ಒಳ್ಳೆಯ ಸಮಯಗಳಲ್ಲೂ ಕೆಟ್ಟ ಸಮಯಗಳಲ್ಲೂ ದೇವರ ಸೇವೆಯಲ್ಲಿ ಐಕ್ಯಗೊಂಡಿರುವುದು
ಮಿಶೆಲ್ ಮತ್ತು ಬಾಬೆಟ್ ಮ್ಯುಲರ್ ಹೇಳಿದಂತೆ
“ನಿಮಗಾಗಿ ಕೆಟ್ಟ ವಾರ್ತೆಯು ನನ್ನಲ್ಲಿದೆ,” ಎಂದು ವೈದ್ಯರು ಹೇಳಿದರು. “ಆಫ್ರಿಕದಲ್ಲಿನ ನಿಮ್ಮ ಮಿಷನೆರಿ ಜೀವನದ ಕುರಿತು ನೀವು ಮರೆತುಬಿಡಸಾಧ್ಯವಿದೆ.” ನನ್ನ ಪತ್ನಿಯಾದ, ಬಾಬೆಟ್ ಅನ್ನು ನೋಡುತ್ತಾ ಅವರು ಹೇಳಿದ್ದು, “ನಿಮಗೆ ಸ್ತನದ ಕ್ಯಾನ್ಸರ್ ಇದೆ.”
ನಾವು ವರ್ಣನಾತೀತವಾಗಿ ಮರಗಟ್ಟಿಹೋದೆವು. ನಮ್ಮ ಮನಸ್ಸುಗಳಲ್ಲಿ ಅನೇಕ ವಿಷಯಗಳು ಹಾದುಹೋದವು. ವೈದ್ಯರೊಂದಿಗಿನ ಈ ಭೇಟಿಯು ಕೇವಲ ಒಂದು ಅಂತಿಮ ವೈದ್ಯಕೀಯ ಪರೀಕ್ಷೆಯಾಗಿರುವುದೆಂದು ನಾವು ನೆನಸಿದ್ದೆವು. ಪಶ್ಚಿಮ ಆಫ್ರಿಕದ ಬೆನಿನ್ಗೆ ಹಿಂದಿರುಗಿ ಹೋಗುವ ನಮ್ಮ ಟಿಕೆಟ್ಗಳು ಖರೀದಿಸಲ್ಪಟ್ಟಿದ್ದವು. ಆ ವಾರದೊಳಗೆ ಅಲ್ಲಿ ಹಿಂದಿರುಗಿ ಹೋಗುವುದನ್ನು ನಾವು ಆಶಿಸಿದ್ದೆವು. ವಿವಾಹದ ನಮ್ಮ 23 ವರ್ಷಗಳ ಅವಧಿಯಲ್ಲಿ, ಒಳ್ಳೆಯ ಸಮಯಗಳನ್ನೂ ಕೆಟ್ಟ ಸಮಯಗಳನ್ನೂ ನಾವು ಅನುಭವಿಸಿದ್ದೆವು. ಗಲಿಬಿಲಿಗೊಂಡವರೂ ಭಯಭರಿತರೂ ಆದವರಾಗಿ, ನಾವು ಈಗ ಕ್ಯಾನ್ಸರ್ನ ವಿರುದ್ಧವಾದ ಒಂದು ಹೋರಾಟಕ್ಕಾಗಿ ನಮ್ಮನ್ನು ಸಿದ್ಧಪಡಿಸಿಕೊಂಡೆವು.
ಆರಂಭದಿಂದ ನಾವು ಪ್ರಾರಂಭಿಸೋಣ. ಮಿಶೆಲ್ ಸೆಪ್ಟೆಂಬರ್ 1947ರಲ್ಲಿ, ಬಾಬೆಟ್ ಆಗಸ್ಟ್ 1945ರಲ್ಲಿ ಜನಿಸಿದರು. ನಾವು ಫ್ರಾನ್ಸ್ನಲ್ಲಿ ಬೆಳೆದೆವು ಮತ್ತು 1967ರಲ್ಲಿ ವಿವಾಹವಾದೆವು. ನಾವು ಪ್ಯಾರಿಸ್ನಲ್ಲಿ ಜೀವಿಸಿದೆವು. 1968ರ ಆದಿ ಭಾಗದ ಒಂದು ಬೆಳಗ್ಗೆ, ಬಾಬೆಟ್ಗೆ ಕೆಲಸಕ್ಕೆ ತಡವಾಗಿತ್ತು. ಒಬ್ಬ ಮಹಿಳೆಯು ಮನೆಬಾಗಿಲಿಗೆ ಬಂದು, ಒಂದು ಧಾರ್ಮಿಕ ಬ್ರೋಷರನ್ನು ಆಕೆಗೆ ನೀಡಿದಳು; ಅದನ್ನು ಆಕೆ ಸ್ವೀಕರಿಸಿದಳು. ಅನಂತರ ಆ ಮಹಿಳೆಯು ಹೇಳಿದ್ದು: “ನಿನ್ನೊಡನೆ ಮತ್ತು ನಿನ್ನ ಪತಿಯೊಡನೆ ಮಾತಾಡಲು ನಾನು ನನ್ನ ಪತಿಯೊಂದಿಗೆ ಹಿಂದಿರುಗಿ ಬರಲೋ?”
ಬಾಬೆಟ್ ತನ್ನ ಉದ್ಯೋಗದ ಕುರಿತಾಗಿ ಆಲೋಚಿಸುತ್ತಿದ್ದಳು. ಆ ಸ್ತ್ರೀಯು ಅಲ್ಲಿಂದ ಹೋಗುವಂತೆ ಆಕೆ ಬಯಸಿದ್ದಳು, ಆದುದರಿಂದ ಆಕೆ “ಸರಿ, ಸರಿ,” ಎಂದು ಹೇಳಿದಳು.
ಮಿಶೆಲ್ ಹೇಳುವುದು: “ನನಗೆ ಧರ್ಮದಲ್ಲಿ ಆಸಕ್ತಿಯಿರಲಿಲ್ಲ, ಆದರೆ ಆ ಬ್ರೋಷರ್ ನನ್ನ ಗಮನವನ್ನು ಸೆಳೆಯಿತು ಮತ್ತು ನಾನು ಅದನ್ನು ಓದಿದೆ. ಕೆಲವು ದಿನಗಳ ಅನಂತರ, ಆ ಮಹಿಳೆ, ಜಾಸ್ಲಿನ್ ಲೆಮ್ವನ್ ತನ್ನ ಪತಿಯಾದ ಕ್ಲಾಡ್ನೊಂದಿಗೆ ಹಿಂದಿರುಗಿದಳು. ಬೈಬಲ್ನ ತನ್ನ ಉಪಯೋಗದಲ್ಲಿ ಅವನು ಬಹಳ ಕೌಶಲಭರಿತನಾಗಿದ್ದನು. ನನ್ನ ಎಲ್ಲ ಪ್ರಶ್ನೆಗಳಿಗೆ ಆತನಲ್ಲಿ ಉತ್ತರವಿತ್ತು. ನಾನು ಪ್ರಭಾವಿಸಲ್ಪಟ್ಟೆ.
“ಬಾಬೆಟ್ ಒಬ್ಬ ಒಳ್ಳೆಯ ಕ್ಯಾಥೊಲಿಕ್ ಆಗಿದ್ದಳು ಆದರೆ ಬೈಬಲನ್ನು ಹೊಂದಿರಲಿಲ್ಲ; ಅದು ಕ್ಯಾಥೊಲಿಕರಿಗೆ ಅಸಾಮಾನ್ಯವಾದದ್ದೇನೂ ಆಗಿರಲಿಲ್ಲ. ದೇವರ ವಾಕ್ಯವನ್ನು ನೋಡಲು ಮತ್ತು ಓದಲು ಆಕೆ ತುಂಬ ಉತ್ತೇಜನಗೊಂಡಳು. ನಮಗೆ ಕಲಿಸಲ್ಪಟ್ಟಿದ್ದ ಧಾರ್ಮಿಕ ವಿಚಾರಗಳಲ್ಲಿ ಅನೇಕ ವಿಚಾರಗಳು ಸುಳ್ಳಾಗಿದ್ದವು ಎಂಬುದನ್ನು ನಾವು ನಮ್ಮ ಅಭ್ಯಾಸದಿಂದ ಕಲಿತುಕೊಂಡೆವು. ನಾವು ಕಲಿಯುತ್ತಿದ್ದ ವಿಷಯಗಳ ಕುರಿತಾಗಿ ನಮ್ಮ ಸಂಬಂಧಿಕರೊಂದಿಗೆ ಮತ್ತು ಸ್ನೇಹಿತರೊಂದಿಗೆ ಮಾತಾಡಲು ಪ್ರಾರಂಭಿಸಿದೆವು. ಜನವರಿ 1969ರಲ್ಲಿ ನಾವು ಯೆಹೋವನ ದೀಕ್ಷಾಸ್ನಾನಿತ ಸಾಕ್ಷಿಗಳಾದೆವು. ಅದರ ಅನಂತರ ಬೇಗನೇ ನಮ್ಮ ಸಂಬಂಧಿಕರಲ್ಲಿ ಮತ್ತು ಸ್ನೇಹಿತರಲ್ಲಿ ಒಂಬತ್ತು ಮಂದಿ ದೀಕ್ಷಾಸ್ನಾನಿತರಾದರು.”
ಸಾರುವವರ ಅಗತ್ಯವಿದ್ದಲ್ಲಿ ಸೇವೆ ಸಲ್ಲಿಸುವುದು
ನಮ್ಮ ದೀಕ್ಷಾಸ್ನಾನದ ಅನಂತರ ಕೂಡಲೇ ನಾವು ಯೋಚಿಸಿದ್ದು: ‘ನಮಗೆ ಯಾವುದೇ ಮಕ್ಕಳಿಲ್ಲ, ಪೂರ್ಣ ಸಮಯದ ಶುಶ್ರೂಷೆಯನ್ನು ತೆಗೆದುಕೊಳ್ಳಬಾರದೇಕೆ?’ ಆದುದರಿಂದ, 1970ರಲ್ಲಿ ನಾವು ನಮ್ಮ ಉದ್ಯೋಗಗಳನ್ನು ಬಿಟ್ಟುಬಿಟ್ಟು, ಕ್ರಮದ ಪಯನೀಯರರಾಗಿ ನಮೂದಿಸಿಕೊಂಡೆವು ಮತ್ತು ಫ್ರಾನ್ಸ್ನ ಮಧ್ಯಭಾಗದಲ್ಲಿ, ನೆವರ್ ಹತ್ತಿರವಿರುವ, ಮುನ್ಯೀ-ಲಾರ್ಮ್ ಎಂಬ ಚಿಕ್ಕ ಪಟ್ಟಣಕ್ಕೆ ಸ್ಥಳಾಂತರಿಸಿದೆವು.
ಅದು ಒಂದು ಕ್ಲಿಷ್ಟಕರವಾದ ನೇಮಕವಾಗಿತ್ತು. ಬೈಬಲನ್ನು ಅಭ್ಯಾಸಿಸಲು ಬಯಸಿದ ಜನರನ್ನು ಕಂಡುಕೊಳ್ಳುವುದು ಅತಿ ಕಷ್ಟಕರವಾಗಿತ್ತು. ಐಹಿಕ ಉದ್ಯೋಗವನ್ನು ಕಂಡುಕೊಳ್ಳುವುದು ನಮಗೆ ಅಸಾಧ್ಯವಾದ ಕಾರಣದಿಂದ ನಾವು ಸ್ವಲ್ಪವೇ ಹಣವನ್ನು ಹೊಂದಿದ್ದೆವು. ಕೆಲವೊಮ್ಮೆ ನಮ್ಮಲ್ಲಿ ತಿನ್ನಲು ಕೇವಲ ಆಲೂಗಡ್ಡೆಗಳಿದ್ದವು. ಚಳಿಗಾಲದ ಸಮಯದಲ್ಲಿ ತಾಪಮಾನವು 22 ಡಿಗ್ರಿಗಳಿಂದ ಶೂನ್ಯ ಸೆಲ್ಸಿಯಸ್ಗಿಂತ ಕೆಳಮಟ್ಟಕ್ಕೆ ಇಳಿಯಿತು. ನಾವು ಅಲ್ಲಿ ವ್ಯಯಿಸಿದ ಸಮಯವನ್ನು, ಬಡವಾದ ಏಳು ಆಕಳುಗಳ ಸಮಯವೆಂದು ನಾವು ಕರೆದೆವು.—ಆದಿಕಾಂಡ 41:3.
ಆದರೆ ಯೆಹೋವನು ನಮ್ಮನ್ನು ಪೋಷಿಸಿದನು. ಒಂದು ದಿನ ಬಹುಮಟ್ಟಿಗೆ ನಮ್ಮಲ್ಲಿ ಆಹಾರವೇ ಇಲ್ಲದಿದ್ದಾಗ, ಬಾಬೆಟ್ಳ ಅಕ್ಕನಿಂದ ಕಳುಹಿಸಲ್ಪಟ್ಟ ಒಂದು ಚೀಸ್ನ ದೊಡ್ಡ ಡಬ್ಬವನ್ನು ಅಂಚೆಯವನು ಕೊಟ್ಟನು. ಮತ್ತೊಂದು ದಿನ ಸಾರುವಿಕೆಯ ಅನಂತರ ನಾವು ಮನೆಗೆ ಬಂದೆವು ಮತ್ತು ನಮ್ಮನ್ನು ನೋಡಲು 500 ಕಿಲೊಮೀಟರುಗಳಷ್ಟು ದೂರದಿಂದ ಬಂದ ಕೆಲವು ಸ್ನೇಹಿತರನ್ನು ಕಂಡುಕೊಂಡೆವು. ತೀರ ಕಷ್ಟಕರವಾದ ವಿಷಯಗಳಿದ್ದವೆಂಬುದನ್ನು ಕೇಳಿದ್ದುದರಿಂದ, ಈ ಸಹೋದರರು ನಮಗಾಗಿ ಆಹಾರದೊಂದಿಗೆ ತಮ್ಮ ಎರಡು ಕಾರುಗಳನ್ನು ಭರ್ತಿಮಾಡಿಕೊಂಡು ಬಂದಿದ್ದರು.
ಒಂದೂವರೆ ವರ್ಷದ ಅನಂತರ ಸೊಸೈಟಿಯು ನಮ್ಮನ್ನು ವಿಶೇಷ ಪಯನೀಯರರನ್ನಾಗಿ ನೇಮಿಸಿತು. ಅನಂತರದ ನಾಲ್ಕು ವರ್ಷಗಳಲ್ಲಿ, ನಾವು ನೆವರ್, ಅನಂತರ ಟ್ರವಾ, ಮತ್ತು ಅಂತಿಮವಾಗಿ ಮೂನ್ಟೀನ್ಯೀ ಲೇಮೆಟ್ಸ್ನಲ್ಲಿ ಸೇವೆ ಸಲ್ಲಿಸಿದೆವು. 1976ರಲ್ಲಿ ಮಿಶೆಲ್ ಫ್ರಾನ್ಸ್ನ ನೈರುತ್ಯ ಭಾಗದಲ್ಲಿ ಒಬ್ಬ ಸರ್ಕಿಟ್ ಮೇಲ್ವಿಚಾರಕನೋಪಾದಿ ನೇಮಿಸಲ್ಪಟ್ಟನು.
ಎರಡು ವರ್ಷಗಳ ಅನಂತರ, ಸರ್ಕಿಟ್ ಮೇಲ್ವಿಚಾರಕರಿಗಾಗಿ ಇದ್ದ ಒಂದು ಶಾಲೆಯ ಅವಧಿಯಲ್ಲಿ, ಮಿಷನೆರಿಗಳಾಗಿ ವಿದೇಶಕ್ಕೆ ಹೋಗಲು ನಮ್ಮನ್ನು ಆಮಂತ್ರಿಸುತ್ತಾ ವಾಚ್ ಟವರ್ ಸೊಸೈಟಿಯಿಂದ ಬಂದ ಒಂದು ಪತ್ರವನ್ನು ನಾವು ಪಡೆದೆವು; ಆ ಪತ್ರವು ನಾವು ಚಾಡ್ ಮತ್ತು ಬುರ್ಕಿನಾ ಫಾಸೋ (ಆಗ ಅಪ್ಪರ್ ವೋಲ್ಟಾ)ಗಳಲ್ಲಿ ಒಂದನ್ನು ಆಯ್ಕೆ ಮಾಡುವಂತೆ ಹೇಳಿತು. ನಾವು ಚಾಡ್ ಅನ್ನು ಆರಿಸಿಕೊಂಡೆವು. ಟಹೀಟಿ ಶಾಖೆಯ ಕೆಳಗೆ ಕೆಲಸ ಮಾಡುವಂತೆ ನಮ್ಮನ್ನು ನೇಮಿಸುತ್ತಾ, ಬೇಗನೆ ನಾವು ಮತ್ತೊಂದು ಪತ್ರವನ್ನು ಪಡೆದೆವು. ನಾವು ಒಂದು ದೊಡ್ಡ ಖಂಡವಾದ ಆಫ್ರಿಕವನ್ನು ಕೇಳಿಕೊಂಡಿದ್ದರೂ ಬೇಗನೆ ಒಂದು ಸಣ್ಣ ದ್ವೀಪದಲ್ಲಿ ನಮ್ಮನ್ನು ಕಂಡುಕೊಂಡೆವು!
ದಕ್ಷಿಣ ಪೆಸಿಫಿಕ್ನಲ್ಲಿ ಸೇವೆ ಸಲ್ಲಿಸುವುದು
ಟಹೀಟಿ, ದಕ್ಷಿಣ ಪೆಸಿಫಿಕ್ನಲ್ಲಿರುವ ಒಂದು ಸುಂದರವಾದ ಉಷ್ಣವಲಯದ ದ್ವೀಪವಾಗಿದೆ. ನಾವು ಅಲ್ಲಿ ಆಗಮಿಸಿದಾಗ, ನಮ್ಮನ್ನು ಭೇಟಿಯಾಗಲು ವಿಮಾನ ನಿಲ್ದಾಣದಲ್ಲಿ ಸುಮಾರು ಒಂದು ನೂರು ಸಹೋದರರಿದ್ದರು. ಅವರು ನಮ್ಮನ್ನು ಹೂಮಾಲೆಯೊಂದಿಗೆ ಸ್ವಾಗತಿಸಿದರು, ಮತ್ತು ಫ್ರಾನ್ಸ್ನಿಂದ ನಮ್ಮ ದೀರ್ಘ ಪ್ರಯಾಣದ ಅನಂತರ ನಾವು ದಣಿದಿದ್ದರೂ, ನಾವು ಬಹಳ ಸಂತೋಷಗೊಂಡೆವು.
ಟಹೀಟಿಗೆ ಆಗಮಿಸಿದ ನಾಲ್ಕು ತಿಂಗಳುಗಳ ಬಳಿಕ, ತೆಂಗಿನಕಾಯಿಗಳ ಸರಕಿನಿಂದ ತುಂಬಿದ ನೌಕಾ ಹಾಯಿಯೊಂದಿಗೆ ಒಂದು ಚಿಕ್ಕ ದೋಣಿಯನ್ನು ನಾವು ಏರಿದೆವು. ಐದು ದಿನಗಳ ಅನಂತರ ನಾವು ನಮ್ಮ ಹೊಸ ನೇಮಕವನ್ನು ತಲಪಿದೆವು—ಮಾರ್ಕೆಸಸ್ ದ್ವೀಪದಲ್ಲಿನ ನೂಕಹೀವ ದ್ವೀಪ. ಆ ದ್ವೀಪದಲ್ಲಿ ಸುಮಾರು 1,500 ಜನರು ಜೀವಿಸುತ್ತಿದ್ದರು, ಆದರೆ ಇತರ ಯಾವ ಸಹೋದರರೂ ಅಲ್ಲಿರಲಿಲ್ಲ. ನಾವು ಮಾತ್ರವೇ.
ಆ ಸಮಯದಲ್ಲಿ ಪರಿಸ್ಥಿತಿಗಳು ಹಳೆಯ ತರಹದ್ದಾಗಿದ್ದವು. ನಾವು ಕಾಂಕ್ರೀಟ್ ಮತ್ತು ಬಿದಿರಿನಿಂದ ಮಾಡಲ್ಪಟ್ಟ ಒಂದು ಚಿಕ್ಕ ಮನೆಯಲ್ಲಿ ಜೀವಿಸಿದೆವು. ಅಲ್ಲಿ ವಿದ್ಯುಚ್ಛಕ್ತಿಯಿರಲಿಲ್ಲ. ಕೆಲವೊಮ್ಮೆ ಕಾರ್ಯಮಾಡುತ್ತಿದ್ದ ನಲ್ಲಿಯನ್ನು ನಾವು ಹೊಂದಿದ್ದೆವು, ಆದರೆ ನೀರು ಮಣ್ಣಿನಿಂದ ಕೂಡಿದ್ದಾಗಿತ್ತು. ನಾವು ಹೆಚ್ಚಿನ ಸಮಯ, ತೊಟ್ಟಿಯೊಂದರಲ್ಲಿ ಶೇಖರಿಸಲ್ಪಡುತ್ತಿದ್ದ ಮಳೆಯ ನೀರನ್ನು ಉಪಯೋಗಿಸುತ್ತಿದ್ದೆವು. ಅಲ್ಲಿ ನೆಲಗಟ್ಟು ಮಾಡಲ್ಪಟ್ಟ ರಸ್ತೆಗಳಿರಲಿಲ್ಲ, ಕೇವಲ ಮಣ್ಣಿನ ರಸ್ತೆಯಿತ್ತು.
ದ್ವೀಪದ ಅತಿ ದೂರದ ಭಾಗಗಳಿಗೆ ತಲಪಲಿಕ್ಕೆ, ನಾವು ಕುದುರೆಗಳನ್ನು ಬಾಡಿಗೆಗೆ ತೆಗೆದುಕೊಳ್ಳಬೇಕಾಗಿತ್ತು. ತಡಿಗಳು ಮರದಿಂದ ಮಾಡಲ್ಪಟ್ಟಿದ್ದವು—ತುಂಬ ಅಹಿತಕರವಾಗಿತ್ತು, ವಿಶೇಷವಾಗಿ, ಹಿಂದೆಂದೂ ಕುದುರೆಯ ಮೇಲೆ ಸವಾರಿ ಮಾಡದ ಬಾಬೆಟ್ಗೆ. ನಾವು ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಬಿದಿರನ್ನು ಕಡಿದುಹಾಕಲು ಒಂದು ಮಚ್ಚುಕತ್ತಿಯನ್ನು ತೆಗೆದುಕೊಂಡು ಹೋಗುತ್ತಿದ್ದೆವು. ಫ್ರಾನ್ಸ್ನಲ್ಲಿನ ಜೀವನದಿಂದ ಅತಿ ದೊಡ್ಡ ಬದಲಾವಣೆಯು ಅದಾಗಿತ್ತು.
ಕೇವಲ ನಾವಿಬ್ಬರೇ ಹಾಜರಾದರೂ, ನಾವು ರವಿವಾರದ ಕೂಟಗಳನ್ನು ನಡೆಸಿದೆವು. ನಾವಿಬ್ಬರು ಮಾತ್ರ ಇದ್ದುದರಿಂದ, ಪ್ರಾರಂಭದಲ್ಲಿ ನಮಗೆ ಇತರ ಕೂಟಗಳಿರಲಿಲ್ಲ. ಬದಲಿಗೆ ನಾವು ಕೂಟದ ವಿಷಯವನ್ನು ಒಟ್ಟಾಗಿ ಓದಿದೆವು.
ಕೆಲವೊಂದು ತಿಂಗಳುಗಳ ಅನಂತರ, ಆ ವಿಧದಲ್ಲಿ ಮುಂದುವರಿಸುವುದು ಒಳ್ಳೆಯದಲ್ಲವೆಂದು ನಾವು ನಿರ್ಧರಿಸಿದೆವು. ಮಿಶೆಲ್ ಹೇಳುವುದು: “ನಾನು ಬಾಬೆಟ್ಗೆ ಹೇಳಿದ್ದು, ‘ನಾವು ಯೋಗ್ಯ ರೀತಿಯಲ್ಲಿ ಉಡುಪನ್ನು ಧರಿಸಬೇಕು. ನೀನು ಅಲ್ಲಿ ಕುಳಿತುಕೋ, ಮತ್ತು ನಾನು ಇಲ್ಲಿ ಕುಳಿತುಕೊಳ್ಳುತ್ತೇನೆ. ನಾನು ಒಂದು ಪ್ರಾರ್ಥನೆಯೊಂದಿಗೆ ಪ್ರಾರಂಭಿಸುತ್ತೇನೆ, ಮತ್ತು ಅನಂತರ ದೇವಪ್ರಭುತ್ವ ಶುಶ್ರೂಷಾ ಶಾಲೆ ಮತ್ತು ಸೇವಾ ಕೂಟವನ್ನು ನಾವು ನಡೆಸೋಣ. ಕೋಣೆಯಲ್ಲಿರುವ ಮತ್ತೊಬ್ಬ ವ್ಯಕ್ತಿಯು ನೀನೊಬ್ಬಳೇ ಆಗಿರುವುದಾದರೂ, ನಾನು ಪ್ರಶ್ನೆಯನ್ನು ಕೇಳುತ್ತೇನೆ ಮತ್ತು ನೀನು ಉತ್ತರವನ್ನು ಹೇಳುವಿ.’ ನಾವು ಅದನ್ನು ಮಾಡಿದ್ದು ಒಳ್ಳೆಯದಾಗಿತ್ತು, ಏಕೆಂದರೆ ಸಭೆಯು ಇಲ್ಲದಿರುವಾಗ ಆತ್ಮಿಕವಾಗಿ ಅಸಡ್ಡೆಯುಳ್ಳವರಾಗಿ ಪರಿಣಮಿಸುವುದು ಸುಲಭವಾಗಿದೆ.”
ನಮ್ಮ ಕ್ರೈಸ್ತ ಕೂಟಗಳಿಗೆ ಜನರು ಬರಲು ಸಮಯವು ಹಿಡಿಯಿತು. ಮೊದಲ ಎಂಟು ತಿಂಗಳುಗಳ ವರೆಗೆ ನಾವಿಬ್ಬರೇ ಇದ್ದೆವು. ಅನಂತರ, ಒಬ್ಬರು, ಇಬ್ಬರು ಅಥವಾ ಕೆಲವೊಮ್ಮೆ ಇತರ ಮೂವರೊಂದಿಗೆ ನಾವು ಜತೆಗೂಡಿದ್ದೆವು. ಒಂದು ವರ್ಷ, ಕರ್ತನ ಸಂಧ್ಯಾ ಭೋಜನದ ವಾರ್ಷಿಕ ಆಚರಣೆಯನ್ನು ನಾವಿಬ್ಬರೇ ಪ್ರಾರಂಭಿಸಿದೆವು. ಹತ್ತು ನಿಮಿಷಗಳ ಬಳಿಕ, ಕೆಲವು ಜನರು ಬಂದರು, ಆದುದರಿಂದ ನಾನು ಭಾಷಣವನ್ನು ನಿಲ್ಲಿಸಿ ಪುನಃ ಪ್ರಾರಂಭಿಸಿದೆ.
ಇಂದು, ಮಾರ್ಕ್ವಿಸ್ ದ್ವೀಪದಲ್ಲಿ 42 ಪ್ರಚಾರಕರು ಇದ್ದಾರೆ ಮತ್ತು 3 ಸಭೆಗಳು ಅಲ್ಲಿವೆ. ಕೆಲಸದ ಅತ್ಯಂತ ದೊಡ್ಡ ಭಾಗವು, ನಮ್ಮ ಅನಂತರ ಬಂದವರಿಂದ ಮಾಡಲ್ಪಟ್ಟಿತಾದರೂ, ಆಗ ನಾವು ಸಂಪರ್ಕಿಸಿದ ಕೆಲವು ಜನರು ಈಗ ದೀಕ್ಷಾಸ್ನಾನಿತರಾಗಿದ್ದಾರೆ.
ನಮ್ಮ ಸಹೋದರರು ಅಮೂಲ್ಯರಾಗಿದ್ದರು
ನೂಕಹೀವದಲ್ಲಿ ನಾವು ಸಹನೆಯನ್ನು ಕಲಿತುಕೊಂಡೆವು. ಅತ್ಯಂತ ಮೂಲಭೂತ ಆವಶ್ಯಕತೆಗಳನ್ನು ಬಿಟ್ಟು ಪ್ರತಿಯೊಂದು ವಿಷಯಕ್ಕಾಗಿ ನಾವು ಕಾಯಬೇಕಾಗಿತ್ತು. ಉದಾಹರಣೆಗಾಗಿ, ನಿಮಗೆ ಒಂದು ಪುಸ್ತಕವು ಬೇಕಾದಲ್ಲಿ, ನೀವು ಅದಕ್ಕಾಗಿ ಬರೆಯಬೇಕಾಗಿತ್ತು, ಅನಂತರ ಅದು ಬರುವದಕ್ಕಿಂತ ಮುನ್ನ ಎರಡು ಅಥವಾ ಮೂರು ತಿಂಗಳುಗಳ ತನಕ ಕಾಯಬೇಕಿತ್ತು.
ನಾವು ಕಲಿತಂತಹ ಮತ್ತೊಂದು ಪಾಠವು ನಮ್ಮ ಸಹೋದರರು ಅಮೂಲ್ಯರಾಗಿದ್ದರು ಎಂಬುದೇ. ಟಹೀಟಿಯನ್ನು ಭೇಟಿಮಾಡಿ, ಕೂಟವೊಂದನ್ನು ಹಾಜರಾಗಿ, ಸಹೋದರರು ಹಾಡುತ್ತಿರುವುದನ್ನು ಕೇಳಿಸಿಕೊಂಡಾಗ, ನಾವು ಕಂಬನಿಯನ್ನು ಸುರಿಸುವಂತಾಯಿತು. ಕೆಲವು ಸಹೋದರರೊಂದಿಗೆ ಹೊಂದಿಕೊಂಡು ಹೋಗುವುದು ಕಷ್ಟಕರವಾಗಿದೆ ಎಂಬುದು ನಿಜವಾಗಿರಬಹುದಾದರೂ, ನೀವು ಏಕಾಂಗಿಯಾಗಿರುವಾಗ, ಭಾತೃತ್ವದೊಂದಿಗೆ ಇರುವುದು ಎಷ್ಟು ಒಳ್ಳೆಯದಾಗಿರುವುದು ಎಂಬುದನ್ನು ನೀವು ಗ್ರಹಿಸುವಿರಿ. 1980ರಲ್ಲಿ ನಾವು ಟಹೀಟಿಗೆ ಹಿಂದಿರುಗಬೇಕೆಂದು ಮತ್ತು ಸರ್ಕಿಟ್ ಕೆಲಸದಲ್ಲಿ ಸೇವೆ ಸಲ್ಲಿಸಬೇಕೆಂದು ಸೊಸೈಟಿಯು ನಿರ್ಧರಿಸಿತು. ಅಲ್ಲಿ ನಾವು ಸಹೋದರರ ಹೃದಯೋಲ್ಲಾಸದ ಆತಿಥ್ಯದಿಂದ ಮತ್ತು ಸಾರುವ ಕಾರ್ಯಕ್ಕಾಗಿದ್ದ ಅವರ ಪ್ರೀತಿಯಿಂದ ಮಹತ್ತರವಾಗಿ ಉತ್ತೇಜಿಸಲ್ಪಟ್ಟೆವು. ನಾವು ಟಹೀಟಿಯಲ್ಲಿನ ಸರ್ಕಿಟ್ ಕೆಲಸದಲ್ಲಿ ಮೂರು ವರ್ಷಗಳನ್ನು ಕಳೆದೆವು.
ದ್ವೀಪದಿಂದ ದ್ವೀಪಕ್ಕೆ
ಅನಂತರ ನಾವು ರೈಅಟೇಅ—ಮತ್ತೊಂದು ಪೆಸಿಫಿಕ್ ದ್ವೀಪ—ದಲ್ಲಿ ಮಿಷನೆರಿ ಮನೆಯೊಂದಕ್ಕೆ ನೇಮಿಸಲ್ಪಟ್ಟೆವು ಮತ್ತು ಅಲ್ಲಿ ನಾವು ಸುಮಾರು ಎರಡು ವರ್ಷಗಳ ತನಕ ಉಳಿದೆವು. ರೈಅಟೇಅದ ಅನಂತರ, ಟೂಅಮೋಟೂ ದ್ವೀಪ ಗುಂಪಿನಲ್ಲಿ ಸರ್ಕಿಟ್ ಕೆಲಸ ಮಾಡುವುದಕ್ಕೆ ನಾವು ನೇಮಿಸಲ್ಪಟ್ಟೆವು. ನಾವು ದೋಣಿಯ ಮೂಲಕ 80 ದ್ವೀಪಗಳಲ್ಲಿ 25 ದ್ವೀಪಗಳನ್ನು ಭೇಟಿಮಾಡಿದೆವು. ಬಾಬೆಟ್ಗೆ ಇದು ಕಷ್ಟಕರವಾಗಿತ್ತು. ಪ್ರತಿಯೊಂದು ಸಮಯ ದೋಣಿಯ ಮೂಲಕ ಪ್ರಯಾಣಿಸಿದಾಗ, ಆಕೆ ಅಸ್ವಸ್ಥಳಾದಳು.
ಬಾಬೆಟ್ ಹೇಳುವುದು: “ಅದು ಅತಿ ಭಯಂಕರವಾಗಿತ್ತು! ನಾವು ದೋಣಿಯಲ್ಲಿ ಕಳೆದ ಸಮಯದಲ್ಲೆಲ್ಲಾ ನಾನು ಅಸ್ವಸ್ಥಳಾಗಿದ್ದೆ. ನಾವು ಸಮುದ್ರದಲ್ಲಿ ಐದು ದಿವಸಗಳ ತನಕ ಇದ್ದಲ್ಲಿ, ಐದೂ ದಿನ ಅಸ್ವಸ್ಥಳಾಗಿರುತ್ತಿದ್ದೆ. ನನಗೆ ಯಾವುದೇ ಔಷಧಗಳು ಪರಿಣಾಮ ಬೀರಲಿಲ್ಲ. ಆದರೂ, ನನ್ನ ಅಸ್ವಸ್ಥತೆಯ ಹೊರತೂ, ಸಮುದ್ರವು ಸುಂದರವಾಗಿತ್ತೆಂದು ನಾನು ನೆನಸಿದೆ. ಅದು ಒಂದು ಅದ್ಭುತಕರವಾದ ದೃಶ್ಯವಾಗಿತ್ತು. ದೋಣಿಯೊಂದಿಗೆ ಡಾಲ್ಫಿನ್ಗಳು ಪೈಪೋಟಿ ಮಾಡುತ್ತಿದ್ದವು. ನೀವು ನಿಮ್ಮ ಕೈಗಳನ್ನು ತಟ್ಟುವುದಾದರೆ ಅನೇಕ ವೇಳೆ ಅವು ನೀರಿನಿಂದ ಹೊರಕ್ಕೆ ನೆಗೆಯುತ್ತಿದ್ದವು!”
ಸರ್ಕಿಟ್ ಕೆಲಸದಲ್ಲಿನ ಐದು ವರ್ಷಗಳ ಅನಂತರ, ನಾವು ಎರಡು ವರ್ಷಗಳ ತನಕ ಟಹೀಟಿಗೆ ಪುನಃ ನೇಮಿಸಲ್ಪಟ್ಟೆವು ಮತ್ತು ನಮಗೆ ಸಾರುವ ಕಾರ್ಯದಲ್ಲಿ ಪುನಃ ಒಂದು ಒಳ್ಳೆಯ ಸಮಯವಿತ್ತು. ಒಂದೂವರೆ ವರ್ಷದಲ್ಲಿ ನಮ್ಮ ಸಭೆಯು 35 ಪ್ರಚಾರಕರಿಂದ 70ಕ್ಕೆ ಇಮ್ಮಡಿಯಾಗಿತ್ತು. ನಾವು ಯಾರೊಂದಿಗೆ ಬೈಬಲನ್ನು ಅಭ್ಯಾಸಿಸಿದೆವೋ ಆ ಹನ್ನೆರಡು ಮಂದಿ, ನಾವು ಆ ಸ್ಥಳವನ್ನು ಬಿಟ್ಟ ನಂತರವೇ ದೀಕ್ಷಾಸ್ನಾನಿತರಾಗಿದ್ದರು. ಅವರಲ್ಲಿ ಕೆಲವರು ಈಗ ಸಭೆಯಲ್ಲಿ ಹಿರಿಯರಾಗಿದ್ದಾರೆ.
ಒಟ್ಟಿಗೆ ದಕ್ಷಿಣ ಪೆಸಿಫಿಕ್ನಲ್ಲಿ ನಾವು 12 ವರ್ಷಗಳನ್ನು ಕಳೆದೆವು. ಸಭೆಗಳು ಈಗ ದೃಢವಾಗಿ ಸ್ಥಾಪನೆಯಾಗಿರುವುದರಿಂದ ಇನ್ನುಮುಂದೆ ಅವರಿಗೆ ದ್ವೀಪಗಳಲ್ಲಿ ಮಿಷನೆರಿಗಳ ಅಗತ್ಯವಿಲ್ಲ ಎಂಬುದಾಗಿ ತಿಳಿಸಿದ ಪತ್ರವೊಂದನ್ನು ನಾವು ಆಗ ಸೊಸೈಟಿಯಿಂದ ಪಡೆದುಕೊಂಡೆವು. ನಾವು ಟಹೀಟಿಗೆ ಆಗಮಿಸಿದಾಗ ಅಲ್ಲಿ ಸುಮಾರು 450 ಪ್ರಚಾರಕರಿದ್ದರು, ಮತ್ತು ನಾವು ನಿರ್ಗಮಿಸಿದಾಗ 1,000ಕ್ಕಿಂತಲೂ ಹೆಚ್ಚು ಪ್ರಚಾರಕರಿದ್ದರು.
ಕಟ್ಟಕಡೆಗೆ ಆಫ್ರಿಕ!
ನಾವು ಫ್ರಾನ್ಸ್ಗೆ ಹಿಂದಿರುಗಿದೆವು, ಮತ್ತು ಒಂದೂವರೆ ತಿಂಗಳಿನ ಅನಂತರ ಸೊಸೈಟಿಯು ನಮಗೆ ಒಂದು ಹೊಸ ನೇಮಕವನ್ನು ಕೊಟ್ಟಿತು—ಪಶ್ಚಿಮ ಆಫ್ರಿಕದ ಬೆನಿನ್ಗೆ. 13 ವರ್ಷಗಳ ಮೊದಲು ನಾವು ಆಫ್ರಿಕಕ್ಕೆ ಹೋಗಬೇಕೆಂದು ಬಯಸಿದ್ದೆವು, ಆದುದರಿಂದ ನಾವು ತುಂಬ ಸಂತೋಷಿತರಾಗಿದ್ದೆವು.
1990ರ ನವೆಂಬರ್ 3ರಂದು ನಾವು ಬೆನಿನ್ಗೆ ಆಗಮಿಸಿದೆವು ಮತ್ತು ರಾಜ್ಯ ಸಾರುವಿಕೆಯ ಚಟುವಟಿಕೆಯ ಮೇಲಿನ ನಿಷೇಧವನ್ನು ತೆಗೆದುಹಾಕಿದ 14 ವರ್ಷಗಳ ಅನಂತರ ಆಗಮಿಸಿದವರಲ್ಲಿ ನಾವು ಪ್ರಥಮ ಮಿಷನೆರಿಗಳಾಗಿದ್ದೆವು. ಅದು ತುಂಬ ಉದ್ರೇಕಗೊಳಿಸುವಂತಹದ್ದಾಗಿತ್ತು. ನೆಲಸಲು ನಮಗೆ ಯಾವುದೇ ಸಮಸ್ಯೆಗಳಿದ್ದಿರಲಿಲ್ಲ ಏಕೆಂದರೆ, ಜೀವನವು ಪೆಸಿಫಿಕ್ ದ್ವೀಪಗಳಲ್ಲಿ ಇದ್ದಂತಹ ಜೀವನಕ್ಕೆ ತದ್ರೀತಿಯದ್ದಾಗಿದೆ. ಜನರು ಬಹಳ ಸ್ನೇಹಪೂರ್ಣರೂ ಆದರಿಸುವವರೂ ಆಗಿದ್ದಾರೆ. ನೀವು ರಸ್ತೆಯಲ್ಲಿ ಯಾವುದೇ ವ್ಯಕ್ತಿಯೊಂದಿಗೆ ನಿಂತು ಮಾತಾಡಬಲ್ಲಿರಿ.
ನಾವು ಬೆನಿನ್ಗೆ ಆಗಮಿಸಿದ ಕೆಲವೇ ವಾರಗಳ ಬಳಿಕ, ಬಾಬೆಟ್ ತನ್ನ ಸ್ತನದಲ್ಲಿ ಒಂದು ಗಂಟನ್ನು ಗಮನಿಸಿದಳು. ಆದುದರಿಂದ, ನಾವು ಹೊಸದಾಗಿ ಸ್ಥಾಪಿಸಲ್ಪಟ್ಟ ಶಾಖಾ ಆಫೀಸ್ನ ಹತ್ತಿರದಲ್ಲಿರುವ ಒಂದು ಸಣ್ಣ ಚಿಕಿತ್ಸಾಲಯಕ್ಕೆ ಹೋದೆವು. ವೈದ್ಯರು ಆಕೆಯನ್ನು ಪರೀಕ್ಷಿಸಿ, ಬಹಳ ಬೇಗನೆ ಆಕೆಗೆ ಶಸ್ತ್ರಚಿಕಿತ್ಸೆಯು ಅಗತ್ಯವಿದೆ ಎಂದು ಹೇಳಿದರು. ಮರುದಿನ ನಾವು ಮತ್ತೊಂದು ಚಿಕಿತ್ಸಾಲಯಕ್ಕೆ ಹೋದೆವು, ಅಲ್ಲಿ ನಾವು ಫ್ರಾನ್ಸ್ನಿಂದ ಬಂದ ಒಬ್ಬ ಸ್ತ್ರೀರೋಗ ತಜ್ಞೆ—ಯೂರೋಪಿನ ಒಬ್ಬ ವೈದ್ಯೆ—ಯನ್ನು ನೋಡಿದೆವು. ಬಾಬೆಟ್ ಶಸ್ತ್ರಚಿಕಿತ್ಸೆಯನ್ನು ಹೊಂದುವ ಸಲುವಾಗಿ, ನಾವು ಕೂಡಲೇ ಫ್ರಾನ್ಸ್ಗೆ ಹೋಗಬೇಕೆಂದು ಆಕೆ ಕೂಡ ಹೇಳಿದಳು. ಎರಡು ದಿನಗಳ ಅನಂತರ ಫ್ರಾನ್ಸ್ಗೆ ಹೋಗಲು ನಾವು ವಿಮಾನದಲ್ಲಿದ್ದೆವು.
ನಾವು ಬೆನಿನ್ ಅನ್ನು ಬಿಟ್ಟುಹೋಗಲು ದುಃಖಪಟ್ಟೆವು. ದೇಶದಲ್ಲಿನ ನವೀಕರಿಸಲ್ಪಟ್ಟ ಧಾರ್ಮಿಕ ಸ್ವಾತಂತ್ರ್ಯದೊಂದಿಗೆ, ಹೊಸ ಮಿಷನೆರಿಗಳನ್ನು ಹೊಂದಲು ಸಹೋದರರು ರೋಮಾಂಚಿತರಾಗಿದ್ದರು ಮತ್ತು ನಾವು ಅಲ್ಲಿರಲು ಸಂತೋಷವುಳ್ಳವರಾಗಿದ್ದೆವು. ಕೆಲವೊಂದು ವಾರಗಳು ಮಾತ್ರ ಆ ದೇಶದಲ್ಲಿದ್ದ ಬಳಿಕ ನಾವು ಬಿಟ್ಟುಹೋಗಬೇಕಾಗಿದ್ದುದರಿಂದ, ನಾವು ಕ್ಷೋಭೆಗೊಂಡಿದ್ದೆವು.
ನಾವು ಫ್ರಾನ್ಸ್ಗೆ ಆಗಮಿಸಿದಾಗ ಸರ್ಜನ್, ಬಾಬೆಟ್ಳನ್ನು ಪರೀಕ್ಷಿಸಿ, ಆಕೆಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂಬುದನ್ನು ದೃಢಪಡಿಸಿದರು. ವೈದ್ಯರು ಕೂಡಲೇ ಕಾರ್ಯೋನ್ಮುಖರಾದರು, ಒಂದು ಸಣ್ಣ ಶಸ್ತ್ರಚಿಕಿತ್ಸೆಯನ್ನು ನಡೆಸಿ, ಮರುದಿನ ಆಸ್ಪತ್ರೆಯಿಂದ ಬಾಬೆಟ್ಳನ್ನು ಬಿಡುಗಡೆಗೊಳಿಸಿದರು. ಇದು ವಿಷಯದ ಅಂತ್ಯವಾಗಿತ್ತೆಂದು ನಾವು ನೆನಸಿದ್ದೆವು.
ಎಂಟು ದಿನಗಳ ಅನಂತರ, ನಾವು ಸರ್ಜನ್ ಅನ್ನು ಭೇಟಿಯಾದೆವು. ಆಗಲೇ ಅವರು ಬಾಬೆಟ್ಳಿಗೆ ಸ್ತನದ ಕ್ಯಾನ್ಸರ್ ಇದೆ ಎಂಬ ವಾರ್ತೆಯನ್ನು ಹೇಳಿದ್ದು.
ಆ ಸಮಯದಲ್ಲಿ ತನಗೆ ಹೇಗನಿಸಿತೆಂಬುದನ್ನು ಜ್ಞಾಪಿಸಿಕೊಳ್ಳುತ್ತಾ, ಬಾಬೆಟ್ ಹೇಳುವುದು: “ಮೊದಲು, ನಾನು ಮಿಶೆಲ್ ಕ್ಷೋಭೆಗೊಂಡದ್ದಕ್ಕಿಂತ ಸ್ವಲ್ಪ ಕಡಿಮೆ ಕ್ಷೋಭೆಗೊಂಡಿದ್ದೆ. ಆದರೆ ಆ ಕೆಟ್ಟ ವಾರ್ತೆಯ ಮಾರನೇ ದಿನ ನಾನು ಯಾವ ಅನಿಸಿಕೆಯನ್ನು ಹೊಂದಿರಲಿಲ್ಲ. ಅಳಲು ನಾನು ಶಕ್ತಳಾಗಿರಲಿಲ್ಲ. ನಾನು ನಗಲು ಶಕ್ತಳಾಗಿರಲಿಲ್ಲ. ನಾನು ಸತ್ತುಹೋಗುವೆನೆಂದು ನೆನಸಿದ್ದೆ. ನನಗೆ, ಕ್ಯಾನ್ಸರ್ ಅಂದರೆ ಮರಣವಾಗಿತ್ತು. ನನ್ನ ಮನೋಭಾವವು, ಏನೆಲ್ಲಾ ಅಗತ್ಯವಿದೆಯೋ ಅದನ್ನು ನಾವು ಮಾಡಲೇಬೇಕು ಎಂಬುದಾಗಿತ್ತು.”
ಕ್ಯಾನ್ಸರ್ನೊಂದಿಗೆ ಹೋರಾಟ
ನಾವು ಶುಕ್ರವಾರ ಕೆಟ್ಟ ವಾರ್ತೆಯನ್ನು ಕೇಳಿದೆವು, ಮತ್ತು ಮಂಗಳವಾರ ಬಾಬೆಟ್ಳ ಎರಡನೆಯ ಶಸ್ತ್ರಚಿಕಿತ್ಸೆಯನ್ನು ಗೊತ್ತುಪಡಿಸಲಾಯಿತು. ನಾವು ಬಾಬೆಟ್ಳ ಅಕ್ಕಳೊಂದಿಗೆ ತಂಗಿದ್ದೆವು, ಆದರೆ ಆಕೆ ಕೂಡ ಅಸ್ವಸ್ಥಳಾಗಿದ್ದಳು, ಆದುದರಿಂದ ನಾವು ಆಕೆಯ ಚಿಕ್ಕ ವಾಸದ ಕೊಠಡಿಯಲ್ಲಿ ತಂಗುವುದನ್ನು ಮುಂದುವರಿಸುವುದು ಅಸಾಧ್ಯವಾಗಿತ್ತು.
ನಾವು ಎಲ್ಲಿ ಹೋಗಸಾಧ್ಯವಿದೆ ಎಂದು ಯೋಚಿಸುತ್ತಿದ್ದೆವು. ಆಗ ಹಿಂದೆ ನಾವು ತಂಗಿದ್ದ ಈವ್ ಮತ್ತು ಬ್ರೀಸೀಟ್ ಮರ್ಡ ಎಂಬ ದಂಪತಿಗಳನ್ನು ನಾವು ಜ್ಞಾಪಿಸಿಕೊಂಡೆವು. ಈ ದಂಪತಿಗಳು ನಮಗೆ ತುಂಬ ಆದರವನ್ನು ತೋರಿಸಿದ್ದರು. ಆದುದರಿಂದ ನಾವು ಈವ್ಗೆ ಫೋನ್ ಮಾಡಿ, ಬಾಬೆಟ್ಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಮತ್ತು ಎಲ್ಲಿ ತಂಗಬೇಕೆಂದು ನಮಗೆ ಗೊತ್ತಿಲ್ಲ ಎಂಬುದಾಗಿ ಅವನಿಗೆ ಹೇಳಿದೆವು. ಮಿಶೆಲ್ಗೆ ಒಂದು ಉದ್ಯೋಗದ ಅವಶ್ಯವಿದೆ ಎಂಬುದನ್ನೂ ನಾವು ಹೇಳಿದೆವು.
ಈವ್ ಮಿಶೆಲ್ಗೆ ತನ್ನ ಮನೆಯ ಸಂಪೂರ್ಣ ಕೆಲಸವನ್ನು ಒದಗಿಸಿದನು. ಅನೇಕ ದಯಾಪರ ಕ್ರಿಯೆಗಳಿಂದ ಸಹೋದರರು ನಮ್ಮನ್ನು ಬೆಂಬಲಿಸಿ ಉತ್ತೇಜಿಸಿದರು. ಅವರು ನಮಗೆ ಆರ್ಥಿಕವಾಗಿಯೂ ಸಹಾಯಮಾಡಿದರು. ಸೊಸೈಟಿಯು ಬಾಬೆಟ್ಳ ವೈದ್ಯಕೀಯ ಬಿಲ್ಗಳನ್ನು ಪಾವತಿಮಾಡಿತು.
ಶಸ್ತ್ರಚಿಕಿತ್ಸೆಯು ಅಪಾಯಕರವಾಗಿತ್ತು. ವೈದ್ಯರು ದುಗ್ಧರಸ ಗಂಟುಗಳನ್ನು ಮತ್ತು ಸ್ತನವನ್ನು ತೆಗೆದುಹಾಕಬೇಕಾಯಿತು. ಅವರು ತತ್ಕ್ಷಣವೇ ರಾಸಾಯನಿಕ ಚಿಕಿತ್ಸೆಯನ್ನು ಪ್ರಾರಂಭಿಸಿದರು. ಒಂದು ವಾರದ ಅನಂತರ, ಬಾಬೆಟ್ ಆಸ್ಪತ್ರೆಯನ್ನು ಬಿಡಸಾಧ್ಯವಿದ್ದರೂ, ಮುಂದಿನ ಚಿಕಿತ್ಸೆಗಾಗಿ ಆಕೆ ಪ್ರತಿ ಮೂರು ವಾರಗಳಿಗೆ ಒಮ್ಮೆ ಹಿಂದಿರುಗಬೇಕಾಗಿತ್ತು.
ಬಾಬೆಟ್, ಚಿಕಿತ್ಸೆಯನ್ನು ಪಡೆಯುತ್ತಿದ್ದ ಸಮಯದಂದಿನಿಂದ, ಸಭೆಯಲ್ಲಿನ ಸಹೋದರರು ಬಹಳ ಸಹಾಯಕರಾಗಿದ್ದರು. ಸ್ತನದ ಕ್ಯಾನ್ಸರ್ ಹೊಂದಿದ್ದ ಒಬ್ಬ ಸಹೋದರಿಯು ಸಹ ತುಂಬ ಉತ್ತೇಜನದಾಯಕವಾಗಿದ್ದಳು. ಏನನ್ನು ನಿರೀಕ್ಷಿಸಬೇಕೆಂಬುದನ್ನು ಆಕೆ ಬಾಬೆಟ್ಗೆ ಹೇಳಿದಳು ಮತ್ತು ಆಕೆಗೆ ಮಹತ್ತರವಾದ ಸಾಂತ್ವನವನ್ನು ನೀಡಿದಳು.
ಹಾಗಿದ್ದರೂ, ನಾವು ನಮ್ಮ ಭವಿಷ್ಯತ್ತಿನ ಕುರಿತು ಆತಂಕಗೊಂಡಿದ್ದೆವು. ಇದನ್ನು ಅರಿತ, ಮಿಶೆಲ್ ಮತ್ತು ಜಾನೆಟ್ ಸಿಲೆರ್ಯೇ ಊಟವೊಂದಕ್ಕಾಗಿ ನಮ್ಮನ್ನು ಒಂದು ಫಲಹಾರಮಂದಿರಕ್ಕೆ ಕರೆದುಕೊಂಡುಹೋದರು.
ನಾವು ಮಿಷನೆರಿ ಸೇವೆಯನ್ನು ಬಿಡಬೇಕೆಂಬುದನ್ನೂ ಆಫ್ರಿಕಕ್ಕೆ ನಾವೆಂದೂ ಹೋಗಲಾರೆವು ಎಂಬುದನ್ನೂ ನಾವು ಅವರಿಗೆ ಹೇಳಿದೆವು. ಹಾಗಿದ್ದರೂ, ಸಹೋದರ ಸಿಲೆರ್ಯೇ ಹೇಳಿದ್ದು: “ಏನು? ನೀವು ಬಿಡಬೇಕೆಂದು ಯಾರು ಹೇಳುತ್ತಾರೆ? ಆಡಳಿತ ಮಂಡಳಿಯೋ? ಫ್ರಾನ್ಸ್ನಲ್ಲಿರುವ ಸಹೋದರರೋ? ಅದನ್ನು ಯಾರು ಹೇಳಿದರು?”
“ಅದನ್ನು ಯಾರೊಬ್ಬರೂ ಹೇಳಲಿಲ್ಲ, ನಾನು ಅದನ್ನು ಹೇಳುತ್ತಿದ್ದೇನೆ,” ಎಂಬುದಾಗಿ ನಾನು ಉತ್ತರಿಸಿದೆ.
“ಇಲ್ಲ, ಇಲ್ಲ!” ಎಂದು ಸಹೋದರ ಸಿಲೆರ್ಯೇ ಹೇಳಿದರು. “ನೀವು ಹಿಂದಿರುಗುವಿರಿ!”
ರಾಸಾಯನಿಕ ಚಿಕಿತ್ಸೆಯ ನಂತರ ವಿಕಿರಣ ಚಿಕಿತ್ಸೆಯು ಹಿಂಬಾಲಿಸಿತು, ಅದು ಆಗಸ್ಟ್ 1991ರ ಅಂತ್ಯದಷ್ಟಕ್ಕೆ ಮುಕ್ತಾಯಗೊಂಡಿತು. ಕ್ರಮವಾದ ಪರೀಕ್ಷೆಗಳಿಗಾಗಿ ಬಾಬೆಟ್ ಫ್ರಾನ್ಸ್ಗೆ ಹಿಂದಿರುಗಿ ಹೋಗುವುದಾದರೆ, ಆಫ್ರಿಕಕ್ಕೆ ನಮ್ಮ ಹಿಂದಿರುಗುವಿಕೆಯಲ್ಲಿ ತಾವು ಯಾವುದೇ ಸಮಸ್ಯೆಯನ್ನು ಕಂಡುಕೊಳ್ಳುವುದಿಲ್ಲವೆಂದು ವೈದ್ಯರು ಹೇಳಿದರು.
ಪುನಃ ಬೆನಿನ್ಗೆ
ಆದುದರಿಂದ, ನಾವು ಮಿಷನೆರಿ ಸೇವೆಗೆ ಹಿಂದಿರುಗಲು ಅನುಮತಿಯನ್ನು ಕೇಳುತ್ತಾ, ಬ್ರೂಕ್ಲಿನ್ನಲ್ಲಿರುವ ಮುಖ್ಯ ಕಾರ್ಯಾಲಯಕ್ಕೆ ಪತ್ರವನ್ನು ಬರೆದೆವು. ಅವರ ಉತ್ತರವನ್ನು ಪಡೆಯಲು ನಾವು ತವಕದಿಂದ್ದೆವು. ದಿನಗಳು ಮಂದಗತಿಯಲ್ಲಿ ಹೋಗುವಂತೆ ತೋರಿತು. ಕೊನೆಯದಾಗಿ, ಮಿಶೆಲ್ ಇನ್ನುಮುಂದೆ ಕಾಯಲು ಅಶಕ್ತನಾದುದರಿಂದ, ಅವನು ಬ್ರೂಕ್ಲಿನ್ಗೆ ಫೋನ್ಮಾಡಿ ನಮ್ಮ ಪತ್ರವನ್ನು ಅವರು ಪಡೆದಿದ್ದಾರೋ ಎಂಬುದಾಗಿ ಕೇಳಿದನು. ತಾವು ಅದನ್ನು ಪರಿಗಣಿಸಿದ್ದೇವೆಂದು ಅವರು ಹೇಳಿದರು—ನಾವು ಬೆನಿನ್ಗೆ ಹಿಂದಿರುಗಬಹುದು! ನಾವು ಯೆಹೋವನಿಗೆ ಎಷ್ಟೊಂದು ಆಭಾರಿಗಳಾಗಿದ್ದೆವು!
ಈ ವಾರ್ತೆಯನ್ನು ಆಚರಿಸಲು ಮರ್ಡ ಕುಟುಂಬವು ಒಂದು ದೊಡ್ಡ ಗೋಷ್ಠಿಯನ್ನು ಏರ್ಪಡಿಸಿತು. ನವೆಂಬರ್ 1991ರಲ್ಲಿ, ನಾವು ಬೆನಿನ್ಗೆ ಹಿಂದಿರುಗಿದೆವು, ಮತ್ತು ಸಹೋದರರು ಒಂದು ಭೋಜನಕೂಟದೊಂದಿಗೆ ನಮ್ಮನ್ನು ಸ್ವಾಗತಿಸಿದರು!
ಈಗ ಬಾಬೆಟ್ಳು ಆರೋಗ್ಯವಾಗಿರುವಂತೆ ತೋರುತ್ತದೆ. ಸಂಪೂರ್ಣ ವೈದ್ಯಕೀಯ ಪರೀಕ್ಷೆಗಳಿಗೆ ನಾವು ನಿಯತಕಾಲಿಕವಾಗಿ ಫ್ರಾನ್ಸ್ಗೆ ಹಿಂದಿರುಗಿದ್ದೇವೆ, ಮತ್ತು ವೈದ್ಯರು ಕ್ಯಾನ್ಸರಿನ ಯಾವ ಚಿಹ್ನೆಯನ್ನೂ ಕಂಡಿಲ್ಲ. ನಮ್ಮ ಮಿಷನೆರಿ ನೇಮಕಕ್ಕೆ ಪುನಃ ಹಿಂದಿರುಗಲು ನಾವು ಸಂತೋಷಿತರಾಗಿದ್ದೇವೆ. ಬೆನಿನ್ನಲ್ಲಿ ನಮ್ಮ ಅಗತ್ಯವಿದೆ ಎಂದು ಅನಿಸುತ್ತದೆ ಮತ್ತು ಯೆಹೋವನು ನಮ್ಮ ಕೆಲಸವನ್ನು ಆಶೀರ್ವದಿಸಿದ್ದಾನೆ. ನಾವು ಹಿಂದಿರುಗಿದ ಸಮಯದಿಂದ, 14 ಜನರು ದೀಕ್ಷಾಸ್ನಾನಿತರಾಗುವಂತೆ ನಾವು ಸಹಾಯಮಾಡಿದ್ದೇವೆ. ಈಗ ಅವರಲ್ಲಿ ಐದು ಮಂದಿ ಕ್ರಮದ ಪಯನೀಯರರಾಗಿದ್ದಾರೆ, ಮತ್ತು ಒಬ್ಬನು ಒಬ್ಬ ಶುಶ್ರೂಷಾ ಸೇವಕನಾಗಿ ನೇಮಿಸಲ್ಪಟ್ಟಿದ್ದಾನೆ. ನಮ್ಮ ಸಭೆಯು ಬೆಳೆದು, ಎರಡು ಸಭೆಗಳಾಗಿ ವಿಭಜಿತಗೊಂಡಿರುವುದನ್ನೂ ನಾವು ನೋಡಿದ್ದೇವೆ.
ನಾವು ಅನೇಕ ವರ್ಷಗಳಿಂದ, ಪತಿಪತ್ನಿಯಾಗಿ ಯೆಹೋವನನ್ನು ಸೇವಿಸಿದ್ದೇವೆ ಮತ್ತು ಅನೇಕ ಆಶೀರ್ವಾದಗಳನ್ನು ಅನುಭವಿಸಿದ್ದೇವೆ ಹಾಗೂ ಅನೇಕ ಅತ್ಯುತ್ತಮ ಜನರನ್ನು ಅರಿತಿದ್ದೇವೆ. ಆದರೆ, ಕಷ್ಟಾನುಭವಗಳನ್ನು ಯಶಸ್ವಿಯಾಗಿ ಸಹಿಸಿಕೊಳ್ಳಲು ನಾವು ಯೆಹೋವನಿಂದ ತರಬೇತಿಯನ್ನೂ ಹೊಂದಿ ಬಲಪಡಿಸಲ್ಪಟ್ಟಿದ್ದೇವೆ. ಯೋಬನಂತೆ, ವಿಷಯಗಳು ಏಕೆ ಸಂಭವಿಸಿದವು ಎಂಬುದನ್ನು ನಾವು ಯಾವಾಗಲೂ ಗ್ರಹಿಸದಿದ್ದರೂ, ಯೆಹೋವನು ನಮಗೆ ಯಾವಾಗಲೂ ಸಹಾಯಮಾಡಲು ಅಲ್ಲಿದ್ದನು ಎಂಬುದನ್ನು ನಾವು ತಿಳಿದಿದ್ದೆವು. ಅದು ದೇವರ ವಾಕ್ಯವು ಹೇಳುವಂತಿದೆ: “ಇಗೋ, ಯೆಹೋವನ ಹಸ್ತವು ರಕ್ಷಿಸಲಾರದಂತೆ ಮೋಟುಗೈಯಲ್ಲ; ಆತನ ಕಿವಿಯು ಕೇಳಲಾರದ ಹಾಗೆ ಕಿವುಡಲ್ಲ.”—ಯೆಶಾಯ 59:1.
[ಪುಟ 23 ರಲ್ಲಿರುವ ಚಿತ್ರ]
ಮಿಶೆಲ್ ಮತ್ತು ಬಾಬೆಟ್ ಮ್ಯುಲರ್ ಬೆನಿನ್ನಲ್ಲಿ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿಕೊಂಡಿರುವುದು
[ಪುಟ 25 ರಲ್ಲಿರುವ ಚಿತ್ರಗಳು]
ಉಷ್ಣವಲಯದ ಟಹೀಟಿಯಲ್ಲಿ ಪಾಲಿನೀಷಿಯನರ ನಡುವೆ ಮಿಷನೆರಿ ಕಾರ್ಯ