ಭಯ—ಈಗ ಸಾಮಾನ್ಯ ಆದರೆ ಸದಾಕಾಲಕ್ಕಲ್ಲ!
ಭಯವು ಇಷ್ಟು ಸಾಮಾನ್ಯವಾಗಿರುವುದು ದೇವರ ವಾಕ್ಯದ ವಿದ್ಯಾರ್ಥಿಗಳನ್ನು ಆಶ್ಚರ್ಯಗೊಳಿಸುವುದಿಲ್ಲ. ಯೆಹೋವನ ಸಾಕ್ಷಿಗಳು ತಮ್ಮ ಶುಶ್ರೂಷೆಯಲ್ಲಿ ವಿಸ್ತೃತವಾಗಿ ಬಹಿರಂಗಪಡಿಸಿರುವಂತೆ, ನಾವು ಮಾನವ ಇತಿಹಾಸದ ಒಂದು ಗುರುತಿಸಲ್ಪಟ್ಟ ಸಮಯದಲ್ಲಿ ಜೀವಿಸುತ್ತಿದ್ದೇವೆಂಬುದಕ್ಕೆ ಹೇರಳವಾದ ಸಾಕ್ಷ್ಯವಿದೆ. ಅದು ವ್ಯಾಪಕವಾದ ಭಯದಿಂದ ಗುರುತಿಸಲ್ಪಟ್ಟಿದೆಯೆಂದು ನಿಮಗೆ ತಿಳಿದಿದೆ. ಆದರೆ ಬಹು ಸಮಯದ ಹಿಂದೆ ಯೇಸು ನಮ್ಮ ಸಮಯವನ್ನು ಗುರುತಿಸಿದನು ಅಥವಾ ಅದಕ್ಕೆ ನಿರ್ದೇಶಿಸಿದನು. ತನ್ನ ಸಾನ್ನಿಧ್ಯ ಮತ್ತು ವಿಷಯಗಳ ವ್ಯವಸ್ಥೆಯ ಸಮಾಪ್ತಿ ಅಥವಾ ‘ಲೋಕದ ಅಂತ್ಯದ’ ಕುರಿತಾಗಿರುವ ಅಪೊಸ್ತಲರ ಪ್ರಶ್ನೆಗಳಿಗೆ ಅವನು ಪ್ರತಿಕ್ರಿಯಿಸುತ್ತಿದ್ದನು.—ಮತ್ತಾಯ 24:3.
ಯೇಸು ಏನನ್ನು ಮುಂತಿಳಿಸಿದನೋ ಅದರ ಒಂದು ಭಾಗವು ಇಲ್ಲಿದೆ:
“ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಮತ್ತು ಮಹಾಭೂಕಂಪಗಳಾಗುವವು; ಅಲ್ಲಲ್ಲಿ ಬರಗಳೂ ಉಪದ್ರವಗಳೂ [“ವ್ಯಾಧಿಗಳು,” NW] ಬರುವವು; ಉತ್ಪಾತಗಳೂ [“ಭಯಭರಿತ ದೃಶ್ಯಗಳು,” NW] ಆಕಾಶದಲ್ಲಿ ಮಹಾ ಸೂಚನೆಗಳೂ ತೋರುವವು.”—ಲೂಕ 21:10, 11.
“ಭಯಭರಿತ ದೃಶ್ಯಗಳ” ಕುರಿತಾಗಿರುವ ಆತನ ಹೇಳಿಕೆಯನ್ನು ನೀವು ಗಮನಿಸಿದಿರೋ? ಅನಂತರ ಅದೇ ಉತ್ತರದಲ್ಲಿ, ನಿಮ್ಮನ್ನೂ ನಿಮ್ಮ ಪ್ರೀತಿಪಾತ್ರರನ್ನೂ ನೇರವಾಗಿ ಮತ್ತು ನಿರ್ಣಯಾತ್ಮಕವಾಗಿ ಪ್ರಭಾವಿಸಬಹುದಾದ ಭಯದ ಕುರಿತಾದ ಇನ್ನೊಂದು ಪ್ರಾಮುಖ್ಯ ಅವಲೋಕನವನ್ನು ಯೇಸು ಮಾಡಿದನು. ಆದರೆ ಅದಕ್ಕೆ ಗಮನವನ್ನು ಕೊಡುವ ಮುಂಚೆ, ನಾವು ಕಡೆಯ ದಿವಸಗಳಲ್ಲಿ ಜೀವಿಸುತ್ತಿದ್ದೇವೆಂಬುದರ ಕುರಿತಾದ ಹೆಚ್ಚಿನ ಸಾಕ್ಷ್ಯವನ್ನು ನಾವು ಸಂಕ್ಷಿಪ್ತವಾಗಿ ಪುನರ್ವಿಮರ್ಶಿಸೋಣ.—2 ತಿಮೊಥೆಯ 3:1.
ಯುದ್ಧದ ಕುರಿತಾದ ನ್ಯಾಯೋಚಿತ ಭಯ
ಮಿಲಿಟರಿ ಘರ್ಷಣೆಗಳು ಲೋಕದ ಅನೇಕ ಭಾಗಗಳನ್ನು ಧ್ವಂಸಗೊಳಿಸಿವೆ. ಉದಾಹರಣೆಗಾಗಿ, ಮಧ್ಯ ಪೂರ್ವದ ಇತ್ತೀಚಿನ ಒಂದು ಘರ್ಷಣೆಯ ಅಂತ್ಯದಲ್ಲಿ, ಉರಿಯಲು ಬಿಡಲ್ಪಟ್ಟಿದ್ದ ಎಣ್ಣೆಯ ಬಾವಿಗಳನ್ನು “ಮನುಷ್ಯನ ಕೈಯಿಂದ ಹೇರಲ್ಪಟ್ಟ ಅತ್ಯಂತ ಮಹಾನ್ ಪರಿಸರೀಯ ಗಂಡಾಂತರ” ಎಂಬುದಾಗಿ ಜಿಯೊ ಪತ್ರಿಕೆಯು ಕರೆಯಿತು. ಯುದ್ಧಗಳು ಕೋಟಿಗಟ್ಟಲೆ ಜನರನ್ನು ಕೊಂದಿವೆ ಅಥವಾ ಅಂಗವಿಕಲರನ್ನಾಗಿ ಮಾಡಿವೆ. Iನೇ ಜಾಗತಿಕ ಯುದ್ಧದಲ್ಲಿ ಲಕ್ಷಾಂತರ ಮಿಲಿಟರಿ ಮತ್ತು ಅಯೋಧ ಮರಣಗಳನ್ನು ಮೀರಿಸಿ, IIನೇ ಜಾಗತಿಕ ಯುದ್ಧದಲ್ಲಿ 5.5 ಕೋಟಿ ಜನರು ಕೊಲ್ಲಲ್ಪಟ್ಟರು. ಲೋಕದ ಅಂತ್ಯವು ಹತ್ತಿರವಿತ್ತೆಂಬ ಸೂಚನೆಯ ಭಾಗವಾಗಿ “ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು” ಎಂದು ಯೇಸು ಹೇಳಿದ್ದನ್ನು ಪುನಃ ಜ್ಞಾಪಿಸಿಕೊಳ್ಳಿರಿ.
ಜನಾಂಗಹತ್ಯೆಯ—ಇಡೀ ಜಾತಿಗಳು ಅಥವಾ ಜನರ ನಾಶನದ—ಮನುಷ್ಯನ ಪ್ರಯತ್ನಗಳನ್ನು ಸಹ ನಾವು ಅಲಕ್ಷಿಸಸಾಧ್ಯವಿಲ್ಲ. ಲಕ್ಷಾಂತರ ಅರ್ಮೇನ್ಯನರ, ಕಂಬೋಡಿಯದವರ, ಯೆಹೂದ್ಯರ, ರುಆಂಡದವರ, ಯುಕ್ರೇನಿನವರ ಮತ್ತು ಇತರರ ಮರಣಗಳು, 20ನೆಯ ಶತಮಾನದಲ್ಲಿನ ಮಾನವಕುಲದ ತತ್ತರಗೊಳಿಸುವ ರಕ್ತದೋಷಕ್ಕೆ ಹೆಚ್ಚನ್ನು ಕೂಡಿಸಿವೆ. ಎಲ್ಲಿ ಕುಲಸಂಬಂಧಿತ ದ್ವೇಷಗಳು ಧಾರ್ಮಿಕ ಉಗ್ರವಾದಿಗಳಿಂದ ಪ್ರೋತ್ಸಾಹಿಸಲ್ಪಡುತ್ತವೊ, ಆ ದೇಶಗಳಲ್ಲಿ ಹತ್ಯೆಯು ಮುಂದುವರಿಯುತ್ತಿದೆ. ಹೌದು, ಯುದ್ಧಗಳು ಇನ್ನೂ ಭೂಮಿಯನ್ನು ಮಾನವ ರಕ್ತದಿಂದ ತೋಯಿಸುತ್ತಿವೆ.
ಆಧುನಿಕ ಯುದ್ಧಗಳು, ಕಾದಾಟವು ಅಂತ್ಯವಾದ ಬಳಿಕವೂ ಬಲಿಗಳನ್ನು ತೆಗೆದುಕೊಳ್ಳುತ್ತವೆ. ದೃಷ್ಟಾಂತಕ್ಕಾಗಿ, ಸಿಡಿಮದ್ದು ಪಾತ್ರೆಗಳ ಗೊತ್ತುಗುರಿಯಿಲ್ಲದ ಇಡುವಿಕೆಯನ್ನು ಪರಿಗಣಿಸಿರಿ. ಹ್ಯೂಮನ್ ರೈಟ್ಸ್ ವಾಚ್ ಎಂಬ ಸಂಶೋಧನಾ ಸಂಘದಿಂದ ಒಂದು ವರದಿಗನುಸಾರ, “ಲೋಕದ ಸುತ್ತಲೂ ಸುಮಾರು ಹತ್ತು ಕೋಟಿ ಸಿಡಿಮದ್ದು ಪಾತ್ರೆಗಳು ಅಯೋಧ ಜನರನ್ನು ಬೆದರಿಸುತ್ತಿವೆ.” ಇಂತಹ ಸಿಡಿಮದ್ದು ಪಾತ್ರೆಗಳು, ಅವು ಬಳಸಲ್ಪಟ್ಟ ಯುದ್ಧಗಳು ಅಂತ್ಯಗೊಂಡ ಬಹಳ ಸಮಯದ ನಂತರವೂ, ನಿರ್ದೋಷಿ ಪುರುಷರು, ಸ್ತ್ರೀಯರು ಮತ್ತು ಮಕ್ಕಳಿಗೆ ಅಪಾಯಕಾರಿಯಾಗಿರುತ್ತಾ ಮುಂದುವರಿಯುತ್ತಿವೆ. 60ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಪ್ರತಿ ತಿಂಗಳು ಸಾವಿರಾರು ಜನರು ಸಿಡಿಮದ್ದು ಪಾತ್ರೆಗಳಿಂದ ಅಂಗವಿಕಲರಾಗಿ ಮಾಡಲ್ಪಡುತ್ತಾರೆ ಅಥವಾ ಕೊಲ್ಲಲ್ಪಡುತ್ತಾರೆ ಎಂದು ಹೇಳಲಾಗಿದೆ. ಮರಣ ಮತ್ತು ಗಂಭೀರ ಹಾನಿಯನ್ನು ಉಂಟುಮಾಡಬಲ್ಲ ಈ ಬೆದರಿಕೆಯು ವ್ಯವಸ್ಥಿತ ರೀತಿಯಲ್ಲಿ ಏಕೆ ತೆಗೆಯಲ್ಪಡುವುದಿಲ್ಲ? ದ ನ್ಯೂ ಯಾರ್ಕ್ ಟೈಮ್ಸ್ ಗಮನಿಸಿದ್ದು: “ಸಿಡಿಮದ್ದು ಪಾತ್ರೆಗಳನ್ನು ತೆಗೆದುಹಾಕುವ ಕಾರ್ಯಾಚರಣೆಗಳಲ್ಲಿ, ನಿಷ್ಕ್ರಿಯಗೊಳಿಸಲ್ಪಡುವದಕ್ಕಿಂತ ತೀರ ಹೆಚ್ಚು ಸಿಡಿಮದ್ದು ಪಾತ್ರೆಗಳು ಪ್ರತಿದಿನ ಇಡಲ್ಪಡುತ್ತಿವೆ, ಆದುದರಿಂದ ಅನಾಹುತಗಳ ಸಂಖ್ಯೆಯು ಒಂದೇ ಸಮನೆ ಏರುತ್ತಿದೆ.”
ಆ 1993ರ ವಾರ್ತಾಪತ್ರದ ಲೇಖನವು ವರದಿಸಿದ್ದೇನೆಂದರೆ ಈ ಸಿಡಿಮದ್ದು ಪಾತ್ರೆಗಳನ್ನು ವಿಕ್ರಯಿಸುವುದು, “ವಾರ್ಷಿಕವಾಗಿ ಸುಮಾರು 20 ಕೋಟಿ ಡಾಲರುಗಳನ್ನು ತೆರುವ” ಒಂದು ವ್ಯಾಪಾರವಾಗಿದೆ. ಅದು “340 ವಿಭಿನ್ನ ರೀತಿಗಳ” ಸಿಡಿಮದ್ದು ಪಾತ್ರೆಗಳನ್ನು “ರಫ್ತು ಮಾಡುತ್ತಿರುವ, 48 ದೇಶಗಳಲ್ಲಿನ ಸುಮಾರು 100 ಕಂಪನಿಗಳು ಮತ್ತು ಸರಕಾರೀ ಏಜೆನ್ಸಿಗಳನ್ನು” ಒಳಗೂಡುತ್ತದೆ. ಪೈಶಾಚಿಕವಾಗಿ, ಕೆಲವು ಸಿಡಿಮದ್ದು ಪಾತ್ರೆಗಳು, ಅವುಗಳನ್ನು ಮಕ್ಕಳಿಗೆ ಆಕರ್ಷಕವಾಗಿ ಮಾಡಲಿಕ್ಕಾಗಿ, ಆಟಿಕೆಗಳಂತೆ ತೋರಲು ವಿನ್ಯಾಸಿಸಲ್ಪಟ್ಟಿವೆ! ಅಂಗಹೀನರನ್ನಾಗಿ ಮಾಡಲು ಮತ್ತು ನಾಶನಕ್ಕಾಗಿ ನಿರ್ದೋಷಿ ಮಕ್ಕಳನ್ನು ಬೇಕುಬೇಕೆಂದೇ ಗುರಿಹಲಗೆಗಳನ್ನಾಗಿ ಮಾಡುವುದನ್ನು ಊಹಿಸಿಕೊಳ್ಳಿರಿ! “ಹತ್ತು ಕೋಟಿ ಪೈಶಾಚಿಕ ಯಂತ್ರಗಳು” ಎಂಬ ಶೀರ್ಷಿಕೆಯ ಒಂದು ಸಂಪಾದಕೀಯವು, ಸಿಡಿಮದ್ದು ಪಾತ್ರೆಗಳು “ರಾಸಾಯನಿಕ, ಜೀವಶಾಸ್ತ್ರೀಯ ಮತ್ತು ನ್ಯೂಕ್ಲಿಯರ್ ಹೋರಾಟಕ್ಕಿಂತ ಹೆಚ್ಚು ಜನರನ್ನು ಕೊಂದಿವೆ ಅಥವಾ ಅಂಗಹೀನರನ್ನಾಗಿ” ಮಾಡಿವೆಯೆಂದು ವಾದಿಸಿತು.
ಆದರೆ ಸಿಡಿಮದ್ದು ಪಾತ್ರೆಗಳು, ಲೋಕದ ಮಾರುಕಟ್ಟೆಗಳಲ್ಲಿ ವಿಕ್ರಯಿಸಲ್ಪಡುವ ಏಕಮಾತ್ರ ಮರಣಕಾರಕ ಪದಾರ್ಥವಾಗಿರುವುದಿಲ್ಲ. ಶಸ್ತ್ರಗಳ ಧನಲೋಭಿ ವಿತರಕರು ಭೂವ್ಯಾಪಕವಾಗಿ ಕೋಟಿಗಟ್ಟಲೆ ಡಾಲರುಗಳ ಒಂದು ವ್ಯಾಪಾರವನ್ನು ಮಾಡುತ್ತಿದ್ದಾರೆ. ಸೆಂಟರ್ ಫಾರ್ ಡಿಫೆನ್ಸ್ ಇನ್ಫರ್ಮೇಷನ್ನಿಂದ ಪ್ರಕಾಶಿಸಲ್ಪಟ್ಟ ದ ಡಿಫೆನ್ಸ್ ಮಾನಿಟರ್ ವರದಿಸುವುದು: “ಕಳೆದ ದಶಕದಲ್ಲೆಲ್ಲಾ [ಒಂದು ಪ್ರಮುಖ ರಾಷ್ಟವ್ರು] 13,500 ಕೋಟಿ ಡಾಲರುಗಳ ಬೆಲೆಯ ಶಸ್ತ್ರಗಳನ್ನು ರಫ್ತುಮಾಡಿತು.” ಈ ಶಕ್ತಿಶಾಲಿ ರಾಷ್ಟವ್ರು “142 ರಾಷ್ಟ್ರಗಳಿಗೆ ತತ್ತರಗೊಳಿಸುವ 6,300 ಕೋಟಿ ಬೆಲೆಯ ಶಸ್ತ್ರಗಳು, ಮಿಲಿಟರಿ ನಿರ್ಮಾಣ ಮತ್ತು ತರಬೇತಿಯ ಮಾರಾಟವನ್ನು ಅಧಿಕೃತಗೊಳಿಸಿತು” ಸಹ. ಹೀಗೆ ಭವಿಷ್ಯತ್ತಿನ ಹೋರಾಟ ಮತ್ತು ಮಾನವ ಕಷ್ಟಾನುಭವಕ್ಕಾಗಿ ಬೀಜಗಳು ಬಿತ್ತಲ್ಪಡುತ್ತಿವೆ. ದ ಡಿಫೆನ್ಸ್ ಮಾನಿಟರ್ಗನುಸಾರ “ಕೇವಲ 1990ರಲ್ಲಿ, ಯುದ್ಧಗಳು 50 ಲಕ್ಷ ಜನರನ್ನು ಯುದ್ಧಗಳಲ್ಲಿ ಹೋರಾಡಲಿಕ್ಕಾಗಿ ಶಸ್ತ್ರಗಳನ್ನು ಬಳಸಲು ತರಬೇತಿ ಹೊಂದಿದವರನ್ನಾಗಿರಿಸಿತು, 5,000 ಕೋಟಿ ಡಾಲರುಗಳ ವೆಚ್ಚ ತಗಲಿತು, ಮತ್ತು ಅವರಲ್ಲಿ ಹೆಚ್ಚಾಗಿ ಅಯೋಧರಾಗಿದ್ದ 2.5 ಲಕ್ಷ ಜನರನ್ನು ಕೊಂದಿತು.” ಆ ವರ್ಷದಂದಿನಿಂದ, ಇನ್ನೂ ಹೆಚ್ಚು ಲಕ್ಷಾಂತರ ಮಂದಿಗೆ ಭಯ ಮತ್ತು ಮರಣವನ್ನು ತರುತ್ತಾ, ಹೋರಾಡಲ್ಪಟ್ಟ ಅಸಂಖ್ಯಾತ ಯುದ್ಧಗಳ ಕುರಿತಾಗಿ ನೀವು ನಿಶ್ಚಯವಾಗಿಯೂ ಯೋಚಿಸಬಲ್ಲಿರಿ!
ಭೂಮಿ ಮತ್ತು ಅದರ ಜೀವದ ಹೆಚ್ಚಿನ ವಿನಾಶ
ಪ್ರೊಫೆಸರ್ ಬ್ಯಾರಿ ಕಾಮನರ್ ಎಚ್ಚರಿಸುವುದು: “ಅಂಕೆಯಲ್ಲಿರಿಸಲ್ಪಡದೆ ಹೋದಲ್ಲಿ, ಭೂಮಿಯ ಮಾಲಿನ್ಯವು, ಮಾನವ ಜೀವಿತಕ್ಕಾಗಿ ಒಂದು ಸ್ಥಳವಾಗಿ ಈ ಗ್ರಹದ ಯೋಗ್ಯತೆಯನ್ನು ಕಟ್ಟಕಡೆಗೆ ನಾಶಮಾಡುವುದು.” ಸಮಸ್ಯೆಯು ಅಜ್ಞಾನವಲ್ಲ ಬದಲಾಗಿ ಇಚ್ಚಾಪೂರ್ವಕ ಲೋಭವಾಗಿದೆಯೆಂದು ಅವರು ಮುಂದುವರಿಸುತ್ತಾ ಹೇಳುತ್ತಾರೆ. ಮಾಲಿನ್ಯದ ವೃದ್ಧಿಯಾಗುವ ಭಯಕ್ಕೆ ನಮ್ಮನ್ನು ಒಡ್ಡುತ್ತಾ, ನಮ್ಮ ನ್ಯಾಯವಂತ ಮತ್ತು ಪ್ರೀತಿಪೂರ್ಣ ದೇವರು ಈ ಸನ್ನಿವೇಶವನ್ನು ನಿತ್ಯಕ್ಕೆ ಸಹಿಸುವನೆಂಬುದಾಗಿ ನೀವು ನೆನಸುತ್ತೀರೊ? ಭೂಮಿಯ ಹಾಳುಗೆಡಹುವಿಕೆಯು, ಹಾಳುಗೆಡಹುವವರೊಂದಿಗೆ ಲೆಕ್ಕವಿಚಾರಣೆಗಾಗಿ ಮತ್ತು ಅನಂತರ ಗ್ರಹದ ಒಂದು ದೈವಿಕ ಪುನಃಸ್ಥಾಪನೆಗಾಗಿ ಕರೆಕೊಡುತ್ತಿದೆ. ‘ಲೋಕದ ಅಂತ್ಯದ’ ಕುರಿತಾಗಿ ಅಪೊಸ್ತಲರಿಗೆ ಕೊಟ್ಟ ತನ್ನ ಉತ್ತರದಲ್ಲಿ ಯೇಸು ಹೇಳಿದ ಸಂಗತಿಯ ಒಂದು ಭಾಗ ಅದಾಗಿದೆ.
ದೇವರು ಆ ಲೆಕ್ಕವಿಚಾರಣೆಯನ್ನು ತರುವ ವಿಧವನ್ನು ನಾವು ಪರಿಗಣಿಸುವ ಮುಂಚೆ, ನಾವು ಮನುಷ್ಯನ ದಾಖಲೆಯನ್ನು ಇನ್ನು ಹೆಚ್ಚು ಪರಿಶೀಲಿಸೋಣ. ಮನುಷ್ಯನ ಕೆಡಿಸುವಿಕೆಗಳ ಒಂದು ಆಂಶಿಕ ಪಟ್ಟಿಯೂ ಬೇಸರಗೊಳಿಸುವಂತಹದ್ದಾಗಿದೆ: ಇಡೀ ಕಾಡುಗಳನ್ನು ನಾಶಮಾಡುವ ಆಮ್ಲ ಮಳೆ ಮತ್ತು ಮರ ಕಡಿಯುವ ಲೋಭದ ಆಚಾರಗಳು; ನ್ಯೂಕ್ಲಿಯರ್ ಕಚಡ, ವಿಷಕಾರಿ ರಾಸಾಯನಿಕಗಳ, ಮತ್ತು ಕಚ್ಚಾ ಹೊಲಸಿನ ಅಜಾಗರೂಕತೆಯ ಎಸೆಯುವಿಕೆ; ಸಂರಕ್ಷಕ ಓಸೋನ್ ಪದರದ ದುರ್ಬಲಗೊಳಿಸುವಿಕೆ; ಮತ್ತು ಸಸ್ಯ ಔಷಧಗಳ ಹಾಗೂ ಕೀಟನಾಶಕಗಳ ಅಜಾಗರೂಕ ಬಳಕೆ.
ವಾಣಿಜ್ಯ ಹಿತಾಸಕ್ತಿಗಳು ಲಾಭಕ್ಕಾಗಿ ಭೂಮಿಯನ್ನು ಇತರ ವಿಧಗಳಲ್ಲಿ ಹೊಲೆಗೆಡಿಸುತ್ತವೆ. ದಿನಾಲೂ ಟನ್ನುಗಟ್ಟಲೆ ಕಚಡ ಉತ್ಪನ್ನಗಳು ನದಿಗಳಲ್ಲಿ, ಸಾಗರಗಳಲ್ಲಿ, ಗಾಳಿ ಮತ್ತು ಮಣ್ಣಿನಲ್ಲಿ ಎಸೆಯಲ್ಪಡುತ್ತವೆ. ವಿಜ್ಞಾನಿಗಳು ಆಕಾಶಗಳನ್ನು ಅಂತರಿಕ್ಷ ಕಚಡದೊಂದಿಗೆ ಗಲೀಜು ಮಾಡುತ್ತಾ, ಸಾಂಕೇತಿಕವಾಗಿ ಮಾತಾಡುವುದಾದರೆ ಅವುಗಳನ್ನು ಅನಂತರ ಶುಚಿಗೊಳಿಸುವುದಿಲ್ಲ. ಭೂಮಿಯು ಕ್ಷಿಪ್ರವಾಗಿ, ಸುತ್ತುತ್ತಿರುವ ತಿಪ್ಪೆಗುಂಡಿಯಿಂದ ಸುತ್ತಲ್ಪಟ್ಟಿರುವಂತಹದ್ದಾಗಿ ಪರಿಣಮಿಸುತ್ತಿದೆ. ಭೂಮಿಯು ಸ್ವತಃ ನವೀಕರಿಸಲಾಗುವಂತೆ ದೇವರು ಮಾಡಿದಂತಹ ನೈಸರ್ಗಿಕ ಕ್ರಿಯೆಗಳು ಇಲ್ಲದಿರುತ್ತಿದ್ದಲ್ಲಿ, ನಮ್ಮ ಭೂಗೃಹವು ಜೀವವನ್ನು ಬೆಂಬಲಿಸತ್ತಿರಲಿಲ್ಲ, ಮತ್ತು ಮನುಷ್ಯನು ಬಹುಕಾಲದ ಹಿಂದೆಯೇ ತನ್ನ ಸ್ವಂತ ಕಳಪೆಯಲ್ಲಿ ಪ್ರಾಯಶಃ ಉಸಿರುಕಟ್ಟಿ ಸಾಯುತ್ತಿದ್ದನು.
ಮನುಷ್ಯನು ಸ್ವತಃ ತನ್ನನ್ನೂ ಮಲಿನಗೊಳಿಸಿಕೊಳ್ಳುತ್ತಾನೆ. ಉದಾಹರಣೆಗಾಗಿ, ತಂಬಾಕು ಮತ್ತು ಇತರ ಅಮಲೌಷಧ ದುರುಪಯೋಗವನ್ನು ತೆಗೆದುಕೊಳ್ಳಿರಿ. ಅಮೆರಿಕದಲ್ಲಿ, ಅಂತಹ ದ್ರವ್ಯ ದುರುಪಯೋಗವನ್ನು, “ರಾಷ್ಟ್ರದ ಅಗ್ರಗಣ್ಯ ಆರೋಗ್ಯ ಸಮಸ್ಯೆ”ಯೆಂದು ಕರೆಯಲಾಗಿದೆ. ಅದು ಆ ದೇಶಕ್ಕೆ ವಾರ್ಷಿಕವಾಗಿ 23,800 ಕೋಟಿ ಡಾಲರುಗಳ ವೆಚ್ಚ ತಗಲಿಸುತ್ತದೆ, ಅದರಲ್ಲಿ 3,400 ಕೋಟಿಗಳಷ್ಟು ಡಾಲರುಗಳನ್ನು “ಅನಾವಶ್ಯಕ [ಅಂದರೆ, ವರ್ಜಿಸಸಾಧ್ಯ] ಆರೋಗ್ಯಾರೈಕೆಯ” ಮೇಲೆ ಖರ್ಚು ಮಾಡಲಾಗುತ್ತದೆ. ನೀವು ಎಲ್ಲಿ ಜೀವಿಸುತ್ತೀರೋ ಅಲ್ಲಿ ಹಣ ಮತ್ತು ಜೀವಗಳಲ್ಲಿ ತಂಬಾಕಿನ ಬೆಲೆ ಎಷ್ಟಾಗಿದೆಯೆಂದು ನೀವು ನೆನಸುತ್ತೀರಿ?
ಸರಿಯಾದದ್ದೆಂದು ಅನೇಕರು ಪಟ್ಟುಹಿಡಿಯುವ, ಸ್ವಚ್ಛಂದ ಮತ್ತು ಅಡದ್ಡಾರಿಯ ಜೀವನ ಶೈಲಿಗಳು, ಮಾರಕ ರತಿ ರವಾನಿತ ರೋಗಗಳ ಒಂದು ಭಯಾನಕ ಬೆಳೆಯನ್ನು ಉತ್ಪಾದಿಸುತ್ತಾ, ಅನೇಕರು ಇನ್ನೂ ಯುವಕರಾಗಿರುವಾಗಲೇ ಸಾಯುವಂತೆ ಮಾಡಿವೆ. ಪ್ರಧಾನ ನಗರ ವಾರ್ತಾಪತ್ರಗಳ ಮೃತಿ ಪ್ರಕಟನಾ ಅಂಕಣಗಳು, ತಮ್ಮ 30ಗಳು ಮತ್ತು 40ಗಳ ವಯಸ್ಸಿನಲ್ಲಿ ಹೆಚ್ಚುತ್ತಿರುವ ಸಂಖ್ಯೆಯ ಜನರು ಸಾಯುವುದನ್ನು ತೋರಿಸುತ್ತವೆ. ಯಾಕೆ? ಹೆಚ್ಚಾಗಿ ನಾಶಕಾರಕ ಹವ್ಯಾಸಗಳಿಗೆ ಅವರು ಕೊನೆಗೆ ಬಲಿಯಾಗಬೇಕಾದದರ್ದಿಂದಲೇ. ಲೈಂಗಿಕ ಮತ್ತು ಇತರ ರೋಗಗಳಲ್ಲಿನ ಅಂತಹ ದುರಂತಮಯ ವೃದ್ಧಿಯು ಸಹ ಯೇಸುವಿನ ಪ್ರವಾದನೆಗೆ ಸರಿಹೊಂದುತ್ತದೆ, ಯಾಕಂದರೆ ಅವನು ಹೇಳಿದ್ದು “ಅಲ್ಲಲ್ಲಿ . . . ವ್ಯಾಧಿಗಳು ಬರುವವು.”
ಆದಾಗಲೂ, ಅತಿ ಕೆಡುಕಿನ ಮಾಲಿನ್ಯವು ಮಾನವ ಮನಸ್ಸು ಮತ್ತು ಪ್ರಕೃತಿ ಅಥವಾ ಮನೋಭಾವದ ಮಾಲಿನ್ಯವಾಗಿದೆ. ಈಗಿನ ವರೆಗೆ ನಾವು ತಿಳಿಸಿರುವಂತಹ ಮಲಿನಗೊಳಿಸುವಿಕೆಯ ಎಲ್ಲಾ ರೂಪಗಳನ್ನು ನೀವು ಪುನರ್ವಿಮರ್ಶಿಸುವಲ್ಲಿ, ಅವುಗಳಲ್ಲಿ ಹೆಚ್ಚಿನವು, ಮಲಿನಗೊಳಿಸಲ್ಪಟ್ಟ ಮನಸ್ಸುಗಳ ಫಲಿತಾಂಶವಾಗಿರುವುದು ಸತ್ಯವಲ್ಲವೊ? ಕೊಲೆಗಳು, ಬಲಾತ್ಕಾರ ಸಂಭೋಗಗಳು, ಕಳ್ಳತನಗಳು, ಮತ್ತು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಯ ಮೇಲೆ ಹೇರಲ್ಪಡುವ ಹಿಂಸಾಚಾರದ ಇತರ ವಿಧಗಳ ರೂಪದಲ್ಲಿ ಅಸ್ವಸ್ಥ ಮನಸ್ಸುಗಳು ಸೃಷ್ಟಿಸುವ ಹಾವಳಿಯನ್ನು ಪರಿಗಣಿಸಿರಿ. ವಾರ್ಷಿಕವಾಗಿ ನಡಿಸಲ್ಪಡುವ ಲಕ್ಷಾಂತರ ಗರ್ಭಪಾತಗಳು ಸಹ ಮಾನಸಿಕ ಮತ್ತು ಆತ್ಮಿಕ ಮಾಲಿನ್ಯದ ಒಂದು ಸೂಚನೆಯಾಗಿವೆಯೆಂದು ಅನೇಕರು ಅಂಗೀಕರಿಸುತ್ತಾರೆ.
ಯುವಜನರ ಮನೋಭಾವದಲ್ಲಿ ನಾವು ತುಂಬ ವಿಷಯಗಳನ್ನು ಕಾಣುತ್ತೇವೆ. ಹೆತ್ತವರ ಮತ್ತು ಇತರ ಅಧಿಕಾರಕ್ಕೆ ಅಗೌರವವು ಕುಟುಂಬ ಒಡೆತ ಮತ್ತು ನ್ಯಾಯ ಪರಿಪಾಲನೆ ಹಾಗೂ ಶಿಸ್ತಿನ ಉಲ್ಲಂಘನೆಗೆ ಸಹಾಯಮಾಡುತ್ತಿದೆ. ಅಧಿಕಾರದ ಒಂದು ಸ್ವಸ್ಥ ಭಯದ ಈ ಕೊರತೆಯು ಯುವಕರ ಆತ್ಮಿಕತೆಯ ಕೊರತೆಯೊಂದಿಗೆ ನೇರವಾಗಿ ಸಂಬಂಧಿಸಿದೆ. ಆದುದರಿಂದ, ವಿಕಾಸ, ನಾಸ್ತಿಕತೆ, ಮತ್ತು ನಂಬಿಕೆಯನ್ನು ನಾಶಪಡಿಸುವ ಇತರ ಸಿದ್ಧಾಂತಗಳನ್ನು ಕಲಿಸುವವರು ಗಮನಾರ್ಹವಾದ ದೋಷವನ್ನು ಹೊತ್ತುಕೊಳ್ಳುತ್ತಾರೆ. ಆಧುನಿಕರು ಮತ್ತು “ಸರಿ”ಯಾದವರು ಎಂಬುದಾಗಿ ಸ್ವೀಕರಿಸಲ್ಪಡುವ ಅವರ ಪ್ರಯತ್ನಗಳಲ್ಲಿ, ಅನೇಕ ಧಾರ್ಮಿಕ ಶಿಕ್ಷಕರು ದೇವರ ವಾಕ್ಯಕ್ಕೆ ಬೆನ್ನುಹಾಕಿದ್ದಾರೆ. ಲೋಕದ ವಿವೇಕದಿಂದ ತುಂಬಿರುವ ಅವರು ಮತ್ತು ಇತರರು, ವಿರೋಧಾತ್ಮಕ ಮಾನವ ತತ್ತ್ವಜ್ಞಾನಗಳನ್ನು ಕಲಿಸುತ್ತಾರೆ.
ಇಂದು ಫಲಿತಾಂಶಗಳು ಸ್ಫುಟವಾಗಿವೆ. ಜನರು ದೇವರು ಮತ್ತು ಜೊತೆಮಾನವನಿಗಾಗಿ ಪ್ರೀತಿಯಿಂದಲ್ಲ, ಬದಲಾಗಿ ಲೋಭ ಮತ್ತು ದ್ವೇಷದಿಂದ ಪ್ರಚೋದಿಸಲ್ಪಡುತ್ತಾರೆ. ಕೆಟ್ಟ ಫಲವು ವ್ಯಾಪಕವಾದ ಅನೈತಿಕತೆ, ಹಿಂಸಾಚಾರ, ಮತ್ತು ನಿರೀಕ್ಷಾಹೀನತೆಯಾಗಿದೆ. ದುಃಖಕರವಾಗಿ, ಇದು ಪ್ರಾಮಾಣಿಕ ಜನರಲ್ಲಿ ಭಯವನ್ನು, ಮನುಷ್ಯನು ಸ್ವತಃ ತನ್ನನ್ನು ಮತ್ತು ಗ್ರಹವನ್ನು ನಾಶಮಾಡುವನೆಂಬ ಭಯವನ್ನು ಉಂಟುಮಾಡುತ್ತದೆ.
ಅದು ಕೆಡುವುದೊ ಉತ್ತಮಗೊಳ್ಳುವುದೊ?
ಭಯದ ಸಂಬಂಧದಲ್ಲಿ ನಿಕಟ ಭವಿಷ್ಯತ್ತು ಏನನ್ನು ಕಾದಿರಿಸಿದೆ? ಭಯವು ಹೆಚ್ಚುತ್ತಾ ಹೋಗುವುದೊ, ಅಥವಾ ಅದು ಜಯಿಸಲ್ಪಡುವುದೊ? ಯೇಸು ತನ್ನ ಅಪೊಸ್ತಲರಿಗೆ ಏನಂದನು ಎಂಬುದಾಗಿ ನಾವು ಪುನಃ ಒಮ್ಮೆ ಗಮನಿಸೋಣ.
ನಿಕಟ ಭವಿಷ್ಯತ್ತಿನಲ್ಲಿ ಏನು ಸಂಭವಿಸಲಿದೆಯೋ ಅದಕ್ಕೆ—ಮಹಾ ಸಂಕಟಕ್ಕೆ—ಅವನು ನಿರ್ದೇಶಿಸಿದನು. ಅವನ ಮಾತುಗಳು ಇಲ್ಲಿವೆ: “ಆ ದಿನಗಳ ಸಂಕಟವು ತೀರಿದಕೂಡಲೆ ಸೂರ್ಯನು ಕತ್ತಲಾಗಿಹೋಗುವನು, ಚಂದ್ರನು ಬೆಳಕುಕೊಡದೆ ಇರುವನು, ನಕ್ಷತ್ರಗಳು ಆಕಾಶದಿಂದ ಉದುರುವವು, ಆಕಾಶದ ಶಕ್ತಿಗಳು ಕದಲುವವು. ಆಗ ಮನುಷ್ಯ ಕುಮಾರನನ್ನು ಸೂಚಿಸುವ ಗುರುತು ಆಕಾಶದಲ್ಲಿ ಕಾಣಬರುವದು. ಆಗ ಭೂಲೋಕದಲ್ಲಿರುವ ಎಲ್ಲಾ ಕುಲದವರು ಎದೆಬಡಕೊಳ್ಳುವರು, ಮತ್ತು ಮನುಷ್ಯಕುಮಾರನು ಬಲದಿಂದಲೂ ಬಹು ಮಹಿಮೆಯಿಂದಲೂ ಆಕಾಶದ ಮೇಘಗಳ ಮೇಲೆ ಬರುವದನ್ನು ಕಾಣುವರು.”—ಮತ್ತಾಯ 24:29, 30.
ಆದುದರಿಂದ ಮಹಾ ಸಂಕಟವು ಬೇಗನೆ ಆರಂಭವಾಗಲಿದೆಯೆಂದು ನಾವು ನಿರೀಕ್ಷಿಸಬಲ್ಲೆವು. ಅದರ ಪ್ರಥಮ ಭಾಗವು ಭೂಗೋಲದ ಸುತ್ತಲೂ ಸುಳ್ಳು ಧರ್ಮದ ಮೇಲೆ ಪ್ರತೀಕಾರವಾಗಿರುವುದು ಎಂದು ಇತರ ಬೈಬಲ್ ಪ್ರವಾದನೆಗಳು ಸೂಚಿಸುತ್ತವೆ. ಅನಂತರ ಒಂದು ವಿಧದ ಆಕಾಶಸ್ಥ ಉತ್ಪಾತವನ್ನು ಒಳಗೂಡಿಸಿ, ಈಗತಾನೇ ಉದ್ಧರಿಸಲ್ಪಟ್ಟಿರುವ ದಿಗಿಲುಗೊಳಿಸುವ ಬೆಳವಣಿಗೆಗಳು ಬರುವವು. ಕೋಟಿಗಟ್ಟಲೆ ಜನರ ಮೇಲೆ ಪರಿಣಾಮವೇನಾಗಿರುವುದು?
ಒಳ್ಳೇದು, ಯೇಸುವಿನ ಉತ್ತರದ ಒಂದು ಸಮಾನಾಂತರ ವರದಿಯನ್ನು, ಎಲ್ಲಿ ನಾವು ವಿಶದೀಕರಿಸಲ್ಪಟ್ಟ ಪ್ರವಾದನಾತ್ಮಕ ಹೇಳಿಕೆಗಳನ್ನು ಕಂಡುಕೊಳ್ಳುತ್ತೇವೊ ಅದನ್ನು ಪರಿಗಣಿಸಿರಿ:
“ಇದಲ್ಲದೆ ಸೂರ್ಯ ಚಂದ್ರ ನಕ್ಷತ್ರಗಳಲ್ಲಿ ಸೂಚನೆಗಳು ತೋರುವವು. ಭೂಮಿಯ ಮೇಲೆ ಸಮುದ್ರದ ಮತ್ತು ತೆರೆಗಳ ಘೋಷದ ನಿಮಿತ್ತವಾಗಿ ಜನಗಳಿಗೆ ದಿಕ್ಕು ಕಾಣದೆ ಸಂಕಟವು ಉಂಟಾಗುವದು. ಆಕಾಶದ ಶಕ್ತಿಗಳು ಕದಲುವದರಿಂದ ಮನುಷ್ಯರು ಭಯಹಿಡಿದವರಾಗಿ ಲೋಕಕ್ಕೆ ಏನು ಬರುವದೋ ಎಂದು ಎದುರುನೋಡುತ್ತಾ ಪ್ರಾಣಹೋದಂತಾಗುವರು.”—ಲೂಕ 21:25, 26.
ಅದು ನಮ್ಮ ಮುಂದೆ ಇದೆ. ಆದರೆ ಆಗ ಎಲ್ಲಾ ಮನುಷ್ಯರು ತಮ್ಮನ್ನು ಮೂರ್ಛೆಹೋಗುವಂತೆ ಮಾಡುವ ಅಂತಹ ಭಯದಲ್ಲಿ ಇರುವುದಿಲ್ಲ. ವ್ಯತಿರಿಕ್ತವಾಗಿ, ಯೇಸು ಹೇಳಿದ್ದು: “ಆದರೆ ಇವು ಸಂಭವಿಸುವದಕ್ಕೆ ತೊಡಗುವಾಗ ಮೇಲಕ್ಕೆ ನೋಡಿರಿ, ನಿಮ್ಮ ತಲೆ ಎತ್ತಿರಿ; ನಿಮ್ಮ ಬಿಡುಗಡೆಯು ಸಮೀಪವಾಗಿದೆ.”—ಲೂಕ 21:28.
ಅವನು ಆ ಉತ್ತೇಜಕ ಮಾತುಗಳನ್ನು ತನ್ನ ನಿಜ ಹಿಂಬಾಲಕರಿಗೆ ಸಂಬೋಧಿಸಿದನು. ಭಯದಿಂದ ಮೂರ್ಛೆಹೋಗುವ ಅಥವಾ ನಿಸ್ಸತ್ವಗೊಳ್ಳುವ ಬದಲಿಗೆ, ಮಹಾ ಸಂಕಟದ ಪರಮಾವಧಿಯು ಸನ್ನಿಹಿತವಿದೆಯೆಂದು ತಿಳಿದರೂ, ತಮ್ಮ ತಲೆಗಳನ್ನು ಭಯವಿಲ್ಲದೆ ಎತ್ತಲು ಅವರಿಗೆ ಕಾರಣವಿರುವುದು. ಯಾಕೆ ಭಯವಿಲ್ಲ?
ಯಾಕಂದರೆ ಈ ಇಡೀ “ಮಹಾ ಸಂಕಟ”ವನ್ನು ಪಾರಾಗುವವರು ಇರುವರೆಂದು ಬೈಬಲ್ ಸ್ಪಷ್ಟವಾಗಿಗಿ ಹೇಳುತ್ತದೆ. (ಪ್ರಕಟನೆ 7:14) ಪಾರಾಗುವವರಲ್ಲಿ ನಾವು ಸೇರಿರುವುದಾದರೆ, ದೇವರ ಕೈಯಿಂದ ನಾವು ಅಸಮಾಂತರ ಆಶೀರ್ವಾದಗಳನ್ನು ಅನುಭೋಗಿಸಸಾಧ್ಯವಿದೆಯೆಂದು ಇದನ್ನು ವಾಗ್ದಾನಿಸುವ ಆ ವರದಿಯು ಹೇಳುತ್ತದೆ. ಯೇಸು “ಕುರುಬನಂತಿದ್ದು ಜೀವಜಲದ ಒರತೆಗಳ ಬಳಿಗೆ ನಡಿಸುತ್ತಾನೆ. ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು” ಎಂಬ ಆಶ್ವಾಸನೆಯೊಂದಿಗೆ ಅದು ಸಮಾಪ್ತಿಗೊಳ್ಳುತ್ತದೆ.—ಪ್ರಕಟನೆ 7:16, 17.
ಅಂತಹ ಆಶೀರ್ವಾದಗಳನ್ನು ಅನುಭೋಗಿಸುವವರಿಗೆ—ಮತ್ತು ನಾವು ಒಳಗೂಡಿಸಲ್ಪಡಸಾಧ್ಯವಿದೆ—ಇಂದು ಜನರನ್ನು ಬಾಧಿಸುವ ಭಯಗಳಿರವು. ಆದರೂ, ಅದು ಅವರಿಗೆ ಸಂಪೂರ್ಣವಾಗಿ ಯಾವ ಭಯವೂ ಇರದೆಂದು ಅದರ ಅರ್ಥವಲ್ಲ, ಏಕೆಂದರೆ ಒಂದು ಒಳ್ಳೆಯ ಹಾಗೂ ಸ್ವಸ್ಥ ಭಯವಿದೆಯೆಂದು ಬೈಬಲ್ ತೋರಿಸುತ್ತದೆ. ಇದು ಏನು ಮತ್ತು ಅದು ನಮ್ಮನ್ನು ಹೇಗೆ ಪ್ರಭಾವಿಸಬೇಕೆಂಬುದನ್ನು ಮುಂದಿನ ಲೇಖನವು ಪರಿಗಣಿಸಲಿರುವುದು.
[ಪುಟ 8 ರಲ್ಲಿರುವ ಚಿತ್ರ]
ಯೆಹೋವನ ಆರಾಧಕರು ಸಮೀಪಿಸುತ್ತಿರುವ ಹೊಸ ಲೋಕವನ್ನು ಸಂತೋಷದಿಂದ ಎದುರುನೋಡುತ್ತಾರೆ
[ಪುಟ 7 ರಲ್ಲಿರುವ ಚಿತ್ರ ಕೃಪೆ]
Pollution: Photo: Godo-Foto; rocket: U.S. Army photo; trees burning: Richard Bierregaard, Smithsonian Institution