ಏಕಾಂಗಿ ಆದರೆ ಎಂದೂ ತೊರೆಯಲ್ಪಟ್ಟಿಲ್ಲ
ಏಡಾ ಲೂಯಿಸ್ರವರು ಹೇಳಿದಂತೆ
ನಾನು ಯಾವಾಗಲೂ ವ್ಯಕ್ತಿಸ್ವಾತಂತ್ರ್ಯವಾದಿಯಾಗಿರುವ ಪ್ರವೃತ್ತಿಯುಳ್ಳವಳಾಗಿದ್ದೆ. ನಾನು ಮಾಡುವ ಪ್ರತಿಯೊಂದು ವಿಷಯದಲ್ಲೂ ನಾನು ಬಲವಾಗಿ ನಿರ್ಧರಿತಳೂ ಆಗಿದ್ದೇನೆ. ಇದನ್ನು ಇತರರು ಕೆಲವೊಮ್ಮೆ ಹಟಮಾರಿತನವೆಂದು ಕರೆಯುತ್ತಾರೆ. ಮುಚ್ಚುಮರೆಯಿಲ್ಲದೆ ಮಾತಾಡಿಬಿಡುವುದು ಎಷ್ಟು ಸುಲಭವೆಂದು ಸಹ ನನಗೆ ತಿಳಿದಿದೆ, ಮತ್ತು ವರ್ಷಗಳಲ್ಲೆಲ್ಲಾ ಈ ಲಕ್ಷಣವು ನನಗೆ ಸಮಸ್ಯೆಗಳನ್ನು ಉಂಟುಮಾಡಿದೆ.
ಆದರೂ, ನನ್ನ ವ್ಯಕ್ತಿತ್ವ ಕುಂದುಗಳಿಂದಾಗಿ ಯೆಹೋವ ದೇವರು ನನ್ನನ್ನು ತಿರಸ್ಕರಿಸದಿದ್ದದ್ದಕ್ಕಾಗಿ ನಾನು ಆಭಾರಿಯಾಗಿದ್ದೇನೆ. ಆತನ ವಾಕ್ಯದ ಒಂದು ಅಭ್ಯಾಸದ ಮೂಲಕ ನಾನು ನನ್ನ ವ್ಯಕ್ತಿತ್ವವನ್ನು ಬದಲಾಯಿಸಲು ಶಕ್ತಳಾಗಿದ್ದೇನೆ ಮತ್ತು ಈ ಕಾರಣದಿಂದ ಸುಮಾರು 60 ವರ್ಷಗಳಿಂದ ಆತನ ರಾಜ್ಯ ಅಭಿರುಚಿಗಳ ಸೇವೆ ಸಲ್ಲಿಸಿದ್ದೇನೆ. ಬಾಲ್ಯದಿಂದಲೇ ನಾನು ಕುದುರೆಗಳ ಪ್ರೇಮಿಯಾಗಿದ್ದೆ ಮತ್ತು ನನ್ನ ಕೊಂಚಮಟ್ಟಿಗಿನ ಹಟಮಾರಿತನವನ್ನು ಹತೋಟಿಯಲ್ಲಿಡುವುದರಲ್ಲಿ ದೇವರ ಸಹಾಯವು, ಒಂದು ಕುದುರೆಯನ್ನು ಹತೋಟಿಯಲ್ಲಿಡಲು ಒಂದು ಕಡಿವಾಣವನ್ನು ಉಪಯೋಗಿಸುವ ವಿಧವನ್ನು ನನಗೆ ಅನೇಕ ಸಲ ನೆನಪಿಸಿದೆ.
ನಾನು 1908 ರಲ್ಲಿ ದಕ್ಷಿಣ ಆಸ್ಟ್ರೇಲಿಯದಲ್ಲಿ ಮೌಂಟ್ ಗ್ಯಾಂಬಿಯರ್ನ ಒಂದು ಸುಂದರ ನೀಲಿ ಸರೋವರದ ಹತ್ತಿರ ಜನಿಸಿದೆ. ನನ್ನ ಹೆತ್ತವರಿಗೆ ಒಂದು ಹೈನುದಾಣ (ಡೇರಿ ಫಾರ್ಮ್) ಇತ್ತು, ಮತ್ತು ನಾನು ಎಂಟು ಮಕ್ಕಳಲ್ಲಿ ಹಿರಿಯ ಮಗಳಾಗಿದ್ದೆ. ನಾವೆಲ್ಲರೂ ತೀರ ಎಳೆಯರಾಗಿದ್ದಾಗ ನಮ್ಮ ತಂದೆಯವರು ತೀರಿಕೊಂಡರು. ಕುಟುಂಬಕ್ಕಾಗಿ ಆದಾಯವನ್ನು ತರಲಿಕ್ಕಾಗಿ ನನ್ನ ಇಬ್ಬರು ಅಣ್ಣಂದಿರು ಮನೆಯಿಂದ ದೂರವಾಗಿ ಕೆಲಸಮಾಡುವ ಅಗತ್ಯವಿದುದ್ದರಿಂದ, ಹೈನುದಾಣವನ್ನು ನಿರ್ವಹಿಸುವ ಹೆಚ್ಚಿನ ಜವಾಬ್ದಾರಿಯು ನನಗೆ ಬಂತು. ಹೈನುದಾಣದಲ್ಲಿನ ಜೀವನವು ಕೌಶಲ ಮತ್ತು ಪ್ರಯತ್ನವನ್ನು ನಿರ್ಬಂಧಪಡಿಸುವ ಕಠಿನ ಕೆಲಸವಾಗಿತ್ತು.
ಬೈಬಲ್ ಸತ್ಯದೊಂದಿಗೆ ಪ್ರಥಮ ಸಂಪರ್ಕ
ನಮ್ಮ ಕುಟುಂಬವು ಪ್ರೆಸ್ಬಿಟೇರಿಯನ್ ಚರ್ಚನ್ನು ಹಾಜರಾಗುತ್ತಿತ್ತು, ಮತ್ತು ನಾವು ಕ್ರಮದ, ಆಚರಣೆಯ ಸದಸ್ಯರಾಗಿದ್ದೆವು. ನಾನು ಸಂಡೇ-ಸ್ಕೂಲಿನ ಒಬ್ಬ ಶಿಕ್ಷಕಿಯಾದೆ ಮತ್ತು ನಾನು ಯಾವುದನ್ನು ಆತ್ಮಿಕವಾಗಿ ಮತ್ತು ನೈತಿಕವಾಗಿ ಸರಿಯೆಂದು ನಂಬಿದೆನೋ ಅದನ್ನು ಮಕ್ಕಳಿಗೆ ಕಲಿಸುವ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಂಡೆ.
1931 ರಲ್ಲಿ ನನ್ನ ಅಜ್ಜ ಸತ್ತರು, ಮತ್ತು ಅವರ ಸ್ವತ್ತುಗಳಲ್ಲಿ ಆಗ ವಾಚ್ ಟವರ್ ಸೊಸೈಟಿಯ ಅಧ್ಯಕ್ಷರಾಗಿದ್ದ ಜೆ. ಎಫ್. ರಥರ್ಫರ್ಡ್ರಿಂದ ಬರೆಯಲ್ಪಟ್ಟಿದ್ದ ಹಲವಾರು ಪುಸ್ತಕಗಳಿದ್ದವು. ನಾನು ದೇವರ ವೀಣೆ ಮತ್ತು ಸೃಷ್ಟಿ (ಇಂಗ್ಲಿಷ್) ಎಂಬ ಪುಸ್ತಕಗಳನ್ನು ಓದಲಾರಂಭಿಸಿದೆ, ಮತ್ತು ನಾನು ಅದನ್ನು ಹೆಚ್ಚೆಚ್ಚು ಓದಿದಂತೆ, ನಾನು ನಂಬುತ್ತಿದ್ದ ಮತ್ತು ಮಕ್ಕಳಿಗೆ ಕಲಿಸುತ್ತಿದ್ದ ಹಲವಾರು ಸಂಗತಿಗಳು ಬೈಬಲಿನಿಂದ ಬೆಂಬಲಿಸಲ್ಪಟ್ಟಿಲ್ಲವೆಂಬದನ್ನು ತಿಳಿಯಲು ಹೆಚ್ಚು ಆಶ್ಚರ್ಯಚಕಿತಳಾದೆ.
ಮಾನವ ಆತ್ಮವು ಅಮರವಲ್ಲ, ಜನರು ಸತ್ತಾಗ ಅವರಲ್ಲಿ ಹೆಚ್ಚಿನವರು ಸ್ವರ್ಗಕ್ಕೆ ಹೋಗುವದಿಲ್ಲ, ಮತ್ತು ದುಷ್ಟರಿಗೆ ನರಕಾಗ್ನಿಯಲ್ಲಿ ಯಾವ ನಿತ್ಯ ಯಾತನೆಯೂ ಇಲ್ಲವೆಂಬುದನ್ನು ತಿಳಿಯುವುದು ಧಕ್ಕೆಬರಿಸುವಂತಹದ್ದಾಗಿತ್ತು. ಸಾಪ್ತಾಹಿಕ ಸಬ್ಬತ್ತನ್ನು ಆಚರಿಸುವುದು ಒಂದು ಕ್ರಿಸ್ತೀಯ ಆವಶ್ಯಕತೆಯಲ್ಲವೆಂಬದನ್ನು ಕಂಡುಕೊಂಡಾಗ ನಾನು ಕಲಕಿಸಲ್ಪಟ್ಟೆ ಸಹ. ಆದುದರಿಂದ ನಾನು ಒಂದು ಗಂಭೀರ ನಿರ್ಣಯದೊಂದಿಗೆ ಎದುರಿಸಲ್ಪಟ್ಟೆ: ಕ್ರೈಸ್ತ ಪ್ರಪಂಚದ ಸಾಂಪ್ರದಾಯಿಕ ಬೋಧನೆಗಳಿಗೆ ಅಂಟಿಕೊಳ್ಳುವುದು ಅಥವಾ ಬೈಬಲ್ ಸತ್ಯವನ್ನು ಕಲಿಸಲಾರಂಭಿಸುವುದು. ಪ್ರೆಸ್ಬಿಟೇರಿಯನ್ ಚರ್ಚಿನೊಂದಿಗಿನ ನನ್ನ ಎಲ್ಲಾ ಸಹವಾಸವನ್ನು ಬಿಟ್ಟುಬಿಡುವುದನ್ನು ನಿರ್ಣಯಿಸಲು ನನಗೆ ಹೆಚ್ಚು ಸಮಯ ತಾಗಲಿಲ್ಲ.
ಈಗ ನಿಜವಾಗಿಯೂ ಏಕಾಂಗಿ
ಚರ್ಚನ್ನು ಬಿಟ್ಟುಬಿಡುವ ಮತ್ತು ಇನ್ನು ಮುಂದೆ ಸಂಡೇ-ಸ್ಕೂಲಿನಲ್ಲಿ ಕಲಿಸದೇ ಇರುವ ನನ್ನ ಉದ್ದೇಶವನ್ನು ನಾನು ಘೋಷಿಸಿದಾಗ, ನನ್ನ ಕುಟುಂಬ, ಸ್ನೇಹಿತರು ಮತ್ತು ಚರ್ಚಿನ ಹಿಂದಿನ ಪರಿಚಯಸ್ಥರು ಸಂತೋಷಪಡಲಿಲ್ಲ. ಮತ್ತು ನಾನು ಜಡ್ಜ್ ರಥರ್ಫರ್ಡ್ರ ಜನರೆಂದು ಕರೆಯಲ್ಪಡುತ್ತಿದ್ದವರೊಂದಿಗೆ ಒಳಗೂಡುತ್ತಿದ್ದೆನೆಂದು ಅವರು ಕಂಡುಹಿಡಿದಾಗ, ಅದು ಉರಿಯುತ್ತಿದ್ದ ಹರಟೆಗೆ ಕೇವಲ ಇನ್ನೂ ಹೆಚ್ಚಿನ ಇಂಧನವನ್ನು ಸೇರಿಸಿತಷ್ಟೇ. ನಾನು ವಾಸ್ತವದಲ್ಲಿ ಹೊರಹಾಕಲ್ಪಡಲಿಲ್ಲ, ಆದರೆ ನನ್ನ ಕುಟುಂಬ ಮತ್ತು ಹಿಂದಿನ ಸ್ನೇಹಿತರಲ್ಲಿ ಹೆಚ್ಚಿನವರು, ಕಡಿಮೆ ಪಕ್ಷ ಹೇಳುವುದಾದರೆ ನನ್ನ ಕಡೆಗೆ ನಿರಾಸಕ್ತರಾದರು.
ನಾನು ಓದುತ್ತಿದ್ದ ಪುಸ್ತಕಗಳನ್ನು ಅಭ್ಯಸಿಸಿ, ಅವುಗಳಲ್ಲಿ ಪಟ್ಟಿಮಾಡಲಾದ ಶಾಸ್ತ್ರವಚನಗಳನ್ನು ಪರೀಕ್ಷಿಸಿದಷ್ಟು ಹೆಚ್ಚು, ಬಹಿರಂಗವಾಗಿ ಸಾರುವ ಅಗತ್ಯವನ್ನು ನಾನು ಅಷ್ಟೇ ಹೆಚ್ಚಾಗಿ ಕಾಣಲಾರಂಭಿಸಿದೆ. ತಮ್ಮ ಬಹಿರಂಗ ಶುಶ್ರೂಷೆಯ ಭಾಗವಾಗಿ ಯೆಹೋವನ ಸಾಕ್ಷಿಗಳು ಮನೆಯಿಂದ ಮನೆಗೆ ಹೋಗುತ್ತಿದ್ದರೆಂಬದನ್ನು ನಾನು ಕಲಿತೆ. ಆದರೆ ಆ ಸಮಯದಲ್ಲಿ ನಮ್ಮ ಜಿಲ್ಲೆಯಲ್ಲಿ ಯಾವ ಸಾಕ್ಷಿಗಳೂ ಇರಲಿಲ್ಲ. ಆದುದರಿಂದ, ದೇವರ ರಾಜ್ಯದ ಸುವಾರ್ತೆಯನ್ನು ಸಾರಲು ಯಾರೂ ನನ್ನನ್ನು ಪ್ರೋತ್ಸಾಹಿಸಲಿಲ್ಲ ಅಥವಾ ಮಾಡುವ ವಿಧವನ್ನು ತೋರಿಸಲಿಲ್ಲ. (ಮತ್ತಾಯ 24:14) ನನಗೆ ತೀರ ಏಕಾಂಗಿಯಾಗಿರುವ ಅನಿಸಿಕೆಯಾಯಿತು.
ಹಾಗಿದ್ದರೂ, ಇತರರಿಗೆ ಸಾರಬೇಕೆಂಬ ಬೈಬಲ್ ಆಜ್ಞೆಯು ನನ್ನ ಕಿವಿಯಲ್ಲಿ ಮೊರೆಯುತ್ತಾ ಇತ್ತು ಮತ್ತು ಹೇಗಾದರೂ ಸಾರಲು ಆರಂಭಿಸ ಲೇಬೇಕೆಂದು ನಾನು ನಿರ್ಣಯಿಸಿದೆ. ತುಂಬ ಪ್ರಾರ್ಥನೆಯ ನಂತರ, ನನ್ನ ಅಧ್ಯಯನಗಳಿಂದ ನಾನೇನನ್ನು ಕಲಿತಿದ್ದೆನೋ ಕೇವಲ ಅದನ್ನು ಹೇಳಲು ಮತ್ತು ಈ ವಿಷಯಗಳನ್ನು ಅವರ ಸ್ವಂತ ಬೈಬಲ್ಗಳಿಂದ ತೋರಿಸಲು ಪ್ರಯತ್ನಿಸಲಿಕ್ಕಾಗಿ ನಾನು ನನ್ನ ನೆರೆಯವರ ಮನೆಗಳನ್ನು ಭೇಟಿಮಾಡಲು ಆರಂಭಿಸಿದೆ. ನನ್ನ ಮೊದಲ ಮನೆ, ನನ್ನ ಹಿಂದಿನ ಸಂಡೇ ಸ್ಕೂಲ್ ಸೂಪರಿಂಟೆಂಡೆಂಟ್ರವರ ಮನೆಯಾಗಿತ್ತು. ಅವರ ಜಡ ಪ್ರತಿಕ್ರಿಯೆಯು ಮತ್ತು ನಾನು ಚರ್ಚನ್ನು ತೊರೆದಿರುವ ಕುರಿತಾಗಿ ಅವರ ನಕಾರಾತ್ಮಕ ಹೇಳಿಕೆಗಳು ನಿಶ್ಚಯವಾಗಿಯೂ ಒಂದು ಪ್ರೋತ್ಸಾಹದಾಯಕ ಆರಂಭವಾಗಿರಲಿಲ್ಲ. ಆದರೆ ನಾನು ಅವರ ಮನೆಯನ್ನು ಬಿಟ್ಟು ಇತರ ಮನೆಗಳನ್ನು ಸಂದರ್ಶಿಸಿದಂತೆ ನನಗೆ ಒಂದು ಉಲ್ಲಾಸದ ಕಾಂತಿ ಮತ್ತು ಒಂದು ಅಪರಿಚಿತ ಆಂತರಿಕ ಬಲದ ಅನಿಸಿಕೆಯಾಯಿತು.
ನಿಜವಾಗಿಯೂ ನೇರವಾದ ಯಾವ ವಿರೋಧವೂ ಇರಲಿಲ್ಲ, ಆದರೆ ನಾನು ಚರ್ಚಿನ ಹಿಂದಿನ ಸಹವಾಸಿಗಳ ಭೇಟಿ ಮಾಡಿದಾಗ ಅವರ ಸಾಮಾನ್ಯವಾದ ಉದಾಸೀನಭಾವಕ್ಕೆ ನಾನು ಚಕಿತಳಾದೆ. ನನ್ನ ಆಶ್ಚರ್ಯ ಹಾಗೂ ನಿರುತ್ಸಾಹಕ್ಕೆ, ನನ್ನ ಹಿರಿಯ ಅಣನ್ಣಿಂದ ನಾನು ಅತೀ ಗಡುಸಾದ ವಿರೋಧವನ್ನು ಅನುಭವಿಸಿದೆ. ಇದು ನನಗೆ ಯೇಸುವಿನ ಮಾತುಗಳನ್ನು ನೆನಪಿಗೆ ತಂದಿತು: “ತಂದೆತಾಯಿಗಳೂ ಅಣತ್ಣಮ್ಮಂದಿರೂ ಬಂಧುಬಾಂಧವರೂ ಸ್ನೇಹಿತರೂ ನಿಮ್ಮನ್ನು ಒಪ್ಪಿಸಿಕೊಡುವರು. . . . ಇದಲ್ಲದೆ ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲರೂ ಹಗೆಮಾಡುವರು.”—ಲೂಕ 21:16, 17.
ಎಳೆಯ ವಯಸ್ಸಿನಲ್ಲೇ ನಾನು ಒಂದು ನುರಿತ ಕುದುರೆ ಸವಾರಳಾಗಿದುದ್ದರಿಂದ, ಜನರ ಮನೆಗಳನ್ನು ತಲಪುವ ಅತಿ ಶೀಘ್ರ ಮಾರ್ಗವು ಕುದುರೆ ಸವಾರಿಯೆಂದು ನಾನು ನಿರ್ಣಯಿಸಿದೆ. ಇದು ಹತ್ತಿರದ ಗ್ರಾಮೀಣ ಟೆರಿಟೊರಿಯಲ್ಲಿ ಇನ್ನೂ ಹೆಚ್ಚು ದೂರದ ಸ್ಥಳಗಳಿಗೆ ಹೋಗುವಂತೆ ನನ್ನನ್ನು ಶಕ್ತಳನ್ನಾಗಿ ಮಾಡಿತು. ಆದಾಗಲೂ, ಒಂದು ಮಧ್ಯಾಹ್ನ ನನ್ನ ಕುದುರೆಯು ಒಂದು ಜಾರುವ ರಸ್ತೆಯ ಮೇಲೆ ಮುಗ್ಗರಿಸಿ ಬಿತ್ತು, ಮತ್ತು ನಾನು ಅತಿಯಾಗಿ ಮುರಿದ ತಲೆಬುರುಡೆಯಿಂದಾಗಿ ಕಷ್ಟಾನುಭವಿಸಿದೆ. ನಾನು ಬದುಕುಳಿಯಲಿಕ್ಕಿಲ್ಲವೆಂಬ ಭಯ ಸ್ವಲ್ಪ ಸಮಯದ ವರೆಗೆ ಇತ್ತು. ಆ ಬೀಳುವಿಕೆಯ ನಂತರ, ರಸ್ತೆಗಳು ಒದ್ದೆಯಾಗಿರುತ್ತಿದ್ದಲ್ಲಿ ಅಥವಾ ಜಾರುತ್ತಿದ್ದಲ್ಲಿ, ಕುದುರೆಬೆನ್ನಿನ ಮೇಲೆ ಕುಳಿತುಕೊಂಡು ಹೋಗುವ ಬದಲಿಗೆ ನಾನು ಕುದುರೆ ಮತ್ತು ಸಲ್ಕಿಯಲ್ಲಿ ಪ್ರಯಾಣಿಸುತ್ತಿದ್ದೆ.a
ಸಂಸ್ಥೆಯೊಂದಿಗೆ ಸಂಪರ್ಕ
ನನ್ನ ಅಪಘಾತದ ಸ್ವಲ್ಪ ಸಮಯದ ನಂತರ, ಈಗ ಪಯನೀಯರರು ಎಂದು ಕರೆಯಲ್ಪಡುತ್ತಿರುವ ಪೂರ್ಣ ಸಮಯದ ಪ್ರಚಾರಕರ ಒಂದು ಗುಂಪು, ಮೌಂಟ್ ಗ್ಯಾಂಬಿಯರ್ ಜಿಲ್ಲೆಯನ್ನು ಸಂದರ್ಶಿಸಿತು. ಹೀಗೆ, ಪ್ರಥಮ ಬಾರಿಗೆ ನಾನು ಜೊತೆ ವಿಶ್ವಾಸಿಗಳೊಂದಿಗೆ ಮುಖಾಮುಖಿಯಾಗಿ ಮಾತಾಡಲು ಶಕ್ತಳಾದೆ. ಹೊರಟು ಹೋಗುವ ಮುಂಚೆ, ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸಿಗೆ ಬರೆದು, ಬಹಿರಂಗ ಪ್ರಚಾರ ಕಾರ್ಯದಲ್ಲಿ ಹೆಚ್ಚು ವ್ಯವಸ್ಥಿತವಾದ ರೀತಿಯಲ್ಲಿ ನಾನು ಭಾಗವಹಿಸಬಹುದಾದ ವಿಧದ ಕುರಿತಾಗಿ ಕೇಳಿಕೊಳ್ಳುವಂತೆ ಅವರು ನನ್ನನ್ನು ಉತ್ತೇಜಿಸಿದರು.
ಸೊಸೈಟಿಗೆ ಬರೆದಾದ ನಂತರ, ನಾನು ಪುಸ್ತಕಗಳನ್ನು, ಪುಸ್ತಿಕೆಗಳನ್ನು ಮತ್ತು ಮನೆಬಾಗಿಲುಗಳಲ್ಲಿ ನನ್ನನ್ನು ಪರಿಚಯಿಸಲಿಕ್ಕಾಗಿ ಬಳಸಲು ಒಂದು ಮುದ್ರಿತ ಟೆಸ್ಟಿಮನಿ ಕಾರ್ಡನ್ನು ಪಡೆದೆ. ಬ್ರಾಂಚ್ ಆಫೀಸಿನೊಂದಿಗೆ ಪತ್ರ ವ್ಯವಹಾರ ಸಂಪರ್ಕದಿಂದಾಗಿ ನನ್ನ ಆತ್ಮಿಕ ಸಹೋದರಸಹೋದರಿಯರೊಂದಿಗೆ ನನಗೆ ತುಸು ಹೆಚ್ಚು ಸಮೀಪದ ಭಾವನೆಯುಂಟಾಯಿತು. ಆದರೆ ಪಯನೀಯರ್ ಗುಂಪು ಬಿಟ್ಟು ಮುಂದಿನ ಪಟ್ಟಣಕ್ಕೆ ಸ್ಥಳಾಂತರಿಸಿದಾಗ, ನನಗೆ ಎಂದಿಗಿಂತಲೂ ಹೆಚ್ಚು ಏಕಾಂಗಿತನದ ಅರಿವಾಯಿತು.
ಮುಖ್ಯವಾಗಿ ಕುದುರೆ ಮತ್ತು ಸಲ್ಕಿಯ ಮೂಲಕ ಪ್ರತಿದಿನದ ನನ್ನ ಕ್ರಮವಾದ ಸೇವಾ ಆವರ್ತನಗಳ ಪರಿಣಾಮವಾಗಿ, ನಾನು ಜಿಲ್ಲೆಯಲ್ಲಿ ಪ್ರಸಿದ್ಧಳಾದೆ. ಅದೇ ಸಮಯದಲ್ಲಿ, ನಾನು ನನ್ನ ಹೈನುದಾಣದಲ್ಲಿನ ಕೆಲಸಗಳನ್ನು ನೋಡಿಕೊಳ್ಳಲು ಶಕ್ತಳಾದೆ. ಆ ಸಮಯದಷ್ಟಕ್ಕೇ ನನ್ನ ಕುಟುಂಬವು ನನ್ನ ಈ ದಿನಚರಿಯನ್ನು ವಿರೋಧಿಸುವದನ್ನು ನಿಲ್ಲಿಸಿತ್ತು ಮತ್ತು ಮಧ್ಯ ಹಸ್ತಕ್ಷೇಪ ಮಾಡಲು ಯಾವ ಪ್ರಯತ್ನವನ್ನೂ ಮಾಡಲಿಲ್ಲ. ನಾಲ್ಕು ವರ್ಷಗಳ ತನಕ ನಾನು ಹೀಗೆ ಒಬ್ಬ ಒಂಟಿ, ಸುವಾರ್ತೆಯ ಅಸ್ನಾನಿತ ಘೋಷಕಳಾಗಿ ಸೇವೆ ಸಲ್ಲಿಸಿದೆ.
ಅಧಿವೇಶನ ಮತ್ತು, ಕಟ್ಟಕಡೆಗೆ ದೀಕ್ಷಾಸ್ನಾನ
ಎಪ್ರಿಲ್ 1938 ರಲ್ಲಿ ಸಹೋದರ ರಥರ್ಫರ್ಡ್ ಆಸ್ಟ್ರೇಲಿಯಕ್ಕೆ ಭೇಟಿನೀಡಿದರು. ವೈದಿಕವರ್ಗದ ಬಲವಾದ ವಿರೋಧವು ಸಿಡ್ನಿ ಪುರಭವನಕ್ಕಾಗಿರುವ ಕಾಂಟ್ರ್ಯಾಕ್ಟಿನ ರದ್ದುಗೊಳಿಸುವಿಕೆಯಲ್ಲಿ ಪರಿಣಮಿಸಿತು. ಆದಾಗಲೂ, ಕೊನೆಯ ನಿಮಿಷದಲ್ಲಿ ಸ್ಪೊರ್ಟ್ಸ್ ಗ್ರೌಂಡ್ಸನ್ನು ಉಪಯೋಗಿಸಲು ಅನುಮತಿ ದೊರೆಯಿತು. ಯೋಜನೆಗಳ ಈ ಬಲವಂತವಾದ ಬದಲಾವಣೆಯು ವಾಸ್ತವವಾಗಿ ಉಪಯೋಗಕಾರಿಯಾಗಿ ಪರಿಣಮಿಸಿತು, ಯಾಕಂದರೆ ಅತಿ ದೊಡ್ಡದಾದ ಸ್ಪೊರ್ಟ್ಸ್ ಗ್ರೌಂಡ್ಸ್ನಲ್ಲಿ ಇನ್ನೂ ಹೆಚ್ಚು ಸಾವಿರಾರು ಜನರನ್ನು ಕೂಡಿಸಬಹುದಿತ್ತು. ಸರಿಸುಮಾರು 12,000 ಜನರು ಬಂದರು, ಇವರೊಳಗೆ ಹೆಚ್ಚಿನವರ ಆಸಕ್ತಿಯು ನಮ್ಮ ಕೂಟಕ್ಕೆ ವೈದಿಕರಿಂದ ಪ್ರೇರಿತವಾದ ವಿರೋಧದಿಂದಾಗಿ ಕೆರಳಿಸಲ್ಪಟ್ಟಿತ್ತೆಂಬುದು ವ್ಯಕ್ತ.
ಸಹೋದರ ರಥರ್ಫರ್ಡರ ಭೇಟಿಯ ಸಂಬಂಧದಲ್ಲಿ ಒಂದು ಹತ್ತಿರದ ಸಿಡ್ನಿ ಉಪನಗರದಲ್ಲಿ ಹಲವಾರು ದಿನಗಳ ಒಂದು ಅಧಿವೇಶನವೂ ನಡಿಸಲ್ಪಟ್ಟಿತ್ತು. ಅಲ್ಲಿ ನಾನು ಕಟ್ಟಕಡೆಗೆ ನೀರಿನ ದೀಕ್ಷಾಸ್ನಾನದ ಮೂಲಕ ಯೆಹೋವ ದೇವರಿಗೆ ನನ್ನ ಸಮರ್ಪಣೆಯನ್ನು ಸಂಕೇತಿಸಿದೆ. ವಿಸ್ತಾರವಾದ ಆಸ್ಟ್ರೇಲಿಯನ್ ಭೂಖಂಡದಾದ್ಯಂತದಿಂದ ಬಂದಿದ್ದ ನೂರಾರು ಸಹೋದರಸಹೋದರಿಯರೊಂದಿಗೆ ಕೊನೆಯಲ್ಲಿ ಜೊತೆಗೂಡುವಾಗ ನಾನು ಅನುಭವಿಸಿದಂತಹ ಆನಂದವನ್ನು ನೀವು ಊಹಿಸಬಲ್ಲಿರೋ?
ಮೌಂಟ್ ಗ್ಯಾಂಬಿಯರ್ಗೆ ಹಿಂದಿರುಗುವುದು
ಮನೆಗೆ ಹಿಂದಿರುಗಿದಾಗ ನನಗೆ ವಿಪರೀತವಾಗಿ ಏಕಾಂಗಿಯಾಗಿರುವ ಅನಿಸಿಕೆಯಾಯಿತು, ಆದರೂ ರಾಜ್ಯ ಕಾರ್ಯದಲ್ಲಿ ನನ್ನಿಂದ ಸಾಧ್ಯವಾದದ್ದೆಲ್ಲವನ್ನೂ ಮಾಡಲು ನಾನು ಹಿಂದೆಂದಿಗಿಂತಲೂ ಹೆಚ್ಚು ನಿರ್ಧರಿತಳಾಗಿದ್ದೆ. ಸ್ವಲ್ಪ ಸಮಯದಲ್ಲೀ ನಾನು ಆ್ಯಗ್ನ್ಯೂ ಕುಟುಂಬದೊಂದಿಗೆ ಪರಿಚಿತಳಾದೆ—ಹ್ಯೂ, ಅವನ ಹೆಂಡತಿ ಮತ್ತು ಅವರ ನಾಲ್ಕು ಮಕ್ಕಳು. ಅವರು ಮೌಂಟ್ ಗ್ಯಾಂಬಿಯರ್ನಿಂದ ಬರೇ 50 ಕಿಲೋಮೀಟರ್ ದೂರದಲ್ಲಿದ್ದ ಮಿಲಿಸೆಂಟ್ ಪಟ್ಟಣದಲ್ಲಿ ಜೀವಿಸುತ್ತಿದ್ದರು, ಮತ್ತು ನಾನು ಅವರೊಂದಿಗೆ ಒಂದು ಕ್ರಮವಾದ ಬೈಬಲ್ ಅಭ್ಯಾಸವನ್ನು ನಡಿಸಲಿಕ್ಕಾಗಿ ಕುದುರೆ ಮತ್ತು ಸಲ್ಕಿಯ ಮೂಲಕ ಹೋಗಿಬರಲು 50 ಕಿಲೊಮೀಟರ್ ಪ್ರಯಾಣಿಸುತ್ತಿದ್ದೆ. ಅವರು ಸತ್ಯವನ್ನು ಸ್ವೀಕರಿಸಿದಾಗ, ನನ್ನ ಒಂಟಿತನವು ಶಮನಗೊಳಿಸಲ್ಪಟ್ಟಿತು.
ಸ್ವಲ್ಪ ಸಮಯದಲ್ಲೇ, ವ್ಯವಸ್ಥಿತ ಸೇವೆಗಾಗಿ ನಾವು ಒಂದು ಗುಂಪಾಗಿ ರಚಿಸಲ್ಪಟ್ಟೆವು. ಅನಂತರ ಸಂತೋಷಕರವಾಗಿ, ನನ್ನ ತಾಯಿ ಆಸಕ್ತಿಯನ್ನು ತೆಗೆದುಕೊಳ್ಳಲು ಆರಂಭಿಸಿದರು ಮತ್ತು ಹೊಸತಾಗಿ ರಚಿಸಲ್ಪಟ್ಟಿದ್ದ ಗುಂಪಿನೊಂದಿಗೆ ಅಭ್ಯಸಿಸಲು 100 ಕಿಲೋಮೀಟರ್ ಹೋಗಿ ಬರುವ ಪ್ರಯಾಣದಲ್ಲಿ ನನ್ನೊಂದಿಗೆ ಜತೆಗೂಡಿದರು. ಅವರು ದೀಕ್ಷಾಸ್ನಾನ ಹೊಂದಲು ಕೆಲವು ವರ್ಷಗಳು ತಗಲಿದರೂ, ಅಂದಿನಿಂದ ತಾಯಿಯು ಯಾವಾಗಲೂ ಪ್ರೋತ್ಸಾಹದಾಯಕರು ಮತ್ತು ಸಹಾಯಕಾರಿಯಾಗಿದ್ದರು. ನಾನು ಇನ್ನು ಮುಂದೆ ಒಂಟಿಯಾಗಿರಲಿಲ್ಲ!
ನಮ್ಮ ಚಿಕ್ಕ ಗುಂಪು ನಾಲ್ಕು ಪಯನೀಯರರನ್ನು ಉತ್ಪಾದಿಸಿತು ಮೂವರು ಆ್ಯಗ್ನ್ಯೂ ಹುಡುಗಿಯರು—ಕ್ರಿಸ್ಟಲ್, ಎಸ್ಟೆಲ್, ಮತ್ತು ಬೆಟ್ಟಿ—ಹಾಗೂ ನಾನು. ಅನಂತರ 1950 ಗಳಲ್ಲಿ ಎಲ್ಲಾ ಮೂವರು ಹುಡುಗಿಯರು, ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡನ್ನು ಹಾಜರಾದರು. ಅವರನ್ನು ಭಾರತ ಮತ್ತು ಶ್ರೀಲಂಕಾಕ್ಕೆ ಮಿಷನೆರಿಗಳಾಗಿ ನೇಮಿಸಲಾಯಿತು ಮತ್ತು ಅವರು ಅಲ್ಲಿ ಇನ್ನೂ ನಂಬಿಗಸ್ತಿಕೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಜನವರಿ 1941 ರಲ್ಲಿ ಆಸ್ಟ್ರೇಲಿಯದಲ್ಲಿ ಯೆಹೋವನ ಸಾಕ್ಷಿಗಳ ಚಟುವಟಿಕೆಯು ನಿಷೇಧಿಸಲ್ಪಟ್ಟಿತು. ಆದುದರಿಂದ, ನಾವು ಬೇಗನೇ ಕಾರ್ಯಪ್ರವೃತ್ತರಾದೆವು. ನಾವು ಶುಶ್ರೂಷೆಯಲ್ಲಿ ಉಪಯೋಗಿಸಿದ್ದೆಲ್ಲವನ್ನು—ಸಾಹಿತ್ಯ, ಹೊತ್ತುಕೊಂಡು ಹೋಗುವ ಫೋನೋಗ್ರಾಫ್ಗಳು, ರೆಕಾರ್ಡ್ ಮಾಡಲ್ಪಟ್ಟ ಬೈಬಲ್ ಭಾಷಣಗಳು, ಮತ್ತು ಮುಂತಾದವುಗಳನ್ನು—ಒಂದು ದೊಡ್ಡ ತಗಡಿನ ಪೆಟ್ಟಿಗೆಯೊಳಗೆ ಹಾಕಿದೆವು. ಅನಂತರ ನಾವು ಆ ಪೆಟ್ಟಿಗೆಯನ್ನು ಒಂದು ಕೊಟ್ಟಿಗೆಯಲ್ಲಿಟ್ಟು ಅದನ್ನು ಹೂತಿಡಲು ಬಂಡಿತುಂಬ ಒಣಹುಲ್ಲನ್ನು ತಂದೆವು.
ನಿಷೇಧದ ಹೊರತೂ, ನಾವು ಜಾಗರೂಕತೆಯಿಂದ ಮನೆಯವರೊಂದಿಗೆ ಮಾತಾಡುವಾಗ ಕೇವಲ ಬೈಬಲನ್ನು ಉಪಯೋಗಿಸುತ್ತಾ ನಮ್ಮ ಮನೆಯಿಂದ ಮನೆಯ ಸಾರುವಿಕೆಯನ್ನು ಮುಂದುವರಿಸಿದೆವು. ನಾನು ಪತ್ರಿಕೆಗಳನ್ನು ಮತ್ತು ಪುಸ್ತಿಕೆಗಳನ್ನು ನನ್ನ ಕುದುರೆಯ ತಡಿಯ ಕೆಳಗೆ ಅಡಗಿಸುತ್ತಿದ್ದೆ ಮತ್ತು ರಾಜ್ಯ ಸಂದೇಶಕ್ಕಾಗಿ ನಿಜವಾದ ಆಸಕ್ತಿಯು ಕಂಡುಹಿಡಿಯಲ್ಪಟ್ಟಾಗ ಮಾತ್ರ ಅದನ್ನು ಹೊರಗೆ ತರುತ್ತಿದ್ದೆ. ಕೊನೆಗೆ, ಜೂನ್ 1943 ರಲ್ಲಿ ನಿಷೇಧವು ತೆಗೆದುಹಾಕಲ್ಪಟ್ಟಿತ್ತು, ಮತ್ತು ನಾವು ಪುನಃ ಒಮ್ಮೆ ಸಾಹಿತ್ಯವನ್ನು ಬಹಿರಂಗವಾಗಿ ನೀಡಶಕ್ತರಾದೆವು.
ಹೊಸ ನೇಮಕಗಳು
1943 ರಲ್ಲಿ, ನಾನು ಒಬ್ಬ ಪಯನೀಯರಳಾಗಿ ನನ್ನನ್ನು ಲಭ್ಯಗೊಳಿಸಿದೆ, ಮತ್ತು ಅದರ ಮುಂದಿನ ವರ್ಷ ನಾನು ಇನ್ನೊಂದು ನೇಮಕಕ್ಕಾಗಿ ಮೌಂಟ್ ಗ್ಯಾಂಬಿಯರನ್ನು ಬಿಟ್ಟುಹೋದೆ. ಮೊದಲು, ಸ್ಟ್ರ್ಯಾತ್ಫೀಲ್ಡ್ನಲ್ಲಿರುವ ಸೊಸೈಟಿಯ ಬ್ರಾಂಚ್ ಆಫೀಸಿನಲ್ಲಿ ಸೇವೆ ಸಲ್ಲಿಸಲು ನನ್ನನ್ನು ಆಮಂತ್ರಿಸಲಾಯಿತು. ಇದನ್ನು ಹಿಂಬಾಲಿಸಿ ನಾನು ನ್ಯೂ ಸೌತ್ ವೇಲ್ಸ್ನ ದಕ್ಷಿಣಭಾಗದಲ್ಲಿ ಮತ್ತು ಪಶ್ಚಿಮ ವಿಕ್ಟೋರಿಯದಲ್ಲಿನ ಚಿಕ್ಕ ಪಟ್ಟಣಗಳಲ್ಲಿ ನೇಮಕಗಳನ್ನು ಸರದಿ ಪ್ರಕಾರ ಪಡೆದೆ. ಆದಾಗಲೂ, ಆತ್ಮಿಕವಾಗಿ ಅತಿ ಬಹುಮಾನಿತ ನೇಮಕಗಳಲ್ಲಿ ಒಂದು, ಮೆಲ್ಬರ್ನ್ ನಗರದಲ್ಲಿರುವ ಒಂದು ದೊಡ್ಡ ಸಭೆಯಲ್ಲಿ ಆಗಿತ್ತು. ಒಂದು ಚಿಕ್ಕ ಹಳ್ಳಿ ಪಟ್ಟಣದಿಂದ ಬಂದವಳಾದುದರಿಂದ, ಅಲ್ಲಿ ಸೇವೆ ಸಲ್ಲಿಸುವ ಮೂಲಕ ನಾನು ತುಂಬ ವಿಷಯಗಳನ್ನು ಕಲಿತೆ.
ವಿಕ್ಟೋರಿಯದ ಜಿಪ್ಸ್ಲೆಂಡ್ ಕೆಳಪ್ರದೇಶದಲ್ಲಿನ ನನ್ನ ನೇಮಕದಲ್ಲಿ, ನನ್ನ ಪಯನೀಯರ್ ಸಂಗಾತಿ, ಹೆಲೆನ್ ಕ್ರಾಫರ್ಡ್ ಮತ್ತು ನಾನು ಹಲವಾರು ಬೈಬಲ್ ಅಭ್ಯಾಸಗಳನ್ನು ನಡೆಸಿದೆವು ಮತ್ತು ಸ್ಪಲ್ಪ ಸಮಯದಲ್ಲೇ ಒಂದು ಸಭೆಯ ನಿರ್ಮಾಣವನ್ನು ನೋಡಿದೆವು. ಆ ಜಿಲ್ಲೆಯಲ್ಲಿ ಒಂದು ದೊಡ್ಡದಾದ ಗ್ರಾಮೀಣ ಟೆರಿಟೊರಿಯಿತ್ತು, ಮತ್ತು ವಾಹನ ಸೌಕರ್ಯಕ್ಕಾಗಿ ನಮ್ಮಲ್ಲಿ ಒಂದು ಹಳತಾದ, ಭರವಸೆಯಿಡಲಾಗದ ಮೋಟಾರ್ ವಾಹನವಿತ್ತು. ಕೆಲವೊಮ್ಮೆ ನಾವು ಪ್ರಯಾಣಿಸಿದೆವು, ಆದರೆ ಹಲವಾರು ಸಲ ನಾವದನ್ನು ತಳ್ಳಿದೆವು. ಒಂದು ಕುದುರೆಗಾಗಿ ನಾನು ಎಷ್ಟು ಹಾತೊರೆದೆ! ಕೆಲವೊಮ್ಮೆ ನಾನು ನಿಜವಾಗಿಯೂ ಹೀಗೆ ಹೇಳಸಾಧ್ಯವಿತ್ತು: “ಒಂದು ಕುದುರೆಗಾಗಿ ನಾನು ಏನನ್ನೂ (ರಾಜ್ಯವನ್ನು ಹೊರತು) ಕೊಡುವೆನು!” ಇಂದು ಆ ಜಿಲ್ಲೆಯಲಿನ್ಲ ಹೆಚ್ಚಿನ ಪಟ್ಟಣಗಳಲ್ಲಿ, ಬಲವಾದ ಸಭೆಗಳು ಮತ್ತು ಚೆಂದದ ರಾಜ್ಯ ಸಭಾಗೃಹಗಳಿವೆ.
1969 ರಲ್ಲಿ ಆಸ್ಟ್ರೇಲಿಯದ ರಾಜಧಾನಿಯಾದ ಕ್ಯಾನ್ಬೆರಾಕ್ಕೆ ಒಂದು ನೇಮಕವನ್ನು ನಾನು ಪಡೆದೆ. ಸಾಕ್ಷಿ ಕೊಡಲು ಇದು ಒಂದು ಪಂಥಾಹ್ವಾನಕಾರಿ ಮತ್ತು ಆಸಕ್ತಿಭರಿತ ಸ್ಥಳವಾಗಿತ್ತು ಯಾಕಂದರೆ ಅನೇಕ ವಿದೇಶೀ ರಾಯಭಾರಿ ಕಛೇರಿಗಳಲ್ಲಿದ್ದ ಸಿಬ್ಬಂದಿವರ್ಗವನ್ನು ನಾವು ಹೆಚ್ಚಾಗಿ ಸಂಪರ್ಕಿಸಿದೆವು. ನಾನು ಇನ್ನೂ ಇಲ್ಲಿ ಸೇವೆ ಮಾಡುತ್ತಿದ್ದೇನೆ, ಆದರೆ ಇತ್ತೀಚೆಗಿನ ವರ್ಷಗಳಲ್ಲಿ ನಾನು ನಗರದ ಕೈಗಾರಿಕಾ ಕ್ಷೇತ್ರದಲ್ಲಿ ನನ್ನ ಸಾರುವಿಕೆಯನ್ನು ಕೇಂದ್ರೀಕರಿಸಿದ್ದೇನೆ.
1973 ರಲ್ಲಿ, ಅಮೆರಿಕದಲ್ಲಿ ನಡೆದ ದೊಡ್ಡ ಅಧಿವೇಶನಗಳನ್ನು ಹಾಜರಾಗುವ ಸುಯೋಗ ನನಗೆ ಸಿಕ್ಕಿತ್ತು. ನನ್ನ ಜೀವಿತದ ಇನ್ನೊಂದು ಅತ್ಯುಜಲ್ವ ಭಾಗವು 1979 ರಲ್ಲಿ ಒಂದು ಅಧಿವೇಶನ ಪ್ರತಿನಿಧಿಯಾಗಿದ್ದು ಇಸ್ರಾಯೇಲ್ ಹಾಗೂ ಯೊರ್ದಾನನ್ನು ಸಂಚರಿಸುವುದಾಗಿತ್ತು. ಬೈಬಲಿನಲ್ಲಿ ಉಲ್ಲೇಖಿಸಲ್ಪಟ್ಟಿರುವ ನಿಜವಾದ ನಿವೇಶನಗಳಿಗೆ ಭೇಟಿನೀಡುವುದು ಮತ್ತು ಅಲ್ಲಿ ಸಂಭವಿಸಿದಂತಹ ಘಟನೆಗಳನ್ನು ಮರುಕಳಿಸುವುದು ನಿಜವಾಗಿಯೂ ಭಾವನಾತ್ಮಕವಾಗಿ ಕಲಕಿಸುವ ಒಂದು ಅನುಭವವಾಗಿತ್ತು. ಅದರ ದಟ್ಟವಾದ ಉಪ್ಪಿನ ನೀರುಗಳಲ್ಲಿ ಮೃತ ಸಮುದ್ರದಲ್ಲಿ ತೇಲಾಡುವುದು ಹೇಗಿರುತ್ತದೆಂಬದನ್ನು ನಾನು ಅನುಭವಿಸಲು ಶಕ್ತಳಾದೆ ಮತ್ತು ಯೊರ್ದಾನಿನಲ್ಲಿ ಪೆಟ್ರಾಕ್ಕೆ ನಮ್ಮ ಭೇಟಿಯ ಸಮಯದಲ್ಲಿ ನನಗೆ ಪುನಃ ಒಮ್ಮೆ ಕುದುರೆಯೊಂದನ್ನು ಸವಾರಿ ಮಾಡಲು ಒಂದು ಅವಕಾಶ ಸಿಕ್ಕಿತು. ಹಿಂದಿನ ದಿವಸಗಳಲ್ಲಿ ನಾನು ರಾಜ್ಯದ ಸಂದೇಶದೊಂದಿಗೆ ಚದರಿದ ಮತ್ತು ಗ್ರಾಮೀಣ ವಠಾರಗಳನ್ನು ತಲಪಲು ಕುದುರೆಗಳು ಸಾಧ್ಯಮಾಡಿದಂತಹದ್ದನ್ನು ಅದು ನನ್ನ ಮನಸ್ಸಿಗೆ ತಂದಿತು.
ಮುಂದುವರಿದ ಪೂರ್ಣ-ಸಮಯದ ಸೇವೆ
ಪಯನೀಯರ್ ಸೇವಾ ಶಾಲೆ ಮತ್ತು ಸರ್ಕಿಟ್ ಸಮ್ಮೇಳನಗಳೊಂದಿಗೆ ಸೇರಿ ನಡಿಸಲ್ಪಡುವ ಪಯನೀಯರ್ ಕೂಟಗಳು ಹಾಗೂ ಸಂಚರಣ ಮೇಲ್ವಿಚಾರಕರಿಂದ ನಾನು ಪಡೆಯುತ್ತಿರುವ ಸತತ ಪ್ರೋತ್ಸಾಹನೆಯಿಂದಾಗಿ, ನನಗೆ ವಯಸ್ಸಾಗುತ್ತಿರುವುದಾದರೂ ಪೂರ್ಣ-ಸಮಯದ ಸೇವೆಯಲ್ಲಿ ಮುಂದುವರಿಯುವ ನನ್ನ ಆಶೆಯು ಸಜೀವವಾಗಿರಿಸಲ್ಪಟ್ಟಿದೆ. ಏಕಾಂಗಿಯಾಗಿರುವ ನನ್ನ ದಿನಗಳು ಗತಕಾಲದ ವಿಷಯವಾಗಿರುವಂತೆ ಯೆಹೋವನು ನೋಡಿಕೊಂಡಿದ್ದಾನೆಂದು ನಾನು ಸತ್ಯವಾಗಿ ಹೇಳಬಲ್ಲೆ.
ನಾನೀಗ 87 ವರ್ಷ ವಯಸ್ಸಿನವಳಾಗಿದ್ದೇನೆ, ಮತ್ತು ಯೆಹೋವನಿಗೆ ಸೇವೆ ಸಲ್ಲಿಸಿರುವ ಸುಮಾರು 60 ವರ್ಷಗಳ ನಂತರ, ಮುಚ್ಚುಮರೆಯಿಲ್ಲದೆ ಮಾತಾಡಿಬಿಡುವವರು ಹಾಗೂ ಬಲವಾಗಿ ಸ್ವಾತಂತ್ರ್ಯಭಾವವುಳ್ಳವರು ಆಗಿರಬಹುದಾದವರಿಗೆ ನನ್ನ ಹತ್ತಿರ ಉತ್ತೇಜನದ ಒಂದು ಮಾತಿದೆ: ಯಾವಾಗಲೂ ಯೆಹೋವನ ಮಾರ್ಗದರ್ಶನಕ್ಕೆ ಅಧೀನರಾಗಿರ್ರಿ. ನಮ್ಮ ಮುಚ್ಚುಮರೆಯಿಲ್ಲದೆ ಮಾತಾಡಿಬಿಡುವಿಕೆಯನ್ನು ನಾವು ನಿಯಂತ್ರಿಸಲು ಯೆಹೋವನು ನಮಗೆ ಸಹಾಯಮಾಡಲಿ, ಮತ್ತು ನಮಗೆ ಅನೇಕ ಸಲ ಒಂಟಿತನ ಭಾಸವಾದರೂ, ನಮ್ಮನ್ನು ಅವನೆಂದೂ ತೊರೆಯನು ಎಂಬುದನ್ನು ಆತನು ನಮಗೆ ಸತತವಾಗಿ ನೆನಪಿಸುತ್ತಾ ಇರಲಿ.
[ಅಧ್ಯಯನ ಪ್ರಶ್ನೆಗಳು]
a ಸಲ್ಕಿ, ಹಗುರವಾದ ಎರಡು ಚಕ್ರದ, ಒಂದು ಗಾಡಿ.