ನಿಮ್ಮ ವಿವಾಹ ಪ್ರತಿಜ್ಞೆಗನುಸಾರ ಜೀವಿಸುವುದು!
ವಿವಾಹದ ದಿನವು ಒಂದು ಹರ್ಷಭರಿತ ದಿನವಾಗಿದೆ. ಅದು ಒಂದು ಅತಿ ಗಂಭೀರವಾದ ಸಂದರ್ಭವೂ ಆಗಿದೆ. ತಮ್ಮ ಜೀವಿತಗಳ ಉಳಿದ ಭಾಗವನ್ನು ಪ್ರಭಾವಿಸಲಿರುವ ಒಂದು ವಿಧಿವಿಹಿತ ವಾಗ್ದಾನವನ್ನು ವಧೂವರರು ಮಾಡುತ್ತಾರೆ. ಈ ವಿಧಿವಿಹಿತ ವಾಗ್ದಾನಕ್ಕೆ, ವಿವಾಹದಲ್ಲಿ ಅತಿಥಿಗಳಾಗಿ ಉಪಸ್ಥಿತರಾಗಿರುವವರು ಸಾಕ್ಷಿಗಳಾಗಿದ್ದಾರೆ, ಆದರೆ ಯೆಹೋವ ದೇವರು ಪ್ರಮುಖ ಸಾಕ್ಷಿಯಾಗಿದ್ದಾನೆ.
ನಿರ್ದಿಷ್ಟ ಕಾರ್ಯವಿಧಾನಗಳನ್ನು ಅಥವಾ ವಿವಾಹ ಸಮಾರಂಭದ ಒಂದು ವಿಶೇಷ ವಿಧವನ್ನು ಬೈಬಲ್ ಕೇಳಿಕೊಳ್ಳುವುದಿಲ್ಲ. ಆದರೂ, ಅದರ ದೈವಿಕ ಮೂಲದ ಅಂಗೀಕಾರದಲ್ಲಿ ವಿವಾಹವು ಒಂದು ಧಾರ್ಮಿಕ ಸಮಾರಂಭದಲ್ಲಿ ವಿವಾಹ ಪ್ರತಿಜ್ಞೆಗಳ ಉಪಯೋಗದಿಂದ ವಾಡಿಕೆಯಂತೆ ವಿಧಿವಿಹಿತವಾಗಿ ನೆರವೇರಿಸಲ್ಪಡುತ್ತದೆ. ಕೆಲವು ವರ್ಷಗಳಿಂದ ಯೆಹೋವನ ಸಾಕ್ಷಿಗಳು ಈ ಮುಂದಿನ ವಿವಾಹ ಪ್ರತಿಜ್ಞೆಯನ್ನು ಉಪಯೋಗಿಸುತ್ತಿದ್ದಾರೆ: “—— ಎಂಬ ನಾನು —— ಎಂಬ ನಿನ್ನನ್ನು, ನಾವಿಬ್ಬರು ಭೂಮಿಯ ಮೇಲೆ ದೇವರ ವಿವಾಹದ ಏರ್ಪಾಡಿಗನುಸಾರ ಕೂಡಿ ಜೀವಿಸುವಷ್ಟು ಕಾಲ, ಕ್ರೈಸ್ತರಿಗಾಗಿ (ಪತ್ನಿಯರು/ಪತಿಯರು) ಪವಿತ್ರ ಶಾಸ್ತ್ರಗಳಲ್ಲಿ ಪ್ರತಿಪಾದಿಸಲ್ಪಟ್ಟಿರುವ ದೈವಿಕ ನಿಯಮಕ್ಕನುಗುಣವಾಗಿ ಪ್ರೀತಿಸಲು ಮತ್ತು ಪಾಲನೆ ಮಾಡಲು (ವಧು: ಮತ್ತು ಆಳವಾಗಿ ಗೌರವಿಸಲು), ನನ್ನ ವಿವಾಹಿತ (ಪತ್ನಿ/ಪತಿ)ಯಾಗಿ ತೆಗೆದುಕೊಳ್ಳುತ್ತೇನೆ.”a
ಆಲೋಚಿಸಲಿಕ್ಕಿರುವ ಯಾವುದೋ ಒಂದು ವಿಷಯ
ನೀವು ವಿವಾಹವಾಗಲು ಆಲೋಚಿಸುತ್ತಿರುವುದಾದರೆ, ವಿವಾಹ ದಿನದ ಮುನ್ನ ಈ ಪ್ರತಿಜ್ಞೆಯ ಆಳದ ಮತ್ತು ಅರ್ಥದ ಕುರಿತಾಗಿ ಆಲೋಚಿಸುವುದು ಅತಿ ಅಮೂಲ್ಯವಾದದ್ದಾಗಿರುವುದು. ಸೊಲೊಮೋನನು ಹೇಳಿದ್ದು: “ಬಾಯಿದುಡುಕಬೇಡ, ದೇವರ ಮುಂದೆ ಮಾತಾಡಲು ನಿನ್ನ ಹೃದಯದಲ್ಲಿ ಆತುರಪಡದಿರು.” (ಪ್ರಸಂಗಿ 5:2) ನೀವು ಈಗಾಗಲೇ ವಿವಾಹವಾಗಿರುವುದಾದರೆ ಆಗೇನು? ಆಗ ನೀವು ಯೆಹೋವನ ಮುಂದೆ ಮಾಡಿದ ವಿಧಿವಿಹಿತ ವಾಗ್ದಾನದ ಪ್ರಮುಖತೆಯ ಕುರಿತು ಮನನ ಮಾಡುವುದರಿಂದ ಪ್ರಯೋಜನವನ್ನು ಪಡೆದುಕೊಳ್ಳುವಿರಿ. ನೀವು ಅದಕ್ಕನುಸಾರ ಜೀವಿಸುತ್ತಿದ್ದೀರೋ? ಕ್ರೈಸ್ತರು ತಮ್ಮ ವಾಗ್ದಾನಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಸೊಲೊಮೋನನು ಮುಂದುವರಿಸಿದ್ದು: “ನಿನ್ನ ಹರಕೆ [“ಪ್ರತಿಜ್ಞೆ,” NW]ಯನ್ನು ಒಪ್ಪಿಸು. ನೀನು ಹರಸಿಕೊಂಡು ತೀರಿಸದೆ ಇರುವದಕ್ಕಿಂತ ಹರಕೆ [“ಪ್ರತಿಜ್ಞೆ,” NW]ಮಾಡಿಕೊಳ್ಳದೆ ಇರುವದು ವಾಸಿ. ನಿನ್ನ ಬಾಯಿ ನಿನ್ನನ್ನು ಪಾಪಕ್ಕೆ ಗುರಿಮಾಡದಂತೆ ನೋಡಿಕೋ; ಇದು ಅಜಾಗ್ರತೆಯಿಂದಾಯಿತೆಂದು ದೂತನ ಮುಂದೆ ಹೇಳಬೇಡ.”—ಪ್ರಸಂಗಿ 5:4-6.
ವಿವಾಹ ಪ್ರತಿಜ್ಞೆಯ ಒಂದೊಂದು ವಾಕ್ಸರಣಿಯ ಪರಿಗಣನೆಯು, ಈ ವಿಧಿವಿಹಿತ ವಾಗ್ದಾನದ ನಿಮ್ಮ ತಿಳಿವಳಿಕೆಯನ್ನು ಸಂಪದ್ಯುಕ್ತಗೊಳಿಸುವುದು ಎಂಬುದು ನಿಸ್ಸಂದೇಹ.
“ನಾನು . . . ನಿನ್ನನ್ನು ತೆಗೆದುಕೊಳ್ಳುತ್ತೇನೆ”: ಪ್ರತಿಜ್ಞೆಯ ಈ ಮಾತುಗಳು ವಿವಾಹವಾಗಲಿಕ್ಕಿರುವ ನಿಮ್ಮ ನಿರ್ಧಾರಕ್ಕಾಗಿ ನೀವು ವೈಯಕ್ತಿಕ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೀರೆಂಬುದನ್ನು ಎತ್ತಿತೋರಿಸುತ್ತವೆ.
ಕ್ರೈಸ್ತ ಏರ್ಪಾಡಿನ ಕೆಳಗೆ, ವಿವಾಹವಾಗಲು ಯಾವುದೇ ಶಾಸ್ತ್ರೀಯ ಹಂಗು ಇರುವುದಿಲ್ಲ. ಯೇಸು ಕ್ರಿಸ್ತನು ತಾನೇ ಅವಿವಾಹಿತನಾಗಿ ಉಳಿದನು ಮತ್ತು “ಅವಕಾಶ ಮಾಡಿಕೊಳ್ಳಸಾಧ್ಯವಿರುವವ”ರಿಗಾಗಿ ಅವಿವಾಹಿತತೆಯನ್ನು ಶಿಫಾರಸ್ಸು ಮಾಡಿದನು. (ಮತ್ತಾಯ 19:10-12, NW) ಮತ್ತೊಂದು ಕಡೆಯಲ್ಲಿ, ಯೇಸುವಿನ ಅಪೊಸ್ತಲರಲ್ಲಿ ಹೆಚ್ಚಿನವರು ವಿವಾಹಿತ ಪುರುಷರಾಗಿದ್ದರು. (ಲೂಕ 4:38; 1 ಕೊರಿಂಥ 9:5) ವಿವಾಹವಾಗುವ ನಿರ್ಧಾರವು ಒಂದು ವೈಯಕ್ತಿಕವಾದ ವಿಷಯವಾಗಿದೆ ಎಂಬುದು ಸುಸ್ಪಷ್ಟ. ಯಾವನೇ ವ್ಯಕ್ತಿಗೆ ಮತ್ತೊಬ್ಬನನ್ನು ವಿವಾಹದೊಳಕ್ಕೆ ಒತ್ತಾಯಪಡಿಸುವುದಕ್ಕೆ ಶಾಸ್ತ್ರೀಯ ಅಧಿಕಾರವಿಲ್ಲ.
ಆದಕಾರಣ, ವಿವಾಹವಾಗಲು ನಿರ್ಣಯಿಸುವುದಕ್ಕಾಗಿ ನೀವು ಜವಾಬ್ದಾರರಾಗಿರುತ್ತೀರಿ. ನೀವು ವಿವಾಹವಾಗುವ ವ್ಯಕ್ತಿಯನ್ನು ನೀವೇ ಆರಿಸಿಕೊಂಡಿರುವುದು ಸಂಭವನೀಯ. ‘ನಾನು . . . ಎಂಬ ನಿನ್ನನ್ನು . . . ತೆಗೆದುಕೊಳ್ಳುತ್ತೇನೆ’ ಎಂದು ನೀವು ವಿವಾಹ ಪ್ರತಿಜ್ಞೆಯನ್ನು ಮಾಡುವಾಗ, ಆ ವ್ಯಕ್ತಿಯನ್ನು ಅವನ ಅಥವಾ ಅವಳ ಸೌಶೀಲ್ಯದೊಂದಿಗೆ—ಆದರೆ ಅವನ ಅಥವಾ ಅವಳ ದೋಷಗಳೊಂದಿಗೂ—ನೀವು ತೆಗೆದುಕೊಳ್ಳುತ್ತೀರಿ ಅಥವಾ ಅಂಗೀಕರಿಸುತ್ತೀರಿ.
ಕಟ್ಟಕಡೆಗೆ, ನಿಮ್ಮ ಸಂಗಾತಿಯ ವ್ಯಕ್ತಿತ್ವದಲ್ಲಿ ಸುಸ್ಪಷ್ಟವಾಗಿರದಿದ್ದ ವಿಶೇಷ ಲಕ್ಷಣಗಳನ್ನು ನೀವು ಕಂಡುಹಿಡಿಯಬಹುದು. ಒಮ್ಮೊಮ್ಮೆ ನಿರಾಶೆಗಳಿರುವುವು. “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ” ಎಂದು ಬೈಬಲ್ ಹೇಳುತ್ತದೆ. (ರೋಮಾಪುರ 3:23) ಆದುದರಿಂದ ನಿಮ್ಮ ಸಂಗಾತಿಯೊಂದಿಗೆ ಸಾಮರಸ್ಯವನ್ನು ಏರ್ಪಡಿಸಿಕೊಳ್ಳುವ ಸಲುವಾಗಿ ನೀವು ಸರಿಹೊಂದಿಸುವಿಕೆಗಳನ್ನು ಮಾಡುವ ಅಗತ್ಯವಿರಬಹುದು. ಇದು ಕ್ಲಿಷ್ಟಕರವಾಗಿರಬಹುದು, ಮತ್ತು ಕೆಲವೊಮ್ಮೆ ಪ್ರಯತ್ನಿಸುವುದನ್ನು ತೊರೆದುಬಿಡುವ ಅನಿಸಿಕೆ ನಿಮಗಾಗಬಹುದು. ಆದರೆ, ವಿವಾಹ ಪ್ರತಿಜ್ಞೆಯು ಯೆಹೋವನ ಉಪಸ್ಥಿತಿಯಲ್ಲಿ ಮಾಡಲ್ಪಟ್ಟಿದೆ ಎಂಬುದನ್ನು ಜ್ಞಾಪಕದಲ್ಲಿಡಿರಿ. ನೀವು ಸಫಲರಾಗುವಂತೆ ಆತನು ನಿಮಗೆ ಸಹಾಯಮಾಡಬಲ್ಲನು.
“ನಾವಿಬ್ಬರು ಭೂಮಿಯ ಮೇಲೆ . . . ಕೂಡಿ ಜೀವಿಸುವಷ್ಟು ಕಾಲ”: ಇದು ಒಂದು ದೀರ್ಘಕಾಲಿಕ ಒಡಗೂಡುವಿಕೆಯನ್ನು ಸೂಚಿಸುತ್ತದೆ. “ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು” ಎಂದು ಬೈಬಲ್ ಆಜ್ಞಾಪಿಸುತ್ತದೆ. (ಆದಿಕಾಂಡ 2:24) ನೀವು ಒಡಗೂಡಿ ಇರಬೇಕೆಂದು ಯೆಹೋವನು ಬಯಸುತ್ತಾನೆ. ದೇವರನ್ನು ಒಡಗೂಡಿ ಸೇವಿಸಿರಿ. ಆತನ ವಾಕ್ಯವನ್ನು ಒಡಗೂಡಿ ಅಭ್ಯಾಸಿಸಿರಿ. ಒಡಗೂಡಿ ನಡೆಯಲು, ಒಡಗೂಡಿ ಕುಳಿತುಕೊಳ್ಳಲು, ಒಡಗೂಡಿ ತಿನ್ನಲು ಸಮಯವನ್ನು ತೆಗೆದುಕೊಳ್ಳಿರಿ. ಜೀವನದಲ್ಲಿ ಒಡಗೂಡಿ ಆನಂದಿಸಿರಿ!
ಕೆಲವು ದಂಪತಿಗಳು, ಕೇವಲ ಒಬ್ಬರು ಇನ್ನೊಬ್ಬರೊಂದಿಗೆ ಮಾತಾಡಲಿಕ್ಕೆ ಪ್ರತಿ ದಿನ ಸಮಯವನ್ನು ಬದಿಗಿಡಲು ಪ್ರಯತ್ನವನ್ನು ಮಾಡುತ್ತಾರೆ. ವಿವಾಹದ ಅನೇಕ ವರ್ಷಗಳ ಅನಂತರವೂ, ಈ ಒಡಗೂಡುವಿಕೆಯು ವೈವಾಹಿಕ ಸಂತೋಷಕ್ಕೆ ಪ್ರಾಮುಖ್ಯವಾಗಿದೆ.
“ದೇವರ ವಿವಾಹದ ಏರ್ಪಾಡಿಗನುಸಾರ”: ವಿವಾಹವು, ಯಾರು ವೈವಾಹಿಕ ಏರ್ಪಾಡನ್ನು ಸ್ಥಾಪಿಸಿದನೋ, ಆ ಯೆಹೋವ ದೇವರಿಂದ ಬಂದ ಒಂದು ಕೊಡುಗೆಯಾಗಿದೆ. (ಜ್ಞಾನೋಕ್ತಿ 19:14) ಆತನ ಏರ್ಪಾಡನ್ನು ಅನುಸರಿಸುವುದರಲ್ಲಿ ವಿಫಲಗೊಳ್ಳುವುದು ಕೇವಲ ನಿಮ್ಮ ವೈವಾಹಿಕ ಸಂತೋಷವನ್ನು ಬೆದರಿಸುವುದು ಮಾತ್ರವಲ್ಲ, ಸೃಷ್ಟಿಕರ್ತನೊಂದಿಗಿನ ನಿಮ್ಮ ಸಂಬಂಧವನ್ನೂ ಬೆದರಿಸುವುದು. ಮತ್ತೊಂದು ಕಡೆಯಲ್ಲಿ, ಪತಿಪತ್ನಿಯರು ಯೆಹೋವನ ಏರ್ಪಾಡುಗಳಿಗೆ ವಿಧೇಯತೆಯನ್ನು ವಿಶದಪಡಿಸುತ್ತಾ, ಆತನೊಂದಿಗೆ ಒಂದು ಸುಸಂಬಂಧವನ್ನು ಬೆಳೆಸಿಕೊಳ್ಳುವಾಗ, ಅವರು ಇತರರೊಂದಿಗೆ—ಪರಸ್ಪರರನ್ನು ಒಳಗೊಂಡು—ಶಾಂತಿಭರಿತ ಸಂಬಂಧಗಳನ್ನು ಹೊಂದಿರುವರು.—ಜ್ಞಾನೋಕ್ತಿ 16:7.
“ಪವಿತ್ರ ಶಾಸ್ತ್ರಗಳಲ್ಲಿ ಪ್ರತಿಪಾದಿಸಲ್ಪಟ್ಟಿರುವ ದೈವಿಕ ನಿಯಮಕ್ಕನುಗುಣವಾಗಿ”: ಆಯ್ಕೆಯ ಮತ್ತು ಕ್ರಿಯೆಯ ಸ್ವಾತಂತ್ರ್ಯವನ್ನು ನಾವು ಆನಂದಿಸುವಂತೆ ದೇವರು ಬಯಸುತ್ತಾನೆ. ಆತನು ವೈವಾಹಿಕ ಜೀವನವನ್ನು ಕಟ್ಟುಪಡಿಸುವ ನಿಯಮಗಳ ಒಂದು ಸಮಗ್ರ ಪಟ್ಟಿಯಿಂದ ನಮ್ಮನ್ನು ಕಾಡಿಸುವುದಿಲ್ಲ. ಆದರೂ, ಆತನು ನಮ್ಮ ಸ್ವಂತ ಒಳಿತಿಗಾಗಿಯೇ ಕೆಲವು ಮಾರ್ಗದರ್ಶನಗಳನ್ನು ಪ್ರತಿಪಾದಿಸಿದ್ದಾನೆ.
ಇಂದು ವಿವಾಹದ ಕುರಿತಾಗಿ ಮುದ್ರಿತ ವಿಷಯದ ಒಂದು ಹೇರಳವಾದ ವೈವಿಧ್ಯವಿದೆ, ಮತ್ತು ಅನೇಕ ಜನರಿಗೆ ತಮ್ಮದೇ ಆದ ಸಿದ್ಧಾಂತಗಳಿವೆ. ಆದರೆ ಜಾಗರೂಕರಾಗಿರ್ರಿ! ವಿವಾಹದ ವಿಷಯದಲ್ಲಿ, ಪ್ರಚಾರದಲ್ಲಿರುವ ಹೆಚ್ಚಿನ ಮಾಹಿತಿಯು ಬೈಬಲಿನೊಂದಿಗೆ ಸಂಘರ್ಷಣೆಯಲ್ಲಿದೆ.
ಪರಿಸ್ಥಿತಿಗಳು ಒಬ್ಬ ದಂಪತಿಯಿಂದ ಮತ್ತೊಬ್ಬ ದಂಪತಿಗೆ ವ್ಯತ್ಯಾಸವಾಗಿರುತ್ತವೆ ಎಂಬುದನ್ನೂ ಗ್ರಹಿಸಿರಿ. ಒಂದು ವಿಧದಲ್ಲಿ, ವಿವಾಹಿತ ದಂಪತಿಗಳು ಹಿಮದ ಹಳುಕುಗಳಂತಿದ್ದಾರೆ; ಅವರು ಒಂದು ಅಂತರದಿಂದ ಅನನ್ಯವಾಗಿ ತೋರಬಹುದು, ಆದರೆ ವಾಸ್ತವದಲ್ಲಿ ಅವರು ಇತರರೆಲ್ಲರಿಂದ ಭಿನ್ನವಾಗಿ, ಪ್ರತಿಯೊಬ್ಬರೂ ಅಸದೃಶರಾಗಿದ್ದಾರೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ವ್ಯಕ್ತಿತ್ವದ ಸಂಯೋಜನವನ್ನು, ಲೋಕದಲ್ಲಿರುವ ಬೇರೆ ಯಾವುದೇ ವಿವಾಹಿತ ದಂಪತಿಗಳಿಂದ ನಕಲು ಮಾಡಲಾಗುವುದಿಲ್ಲ. ಆದುದರಿಂದ, ಇತರರ ವೈಯಕ್ತಿಕ ದೃಷ್ಟಿಕೋನಗಳನ್ನು ಅಂಗೀಕರಿಸಲು ದುಡುಕದಿರಿ. ಪ್ರತಿಯೊಂದು ವಿವಾಹಕ್ಕೆ ಅನ್ವಯವಾಗುವ ಯಾವುದೇ ಮಾನವ ನಿರ್ಮಿತ ಸೂತ್ರವಿರುವುದಿಲ್ಲ!
ವ್ಯತಿರಿಕ್ತತೆಯಲ್ಲಿ, ಬೈಬಲಿನ ಎಲ್ಲ ಆಜ್ಞೆಗಳು ಸತ್ಯವೂ ಅನ್ವಯಯೋಗ್ಯವೂ ಆಗಿವೆ. ಅಪೊಸ್ತಲ ಪೌಲನು ಬರೆದುದು: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ.” (2 ತಿಮೊಥೆಯ 3:16; ಕೀರ್ತನೆ 119:151) ನೀವು ಬೈಬಲನ್ನು ಓದಿ, ಅದರ ಬೋಧನೆಗಳನ್ನು ನಿಮ್ಮ ದೈನಂದಿನ ಜೀವನದಲ್ಲಿ ಒಂದು ಮಾರ್ಗದರ್ಶಕದೋಪಾದಿ ಸ್ವೀಕರಿಸುವುದಾದರೆ, ನಿಮ್ಮ ವಿವಾಹ ಪ್ರತಿಜ್ಞೆಗನುಸಾರ ನೀವು ಜೀವಿಸಲು ಶಕ್ತರಾಗುವಿರಿ.—ಕೀರ್ತನೆ 119:105.
“ಪ್ರೀತಿಸಲು”: ಭಾವಿ ಪತಿಯು ತನ್ನ ವಧುವನ್ನು “ಪ್ರೀತಿಸಲು ಮತ್ತು ಪಾಲನೆ ಮಾಡಲು” ಪ್ರತಿಜ್ಞೆಯನ್ನು ಮಾಡುತ್ತಾನೆ. ಈ ಪ್ರೀತಿಯು, ಅವರನ್ನು ಬಹುಶಃ ಒಟ್ಟಿಗೆ ತಂದಂತಹ ಪ್ರಣಯಾತ್ಮಕ ಪ್ರೀತಿಯನ್ನು ಒಳಗೂಡುತ್ತದೆ. ಆದರೆ ಪ್ರಣಯಾತ್ಮಕ ಪ್ರೀತಿ ಸಾಲದು. ಕ್ರೈಸ್ತನೊಬ್ಬನು—ಅವನ ಅಥವಾ ಅವಳ—ಸಂಗಾತಿಗಾಗಿ ಪ್ರತಿಜ್ಞೆಮಾಡುವ ಪ್ರೀತಿಯು ಹೆಚ್ಚು ಅಗಾಧವೂ ಹೆಚ್ಚು ಆವರಿತವೂ ಆಗಿದೆ.
ಎಫೆಸ 5:25 ಹೇಳುವುದು: “ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ.” ಸಭೆಗಾಗಿ ಇದ್ದ ಯೇಸುವಿನ ಪ್ರೀತಿಯು, ಉಭಯ ಲಿಂಗಗಳ ನಡುವಿನ ಪ್ರಣಯಾತ್ಮಕ ಪ್ರೀತಿಯ ಅದೇ ವರ್ಗದಲ್ಲಿ ಇರಲಿಲ್ಲವೆಂಬುದು ನಿಶ್ಚಯ. ಈ ವಚನದಲ್ಲಿ ಉಪಯೋಗಿಸಿರುವ “ಪ್ರೀತಿಸಿರಿ” ಮತ್ತು “ಪ್ರೀತಿಸಿದ” ಎಂಬ ಪದಗಳು ಅಗಾಪೆ ಎಂಬ ಪದದಿಂದ ಬಂದಿವೆ; ಇದು ಮೂಲತತ್ವದ ಮೂಲಕ ಮಾರ್ಗದರ್ಶಿಸಲ್ಪಟ್ಟ ಪ್ರೀತಿಯನ್ನು ಸೂಚಿಸುತ್ತದೆ. ಪತಿಗಳಿಗೆ, ತಮ್ಮ ಪತ್ನಿಯರಿಗಾಗಿ ನಿರಂತರವಾದ, ವಿಚಲಿಸದ, ಸಹಿಷ್ಣುತೆಯ ಪ್ರೀತಿಯನ್ನು ತೋರಿಸುವಂತೆ ಇಲ್ಲಿ ಬೈಬಲ್ ಆಜ್ಞಾಪಿಸುತ್ತದೆ.
ಇದು ಕೇವಲ “ನೀನು ನನ್ನನ್ನು ಪ್ರೀತಿಸುವುದರಿಂದ ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂಬ ರಸಭಾವದ ವಿಧವಾಗಿರುವುದಿಲ್ಲ. ಒಬ್ಬ ಪತಿಯು ತನ್ನ ಸ್ವಂತ ಹಿತಕ್ಕಿಂತ ಮುಂಚಿತವಾಗಿ ತನ್ನ ಪತ್ನಿಯ ಹಿತವನ್ನು ಮುನ್ನೋಡುತ್ತಾನೆ, ಮತ್ತು ಅದೇ ವಿಧದಲ್ಲಿ ಪತ್ನಿಯು ತನ್ನ ಪತಿಯನ್ನು ಪ್ರೀತಿಸುತ್ತಾಳೆ. (ಫಿಲಿಪ್ಪಿ 2:4) ನಿಮ್ಮ ಸಂಗಾತಿಗಾಗಿ ಗಹನವಾದ ಪ್ರೀತಿಯನ್ನು ಬೆಳೆಸಿಕೊಳ್ಳುವುದು, ನಿಮ್ಮ ವಿವಾಹ ಪ್ರತಿಜ್ಞೆಗನುಸಾರ ಜೀವಿಸಲು ನಿಮಗೆ ಸಹಾಯಮಾಡುವುದು.
“ಪಾಲನೆ ಮಾಡಲು”: ಒಂದು ನಿಘಂಟಿಗನುಸಾರ, “ಪಾಲನೆ ಮಾಡಲು” ಅಂದರೆ ‘ಪ್ರೀತಿಯಿಂದ ಕಾಣುವುದು, ಒಬ್ಬನಿಗಾಗಿ ಕಕ್ಕುಲತೆಯನ್ನು ಅಥವಾ ಮಮತೆಯನ್ನು ತೋರಿಸುವುದು’ ಎಂದರ್ಥ. ನೀವು ನಿಮ್ಮ ಪ್ರೀತಿಯನ್ನು ಮಾತುಗಳಲ್ಲಿ ಮತ್ತು ಕ್ರಿಯೆಗಳಲ್ಲಿ ಎರಡರಲ್ಲಿಯೂ ವ್ಯಕ್ತಪಡಿಸತಕ್ಕದ್ದು! ಪತ್ನಿಯೊಬ್ಬಳು ವಿಶೇಷವಾಗಿ ತನ್ನ ಪತಿಯ ಪ್ರೀತಿಯ ನಿರಂತರ ತೋರಿಸುವಿಕೆಗಳನ್ನು ಪಡೆಯುವ ಅಗತ್ಯವಿರುತ್ತದೆ. ಆಕೆಯ ಪತಿಯು, ಆಕೆಯ ಶಾರೀರಿಕ ಅಗತ್ಯಗಳ ಕುರಿತಾಗಿ ಒಳ್ಳೆಯ ಕಾಳಜಿಯನ್ನು ವಹಿಸಬಹುದು, ಆದರೆ ಇದು ಸಾಲದು. ಸಾಕಷ್ಟು ಆಹಾರ ಮತ್ತು ಸುಖಸೌಕರ್ಯಗಳಿಂದ ಕೂಡಿರುವ ಒಂದು ಮನೆಯನ್ನು ಹೊಂದಿರುವ ಪತ್ನಿಯರಿದ್ದಾರೆ, ಆದರೆ ತಮ್ಮ ವಿವಾಹ ಸಂಗಾತಿಯಿಂದ ಅಲಕ್ಷಿಸಲ್ಪಟ್ಟ ಅಥವಾ ತಿರಸ್ಕರಿಸಲ್ಪಟ್ಟ ಕಾರಣ ಅವರು ತೀರ ಅಸಂತೋಷಿತರಾಗಿದ್ದಾರೆ.
ಮತ್ತೊಂದು ಕಡೆಯಲ್ಲಿ, ತಾನು ಪ್ರೀತಿಸಲ್ಪಟ್ಟು ಪಾಲನೆ ಮಾಡಲ್ಪಟ್ಟಿದ್ದೇನೆ ಎಂದು ಅರಿತಿರುವ ಒಬ್ಬ ಪತ್ನಿಯು ಸಂತೋಷಿತಳಾಗಿರಲು ಖಂಡಿತವಾಗಿ ಕಾರಣವನ್ನು ಹೊಂದಿದ್ದಾಳೆ. ನಿಶ್ಚಯವಾಗಿ, ಪತಿಗೆ ಅನ್ವಯಿಸಲ್ಪಡುವಾಗ ಸಹ ಇದು ಸತ್ಯವಾಗಿದೆ. ನಿಜ ಪ್ರೀತಿಯು, ಮುದ್ದಾಟದ ಯಥಾರ್ಥ ಅಭಿವ್ಯಕ್ತಿಗಳಿಂದ ಮಹತ್ತರವಾಗಿ ಉತ್ಪ್ರೇಕ್ಷಿಸಲ್ಪಡುತ್ತದೆ. ಪರಮ ಗೀತದಲ್ಲಿ, ಕುರುಬ ಪ್ರಿಯತಮನು ಹೀಗೆ ಉದ್ಗರಿಸುತ್ತಾನೆ: “ಪ್ರಿಯಳೇ, ವಧುವೇ, ನಿನ್ನ ಪ್ರೀತಿಯು ಎಷ್ಟೋ ರಮ್ಯ! ನಿನ್ನ ಪ್ರೇಮವು ದ್ರಾಕ್ಷಾರಸಕ್ಕಿಂತ ಎಷ್ಟೋ ಮೇಲು! ನಿನ್ನ ತೈಲದ ಪರಿಮಳವು ಸಕಲಸುಗಂಧದ್ರವ್ಯಗಳಿಗಿಂತ ಎಷ್ಟೋ ಮನೋಹರ!”—ಪರಮ ಗೀತ 4:10.
“ಮತ್ತು ಆಳವಾಗಿ ಗೌರವಿಸಲು”: ಶತಮಾನಗಳಾದ್ಯಂತವಾಗಿ ಸ್ತ್ರೀಯರನ್ನು ದೂಷಿಸಿರುವ ಮತ್ತು ಹೀನೈಸಿರುವ ಪುರುಷರಿದ್ದಾರೆ. ಇಂದು ಕೂಡ, ವರ್ಲ್ಡ್ ಹೆಲ್ತ್ ಪತ್ರಿಕೆಗನುಸಾರ, “ಸ್ತ್ರೀಯರ ವಿರುದ್ಧವಾದ ಹಿಂಸಾಕೃತ್ಯವು ಪ್ರತಿ ದೇಶದಲ್ಲಿ ಮತ್ತು ಪ್ರತಿ ಸಾಮಾಜಿಕ ಹಾಗೂ ಆರ್ಥಿಕ ವರ್ಗದಲ್ಲಿ ಸಂಭವಿಸುತ್ತದೆ. ಅನೇಕ ಸಂಸ್ಕೃತಿಗಳಲ್ಲಿ, ಪತ್ನಿಯನ್ನು ಹೊಡೆಯುವುದು ಪುರುಷನೊಬ್ಬನ ಹಕ್ಕು ಎಂಬುದಾಗಿ ಪರಿಗಣಿಸಲ್ಪಡುತ್ತದೆ.” ಹೆಚ್ಚಿನ ಪುರುಷರು ಅಂಥ ವರ್ತನೆಗೆ ದೋಷಿಭಾವನೆಯನ್ನು ಹೊಂದಿಲ್ಲದಿರಬಹುದು. ಆದರೂ, ಅನೇಕ ಪುರುಷರು, ಸ್ತ್ರೀಯರನ್ನು ಬಾಧಿಸುವ ವಿಷಯಗಳಲ್ಲಿ ಯಥಾರ್ಥ ಆಸಕ್ತಿಯನ್ನು ತೋರಿಸಲು ವಿಫಲಗೊಳ್ಳುತ್ತಾರೆಂಬಂತೆ ತೋರುತ್ತದೆ. ಫಲಿತಾಂಶವಾಗಿ, ಅನೇಕ ಸ್ತ್ರೀಯರು ಪುರುಷರ ಕುರಿತಾಗಿ ಒಂದು ನಕಾರಾತ್ಮಕ ಮನೋಭಾವವನ್ನು ವಿಕಸಿಸಿಕೊಂಡಿದ್ದಾರೆ. “ನಾನು ನನ್ನ ಪತಿಯನ್ನು ಪ್ರೀತಿಸುತ್ತೇನೆ, ಆದರೆ ಹೇಗೋ ಅವನಿಗೆ ಗೌರವವನ್ನು ತೋರಿಸಲು ನನ್ನಿಂದ ಸಾಧ್ಯವಿಲ್ಲ!” ಎಂಬುದಾಗಿ ಕೆಲವು ಪತ್ನಿಯರು ಹೇಳುವುದನ್ನು ಕೇಳಲಾಗಿದೆ.
ಹಾಗಿದ್ದರೂ, ತನ್ನ ಪತಿಯನ್ನು—ಅವನು ಆಗಾಗ ಆಕೆಯ ನಿರೀಕ್ಷಣೆಗಳನ್ನು ತಲಪಲು ವಿಫಲಗೊಳ್ಳುವುದಾದರೂ—ಗೌರವಿಸಲು ಶ್ರಮಿಸುವ ಸ್ತ್ರೀಯನ್ನು ಯೆಹೋವನು ಅಮೂಲ್ಯಳೆಂದೆಣಿಸುತ್ತಾನೆ. ಅವನು ಒಂದು ದೇವದತ್ತ ನೇಮಕವನ್ನು ಅಥವಾ ಸ್ಥಾನವನ್ನು ಹೊಂದಿದ್ದಾನೆ ಎಂಬುದನ್ನು ಆಕೆ ಗ್ರಹಿಸುತ್ತಾಳೆ. (1 ಕೊರಿಂಥ 11:3; ಎಫೆಸ 5:23) ಹೀಗೆ ತನ್ನ ಪತಿಗಾಗಿ ತೋರಿಸುವ ಆಳವಾದ ಗೌರವವು ಆಕೆಯ ಆರಾಧನೆಯ ಮತ್ತು ಯೆಹೋವನಿಗೆ ತೋರಿಸುವ ವಿಧೇಯತೆಯ ಭಾಗವಾಗಿದೆ. ದೇವಭಕ್ತೆಯರಾದ ಸ್ತ್ರೀಯರ ವಿಧೇಯತೆಯನ್ನು ದೇವರು ಉಪೇಕ್ಷಿಸುವುದಿಲ್ಲ.—ಎಫೆಸ 5:33; 1 ಪೇತ್ರ 3:1-6; ಹೋಲಿಸಿ ಇಬ್ರಿಯ 6:10.
ವಿವಾಹದಲ್ಲಿ ಗೌರವವು ಅನ್ಯೋನ್ಯವಾಗಿರತಕ್ಕದ್ದು, ಮತ್ತು ಅದು ಕೇವಲ ನಿರೀಕ್ಷಿಸಲ್ಪಡುವುದು ಅಥವಾ ತಗಾದೆ ಮಾಡಲ್ಪಡುವುದರ ಬದಲಿಗೆ ಗಳಿಸಲ್ಪಡಬೇಕು. ಉದಾಹರಣೆಗಾಗಿ, ವೈವಾಹಿಕ ಏರ್ಪಾಡಿನಲ್ಲಿ ವ್ಯಂಗ್ಯಾತ್ಮಕ ಅಥವಾ ರೇಗಿಸುವ ಮಾತುಗಳಿಗೆ ಯಾವುದೇ ಸ್ಥಳವಿರುವುದಿಲ್ಲ. ನಿಮ್ಮ ಪತಿ ಅಥವಾ ಪತ್ನಿಯ ಕುರಿತು ಜರೆಯುವ ಹೇಳಿಕೆಗಳನ್ನು ಮಾಡುವುದು ಪ್ರೀತಿಪರವೂ ಗೌರವಯುತವೂ ಆಗಿರುವುದಿಲ್ಲ. ಇತರರಿಗೆ ನಿಮ್ಮ ಸಂಗಾತಿಯ ನ್ಯೂನತೆಗಳನ್ನು ಬಯಲುಪಡಿಸುವುದು ಅಥವಾ ಬಹಿರಂಗವಾಗಿ ಮಾತಾಡುವುದು ಎಂದೂ ಪ್ರಯೋಜನವನ್ನು ತರದು. ತಮಾಷೆಯಲ್ಲಿಯೂ ಈ ಕ್ಷೇತ್ರದಲ್ಲಿ ಒಬ್ಬರು ಸಂಪೂರ್ಣವಾಗಿ ಗೌರವದ ಕೊರತೆಯನ್ನು ತೋರಿಸಸಾಧ್ಯವಿದೆ. ಎಫೆಸ 4:29, 32ರಲ್ಲಿನ ಮಾತುಗಳು ಪತಿಗೆ ಮತ್ತು ಪತ್ನಿಗೆ ಇಬ್ಬರಿಗೂ ಅನ್ವಯಿಸುತ್ತವೆ. ಅಲ್ಲಿ ಬೈಬಲ್ ಹೇಳುವುದು: “ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು; ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು ಇದ್ದರೆ . . . ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ . . . ಇರ್ರಿ.”
“ನನ್ನ ವಿವಾಹಿತ (ಪತ್ನಿ/ಪತಿ)ಯಾಗಿ”: ಮೊತ್ತಮೊದಲಿನ ವಿವಾಹದಲ್ಲೇ, ಹವ್ವಳು ಆದಾಮನಿಗೆ ವಿವಾಹಮಾಡಿ ಕೊಡಲ್ಪಟ್ಟಾಗ, ‘ಅವರಿಬ್ಬರು ಒಂದೇ ಶರೀರವಾಗ’ಬೇಕೆಂದು ಯೆಹೋವ ದೇವರು ಹೇಳಿದನು. (ಆದಿಕಾಂಡ 2:24; ಮತ್ತಾಯ 19:4-6) ಹೀಗೆ, ಇಬ್ಬರು ಮನುಷ್ಯರ ನಡುವೆ ಅಸ್ತಿತ್ವದಲ್ಲಿರಬಲ್ಲ ಅತ್ಯಂತ ನಿಕಟ ಸಂಬಂಧವು ವೈವಾಹಿಕ ಬಂಧವಾಗಿದೆ. ವಿವಾಹವು ನಿಮ್ಮನ್ನು ಒಂದು ಹೊಸ ರಕ್ತಸಂಬಂಧದೊಳಕ್ಕೆ ತರುತ್ತದೆ. ನೀವು ಯಾರೋ ಒಬ್ಬರನ್ನು ನಿಮ್ಮ “ವಿವಾಹಿತ ಪತ್ನಿ” ಅಥವಾ “ವಿವಾಹಿತ ಪತಿ”ಯನ್ನಾಗಿ ಅಂಗೀಕರಿಸುತ್ತೀರಿ. ಅದು ಇತರ ಯಾವುದೇ ಸಂಬಂಧಕ್ಕೆ ಅಸದೃಶವಾಗಿದೆ. ಇತರ ಸಂಬಂಧಗಳಲ್ಲಿ ಕೊಂಚವೇ ಹಾನಿಯನ್ನುಂಟುಮಾಡುವ ಕ್ರಿಯೆಗಳು, ವೈವಾಹಿಕ ಏರ್ಪಾಡಿನೊಳಗೆ ಆಳವಾದ ಗಾಯವನ್ನು ಉಂಟುಮಾಡಬಹುದು.
ಉದಾಹರಣೆಗಾಗಿ, ಎಫೆಸ 4:26ರಲ್ಲಿ ಕಂಡುಬರುವ ಶಾಸ್ತ್ರೀಯ ಸಲಹೆಯನ್ನು ತೆಗೆದುಕೊಳ್ಳಿರಿ. ಅಲ್ಲಿ ಬೈಬಲ್ ಹೇಳುವುದು: “ಕೋಪಮಾಡಬೇಕಾದರೂ ಪಾಪ ಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ.” ನೀವು ಸಂಬಂಧಿಕರೊಂದಿಗೆ ಮತ್ತು ಸ್ನೇಹಿತರೊಂದಿಗೆ ನಿಮ್ಮ ಸಮಸ್ಯೆಗಳನ್ನು ಎಷ್ಟು ತ್ವರಿತಗತಿಯಲ್ಲಿ ಬಗೆಹರಿಸಬೇಕೋ ಅಷ್ಟು ತ್ವರಿತಗತಿಯಲ್ಲಿ ಸಮಸ್ಯೆಗಳನ್ನು ಯಾವಾಗಲೂ ಬಗೆಹರಿಸದೆ ಇರಬಹುದು. ಆದರೆ ನಿಮ್ಮ ಸಂಗಾತಿ ಇತರ ಯಾವುದೇ ಸಂಬಂಧಿಕ ಅಥವಾ ಸ್ನೇಹಿತನಿಗಿಂತ ಹೆಚ್ಚು ನಿಕಟವಾಗಿದ್ದಾರೆ. ನಿಮ್ಮ ಪತಿಪತ್ನಿಯೊಂದಿಗೆ ವಿಷಯಗಳ ಬಗೆಹರಿಸುವಿಕೆಯ ವಿಫಲತೆಯು, ನಿಮ್ಮ ನಡುವೆ ಇರುವ ವಿಶೇಷ ರಕ್ತಸಂಬಂಧವನ್ನು ಅಪಾಯಕ್ಕೀಡುಮಾಡಬಹುದು.
ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಒಂದು ಭಿನ್ನಾಭಿಪ್ರಾಯವನ್ನು, ಅದು ಕಿರುಕುಳ ಅಥವಾ ಪೀಡೆಯ ಮುಂದುವರಿಯುವ ಆಕರವಾಗಿ ವಿಕಾಸಗೊಳ್ಳಲು ನೀವು ಅನುಮತಿಸುವಿರೋ? ತಪ್ಪಭಿಪ್ರಾಯಗಳು ಮತ್ತು ಕ್ಷೋಭೆಗೊಳಿಸುವಂಥ ಪರಿಸ್ಥಿತಿಗಳು ಹಲವಾರು ದಿನಗಳ ತನಕ ಮುಂದುವರಿಯುತ್ತಾ ಹೋಗುವವೋ? ಕಷ್ಟಗಳು ಏಳುವಾಗ, ನಿಮ್ಮ ಪ್ರತಿಜ್ಞೆಗನುಸಾರ ಜೀವಿಸುವ ಸಲುವಾಗಿ, ನಿಮ್ಮ ಸಂಗಾತಿಯೊಂದಿಗೆ ಶಾಂತಿಯನ್ನು ಮಾಡಿಕೊಂಡ ಹೊರತು ಒಂದು ದಿನವೂ ಕಳೆದುಹೋಗದಂತೆ ಅನುಮತಿಸದಿರಿ. ಇದರ ಅರ್ಥ ಕ್ಷಮಿಸುವುದು ಮತ್ತು ಮರೆತುಬಿಡುವುದು ಹಾಗೂ ನಿಮ್ಮ ಸ್ವಂತ ದೋಷಗಳನ್ನು ಮತ್ತು ಲೋಪಗಳನ್ನು ಒಪ್ಪಿಕೊಳ್ಳುವುದೇ.—ಕೀರ್ತನೆ 51:5; ಲೂಕ 17:3, 4.
ನಿಮ್ಮ ವಿವಾಹದ ಪ್ರತಿಜ್ಞೆಗೆ ಯೆಹೋವನು ಪ್ರಮುಖ ಸಾಕ್ಷಿಯಾಗಿದ್ದಾನೆ ಎಂಬುದನ್ನು ಎಂದಿಗೂ ಮರೆಯದಿರಿ. ಈ ವಿಧಿವಿಹಿತ ವಾಗ್ದಾನಕ್ಕನುಸಾರ ಜೀವಿಸುವುದನ್ನು ಮುಂದುವರಿಸಿರಿ ಮತ್ತು ನಿಮ್ಮ ವಿವಾಹವು ಯೆಹೋವ ದೇವರಿಗೆ ಸ್ತುತಿ ಮತ್ತು ಮಹಿಮೆಯ ಒಂದು ಆಕರವಾಗಿರುವುದು!
[ಪಾದಟಿಪ್ಪಣಿ]
a ಸ್ಥಳಿಕ ನಿಯಮಗಳೊಂದಿಗೆ ಅನುವರ್ತಿಸುವ ಸಲುವಾಗಿ, ಕೆಲವು ಸ್ಥಳಗಳಲ್ಲಿ ಒಂದು ಸರಿಹೊಂದಿಸಿಕೊಂಡ ರೂಪಾಂತರವನ್ನು ಉಪಯೋಗಿಸಬೇಕಾದ ಅಗತ್ಯವಿರಬಹುದು. (ಮತ್ತಾಯ 22:21) ಹಾಗಿದ್ದರೂ, ಹೆಚ್ಚಿನ ದೇಶಗಳಲ್ಲಿ ಕ್ರೈಸ್ತ ದಂಪತಿಗಳು ಮೇಲಿನ ಪ್ರತಿಜ್ಞೆಯನ್ನು ಉಪಯೋಗಿಸುತ್ತಾರೆ.
[ಪುಟ 22ರಲ್ಲಿರುವ ಸಂಕ್ಷಿಪ್ತ ವಿವರಣೆ]
ಒಂದು ವಿಧದಲ್ಲಿ, ವಿವಾಹಿತ ದಂಪತಿಗಳು ಹಿಮದ ಹಳುಕುಗಳಂತಿದ್ದಾರೆ. ಅವರಲ್ಲಿ ಎಲ್ಲರೂ ಒಂದು ಅಂತರದಿಂದ ಅನನ್ಯವಾಗಿ ತೋರಬಹುದು, ಆದರೆ ವಾಸ್ತವದಲ್ಲಿ ಪ್ರತಿ ದಂಪತಿಗಳು ಅಸದೃಶವಾಗಿ ಭಿನ್ನರಾಗಿದ್ದಾರೆ
[ಕೃಪೆ]
Snow Crystals/Dover