ನೀವು ಮೆಸ್ಸೀಯನನ್ನು ಅಂಗೀಕರಿಸುತ್ತಿದ್ದಿರೊ?
ಯೇಸು ಕ್ರಿಸ್ತನು ಇಸ್ರಾಯೇಲ್ಯರ ನಡುವೆ ದೇವರ ವಾಕ್ಯವನ್ನು ಸಾರುತ್ತಾ ಮೂರೂವರೆ ವರ್ಷಗಳನ್ನು ಕಳೆದನು. ಆದರೆ ಆತನ ಭೂಶುಶ್ರೂಷೆಯು ಮುಕ್ತಾಯಕ್ಕೆ ಹತ್ತಿರವಾದ ಸಮಯದಷ್ಟಕ್ಕೆ, ಆತನ ಸಮಕಾಲೀನರಲ್ಲಿ ಹೆಚ್ಚಿನವರು ಆತನನ್ನು ಮೆಸ್ಸೀಯನೋಪಾದಿ, ಅಥವಾ ದೇವರ “ಅಭಿಷಿಕ್ತ”ನೋಪಾದಿ ತಿರಸ್ಕರಿಸಿದ್ದರು. ಯಾಕೆ?
ಪ್ರಥಮ ಶತಮಾನದ ಯೆಹೂದ್ಯರು ಯೇಸುವನ್ನು ಮೆಸ್ಸೀಯನೋಪಾದಿ ಏಕೆ ಒಪ್ಪಿಕೊಳ್ಳಲಿಲ್ಲವೆಂಬುದಕ್ಕೆ ಹಲವಾರು ಕಾರಣಗಳನ್ನು ಗುರುತಿಸಲು ಬೈಬಲ್ ನಮಗೆ ಸಹಾಯ ಮಾಡುತ್ತದೆ. ಈ ಕಾರಣಗಳಲ್ಲಿ ಮೂರು ಕಾರಣಗಳು, ಆಳುತ್ತಿರುವ ಮೆಸ್ಸೀಯ ಸಂಬಂಧಿತ ರಾಜನೋಪಾದಿ ಯೇಸುವಿನ ಸದ್ಯದ ದಿನದ ಸ್ಥಾನವನ್ನು ಒಪ್ಪಿಕೊಳ್ಳುವುದರಿಂದ ಅನೇಕರನ್ನು ತಡೆಗಟ್ಟುತ್ತವೆ.
‘ಒಂದು ಸೂಚಕಕಾರ್ಯವನ್ನು ನೋಡಬೇಕು’
ಪ್ರಥಮ ಶತಮಾನದ ಯೆಹೂದ್ಯರು ಮೆಸ್ಸೀಯನನ್ನು ಅಂಗೀಕರಿಸದೆ ಹೋದದ್ದರ ಒಂದು ಕಾರಣವು, ಆತನ ಮೆಸ್ಸೀಯತ್ವಕ್ಕೆ ಕೈತೋರಿಸುತ್ತಿದ್ದ ಶಾಸ್ತ್ರೀಯ ಸೂಚನೆಗಳನ್ನು ಸ್ವೀಕರಿಸಲು ಅವರ ನಿರಾಕರಣೆಯೇ. ಕೆಲವೊಮ್ಮೆ, ಯೇಸುವಿಗೆ ಕಿವಿಗೊಡುತ್ತಿದ್ದ ಜನರು, ಆತನು ದೇವರಿಂದ ಬಂದಿದ್ದಾನೆಂಬುದನ್ನು ರುಜುಪಡಿಸಲು ಒಂದು ಸೂಚಕಕಾರ್ಯವನ್ನು ನಡಿಸುವಂತೆ ತಗಾದೆಮಾಡಿದರು. ದೃಷ್ಟಾಂತಕ್ಕಾಗಿ, ಶಾಸ್ತ್ರಿಗಳು ಮತ್ತು ಫರಿಸಾಯರಲ್ಲಿ ಕೆಲವರು ಹೀಗೆ ಹೇಳಿದ್ದನ್ನು ಮತ್ತಾಯ 12:38 ವರದಿಸುತ್ತದೆ: “ಬೋಧಕನೇ, ನಿನ್ನಿಂದಾಗುವ ಒಂದು ಸೂಚಕಕಾರ್ಯವನ್ನು ನೋಡಬೇಕೆಂದು ನಮಗೆ ಅಪೇಕ್ಷೆಯದೆ.” ಯೇಸು ಈಗಾಗಲೇ ಅವರಿಗೆ ಸೂಚಕಕಾರ್ಯಗಳನ್ನು ತೋರಿಸಿದ್ದಿರಲಿಲ್ಲವೇ? ನಿಶ್ಚಯವಾಗಿಯೂ ಆತನು ತೋರಿಸಿದ್ದನು.
ಆ ಸಮಯದಷ್ಟಕ್ಕೆ ಯೇಸು ಆಗಲೇ ಅನೇಕ ಅದ್ಭುತಕಾರ್ಯಗಳನ್ನು ನಡಿಸಿದ್ದನು. ಆತನು ನೀರನ್ನು ದ್ರಾಕ್ಷಾಮದ್ಯವನ್ನಾಗಿ ಪರಿವರ್ತಿಸಿದ್ದನು, ಸಾಯುತ್ತಿದ್ದ ಒಬ್ಬ ಹುಡುಗನನ್ನು ಗುಣಪಡಿಸಿದ್ದನು, ಪೇತ್ರನ ಅಸ್ವಸ್ಥ ಅತ್ತೆಯನ್ನು ಗುಣಪಡಿಸಿದ್ದನು, ಒಬ್ಬ ಕುಷ್ಠರೋಗಿಯನ್ನು ಶುದ್ಧಗೊಳಿಸಿದ್ದನು, ಒಬ್ಬ ಪಾರ್ಶ್ವವಾಯು ಪೀಡಿತ ಮನುಷ್ಯನನ್ನು ನಡೆಯುವಂತೆ ಶಕ್ತಗೊಳಿಸಿದ್ದನು, 38 ವರ್ಷಗಳಿಂದ ಅಸ್ವಸ್ಥನಾಗಿದ್ದ ಒಬ್ಬ ಮನುಷ್ಯನ ಆರೋಗ್ಯವನ್ನು ಪುನಃಸ್ಸ್ಥಾಪಿಸಿದ್ದನು, ಮನುಷ್ಯನೊಬ್ಬನ ಬತ್ತಿಹೋದ ಕೈಯನ್ನು ಯಥಾಸ್ಥಿತಿಗೆ ತಂದಿದ್ದನು, ಅನೇಕ ಜನರಿಗೆ ಅವರ ದುಃಖಕರ ರೋಗಗಳಿಂದ ಉಪಶಮನ ಕೊಟ್ಟಿದ್ದನು, ಒಬ್ಬ ಸೈನ್ಯಾಧಿಕಾರಿಯ ದಾಸನನ್ನು ಗುಣಪಡಿಸಿದ್ದನು, ಒಬ್ಬ ವಿಧವೆಯ ಮಗನನ್ನು ಸತ್ತವರೊಳಗಿಂದ ಎಬ್ಬಿಸಿದ್ದನು, ಮತ್ತು ಒಬ್ಬ ಕುರುಡ ಹಾಗೂ ಮೂಕ ಮನುಷ್ಯನನ್ನು ಗುಣಪಡಿಸಿದ್ದನು. ಈ ಅದ್ಭುತಕಾರ್ಯಗಳು ಕಾನಾ, ಕಪೆರ್ನೌಮ್, ಯೆರೂಸಲೇಮ್, ಮತ್ತು ನಾಯಿನ್ನಲ್ಲಿ ಸಂಭವಿಸಿದ್ದವು. ಇನ್ನೂ ಹೆಚ್ಚಾಗಿ, ಇಂತಹ ಅದ್ಭುತಕಾರ್ಯಗಳ ಕುರಿತಾದ ವಾರ್ತೆಯು, ಯೂದಾಯ ಮತ್ತು ಸುತ್ತುಮುತ್ತಲಿನ ದೇಶದಲ್ಲೆಲ್ಲಾ ಹರಡಿತು.—ಯೋಹಾನ 2:1-12; 4:46-54; ಮತ್ತಾಯ 8:14-17; 8:1-4; 9:1-8; ಯೋಹಾನ 5:1-9; ಮತ್ತಾಯ 12:9-14; ಮಾರ್ಕ 3:7-12; ಲೂಕ 7:1-10; 7:11-17; ಮತ್ತಾಯ 12:22.
ಯೇಸು ಮೆಸ್ಸೀಯನಾಗಿದ್ದನೆಂಬುದನ್ನು ರುಜುಪಡಿಸುವಂಥ ಸೂಚಕಕಾರ್ಯಗಳ ಅಭಾವವಿರಲಿಲ್ಲವೆಂಬುದು ಸ್ಪಷ್ಟ. ಆತನು ಜನರ ಮುಂದೆ ಇಷ್ಟೊಂದು ಸೂಚಕಕಾರ್ಯಗಳನ್ನು ನಡಿಸಿದ್ದರೂ, ಅವರು ಅವನಲ್ಲಿ ನಂಬಿಕೆಯನ್ನಿಡಲಿಲ್ಲ. ಯೇಸು ದೇವರಿಂದ ಕಳುಹಿಸಲ್ಪಟ್ಟಿದ್ದನೆಂಬ ರುಜುವಾತನ್ನು ನೋಡಿದ್ದು, ಆತನನ್ನು ಮೆಸ್ಸೀಯನನ್ನಾಗಿ ಒಪ್ಪಿಕೊಳ್ಳದಿದ್ದವರು ಆತ್ಮಿಕವಾಗಿ ಕುರುಡರಾಗಿದ್ದರು. ಅವರ ಹೃದಯಗಳು ಸತ್ಯದ ಕಡೆಗೆ ಕಠಿನವೂ ಅಭೇದ್ಯವೂ ಆಗಿದ್ದವು.—ಯೋಹಾನ 12:37-41.
ನಮ್ಮ ದಿನದ ಕುರಿತಾಗಿ ಏನು? “ನಾನು ನನ್ನ ಸ್ವಂತ ಕಣ್ಣಿನಿಂದ ನೋಡಿದಂತಹದ್ದನ್ನು ಮಾತ್ರವೇ ನಂಬುತ್ತೇನೆ,” ಎಂದು ಕೆಲವು ಜನರು ಘೋಷಿಸುತ್ತಾರೆ. ಆದರೆ ಅದು ತೆಗೆದುಕೊಳ್ಳಲು ನಿಜವಾಗಿಯೂ ವಿವೇಕಯುತವಾದ ಮಾರ್ಗಕ್ರಮವಾಗಿದೆಯೊ? ಯೇಸು ಈಗಾಗಲೇ ಮೆಸ್ಸೀಯ ಸಂಬಂಧಿತ ರಾಜ್ಯದ ಸ್ವರ್ಗೀಯ ರಾಜನಾಗಿ ಸಿಂಹಾಸನಾರೂಢನಾಗಿದ್ದಾನೆಂದು ಬೈಬಲ್ ಪ್ರವಾದನೆ ಸೂಚಿಸುತ್ತದೆ. ಆತನು ಅದೃಶ್ಯನಾಗಿರುವುದರಿಂದ, ಆತನ ಆಳ್ವಿಕೆಯನ್ನು ವಿವೇಚಿಸಲು ಸಹಾಯಕ್ಕಾಗಿ ನಮಗೆ ಒಂದು ಸೂಚನೆಯ ಅಗತ್ಯವಿದೆ, ಅದು ಈ ದುಷ್ಟ ವಿಷಯಗಳ ವ್ಯವಸ್ಥೆಯ ಕಡೇ ದಿವಸಗಳ ಆರಂಭವನ್ನು ಗುರುತಿಸಿತು. ನೀವು ಆ ಸೂಚನೆಯನ್ನು ಅಂಗೀಕರಿಸುತ್ತೀರೊ?—ಮತ್ತಾಯ 24:3.
ಬೈಬಲಿಗನುಸಾರ, ಮೆಸ್ಸೀಯ ಸಂಬಂಧಿತ ರಾಜನಾಗಿ ಕ್ರಿಸ್ತನ ಆಳ್ವಿಕೆಯ ಆರಂಭವು, ಪೂರ್ವಭಾವಿಯಿಲ್ಲದ ಮಟ್ಟದಲ್ಲಿ ಯುದ್ಧೋದ್ಯಮ, ಭೂಕಂಪಗಳು, ಆಹಾರದ ಅಭಾವಗಳು, ಮತ್ತು ಸೋಂಕುರೋಗಗಳಿಂದ ಗುರುತಿಸಲ್ಪಡಲಿತ್ತು. “ಕಡೇ ದಿವಸಗಳಲ್ಲಿ,” ಮಾನವ ಸಂಬಂಧಗಳು, ಸ್ವಾರ್ಥ, ಲೋಭ, ಮತ್ತು ನಿಗ್ರಹದ ಕೊರತೆಯಿಂದ ವೈಶಿಷ್ಟ್ಯಗೊಳಿಸಲ್ಪಡಲಿದ್ದವು. (2 ತಿಮೊಥೆಯ 3:1-5; ಮತ್ತಾಯ 24:6, 7; ಲೂಕ 21:10, 11) ಕಾಲಗಣನಶಾಸ್ತ್ರದ ರುಜುವಾತಲ್ಲದೆ, ಕಡೇ ದಿವಸಗಳ 20ಕ್ಕಿಂತಲೂ ಹೆಚ್ಚು ಭಿನ್ನವಾದ ಲಕ್ಷಣಗಳು, 1914ರಲ್ಲಿ ಮೆಸ್ಸೀಯನ ಆಳ್ವಿಕೆಯ ಆರಂಭಕ್ಕೆ ಕೈತೋರಿಸುತ್ತವೆ.—ಮಾರ್ಚ್ 1, 1993ರ ದ ವಾಚ್ಟವರ್ ಪುಟ 5ನ್ನು ನೋಡಿರಿ.
‘ಹಣದಾಸೆಯುಳ್ಳವರು’
ಯೆಹೂದ್ಯರು ಯೇಸುವನ್ನು ಮೆಸ್ಸೀಯನನ್ನಾಗಿ ತಿರಸ್ಕರಿಸಿದ ಇನ್ನೊಂದು ಕಾರಣ ಪ್ರಾಪಂಚಿಕತೆಯಾಗಿತ್ತು. ಐಶ್ವರ್ಯಕ್ಕೆ ತೀರ ಹೆಚ್ಚಾದ ಪ್ರಾಮುಖ್ಯವನ್ನು ಕೊಡುವುದು, ಅನೇಕರನ್ನು ಯೇಸುವನ್ನು ಹಿಂಬಾಲಿಸುವುದರಿಂದ ಅಡ್ಡಗಟ್ಟಿತು. ದೃಷ್ಟಾಂತಕ್ಕಾಗಿ, ಫರಿಸಾಯರು ‘ಹಣದಾಸೆಯುಳ್ಳವರು’ ಎಂದು ಜ್ಞಾತರಾಗಿದ್ದರು. (ಲೂಕ 16:14) ಯೇಸುವನ್ನು ಸಮೀಪಿಸಿ, ನಿತ್ಯ ಜೀವವನ್ನು ಗಳಿಸುವ ವಿಧವನ್ನು ಕೇಳಿದಂತಹ ಒಬ್ಬ ಧನಿಕ ಯುವ ಅಧಿಪತಿಯ ವಿದ್ಯಮಾನವನ್ನು ಪರಿಗಣಿಸಿರಿ. “ದೇವರಾಜ್ಞೆಗಳಿಗೆ ಸರಿಯಾಗಿ ನಡೆದುಕೋ” ಎಂಬುದು ಯೇಸುವಿನ ಉತ್ತರವಾಗಿತ್ತು. ನಿರ್ದಿಷ್ಟ ನಿಯಮಗಳನ್ನು ಪಾಲಿಸುವುದಕ್ಕಿಂತಲೂ ಹೆಚ್ಚಿನದ್ದು ಇದೆಯೆಂಬುದನ್ನು ಪ್ರಾಯಶಃ ಗ್ರಹಿಸುತ್ತಾ, “ಇವೆಲ್ಲಕ್ಕೂ ಸರಿಯಾಗಿ ನಡಕೊಂಡಿದ್ದೇನೆ; ಇನ್ನೇನು ಕಡಿಮೆಯಾಗಿರಬಹುದು?” ಎಂದು ಆ ಯುವ ಪುರುಷನು ಕೇಳಿದನು. “ಹೋಗಿ ನಿನ್ನ ಆಸ್ತಿಯನ್ನು ಮಾರಿ ಬಡವರಿಗೆ ಕೊಡು; ಪರಲೋಕದಲ್ಲಿ ನಿನಗೆ ಸಂಪತ್ತಿರುವದು; ನೀನು ಬಂದು ನನ್ನನ್ನು ಹಿಂಬಾಲಿಸು” ಎಂದು ಯೇಸು ಅವನಿಗೆ ಹೇಳಿದನು. ಮೆಸ್ಸೀಯನ ಒಬ್ಬ ಶಿಷ್ಯನಾಗಲು ಎಂತಹ ಒಂದು ಅವಕಾಶ! ಆದರೆ ಆ ಅಧಿಪತಿಯು, ದುಃಖಿಸುತ್ತಾ ಹಿಂದಿರುಗಿದನು. ಯಾಕೆ? ಯಾಕಂದರೆ ಪರಲೋಕದಲ್ಲಿನ ನಿಧಿಗಿಂತ, ಭೂಮಿಯ ಮೇಲಿನ ನಿಧಿಯು ಅವನಿಗೆ ಹೆಚ್ಚು ಪ್ರಾಮುಖ್ಯವಾಗಿತ್ತು.—ಮತ್ತಾಯ 19:16-22.
ಪರಿಸ್ಥಿತಿಯು ಬದಲಾಗಿಲ್ಲ. ಮೆಸ್ಸೀಯ ಸಂಬಂಧಿತ ರಾಜನ ಒಬ್ಬ ನೈಜ ಹಿಂಬಾಲಕನಾಗುವುದು, ಭೂಸ್ವತ್ತುಗಳನ್ನು ಸೇರಿಸಿ ಎಲ್ಲಕ್ಕಿಂತಲೂ ಉನ್ನತ ಸ್ಥಾನದಲ್ಲಿ ಆತ್ಮಿಕ ಅಭಿರುಚಿಗಳನ್ನು ಇಡುವುದೆಂದರ್ಥ. ಒಂದು ಪ್ರಾಪಂಚಿಕ ಹೊರನೋಟವಿರುವ ಯಾರಿಗಾದರೂ, ಇದು ಒಂದು ಪಂಥಾಹ್ವಾನವಾಗಿದೆ. ಉದಾಹರಣೆಗಾಗಿ, ಒಂದು ಪೂರ್ವ ದೇಶದಲ್ಲಿದ್ದ ಒಬ್ಬ ಮಿಷನೆರಿ ದಂಪತಿಗಳು ಒಬ್ಬ ಹೆಂಗಸಿನೊಂದಿಗೆ ಬೈಬಲಿನ ಕುರಿತಾಗಿ ಮಾತಾಡಿದರು. ಯೆಹೋವ ದೇವರು ಮತ್ತು ಆತನ ಪುತ್ರನಾದ ಯೇಸು ಕ್ರಿಸ್ತನ ಕುರಿತಾಗಿ ಆಕೆ ಹೆಚ್ಚನ್ನು ಕಲಿಯಲು ಇಷ್ಟಪಡುವಳೆಂದು ನಂಬುತ್ತಾ, ದಂಪತಿಗಳು ಆಕೆಗೆ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ನೀಡಿದರು. ಅವಳು ಹೇಗೆ ಪ್ರತಿಕ್ರಿಯಿಸಿದಳು? “ಈ ಪತ್ರಿಕೆಗಳು ನನಗೆ ಹೆಚ್ಚು ಹಣವನ್ನು ಸಂಪಾದಿಸಲು ಸಹಾಯ ಮಾಡುವವೊ?” ಎಂದು ಆಕೆ ಕೇಳಿದಳು. ಆ ಹೆಂಗಸು, ಆತ್ಮಿಕ ವಿಷಯಗಳಿಗಿಂತಲೂ ಹೆಚ್ಚಾಗಿ ಪ್ರಾಪಂಚಿಕ ವಿಷಯಗಳಲ್ಲಿ ಆಸಕ್ತಳಾಗಿದ್ದಳು.
ಅದೇ ದಂಪತಿಗಳು ಒಬ್ಬ ಯುವ ಪುರುಷನೊಂದಿಗೆ ಬೈಬಲನ್ನು ಅಭ್ಯಾಸಿಸಿದರು. ಅವನು ರಾಜ್ಯ ಸಭಾಗೃಹದಲ್ಲಿನ ಕೂಟಗಳಿಗೆ ಹಾಜರಾಗಲು ಆರಂಭಿಸಿದನು. “ನೀನು ನಿನ್ನ ಸಮಯವನ್ನು ಹಾಳು ಮಾಡುತ್ತಿರುವಿ,” ಎಂದು ಅವನ ಹೆತ್ತವರು ಅವನಿಗೆ ಹೇಳಿದರು. “ನೀನು ಸಾಯಂಕಾಲದಲ್ಲಿ ಇನ್ನೊಂದು ಉದ್ಯೋಗವನ್ನು ಪಡೆದು, ಹೆಚ್ಚು ಹಣವನ್ನು ಸಂಪಾದಿಸಬೇಕು.” ಮೆಸ್ಸೀಯ ಸಂಬಂಧಿತ ರಾಜನ ಕುರಿತಾಗಿ ಕಲಿಯುವುದಕ್ಕಿಂತ ಪ್ರಾಪಂಚಿಕ ವಿಷಯಗಳನ್ನು ಮುಂದೆ ಹಾಕುವಂತೆ ಹೆತ್ತವರು ತಮ್ಮ ಮಕ್ಕಳಿಗೆ ಪ್ರೋತ್ಸಾಹಿಸುವಾಗ ಅದು ಎಷ್ಟು ವಿಷಾದಕರ! “ಅಧಿಪತಿಯಲ್ಲಿ ಎಷ್ಟೇ ಐಶ್ವರ್ಯವಿದ್ದರೂ ಹತ್ತು ಸಾವಿರ ವರ್ಷಗಳ ಜೀವಿತವನ್ನು ಖರೀದಿಸಲು ಸಾಧ್ಯವಿಲ್ಲ,” ಎಂದು ಒಂದು ಚೈನೀಸ್ ಗಾದೆಯು ಹೇಳುತ್ತದೆ.
ಮೆಸ್ಸೀಯ ಸಂಬಂಧಿತ ರಾಜನ ಕುರಿತಾಗಿ ಕಲಿಯುವುದು ಮತ್ತು ಆತನನ್ನು ಹಿಂಬಾಲಿಸುವುದು, ಹಣದಾಸೆಯನ್ನು ಅನುಮತಿಸುವುದಿಲ್ಲವೆಂದು ಅನೇಕರು ಈಗ ಗ್ರಹಿಸಿದ್ದಾರೆ. ಉಚ್ಚ ಸಂಪಾದನೆಗಳಿರುವ ತನ್ನ ಸ್ವಂತ ವ್ಯಾಪಾರವನ್ನು ಹೊಂದಿದ್ದ, ಯೆಹೋವನ ಸಾಕ್ಷಿಯೊಬ್ಬಳು ಹೇಳಿದ್ದು: “ತುಂಬ ಹಣವನ್ನು ಹೊಂದಿರುವುದು ತುಂಬ ಆಹ್ಲಾದಕರವಾದರೂ, ಆವಶ್ಯಕವಲ್ಲ. ಒಬ್ಬ ವ್ಯಕ್ತಿಯನ್ನು ಸಂತೋಷಪಡಿಸುವಂತಹದ್ದು ಹಣವಲ್ಲ.” ಈಗ ಆಕೆ ವಾಚ್ ಟವರ್ ಸೊಸೈಟಿಯ ಯೂರೋಪಿಯನ್ ಬ್ರಾಂಚ್ನಲ್ಲಿ ಬೆತೆಲ್ ಕುಟುಂಬದ ಒಬ್ಬ ಸದಸ್ಯಳಾಗಿದ್ದಾಳೆ.
“ಯೆಹೂದ್ಯರ ಭಯ”
ಯೆಹೂದ್ಯರು ಯೇಸುವನ್ನು ಮೆಸ್ಸೀಯನನ್ನಾಗಿ ಸ್ವೀಕರಿಸದಿದ್ದ ಇನ್ನೊಂದು ಕಾರಣ ಮನುಷ್ಯನ ಭಯವಾಗಿತ್ತು. ಆತನ ಮೆಸ್ಸೀಯತ್ವವನ್ನು ಬಹಿರಂಗವಾಗಿ ಒಪ್ಪಿಕೊಳ್ಳುವುದು, ಅವರ ಖ್ಯಾತಿಯನ್ನು ಗಂಡಾಂತರದಲ್ಲಿ ಹಾಕುವುದನ್ನು ಅರ್ಥೈಸಿತು. ಕೆಲವರಿಗಾದರೋ ಆ ಬೆಲೆಯು ತೀರ ಹೆಚ್ಚಾಗಿತ್ತು. ಸನ್ಹೇದ್ರಿನ್ ಎಂದು ಕರೆಯಲ್ಪಡುವ ಯೆಹೂದಿ ಉಚ್ಚ ನ್ಯಾಯಾಲಯದ ಒಬ್ಬ ಸದಸ್ಯನಾಗಿದ್ದ ನಿಕೊದೇಮನನ್ನು ಪರಿಗಣಿಸಿರಿ. ಯೇಸುವಿನ ಸೂಚಕಕಾರ್ಯಗಳು ಮತ್ತು ಬೋಧನೆಗಳಿಂದ ಪ್ರಭಾವಿತನಾಗಿ, ಅವನು ಒಪ್ಪಿಕೊಂಡದ್ದು: “ಗುರುವೇ, ನೀನು ದೇವರ ಕಡೆಯಿಂದ ಬಂದ ಬೋಧಕನೆಂದು ಬಲ್ಲೆವು. ನೀನು ಮಾಡುವಂಥ ಈ ಸೂಚಕಕಾರ್ಯಗಳನ್ನು ದೇವರ ಸಹಾಯವಿಲ್ಲದೆ ಮಾಡುವದು ಯಾರಿಂದಲೂ ಆಗದು.” ಆದರೂ ನಿಕೊದೇಮನು, ಬಹುಶಃ ಇತರ ಯೆಹೂದ್ಯರಿಂದ ಗುರುತಿಸಲ್ಪಡುವುದನ್ನು ತಪ್ಪಿಸಲು, ರಾತ್ರಿಯ ಸಮಯದಲ್ಲಿ ಯೇಸುವನ್ನು ಭೇಟಿಮಾಡಿದನು.—ಯೋಹಾನ 3:1, 2.
ಯೇಸು ಮಾತಾಡುವುದನ್ನು ಕೇಳಿದ ಅನೇಕರಿಗೆ, ದೇವರ ಮೆಚ್ಚಿಕೆಗಿಂತ, ಮನುಷ್ಯರ ಮೆಚ್ಚಿಕೆಯು ಹೆಚ್ಚು ಪ್ರಾಮುಖ್ಯವಾಗಿತ್ತು. (ಯೋಹಾನ 5:44) ಸಾ.ಶ. 32ರಲ್ಲಿ ಪರ್ಣಶಾಲೆಗಳ ಜಾತ್ರೆಗಾಗಿ ಯೇಸು ಯೆರೂಸಲೇಮಿನಲ್ಲಿದ್ದಾಗ, “ಜನರ ಗುಂಪುಗಳಲ್ಲಿ ಆತನ ವಿಷಯವಾಗಿ ಬಹಳ ಗುಜುಗುಜು ಮಾತು ನಡೆಯುತ್ತಿತ್ತು.” (ಓರೆಅಕ್ಷರಗಳು ನಮ್ಮವು.) “ಯೆಹೂದ್ಯರ ಭಯದಿಂದ” ಯಾರೂ ಯೇಸುವಿನ ಕುರಿತಾಗಿ ಮುಕ್ತವಾಗಿ ಮಾತಾಡಲಿಲ್ಲ. (ಯೋಹಾನ 7:10-13) ಯಾರ ಕುರುಡುತನವನ್ನು ಯೇಸು ಗುಣಪಡಿಸಿದ್ದನೊ, ಆ ಮನುಷ್ಯನ ಹೆತ್ತವರು ಕೂಡ, ಆ ಅದ್ಭುತಕಾರ್ಯವು ದೇವರ ಪ್ರತಿನಿಧಿಯಿಂದ ಬಂದಿರುವುದಾಗಿ ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಅವರೂ “ಯೆಹೂದ್ಯರಿಗೆ ಅಂಜಿದ”ರು.—ಯೋಹಾನ 9:13-23.
ಇಂದು, ಯೇಸು ಈಗ ಸ್ವರ್ಗದಲ್ಲಿ ಮೆಸ್ಸೀಯ ಸಂಬಂಧಿತ ರಾಜನೋಪಾದಿ ಆಳುತ್ತಿದ್ದಾನೆಂಬುದನ್ನು ಕೆಲವರು ಗ್ರಹಿಸುತ್ತಾರೆ, ಆದರೆ ಅವರು ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಹೆದರುತ್ತಾರೆ. ಇತರರೊಂದಿಗಿನ ತಮ್ಮ ನಿಲುವನ್ನು ಕಳೆದುಕೊಳ್ಳುವ ಬೆಲೆಯು ಅವರಿಗೆ ತೀರ ಹೆಚ್ಚಾಗಿದೆ. ದೃಷ್ಟಾಂತಕ್ಕಾಗಿ, ಜರ್ಮನಿಯಲ್ಲಿ, ಯೆಹೋವನ ಸಾಕ್ಷಿಯೊಬ್ಬನು ಒಬ್ಬ ಮನುಷ್ಯನೊಂದಿಗೆ ಒಂದು ಬೈಬಲ್ ಚರ್ಚೆಯನ್ನು ನಡೆಸಿದ್ದನು. ಆ ಮನುಷ್ಯನು ಒಪ್ಪಿಕೊಂಡದ್ದು: “ಸಾಕ್ಷಿಗಳಾದ ನೀವು ಬೈಬಲಿನ ಕುರಿತಾಗಿ ಏನನ್ನು ಕಲಿಸುತ್ತೀರೊ ಅದು ಸತ್ಯವಾಗಿದೆ. ಆದರೆ ನಾನು ಇವತ್ತು ಒಬ್ಬ ಸಾಕ್ಷಿಯಾದರೆ, ನಾಳೆಯೊಳಗೆ ಎಲ್ಲರಿಗೆ ಅದರ ಕುರಿತಾಗಿ ತಿಳಿಯುವುದು. ಕೆಲಸದ ಸ್ಥಳದಲ್ಲಿ, ನೆರೆಹೊರೆಯಲ್ಲಿ, ಮತ್ತು ನಾನು ಹಾಗೂ ನನ್ನ ಕುಟುಂಬವು ಸೇರಿರುವ ಕ್ಲಬ್ನಲ್ಲಿ, ನನ್ನ ಕುರಿತಾಗಿ ಅವರು ಏನು ನೆನಸುವರು? ನಾನು ಅದನ್ನು ಸಹಿಸಲಾರೆ.”
ಮನುಷ್ಯನ ಭಯವನ್ನು ಯಾವುದು ಉಂಟುಮಾಡುತ್ತದೆ? ಅಹಂಕಾರ, ಕುಟುಂಬ ಮತ್ತು ಸ್ನೇಹಿತರ ನಡುವೆ ಜನಪ್ರಿಯತೆಯ ಪ್ರೀತಿ, ಕುಚೇಷ್ಟೆ ಮತ್ತು ಅವಮಾನದ ಭಯ, ಬಹುಸಂಖ್ಯಾಕರಿಗಿಂತ ಭಿನ್ನರಾಗಿರುವುದರ ಕುರಿತಾದ ವ್ಯಾಕುಲತೆ. ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಲು ಆರಂಭಿಸುವವರಿಗೆ ವಿಶೇಷವಾಗಿ ಅಂತಹ ಭಾವನೆಗಳು ಒಂದು ಪರೀಕ್ಷೆಯಾಗಿ ಪರಿಣಮಿಸುತ್ತವೆ. ಉದಾಹರಣೆಗಾಗಿ, ಯೇಸು ಕ್ರಿಸ್ತನ ಆಳ್ವಿಕೆಯ ಕೆಳಗೆ ಮೆಸ್ಸೀಯ ಸಂಬಂಧಿತ ರಾಜ್ಯವು ಭೂಮಿಯ ಮೇಲೆ ಸ್ಥಾಪಿಸಲಿರುವ ಪ್ರಮೋದವನದ ಕುರಿತಾಗಿ ಕಲಿಯಲು ಒಬ್ಬ ಯುವ ಸ್ತ್ರೀಯು ರೋಮಾಂಚಿತಳಾದಳು. ಆದರೆ ಆಕೆ ಒಬ್ಬ ಅತ್ಯುತ್ಸಾಹಿ ಡಿಸ್ಕೊ ಅಭಿಮಾನಿಯಾಗಿದ್ದಳು, ಮತ್ತು ಮನುಷ್ಯನ ಭಯವು, ಈ ನಿರೀಕ್ಷೆಯ ಕುರಿತಾಗಿ ಇತರರೊಂದಿಗೆ ಮಾತಾಡುವುದರಿಂದ ಆಕೆಯನ್ನು ಅಡ್ಡಗಟ್ಟಿತು. ಕೊನೆಗೆ, ಆಕೆ ಬೈಬಲಿನ ಕುರಿತಾಗಿ ಮುಚ್ಚುಮರೆಯಿಲ್ಲದೆ ಮಾತಾಡಲು ಧೈರ್ಯ ತೆಗೆದುಕೊಂಡಳು. ಆಕೆಯ ಡಿಸ್ಕೊ ಸ್ನೇಹಿತರು ಆಕೆಯನ್ನು ತಿರಸ್ಕರಿಸಿದರು, ಆದರೆ ಆಕೆಯ ಗಂಡ ಮತ್ತು ಆಕೆಯ ಹೆತ್ತವರು ಆಸಕ್ತಿಯನ್ನು ತೋರಿಸಿದರು. ಆ ಸ್ತ್ರೀ ಮತ್ತು ಆಕೆಯ ತಾಯಿ ಕಟ್ಟಕಡೆಗೆ ದೀಕ್ಷಾಸ್ನಾನ ಹೊಂದಿದರು, ಮತ್ತು ಆಕೆಯ ಗಂಡ ಮತ್ತು ಆಕೆಯ ತಂದೆ ಬೈಬಲನ್ನು ಅಭ್ಯಾಸಿಸಲು ಆರಂಭಿಸಿದರು. ಮನುಷ್ಯನ ಭಯವನ್ನು ಜಯಿಸಿದುದಕ್ಕಾಗಿ ಎಂತಹ ಒಂದು ಬಹುಮಾನ!
ನೀವು ನಿಜವಾಗಿ ಮೆಸ್ಸೀಯನನ್ನು ಅಂಗೀಕರಿಸುತ್ತೀರೊ?
ಯೇಸು ಯಾತನಾ ಕಂಬದ ಮೇಲೆ ಸಾಯುತ್ತಿದ್ದಾಗ, ಆತನ ಶಿಷ್ಯರಲ್ಲಿ ಕೆಲವರು ಉಪಸ್ಥಿತರಿದ್ದರು. ಅವರು ಆತನನ್ನು ಮುಂತಿಳಿಸಲ್ಪಟ್ಟಿದ್ದ ಮೆಸ್ಸೀಯನನ್ನಾಗಿ ಅಂಗೀಕರಿಸಿದ್ದರು. ಸಾಂಕೇತಿಕವಾಗಿ, ಇನ್ನೂ ಒಂದು ಸೂಚಕಕಾರ್ಯಕ್ಕಾಗಿ ತಗಾದೆಮಾಡುತ್ತಿದ್ದ ಯೆಹೂದಿ ಅಧಿಪತಿಗಳೂ ಉಪಸ್ಥಿತರಿದ್ದರು. “ಅವನು ದೇವರಾರಿಸಿಕೊಂಡ ಕ್ರಿಸ್ತನು [ಅಥವಾ ಮೆಸ್ಸೀಯನು] ಆಗಿದ್ದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ.” (ಲೂಕ 23:35) ಅವರು ಒಂದು ಸೂಚಕಕಾರ್ಯಕ್ಕಾಗಿ ಕೇಳುವುದನ್ನು ಎಂದೂ ನಿಲ್ಲಿಸದೆ ಇರಲಿದ್ದರೊ? ಯೇಸು ಡಸನುಗಟ್ಟಲೆ ಅದ್ಭುತಕಾರ್ಯಗಳನ್ನು ನಡೆಸಿದ್ದನು. ಇದಕ್ಕೆ ಕೂಡಿಸಿ, ಆತನ ಜನನ, ಶುಶ್ರೂಷೆ, ವಿಚಾರಣೆ, ಮರಣ, ಮತ್ತು ಪುನರುತ್ಥಾನವು ಅನೇಕ ಹೀಬ್ರು ಶಾಸ್ತ್ರದ ಪ್ರವಾದನೆಗಳನ್ನು ನೆರವೇರಿಸಿದವು.—ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತವಾದ “ಆಲ್ ಸ್ಕ್ರಿಪ್ಚರ್ ಈಸ್ ಇನ್ಸ್ಪಾಯರ್ಡ್ ಆಫ್ ಗಾಡ್ ಆ್ಯಂಡ್ ಬೆನಿಫಿಷಲ್” ಎಂಬ ಪುಸ್ತಕದ 343-4ನೆಯ ಪುಟಗಳನ್ನು ನೋಡಿರಿ.
ದಾರಿಹೋಕರು, ಯೇಸುವಿನ ಮೆಸ್ಸೀಯತ್ವದ ರುಜುವಾತನ್ನು ತಿರಸ್ಕರಿಸಿದವರಾಗಿ ಆತನನ್ನು ನಿಂದಿಸಿದರು. (ಮತ್ತಾಯ 27:39, 40) ಸೈನಿಕರು ಪ್ರಾಪಂಚಿಕ ಭಾವದಿಂದ, ಆತನ ಒಳಉಡುಪಿಗಾಗಿ ಚೀಟಿಹಾಕಿ, ಯೇಸುವಿನ ಬಟ್ಟೆಯನ್ನು ತಮ್ಮೊಳಗೆ ಪಾಲುಮಾಡಿಕೊಂಡರು. (ಯೋಹಾನ 19:23, 24) ಕೆಲವು ವಿದ್ಯಮಾನಗಳಲ್ಲಿ ಮನುಷ್ಯನ ಭಯವು ಒಂದು ಪಾತ್ರವನ್ನು ವಹಿಸಿತು. ದೃಷ್ಟಾಂತಕ್ಕಾಗಿ, ಸನ್ಹೇದ್ರಿನಿನ ಒಬ್ಬ ಸದಸ್ಯನಾಗಿದ್ದ ಅರಿಮಥಾಯದ ಯೋಸೇಫನನ್ನು ಪರಿಗಣಿಸಿರಿ. ಅವನು “ಯೆಹೂದ್ಯರ ಭಯದಿಂದ ಗುಪ್ತವಾಗಿ ಯೇಸುವಿನ ಶಿಷ್ಯನಾಗಿದ್ದ”ನು. ಮೆಸ್ಸೀಯನ ಮರಣದ ನಂತರ, ಯೋಸೇಫ ಮತ್ತು ನಿಕೊದೇಮರು ಯೇಸುವಿನ ದೇಹದ ಕಾಳಜಿವಹಿಸಿದರು. ಹೀಗೆ ಯೋಸೇಫನು ಮನುಷ್ಯನ ಭಯವನ್ನು ಜಯಿಸಿದನು.—ಯೋಹಾನ 19:38-40.
ನೀವು ಪ್ರಥಮ ಶತಮಾನದಲ್ಲಿ ಜೀವಿಸುತ್ತಿದ್ದಲ್ಲಿ, ನೀವು ಯೇಸುವನ್ನು ಮೆಸ್ಸೀಯನೋಪಾದಿ ಅಂಗೀಕರಿಸುತ್ತಿದ್ದಿರೊ? ಹಾಗೆ ಮಾಡುವುದು, ನೀವು ಶಾಸ್ತ್ರೀಯ ರುಜುವಾತನ್ನು ಸ್ವೀಕರಿಸುವುದು, ಪ್ರಾಪಂಚಿಕ ಆಲೋಚನೆಯನ್ನು ತಿರಸ್ಕರಿಸುವುದು, ಮತ್ತು ಮನುಷ್ಯನ ಭಯಕ್ಕೆ ಬಲಿಬೀಳದಿರುವುದನ್ನು ಅವಶ್ಯಪಡಿಸುತ್ತಿತ್ತು. ಈ ಕಡೇ ದಿವಸಗಳಲ್ಲಿ, ನಮ್ಮಲ್ಲಿ ಪ್ರತಿಯೊಬ್ಬರು ಸ್ವತಃ ಹೀಗೆ ಕೇಳಿಕೊಳ್ಳಬೇಕು, ‘ನಾನು ಈಗ ಯೇಸುವನ್ನು ಸ್ವರ್ಗೀಯ ಮೆಸ್ಸೀಯ ಸಂಬಂಧಿತ ರಾಜನಾಗಿ ಅಂಗೀಕರಿಸುತ್ತೇನೊ?’ ಬೇಗನೆ ಆತನು ಭೂವ್ಯವಹಾರಗಳನ್ನು ವಹಿಸಿಕೊಳ್ಳುವನು. ಅದು ಸಂಭವಿಸುವಾಗ, ಯೇಸು ಕ್ರಿಸ್ತನನ್ನು ವಾಗ್ದತ್ತ ಮೆಸ್ಸೀಯನೋಪಾದಿ ನಿಜವಾಗಿ ಅಂಗೀಕರಿಸಿರುವವರ ನಡುವೆ ನೀವಿರುವಿರೊ?
[ಪುಟ 28 ರಲ್ಲಿರುವ ಚಿತ್ರ]
ಯೇಸು ಮೆಸ್ಸೀಯ ಸಂಬಂಧಿತ ರಾಜನಾಗಿದ್ದಾನೆಂಬ ರುಜುವಾತನ್ನೆಂದೂ ಉದ್ದೇಶಪೂರ್ವಕವಾಗಿ ಅಲಕ್ಷಿಸದಿರಿ
[ಪುಟ 31 ರಲ್ಲಿರುವ ಚಿತ್ರ]
ಮೆಸ್ಸೀಯನ ಕುರಿತಾಗಿ ಕಲಿಯುವುದು ಅನೇಕ ವೇಳೆ, ಇತರರು ಏನನ್ನು ಹೇಳಬಹುದೆಂಬುದರ ಕುರಿತಾದ ಭಯವನ್ನು ಜಯಿಸುವುದನ್ನು ಅರ್ಥೈಸುತ್ತದೆ