ರಾಜ್ಯ ಘೋಷಕರು ವರದಿ ಮಾಡುತ್ತಾರೆ
‘ಲೋಕದಲ್ಲಿ ಜ್ಯೋತಿರ್ಮಂಡಲಗಳಂತೆ ಹೊಳೆಯುವುದು’
ಯೆಹೋವನ ಸಾಕ್ಷಿಗಳು ರಕ್ತ ಪೂರಣಗಳನ್ನು ಸ್ವೀಕರಿಸದಿರುವ ಕಾರಣ ಅವರು ಅದ್ವೀತಿಯರಾಗಿ ಎದ್ದು ನಿಲ್ಲುತ್ತಾರೆ ಮತ್ತು ಅನೇಕಸಲ ಅಪಪ್ರಚಾರವನ್ನು ಪಡೆಯುತ್ತಾರೆ. ಈ ನಿಲುವಾದರೋ, ಬೈಬಲಿನ ಮೇಲೆ ದೃಢವಾಗಿ ಆಧರಿತವಾಗಿದೆ. ದೇವರ ದೃಷ್ಟಿಯಲ್ಲಿ ರಕ್ತವು ಅಮೂಲ್ಯವಾಗಿರುವ ಕಾರಣದಿಂದ, ರಕ್ತದ ದುರುಪಯೋಗವನ್ನು ಆತನು ಖಂಡಿಸುತ್ತಾನೆಂದು ಅದು ತೋರಿಸುತ್ತದೆ. (ಆದಿಕಾಂಡ 9:3, 4; ಯಾಜಕಕಾಂಡ 17:14) ಈ ವಿಷಯದ ಮೇಲೆ ಶಾಸ್ತ್ರಗಳನ್ನು ಪರಿಶೀಲಿಸಿದ ಪರಿಣಾಮವಾಗಿ, ‘ರಕ್ತವನ್ನು ವಿಸರ್ಜಿಸುವ’ ಬೈಬಲ್ ನಿರ್ದೇಶನವು, ರಕ್ತವನ್ನು ಒಳಸೇರಿಸುವ ಆಧುನಿಕ ಪದ್ಧತಿಯನ್ನು ಸ್ಪಷ್ಟವಾಗಿ ಸೇರಿಸುತ್ತದೆಂಬ ತೀರ್ಮಾನಕ್ಕೆ ಯೆಹೋವನ ಸಾಕ್ಷಿಗಳು ಬರುತ್ತಾರೆ.—ಅ. ಕೃತ್ಯಗಳು 15:19, 20, 28, 29.
ಇತ್ತೀಚಿನ ವರ್ಷಗಳಲ್ಲಿ ವೈದ್ಯಕೀಯ ಸಮುದಾಯದ ಸದಸ್ಯರು ಹಾಗೂ ಕೆಲವು ರಾಷ್ಟ್ರಗಳಲ್ಲಿನ ನ್ಯಾಯಾಲಯಗಳು, ಈ ವಿವಾದಾಂಶದ ಮೇಲೆ ಯೆಹೋವನ ಸಾಕ್ಷಿಗಳನ್ನು ಬೆಂಬಲಿಸಲು ಆರಂಭಿಸಿದ್ದಾರೆ. ಉದಾಹರಣೆಗಾಗಿ, ಡೆನ್ಮಾರ್ಕ್ನಲ್ಲಿ ರಕ್ತದ ಕುರಿತಾದ ಬೈಬಲಿನ ದೃಷ್ಟಿಕೋನದೊಂದಿಗೆ ಪರಿಚಿತಳಾಗಿದ್ದ ಒಬ್ಬ ಯುವ ತಾಯಿ ಒಂದು ವಾಹನ ಅಪಘಾತದ ಪರಿಣಾಮವಾಗಿ ಸತ್ತಳು. ರಕ್ತ ಪೂರಣವೊಂದನ್ನು ಸ್ವೀಕರಿಸುವ ಅವಳ ನಿರಾಕರಣೆಯ ಕಾರಣದಿಂದಾಗಿ, ಅವಳ ವೈದ್ಯರು ಯೆಹೋವನ ಸಾಕ್ಷಿಗಳ ವಿರುದ್ಧ ವಾರ್ತಾಮಾಧ್ಯಮದ ಮೂಲಕ ಒಂದು ತಿಂಗಳಿನಷ್ಟು ದೀರ್ಘಕಾಲದ ವೈರತ್ವದ ಚಳುವಳಿಯನ್ನು ಕೆರಳಿಸಿದರು.
ಆ ಯುವ ಹೆಂಗಸಿನ ಹೆತ್ತವರು ಒಂದು ತನಿಖೆಯನ್ನು ವಿನಂತಿಸಿದರು, ಮತ್ತು ಎಪ್ರಿಲ್ 1994ರಂದು ಡೆನ್ಮಾರ್ಕ್ಸ್ ಕಮಿಷನ್ ಆಫ್ ಪೇಷಂಟ್ಸ್ ಕಂಪ್ಲೇಂಟ್ಸ್ನಿಂದ ಒಂದು ನಿರ್ಣಯವು ಪ್ರಕಟಿಸಲ್ಪಟ್ಟಿತು. ರೋಗಿಯು ಸತ್ತದ್ದು ಅವಳು ರಕ್ತವನ್ನು ನಿರಾಕರಿಸಿದ ಕಾರಣದಿಂದಲ್ಲ, ಬದಲಾಗಿ ವೈದ್ಯಕೀಯ ಅಕಾರ್ಯದಿಂದ ಎಂದು ಅದು ತಿಳಿಸಿತು. ಆ ನಿರ್ಣಯವು ವೈದ್ಯ ನ್ಯಾಯಶಾಸ್ತ್ರ ಔಷಧದ ಬೋರ್ಡಿನಿಂದ ಮತ್ತು ಆರೋಗ್ಯಾಧಿಕಾರಿಗಳಿಂದ ನಡೆಸಲ್ಪಟ್ಟ ಪರಿಶೋಧನೆಗಳ ಮೇಲೆ ಆಧರಿತವಾಗಿತ್ತು. ಡೆನ್ಮಾರ್ಕ್ನಲ್ಲಿರುವ ಎಲ್ಲಾ ಆರೋಗ್ಯಾರೈಕೆಯ ಸೌಕರ್ಯಗಳಿಗೆ ಕಳುಹಿಸಲ್ಪಟ್ಟ ಒಂದು ಪರಿಪತ್ರದಲ್ಲಿ, ನ್ಯಾಷನಲ್ ಬೋರ್ಡ್ ಆಫ್ ಹೆಲ್ತ್ ತಿಳಿಸಿದ್ದೇನೆಂದರೆ, ರಕ್ತವನ್ನು ಸ್ವೀಕರಿಸುವ ಅವರ ನಿರಾಕರಣೆಯನ್ನು ಗಣನೆಗೆ ತೆಗೆದುಕೊಳ್ಳುತ್ತಾ, ಯೆಹೋವನ ಸಾಕ್ಷಿಗಳಿಗೆ ಲಭ್ಯವಿರುವ ಪರ್ಯಾಯ ಚಿಕಿತ್ಸೆಯಲ್ಲಿ ಅತ್ಯುತ್ತಮವಾದುದನ್ನು ನೀಡುವ ಒಂದು ಹಂಗು ವೈದ್ಯರಿಗಿದೆ.
ಇನ್ನೊಂದು ವಿದ್ಯಮಾನವು, ಲ್ಯುಕೇಮಿಯದಿಂದಾಗಿ ಸತ್ತ, 15 ವರ್ಷ ಪ್ರಾಯದ ಡಾನ್ನನ್ನು ಒಳಗೊಂಡಿತು. ಈ ವಿದ್ಯಮಾನದಲ್ಲಿ ಒಂದು ರಕ್ತ ಪೂರಣವನ್ನು ತಿರಸ್ಕರಿಸುವ ಡಾನ್ನ ಧೀರ ನಿರ್ಣಯವನ್ನು ವೈದ್ಯರು ಗೌರವಿಸಿದರು. ಇದು, ಡಾನ್ನ ಮರಣಕ್ಕಾಗಿ ವಾರ್ತಾ ಮಾಧ್ಯಮವು ವೈದ್ಯರನ್ನು ದೂಷಿಸಿದ ಒಂದು ವ್ಯಾಪಕವಾದ ಪ್ರೆಸ್ ಚಳುವಳಿಯಲ್ಲಿ ಪರಿಣಮಿಸಿತು. ಆದಾಗಲೂ, ಅನೇಕರು ಆ ನಕಾರಾತ್ಮಕ ಪ್ರಚಾರದೊಂದಿಗೆ ಸಮ್ಮತಿಸಲಿಲ್ಲ.
ಉದಾಹರಣೆಗಾಗಿ, ಡಾನ್ ಹಾಜರಾಗುತ್ತಿದ್ದ ಶಾಲೆಯ ಮುಖ್ಯೋಪಾಧ್ಯಾಯರು ಶವಸಂಸ್ಕಾರಕ್ಕಾಗಿ ರಾಜ್ಯ ಸಭಾಗೃಹದಲ್ಲಿ ಉಪಸ್ಥಿತರಿದ್ದರು. ಡಾನ್ನ ಸಾವಿನ ಕುರಿತಾದ ಅನ್ಯಾಯದ ವಾರ್ತಾ ಪ್ರಸಾರವ್ಯಾಪ್ತಿಯ ಕುರಿತಾಗಿ ಅವರು ಅಸಮಾಧಾನವನ್ನು ವ್ಯಕ್ತಪಡಿಸಿದರು. ಯೆಹೋವನ ಸಾಕ್ಷಿಗಳ ಕುರಿತಾದ ಹಲವಾರು ಪ್ರಶ್ನೆಗಳೊಂದಿಗೆ ಒಬ್ಬ ಸಾಕ್ಷಿ ಸಹಕರ್ಮಿಯನ್ನು ಸಮೀಪಿಸಿದ ನಂತರ, ಅವರು ಯೆಹೋವನ ಸಾಕ್ಷಿಗಳು—ಆ ಹೆಸರಿನ ಹಿಂದಿರುವ ಸಂಸ್ಥೆ (ಇಂಗ್ಲಿಷ್) ಎಂಬ ವಿಡಿಯೊದ ಒಂದು ಪ್ರತಿಯನ್ನು ಸ್ವೀಕರಿಸಿದರು. ಆ ವಿಡಿಯೊ ಅವರನ್ನು ಎಷ್ಟು ಪ್ರಭಾವಿಸಿತೆಂದರೆ ಶಾಲೆಯಲ್ಲಿರುವ ಎಲ್ಲಾ ಶಿಕ್ಷಕರು ಅದನ್ನು ವೀಕ್ಷಿಸುವಂತೆ ಅವರು ಏರ್ಪಡಿಸಿದರು. ಅನಂತರ, ವಿಡಿಯೊವನ್ನು ಎಲ್ಲಾ ವಿದ್ಯಾರ್ಥಿಗಳಿಗೆ, ಪ್ರತಿಯೊಂದು ತರಗತಿಗೆ ತೋರಿಸಲಾಯಿತು.
ಡಾನ್ನ ವೈದ್ಯರು ಪಡೆದಂತಹ ಅಪಪ್ರಚಾರವನ್ನು ಡೆನ್ಮಾರ್ಕಿನ ಆರೋಗ್ಯ ಮಂತ್ರಿಯೂ ಅಸಮ್ಮತಿಸಿದರು. ಡಾನ್ನ ಪ್ರೌಢ ನಿರ್ಣಯ ಮತ್ತು ದೃಢ ಆಧಾರದ ನಂಬಿಕೆಯನ್ನು ಗೌರವಿಸುವುದರಲ್ಲಿ ವೈದ್ಯರು ಸರಿಯಾದ ಸಂಗತಿಯನ್ನು ಮಾಡಿದ್ದರೆಂದು ಅವರು ತಿಳಿಸಿದರು.
ದೇವರ ನಿಯಮಗಳಿಗೆ ವಿಧೇಯತೆಯನ್ನು ಸಲ್ಲಿಸುವ ಲಕ್ಷಾಂತರ ಮಂದಿ ರಾಜ್ಯ ಘೋಷಕರಿದ್ದಾರೆ. ಅವರ ವಿಧೇಯತೆಯಿಂದಾಗಿ, ಅವರು ‘ಲೋಕದಲ್ಲಿ ಜ್ಯೋತಿರ್ಮಂಡಲಗಳಂತೆ ಹೊಳೆಯುತ್ತಾ’ ಎದ್ದು ಕಾಣುತ್ತಾರೆ.—ಫಿಲಿಪ್ಪಿ 2:12, 16.