ಯೇಸುವಿನ ಕುರಿತ ಸತ್ಯ
ಯೇಸು ಯಾರಾಗಿದ್ದನು ಮತ್ತು ಏನನ್ನು ಸಾಧಿಸಿದನು ಎಂಬ ವಿಷಯದಲ್ಲಿ ವಿಚಾರ ಸರಣಿಗಳಿಗೂ ಊಹಾಪೋಹಗಳಿಗೂ ಅಂತ್ಯವಿಲ್ಲದಿರುವಂತೆ ಕಂಡುಬರುತ್ತದೆ. ಆದರೆ ಸ್ವತಃ ಬೈಬಲಿನ ವಿಷಯದಲ್ಲೇನು? ಯೇಸು ಕ್ರಿಸ್ತನ ಕುರಿತು ನಮಗೆ ಅದೇನನ್ನುತ್ತದೆ?
ಬೈಬಲ್ ಹೇಳುವ ವಿಷಯ
ಬೈಬಲನ್ನು ಜಾಗರೂಕತೆಯಿಂದ ಓದುವ ಮೂಲಕ, ನೀವು ಈ ಪ್ರಮುಖ ಅಂಶಗಳನ್ನು ಗಮನಿಸುವಿರಿ:
◻ ಯೇಸುವು ದೇವರ ಏಕಜಾತ ಪುತ್ರನು, ಸರ್ವಸೃಷ್ಟಿಯ ಜ್ಯೇಷ್ಠನು.—ಯೋಹಾನ 3:16; ಕೊಲೊಸ್ಸೆ 1:15.
◻ ಸುಮಾರು ಎರಡು ಸಹಸ್ರ ವರುಷಗಳ ಹಿಂದೆ, ದೇವರು ಯೇಸುವಿನ ಜೀವವನ್ನು, ಅವನು ಮನುಷ್ಯನಾಗಿ ಹುಟ್ಟುವಂತೆ ಯೆಹೂದಿ ಕನ್ನಿಕೆಯೊಬ್ಬಳ ಗರ್ಭಕ್ಕೆ ಸ್ಥಳಾಂತರಿಸಿದನು.—ಮತ್ತಾಯ 1:18; ಯೋಹಾನ 1:14.
◻ ಯೇಸುವು ಕೇವಲ ಒಬ್ಬ ಸತ್ಪುರುಷನಿಗಿಂತ ಹೆಚ್ಚಿನವನಾಗಿದ್ದನು. ಅವನು ಪ್ರತಿಯೊಂದು ವಿಧದಲ್ಲಿಯೂ ತನ್ನ ತಂದೆಯಾದ ಯೆಹೋವ ದೇವರ ಸುಂದರವಾದ ವ್ಯಕ್ತಿತ್ವದ ನಿಷ್ಕೃಷ್ಟ ಪ್ರತಿಬಿಂಬವಾಗಿದ್ದನು.—ಯೋಹಾನ 14:9, 10; ಇಬ್ರಿಯ 1:3.
◻ ತನ್ನ ಭೂಶುಶ್ರೂಷೆಯ ಸಮಯದಲ್ಲಿ, ಯೇಸು ಶೋಷಿತರ ಆವಶ್ಯಕತೆಗಳಿಗೆ ಪ್ರೀತಿಯಿಂದ ಲಕ್ಷ್ಯಕೊಟ್ಟನು. ಅವನು ರೋಗಿಗಳನ್ನು ಅದ್ಭುತಕರವಾಗಿ ಗುಣಪಡಿಸಿ, ಮೃತರನ್ನೂ ಎಬ್ಬಿಸಿದನು.—ಮತ್ತಾಯ 11:4-6; ಯೋಹಾನ 11:5-45.
◻ ಯೇಸುವು ದೇವರ ರಾಜ್ಯವನ್ನು ವ್ಯಥಿತ ಮಾನವಕುಲಕ್ಕಿರುವ ಏಕಮಾತ್ರ ನಿರೀಕ್ಷೆಯಾಗಿ ಘೋಷಿಸಿದನು, ಮತ್ತು ಈ ಸಾರುವ ಕೆಲಸವನ್ನು ಮುಂದುವರಿಸುವರೆ ಅವನು ತನ್ನ ಶಿಷ್ಯರನ್ನು ತರಬೇತುಗೊಳಿಸಿದನು.—ಮತ್ತಾಯ 4:17; 10:5-7; 28:19, 20.
◻ ಸಾ.ಶ. 33ರ ನೈಸಾನ್ 14 (ಸುಮಾರು ಎಪ್ರಿಲ್ 1)ರಂದು, ಯೇಸುವನ್ನು ರಾಜದ್ರೋಹದ ತಪ್ಪಾರೋಪದ ಮೇಲೆ ದಸ್ತಗಿರಿಮಾಡಿ, ವಿಚಾರಣೆಗೊಳಪಡಿಸಿ, ಶಿಕ್ಷೆನೀಡಿ, ವಧಿಸಲಾಯಿತು.—ಮತ್ತಾಯ 26:18-20, 48-ಮತ್ತಾಯ 26:48 ರಿಂದ 27:50.
◻ ಯೇಸುವಿನ ಮರಣವು ಪ್ರಾಯಶ್ಚಿತ್ತದ ಕಾರ್ಯವನ್ನು ಮಾಡಿ, ವಿಶ್ವಾಸವಿಡುವ ಮಾನವರನ್ನು ಅವರ ಪಾಪಮಯ ಸ್ಥಿತಿಯಿಂದ ಬಿಡುಗಡೆಮಾಡುತ್ತದೆ. ಮತ್ತು ಹೀಗೆ, ಅವನಲ್ಲಿ ನಂಬಿಕೆಯನ್ನಿಡುವ ಎಲ್ಲರಿಗೆ ನಿತ್ಯಜೀವದ ಮಾರ್ಗವನ್ನು ತೆರೆಯುತ್ತದೆ.—ರೋಮಾಪುರ 3:23, 24; 1 ಯೋಹಾನ 2:2.
◻ ನೈಸಾನ್ 16ರಂದು ಯೇಸು ಪುನರುತ್ಥಾನಗೊಳಿಸಲ್ಪಟ್ಟನು, ಮತ್ತು ಆ ಬಳಿಕ ಸ್ವಲ್ಪದರಲ್ಲಿಯೇ ಅವನು ತನ್ನ ಪರಿಪೂರ್ಣ ಮಾನವ ಜೀವದ ಪ್ರಾಯಶ್ಚಿತ್ತ ಬೆಲೆಯನ್ನು ತನ್ನ ತಂದೆಗೆ ಸಲ್ಲಿಸಲಿಕ್ಕಾಗಿ ಹಿಂದೆ ಸ್ವರ್ಗಕ್ಕೇರಿ ಹೋದನು.—ಮಾರ್ಕ 16:1-8; ಲೂಕ 24:50-53; ಅ. ಕೃತ್ಯಗಳು 1:6-9.
◻ ಯೆಹೋವನ ನೇಮಿತ ರಾಜನೋಪಾದಿ, ಪುನರುತ್ಥಿತ ಯೇಸುವಿಗೆ, ಮಾನವನಿಗಾಗಿರುವ ದೇವರ ಮೂಲ ಉದ್ದೇಶವನ್ನು ನಿರ್ವಹಿಸುವ ಪೂರ್ಣಾಧಿಕಾರವಿದೆ.—ಯೆಶಾಯ 9:6, 7; ಲೂಕ 1:32, 33.
ಹೀಗೆ ಬೈಬಲು ಯೇಸುವನ್ನು ದೇವರ ಉದ್ದೇಶಗಳ ಪೂರ್ಣಮಾಡುವಿಕೆಯಲ್ಲಿ ಪ್ರಧಾನ ವ್ಯಕ್ತಿಯಾಗಿ ಸಾದರಪಡಿಸುತ್ತದೆ. ಆದರೆ ಇದು ಆ ವಾಸ್ತವವಾದ ಯೇಸು—ಇತಿಹಾಸದ, ಬೆತ್ಲೆಹೇಮಿನಲ್ಲಿ ಜನಿಸಿದ, ಸುಮಾರು 2,000 ವರುಷಗಳ ಪೂರ್ವದಲ್ಲಿ ಈ ಭೂಮಿಯಲ್ಲಿ ನಡೆದಾಡಿದ ಯೇಸುವೆಂದು ನೀವು ಹೇಗೆ ನಿಶ್ಚಿತರಾಗಿರಸಾಧ್ಯವಿದೆ?
ಭರವಸೆಗೆ ಆಧಾರ
ಅನೇಕ ಸಂಶಯಗಳನ್ನು, ಪೂರ್ವಕಲ್ಪಿತಾಭಿಪ್ರಾಯವಿಲ್ಲದ ಮನಸ್ಸಿನಿಂದ ಕ್ರೈಸ್ತ ಗ್ರೀಕ್ ಶಾಸ್ತ್ರಗಳನ್ನು ಕೇವಲ ಓದುವುದರಿಂದ ನಿವಾರಿಸಸಾಧ್ಯವಿದೆ. ಹಾಗೆ ಓದುವಾಗ, ಬೈಬಲ್ ವೃತ್ತಾಂತವು ಪುರಾಣ ಸಾಹಿತ್ಯಗಳ ವಿಷಯದಲ್ಲಿರುವಂತೆ ಸಂಭವಗಳ ಅಸ್ಪಷ್ಟ ಕಥನದಂತಿರುವುದಿಲ್ಲವೆಂದು ನೀವು ಕಂಡುಕೊಳ್ಳುವಿರಿ. ಬದಲಿಗೆ, ಹೆಸರುಗಳು, ನಿರ್ದಿಷ್ಟ ಕಾಲಗಳು, ಮತ್ತು ನಿಷ್ಕೃಷ್ಟವಾದ ಸ್ಥಳಗಳು ಕೊಡಲ್ಪಟ್ಟಿವೆ. (ಉದಾಹರಣೆಗೆ, ಲೂಕ 3:1, 2ನ್ನು ನೋಡಿ.) ಅಲ್ಲದೆ, ಯೇಸುವಿನ ಶಿಷ್ಯರನ್ನು ಗಮನಾರ್ಹವಾದ ಪ್ರಾಮಾಣಿಕತೆಯಿಂದ, ಓದುಗನಲ್ಲಿ ಭರವಸೆ ತುಂಬಿಸುವ ಯಥಾರ್ಥತೆಯಿಂದ ಚಿತ್ರಿಸಲಾಗಿದೆ. ಲೇಖಕರು ನಂಬಿಗಸ್ತಿಕೆಯ ಒಂದು ದಾಖಲೆಯನ್ನು ಮಾಡುವ ಉದ್ದೇಶದಿಂದ ಯಾರಿಗೂ—ತಮಗೂ—ಬಣ್ಣಹಚ್ಚಲಿಲ್ಲ. ಹೌದು, ಬೈಬಲಿಗೆ ಸತ್ಯದ ನಾದವಿರುವುದನ್ನು ನೀವು ನೋಡುವಿರಿ.—ಮತ್ತಾಯ 14:28-31; 16:21-23; 26:56, 69-75; ಮಾರ್ಕ 9:33, 34; ಗಲಾತ್ಯ 2:11-14; 2 ಪೇತ್ರ 1:16.
ಆದರೂ, ಇನ್ನೂ ಹೆಚ್ಚು ವಿಷಯಗಳಿವೆ. ಪ್ರಾಚೀನ ಶೋಧನ ಶಾಸ್ತ್ರದ ಕಂಡುಹಿಡಿತಗಳು, ಬೈಬಲ್ ದಾಖಲೆಯನ್ನು ಪದೇ ಪದೇ ಸಮರ್ಥಿಸಿವೆ. ಉದಾಹರಣೆಗೆ, ಜೆರೂಸಲೇಮಿನ ಇಸ್ರಾಯೇಲ್ ಮ್ಯೂಸಿಯಮನ್ನು ನೀವು ಭೇಟಿಮಾಡುವಲ್ಲಿ, ಪೊಂತ್ಯ ಪಿಲಾತನನ್ನು ಹೆಸರಿಸುವ ಒಂದು ಸ್ಮಾರಕ ಲೇಖನವಿರುವ ಕಲ್ಲೊಂದನ್ನು ನೀವು ನೋಡಬಲ್ಲಿರಿ. ಇತರ ಪ್ರಾಚೀನ ಕಂಡುಹಿಡಿತಗಳು ಬೈಬಲ್ ಹೆಸರಿಸಿರುವ ಲುಸನ್ಯ ಮತ್ತು ಸೆರ್ಗ್ಯಪೌಲ—ಇವರನ್ನು ಆದಿ ಕ್ರೈಸ್ತರ ಕೃತ್ರಿಮ ಸೃಷ್ಟಿಗಳಾಗಿರುವ ಬದಲಿಗೆ ನಿಜ ವ್ಯಕ್ತಿಗಳಾಗಿ ದೃಢೀಕರಿಸುತ್ತವೆ. ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ (ಹೊಸ ಒಡಂಬಡಿಕೆ) ವರದಿಯಾಗಿರುವ ಘಟನೆಗಳು, ಜೂವನಲ್, ಟ್ಯಾಸಿಟಸ್, ಸೆನಿಕ, ಸ್ವೀಟೋನಿಯಸ್, ಪ್ಲಿನೀ ದ ಯಂಗರ್, ಲೂಸಿಯನ್, ಸೆಲ್ಸಸ್ ಮತ್ತು ಯೆಹೂದಿ ಇತಿಹಾಸಕಾರ ಜೋಸೀಫಸ್ ಇವರು ಸೇರಿರುವ ಪುರಾತನ ಬರಹಗಾರರ ದಾಖಲೆಗಳಲ್ಲಿ ಹೇರಳವಾದ ಸ್ಥಿರೀಕರಣವನ್ನು ಪಡೆಯುತ್ತವೆ.a
ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ನೀಡಲ್ಪಟ್ಟ ವೃತ್ತಾಂತಗಳು, ಒಂದನೆಯ ಶತಮಾನದಲ್ಲಿ ಜೀವಿಸುತ್ತಿದ್ದ ಸಾವಿರಾರು ಮಂದಿಯಿಂದ ಸಿದ್ಧಮನಸ್ಸಿನಿಂದ ಅಂಗೀಕರಿಸಲ್ಪಟ್ಟವು. ಕ್ರೈಸ್ತತ್ವದ ವೈರಿಗಳು ಸಹ, ಯೇಸು ಹೇಳಿ, ಮಾಡಿದನೆಂದು ವರದಿಯಾಗಿದ್ದ ಸಂಗತಿಗಳ ಸತ್ಯತೆಯನ್ನು ಅಲ್ಲಗಳೆಯಲಿಲ್ಲ. ಯೇಸುವಿನ ವ್ಯಕ್ತಿತ್ವವು ಅವನ ಮರಣಾನಂತರ ಅಲಂಕರಿಸಲ್ಪಟ್ಟಿರುವ ಸಾಧ್ಯತೆಯ ಸಂಬಂಧದಲ್ಲಿ, ಪ್ರೊಫೆಸರ್ ಎಫ್. ಎಫ್. ಬ್ರೂಸ್ ಹೇಳುವುದು: “ಆ ಆದಿ ವರುಷಗಳಲ್ಲಿ, ಏನು ನಡೆದಿತ್ತು, ಏನು ನಡೆದಿರಲಿಲ್ಲವೆಂದು ಜ್ಞಾಪಿಸಿಕೊಳ್ಳಶಕ್ತರಾಗಿದ್ದ ಅವನ ಎಷ್ಟೋ ಮಂದಿ ಶಿಷ್ಯರು ಇನ್ನೂ ಜೀವಿತರಾಗಿದ್ದಾಗ, ಯೇಸುವಿನ ಮಾತುಗಳನ್ನೂ ಕಾರ್ಯಗಳನ್ನೂ ಕಲ್ಪಿಸಲಾಗಿತ್ತು ಎಂದು ಕೆಲವು ಲೇಖಕರು ಯೋಚಿಸುವಂತೆ ಕಂಡುಬರುವುದು ಖಂಡಿತವಾಗಿ ಅಷ್ಟೇನೂ ಸುಲಭಸಾಧ್ಯವಿದ್ದಿರಲಿಲ್ಲ. . . . ಶಿಷ್ಯರು ಅನಿಷ್ಕೃಷ್ಟ ವಿಷಯಗಳನ್ನು ಬರೆಯುವ (ನಿಜತ್ವಗಳನ್ನು ಬೇಕೆಂದು ಯುಕ್ತಿಯಿಂದ ಬದಲಾಯಿಸುವುದಂತೂ ಇರಲಿ) ಅಪಾಯವನ್ನು ತೆಗೆದುಕೊಳ್ಳಸಾಧ್ಯವಿದ್ದಿರಲಿಲ್ಲ, ಏಕೆಂದರೆ ಹಾಗೆ ಮಾಡುತ್ತಿದ್ದರೆ ಅದನ್ನು ಬಯಲುಮಾಡಲು ತೀರ ಸಂತೋಷಪಡುತ್ತಿದ್ದವರಿಂದ ಅದು ಕೂಡಲೆ ಬಯಲಿಗೆಳೆಯಲ್ಪಡುತ್ತಿತ್ತು.”
ಅವರು ನಂಬದಿರಲು ಕಾರಣ
ಆದರೂ ಕೆಲವು ಮಂದಿ ವಿದ್ವಾಂಸರು ಸಂದೇಹವಾದಿಗಳಾಗಿ ಉಳಿಯುತ್ತಾರೆ. ಬೈಬಲಿನ ದಾಖಲೆಯು ಮಿಥ್ಯವೆಂದು ಅವರು ಊಹಿಸುವಾಗ, ಸಂದೇಹಾಸ್ಪದ ಬರವಣಿಗೆಗಳನ್ನು ಅವರು ತವಕಪಟ್ಟು ಶೋಧಿಸಿ, ಅವನ್ನು ವಿಶ್ವಾಸಾರ್ಹವೆಂದು ನಂಬುತ್ತಾರೆ! ಏಕೆ? ಅನೇಕ ಆಧುನಿಕ ಪ್ರಜ್ಞಾವಂತರು ನಂಬಲು ಬಯಸದಿರುವ ವಿಷಯಗಳನ್ನು ಬೈಬಲ್ ದಾಖಲೆಯು ಒಳಗೊಂಡಿರುವುದರಿಂದಲೇ ಎಂಬುದು ವ್ಯಕ್ತ.
1871ರಲ್ಲಿ ಪ್ರಕಟವಾದ ಯೂನಿಯನ್ ಬೈಬಲ್ ಕಂಪ್ಯಾನಿಯನ್ ಎಂಬ ತನ್ನ ಪುಸ್ತಕದಲ್ಲಿ, ಎಸ್. ಆಸ್ಟಿನ್ ಆ್ಯಲಿಬೋನ್ ಸಂದೇಹವಾದಿಗಳಿಗೆ ಒಂದು ಪಂಥಾಹ್ವಾನವನ್ನು ನೀಡಿದನು. ಅವನು ಬರೆದುದು: “ಸುವಾರ್ತಾ ಇತಿಹಾಸದ ಸತ್ಯವನ್ನು ಸಂಶಯಿಸುತ್ತೇನೆಂದು ಹೇಳುವ ಯಾವನೊಡನೆಯಾದರೂ, ಸೀಸರನು ಕ್ಯಾಪಿಟಲ್‌ನಲ್ಲಿ ಸತ್ತನೆಂಬುದಕ್ಕೆ, ಅಥವಾ IIIನೆಯ ಪೋಪ್ ಲಿಯೊ, 800ರಲ್ಲಿ ಚಕ್ರವರ್ತಿ ಷಾರ್ಲ್‌ಮೇನನನ್ನು ಪಶ್ಚಿಮದ ಚಕ್ರವರ್ತಿಯೆಂದು ಅಭಿಷೇಕ ಮಾಡಿದನೆಂದು ನಂಬಲು ಅವನಲ್ಲಿ ಯಾವ ಕಾರಣವಿದೆಯೆಂದು ಕೇಳಿರಿ. . . . ಈ ಪುರುಷರ ಕುರಿತು ಮಾಡಿರುವ . . . ಪ್ರತಿಪಾದನೆಗಳನ್ನೆಲ್ಲ ನಾವು ನಂಬುತ್ತೇವೆ. ಏಕೆಂದರೆ ಅವರ ಕುರಿತ ಸತ್ಯದ ಐತಿಹಾಸಿಕ ರುಜುವಾತು ನಮ್ಮಲ್ಲಿದೆ. . . . ಇದರಂತಹ ರುಜುವಾತನ್ನು ಮುಂದಿಟ್ಟ ಮೇಲೆಯೂ ಯಾವನಾದರೂ ಇನ್ನೂ ನಂಬಲು ನಿರಾಕರಿಸುವಲ್ಲಿ, ಅವರು ಮೂಢತೆಯ ವಕ್ರಬುದ್ಧಿಯವರೆಂದು ಅಥವಾ ಆಶಾರಹಿತರಾದ ಅಜ್ಞಾನಿಗಳೆಂದು ನಾವು ಅವರನ್ನು ತ್ಯಜಿಸುತ್ತೇವೆ. ಹಾಗಾದರೆ ಪವಿತ್ರ ಶಾಸ್ತ್ರಗಳ ವಿಶ್ವಾಸಾರ್ಹತೆಯ ಕುರಿತು ಈಗ ಮುಂದಿಟ್ಟ ಹೇರಳವಾದ ಪುರಾವೆಗಳ ಎದುರಿನಲ್ಲಿಯೂ, ತಮಗೆ ಮಂದಟ್ಟಾಗಿರುವುದಿಲ್ಲವೆಂದು ಹೇಳುವವರ ವಿಷಯ ನಾವೇನು ಹೇಳೋಣ? . . . ಅವರ ಹೆಮ್ಮೆಯನ್ನು ತಗ್ಗಿಸುವ ಮತ್ತು ಅವರು ಪ್ರತ್ಯೇಕ ರೀತಿಯ ಜೀವಿತವನ್ನು ನಡೆಸುವಂತೆ ಅವರನ್ನು ಬಲಾತ್ಕರಿಸುವ ವಿಚಾರವನ್ನು ಅವರು ನಂಬಲಿಚ್ಛಿಸುವುದಿಲ್ಲ.”
ಹೌದು, ಕೆಲವು ಮಂದಿ ಸಂದೇಹವಾದಿಗಳಿಗೆ ಕ್ರೈಸ್ತ ಗ್ರೀಕ್ ಶಾಸ್ತ್ರಗಳನ್ನು ನಿರಾಕರಿಸುವರೆ ಗೋಚರಾತೀತವಾದ ಕಾರಣಗಳಿವೆ. ಅವರಿಗಿರುವ ಸಮಸ್ಯೆಯು ಅದರ ವಿಶ್ವಾಸಾರ್ಹತೆಯಲ್ಲ, ಅದರ ಮಟ್ಟಗಳೇ. ಉದಾಹರಣೆಗೆ, ಯೇಸು ತನ್ನ ಅನುಯಾಯಿಗಳ ಕುರಿತು ಹೇಳಿದ್ದು: “ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರೂ ಲೋಕದವರಲ್ಲ.” (ಯೋಹಾನ 17:14) ಆದರೂ, ಕ್ರೈಸ್ತರೆಂದು ಹೇಳಿಕೊಳ್ಳುವ ಅನೇಕರು, ಈ ಲೋಕದ ರಾಜಕೀಯ ವಿಚಾರಗಳಲ್ಲಿ ಗಾಢವಾಗಿ ಒಳಗೊಂಡಿದ್ದಾರೆ, ಅವುಗಳ ರಕ್ತಮಯವಾದ ಯುದ್ಧಗಳಲ್ಲಿ ಸಹ. ಬೈಬಲ್ ಮಟ್ಟಗಳಿಗೆ ಹೊಂದಿಕೊಳ್ಳುವ ಬದಲು, ಅನೇಕ ಜನರು ಬೈಬಲು ತಮ್ಮ ಸ್ವಂತ ಮಟ್ಟಗಳಿಗೆ ಹೊಂದಿಕೊಳ್ಳುವಂತೆ ಇಷ್ಟಪಡುತ್ತಾರೆ.
ನೀತಿತತ್ವಗಳ ವಿಷಯವನ್ನೂ ಪರಿಗಣಿಸಿರಿ. ಥುವತೈರದಲ್ಲಿದ್ದ ಸಭೆಯು, ಜಾರತ್ವದ ಅಭ್ಯಾಸವನ್ನು ಸಹಿಸಿಕೊಳ್ಳುತ್ತಿದ್ದುದರಿಂದ, ಯೇಸು ಆ ಸಭೆಗೆ ಬಲವಾದ ಸಲಹೆಯನ್ನು ಕೊಟ್ಟನು. ಅವನು ಅವರಿಗಂದದ್ದು: “ನಾನು ಮನುಷ್ಯರ ಅಂತರಿಂದ್ರಿಯ [“ಮೂತ್ರಜನಕಾಂಗ,” NW]ವನ್ನೂ ಹೃದಯವನ್ನೂ ಪರೀಕ್ಷಿಸುವವನಾಗಿದ್ದೇನೆ. . . . ನಿಮ್ಮಲ್ಲಿ ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಹಾಗೆ ಪ್ರತಿಫಲ ಕೊಡುವೆನು.”b (ಪ್ರಕಟನೆ 2:18-23) ಆದರೂ, ಕ್ರೈಸ್ತರೆಂದು ಹೇಳಿಕೊಳ್ಳುವ ಅನೇಕರು ನೈತಿಕ ಮಟ್ಟಗಳನ್ನು ತಳ್ಳಿಹಾಕುತ್ತಿರುವುದು ನಿಜವಲ್ಲವೊ? ಅವರು ತಮ್ಮ ಅನೈತಿಕ ವರ್ತನೆಯನ್ನು ತಳ್ಳಿಹಾಕುವ ಬದಲು ಯೇಸು ಹೇಳಿದ್ದನ್ನು ತಳ್ಳಿಹಾಕಲು ಇಷ್ಟಪಡುತ್ತಾರೆ.
ಬೈಬಲಿನ ಯೇಸುವನ್ನು ಅಂಗೀಕರಿಸುವ ಪ್ರವೃತ್ತಿಯಿಲ್ಲದವರಾಗಿರುವ ವಿದ್ವಾಂಸರು, ತಮ್ಮ ಸ್ವಂತ ರಚನೆಯ ಯೇಸುವನ್ನು ಸೃಷ್ಟಿಸಿಕೊಂಡಿದ್ದಾರೆ. ಸುವಾರ್ತಾಲೇಖಕರ ಮೇಲೆ ಅವರು ಯಾವ ತಪ್ಪಾದ ಆಪಾದನೆಯನ್ನು ಹಾಕುತ್ತಾರೊ ಅದೇ ಮಿಥ್ಯಾರಚನೆಯ ದೋಷಿಗಳು ಅವರಾಗುತ್ತಾರೆ. ತಾವು ಅಂಗೀಕರಿಸಬಯಸುವ ಯೇಸುವಿನ ಜೀವನದ ಕೆಲವು ಭಾಗಗಳನ್ನು ಅವರು ಹಿಡಿದುಕೊಳ್ಳುತ್ತ, ಉಳಿದವುಗಳನ್ನು ನಿರಾಕರಿಸಿ, ತಮ್ಮ ಸ್ವಂತದ ಕೆಲವು ವಿವರಣೆಗಳನ್ನು ಕೂಡಿಸುತ್ತಾರೆ. ವಾಸ್ತವವಾಗಿ, ಅವರ ಅಲೆಮಾರಿ ಸಂತ ಅಥವಾ ಸಾಮಾಜಿಕ ಕ್ರಾಂತಿಗಾರನು, ತಾವು ಹುಡುಕುತ್ತಿದ್ದೇವೆಂದು ವಾದಿಸುವ ಇತಿಹಾಸದ ಯೇಸು ಅಲ್ಲ, ಬದಲಿಗೆ ಅವನು ಅವರ ಅಹಂಕಾರದ ಪಾಂಡಿತ್ಯಪೂರ್ಣ ಊಹಾಪೋಹಗಳ ಕಲ್ಪನೆಯನ್ನು ಮಾಡುವವನು ಮಾತ್ರವೇ ಆಗಿದ್ದಾನೆ.
ವಾಸ್ತವವಾದ ಯೇಸುವನ್ನು ಕಂಡುಹಿಡಿಯುವುದು
ಯೇಸುವು ಯಥಾರ್ಥವಾಗಿ ಸತ್ಯ ಮತ್ತು ನೀತಿಗೆ ಹಸಿದಿರುವವರ ಹೃದಯಗಳಲ್ಲಿ ಆಸಕ್ತಿಯನ್ನು ಕೆರಳಿಸಲು ಪ್ರಯತ್ನಿಸಿದನು. (ಮತ್ತಾಯ 5:3, 6; 13:10-15) ಇಂತಹವರು ಯೇಸುವಿನ ಈ ಆಮಂತ್ರಣಕ್ಕೆ ಓಗೊಡುತ್ತಾರೆ: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು. ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿಸಿಕ್ಕುವದು. ಯಾಕಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು.”—ಮತ್ತಾಯ 11:28-30.
ವಾಸ್ತವವಾದ ಯೇಸುವು ಆಧುನಿಕ ವಿದ್ವಾಂಸರು ಬರೆದ ಪುಸ್ತಕಗಳಲ್ಲಿಯಾಗಲಿ, ಯಾವುವು ಮಾನವನಿರ್ಮಿತ ಸಂಪ್ರದಾಯಗಳ ಉತ್ಪಾದನಾ ಸ್ಥಳವಾಗಿವೆಯೊ ಆ ಕ್ರೈಸ್ತಪ್ರಪಂಚದ ಚರ್ಚುಗಳಲ್ಲಿಯಾಗಲಿ ದೊರೆಯುವುದಿಲ್ಲ. ಐತಿಹಾಸಿಕ ಯೇಸುವನ್ನು ನೀವು ನಿಮ್ಮ ಬೈಬಲಿನ ಪ್ರತಿಯಲ್ಲಿ ಕಂಡುಕೊಳ್ಳಬಲ್ಲಿರಿ. ನೀವು ಅವನ ಕುರಿತು ಹೆಚ್ಚನ್ನು ತಿಳಿಯಬಯಸುವಿರೊ? ಹಾಗೆ ಮಾಡುವಂತೆ ನಿಮಗೆ ಸಹಾಯಮಾಡಲು ಯೆಹೋವನ ಸಾಕ್ಷಿಗಳು ಸಂತೋಷಿಸುವರು.
[ಅಧ್ಯಯನ ಪ್ರಶ್ನೆಗಳು]
a ಹೆಚ್ಚಿನ ಮಾಹಿತಿಗಾಗಿ, ವಾಚ್‌ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತವಾದ, ಬೈಬಲ್—ದೇವರ ವಾಕ್ಯವೊ ಮನುಷ್ಯನದ್ದೊ? (ಇಂಗ್ಲಿಷ್) ಪುಸ್ತಕದ, ಅಧ್ಯಾಯ 5, ಪುಟಗಳು 55-70ನ್ನು ನೋಡಿ.
b ಬೈಬಲಿನಲ್ಲಿ ಮೂತ್ರಜನಕಾಂಗಗಳು ಕೆಲವು ಬಾರಿ ಒಬ್ಬನ ಅತ್ಯಗಾಧವಾದ ಯೋಚನೆಗಳನ್ನು ಮತ್ತು ಭಾವನೆಗಳನ್ನು ಪ್ರತಿನಿಧಿಸುತ್ತವೆ.
[ಪುಟ 6 ರಲ್ಲಿರುವ ಚೌಕ]
ಟೀಕೆಯ ಶತಮಾನಗಳು
ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಟೀಕೆಯು 200ಕ್ಕೂ ಹೆಚ್ಚು ವರುಷಗಳ ಹಿಂದೆ, ಜರ್ಮನ್ ತತ್ವಜ್ಞಾನಿ ಹೆರ್ಮಾನ್ ಸಾಮೂಎಲ್ ರೈಮಾರುಸ್ (1694-1768), “ತಮ್ಮ ಬರಹಗಳಲ್ಲಿ ಅಪೊಸ್ತಲರು ಬರೆದ ಬೋಧನೆಗಳು ಮತ್ತು ಯೇಸು ತಾನೇ ತನ್ನ ಸ್ವಂತ ಜೀವಮಾನದಲ್ಲಿ ಘೋಷಿಸಿ, ಕಲಿಸಿದ ಬೋಧನೆಗಳು—ಇವುಗಳ ಮಧ್ಯೆ ಖಂಡಿತವಾದ ಭೇದವನ್ನು ಮಾಡುವುದರಲ್ಲಿ ನಾವು ಸಮರ್ಥೀಕರಿಸಲ್ಪಡುತ್ತೇವೆ,” ಎಂದು ಪ್ರತಿಪಾದಿಸಿದಾಗ ಆರಂಭಗೊಂಡಿತು. ರೈಮಾರುಸ್‌ನಿಂದೀಚೆಗೆ, ಅನೇಕ ವಿದ್ವಾಂಸರು ಅದೇ ರೀತಿಯಾಗಿ ಅಭಿಪ್ರಯಿಸುವಂತೆ ಕಲಿಸಲ್ಪಟ್ಟಿದ್ದಾರೆ.
ವಾಸ್ತವವಾದ ಯೇಸು (ಇಂಗ್ಲಿಷ್) ಎಂಬ ಪುಸ್ತಕವು, ಅನೇಕ ಗತ ಟೀಕಾಕಾರರು ತಮ್ಮನ್ನು ಧರ್ಮಭ್ರಷ್ಟರೆಂದೆಣಿಸಿಕೊಳ್ಳಲಿಲ್ಲ ಎಂದು ಗಮನಿಸುತ್ತದೆ. ಬದಲಿಗೆ, “ವಿಶ್ವಾಸಬೋಧನಾಂಶ ಮತ್ತು ಮೂಢನಂಬಿಕೆಗಳ ಬೇಡಿಗಳನ್ನು ಮುರಿದು ಸ್ವತಂತ್ರರಾದುದಕ್ಕಾಗಿ ತಾವು ಹೆಚ್ಚು ಸಾಚಾ ಕ್ರೈಸ್ತರೆಂದು ಅವರು ಗ್ರಹಿಸಿಕೊಂಡರು.” ಮೂಲರಚನಾ ವಿಮರ್ಶೆಯು (ಹೈಅರ್ ಕ್ರಿಟಿಸಿಸ್‌ಮ್) “ಕ್ರೈಸ್ತತ್ವದ ಶುದ್ಧೀಕರಿಸಲ್ಪಟ್ಟ ರೂಪ”ವೆಂದು ಅವರು ಭಾವಿಸಿದರು.
ದುಃಖಕರವಾದ ನಿಜತ್ವವೇನಂದರೆ, ಕ್ರೈಸ್ತಪ್ರಪಂಚವು ಮಾನವನಿರ್ಮಿತ ಸಂಪ್ರದಾಯದ ಉತ್ಪಾದನಾ ಸ್ಥಳವಾಗಿದೆ. ಅಮರವಾದ ಪ್ರಾಣ, ತ್ರಯೈಕ್ಯ, ಅಗ್ನಿಮಯ ನರಕದ ತತ್ವಗಳು, ಬೈಬಲಿಗೆ ಪ್ರತಿಕೂಲವಾದ ಬೋಧನೆಗಳಲ್ಲಿ ಕೇವಲ ಕೆಲವು. ಆದರೆ ಈ ಸತ್ಯದ ಭ್ರಷ್ಟತೆಗೆ ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಲೇಖಕರು ಜವಾಬ್ದಾರರಾಗಿರಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಒಂದನೆಯ ಶತಮಾನದ ಮಧ್ಯಭಾಗದಲ್ಲಿ, ಕ್ರೈಸ್ತರೆನಿಸಿಕೊಂಡವರ ಮಧ್ಯೆ ಧರ್ಮಭ್ರಷ್ಟತೆಯು “ಈಗಲೂ . . . ಕಾರ್ಯಸಾಧಿಸುತ್ತದೆ” ಎಂದು ಪೌಲನು ಬರೆದಾಗ, ಅವರು ಆ ಸುಳ್ಳು ಬೋಧನೆಗಳ ಆದಿ ಸುಳಿವುಗಳ ವಿರುದ್ಧ ಹೋರಾಡಿದರು. (2 ಥೆಸಲೊನೀಕ 2:3, 7) ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ಏನು ಅಡಕವಾಗಿದೆಯೊ ಅದು ಐತಿಹಾಸಿಕ ಹಾಗೂ ತತ್ವಾತ್ಮಕ ಸತ್ಯದ ದಾಖಲೆಯೆಂಬ ವಿಷಯದಲ್ಲಿ ನಾವು ಭರವಸೆಯಿಂದಿರಬಲ್ಲೆವು.
[ಪುಟ 7 ರಲ್ಲಿರುವ ಚೌಕ]
ಸುವಾರ್ತೆಗಳು ಯಾವಾಗ ಬರೆಯಲ್ಪಟ್ಟವು?
ಹೊಸ ಒಡಂಬಡಿಕೆಯ ಅನೇಕ ಟೀಕಾಕಾರರು, ಸುವಾರ್ತೆಗಳು ಅವು ವರ್ಣಿಸುವ ಘಟನೆಗಳು ನಡೆದು ದೀರ್ಘಕಾಲದ ಅನಂತರ ಬರೆಯಲ್ಪಟ್ಟದ್ದರಿಂದ, ಹೆಚ್ಚುಕಡಮೆ ಖಂಡಿತವಾಗಿ ಅನಿಷ್ಕೃಷ್ಟತೆಗಳನ್ನು ಒಳಗೊಂಡಿವೆಯೆಂದು ಪಟ್ಟುಹಿಡಿದು ಹೇಳುತ್ತಾರೆ.
ಆದರೂ ಸಾಕ್ಷ್ಯವು, ಮತ್ತಾಯ, ಮಾರ್ಕ ಮತ್ತು ಲೂಕ ಪುಸ್ತಕಗಳ ಬರಹವು ಬಹಳ ಪ್ರಾಚೀನವಾದದ್ದೆಂದು ಸೂಚಿಸುತ್ತದೆ. ಮತ್ತಾಯ ಪುಸ್ತಕದ ಕೆಲವು ಹಸ್ತಪ್ರತಿಗಳ ಉಪಲಿಪಿಗಳು, ಮೂಲ ಬರೆವಣಿಗೆಯು ಸಾ.ಶ. 41ರಷ್ಟೂ ಮೊದಲಲ್ಲಿ ಬರೆಯಲ್ಪಟ್ಟಿತೆಂದು ಸೂಚಿಸುತ್ತವೆ. ಲೂಕ ಪುಸ್ತಕವು ಸಾ.ಶ. 56 ಮತ್ತು 58ರ ಮಧ್ಯೆ ಪ್ರಾಯಶಃ ಬರೆಯಲ್ಪಟ್ಟಿದ್ದಿರಬೇಕು, ಏಕೆಂದರೆ ಅಪೊಸ್ತಲರ ಕೃತ್ಯಗಳ ಪುಸ್ತಕವು (ಸಾ.ಶ. 61ರೊಳಗೆ ಸಂಪೂರ್ಣಗೊಂಡಿದ್ದಿರಬಹುದು), ಅದರ ಲೇಖಕನಾದ ಲೂಕನು ತನ್ನ ಸುವಾರ್ತೆಯನ್ನು, “ಮೊದಲು ಬರೆದ ಚರಿತ್ರೆ”ಯನ್ನು ಆಗಲೇ ರಚಿಸಿದ್ದನೆಂದು ಸೂಚಿಸುತ್ತದೆ. (ಅ. ಕೃತ್ಯಗಳು 1:1) ಮಾರ್ಕನ ಸುವಾರ್ತೆಯು ರೋಮ್‌ನಲ್ಲಿ, ಅಪೊಸ್ತಲ ಪೌಲನ ಒಂದನೆಯ ಅಥವಾ ಎರಡನೆಯ ಸೆರೆವಾಸದ ಸಮಯದಲ್ಲಿ, ಪ್ರಾಯಶಃ ಸಾ.ಶ. 60 ಮತ್ತು 65ರ ಮಧ್ಯೆ ರಚಿಸಲ್ಪಟ್ಟಿತೆಂದು ಎಣಿಸಲಾಗುತ್ತದೆ.
ಪ್ರೊಫೆಸರ್ ಕ್ರೇಗ್ ಎಲ್. ಬ್ಲಾಮ್‌ಬರ್ಗ್, ಆ ಸುವಾರ್ತೆಗಳ ಹೆಚ್ಚು ಹಿಂದಿನ ದಿನಾಂಕವನ್ನು ಒಪ್ಪುತ್ತಾರೆ. ಒಂದನೆಯ ಶತಮಾನದ ಅಂತ್ಯದಲ್ಲಿ ರಚಿಸಲ್ಪಟ್ಟ ಯೋಹಾನನ ಸುವಾರ್ತೆಯನ್ನು ಕೂಡಿಸುವಾಗಲೂ, “ನಾವು ಅನೇಕ ಪುರಾತನ ಜೀವನ ಚರಿತ್ರೆಗಳಿಗಿಂತ ಮೂಲ ಘಟನೆಗಳಿಗೆ ಇನ್ನೂ ಎಷ್ಟೋ ಹೆಚ್ಚು ನಿಕಟವಾಗಿದ್ದೇವೆ. ದೃಷ್ಟಾಂತಕ್ಕೆ, ಅಲೆಗ್ಸಾಂಡರ್ ದ ಗ್ರೇಟ್‌ನ ಇಬ್ಬರು ಅತಿ ಆದಿಯ ಜೀವನಚರಿತ್ರೆಕಾರರಾದ ಆ್ಯರೀಯನ್ ಮತ್ತು ಪ್ಲೂಟಾರ್ಕ್ ಎಂಬವರು ಅಲೆಗ್ಸಾಂಡರನು ಕ್ರಿ.ಪೂ. 323ರಲ್ಲಿ ಸತ್ತು ನಾನೂರಕ್ಕೂ ಹೆಚ್ಚು ವರ್ಷಗಳಾನಂತರ ಬರೆದರೂ, ಇತಿಹಾಸಕಾರರು ಅವರನ್ನು ಸಾಮಾನ್ಯವಾಗಿ ಭರವಸಾರ್ಹರೆಂದು ಎಣಿಸುತ್ತಾರೆ. ಅಲೆಗ್ಸಾಂಡರನ ಜೀವನದ ಕುರಿತ ಊಹನಾತೀತ ಐತಿಹ್ಯಗಳು ಸಮಯಾನಂತರ ವಿಕಾಸಗೊಂಡರೂ, ಅವುಗಳಲ್ಲಿ ಹೆಚ್ಚಿನವು ಈ ಇಬ್ಬರು ಲೇಖಕರು ಬರೆದು ಅನೇಕ ಶತಮಾನಗಳ ಅನಂತರ ವಿಕಾಸಗೊಂಡವು” ಎಂದು ಅವರು ಗಮನಿಸುತ್ತಾರೆ. ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಐತಿಹಾಸಿಕ ಭಾಗಗಳು, ಲೌಕಿಕ ಇತಿಹಾಸಗಳಿಗೆ ಕೊಡಲ್ಪಡುವಷ್ಟಾದರೂ ಭರವಸೆಗೆ ನಿಶ್ಚಯವಾಗಿಯೂ ಅರ್ಹವಾಗಿವೆ.
[ಪುಟ 8 ರಲ್ಲಿರುವ ಚಿತ್ರ]
ಬರಲಿರುವ ಭೂಪ್ರಮೋದವನದಲ್ಲಿ ಆನಂದವು ಸರ್ವರ ಮೇಲೂ ಪರಮಪ್ರಭುತ್ವವನ್ನು ನಡೆಸುವುದು