ಈಸ್ಟರ್ ಅಥವಾ ಜ್ಞಾಪಕ ನೀವು ಯಾವುದನ್ನು ಆಚರಿಸಬೇಕು?
ಎಪ್ರಿಲ್ 7ರಂದು ದಿಗಂತದ ಮೇಲೆ ಅರುಣೋದಯವು ತನ್ನ ಕಾಂತಿಯನ್ನು ಸುತ್ತಲೂ ಹಬ್ಬಿಸಿದಂತೆ, ಕೋಟಿಗಟ್ಟಲೆ ಜನರು ವರ್ಷದ ತಮ್ಮ ಅತ್ಯಂತ ಪವಿತ್ರ ದಿನವಾದ ಈಸ್ಟರ್ ಅನ್ನು ಸ್ವಾಗತಿಸುವರು. ಒಂದು ಕಾಲದಲ್ಲಿ ಸೆಪ್ಟವಜೆಸಿಮ ಎಂದು ಕರೆಯಲ್ಪಟ್ಟಿದ್ದ ರಜಾ ದಿನವೊಂದರೊಂದಿಗೆ ಆರಂಭವಾದ 120 ದಿನದ ಹಬ್ಬಗಳು ಮತ್ತು ಉಪವಾಸಗಳ ಕಾಲಾವಧಿಗೆ ಈ ಹೆಸರು ಅನ್ವಯಿಸಲ್ಪಟ್ಟಿದ್ದು, ತ್ರಯೈಕ್ಯದ ದಿನವೆಂದು ಯಾವುದು ಕರೆಯಲ್ಪಡುತ್ತದೊ ಆ ದಿನದಂದು ಕೊನೆಗೊಂಡಿತು. ಇಂದು ಈಸ್ಟರ್ ಎಂಬ ಹೆಸರು, ಯೇಸುವಿನ ಪುನರುತ್ಥಾನವನ್ನು ಸ್ಮರಿಸುವ ದಿನಕ್ಕೆ—ಈಸ್ಟರ್ ಆದಿತ್ಯವಾರಕ್ಕೆ ಅನ್ವಯಿಸಲ್ಪಟ್ಟಿದೆ.
ಆದರೂ, ಅದೇ ವಾರದ ಆರಂಭದ ಒಂದು ಸಾಯಂಕಾಲದಂದು, ಕರ್ತನ ಸಂಧ್ಯಾ ಭೋಜನವೆಂದೂ ವಿದಿತವಾಗಿರುವ, ಕ್ರಿಸ್ತನ ಮರಣದ ಜ್ಞಾಪಕವನ್ನು ಆಚರಿಸಲಿಕ್ಕಾಗಿ, ಇತರ ಲಕ್ಷಾಂತರ ಮಂದಿ ಕೂಡಿಬರುವರು. ಭೂಮಿಯ ಮೇಲೆ ತನ್ನ ಕೊನೆಯ ರಾತ್ರಿಯಂದು ಯೇಸುವು ತಾನೇ ನಡೆಸಲಾರಂಭಿಸಿದ ಒಂದು ಆಚರಣೆಯು ಇದಾಗಿದೆ. ತದನಂತರ ಆತನು ತನ್ನ ಶಿಷ್ಯರಿಗೆ ಹೇಳಿದ್ದು: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ.”—ಲೂಕ 22:19.
ನೀವು ಯಾವುದನ್ನು ಆಚರಿಸಬೇಕು?
ಈಸ್ಟರ್ನ ಮೂಲ
ಅನೇಕ ದೇಶಗಳಲ್ಲಿ ಉಪಯೋಗಿಸಲ್ಪಡುವ ಈಸ್ಟರ್ ಎಂಬ ಹೆಸರು, ಬೈಬಲಿನಲ್ಲಿ ಕಂಡುಬರುವುದಿಲ್ಲ. “ಅರುಣೋದಯ ಮತ್ತು ವಸಂತ ಕಾಲದ ದೇವತೆಯಾದ ಇಯೊಸ್ಟ್ರಳ ಹೆಸರು, ಈ ರಜಾ ದಿನಕ್ಕೆ ಕೊಡಲ್ಪಟ್ಟಿತು,” ಎಂದು ಮೀಡೀವಲ್ ಹಾಲಿಡೇಸ್ ಆ್ಯಂಡ್ ಫೆಸ್ಟಿವಲ್ಸ್ ಎಂಬ ಪುಸ್ತಕವು ನಮಗೆ ಹೇಳುತ್ತದೆ. ಈ ದೇವತೆ ಯಾರಾಗಿದ್ದಳು? “ಪುರಾಣ ಕಥೆಗನುಗುಣವಾಗಿ, ಅವನ ಪರಿಶುದ್ಧತೆಗಾಗಿ ಶ್ವೇತ ದೇವರೆಂದು ಕರೆಯಲ್ಪಡುವ ಬಾಲ್ಡರ್ನನ್ನು ಮತ್ತು ಅವನ ಹಣೆಯು ಮಾನವಕುಲಕ್ಕೆ ಬೆಳಕನ್ನು ಸರಬರಾಯಿ ಮಾಡಿದ್ದ ಕಾರಣದಿಂದ ಸೂರ್ಯ ದೇವರೆಂದು ಕರೆಯಲ್ಪಡುವವನನ್ನೂ ಬರಮಾಡಿಕೊಳ್ಳಲಿಕ್ಕಾಗಿ, ವಾಲ್ಹಾಲದ ದ್ವಾರಗಳನ್ನು ತೆರೆದವಳು ಇಯೊಸ್ಟ್ರಳಾಗಿದ್ದಳು,” ಎಂದು ದಿ ಅಮೆರಿಕನ್ ಬುಕ್ ಆಫ್ ಡೇಸ್ ಉತ್ತರಿಸುತ್ತದೆ. ಅದು ಕೂಡಿಸುವುದು: “ಚರ್ಚು ತನ್ನ ಆರಂಭದ ದಿನಗಳಲ್ಲಿ ಹಳೆಯ ವಿಧರ್ಮಿ ಪದ್ಧತಿಗಳನ್ನು ದತ್ತುಸ್ವೀಕಾರಮಾಡಿ, ಅವುಗಳಿಗೆ ಕ್ರೈಸ್ತ ಅರ್ಥವನ್ನು ಕೊಟ್ಟಿತು ಎಂಬುದರಲ್ಲಿ ಸಂದೇಹವಿಲ್ಲ. ಇಯೊಸ್ಟ್ರಳ ಹಬ್ಬವು ವಸಂತ ಕಾಲದಲ್ಲಿ ಜೀವಿತದ ಪುನರ್ನವೀಕರಣದ ಆಚರಣೆಯಲ್ಲಿದುದರಿಂದ, ಅದನ್ನು, ಅವರು ಯಾರ ಸುವಾರ್ತೆಯನ್ನು ಸಾರಿದರೋ ಆ ಯೇಸುವಿನ ಮರಣದಿಂದ ಪುನರುತ್ಥಾನದ ಆಚರಣೆಯನ್ನಾಗಿ ಮಾಡುವುದು ಸುಲಭವಾಗಿತ್ತು.”
ಈಸ್ಟರ್ ಮೊಟ್ಟೆಗಳು, ಈಸ್ಟರ್ ಮೊಲ, ಮತ್ತು ಹಾಟ್ ಕ್ರಾಸ್ ಬನ್ನು (ರೊಟ್ಟಿ)ಗಳಂತಹ ಈಸ್ಟರ್ ಪದ್ಧತಿಗಳು, ಕೆಲವು ದೇಶಗಳಲ್ಲಿ ಹೇಗೆ ಅಸ್ತಿತ್ವಕ್ಕೆ ಬಂದವು ಎಂಬುದನ್ನು ವಿಧರ್ಮಿ ಪದ್ಧತಿಗಳ ಈ ದತ್ತುಸ್ವೀಕಾರವು ವಿವರಿಸುತ್ತದೆ. “ಸುಡುವ (ಬೇಕ್ ಮಾಡುವ) ಮೂಲಕ ಕಂದು ಬಣ್ಣಕ್ಕೆ ತಿರುಗಿಸಲ್ಪಟ್ಟ ಬನ್ನುಗಳಾಗಿದ್ದು, ಶಿಲುಬೆಯೊಂದರಿಂದ ಗುರುತುಹಾಕಲ್ಪಟ್ಟಿರುವ” ಹಾಟ್ ಕ್ರಾಸ್ ಬನ್ನುಗಳನ್ನು ಮಾಡುವ ಪದ್ಧತಿಯ ಕುರಿತಾಗಿ ಈಸ್ಟರ್ ಆ್ಯಂಡ್ ಇಟ್ಸ್ ಕಸ್ಟಮ್ಸ್ ಎಂಬ ಪುಸ್ತಕವು ಹೇಳುವುದು: “ಈಸ್ಟರ್ನ ಹಿಂದಿನ ಮೊದಲ ಶುಕ್ರವಾರದ (ಗುಡ್ ಫ್ರೈಡೆ) ಘಟನೆಗಳಿಂದ ಶಿಲುಬೆಯು ಶಾಶ್ವತವಾದ ಮಹತ್ವವನ್ನು ಗಳಿಸುವ ದೀರ್ಘ ಸಮಯದ ಮುಂಚೆಯೇ ಅದು ಒಂದು ವಿಧರ್ಮಿ ಸಂಕೇತವಾಗಿತ್ತು, ಮತ್ತು ಕ್ರೈಸ್ತಪೂರ್ವ ಸಮಯಗಳಲ್ಲಿ ಕೆಲವೊಮ್ಮೆ ಬ್ರೆಡ್ಗಳು ಹಾಗೂ ಕೇಕ್ಗಳು ಶಿಲುಬೆಯಿಂದ ಗುರುತುಹಾಕಲ್ಪಟ್ಟಿದ್ದವು.”
ಈ ಪದ್ಧತಿಗಳ ಉಲ್ಲೇಖವನ್ನು ನಾವು ಶಾಸ್ತ್ರಗಳಲ್ಲಿ ಎಲ್ಲಿಯೂ ಕಂಡುಕೊಳ್ಳುವುದಿಲ್ಲ, ಇಲ್ಲವೆ ಯೇಸುವಿನ ಆರಂಭದ ಶಿಷ್ಯರು ಅವುಗಳನ್ನು ನಂಬಿದರು ಎಂಬುದಕ್ಕೆ ಯಾವುದೇ ಪುರಾವೆಯು ಇರುವುದಿಲ್ಲ. ವಾಸ್ತವವಾಗಿ, ಅಪೊಸ್ತಲ ಪೌಲನು ನಮಗೆ “ವಾಕ್ಯಕ್ಕೆ ಸೇರಿರುವ ಅಮಿಶ್ರಿತ ಹಾಲಿಗಾಗಿ ಹಂಬಲವನ್ನು ಕಲ್ಪಿಸಿಕೊಳ್ಳಿರಿ, ಅದರ ಮೂಲಕ [ನಾವು] ರಕ್ಷಣೆಯ ಕಡೆಗೆ ಬೆಳೆಯಬಹುದು” ಎಂದು ಹೇಳುತ್ತಾನೆ. (1 ಪೇತ್ರ 2:2, NW) ಆದುದರಿಂದ ಕ್ರೈಸ್ತಪ್ರಪಂಚದ ಚರ್ಚುಗಳು, ತಮ್ಮ ನಂಬಿಕೆಗಳು ಮತ್ತು ಪದ್ಧತಿಗಳೊಳಗೆ ಅಂತಹ ಸುವ್ಯಕ್ತವಾದ ವಿಧರ್ಮಿ ಸಂಕೇತಗಳನ್ನು ಏಕೆ ದತ್ತುಸ್ವೀಕಾರಮಾಡಿಕೊಂಡವು?
ಕ್ಯೂರಿಯಾಸಿಟೀಸ್ ಆಫ್ ಪಾಪ್ಯುಲರ್ ಕಸ್ಟಮ್ಸ್ ಎಂಬ ಪುಸ್ತಕವು ಉತ್ತರಿಸುವುದು: “ನಿರ್ಮೂಲ ಮಾಡಲು ಅಸಾಧ್ಯವಾಗಿದ್ದ ಅಸ್ತಿತ್ವದಲ್ಲಿದ್ದಂತಹ ವಿಧರ್ಮಿ ವ್ರತಾಚರಣೆಗಳಿಗೆ ಕ್ರೈಸ್ತ ಮಹತ್ವವನ್ನು ಕೊಡುವುದು, ಆರಂಭದ ಚರ್ಚಿನ ಬದಲಾಗದ ಕಾರ್ಯನೀತಿಯಾಗಿತ್ತು. ಈಸ್ಟರ್ನ ವಿದ್ಯಮಾನದಲ್ಲಿ ಪರಿವರ್ತನೆಯು ವಿಶೇಷವಾಗಿ ಸುಲಭವಾಗಿತ್ತು. ನೈಸರ್ಗಿಕ ಸೂರ್ಯನ ಉದಯಿಸುವಿಕೆಯಲ್ಲಿನ ಆನಂದ, ಮತ್ತು ಚಳಿಗಾಲದ ಅಂತ್ಯದಿಂದ ನಿಸರ್ಗವನ್ನು ಎಚ್ಚರಗೊಳಿಸುವುದರಲ್ಲಿನ ಆನಂದವು, ನೀತಿಯ ಸೂರ್ಯನ ಉದಯಿಸುವಿಕೆಯಲ್ಲಿ, ಸಮಾಧಿಯಿಂದ ಕ್ರಿಸ್ತನ ಪುನರುತ್ಥಾನದಲ್ಲಿ ಆನಂದವಾಗಿ ಪರಿಣಮಿಸಿತು. ಸುಮಾರು ಮೇ 1ರಂದು ಸಂಭವಿಸಿದ ವಿಧರ್ಮಿ ಆಚರಣೆಗಳಲ್ಲಿ ಕೆಲವು ಆಚರಣೆಗಳು, ಈಸ್ಟರ್ನ ಆಚರಣೆಯೊಂದಿಗೆ ಹೊಂದಿಕೆಯಾಗುವಂತೆಯೂ ಬದಲಾಯಿಸಲ್ಪಟ್ಟಿದ್ದವು.” ಜನಪ್ರಿಯವಾದ ವಿಧರ್ಮಿ ಪದ್ಧತಿಗಳು ಮತ್ತು ಮಂತ್ರವಾದದ ಸಂಸ್ಕಾರಗಳನ್ನು ತೊರೆಯುವುದಕ್ಕೆ ಬದಲಾಗಿ, ಧಾರ್ಮಿಕ ಮುಖಂಡರು ಅವುಗಳನ್ನು ಗಣನೆಗೆ ತೆಗೆದುಕೊಳ್ಳದೆ ಅವುಗಳಿಗೆ “ಕ್ರೈಸ್ತ ಮಹತ್ವವನ್ನು” ಕೊಟ್ಟರು.
‘ಆದರೆ ಅದರಲ್ಲಿ ಯಾವುದಾದರೂ ಕೆಡುಕು ಇದೆಯೊ?’ ಎಂದು ನೀವು ಕುತೂಹಲಪಡಬಹುದು. ಕೆಲವರು ಇಲ್ಲ ಎಂಬುದಾಗಿ ಅಭಿಪ್ರಯಿಸುತ್ತಾರೆ. “ಕ್ರೈಸ್ತತ್ವದಂತಹ ಒಂದು ಧರ್ಮವು ಇನ್ನೊಂದು ಸಂಸ್ಕೃತಿಯಿಂದ ಪರಿಚಯಿಸಲ್ಪಡುವಾಗ, ಹಳೆಯ ಧರ್ಮಗಳಿಂದ ಆರಂಭವಾದ ಸಾಂಪ್ರದಾಯಿಕ ಪದ್ಧತಿಗಳಲ್ಲಿ ಕೆಲವನ್ನು ಅದು ದತ್ತುಸ್ವೀಕಾರಮಾಡುತ್ತದೆ ಮತ್ತು ಅನುಮೋದಿಸುತ್ತದೆ,” ಎಂದು ಇಪಿಸ್ಕೊಪಲ್ ಪಾದ್ರಿಯಾದ ಆ್ಯಲನ್ ಡಬ್ಲ್ಯೂ. ವಾಟ್ಸ್, ಈಸ್ಟರ್—ಇಟ್ಸ್ ಸ್ಟೋರಿ ಆ್ಯಂಡ್ ಮೀನಿಂಗ್ ಎಂಬ ತನ್ನ ಪುಸ್ತಕದಲ್ಲಿ ಹೇಳಿದನು. “ಚರ್ಚಿನಿಂದ ಕಲಿಸಲ್ಪಟ್ಟಂತಹದ್ದೇ ಶಾಶ್ವತ ಮೂಲತತ್ವಗಳನ್ನು ಸೂಚಿಸುವಂತೆ ತೋರುವ, ಸಾರ್ವಜನಿಕ ಪೂಜಾವಿಧಾನದ ಸಾಂಪ್ರದಾಯಿಕ ಆಚರಣೆಗಳನ್ನು ಕ್ರೈಸ್ತಪ್ರಪಂಚವು ಆರಿಸಿಕೊಳ್ಳುತ್ತದೆ ಮತ್ತು ಪರಿಚಯಿಸುತ್ತದೆ.” ಅನೇಕರಿಗೆ, ತಮ್ಮ ಚರ್ಚು ಈ ಆಚರಣೆಗಳನ್ನು ಅನುಮೋದಿಸಿದೆ ಮತ್ತು ಅವುಗಳನ್ನು ಪವಿತ್ರವಾಗಿ ಎಣಿಸಿದೆ ಎಂಬ ವಾಸ್ತವಾಂಶವು ತಾನೇ, ಅವುಗಳನ್ನು ಅಂಗೀಕರಿಸಲು ಸಾಕಷ್ಟು ಕಾರಣವಾಗಿದೆ. ಆದರೆ ಪ್ರಾಮುಖ್ಯವಾದ ಪ್ರಶ್ನೆಗಳು ಅಲಕ್ಷ್ಯಮಾಡಲ್ಪಡುತ್ತಿವೆ. ಈ ಪದ್ಧತಿಗಳ ಕುರಿತಾಗಿ ದೇವರಿಗೆ ಹೇಗನಿಸುತ್ತದೆ? ಈ ವಿಷಯದಲ್ಲಿ ಅನುಸರಿಸಲಿಕ್ಕಾಗಿ ಆತನು ಯಾವುದೇ ಮಾರ್ಗದರ್ಶನಗಳನ್ನು ಕೊಟ್ಟಿದ್ದಾನೊ?
ದೇವರ ದೃಷ್ಟಿಕೋನವನ್ನು ಪಡೆದುಕೊಳ್ಳುವುದು
“ಈಸ್ಟರ್ ದಿನ, ನಮ್ಮ ಕರ್ತನ ಪುನರುತ್ಥಾನದ ಹಬ್ಬವು, ಕ್ರೈಸ್ತ ಚರ್ಚಿನ ಹಬ್ಬಗಳಲ್ಲೆಲ್ಲಾ ಅತ್ಯಂತ ಮಹಾನ್ ಹಬ್ಬವಾಗಿದೆ” ಎಂದು ಈಸ್ಟರ್ ಆ್ಯಂಡ್ ಇಟ್ಸ್ ಕಸ್ಟಮ್ಸ್ ಎಂಬ ತಮ್ಮ ಪುಸ್ತಕದಲ್ಲಿ ಕ್ರಿಸ್ಟೀನ್ ಹೋಲ್ ಹೇಳಿದರು. ಇತರ ಲೇಖಕರು ಸಮ್ಮತಿಸುತ್ತಾರೆ. “ಕ್ರೈಸ್ತ ವರ್ಷದಲ್ಲಿನ ಯಾವುದೇ ರಜಾ ದಿನ ಅಥವಾ ಹಬ್ಬವನ್ನು, ಈಸ್ಟರ್ ಆದಿತ್ಯವಾರದ ಪ್ರಮುಖತೆಯೊಂದಿಗೆ ಹೋಲಿಸಸಾಧ್ಯವಿಲ್ಲ” ಎಂದು ಸೆಲಿಬ್ರೇಷನ್ಸ್ ಎಂಬ ಪುಸ್ತಕದಲ್ಲಿ ರಾಬರ್ಟ್ ಜೆ. ಮಯರ್ಸ್ ಟಿಪ್ಪಣಿ ಮಾಡುತ್ತಾರೆ. ಆದರೂ ಅದು ಕೆಲವು ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಈಸ್ಟರನ್ನು ಆಚರಿಸುವುದು ಅಷ್ಟು ಪ್ರಾಮುಖ್ಯವಾಗಿರುವುದಾದರೆ, ಹಾಗೆ ಆಚರಿಸುವಂತೆ ಬೈಬಲಿನಲ್ಲಿ ಎಲ್ಲಿಯೂ ನಿರ್ದಿಷ್ಟವಾದ ಆಜ್ಞೆಯು ಕೊಡಲ್ಪಟ್ಟಿಲ್ಲವೇಕೆ? ಯೇಸುವಿನ ಆರಂಭದ ಶಿಷ್ಯರು ಈಸ್ಟರ್ ಆದಿತ್ಯವಾರವನ್ನು ಆಚರಿಸಿದುದರ ಕುರಿತಾದ ಯಾವುದಾದರೂ ದಾಖಲೆಯು ಇದೆಯೊ?
ಯಾವುದನ್ನು ಆಚರಿಸಬೇಕು ಅಥವಾ ಯಾವುದನ್ನು ಆಚರಿಸಬಾರದು ಎಂಬುದರ ಕುರಿತಾಗಿ ಬೈಬಲು ಮಾರ್ಗದರ್ಶನಗಳನ್ನು ಕೊಡುವುದರಲ್ಲಿ ಕರ್ತವ್ಯಲೋಪಮಾಡುವುದಿಲ್ಲ. ಇದನ್ನು ಪುರಾತನ ಇಸ್ರಾಯೇಲ್ ಜನಾಂಗಕ್ಕೆ ಹೇಳುವುದರಲ್ಲಿ ದೇವರು ಬಹಳ ಖಚಿತನಾಗಿದ್ದನು, ಮತ್ತು ಈ ಮುಂಚೆ ಗಮನಿಸಲ್ಪಟ್ಟಂತೆ, ಕ್ರಿಸ್ತನ ಮರಣದ ಜ್ಞಾಪಕವನ್ನು ಆಚರಿಸುವುದನ್ನು ಮುಂದುವರಿಸಲಿಕ್ಕಾಗಿ ಕ್ರೈಸ್ತರಿಗೆ ವಿಶದವಾದ ಬೋಧನೆಗಳು ಕೊಡಲ್ಪಟ್ಟಿದ್ದವು. (1 ಕೊರಿಂಥ 11:23-26; ಕೊಲೊಸ್ಸೆ 2:16, 17) ದಿ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕದ ಆರಂಭದ ಸಂಪುಟವು ನಮಗನ್ನುವುದು: “ಹೊಸ ಒಡಂಬಡಿಕೆಯಲ್ಲಾಗಲಿ ಅಪೊಸ್ತಲ ಸಂಬಂಧಿತ ತಾರ್ಕಿಕ ಕ್ರೈಸ್ತ ಬರಹಗಾರರ ಬರಹಗಳಲ್ಲಿಯಾಗಲಿ, ಈಸ್ಟರ್ನ ಆಚರಣೆಯ ಯಾವುದೇ ಸೂಚನೆಯು ಇಲ್ಲ. ವಿಶೇಷ ಹಬ್ಬಗಳ ದಿನಗಳ ಪಾವಿತ್ರ್ಯವು, ಮೊದಲ ಕ್ರೈಸ್ತರ ಮನಸ್ಸುಗಳಿಗೆ ಬಾರದಿದ್ದಂತಹ ಒಂದು ಕಲ್ಪನೆಯಾಗಿತ್ತು. . . . ಕರ್ತನಾಗಲಿ ಆತನ ಅಪೊಸ್ತಲರಾಗಲಿ ಈ ಹಬ್ಬವನ್ನು ಅಥವಾ ಯಾವುದೇ ಇತರ ಹಬ್ಬವನ್ನು ಆಚರಿಸುವ ಕ್ರಮವನ್ನು ವಿಧಿಸಲಿಲ್ಲ.”
ಅಂತಹ ಹಬ್ಬಗಳ ಆನಂದಿಸುವಿಕೆ ಮತ್ತು ಅವುಗಳು ತರುವ ಸಂತೋಷವು, ತಮ್ಮ ಆಚರಣೆಗೆ ಸಾಕಷ್ಟು ಸಮರ್ಥನಕರವಾಗಿದೆ ಎಂದು ಕೆಲವರು ಭಾವಿಸುತ್ತಾರೆ. ಆದರೂ, ಇಸ್ರಾಯೇಲ್ಯರು ಐಗುಪ್ತದ ಧಾರ್ಮಿಕ ಪದ್ಧತಿಯನ್ನು ದತ್ತುಸ್ವೀಕಾರಮಾಡಿಕೊಂಡು, ಅದನ್ನು “ಯೆಹೋವನ ಹಬ್ಬ” ಎಂಬುದಾಗಿ ಪುನರ್ನಾಮಕರಣ ಮಾಡಿದ ಸಂದರ್ಭದಿಂದ ನಾವು ಪಾಠವನ್ನು ಕಲಿಯಸಾಧ್ಯವಿದೆ. ಅವರು “ಉಣ್ಣುವದಕ್ಕೂ ಕುಡಿಯುವದಕ್ಕೂ ಕೂತುಕೊಂಡರು” ಮತ್ತು “ಒಳ್ಳೆಯದಾಗಿ ಸಮಯವನ್ನು ಕಳೆಯಲು ಏರ್ಪಾಡು ಮಾಡಿದರು.” (NW) ಆದರೆ ಅವರ ಕೃತ್ಯಗಳು ಯೆಹೋವ ದೇವರನ್ನು ಬಹಳವಾಗಿ ಕೋಪಗೊಳಿಸಿದವು ಮತ್ತು ಆತನು ಅವರನ್ನು ಘೋರವಾಗಿ ಶಿಕ್ಷಿಸಿದನು.—ವಿಮೋಚನಕಾಂಡ 32:1-10, 25-28, 35.
ದೇವರ ವಾಕ್ಯವು ಬಹಳ ಸ್ಪಷ್ಟವಾಗಿದೆ. ನಿಜ ನಂಬಿಕೆಗಳ ‘ಬೆಳಕು’ ಮತ್ತು ಸೈತಾನನ ಲೋಕದ “ಕತ್ತಲೆ”ಯ ನಡುವೆ ಯಾವುದೇ ಪಾಲುಪಡೆದಿರುವಿಕೆಯು ಇರಸಾಧ್ಯವಿಲ್ಲ; ಕ್ರಿಸ್ತನ ಮತ್ತು ವಿಧರ್ಮಿ ಆರಾಧನೆಯ ನಡುವೆ ಯಾವುದೇ “ಹೊಂದಾಣಿಕೆ” (NW)ಯು ಇರಸಾಧ್ಯವಿಲ್ಲ. ನಮಗೆ ಹೀಗೆ ಹೇಳಲ್ಪಟ್ಟಿದೆ: “ಅನ್ಯಜನರ ಮಧ್ಯದಲ್ಲಿಂದ ಹೊರಟು ಬಂದು ಪ್ರತ್ಯೇಕವಾಗಿರಿ; ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು [“ಯೆಹೋವನು,” NW] ಹೇಳುತ್ತಾನೆ. ಇದಲ್ಲದೆ—ನಾನು ನಿಮ್ಮನ್ನು ಸೇರಿಸಿಕೊ”ಳ್ಳುವೆನು.—2 ಕೊರಿಂಥ 6:14-18.
ಕ್ರೈಸ್ತರಿಗಾಗಿ ಬೈಬಲಿನಲ್ಲಿ—ಈಸ್ಟರ್ ಅಲ್ಲ—ಜ್ಞಾಪಕಾಚರಣೆಯು ಮಾತ್ರವೇ ಆಜ್ಞಾಪಿಸಲ್ಪಟ್ಟಿರುವುದರಿಂದ, ಅದು ಮಾತ್ರ ಆಚರಿಸಲ್ಪಡಬೇಕು. ಆದುದರಿಂದ ನಾವದನ್ನು ಹೇಗೆ ಗೌರವಾರ್ಹವಾಗಿ ಆಚರಿಸಸಾಧ್ಯವಿದೆ?
[ಪುಟ 5 ರಲ್ಲಿರುವ ಚಿತ್ರ]
ಇಸ್ರಾಯೇಲ್ಯರ “ಯೆಹೋವನ ಹಬ್ಬ”ವು ದೇವರನ್ನು ಬಹಳವಾಗಿ ಕೋಪಗೊಳಿಸಿತು
[ಪುಟ 2 ರಲ್ಲಿರುವ ಚಿತ್ರ ಕೃಪೆ]
Cover: M. Thonig/H. Armstrong Roberts