ಯೆಹೋವನು ನಿಮ್ಮ ಲೆಕ್ಕಕ್ಕೆ ಒಳಿತನ್ನು ಜಮಾಮಾಡುವಂತಾಗಲಿ
“ನನ್ನ ದೇವರೇ, ಇದನ್ನು . . . ನನ್ನ ಲೆಕ್ಕಕ್ಕೆ ದಯವಿಟ್ಟು ನೆನಪುಮಾಡಿಕೊ, ನನ್ನ ದೇವರೇ, ಹಿತಕ್ಕಾಗಿ ನನ್ನನ್ನು ದಯವಿಟ್ಟು ಜ್ಞಾಪಿಸಿಕೊ.”—ನೆಹೆಮೀಯ 13:22, 31, NW.
1. ದೇವರಿಗೆ ಸಮರ್ಪಿತರಾಗಿರುವವರು ಯೆಹೋವನಿಗೆ ಉತ್ತಮ ಲೆಕ್ಕವನ್ನು ಕೊಡುವಂತೆ ಅವರಿಗೆ ಯಾವುದು ಸಹಾಯಮಾಡುತ್ತದೆ?
ಯೆಹೋವನಿಗೆ ಒಂದು ಉತ್ತಮ ಲೆಕ್ಕವನ್ನು ಒಪ್ಪಿಸಲು ಬೇಕಾಗಿರುವ ಸಕಲ ಸಹಾಯಗಳೂ ಆತನ ಸೇವಕರಿಗಿವೆ. ಏಕೆ? ಏಕೆಂದರೆ ದೇವರ ಭೂಸಂಸ್ಥೆಯ ಭಾಗವಾಗಿರುವ ಅವರಿಗೆ ಆತನೊಂದಿಗೆ ನಿಕಟವಾದ ಸಂಬಂಧವಿದೆ. ಆತನು ಅವರಿಗೆ ತನ್ನ ಉದ್ದೇಶಗಳನ್ನು ತಿಳಿಯಪಡಿಸಿದ್ದಾನೆ, ಮತ್ತು ಆತನು ಅವರಿಗೆ ತನ್ನ ಪವಿತ್ರಾತ್ಮದ ಮೂಲಕ ಸಹಾಯವನ್ನೂ ಆತ್ಮಿಕ ಒಳನೋಟವನ್ನೂ ಕೊಟ್ಟಿದ್ದಾನೆ. (ಕೀರ್ತನೆ 51:11; 119:105; 1 ಕೊರಿಂಥ 2:10-13) ಈ ವಿಶೇಷ ಸನ್ನಿವೇಶಗಳನ್ನು ಪರಿಗಣಿಸುತ್ತಾ, ಯೆಹೋವನು ತನ್ನ ಭೂಸೇವಕರಿಗೆ, ಅವರು ತಮ್ಮ ವಿಷಯವಾಗಿ ತಾವೇನಾಗಿದ್ದೇವೆ ಮತ್ತು ಆತನ ಶಕ್ತಿ ಮತ್ತು ಆತನ ಪವಿತ್ರಾತ್ಮದ ಸಹಾಯದಿಂದ ಏನನ್ನು ಸಾಧಿಸುತ್ತೇವೆಂಬ ವಿಷಯದಲ್ಲಿ ಲೆಕ್ಕವನ್ನೊಪ್ಪಿಸುವಂತೆ ಪ್ರೀತಿಪೂರ್ವಕವಾಗಿ ಕರೆಕೊಡುತ್ತಾನೆ.
2. (ಎ) ನೆಹೆಮೀಯನು ತನ್ನ ವಿಷಯದಲ್ಲಿ ಯೆಹೋವನಿಗೆ ಉತ್ತಮ ಅಭಿಪ್ರಾಯವನ್ನು ಯಾವ ವಿಧಗಳಲ್ಲಿ ಕೊಟ್ಟನು? (ಬಿ) ನೆಹೆಮೀಯನು ತನ್ನ ಹೆಸರಿರುವ ಬೈಬಲ್ ಪುಸ್ತಕವನ್ನು ಯಾವ ಬಿನ್ನಹದಿಂದ ಮುಕ್ತಾಯಗೊಳಿಸಿದನು?
2 ತನ್ನ ವಿಷಯದಲ್ಲಿ ದೇವರಿಗೆ ಒಳ್ಳೆಯ ಅಭಿಪ್ರಾಯವನ್ನು ಮೂಡಿಸಿದ ಒಬ್ಬ ಮನುಷ್ಯನು, ಪರ್ಷಿಯದ ರಾಜ ಅರ್ತಷಸ್ತ (ಲಾಂಜೀಮನಸ್)ನ ಪಾನದಾಯಕನಾಗಿದ್ದ ನೆಹೆಮೀಯನಾಗಿದ್ದನು. (ನೆಹೆಮೀಯ 2:1) ನೆಹೆಮೀಯನು ಯೆಹೂದ್ಯರ ರಾಜ್ಯಪಾಲನಾಗಿ, ವಿರೋಧಿಗಳ ಮತ್ತು ಅಪಾಯಗಳ ಎದುರಿನಲ್ಲಿಯೂ ಯೆರೂಸಲೇಮಿನ ಗೋಡೆಗಳನ್ನು ಪುನಃ ಕಟ್ಟಿದನು. ಸತ್ಯಾರಾಧನೆಗಾಗಿ ಹುರುಪುಳ್ಳವನಾಗಿದ್ದ ಅವನು, ದೇವರ ಧರ್ಮಶಾಸ್ತ್ರವನ್ನು ಜಾರಿಗೆ ತಂದು, ದಬ್ಬಾಳಿಕೆಗೊಳಗಾದವರಿಗೆ ಕಾಳಜಿ ತೋರಿಸಿದನು. (ನೆಹೆಮೀಯ 5:14-19) ಲೇವಿಯರು ತಮ್ಮನ್ನು ಕ್ರಮವಾಗಿ ಶುದ್ಧೀಕರಿಸಿಕೊಳ್ಳುವಂತೆಯೂ, ದ್ವಾರಗಳಲ್ಲಿ ಕಾವಲಿರುವಂತೆಯೂ, ಸಬ್ಬತ್ ದಿನವನ್ನು ಪವಿತ್ರೀಕರಿಸುವಂತೆಯೂ ನೆಹೆಮೀಯನು ಪ್ರೋತ್ಸಾಹಿಸಿದನು. ಆ ಕಾರಣದಿಂದ ಅವನು ಹೀಗೆ ಪ್ರಾರ್ಥಿಸಸಾಧ್ಯವಿತ್ತು: “ನನ್ನ ದೇವರೇ ಇದನ್ನು ಸಹ ನನ್ನ ಲೆಕ್ಕಕ್ಕೆ ದಯವಿಟ್ಟು ನೆನಪುಮಾಡಿಕೊ, ಮತ್ತು ನಿನ್ನ ಪ್ರೀತಿಪೂರ್ವಕವಾದ ದಯೆಯ ಯಥೇಷ್ಟತೆಗನುಸಾರ ನನಗಾಗಿ ಮರುಗು.” ಸಮಂಜಸವಾಗಿಯೇ, ನೆಹೆಮೀಯನು ಸಹ ಈ ಬಿನ್ನಹದೊಂದಿಗೆ ದೈವಿಕವಾಗಿ ಪ್ರೇರಿತವಾದ ತನ್ನ ಪುಸ್ತಕವನ್ನು ಮುಕ್ತಾಯಗೊಳಿಸಿದನು: “ನನ್ನ ದೇವರೇ, ನನ್ನ ಹಿತಕ್ಕಾಗಿ ನನ್ನನ್ನು ದಯವಿಟ್ಟು ಜ್ಞಾಪಿಸಿಕೊ.”—ನೆಹೆಮೀಯ 13:22, 31, NW.
3. (ಎ) ಒಳ್ಳೆಯದನ್ನು ಮಾಡುವ ಒಬ್ಬ ವ್ಯಕ್ತಿಯನ್ನು ನೀವು ಹೇಗೆ ವರ್ಣಿಸುವಿರಿ? (ಬಿ) ನೆಹೆಮೀಯನ ವರ್ತನಾರೀತಿಯ ಮೇಲೆ ಚಿಂತನೆ ಮಾಡುವುದು, ನಾವು ಸ್ವತಃ ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳುವಂತೆ ಮಾಡಬಹುದು?
3 ಒಳ್ಳೆಯದನ್ನು ಮಾಡುವ ಒಬ್ಬ ವ್ಯಕ್ತಿಯು ಸದ್ಗುಣಿಯಾಗಿದ್ದು, ಇತರರಿಗೆ ಪ್ರಯೋಜನಕರವಾಗಿರುವ ಪ್ರಾಮಾಣಿಕ ಕಾರ್ಯಗಳನ್ನು ನಡೆಸುತ್ತಾನೆ. ನೆಹೆಮೀಯನು ಇಂತಹ ಒಬ್ಬ ಮನುಷ್ಯನಾಗಿದ್ದನು. ಅವನಿಗೆ ದೇವರೆಡೆಗೆ ಪೂಜ್ಯಭಾವದ ಭಯವೂ ಸತ್ಯರಾಧನೆಗಾಗಿ ಭಾರೀ ಹುರುಪೂ ಇತ್ತು. ಅದಲ್ಲದೆ, ಅವನು ದೇವರ ಸೇವೆಯಲ್ಲಿ ತನಗಿದ್ದ ಸುಯೋಗಕ್ಕಾಗಿ ಆಭಾರಿಯಾಗಿದ್ದು, ತನ್ನ ವಿಷಯವಾಗಿ ದೇವರಿಗೆ ಉತ್ತಮವಾದ ಅಭಿಪ್ರಾಯವನ್ನು ಕೊಟ್ಟನು. ಅವನ ನಡತೆಯ ಮೇಲಿನ ಚಿಂತನೆಯು, ‘ನನ್ನ ದೇವದತ್ತ ಸುಯೋಗಗಳನ್ನೂ ಜವಾಬ್ದಾರಿಗಳನ್ನೂ ನಾನು ಹೇಗೆ ವೀಕ್ಷಿಸುತ್ತೇನೆ? ಯೆಹೋವ ದೇವರಿಗೂ ಯೇಸು ಕ್ರಿಸ್ತನಿಗೂ ನಾನು ನನ್ನ ವಿಷಯದಲ್ಲಿ ಯಾವ ಅಭಿಪ್ರಾಯವನ್ನು ಕೊಡುತ್ತಿದ್ದೇನೆ?’ ಎಂಬ ಪ್ರಶ್ನೆಗಳನ್ನು ನಾವು ಸ್ವತಃ ಕೇಳಿಕೊಳ್ಳುವಂತೆ ಮಾಡಬಹುದು.
ಜ್ಞಾನವು ನಮ್ಮನ್ನು ಉತ್ತರವಾದಿಗಳಾಗುವಂತೆ ಮಾಡುತ್ತದೆ
4. ಯೇಸು ತನ್ನ ಹಿಂಬಾಲಕರಿಗೆ ಯಾವ ಆದೇಶವನ್ನು ಕೊಟ್ಟನು, ಮತ್ತು “ನಿತ್ಯ ಜೀವಕ್ಕಾಗಿ ಯೋಗ್ಯ ಪ್ರವೃತ್ತಿ” ಇದ್ದವರು ಏನು ಮಾಡಿದರು?
4 ಯೇಸು ತನ್ನ ಹಿಂಬಾಲಕರಿಗೆ ಈ ಆದೇಶವನ್ನು ಕೊಟ್ಟನು: “ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ . . . ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.” (ಮತ್ತಾಯ 28:19, 20) ಅವರಿಗೆ ಉಪದೇಶಮಾಡುವ ಮೂಲಕ ಶಿಷ್ಯರಾಗಿ ಮಾಡಲ್ಪಡಬೇಕಾಗಿತ್ತು. ಹೀಗೆ ಕಲಿಸಲ್ಪಟ್ಟವರು ಮತ್ತು “ನಿತ್ಯ ಜೀವಕ್ಕಾಗಿ ಯೋಗ್ಯ ಪ್ರವೃತ್ತಿಯಿದ್ದವರು,” ಯೇಸುವಿನಂತೆ ದೀಕ್ಷಾಸ್ನಾನ ಮಾಡಿಸಿಕೊಳ್ಳಲಿದ್ದರು. (ಅ. ಕೃತ್ಯಗಳು 13:48, NW; ಮಾರ್ಕ 1:9-11) ಅವನು ಆಜ್ಞಾಪಿಸಿದ್ದ ಸಕಲ ವಿಷಯಗಳನ್ನು ಪಾಲಿಸುವ ಅವರ ಬಯಕೆಯು ಹೃದಯದಿಂದ ಬರಲಿಕ್ಕಿತ್ತು. ದೇವರ ವಾಕ್ಯದ ನಿಷ್ಕೃಷ್ಟ ಜ್ಞಾನವನ್ನು ಒಳತೆಗೆದುಕೊಂಡು ಅನ್ವಯಿಸಿಕೊಳ್ಳುವ ಮೂಲಕ ಅವರು ಸಮರ್ಪಣೆಯ ಹಂತವನ್ನು ತಲಪಲಿದ್ದರು.—ಯೋಹಾನ 17:3.
5, 6. ಯಾಕೋಬ 4:17ನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು? ಅದರ ಅನ್ವಯವನ್ನು ದೃಷ್ಟಾಂತಿಸಿರಿ.
5 ನಮ್ಮ ಶಾಸ್ತ್ರೀಯ ಜ್ಞಾನವು ಎಷ್ಟು ಗಾಢವಾಗಿರುತ್ತದೊ, ನಮ್ಮ ನಂಬಿಕೆಗಿರುವ ಅಸ್ತಿವಾರವು ಅಷ್ಟೇ ಹೆಚ್ಚು ಒಳ್ಳೆಯದಾಗಿರುತ್ತದೆ. ಅದೇ ಸಮಯದಲ್ಲಿ, ದೇವರ ಕಡೆಗಿನ ನಮ್ಮ ಉತ್ತರವಾದಿತ್ವವು ಹೆಚ್ಚು ಅಧಿಕವಾಗುತ್ತದೆ. ಯಾಕೋಬ 4:17 ಹೇಳುವುದು: “ಒಳ್ಳೇದನ್ನು ಮಾಡಬೇಕೆಂದು ತಿಳಿದು ಅದನ್ನು ಮಾಡದೆ ಇರುವವನು ಪಾಪಕ್ಕೊಳಗಾಗಿದ್ದಾನೆ.” ಶಿಷ್ಯ ಯಾಕೋಬನು ಆಗ ತಾನೇ ಹೇಳಿದ್ದುದಕ್ಕೆ—ದೇವರ ಮೇಲೆ ಸಂಪೂರ್ಣವಾಗಿ ಹೊಂದಿಕೊಂಡಿರುವ ಬದಲಿಗೆ ಹೊಗಳಿಕೊಳ್ಳುವ ವಿಷಯಕ್ಕೆ, ಈ ಹೇಳಿಕೆಯು ಒಂದು ಸಮಾಪ್ತಿಯೆಂಬುದು ಸ್ಪಷ್ಟ. ಯೆಹೋವನ ಸಹಾಯದಿಂದಲ್ಲದೆ ಬಾಳಿಕೆ ಬರುವ ಯಾವುದನ್ನೂ ತಾನು ಮಾಡಸಾಧ್ಯವಿಲ್ಲವೆಂದು ತಿಳಿದಿರುವ ಒಬ್ಬ ವ್ಯಕ್ತಿಯು ಅದರಂತೆ ವರ್ತಿಸದಿದ್ದರೆ, ಇದು ಪಾಪವಾಗಿದೆ. ಆದರೆ ಯಾಕೋಬನ ಮಾತುಗಳು ಕರ್ತವ್ಯ ಲೋಪದ ಪಾಪಕ್ಕೂ ಅನ್ವಯಿಸಬಲ್ಲವು. ದೃಷ್ಟಾಂತಕ್ಕೆ, ಕುರಿ ಮತ್ತು ಆಡುಗಳ ಯೇಸುವಿನ ಸಾಮ್ಯದಲ್ಲಿ, ಆಡುಗಳು ಖಂಡಿಸಲ್ಪಡುವುದು ದುಷ್ಕೃತ್ಯಗಳಿಗಾಗಿ ಅಲ್ಲ, ಕ್ರಿಸ್ತನ ಸಹೋದರರಿಗೆ ಸಹಾಯ ಮಾಡದಿರುವುದಕ್ಕೆ.—ಮತ್ತಾಯ 25:41-46.
6 ಯೆಹೋವನ ಸಾಕ್ಷಿಗಳು ಬೈಬಲ್ ಅಭ್ಯಾಸ ನಡೆಸುತ್ತಿದ್ದ ಒಬ್ಬ ಪುರುಷನು, ಧೂಮಪಾನವನ್ನು ನಿಲ್ಲಿಸಬೇಕೆಂದು ಅವನಿಗೆ ತಿಳಿದಿದ್ದರೂ ನಿಲ್ಲಿಸದ ಕಾರಣ, ಸ್ವಲ್ಪವೇ ಆತ್ಮಿಕ ಅಭಿವೃದ್ಧಿಯನ್ನು ಮಾಡುತ್ತಿದ್ದನು. ಹಿರಿಯನೊಬ್ಬನು ಅವನನ್ನು ಯಾಕೋಬ 4:17ನ್ನು ಓದುವಂತೆ ಕೇಳಿಕೊಂಡನು. ಈ ವಚನದ ಅರ್ಥಗರ್ಭಿತತೆಯ ಕುರಿತು ಹೇಳಿಕೆ ನೀಡಿದ ಬಳಿಕ, ಹಿರಿಯನು ಹೇಳಿದ್ದು: “ನೀನು ದೀಕ್ಷಾಸ್ನಾನ ಪಡೆದಿಲ್ಲವಾದರೂ, ಉತ್ತರವಾದಿಯಾಗಿದ್ದೀ, ಮತ್ತು ನಿನ್ನ ನಿರ್ಣಯಕ್ಕೆ ನೀನು ಪೂರ್ತಿ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು.” ಸಂತೋಷಕರವಾಗಿ, ಆ ಮನುಷ್ಯನು ಪ್ರತಿಕ್ರಿಯೆ ತೋರಿಸಿ, ಧೂಮಪಾನವನ್ನು ನಿಲ್ಲಿಸಿ, ಯೆಹೋವ ದೇವರಿಗೆ ತನ್ನ ಸಮರ್ಪಣೆಯ ಸೂಚನೆಯಾದ ದೀಕ್ಷಾಸ್ನಾನಕ್ಕಾಗಿ ಬೇಗನೆ ಅರ್ಹನಾದನು.
ನಮ್ಮ ಶುಶ್ರೂಷೆಗೆ ಉತ್ತರವಾದಿಗಳು
7. “ದೈವಜ್ಞಾನ”ಕ್ಕಾಗಿ ನಮ್ಮ ಕೃತಜ್ಞತೆಯನ್ನು ಪ್ರದರ್ಶಿಸುವ ಒಂದು ವಿಧವು ಯಾವುದು?
7 ನಮ್ಮ ಸೃಷ್ಟಿಕರ್ತನನ್ನು ಮೆಚ್ಚಿಸುವುದು ನಮ್ಮ ಹೃತ್ಪೂರ್ವಕವಾದ ಬಯಕೆಯಾಗಿರಬೇಕು. “ದೈವಜ್ಞಾನ”ಕ್ಕಾಗಿರುವ ನಮ್ಮ ಕೃತಜ್ಞತೆಯನ್ನು ಪ್ರದರ್ಶಿಸುವ ಒಂದು ವಿಧಾನವು, ಆತನ ಪುತ್ರನಾದ ಯೇಸು ಕ್ರಿಸ್ತನ ಶಿಷ್ಯರನ್ನಾಗಿ ಮಾಡುವ ಆದೇಶವನ್ನು ನೆರವೇರಿಸುವುದೇ. ಇದು ದೇವರಿಗಾಗಿ ಮತ್ತು ನಮ್ಮ ನೆರೆಯವನಿಗಾಗಿ ಪ್ರೀತಿಯನ್ನು ತೋರಿಸುವ ಒಂದು ವಿಧವಾಗಿದೆ. (ಜ್ಞಾನೋಕ್ತಿ 2:1-5; ಮತ್ತಾಯ 22:35-40) ಹೌದು, ನಮ್ಮಲ್ಲಿನ ದೇವರ ಜ್ಞಾನವು ನಮ್ಮನ್ನು ಆತನಿಗೆ ಉತ್ತರವಾದಿಗಳನ್ನಾಗಿ ಮಾಡುತ್ತದೆ, ಮತ್ತು ನಾವು ನಮ್ಮ ಜೊತೆ ಮಾನವರನ್ನು ಭಾವೀ ಶಿಷ್ಯರನ್ನಾಗಿ ವೀಕ್ಷಿಸುವ ಅಗತ್ಯವಿದೆ.
8. ಪೌಲನು ತನ್ನ ಶುಶ್ರೂಷೆಗಾಗಿ ದೇವರಿಗೆ ಲೆಕ್ಕ ಒಪ್ಪಿಸಬೇಕೆಂದು ಭಾವಿಸಿದನೆಂದು ನಾವು ಏಕೆ ಹೇಳಸಾಧ್ಯವಿದೆ?
8 ಸುವಾರ್ತೆಯ ಮನಃಪೂರ್ವಕವಾದ ಅಂಗೀಕಾರ ಮತ್ತು ವಿಧೇಯತೆಯು ರಕ್ಷಣೆಯನ್ನು ಫಲಿಸುವಾಗ, ಅದರ ತಿರಸ್ಕಾರವೊ ನಾಶನವನ್ನು ತರಬಲ್ಲದೆಂದು ಅಪೊಸ್ತಲ ಪೌಲನಿಗೆ ತಿಳಿದಿತ್ತು. (2 ಥೆಸಲೊನೀಕ 1:6-8) ಆದಕಾರಣ, ತನ್ನ ಶುಶ್ರೂಷೆಗಾಗಿ ತಾನು ಯೆಹೋವನಿಗೆ ಉತ್ತರವಾದಿಯೆಂದು ಭಾವಿಸಿದನು. ವಾಸ್ತವವಾಗಿ, ಪೌಲನೂ ಅವನ ಜೊತೆಗಾರರೂ ತಮ್ಮ ಶುಶ್ರೂಷೆಯನ್ನು ಎಷ್ಟು ಗಣ್ಯಮಾಡಿದರೆಂದರೆ, ಅದರಿಂದ ಆರ್ಥಿಕ ಸಂಪಾದನೆಯನ್ನು ತಾವು ಮಾಡುತ್ತಿದ್ದೇವೆಂಬ ತೋರಿಕೆಯನ್ನೂ ಕೊಡುವುದನ್ನು ತಪ್ಪಿಸಲು ಅವರು ಜಾಗರೂಕತೆಯಿಂದಿದ್ದರು. ಅದಲ್ಲದೆ, ಪೌಲನ ಹೃದಯವು, “ನಾನು ಸುವಾರ್ತೆಯನ್ನು ಸಾರಿದರೂ ಹೊಗಳಿಕೊಳ್ಳುವದಕ್ಕೆ ನನಗೇನೂ ಆಸ್ಪದವಿಲ್ಲ; ಸಾರಲೇಬೇಕೆಂಬ ನಿರ್ಬಂಧ ನನಗುಂಟು. ಸಾರದಿದ್ದರೆ ನನ್ನ ಗತಿಯನ್ನು ಏನು ಹೇಳಲಿ,” ಎಂದು ಹೇಳುವಂತೆ ಅವನನ್ನು ಪ್ರಚೋದಿಸಿತು.—1 ಕೊರಿಂಥ 9:11-16.
9. ಸಲ್ಲಿಸಬೇಕಾಗಿರುವ ಯಾವ ಗಮನಾರ್ಹವಾದ ಸಾಲವು ಸಕಲ ಕ್ರೈಸ್ತರಿಗಿದೆ?
9 ನಾವು ಯೆಹೋವನ ಸಮರ್ಪಿತ ಸೇವಕರಾಗಿರುವುದರಿಂದ, ‘ಸಾರಲೇಬೇಕೆಂಬ ನಿರ್ಬಂಧ ನಮಗಿದೆ.’ ರಾಜ್ಯ ಸಂದೇಶವನ್ನು ಸಾರುವುದು ನಮಗಿರುವ ಆದೇಶವಾಗಿದೆ. ನಮ್ಮನ್ನು ದೇವರಿಗೆ ಸಮರ್ಪಿಸಿಕೊಂಡಾಗ, ನಾವು ಆ ಜವಾಬ್ದಾರಿಯನ್ನು ಅಂಗೀಕರಿಸಿದೆವು. (ಹೋಲಿಸಿ ಲೂಕ 9:23, 24.) ಇನ್ನೂ ಹೆಚ್ಚಾಗಿ, ನಮಗೊಂದು ಸಾಲ ತೀರಿಸಲಿಕ್ಕಿದೆ. ಪೌಲನು ಹೇಳಿದ್ದು: “ಗ್ರೀಕರಿಗೂ ಇತರ ಜನಗಳಿಗೂ ಜ್ಞಾನಿಗಳಿಗೂ ಮೂಢರಿಗೂ ತೀರಿಸಬೇಕಾದ ಒಂದು ಋಣ [“ಸಾಲ,” NW] ನನ್ನ ಮೇಲೆ ಅದೆ. ಹೀಗಿರುವದರಿಂದ ರೋಮಾಪುರದಲ್ಲಿರುವ ನಿಮಗೆ ಸಹ ಸುವಾರ್ತೆಯನ್ನು ಸಾರುವದಕ್ಕೆ ನಾನಂತೂ ಸಿದ್ಧವಾಗಿದ್ದೇನೆ.” (ರೋಮಾಪುರ 1:14, 15) ಜನರು ಸುವಾರ್ತೆಯನ್ನು ಕೇಳಿ ರಕ್ಷಿಸಲ್ಪಡಲಾಗುವಂತೆ ಸಾರುವುದು ತನ್ನ ಕರ್ತವ್ಯವೆಂದು ಪೌಲನು ತಿಳಿದಿದ್ದ ಕಾರಣ ಅವನು ಸಾಲಗಾರನಾಗಿದ್ದನು. (1 ತಿಮೊಥೆಯ 1:12-16; 2:3, 4) ಆದಕಾರಣ, ತನ್ನ ಆಜ್ಞೆಯನ್ನು ನೆರವೇರಿಸಿ, ಜೊತೆ ಮಾನವರ ಕಡೆಗಿದ್ದ ತನ್ನ ಸಾಲವನ್ನು ತೀರಿಸಲು ಅವನು ಪ್ರಯಾಸಪಟ್ಟನು. ಕ್ರೈಸ್ತರೋಪಾದಿ, ನಮಗೂ ಇಂತಹ ಒಂದು ಸಾಲವೊಂದನ್ನು ತೀರಿಸಲಿಕ್ಕಿದೆ. ರಾಜ್ಯ ಸಾರುವಿಕೆಯು, ದೇವರಿಗಾಗಿ, ಆತನ ಪುತ್ರನಿಗಾಗಿ ಮತ್ತು ನಮ್ಮ ನೆರೆಯವರಿಗಾಗಿ ನಮ್ಮ ಪ್ರೀತಿಯನ್ನು ಪ್ರದರ್ಶಿಸುವ ಒಂದು ಪ್ರಧಾನ ವಿಧವೂ ಆಗಿದೆ.—ಲೂಕ 10:25-28.
10. ಯಾವುದನ್ನು ಮಾಡುತ್ತ, ಕೆಲವರು ತಮ್ಮ ಶುಶ್ರೂಷೆಯನ್ನು ವಿಸ್ತರಿಸಿದ್ದಾರೆ?
10 ದೇವರಿಗೆ ಒಂದು ಸ್ವೀಕಾರಯೋಗ್ಯವಾದ ಲೆಕ್ಕವನ್ನು ಸಲ್ಲಿಸಲಿಕ್ಕಿರುವ ಒಂದು ವಿಧವು, ನಮ್ಮ ಶುಶ್ರೂಷೆಯನ್ನು ವಿಸ್ತರಿಸಲು ನಮ್ಮ ಸಾಮರ್ಥ್ಯಗಳನ್ನು ಬಳಸುವುದೇ. ಉದಾಹರಣೆಗೆ: ಇತ್ತೀಚಿನ ವರ್ಷಗಳಲ್ಲಿ ಬ್ರಿಟನಿಗೆ ಅನೇಕ ರಾಷ್ಟ್ರೀಯ ಗುಂಪುಗಳಿಂದ ಜನರು ಪ್ರವಾಹದಂತೆ ಬಂದಿದ್ದಾರೆ. ಇಂತಹ ಜನರಿಗೆ ಸುವಾರ್ತೆಯನ್ನು ತಲಪಿಸಲು, 800ಕ್ಕೂ ಹೆಚ್ಚು ಜನ ಪಯನೀಯರರು (ಪೂರ್ಣ ಸಮಯದ ರಾಜ್ಯ ಘೋಷಕರು) ಮತ್ತು ಇತರ ನೂರಾರು ಸಾಕ್ಷಿಗಳು ವಿಭಿನ್ನ ಭಾಷೆಗಳನ್ನು ಕಲಿಯುತ್ತಿದ್ದಾರೆ. ಇದು ಶುಶ್ರೂಷೆಗೆ ಉತ್ತಮವಾದೊಂದು ಉತ್ತೇಜನದಲ್ಲಿ ಫಲಿಸಿದೆ. ಒಂದು ಚೈನೀಸ್ ಕ್ಲಾಸಿಗೆ ಕಲಿಸುತ್ತಿರುವ ಒಬ್ಬ ಪಯನೀಯರಳು ಹೇಳಿದ್ದು: “ನಾನು ನನ್ನ ಭಾಷೆಯನ್ನು ಇತರ ಸಾಕ್ಷಿಗಳಿಗೆ, ಅವರು ಈ ರೀತಿಯಲ್ಲಿ ಸತ್ಯವನ್ನು ಇತರರೊಂದಿಗೆ ಹಂಚಿಕೊಳ್ಳುವಂತೆ ಕಲಿಸುವೆನೆಂದು ಎಂದಿಗೂ ಎಣಿಸಿರಲಿಲ್ಲ. ಇದು ಎಷ್ಟೋ ತೃಪ್ತಿದಾಯಕವಾಗಿದೆ!” ನಿಮಗೆ ನಿಮ್ಮ ಶುಶ್ರೂಷೆಯನ್ನು ತದ್ರೀತಿಯಲ್ಲಿ ವಿಸ್ತರಿಸುವುದು ಸಾಧ್ಯವೊ?
11. ಒಬ್ಬ ಕ್ರೈಸ್ತೆಯು ಅನೌಪಚಾರಿಕವಾಗಿ ಸಾಕ್ಷಿನೀಡಿದಾಗ ಏನು ಫಲಿಸಿತು?
11 ಮುಳುಗುತ್ತಿರುವ ಒಬ್ಬ ಮನುಷ್ಯನನ್ನು ರಕ್ಷಿಸಲು ನಮ್ಮಲ್ಲಿ ಪ್ರತಿಯೊಬ್ಬನೂ ಸಾಧ್ಯವಿರುವುದನ್ನು ಮಾಡುವುದು ಸಂಭವನೀಯ. ಅದೇ ರೀತಿ, ಯೆಹೋವನ ಸೇವಕರು ಪ್ರತಿ ಸಂದರ್ಭದಲ್ಲಿಯೂ ಸಾಕ್ಷಿ ನೀಡುವುದರಲ್ಲಿ ತಮಗಿರುವ ಸಾಮರ್ಥ್ಯಗಳನ್ನು ಉಪಯೋಗಿಸಲು ಹಾತೊರೆಯುತ್ತಾರೆ. ಸಾಕ್ಷಿಯೊಬ್ಬಳು ಇತ್ತೀಚೆಗೆ ಒಂದು ಬಸ್ಸಿನಲ್ಲಿ ಒಬ್ಬ ಸ್ತ್ರೀಯ ಮಗ್ಗುಲಲ್ಲಿ ಕುಳಿತುಕೊಂಡು ಆಕೆಯೊಂದಿಗೆ ಶಾಸ್ತ್ರದ ಕುರಿತು ಮಾತನಾಡಿದಳು. ಕೇಳಿದ ವಿಷಯಗಳಿಂದಾಗಿ ರೋಮಾಂಚಿತಳಾದ ಆ ಸ್ತ್ರೀಯು, ಅನೇಕ ಪ್ರಶ್ನೆಗಳನ್ನು ಕೇಳಿದಳು. ಆ ಸಾಕ್ಷಿಯು ಬಸ್ಸಿನಿಂದ ಇನ್ನೇನು ಇಳಿಯಲಿಕ್ಕಿರುವಾಗ, ಆ ಸ್ತ್ರೀಯು, ತನಗೆ ಇನ್ನೂ ಅನೇಕ ಪ್ರಶ್ನೆಗಳಿರುವುದರಿಂದ ತನ್ನ ಮನೆಗೆ ಬರುವಂತೆ ಬೇಡಿಕೊಂಡಳು. ಆ ಸಾಕ್ಷಿಯು ಅದಕ್ಕೆ ಒಪ್ಪಿದಳು. ಫಲಿತಾಂಶವೇನು? ಒಂದು ಬೈಬಲ್ ಅಭ್ಯಾಸವು ಆರಂಭಿಸಲ್ಪಟ್ಟಿತು, ಮತ್ತು ಆರು ತಿಂಗಳುಗಳ ತರುವಾಯ ಆ ಸ್ತ್ರೀ ಒಬ್ಬ ಅಸ್ನಾತಳಾದ ರಾಜ್ಯ ಪ್ರಚಾರಕಳಾದಳು. ಬೇಗನೇ ಆಕೆ ತನ್ನದೇ ಆದ ಆರು ಗೃಹ ಬೈಬಲ್ ಅಭ್ಯಾಸಗಳನ್ನು ನಡೆಸುತ್ತಿದ್ದಳು. ಒಬ್ಬನ ಸಾಮರ್ಥ್ಯಗಳನ್ನು ರಾಜ್ಯ ಸೇವೆಯಲ್ಲಿ ಉಪಯೋಗಿಸಿದುದಕ್ಕಾಗಿ ಎಂತಹ ಒಂದು ರೋಮಾಂಚಕ ಪ್ರತಿಫಲ!
12. ಶುಶ್ರೂಷಕರೋಪಾದಿ ನಮಗಿರುವ ಸಾಮರ್ಥ್ಯಗಳನ್ನು ಕ್ಷೇತ್ರ ಸೇವೆಯಲ್ಲಿ ನಾವು ಹೇಗೆ ಸದುಪಯೋಗಕ್ಕೆ ಹಾಕಬಲ್ಲೆವು?
12 ಶುಶ್ರೂಷಕರಾಗಿರುವ ನಮ್ಮ ಸಾಮರ್ಥ್ಯಗಳನ್ನು, 192 ಪುಟಗಳ ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕದಂತಹ ಪ್ರಕಾಶನಗಳನ್ನು ಉಪಯೋಗಿಸುವ ಮೂಲಕ, ಕ್ಷೇತ್ರದಲ್ಲಿ ಕಾರ್ಯಸಾಧಕವಾಗಿ ಬಳಸಸಾಧ್ಯವಿದೆ. ಎಪ್ರಿಲ್ 1996ರೊಳಗೆ, ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ರೈಟಿಂಗ್ ಕಮಿಟಿಯು ಜ್ಞಾನ ಪುಸ್ತಕವನ್ನು 140ಕ್ಕಿಂತಲೂ ಹೆಚ್ಚಿನ ಭಾಷೆಗಳಲ್ಲಿ ಪ್ರಕಾಶಿಸುವರೆ ಸಮ್ಮತಿಯನ್ನು ನೀಡಿತ್ತು, ಮತ್ತು ಅಷ್ಟರೊಳಗೆ ಅದರ 3,05,00,000 ಪ್ರತಿಗಳು ಈಗಾಗಲೇ 111 ಭಾಷೆಗಳಲ್ಲಿ ಮುದ್ರಿಸಲ್ಪಟ್ಟಿದ್ದವು. ಯೆಹೋವನಿಗೆ ಸಮರ್ಪಿಸಿಕೊಂಡು, ದೀಕ್ಷಾಸ್ನಾನ ಮಾಡಿಸಿಕೊಳ್ಳಲಿಕ್ಕಾಗಿ, ದೇವರ ವಾಕ್ಯ ಮತ್ತು ಉದ್ದೇಶಗಳ ಕುರಿತು ಸಾಕಷ್ಟು ಕಲಿಯುವಂತೆ ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯಮಾಡುವ ಉದ್ದೇಶದಿಂದ ಈ ಪುಸ್ತಕವು ಬರೆಯಲ್ಪಟ್ಟಿತ್ತು. ರಾಜ್ಯ ಪ್ರಚಾರಕರು ಒಬ್ಬನೇ ವಿದ್ಯಾರ್ಥಿಯೊಂದಿಗೆ ಅನೇಕ ವರ್ಷಕಾಲ ಒಂದು ಗೃಹ ಬೈಬಲ್ ಅಭ್ಯಾಸವನ್ನು ನಡೆಸುವುದಿಲ್ಲವಾದುದರಿಂದ, ಅವರು ಹೆಚ್ಚು ಜನರೊಂದಿಗೆ ಅಭ್ಯಾಸಗಳನ್ನು ನಡೆಸಬಲ್ಲರು ಅಥವಾ ಮನೆಮನೆಯ ಕೆಲಸದಲ್ಲಿ ಮತ್ತು ಶುಶ್ರೂಷೆಯ ಇತರ ರೂಪಗಳಲ್ಲಿ ತಮ್ಮ ಭಾಗವನ್ನು ಹೆಚ್ಚಿಸಸಾಧ್ಯವಿದೆ. (ಅ. ಕೃತ್ಯಗಳು 5:42; 20:20, 21) ದೇವರ ಕಡೆಗೆ ತಮಗಿರುವ ಉತ್ತರವಾದಿತ್ವದ ಪ್ರಜ್ಞೆಯುಳ್ಳವರಾಗಿ, ಅವರು ದೈವಿಕ ಎಚ್ಚರಿಕೆಗಳಿಗೆ ಗಮನವನ್ನು ನಿರ್ದೇಶಿಸುತ್ತಾರೆ. (ಯೆಹೆಜ್ಕೇಲ 33:7-9) ಆದರೆ ಅವರ ಮುಖ್ಯ ಉದ್ದೇಶವು, ಈ ದುಷ್ಟ ವಿಷಯಗಳ ವ್ಯವಸ್ಥೆಗೆ ಇನ್ನೂ ಉಳಿದಿರುವ ತುಸು ಸಮಯದಲ್ಲಿ ಯೆಹೋವನನ್ನು ಗೌರವಿಸಿ, ಸಾಧ್ಯವಾಗುವಷ್ಟು ಹೆಚ್ಚು ಜನರಿಗೆ ಸುವಾರ್ತೆಯ ಕುರಿತು ಕಲಿಯಲು ಸಹಾಯಮಾಡುವುದೇ ಆಗಿರುತ್ತದೆ.
ಕುಟುಂಬಗಳಾಗಿ ಉತ್ತಮ ಅಭಿಪ್ರಾಯವನ್ನು ಮೂಡಿಸುವುದು
13. ದೇವಭಕ್ತಿಯ ಕುಟುಂಬಗಳಲ್ಲಿ ಒಂದು ಕ್ರಮದ ಕುಟುಂಬ ಬೈಬಲ್ ಅಭ್ಯಾಸವು ಏಕಿರಬೇಕು?
13 ನಿಜ ಕ್ರೈಸ್ತತ್ವವನ್ನು ಅವಲಂಬಿಸುವ ಪ್ರತಿ ವ್ಯಕ್ತಿಯೂ ಕುಟುಂಬವೂ ದೇವರಿಗೆ ಉತ್ತರವಾದಿಗಳಾಗಿರುವ ಕಾರಣ, ಅವರು “ಪೂರ್ಣವಾದ ತಿಳುವಳಿಕೆಗೆ ಸಾಗುತ್ತಾ” ಹೋಗಿ, “ನಂಬಿಕೆಯಲ್ಲಿ ದೃಢ”ವಾಗಿ ಪರಿಣಮಿಸಬೇಕು. (ಇಬ್ರಿಯ 6:1-3; 1 ಪೇತ್ರ 5:8, 9) ದೃಷ್ಟಾಂತಕ್ಕಾಗಿ, ಜ್ಞಾನ ಪುಸ್ತಕವನ್ನು ಅಭ್ಯಸಿಸಿ, ದೀಕ್ಷಾಸ್ನಾನ ಹೊಂದಿರುವವರು, ಕೂಟಗಳಿಗೆ ಕ್ರಮವಾಗಿ ಉಪಸ್ಥಿತರಾಗುವ ಮೂಲಕ ಹಾಗೂ ಬೈಬಲನ್ನು ಮತ್ತು ಇತರ ಕ್ರೈಸ್ತ ಪ್ರಕಾಶನಗಳನ್ನು ಓದುವ ಮೂಲಕ ತಮ್ಮ ಶಾಸ್ತ್ರೀಯ ಜ್ಞಾನವನ್ನು ಸಂಪೂರ್ಣಗೊಳಿಸುವುದು ಅಗತ್ಯ. ದೇವಭಕ್ತಿಯ ಕುಟುಂಬಗಳಲ್ಲಿ ಕ್ರಮವಾದ ಕುಟುಂಬ ಅಧ್ಯಯನವೂ ಇರಬೇಕು, ಏಕೆಂದರೆ, ‘ಎಚ್ಚರವಾಗಿರುವ, ಕ್ರಿಸ್ತನಂಬಿಕೆಯಲ್ಲಿ ದೃಢವಾಗಿ ನಿಲ್ಲುವ, ಶೂರರಾಗಿರುವ, ಬಲಗೊಳ್ಳುವ’ ಒಂದು ಪ್ರಮುಖ ಮಾರ್ಗವು ಅದಾಗಿದೆ. (1 ಕೊರಿಂಥ 16:13) ನೀವು ಒಂದು ಮನೆತನದ ತಲೆಯಾಗಿರುವಲ್ಲಿ, ನಿಮ್ಮ ಕುಟುಂಬವು ಆತ್ಮಿಕವಾಗಿ ಪುಷ್ಕಳವಾಗಿ ಉಣಿಸಲ್ಪಡುವಂತೆ ಖಾತರಿ ಮಾಡಿಕೊಳ್ಳುವರೆ, ನೀವು ದೇವರಿಗೆ ವಿಶೇಷವಾಗಿ ಉತ್ತರವಾದಿಗಳಾಗಿದ್ದೀರಿ. ಪೋಷಕವಾದ ಭೌತಿಕ ಆಹಾರವು ಪ್ರಾಕೃತಿಕ ಆರೋಗ್ಯಕ್ಕೆ ಸಹಾಯಮಾಡುವಂತೆಯೇ, ನೀವೂ ನಿಮ್ಮ ಕುಟುಂಬವೂ “ನಂಬಿಕೆಯಲ್ಲಿ ಸ್ವಸ್ಥಚಿತ್ತರಾ [“ಆರೋಗ್ಯವಂತರು,” NW]”ಗಿರಲು ಸಮೃದ್ಧವಾದ ಮತ್ತು ನಿಯತ ಕ್ರಮದ ಆತ್ಮಿಕ ಆಹಾರವು ಆವಶ್ಯಕ.—ತೀತ 1:13.
14. ಒಬ್ಬ ಸುಶಿಕ್ಷಿತ ಇಸ್ರಾಯೇಲ್ಯ ಹುಡುಗಿಯು ಕೊಟ್ಟ ಸಾಕ್ಷಿಯಿಂದ ಏನು ಫಲಿಸಿತು?
14 ನಿಮ್ಮ ಮನೆವಾರ್ತೆಯಲ್ಲಿ ಮಕ್ಕಳಿರುವುದಾದರೆ, ಅವರಿಗೆ ಸ್ವಸ್ಥವಾದ ಆತ್ಮಿಕ ಶಿಕ್ಷಣವನ್ನು ಕೊಡುತ್ತಿರುವುದಕ್ಕಾಗಿ, ದೇವರು ನಿಮ್ಮ ಲೆಕ್ಕಕ್ಕೆ ಒಳಿತನ್ನು ಜಮಾಮಾಡುವನು. ಅಂತಹ ಬೋಧನೆಯು, ದೇವರ ಪ್ರವಾದಿಯಾದ ಎಲೀಷನ ದಿನಗಳಲ್ಲಿ ಸಿರಿಯದವರಿಂದ ಸೆರೆಹಿಡಿಯಲ್ಪಟ್ಟಿದ್ದ ಒಬ್ಬ ಚಿಕ್ಕ ಇಸ್ರಾಯೇಲ್ಯ ಹುಡುಗಿಗೆ ತಂದಂತೆ, ಅವರಿಗೂ ಪ್ರಯೋಜನ ತರುವುದು. ಅವಳು ಸಿರಿಯದ ಕುಷ್ಠರೋಗಿಯಾಗಿದ್ದ ಸೇನಾಪತಿ ನಾಮಾನನ ಪತ್ನಿಯ ದಾಸಿಯಾದಳು. ಹುಡುಗಿ ಚಿಕ್ಕವಳಾಗಿದ್ದರೂ, ಅವಳು ತನ್ನ ಯಜಮಾನಿಗೆ, “ನಮ್ಮ ದಣಿಯು ಸಮಾರ್ಯದಲ್ಲಿರುವ ಪ್ರವಾದಿಯ ಹತ್ತಿರ ಇರುತ್ತಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು. ಅವನು ಇವನನ್ನು ಕುಷ್ಠರೋಗದಿಂದ ವಾಸಿಮಾಡುತ್ತಿದ್ದನು,” ಎಂದು ಹೇಳಿದಳು. ಆಕೆಯ ಸಾಕ್ಷಿಯ ಕಾರಣ, ನಾಮಾನನು ಇಸ್ರಾಯೇಲಿಗೆ ಹೋಗಿ, ಕೊನೆಗೆ ಯೊರ್ದನ್ ನದಿಯಲ್ಲಿ ಏಳು ಬಾರಿ ಸ್ನಾನಮಾಡಬೇಕೆಂಬ ಎಲೀಷನ ನಿರ್ದೇಶನವನ್ನು ಅನುಸರಿಸಿ, ಕುಷ್ಠರೋಗವಿಮುಕ್ತನಾದನು. ಅದಲ್ಲದೆ, ನಾಮಾನನು ಯೆಹೋವನ ಒಬ್ಬ ಆರಾಧಕನಾದನು. ಅದು ಆ ಚಿಕ್ಕ ಹುಡುಗಿಯನ್ನು ಎಷ್ಟು ರೋಮಾಂಚಗೊಳಿಸಿದ್ದಿರಬೇಕು!—2 ಅರಸುಗಳು 5:1-3, 13-19.
15. ಹೆತ್ತವರು ತಮ್ಮ ಮಕ್ಕಳಿಗೆ ಉತ್ತಮ ಆತ್ಮಿಕ ತರಬೇತನ್ನು ಕೊಡುವುದು ಏಕೆ ಪ್ರಾಮುಖ್ಯ? ಉದಾಹರಿಸಿರಿ.
15 ಸೈತಾನನ ಶಕ್ತಿಯಡಿ ಇರುವ ಈ ನೀತಿಹೀನ ಲೋಕದಲ್ಲಿ ದೇವಭಯವುಳ್ಳ ಮಕ್ಕಳನ್ನು ಬೆಳೆಸುವುದು ಸುಲಭವಲ್ಲ. (1 ಯೋಹಾನ 5:19) ಆದರೂ, ತಿಮೊಥೆಯನ ಶೈಶವದಿಂದ, ಅವನ ಅಜ್ಜಿ ಲೋವಿ ಮತ್ತು ಅವನ ತಾಯಿ ಯೂನೀಕೆ, ಅವನಿಗೆ ಶಾಸ್ತ್ರಗಳನ್ನು ಯಶಸ್ವಿಯಾಗಿ ಕಲಿಸಿದರು. (2 ತಿಮೊಥೆಯ 1:5; 3:14, 15) ನಿಮ್ಮ ಮಕ್ಕಳೊಂದಿಗೆ ಬೈಬಲನ್ನು ಅಭ್ಯಾಸಮಾಡಿ, ಕ್ರೈಸ್ತ ಕೂಟಗಳಿಗೆ ಅವರನ್ನು ಕ್ರಮವಾಗಿ ಒಯ್ಯತ್ತ, ಮತ್ತು ಕೊನೆಯದಾಗಿ ಅವರು ನಿಮ್ಮನ್ನು ಶುಶ್ರೂಷೆಯಲ್ಲಿ ಜೊತೆಗೂಡುವಂತೆ ಮಾಡುವುದು—ಇವೆಲ್ಲ ನೀವು ದೇವರಿಗೆ ಲೆಕ್ಕ ಒಪ್ಪಿಸಲೇಬೇಕಾದ ತರಬೇತಿನ ನಮೂನೆಯ ಭಾಗವಾಗಿದೆ. ವೇಲ್ಸ್ನಲ್ಲಿ ಈಗ ತನ್ನ ನಡು 80ಗಳಲ್ಲಿರುವ ಒಬ್ಬ ಕ್ರೈಸ್ತಳು, 1920ಗಳ ಆರಂಭದಲ್ಲಿ ತನ್ನ ತಂದೆ, ಮುಂದಿನ ಕಣಿವೆಯ ಹಳ್ಳಿಗರಿಗೆ ಬೈಬಲ್ ಕಿರುಹೊತ್ತಗೆಗಳನ್ನು ಹಂಚಲು ಒಂದು ಬೆಟ್ಟದ ಮೇಲಿಂದ ಹತ್ತು ಕಿಲೊಮೀಟರ್ಗಳಷ್ಟು (ಹೋಗಿ ಬರಲು 20 ಕಿಲೊಮೀಟರ್ಗಳು) ನಡೆದುಕೊಂಡು ಹೋದಾಗ, ತನ್ನನ್ನು ಜೊತೆಯಲ್ಲಿ ಕರೆದುಕೊಂಡುಹೋದುದನ್ನು ಜ್ಞಾಪಿಸಿಕೊಳ್ಳುತ್ತಾಳೆ. “ನನ್ನ ತಂದೆ ನನ್ನ ಹೃದಯದಲ್ಲಿ ಸತ್ಯವನ್ನು ತುಂಬಿದ್ದು ಆ ನಡಿಗೆಗಳ ಸಮಯದಲ್ಲಿಯೇ,” ಎನ್ನುತ್ತಾಳೆ ಆಕೆ ಕೃತಜ್ಞತೆಯಿಂದ.
ಹಿರಿಯರು ಲೆಕ್ಕ ಒಪ್ಪಿಸುತ್ತಾರೆ—ಹೇಗೆ?
16, 17. (ಎ) ಪುರಾತನ ಇಸ್ರಾಯೇಲಿನಲ್ಲಿ ಆತ್ಮಿಕವಾಗಿ ಪಕ್ವರಾಗಿದ್ದ ಹಿರೀ ಪುರುಷರಿಂದ ಯಾವ ಸುಯೋಗಗಳು ಅನುಭವಿಸಲ್ಪಟ್ಟವು? (ಬಿ) ಪುರಾತನ ಇಸ್ರಾಯೇಲಿನ ಪರಿಸ್ಥಿತಿಗೆ ಹೋಲಿಕೆಯಲ್ಲಿ, ಇಂದು ಕ್ರೈಸ್ತ ಹಿರಿಯರಿಂದ ಹೆಚ್ಚಿನದ್ದನ್ನು ಏಕೆ ಅಪೇಕ್ಷಿಸಲಾಗುತ್ತದೆ?
16 “ತಲೆ ನರೆತವು, ಧರ್ಮಮಾರ್ಗದಲ್ಲಿ ಕಂಡುಕೊಳ್ಳಲ್ಪಡುವಾಗ, ಒಂದು ಸುಂದರವಾದ ಕಿರೀಟವಾಗಿದೆ,” ಎಂದನು ವಿವೇಕಿಯಾದ ಸೊಲೊಮೋನನು. (ಜ್ಞಾನೋಕ್ತಿ 16:31, NW) ಆದರೆ ದೇವರ ಜನರ ಸಭೆಯಲ್ಲಿ ಒಬ್ಬ ಪುರುಷನನ್ನು ಜವಾಬ್ದಾರಿಗೆ ಸನ್ನದ್ಧನಾಗಿಸುವುದು ಬರಿಯ ಶಾರೀರಿಕ ವಯಸ್ಸಲ್ಲ. ಪುರಾತನ ಇಸ್ರಾಯೇಲಿನಲ್ಲಿ, ಆತ್ಮಿಕವಾಗಿ ಪಕ್ವತೆಯಿದ್ದ ಹಿರೀ ಪುರುಷರು, ನ್ಯಾಯಾಡಳಿತ ಮತ್ತು ಶಾಂತಿ, ಸುವ್ಯವಸ್ಥೆ ಮತ್ತು ಆತ್ಮಿಕಾರೋಗ್ಯದ ಕಾಪಾಡುವಿಕೆಗಾಗಿ ನ್ಯಾಯಾಧೀಶರಾಗಿ ಮತ್ತು ಅಧಿಕಾರಿಗಳಾಗಿ ಸೇವೆಮಾಡಿದರು. (ಧರ್ಮೋಪದೇಶಕಾಂಡ 16:18-20) ಕ್ರೈಸ್ತ ಸಭೆಯ ವಿಷಯದಲ್ಲಿಯೂ ಇದು ಸತ್ಯವಾಗಿದೆಯಾದರೂ, ಈ ವಿಷಯಗಳ ವ್ಯವಸ್ಥೆಯ ಅಂತ್ಯವು ಸಮೀಪಿಸುತ್ತಿರುವಾಗ ಹಿರಿಯರಿಂದ ಹೆಚ್ಚಿನದ್ದನ್ನು ಅಪೇಕ್ಷಿಸಲಾಗುತ್ತದೆ. ಏಕೆ?
17 ಇಸ್ರಾಯೇಲ್ಯರು, ದೇವರು ಪುರಾತನ ಐಗುಪ್ತದಿಂದ ವಿಮೋಚಿಸಿದ, ‘ಆದುಕೊಂಡ ಜನರು’ ಆಗಿದ್ದರು. ತಮ್ಮ ಮಧ್ಯಸ್ಥಗಾರನಾದ ಮೋಶೆಯ ಮುಖಾಂತರ ಅವರು ಧರ್ಮಶಾಸ್ತ್ರವನ್ನು ಪಡೆದುಕೊಂಡದ್ದರಿಂದ, ಅವರ ವಂಶಸ್ಥರು ಒಂದು ಸಮರ್ಪಿತ ಜನಾಂಗದೊಳಕ್ಕೆ ಹುಟ್ಟಿದ್ದು, ಯೆಹೋವನ ಕಟ್ಟಳೆಗಳೊಂದಿಗೆ ಪರಿಚಿತರಾಗಿದ್ದರು. (ಧರ್ಮೋಪದೇಶಕಾಂಡ 7:6, 11) ಆದರೂ, ಇಂದು ಅಂತಹ ಒಂದು ಸಮರ್ಪಿತ ಜನಾಂಗದೊಳಕ್ಕೆ ಯಾರೂ ಹುಟ್ಟಿಬರುವುದಿಲ್ಲ, ಮತ್ತು ತುಲನಾತ್ಮಕವಾಗಿ ಕೆಲವರೇ, ಶಾಸ್ತ್ರೀಯ ಸತ್ಯದೊಂದಿಗೆ ಪರಿಚಿತರಾದ ದೇವಭಕ್ತಿಯ ಕುಟುಂಬಗಳಲ್ಲಿ ಬೆಳೆದುಬರುತ್ತಾರೆ. ವಿಶೇಷವಾಗಿ, “ಸತ್ಯವನ್ನನುಸರಿಸಿ ನಡೆ”ಯಲು ಇತ್ತೀಚೆಗೆ ಪ್ರಾರಂಭಿಸಿದವರಿಗೆ ಶಾಸ್ತ್ರೀಯ ಮೂಲತತ್ವಗಳಿಗನುಸಾರ ಹೇಗೆ ಜೀವಿಸಬೇಕೆಂಬ ಕುರಿತು ಶಿಕ್ಷಣ ಬೇಕಾಗಬಹುದು. (3 ಯೋಹಾನ 4) ನಂಬಿಗಸ್ತ ಹಿರಿಯರು, ‘ಸ್ವಸ್ಥಬೋಧನಾವಾಕ್ಯಗಳ ಮಾದರಿಯನ್ನು’ ಹಿಡಿದುಕೊಂಡು ಯೆಹೋವನ ಜನರಿಗೆ ನೆರವಾಗುವಾಗ, ಅವರು ಎಷ್ಟು ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಗಿದೆ!—2 ತಿಮೊಥೆಯ 1:13, 14.
18. ಸಭಾ ಹಿರಿಯರು ಯಾವ ವಿಧದ ನೆರವನ್ನು ಕೊಡಲು ಸಿದ್ಧರಾಗಿರಬೇಕು, ಮತ್ತು ಏಕೆ?
18 ನಡೆಯಲು ಕಲಿಯುತ್ತಿರುವ ಒಂದು ಚಿಕ್ಕ ಮಗು ಕಾಲುತಪ್ಪಿ, ಬೀಳಬಹುದು. ಅವನಿಗೆ ಅಭದ್ರತೆಯ ಅನಿಸಿಕೆಯಾಗುವುದರಿಂದ, ಹೆತ್ತವರ ಸಹಾಯ ಮತ್ತು ಪುನರಾಶ್ವಾಸನೆ ಅಗತ್ಯ. ಯೆಹೋವನಿಗೆ ಸಮರ್ಪಿತನಾಗಿರುವ ಒಬ್ಬ ವ್ಯಕ್ತಿಯೂ ಹಾಗೆಯೇ ಆತ್ಮಿಕವಾಗಿ ಕಾಲುತಪ್ಪಿ, ಬೀಳಸಾಧ್ಯವಿದೆ. ದೇವರ ದೃಷ್ಟಿಯಲ್ಲಿ ಸರಿಯಾಗಿದ್ದ ಅಥವಾ ಒಳ್ಳೆಯದಾಗಿದ್ದ ವಿಷಯಗಳನ್ನು ಮಾಡಲು ಹೋರಾಡುವ ಅಗತ್ಯವು ಅಪೊಸ್ತಲ ಪೌಲನಿಗೂ ಇತ್ತು. (ರೋಮಾಪುರ 7:21-25) ತಪ್ಪುಮಾಡಿದ್ದರೂ ನಿಜವಾಗಿಯೂ ಪಶ್ಚಾತ್ತಾಪಪಡುತ್ತಿರುವ ಕ್ರೈಸ್ತರಿಗೆ ದೇವರ ಹಿಂಡಿನ ಕುರುಬರು ಪ್ರೀತಿಯ ನೆರವನ್ನು ಕೊಡುವುದು ಅಗತ್ಯ. ಗುರುತರವಾದ ತಪ್ಪನ್ನು ಮಾಡಿದ್ದ ಒಬ್ಬ ಸಮರ್ಪಿತ ಸ್ತ್ರೀಯನ್ನು ಹಿರಿಯರು ಸಂದರ್ಶಿಸಿದಾಗ, ಆಕೆ ತನ್ನ ಸಮರ್ಪಿತ ಪತಿಯ ಎದುರಿನಲ್ಲಿ ಹೇಳಿದ್ದು: “ನೀವು ನನ್ನನ್ನು ಬಹಿಷ್ಕರಿಸುವಿರಿ ಎಂದು ನನಗೆ ಗೊತ್ತು!” ಆದರೆ, ಕುಟುಂಬವನ್ನು ಆತ್ಮಿಕವಾಗಿ ಪುನಸ್ಸ್ಥಾಪಿಸಲು ಯಾವ ಸಹಾಯದ ಅಗತ್ಯವಿದೆಯೆಂದು ಹಿರಿಯರು ತಿಳಿಯಬಯಸುತ್ತಾರೆಂದು ಆಕೆಗೆ ಹೇಳಲ್ಪಟ್ಟಾಗ, ಆಕೆ ಕಣ್ಣೀರು ಸುರಿಸಿದಳು. ತಮಗೆ ಲೆಕ್ಕ ಒಪ್ಪಿಸಲಿಕ್ಕಿದೆ ಎಂಬ ಪ್ರಜ್ಞೆಯುಳ್ಳವರಾಗಿದ್ದ ಹಿರಿಯರು, ಪಶ್ಚಾತ್ತಾಪಪಟ್ಟಿದ್ದ ಒಬ್ಬ ಜೊತೆ ವಿಶ್ವಾಸಿಗೆ ಸಹಾಯನೀಡಲು ಸಂತೋಷಪಟ್ಟರು.—ಇಬ್ರಿಯ 13:17.
ಉತ್ತಮ ಅಭಿಪ್ರಾಯವನ್ನು ಮೂಡಿಸುತ್ತ ಹೋಗಿರಿ
19. ನಾವು ನಮ್ಮ ವಿಷಯದಲ್ಲಿ ದೇವರಿಗೆ ಉತ್ತಮ ಅಭಿಪ್ರಾಯವನ್ನು ಕೊಡುತ್ತ ಹೇಗೆ ಮುಂದುವರಿಯಸಾಧ್ಯವಿದೆ?
19 ಸಭಾ ಹಿರಿಯರೂ ದೇವರ ಇತರ ಎಲ್ಲ ಸೇವಕರೂ ಯೆಹೋವನಿಗೆ ತಮ್ಮ ವಿಷಯದಲ್ಲಿ ಉತ್ತಮ ಅಭಿಪ್ರಾಯವನ್ನು ಕೊಡುತ್ತ ಹೋಗುವುದು ಆವಶ್ಯಕ. ನಾವು ದೇವರ ವಾಕ್ಯಕ್ಕೆ ಅಂಟಿಕೊಂಡು, ಆತನ ಚಿತ್ತವನ್ನು ಮಾಡುವಲ್ಲಿ ಇದು ಸಾಧ್ಯ. (ಜ್ಞಾನೋಕ್ತಿ 3:5, 6; ರೋಮಾಪುರ 12:1, 2, 9) ವಿಶ್ವಾಸದಲ್ಲಿ ನಮಗೆ ಸಂಬಂಧಿಕರಾಗಿರುವವರಿಗೆ ನಾವು ವಿಶೇಷವಾಗಿ ಒಳ್ಳೆಯದನ್ನು ಮಾಡಬಯಸುತ್ತೇವೆ. (ಗಲಾತ್ಯ 6:10) ಆದರೂ, ಬೆಳೆಯು ಇನ್ನೂ ಬಹಳವಾಗಿದೆ, ಮತ್ತು ಕೆಲಸಗಾರರು ಕೊಂಚವಾಗಿಯೇ ಉಳಿದಿದ್ದಾರೆ. (ಮತ್ತಾಯ 9:37, 38) ಆದಕಾರಣ, ರಾಜ್ಯ ಸಂದೇಶವನ್ನು ಶ್ರದ್ಧೆಯಿಂದ ಘೋಷಿಸುವ ಮೂಲಕ ನಾವು ಇತರರಿಗೆ ಒಳ್ಳೆಯದನ್ನು ಮಾಡೋಣ. ನಾವು ನಮ್ಮ ಸಮರ್ಪಣೆಯನ್ನು ನೆರವೇರಿಸಿ, ಆತನ ಚಿತ್ತವನ್ನು ಮಾಡಿ, ನಂಬಿಗಸ್ತಿಕೆಯಿಂದ ಸುವಾರ್ತೆಯನ್ನು ಘೋಷಿಸುವಲ್ಲಿ, ಯೆಹೋವನು ನಮ್ಮ ಲೆಕ್ಕಕ್ಕೆ ಒಳಿತನ್ನು ಜಮಾಮಾಡುವನು.
20. ನೆಹೆಮೀಯನ ವರ್ತನಾರೀತಿಯನ್ನು ಪರಿಗಣಿಸುವುದರಿಂದ ನಾವೇನನ್ನು ಕಲಿಯುತ್ತೇವೆ?
20 ಆದಕಾರಣ, ಕರ್ತನ ಕೆಲಸದಲ್ಲಿ ಮಾಡಲು ಬಹಳಷ್ಟು ಇದ್ದವರಾಗಿ ನಾವು ಮುಂದುವರಿಯೋಣ. (1 ಕೊರಿಂಥ 15:58) ಮತ್ತು ಯೆರೂಸಲೇಮಿನ ಗೋಡೆಗಳನ್ನು ಪುನಃ ಕಟ್ಟಿ, ದೇವರ ಧರ್ಮಶಾಸ್ತ್ರವನ್ನು ಜಾರಿಗೆ ತಂದು, ಸತ್ಯಾರಾಧನೆಯನ್ನು ಹುರುಪಿನಿಂದ ಪ್ರವರ್ಧಿಸಿದ ನೆಹೆಮೀಯನನ್ನು ನಾವು ಪರಿಗಣಿಸುವುದು ಉತ್ತಮ. ತಾನು ಮಾಡಿದ್ದ ಹಿತಕ್ಕಾಗಿ ಯೆಹೋವ ದೇವರು ತನ್ನನ್ನು ಜ್ಞಾಪಿಸಿಕೊಳ್ಳಬೇಕೆಂದು ಅವನು ಪ್ರಾರ್ಥಿಸಿದನು. ನೀವೂ ಯೆಹೋವನಿಗೆ ಅಷ್ಟೇ ಧರ್ಮನಿಷ್ಠೆಯವರಾಗಿರುವಂತಾಗಲಿ, ಮತ್ತು ಆತನು ನಿಮ್ಮ ಲೆಕ್ಕಕ್ಕೆ ಒಳಿತನ್ನು ಜಮಾಮಾಡುವಂತಾಗಲಿ.
ನಿಮ್ಮ ಉತ್ತರಗಳೇನು?
▫ ನೆಹೆಮೀಯನಿಂದ ಯಾವ ಮಾದರಿಯು ಇಡಲ್ಪಟ್ಟಿತು?
▫ ಜ್ಞಾನವು ನಮ್ಮನ್ನು ದೇವರಿಗೆ ಉತ್ತರವಾದಿಗಳನ್ನಾಗಿ ಏಕೆ ಮಾಡುತ್ತದೆ?
▫ ನಮ್ಮ ಶುಶ್ರೂಷೆಯಲ್ಲಿ ನಾವು ಯೆಹೋವನಿಗೆ ಸ್ವೀಕಾರಯೋಗ್ಯವಾದ ಲೆಕ್ಕವನ್ನು ಹೇಗೆ ಒಪ್ಪಿಸಬಲ್ಲೆವು?
▫ ದೇವರಿಗೆ ಉತ್ತಮ ಲೆಕ್ಕವನ್ನು ಒಪ್ಪಿಸಲು ಕುಟುಂಬಗಳು ಏನು ಮಾಡಬಲ್ಲವು?
▫ ಕ್ರೈಸ್ತ ಹಿರಿಯರು ಲೆಕ್ಕವನ್ನು ಹೇಗೆ ಒಪ್ಪಿಸುತ್ತಾರೆ?
[ಪುಟ 18 ರಲ್ಲಿರುವ ಚಿತ್ರಗಳು]
ಪೌಲನಂತೆ, ನಾವು ರಾಜ್ಯ ಘೋಷಕರಾಗಿ ದೇವರಿಗೆ ಉತ್ತಮ ಲೆಕ್ಕವನ್ನು ಒಪ್ಪಿಸಬಲ್ಲೆವು
[ಪುಟ 19 ರಲ್ಲಿರುವ ಚಿತ್ರ]
ನಾಮಾನನ ಮನೆಯಲ್ಲಿದ್ದ ಚಿಕ್ಕ ಇಸ್ರಾಯೇಲ್ಯ ಹುಡುಗಿಯಂತೆ, ನಿಮ್ಮ ಮಕ್ಕಳು ನಂಬಿಕೆಯಲ್ಲಿ ಬಲವಾಗಿದ್ದಾರೊ?