ಯೆಹೋವನು ನನ್ನೊಡನೆ ಇರುವವನಾಗಿ ಪರಿಣಮಿಸಿದನು
ಮ್ಯಾಕ್ಸ್ ಹೆನಿಂಗ್ ಹೇಳಿದಂತೆ
ಅದು 1933ನೆಯ ಇಸವಿ ಆಗಿತ್ತು, ಮತ್ತು ಜರ್ಮನಿಯಲ್ಲಿ ಆ್ಯಡೊಲ್ಫ್ ಹಿಟ್ಲರ್ ಆಗತಾನೇ ಅಧಿಕಾರಕ್ಕೆ ಬಂದಿದ್ದನು. ಹಾಗಿದ್ದರೂ, ಬರ್ಲಿನ್ ಕ್ಷೇತ್ರದಲ್ಲಿದ್ದ ಸುಮಾರು 500 ಮಂದಿ ಯೆಹೋವನ ಸಾಕ್ಷಿಗಳು ಸ್ಥೈರ್ಯಗೆಡಲಿಲ್ಲ. ಅನೇಕ ಯುವ ಜನರು, ಪಯನೀಯರರು ಅಥವಾ ಪೂರ್ಣ ಸಮಯದ ಶುಶ್ರೂಷಕರಾದರು, ಮತ್ತು ಕೆಲವರು ಇತರ ಯೂರೋಪಿಯನ್ ದೇಶಗಳಿಗೆ ಹೋಗುವ ನೇಮಕಗಳನ್ನು ಸಹ ಅಂಗೀಕರಿಸಿದರು. ನನ್ನ ಸ್ನೇಹಿತನಾದ ವರ್ನರ್ ಫ್ಲಾಟೆನ್ ಹಾಗೂ ನಾನು ಪರಸ್ಪರವಾಗಿ ಈ ರೀತಿ ಪ್ರಚೋದಿಸಿಕೊಳ್ಳುವುದು ವಾಡಿಕೆಯಾಗಿತ್ತು: “ನಮ್ಮ ಸಮಯವನ್ನು ಹಾಳುಮಾಡುತ್ತಾ, ನಾವು ಹಿಂಜರಿಯುವುದೇಕೆ? ನಾವು ಹೊರಗೆ ಹೋಗಿ ಪಯನೀಯರ್ ಸೇವೆಯನ್ನು ಮಾಡಬಾರದೇಕೆ?”
ಇಸವಿ 1909ರಲ್ಲಿನ ನನ್ನ ಜನನವಾದ ಎಂಟು ದಿನಗಳ ಬಳಿಕ, ನಾನು ಪ್ರೀತಿಪೂರ್ಣ ಸಾಕುಹೆತ್ತವರ ಪರಾಮರಿಕೆಯ ಕೆಳಗೆ ಬಂದೆ. 1918ರಲ್ಲಿ, ನನ್ನ ಚಿಕ್ಕ ಸಾಕುತಂಗಿ ಅನಿರೀಕ್ಷಿತವಾಗಿ ಮೃತಪಟ್ಟಾಗ ನಮ್ಮ ಕುಟುಂಬವು ದುಃಖದಿಂದಾವೃತವಾಯಿತು. ತದನಂತರ ಸ್ವಲ್ಪದರಲ್ಲಿಯೇ, ಬೈಬಲ್ ವಿದ್ಯಾರ್ಥಿಗಳು—ಆಗ ಯೆಹೋವನ ಸಾಕ್ಷಿಗಳಾಗಿ ಪ್ರಸಿದ್ಧರಾಗಿದ್ದ—ನಮ್ಮ ಮನೆಯನ್ನು ಭೇಟಿಮಾಡಿದರು, ಮತ್ತು ನನ್ನ ಸಾಕುಹೆತ್ತವರು ಬೈಬಲ್ ಸತ್ಯವನ್ನು ಅತ್ಯಾತುರದಿಂದ ಅಂಗೀಕರಿಸಿದರು. ಆತ್ಮಿಕ ವಿಷಯಗಳನ್ನು ಗಣ್ಯಮಾಡುವುದನ್ನೂ ಅವರು ನನಗೆ ಕಲಿಸಿದರು.
ನಾನು ನನ್ನ ಐಹಿಕ ಶಾಲಾಶಿಕ್ಷಣದ ಮೇಲೆ ಗಮನವನ್ನು ಕೇಂದ್ರೀಕರಿಸಿದೆ ಹಾಗೂ ಒಬ್ಬ ಕೊಳಾಯಿಗಾರನಾದೆ. ಆದರೆ ಹೆಚ್ಚು ಪ್ರಾಮುಖ್ಯವಾಗಿ, ನಾನು ಆತ್ಮಿಕವಾಗಿ ನನ್ನ ನಿಲುವನ್ನು ತೆಗೆದುಕೊಂಡೆ. 1933ರ ಮೇ 5ರಂದು, ವರ್ನರ್ ಮತ್ತು ನಾನು ಪಯನೀಯರ್ ಸೇವೆಯನ್ನು ಆರಂಭಿಸಿದೆವು. ಬರ್ಲಿನ್ನ ಹೊರಗೆ ಸುಮಾರು 100 ಕಿಲೊಮೀಟರ್ಗಳಷ್ಟು ದೂರದಲ್ಲಿರುವ ಒಂದು ಪಟ್ಟಣಕ್ಕೆ ನಾವು ಸೈಕಲಿನಲ್ಲಿ ಹೋಗುತ್ತಿದ್ದೆವು, ಅಲ್ಲಿ ನಾವು ಎರಡು ವಾರಗಳ ವರೆಗೆ ಉಳಿದು, ಸಾರಿದೆವು. ನಂತರ ಅಗತ್ಯವಿರುವ ವಿಷಯಗಳ ಕಾಳಜಿವಹಿಸಲಿಕ್ಕಾಗಿ ನಾವು ಬರ್ಲಿನ್ಗೆ ಹಿಂದಿರುಗಿದೆವು. ತದನಂತರ ಇನ್ನು ಎರಡು ವಾರಗಳಿಗಾಗಿ ನಾವು ನಮ್ಮ ಸಾರುವ ಟೆರಿಟೊರಿಗೆ ಹಿಂದಿರುಗಿಹೋದೆವು.
ಬೇರೆ ದೇಶದಲ್ಲಿ ಸೇವೆಮಾಡಲಿಕ್ಕಾಗಿ ನಾವು ವಿನಂತಿಸಿಕೊಂಡೆವು, ಮತ್ತು 1933ರ ಡಿಸೆಂಬರ್ ತಿಂಗಳಲ್ಲಿ, ಆಗ ಯಾವುದು ಯುಗೊಸ್ಲಾವಿಯವಾಗಿತ್ತೊ ಅಲ್ಲಿಗೆ ಹೋಗುವ ಒಂದು ನೇಮಕವನ್ನು ನಾವು ಪಡೆದುಕೊಂಡೆವು. ಹಾಗಿದ್ದರೂ, ನಾವು ಅಲ್ಲಿಗೆ ಹೊರಡುವುದಕ್ಕೆ ಮೊದಲು, ನಮ್ಮ ನೇಮಕವು ನೆದರ್ಲೆಂಡ್ಸ್ನ ಯೂಟ್ರೆಕ್ಟ್ಗೆ ಬದಲಾಯಿಸಲ್ಪಟ್ಟಿತು. ತದನಂತರ ಸ್ವಲ್ಪಸಮಯದಲ್ಲಿಯೇ ನಾನು ದೀಕ್ಷಾಸ್ನಾನಿತನಾದೆ. ಆ ದಿನಗಳಲ್ಲಿ ದೀಕ್ಷಾಸ್ನಾನದ ಮೇಲೆ ಕಡಿಮೆ ಒತ್ತು ಹಾಕಲ್ಪಟ್ಟಿತ್ತು; ಶುಶ್ರೂಷೆಯು ಪ್ರಮುಖವಾದ ವಿಷಯವಾಗಿತ್ತು. ಯೆಹೋವನ ಮೇಲೆ ಆತುಕೊಳ್ಳುವಿಕೆಯು, ಈಗ ನನ್ನ ಜೀವಿತದಲ್ಲಿನ ನಿರಂತರ ವೈಶಿಷ್ಟ್ಯವಾಗಿ ಪರಿಣಮಿಸಿತು. ಬೈಬಲ್ ಕೀರ್ತನೆಗಾರನ ಈ ಮಾತುಗಳಲ್ಲಿ ನಾನು ಬಹಳ ಸಾಂತ್ವನವನ್ನು ಕಂಡುಕೊಂಡೆ: “ಇಗೋ, ದೇವರೇ ನನಗೆ ಸಹಾಯಕನು; ಕರ್ತನೇ [“ಯೆಹೋವನೇ,” NW] ನನ್ನ ಪ್ರಾಣವನ್ನು ಕಾಪಾಡುವವನು.”—ಕೀರ್ತನೆ 54:4.
ನೆದರ್ಲೆಂಡ್ಸ್ನಲ್ಲಿ ಪಯನೀಯರ್ ಸೇವೆಮಾಡುವುದು
ನೆದರ್ಲೆಂಡ್ಸ್ಗೆ ಆಗಮಿಸಿದ ಸ್ವಲ್ಪಸಮಯದ ಬಳಿಕವೇ, ನಾವು ರಾಟರ್ಡ್ಯಾಮ್ ಎಂಬ ನಗರಕ್ಕೆ ಪುನರ್ನೇಮಿಸಲ್ಪಟ್ಟೆವು. ನಾವು ಯಾರೊಂದಿಗೆ ಉಳಿದಿದ್ದೆವೊ ಆ ಕುಟುಂಬದಲ್ಲಿದ್ದ ತಂದೆ ಮತ್ತು ಒಬ್ಬ ಮಗನು ಸಹ ಪಯನೀಯರರಾಗಿದ್ದರು. ಕೆಲವು ತಿಂಗಳುಗಳ ಬಳಿಕ, ಯೂಟ್ರೆಕ್ಟ್ನಿಂದ ಅನತಿದೂರದ ಒಂದು ಪಟ್ಟಣವಾದ ಲೀರ್ಸಮ್ನಲ್ಲಿ, ಪಯನೀಯರರಿಗಾಗಿ ಒಂದು ನಿವಾಸದೋಪಾದಿ ದೊಡ್ಡ ಮನೆಯೊಂದನ್ನು ಖರೀದಿಮಾಡಲಾಯಿತು, ಮತ್ತು ನಾನು ಹಾಗೂ ವರ್ನರ್ ಅಲ್ಲಿಗೆ ಸ್ಥಳಾಂತರಿಸಿದೆವು.
ಆ ಪಯನೀಯರ್ ಗೃಹದಲ್ಲಿ ವಾಸಿಸುತ್ತಿರುವಾಗ, ನಾವು ಸೈಕಲಿನ ಮೂಲಕವಾಗಿ ಸಮೀಪದಲ್ಲಿದ್ದ ಟೆರಿಟೊರಿಗಳಿಗೆ ಪ್ರಯಾಣಿಸಿದೆವು ಮತ್ತು ಹೆಚ್ಚು ದೂರದಲ್ಲಿದ್ದ ಟೆರಿಟೊರಿಗಳಿಗಾಗಿ ಏಳು-ಪ್ರಯಾಣಿಕರ ಕಾರೊಂದನ್ನು ಉಪಯೋಗಿಸಿದೆವು. ಆ ಸಮಯದಲ್ಲಿ, ಇಡೀ ನೆದರ್ಲೆಂಡ್ಸ್ನಲ್ಲಿ ಒಂದು ನೂರು ಸಾಕ್ಷಿಗಳು ಮಾತ್ರವೇ ಇದ್ದರು. ಇಂದು, 60 ವರ್ಷಗಳ ಬಳಿಕ, ನಾವು ಆ ಪಯನೀಯರ್ ಗೃಹದಿಂದ ಕಾರ್ಯವೆಸಗಿದ ಟೆರಿಟೊರಿಯಲ್ಲಿ, ಸುಮಾರು 50 ಸಭೆಗಳಲ್ಲಿ 4,000ಕ್ಕಿಂತಲೂ ಹೆಚ್ಚು ಮಂದಿ ಪ್ರಚಾರಕರಿದ್ದಾರೆ!
ನಾವು ಪ್ರತಿ ದಿನ ಶುಶ್ರೂಷೆಯಲ್ಲಿ 14 ತಾಸುಗಳ ವರೆಗೆ ಕಷ್ಟಪಟ್ಟು ಕೆಲಸಮಾಡಿದೆವು, ಮತ್ತು ಅದು ನಮ್ಮನ್ನು ಸಂತೋಷದಿಂದಿರಿಸಿತು. ಸಾಧ್ಯವಿರುವಷ್ಟು ಹೆಚ್ಚು ಸಾಹಿತ್ಯವನ್ನು ನೀಡುವುದು ಒಂದು ಪ್ರಮುಖ ಗುರಿಯಾಗಿತ್ತು. ಅನೇಕಾವರ್ತಿ ನಾವು ಆಸಕ್ತರಾದ ಜನರೊಂದಿಗೆ ದಿನವೊಂದಕ್ಕೆ ನೂರಕ್ಕಿಂತಲೂ ಹೆಚ್ಚು ಪುಸ್ತಿಕೆಗಳನ್ನು ಬಿಟ್ಟುಬಂದೆವು. ಪುನರ್ಭೇಟಿಗಳನ್ನು ಮಾಡುವುದು ಹಾಗೂ ಬೈಬಲ್ ಅಭ್ಯಾಸಗಳನ್ನು ನಡೆಸುವುದು, ಆ ಸಮಯದಲ್ಲಿ ನಮ್ಮ ಕ್ರಮವಾದ ಚಟುವಟಿಕೆಯ ಒಂದು ಭಾಗವಾಗಿರಲಿಲ್ಲ.
ಒಂದು ದಿನ ನನ್ನ ಸಹಭಾಗಿಯೂ ನಾನೂ ಫ್ರೇಸ್ವೇಕ್ನ ಪಟ್ಟಣದಲ್ಲಿ ಸಾಕ್ಷಿಕೆಲಸವನ್ನು ಮಾಡುತ್ತಿದ್ದೆವು. ಅವನು ಒಂದು ಮಿಲಿಟರಿ ಸೈನಿಕ ರಕ್ಷಾವರಣದ ದ್ವಾರದ ಬಳಿಯಿದ್ದ ಒಬ್ಬ ವ್ಯಕ್ತಿಗೆ ಸಾಕ್ಷಿನೀಡುತ್ತಿದ್ದಾಗ, ನಾನು ಆ ಸಮಯವನ್ನು ನನ್ನ ಬೈಬಲನ್ನು ಓದಲಿಕ್ಕಾಗಿ ಉಪಯೋಗಿಸಿದೆ. ಅದು ಸಂಪೂರ್ಣವಾಗಿ ಕೆಂಪು ಮತ್ತು ನೀಲಿ ಬಣ್ಣಗಳಿಂದ ಅಡಿಗೆರೆಹಾಕಲ್ಪಟ್ಟಿತ್ತು. ತದನಂತರ, ಸಮೀಪದ ಮನೆಯೊಂದರಲ್ಲಿ ಕೆಲಸಮಾಡುತ್ತಿದ್ದ ಬಡಗಿಯೊಬ್ಬನು, ನಾನು ಯಾವುದೋ ವಿಧದ ಗೂಢಚಾರನಾಗಿದ್ದಿರಬಹುದೆಂದು, ದ್ವಾರದ ಬಳಿಯಿದ್ದ ವ್ಯಕ್ತಿಗೆ ಎಚ್ಚರಿಕೆ ನೀಡಿದನು. ಫಲಿತಾಂಶವಾಗಿ, ಅದೇ ದಿನದಲ್ಲಿ ಒಬ್ಬ ಅಂಗಡಿ ಮಾಲಿಕನಿಗೆ ಸಾಕ್ಷಿನೀಡುತ್ತಿರುವಾಗ ನಾನು ಬಂಧಿಸಲ್ಪಟ್ಟೆ, ಹಾಗೂ ನನ್ನ ಬೈಬಲು ವಶಪಡಿಸಿಕೊಳ್ಳಲ್ಪಟ್ಟಿತು.
ನನ್ನನ್ನು ಕೋರ್ಟಿಗೆ ಕರೆದೊಯ್ಯಲಾಯಿತು. ನನ್ನ ಬೈಬಲಿನಲ್ಲಿದ್ದ ಗುರುತುಗಳು, ಸೈನಿಕ ರಕ್ಷಾವರಣದ ಚಿತ್ರವನ್ನು ಬರೆಯಲು ಮಾಡಿದ ಪ್ರಯತ್ನಗಳಾಗಿದ್ದವೆಂಬುದಾಗಿ ಆಪಾದಿಸಲಾಯಿತು. ನನ್ನನ್ನು ದೋಷಿಯೆಂದು ಪ್ರಕಟಿಸಲಾಯಿತು, ಮತ್ತು ನ್ಯಾಯಾಧೀಶನು ನನಗೆ ಎರಡು ವರ್ಷಗಳ ಸೆರೆಮನೆವಾಸವನ್ನು ವಿಧಿಸಿದನು. ಹಾಗಿದ್ದರೂ, ಈ ಕೇಸು ಅಪೀಲುಮಾಡಲ್ಪಟ್ಟಿತು, ಮತ್ತು ನಾನು ಬಿಡುಗಡೆಮಾಡಲ್ಪಟ್ಟೆ. ಸ್ವತಂತ್ರನಾದುದಕ್ಕಾಗಿ ನಾನು ಎಷ್ಟು ಸಂತೋಷಗೊಂಡಿದ್ದೆ, ಆದರೆ ಅದರ ಎಲ್ಲಾ ಟಿಪ್ಪಣಿಗಳೊಂದಿಗೆ ನನ್ನ ಬೈಬಲ್ ಹಿಂದಿರುಗಿಸಲ್ಪಟ್ಟಾಗ ನಾನು ಇನ್ನೂ ಹೆಚ್ಚು ಸಂತೋಷಗೊಂಡಿದ್ದೆ!
1936ರ ಬೇಸಗೆಕಾಲದಲ್ಲಿ, ಆ ಗೃಹದಲ್ಲಿದ್ದ ಪಯನೀಯರರಲ್ಲಿ ಒಬ್ಬನಾದ ರಿಕಾರ್ಟ್ ಬ್ರಾನಿಂಗ್ ಮತ್ತು ನಾನು, ದೇಶದ ಉತ್ತರ ಭಾಗದಲ್ಲಿ ಸಾರುತ್ತಾ ಬೇಸಗೆಕಾಲವನ್ನು ಕಳೆದೆವು. ಮೊದಲ ತಿಂಗಳಿನಲ್ಲಿ, ಶುಶ್ರೂಷೆಯಲ್ಲಿ ನಾವು 240 ತಾಸುಗಳನ್ನು ವ್ಯಯಿಸಿದೆವು ಹಾಗೂ ದೊಡ್ಡ ಪ್ರಮಾಣಗಳಲ್ಲಿ ಸಾಹಿತ್ಯವನ್ನು ನೀಡಿದೆವು. ನಾವು ಒಂದು ಡೇರೆಯಲ್ಲಿ ವಾಸಿಸಿದೆವು ಮತ್ತು ನಮ್ಮ ವಸ್ತ್ರಗಳನ್ನು ಸ್ವತಃ ಒಗೆಯುವ, ಅಡಿಗೆ ಮಾಡುವ, ಇನ್ನು ಮುಂತಾದ ಕೆಲಸಗಳನ್ನು ಮಾಡುತ್ತಾ, ನಮ್ಮ ಸ್ವಂತ ಆವಶ್ಯಕತೆಗಳೆಲ್ಲವನ್ನೂ ನಾವು ನಿರ್ವಹಿಸಿದೆವು.
ತದನಂತರ ನೆದರ್ಲೆಂಡ್ಸ್ನ ಉತ್ತರ ಭಾಗದಲ್ಲಿ ತುಂಬಾ ಪ್ರಸಿದ್ಧವಾಗಿ ಪರಿಣಮಿಸಿದ, ಲೈಟ್ಬ್ಯಾರರ್ ಎಂಬ ಹೆಸರಿನ ಚಿಕ್ಕಹಡಗಿಗೆ ನಾನು ವರ್ಗಾಯಿಸಲ್ಪಟ್ಟೆ. ಆ ಚಿಕ್ಕಹಡಗಿನಲ್ಲಿ ಐದು ಮಂದಿ ಪಯನೀಯರರು ವಾಸಿಸಿದರು, ಮತ್ತು ಇದರಿಂದಾಗಿ ನಾವು ಚದುರಿರುವ ಬಹಳ ಟೆರಿಟೊರಿಯನ್ನು ತಲಪಲು ಶಕ್ತರಾಗಿದ್ದೆವು.
ಕೂಡಿಸಲ್ಪಟ್ಟ ಸುಯೋಗಗಳು
1938ರಲ್ಲಿ, ನಾನು ಒಬ್ಬ ಸೋನ್ ಸೇವಕ—ಆಗ ಯೆಹೋವನ ಸಾಕ್ಷಿಗಳ ಸರ್ಕಿಟ್ ಮೇಲ್ವಿಚಾರಕರು ಕರೆಯಲ್ಪಟ್ಟಿದ್ದಂತೆ—ನಾಗಿರಲು ನೇಮಿಸಲ್ಪಟ್ಟೆ. ಆದುದರಿಂದ ನಾನು ಲೈಟ್ಬ್ಯಾರರ್ ಅನ್ನು ಬಿಟ್ಟು, ದಕ್ಷಿಣದ ಮೂರು ಪ್ರಾಂತಗಳಲ್ಲಿದ್ದ ಸಭೆಗಳನ್ನು ಹಾಗೂ ಚದುರಿದ್ದ ಸಾಕ್ಷಿಗಳನ್ನು ಸಂದರ್ಶಿಸಲಾರಂಭಿಸಿದೆ.
ನಮ್ಮ ವಾಹನಸೌಕರ್ಯದ ಏಕಮಾತ್ರ ಮಾಧ್ಯಮವು ಸೈಕಲ್ ಆಗಿತ್ತು. ಒಂದು ಸಭೆಯಿಂದ ಅಥವಾ ಆಸಕ್ತರಾದ ಜನರ ಒಂದು ಗುಂಪಿನಿಂದ ಇನ್ನೊಂದಕ್ಕೆ ಪ್ರಯಾಣಿಸಲಿಕ್ಕಾಗಿ, ಅದು ಅನೇಕವೇಳೆ ಇಡೀ ದಿನವೊಂದನ್ನು ತೆಗೆದುಕೊಂಡಿತು. ನಾನು ಸಂದರ್ಶಿಸಿದ ನಗರಗಳಲ್ಲಿ, ನಾನು ಈಗ ಜೀವಿಸುತ್ತಿರುವ ಬ್ರೇಡಾ ನಗರವೂ ಸೇರಿತ್ತು. ಆ ಸಮಯದಲ್ಲಿ, ಬ್ರೇಡಾದಲ್ಲಿ ಸಭೆಯಿರಲಿಲ್ಲ, ಕೇವಲ ಒಬ್ಬ ವೃದ್ಧ ಸಾಕ್ಷಿ ದಂಪತಿಗಳಿದ್ದರು.
ಲಿಂಬರ್ಗ್ನಲ್ಲಿನ ಸಹೋದರರ ಸೇವೆಮಾಡುತ್ತಿದ್ದಾಗ, ಯೋಹಾನ್ ಪೀಪರ್ ಎಂಬ ಹೆಸರಿನ ಗಣಿ ಕೆಲಸಗಾರನಿಂದ ಪರ್ಯಾಲೋಚನೆಗಾಗಿ ಮುಂದಿಡಲ್ಪಟ್ಟ ಅನೇಕ ಪ್ರಶ್ನೆಗಳಿಗೆ ಉತ್ತರಿಸುವಂತೆ ನಾನು ಆಮಂತ್ರಿಸಲ್ಪಟ್ಟೆ. ಅವನು ಬೈಬಲ್ ಸತ್ಯಕ್ಕಾಗಿ ಒಂದು ದೃಢವಾದ ನಿಲುವನ್ನು ತೆಗೆದುಕೊಂಡು, ಒಬ್ಬ ಧೈರ್ಯಶಾಲಿಯಾದ ಪ್ರಚಾರಕನಾಗಿ ಪರಿಣಮಿಸಿದನು. ನಾಲ್ಕು ವರ್ಷಗಳ ನಂತರ ಅವನು ಬಂಧಿಸಲ್ಪಟ್ಟು, ಒಂದು ಕೂಟ ಶಿಬಿರದಲ್ಲಿ ಹಾಕಲ್ಪಟ್ಟನು; ಅಲ್ಲಿ ಅವನು ಮೂರುವರೆ ವರ್ಷಗಳನ್ನು ಕಳೆದನು. ತನ್ನ ಬಿಡುಗಡೆಯಾದ ಬಳಿಕ ಅವನು ಹುರುಪಿನಿಂದ, ಸಾರುವ ಕೆಲಸವನ್ನು ಪುನಃ ಕೈಕೊಂಡನು, ಹಾಗೂ ಇಂದು ಅವನು ಇನ್ನೂ ಒಬ್ಬ ನಂಬಿಗಸ್ತ ಹಿರಿಯನಾಗಿದ್ದಾನೆ. ಲಿಂಬರ್ಗ್ನಲ್ಲಿದ್ದ 12 ಮಂದಿ ಸಾಕ್ಷಿಗಳ ಆ ಚಿಕ್ಕ ಸಭೆಯು, ಇಂದು ಸುಮಾರು 1,550 ಪ್ರಚಾರಕರಿರುವ 17 ಸಭೆಗಳಾಗಿ ಬೆಳೆದಿದೆ!
ನಾಸಿ ಅಧಿಕಾರ ಮತ್ತು ನಿಯಂತ್ರಣದ ಕೆಳಗೆ
1940ರ ಮೇ ತಿಂಗಳಿನಲ್ಲಿ ನಾಸಿಗಳು ನೆದರ್ಲೆಂಡ್ಸ್ನ ಮೇಲೆ ಆಕ್ರಮಣಮಾಡಿದರು. ಆ್ಯಮ್ಸ್ಟರ್ಡ್ಯಾಮ್ನಲ್ಲಿರುವ ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸಿನ ಒಂದು ನೇಮಕವನ್ನು ನಾನು ಪಡೆದುಕೊಂಡೆ. ನಮ್ಮ ಕೆಲಸವನ್ನು ನಾವು ವಿಪರೀತ ಎಚ್ಚರಿಕೆಯಿಂದ ಮುಂದುವರಿಸಬೇಕಾಗಿತ್ತು, ಇದು ನಮ್ಮನ್ನು ಬೈಬಲಿನ ಈ ಜ್ಞಾನೋಕ್ತಿಯನ್ನು ಗಣ್ಯಮಾಡುವಂತೆ ಮಾಡಿತು: “ನಿಜ ಒಡನಾಡಿಯು . . . ಸಂಕಟವಿರುವ ಸಮಯಕ್ಕಾಗಿ ಹುಟ್ಟಿರುವ ಸಹೋದರನಾಗಿದ್ದಾನೆ.” (ಜ್ಞಾನೋಕ್ತಿ 17:17, NW) ಬೇಗುದಿಯ ಈ ಸಮಯದಲ್ಲಿ ವರ್ಧಿಸಿದ ಐಕ್ಯದ ಮಧುರ ಬಂಧವು, ನನ್ನ ಆತ್ಮಿಕ ಅಭಿವೃದ್ಧಿಯ ಮೇಲೆ ಗಾಢವಾದ ಪರಿಣಾಮವನ್ನು ಬೀರಿತು, ಮತ್ತು ಮುಂದಿದ್ದ ಇನ್ನೂ ಹೆಚ್ಚು ಕಷ್ಟಕರವಾದ ದಿನಗಳಿಗಾಗಿ ಇದು ನನ್ನನ್ನು ಸನ್ನದ್ಧುಗೊಳಿಸಿತು.
ಸರ್ವಸಾಮಾನ್ಯವಾಗಿ ಕುರಿಯರ್ಗಳ ಮೂಲಕ ಮಾಡಲ್ಪಡುತ್ತಿದ್ದ, ಸಭೆಗಳ ಸಾಹಿತ್ಯದ ಸಾಗಿಸುವಿಕೆಯ ಮೇಲ್ವಿಚಾರಣೆ ಮಾಡುವುದು ನನ್ನ ನೇಮಕವಾಗಿತ್ತು. ಜರ್ಮನಿಯಲ್ಲಿ ಬಲವಂತದ ಕೂಲಿಕಾರರಾಗಿ ಕೆಲಸಮಾಡಲಿಕ್ಕಾಗಿ, ಗೆಸ್ಟಪೊ ಸತತವಾಗಿ ಯುವ ಪುರುಷರಿಗಾಗಿ ಹುಡುಕುತ್ತಿದ್ದರು, ಆದುದರಿಂದ ನಾವು ಕ್ರೈಸ್ತ ಸಹೋದರಿಯರನ್ನು ಕುರಿಯರ್ಗಳೋಪಾದಿ ಉಪಯೋಗಿಸಿದೆವು. ಸಕಾಲದಲ್ಲಿ ಯಾವಾಗಲೂ ನಾನೀ ಎಂದು ಜ್ಞಾತಳಾಗಿದ್ದ, ವಿಲ್ಹೆಲ್ಮಿನ ಬಾಕರ್, ದ ಹೇಗ್ನಿಂದ ನಮ್ಮ ಬಳಿಗೆ ಕಳುಹಿಸಲ್ಪಟ್ಟಳು, ಮತ್ತು ನಮ್ಮ ಬ್ರಾಂಚ್ ಮೇಲ್ವಿಚಾರಕನಾದ ಆರ್ತರ್ ವಿಂಕ್ಲರ್ ಅಡಗಿಕೊಂಡಿದ್ದ ಸ್ಥಳಕ್ಕೆ ನಾನು ಅವಳನ್ನು ಕರೆದೊಯ್ದೆ. ಸಾಧ್ಯವಿರುವಷ್ಟರ ಮಟ್ಟಿಗೆ ಗಮನ ಸೆಳೆಯದಂತಿರಲು ಪ್ರಯತ್ನಿಸಲಿಕ್ಕಾಗಿ, ನಾನು ಒಬ್ಬ ಡಚ್ ರೈತನೋಪಾದಿ ಉಡುಪನ್ನು ಧರಿಸಿ, ಮರದ ಷೂಗಳನ್ನು ಮತ್ತು ರೈತನ ಇತರ ವೇಷಭೂಷಣಗಳನ್ನು ತೊಟ್ಟು, ಸ್ಟ್ರೀಟ್ಕಾರಿನಲ್ಲಿ ನಾನೀಗೆ ಬೆಂಗಾವಲಾಗಿ ಹೋದೆ. ನಾನು ತುಂಬಾ ಗಮನ ಸೆಳೆಯುವಂತಿದ್ದೆನೆಂದು ಅವಳು ಭಾವಿಸಿದ್ದರಿಂದ, ನಗುವುದರಿಂದ ತನ್ನನ್ನು ತಡೆದುಕೊಳ್ಳುವುದನ್ನು ಅವಳು ಕಷ್ಟಕರವಾದದ್ದಾಗಿ ಕಂಡುಕೊಂಡಳೆಂದು ತದನಂತರ ನನಗೆ ತಿಳಿಯಿತು.
1941ರ ಅಕ್ಟೋಬರ್ 21ರಂದು, ಆ್ಯಮ್ಸ್ಟರ್ಡ್ಯಾಮ್ನ ಸಾಹಿತ್ಯ ಮತ್ತು ಕಾಗದವನ್ನು ಸಂಗ್ರಹಿಸುವ ಸ್ಥಳವು, ನಾಸಿಗಳಿಗೆ ವಿಶ್ವಾಸಘಾತಕದಿಂದ ಒಪ್ಪಿಸಿಕೊಡಲ್ಪಟ್ಟಿತು. ಗೆಸ್ಟಪೊ ದಾಳಿಯ ಸಮಯದಲ್ಲಿ, ವಿಂಕ್ಲರ್ ಮತ್ತು ನಾನೀ ಸೆರೆಹಿಡಿಯಲ್ಪಟ್ಟರು. ಅವರು ಸೆರೆಮನೆಗೆ ಒಪ್ಪಿಸಲ್ಪಟ್ಟಾಗ, ಜನಸಂದಣಿಯಿದ್ದ ಬೀದಿಗಳಲ್ಲಿ ತಾವು ಯಾರ ಜಾಡನ್ನು ಕಂಡುಹಿಡಿಯಲು ಸೋತುಹೋಗಿದ್ದರೋ, ಆ “ಚಿಕ್ಕ, ಕಪ್ಪು ಕೂದಲಿನ ವ್ಯಕ್ತಿ”ಯನ್ನು ಬೆನ್ನಟ್ಟಿಕೊಂಡುಹೋದ ವಿಧದ ಕುರಿತಾಗಿ ಇಬ್ಬರು ಗೆಸ್ಟಪೊ ಏಜೆಂಟ್ಗಳು ಮಾತಾಡುತ್ತಿದುದನ್ನು ಅವರು ಕೇಳಿಸಿಕೊಂಡರು. ಅವರು ಮಾತಾಡುತ್ತಿದುದು ನನ್ನ ಕುರಿತಾಗಿ ಎಂಬುದು ಸ್ಪಷ್ಟವಾಗಿತ್ತು, ಆದುದರಿಂದ ಸಹೋದರರಿಗೆ ಸಂದೇಶವನ್ನು ಮುಟ್ಟಿಸುವುದರಲ್ಲಿ ವಿಂಕ್ಲರ್ ಸಫಲನಾದನು. ಆ ಕೂಡಲೆ ನಾನು ದ ಹೇಗ್ಗೆ ಸ್ಥಳಾಂತರಿಸಲ್ಪಟ್ಟೆ.
ಈ ಮಧ್ಯೆ ನಾನೀ ಸೆರೆಯಿಂದ ಬಿಡುಗಡೆಮಾಡಲ್ಪಟ್ಟಳು, ಮತ್ತು ಪಯನೀಯರ್ ಸೇವೆಯನ್ನು ಮಾಡಲಿಕ್ಕಾಗಿ ಅವಳು ದ ಹೇಗ್ಗೆ ಹಿಂದಿರುಗಿದಳು. ಅಲ್ಲಿ ನಾನು ಅವಳನ್ನು ಪುನಃ ಭೇಟಿಯಾದೆ. ಆದರೆ ರಾಟರ್ಡ್ಯಾಮ್ನಲ್ಲಿನ ಸಭಾ ಸೇವಕನು ಸೆರೆಹಿಡಿಯಲ್ಪಟ್ಟಾಗ, ಅವನ ಸ್ಥಾನವನ್ನು ಭರ್ತಿಮಾಡಲಿಕ್ಕಾಗಿ ನಾನು ಅಲ್ಲಿಗೆ ಕಳುಹಿಸಲ್ಪಟ್ಟೆ. ತದನಂತರ ಗೌಡ ಸಭೆಯ ಸಭಾ ಸೇವಕನು ಸೆರೆಹಿಡಿಯಲ್ಪಟ್ಟನು, ಹಾಗೂ ಅವನಿಗೆ ಬದಲಾಗಿ ಕಾರ್ಯನಡಿಸಲು ನಾನು ಅಲ್ಲಿಗೆ ಸ್ಥಳಾಂತರಿಸಲ್ಪಟ್ಟೆ. ಅಂತಿಮವಾಗಿ, 1943ರ ಮಾರ್ಚ್ 29ರಂದು, ನನ್ನನ್ನು ಹಿಡಿಯಲಾಯಿತು. ಬೈಬಲ್ ಸಾಹಿತ್ಯದ ನಮ್ಮ ಸಂಗ್ರಹವನ್ನು ನಾನು ಪರೀಕ್ಷಿಸುತ್ತಿದ್ದಾಗ, ಗೆಸ್ಟಪೊ ದಾಳಿಯಿಂದ ನಾನು ಆಶ್ಚರ್ಯಗೊಳಿಸಲ್ಪಟ್ಟೆ.
ಮೇಜಿನ ಮೇಲೆ ಹರಡಿಕೊಂಡಿದ್ದ ಬೈಬಲ್ ಸಾಹಿತ್ಯದ ಹೊರತಾಗಿ, ಕ್ರೈಸ್ತ ಸಹೋದರಸಹೋದರಿಯರ ಹೆಸರುಗಳ ಒಂದು ಪಟ್ಟಿಯೂ ಇತ್ತಾದರೂ, ಈ ಹೆಸರುಗಳು ಕೋಡ್ನ ರೂಪದಲ್ಲಿದ್ದವು. ಸಾರಲು ಇನ್ನೂ ಸ್ವತಂತ್ರರಾಗಿದ್ದವರನ್ನು ಸಂರಕ್ಷಿಸಲಿಕ್ಕಾಗಿ ನನಗಾಗಿ ಒಂದು ಮಾರ್ಗವನ್ನು ಒದಗಿಸುವಂತೆ ನಾನು ಸಂಕಟದಲ್ಲಿ ಯೆಹೋವನಿಗೆ ಪ್ರಾರ್ಥಿಸಿದೆ. ಪತ್ತೆಹಚ್ಚಲ್ಪಡದೆಯೇ, ನಾನು ನನ್ನ ತೆರೆದ ಕೈಯನ್ನು ಹೆಸರುಗಳ ಪಟ್ಟಿಯ ಮೇಲೆ ಇಟ್ಟು, ನನ್ನ ಅಂಗೈಯೊಳಗೆ ಅದನ್ನು ಮುದುರಿಕೊಳ್ಳುವುದರಲ್ಲಿ ನಾನು ಸಫಲನಾದೆ. ನಂತರ ಟ್ಲಾಯೆಟ್ಗೆ ಹೋಗಲಿಕ್ಕಾಗಿ ಅನುಮತಿಯನ್ನು ಕೇಳಿದೆ, ಅಲ್ಲಿ ಆ ಪಟ್ಟಿಯನ್ನು ನಾನು ಚೂರು ಚೂರು ಮಾಡಿ, ಕೆಳಗೆ ಫ್ಲಷ್ ಮಾಡಿಬಿಟ್ಟೆ.
ಅಂತಹ ವಿಪತ್ಕಾರಕ ಇಕ್ಕಟ್ಟುಗಳಲ್ಲಿರುವಾಗ, ಗತಕಾಲದಲ್ಲಿನ ತನ್ನ ಜನರೊಂದಿಗಿನ ಯೆಹೋವನ ವ್ಯವಹರಿಸುವಿಕೆಗಳಿಂದಲೂ, ಬಿಡುಗಡೆಯ ಕುರಿತಾದ ಆತನ ವಾಗ್ದಾನಗಳಿಂದಲೂ ಬಲವನ್ನು ಪಡೆದುಕೊಳ್ಳಲು ನಾನು ಕಲಿತುಕೊಂಡೆ. ನನ್ನ ಮನಸ್ಸಿನಲ್ಲಿ ಯಾವಾಗಲೂ ಬೇರೂರಿದ್ದ ಒಂದು ಪ್ರೇರಿತ ಆಶ್ವಾಸನೆಯು ಇದಾಗಿದೆ: “ನರರು ನಮಗೆ ವಿರೋಧವಾಗಿ ಎದ್ದಾಗ ಯೆಹೋವನು ನಮಗಿಲ್ಲದಿದ್ದರೆ ನಿಶ್ಚಯವಾಗಿ ಅವರು ಕೋಪದಿಂದ ಉರಿಗೊಂಡು ನಮ್ಮನ್ನು ಜೀವಸಹಿತ ನುಂಗಿಬಿಡುತ್ತಿದ್ದರು.”—ಕೀರ್ತನೆ 124:2, 3.
ಸೆರೆಮನೆಗಳು ಮತ್ತು ಕೂಟ ಶಿಬಿರಗಳು
ನನ್ನನ್ನು ರಾಟರ್ಡ್ಯಾಮ್ ಸೆರೆಮನೆಗೆ ಕರೆದೊಯ್ಯಲಾಯಿತು; ಅಲ್ಲಿ ನನ್ನೊಂದಿಗೆ ನನ್ನ ಬೈಬಲು ಇದ್ದುದಕ್ಕಾಗಿ ನಾನು ಕೃತಜ್ಞನಾಗಿದ್ದೆ. ರಕ್ಷಣೆ (ಇಂಗ್ಲಿಷ್) ಎಂಬ ಪುಸ್ತಕವೂ, ಮಕ್ಕಳು (ಇಂಗ್ಲಿಷ್) ಎಂಬ ಪುಸ್ತಕದ ಕೆಲವು ಭಾಗಗಳೂ ನನ್ನ ಬಳಿ ಇದ್ದವು, ಮತ್ತು ಈ ಎಲ್ಲಾ ಸಾಹಿತ್ಯವನ್ನು ಓದಲಿಕ್ಕಾಗಿ ನನಗೆ ಬೇಕಾದಷ್ಟು ಸಮಯವಿತ್ತು. ಆರು ತಿಂಗಳುಗಳ ಬಳಿಕ ನಾನು ತೀವ್ರವಾಗಿ ಅಸ್ವಸ್ಥನಾಗಿದ್ದು, ಆಸ್ಪತ್ರೆಯೊಂದಕ್ಕೆ ಹೋಗಬೇಕಾಗಿತ್ತು. ನಾನು ಸೆರೆಮನೆಯನ್ನು ಬಿಟ್ಟುಹೋಗುವ ಮೊದಲು, ಆ ಸಾಹಿತ್ಯವನ್ನು ನಾನು ನನ್ನ ಹಾಸಿಗೆಯ ಕೆಳಗೆ ಅಡಗಿಸಿದೆ. ಪೀಟ್ ಬ್ರೂರ್ಟ್ಜಸ್ ಎಂಬ ಇನ್ನೊಬ್ಬ ಸಾಕ್ಷಿಯು, ನನ್ನ ಕೋಣೆಗೆ ವರ್ಗಾಯಿಸಲ್ಪಟ್ಟಿದ್ದು, ಅವನು ಅದನ್ನು ಕಂಡುಹಿಡಿದನೆಂದು ತದನಂತರ ನನಗೆ ತಿಳಿದುಬಂತು. ಹೀಗೆ ಇನ್ನೂ ಇತರರನ್ನು ನಂಬಿಕೆಯಲ್ಲಿ ಬಲಪಡಿಸಲಿಕ್ಕಾಗಿ ಸಾಹಿತ್ಯವು ಉಪಯೋಗಿಸಲ್ಪಡುತ್ತಿತ್ತು.
ನಾನು ಅಸ್ವಸ್ಥತೆಯಿಂದ ಚೇತರಿಸಿಕೊಂಡಾಗ, ನಾನು ದ ಹೇಗ್ನಲ್ಲಿರುವ ಸೆರೆಮನೆಯೊಂದಕ್ಕೆ ವರ್ಗಾಯಿಸಲ್ಪಟ್ಟೆ. ಅಲ್ಲಿರುವಾಗ ನಾಸಿ ಆಡಳಿತ ಕ್ರಮವನ್ನು ಪ್ರತಿಭಟಿಸಿದ್ದಕ್ಕಾಗಿ ಸೆರೆಮನೆಯಲ್ಲಿದ್ದ, ನ್ಯಾಯಶಾಸ್ತ್ರದ ಒಬ್ಬ ವಿದ್ಯಾರ್ಥಿಯಾದ ಲೇಓ ಸಿ. ವಾನ್ ಡರ್ ಟಾಸ್ನನ್ನು ನಾನು ಭೇಟಿಯಾದೆ. ಅವನು ಯೆಹೋವನ ಸಾಕ್ಷಿಗಳ ಕುರಿತಾಗಿ ಎಂದೂ ಕೇಳಿರಲಿಲ್ಲ, ಮತ್ತು ಅವನಿಗೆ ಸಾಕ್ಷಿನೀಡುವ ಸಂದರ್ಭವು ನನಗಿತ್ತು. ಕೆಲವೊಮ್ಮೆ ಅವನು ಮಧ್ಯ ರಾತ್ರಿಯಲ್ಲಿ ನನ್ನನ್ನು ಎಬ್ಬಿಸಿ, ಪ್ರಶ್ನೆಗಳನ್ನು ಕೇಳುತ್ತಿದ್ದನು. ವಿಶೇಷವಾಗಿ ನಮ್ಮ ನಂಬಿಕೆಯನ್ನು ಪರಿತ್ಯಜಿಸುತ್ತಾ, ನಾವು ದಾಖಲೆಪತ್ರವೊಂದಕ್ಕೆ ಕೇವಲ ಒಂದು ಸಹಿ ಹಾಕುವುದಾದರೆ, ನಮ್ಮನ್ನು ಬಿಡುಗಡೆಮಾಡಿಸಿಕೊಳ್ಳಸಾಧ್ಯವಿದೆ ಎಂಬುದನ್ನು ತಿಳಿದುಕೊಂಡ ಬಳಿಕ, ಸಾಕ್ಷಿಗಳಿಗಾಗಿದ್ದ ತನ್ನ ಮೆಚ್ಚಿಕೆಯನ್ನು ತೋರ್ಪಡಿಸಿಕೊಳ್ಳದಿರುವುದು ಅವನಿಗೆ ಅಸಾಧ್ಯವಾಗಿತ್ತು. ಯುದ್ಧದ ಬಳಿಕ ಲೇಓ ಒಬ್ಬ ವಕೀಲನಾದನು ಹಾಗೂ ವಾಚ್ ಟವರ್ ಸೊಸೈಟಿಗಾಗಿ, ಆರಾಧನಾ ಸ್ವಾತಂತ್ರ್ಯವನ್ನು ಒಳಗೊಂಡಿದ್ದ ಡಸನ್ಗಟ್ಟಲೆ ಕೇಸುಗಳನ್ನು ಕಾದಾಡಿ ಬಗೆಹರಿಸಿದನು.
1944ರ ಎಪ್ರಿಲ್ 29ರಂದು, ಜರ್ಮನಿಗೆ ಹೋಗುವ 18 ದಿನದ ಗೋಳುಗುಟ್ಟಿಸುವ ಪ್ರಯಾಣಕ್ಕಾಗಿ ನಾನು ಒಂದು ರೈಲಿಗೆ ಹತ್ತಿಸಲ್ಪಟ್ಟೆ. ಮೇ 18ರಂದು ನಾನು ಬೂಕ್ನ್ವಾಲ್ಡ್ ಕೂಟ ಶಿಬಿರದಲ್ಲಿ ಬಂಧಿಸಲ್ಪಟ್ಟೆ. ಬಹುಮಟ್ಟಿಗೆ ಒಂದು ವರ್ಷದ ನಂತರ, ಮಿತ್ರ ಸೇನಾಪಡೆಗಳಿಂದ ನಾವು ಬಿಡುಗಡೆಗೊಳಿಸಲ್ಪಡುವ ವರೆಗೆ, ಜೀವನವು ವರ್ಣನಾತೀತವಾಗಿ ಭೀಕರವಾಗಿತ್ತು. ಸಾವಿರಾರು ಮಂದಿ ಸತ್ತರು, ಅನೇಕರು ನಮ್ಮ ಕಣ್ಣುಗಳ ಮುಂದೆಯೇ ಸತ್ತರು. ಯುದ್ಧ ಸಾಮಗ್ರಿಗಳನ್ನು ಉತ್ಪಾದಿಸಿದ, ಸಮೀಪದಲ್ಲಿದ್ದ ಒಂದು ಕಾರ್ಖಾನೆಯಲ್ಲಿ ಕೆಲಸಮಾಡಲು ನಾನು ನಿರಾಕರಿಸಿದ್ದರಿಂದಾಗಿ, ಚರಂಡಿಯ ರೊಚ್ಚನ್ನು ಸಾಗಿಸುವ ಕೆಲಸಮಾಡುವಂತೆ ನನ್ನನ್ನು ಇರಿಸಲಾಯಿತು.
ಒಂದು ದಿನ ಆ ಕಾರ್ಖಾನೆಗೆ ಬಾಂಬ್ ಬಿತ್ತು. ಅನೇಕರು ಭದ್ರತೆಗಾಗಿ ಸೈನಿಕರ ವಾಸಸ್ಥಾನಗಳಿಗೆ ರಭಸವಾಗಿ ನುಗ್ಗಿದಾಗ, ಇತರರು ಕಾಡುಗಳಿಗೆ ಓಡಿಹೋದರು. ಆಕಸ್ಮಿಕವಾಗಿ ಬಂದ ಬಾಂಬ್ಗಳು ಸೈನಿಕರ ವಠಾರಗಳಿಗೆ ಬಡಿದವು, ಮತ್ತು ಕಿಚ್ಚಿಡುವ ಬಾಂಬ್ಗಳು ಕಾಡುಗಳಿಗೆ ಬೆಂಕಿ ಹೊತ್ತಿಸಿದವು. ಅದು ಭೀಕರವಾದ ಒಂದು ದೃಶ್ಯವಾಗಿತ್ತು! ಅನೇಕರು ಜೀವಂತವಾಗಿಯೇ ದಹಿಸಲ್ಪಟ್ಟರು! ನಾನು ಒಂದು ಸುರಕ್ಷಿತವಾದ ಅಡಗುವ ಸ್ಥಳವನ್ನು ಕಂಡುಕೊಂಡಿದ್ದೆ, ಮತ್ತು ಬೆಂಕಿಯು ತಗ್ಗಿದಾಗ, ನಾನು ಅಸಂಖ್ಯಾತ ಮೃತ ದೇಹಗಳನ್ನು ಹಾದುಹೋಗಿ, ಶಿಬಿರವನ್ನು ತಲಪಿದೆ.
ಇಂದು ಹೆಚ್ಚಿನ ಜನರು, ನಾಸಿ ಸರ್ವನಾಶದ ಭಯಂಕರತೆಗಳ ಅರಿವುಳ್ಳವರಾಗಿದ್ದಾರೆ. ನಾನು ಅನುಭವಿಸಿದ ಭೀಕರತೆಗಳು, ವರ್ಷಗಳಾದ್ಯಂತವಾಗಿ ನನ್ನ ಆಲೋಚನೆಗಳ ಮೇಲೆ ಪ್ರಭಾವ ಬೀರದಿರುವಂತೆ, ಯೆಹೋವನು ನನ್ನ ಆಲೋಚನಾ ಸಾಮರ್ಥ್ಯವನ್ನು ಬಲಪಡಿಸಿದುದಕ್ಕಾಗಿ ನಾನು ಆತನಿಗೆ ಕೃತಜ್ಞನಾಗಿದ್ದೇನೆ. ನನ್ನ ಬಂಧನದ ಕಾಲಾವಧಿಯ ಕುರಿತಾಗಿ ನಾನು ಯೋಚಿಸುವಾಗ, ಯೆಹೋವನ ಹೆಸರಿನ ಮಹಿಮೆಗಾಗಿ ಆತನಿಗೆ ಸಮಗ್ರತೆಯನ್ನು ಕಾಪಾಡಿಕೊಂಡ ಕಾರಣದಿಂದ, ನನ್ನ ಅತ್ಯಂತ ಪ್ರಮುಖ ಭಾವನೆಯು ಸಂತೋಷದ್ದಾಗಿದೆ.—ಕೀರ್ತನೆ 124:6-8.
ಯುದ್ಧಾನಂತರದ ಚಟುವಟಿಕೆ
ನನ್ನ ಬಿಡುಗಡೆಯಾದ ನಂತರ ಮತ್ತು ಆ್ಯಮ್ಸ್ಟರ್ಡ್ಯಾಮ್ಗೆ ಹಿಂದಿರುಗಿದ ಬಳಿಕ, ಒಂದು ನೇಮಕಕ್ಕಾಗಿ ನಾನು ನೇರವಾಗಿ ಬ್ರಾಂಚ್ ಆಫೀಸಿಗೆ ವರದಿಮಾಡಿಕೊಂಡೆ. ನನ್ನ ಅನುಪಸ್ಥಿತಿಯಲ್ಲಿ ಸಂಭವಿಸಿದ್ದ ವಿಷಯಗಳ ಕುರಿತಾದ ಸಮಾಚಾರವನ್ನು ಕೇಳಲು ನಾನು ತೀರ ತವಕಗೊಂಡಿದ್ದೆ. ಈಗಾಗಲೇ ನಾನೀ ಅಲ್ಲಿ ಕೆಲಸಮಾಡುತ್ತಿದ್ದಳು. ಯುದ್ಧದ ಕೊನೆಯ ವರ್ಷದಲ್ಲಿ, ಬೈಬಲ್ ಸಾಹಿತ್ಯವನ್ನು ಸಭೆಗಳಿಗೆ ಸಾಗಿಸುತ್ತಾ, ಕುರಿಯರ್ಳೋಪಾದಿ ಅವಳು ಸೇವೆಮಾಡಿದ್ದಳು. ಡಸನ್ಗಟ್ಟಲೆ ಇಕ್ಕಟ್ಟಿನ ತಪ್ಪಿಸಿಕೊಳ್ಳುವಿಕೆಗಳನ್ನು ಅವಳು ಅನುಭವಿಸಿದ್ದಳಾದರೂ, ಪುನಃ ಅವಳು ಸೆರೆಹಿಡಿಯಲ್ಪಟ್ಟಿರಲಿಲ್ಲ.
ಹಾರ್ಲೆಮ್ನಲ್ಲಿದ್ದಾಗ ನಾನು ಸ್ವಲ್ಪ ಸಮಯದ ವರೆಗೆ ಪಯನೀಯರ್ ಸೇವೆಯನ್ನು ಮಾಡಿದೆನಾದರೂ, 1946ರಲ್ಲಿ, ಷಿಪಿಂಗ್ ಇಲಾಖೆಯಲ್ಲಿ ಕೆಲಸಮಾಡಲಿಕ್ಕಾಗಿ ಆ್ಯಮ್ಸ್ಟರ್ಡ್ಯಾಮ್ನಲ್ಲಿರುವ ಬ್ರಾಂಚ್ಗೆ ಹೋಗುವಂತೆ ನನ್ನನ್ನು ಕೇಳಿಕೊಳ್ಳಲಾಯಿತು. 1948ರ ಅಂತ್ಯದಷ್ಟಕ್ಕೆ, ನಾನೀ ಮತ್ತು ನಾನು ವಿವಾಹಮಾಡಿಕೊಂಡೆವು, ಮತ್ತು ಒಟ್ಟಿಗೆ ಪಯನೀಯರ್ ಸೇವೆಯನ್ನು ಮಾಡಲಿಕ್ಕಾಗಿ ಬ್ರಾಂಚನ್ನು ಬಿಟ್ಟುಹೋದೆವು. ನಮ್ಮ ಪಯನೀಯರ್ ಸೇವೆಯ ನೇಮಕವು ಆಸನ್ನಲ್ಲಿ ಇತ್ತು. ಹನ್ನೆರಡು ವರ್ಷಗಳಿಗೆ ಮೊದಲು ರಿಕಾರ್ಟ್ ಬ್ರಾನಿಂಗ್ ಮತ್ತು ನಾನು, ಒಂದು ಡೇರೆಯಲ್ಲಿ ವಾಸಿಸುತ್ತಾ, ಸಾರುತ್ತಾ ಬೇಸಗೆಕಾಲವನ್ನು ಅಲ್ಲಿ ಕಳೆದಿದ್ದೆವು. ಕೂಟ ಶಿಬಿರವೊಂದಕ್ಕೆ ಬರುವಾಗ, ಪ್ರಯಾಣ ಮಾರ್ಗದಲ್ಲಿ ರಿಕಾರ್ಟ್ ಗುಂಡಿಕ್ಕಿ ಕೊಲ್ಲಲ್ಪಟ್ಟನೆಂಬುದು ನನಗೆ ತಿಳಿಯಿತು.
ನನ್ನ ಬಂಧನದ ಕಾಲಾವಧಿಯು ನನ್ನ ಆರೋಗ್ಯವನ್ನು ದುರ್ಬಲಗೊಳಿಸಿತೆಂಬುದು ಸುವ್ಯಕ್ತ. ಬೂಕ್ನ್ವಾಲ್ಡ್ನಿಂದ ಬಿಡುಗಡೆಗೊಳಿಸಲ್ಪಟ್ಟ ಆರು ವರ್ಷಗಳ ನಂತರ, ನಾಲ್ಕು ತಿಂಗಳುಗಳ ವರೆಗೆ ಅಸ್ವಸ್ಥತೆಯು ನನ್ನನ್ನು ಹಾಸಿಗೆ ಹಿಡಿಸಿತು. ವರ್ಷಗಳ ತರುವಾಯ, 1957ರಲ್ಲಿ, ಇಡೀ ಒಂದು ವರ್ಷದ ವರೆಗೆ ಕ್ಷಯರೋಗದಿಂದ ಕಾಯಿಲೆಬಿದ್ದೆ. ನನ್ನ ದೇಹವು ಬಲಹೀನಗೊಂಡಿತ್ತಾದರೂ, ನನ್ನ ಪಯನೀಯರ್ ಆತ್ಮವು ಇನ್ನೂ ಪ್ರಬಲವಾಗಿತ್ತು. ನನ್ನ ಕಾಯಿಲೆಯ ಸಮಯದಲ್ಲಿ, ನಾನು ಪ್ರತಿಯೊಂದು ಸಂದರ್ಭವನ್ನು ಸಾಕ್ಷಿನೀಡಲಿಕ್ಕಾಗಿ ಬಿಗಿಹಿಡಿದೆ. ನನ್ನ ಕಾಯಿಲೆಯ ವಿದ್ಯಮಾನಗಳು ನನ್ನನ್ನು ಅಪ್ರಯೋಜಕನಾದ ಒಬ್ಬ ಅಸ್ವಸ್ಥ ಮನುಷ್ಯನಾಗಿ ಪರಿಣಮಿಸುವಂತೆ ಅನುಮತಿಸದಿರುವುದರಲ್ಲಿ, ಈ ಪಯನೀಯರ್ ಆತ್ಮವು ಒಂದು ಪ್ರಮುಖವಾದ ಅಂಶವಾಗಿತ್ತೆಂಬುದು ನನ್ನ ಅನಿಸಿಕೆ. ನಾನೀ ಹಾಗೂ ನಾನು, ನಮ್ಮ ಆರೋಗ್ಯವು ಅನುಮತಿಸುವಷ್ಟು ದೀರ್ಘ ಸಮಯದ ವರೆಗೆ, ಪೂರ್ಣ ಸಮಯದ ಸೇವೆಗೆ ಅಂಟಿಕೊಳ್ಳುವ ನಿರ್ಧಾರವನ್ನು ಮಾಡಿದ್ದೇವೆ.
ನನ್ನ ಚೇತರಿಸಿಕೊಳ್ಳುವಿಕೆಯನ್ನು ಅನುಸರಿಸಿ, ನಾವು ಬ್ರೇಡಾ ನಗರಕ್ಕೆ ನೇಮಿಸಲ್ಪಟ್ಟೆವು. ಇದು, ಒಬ್ಬ ಸೋನ್ ಸೇವಕನೋಪಾದಿ ನಾನು ಪ್ರಥಮವಾಗಿ ಆ ನಗರವನ್ನು ಸಂದರ್ಶಿಸಿದ 21 ವರ್ಷಗಳ ತರುವಾಯವಾಗಿತ್ತು. 1959ರಲ್ಲಿ ನಾವು ಆಗಮಿಸಿದಾಗ, ಅಲ್ಲಿ 34 ಮಂದಿ ಸಾಕ್ಷಿಗಳ ಒಂದು ಚಿಕ್ಕ ಸಭೆಯಿತ್ತು. ಇಂದು, 37 ವರ್ಷಗಳ ನಂತರ, ಅದು ಮೂರು ರಾಜ್ಯ ಸಭಾಗೃಹಗಳಲ್ಲಿ ಕೂಡಿಬರುವ, 500 ಸಾಕ್ಷಿಗಳಿರುವ ಆರು ಸಭೆಗಳಾಗಿ ಬೆಳೆದಿದೆ! ನಮ್ಮ ಸ್ಥಳಿಕ ಕೂಟಗಳಲ್ಲಿಯೂ ಸಮ್ಮೇಳನಗಳಲ್ಲಿಯೂ, ನಮ್ಮ ಕೆಲವು ಪ್ರಯತ್ನಗಳ ಫಲಿತಾಂಶವಾಗಿ, ಬೈಬಲ್ ಸತ್ಯದ ಜ್ಞಾನವನ್ನು ಪಡೆದುಕೊಂಡ ಅನೇಕರನ್ನು ನಾವು ನೋಡುತ್ತೇವೆ. “ನನ್ನ ಮಕ್ಕಳು ಸತ್ಯವನ್ನನುಸರಿಸಿ ನಡೆಯುವವರಾಗಿದ್ದಾರೆಂದು ಕೇಳುವದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ” ಎಂದು ಅಪೊಸ್ತಲ ಯೋಹಾನನು ಬರೆದಾಗ, ಅವನಿಗಾದ ಅನಿಸಿಕೆಯೇ ನಮಗೂ ಅನೇಕವೇಳೆ ಆಗುತ್ತದೆ.—3 ಯೋಹಾನ 4.
ಈಗ ನಾವು ವೃದ್ಧರಾಗಿದ್ದೇವೆ. ನನಗೆ 86 ಹಾಗೂ ನಾನೀಗೆ 78 ವರ್ಷ ಪ್ರಾಯವಾಗಿದೆ, ಆದರೆ ಪಯನೀಯರ್ ಸೇವೆಯು ಒಂದು ಸ್ವಸ್ಥಕರವಾದ ವೃತ್ತಿಯಾಗಿದೆಯೆಂದು ನಾನು ಹೇಳಲೇಬೇಕು. ನಾನು ಬ್ರೇಡಾ ನಗರಕ್ಕೆ ಹೋದಂದಿನಿಂದ, ನನ್ನ ಬಂಧನದ ಸಮಯದಲ್ಲಿ ಅಂಟಿಸಿಕೊಂಡಿದ್ದ ಆರೋಗ್ಯ ಸಮಸ್ಯೆಗಳಲ್ಲಿ ಹೆಚ್ಚಿನವುಗಳನ್ನು ನಾನು ಜಯಿಸಿದ್ದೇನೆ. ಯೆಹೋವನ ಸೇವೆಯಲ್ಲಿ ಅನೇಕ ಉತ್ಪನ್ನದಾಯಕವಾದ ವರ್ಷಗಳನ್ನು ಸಹ ನಾನು ಅನುಭವಿಸಿದ್ದೇನೆ.
ಫಲಪ್ರದವಾದ ಸೇವೆಯ ಅನೇಕ ವರ್ಷಗಳನ್ನು ಹಿಂದಿರುಗಿ ಅವಲೋಕಿಸುವುದು, ನಮ್ಮಿಬ್ಬರಿಗೂ ಸಂತೋಷದ ಒಂದು ಮೂಲವಾಗಿದೆ. ನಾವು ಜೀವಿಸುವಷ್ಟು ದೀರ್ಘ ಸಮಯದ ವರೆಗೆ ಆತನ ಸೇವೆಯಲ್ಲಿ ಮುಂದುವರಿಯಲು, ಯೆಹೋವನು ನಮಗೆ ಆತ್ಮವನ್ನೂ ಬಲವನ್ನೂ ಕೊಡುವನೆಂಬುದೇ ನಮ್ಮ ದೈನಂದಿನ ಪ್ರಾರ್ಥನೆಯಾಗಿದೆ. ಭರವಸೆಯಿಂದ, ನಾವು ಕೀರ್ತನೆಗಾರನ ಮಾತುಗಳಲ್ಲಿ ನಮ್ಮನ್ನು ವ್ಯಕ್ತಪಡಿಸಿಕೊಳ್ಳುತ್ತೇವೆ: “ಇಗೋ, ದೇವರೇ ನನಗೆ ಸಹಾಯಕನು; ಕರ್ತನೇ [“ಯೆಹೋವನೇ,” NW] ನನ್ನ ಪ್ರಾಣವನ್ನು ಕಾಪಾಡುವವನು.”—ಕೀರ್ತನೆ 54:4.
[ಪುಟ 23 ರಲ್ಲಿರುವ ಚಿತ್ರ]
1930ಗಳಲ್ಲಿ ಪಯನೀಯರ್ ಸೇವೆಯನ್ನು ಮಾಡುತ್ತಿದ್ದಾಗ ಉಪಯೋಗಿಸಿದ ಗುಡಾರದ ಪಕ್ಕದಲ್ಲಿ ನಿಂತಿರುವುದು
[ಪುಟ 23 ರಲ್ಲಿರುವ ಚಿತ್ರ]
ಚದುರಿರುವ ಟೆರಿಟೊರಿಯನ್ನು ತಲಪಲಿಕ್ಕಾಗಿ ಉಪಯೋಗಿಸಲಾಗುತ್ತಿದ್ದ ಚಿಕ್ಕಹಡಗು
[ಪುಟ 23 ರಲ್ಲಿರುವ ಚಿತ್ರ]
1957ರಲ್ಲಿನ ಅಧಿವೇಶನ ಕಾರ್ಯಕ್ರಮದಲ್ಲಿ ಸಂದರ್ಶಿಸಲ್ಪಡುತ್ತಿರುವುದು
[ಪುಟ 24 ರಲ್ಲಿರುವ ಚಿತ್ರ]
ಇಂದು ನನ್ನ ಹೆಂಡತಿಯೊಂದಿಗೆ