ಉಪವಾಸ ಮಾಡುವಿಕೆಯು ಚಾಲ್ತಿಯಲ್ಲಿಲ್ಲದ ಸಂಗತಿಯೊ?
“ನಾನು ಒಬ್ಬ ಹದಿವಯಸ್ಕಳಾಗಿದ್ದ ಸಮಯದಂದಿನಿಂದ ಪ್ರತಿ ಸೋಮವಾರ ಉಪವಾಸ ಮಾಡುತ್ತಿದ್ದೇನೆ,” ಎಂಬುದಾಗಿ 78 ವರ್ಷ ಪ್ರಾಯದ ಒಬ್ಬ ಯಶಸ್ವಿ ಭಾರತೀಯ ಸ್ತ್ರೀಯಾದ ಮೃದುಲಾಬೆನ್ ಹೇಳುತ್ತಾಳೆ. ಇದು ಆಕೆಯ ಆರಾಧನೆಯ ಒಂದು ಭಾಗವಾಗಿದೆ; ಆಕೆಗೆ ಒಳ್ಳೆಯ ವಿವಾಹ, ಆರೋಗ್ಯವಂತ ಮಕ್ಕಳು ಹಾಗೂ ಆಕೆಯ ಗಂಡನಿಗೆ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳುವ ಒಂದು ಮಾರ್ಗವಾಗಿದೆ. ಈಗ ಒಬ್ಬ ವಿಧವೆಯಾಗಿರುವ ಆಕೆ, ಒಳ್ಳೆಯ ಆರೋಗ್ಯ ಹಾಗೂ ತನ್ನ ಮಕ್ಕಳ ಏಳಿಗೆಗಾಗಿ ಸೋಮವಾರಗಳಂದು ಉಪವಾಸ ಮಾಡುವುದನ್ನು ಮುಂದುವರಿಸುತ್ತಾಳೆ. ಆಕೆಯಂತೆ, ಹಿಂದೂ ಸ್ತ್ರೀಯರಲ್ಲಿ ಹೆಚ್ಚಿನವರು, ನಿಯಮಿತ ಉಪವಾಸಗಳನ್ನು ತಮ್ಮ ಜೀವಿತದ ಭಾಗವಾಗಿ ಮಾಡಿಕೊಳ್ಳುತ್ತಾರೆ.
ಭಾರತದ ಮುಂಬಯಿಯ ಒಂದು ಉಪನಗರದಲ್ಲಿ ಜೀವಿಸುತ್ತಿರುವ, ಮಧ್ಯ ವಯಸ್ಸಿನ ವ್ಯಾಪಾರಿ ಪ್ರಕಾಶ್, ತಾನು ಪ್ರತಿ ವರ್ಷ ಶ್ರಾವಣ ಮಾಸದ ಸೋಮವಾರಗಳಂದು ಉಪವಾಸ ಮಾಡುತ್ತೇನೆಂದು ಹೇಳುತ್ತಾನೆ. ಇದು ಹಿಂದೂ ಕ್ಯಾಲೆಂಡರಿನಲ್ಲಿ, ವಿಶೇಷ ಧಾರ್ಮಿಕ ಮಹತ್ವವಿರುವ ಒಂದು ಮಾಸವಾಗಿದೆ. ಪ್ರಕಾಶ್ ವಿವರಿಸುವುದು: “ನಾನು ಧಾರ್ಮಿಕ ಕಾರಣಗಳಿಗಾಗಿ ಉಪವಾಸ ಮಾಡುವುದನ್ನು ಆರಂಭಿಸಿದೆ, ಆದರೆ ಈಗ ಆರೋಗ್ಯದ ಉದ್ದೇಶಗಳಿಗಾಗಿ ಮುಂದುವರಿಸಲು ಹೆಚ್ಚಿನ ಒಂದು ಪ್ರೇರಕವನ್ನು ನಾನು ಕಂಡುಕೊಳ್ಳುತ್ತೇನೆ. ಶ್ರಾವಣ ಮಾಸವು ಮಳೆಗಾಲದ ಕೊನೆಯಲ್ಲಿ ಬರುವುದರಿಂದ, ಅದು ನನ್ನ ದೇಹದ ವ್ಯವಸ್ಥೆಗೆ, ಮಳೆಗಾಲಕ್ಕೆ ವಿಶಿಷ್ಟವಾಗಿರುವ ಕಾಯಿಲೆಗಳಿಂದ ತನ್ನನ್ನು ಶುದ್ಧಮಾಡಿಕೊಳ್ಳುವ ಒಂದು ಅವಕಾಶವನ್ನು ಕೊಡುತ್ತದೆ.”
ಉಪವಾಸ ಮಾಡುವಿಕೆಯು, ವ್ಯಕ್ತಿಯೊಬ್ಬನಿಗೆ ಶಾರೀರಿಕವಾಗಿ, ಮಾನಸಿಕವಾಗಿ, ಮತ್ತು ಆತ್ಮಿಕವಾಗಿ ಸಹಾಯ ಮಾಡುತ್ತದೆಂದು ಕೆಲವರಿಗೆ ಅನಿಸುತ್ತದೆ. ದೃಷ್ಟಾಂತಕ್ಕೆ, ಗ್ರೋಲೆ ಇಂಟರ್ನ್ಯಾಷನಲ್ ಎನ್ಸೈಕ್ಲೊಪೀಡಿಯ ಹೇಳುವುದು: “ಉಪವಾಸ ಮಾಡುವಿಕೆಯು ಆರೋಗ್ಯಪೂರ್ಣವಾಗಿರಬಹುದೆಂದು ಇತ್ತೀಚಿನ ವೈಜ್ಞಾನಿಕ ಸಂಶೋಧನೆಯು ಸೂಚಿಸುತ್ತದೆ, ಮತ್ತು ಜಾಗರೂಕವಾಗಿ ಮಾಡಲ್ಪಟ್ಟಾಗ, ಹೆಚ್ಚಿನ ಮಾನಸಿಕ ಅರಿವು ಮತ್ತು ಸಂವೇದನ ಶಕ್ತಿಯನ್ನು ಪ್ರವರ್ಧಿಸಬಹುದು.” ಗ್ರೀಕ್ ತತ್ವಜ್ಞಾನಿಯಾದ ಪ್ಲೇಟೊ ಹತ್ತು ದಿನಗಳು ಅಥವಾ ಅದಕ್ಕಿಂತಲೂ ಹೆಚ್ಚು ಸಮಯ ಉಪವಾಸ ಮಾಡುತ್ತಿದ್ದನೆಂದು ಮತ್ತು ಗಣಿತಶಾಸ್ತ್ರಜ್ಞನಾದ ಪೈಥಾಗರಸ್, ತನ್ನ ವಿದ್ಯಾರ್ಥಿಗಳಿಗೆ ಕಲಿಸುವ ಮೊದಲು ಅವರು ಉಪವಾಸ ಮಾಡುವಂತೆ ಮಾಡಿದನೆಂದು ಹೇಳಲಾಗಿದೆ.
ಕೆಲವರಿಗೆ ಉಪವಾಸ ಮಾಡುವುದೆಂದರೆ, ಒಂದು ನಿಗದಿತ ಸಮಯಾವಧಿಯ ವರೆಗೆ ಅನ್ನಪಾನಗಳನ್ನು ಪೂರ್ಣವಾಗಿ ವರ್ಜಿಸುವುದಾಗಿರುತ್ತದೆ, ಇತರ ವ್ಯಕ್ತಿಗಳಾದರೊ ತಮ್ಮ ಉಪವಾಸಗಳ ನಡುವೆ ಪಾನೀಯಗಳನ್ನು ಸೇವಿಸುತ್ತಾರೆ. ಕೆಲವು ಭೋಜನಗಳನ್ನು ತಪ್ಪಿಸುವುದು ಅಥವಾ ನಿರ್ದಿಷ್ಟ ರೀತಿಯ ಆಹಾರದಿಂದ ದೂರವಿರುವುದು, ಅನೇಕರಿಂದ ಉಪವಾಸವೆಂದು ಪರಿಗಣಿಸಲ್ಪಡುತ್ತದೆ. ಆದರೆ ದೀರ್ಘ ಸಮಯದ, ಮೇಲ್ವಿಚಾರಣೆಯಿಲ್ಲದ ಉಪವಾಸವು ಅಪಾಯಕರವಾಗಿರಸಾಧ್ಯವಿದೆ. ಪತ್ರಿಕೋದ್ಯಮಿ ಪಾರೂಲ್ ಶೇತ್ ಹೇಳುವುದೇನೆಂದರೆ, ದೇಹವು ಶರ್ಕರ ಪಿಷ್ಟದ ತನ್ನ ಸರಬರಾಯಿಯನ್ನು ಬಳಸಿಕೊಂಡ ತರುವಾಯ, ಮುಂದೆ ಸ್ನಾಯು ಸಸಾರಜನಕಗಳನ್ನು ಗ್ಲೂಕೋಸ್ ಆಗಿ ಪರಿವರ್ತಿಸುತ್ತದೆ ಮತ್ತು ಅನಂತರ ದೇಹದ ಕೊಬ್ಬಿನ ಕಡೆಗೆ ತಿರುಗುತ್ತದೆ. ಕೊಬ್ಬನ್ನು ಗ್ಲೂಕೋಸ್ ಆಗಿ ಮಾರ್ಪಡಿಸುವುದು, ಕಿಟೋನ್ ಪದಾರ್ಥಗಳೆಂದು ಕರೆಯಲ್ಪಡುವ ವಿಷಮಯ ಉತ್ಪನ್ನಗಳನ್ನು ಬಿಡುಗಡೆಮಾಡುತ್ತದೆ. ಕಿಟೋನ್ ಪದಾರ್ಥಗಳು ಶೇಖರವಾದಂತೆ, ಅವು ಮಿದುಳಿನ ಕಡೆಗೆ ಚಲಿಸುತ್ತಾ, ಕೇಂದ್ರ ನರವ್ಯೂಹವನ್ನು ಹಾನಿಗೊಳಿಸುತ್ತವೆ. “ಹಾಗಾದಾಗಲೇ ಉಪವಾಸ ಮಾಡುವಿಕೆಯು ಅಪಾಯಕರವಾಗಬಲ್ಲದು,” ಎಂದು ಶೇತ್ ಹೇಳುತ್ತಾರೆ. “ನೀವು ಗಲಿಬಿಲಿಗೊಂಡು, ದಿಗ್ಭ್ರಮೆಗೊಳ್ಳಬಲ್ಲಿರಿ, ಮತ್ತು ಪರಿಸ್ಥಿತಿಯು ಮತ್ತಷ್ಟು ಕೆಡಬಲ್ಲದು. . . . ಅತಿಸುಪ್ತಿ (ಕೋಮ) ಮತ್ತು ಕಟ್ಟಕಡೆಗೆ ಮರಣವನ್ನು [ಅದು ಉಂಟುಮಾಡಬಲ್ಲದು].”
ಒಂದು ಸಾಧನ ಹಾಗೂ ಒಂದು ಮತಾಚರಣೆ
ಉಪವಾಸವು ರಾಜಕೀಯ ಇಲ್ಲವೆ ಸಾಮಾಜಿಕ ಉದ್ದೇಶಗಳಿಗಾಗಿ ಒಂದು ಶಕ್ತಿಶಾಲಿ ಸಾಧಕದಂತೆ ಉಪಯೋಗಿಸಲ್ಪಟ್ಟಿದೆ. ಭಾರತದಲ್ಲಿ ಮೋಹನ್ದಾಸ ಕೆ. ಗಾಂಧಿಯವರು ಈ ಶಸ್ತ್ರದ ಪ್ರಖ್ಯಾತ ನಿರ್ವಾಹಕರಾಗಿದ್ದರು. ಲಕ್ಷಾಂತರ ಜನರಿಂದ ವಿಶೇಷ ಗೌರವಕ್ಕೆ ಪಾತ್ರರಾಗಿದ್ದ ಅವರು, ಭಾರತದ ಹಿಂದೂ ಜನಸಮೂಹಗಳ ಮೇಲೆ ಬಲವಾದ ಪ್ರಭಾವವನ್ನು ಬೀರಲು ಉಪವಾಸ ಮಾಡುವಿಕೆಯನ್ನು ಉಪಯೋಗಿಸಿದರು. ಕಾರ್ಖಾನೆಯ ಕಾರ್ಮಿಕರು ಮತ್ತು ಕಾರ್ಖಾನೆಯ ಯಜಮಾನರ ನಡುವಿನ ಒಂದು ಔದ್ಯೋಗಿಕ ವಿವಾದವನ್ನು ಬಗೆಹರಿಸಲು ತಮ್ಮ ಉಪವಾಸದ ಪರಿಣಾಮವನ್ನು ವರ್ಣಿಸುತ್ತಾ, ಗಾಂಧಿ ಹೇಳಿದ್ದು: “ಅದರ ಅಂತಿಮ ಪರಿಣಾಮವು ಏನಾಗಿತ್ತೆಂದರೆ, ಎಲ್ಲೆಡೆಯೂ ಸದ್ಭಾವನೆಯ ವಾತಾವರಣವು ಸೃಷ್ಟಿಸಲ್ಪಟ್ಟಿತು. ಕಾರ್ಖಾನೆಯ ಯಜಮಾನರ ಹೃದಯಗಳು ಸ್ಪರ್ಶಿಸಲ್ಪಟ್ಟವು . . . ನಾನು ಕೇವಲ ಮೂರು ದಿನಗಳ ಕಾಲ ಉಪವಾಸ ಮಾಡಿದ ತರುವಾಯ, ಮುಷ್ಕರವನ್ನು ನಿಲ್ಲಿಸಿಬಿಡಲಾಯಿತು.” ದಕ್ಷಿಣ ಆಫ್ರಿಕದ ಅಧ್ಯಕ್ಷರಾದ ನೆಲ್ಸನ್ ಮಂಡೇಲಾ, ಒಬ್ಬ ರಾಜಕೀಯ ಸೆರೆಯಾಳಿನೋಪಾದಿ ಅವರು ಕಳೆದ ವರ್ಷಗಳಲ್ಲಿ, ಐದು ದಿನದ ಅನ್ನ ಸತ್ಯಾಗ್ರಹದಲ್ಲಿ ಭಾಗವಹಿಸಿದರು.
ಉಪವಾಸ ಮಾಡುವಿಕೆಯ ಒಂದು ರೂಢಿಯನ್ನು ಮಾಡಿಕೊಂಡಿರುವ ಹೆಚ್ಚಿನವರಾದರೊ, ಧಾರ್ಮಿಕ ಕಾರಣಗಳಿಗಾಗಿ ಹಾಗೆ ಮಾಡಿದ್ದಾರೆ. ಹಿಂದೂ ಮತದಲ್ಲಿ ಉಪವಾಸ ಮಾಡುವಿಕೆಯು ಒಂದು ಪ್ರಮುಖ ಮತಾಚರಣೆಯಾಗಿದೆ. ಭಾರತದ ಉಪವಾಸ ಹಾಗೂ ಹಬ್ಬಗಳು (ಇಂಗ್ಲಿಷ್) ಎಂಬ ಪುಸ್ತಕವು ಹೇಳುವುದು, ನಿರ್ದಿಷ್ಟ ದಿನಗಳಂದು, “ಸಂಪೂರ್ಣ ಉಪವಾಸವು ಆಚರಿಸಲ್ಪಡುತ್ತದೆ . . . ನೀರನ್ನು ಸಹ ತೆಗೆದುಕೊಳ್ಳಲಾಗುವುದಿಲ್ಲ. ಸಂತೋಷ, ಏಳಿಗೆ ಮತ್ತು ಅತಿಕ್ರಮಣಗಳು ಹಾಗೂ ಪಾಪಗಳ ಕ್ಷಮಾಪಣೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ . . . ಪುರುಷರು ಮತ್ತು ಸ್ತ್ರೀಯರು—ಇಬ್ಬರೂ—ಕಟ್ಟುನಿಟ್ಟಿನ ಉಪವಾಸವನ್ನು ಆಚರಿಸುತ್ತಾರೆ.”
ಜೈನ ಧರ್ಮದಲ್ಲಿ ಉಪವಾಸ ಮಾಡುವಿಕೆಯು ವ್ಯಾಪಕವಾಗಿ ಆಚರಿಸಲ್ಪಡುತ್ತದೆ. ದ ಸಂಡೆ ಟೈಮ್ಸ್ ಆಫ್ ಇಂಡಿಯ ರಿವ್ಯೂ ವರದಿಸುವುದು: “ಮುಂಬಯಿಯಲ್ಲಿನ ಒಬ್ಬ ಜೈನ ಮುನಿ [ಋಷಿ]ಯು, 201 ದಿನಗಳ ವರೆಗೆ, ದಿನವೊಂದಕ್ಕೆ ಕೇವಲ ಎರಡು ಗ್ಲಾಸುಗಳಷ್ಟು ಕುದಿಸಿದ ನೀರನ್ನು ಕುಡಿದನು. ಅವನು 33 ಕೆಜಿ [73 ಪೌಂಡು] ತೂಕವನ್ನು ಕಳೆದುಕೊಂಡನು.” ಇದು ರಕ್ಷಣೆಯನ್ನು ತರುವುದೆಂದು ಮನಗಂಡವರಾಗಿ, ಕೆಲವರು ಹೊಟ್ಟೆಗಿಲ್ಲದೆ ತಮ್ಮನ್ನು ಸಾಯಿಸಿಕೊಳ್ಳುವ ಮಟ್ಟಿಗೆ ಸಹ ಉಪವಾಸ ಮಾಡುತ್ತಾರೆ.
ಇಸ್ಲಾಮ್ ಧರ್ಮವನ್ನು ಆಚರಿಸುತ್ತಿರುವ, ಸಾಮಾನ್ಯವಾಗಿ ಎಲ್ಲ ವಯಸ್ಕ ಗಂಡಸರಿಗೆ, ರಂಸಾನ್ ತಿಂಗಳಿನಲ್ಲಿ ಉಪವಾಸ ಮಾಡುವಿಕೆಯು ನಿರ್ಬಂಧಕವಾಗಿದೆ. ಇಡೀ ತಿಂಗಳು, ಸೂರ್ಯೋದಯದಿಂದ ಸೂರ್ಯಾಸ್ತಮಾನದ ವರೆಗೆ ಆಹಾರವಾಗಲಿ ನೀರಾಗಲಿ ತೆಗೆದುಕೊಳ್ಳಲ್ಪಡಬಾರದು. ಈ ಸಮಯದಲ್ಲಿ ಅಸ್ವಸ್ಥನಾಗಿರುವ ಅಥವಾ ಪ್ರಯಾಣಿಸುತ್ತಿರುವ ಯಾವನೇ ವ್ಯಕ್ತಿಯು, ಮತ್ತೊಂದು ಸಮಯದಲ್ಲಿ ಆ ಉಪವಾಸವನ್ನು ಮಾಡಲೇಬೇಕು. ಲೆಂಟ್, ಈಸ್ಟರ್ ಹಬ್ಬದ ಮೊದಲಿನ 40 ದಿನದ ಸಮಯಾವಧಿಯು, ಕ್ರೈಸ್ತಪ್ರಪಂಚದಲ್ಲಿರುವ ಕೆಲವರಿಗಾಗಿ ಉಪವಾಸ ಮಾಡುವ ಸಮಯವಾಗಿದೆ, ಮತ್ತು ಅನೇಕ ಧಾರ್ಮಿಕ ಸಮುದಾಯಗಳು ನಿರ್ದಿಷ್ಟಗೊಳಿಸಿದ ಬೇರೆ ದಿನಗಳಂದು ಉಪವಾಸಗಳನ್ನು ಆಚರಿಸುತ್ತವೆ.
ಉಪವಾಸ ಮಾಡುವಿಕೆಯು ಖಂಡಿತವಾಗಿಯೂ ಅಳಿದುಹೋಗಿಲ್ಲ. ಮತ್ತು ಉಪವಾಸ ಮಾಡುವಿಕೆಯು ಇಷ್ಟೊಂದು ಧರ್ಮಗಳ ಭಾಗವಾಗಿರುವುದರಿಂದ, ಅದು ದೇವರಿಂದ ಅವಶ್ಯಗೊಳಿಸಲ್ಪಟ್ಟಿದೆಯೊ? ಎಂದು ನಾವು ಕೇಳಬಹುದು. ಕ್ರೈಸ್ತರು ಉಪವಾಸ ಮಾಡಲು ನಿರ್ಣಯಿಸಬಹುದಾದ ಸಂದರ್ಭಗಳು ಇವೆಯೊ? ಇದು ಪ್ರಯೋಜನಕರವಾಗಿರಬಲ್ಲದೊ? ಮುಂದಿನ ಲೇಖನವು ಈ ಪ್ರಶ್ನೆಗಳನ್ನು ಚರ್ಚಿಸುವುದು.
[ಪುಟ 3 ರಲ್ಲಿರುವ ಚಿತ್ರ]
ಜೈನ ಧರ್ಮವು ಉಪವಾಸ ಮಾಡುವಿಕೆಯನ್ನು, ಪ್ರಾಣದ ರಕ್ಷಣೆಯನ್ನು ಸಾಧಿಸುವ ಒಂದು ಮಾರ್ಗವಾಗಿ ವೀಕ್ಷಿಸುತ್ತದೆ
[ಪುಟ 4 ರಲ್ಲಿರುವ ಚಿತ್ರ]
ಮೋಹನ್ದಾಸ ಕೆ. ಗಾಂಧಿಯವರು ಉಪವಾಸ ಮಾಡುವಿಕೆಯನ್ನು, ರಾಜಕೀಯ ಇಲ್ಲವೆ ಸಾಮಾಜಿಕ ಉದ್ದೇಶಗಳಿಗಾಗಿ ಒಂದು ಶಕ್ತಿಶಾಲಿ ಸಾಧಕವಾಗಿ ಉಪಯೋಗಿಸಿದರು
[ಪುಟ 4 ರಲ್ಲಿರುವ ಚಿತ್ರ]
ಇಸ್ಲಾಮ್ ಧರ್ಮದಲ್ಲಿ, ರಂಸಾನ್ ತಿಂಗಳಿನಲ್ಲಿ ಉಪವಾಸ ಮಾಡುವಿಕೆಯು ನಿರ್ಬಂಧಕವಾಗಿದೆ
[ಕೃಪೆ]
Garo Nalbandian