ಕಾರೈಟರು—ಮತ್ತು ಸತ್ಯಕ್ಕಾಗಿ ಅವರ ಹುಡುಕಾಟ
“ಪೂರ್ಣವಾಗಿ [ಶಾಸ್ತ್ರಗಳ]ನ್ನು ಪರಿಶೋಧಿಸಿರಿ ಮತ್ತು ನನ್ನ ಅಭಿಪ್ರಾಯದ ಮೇಲೆ ಆತುಕೊಳ್ಳಬೇಡಿರಿ.” ಆ ಮಾತುಗಳು ಸಾ.ಶ. ಎಂಟನೆಯ ಶತಮಾನದ ಒಬ್ಬ ಕಾರೈಟ್ ನಾಯಕನಿಂದ ನುಡಿಯಲ್ಪಟ್ಟವು. ಕಾರೈಟರು ಯಾರಾಗಿದ್ದರು? ನಾವು ಅವರ ಮಾದರಿಯಿಂದ ಏನಾದರೂ ಮೌಲ್ಯವನ್ನು ಕಲಿಯಬಲ್ಲೆವೊ? ಈ ಪ್ರಶ್ನೆಗಳನ್ನುತ್ತರಿಸಲು, ಕಾರೈಟ್ ಚಟುವಟಿಕೆಗೆ ನಡಿಸಿದ, ಇತಿಹಾಸದಲ್ಲಿ ಬಹು ಹಿಂದಿನ ಒಂದು ದೀರ್ಘಕಾಲದ ವಾಗ್ವಾದಕ್ಕೆ ನಾವು ತೆರಳಬೇಕು.
ವಾಗ್ವಾದವು ಪ್ರಾರಂಭಿಸಿದ್ದು ಹೇಗೆ?
ಸಾಮಾನ್ಯ ಶಕಕ್ಕೆ ಮುಂಚಿನ ಕೊನೆಯ ಶತಮಾನಗಳಲ್ಲಿ, ಯೆಹೂದ್ಯ ಮತದೊಳಗೆ ಒಂದು ಹೊಸ ತತ್ವಜ್ಞಾನವು ವಿಕಾಸಗೊಂಡಿತು. ದೇವರು ಸೀನಾಯಿ ಬೆಟ್ಟದಲ್ಲಿ ಎರಡು ನಿಯಮಗಳನ್ನು—ಒಂದು ಲಿಖಿತ ಮತ್ತು ಇನ್ನೊಂದು ಮೌಖಿಕ ನಿಯಮಗಳನ್ನು—ಕೊಟ್ಟನೆಂಬ ಕಲ್ಪನೆ ಅದಾಗಿತ್ತು.a ಸಾ.ಶ. ಒಂದನೆಯ ಶತಮಾನದೊಳಗೆ, ಯಾರು ಈ ಹೊಸ ಬೋಧನೆಯನ್ನು ಪರಿಗ್ರಹಿಸಿದರೊ ಅವರ ಮತ್ತು ಅದನ್ನು ತಿರಸ್ಕರಿಸಿದವರ ನಡುವೆ ತೀಕ್ಷ್ಣ ವಾಗ್ವಾದಗಳಾದವು. ಫರಿಸಾಯರು ಪ್ರವರ್ಧಕರಾಗಿದ್ದರೆ ಸದ್ದುಕಾಯರು ಮತ್ತು ಎಸ್ಸೀನರು ವಿರೋಧಕರಲ್ಲಿ ಸೇರಿದ್ದರು.
ಮುಂದುವರಿಯುತ್ತಿದ್ದ ಈ ವಾಗ್ವಾದದ ನಡುವೆ, ನಜರೇತಿನ ಯೇಸು ವಾಗ್ದತ್ತ ಮೆಸ್ಸೀಯನಾಗಿ ಗೋಚರಿಸಿದನು. (ದಾನಿಯೇಲ 9:24, 25; ಮತ್ತಾಯ 2:1-6, 22, 23) ಹೋರಾಡುತ್ತಿದ್ದ ಆ ಯೆಹೂದ್ಯ ಗುಂಪುಗಳೆಲ್ಲವನ್ನು ಯೇಸು ಎದುರಿಸಿದನು. ಅವರೊಂದಿಗೆ ವಿವೇಚಿಸುತ್ತಾ, ತಮ್ಮ ಸಂಪ್ರದಾಯದ ಕಾರಣ ಅವರು ದೇವರ ವಾಕ್ಯವನ್ನು ನಿರರ್ಥಕಗೊಳಿಸುವುದನ್ನು ಆತನು ಖಂಡಿಸಿದನು. (ಮತ್ತಾಯ 15:3-9) ಮೆಸ್ಸೀಯನು ಮಾತ್ರ ಕಲಿಸಲು ಸಾಧ್ಯವಿರುವ ರೀತಿಯಲ್ಲಿ ಯೇಸುವೂ ಆತ್ಮಿಕ ಸತ್ಯಗಳನ್ನು ಕಲಿಸಿದನು. (ಯೋಹಾನ 7:45, 46) ಅದಲ್ಲದೆ, ಯೇಸುವಿನ ನಿಜ ಹಿಂಬಾಲಕರು ಮಾತ್ರ ದೈವಿಕ ಬೆಂಬಲದ ಪುರಾವೆಯನ್ನು ಕೊಟ್ಟರು. ಅವರು ಕ್ರೈಸ್ತರೆಂಬ ಹೆಸರಿನಿಂದ ಖ್ಯಾತರಾದರು.—ಅ. ಕೃತ್ಯಗಳು 11:26.
ಸಾ.ಶ. 70 ರಲ್ಲಿ ಯೆರೂಸಲೇಮಿನ ದೇವಾಲಯವು ನಾಶಗೊಂಡಾಗ, ಅಖಂಡವಾಗಿ ಪಾರಾದ ಒಂದೇ ಧಾರ್ಮಿಕ ಪಂಥವು ಫರಿಸಾಯರದ್ದಾಗಿತ್ತು. ಈಗ ಯಾಜಕತ್ವ, ಯಜ್ಞಗಳು, ಮತ್ತು ದೇವಾಲಯವಿಲ್ಲದೆ ಫರಿಸಾಯರ ಯೆಹೂದ್ಯ ಮತವು ಇವೆಲ್ಲವುಗಳಿಗೆ ಬದಲಿಗಳನ್ನು ನಿರ್ಮಿಸಲು ಶಕವ್ತಾಗಿ, ಲಿಖಿತ ನಿಯಮದ ಸ್ಥಳದಲ್ಲಿ ಸಂಪ್ರದಾಯ ಮತ್ತು ಸ್ವಂತ ಅರ್ಥವಿವರಣೆಗಳನ್ನು ತಂದುಹಾಕಲು ಅನುಮತಿಸಿತು. ಇದು ಹೊಸ “ಪವಿತ್ರ ಪುಸ್ತಕಗಳು” ಬರೆಯಲ್ಪಡುವುದಕ್ಕೆ ಸಂದರ್ಭವನ್ನು ಒದಗಿಸಿತು. ಮೊತ್ತಮೊದಲು, ಅವರ ಮೌಖಿಕ ನಿಯಮಕ್ಕೆ ಅಧಿಕ ಕೂಡಿಸುವಿಕೆಗಳು ಮತ್ತು ಅರ್ಥವಿವರಣೆಗಳೊಂದಿಗೆ ಮಿಷ್ನವು ಹೊರಬಂತು. ತದನಂತರ, ಲೇಖನಗಳ ಇತರ ಸಂಗ್ರಹಗಳು ಸೇರಿಸಲ್ಪಟ್ಟವು ಮತ್ತು ಟಾಲ್ಮಡ್ ಎಂದು ಕರೆಯಲ್ಪಟ್ಟಿತು. ಅದೇ ಸಮಯದಲ್ಲಿ, ಧರ್ಮಭ್ರಷ್ಟ ಕ್ರೈಸ್ತರು ಯೇಸುವಿನ ಬೋಧನೆಗಳ ವಿಷಯದಲ್ಲಿ ಮನಸ್ಸಿಗೆ ಬಂದಂತೆ ವರ್ತಿಸತೊಡಗಿದರು. ಎರಡೂ ವೃತ್ತಗಳು ಪ್ರಬಲವಾದ ಧಾರ್ಮಿಕ ವ್ಯವಸ್ಥೆಗಳನ್ನು—ಅಂದರೆ ಒಂದು ಕಡೆ ರಬ್ಬಿಗಳ ಅಧಿಕಾರವನ್ನು, ಇನ್ನೊಂದು ಕಡೆ ಚರ್ಚ್ ಅಧಿಕಾರವನ್ನು—ಉತ್ಪಾದಿಸಿದವು.
ವಿದೇಶೀ ರೋಮಿನೊಂದಿಗೆ ಮತ್ತು ಅನಂತರ “ಕ್ರೈಸ್ತ” ರೋಮಿನೊಂದಿಗೆ ಯೆಹೂದ್ಯ ಹೋರಾಟಗಳ ಕಾರಣ, ಯೆಹೂದ್ಯ ಮತದ ಕೇಂದ್ರವು ಕಟ್ಟಕಡೆಗೆ ಬಾಬೆಲಿಗೆ ಸ್ಥಳಾಂತರ ಹೊಂದಿತು. ಟಾಲ್ಮಡ್ನ ಬರಹಗಳು ಅವುಗಳ ಅತ್ಯಂತ ಸಂಪೂರ್ಣ ರೂಪದಲ್ಲಿ ಸಂಕಲಿತವಾದದ್ದು ಅಲಿಯ್ಲೆ. ಟಾಲ್ಮಡ್ ದೇವರ ಚಿತ್ತವನ್ನು ಅಧಿಕ ಪೂರ್ಣವಾಗಿ ಪ್ರಕಟಿಸುತ್ತದೆಂದು ರಬ್ಬಿಗಳು ವಾದಿಸಿದರಾದರೂ, ಅನೇಕ ಯೆಹೂದ್ಯರು ರಬ್ಬಿಗಳ ಅಧಿಕಾರ ಪ್ರಭಾವದ ವೃದ್ಧಿಯನ್ನು ಅರಿತುಕೊಂಡರು ಮತ್ತು ಮೋಶೆಯ ಮತ್ತು ಪ್ರವಾದಿಗಳ ಮುಖಾಂತರ ತಮಗೆ ಕೊಡಲ್ಪಟ್ಟ ದೇವರ ವಾಕ್ಯವು ದೊರೆಯುವಂತೆ ಹಾತೊರೆದರು.
ಸಾ.ಶ. ಎಂಟನೆಯ ಶತಮಾನದ ಉತ್ತರಾರ್ಧದಲ್ಲಿ, ರಬ್ಬಿಗಳ ಅಧಿಕಾರವನ್ನು ಮತ್ತು ಅವರ ಮೌಖಿಕ ನಿಯಮದ ನಂಬಿಕೆಯನ್ನು ವಿರೋಧಿಸಿದ ಬಾಬೆಲಿನ ಯೆಹೂದ್ಯರು, ಏನನ್ ಬೆನ್ ಡೇವಿಡ್ ಎಂಬ ಸುಶಿಕ್ಷಿತ ನಾಯಕನಿಗೆ ಮೆಚ್ಚಿಕೆಯ ಪ್ರತಿಕ್ರಿಯೆ ತೋರಿಸಿದರು. ರಬ್ಬಿಗಳ ಅರ್ಥವಿವರಣೆ ಮತ್ತು ಟಾಲ್ಮಡ್ಗೆ ಯಾವ ಪರಿಗಣನೆಯನ್ನೂ ತೋರಿಸದೆ, ಸತ್ಯ ಧರ್ಮದ ಒಂದೇ ಮೂಲವಾದ ಹೀಬ್ರು ಶಾಸ್ತ್ರದ ಅನಿರ್ಬಂಧಿತ ಅಧ್ಯಯನಕ್ಕೆ ಪ್ರತಿಯೊಬ್ಬ ಯೆಹೂದ್ಯನಿಗಿರುವ ಹಕ್ಕನ್ನು ಅವನು ಘೋಷಿಸಿದನು. ಏನನ್ ಕಲಿಸಿದ್ದು: “ಟೋರಾ [ದೇವರ ಲಿಖಿತ ನಿಯಮ] ದಲ್ಲಿ ಪೂರ್ಣವಾಗಿ ಪರಿಶೋಧಿಸಿರಿ ಮತ್ತು ನನ್ನ ಅಭಿಪ್ರಾಯದ ಮೇಲೆ ಆತುಕೊಳ್ಳಬೇಡಿರಿ.” ಶಾಸ್ತ್ರಕ್ಕೆ ಈ ಒತ್ತಿನ ಕಾರಣ, ಏನನ್ನ ಅನುಯಾಯಿಗಳು “ವಾಚಕರು” ಎಂಬರ್ಥ ಕೊಡುವ ಹೀಬ್ರು ಹೆಸರಾದ ಕ್ಯಾರಾಯಿಮ್ ಎಂದು ಕರೆಯಲ್ಪಟ್ಟರು.
ಕಾರೈಟರು ಮತ್ತು ರಬ್ಬಿಗಳ ಸಂಘರ್ಷಣೆ
ರಬ್ಬಿಗಳ ವೃತ್ತಗಳಲ್ಲಿ ದಿಗಿಲುಹುಟ್ಟಿಸಿದ ಕಾರೈಟರ ಬೋಧನೆಗಳ ಕೆಲವು ಉದಾಹರಣೆಗಳಾವುವು? ರಬ್ಬಿಗಳು ಮಾಂಸ ಮತ್ತು ಹಾಲನ್ನು ಒಟ್ಟಿಗೆ ಸೇವಿಸುವುದನ್ನು ನಿಷೇಧಿಸಿದ್ದರು. ಅವರಿದನ್ನು ವಿಮೋಚನಕಾಂಡ 23:19ರ ಮೌಖಿಕ ನಿಯಮದ ಅರ್ಥವಿವರಣೆಯಾಗಿ ಸಾದರಪಡಿಸಿದ್ದರು. ಅದನ್ನುವುದು: “ಆಡುಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು.” ಇನ್ನೊಂದು ಕಡೆ, ಈ ವಚನದ ಅರ್ಥ ಅದೇನಂದಿದೆಯೆ ಅದೇ—ಹೆಚ್ಚೂ ಇಲ್ಲ, ಕಡಿಮೆಯೂ ಇಲ್ಲ, ಎಂದು ಕಾರೈಟರು ಕಲಿಸಿದರು. ರಬ್ಬಿಗಳ ನಿರ್ಬಂಧಗಳು ಮನುಷ್ಯ ಕಲ್ಪಿತವೆಂದವರು ವಾದಿಸಿದರು.
ಧರ್ಮೋಪದೇಶಕಾಂಡ 6:8, 9ರ ಅವರ ಅರ್ಥವಿವರಕ್ಕನುಸಾರ, ಯೆಹೂದ್ಯ ಪುರುಷರು ಟೆಫಿಲಿನನ್ನು ಧರಿಸಿ ಪ್ರಾರ್ಥನೆಮಾಡಬೇಕು ಮತ್ತು ಪ್ರತಿಯೊಂದು ಬಾಗಿಲ ಚೌಕಟ್ಟಿನ ಬಳಿ ಒಂದು ಮೆಸೂಸ ಇಡಲ್ಪಡಬೇಕು.b ಕಾರೈಟರು ಈ ವಚನಗಳಿಗೆ ಕೇವಲ ಸಾಂಕೇತಿಕ ಮತ್ತು ಸೂಚಕಾರ್ಥವು ಇರುವುದಾಗಿ ಪರಿಗಣಿಸಿದರು ಮತ್ತು ಇದರಿಂದಾಗಿ ರಬ್ಬಿಗಳ ಅಂತಹ ನಿಯಮಗಳನ್ನು ತಿರಸ್ಕರಿಸಿದರು.
ಬೇರೆ ವಿಷಯಗಳಲ್ಲಿ ಕಾರೈಟರು ರಬ್ಬಿಗಳಿಗಿಂತ ಎಷ್ಟೊ ಹೆಚ್ಚು ಕಟ್ಟುಪಡಿಸುವವರಾಗಿದ್ದರು. ಉದಾಹರಣೆಗೆ, ವಿಮೋಚನಕಾಂಡ 35:3ರ ಅವರ ವೀಕ್ಷಣೆಯನ್ನು ಪರಿಗಣಿಸಿರಿ, ಅದು ಓದುವುದು: “ನೀವು ವಾಸಿಸುವ ಯಾವ ಸ್ಥಳದಲ್ಲಿಯಾದರೂ ಸಬ್ಬತ್ ದಿನದಲ್ಲಿ ಬೆಂಕಿಯನ್ನು ಹೊತ್ತಿಸಬಾರದು.” ಕಾರೈಟರು ಒಂದು ದೀಪವನ್ನಾಗಲಿ ಬೆಂಕಿಯನ್ನಾಗಲಿ ಅದು ಸಬ್ಬತ್ತಿಗೆ ಮುಂಚೆಯೆ ಹೊತ್ತಿಸಲ್ಪಟ್ಟರೂ ಅದನ್ನು ಉರಿಯಲು ಬಿಡುತ್ತಿರಲಿಲ್ಲ.
ವಿಶಿಷ್ಟವಾಗಿ ಏನನ್ನ ಮರಣದ ಅನಂತರ, ಕಾರೈಟ್ ಮುಖಂಡರು ನಿರ್ದಿಷ್ಟ ನಿರ್ಬಂಧಗಳ ಪರಿಮಾಣ ಮತ್ತು ಸ್ವರೂಪದ ಮೇಲೆ ಆಗಿಂದಾಗ್ಗೆ ಅಸಮ್ಮತಿಯನ್ನು ವ್ಯಕ್ತಪಡಿಸಿದರು ಮತ್ತು ಅವರ ಸಂದೇಶವು ಯಾವಾಗಲೂ ಸ್ಪಷ್ಟವಾಗಿಗಿರಲಿಲ್ಲ. ಕಾರೈಟರಲ್ಲಿ ಒಮ್ಮತದ ಕೊರತೆಯಿತ್ತು ಯಾಕಂದರೆ ಯಾವನೇ ಏಕ ನಾಯಕನನ್ನು ಅವರು ಅಂಗೀಕರಿಸಲಿಲ್ಲ, ಬದಲಿಗೆ, ರಬ್ಬಿಗಳ ಅಧಿಕಾರ ಶೈಲಿಗೆ ವಿರುದ್ಧವಾಗಿ, ವೈಯಕ್ತಿಕ ವಾಚನ ಮತ್ತು ಶಾಸ್ತ್ರದ ಅರ್ಥವಿವರಣೆಗೆ ಒತ್ತನ್ನು ಹಾಕಿದರು. ಇದರ ಹೊರತಾಗಿ, ಹೀಗಿದ್ದರೂ, ಕಾರೈಟರ ಚಟುವಟಿಕೆಯು ಜನಪ್ರಿಯತೆಯಲ್ಲಿ ಮತ್ತು ಪ್ರಭಾವದಲ್ಲಿ ಬಾಬೆಲಿನ ಯೆಹೂದ್ಯ ಸಮಾಜಕ್ಕಿಂತಲೂ ಆಚೆಗೆ ಬೆಳೆದು ಮಧ್ಯಪೂರ್ವದಲ್ಲೆಲ್ಲಾ ಹಬ್ಬಿತು. ಕಾರೈಟರ ಒಂದು ಮುಖ್ಯ ಕೇಂದ್ರವು ಯೆರೂಸಲೇಮಿನಲ್ಲಿ ಸಹ ಸ್ಥಾಪನೆಗೊಂಡಿತು.
ಸಾ.ಶ. ಒಂಬತ್ತನೆಯ ಮತ್ತು ಹತ್ತನೆಯ ಶತಮಾನಗಳಲ್ಲಿ, ಕಾರೈಟ್ ವಿದ್ವಾಂಸರು ಹೀಬ್ರು ಶಾಸ್ತ್ರದ ನವೀಕರಿಸಿದ ಅಧ್ಯಯನದಲ್ಲಿ ಅತಿಶಯಿಸಿದರು ಮತ್ತು ಒಂದು ರೀತಿಯ ಸುವರ್ಣ ಯುಗವನ್ನು ಅನುಭವಿಸಿದರು. ಮೌಖಿಕ ಸಂಪ್ರದಾಯಗಳಲ್ಲ, ಲಿಖಿತ ಹೀಬ್ರು ಶಾಸ್ತ್ರವು ಪವಿತ್ರವೆಂದು ಅವರು ಪರಿಗಣಿಸಿದರು. ಕೆಲವು ಕಾರೈಟರು ಹೀಬ್ರು ಶಾಸ್ತ್ರದ ಜಾಗರೂಕ ನಕಲುಗಾರರಾಗಿ ಪರಿಣಮಿಸಿದರು. ವಾಸ್ತವದಲ್ಲಿ, ಕಾರೈಟರ ಪಂಥಾಹ್ವಾನವೆ ಯೆಹೂದ್ಯರೆಲ್ಲರಲ್ಲಿ ಶಾಸ್ತ್ರದ ಮ್ಯಾಸರೆಟಿಕ್ ಅಧ್ಯಯನಕ್ಕೆ ಪ್ರಚೋದನೆಯನ್ನಿತ್ತು, ಇಂದು ಹೆಚ್ಚು ನಿಷ್ಕೃಷ್ಟವಾಗಿ ಕಾಪಾಡಲ್ಪಟ್ಟ ಬೈಬಲ್ ಮೂಲ ಪಾಠಕ್ಕೆ ಭರವಸೆಯನ್ನಿತ್ತಿದೆ.
ಈ ತೀವ್ರ ಬೆಳವಣಿಗೆಯ ಅವಧಿಯಲ್ಲಿ, ಕಾರೈಟ್ ಯೆಹೂದ್ಯ ಮತವು ಬೇರೆ ಯೆಹೂದ್ಯರ ನಡುವೆ ಬಹಿರಂಗ ಮಿಷನೆರಿ ಸೇವೆಯಲ್ಲಿ ಭಾಗವಹಿಸಿತು. ಇದು ರಬ್ಬಿಗಳ ಯೆಹೂದ್ಯ ಮತಕ್ಕೆ ನೇರವಾದ ಬೆದರಿಕೆಯನ್ನೊಡ್ಡಿತು.
ರಬ್ಬಿಗಳು ಹೇಗೆ ಪ್ರತಿಕ್ರಿಯಿಸಿದರು?
ರಬ್ಬಿಗಳ ಪ್ರತ್ಯಾಕ್ರಮಣವು ಆವೇಶಪೂರ್ಣವಾದ ಶಾಬ್ದಿಕ ಆಕ್ರಮಣವಾಗಿತ್ತು, ಅವರು ತಮ್ಮ ಬೋಧನೆಯನ್ನು ಕುತಂತ್ರದಿಂದ ಅಳವಡಿಸಿಕೊಂಡು ತಮ್ಮ ಸ್ಥಾನವನ್ನು ಪುನಃ ಏರ್ಪಡಿಸಿಕೊಂಡರು. ಏನನ್ನ ಆಕ್ರಮಣದ ಶತಮಾನಗಳನ್ನು ಹಿಂಬಾಲಿಸಿ, ರಬ್ಬಿಗಳ ಯೆಹೂದ್ಯ ಮತವು ಕಾರೈಟರ ಹಲವಾರು ವಿಧಾನಗಳನ್ನು ಅಳವಡಿಸಿಕೊಂಡಿತು. ತಮ್ಮ ವಾದ ನಿರೂಪಣೆಯಲ್ಲಿ ಕಾರೈಟರ ಶೈಲಿ ಮತ್ತು ವಿಧಾನವನ್ನು ಜತೆಗೂಡಿಸುತ್ತಾ ರಬ್ಬಿಗಳು ಶಾಸ್ತ್ರವಚನಗಳನ್ನು ಉದ್ಧರಿಸುವುದರಲ್ಲಿ ಹೆಚ್ಚು ಪ್ರಾವೀಣ್ಯ ಹೊಂದಿದರು.
ಕಾರೈಟರೊಂದಿಗೆ ಈ ಶಾಬ್ದಿಕ ಕಾಳಗದ ಅಂಗೀಕೃತ ನಾಯಕನು, ಸಾಡಿಯ ಬೆನ್ ಜೋಸೆಫ್, ಇವನು ಸಾ.ಶ. ಹತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಬಾಬೆಲಿನ ಯೆಹೂದ್ಯ ಸಮಾಜದ ಮುಖ್ಯಸ್ಥನಾದನು. ಸಾಡಿಯನ ದೊಡ್ಡ ಕೃತಿಯಾದ ನಂಬಿಕೆಗಳ ಮತ್ತು ಅಭಿಪ್ರಾಯಗಳ ಪುಸ್ತಕ (ಇಂಗ್ಲಿಷ್), ಸಾಮ್ಯೆಲ್ ರೋಸನ್ಬ್ಲಾಟ್ರಿಂದ ಇಂಗಿಷ್ಲಿಗೆ ಭಾಷಾಂತರಿಸಲ್ಪಟ್ಟಿತು, ಪ್ರಸ್ತಾವನೆಯಲ್ಲಿ ಅವರಂದದ್ದು: “ಅವನ ದಿನದಲ್ಲಿ ಟಾಲ್ಮಡ್ . . . ಅವನ ನಿಯೋಜಿತ ಅಧಿಕಾರದಲ್ಲಿದ್ದರೂ, [ಸಾಡಿಯ] ಯೆಹೂದ್ಯ ಸಂಪ್ರದಾಯದ ಈ ಮೂಲವನ್ನು ತುಲನಾತ್ಮಕವಾಗಿ ಕೊಂಚವೇ ಉಪಯೋಗ ಮಾಡುತ್ತಾನೆ, ಇದು, ಲಿಖಿತ ನಿಯಮವನ್ನು ಮಾತ್ರ ಬಂಧಕವಾಗಿ ಸ್ವೀಕರಿಸಿದ ಕಾರೈಟರನ್ನು ಅವರ ಸ್ವಂತ ಅಸ್ತ್ರಗಳಿಂದ ಸೋಲಿಸುವುದು ಅವನ ಅಪೇಕ್ಷೆಯಾಗಿದ್ದ ಕಾರಣದಿಂದಲೇ ಎಂಬುದು ಸುವ್ಯಕ್ತ.”
ಸಾಡಿಯನ ಹೆಜ್ಜೆಜಾಡನ್ನು ಅನುಸರಿಸುತ್ತಾ, ರಬ್ಬಿಗಳ ಯೆಹೂದ್ಯ ಮತವು ಕಟ್ಟಕಡೆಗೆ ಹೆಚ್ಚಿನ ಮೇಲ್ಗೈಯನ್ನು ಪಡೆಯಿತು. ಅದು ಕಾರೈಟರ ವಾದಗಳಿಂದ ಪ್ರಬಲವಾದ ಪುರಾವೆಯನ್ನು ತೆಗೆದುಬಿಡುವಷ್ಟರ ಮಟ್ಟಿಗೆ ಮಾತ್ರ ಲಿಖಿತ ನಿಯಮಕ್ಕೆ ಹೊಂದಿಕೆ ಮಾಡಿಕೊಂಡ ಮೂಲಕ ಇದನ್ನು ನಿರ್ವಹಿಸಿತು. ಕೊನೆಯ ಹೊಡೆತವು, 12 ನೆಯ ಶತಮಾನದ ಖ್ಯಾತ ಟಾಲ್ಮಡ್ ವಿದ್ವಾಂಸ ಮೋಸಸ್ ಮೈಮಾನಡೀಸ್ನಿಂದ ನೀಡಲ್ಪಟ್ಟಿತು. ಈಜಿಪ್ಟಿನಲ್ಲಿ ಅವನು ಯಾರೊಂದಿಗೆ ವಾಸಿಸಿದನೊ, ಆ ಕಾರೈಟರೊಂದಿಗೆ ಅವನ ಸೈರಣೆಯುಳ್ಳ ಭಾವವು ಹಾಗೂ ಅವನ ಖಾತ್ರಿಗೊಳಿಸುವ ಪಾಂಡಿತ್ಯದ ಶೈಲಿಯು ಅವರ ಮೆಚ್ಚಿಕೆಯನ್ನು ಗಳಿಸಿತು ಮತ್ತು ಅವರ ಸ್ವಂತ ನಾಯಕತ್ವದ ಸ್ಥಾನವನ್ನು ದುರ್ಬಲಗೊಳಿಸಿತು.
ಕಾರೈಟರ ಚಟುವಟಿಕೆಯು ತೀವ್ರತೆಯನ್ನು ಕಳೆದುಕೊಳ್ಳುತ್ತದೆ
ಈಗ ಒಕ್ಕಟ್ಟಿನ ಲೋಪವುಳ್ಳದ್ದಾಗಿ ಮತ್ತು ಸುಸಜ್ಜಿತ ಪ್ರತ್ಯಾಕ್ರಮಣವಿಲ್ಲದ್ದಾಗಿ ಕಾರೈಟ್ ಚಟುವಟಿಕೆಯು ತೀವ್ರತೆಯನ್ನು ಮತ್ತು ಹಿಂಬಾಲಕರನ್ನು ಎರಡನ್ನೂ ಕಳೆದುಕೊಂಡಿತು. ಕಟ್ಟಕಡೆಗೆ, ಕಾರೈಟರು ತಮ್ಮ ವೀಕ್ಷಣೆಗಳನ್ನು ಮತ್ತು ತತ್ವಗಳನ್ನು ಬದಲಾಯಿಸಿದರು. ಲಿಆನ್ ನಿಮೈ, ಎಂಬ ಕಾರೈಟ್ ಚಟುವಟಿಕೆಯ ಒಬ್ಬ ಗ್ರಂಥಕರ್ತನು ಬರೆದದ್ದು: “ಟಾಲ್ಮಡ್ ತಾತ್ವಿಕವಾಗಿ ನಿಷೇಧಿಸಲ್ಪಟ್ಟು ಉಳಿದರೂ, ಟಾಲ್ಮಡಿನ ಹೆಚ್ಚಿನ ಮಾಹಿತಿಯು ಕ್ರಮೇಣವಾಗಿ ಕಾರೈಟರ ನಿಯಮದಾಚರಣೆ ಮತ್ತು ಪದ್ಧತಿಯೊಂದಿಗೆ ಜತೆಗೂಡಿಸಲ್ಪಟ್ಟಿತು.” ಸಾರಾಂಶದಲ್ಲಿ, ಕಾರೈಟರು ತಮ್ಮ ಮೂಲ ಉದ್ದೇಶವನ್ನು ಕಳೆದುಕೊಂಡರು ಮತ್ತು ರಬ್ಬಿಗಳ ಮತ ತತ್ವಗಳಲ್ಲಿ ಹೆಚ್ಚನ್ನು ಸ್ವೀಕರಿಸಿದರು.
ಇಸ್ರಾಯೇಲಿನಲ್ಲಿ ಇನ್ನೂ ಸುಮಾರು 25,000 ಕಾರೈಟರು ಇದ್ದಾರೆ. ಬೇರೆ ಸಮಾಜಗಳಲ್ಲಿ, ಹೆಚ್ಚಾಗಿ ರಷ್ಯಾ ಮತ್ತು ಅಮೆರಿಕಗಳಲ್ಲಿ ಇನ್ನೂ ಕೆಲವು ಸಾವಿರ ಮಂದಿಯನ್ನು ಕಂಡುಕೊಳ್ಳಸಾಧ್ಯವಿದೆ. ಅವರ ಸ್ವಂತ ಮೌಖಿಕ ಸಂಪ್ರದಾಯಗಳು ಅವರಿಗಿದ್ದರೂ, ಅವರು ಪ್ರಥಮ ಕಾರೈಟರಿಗಿಂತ ಭಿನ್ನರಾಗಿದ್ದಾರೆ.
ಕಾರೈಟರ ಇತಿಹಾಸದಿಂದ ನಾವೇನನ್ನು ಕಲಿಯಬಲ್ಲೆವು? ‘ಸಂಪ್ರದಾಯದ ನಿಮಿತ್ತ ದೇವರ ವಾಕ್ಯವನ್ನು ನಿರರ್ಥಕಮಾಡು’ ವುದು ಒಂದು ಗಂಭೀರವಾದ ತಪ್ಪು ಎಂದೇ. (ಮತ್ತಾಯ 15:6) ಮನುಷ್ಯರ ಭಾರವಾದ ಸಂಪ್ರದಾಯಗಳಿಂದ ಸ್ವತಂತ್ರಗೊಳಿಸಲ್ಪಡಲು ಶಾಸ್ತ್ರದ ನಿಷ್ಕೃಷ್ಟ ಜ್ಞಾನವು ಅತ್ಯಾವಶ್ಯಕ. (ಯೋಹಾನ 8:31, 32; 2 ತಿಮೊಥೆಯ 3:16, 17) ಹೌದು, ದೇವರ ಚಿತ್ತವನ್ನು ತಿಳಿಯಲು ಮತ್ತು ಮಾಡಲು ಹುಡುಕುವವರು ಮನುಷ್ಯರ ಸಂಪ್ರದಾಯಗಳ ಮೇಲೆ ಆತುಕೊಳ್ಳರು. ಬದಲಿಗೆ, ಅವರು ಶ್ರದ್ಧಾಪೂರ್ವಕವಾಗಿ ಬೈಬಲನ್ನು ಪರಿಶೋಧಿಸಿ ದೇವರ ಪ್ರೇರಿತ ವಾಕ್ಯದ ಉಪಯುಕ್ತ ಸೂಚನೆಯನ್ನು ಅನ್ವಯಿಸಿಕೊಳ್ಳುವರು.
[ಅಧ್ಯಯನ ಪ್ರಶ್ನೆಗಳು]
a ಮೌಖಿಕವೆನ್ನಲಾಗುವ ಈ ನಿಯಮದ ವಿವರಣೆಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇನ್ಕ್., ಪ್ರಕಾಶಿತ, ಯುದ್ಧರಹಿತವಾದ ಲೋಕವೊಂದು ಇರುವುದುಂಟೊ? ಎಂಬ (ಇಂಗ್ಲಿಷ್) ಬ್ರೋಷರ್ನ ಪುಟ 8-11 ನೆಯ ಪುಟಗಳನ್ನು ನೋಡಿರಿ.
b ಟೆಫಿಲಿನ್, ಶಾಸ್ತ್ರದ ಉದ್ಧೃತ ಭಾಗಗಳು ಬರೆಯಲ್ಪಟ್ಟ ಪಟ್ಟಿಗಳಿರುವ ಎರಡು ಚಿಕ್ಕ ಚೌಕಾಕಾರದ ಚರ್ಮದ ಸಂಪುಟಗಳು. ಈ ಚಿಕ್ಕ ಸಂಪುಟಗಳನ್ನು ವಾರದ ದಿನ ಮುಂಜಾನೆಯ ಪ್ರಾರ್ಥನೆಗಳಲ್ಲಿ ಸಾಂಪ್ರದಾಯಿಕವಾಗಿ ಎಡತೋಳಿನಲ್ಲಿ ಮತ್ತು ತಲೆಯ ಮೇಲೆ ಧರಿಸಲಾಗುತ್ತಿತ್ತು. ಮೆಸೂಸ ಧರ್ಮೋಪದೇಶಕಾಂಡ 6:4-9 ಮತ್ತು 11:13-21 ಬರೆಯಲ್ಪಟ್ಟಿರುವ ಒಂದು ಚಿಕ್ಕ ಚರ್ಮಕಾಗದದ ಸುರುಳಿ, ಇದನ್ನು ಚಿಕ್ಕ ಸೀಸೆಯೊಳಗಿಟ್ಟು ಬಾಗಿಲ ಪಟ್ಟಿಗೆ ಜೋಡಿಸಲಾಗುತ್ತದೆ.
[ಪುಟ 30 ರಲ್ಲಿರುವ ಚಿತ್ರ]
ಕಾರೈಟರ ಒಂದು ಗುಂಪು
[ಕೃಪೆ]
From the book The Jewish Encyclopedia, 1910