲ್ಲಿ ಯೇಸು ಕೈಬತ್ತಿಹೋದ ಒಬ್ಬ ಮನುಷ್ಯನನ್ನು ಕರುಣೆಯಿಂದ ವಾಸಿಮಾಡಿದನು. ನಿಸ್ಸಂದೇಹವಾಗಿ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಬಹಳಷ್ಟು ಅಹಿತವನ್ನು ತಂದ ಆ ರೋಗವಾಸಿಯನ್ನು ಆ ಕೂಡಲೆ ಅನುಭವಿಸಲು ಈ ಮನುಷ್ಯನು ಎಷ್ಟು ಸಂತೋಷಪಟ್ಟಿರಬೇಕು! ಆದರೂ, ಫರಿಸಾಯರು ಅವನೊಂದಿಗೆ ಸಂತೋಷಪಡಲಿಲ್ಲ. ಬದಲಾಗಿ ಯೇಸು ಸಬ್ಬತ್ ದಿನದಲ್ಲಿ ಸಹಾಯ ಕೊಟ್ಟನು ಎಂಬ ಶಾಸ್ತ್ರ ತಾಂತ್ರಿಕತೆಯ ಅಲ್ಪ ವಿಷಯದ ಮೇಲೆ ಅನ್ಯಾಯವಾಗಿ ಟೀಕಿಸಿದರು. ನಿಯಮ ಶಾಸ್ತ್ರದ ತಾಂತ್ರಿಕ ನಿರೂಪಣೆಯಲ್ಲಿ ಪೂರ್ವಾಕ್ರಮಣಮಾಡುತ್ತಾ, ಫರಿಸಾಯರು ನಿಯಮದ ಸಾರವನ್ನು ಪೂರ್ತಿಯಾಗಿ ಲೋಪಗೊಳಿಸಿದರು. ಯೇಸು “ಅವರ ಮನಸ್ಸು ಕಲ್ಲಾಗಿರುವದನ್ನು ಕಂಡು ದುಃಖಪಟ್ಟ” ದರ್ದಲ್ಲಿ ಏನೂ ಆಶ್ಚರ್ಯವಿಲ್ಲ! (ಮಾರ್ಕ 3:1-5) ಅದಲ್ಲದೆ, ಅವನು ತನ್ನ ಶಿಷ್ಯರನ್ನು ಎಚ್ಚರಿಸಿದ್ದು: “ಫರಿಸಾಯರ ಮತ್ತು ಸದ್ದುಕಾಯರ ಹುಳಿ ಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ.” (ಮತ್ತಾಯ 16:6) ಅವರ ಕ್ರಿಯೆಗಳು ಮತ್ತು ಮನೋಭಾವಗಳು ಬೈಬಲಿನಲ್ಲಿ ನಮ್ಮ ಪ್ರಯೋಜನಕ್ಕಾಗಿ ಹೊರಗೆಡವಲ್ಪಟ್ಟಿವೆ.
13. ಫರಿಸಾಯರ ಉದಾಹರಣೆಯಲ್ಲಿ ನಮಗೆ ಯಾವ ಪಾಠವಿದೆ?
13 ಕ್ರಿಯೆಗಳ ವಿಷಯದಲ್ಲಿ ಒಂದು ಸಮಂಜಸವಾದ ನೋಟವು ನಮಗಿರಬೇಕೆಂದು ಫರಿಸಾಯರ ಉದಾಹರಣೆಯು ನಮಗೆ ಕಲಿಸುತ್ತದೆ. ಕ್ರಿಯೆಗಳು ಪ್ರಾಮುಖ್ಯವೆಂಬುದು ನಿಶಯ್ವ, ಯಾಕಂದರೆ “ಕ್ರಿಯೆಗಳಿಲ್ಲದ ನಂಬಿಕೆಯೂ ಸತ್ತದ್ದೇ.” (ಯಾಕೋಬ 2:26) ಆದರೂ, ಜನರು ಏನಾಗಿದ್ದಾರೊ ಅದರ ಬದಲಾಗಿ, ಅವರು ಏನು ಮಾಡುತ್ತಾರೊ ಅದರಿಂದ ಇತರರನ್ನು ತೀರ್ಪುಮಾಡುವ ಪ್ರವೃತ್ತಿಯು ಅಸಂಪೂರ್ಣ ಮಾನವರಿಗಿದೆ. ಕೆಲವೊಮ್ಮೆ ನಾವು ನಮ್ಮನ್ನು ಸಹ ಈ ರೀತಿಯಲ್ಲಿ ತೀರ್ಪುಮಾಡಿಕೊಂಡೇವು. ಅದು ನಮ್ಮ ಆತ್ಮಿಕತೆಯ ಏಕೈಕ ಮಾನದಂಡವೊ ಎನ್ನುವಂತೆ ಕೆಲಸ ನಿರ್ವಹಣೆಯ ಗೀಳು ನಮ್ಮನ್ನು ಹಿಡಿದೀತು. ನಮ್ಮ ಹೇತುಗಳನ್ನು ಪರೀಕ್ಷಿಸಿಕೊಳ್ಳುವ ಪ್ರಮುಖತೆಯನ್ನು ನಾವು ಮರೆತುಬಿಡಬಹುದು. (2 ಕೊರಿಂಥ 5:12ನ್ನು ಹೋಲಿಸಿ.) ನಿಯಮದ ಅಕ್ಷರವನ್ನು ಮಾತ್ರ ಪಾಲಿಸುವವರಾಗಿ ಅದರ ಉದ್ದೇಶವನ್ನು ಉಲ್ಲಂಘಿಸುವ “ಸೊಳ್ಳೇ ಸೋಸುವವರು, ಒಂಟೇ ನುಂಗುವವರು” ಆದ ಅತಿಸೂತ್ರ ಪಾಲಕರರಾಗಿ ನಾವು ಪರಿಣಮಿಸಬಹುದು.—ಮತ್ತಾಯ 23:24.
14. ಫರಿಸಾಯರು ಅಶುದ್ಧವಾದ ಪಾತ್ರೆ ಯಾ ಬಟ್ಟಲಿನಂತಿದ್ದದ್ದು ಹೇಗೆ?
14 ಒಬ್ಬ ವ್ಯಕ್ತಿಯು ಯೆಹೋವನನ್ನು ನಿಜವಾಗಿ ಪ್ರೀತಿಸುವುದಾದರೆ ದಿವ್ಯ ಭಕ್ತಿಯ ಕ್ರಿಯೆಗಳು ಸ್ವಾಭಾವಿಕವಾಗಿಯೆ ಹಿಂಬಾಲಿಸುವುವೆಂಬುದನ್ನು ಫರಿಸಾಯರು ಗ್ರಹಿಸಿಕೊಳ್ಳಲಿಲ್ಲ. ಆತ್ಮಿಕತೆಯು ಆಂತರ್ಯದಿಂದ ಹೊರಟು ಹೊರಗೆ ಹರಿಯುತ್ತದೆ. ಈ ವಿಷಯದಲ್ಲಿ ಫರಿಸಾಯರ ತಪ್ಪು ಯೋಚನೆಯನ್ನು ಯೇಸು ಹೀಗೆ ಹೇಳುತ್ತಾ ಬಲವಾಗಿ ಖಂಡಿಸಿದನು: “ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಪಂಚಪಾತ್ರೆ ಬಟ್ಟಲು ಇವುಗಳ ಹೊರಭಾಗವನ್ನು ಶುಚಿಮಾಡುತ್ತೀರಿ; ಆದರೆ ಅವು ಒಳಗೆ ಸುಲುಕೊಂಡವುಗಳಿಂದಲೂ ಇಹಭೋಗಪದಾರ್ಥಗಳಿಂದಲೂ ತುಂಬಿರುತ್ತವೆ. ಕುರುಡನಾದ ಫರಿಸಾಯನೇ, ಮೊದಲು ಪಂಚಪಾತ್ರೆ ಬಟ್ಟಲುಗಳ ಒಳಭಾಗವನ್ನು ಶುಚಿಮಾಡು. ಆಗ ಅವುಗಳ ಹೊರಭಾಗವೂ ಶುಚಿಯಾಗುವದು.”—ಮತ್ತಾಯ 23:25, 26.
15. ಯೇಸು ತೋರಿಕೆಗಳನ್ನು ಮೀರಿ ನೋಡುತ್ತಾನೆಂದು ತೋರಿಸುವ ಉದಾಹರಣೆಗಳನ್ನು ತಿಳಿಸಿರಿ.
15 ಒಂದು ಪಾತ್ರೆ, ಬಟ್ಟಲು, ಅಥವಾ ಒಂದು ಕಟ್ಟಡದ ಬಾಹ್ಯ ತೋರಿಕೆಯು ಕೇವಲ ಎಲ್ಲವನ್ನು ಹೊರಗೆಡಹುವುದಿಲ್ಲ. ಯೇಸುವಿನ ಶಿಷ್ಯರು ಯೆರೂಸಲೇಮಿನ ದೇವಾಲಯದ ಸೌಂದರ್ಯದಿಂದಾಗಿ ಭಯಚಕಿತರಾದರು, ಆದರೆ ಅದರ ಒಳಗೆ ಏನು ನಡೆಯುತ್ತಿತ್ತೊ ಅದರಿಂದಾಗಿ ಯೇಸು ಅದನ್ನು “ಕಳ್ಳರ ಗವಿ” ಎಂದು ಕರೆದನು. (ಮಾರ್ಕ 11:17; 13:1) ದೇವಾಲಯದ ಕುರಿತು ಏನು ಸತ್ಯವೊ ಅದು, ಕ್ರೈಸ್ತಪ್ರಪಂಚದ ದಾಖಲೆ ತೋರಿಸುವಂತೆ, ಕ್ರೈಸ್ತರೆನಿಸಿಕೊಳ್ಳುವ ಲಕ್ಷಾಂತರ ಮಂದಿಯ ವಿಷಯದಲ್ಲೂ ಸತ್ಯ. ತನ್ನ ಹೆಸರಿನಲ್ಲಿ “ಮಹತ್ಕಾರ್ಯಗಳನ್ನು” ನಡಿಸಿದ ಕೆಲವರನ್ನು “ಧರ್ಮವನ್ನು ಮೀರಿನಡೆಯುವವ” ರಾಗಿ ತಾನು ತೀರ್ಪುಮಾಡುವೆನೆಂದು ಯೇಸು ಹೇಳಿದನು. (ಮತ್ತಾಯ 7:22, 23) ಇದಕ್ಕೆ ತೀರ ವೈದೃಶ್ಯದಲ್ಲಿ, ಬರಿಯ ಅಲ್ಪ ಮೊತ್ತದ ಹಣವನ್ನು ದೇವಾಲಯದಲ್ಲಿ ಕಾಣಿಕೆಯಾಗಿ ಕೊಟ್ಟ ಒಬ್ಬಾಕೆ ವಿಧವೆಯ ಕುರಿತು ಅವನಂದದ್ದು: “ಬೊಕ್ಕಸದಲ್ಲಿ ಹಾಕಿದವರೆಲ್ಲರಲ್ಲಿ ಈ ಬಡ ವಿಧವೆ ಹೆಚ್ಚು ಹಾಕಿದ್ದಾಳೆ. . . . ಈಕೆಯೋ ತನ್ನ ಬಡತನದಲ್ಲಿಯೂ ತನಗಿದ್ದದ್ದನ್ನೆಲ್ಲಾ ಹಾಕಿದಳು, ತನ್ನ ಜೀವನವನ್ನೇ ಕೊಟ್ಟುಬಿಟ್ಟಳು.” (ಮಾರ್ಕ 12:41-44) ಅಸಂಗತವಾದ ತೀರ್ಮಾನಗಳೊ? ಅಲ್ಲವೆ ಅಲ್ಲ. ಎರಡೂ ಸನ್ನಿವೇಶಗಳಲ್ಲಿ, ಯೇಸು ಯೆಹೋವನ ದೃಷ್ಟಿಕೋನವನ್ನು ಪ್ರತಿಬಿಂಬಿಸಿದನು. (ಯೋಹಾನ 8:16) ಕ್ರಿಯೆಗಳ ಹಿಂದಿದ್ದ ಪ್ರೇರಣೆಗಳನ್ನು ಆತನು ಕಂಡು ಅದಕ್ಕನುಸಾರ ತೀರ್ಪುಮಾಡಿದನು.
‘ಪ್ರತಿಯೊಬ್ಬನಿಗೆ ಅವನವನ ಸಾಮರ್ಥ್ಯದ ಪ್ರಕಾರ’
16. ನಮ್ಮ ಸೇವೆಯನ್ನು ನಾವು ಮತ್ತೊಬ್ಬ ಕ್ರೈಸ್ತನ ಸೇವೆಯೊಂದಿಗೆ ಯಾವಾಗಲೂ ಹೋಲಿಸುವ ಅಗತ್ಯವಿಲ್ಲವೇಕೆ?
16 ನಮ್ಮ ಪ್ರೇರೇಪಣೆಗಳು ಯೋಗ್ಯವಾಗಿದ್ದಲ್ಲಿ, ಸತತವಾದ ತಾರತಮ್ಯ ಪರೀಕ್ಷೆಯ ಅಗತ್ಯವು ಇರುವುದಿಲ್ಲ. ಉದಾಹರಣೆಗೆ, ಇನ್ನೊಬ್ಬ ಕ್ರೈಸ್ತನು ಶುಶ್ರೂಷೆಯಲ್ಲಿ ಕಳೆಯುವಷ್ಟೇ ಸಮಯವನ್ನು ಕಳೆಯಲು ಸ್ಪರ್ಧಾತ್ಮಕವಾಗಿ ಪ್ರಯತ್ನಿಸುವುದರಿಂದ ಅಥವಾ ಸಾರುವಿಕೆಯಲ್ಲಿ ಅವನ ಸಾಧನೆಗಳಿಗೆ ಸರಿಸಮಗೊಳಿಸುವುದರಿಂದ ಏನೂ ಸಾಧಿಸಲ್ಪಡುವುದಿಲ್ಲ. ಮತ್ತೊಬ್ಬನ ಹೃದಯದಿಂದಲ್ಲ—ನಿಮ್ಮ ಪೂರ್ಣ ಹೃದಯ, ಮನಸ್ಸು, ಆತ್ಮ, ಮತ್ತು ಶಕಿಯ್ತಿಂದ ಯೆಹೋವನನ್ನು ಪ್ರೀತಿಸುವಂತೆ ಯೇಸು ಹೇಳಿದನು. ಪ್ರತಿಯೊಬ್ಬ ವ್ಯಕ್ತಿಯ ಸಾಮರ್ಥ್ಯಗಳು, ತಾಕತ್ತು ಮತ್ತು ಪರಿಸ್ಥಿತಿಗಳು ಬೇರೆ ಬೇರೆಯಾಗಿವೆ. ನಿಮ್ಮ ಸನ್ನಿವೇಶವು ಅನುಮತಿಸುವುದಾದರೆ, ಶುಶ್ರೂಷೆಯಲ್ಲಿ ಹೆಚ್ಚು ಸಮಯವನ್ನು—ಪ್ರಾಯಶಃ ಒಬ್ಬ ಪೂರ್ಣ ಸಮಯದ ಪಯನೀಯರ ಶುಶ್ರೂಷಕನಾಗಿಯೂ—ಕಳೆಯುವಂತೆ ಪ್ರೀತಿಯು ನಿಮ್ಮನ್ನು ಪ್ರೇರೇಪಿಸುವುದು. ಆದರೆ ಒಂದು ಅಸ್ವಸ್ಥತೆಯಿಂದ ನೀವು ಒದ್ದಾಡುತ್ತೀರಾದರೆ, ನೀವು ಶುಶ್ರೂಷೆಯಲ್ಲಿ ಕಳೆಯುವ ಸಮಯವು ನೀವು ಬಯಸುವುದಕ್ಕಿಂತ ಕಡಿಮೆಯಾಗಿರಬಹುದು. ನಿರಾಶರಾಗಬೇಡಿ. ದೇವರಿಗೆ ನಂಬಿಗಸ್ತಿಕೆಯು ತಾಸುಗಳಿಂದ ಅಳೆಯಲ್ಪಡುವುದಿಲ್ಲ. ಶುದ್ಧ ಪ್ರೇರಣೆಗಳಿರಲಾಗಿ, ಸಂತೋಷಪಡಲು ನಿಮಗೆ ಸಕಾರಣವಿದೆ. ಪೌಲನು ಬರೆದದ್ದು: “ಪ್ರತಿಯೊಬ್ಬನು ತಾನು ಮಾಡಿದ ಕೆಲಸವನ್ನು ಪರಿಶೋಧಿಸಲಿ; ಆಗ ಅವನು ತನ್ನ ನಿಮಿತ್ತದಿಂದ ಹೆಚ್ಚಳಪಡುವದಕ್ಕೆ ಆಸ್ಪದವಾಗುವದೇ ಹೊರತು ಮತ್ತೊಬ್ಬನ ನಿಮಿತ್ತದಿಂದಾಗುವದಿಲ್ಲ.”—ಗಲಾತ್ಯ 6:4.
17. ನಿಮ್ಮ ಸ್ವಂತ ಮಾತುಗಳಲ್ಲಿ ತಲಾಂತುಗಳ ಸಾಮ್ಯವನ್ನು ಸಂಕ್ಷಿಪ್ತವಾಗಿ ತಿಳಿಸಿರಿ.
17 ಮತ್ತಾಯ 25:14-30 ರಲ್ಲಿ ದಾಖಲೆಯಾಗಿರುವ ಯೇಸುವಿನ ತಲಾಂತುಗಳ ಸಾಮ್ಯವನ್ನು ಗಮನಕ್ಕೆ ತನ್ನಿರಿ. ಪರದೇಶಕ್ಕೆ ಪ್ರಯಾಣಿಸಲಿದ್ದ ಒಬ್ಬ ಮನುಷ್ಯನು ತನ್ನ ಸೇವಕರನ್ನು ಕರೆದು ಅವರಿಗೆ ತನ್ನ ಆಸ್ತಿಯನ್ನು ಒಪ್ಪಿಸಿಕೊಟ್ಟನು. “ಅವನು ಒಬ್ಬನಿಗೆ ಐದು ತಲಾಂತು, ಒಬ್ಬನಿಗೆ ಎರಡು, ಒಬ್ಬನಿಗೆ ಒಂದು, ಹೀಗೆ ಅವನವನ ಸಾಮರ್ಥ್ಯದ ಪ್ರಕಾರ ಕೊಟ್ಟು ಬೇರೊಂದು ದೇಶಕ್ಕೆ ಹೋದನು.” ಧಣಿಯು ತನ್ನ ಆಳುಗಳಿಂದ ಲೆಕ್ಕ ತೆಗೆದುಕೊಳ್ಳಲು ಬಂದಾಗ ಅವನು ಕಂಡದ್ದೇನು? ಯಾವ ಆಳಿಗೆ ಐದು ತಲಾಂತು ಕೊಡಲ್ಪಟ್ಟಿತ್ತೋ, ಆ ಆಳು ಇನ್ನೂ ಐದು ತಲಾಂತನ್ನು ಗಳಿಸಿದ್ದನು. ತದ್ರೀತಿಯಲ್ಲಿ, ಯಾವ ಆಳಿಗೆ ಎರಡು ತಲಾಂತು ಕೊಡಲ್ಪಟ್ಟಿತ್ತೋ, ಆ ಆಳು ಎರಡು ಹೆಚ್ಚು ತಲಾಂತನ್ನು ಗಳಿಸಿದ್ದನು. ಯಾವ ಆಳಿಗೆ ಒಂದು ತಲಾಂತು ಕೊಡಲ್ಪಟ್ಟಿತ್ತೋ ಆ ಆಳು ಅದನ್ನು ನೆಲದಲ್ಲಿ ಬಚ್ಚಿಟ್ಟು, ತನ್ನ ಧಣಿಯ ಧನವನ್ನು ವೃದ್ಧಿಸಲಿಕ್ಕಾಗಿ ಏನನ್ನೂ ಮಾಡಲಿಲ್ಲ. ಈ ಸನ್ನಿವೇಶಕ್ಕೆ ಧಣಿಯು ಹೇಗೆ ಬೆಲೆಕಟ್ಟಿದನು?
18, 19. (ಎ) ಎರಡು ತಲಾಂತುಗಳನ್ನು ಹೊಂದಿದ ಆಳನ್ನು ಐದು ತಲಾಂತುಗಳನ್ನು ಹೊಂದಿದ ಆಳಿನೊಂದಿಗೆ ಧಣಿಯು ಯಾಕೆ ತುಲನೆ ಮಾಡಲಿಲ್ಲ? (ಬಿ) ಪ್ರಶಂಸೆ ಮತ್ತು ತಾರತಮ್ಯ ಪರೀಕ್ಷೆಯ ಕುರಿತು ತಲಾಂತುಗಳ ಸಾಮ್ಯವು ನಮಗೇನನ್ನು ಕಲಿಸುತ್ತದೆ? (ಸಿ) ಮೂರನೆಯ ಆಳು ಪ್ರತಿಕೂಲ ತೀರ್ಪನ್ನು ಹೊಂದಿದ್ದೇಕೆ?
18 ಮೊದಲಾಗಿ, ಅನುಕ್ರಮವಾಗಿ ಐದು ಮತ್ತು ಎರಡು ತಲಾಂತುಗಳನ್ನು ನೀಡಲಾದ ಆಳುಗಳನ್ನು ಪರಿಗಣಿಸೋಣ. ಈ ಆಳುಗಳಲ್ಲಿ ಪ್ರತಿಯೊಬ್ಬನಿಗೆ ಧಣಿಯು ಅಂದದ್ದು: “ಭಲಾ, ನಂಬಿಗಸ್ತನಾದ ಒಳ್ಳೇ ಆಳು ನೀನು!” ಐದು ತಲಾಂತುಗಳನ್ನು ಹೊಂದಿದ ಆಳು ಕೇವಲ ಎರಡೇ ತಲಾಂತುಗಳನ್ನು ಗಳಿಸಿದ್ದನಾದರೆ, ಅದನ್ನು ಆತನು ಅವನಿಗೆ ಹೇಳುತ್ತಿದ್ದನೊ? ಅಸಂಭವ! ಇನ್ನೊಂದು ಕಡೆ, ಎರಡು ತಲಾಂತುಗಳನ್ನು ಸಂಪಾದಿಸಿದ ಆಳಿಗೆ, ‘ನೀನೇಕೆ ಐದು ತಲಾಂತನ್ನು ಗಳಿಸಲಿಲ್ಲ? ನಿನ್ನ ಜೊತೆಯಾಳು ನನಗೆಷ್ಟು ಹೆಚ್ಚು ಸಂಪಾದಿಸಿದನು ನೋಡು!’ ಎಂದು ಅವನು ಹೇಳಲಿಲ್ಲ. ಇಲ್ಲ, ಯೇಸುವನ್ನು ಚಿತ್ರಿಸಿದ, ಆ ದಯಾಪರನಾದ ಧಣಿಯು ಹೋಲಿಕೆಗಳನ್ನು ಮಾಡಲಿಲ್ಲ. ಅವನು ‘ಪ್ರತಿಯೊಬ್ಬನಿಗೆ ಅವನವನ ಸಾಮರ್ಥ್ಯದ ಪ್ರಕಾರ’ ತಲಾಂತುಗಳನ್ನು ವಹಿಸಿಕೊಟ್ಟನು ಮತ್ತು ಪ್ರತಿಯೊಬ್ಬನು ಎಷ್ಟನ್ನು ಹಿಂದೆಕೊಡಶಕ್ತನಿದ್ದನೊ ಅದಕ್ಕಿಂತ ಹೆಚ್ಚೇನನ್ನೂ ಅವನು ಅಪೇಕ್ಷಿಸಲಿಲ್ಲ. ಇಬ್ಬರು ಆಳುಗಳಿಗೂ ಸರಿಸಮಾನವಾದ ಪ್ರಶಂಸೆಯು ದೊರೆಯಿತು, ಯಾಕಂದರೆ ಇಬ್ಬರೂ ತಮ್ಮ ಧಣಿಗಾಗಿ ಪೂರ್ಣಾತ್ಮದಿಂದ ದುಡಿದರು. ನಾವೆಲ್ಲರೂ ಇದರಿಂದ ಕಲಿಯಬಲ್ಲೆವು.
19 ನಿಶ್ಚಯವಾಗಿ, ಮೂರನೆಯ ಆಳಿಗೆ ಪ್ರಶಂಸೆ ದೊರೆಯಲಿಲ್ಲ. ವಾಸ್ತವದಲ್ಲಿ, ಅವನು ಹೊರಗೆ ಕತ್ತಲೆಗೆ ಎಸೆಯಲ್ಪಟ್ಟನು. ಒಂದೇ ತಲಾಂತನ್ನು ಹೊಂದಿದವನಾದ ಅವನು ಐದು ತಲಾಂತುಗಳನ್ನು ಹೊಂದಿದವನಷ್ಟು ಸಂಪಾದಿಸಲು ಅಪೇಕ್ಷಿಸಲ್ಪಟ್ಟಿರಲಿಕ್ಕಿಲ್ಲ. ಆದರೂ, ಅವನು ಪ್ರಯತ್ನವನ್ನು ಸಹ ಮಾಡಲಿಲ್ಲ! ಪ್ರತಿಕೂಲ ತೀರ್ಪು ಅಂತಿಮವಾಗಿ ಅವನಿಗೆ ಸಿಕ್ಕಿದ್ದು ಅವನ ‘ಮೈಗಳ್ಳತನ ಮತ್ತು ಕೆಟ್ಟತನ’ ಕ್ಕಾಗಿ, ಧಣಿಯೆಡೆಗಿನ ಪ್ರೀತಿಯ ಕೊರತೆಯನ್ನು ಅದು ಹೊರಗೆಡಹಿತು.
20. ಯೆಹೋವನು ನಮ್ಮ ಪರಿಮಿತಿಗಳನ್ನು ಹೇಗೆ ವೀಕ್ಷಿಸುತ್ತಾನೆ?
20 ನಮ್ಮಲ್ಲಿ ಪ್ರತಿಯೊಬ್ಬರು ಆತನನ್ನು ಪೂರ್ಣ ಶಕಿಯ್ತಿಂದ ಪ್ರೀತಿಸುವಂತೆ ಯೆಹೋವನು ಅಪೇಕ್ಷಿಸುತ್ತಾನೆ, ಆದರೂ, “ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂದು ನೆನಪುಮಾಡಿಕೊಳ್ಳುತ್ತಾನೆ” ಎಂಬುದೆಷ್ಟು ಹೃದಯಪ್ರೇರಕ! (ಕೀರ್ತನೆ 103:14) ಸಂಖ್ಯಾಸಂಗ್ರಹಣಗಳನ್ನಲ್ಲ—“ಯೆಹೋವನು ಹೃದಯಗಳನ್ನೇ ಪರೀಕ್ಷಿಸುವನು” ಎಂದು ಹೇಳುತ್ತದೆ ಜ್ಞಾನೋಕ್ತಿ 21:2. ಯಾವುದರ ಮೇಲೆ ನಮಗೆ ಹತೋಟಿಯಿಲ್ಲವೊ ಆ ಯಾವುದೆ ಪರಿಮಿತಿಗಳನ್ನು—ಆರ್ಥಿಕ, ಶಾರೀರಿಕ, ಮಾನಸಿಕ ಅಥವಾ ಬೇರೆ ಯಾವುದೇ ಆಗಿರಲಿ—ಅದನ್ನಾತನು ತಿಳಿದುಕೊಳ್ಳುತ್ತಾನೆ. (ಯೆಶಾಯ 63:9) ಅದೇ ಸಮಯದಲ್ಲಿ, ನಾವು ಹೊಂದಿರಬಹುದಾದ ಎಲ್ಲಾ ಸಂಪನ್ಮೂಲಗಳನ್ನು ನಮ್ಮ ಸಾಮರ್ಥ್ಯಕ್ಕನುಸಾರ ಅತ್ಯುತ್ತಮವಾಗಿ ಉಪಯೋಗಿಸುವಂತೆ ಆತನು ಅಪೇಕ್ಷಿಸುತ್ತಾನೆ. ಯೆಹೋವನು ಪರಿಪೂರ್ಣನು, ಆದರೆ ತನ್ನ ಅಸಂಪೂರ್ಣ ಆರಾಧಕರೊಂದಿಗೆ ವ್ಯವಹರಿಸುವಾಗ, ಅವರಿಂದ ಪರಿಪೂರ್ಣತೆಯನ್ನು ಅವನು ಅವಶ್ಯಪಡುವುದಿಲ್ಲ. ಆತನು ತನ್ನ ವ್ಯವಹಾರಗಳಲ್ಲಿ ಅಸಮಂಜಸನೂ ಅಲ್ಲ, ಇಲ್ಲವೆ ತನ್ನ ಅಪೇಕ್ಷೆಗಳಲ್ಲಿ ಅವಾಸ್ತವಿಕವಾದಿಯೂ ಅಲ್ಲ.
21. ನಮ್ಮ ದೇವರ ಸೇವೆಯು ಪ್ರೀತಿಯಿಂದ ಪ್ರೇರಿಸಲ್ಪಟ್ಟಲ್ಲಿ, ಯಾವ ಒಳ್ಳೆಯ ಫಲಗಳು ಸಿಗುವುವು?
21 ಯೆಹೋವನನ್ನು ನಮ್ಮ ಪೂರ್ಣ ಹೃದಯ, ಆತ್ಮ, ಮನಸ್ಸು, ಮತ್ತು ಶಕಿಯ್ತಿಂದ ಪ್ರೀತಿಸುವುದು “ಎಲ್ಲಾ ಸರ್ವಾಂಗಹೋಮಗಳಿಗಿಂತಲೂ ಎಲ್ಲಾ ಯಜ್ಞಗಳಿಗಿಂತಲೂ ಹೆಚ್ಚಿನವು.” (ಮಾರ್ಕ 12:33) ನಾವು ಪ್ರೀತಿಯಿಂದ ಪ್ರೇರಿಸಲ್ಪಡುವಲ್ಲಿ, ಆಗ, ದೇವರ ಸೇವೆಯಲ್ಲಿ ನಮಗೆ ಸಾಧ್ಯವಾಗುವುದೆಲ್ಲವನ್ನು ನಾವು ಮಾಡುವೆವು. ಪ್ರೀತಿಯೂ ಸೇರಿದ, ದಿವ್ಯ ಗುಣಗಳು “ನಿಮ್ಮಲ್ಲಿದ್ದು ಹೆಚ್ಚುತ್ತಾ ಬಂದರೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಸಂಬಂಧವಾದ ಪರಿಜ್ಞಾನವನ್ನು ಹೊಂದುವ ವಿಷಯದಲ್ಲಿ ನಿಮ್ಮನ್ನು ಆಲಸ್ಯಗಾರರೂ ನಿಷ್ಫಲರೂ ಆಗದಂತೆ ಮಾಡುತ್ತವೆ” ಎಂದು ಪೇತ್ರನು ಬರೆದನು.—2 ಪೇತ್ರ 1:8.
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಇಂಡಿಯ, ಪ್ರಕಾಶಿತ.
ಪುನರ್ವಿಮರ್ಶೆಯಲ್ಲಿ
◻ ನಮ್ಮ ದೇವರ ಸೇವೆಯ ಹಿಂದೆ ಇರಬೇಕಾದ ಪ್ರೇರೇಪಕ ಶಕ್ತಿ ಯಾವುದು?
◻ ಯೆಹೋವನನ್ನು ಸೇವಿಸಲು ಕ್ರಿಸ್ತನ ಪ್ರೀತಿಯು ನಮ್ಮನ್ನು ಹೇಗೆ ಒತ್ತಯಾಮಾಡುತ್ತದೆ?
◻ ಫರಿಸಾಯರ ಯಾವ ಪೂರ್ವಾಕ್ರಮಣವನ್ನು ನಾವು ವರ್ಜಿಸಬೇಕು?
◻ ನಮ್ಮ ಸೇವೆಯನ್ನು ಮತ್ತೊಬ್ಬ ಕ್ರೈಸ್ತನ ಸೇವೆಯೊಂದಿಗೆ ತುಲನೆಮಾಡುತ್ತಾ ಇರುವುದು ಅವಿವೇಕತನವೇಕೆ?
[ಪುಟ 16 ರಲ್ಲಿರುವ ಚಿತ್ರಗಳು]
ವ್ಯಕ್ತಿಪರ ಸಾಮರ್ಥ್ಯಗಳು, ತಾಕತ್ತು, ಮತ್ತು ಪರಿಸ್ಥಿತಿಗಳು ಬೇರೆ ಬೇರೆಯಾಗಿವೆ