ಅದಕ್ಕೆ ಗೈರುಹಾಜರಾಗಲು ನೀವು ಬಯಸಲಾರಿರಿ!
ಯಾವುದಕ್ಕೆ ಗೈರುಹಾಜರಾಗುವುದು? ತೀವ್ರಗತಿಯಲ್ಲಿ ಸಮೀಪಿಸುತ್ತಿರುವ, “ದೈವಿಕ ಶಾಂತಿಯ ಸಂದೇಶವಾಹಕರು” ಎಂಬ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನಕ್ಕೆ! ಹೆಚ್ಚಿನ ಸ್ಥಳಗಳಲ್ಲಿ ಅಧಿವೇಶನವು, ಶುಕ್ರವಾರ ಬೆಳಗ್ಗೆ ಒಂದು ಸಂಗೀತ ಕಾರ್ಯಕ್ರಮದೊಂದಿಗೆ 9:30ಕ್ಕೆ ಆರಂಭವಾಗುವುದು. “ಶಾಂತಿಯ ಹುರುಪಿನ ಘೋಷಕರಿಂದ ಕೇಳುವುದು” ಎಂಬ ಭಾಗದ ಸಮಯದಲ್ಲಿ, ನಂಬಿಕೆಯನ್ನು ಬಲಪಡಿಸುವಂತಹ ಸಂದರ್ಶನಗಳಿಗೆ ಕಿವಿಗೊಟ್ಟ ಬಳಿಕ, “ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?” ಎಂಬ ಪ್ರೋತ್ಸಾಹಭರಿತ ಭಾಷಣದಲ್ಲಿ ನೀವು ಆನಂದಿಸುವಿರಿ.
ಶುಕ್ರವಾರ ಮಧ್ಯಾಹ್ನದ ಮೇಲಿನ ಒಂದು ಅತ್ಯುಜ್ವಲ ಭಾಗವು, ಭಾವೋದ್ರೇಕಗೊಳಿಸುವಂತಹ “ದೈವಿಕ ಶಾಂತಿಯ ಸಂದೇಶವಾಹಕರೋಪಾದಿ ನಮ್ಮ ಪಾತ್ರ” ಎಂಬುದು ಪ್ರಮುಖ ಭಾಷಣವಾಗಿರುವುದು. ತದನಂತರ “ದೇವರ ಆವಶ್ಯಕತೆಗಳನ್ನು ಕಲಿಯುವಂತೆ ಇತರರಿಗೆ ಸಹಾಯ ಮಾಡುತ್ತಿರುವುದು” ಎಂಬ ಭಾಗವು, ಹೊಸ ವ್ಯಕ್ತಿಗಳಿಗೆ ಕಲಿಸುವುದರ ಕುರಿತಾದ ಸಲಹೆಗಳನ್ನು ಒದಗಿಸುವುದು. ಇದರ ನಂತರ “ಮನೋರಂಜನೆಯ ಮರೆಯಾಗಿರುವ ಪಾಶಗಳಿಗೆ ಎಚ್ಚರವಾಗಿರ್ರಿ” ಎಂಬ ಸಮಯೋಚಿತವಾದ ಭಾಷಣಮಾಲೆಯು ಹಿಂಬಾಲಿಸುವುದು. “ಪಿಶಾಚನನ್ನು ವಿರೋಧಿಸಿರಿ—ಯಾವುದೇ ಪ್ರತಿಸ್ಪರ್ಧೆಯನ್ನು ಸಹಿಸದಿರಿ” ಮತ್ತು “ದೇವರ ವಾಕ್ಯದ ಸಮಗ್ರತೆಯನ್ನು ನಿಷ್ಠೆಯಿಂದ ಎತ್ತಿಹಿಡಿಯುವುದು” ಎಂಬ ಭಾಷಣಗಳೊಂದಿಗೆ, ಶುಕ್ರವಾರದ ಕಾರ್ಯಕ್ರಮವು ಮುಕ್ತಾಯವಾಗುವುದು.
ಶನಿವಾರ ಬೆಳಗ್ಗಿನ ಕಾರ್ಯಕ್ರಮವು, “ಶಾಂತಿಯ ಸುವಾರ್ತೆಯನ್ನು ತರುತ್ತಿರುವ ಸಂದೇಶವಾಹಕರು” ಎಂಬ ಮೂರು-ಭಾಗದ ಭಾಷಣಮಾಲೆಯಲ್ಲಿ, ಶಿಷ್ಯರನ್ನಾಗಿ ಮಾಡುವ ಕೆಲಸದ ಪ್ರಮುಖತೆಯನ್ನು ಒತ್ತಿಹೇಳುವುದು. “ಯೆಹೋವನ ಸಂಸ್ಥೆಯೊಳಗೆ ಹರ್ಷಭರಿತ ಕೊಡುವಿಕೆ” ಮತ್ತು “ಸಮರ್ಪಣೆ ಮತ್ತು ದೀಕ್ಷಾಸ್ನಾನದ ಮೂಲಕ ಜೀವ ಮತ್ತು ಶಾಂತಿ” ಎಂಬ ಭಾಷಣಗಳೊಂದಿಗೆ ಈ ಸೆಷನ್ ಮುಗಿಯುವುದು, ತದನಂತರ ಹೊಸ ಶಿಷ್ಯರಿಗೆ ದೀಕ್ಷಾಸ್ನಾನವನ್ನು ಪಡೆದುಕೊಳ್ಳುವ ಅವಕಾಶವಿರುವುದು.
ಶನಿವಾರ ಮಧ್ಯಾಹ್ನದ “ವಿಷಯಗಳ ಕುರಿತಾದ ಯೆಹೋವನ ಆಲೋಚನೆಗಳನ್ನು ಪರಿಗಣಿಸಿರಿ” ಎಂಬ ನಿರೂಪಣೆಯು, ‘ಇಂದು ಕ್ರೈಸ್ತರು ಪ್ರತ್ಯೇಕಿಸುವ ಒಂದು ಕೆಲಸದಲ್ಲಿ ಪಾಲುತೆಗೆದುಕೊಳ್ಳುತ್ತಿದ್ದಾರೊ?’ ಮತ್ತು ‘ಮರಣ ಶಿಕ್ಷೆಯ ಕುರಿತಾಗಿ ಬೈಬಲಿನ ನೋಟವೇನು?’ ಎಂಬಂತಹ ಪ್ರಶ್ನೆಗಳಿಗೆ ಉತ್ತರವನ್ನು ನೀಡುವುದು. “ಶಾಂತಿಯ ದೇವರು ನಿಮ್ಮ ಕುರಿತಾಗಿ ಕಾಳಜಿ ವಹಿಸುತ್ತಾನೆ” ಎಂಬ ಹೃದಯೋತ್ತೇಜಕವಾದ, ಎರಡು-ಭಾಗದ ಭಾಷಣಮಾಲೆಯಲ್ಲಿ, ಹಾಗೂ ವಿಶೇಷವಾಗಿ “ಕುಟುಂಬ ಜೀವನದಲ್ಲಿ ದೈವಿಕ ಶಾಂತಿಯನ್ನು ಬೆನ್ನಟ್ಟಿರಿ” ಎಂಬ ಮುಕ್ತಾಯ ಭಾಷಣದಲ್ಲಿಯೂ ನೀವು ಆನಂದಿಸುವಿರಿ.
ಆದಿತ್ಯವಾರ ಬೆಳಗ್ಗಿನ ಕಾರ್ಯಕ್ರಮವು, “ಯೋಗ್ಯ ರೀತಿಯ ಸಂದೇಶವಾಹಕರನ್ನು ಗುರುತಿಸುವುದು” ಎಂಬ ಮೂರು-ಭಾಗದ ಭಾಷಣಮಾಲೆಯನ್ನೂ, “ದೇವರ ವಾಕ್ಯಕ್ಕೆ ಕಿವಿಗೊಡಿರಿ ಮತ್ತು ವಿಧೇಯರಾಗಿರಿ” ಎಂಬ ಭಾಷಣವನ್ನೂ ಒಳಗೊಂಡಿರುವುದು. ಆ ದಿನದ ಬೆಳಗ್ಗಿನ ಕಾರ್ಯಕ್ರಮವು, ನ್ಯಾಯಸ್ಥಾಪಕನಾದ ಗಿದ್ಯೋನನ ಕುರಿತಾದ ಬೈಬಲ್ ವೃತ್ತಾಂತದಿಂದ ಅಮೂಲ್ಯವಾದ ಪಾಠಗಳನ್ನು ಹೊರಸೆಳೆಯುವ, ಪೂರ್ಣ ತೊಡಿಗೆಯಿಂದ ಕೂಡಿದ ಡ್ರಾಮಾದೊಂದಿಗೆ ಮುಕ್ತಾಯಗೊಳ್ಳುವುದು.
ಆದಿತ್ಯವಾರ ಮಧ್ಯಾಹ್ನದಂದು ಅಧಿವೇಶನದ ಕೊನೆಯ ಸೆಷನ್, “ಕಟ್ಟಕಡೆಗೆ ನಿಜ ಶಾಂತಿ!—ಯಾವ ಮೂಲದಿಂದ?” ಎಂಬ ಶಿರೋನಾಮವುಳ್ಳ, ಬಹಿರಂಗ ಭಾಷಣವನ್ನು ಪ್ರದರ್ಶಿಸಲಿರುವುದು. ಅಂತಿಮವಾಗಿ, “ದೈವಿಕ ಶಾಂತಿಯ ಸಂದೇಶವಾಹಕರೋಪಾದಿ ಮುನ್ನಡೆಯುತ್ತಿರುವುದು” ಎಂಬ ಪ್ರಚೋದನಾತ್ಮಕ ಭಾಷಣವು, ಅಧಿವೇಶನವನ್ನು ಸಮಾಪ್ತಿಗೆ ತರುವುದು.
ಹಾಜರಾಗಲಿಕ್ಕಾಗಿ ಈಗಲೇ ಯೋಜನೆಗಳನ್ನು ಮಾಡಿರಿ. ನಿಮ್ಮ ಮನೆಗೆ ಅತ್ಯಂತ ಸಮೀಪದಲ್ಲಿರುವ ನಿವೇಶನವನ್ನು ಕಂಡುಕೊಳ್ಳಲಿಕ್ಕಾಗಿ, ಯೆಹೋವನ ಸಾಕ್ಷಿಗಳ ಸ್ಥಳಿಕ ರಾಜ್ಯ ಸಭಾಗೃಹವನ್ನು ಸಂಪರ್ಕಿಸಿರಿ ಅಥವಾ ಈ ಪತ್ರಿಕೆಯ ಪ್ರಕಾಶಕರಿಗೆ ಬರೆಯಿರಿ. ಎಚ್ಚರ! ಪತ್ರಿಕೆಯ ಜೂನ್ 8 (ಇಂಗ್ಲಿಷ್)ರ ಸಂಚಿಕೆಯು, ಭಾರತದಲ್ಲಿನ ಎಲ್ಲಾ ಅಧಿವೇಶನ ನಿವೇಶನಗಳ ಪಟ್ಟಿಯನ್ನು ಒದಗಿಸುವುದು.