ನೈಸರ್ಗಿಕ ವಿಪತ್ತುಗಳು ಹೊಡೆಯುವಾಗ
ಅಕ್ರಾ, ಘಾನ, ಜುಲೈ 4, 1995: ಹೆಚ್ಚುಕಡಮೆ 60 ವರ್ಷಗಳಲ್ಲೇ ಅತಿ ಹೆಚ್ಚು ಮಳೆಸುರಿತವು ಕಠಿನ ನೆರೆಯನ್ನು ಉಂಟುಮಾಡಿತು. ಸುಮಾರು 2,00,000 ಜನರು ಸಕಲವನ್ನೂ ಕಳೆದುಕೊಂಡರು, 5,00,000 ಜನರು ತಮ್ಮ ಮನೆಗಳಿಗೆ ಪ್ರವೇಶವನ್ನು ಕಳೆದುಕೊಂಡರು, ಮತ್ತು 22 ಮಂದಿ ಪ್ರಾಣನಷ್ಟಪಟ್ಟರು.
ಸಾನ್ ಆ್ಯಂಜಲೊ, ಟೆಕ್ಸಸ್, ಅಮೆರಿಕ, ಮೇ 28, 1995: ಚಂಡಮಾರುತ ಮತ್ತು ಆಲಿಕಲ್ಲಮಳೆಯು, ಈ 90,000 ನಿವಾಸಿಗಳ ನಗರವನ್ನು ಧ್ವಂಸಮಾಡಿ, 12 ಕೋಟಿ (ಅಮೆರಿಕನ್) ಡಾಲರುಗಳ ಹಾನಿಯನ್ನು ಉಂಟುಮಾಡಿತೆಂದು ಅಂದಾಜಿಸಲಾಗಿದೆ.
ಕೋಬೀ, ಜಪಾನ್, ಜನವರಿ 17, 1995: ಕೇವಲ 20 ಸೆಕೆಂಡ್ಗಳ ಅವಧಿಯ ಒಂದು ಭೂಕಂಪವು, ಸಾವಿರಾರು ಜನರನ್ನು ಕೊಂದು, ಹತ್ತಾರು ಸಾವಿರ ಮಂದಿಯನ್ನು ಘಾಸಿಗೊಳಿಸಿ, ನೂರಾರುಸಾವಿರ ಮಂದಿಯನ್ನು ಮನೆಯಿಲ್ಲದವರನ್ನಾಗಿ ಮಾಡಿತು.
ನಾವು ವಿಪತ್ತುಗಳ ಯುಗ ಎಂದು ಯಾವುದನ್ನು ಕರೆಯಬಹುದೊ ಅದರಲ್ಲಿ ಜೀವಿಸುತ್ತಿದ್ದೇವೆ. ವಿಶ್ವ ಸಂಸ್ಥೆಯ ಒಂದು ವರದಿಯು, 1963-92ರ 30 ವರ್ಷಗಳ ಅವಧಿಯಲ್ಲಿ, ವಿಪತ್ತುಗಳಿಂದ ಕೊಲ್ಲಲ್ಪಟ್ಟ, ಘಾಸಿಗೊಳಿಸಲ್ಪಟ್ಟ ಅಥವಾ ಸ್ಥಳಾಂತರಿಸಲ್ಪಟ್ಟ ಜನರ ಸಂಖ್ಯೆಯು ಪ್ರತಿ ವರ್ಷ ಸರಾಸರಿ 6 ಪ್ರತಿಶತ ಹೆಚ್ಚಾಯಿತೆಂದು ಪ್ರಕಟಿಸುತ್ತದೆ. ಈ ಅಪ್ರಸನ್ನ ಪರಿಸ್ಥಿತಿಯು, 1990ಗಳನ್ನು ವಿಶ್ವ ಸಂಸ್ಥೆಯು “ನೈಸರ್ಗಿಕ ವಿಪತ್ತುಗಳ ಕಡಿಮೆಗೊಳಿಸುವಿಕೆಯ ಅಂತಾರಾಷ್ಟ್ರೀಯ ದಶಕ”ವಾಗಿ ಹೆಸರಿಸುವಂತೆ ಮಾಡಿತು.
ಚಂಡಮಾರುತ, ಜ್ವಾಲಾಮುಖಿಯ ಹೊರಚಿಮ್ಮುವಿಕೆ ಅಥವಾ ಭೂಕಂಪದಂತಹ ನೈಸರ್ಗಿಕ ಶಕ್ತಿಯೊಂದು ಸದಾ ವಿಪತ್ತನ್ನು ತರುವುದಿಲ್ಲ ನಿಶ್ಚಯ. ಇಂತಹ ನೂರಾರು ಘಟನೆಗಳು ಮನುಷ್ಯರಿಗೆ ಯಾವುದೇ ಹಾನಿ ಮಾಡದೆ ಪ್ರತಿ ವರ್ಷ ಸಂಭವಿಸುತ್ತವೆ. ಆದರೆ ಜೀವ ಮತ್ತು ಸ್ವತ್ತಿನ ಭಾರಿ ನಷ್ಟವು ಒಳಗೊಂಡಿರುವಾಗ, ಅದನ್ನು ವಿಪತ್ತು ಎಂದು ಯೋಗ್ಯವಾಗಿಯೇ ಕರೆಯಲಾಗುತ್ತದೆ.
ನೈಸರ್ಗಿಕ ವಿಪತ್ತುಗಳಲ್ಲಿ ವೃದ್ಧಿಯು ಅನಿವಾರ್ಯವೆಂದು ತೋರಿಬರುತ್ತದೆ. ನೈಸರ್ಗಿಕ ವಿಪತ್ತುಗಳು—ದೈವಘಟನೆಗಳೊ ಮಾನುಷ ಘಟನೆಗಳೊ? (ಇಂಗ್ಲಿಷ್) ಎಂಬ ಪುಸ್ತಕವು ಗಮನಿಸುವುದು: “ಜನರು ತಮ್ಮ ಪರಿಸರವನ್ನು, ಅದು ಕೆಲವು ವಿಪತ್ತುಗಳಿಗೆ ಹೆಚ್ಚು ಒಲವು ಉಳ್ಳದ್ದಾಗಿ ಇರುವಂತೆ ಬದಲಾಯಿಸುತ್ತಿದ್ದಾರೆ, ಮತ್ತು ಈ ಹಾನಿಗಳಿಗೆ ತಮ್ಮನ್ನು ಹೆಚ್ಚು ಸುಲಭಭೇದ್ಯರಾಗಿ ಮಾಡಿಕೊಳ್ಳುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ.” ಆ ಪುಸ್ತಕವು ಒಂದು ಕಲ್ಪನಾ ಉದಾಹರಣೆಯನ್ನು ನೀಡುತ್ತದೆ: “ಒಂದು ಕಡಿದಾದ ಕಮರಿಯ ಮಗ್ಗುಲಲ್ಲಿರುವ ಭಾರವಾದ ಮಣ್ಣಿಟ್ಟಿಗೆಯ ಜೋಪಡಿಗಳ ಶಹರಿನಲ್ಲಿ ಒಂದು ಚಿಕ್ಕ ಭೂಕಂಪವು, ಮಾನವ ಮರಣ ಮತ್ತು ಕಷ್ಟಾನುಭವಗಳ ಸಂಬಂಧದಲ್ಲಿ ವಿಪತ್ತಾಗಿ ಪರಿಣಮಿಸಬಹುದು. ಆದರೆ ಈ ವಿಪತ್ತು ಹೆಚ್ಚಾಗಿ ಬರುವುದು ಭೂಕಂಪನಗಳ ಪರಿಣಾಮವಾಗಿಯೊ ಅಥವಾ ಜನರು ಅಂತಹ ಅಪಾಯಕಾರಿ ಸ್ಥಳಗಳಲ್ಲಿ ಅಷ್ಟು ಅಪಾಯಕರವಾದ ಮನೆಗಳಲ್ಲಿ ವಾಸಿಸುತ್ತಿರುವ ಪರಿಣಾಮವಾಗಿಯೊ?”
ಬೈಬಲಿನ ವಿದ್ಯಾರ್ಥಿಗಳಿಗಾದರೊ, ನೈಸರ್ಗಿಕ ವಿಪತ್ತುಗಳಲ್ಲಿ ವೃದ್ಧಿಯು ಆಶ್ಚರ್ಯಜನಕರಾಗದಿರುವುದಕ್ಕೆ ಇನ್ನೂ ಒಂದು ಕಾರಣವಿದೆ. ಹೆಚ್ಚುಕಡಮೆ 2,000 ವರ್ಷಗಳ ಹಿಂದೆ ಯೇಸು ಕ್ರಿಸ್ತನು, “ವಿಷಯಗಳ ವ್ಯವಸ್ಥೆಯ ಸಮಾಪ್ತಿಯು” ಇತರ ವಿಷಯಗಳೊಂದಿಗೆ, “ಒಂದು ಸ್ಥಳದ ನಂತರ ಇನ್ನೊಂದರಲ್ಲಿ ಆಹಾರದ ಕೊರತೆಗಳು ಮತ್ತು ಭೂಕಂಪ”ಗಳಿಂದ ಗುರುತಿಸಲ್ಪಡುವುದು ಎಂದು ಮುಂತಿಳಿಸಿದನು. (ಮತ್ತಾಯ 24:3, 6-8, NW) “ಕಡೇ ದಿವಸಗಳಲ್ಲಿ” ಜನರು ಸ್ವಪ್ರೇಮಿಗಳೂ, ಧನಪ್ರೇಮಿಗಳೂ, ಸ್ವಾಭಾವಿಕವಾದ ಮಮತೆಯಿಲ್ಲದವರೂ, ಒಳ್ಳೆಯತನದ ಪ್ರೀತಿಯಿಲ್ಲದವರೂ ಆಗಿರುವರೆಂದೂ ಬೈಬಲು ಮುಂತಿಳಿಸಿತು.a (2 ತಿಮೊಥೆಯ 3:1-5) ಈ ಪ್ರವೃತ್ತಿಗಳು ಅನೇಕ ವೇಳೆ ಮನುಷ್ಯನನ್ನು, ಅವನು ತನ್ನ ಪರಿಸರದ ವಿರುದ್ಧವಾಗಿ ಕಾರ್ಯನಡೆಸುವಂತೆ ಮಾಡಿ, ಮಾನವರು ನೈಸರ್ಗಿಕ ಶಕ್ತಿಗಳಿಗೆ ಹೆಚ್ಚು ಸುಲಭಭೇದ್ಯರಾಗುವಂತೆ ಮಾಡುತ್ತವೆ. ಮಾನವ ನಿರ್ಮಿತ ವಿಪತ್ತುಗಳು, ನಮ್ಮಲ್ಲಿ ಹೆಚ್ಚಿನವರು ಎಲ್ಲಿ ಬದುಕಬೇಕಾಗುತ್ತದೊ ಆ ಪ್ರೀತಿರಹಿತ ಸಮಾಜದ ಒಂದು ಉಪಶಾಖೆಯೂ ಹೌದು.
ನಮ್ಮ ಭೂಗ್ರಹವು ಹೆಚ್ಚು ದಟ್ಟವಾಗಿ ಜನಸಂಖ್ಯಾಭರಿತವಾದಂತೆ, ಮಾನವ ವರ್ತನೆಯು ಜನರನ್ನು ಹೆಚ್ಚು ಅಪಾಯಕ್ಕೆ ಒಳಪಡಿಸಿದಂತೆ, ಮತ್ತು ಭೂಮಿಯ ಸಂಪನ್ಮೂಲಗಳು ಹೆಚ್ಚೆಚ್ಚಾಗಿ ತಪ್ಪಾಗಿ ನಿರ್ವಹಿಸಲ್ಪಟ್ಟಂತೆ, ವಿಪತ್ತುಗಳು ಮನುಷ್ಯನನ್ನು ಪೀಡಿಸುತ್ತ ಹೋಗುವುವು. ಪರಿಹಾರವನ್ನು ಒದಗಿಸುವುದು, ಮುಂದಿನ ಲೇಖನವು ತೋರಿಸುವಂತೆ, ಪಂಥಾಹ್ವಾನಗಳನ್ನು ಒಡ್ಡುತ್ತದೆ.
[ಪಾದಟಿಪ್ಪಣಿ]
a ಕಡೆಯ ದಿವಸಗಳ ಸೂಚನೆಯ ಸಂಬಂಧದಲ್ಲಿ ಹೆಚ್ಚಿನ ಮಾಹಿತಿಯ ಬಗೆಗೆ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಪ್ರಕಾಶಿತ ಪುಸ್ತಕವಾದ ನಿತ್ಯಜೀವಕ್ಕೆ ನಡೆಸುವ ಜ್ಞಾನ, ಪುಟಗಳು 98-107ನ್ನು ನೋಡಿ.
[ಪುಟ 3 ರಲ್ಲಿರುವ ಚಿತ್ರ ಕೃಪೆ]
Top: Information Services Department, Ghana; right: San Angelo Standard-Times
[ಪುಟ 2 ರಲ್ಲಿರುವ ಚಿತ್ರ ಕೃಪೆ]
COVER: Maxie Roberts/Courtesy of THE STATE