ದೇವರು ನಿಮ್ಮ ಕುರಿತಾಗಿ ಕಾಳಜಿ ವಹಿಸುತ್ತಾನೆ
ತನ್ನ 40ಗಳ ಕೊನೆಯ ಭಾಗದಲ್ಲಿರುವ ಒಬ್ಬ ಕ್ರೈಸ್ತ ಸ್ತ್ರೀಯಾದ ಮೇರಿ, ತನ್ನ ಜೀವಿತದಲ್ಲಿ ತುಂಬ ಕಷ್ಟವನ್ನು ಅನುಭವಿಸಿದ್ದಾಳೆ. ಅವಳ ಗಂಡನ ವ್ಯಭಿಚಾರವು, ಒಂದು ದಶಕಕ್ಕಿಂತಲೂ ಹಿಂದೆ ವಿವಾಹ ವಿಚ್ಛೇದನಕ್ಕೆ ನಡಿಸಿತು. ತದನಂತರ, ತನ್ನ ನಾಲ್ಕು ಮಕ್ಕಳಿಗೆ ಒಬ್ಬ ಒಂಟಿ ಹೆತ್ತವಳೋಪಾದಿ ತನ್ನ ಪಾತ್ರವನ್ನು ಪೂರೈಸಲು ಮೇರಿ ಹೆಣಗಾಡಿದಳು. ಆದರೆ ಅವಳು ಇನ್ನೂ ಏಕಾಂಗಿಯಾಗಿದ್ದಾಳೆ, ಮತ್ತು ಕೆಲವೊಮ್ಮೆ ಆ ಒಂಟಿತನವು ಸಹಿಸಲಸಾಧ್ಯವಾದದ್ದಾಗಿ ತೋರುತ್ತದೆ. ‘ದೇವರು ನನ್ನ ಕುರಿತಾಗಿ ಅಥವಾ ತಂದೆಯಿಲ್ಲದ ನನ್ನ ಮಕ್ಕಳ ಕುರಿತಾಗಿ ಕಾಳಜಿ ವಹಿಸುವುದಿಲ್ಲವೆಂಬುದನ್ನು ಇದು ಅರ್ಥೈಸುತ್ತದೊ?’ ಎಂದು ಮೇರಿ ಕುತೂಹಲಪಡುತ್ತಾಳೆ.
ನೀವು ತದ್ರೀತಿಯ ಸಂಕಷ್ಟವನ್ನು ಅನುಭವಿಸಿರಲಿ ಇಲ್ಲದಿರಲಿ, ನಿಶ್ಚಯವಾಗಿಯೂ ನೀವು ಮೇರಿಯ ಭಾವನೆಗಳಿಗೆ ಸಹಾನುಭೂತಿಯನ್ನು ತೋರಿಸಸಾಧ್ಯವಿದೆ. ನಾವೆಲ್ಲರೂ ಕಷ್ಟಕರ ಪರಿಸ್ಥಿತಿಗಳನ್ನು ತಾಳಿಕೊಂಡಿದ್ದೇವೆ, ಮತ್ತು ಯೆಹೋವನು ನಮ್ಮ ಪರವಾಗಿ ಯಾವಾಗ ಮತ್ತು ಹೇಗೆ ಕ್ರಿಯೆಗೈಯುವನೆಂದು ನಾವು ಕುತೂಹಲಪಟ್ಟಿರಬಹುದು. ಈ ಅನುಭವಗಳಲ್ಲಿ ಕೆಲವು, ದೇವರ ನಿಯಮಗಳ ನಮ್ಮ ಪಾಲನೆಯ ಒಂದು ನೇರವಾದ ಫಲಿತಾಂಶವಾಗಿವೆ. (ಮತ್ತಾಯ 10:16-18; ಅ. ಕೃತ್ಯಗಳು 5:29) ಇತರ ಅನುಭವಗಳು ನಾವು ಸೈತಾನನಿಂದ ಆಳಲ್ಪಡುವ ಲೋಕವೊಂದರಲ್ಲಿ ಜೀವಿಸುತ್ತಿರುವ ಅಪರಿಪೂರ್ಣ ಮಾನವರಾಗಿರುವ ಫಲಿತಾಂಶವಾಗಿವೆ. (1 ಯೋಹಾನ 5:19) ಅಪೊಸ್ತಲ ಪೌಲನು ಬರೆದುದು: “ಜಗತ್ತೆಲ್ಲಾ ಇಂದಿನ ವರೆಗೂ ನರಳುತ್ತಾ ಪ್ರಸವವೇದನೆಪಡುತ್ತಾ ಇರುತ್ತದೆ.”—ರೋಮಾಪುರ 8:22.
ಆದರೂ, ನೀವು ಒಂದು ಕಠಿನ ಸಂಕಟವನ್ನು ಎದುರಿಸುತ್ತೀರಿ ಎಂಬ ವಾಸ್ತವಾಂಶವು, ಯೆಹೋವನು ನಿಮ್ಮನ್ನು ತೊರೆದಿದ್ದಾನೆ ಅಥವಾ ನಿಮ್ಮ ಹಿತಚಿಂತನೆಯಲ್ಲಿ ಆಸಕ್ತನಾಗಿಲ್ಲವೆಂಬುದನ್ನು ಅರ್ಥೈಸುವುದಿಲ್ಲ. ನೀವು ಇದರ ಕುರಿತಾಗಿ ಹೇಗೆ ನಿಶ್ಚಿತರಾಗಿರಬಲ್ಲಿರಿ? ದೇವರು ನಿಮ್ಮ ಕುರಿತಾಗಿ ಕಾಳಜಿ ವಹಿಸುತ್ತಾನೆಂಬುದನ್ನು ಯಾವುದು ತೋರಿಸುತ್ತದೆ?
ಒಂದು ಪುರಾತನ ಮಾದರಿ
ವ್ಯಕ್ತಿಗಳೋಪಾದಿ ಜನರಿಗಾಗಿರುವ ಯೆಹೋವನ ಕಾಳಜಿಯ ಕುರಿತಾಗಿ ಬೈಬಲ್ ಸ್ಪಷ್ಟವಾದ ರುಜುವಾತನ್ನು ಒದಗಿಸುತ್ತದೆ. ದಾವೀದನನ್ನು ಪರಿಗಣಿಸಿರಿ. ಅವನು “ತನ್ನ ಹೃದಯಕ್ಕೆ ಒಗ್ಗುವ ಒಬ್ಬ ಪುರುಷ”ನಾಗಿರುವುದನ್ನು ಕಂಡುಕೊಳ್ಳುತ್ತಾ, ಯೆಹೋವನು ಈ ಯುವ ಕುರುಬನಲ್ಲಿ ವೈಯಕ್ತಿಕ ಆಸಕ್ತಿಯನ್ನು ಹೊಂದಿದ್ದನು. (1 ಸಮುವೇಲ 13:14, NW) ಅನಂತರ, ದಾವೀದನು ಅರಸನಾಗಿ ಆಳಿದಾಗ, ಯೆಹೋವನು ಆತನಿಗೆ ವಚನವಿತ್ತದ್ದು: “ನೀನು ಹೋದಲ್ಲೆಲ್ಲಾ ನಿನ್ನ ಸಂಗಡ ಇರುವೆನು.”—2 ಸಮುವೇಲ 7:9, NW.
ಯಾವುದೇ ಕಷ್ಟದೆಸೆಯಿಂದ ಮುಕ್ತವಾದ ಒಂದು “ಮಂತ್ರರಕ್ಷಿತ”ವಾದ ಜೀವನವನ್ನು ದಾವೀದನು ನಡಿಸಿದನೆಂದು ಇದು ಅರ್ಥೈಸುತ್ತದೊ? ಇಲ್ಲ, ದಾವೀದನು ತನ್ನ ಆಳಿಕೆಯ ಮುಂಚೆಯೂ ತನ್ನ ಆಳಿಕೆಯ ಸಮಯದಲ್ಲೂ ಕಠಿನವಾದ ಸಂಕಷ್ಟಗಳನ್ನು ಎದುರಿಸಿದನು. ರಾಜನಾಗುವ ಮುಂಚೆ ಹಲವಾರು ವರ್ಷಗಳ ವರೆಗೆ, ಕೊಲ್ಲುವ ದೃಢಸಂಕಲ್ಪವಿದ್ದ ರಾಜ ಸೌಲನಿಂದ ಅವನು ನಿರಂತರವಾಗಿ ಬೆನ್ನಟ್ಟಲ್ಪಟ್ಟಿದ್ದನು. ತನ್ನ ಜೀವಿತದ ಈ ಅವಧಿಯಲ್ಲಿ ದಾವೀದನು ಬರೆದುದು: “ಸಿಂಹಗಳ ಮಧ್ಯದಲ್ಲಿ ಸಿಕ್ಕಿದ್ದೇನೆ; . . . ಮನುಷ್ಯರ ನಡುವೆ ಬಿದ್ದಿದ್ದೇನೆ. ಅವರ ಹಲ್ಲುಗಳು ಶಸ್ತ್ರಬಾಣಗಳು.”—ಕೀರ್ತನೆ 57:4.
ಆದರೂ, ಈ ಎಲ್ಲಾ ಸಂಕಷ್ಟದಾದ್ಯಂತ ದಾವೀದನು ಯೆಹೋವನ ವೈಯಕ್ತಿಕ ಕಾಳಜಿಯ ಕುರಿತಾಗಿ ಮನವರಿಕೆಯುಳ್ಳವನಾಗಿದ್ದನು. “ನಾನು ದೇಶಭ್ರಷ್ಟನಾಗಿ ಅಲೆದಾಡಿದ್ದನ್ನು ನೀನೇ ಬಲ್ಲೆ [“ವರದಿಸಿದ್ದೀ,” NW]” ಎಂದು ಅವನು ಯೆಹೋವನಿಗೆ ಒಂದು ಪ್ರಾರ್ಥನೆಯಲ್ಲಿ ಘೋಷಿಸಿದನು. ಹೌದು, ದಾವೀದನಿಗೆ ಅದು, ಯೆಹೋವನು ಆ ಇಡೀ ವಿಷಮ ಪರೀಕ್ಷೆಯನ್ನು ದಾಖಲಿಸಿದಂತೆ ಇತ್ತು. ಅನಂತರ ದಾವೀದನು ಕೂಡಿಸಿದ್ದು: “ನನ್ನ ಕಣ್ಣೀರನ್ನು ದಯವಿಟ್ಟು ನಿನ್ನ ಚರ್ಮದ ಬುದ್ದಲಿಯಲ್ಲಿ ಹಾಕು. ಅವು ನಿನ್ನ ಪುಸ್ತಕದಲ್ಲಿಲ್ಲವೊ?”a (ಕೀರ್ತನೆ 56:8, NW) ಯೆಹೋವನಿಗೆ ಪರಿಸ್ಥಿತಿಯ ಕುರಿತಾಗಿ ಮಾತ್ರವಲ್ಲ, ಬದಲಿಗೆ ಅದರ ಭಾವನಾತ್ಮಕ ಹೊಡೆತದ ಕುರಿತಾಗಿಯೂ ಅರಿವಿತ್ತು ಎಂಬುದಾಗಿ ಈ ದೃಷ್ಟಾಂತದಲ್ಲಿ ದಾವೀದನು ಭರವಸೆಯನ್ನು ವ್ಯಕ್ತಪಡಿಸಿದನು.
ತನ್ನ ಜೀವಿತದ ಅಂತ್ಯದ ಸಮಯದಲ್ಲಿ, ದಾವೀದನು ವೈಯಕ್ತಿಕ ಅನುಭವದಿಂದ ಬರೆಯಶಕ್ತನಾಗಿದ್ದನು: “ಸತ್ಪುರುಷನ ಗತಿಸ್ಥಾಪನೆಯು ಯೆಹೋವನಿಂದಲೇ ಆಗಿದೆ, ಆತನು ಅವನ ಪ್ರವರ್ತನೆಯನ್ನು ಮೆಚ್ಚುತ್ತಾನೆ. ಅವನು ಕೆಳಗೆ ಬಿದ್ದರೂ ಏಳದೆ ಹೋಗುವದಿಲ್ಲ; ಯೆಹೋವನು ಅವನನ್ನು ಕೈಹಿಡಿದು ಉದ್ಧಾರ ಮಾಡುವನು.” (ಕೀರ್ತನೆ 37:23, 24) ನಿಮ್ಮ ಸಂಕಟಗಳು ಪಟ್ಟುಹಿಡಿದವುಗಳು ಮತ್ತು ಮುಂದುವರಿಯುತ್ತಿರುವವುಗಳು ಆಗಿರುವುದಾದರೂ, ಯೆಹೋವನು ನಿಮ್ಮ ತಾಳ್ಮೆಯನ್ನು ಗಮನಿಸಿ, ಅದನ್ನು ಬೆಲೆಯುಳ್ಳದ್ದೆಂದೆಣಿಸುತ್ತಾನೆಂಬ ವಿಷಯದಲ್ಲಿ ನೀವು ಭರವಸೆಯಿಂದಿರಬಲ್ಲಿರಿ. ಪೌಲನು ಬರೆದುದು: “ನೀವು ದೇವಜನರಿಗೆ ಉಪಚಾರ ಮಾಡಿದಿರಿ, ಇನ್ನೂ ಮಾಡುತ್ತಾ ಇದ್ದೀರಿ. ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.”—ಇಬ್ರಿಯ 6:10.
ಇನ್ನೂ ಹೆಚ್ಚಾಗಿ, ನಿಮ್ಮ ಮಾರ್ಗದಲ್ಲಿ ಇಡಲ್ಪಡುವ ಯಾವುದೇ ಅಡಚಣೆಯನ್ನು ತಾಳಿಕೊಳ್ಳಲು ನಿಮಗೆ ಬಲವನ್ನು ಕೊಡುವ ಮೂಲಕ ಯೆಹೋವನು ನಿಮ್ಮ ಪರವಾಗಿ ಕ್ರಿಯೆಗೈಯಬಲ್ಲನು. “ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕವಿದ್ದರೂ ಯೆಹೋವನು ಅವೆಲ್ಲವುಗಳಿಂದ ಅವನನ್ನು ಬಿಡಿಸುತ್ತಾನೆ” ಎಂದು ದಾವೀದನು ಬರೆದನು. (ಕೀರ್ತನೆ 34:19) ನಿಜವಾಗಿಯೂ, “ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸ”ಲಿಕ್ಕಾಗಿ, ಯೆಹೋವನ ಕಣ್ಣುಗಳು “ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ” ಇವೆಯೆಂದು ಬೈಬಲು ನಮಗೆ ಹೇಳುತ್ತದೆ.—2 ಪೂರ್ವಕಾಲವೃತ್ತಾಂತ 16:9.
ಯೆಹೋವನು ನಿಮ್ಮನ್ನು ಸೆಳೆದಿದ್ದಾನೆ
ಯೆಹೋವನ ವೈಯಕ್ತಿಕ ಕಾಳಜಿಯ ಹೆಚ್ಚಿನ ಪುರಾವೆಯನ್ನು ಯೇಸುವಿನ ಮಾತುಗಳಲ್ಲಿ ಕಂಡುಕೊಳ್ಳಸಾಧ್ಯವಿದೆ. “ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಎಳೆದ ಹೊರತು ಯಾವನೂ ನನ್ನ ಬಳಿಗೆ ಬರಲಾರನು” ಎಂದು ಅವನು ಹೇಳಿದನು. (ಯೋಹಾನ 6:44) ಹೌದು, ಯೆಹೋವನು ಜನರಿಗೆ, ಕ್ರಿಸ್ತನ ಯಜ್ಞದ ಲಾಭಗಳ ಪ್ರಯೋಜನವನ್ನು ಪಡೆದುಕೊಳ್ಳಲು ವ್ಯಕ್ತಿಪರವಾಗಿ ಸಹಾಯ ಮಾಡುತ್ತಾನೆ. ಹೇಗೆ? ಒಂದು ದೊಡ್ಡ ಪ್ರಮಾಣದಲ್ಲಿ, ಅದು ರಾಜ್ಯ ಸಾರುವಿಕೆಯ ಕೆಲಸದ ಮುಖಾಂತರವಾಗಿದೆ. ನಿಜ, ಇದು “ಎಲ್ಲಾ ಜನಾಂಗಗಳಿಗೆ ಒಂದು ಸಾಕ್ಷಿ”ಯಾಗಿ ಕಾರ್ಯನಡಿಸುತ್ತದೆ, ಆದರೂ ಅದು ಜನರನ್ನು ಒಂದು ವ್ಯಕ್ತಿಗತವಾದ ಮಟ್ಟದಲ್ಲಿ ತಲಪುತ್ತದೆ. ಸುವಾರ್ತೆಯ ಸಂದೇಶಕ್ಕೆ ನೀವು ಕಿವಿಗೊಟ್ಟು ಪ್ರತಿಕ್ರಿಯಿಸುತ್ತಿದ್ದೀರಿ ಎಂಬ ವಾಸ್ತವಾಂಶವು, ನಿಮಗಾಗಿರುವ ಯೆಹೋವನ ವೈಯಕ್ತಿಕ ಚಿಂತೆಯ ಪುರಾವೆಯಾಗಿದೆ.—ಮತ್ತಾಯ 24:14.
ಪವಿತ್ರಾತ್ಮದ ಮೂಲಕ ಯೆಹೋವನು ವ್ಯಕ್ತಿಗಳನ್ನು ತನ್ನ ಪುತ್ರನ ಕಡೆಗೆ ಮತ್ತು ನಿತ್ಯ ಜೀವದ ನಿರೀಕ್ಷೆಯ ಕಡೆಗೆ ಸಳೆಯುತ್ತಾನೆ. ಇದು ಪ್ರತಿಯೊಬ್ಬನಿಗೆ ಯಾವುದೇ ಅಂತರ್ಗತ ಸೀಮಿತಗಳು ಮತ್ತು ಅಪರಿಪೂರ್ಣತೆಗಳ ಹೊರತೂ ಆತ್ಮಿಕ ಸತ್ಯಗಳನ್ನು ಗ್ರಹಿಸಲು ಮತ್ತು ಅನ್ವಯಿಸಲು ಶಕ್ತನನ್ನಾಗಿ ಮಾಡುತ್ತದೆ. ನಿಜವಾಗಿಯೂ, ದೇವರ ಆತ್ಮದ ಸಹಾಯವಿಲ್ಲದೆ ಒಬ್ಬನು ದೇವರ ಉದ್ದೇಶಗಳನ್ನು ತಿಳಿಯಲಾರನು. (1 ಕೊರಿಂಥ 2:11, 12) ಪೌಲನು ಥೆಸಲೊನೀಕದವರಿಗೆ ಬರೆದಂತೆ, “ನಂಬಿಕೆಯು ಎಲ್ಲರ ಸ್ವಾಸ್ಥ್ಯವಲ್ಲ.” (2 ಥೆಸಲೊನೀಕ 3:2) ಆತನಿಂದ ಸೆಳೆಯಲ್ಪಡಲು ಸಿದ್ಧಮನಸ್ಸನ್ನು ಪ್ರದರ್ಶಿಸುವವರಿಗೆ ಮಾತ್ರ ಯೆಹೋವನು ತನ್ನ ಆತ್ಮವನ್ನು ಕೊಡುತ್ತಾನೆ.
ಯೆಹೋವನು ಜನರನ್ನು ಸೆಳೆಯುತ್ತಾನೆ ಯಾಕೆಂದರೆ ಆತನು ಅವರನ್ನು ವ್ಯಕ್ತಿಗತವಾಗಿ ಪ್ರೀತಿಸುತ್ತಾನೆ ಮತ್ತು ಅವರು ರಕ್ಷಣೆಯನ್ನು ಗಳಿಸಬೇಕೆಂದು ಬಯಸುತ್ತಾನೆ. ಯೆಹೋವನ ವೈಯಕ್ತಿಕ ಕಾಳಜಿಯ ಎಂಥ ದೃಢವಾದ ಸಾಕ್ಷ್ಯ! ಯೇಸು ಹೇಳಿದ್ದು: “ಹಾಗೆಯೇ ಈ ಚಿಕ್ಕವರಲ್ಲಿ ಒಬ್ಬನಾದರೂ ಕೆಟ್ಟುಹೋಗುವದು ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಲ್ಲ.” (ಮತ್ತಾಯ 18:14) ಹೌದು, ದೇವರ ದೃಷ್ಟಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಒಬ್ಬ ಪ್ರತ್ಯೇಕ ವ್ಯಕ್ತಿಯೋಪಾದಿ ಪ್ರಾಮುಖ್ಯವಾಗಿದ್ದಾನೆ. ಆದುದರಿಂದ ಪೌಲನು ಹೀಗೆ ಬರೆಯಶಕ್ತನಾಗಿದ್ದನು: “ಆತನು ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವನು.” (ರೋಮಾಪುರ 2:6) ಮತ್ತು ಅಪೊಸ್ತಲ ಪೇತ್ರನು ಹೇಳಿದ್ದು: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ.”—ಅ. ಕೃತ್ಯಗಳು 10:34, 35.
ಯೇಸುವಿನ ಅದ್ಭುತಗಳು
ಮಾನವರಲ್ಲಿನ ದೇವರ ವೈಯಕ್ತಿಕ ಆಸಕ್ತಿಯು, ಆತನ ಪುತ್ರನಾದ ಯೇಸುವಿನಿಂದ ನಡೆಸಲ್ಪಟ್ಟ ಅದ್ಭುತಗಳಲ್ಲಿ ಮನಮುಟ್ಟುವಂತಹ ರೀತಿಯಲ್ಲಿ ಪ್ರದರ್ಶಿಸಲ್ಪಟ್ಟಿತು. ಈ ಗುಣಪಡಿಸುವಿಕೆಗಳು ಆಳವಾದ ಭಾವನೆಗಳಿಂದ ಜೊತೆಗೂಡಿದ್ದವು. (ಮಾರ್ಕ 1:40, 41) ಯೇಸು “ತಂದೆಯು ಮಾಡುವದನ್ನು ಕಂಡು ಮಗನು ಮಾಡುತ್ತಾನೆ ಹೊರತು ತನ್ನಷ್ಟಕ್ಕೆ ತಾನೇ ಏನೂ ಮಾಡಲು” ಸಾಧ್ಯವಿಲ್ಲದವನಾಗಿರುವುದರಿಂದ, ಆತನ ಕರುಣೆಯು ತನ್ನ ಸೇವಕರಲ್ಲಿ ಪ್ರತಿಯೊಬ್ಬರಿಗಾಗಿರುವ ಯೆಹೋವನ ಚಿಂತೆಯನ್ನು ಒಂದು ಮನಮುಟ್ಟುವ ರೀತಿಯಲ್ಲಿ ದೃಷ್ಟಾಂತಿಸುತ್ತದೆ.—ಯೋಹಾನ 5:19.
ಮಾರ್ಕ 7:31-37ರಲ್ಲಿ ದಾಖಲಿಸಲ್ಪಟ್ಟಿರುವ, ಯೇಸು ನಡಿಸಿದ ಒಂದು ಅದ್ಭುತಕಾರ್ಯದ ವೃತ್ತಾಂತವನ್ನು ಪರಿಗಣಿಸಿರಿ. ಇಲ್ಲಿ ಯೇಸುವು ಕಿವುಡನಾಗಿದ್ದ ಮತ್ತು ಮಾತಿನ ಅಡಚಣೆಯಿಂದ ಕಷ್ಟವನ್ನನುಭವಿಸಿದ ಪುರುಷನೊಬ್ಬನನ್ನು ಗುಣಪಡಿಸಿದನು. ಆತನು “[ಮನುಷ್ಯನನ್ನು] ಜನರ ಗುಂಪಿನಿಂದ ಒತ್ತಟ್ಟಿಗೆ ಕರಕೊಂಡು”ಹೋದನೆಂದು ಬೈಬಲ್ ತಿಳಿಸುತ್ತದೆ. ಅನಂತರ, “ಆಕಾಶದ ಕಡೆಗೆ ನೋಡಿ ನಿಟ್ಟುಸುರುಬಿಟ್ಟು ಅವನಿಗೆ—ಎಪ್ಫಥಾ ಎಂದು ಹೇಳಿದನು. ಆ ಶಬ್ದಕ್ಕೆ ತೆರೆಯಲಿ ಎಂದರ್ಥ.” (ಓರೆಅಕ್ಷರಗಳು ನಮ್ಮವು.)
ಯೇಸು ಈ ಪುರುಷನನ್ನು ಜನರ ಗುಂಪಿನಿಂದ ದೂರ ಕರೆದುಕೊಂಡು ಹೋದದ್ದೇಕೆ? ಮಾತಾಡಲಾರದ ಒಬ್ಬ ಕಿವುಡ ವ್ಯಕ್ತಿಯು ಪ್ರೇಕ್ಷಕರ ಮುಂದೆ ಸ್ವಪ್ರಜ್ಞೆಯುಳ್ಳವನಾಗುವನೆಂಬುದು ಸಂಭವನೀಯ. ಯೇಸು ಈ ಮನುಷ್ಯನ ಇರುಸು ಮುರುಸನ್ನು ಗಮನಿಸಿದ್ದಿರಬಹುದು ಮತ್ತು ಈ ಕಾರಣದಿಂದ ಅವನನ್ನು ಏಕಾಂತದಲ್ಲಿ ಗುಣಪಡಿಸಲು ಆತನು ಆರಿಸಿಕೊಂಡನು. “ಯೇಸು ಆ ಮನುಷ್ಯನನ್ನು ಕೇವಲ ಒಂದು ವಿದ್ಯಮಾನವಾಗಿ ಪರಿಗಣಿಸಲಿಲ್ಲವೆಂದು ಇಡೀ ಕಥೆಯು ನಮಗೆ ಅತಿ ವಿಶದವಾಗಿ ತೋರಿಸುತ್ತದೆ; ಆತನು ಅವನನ್ನು ಒಬ್ಬ ವ್ಯಕ್ತಿಯೋಪಾದಿ ಪರಿಗಣಿಸಿದನು. ಆ ಮನುಷ್ಯನಿಗೆ ಒಂದು ವಿಶೇಷ ಅಗತ್ಯ ಮತ್ತು ಒಂದು ವಿಶೇಷ ಸಮಸ್ಯೆಯಿತ್ತು, ಮತ್ತು ತೀರ ಕೋಮಲವಾದ ಪರಿಗಣನೆಯೊಂದಿಗೆ, ಅವನ ಭಾವನೆಗಳನ್ನು ನೋಯಿಸದಿರುವ ಮತ್ತು ಅವನು ತಿಳಿಯಸಾಧ್ಯವಿರುವ ಒಂದು ವಿಧದಲ್ಲಿ ಯೇಸು ಅವನೊಂದಿಗೆ ವ್ಯವಹರಿಸಿದನು” ಎಂಬುದಾಗಿ ಒಬ್ಬ ಬೈಬಲ್ ವಿದ್ವಾಂಸನು ಅವಲೋಕಿಸುತ್ತಾನೆ.
ಜನರಿಗಾಗಿ ಯೇಸು ವೈಯಕ್ತಿಕ ಚಿಂತೆಯನ್ನು ಹೊಂದಿದ್ದನೆಂದು ಈ ವೃತ್ತಾಂತವು ತೋರಿಸುತ್ತದೆ. ಆತನು ನಿಮ್ಮಲ್ಲಿಯೂ ಅಷ್ಟೇ ಆಸಕ್ತಿಯನ್ನು ಹೊಂದಿದ್ದಾನೆಂದು ನೀವು ನಿಶ್ಚಿತರಾಗಿರಬಲ್ಲಿರಿ. ಆತನ ಯಜ್ಞಾರ್ಪಿತ ಮರಣವು ವಿಮೋಚಿಸಲು ಶಕ್ತವಾದ ಮಾನವ ಕುಲದ ಇಡೀ ಲೋಕಕ್ಕೆ ಪ್ರೀತಿಯ ಒಂದು ಅಭಿವ್ಯಕ್ತಿಯಾಗಿತ್ತೆಂಬುದು ನಿಜ. ಆದರೂ, ಹೀಗೆ ಬರೆದ ಪೌಲನಂತೆ, ನೀವು ಆ ಕೃತ್ಯವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬಹುದು: “ಆತನು [“ದೇವಕುಮಾರನು,” NW] ನನ್ನನ್ನು ಪ್ರೀತಿಸಿ ನನಗೋಸ್ಕರ ತನ್ನನ್ನು ಒಪ್ಪಿಸಿಬಿಟ್ಟನು.” (ಗಲಾತ್ಯ 2:20, ಓರೆಅಕ್ಷರಗಳು ನಮ್ಮವು.) ಮತ್ತು ‘ತನ್ನನ್ನು ನೋಡಿದವನು ತಂದೆಯನ್ನೂ ನೋಡಿದ್ದಾನೆ’ ಎಂದು ಯೇಸು ತಿಳಿಸಿದ್ದರಿಂದ, ಯೆಹೋವನಿಗೂ ತನ್ನ ಸೇವಕರಲ್ಲಿ ಪ್ರತಿಯೊಬ್ಬರಲ್ಲಿ ಅದೇ ಆಸಕ್ತಿಯಿದೆಯೆಂದು ನಾವು ನಿಶ್ಚಿತರಾಗಿರಸಾಧ್ಯವಿದೆ.—ಯೋಹಾನ 14:9.
ಯೆಹೋವನು ಪ್ರತಿಫಲ ಕೊಡುವವನಾಗಿ ಪರಿಣಮಿಸುತ್ತಾನೆ
ದೇವರ ಜ್ಞಾನವನ್ನು ತೆಗೆದುಕೊಳ್ಳುವುದು, ಬೈಬಲಿನಲ್ಲಿ ಪ್ರಕಟಪಡಿಸಲ್ಪಟ್ಟಿರುವಂತೆ ಆತನ ವ್ಯಕ್ತಿತ್ವದ ಪ್ರತಿಯೊಂದು ಮುಖವನ್ನು ತಿಳಿಯುವುದನ್ನು ಒಳಗೂಡುತ್ತದೆ. ಯೆಹೋವ ಎಂಬ ಹೆಸರು ತಾನೇ “ಆತನು ಆಗುವಂತೆ ಮಾಡುತ್ತಾನೆ” ಎಂಬುದನ್ನು ಅರ್ಥೈಸುತ್ತದೆ. ಇದು ಯೆಹೋವನು ತನ್ನ ಚಿತ್ತವನ್ನು ನಡಿಸಲಿಕ್ಕಾಗಿ ತಾನು ಏನನ್ನು ಆರಿಸಿಕೊಳ್ಳುತ್ತಾನೋ ಹಾಗೆ ಆಗಬಲ್ಲನು ಎಂಬುದನ್ನು ಸೂಚಿಸುತ್ತದೆ. ಇತಿಹಾಸದಾದ್ಯಂತ, ಆತನು ಸೃಷ್ಟಿಕರ್ತನು, ತಂದೆ, ಪರಮಾಧಿಕಾರಿ ಪ್ರಭು, ಕುರುಬನು, ಸೇನಾಧೀಶ್ವರನಾದ ಯೆಹೋವನು, ಪ್ರಾರ್ಥನೆಯನ್ನು ಆಲಿಸುವಾತನು, ನ್ಯಾಯಾಧೀಶನು, ಮಹಾ ಶಿಕ್ಷಕನು, ಮತ್ತು ಪುನರ್ಖರೀದಿಸುವವನು ಆಗಿರುವುದನ್ನು ಒಳಗೊಂಡು ವಿವಿಧ ಪಾತ್ರಗಳನ್ನು ವಹಿಸಿಕೊಂಡಿದ್ದಾನೆ.b
ದೇವರ ಹೆಸರಿನ ಪೂರ್ಣ ಅರ್ಥವನ್ನು ಗಣ್ಯಮಾಡಲು, ನಾವು ಯೆಹೋವನನ್ನು ಬಹುಮಾನಿಸುವವನ ಪಾತ್ರದಲ್ಲಿಯೂ ತಿಳಿಯಬೇಕು. ಪೌಲನು ಬರೆದುದು: “ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ; ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ.”—ಇಬ್ರಿಯ 11:6.
ಇಂದು ಯೆಹೋವನನ್ನು ಪೂರ್ಣ ಹೃದಯದಿಂದ ಸೇವಿಸಲು ಆರಿಸಿಕೊಳ್ಳುವವರಿಗೆ ಆತನು ಪ್ರಮೋದವನವಾದ ಭೂಮಿಯೊಂದರಲ್ಲಿ ನಿತ್ಯ ಜೀವವನ್ನು ವಾಗ್ದಾನಿಸಿದ್ದಾನೆ. ಆ ಭವ್ಯವಾದ ವಾಗ್ದಾನದ ನೆರವೇರಿಕೆಗೆ ಎದುರುನೋಡುವುದು ಸ್ವಾರ್ಥವಾಗಿರುವುದಿಲ್ಲ, ಇಲ್ಲವೇ ಸ್ವತಃ ಅಲ್ಲಿ ಜೀವಿಸುವುದನ್ನು ಊಹಿಸಿಕೊಳ್ಳುವುದು ದುರಹಂಕಾರವಾಗಿರುವುದಿಲ್ಲ. ಮೋಶೆ “ಬರುವ ಪ್ರತಿಫಲದ ಮೇಲೆ ಕಣ್ಣಿಟ್ಟಿದ್ದನು.” (ಇಬ್ರಿಯ 11:26) ಪೌಲನು ತದ್ರೀತಿಯಲ್ಲಿ, ನಂಬಿಗಸ್ತ ಅಭಿಷಿಕ್ತ ಕ್ರೈಸ್ತರಿಗಾಗಿರುವ ದೇವರ ವಾಗ್ದಾನದ ನೆರವೇರಿಕೆಯನ್ನು ಆತುರದಿಂದ ನಿರೀಕ್ಷಿಸಿದ್ದನು. ಅವನು ಬರೆದುದು: “ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು [“ಬಹುಮಾನವನ್ನು,” NW] ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ.”—ಫಿಲಿಪ್ಪಿ 3:14.
ತಾಳಿಕೊಳ್ಳುವವರಿಗೆ ಯೆಹೋವನು ವಾಗ್ದಾನಿಸುವ ಬಹುಮಾನಕ್ಕಾಗಿ ನೀವೂ ಎದುರುನೋಡಬಹುದು. ಆ ಬಹುಮಾನವನ್ನು ನಿರೀಕ್ಷಿಸುವುದು, ದೇವರ ಕುರಿತಾದ ನಿಮ್ಮ ಜ್ಞಾನದ ಮತ್ತು ಆತನ ಸೇವೆಯಲ್ಲಿ ನಿಮ್ಮ ತಾಳಿಕೊಳ್ಳುವಿಕೆಯ ಒಂದು ಅವಿಭಾಜ್ಯ ಭಾಗವಾಗಿದೆ. ಆದುದರಿಂದ ನಿಮಗಾಗಿ ಯೆಹೋವನು ಶೇಖರಿಸಿಟ್ಟಿರುವ ಆಶೀರ್ವಾದಗಳ ಕುರಿತಾಗಿ ದಿನನಿತ್ಯವೂ ಮನನ ಮಾಡಿರಿ. ಆರಂಭದಲ್ಲಿ ತಿಳಿಸಲ್ಪಟ್ಟಿರುವ ಮೇರಿ, ಇದನ್ನು ಮಾಡಲಿಕ್ಕಾಗಿ ವಿಶೇಷ ಪ್ರಯತ್ನವನ್ನು ಮಾಡಿದ್ದಾಳೆ. “ನನ್ನ ಜೀವನದಲ್ಲಿ ಪ್ರಥಮ ಬಾರಿ, ಯೇಸುವಿನ ಪ್ರಾಯಶ್ಚಿತ್ತ ಯಜ್ಞವು ನನಗೆ ಅನ್ವಯಿಸುತ್ತದೆಂಬುದನ್ನು ನಾನು ಇತ್ತೀಚೆಗೆ ಸ್ವೀಕರಿಸಿದೆ. ಯೆಹೋವನು ನನ್ನನ್ನು ಒಬ್ಬ ವ್ಯಕ್ತಿಯೋಪಾದಿ ಕಾಳಜಿ ವಹಿಸುತ್ತಾನೆಂದು ನನಗೆ ಈಗ ಅರಿವು ಆಗತೊಡಗಿದೆ. ನಾನು 20ಕ್ಕಿಂತಲೂ ಹೆಚ್ಚು ವರ್ಷಗಳಿಂದ ಒಬ್ಬ ಕ್ರೈಸ್ತಳಾಗಿದ್ದೇನೆ, ಆದರೆ ಇತ್ತೀಚೆಗಷ್ಟೇ ನಾನು ಇದನ್ನು ನಿಜವಾಗಿಯೂ ನಂಬಲು ತೊಡಗಿದೆ” ಎಂದು ಅವಳನ್ನುತ್ತಾಳೆ.
ಅಧ್ಯಯನ ಮತ್ತು ಬೈಬಲಿನ ಕುರಿತಾಗಿ ಹೃತ್ಪೂರ್ವಕವಾದ ಮನನ ಮಾಡುವಿಕೆಯ ಮೂಲಕ, ಇತರ ಲಕ್ಷಾಂತರ ಜನರೊಂದಿಗೆ ಮೇರಿ, ಯೆಹೋವನು ಜನರ ಕುರಿತಾಗಿ ಕೇವಲ ಒಂದು ಗುಂಪಾಗಿ ಅಲ್ಲ ಬದಲಾಗಿ ವ್ಯಕ್ತಿಗತವಾಗಿ ಕಾಳಜಿ ವಹಿಸುತ್ತಾನೆ ಎಂಬುದನ್ನು ಕಲಿಯಲು ಆರಂಭಿಸುತ್ತಿದ್ದಾಳೆ. ಅಪೊಸ್ತಲ ಪೇತ್ರನು ಇದರ ಕುರಿತಾಗಿ ಎಷ್ಟು ಮನವರಿಕೆಯುಳ್ಳವನಾಗಿದ್ದನೆಂದರೆ ಅವನು ಬರೆದುದು: “ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.” (1 ಪೇತ್ರ 5:7) ಹೌದು, ದೇವರು ನಿಮ್ಮ ಕುರಿತಾಗಿ ಕಾಳಜಿ ವಹಿಸುತ್ತಾನೆ!
[ಅಧ್ಯಯನ ಪ್ರಶ್ನೆಗಳು]
a ಒಂದು ಚರ್ಮದ ಬುದ್ದಲಿಯು, ನೀರು, ಎಣ್ಣೆ, ಹಾಲು, ದ್ರಾಕ್ಷಾಮದ್ಯ, ಬೆಣ್ಣೆ ಮತ್ತು ಚೀಸ್ನಂತಹ ಸಾಮಾಗ್ರಿಗಳನ್ನು ಒಯ್ಯಲು ಉಪಯೋಗಿಸಲಾಗುತ್ತಿದ್ದ, ಪ್ರಾಣಿಯ ಚರ್ಮದ ಒಂದು ಕಂಟೇನರ್ (ಪಾತ್ರೆ) ಆಗಿತ್ತು. ಪುರಾತನ ಬುದ್ದಲಿಗಳು ಗಾತ್ರ ಮತ್ತು ರೂಪದಲ್ಲಿ ತುಂಬಾ ಭಿನ್ನವಾಗಿದ್ದವು, ಅವುಗಳಲ್ಲಿ ಕೆಲವು ಚರ್ಮದ ಚೀಲಗಳಾಗಿದ್ದವು, ಮತ್ತು ಇತರ ಬುದ್ದಲಿಗಳು ಬಿರಡೆಗಳಿರುವ ಸಂಕುಚಿತ ಕಂಠಗಳಿದ್ದ ಕಂಟೇನರ್ಗಳಾಗಿದ್ದವು.
b ನೋಡಿರಿ ನ್ಯಾಯಸ್ಥಾಪಕರು 11:27; ಕೀರ್ತನೆ 23:1; 65:2; 73:28; 89:26; ಯೆಶಾಯ 8:13; 30:20; 40:28; 41:14; ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಇವರಿಂದ ಪ್ರಕಾಶಿತವಾದ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್—ವಿದ್ ರೆಫರೆನ್ಸಸ್, ಅಪೆಂಡಿಕ್ಸ್ 1ಜೆ, ಪುಟ 1568ನ್ನು ಸಹ ನೋಡಿರಿ.
[ಪುಟ 6 ರಲ್ಲಿರುವ ಚೌಕ]
ಪುನರುತ್ಥಾನ—ದೇವರು ಕಾಳಜಿ ವಹಿಸುತ್ತಾನೆಂಬುದಕ್ಕೆ ಪುರಾವೆ
ಪ್ರತಿಯೊಬ್ಬ ವ್ಯಕ್ತಿಯಲ್ಲಿನ ದೇವರ ಆಸಕ್ತಿಯ ಕುರಿತಾದ ಮನಗಾಣಿಸುವ ಪುರಾವೆಯು ಬೈಬಲಿನಲ್ಲಿ ಯೋಹಾನ 5:28, 29ರಲ್ಲಿ ಕಂಡುಕೊಳ್ಳಲ್ಪಡುತ್ತದೆ: “ಅದಕ್ಕೆ ಆಶ್ಚರ್ಯಪಡಬೇಡಿರಿ; [“ಸ್ಮರಣೆಯ,” NW] ಸಮಾಧಿಗಳಲ್ಲಿರುವವರೆಲ್ಲರು [ಯೇಸುವಿನ] ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.”
ಆಸಕ್ತಿಕರವಾಗಿ, ಟ್ಯಾಫೊಸ್ (ಗೋರಿ) ಎಂಬ ಶಬ್ದದ ಬದಲಿಗೆ, ನೆಮೈಆನ್ (ಸ್ಮರಣೆಯ ಸಮಾಧಿ) ಎಂಬ ಗ್ರೀಕ್ ಪದವು ಇಲ್ಲಿ ಬಳಸಲ್ಪಟ್ಟಿದೆ. ಟ್ಯಾಫೊಸ್ ಎಂಬ ಶಬ್ದವು ಕೇವಲ ಹೂಣಿಡುವಿಕೆಯ ಭಾವನೆಯನ್ನು ಕೊಡುತ್ತದೆ. ಆದರೆ ನೆಮೈಆನ್ ಸತ್ತಿರುವ ವ್ಯಕ್ತಿಯ ದಾಖಲೆಯು ನೆನಪಿಸಲ್ಪಡುತ್ತದೆ ಎಂಬುದನ್ನು ಸೂಚಿಸುತ್ತದೆ.
ಈ ವಿಷಯದಲ್ಲಿ, ಪುನರುತ್ಥಾನವು ಯೆಹೋವ ದೇವರಿಂದ ಏನನ್ನು ಅವಶ್ಯಪಡಿಸುವುದೆಂಬುದರ ಕುರಿತಾಗಿ ತುಸು ಯೋಚಿಸಿರಿ. ಯಾರಾದರೊಬ್ಬರನ್ನು ಜೀವಕ್ಕೆ ತರಲು, ಆತನು ಆ ವ್ಯಕ್ತಿಯ ಕುರಿತಾಗಿ—ಅವನ ಅಥವಾ ಅವಳ ಬಾಧ್ಯತೆಯಾಗಿ ಪಡೆದಂತಹ ಗುಣಲಕ್ಷಣಗಳು ಮತ್ತು ಸಂಪೂರ್ಣ ಜ್ಞಾಪಕಶಕ್ತಿಯನ್ನು ಒಳಗೂಡಿಸಿ—ಎಲ್ಲವನ್ನು ತಿಳಿದಿರಬೇಕು. ಆಗ ಮಾತ್ರವೇ ಆ ವ್ಯಕ್ತಿಯು ಅದೇ ಗುರುತಿನೊಂದಿಗೆ ಪುನಃಸ್ಥಾಪಿಸಲ್ಪಡಸಾಧ್ಯವಿದೆ.
ನಿಶ್ಚಯವಾಗಿಯೂ, ಇದು ಮಾನವ ದೃಷ್ಟಿಕೋನದಿಂದ ಅಸಾಧ್ಯವಾಗಿದೆ, ಆದರೆ “ದೇವರಿಗೆ ಎಲ್ಲವು ಸಾಧ್ಯವೇ.” (ಮಾರ್ಕ 10:27) ಒಬ್ಬ ವ್ಯಕ್ತಿಯ ಹೃದಯದಲ್ಲಿ ಏನಿದೆಯೆಂಬುದನ್ನೂ ಅವನು ಕಂಡುಹಿಡಿಯಬಲ್ಲನು. ಒಬ್ಬ ವ್ಯಕ್ತಿಯು ಸತ್ತು ಹಲವಾರು ಶತಮಾನಗಳು ಸಂದರೂ, ಅವನ ಕುರಿತಾದ ದೇವರ ಸ್ಮರಣೆಯು ವಿಫಲವಾಗದಿರುತ್ತದೆ; ಅದು ಮಾಸಿಹೋಗುವುದಿಲ್ಲ. (ಯೋಬ 14:13-15) ಹೀಗೆ, ಅಬ್ರಹಾಮ, ಇಸಾಕ, ಮತ್ತು ಯಾಕೋಬರ ಕುರಿತಾಗಿ ಪ್ರಸ್ತಾಪಿಸುವಾಗ, ಅವರು ಮರಣಪಟ್ಟ ಅನೇಕ ಶತಮಾನಗಳ ನಂತರವೂ ಯೆಹೋವನು “ಜೀವಿತರಿಗೆ ದೇವರಾಗಿದ್ದಾನೆ ಹೊರತು ಜೀವವಿಲ್ಲದವರಿಗೆ ಅಲ್ಲ. ಆತನಿಗೆ ಎಲ್ಲರೂ ಜೀವಿಸುವವರೇ” ಎಂದು ಯೇಸು ಹೇಳಸಾಧ್ಯವಿತ್ತು. (ಓರೆಅಕ್ಷರಗಳು ನಮ್ಮವು.)—ಲೂಕ 20:38.
ಹೀಗೆ, ಮೃತಿಹೊಂದಿರುವ ಕೋಟಿಗಟ್ಟಲೆ ಜನರು ಪೂರ್ಣ ವಿವರದಲ್ಲಿ ಯೆಹೋವ ದೇವರ ಸ್ಮರಣೆಯಲ್ಲಿ ಇದ್ದಾರೆ. ದೇವರು ಮನುಷ್ಯರ ಕುರಿತಾಗಿ ಒಂದು ವ್ಯಕ್ತಿಗತ ಮಟ್ಟದಲ್ಲಿ ಕಾಳಜಿ ವಹಿಸುತ್ತಾನೆಂಬುದಕ್ಕೆ ಎಂತಹ ಬೆರಗುಗೊಳಿಸುವ ಪುರಾವೆ!
[ಪುಟ 7 ರಲ್ಲಿರುವ ಚಿತ್ರ]
ತಾನು ಯಾರನ್ನು ಗುಣಪಡಿಸಿದನೋ ಅವರಲ್ಲಿ ಯೇಸು ವೈಯಕ್ತಿಕ ಆಸಕ್ತಿಯನ್ನು ವಹಿಸಿದನು