ಉತ್ತಮ ಸಮಯಗಳು ಮುಂದಿವೆ
“ನಮಗೆ ಒಂದು-ಶೂನ್ಯ-ಒಂದು ಇದೆ” ಅನ್ನುತ್ತಾಳೆ ಒಬ್ಬ ಹೆಂಗಸು.
“ನನಗೆ ವಿಷಯಗಳು ಇನ್ನೂ ತೀರ ಕೆಟ್ಟವುಗಳಾಗಿವೆ,” ಎಂದು ಅವಳ ಸ್ನೇಹಿತೆ ಉತ್ತರಿಸುತ್ತಾಳೆ. “ನನಗೆ ಕೇವಲ ಶೂನ್ಯ-ಶೂನ್ಯ-ಒಂದು ಇದೆ.”
ಪಶ್ಚಿಮ ಆಫ್ರಿಕದ ಕೆಲವು ಭಾಗಗಳಲ್ಲಿ, ಅಂತಹ ಒಂದು ಸಂಕ್ಷಿಪ್ತ ಸಂಭಾಷಣೆಗೆ ಒಂದು ವಿವರಣೆಯ ಅಗತ್ಯವಿರುವುದಿಲ್ಲ. ದಿನಕ್ಕೆ ಮೂರು ಊಟಗಳನ್ನು (ಒಂದು-ಒಂದು-ಒಂದು) ತಿನ್ನುವ ಬದಲಿಗೆ, ಒಂದು-ಶೂನ್ಯ-ಒಂದು ಇರುವ ಒಬ್ಬ ವ್ಯಕ್ತಿಯು ದಿನಕ್ಕೆ ಕೇವಲ ಎರಡು ಸಲ ತಿನ್ನಲು ಸಮರ್ಥನಾಗಿದ್ದಾನೆ—ಬೆಳಗ್ಗೆ ಒಂದು ಸಲ ಮತ್ತು ಸಂಜೆ ಒಂದು ಸಲ. ಶೂನ್ಯ-ಶೂನ್ಯ-ಒಂದರಲ್ಲಿರುವ ಒಬ್ಬ ಯುವ ಪುರುಷನು ತನ್ನ ಪರಿಸ್ಥಿತಿಯನ್ನು ವಿವರಿಸುವುದು: “ನಾನು ದಿನಕ್ಕೆ ಒಂದು ಸಲ ತಿನ್ನುತ್ತೇನೆ. ನಾನು ನನ್ನ ಫ್ರಿಜ್‌ನಲ್ಲಿ ನೀರನ್ನು ಶೇಖರಿಸಿಡುತ್ತೇನೆ. ನಾನು ರಾತ್ರಿ ಮಲಗಲು ಹೋಗುವ ಮುಂಚೆ ಗಾರಿ [ಮರಗೆಣಸು] ಯನ್ನು ತಿನ್ನುತ್ತೇನೆ. ಹೀಗೆ ತಾನೇ ನಾನು ನಿಭಾಯಿಸುತ್ತಿದ್ದೇನೆ.”
ಇಂದು ಅಧಿಕಾಧಿಕ ಸಂಖ್ಯೆಯ ಜನರ ಅವಸ್ಥೆ ಈ ರೀತಿಯದ್ದಾಗಿದೆ. ಬೆಲೆಗಳು ಏರುತ್ತವೆ, ಮತ್ತು ಹಣದ ಖರೀದಿಸುವ ಶಕ್ತಿ ಕೆಳಗಿಳಿಯುತ್ತದೆ.
ಆಹಾರದ ಅಭಾವಗಳು ಮುಂತಿಳಿಸಲ್ಪಟ್ಟಿದ್ದವು
ಅಪೊಸ್ತಲ ಯೋಹಾನನಿಗೆ ಕೊಡಲ್ಪಟ್ಟ ದರ್ಶನಗಳ ಶ್ರೇಣಿಗಳಲ್ಲಿ, ಇಂದು ಅನೇಕರು ಎದುರಿಸುವ ಕಷ್ಟಕರ ಪರಿಸ್ಥಿತಿಗಳನ್ನು ದೇವರು ಮುಂತಿಳಿಸಿದನು. ಅವುಗಳಲ್ಲಿ ಒಂದು ಆಹಾರದ ಅಭಾವವಾಗಿತ್ತು. ಯೋಹಾನನು ತಿಳಿಸುವುದು: “ನಾನು ನೋಡಿದೆನು, ಮತ್ತು ಇಗೋ! ಒಂದು ಕಪ್ಪು ಕುದುರೆ; ಮತ್ತು ಅದರ ಮೇಲೆ ಕೂತಿದ್ದಾತನ ಕೈಯಲ್ಲಿ ಒಂದು ಜೋಡುತ್ರಾಸುಗಳಿದ್ದವು.” (ಪ್ರಕಟನೆ 6:5, NW) ಈ ದುರ್ಲಕ್ಷಣದ ಕುದುರೆ ಮತ್ತು ರಾಹುತ, ಕ್ಷಾಮವನ್ನು ಚಿತ್ರಿಸುತ್ತಾರೆ—ಆಹಾರವು ಎಷ್ಟು ವಿರಳವಾಗಿರುವುದೆಂದರೆ ಅದನ್ನು ತ್ರಾಸುಗಳಲ್ಲಿ ಪಡಿವ್ಯವಸ್ಥೆಯಾಗಿ ಕೊಡಲಾಗುವುದು.
ಮುಂದೆ ಅಪೊಸ್ತಲ ಯೋಹಾನನು ಹೇಳುವುದು: “ಮತ್ತು . . . ಒಂದು ಧ್ವನಿಯನ್ನು ನಾನು ಕೇಳಿದೆನು: ‘ಒಂದು ದೀನಾರಕ್ಕೆ ಒಂದು ಕಾರ್ಟ್ವ್ ಗೋಧಿ, ಮತ್ತು ಒಂದು ದೀನಾರಕ್ಕೆ ಮೂರು ಕಾರ್ಟ್ವ್ ಜವೆಗೋಧಿ.’” ಯೋಹಾನನ ದಿನಗಳಲ್ಲಿ, ಒಂದು ಕಾರ್ಟ್ವ್ ಗೋಧಿ ಒಬ್ಬ ಸೈನಿಕನ ದಿನನಿತ್ಯದ ಪಡಿತರವಾಗಿತ್ತು, ಮತ್ತು ದೀನಾರಿಯು ಒಂದು ದಿನದ ಕೆಲಸಕ್ಕಾಗಿ ತೆರಲಾಗುತ್ತಿದ್ದ ಹಣವಾಗಿತ್ತು. ಈ ಕಾರಣದಿಂದ, ರಿಚರ್ಡ್ ವೇಮತ್‌ರಿಂದ ಮಾಡಲ್ಪಟ್ಟ ಭಾಷಾಂತರವು ಈ ವಚನವನ್ನು ಹೀಗೆ ನಿರೂಪಿಸುತ್ತದೆ: “ಒಂದು ತುಂಡು ರೊಟ್ಟಿಗಾಗಿ ಒಂದು ಇಡೀ ದಿನದ ಸಂಬಳ, ಮೂರು ಜವೆಗೋಧಿ ರೊಟ್ಟಿಗಳಿಗಾಗಿ ಒಂದು ಇಡೀ ದಿನದ ಸಂಬಳ.”—ಪ್ರಕಟನೆ 6:6, NW.
ಇಂದು ಒಂದು ಇಡೀ ದಿನದ ಸಂಬಳ ಏನಾಗಿದೆ? ಸ್ಟೇಟ್ ಆಫ್ ವರ್ಲ್ಡ್ ಪಾಪ್ಯುಲೇಷನ್, 1994 ಎಂಬ ವರದಿಯು ಅವಲೋಕಿಸುವುದು: “ವರ್ಧಿಷ್ಣು ಲೋಕದ ಜನಸಂಖ್ಯೆಯ ಸುಮಾರು 30 ಪ್ರತಿಶತ, ಸುಮಾರು 110 ಕೋಟಿ ಜನರು, ಒಂದು ದಿವಸವನ್ನು ಸುಮಾರು 1 ಡಾಲರ್ ಹಣದಲ್ಲಿ ಕಳೆಯುತ್ತಾರೆ.” ಹೀಗೆ, ಲೋಕದ ಬಡಜನರಿಗೆ, ಒಂದು ದಿವಸದ ಸಂಬಳವು ಅಕ್ಷರಾರ್ಥವಾಗಿ ಹೆಚ್ಚುಕಡಿಮೆ ಒಂದು ತುಂಡು ರೊಟ್ಟಿಯನ್ನು ಖರೀದಿಸುತ್ತದೆ.
ನಿಶ್ಚಯವಾಗಿಯೂ, ತೀರ ಬಡವರಾಗಿರುವವರಿಗೆ ಇದು ಒಂದು ಆಶ್ಚರ್ಯವೇನೂ ಆಗಿರುವದಿಲ್ಲ. “ರೊಟ್ಟಿ!” ಎಂದು ಒಬ್ಬ ಮನುಷ್ಯನು ಉದ್ಗರಿಸಿದನು. “ರೊಟ್ಟಿಯನ್ನು ಯಾರು ತಿನ್ನುತ್ತಾರೆ? ಈಗಿನ ದಿವಸಗಳಲ್ಲಿ ರೊಟ್ಟಿ ಒಂದು ಸುಖಭೋಗದ ಆಹಾರವಾಗಿದೆ!”
ಹಾಸ್ಯವ್ಯಂಗ್ಯವಾಗಿ, ಆಹಾರದ ಅಭಾವವಿರುವುದಿಲ್ಲ. ಯುಎನ್ ಮೂಲಗಳಿಗನುಸಾರ, ಕಳೆದ ಹತ್ತು ವರ್ಷಗಳಲ್ಲಿ ಲೋಕದ ಆಹಾರ ಉತ್ಪಾದನೆಯು 24 ಶೇಕಡ ವೃದ್ಧಿಸಿತು; ಇದು ಲೋಕದ ಜನಸಂಖ್ಯೆಯ ಬೆಳವಣಿಗೆಗಿಂತ ಹೆಚ್ಚಾಗಿತ್ತು. ಆದಾಗಲೂ, ಆಹಾರದಲ್ಲಿನ ಈ ವೃದ್ಧಿಯು ಎಲ್ಲರಿಂದ ಆನಂದಿಸಲ್ಪಡಲಿಲ್ಲ. ಉದಾಹರಣೆಗಾಗಿ, ಆಫ್ರಿಕದಲ್ಲಿ ಜನಸಂಖ್ಯೆಯು 34 ಶೇಕಡ ಹೆಚ್ಚಿದಾಗ, ಆಹಾರದ ಉತ್ಪಾದನೆಯು 5 ಶೇಕಡ ಕಡಿಮೆಗೊಂಡಿತು. ಆದುದರಿಂದ ಭೌಗೋಲಿಕವಾಗಿ ಸಾಮಾನ್ಯವಾದ ಆಹಾರದ ಸಮೃದ್ಧಿಯ ಹೊರತೂ, ಆಹಾರದ ಅಭಾವಗಳು ಅನೇಕ ದೇಶಗಳಲ್ಲಿ ಮುಂದುವರಿಯುತ್ತಿವೆ.
ಆಹಾರದ ಅಭಾವವು ಏರಿದ ಬೆಲೆಗಳ ಅರ್ಥದಲ್ಲಿರುತ್ತದೆ. ಉದ್ಯೋಗದ ಕೊರತೆ, ಕಡಿಮೆ ಸಂಬಳ, ಮತ್ತು ಏರುತ್ತಿರುವ ಹಣದುಬ್ಬರವು, ಏನು ಲಭ್ಯವಿದೆಯೋ ಅದನ್ನು ಖರೀದಿಸಲು ಹಣವನ್ನು ಕಂಡುಕೊಳ್ಳುವುದನ್ನು ಕಷ್ಟಕರವನ್ನಾಗಿ ಮಾಡುತ್ತದೆ. ಹ್ಯೂಮನ್ ಡೆವಲಪ್‌ಮೆಂಟ್ ರಿಪೋರ್ಟ್ 1994 ತಿಳಿಸುವುದು: “ಆಹಾರವು ದುರ್ಲಭವಾಗಿರುವ ಕಾರಣಕ್ಕಾಗಿಯಲ್ಲ, ಬದಲಾಗಿ ಅವರು ಅದನ್ನು ಕೊಳ್ಳಲು ಅಸಮರ್ಥರಾಗಿರುವ ಕಾರಣದಿಂದಲೇ ಜನರು ಹಸಿವೆಯಲ್ಲಿರುತ್ತಾರೆ.”
ಹೆಚ್ಚೆಚ್ಚಾಗಿ, ನಿರೀಕ್ಷಾಹೀನತೆ, ಹತಾಶೆ ಮತ್ತು ನಿರಾಶೆ ಇದೆ. “ಈ ದಿನ ಕೆಟ್ಟದ್ದಾಗಿದೆ, ಆದರೆ ನಾಳಿನ ದಿನ ತೀರ ಕೆಟ್ಟದ್ದಾಗಲಿರುವುದೆಂಬ ಅನಿಸಿಕೆ ಜನರಿಗಿದೆ” ಎಂದು ಪಶ್ಚಿಮ ಆಫ್ರಿಕದಲ್ಲಿ ಜೀವಿಸುತ್ತಿರುವ ಗ್ಲೋರಿ ಹೇಳುತ್ತಾಳೆ. ಇನ್ನೊಬ್ಬ ಹೆಂಗಸು ಹೇಳಿದ್ದು: “ತಾವು ಒಂದು ಮಹಾ ಗಂಡಾಂತರವನ್ನು ಸಮೀಪಿಸುತ್ತಿದ್ದೇವೆಂದು ಜನರಿಗೆ ಅನಿಸುತ್ತದೆ. ಮಾರುಕಟ್ಟೆಯಲ್ಲಿ ಏನೂ ಉಳಿಯದ ಒಂದು ದಿನ ಬರಲಿದೆಯೆಂದು ಅವರಿಗೆ ಅನಿಸುತ್ತದೆ.”
ಗತ ಕಾಲದಲ್ಲಿ ಯೆಹೋವನು ತನ್ನ ಸೇವಕರನ್ನು ಪರಾಮರಿಸಿದನು
ತಮ್ಮ ಅಗತ್ಯಗಳನ್ನು ಒದಗಿಸುವ ಮೂಲಕ ಮತ್ತು ಕಷ್ಟಕರ ಪರಿಸ್ಥಿತಿಗಳನ್ನು ನಿಭಾಯಿಸಲು ಬಲವನ್ನು ಕೊಡುವ ಮೂಲಕ ಯೆಹೋವನು ತನ್ನ ನಂಬಿಗಸ್ತರನ್ನು ಬಹುಮಾನಿಸುತ್ತಾನೆಂದು ದೇವರ ಸೇವಕರಿಗೆ ತಿಳಿದಿದೆ. ಒದಗಿಸಲಿಕ್ಕಾಗಿರುವ ದೇವರ ಸಾಮರ್ಥ್ಯದಲ್ಲಿ ಅಂತಹ ಭರವಸೆಯು ವಾಸ್ತವದಲ್ಲಿ, ಅವರ ನಂಬಿಕೆಯ ಒಂದು ಅತ್ಯಾವಶ್ಯಕ ಭಾಗವಾಗಿದೆ. ಅಪೊಸ್ತಲ ಪೌಲನು ಬರೆದದ್ದು: “ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ.”—ಇಬ್ರಿಯ 11:6.
ಯೆಹೋವನು ಯಾವಾಗಲೂ ತನ್ನ ನಂಬಿಗಸ್ತ ಸೇವಕರನ್ನು ಪರಾಮರಿಸಿದ್ದಾನೆ. ಮೂರುವರೆ ವರ್ಷಗಳ ಒಂದು ಬರಗಾಲದ ಸಮಯದಲ್ಲಿ, ಯೆಹೋವನು ಪ್ರವಾದಿಯಾದ ಎಲೀಯನಿಗಾಗಿ ಆಹಾರವನ್ನು ಒದಗಿಸಿದನು. ಪ್ರಾರಂಭದಲ್ಲಿ, ಎಲೀಯನಿಗೆ ರೊಟ್ಟಿ ಮತ್ತು ಮಾಂಸವನ್ನು ತರಲು ಕಾಗೆಗಳಿಗೆ ಆಜ್ಞಾಪಿಸಿದನು. (1 ಅರಸು 17:2-6) ಅನಂತರ, ಎಲೀಯನಿಗೆ ಆಹಾರವನ್ನು ಒದಗಿಸುತ್ತಿದ್ದ ವಿಧವೆಯ ಹಿಟ್ಟು ಮತ್ತು ಎಣ್ಣೆಯ ಸರಬರಾಜನ್ನು ಯೆಹೋವನು ಅದ್ಭುತಕರವಾಗಿ ಮುಂದುವರಿಸಿದನು. (1 ಅರಸು 17:8-16) ಅದೇ ಕ್ಷಾಮದ ಸಮಯದಲ್ಲಿ, ದುಷ್ಟ ರಾಣಿ ಈಜೆಬೆಲಳಿಂದ ಅವರ ಮೇಲೆ ತರಲ್ಪಟ್ಟ ತೀಕ್ಷ್ಣ ಧಾರ್ಮಿಕ ಹಿಂಸೆಯ ಹೊರತೂ, ತನ್ನ ಪ್ರವಾದಿಗಳಿಗೆ ರೊಟ್ಟಿ ಮತ್ತು ನೀರು ಒದಗಿಸಲ್ಪಡುವಂತೆ ಯೆಹೋವನು ನೋಡಿಕೊಂಡನು.—1 ಅರಸು 18:13.
ಅನಂತರ, ಬಾಬೆಲಿನ ಅರಸನು ಧರ್ಮಭ್ರಷ್ಟ ಯೆರೂಸಲೇಮಿಗೆ ಮುತ್ತಿಗೆಹಾಕಿದಾಗ, ಜನರು “ಅನ್ನವನ್ನು ತೂಕದ ಪ್ರಕಾರ ಬೆದರಿನಿಂದ ತಿನ್ನ” ಬೇಕಾಯಿತು. (ಯೆಹೆಜ್ಕೇಲ 4:16) ಪರಿಸ್ಥಿತಿಯು ಎಷ್ಟು ವಿಪರೀತವಾಯಿತೆಂದರೆ ಕೆಲವು ಹೆಂಗಸರು ತಮ್ಮ ಸ್ವಂತ ಮಕ್ಕಳ ಮಾಂಸವನ್ನು ತಿಂದರು. (ಪ್ರಲಾಪಗಳು 2:20) ಆದರೂ, ಪ್ರವಾದಿಯಾದ ಯೆರೆಮೀಯನು ತನ್ನ ಸಾರುವಿಕೆಯ ಕಾರಣದಿಂದಾಗಿ ಕೈದುಮಾಡಲ್ಪಟ್ಟಿದ್ದರೂ, “ಪಟ್ಟಣದ ರೊಟ್ಟಿಯೆಲ್ಲಾ ತೀರುವ ತನಕ ರೊಟ್ಟಿಯ ಪೇಟೆಯಿಂದ ದಿನವಹಿ ಒಂದೊಂದು ರೊಟ್ಟಿಯನ್ನು ಅವನಿಗೆ ತಂದು ಕೊಡು” ವಂತೆ ಯೆಹೋವನು ನೋಡಿಕೊಂಡನು.—ಯೆರೆಮೀಯ 37:21.
ರೊಟ್ಟಿಯ ಸಂಗ್ರಹವು ಮುಗಿದಾಗ ಯೆಹೋವನು ಯೆರೆಮೀಯನನ್ನು ಮರೆತುಬಿಟ್ಟನೋ? ಇಲ್ಲವೆಂಬುದು ಸ್ಪಷ್ಟ, ಯಾಕಂದರೆ ಪಟ್ಟಣವು ಬಬಿಲೋನ್ಯರ ಕೈಗೆ ಬಿದ್ದಾಗ, ಯೆರೆಮೀಯನಿಗೆ ‘ಬುತ್ತಿಯನ್ನೂ ಬಹುಮಾನವನ್ನೂ ಕೊಡಿಸಿ ಕಳುಹಿಸಲಾಯಿತು.’—ಯೆರೆಮೀಯ 40:5, 6; ಕೀರ್ತನೆ 37:25ನ್ನು ಸಹ ನೋಡಿರಿ.
ದೇವರು ಇಂದು ತನ್ನ ಸೇವಕರನ್ನು ಬೆಂಬಲಿಸುತ್ತಾನೆ
ಗತ ಕಾಲದ ಸಂತತಿಗಳಲ್ಲಿ ಯೆಹೋವನು ತನ್ನ ಸೇವಕರನ್ನು ಪೋಷಿಸಿದಂತೆಯೇ, ಅವರಿಗಾಗಿ ಭೌತಿಕವಾಗಿಯೂ ಆತ್ಮಿಕವಾಗಿಯೂ ಪರಾಮರಿಸುತ್ತಾ ಇಂದು ಸಹ ಹಾಗೆ ಮಾಡುತ್ತಾನೆ. ಉದಾಹರಣೆಗಾಗಿ, ಪಶ್ಚಿಮ ಆಫ್ರಿಕದಲ್ಲಿ ಜೀವಿಸುತ್ತಿರುವ ಲಾಮಿಟೂಂಡೆಯನ ಅನುಭವವನ್ನು ಪರಿಗಣಿಸಿರಿ. ಅವನು ತಿಳಿಸುವುದು: “ನಾನು ಸುಮಾರು ದೊಡ್ಡದಾಗಿದ್ದ ಒಂದು ಕೋಳಿ ಫಾರ್ಮಿನ ಒಡೆಯನಾಗಿದ್ದೆ. ಒಂದು ದಿನ, ಶಸ್ತ್ರಸಜ್ಜಿತರಾದ ಕಳ್ಳರು ಫಾರ್ಮಿಗೆ ಬಂದು ಹೆಚ್ಚಿನ ಕೋಳಿಗಳನ್ನು, ಜೆನರೇಟರನ್ನು ಮತ್ತು ನಮ್ಮಲ್ಲಿದ್ದ ಹಣವನ್ನು ಕದ್ದುಕೊಂಡು ಹೋದರು. ಸ್ವಲ್ಪ ಸಮಯದ ನಂತರ, ಉಳಿದಂತಹ ಕೆಲವು ಕೋಳಿಗಳು ರೋಗದಿಂದ ಸತ್ತವು. ಅದು ನನ್ನ ಕೋಳಿ ವ್ಯಾಪಾರವನ್ನು ಹಾಳುಗೆಡವಿತು. ಎರಡು ವರ್ಷಗಳಲ್ಲಿ ನಾನು ಯಶಸ್ವಿಯಿಲ್ಲದೆ ಒಂದು ಉದ್ಯೋಗವನ್ನು ಕಂಡುಹಿಡಿಯಲು ಪ್ರಯತ್ನಿಸಿದೆ. ಸಂಗತಿಗಳು ನಿಜವಾಗಿಯೂ ಕಷ್ಟಕರವಾಗಿದ್ದವು, ಆದರೆ ಯೆಹೋವನು ನಮ್ಮನ್ನು ಪೋಷಿಸಿದನು.
“ನಮ್ಮನ್ನು ಶುದ್ಧೀಕರಿಸಲು ವಿಷಯಗಳು ಸಂಭವಿಸುವಂತೆ ಯೆಹೋವನು ಅನುಮತಿಸುತ್ತಾನೆಂಬದನ್ನು ಅಂಗೀಕರಿಸುವುದು, ಕಷ್ಟದ ಸಮಯಗಳನ್ನು ನಿಭಾಯಿಸುವಂತೆ ನನಗೆ ಸಹಾಯ ಮಾಡಿತು. ನನ್ನ ಪತ್ನಿ ಮತ್ತು ನಾನು ಕುಟುಂಬ ಬೈಬಲಭ್ಯಾಸದ ನಮ್ಮ ನಿಯತಕ್ರಮದೊಂದಿಗೆ ಮುಂದುವರಿದೆವು, ಮತ್ತು ಇದು ನಮಗೆ ನಿಜವಾಗಿಯೂ ಸಹಾಯ ಮಾಡಿತು. ಪ್ರಾರ್ಥನೆಯು ಸಹ ಬಲದ ಒಂದು ಮಹತ್ತರವಾದ ಮೂಲವಾಗಿತ್ತು. ಕೆಲವೊಮ್ಮೆ ನನಗೆ ಪ್ರಾರ್ಥಿಸಲು ಮನಸ್ಸಾಗುತ್ತಿರಲಿಲ್ಲ, ಆದರೆ ನಾನು ಪ್ರಾರ್ಥಿಸಿದಾಗ ನನಗೆ ಒಳ್ಳೆಯದನಿಸುತ್ತಿತ್ತು.
“ಆ ಕಷ್ಟಕರವಾದ ಅವಧಿಯಲ್ಲಿ, ಶಾಸ್ತ್ರವಚನಗಳ ಮೇಲೆ ಮನನ ಮಾಡುವದರ ಮೌಲ್ಯವನ್ನು ನಾನು ಕಲಿತೆ. ಯೆಹೋವನನ್ನು ನಮ್ಮ ಕುರುಬನೋಪಾದಿ ಮಾತಾಡುವ ಕೀರ್ತನೆ 23ರ ಕುರಿತಾಗಿ ನಾನು ಬಹಳ ಯೋಚಿಸುತ್ತಿದ್ದೆ. ನನ್ನನ್ನು ಉತ್ತೇಜಿಸಿದ ಇನ್ನೊಂದು ವಚನವು, ‘ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿ’ ಯನ್ನು ಸೂಚಿಸುವ ಫಿಲಿಪ್ಪಿ 4:6, 7 ಆಗಿತ್ತು. ನನ್ನನ್ನು ಬಲಪಡಿಸಿದ ಇನ್ನೊಂದು ಭಾಗವು 1 ಪೇತ್ರ 5:6, 7 ಆಗಿತ್ತು, ಅದು ಹೇಳುವುದು: ‘ಹೀಗಿರುವದರಿಂದ ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು. ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.’ ಆ ಕಷ್ಟಕರ ಸಮಯಗಳಲ್ಲಿ ಈ ಎಲ್ಲಾ ವಚನಗಳು ನನಗೆ ಸಹಾಯ ಮಾಡಿದವು. ನೀವು ಮನನ ಮಾಡುವಾಗ, ನಿಮ್ಮ ಮನಸ್ಸಿನಲ್ಲಿರುವ ಖಿನ್ನತೆಯನ್ನು ಉಂಟುಮಾಡುವ ವಿಷಯಗಳನ್ನು ಸ್ಥಾನಪಲ್ಲಟಗೊಳಿಸಲು ನೀವು ಶಕ್ತರಾಗುತ್ತೀರಿ.
“ಈಗ ನಾನು ಪುನಃ ಉದ್ಯೋಗದಲ್ಲಿದ್ದೇನೆ, ಆದರೆ ಪ್ರಾಮಾಣಿಕವಾಗಿ ಹೇಳುವಲ್ಲಿ, ವಿಷಯಗಳು ಅಷ್ಟು ಸುಲಭವಾಗಿಲ್ಲ. 2 ತಿಮೊಥೆಯ 3:1-5 ರಲ್ಲಿ ಬೈಬಲ್ ಮುಂತಿಳಿಸಿದಂತೆಯೇ, ‘ನಿಭಾಯಿಸಲು ಕಷ್ಟಕರವಾಗಿರುವ ಕಠಿನ ಸಮಯಗಳಿಂದ’ ಗುರುತಿಸಲ್ಪಟ್ಟಿರುವ ‘ಕಡೇ ದಿವಸಗಳಲ್ಲಿ’ ನಾವು ಜೀವಿಸುತ್ತಿದ್ದೇವೆ. ವಚನವು ಏನು ಹೇಳುತ್ತದೊ ಅದನ್ನು ನಾವು ಬದಲಿಸಲಾರೆವು. ಆದುದರಿಂದ ಜೀವನವು ಸುಲಭಕರವಾಗಿರಬೇಕೆಂದು ನಾನು ನಿರೀಕ್ಷಿಸುವುದಿಲ್ಲ. ಆದರೂ, ನಾನು ನಿಭಾಯಿಸುವಂತೆ ಯೆಹೋವನ ಆತ್ಮವು ಸಹಾಯ ಮಾಡುತ್ತಿದೆಯೆಂದು ನನಗೆ ಅನಿಸುತ್ತದೆ.”
ನಾವು ಜೀವಿಸುತ್ತಿರುವ ಕಠಿನ ಸಮಯಗಳ ಹೊರತೂ, ಯೆಹೋವ ಮತ್ತು ಅವನ ರಾಜ-ಪುತ್ರ ಕ್ರಿಸ್ತ ಯೇಸುವಿನಲ್ಲಿ ಭರವಸೆಯಿಡುವವರು, ನಿರಾಶರಾಗುವುದಿಲ್ಲ. (ರೋಮಾಪುರ 10:11) ಯೇಸು ತಾನೇ ನಮಗೆ ಆಶ್ವಾಸನೆಯನ್ನು ನೀಡುವುದು: “ಈ ಕಾರಣದಿಂದ—ನಮ್ಮ ಪ್ರಾಣಧಾರಣೆಗೆ ಏನು ಊಟಮಾಡಬೇಕು, ಏನು ಕುಡಿಯಬೇಕು, ನಮ್ಮ ದೇಹರಕ್ಷಣೆಗೆ ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ ಎಂಬದಾಗಿ ನಿಮಗೆ ಹೇಳುತ್ತೇನೆ. ಊಟಕ್ಕಿಂತ ಪ್ರಾಣವು ಉಡುಪಿಗಿಂತ ದೇಹವು ಮೇಲಾದದ್ದಲ್ಲವೇ. ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡಿರಿ; ಅವು ಬಿತ್ತುವದಿಲ್ಲ, ಕೊಯ್ಯುವದಿಲ್ಲ, ಕಣಜಗಳಲ್ಲಿ ತುಂಬಿಟ್ಟುಕೊಳ್ಳುವದಿಲ್ಲ; ಆದಾಗ್ಯೂ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳನ್ನು ಸಾಕಿ ಸಲಹುತ್ತಾನೆ; ಅವುಗಳಿಗಿಂತ ನೀವು ಹೆಚ್ಚಿನವರಲ್ಲವೋ? ಚಿಂತೆಮಾಡಿಮಾಡಿ ಒಂದು ಮೊಳ ಉದ್ದ ಬೆಳೆಯುವದು ನಿಮ್ಮಲ್ಲಿ ಯಾರಿಂದಾದೀತು? ಇದಲ್ಲದೆ ನೀವು ಉಡುಪಿನ ವಿಷಯದಲ್ಲಿ ಚಿಂತೆಮಾಡುವದೇಕೆ?”—ಮತ್ತಾಯ 6:25-28.
ಈ ಕಠಿನ ಸಮಯಗಳಲ್ಲಿ ಅವು ನಿಶ್ಚಯವಾಗಿಯೂ ಆಂತರ್ಯವನ್ನು ಪರೀಕ್ಷಿಸುವ ಪ್ರಶ್ನೆಗಳಾಗಿವೆ. ಆದರೆ ಯೇಸು ಈ ಪುನರಾಶ್ವಾಸನೆಯ ಮಾತುಗಳೊಂದಿಗೆ ಮುಂದುವರಿಯುತ್ತಾನೆ: “ಅಡವಿಯ ಹೂವುಗಳು ಬೆಳೆಯುವ ರೀತಿಯನ್ನು ಯೋಚಿಸಿ ತಿಳಿಯಿರಿ, ಅವು ದುಡಿಯುವದಿಲ್ಲ, ನೂಲುವದಿಲ್ಲ; ಆದಾಗ್ಯೂ ಈ ಹೂವುಗಳಲ್ಲಿ ಒಂದಕ್ಕಿರುವಷ್ಟು ಅಲಂಕಾರವು ಅರಸನಾದ ಸೊಲೊಮೋನನಿಗೆ ಸಹ ಅವನು ತನ್ನ ಸಕಲ ವೈಭವದಿಂದಿರುವಾಗಲೂ ಇರಲಿಲ್ಲವೆಂದು ನಿಮಗೆ ಹೇಳುತ್ತೇನೆ. ಎಲೈ ಅಲ್ಪ ವಿಶ್ವಾಸಿಗಳೇ, ಈ ಹೊತ್ತು ಇದ್ದು ನಾಳೆ ಒಲೆಯ ಪಾಲಾಗುವ ಅಡವಿಯ ಹುಲ್ಲಿಗೆ ದೇವರು ಹೀಗೆ ಉಡಿಸಿದರೆ ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸಿ ತೊಡಿಸುವನಲ್ಲವೇ. ಹೀಗಿರುವದರಿಂದ—ಏನು ಊಟಮಾಡಬೇಕು, ಏನು ಕುಡಿಯಬೇಕು, ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ. ಇವೆಲ್ಲವುಗಳಿಗಾಗಿ ಅಜ್ಞಾನಿಗಳು ತವಕಪಡುತ್ತಾರೆ. ಇದೆಲ್ಲಾ ನಿಮಗೆ ಬೇಕಾಗಿದೆ ಎಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದದೆಯಷ್ಟೆ. ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.”—ಮತ್ತಾಯ 6:28-33.
ಉತ್ತಮ ಸಮಯಗಳು ಮುಂದಿವೆ
ಲೋಕದ ಅನೇಕ ಭಾಗಗಳಲ್ಲಿ ಹದಗೆಡುತ್ತಿರುವ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳು ಕೆಡುತ್ತಾ ಮುಂದುವರಿಯುವವೆಂದು ಪ್ರತಿಯೊಂದು ಸೂಚನೆಯಿದೆ. ಆದರೂ, ಈ ಪರಿಸ್ಥಿತಿಗಳು ತಾತ್ಕಾಲಿಕವೆಂದು ದೇವರ ಜನರು ಅಂಗೀಕರಿಸುತ್ತಾರೆ. ಅರಸನಾದ ಸೊಲೊಮೋನನ ಭವ್ಯ ಆಳಿಕ್ವೆಯು, ಇಡೀ ಭೂಮಿಯ ಮೇಲೆ ಆಳಲಿರುವ, ಸೊಲೊಮೋನನಿಗಿಂತ ಮಹಾನ್ ಆಗಿರುವ ಒಬ್ಬ ಅರಸನ ನೀತಿಯ ಆಳಿಕ್ವೆಯನ್ನು ಮುಂಚಿತ್ರಿಸಿತು. (ಮತ್ತಾಯ 12:42) ಆ ಅರಸನು “ರಾಜಾಧಿರಾಜನು ಕರ್ತರ ಕರ್ತನೂ” ಆಗಿರುವ ಕ್ರಿಸ್ತ ಯೇಸುವಾಗಿದ್ದಾನೆ.—ಪ್ರಕಟನೆ 19:16.
ರಾಜನಾದ ಸೊಲೊಮೋನನ ಸಂಬಂಧದಲ್ಲಿ ಪ್ರಥಮ ನೆರವೇರಿಕೆಯನ್ನು ಹೊಂದಿದ ಕೀರ್ತನೆ 72, ಯೇಸು ಕ್ರಿಸ್ತನ ಶೋಭಾಯಮಾನವಾದ ಆಳಿಕ್ವೆಯನ್ನು ವರ್ಣಿಸುತ್ತದೆ. ರಾಜನಾಗಿ ಕ್ರಿಸ್ತನ ಕೆಳಗೆ ಭೂಮಿಯ ಭವಿಷ್ಯತ್ತಿನ ಕುರಿತಾಗಿ ಅದು ಮುಂತಿಳಿಸುವ ಅದ್ಭುತಕರ ವಿಷಯಗಳಲ್ಲಿ ಕೆಲವನ್ನು ಪರಿಗಣಿಸಿರಿ.
ಲೋಕವ್ಯಾಪಕವಾಗಿ ಶಾಂತಿಭರಿತ ಪರಿಸ್ಥಿತಿಗಳು: “ಅವನ ದಿವಸಗಳಲ್ಲಿ ನೀತಿವಂತನು ಚಿಗುರುವನು, ಮತ್ತು ಚಂದ್ರನು ಇಲ್ಲದೆ ಹೋಗುವ ವರೆಗೆ ಶಾಂತಿ ಇರುವುದು. ಮತ್ತು ಅವನಿಗೆ ಸಮುದ್ರದಿಂದ ಸಮುದ್ರದ ವರೆಗೂ ನದಿಯಿಂದ ಭೂಮಿಯ ಕಟ್ಟಕಡೆಯ ವರೆಗೂ ಪ್ರಜೆಗಳಿರುವರು.”—ಕೀರ್ತನೆ 72:7, 8, NW.
ದರಿದ್ರರಿಗಾಗಿ ಚಿಂತೆ: “ಯಾಕಂದರೆ ಅವನು ಮೊರೆಯಿಡುವ ಬಡವರನ್ನೂ ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು. ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು. ಕುಯುಕ್ತಿಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು; ಅವರ ಜೀವವು ಅವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವದು.”—ಕೀರ್ತನೆ 72:12-14.
ಆಹಾರದ ಸಮೃದ್ಧಿ: “ಭೂಮಿಯ ಮೇಲೆ ಹೇರಳವಾಗಿ ಧಾನ್ಯವು ದೊರೆಯುವುದು; ಬೆಟ್ಟಗಳ ಮೇಲೆಲ್ಲಾ ಬೆಳೆಯು ತುಂಬಿ ಹರಿಯುವುದು.”—ಕೀರ್ತನೆ 72:16, NW.
ಯೆಹೋವನ ವೈಭವವು ಭೂಮಿಯನ್ನು ತುಂಬಲಿದೆ: “ಮಹತ್ಕಾರ್ಯಗಳನ್ನು ನಡಿಸುವದರಲ್ಲಿ ಅದ್ವಿತೀಯನೂ ಇಸ್ರಾಯೇಲ್ಯರ ದೇವರೂ ಆದ ಯೆಹೋವ ದೇವರಿಗೆ ಸ್ತೋತ್ರವು. ಆತನ ಪ್ರಭಾವವುಳ್ಳ ನಾಮಕ್ಕೆ ಸದಾಕಾಲವೂ ಪ್ರಣಾಮವಿರಲಿ; ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿರಲಿ.”—ಕೀರ್ತನೆ 72:18, 19.
ಹಾಗಾದರೆ ನಿಜವಾಗಿಯೂ ಉತ್ತಮ ಸಮಯಗಳು ಮುಂದಿವೆ.