ಹೆಚ್ಚು ಶ್ರೇಷ್ಠವಾದ ಸಂಗತಿಗಾಗಿ ಬಹಳಷ್ಟನ್ನು ಬಿಟ್ಟುಬಿಡುವುದು
ಜೂಲ್ಯಸ್ ಓವೊ ಬೆಲೊ ಅವರು ಹೇಳಿದಂತೆ
ನಾನು 32 ವರ್ಷಗಳ ವರೆಗೆ ಒಬ್ಬ ಆಲಾಡರಾ* ಆಗಿದ್ದೆ. ಭಕ್ತಿ ಚಿಕಿತ್ಸೆ ಮತ್ತು ಪ್ರಾರ್ಥನೆಗಳು ನನ್ನ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುವೆಂದು ಮತ್ತು ಎಲ್ಲ ಅಸ್ವಸ್ಥತೆಗಳನ್ನು ಗುಣಪಡಿಸುವುವೆಂದು ನಾನು ನಂಬಿದೆ. ನಾನು ಯಾವುದೇ ಔಷಧಗಳನ್ನು, ವೇದನಹಾರಿಗಳನ್ನು ಸಹ ಎಂದೂ ಖರೀದಿಸಲಿಲ್ಲ. ಆ ವರ್ಷಗಳಲ್ಲಿ ನನ್ನ ಕುಟುಂಬದಲ್ಲಿ ಯಾರೊಬ್ಬರೂ ಆಸ್ಪತ್ರೆಗೆ ಎಂದೂ ಸೇರಿಸಲ್ಪಡಲಿಲ್ಲ. ನನ್ನ ಮಕ್ಕಳಲ್ಲಿ ಯಾರಾದರೊಬ್ಬರು ಅಸ್ವಸ್ಥಗೊಂಡಾಗಲೆಲ್ಲಾ, ಅವರು ಗುಣಹೊಂದುವ ತನಕ ನಾನು ಅವರಿಗಾಗಿ ಹಗಲೂರಾತ್ರಿ ಪ್ರಾರ್ಥಿಸಿದೆ. ದೇವರು ನನ್ನ ಪ್ರಾರ್ಥನೆಗಳನ್ನು ಉತ್ತರಿಸುತ್ತಾ, ನನ್ನನ್ನು ಆಶೀರ್ವದಿಸುತ್ತಿದ್ದನೆಂದು ನಾನು ನಂಬಿದೆ.
* “ಪ್ರಾರ್ಥಿಸುವವನು” ಎಂಬ ಅರ್ಥಕೊಡುವ ಯಾರಬ ಪದದಿಂದ ತೆಗೆಯಲಾಗಿದೆ. ಆತ್ಮಿಕ ಚಿಕಿತ್ಸೆಯನ್ನು ಆಚರಿಸುವ ಒಂದು ಆಫ್ರಿಕನ್ ಚರ್ಚಿನ ಒಬ್ಬ ಸದಸ್ಯನನ್ನು ಇದು ಸೂಚಿಸುತ್ತದೆ.
ನಾ ನು ಪಾಶ್ಚಾತ್ಯ ನೈಜೀರಿಯದಲ್ಲಿನ ಒಂದು ಪಟ್ಟಣವಾದ ಆಕುರಿಯಲ್ಲಿರುವ ಅತ್ಯಂತ ಪ್ರಖ್ಯಾತ ಸಾಮಾಜಿಕ ಕ್ಲಬ್ಬಾದ ಎಗ್ಬ ಜಾಲಿಯ ಸದಸ್ಯನಾಗಿದ್ದೆ. ನನ್ನ ಮಿತ್ರರು ನಮ್ಮ ಸಮುದಾಯದಲ್ಲಿನ ಅತಿ ಶ್ರೀಮಂತ ಹಾಗೂ ಅತಿ ಪ್ರಭಾವಶಾಲಿ ಜನರಾಗಿದ್ದರು. ಆಕುರಿಯ ರಾಜನಾದ ಡೆಜಿ, ಅನೇಕ ವೇಳೆ ನನ್ನನ್ನು ನನ್ನ ಮನೆಯಲ್ಲಿ ಸಂದರ್ಶಿಸಿದನು.
ನಾನು ಆರು ಪತ್ನಿಯರನ್ನು ಮತ್ತು ಅನೇಕ ಉಪಪತ್ನಿಯರನ್ನು ಪಡೆದಿದ್ದು, ಒಬ್ಬ ಬಹು ಪತ್ನೀಕನೂ ಆಗಿದ್ದೆ. ನನ್ನ ವ್ಯಾಪಾರವು ಏಳಿಗೆಹೊಂದಿತು. ಎಲ್ಲವೂ ಸುಗಮವಾಗಿ ಸಾಗುತ್ತಿತ್ತು. ಆದರೂ, ಯೇಸು ಹೇಳಿದ ಮುತ್ತಿನ ದೃಷ್ಟಾಂತದಲ್ಲಿನ ವ್ಯಾಪಾರಿಯಂತೆ, ನಾನು ಎಷ್ಟು ಅಮೂಲ್ಯವಾದ ವಿಷಯವನ್ನು ಕಂಡುಕೊಂಡೆನೆಂದರೆ, ನನ್ನ ಪತ್ನಿಯರಲ್ಲಿ ಐವರನ್ನು, ನನ್ನ ಉಪಪತ್ನಿಯರನ್ನು, ಚರ್ಚನ್ನು, ಸಾಮಾಜಿಕ ಕ್ಲಬ್ಬನ್ನು, ಮತ್ತು ಲೌಕಿಕ ಪ್ರಖ್ಯಾತಿಯನ್ನು ಬಿಟ್ಟುಬಿಟ್ಟೆ.—ಮತ್ತಾಯ 13:45, 46.
ನಾನೊಬ್ಬ ಆಲಾಡರಾ ಆದ ವಿಧ
1936ರಲ್ಲಿ ನಾನು 13 ವರ್ಷ ಪ್ರಾಯದವನಾಗಿದ್ದಾಗ, ಪ್ರಥಮ ಬಾರಿ ಆಲಾಡರಾಗಳ ಕುರಿತು ಕೇಳಿದೆ. ಗಾಬ್ರಿಯೆಲ್ ಎಂಬ ಮಿತ್ರನೊಬ್ಬನು ನನಗೆ ಹೇಳಿದ್ದು: “ನೀನು ಕ್ರೈಸ್ಟ್ ಆ್ಯಪಸ್ಟಾಲಿಕ್ ಚರ್ಚನ್ನು ಸಂದರ್ಶಿಸುವುದಾದರೆ, ದೇವರು ಮಾತಾಡುವುದನ್ನು ನೀನು ಕೇಳಿಸಿಕೊಳ್ಳುವಿ.”
“ದೇವರು ಹೇಗೆ ಮಾತಾಡುತ್ತಾನೆ?” ಎಂದು ನಾನು ಅವನನ್ನು ಕೇಳಿದೆ.
ಅವನಂದದ್ದು: “ಬಾ, ನೋಡುವಿಯಂತೆ.”
ದೇವರಿಗೆ ಕಿವಿಗೊಡಲು ನಾನು ಉತ್ಸುಕನಾಗಿದ್ದೆ. ಆದುದರಿಂದ ಆ ರಾತ್ರಿ ನಾನು ಗಾಬ್ರಿಯೆಲನೊಂದಿಗೆ ಚರ್ಚಿಗೆ ಹೋದೆ. ಆ ಸಣ್ಣ ಕಟ್ಟಡವು ಆರಾಧಕರಿಂದ ತುಂಬಿತ್ತು. ಸಭೆಯು, “ಜನರೇ ಬನ್ನಿ! ಯೇಸು ಇರುವುದು ಇಲ್ಲಿಯೇ!” ಎಂಬುದಾಗಿ ಪಠಿಸಲಾರಂಭಿಸಿತು.
ಈ ಪಠನವು ನಡೆಯುತ್ತಿದ್ದಾಗ, “ಪವಿತ್ರಾತ್ಮನೇ, ಕೆಳಗಿಳಿದು ಬಾ!” ಎಂದು ಯಾರೊ ಕೂಗಿಕೊಂಡರು. ಇನ್ನೊಬ್ಬರು ಗಂಟೆ ಬಾರಿಸಿದರು, ಮತ್ತು ಸಭೆಯು ಮೌನವಾಯಿತು. ನಂತರ, ಸ್ತ್ರೀಯೊಬ್ಬಳು ಒಂದು ವಿಚಿತ್ರ ಭಾಷೆಯಲ್ಲಿ, ಉದ್ರೇಕಗೊಂಡು ಬಡಬಡಿಸಲಾರಂಭಿಸಿದಳು. ಹಠಾತ್ತಾಗಿ ಅವಳು ಕೂಗಿಕೊಂಡದ್ದು: “ಓ ಜನರೇ, ದೇವರ ಸಂದೇಶಕ್ಕೆ ಕಿವಿಗೊಡಿರಿ! ದೇವರು ಈ ವಿಷಯವನ್ನು ಹೇಳಿದ್ದಾನೆ: ‘ಬೇಟೆಗಾರರು ಮನುಷ್ಯರನ್ನು ಕೊಲ್ಲದಂತೆ ಅವರಿಗಾಗಿ ಪ್ರಾರ್ಥಿಸಿರಿ!’” ವಾತಾವರಣವು ಭಾವೋದ್ರೇಕಗೊಂಡಿತು.
ದೇವರು ಅವಳ ಮುಖಾಂತರ ಮಾತಾಡಿದ್ದನೆಂದು ನಾನು ನಂಬಿದೆ, ಆದಕಾರಣ ಮರುವರ್ಷ ನಾನು ಕ್ರೈಸ್ಟ್ ಆ್ಯಪಸ್ಟಾಲಿಕ್ ಚರ್ಚಿನ ಒಬ್ಬ ಸದಸ್ಯನೋಪಾದಿ ದೀಕ್ಷಾಸ್ನಾನಪಡೆದುಕೊಂಡೆ.
ಯೆಹೋವನ ಸಾಕ್ಷಿಗಳೊಂದಿಗಿನ ಆರಂಭಿಕ ಸಂಪರ್ಕ
1951ರಲ್ಲಿ, ಆಡೆಡೆಜಿ ಬೊಬೊಯೆ ಎಂಬ ಹೆಸರಿನ ಸಾಕ್ಷಿಯಿಂದ ನಾನು ಕಾವಲಿನಬುರುಜು ಪತ್ರಿಕೆಯ ಒಂದು ಪ್ರತಿಯನ್ನು ಸ್ವೀಕರಿಸಿದೆ. ಪತ್ರಿಕೆಯು ಆಸಕ್ತಿಕರವಾಗಿದ್ದ ಕಾರಣ ನಾನು ಅದಕ್ಕೆ ಚಂದಾ ಮಾಡಿ, ಕ್ರಮವಾಗಿ ಓದಿದೆ. 1952ರಲ್ಲಿ ನಾನು ಆಡೊ ಈಕೀಟೀ ಎಂಬಲ್ಲಿ ಯೆಹೋವನ ಸಾಕ್ಷಿಗಳ ನಾಲ್ಕು ದಿನದ ಜಿಲ್ಲಾ ಅಧಿವೇಶನವೊಂದಕ್ಕೆ ಹಾಜರಾದೆ.
ನಾನು ಅಧಿವೇಶನದಲ್ಲಿ ಕಂಡಂತಹ ವಿಷಯವು ನನ್ನನ್ನು ಪ್ರಭಾವಿಸಿತು. ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗುವುದರ ಕುರಿತು ನಾನು ಗಂಭೀರವಾಗಿ ಆಲೋಚಿಸಿದೆ, ಆದರೆ ಆ ವಿಚಾರವನ್ನು ತಳ್ಳಿಹಾಕಿದೆ. ನನ್ನ ಸಮಸ್ಯೆಯು ಏನಾಗಿತ್ತೆಂದರೆ, ಆ ಸಮಯದಲ್ಲಿ ನನಗೆ ಮೂವರು ಪತ್ನಿಯರು ಮತ್ತು ಒಬ್ಬ ಉಪಪತ್ನಿ ಇದ್ದಳು. ಕೇವಲ ಏಕ ಪತ್ನಿಯೊಂದಿಗೆ ನಾನು ಜೀವಿಸಸಾಧ್ಯವಿದ್ದ ಮಾರ್ಗವೇ ಇರಲಿಲ್ಲವೆಂದು ನಾನು ಯೋಚಿಸಿದೆ.
ನಾನು ಆಕುರಿಗೆ ಹಿಂದಿರುಗಿದ ನಂತರ, ನನ್ನನ್ನು ಸಂದರ್ಶಿಸುವುದನ್ನು ನಿಲ್ಲಿಸುವಂತೆ ನಾನು ಆಡೆಡೆಜಿಗೆ ಹೇಳಿದೆ, ಮತ್ತು ನನ್ನ ಕಾವಲಿನಬುರುಜುವಿನ ಚಂದಾವನ್ನು ನಾನು ನವೀಕರಿಸಲಿಲ್ಲ. ನನ್ನ ಚರ್ಚಿನಲ್ಲಿ ನಾನು ಬಹಳ ಸಕ್ರಿಯನಾದೆ. ಎಷ್ಟೆಂದರೂ, ನಾನು ಕ್ರೈಸ್ಟ್ ಆ್ಯಪಸ್ಟಾಲಿಕ್ ಚರ್ಚನ್ನು ಸೇರಿದ್ದ ಸಮಯದಂದಿನಿಂದ ದೇವರು ನನ್ನನ್ನು ಆಶೀರ್ವದಿಸಿದ್ದನೆಂದು ನಾನು ವಿವೇಚಿಸಿದೆ. ನಾನು ಮೂವರು ಪತ್ನಿಯರನ್ನು ವಿವಾಹವಾಗಿದ್ದು, ಅನೇಕ ಮಕ್ಕಳನ್ನು ಪಡೆದಿದ್ದೆ. ನನ್ನ ಸ್ವಂತ ಮನೆಯನ್ನು ನಾನು ಕಟ್ಟಿದ್ದೆ. ನಾನೆಂದೂ ಆಸ್ಪತ್ರೆಗೆ ಸೇರಿಸಲ್ಪಟ್ಟಿರಲಿಲ್ಲ. ದೇವರು ನನ್ನ ಪ್ರಾರ್ಥನೆಗಳನ್ನು ಉತ್ತರಿಸುತ್ತಿರುವಂತೆ ತೋರುತ್ತಿದ್ದ ಕಾರಣ, ನನ್ನ ಧರ್ಮವನ್ನು ಏಕೆ ಬದಲಾಯಿಸಬೇಕು?
ಭ್ರಮನಿರಸನದೊಂದಿಗೆ ಹೆಚ್ಚಾಗುತ್ತಿರುವ ಪ್ರಖ್ಯಾತಿ
ನಾನು ಚರ್ಚಿಗೆ ಹೆಚ್ಚು ಹಣವನ್ನು ದಾನವಾಗಿ ಕೊಡಲಾರಂಭಿಸಿದೆ. ಬೇಗನೆ ಅವರು ನನ್ನನ್ನು ಚರ್ಚಿನ ಒಬ್ಬ ಹಿರಿಯನನ್ನಾಗಿ ಮಾಡಿದರು. ಈ ಸ್ಥಾನವು ಚರ್ಚಿನ ಆಂತರಿಕ ಕಾರ್ಯಕಲಾಪಗಳನ್ನು ಅವಲೋಕಿಸುವಂತೆ ನನಗೆ ಸಾಧ್ಯಮಾಡಿತು. ನಾನು ಕಂಡಂತಹ ವಿಷಯವು ನನ್ನನ್ನು ಕ್ಷೋಭೆಗೊಳಿಸಿತು. ಅಲ್ಲಿನ ಪಾಸ್ಟರ್ ಮತ್ತು “ಪ್ರವಾದಿಗಳು” ಹಣವನ್ನು ಪ್ರೀತಿಸಿದರು; ಅವರ ಧನಲೋಭವು ನನ್ನನ್ನು ಎದೆಗುಂದಿಸಿತು.
ಉದಾಹರಣೆಗೆ, ಮಾರ್ಚ್ 1967ರಲ್ಲಿ, ಬೇರೆ ಬೇರೆ ಪತ್ನಿಯರಿಂದ ನಾನು ಮೂರು ಮಕ್ಕಳ ತಂದೆಯಾದೆ. ಮಗುವಿನ ನಾಮಕರಣದ ಸಮಾರಂಭವನ್ನು ಆಚರಿಸುವುದು ಚರ್ಚಿನ ರೂಢಿಯಾಗಿತ್ತು. ಆದುದರಿಂದ, ಆ ಸಮಾರಂಭದ ತಯಾರಿಗಾಗಿ ನಾನು ಪಾಸ್ಟರನಿಗೆ ಕೊಡುಗೆಗಳನ್ನು—ಮೀನು, ಲೆಮನೇಡ್ ಪಾನಕ, ಮತ್ತು ಸೌಮ್ಯ ಪಾನೀಯ (ಸಾಫ್ಟ್ ಡ್ರಿಂಕ್)ಗಳನ್ನು—ತೆಗೆದುಕೊಂಡು ಹೋದೆ.
ಸಾರ್ವಜನಿಕ ಆರಾಧನೆಯ ದಿನದಂದು, ಪಾಸ್ಟರನು ಇಡೀ ಸಭೆಯ ಮುಂದೆ ಹೇಳಿದ್ದು: “ಈ ಚರ್ಚಿನ ಶ್ರೀಮಂತ ಜನರು ನನ್ನನ್ನು ಬೆರಗುಗೊಳಿಸಿದ್ದಾರೆ. ನಾಮಕರಣದ ಸಮಾರಂಭವನ್ನು ಅವರ ನಡೆಸಬಯಸುತ್ತಾರೆ, ಆದರೆ ಅದಕ್ಕಾಗಿ ಅವರು ತರುವಂಥದ್ದು ಕೇವಲ ಸೌಮ್ಯ ಪಾನೀಯಗಳು (ಸಾಫ್ಟ್ ಡ್ರಿಂಕ್ಸ್) ಮತ್ತು ಮೀನು. ಮಾಂಸವಿಲ್ಲ! ಆಡಿಲ್ಲ! ಊಹಿಸಿಕೊಳ್ಳಿ! ಕಾಯಿನನು ದೊಡ್ಡ ಗೆಣಸುಗಳ ಯಜ್ಞವನ್ನು ದೇವರಿಗೆ ಅರ್ಪಿಸಿದನಾದರೂ, ಅದರಲ್ಲಿ ರಕ್ತವಿರದಿದ್ದ ಕಾರಣ, ದೇವರು ಆ ಯಜ್ಞವನ್ನು ಸ್ವೀಕರಿಸಲಿಲ್ಲ. ದೇವರು ರಕ್ತವಿರುವ ವಿಷಯಗಳನ್ನು ಇಷ್ಟಪಡುತ್ತಾನೆ. ಹೇಬೆಲನು ಒಂದು ಪ್ರಾಣಿಯನ್ನು ತಂದನು, ಮತ್ತು ಅವನ ಯಜ್ಞವು ಸ್ವೀಕರಿಸಲ್ಪಟ್ಟಿತು.”
ಆ ಮಾತನ್ನು ಕೇಳಿ, ನಾನು ಆವೇಶದಿಂದ ಎದ್ದು ಹೊರಗೆ ಹೋದೆ. ಹಾಗಿದ್ದರೂ, ನಾನಿನ್ನೂ ಚರ್ಚಿಗೆ ಹಾಜರಾದೆ. ಹೆಚ್ಚಾಗಿ ನಾನು ಅಧಿಕ ಸಮಯವನ್ನು ಜನರೊಂದಿಗೆ ಬೆರೆಯುವುದರಲ್ಲಿ ಮತ್ತು ನನ್ನ ಕ್ಲಬ್ಬಿನ ಕೂಟಗಳಿಗೆ ಹಾಜರಾಗುವುದರಲ್ಲಿ ಕಳೆದೆ. ಕೆಲವೊಮ್ಮೆ ರಾಜ್ಯ ಸಭಾಗೃಹದಲ್ಲಿನ ಕೂಟಗಳಿಗೆ ನಾನು ಹಾಜರಾದೆ, ಮತ್ತು ಕಾವಲಿನಬುರುಜು ಪತ್ರಿಕೆಯ ನನ್ನ ಚಂದಾವನ್ನು ನವೀಕರಿಸಿದೆ. ಆದರೂ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಲು ನಾನಿನ್ನೂ ಸಿದ್ಧನಿರಲಿಲ್ಲ.
ಯೆಹೋವನನ್ನು ಸೇವಿಸುವ ನಿರ್ಧಾರ
1968ರಲ್ಲಿ ನನಗೊಂದು ಉತ್ಕಟ ಸಮಯವು ಬಂದಿತು. ಒಂದು ದಿನ ನಾನು ಮಲಾವಿಯಲ್ಲಿನ ಯೆಹೋವನ ಸಾಕ್ಷಿಗಳ ಕ್ರೂರವಾದ ಹಿಂಸೆಯನ್ನು ವರ್ಣಿಸಿದ ಕಾವಲಿನಬುರುಜು ಪತ್ರಿಕೆಯಲ್ಲಿನ ಒಂದು ಲೇಖನವನ್ನು ಓದಲಾರಂಭಿಸಿದೆ. ಅದು, ತನ್ನ ನಂಬಿಕೆಯ ಒಪ್ಪಂದಮಾಡಿಕೊಳ್ಳಲು ನಿರಾಕರಿಸಿದ ಕಾರಣ, ಮರವೊಂದಕ್ಕೆ ಕಟ್ಟಲ್ಪಟ್ಟು, ಆರು ಬಾರಿ ಬಲಾತ್ಕಾರ ಸಂಭೋಗಕ್ಕೆ ಗುರಿಯಾದ 15 ವರ್ಷ ಪ್ರಾಯದ ಹುಡುಗಿಯ ಕುರಿತಾಗಿ ತಿಳಿಸಿತು. ಗಾಢವಾಗಿ ತಲ್ಲಣಗೊಂಡ ಕಾರಣ, ನಾನು ಓದುವುದನ್ನು ನಿಲ್ಲಿಸಿದೆನಾದರೂ, ಅದರ ಕುರಿತು ಯೋಚಿಸುತ್ತಾ ಇದ್ದೆ. ಆ ಬಗೆಯ ನಂಬಿಕೆಯನ್ನು ನನ್ನ ಚರ್ಚಿನ ಯಾವ ಹುಡುಗಿಯೂ ತೋರಿಸಲಾರಳೆಂದು ನಾನು ಮನಗಂಡೆ. ಆ ದಿನ ಸಂಜೆ, ಪತ್ರಿಕೆಯನ್ನು ನಾನು ತೆಗೆದುಕೊಂಡು, ಪುನಃ ಆ ಪುಟವನ್ನು ಓದಿದೆ.
ನಾನು ಗಂಭೀರವಾಗಿ ಬೈಬಲನ್ನು ಅಧ್ಯಯನಿಸಲು ತೊಡಗಿದೆ. ನಾನು ಜ್ಞಾನದಲ್ಲಿ ಬೆಳೆದಂತೆ, ಚರ್ಚು ನಮ್ಮನ್ನು ಎಷ್ಟರ ಮಟ್ಟಿಗೆ ದಾರಿ ತಪ್ಪಿಸುತ್ತಿತ್ತು ಎಂಬುದನ್ನು ನಾನು ನೋಡಲಾರಂಭಿಸಿದೆ. ಪ್ರಾಚೀನ ಸಮಯಗಳಲ್ಲಿ ಸತ್ಯವಾಗಿದ್ದಂತೆಯೇ, ನಮ್ಮ ಪಾದ್ರಿಗಳು ‘ಸಡಿಲು ನಡತೆಯನ್ನು ಬಿಟ್ಟು ಬೇರೇನನ್ನೂ ನಡೆಸುತ್ತಿರಲಿಲ್ಲ.’ (ಹೋಶೇಯ 6:9, NW) ಇಂತಹ ಪುರುಷರು, ಯಾರ ಕುರಿತು ಯೇಸು ಎಚ್ಚರಿಸಿದನೊ ಆ ಸುಳ್ಳು ಪ್ರವಾದಿಗಳಲ್ಲಿ ಕೆಲವರಾಗಿದ್ದರು! (ಮತ್ತಾಯ 24:24) ನಾನು ಇನ್ನೆಂದೂ ಅವರ ದರ್ಶನಗಳು ಹಾಗೂ ಶಕ್ತಿಶಾಲಿ ಕಾರ್ಯಗಳನ್ನು ನಂಬುವುದಿಲ್ಲ. ಸುಳ್ಳು ಧರ್ಮದಿಂದ ಮುಕ್ತನಾಗಲು ಮತ್ತು ಅದನ್ನೇ ಮಾಡುವಂತೆ ಇತರರಿಗೆ ಸಹಾಯ ಮಾಡಲು ನಾನು ನಿರ್ಧರಿಸಿದೆ.
ಚರ್ಚಿನಲ್ಲಿ ನಾನು ಉಳಿಯುವಂತೆ ಮಾಡಲಾದ ಪ್ರಯತ್ನಗಳು
ಚರ್ಚನ್ನು ಬಿಡಲು ನಾನು ನಿಶ್ಚಯಿಸಿಕೊಂಡಿದ್ದೆ ಎಂಬುದನ್ನು ಚರ್ಚಿನ ಹಿರಿಯರು ಗ್ರಹಿಸಿದಾಗ, ನನ್ನಲ್ಲಿ ಬೇಡಿಕೊಳ್ಳಲು ಪ್ರತಿನಿಧಿಗಳ ತಂಡವೊಂದನ್ನು ಅವರು ಕಳುಹಿಸಿದರು. ಆದಾಯದ ಒಂದು ಪ್ರಮುಖ ಮೂಲವನ್ನು ಕಳೆದುಕೊಳ್ಳಲು ಅವರು ಇಷ್ಟಪಡಲಿಲ್ಲ. ಅವರು ನನ್ನನ್ನು, ಆಕುರಿಯಲ್ಲಿರುವ ಕ್ರೈಸ್ಟ್ ಆ್ಯಪಸ್ಟಾಲಿಕ್ ಚರ್ಚುಗಳಲ್ಲೊಂದರ ಪೋಷಕ, ಬಾಬಾ ಎಗ್ಬನನ್ನಾಗಿ ಮಾಡುತ್ತೇವೆಂದು ಹೇಳಿದರು.
ನಾನು ಅದನ್ನು ನಿರಾಕರಿಸಿ, ಅದರ ಕಾರಣವನ್ನು ನೀಡಿದೆ. “ಚರ್ಚು ನಮಗೆ ಸುಳ್ಳು ಹೇಳುತ್ತಾ ಮುಂದುವರಿದಿದೆ,” ಎಂದು ನಾನಂದೆ. “ಎಲ್ಲ ಒಳ್ಳೆಯ ಜನರು ಸ್ವರ್ಗಕ್ಕೆ ಹೋಗುವರೆಂದು ಅವರು ಹೇಳುತ್ತಾರೆ. ಆದರೆ ನಾನು ಬೈಬಲನ್ನು ಓದಿದ್ದೇನೆ, ಮತ್ತು 1,44,000 ಜನರು ಮಾತ್ರ ಸ್ವರ್ಗಕ್ಕೆ ಹೋಗುವರೆಂದು ನನಗೆ ಮಂದಟ್ಟಾಗಿದೆ. ಇತರ ನೀತಿವಂತ ಜನರು ಪ್ರಮೋದವನ ಭೂಮಿಯ ಮೇಲೆ ಜೀವಿಸುವರು.”—ಮತ್ತಾಯ 5:5; ಪ್ರಕಟನೆ 14:1, 3.
ನನ್ನ ವಿರುದ್ಧ ನನ್ನ ಪತ್ನಿಯರನ್ನು ತಿರುಗಿಸಲು ಚರ್ಚಿನ ಪಾಸ್ಟರನು ಪ್ರಯತ್ನಿಸಿದನು. ನಮ್ಮ ಮನೆಗೆ ಯೆಹೋವನ ಸಾಕ್ಷಿಗಳು ಬರುವುದನ್ನು ತಡೆಯುವಂತೆ ಅವನು ಅವರಿಗೆ ಹೇಳಿದನು. ನನ್ನ ಪತ್ನಿಯರಲ್ಲಿ ಒಬ್ಬಳು ನನ್ನ ಊಟಕ್ಕೆ ವಿಷ ಸೇರಿಸಿದಳು. ಅವರಲ್ಲಿ ಇಬ್ಬರು, ಚರ್ಚಿನಲ್ಲಿ ತಾವು ಕಂಡಿದ್ದ ಒಂದು ದರ್ಶನದ ಕುರಿತು ನನ್ನನ್ನು ಎಚ್ಚರಿಸಿದರು. ನಾನು ಚರ್ಚನ್ನು ಬಿಟ್ಟರೆ ಸತ್ತುಹೋಗುವೆನೆಂದು ಆ ದರ್ಶನವು ತೋರಿಸಿತು. ಅದರ ಹೊರತೂ, ನಾನು ನನ್ನ ಪತ್ನಿಯರಿಗೆ ಸಾಕ್ಷಿನೀಡುತ್ತಾ, ನನ್ನೊಂದಿಗೆ ಕೂಟಗಳಿಗೆ ಬರುವಂತೆ ಅವರನ್ನು ಆಮಂತ್ರಿಸುತ್ತಾ ಇದ್ದೆ. “ನೀವು ಬೇರೆ ಗಂಡಂದಿರನ್ನು ಅಲ್ಲಿ ಕಂಡುಕೊಳ್ಳುವಿರಿ,” ಎಂದು ನಾನು ಹೇಳಿದೆ. ಹಾಗಿದ್ದರೂ, ಅವರಲ್ಲಿ ಒಬ್ಬರಾದರೂ, ಯಾವ ಆಸಕ್ತಿಯನ್ನೂ ತೋರಿಸಲಿಲ್ಲ, ಮತ್ತು ನನ್ನ ಉತ್ಸಾಹವನ್ನು ಕುಗ್ಗಿಸಲು ಅವರು ಪ್ರಯತ್ನಿಸುತ್ತಾ ಇದ್ದರು.
ಅಂತಿಮವಾಗಿ, 1970, ಫೆಬ್ರವರಿ 2ರಂದು, ನಾನು ಪಕ್ಕದ ಪಟ್ಟಣದಿಂದ ಮನೆಗೆ ಹಿಂದಿರುಗಿದಾಗ, ಮನೆಯು ಖಾಲಿಯಾಗಿರುವುದನ್ನು ಕಂಡುಕೊಂಡೆ. ನನ್ನ ಎಲ್ಲ ಪತ್ನಿಯರು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿದ್ದರು.
ಒಬ್ಬ ಪತ್ನಿಗೆ ಅಂಟಿಕೊಳ್ಳುವುದು
‘ಈಗ ನಾನು ನನ್ನ ವೈವಾಹಿಕ ಸನ್ನಿವೇಶವನ್ನು ಸರಿಪಡಿಸಿಕೊಳ್ಳಬಲ್ಲೆ,’ ಎಂಬುದಾಗಿ ನಾನು ನೆನಸಿದೆ. ಮನೆಗೆ ಹಿಂದಿರುಗುವಂತೆ ನನ್ನ ಮೊದಲ ಪತ್ನಿಯಾದ ಜ್ಯಾನೆಟಳನ್ನು ನಾನು ಆಮಂತ್ರಿಸಿದೆ. ಆಕೆ ಒಪ್ಪಿಕೊಂಡಳು. ಆದರೆ ಆಕೆಯ ಕುಟುಂಬವು ಈ ವಿಚಾರವನ್ನು ಬಲವಾಗಿ ವಿರೋಧಿಸಿತು. ನಾನು ಜ್ಯಾನೆಟಳನ್ನು ಹಿಂದಿರುಗುವಂತೆ ಕೇಳಿಕೊಂಡ ವಿಷಯವು ನನ್ನ ಇತರ ಪತ್ನಿಯರಿಗೆ ತಿಳಿದುಬಂದಾಗ, ಅವರು ಆಕೆಯ ತಂದೆಯ ಮನೆಗೆ ಹೋಗಿ, ಆಕೆಯನ್ನು ಹೊಡೆಯಲು ಪ್ರಯತ್ನಿಸಿದರು. ಆಗ ಆಕೆಯ ಕುಟುಂಬವು ನನ್ನನ್ನು ಒಂದು ಕೂಟಕ್ಕೆ ಆಹ್ವಾನಿಸಿತು.
ಆ ಕೂಟಕ್ಕೆ ಸುಮಾರು 80 ವ್ಯಕ್ತಿಗಳು ಉಪಸ್ಥಿತರಿದ್ದರು. ಕುಟುಂಬದ ತಲೆಯಾಗಿದ್ದ ಜ್ಯಾನೆಟಳ ಚಿಕ್ಕಪ್ಪ ಹೇಳಿದ್ದು: “ನಮ್ಮ ಮಗಳನ್ನು ಪುನಃ ವಿವಾಹವಾಗಲು ನೀನು ಬಯಸುವುದಾದರೆ, ಇತರ ಸ್ತ್ರೀಯರನ್ನೂ ನೀನು ಮತ್ತೆ ಕರೆದುಕೊಳ್ಳಬೇಕು. ಆದರೆ ನೀನು ನಿನ್ನ ಹೊಸ ಧರ್ಮವನ್ನು ಆಚರಿಸಲು ಮತ್ತು ಒಬ್ಬ ಪತ್ನಿಯೊಂದಿಗೆ ಜೀವಿಸಲು ಬಯಸುವುದಾದರೆ, ನೀನು ಮತ್ತೊಬ್ಬ ಸ್ತ್ರೀಯನ್ನು ಹುಡುಕಿಕೊಳ್ಳಬೇಕು. ನೀನು ಜ್ಯಾನೆಟಳನ್ನು ಮತ್ತೆ ಕರೆದುಕೊಂಡು ಹೋಗುವಲ್ಲಿ, ನಿನ್ನ ಬೇರೆ ಪತ್ನಿಯರು ಆಕೆಯನ್ನು ಕೊಂದುಹಾಕುವರು, ಮತ್ತು ನಮ್ಮ ಮಗಳು ಮರಣಹೊಂದುವುದು ನಮಗೆ ಇಷ್ಟವಿಲ್ಲ.”
ಬಹಳಷ್ಟು ಮಾತುಕತೆಯ ನಂತರ, ನಾನು ಏಕ ಪತ್ನಿಯುಳ್ಳವನಾಗಿರಲು ದೃಢವಾಗಿ ನಿಶ್ಚಯಿಸಿದ್ದೇನೆಂದು ಆ ಕುಟುಂಬದವರು ಗ್ರಹಿಸಿದರು. ಕೊನೆಗೆ ಅವರು ಮೃದುವಾದರು. ಚಿಕ್ಕಪ್ಪನು ಹೇಳಿದ್ದು: “ನಾವು ನಿನ್ನಿಂದ ನಿನ್ನ ಪತ್ನಿಯನ್ನು ಕಸಿದುಕೊಳ್ಳಲಾರೆವು. ಆಕೆಯನ್ನು ನೀನು ನಿನ್ನೊಂದಿಗೆ ಕರೆದುಕೊಂಡು ಹೋಗಬಹುದು.”
1970, ಮೇ 21ರಂದು, ಜ್ಯಾನೆಟ್ ಮತ್ತು ನಾನು ನ್ಯಾಯಬದ್ಧವಾಗಿ ವಿವಾಹವಾದೆವು. ಒಂಬತ್ತು ದಿನಗಳ ತರುವಾಯ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿ ನಾನು ದೀಕ್ಷಾಸ್ನಾನ ಪಡೆದುಕೊಂಡೆ. ಅದೇ ವರ್ಷದ ಡಿಸೆಂಬರ್ ತಿಂಗಳಿನಲ್ಲಿ, ಜ್ಯಾನೆಟ್ ಸಹ ದೀಕ್ಷಾಸ್ನಾನ ಪಡೆದುಕೊಂಡಳು.
ಯೆಹೋವನ ಆಶೀರ್ವಾದವನ್ನು ಅನುಭವಿಸುವುದು
ನಾವು ಸಾಕ್ಷಿಗಳಾಗುವುದಾದರೆ ಸಾಯುವೆವೆಂದು ನಮ್ಮ ಹಿಂದಿನ ಚರ್ಚ್ ಸದಸ್ಯರು ಭವಿಷ್ಯನುಡಿದಿದ್ದರು. ಅದು ಬಹುಮಟ್ಟಿಗೆ 30 ವರ್ಷಗಳ ಹಿಂದೆ. ನಾನು ಈಗ ಸಾಯುವುದಾದರೂ, ಅದು ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾದ ಕಾರಣದಿಂದಾಗಿರುವುದೊ? ನನ್ನ ಪತ್ನಿ ಈಗ ಸಾಯುವುದಾದರೆ, ಆಕೆ ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾದ ಕಾರಣದಿಂದ ಸತ್ತಳೆಂದು ಯಾರಾದರು ಹೇಳಬಲ್ಲರೊ?
ಸತ್ಯದ ಮಾರ್ಗವನ್ನು ನನ್ನ 17 ಜನ ಮಕ್ಕಳಿಗೆ ತೋರಿಸಲು ನಾನು ಪ್ರಯಾಸಪಟ್ಟಿದ್ದೇನೆ. ನಾನು ಸಾಕ್ಷಿಯಾದ ಸಮಯದಲ್ಲಿ ಅವರಲ್ಲಿ ಹೆಚ್ಚಿನವರು ವಯಸ್ಕರಾಗಿದ್ದರೂ, ಬೈಬಲನ್ನು ಅಧ್ಯಯನಿಸುವಂತೆ ನಾನು ಅವರನ್ನು ಉತ್ತೇಜಿಸಿದೆ ಮತ್ತು ಅವರನ್ನು ಕೂಟಗಳಿಗೆ ಹಾಗೂ ಅಧಿವೇಶನಗಳಿಗೆ ಕರೆದುಕೊಂಡು ಹೋದೆ. ಅವರಲ್ಲಿ ಐದು ಜನರು ನನ್ನೊಂದಿಗೆ ಯೆಹೋವನನ್ನು ಸೇವಿಸುತ್ತಿರುವುದು ಸಂತೋಷದ ವಿಷಯವಾಗಿದೆ. ಒಬ್ಬನು ನನ್ನೊಂದಿಗೆ ಸಭೆಯಲ್ಲಿ ಹಿರಿಯನೋಪಾದಿ ಸೇವೆಸಲ್ಲಿಸುತ್ತಾನೆ. ಮತ್ತೊಬ್ಬನು ಹತ್ತಿರದ ಸಭೆಯಲ್ಲಿ ಒಬ್ಬ ಶುಶ್ರೂಷಾ ಸೇವಕನಾಗಿದ್ದಾನೆ. ನನ್ನ ಮಕ್ಕಳಲ್ಲಿ ಇಬ್ಬರು ಕ್ರಮದ ಪಯನೀಯರರೋಪಾದಿ ಸೇವೆಸಲ್ಲಿಸುತ್ತಾರೆ.
ನಾನು ಹಿನ್ನೋಟ ಬೀರುವಾಗ, ಯೆಹೋವನ ಸೇವಕನಾಗುವಂತೆ ನನಗೆ ಸಹಾಯ ಮಾಡಿದರಲ್ಲಿ ಆತನ ಅಪಾತ್ರ ದಯೆಯ ಕುರಿತು ನಾನು ಆಶ್ಚರ್ಯಗೊಳ್ಳುತ್ತೇನೆ. “ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಎಳೆದ ಹೊರತು ಯಾವನೂ ನನ್ನ ಬಳಿಗೆ ಬರಲಾರನು,” ಎಂಬ ಯೇಸುವಿನ ಮಾತುಗಳು ಎಷ್ಟು ಸತ್ಯ!—ಯೋಹಾನ 6:44.