ನೀವು ಒಬ್ಬ ಸಮತೆಯುಳ್ಳ ಪಯನೀಯರರಾಗಿದ್ದೀರೋ?
ತನ್ನ ಮಗಳು ತಡೆದು ತಡೆದು ತನ್ನ ಪ್ರಥಮ ಹೆಜ್ಜೆಗಳನ್ನಿಡುವುದನ್ನು ತೆರೆದ ತೋಳುಗಳೊಂದಿಗೆ ಕಾಯುತ್ತಿರುವಾಗ ತಂದೆಯ ಕಣ್ಣುಗಳು ಹೊಳೆಯುತ್ತವೆ. ಅವಳು ಒಮ್ಮೆಲೆ ಉರುಳಿಬೀಳುವಾಗ, ಪುನಃ ಪ್ರಯತ್ನಿಸುವಂತೆ ಅವನು ಅವಳನ್ನು ಉತ್ತೇಜಿಸುತ್ತಾನೆ. ಅವಳು ಬೇಗನೆ ತನ್ನ ಸಮತೆ ಮತ್ತು ಬಲವನ್ನು ಗಳಿಸುವಳೆಂದು ಅವನಿಗೆ ತಿಳಿದಿದೆ.
ತದ್ರೀತಿಯಲ್ಲಿ, ಹೊಸ ಪಯನೀಯರ್ ಶುಶ್ರೂಷಕರೊಬ್ಬರಿಗೆ, ಪೂರ್ಣ ಸಮಯದ ರಾಜ್ಯ ಘೋಷಕರಾಗಿ ಯಶಸ್ವಿಯಾಗಲು ಅಗತ್ಯವಿರುವ ಸಮತೆಯನ್ನು ಅವನು ಅಥವಾ ಅವಳು ಗಳಿಸುವ ಮುಂಚೆ, ಸಮಯ ಮತ್ತು ಉತ್ತೇಜನದ ಅಗತ್ಯವಿರಬಹುದು. ಅನೇಕ ಪಯನೀಯರರು ಹಲವಾರು ದಶಕಗಳ ವರೆಗೆ ಆನಂದಪೂರ್ವಕವಾಗಿ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತಾರೆ. ಕೆಲವರು ತಮ್ಮ ಪರಿಸ್ಥಿತಿಗಳಲ್ಲಿನ ಅನಿರೀಕ್ಷಿತ ಬದಲಾವಣೆಗಳಿಂದಾಗಿ ಸಮತೆಯನ್ನು ಕಳೆದುಕೊಳ್ಳುತ್ತಾರೆ. ಕೆಲವರು ತಮ್ಮ ಆನಂದವನ್ನೂ ಕಳೆದುಕೊಳ್ಳುತ್ತಾರೆ. ಒಂದು ದೇಶದಲ್ಲಿ, ಪಯನೀಯರ್ ಸೇವೆಯನ್ನು ಆರಂಭಿಸುವವರಲ್ಲಿ 20 ಪ್ರತಿಶತ, ತಮ್ಮ ಪೂರ್ಣ ಸಮಯದ ಸೇವೆಯ ಪ್ರಥಮ ಎರಡು ವರ್ಷಗಳೊಳಗೆ ಪಯನೀಯರ್ ಸೇವೆಯನ್ನು ನಿಲ್ಲಿಸುತ್ತಾರೆ. ಈ ಅತಿ ಆನಂದಕರ ಸೇವೆಯಿಂದ ಒಬ್ಬ ಪಯನೀಯರನನ್ನು ಯಾವುದು ಹೊರಬರುವಂತೆ ಮಾಡಬಲ್ಲದು? ಈ ಹಿಮ್ಮೆಟ್ಟುವಿಕೆಗಳನ್ನು ಹೋಗಲಾಡಿಸಲು ಏನಾದರೂ ಮಾಡಲ್ಪಡಸಾಧ್ಯವಿದೆಯೋ?
ನ್ಯೂನ ಆರೋಗ್ಯ, ಹಣಕಾಸಿನ ಅಗತ್ಯಗಳು, ಮತ್ತು ಕುಟುಂಬ ಜವಾಬ್ದಾರಿಗಳು, ಕೆಲವರು ಪೂರ್ಣ ಸಮಯದ ಶುಶ್ರೂಷೆಯನ್ನು ಬಿಡಲು ಕಾರಣವಾಗಿರಬಹುದಾದರೂ, ವಿವಿಧ ಕ್ರೈಸ್ತ ಹಂಗುಗಳ ನಡುವೆ ಒಂದು ಒಳ್ಳೆಯ ಸಮತೆಯನ್ನು ಕಾಪಾಡಿಕೊಳ್ಳಲು ತಪ್ಪುವುದು ಇತರರಿಗೆ ಒಂದು ಅಡಚಣೆಯಾಗಿದೆ. ಸಮತೆಯು “ಒಂದು ಭಾಗ, ಘಟಕಾಂಶ, ಅಂಶ, ಅಥವಾ ಪ್ರಭಾವವು ಇನ್ನೊಂದರ ಮೇಲೆ ಭಾರಾಧಿಕ್ಯವನ್ನು ಹಾಕದ ಅಥವಾ ಇತರ ಅಂಶಗಳಿಗೆ ಮಿತಿಮೀರಿದ ಪ್ರಮಾಣದ್ದಾಗಿರದ ಒಂದು ಸ್ಥಿತಿಯನ್ನು” ಅರ್ಥೈಸುತ್ತದೆ.
ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸವು ಹೇಗೆ ಮಾಡಲ್ಪಡಬೇಕೆಂಬುದನ್ನು ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ತೋರಿಸಿದನು. ತನ್ನ ಸ್ವಂತ ಶುಶ್ರೂಷೆಯಲ್ಲಿ, ಸಮತೆಯು ಹೇಗೆ ಕಾಪಾಡಲ್ಪಡಬೇಕೆಂಬುದನ್ನೂ ಅವನು ದೃಷ್ಟಾಂತಿಸಿದನು. ಯೆಹೂದಿ ಧಾರ್ಮಿಕ ಮುಖಂಡರು ಸಮತೆಯ ಕೊರತೆಯುಳ್ಳವರಾಗಿದ್ದರೆಂಬುದನ್ನು ತೋರಿಸುತ್ತಾ, ಯೇಸು ಅವರಿಗೆ ಹೇಳಿದ್ದು: “ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಮರುಗ ಸೋಪು ಜೀರಿಗೆಗಳಲ್ಲಿ ಹತ್ತರಲ್ಲೊಂದು ಪಾಲು ಕೊಡುತ್ತೀರಿ ಸರಿ, ಆದರೆ ಧರ್ಮಶಾಸ್ತ್ರದಲ್ಲಿ ಗೌರವವಾದದ್ದನ್ನು, ಅಂದರೆ ನ್ಯಾಯವನ್ನೂ ಕರುಣೆಯನ್ನೂ ನಂಬಿಕೆಯನ್ನೂ ಬಿಟ್ಟುಬಿಟ್ಟಿರಿ. ಇವುಗಳನ್ನು ಮಾಡಬೇಕಾಗಿತ್ತು; ಅವುಗಳನ್ನೂ ಬಿಡಬಾರದು.”—ಮತ್ತಾಯ 23:23.
ಈ ಸೂತ್ರವು ಇಂದು ಅಷ್ಟೇ ಸಮಾನವಾಗಿ ಅನ್ವಯಿಸುತ್ತದೆ, ವಿಶೇಷವಾಗಿ ಪಯನೀಯರ್ ಶುಶ್ರೂಷೆಗೆ. ಉತ್ಸಾಹ ಮತ್ತು ಒಳ್ಳೇ ಗುರಿಯಿಂದ ಪ್ರಚೋದಿಸಲ್ಪಟ್ಟು, ಕೆಲವರು ಪಯನೀಯರ್ ಸೇವೆಯನ್ನು—ಅದಕ್ಕಾಗಿ ಪೂರ್ಣವಾಗಿ ತಯಾರಿಸದೆ ಅಥವಾ ಅದು ಒಳಗೂಡಿಸುವುದೆಲ್ಲವನ್ನು ಪರಿಗಣಿಸದೆ—ಆರಂಭಿಸಿದ್ದಾರೆ. (ಲೂಕ 14:27, 28) ಇತರರು ಕ್ಷೇತ್ರ ಶುಶ್ರೂಷೆಯಲ್ಲಿ ಎಷ್ಟು ತಲ್ಲೀನರಾಗಿದ್ದಾರೆಂದರೆ, ಅವರು ಕ್ರೈಸ್ತತ್ವದ ಇತರ ಪ್ರಮುಖ ಅಂಶಗಳನ್ನು ಕಡೆಗಣಿಸಿದ್ದಾರೆ. ಅವರು ಹೇಗೆ ಸಮತೆಯನ್ನು ಗಳಿಸಿ, ಕಾಪಾಡಿಕೊಳ್ಳಸಾಧ್ಯವಿದೆ?
ಆತ್ಮಿಕವಾಗಿ ಬಲವುಳ್ಳವರಾಗಿ ಇರ್ರಿ!
ಯೇಸು ತನ್ನ ಆತ್ಮಿಕತೆಯನ್ನು ಎಂದೂ ಅಲಕ್ಷಿಸಲಿಲ್ಲ. ಅವನಿಗೆ ಕಿವಿಗೊಡಲು ಮತ್ತು ವಾಸಿಮಾಡಿಸಿಕೊಳ್ಳಲು ಬಂದ ಜನಸಂದಣಿಗಳು ಅವನ ಸಮಯದ ಮೇಲೆ ಅಸಾಮಾನ್ಯವಾದ ಬೇಡಿಕೆಗಳನ್ನು ಮಾಡಿದರೂ, ಅವನು ಧ್ಯಾನಪೂರ್ಣ ಪ್ರಾರ್ಥನೆಗಾಗಿ ಸಮಯವನ್ನು ಬದಿಗಿರಿಸಿದನು. (ಮಾರ್ಕ 1:35; ಲೂಕ 6:12) ಇಂದು ಸಮತೆಯ ಪಯನೀಯರ್ ಸೇವೆಯು, ಆತ್ಮಿಕವಾಗಿ ಬಲವುಳ್ಳವರಾಗಿರಲು ಇರುವ ಎಲ್ಲಾ ಒದಗಿಸುವಿಕೆಗಳ ಯಥೇಷ್ಟ ಉಪಯೋಗವನ್ನು ಮಾಡುವುದನ್ನೂ ಅವಶ್ಯಪಡಿಸುತ್ತದೆ. ಪೌಲನು ವಿವೇಚಿಸಿದ್ದು: “ಮತ್ತೊಬ್ಬನಿಗೆ ಉಪದೇಶಮಾಡುವ ನೀನು ನಿನಗೆ ಉಪದೇಶಮಾಡಿಕೊಳ್ಳದೆ ಇದ್ದೀಯೋ?” (ರೋಮಾಪುರ 2:21) ಯಥೋಚಿತ ವೈಯಕ್ತಿಕ ಅಭ್ಯಾಸ ಮತ್ತು ಕ್ರಮವಾದ ಪ್ರಾರ್ಥನೆಗಾಗಿ ಸಮಯವನ್ನು ಬದಿಗಿರಿಸುವುದನ್ನು ಅಲಕ್ಷಿಸುತ್ತಾ, ಇತರರಿಗೆ ಸಾರುವುದರಲ್ಲಿ ಒಬ್ಬನ ಎಲ್ಲಾ ಸಮಯವನ್ನು ವ್ಯಾಪಿಸುವುದು ನಿಶ್ಚಯವಾಗಿಯೂ ಒಂದು ತಪ್ಪಾಗಿರುವುದು.
ಕುಮಿಕೊ ಎರಡು ದಶಕಗಳಿಂದ ಒಬ್ಬ ಪಯನೀಯರಳಾಗಿದ್ದಾಳೆ. ಅವಳಿಗೆ ಮೂವರು ಮಕ್ಕಳು ಮತ್ತು ಅವಿಶ್ವಾಸಿ ಗಂಡನಿರುವುದಾದರೂ, ಬೈಬಲನ್ನು ಓದಲು ಮತ್ತು ಅಭ್ಯಾಸಿಸಲು ಅವಳಿಗೆ ಉತ್ತಮವಾದ ಸಮಯವು, ಅವಳು ಮಲಗಲು ಹೋಗುವ ಮುಂಚೆ ಎಂದು ಅವಳು ಅನುಭವದಿಂದ ಕಂಡುಕೊಂಡಿದ್ದಾಳೆ. ಅವಳು ಅಭ್ಯಾಸಿಸುವಾಗ, ತನ್ನ ದಿನನಿತ್ಯದ ಶುಶ್ರೂಷೆಯನ್ನು ಉತ್ಸಾಹಕರ ಮತ್ತು ಆಸಕ್ತಿಕರವನ್ನಾಗಿಡಲು ಸಾಧ್ಯವಾಗುವಂತೆ, ಕ್ಷೇತ್ರ ಶುಶ್ರೂಷೆಯಲ್ಲಿ ತಾನು ಬಳಸಸಾಧ್ಯವಿರುವ ಅಂಶಗಳನ್ನು ಅವಳು ವಿಶೇಷವಾಗಿ ಗಮನಿಸುತ್ತಾಳೆ. ಇತರ ಯಶಸ್ವಿ ಪಯನೀಯರರು, ಕುಟುಂಬದಲ್ಲಿ ಉಳಿದವರು ಏಳುವ ಮುಂಚೆಯೇ, ಬೆಳಗ್ಗಿನ ಶಾಂತ ಸಮಯದಲ್ಲಿ ಆತ್ಮಿಕ ಚೇತನವನ್ನು ಆನಂದಿಸಲಿಕ್ಕಾಗಿ ಏಳುತ್ತಾರೆ. ಕೂಟಗಳಿಗಾಗಿ ತಯಾರಿಸಲು ಮತ್ತು ಇತ್ತೀಚಿನ ಕ್ರೈಸ್ತ ಪ್ರಕಾಶನಗಳೊಂದಿಗೆ ಸಮವಾಗಿ ಮುಂದುವರಿಯಲು, ನಿಮಗೆ ಬದಿಗಿರಿಸಲ್ಪಟ್ಟ ಇತರ ಸೂಕ್ತ ಸಮಯಗಳಿರಬಹುದು. ನೀವು ಶುಶ್ರೂಷೆಯ ಆನಂದವನ್ನು ಕಾಪಾಡಲು ಆಶಿಸುವಲ್ಲಿ, ವೈಯಕ್ತಿಕ ಅಭ್ಯಾಸವು ಅವಸರದಿಂದ ಮಾಡಬಲ್ಲ ಅಥವಾ ಅಲಕ್ಷಿಸಸಾಧ್ಯವಿರುವ ಒಂದು ವಿಷಯವಲ್ಲ.
ಕುಟುಂಬ ಜವಾಬ್ದಾರಿಗಳನ್ನು ಸಮತೂಕಗೊಳಿಸುವುದು
ಪಯನೀಯರ್ ಸೇವೆ ಮಾಡುತ್ತಿರುವ ಹೆತ್ತವರು ಇದನ್ನೂ ಮನಸ್ಸಿನಲ್ಲಿಡುವ ಅಗತ್ಯವಿದೆ ಏನಂದರೆ, ಅವರಿಗಾಗಿರುವ “ಯೆಹೋವನ ಚಿತ್ತ”ದ ಒಂದು ದೊಡ್ಡ ಭಾಗವು, ಅವರು ತಮ್ಮ ಸ್ವಂತ ಕುಟುಂಬದ ದೈಹಿಕ, ಭಾವನಾತ್ಮಕ ಮತ್ತು ಆತ್ಮಿಕ ಅಗತ್ಯಗಳ ಕಾಳಜಿ ವಹಿಸುವುದನ್ನು ಒಳಗೂಡಿಸುತ್ತದೆ. (ಎಫೆಸ 5:17; 6:1-4; 1 ತಿಮೊಥೆಯ 5:8) ಒಬ್ಬ ಹೆಂಡತಿ ಮತ್ತು ತಾಯಿಯು ಒಮ್ಮೆ ಪಯನೀಯರ್ ಸೇವೆಯನ್ನು ಆರಂಭಿಸಿದರೆ, ತಾವು ಆಕೆಯಿಂದ ಸಾಂತ್ವನ ಮತ್ತು ಬೆಂಬಲವನ್ನು ಪಡೆಯಲಿಕ್ಕಿಲ್ಲವೆಂದು ಕೆಲವೊಮ್ಮೆ ಒಬ್ಬ ವಿಶ್ವಾಸಿ ಸಂಗಾತಿ ಮತ್ತು ಕುಟುಂಬ ಸದಸ್ಯರೂ ಭಯಪಡಬಹುದು. ಇಂತಹ ಅನಿಸಿಕೆಗಳು, ಒಬ್ಬ ಪಯನೀಯರಳಾಗುವ ಅವಳ ಆಶೆಗೆ ಉತ್ಸಾಹದಾಯಕವಾದುದಕ್ಕಿಂತ ಕಡಿಮೆಯಾದ ಒಂದು ಪ್ರತಿಕ್ರಿಯೆಯಲ್ಲಿ ಪರಿಣಮಿಸುತ್ತವೆ. ಆದಾಗಲೂ ಒಳ್ಳೆಯ ಯೋಜನೆ ಮತ್ತು ಮುಂದಾಲೋಚನೆಯೊಂದಿಗೆ, ಸಮತೆಯು ಕಾಪಾಡಲ್ಪಡಸಾಧ್ಯವಿದೆ.
ಅನೇಕ ಪಯನೀಯರರು ತಮ್ಮ ಎಲ್ಲಾ ಸಾರುವಿಕೆಯ ಕೆಲಸವನ್ನು, ಕುಟುಂಬ ಸದಸ್ಯರು ಮನೆಯಿಂದ ಹೊರಗಿರುವಾಗ ಮಾಡಲು ಪ್ರಯತ್ನಿಸುತ್ತಾರೆ. ಈ ಮುಂಚೆ ತಿಳಿಸಲ್ಪಟ್ಟ ಕುಮಿಕೊ, ತಮ್ಮ ಬೆಳಗ್ಗಿನ ಉಪಹಾರವನ್ನು ತಿನ್ನುತ್ತಿರುವಾಗ ತನ್ನ ಕುಟುಂಬದೊಂದಿಗೆ ಇರುತ್ತಾಳೆ, ಬೆಳಗ್ಗೆ ತನ್ನ ಗಂಡ ಮತ್ತು ಮಕ್ಕಳು ಹೊರಡುವಾಗ ಅವರನ್ನು ಬೀಳ್ಕೊಡುತ್ತಾಳೆ, ಮತ್ತು ಅವರು ಹಿಂದಿರುಗುವ ಮುಂಚೆ ಮನೆಯಲ್ಲಿರುತ್ತಾಳೆ. ಅವಳು ಆರಾಮದಿಂದಿರುವಂತೆ ಮತ್ತು ಅಡುಗೆಕೋಣೆಯಲ್ಲಿ ಕಾರ್ಯಮಗ್ನಳಾಗಿರುವ ಬದಲಿಗೆ, ತನ್ನ ಕುಟುಂಬದೊಂದಿಗೆ ಊಟ ಮಾಡಸಾಧ್ಯವಾಗುವಂತೆ ಅವಳು ಸೋಮವಾರಗಳನ್ನು ಹಲವಾರು ಊಟಗಳನ್ನು ಮುಂಚಿತವಾಗಿಯೇ ಅಡುಗೆ ಮಾಡಿ ಇಡಲಿಕ್ಕಾಗಿ ಉಪಯೋಗಿಸಿಕೊಳ್ಳುತ್ತಾಳೆ. ಊಟಗಳನ್ನು ತಯಾರಿಸುವಾಗ ಇತರ ಮನೆಗೆಲಸವನ್ನು ಮಾಡುವುದರಂತಹ, ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಮನೆಗೆಲಸವನ್ನು ಮಾಡುವುದು ಸಹ ಸಹಾಯ ಮಾಡುತ್ತದೆ. ಆ ರೀತಿಯಲ್ಲಿ, ಕುಮಿಕೊ ತನ್ನ ಮಕ್ಕಳ ಸ್ನೇಹಿತರನ್ನು ಕರೆದು ಅವರಿಗಾಗಿ ವಿಶೇಷವಾದ ಭಕ್ಷ್ಯಗಳನ್ನು ತಯಾರಿಸಲೂ ಸಮಯವನ್ನು ಕಂಡುಕೊಳ್ಳುತ್ತಾಳೆ.
ಮಕ್ಕಳು ತಮ್ಮ ಹದಿವಯಸ್ಕ ವರ್ಷಗಳಿಗೆ ಬೆಳೆದಂತೆ, ಅವರಲ್ಲಿ ಉಕ್ಕುವ ಹೊಸತಾದ ಭಾವನೆಗಳು, ಆಶೆಗಳು, ಸಂದೇಹಗಳು ಮತ್ತು ಭಯಗಳನ್ನು ನಿಭಾಯಿಸುವುದರಲ್ಲಿ ಅವರಿಗೆ ಅನೇಕ ಸಲ ತಮ್ಮ ಹೆತ್ತವರಿಂದ ಹೆಚ್ಚಿನ ಗಮನದ ಅಗತ್ಯವಿರುತ್ತದೆ. ಒಬ್ಬ ಪಯನೀಯರರಾಗಿರುವ ಹೆತ್ತವರೊಬ್ಬರ ಕಾರ್ಯತಖ್ತೆಯಲ್ಲಿ ಇದು ಚುರುಕುತನ ಮತ್ತು ಅಳವಡಿಸುವಿಕೆಯನ್ನು ಅವಶ್ಯಪಡಿಸುತ್ತದೆ. ಪಯನೀಯರ್ ಸೇವೆ ಮಾಡುತ್ತಿರುವ, ಮೂವರು ಮಕ್ಕಳ ತಾಯಿಯಾದ, ಹಿಸಾಕೊಳನ್ನು ಪರಿಗಣಿಸಿರಿ. ತನ್ನ ಹಿರಿಯ ಮಗಳು ಲೌಕಿಕ ಶಾಲಾ ಸ್ನೇಹಿತರ ಪ್ರಭಾವದಿಂದಾಗಿ ಕ್ರೈಸ್ತ ಕೂಟಗಳು ಮತ್ತು ಕ್ಷೇತ್ರ ಸೇವೆಗಾಗಿರುವ ಆನಂದ ಮತ್ತು ಉತ್ಸಾಹದ ಕೊರತೆಯನ್ನು ಪ್ರದರ್ಶಿಸಲಾರಂಭಿಸಿದಾಗ ಅವಳು ಏನು ಮಾಡಿದಳು? ಅವಳ ಮಗಳು ಸತ್ಯವನ್ನು ತನ್ನದಾಗಿ ಮಾಡಿಕೊಳ್ಳುವುದು ಮತ್ತು ಲೋಕದಿಂದ ಪ್ರತ್ಯೇಕತೆಯು ಅತ್ಯುತ್ತಮವಾದ ಮಾರ್ಗಕ್ರಮ ಎಂಬುದರ ಕುರಿತಾಗಿ ಪೂರ್ಣವಾಗಿ ಮನಗಂಡವಳಾಗುವುದು ನಿಜವಾದ ಅಗತ್ಯವಾಗಿತ್ತು.—ಯಾಕೋಬ 4:4.
ಹಿಸಾಕೊ ತಿಳಿಸುವುದು: “ಸದಾ ಜೀವಿಸಬಲ್ಲಿರಿ ಪುಸ್ತಕದಲ್ಲಿರುವ ಮೂಲಭೂತ ಬೋಧನೆಗಳನ್ನು ಅವಳೊಂದಿಗೆ ಪುನಃ ದಿನನಿತ್ಯ ಅಭ್ಯಾಸಿಸಲು ನಾನು ನಿರ್ಣಯಿಸಿದೆ. ಆರಂಭದಲ್ಲಿ ನಾವು ಕೇವಲ ಕೆಲವೇ ನಿಮಿಷಗಳ ವರೆಗೆ ಅಭ್ಯಾಸಿಸಸಾಧ್ಯವಿತ್ತು. ಅಭ್ಯಾಸಕ್ಕಾಗಿ ಸಮಯವಾಗುತ್ತಿದ್ದಾಗ ನನ್ನ ಮಗಳು ಅನೇಕಾವರ್ತಿ ತೀವ್ರ ಹೊಟ್ಟೆನೋವುಗಳು ಮತ್ತು ತಲೆನೋವುಗಳ ಕುರಿತಾಗಿ ದೂರುತ್ತಿದ್ದಳು. ಆದರೆ ನಾನು ಕ್ರಮವಾಗಿ ಅಭ್ಯಾಸವನ್ನು ನಡಿಸಿದೆ. ಕೆಲವೇ ತಿಂಗಳುಗಳ ನಂತರ, ಅವಳ ಮನೋವೃತ್ತಿಯು ಮಹತ್ತರವಾಗಿ ಉತ್ತಮಗೊಂಡಿತು, ಇದು ಸ್ವಲ್ಪ ಸಮಯದಲ್ಲೇ ಅವಳ ಸಮರ್ಪಣೆ ಮತ್ತು ದೀಕ್ಷಾಸ್ನಾನಕ್ಕೆ ನಡಿಸಿತು.” ಈಗ ಹಿಸಾಕೊ ತನ್ನ ಮಗಳೊಂದಿಗೆ ಪೂರ್ಣ ಸಮಯದ ಶುಶ್ರೂಷೆಯಲ್ಲಿ ಆನಂದಿಸುತ್ತಿದ್ದಾಳೆ.
ಪಯನೀಯರ್ ಸೇವೆ ಮಾಡುತ್ತಿರುವ ತಂದೆಯರು ಸಹ, ಕ್ಷೇತ್ರದಲ್ಲಿರುವ ಆಸಕ್ತ ಜನರ ಮತ್ತು ತಮ್ಮ ಸಭಾ ಕರ್ತವ್ಯಗಳ ಕಾಳಜಿ ವಹಿಸುವುದರಲ್ಲಿ, ತಮ್ಮ ಬೆಳೆಯುತ್ತಿರುವ ಮಕ್ಕಳಿಗೆ ಸಲ್ಲಬೇಕಾದ ಬಲವಾದ ಭಾವನಾತ್ಮಕ ಬೆಂಬಲ ಮತ್ತು ಮಾರ್ಗದರ್ಶನವನ್ನು ಕೊಡಲು ತಪ್ಪಿಹೋಗುವಷ್ಟು ತಲ್ಲೀನರಾಗಬಾರದು. ಇದು ಒಬ್ಬ ಪುರುಷನು ತನ್ನ ಹೆಂಡತಿಯ ಮೇಲೆ ಹೊರಿಸುವ ಒಂದು ವಿಷಯವಾಗಿರುವುದಿಲ್ಲ. ದೀರ್ಘ ಸಮಯದಿಂದಲೂ ಒಬ್ಬ ಪಯನೀಯರ್ ಆಗಿರುವ ಮತ್ತು ಒಂದು ಚಿಕ್ಕ ವ್ಯಾಪಾರವನ್ನೂ ನಿರ್ವಹಿಸುವ ಒಬ್ಬ ಕಾರ್ಯಮಗ್ನ ಕ್ರೈಸ್ತ ಹಿರಿಯನು, ತನ್ನ ನಾಲ್ಕು ಮಕ್ಕಳಲ್ಲಿ ಪ್ರತಿಯೊಬ್ಬರೊಂದಿಗೆ ವೈಯಕ್ತಿಕವಾಗಿ ಅಭ್ಯಾಸಿಸಲು ಸಮಯವನ್ನು ಮಾಡಿಕೊಳ್ಳುತ್ತಾನೆ. (ಎಫೆಸ 6:4) ಇದಕ್ಕೆ ಕೂಡಿಸಿ, ಅವನು ತನ್ನ ಕುಟುಂಬದೊಂದಿಗೆ ವಾರದ ಕೂಟಗಳಿಗಾಗಿ ತಯಾರಿಸುತ್ತಾನೆ. ಸಮತೆಯುಳ್ಳ ಪಯನೀಯರರು ತಮ್ಮ ಕುಟುಂಬಗಳನ್ನು ಭೌತಿಕವಾಗಿ ಅಥವಾ ಆತ್ಮಿಕವಾಗಿ ಅಲಕ್ಷಿಸುವುದಿಲ್ಲ.
ಆರ್ಥಿಕ ಸಮತೆ
ದೈನಿಕ ಅಗತ್ಯಗಳ ಒಂದು ಯೋಗ್ಯ ನೋಟವು, ಪಯನೀಯರರು ಒಳ್ಳೆಯ ಸಮತೆಯನ್ನು ಕಾಪಾಡಲು ಪ್ರಯತ್ನಿಸತಕ್ಕ ಇನ್ನೊಂದು ಕ್ಷೇತ್ರವಾಗಿದೆ. ಇಲ್ಲಿ ಪುನಃ, ನಾವು ಯೇಸುವಿನ ಉತ್ತಮ ಮಾದರಿ ಮತ್ತು ಸಲಹೆಯಿಂದ ಹೆಚ್ಚನ್ನು ಕಲಿಯಸಾಧ್ಯವಿದೆ. ಪ್ರಾಪಂಚಿಕ ವಿಷಯಗಳ ಕುರಿತಾಗಿ ಅತಿಯಾಗಿ ವ್ಯಾಕುಲಿತರಾಗುವುದರ ವಿರುದ್ಧ ಅವನು ಎಚ್ಚರಿಸಿದನು. ಅದರ ಬದಲಿಗೆ, ತನ್ನ ಉಳಿದ ಸೃಷ್ಟಿಗೆ ಆತನು ಮಾಡುವಂತೆ ದೇವರು ಅವರನ್ನು ಪರಾಮರಿಸುವನೆಂದು ವಾಗ್ದಾನಿಸುತ್ತಾ, ಆತನು ತನ್ನ ಶಿಷ್ಯರಿಗೆ ರಾಜ್ಯವನ್ನು ಪ್ರಥಮವಾಗಿಡುವಂತೆ ಉತ್ತೇಜಿಸಿದನು. (ಮತ್ತಾಯ 6:25-34) ಈ ಒಳ್ಳೇ ಸಲಹೆಯನ್ನು ಅನುಸರಿಸುವ ಮೂಲಕ, ಅನೇಕ ಪಯನೀಯರರು ಹಲವಾರು ವರ್ಷಗಳ ತನಕ ಪೂರ್ಣ ಸಮಯದ ಸೇವೆಯಲ್ಲಿ ಉಳಿಯಶಕ್ತರಾಗಿದ್ದಾರೆ, ಮತ್ತು ‘ಅನುದಿನದ ಆಹಾರವನ್ನು’ ಗಳಿಸುವುದರಲ್ಲಿನ ಅವರ ಪ್ರಯತ್ನಗಳನ್ನು ಯೆಹೋವನು ಆಶೀರ್ವದಿಸಿದ್ದಾನೆ.—ಮತ್ತಾಯ 6:11.
‘ತಮ್ಮ ವಿವೇಚನಾಶಕ್ತಿಯು ಎಲ್ಲಾ ಮನುಷ್ಯರಿಗೆ ಗೊತ್ತಾಗುವಂತೆ’ ಅಪೊಸ್ತಲ ಪೌಲನು ಜೊತೆ ಕ್ರೈಸ್ತರಿಗೆ ಸಲಹೆನೀಡಿದನು. (ಫಿಲಿಪ್ಪಿ 4:5, NW) ನಿಶ್ಚಯವಾಗಿಯೂ, ನಾವು ನಮ್ಮ ಆರೋಗ್ಯದ ಯೋಗ್ಯವಾದ ಆರೈಕೆಯನ್ನು ತೆಗೆದುಕೊಳ್ಳುವಂತೆ ವಿವೇಚನಾಶಕ್ತಿಯು ಅವಶ್ಯಪಡಿಸುವುದು. ಇತರರು ತಮ್ಮ ನಡತೆಯನ್ನು ಗಮನಿಸುತ್ತಾರೆಂದು ತಿಳಿದವರಾಗಿ, ಸಮತೆಯುಳ್ಳ ಪಯನೀಯರರು ತಮ್ಮ ಜೀವನ ರೀತಿ ಮತ್ತು ಪ್ರಾಪಂಚಿಕ ವಿಷಯಗಳ ಕಡೆಗಿನ ತಮ್ಮ ಮನೋಭಾವದಲ್ಲಿ ವಿವೇಚನಾಶಕ್ತಿಯನ್ನು ತೋರಿಸಲು ಪ್ರತಿಯೊಂದು ಪ್ರಯತ್ನವನ್ನು ಮಾಡುತ್ತಾರೆ.—ಹೋಲಿಸಿರಿ 1 ಕೊರಿಂಥ 4:9.
ಪಯನೀಯರ್ ಸೇವೆಯನ್ನು ಆರಂಭಿಸುವ ಯುವ ಜನರು ತಮ್ಮ ಹೆತ್ತವರ ಉದಾರತೆಯ ಅನುಚಿತ ಲಾಭವನ್ನು ತೆಗೆದುಕೊಳ್ಳುವುದರಿಂದ ದೂರವಿರಬೇಕು. ಅವರು ತಮ್ಮ ಹೆತ್ತವರ ಮನೆಯಲ್ಲಿ ಜೀವಿಸುತ್ತಿರುವುದಾದರೆ, ಮನೆಗೆಲಸದಲ್ಲಿ ಪಾಲಿಗರಾಗುವುದು ಮತ್ತು ಮನೆಯನ್ನು ನಡೆಸಿಕೊಂಡು ಹೋಗುವ ಖರ್ಚಿನ ಕಡೆಗೆ ನೆರವು ನೀಡಲು ಅವರನ್ನು ಶಕ್ತರನ್ನಾಗಿ ಮಾಡುವ ಒಂದು ಅಂಶಕಾಲಿಕ ಉದ್ಯೋಗವನ್ನು ಹೊಂದುವುದು, ಒಳ್ಳೆಯ ಸಮತೆ ಮತ್ತು ಗಣ್ಯತೆಯ ಒಂದು ಪ್ರದರ್ಶನವಾಗಿರುವುದು.—2 ಥೆಸಲೊನೀಕ 3:10.
ಸಮತೆಯುಳ್ಳ ಪಯನೀಯರರು ಒಂದು ನಿಜವಾದ ಆಶೀರ್ವಾದ
ಸರಿಯಾದ ಸಮತೆಯನ್ನಿಡಲು ಕಷ್ಟಪಟ್ಟು ಕೆಲಸಮಾಡುತ್ತಿರುವ ಒಬ್ಬ ಪಯನೀಯರ್ ನೀವಾಗಿರಬಹುದು. ದೃಢಭರವಸೆಯಿಂದಿರಿ. ಒಂದು ಚಿಕ್ಕ ಮಗುವಿಗೆ, ತನ್ನನ್ನು ಸಮತೂಕಗೊಳಿಸಿ ನಡೆಯಲು ಕಲಿಯಲಿಕ್ಕಾಗಿ ಸಮಯದ ಅಗತ್ಯವಿರುವಂತೆಯೇ, ತಮ್ಮ ಎಲ್ಲಾ ಕರ್ತವ್ಯಗಳನ್ನು ಪರಾಮರಿಸುವುದರಲ್ಲಿ ಸಮತೆಯನ್ನು ಗಳಿಸಲು ತಮಗೆ ಸಮಯ ಹಿಡಿಯಿತೆಂದು ಅನೇಕ ಪ್ರೌಢ ಪಯನೀಯರರು ಹೇಳುತ್ತಾರೆ.
ವೈಯಕ್ತಿಕ ಅಭ್ಯಾಸದಲ್ಲಿ ಒಳಗೂಡುವುದು, ಕುಟುಂಬ ಸದಸ್ಯರನ್ನು ಪರಾಮರಿಸುವುದು, ಮತ್ತು ತಮ್ಮ ಸ್ವಂತ ಪ್ರಾಪಂಚಿಕ ಅಗತ್ಯಗಳನ್ನು ದೊರಕಿಸಿಕೊಳ್ಳುವುದು, ಸಮತೆಯನ್ನು ಹೊಂದಲು ಪಯನೀಯರರು ಶ್ರಮಿಸುವ ಕ್ಷೇತ್ರಗಳಲ್ಲಿ ಸೇರಿದೆ. ಅನೇಕ ಪಯನೀಯರರು ತಮ್ಮ ಜವಾಬ್ದಾರಿಗಳನ್ನು ಒಂದು ಗಮನಾರ್ಹವಾದ ವಿಧದಲ್ಲಿ ಪೂರೈಸುತ್ತಾರೆಂದು ವರದಿಗಳು ತೋರಿಸುತ್ತವೆ. ಅವರು ನಿಜವಾಗಿಯೂ ಸಮುದಾಯಕ್ಕೆ ಒಂದು ಆಶೀರ್ವಾದವೂ ಮತ್ತು ಯೆಹೋವನಿಗೆ ಹಾಗೂ ಆತನ ಸಂಸ್ಥೆಗೆ ಭೂಷಣಪ್ರಾಯರೂ ಆಗಿದ್ದಾರೆ.