ರಾಜ್ಯ ಘೋಷಕರು ವರದಿ ಮಾಡುತ್ತಾರೆ
ಬೈಬಲ್ ಸತ್ಯಗಳು ಐರ್ಲೆಂಡ್ನಲ್ಲಿ ಸಾರಲ್ಪಡುತ್ತಾ ಮುಂದುವರಿಯುತ್ತವೆ
ಇತ್ತೀಚಿನ ವರ್ಷಗಳಲ್ಲಿ ಚಿತ್ರಮಯ ದೇಶವಾದ ಐರ್ಲೆಂಡ್, ಗಮನಾರ್ಹವಾದ ಗಲಭೆಗೆ ರಂಗಭೂಮಿಯಾಗಿದೆ. ಅದೇ ಸಮಯದಲ್ಲಿ, ಐರಿಷ್ ಜನರು ತಮಗಾಗಿ ಯೆಹೋವನ ಸಾಕ್ಷಿಗಳಿಂದ ತರಲ್ಪಟ್ಟ ಬೈಬಲಿನ ನಿರೀಕ್ಷೆಯ ಸಂದೇಶಕ್ಕೆ ಅನುಕೂಲಕರವಾಗಿ ಪ್ರತಿಕ್ರಿಯಿಸಿದ್ದಾರೆ. ಐರ್ಲೆಂಡಿನಿಂದ ಬಂದ ಈ ಮುಂದಿನ ಅನುಭವಗಳು ಇದನ್ನು ದೃಢಪಡಿಸುತ್ತವೆ.
◼ ಡಬ್ಲಿನ್ನಲ್ಲಿ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬನು ಹಾಗೂ ಅವನ ಚಿಕ್ಕ ಮಗಳು, ಮನೆಯಿಂದ ಮನೆಯ ಸಾರುವಿಕೆಯ ಕೆಲಸದಲ್ಲಿ ಪಾಲ್ಗೊಂಡಿದ್ದರು. ಅವರು ಕ್ಯಾಥಿ ಎಂಬ ಹೆಸರಿನ ಸ್ತ್ರೀಯೊಬ್ಬಳನ್ನು ಭೇಟಿಯಾದರು; ಅವಳು ತನ್ನ ಅನೇಕ ಮಕ್ಕಳೊಂದಿಗೆ ಬಹಳ ಕಾರ್ಯಮಗ್ನಳಾಗಿದ್ದಳು. ಹೇಗೆ ಸಾರುವುದೆಂಬುದನ್ನು ಕಲಿಯುತ್ತಿದ್ದ ತನ್ನ ಮಗಳು, ಅವಳೊಂದಿಗೆ ಒಂದು ಸಂಕ್ಷಿಪ್ತವಾದ ಸಂದೇಶವನ್ನು ಹಂಚಿಕೊಳ್ಳಬಹುದೋ ಎಂಬುದಾಗಿ ಆ ಸಾಕ್ಷಿಯು ಅವಳನ್ನು ಕೇಳಿದನು. ಕ್ಯಾಥಿ ಒಪ್ಪಿದಳು, ಮತ್ತು ಈ ಚಿಕ್ಕ ಹುಡುಗಿಯು ಒಂದು ಸ್ಪಷ್ಟವಾದ, ಸುಪರ್ಯಾಲೋಚಿತ ಪ್ರಸಂಗವನ್ನು ಕೊಟ್ಟಳು. ಈ ಎಳೆಯ ಹುಡುಗಿಯ ಸ್ಪಷ್ಟವಾದ ಯಥಾರ್ಥತೆ ಹಾಗೂ ಗೌರವಪೂರ್ಣತೆಯಿಂದ ಕ್ಯಾಥಿ ಪ್ರಭಾವಿತಳಾದಳು, ಮತ್ತು ಒಂದು ಬೈಬಲ್ ಕಿರುಹೊತ್ತಗೆಯ ನೀಡುವಿಕೆಯನ್ನು ಅವಳು ಸ್ವೀಕರಿಸಿದಳು.
ತದನಂತರ ಕ್ಯಾಥಿ, ತನ್ನ ಎಳೆಯ ಸಂದರ್ಶಕಿಯ ಒಳ್ಳೆಯ ತಯಾರಿ ಹಾಗೂ ಶಿಷ್ಟಾಚಾರಗಳ ಕುರಿತು ಆಲೋಚಿಸಿದಳು. “ಸ್ವತಃ ತನ್ನ ಕಡೆಗೆ ಗಮನವನ್ನು ಆಕರ್ಷಿಸದೆ, ಒಬ್ಬ ಚಿಕ್ಕ ಹುಡುಗಿಯು ಅಂತಹ ಒಂದು ಆಸಕ್ತಿಭರಿತ ಸಂದೇಶವನ್ನು ಹಂಚಿಕೊಳ್ಳಶಕ್ತಳಾಗಿದ್ದ ಸಂಗತಿಯಿಂದ ನಾನು ಪ್ರಭಾವಿತಳಾದೆ” ಎಂದು ಅವಳು ಹೇಳಿದಳು. “ಮುಂದಿನ ಬಾರಿ ಯೆಹೋವನ ಸಾಕ್ಷಿಗಳು ಭೇಟಿಮಾಡುವಾಗ, ನಾನು ಅವರಿಗೆ ಕಿವಿಗೊಡುವೆನೆಂದು ನಿರ್ಣಯಿಸಿದೆ.”
ಈ ಮಧ್ಯೆ ಕ್ಯಾಥಿ, ನೈರುತ್ಯ ಐರ್ಲೆಂಡ್—ಕಾರ್ಕ್ ಮತ್ತು ಕೆರಿ ಪ್ರಾಂತಗಳ ಗಡಿಗಳ ಸಮೀಪದಲ್ಲಿ—ನಲ್ಲಿರುವ ಒಂದು ಚಿಕ್ಕ ಪಟ್ಟಣಕ್ಕೆ ಸ್ಥಳಾಂತರಿಸಿದಳು. ಸ್ವಲ್ಪ ಸಮಯಾನಂತರ, ಯೆಹೋವನ ಸಾಕ್ಷಿಗಳು ಅವಳ ಮನೆಯನ್ನು ಸಂದರ್ಶಿಸಿದರು, ಮತ್ತು ಅವಳು ಅವರನ್ನು ಒಳಗೆ ಆಮಂತ್ರಿಸಿದಳು. ಬೈಬಲಿನ ಒಂದು ಕ್ರಮವಾದ ಅಭ್ಯಾಸವನ್ನು ಅವಳು ಸ್ವೀಕರಿಸಿದಳು ಮತ್ತು ಈಗ ತನ್ನ ಮಕ್ಕಳಲ್ಲಿ ಅನೇಕರೊಂದಿಗೆ ಸಭಾ ಕೂಟಗಳಿಗೆ ಹಾಜರಾಗುತ್ತಾಳೆ. ತನ್ನೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳಲಿಕ್ಕಾಗಿದ್ದ ಆ ಚಿಕ್ಕ ಹುಡುಗಿಯ ಪ್ರಾಮಾಣಿಕ ಅಪೇಕ್ಷೆಗಾಗಿ ಕ್ಯಾಥಿ ಕೃತಜ್ಞಳಾಗಿದ್ದಾಳೆ.
◼ ಟಲಮೋಅರ್ ಕ್ಷೇತ್ರದಲ್ಲಿ, ಏಳು ವರ್ಷಗಳ ಕಾಲಾವಧಿಯಿಂದ ಸಾಕ್ಷಿಗಳು ಜೀನ್ ಎಂಬ ಹೆಸರಿನ ಸ್ತ್ರೀಯೊಬ್ಬಳೊಂದಿಗೆ ಬೈಬಲ್ ಚರ್ಚೆಗಳನ್ನು ನಡೆಸುತ್ತಿದ್ದರು. ಕೆಲವೊಮ್ಮೆ ಅವಳು ಆಸಕ್ತಿಯನ್ನು ತೋರಿಸಿ, ಸಾಹಿತ್ಯವನ್ನು ಅಂಗೀಕರಿಸಿದಳು, ಆದರೆ ಇತರ ಸಮಯಗಳಲ್ಲಿ ಅವಳ ಆಸಕ್ತಿಯು ಕ್ಷೀಣವಾಯಿತು. ಒಂದು ದಿನ, ಫ್ರಾನ್ಸೆಸ್ ಎಂಬ ಹೆಸರಿನ ಒಬ್ಬ ಸಾಕ್ಷಿಯೂ ಅವಳ ಜೊತೆಗಾರ್ತಿಯೂ ಜೀನ್ಳನ್ನು ಸಂದರ್ಶಿಸಿದಾಗ, ಅವಳು ತುಂಬಾ ಸಿಡುಕಿನ ಮನಃಸ್ಥಿತಿಯಲ್ಲಿರುವುದನ್ನು ಅವರು ಕಂಡುಕೊಂಡರು. “ನಾವು ಏನೇ ಹೇಳಿದರೂ ಅವಳು ಹೆಚ್ಚು ಸಿಡಿಮಿಡಿಗೊಂಡಳು. ಅಂತಿಮವಾಗಿ, ನಾವು ಹೊರಟುಹೋಗುವಂತೆ ನಮಗೆ ಅಸಭ್ಯ ರೀತಿಯಿಂದ ಹೇಳಿ, ಬಾಗಿಲನ್ನು ದಢಾರನೆ ಮುಚ್ಚಿಬಿಟ್ಟಳು” ಎಂಬುದಾಗಿ ಆ ಸಾಕ್ಷಿ ವರದಿಸುತ್ತಾಳೆ.
ಇನ್ನೂ ಹೆಚ್ಚಿನ ಭೇಟಿಗಳು ತದ್ರೀತಿಯ ಒಂದು ಸ್ವಾಗತವನ್ನು ಮಾತ್ರವೇ ಬರಮಾಡಲಿವೆಯೊ ಎಂದು ಫ್ರಾನ್ಸೆಸ್ ಸೋಜಿಗಪಟ್ಟಳು. ‘ಅವಳು ಈ ಸಂದೇಶದಲ್ಲಿ ನಿಜವಾಗಿಯೂ ಆಸಕ್ತಳಾಗಿರದಿದ್ದಲ್ಲಿ, ಬಹುಶಃ ಅವಳನ್ನು ಸಂದರ್ಶಿಸುವುದು ಇನ್ನೆಂದಿಗೂ ಪ್ರಯೋಜನಕರವಾಗಿರಲಿಕ್ಕಿಲ್ಲ’ ಎಂಬುದಾಗಿ ಫ್ರಾನ್ಸೆಸ್ ಆಲೋಚಿಸಿದಳು. ಆದರೂ, ಅವಳು ಈ ವಿಚಾರವನ್ನು ತನ್ನ ಗಂಡನಾದ ಥಾಮಸ್ನೊಂದಿಗೆ ಚರ್ಚಿಸಿದಳು, ಮತ್ತು ಅವನು ಹೆಚ್ಚು ಆಶಾಭರಿತನಾಗಿದ್ದನು. ಮುಂದಿನ ಬಾರಿ ಅವರು ಆ ಕ್ಷೇತ್ರದಲ್ಲಿದ್ದಾಗ, ಜೀನ್ಳನ್ನು ಇನ್ನೊಮ್ಮೆ ಭೇಟಿಮಾಡಲಾಯಿತು. ಅವಳು ಸ್ನೇಹಪರಳಾಗಿದ್ದು, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಪ್ರತಿಗಳನ್ನು ಸ್ವೀಕರಿಸಿದಳು. ಮುಂದಿನ ಭೇಟಿಗಳು ಅಂತೆಯೇ ಹೆಚ್ಚು ಹಿತಕರವಾಗಿದ್ದವು, ಹಾಗೂ ಥಾಮಸ್ ಮತ್ತು ಫ್ರಾನ್ಸೆಸ್ ಅವಳೊಂದಿಗೆ ಒಂದು ಕ್ರಮವಾದ ಬೈಬಲ್ ಅಭ್ಯಾಸವನ್ನು ಆರಂಭಿಸಿದರು.
ಏಕೆ ಈ ಬದಲಾವಣೆ? ಅವಳು ಸಾಕ್ಷಿಗಳ ಕಡೆಗೆ ತೀರ ಒರಟಾಗಿ ಪ್ರತಿಕ್ರಿಯಿಸಿದ್ದ ಸಮಯದಲ್ಲಿ, ತಾನು ಇತ್ತೀಚೆಗೆ ಮಗುವನ್ನು ಹೆತ್ತಿದ್ದು, ಆಗತಾನೇ ಆಸ್ಪತ್ರೆಯಿಂದ ಹೊರಬಂದಿದ್ದೆನೆಂದು ಜೀನ್ ವಿವರಿಸುತ್ತಾಳೆ. ತನ್ನ ನವಜಾತ ಶಿಶುವಿಗೆ ಮೊಲೆಯೂಡಿಸುವ ಮತ್ತು ತನ್ನ ಹಿರಿಯ ಮಗುವಿಗೆ ಚಮಚೆಯಿಂದ ಉಣಿಸುವ ಕೆಲಸದ ಕಾರಣದಿಂದ, ರಾತ್ರಿಯಲ್ಲಿ ಅವಳಿಗೆ ಕೇವಲ ಒಂದೂವರೆ ತಾಸಿನ ನಿದ್ರೆಯು ದೊರಕುತ್ತಿತ್ತು. “ಧರ್ಮದ ಕುರಿತಾಗಿ ಮಾತಾಡುವುದಕ್ಕೆ ನನಗೆ ಯಾವ ಆಸಕ್ತಿಯೂ ಇರಲಿಲ್ಲ ಎಂಬುದು ಖಂಡಿತ” ಎಂದು ಜೀನ್ ಹೇಳುತ್ತಾಳೆ.
ಎರಡು ತಿಂಗಳುಗಳೊಳಗೆ, ಜೀನ್ ಎಲ್ಲಾ ಸಭಾ ಕೂಟಗಳಿಗೆ ಹಾಜರಾಗುತ್ತಿದ್ದಳು, ಮತ್ತು ನಾಲ್ಕು ತಿಂಗಳುಗಳೊಳಗೆ ಅವಳು ಕ್ಷೇತ್ರ ಶುಶ್ರೂಷೆಯಲ್ಲಿ ಪಾಲ್ಗೊಳ್ಳುತ್ತಿದ್ದಳು. ಅವಳು ತನ್ನ ಬೈಬಲ್ ಅಭ್ಯಾಸವನ್ನು ಆರಂಭಿಸಿದಂದಿನಿಂದ ಹತ್ತು ತಿಂಗಳುಗಳ ಬಳಿಕ ಅವಳು ದೀಕ್ಷಾಸ್ನಾನಿತಳಾದಳು. ಈಗ ಜೀನ್ಳ ಸ್ವಂತ ಅನುಭವವೇ ಅವಳಿಗೆ ಶೂಶ್ರೂಷೆಯಲ್ಲಿ ಸಹಾಯ ಮಾಡುತ್ತದೆ. ಅವಳು ಹೇಳುವುದು: “ತೀರ ಒರಟಾಗಿರುವ ಯಾರಾದರೊಬ್ಬರನ್ನು ನಾನು ಸಂಧಿಸುವಾಗ, ನಾನು ಹೆಚ್ಚು ವಿವೇಚನಾಭರಿತಳಾಗಿರಲು ಪ್ರಯತ್ನಿಸುತ್ತೇನೆ. ನಾನು ಯಾವಾಗಲೂ ಅದರ ಟಿಪ್ಪಣಿ ಮಾಡಿಕೊಳ್ಳುತ್ತೇನೆ. ಬಹುಶಃ ನಾನು ಹಿಂದಿರುಗಿಹೋಗುವ ಸಮಯದೊಳಗೆ ಸನ್ನಿವೇಶವು ಬದಲಾಗುವುದು; ಆ ವ್ಯಕ್ತಿಗೆ ಹೆಚ್ಚು ಉತ್ತಮವಾದ ಅನಿಸಿಕೆಯಾಗುತ್ತಿರಬಹುದು ಮತ್ತು ಹೆಚ್ಚು ಗ್ರಹಣಶೀಲನಾಗಿರಬಹುದು.”