ಒಂದು ಅಪಾಯಕರ ನೆರೆಹೊರೆಯಲ್ಲಿ ನೀವು ಹೇಗೆ ಬದುಕುಳಿಯಬಲ್ಲಿರಿ?
“ಎಲ್ಲ ಸಮಯ ನಾನು ಹೆದರಿದ್ದೆ. ಎತ್ತಿಗೆ (ಎಲಿವೇಟರ್) ಯಲ್ಲಿ ನಾನು ಭಯಗೊಂಡಿದ್ದೆ. ನಾನು ಕಾರಿನಲ್ಲಿ ಭಯಗೊಂಡಿದ್ದೆ. ನನ್ನ ಮನೆಯಲ್ಲಿ ನಾನು ಹೆದರಿದ್ದೆ. ಎಲ್ಲೆಲ್ಲಿಯೂ ಪಾತಕವೆ ಪಾತಕ. ಯಾವಾಗಲೂ ಜನರ ಸುಲಿಗೆಯಾಗುತ್ತಿತ್ತು,” ಎನ್ನುತ್ತಾರೆ ಮಾರೀಯ. ಬ್ರೆಸಿಲಿನ ಈ ಮಹಿಳೆಯಂತೆ ನಿಮಗೂ ಅನಿಸುತ್ತದೊ, ನಿಮ್ಮ ನೆರೆಹೊರೆಯಲ್ಲಿ, ವಿಶೇಷವಾಗಿ ರಾತ್ರಿಯ ಕತ್ತಲೆಯಲ್ಲಿ ನೀವು ಭೀತರೊ?
ಪತ್ತೇದಾರಿ ಕಾದಂಬರಿಗಳನ್ನು ಓದುವುದು ರೋಮಾಂಚನೆಯನ್ನು ತಂದೀತು, ಆದರೆ ನೈಜ ಜೀವನದಲ್ಲಿ ಹೆಚ್ಚಾಗಿ ಸಂತೋಷಕರವಾದ ಅಂತ್ಯಫಲವಿರುವುದಿಲ್ಲ. ಪಾತಕವೊಂದು ಪತ್ತೆಹಚ್ಚಲ್ಪಡದೆ ಹೋದೀತು. ಅಥವಾ ನರಹತ್ಯೆಯ ಸನ್ನಿವೇಶಗಳಲ್ಲಿ, ಯಾರಾದರೊಬ್ಬರಿಗೆ ಗಂಡ, ತಂದೆ, ಅಥವಾ ಮಗನ ಹೊರತು, ಪತ್ನಿ, ತಾಯಿ, ಅಥವಾ ಮಗಳ ಹೊರತು ಜೀವಿಸುತ್ತಾ ಮುಂದುವರಿಯಬೇಕಾಗುತ್ತದೆ. ನಿಮ್ಮ ಕ್ಷೇತ್ರದಲ್ಲಿ ಹಿಂಸಾತ್ಮಕ ಪಾತಕವು ವೃದ್ಧಿಯಾಗುತ್ತಿದೆಯೆ? ಎಲ್ಲಿ ನಿಮ್ಮ ಕುಟುಂಬವು ಸುರಕ್ಷಿತವಾಗಿರುವುದೊ ಅಂಥ ಒಂದು ಪ್ರಶಾಂತ ಸ್ಥಳಕ್ಕಾಗಿ ನೀವು ಹಂಬಲಿಸುತ್ತೀರೊ? ಇಲ್ಲವೇ, ಪಾತಕಪೀಡಿತ ಕ್ಷೇತ್ರದಲ್ಲಿ ನಿಮ್ಮ ಮಕ್ಕಳನ್ನು ಪರಿಪಾಲಿಸಲು ನೀವು ನಿರ್ಬಂಧಪಡಿಸಲ್ಪಟ್ಟಲ್ಲಿ, ಪಾರಾಗಿ ಉಳಿಯಲು ನೀವೇನು ಮಾಡಬಲ್ಲಿರಿ?
ಕಡಿಮೆ ಪಾತಕಗಳು ವರದಿಯಾಗುತ್ತಿರುವ ಪಟ್ಟಣಗಳಿನ್ನೂ ಇವೆ ಎಂಬುದು ಗ್ರಾಹ್ಯ. ಅನೇಕ ದೇಶಗಳಲ್ಲಿ ಜನರಿನ್ನೂ ಗ್ರಾಮೀಣ ಪ್ರಶಾಂತತೆಯಲ್ಲಿ ಅಥವಾ ಹಳ್ಳಿಗಳ ನೆಮ್ಮದಿಯಲ್ಲಿ ಜೀವಿಸುತ್ತಿದ್ದಾರೆ. ಆದರೆ ಮುಂಚೆ ಪಾತಕಮುಕ್ತವೆಂದು ಎಣಿಸಲಾದ ಕ್ಷೇತ್ರಗಳಲ್ಲೂ ವಿಷಯಗಳು ತೀವ್ರವಾಗಿ ಬದಲಾಗುತಲ್ತಿವೆ. ದೃಷ್ಟಾಂತಕ್ಕಾಗಿ, ಬ್ರೆಸಿಲ್ನಲ್ಲಿ 50 ವರ್ಷಗಳ ಹಿಂದೆ, 70 ಪ್ರತಿಶತ ಜನಸಂಖ್ಯೆಯು ಗ್ರಾಮೀಣ ಪ್ರದೇಶಗಳಲ್ಲಿ ಜೀವಿಸುತ್ತಿತ್ತು. ಇಂದು 70 ಪ್ರತಿಶತ ಜನರು ನಗರಗಳಲ್ಲಿ ಜೀವಿಸುತ್ತಾರೆ. ಉದ್ಯೋಗದ ಅವಕಾಶಗಳ ಜೊತೆಯಲ್ಲಿ ಪಾತಕ ಮತ್ತು ಹಿಂಸಾಚಾರಗಳಂತಹ ಪೌರ ಸಮಸ್ಯೆಗಳ ವೃದ್ಧಿಯು ಉಂಟಾಗಿದೆ. ಅಪಾಯಕರ ಕ್ಷೇತ್ರದಲ್ಲಿ ಜೀವಿಸುತ್ತಿರಲಿ, ಜೀವಿಸುತ್ತಿರದಿರಲಿ, ನಿಮಗಿನ್ನೂ ಕೆಲಸಕ್ಕೆ ಅಥವಾ ಶಾಲೆಗಂತೂ ಹೋಗಲೇಬೇಕು ಮತ್ತು ಮನೆಯಿಂದ ದೂರವಾಗಿ ಅನೇಕಾನೇಕ ಚಟುವಟಿಕೆಗಳನ್ನು ಮಾಡಲೇಬೇಕು.
ನೆಲೆಸಿರುವ “ತೀವ್ರಭಯದ ಸಹಲಕ್ಷಣಗಳನ್ನು” ಒಪ್ಪಿಕೊಳ್ಳುತ್ತಾ, ರೀಯೊ ಡೆ ಸನೆರೋದ ಪೊಲೀಸ್ ಮುಖ್ಯಸ್ಥರು, ಸಾಮಾಜಿಕ ಅನ್ಯಾಯ ಮತ್ತು ಸಂಘಟಿತ ಪಾತಕವನ್ನು ಅದಕ್ಕೆ ಕಾರಣಾಂಶಗಳಾಗಿ ತಿಳಿಸುತ್ತಾರೆ. ಭಯದ ಬಹುವ್ಯಾಪಕತೆಗೆ ವಾರ್ತಾಪತ್ರಿಕೆಗಳು ಮತ್ತು ಟೆಲಿವಿಷನ್ ಮಾಧ್ಯಮಗಳು ಕಾರಣವಾಗಿದ್ದು, ಅವು “ಘೋರ ವಾರ್ತೆಗಳಿಂದ ಸಾರ್ವಜನಿಕರ ಎದೆಗುಂದಿಸುತ್ತವೆ,” ಎಂದೂ ಅವರು ಅಭಿಪ್ರಯಿಸುತ್ತಾರೆ. ಅಮಲೌಷಧ ವ್ಯಸನ, ಕುಟುಂಬ ಒಡೆತ, ಮತ್ತು ತಪ್ಪಾದ ಧಾರ್ಮಿಕ ಶಿಕ್ಷಣವು ಸಹ ನಿಯಮರಾಹಿತ್ಯದ ಬೆಳವಣಿಗೆಗೆ ನೆರವಾಗುತ್ತದೆ. ಮತ್ತು ಭವಿಷ್ಯತ್ತು ಏನನ್ನು ತರಲಿದೆ? ಪುಸ್ತಕಗಳಲ್ಲಿ ಮತ್ತು ಸಿನಿಮಾಗಳಲ್ಲಿ ಮನೋರಂಜನೆಯಾಗಿ ನಿಕೃಷ್ಟಮಾಡಲ್ಪಟ್ಟ ಹಿಂಸಾತ್ಮಕ ದೃಶ್ಯಗಳ ನಿತ್ಯದ ಪಡಿಭತ್ಯವು ಜನರನ್ನು ಇತರರೆಡೆಗೆ ಸಂವೇದನೆಹೀನರನ್ನಾಗಿ ಮಾಡುವುದೊ? ಪಾತಕಮುಕ್ತವೆಂದು ಎಣಿಸಲಾದ ಕ್ಷೇತ್ರಗಳು ಸಹ ಅಪಾಯಕರವಾಗಲಿವೆಯೆ?
ಬಲಿಯಾದವನಿಗೆ ಪಾತಕವು ವಿನೋದವಲ್ಲವಾಗಿರುವುದರಿಂದ, ಸುರಕ್ಷಿತವಾಗಿರುವ ಬಲವಾದ ಅಪೇಕ್ಷೆಯು ನಮಗಿರುತ್ತದೆ. ಚಿಂತಿತರಾದ ನಾಗರಿಕರು, ಬೀದಿಗಳಲ್ಲಿ ಹೆಚ್ಚು ಪೊಲೀಸ್ ಅಧಿಕಾರಿಗಳಿಗಾಗಿ ಮತ್ತು ಹೆಚ್ಚು ಕಠಿನವಾದ ಜೈಲು ಸಜೆಗಳಿಗಾಗಿ, ಇಲ್ಲವೆ ಮರಣ ದಂಡನೆಗಾಗಿಯೂ ಒತ್ತಯಾಪಡಿಸುವುದೇನೂ ಆಶ್ಚರ್ಯವಲ್ಲ! ಕೇಡುಗಳಿದ್ದಾಗ್ಯೂ, ಕೆಲವರು ಸರ್ವಕ್ಷಣೆಗಾಗಿ ಬಂದೂಕುಗಳನ್ನು ಪಡೆದುಕೊಳ್ಳುತ್ತಾರೆ. ಇತರರು ಬಂದೂಕುಗಳ ಮಾರಾಟವನ್ನು ಅಧಿಕಾರಿಗಳು ನಿಯಂತ್ರಿಸುವಂತೆ ಬಯಸುತ್ತಾರೆ. ಆದರೆ ಪಾತಕವು ವೃದ್ಧಿಯಾಗುತ್ತಿರುವ ದುರ್ವಾರ್ತೆಯ ಹೊರತೂ, ಎದೆಗುಂದುವ ಅಗತ್ಯವಿಲ್ಲ. ವಾಸ್ತವದಲ್ಲಿ, ಜೊಹಾನೆಸ್ಬರ್ಗ್, ಮೆಕ್ಸಿಕೊ ಸಿಟಿ, ನ್ಯೂ ಯಾರ್ಕ್, ರೀಯೊ ಡೆ ಸನೆರೋ, ಮತ್ತು ಸಾವುನ್ ಪಾವ್ಲೂ ಮುಂತಾದ ದೊಡ್ಡ ನಗರಗಳ ಅನೇಕ ನಾಗರಿಕರು ಎಂದೂ ದರೋಡೆಗೆ ಗುರಿಯಾಗಿಲ್ಲ. ಒಂದು ಅಪಾಯಕರ ನೆರೆಹೊರೆಯಲ್ಲಿ ಜನರು ಹೇಗೆ ನಿಭಾಯಿಸುತ್ತಾರೆಂದು ನಾವು ಪರೀಕ್ಷಿಸೋಣ.
ಒಂದು ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳುವುದು
ಪಾತಕಪೀಡಿತ ಕ್ಷೇತ್ರದ ಕುರಿತು ಲೇಖಕನೊಬ್ಬನು, “ಇನ್ನೂ ಕಟುವಾದ ಜೀವನ ಪರಿಸ್ಥಿತಿಯಲ್ಲಿಯೂ ತುಸುಮಟ್ಟದ ಗೌರವ ಮತ್ತು ಸಭ್ಯತೆಯಿಂದ ಜೀವಿಸುವ ಬ್ರೆಸಿಲಿನ ಸಾವಿರಾರು ಮಂದಿಯ ಉಪಾಯ ಕೌಶಲ ಮತ್ತು ಸತತ ಪ್ರಯತ್ನದ” ಕುರಿತು ಹೇಳಿಕೆ ನೀಡುತ್ತಾನೆ. ರೀಯೊ ಡೆ ಸನೆರೋದಲ್ಲಿ 38 ವರ್ಷಗಳನ್ನು ಕಳೆದ ಬಳಿಕ, ಸಾರ್ಸೆ ಅನ್ನುವುದು: “ನಿರ್ದಿಷ್ಟವಾದ ರಸ್ತೆಗಳನ್ನು ಮತ್ತು ಕ್ಷೇತ್ರಗಳನ್ನು ನಾನು ವರ್ಜಿಸುತ್ತೇನೆ ಮತ್ತು ಬೀದಿಯ ಚಟುವಟಿಕೆಗಳಲ್ಲಿ ಯಾವುದೇ ಕುತೂಹಲ ತೋರಿಸುವುದಿಲ್ಲ. ರಾತ್ರಿ ತಡವಾಗಿ ರಸ್ತೆಯಲ್ಲಿ ನಡೆಯುವುದನ್ನು ನಾನು ವರ್ಜಿಸುತ್ತೇನೆ ಮತ್ತು ಅತಿರೇಕ ಭಯವನ್ನು ತೋರಿಸುವುದಿಲ್ಲ. ನಾನು ಜಾಗೃತನಾಗಿರುತ್ತೇನಾದರೂ, ಜನರನ್ನು ಗೌರವದಿಂದ ಮತ್ತು ಮರ್ಯಾದೆಯಿಂದ ಉಪಚರಿಸುತ್ತಾ, ಅವರು ಪ್ರಾಮಾಣಿಕರೋ ಎಂಬಂತೆ ವೀಕ್ಷಿಸುತ್ತೇನೆ.”
ಹೌದು, ಅನಾವಶ್ಯಕವಾದ ತೊಂದರೆಯನ್ನು ವರ್ಜಿಸಿರಿ. ಬೇರೆ ಜನರ ಸಮಸ್ಯೆಗಳಲ್ಲಿ ಒಳಗೊಳ್ಳಬೇಡಿರಿ. ಮಿತಿತಪ್ಪಿದ ಭಯವು ನಿಮ್ಮ ನರವ್ಯೂಹವನ್ನು ಬಾಧಿಸಿ, ಸ್ವದರ್ತನೆಯ ಜನರನ್ನೂ ವಿಚಾರಹೀನ ಕೃತ್ಯಕ್ಕೆ ನಡಿಸಬಲ್ಲದೆಂಬ ನಿಜತ್ವವನ್ನೆಂದೂ ಹಗುರವಾಗಿ ತೆಗೆದುಕೊಳ್ಳಬೇಡಿ. ಅಪಾಯಕರ ಕ್ಷೇತ್ರದಲ್ಲಿನ ತನ್ನ ಕೆಲಸದ ಕುರಿತು, ಓಡ್ಯಾರ್ ಎಂಬವನು ಅವಲೋಕಿಸುವುದು: “ನಾನು ಸಕಾರಾತ್ಮಕನಾಗಿರಲು ಪ್ರಯತ್ನಿಸುತ್ತೇನೆ, ಸಂಭವಿಸಬಹುದಾದ ಕೆಟ್ಟ ವಿಷಯಗಳಿಂದ ಮನಸ್ಸನ್ನು ಹೇರುವುದಿಲ್ಲ, ಯಾಕಂದರೆ ಇದು ಅನಾವಶ್ಯಕ ಒತ್ತಡ ಮತ್ತು ಗಾಬರಿಯನ್ನು ತರುತ್ತದೆ. ಎಲ್ಲ ಜನರಿಗೆ ಮರ್ಯಾದೆ ತೋರಿಸಲು ನಾನು ಪ್ರಯತ್ನಿಸುತ್ತೇನೆ.” ಜಾಗೃತನಾಗಿದ್ದು, ಸಂಶಯಿಗಳಾಗಿ ತೋರುವ ಜನರಿಂದ ದೂರವಾಗಿರುವುದಲ್ಲದೆ, ಒಬ್ಬನ ಭಾವನೆಗಳನ್ನು ನಿಯಂತ್ರಿಸಲು ಇನ್ನೊಂದು ಸಹಾಯಕವನ್ನು ಅವನು ಕೂಡಿಸುತ್ತಾನೆ. “ಎಲ್ಲಕ್ಕಿಂತ ಹೆಚ್ಚಾಗಿ, ಯೆಹೋವ ದೇವರಲ್ಲಿ ಭರವಸೆಯನ್ನು ನಾನು ಬೆಳೆಸಿಕೊಳ್ಳುತ್ತೇನೆ, ಆತನ ದೃಷ್ಟಿಯಿಂದ ಯಾವುದೂ ತಪ್ಪಿಸಿಕೊಳ್ಳುವಂತಿಲ್ಲ ಮತ್ತು ಸಂಭವಿಸುವ ಯಾವುದೇ ಸಂಗತಿಯು ಆತನ ಅನುಮತಿಯಿಂದಲೇ ಎಂದು ನೆನಪಿಸಿಕೊಳ್ಳುತ್ತೇನೆ.”
ಆದರೂ, ಸದಾ ಭಯದಿಂದ ಜೀವಿಸಲು ಯಾರೂ ಬಯಸುವುದಿಲ್ಲ. ಅದಲ್ಲದೆ, ಅತಿರೇಕ ಭಯ ಮತ್ತು ಒತ್ತಡವು ಮಾನಸಿಕ ಮತ್ತು ಶಾರೀರಿಕ ಸೌಖ್ಯಕ್ಕೆ ಹಾನಿಕರವೆಂಬುದನ್ನು ಯಾರು ಅಲ್ಲಗಳೆದಾರು? ಆದಕಾರಣ, ಯಾವುದೇ ಸಮಯದಲ್ಲಿ ತಾವು ಆಕ್ರಮಣಕ್ಕೆ ಗುರಿಯಾಗಬಲ್ಲೆವೆಂದು ಭಯಪಡುವವರಿಗೆ ಯಾವ ನಿರೀಕ್ಷೆಯಿದೆ? ಪಾತಕದ ಅತ್ಯಂತ ಕೆಟ್ಟ ಸನ್ನಿವೇಶವು ಇನ್ನೂ ಮುಂದಿದೆ ಎಂದು ಅನೇಕರು ಹೆದರುವುದರಿಂದ, ಹಿಂಸಾಚಾರದ ಅಂತ್ಯವನ್ನು ನಾವೆಂದಾದರೂ ಕಾಣಲಿರುವೆವೊ? “ಭಯವು ಎಂದು ಕೊನೆಗೊಳ್ಳುವುದು?” ಎಂಬ ಮುಂದಿನ ಲೇಖನವನ್ನು ಓದುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ.