ಧಾರ್ಮಿಕ ಸ್ವಾತಂತ್ರ್ಯ ನಿಮಗೆ ಯಾವ ಅರ್ಥದಲ್ಲಿದೆ?
ಅಮೆರಿಕದಲ್ಲಿ ಧರ್ಮಸ್ವಾತಂತ್ರ್ಯವು ಮೂಲಭೂತ ಹಕ್ಕಾಗಿ ಪರಿಗಣಿಸಲ್ಪಡುತ್ತದಾದರೂ, 1940ಗಳಲ್ಲಿ ಯೆಹೋವನ ಸಾಕ್ಷಿಗಳ ವಿರುದ್ಧ ದೊಂಬಿ ಹಿಂಸಾಚಾರದ ಆವೇಶವು ದೇಶದಾದ್ಯಂತ ಬೀಸಿತು
ಕೋಟ್ಯಂತರ ಜನರು ಅದಕ್ಕಾಗಿ ಹೋರಾಡಿದ್ದಾರೆ. ಕೆಲವರು ಅದಕ್ಕಾಗಿ ಸತ್ತಿದ್ದಾರೆ ಕೂಡ. ಅದು ನಿಜವಾಗಿಯೂ ಮಾನವಕುಲದ ಅತ್ಯಂತ ಅಮೂಲ್ಯವಾದ ಸ್ವತ್ತುಗಳಲ್ಲಿ ಒಂದಾಗಿದೆ. ಅದೇನು? ಸ್ವಾತಂತ್ರ್ಯ! ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಸ್ವಾತಂತ್ರ್ಯವನ್ನು, “ಆಯ್ಕೆಗಳನ್ನು ಮಾಡಿ, ಅವುಗಳನ್ನು ಪೂರೈಸುವ ಸಾಮರ್ಥ್ಯ” ಎಂಬುದಾಗಿ ಅರ್ಥ ನಿರೂಪಿಸುತ್ತದೆ. ಅದು ಮುಂದುವರಿಸುವುದು: “ಒಂದು ಶಾಸನಬದ್ಧ ವೀಕ್ಷಣೆಯಲ್ಲಿ, ಸಮಾಜವು ಜನರ ಮೇಲೆ ಅನ್ಯಾಯದ, ಅನಾವಶ್ಯಕವಾದ, ಅಥವಾ ಅವಿವೇಕದ ಮೇರೆಗಳನ್ನು ಹೊರಿಸದೇ ಇದ್ದರೆ, ಅವರು ಸ್ವತಂತ್ರರಾಗಿದ್ದಾರೆ. ಸಮಾಜವು ಅವರ ಹಕ್ಕುಗಳನ್ನೂ, ಅಂದರೆ, ಅವರ ಮೂಲ ಸ್ವಾತಂತ್ರ್ಯಗಳು, ಅಧಿಕಾರಗಳು, ಹಾಗೂ ಸುಯೋಗಗಳನ್ನು ಸಂರಕ್ಷಿಸಬೇಕು.”
ಕಲ್ಪನೆಯು ಸರಳವಾಗಿರುವಂತೆ ಧ್ವನಿಸುತ್ತದೆ. ಹಾಗಿದ್ದರೂ, ಆಚರಣೆಯಲ್ಲಿ ನಿಷ್ಕೃಷ್ಟವಾಗಿ ಸ್ವಾತಂತ್ರ್ಯದ ಮೇರೆಗಳು ಎಲ್ಲಿ ಹಾಕಲ್ಪಡಬೇಕು ಎಂಬುದನ್ನು ತಿಳಿದುಕೊಳ್ಳುವುದು ಜನರಿಗೆ ಕಾರ್ಯತಃ ಅಸಾಧ್ಯವೆಂದು ತೋರುತ್ತದೆ. ಉದಾಹರಣೆಗೆ, ಒಂದು ಸರಕಾರವು ತನ್ನ ಪ್ರಜೆಗಳ ಸ್ವಾತಂತ್ರ್ಯವನ್ನು ಸಂರಕ್ಷಿಸಲು ನಿಯಮಗಳನ್ನು ವಿಧಿಸಲೇಬೇಕು ಎಂಬುದಾಗಿ ಕೆಲವರು ನಂಬುತ್ತಾರೆ. ಆದರೆ, ಈ ನಿಯಮಗಳೇ, ಪ್ರಜೆಗಳು ಬಿಡುಗಡೆಯಾಗಬೇಕಾದ ಬೇಡಿಗಳಾಗಿವೆ ಎಂಬುದಾಗಿ ಇತರರು ವಾದಿಸುತ್ತಾರೆ! ಸ್ಪಷ್ಟವಾಗಿ, ಸ್ವಾತಂತ್ರ್ಯವು ವಿವಿಧ ಜನರಿಗೆ ವಿವಿಧ ಅರ್ಥದಲ್ಲಿದೆ.
ಧಾರ್ಮಿಕ ಸ್ವಾತಂತ್ರ್ಯದ ಕುರಿತೇನು?
ಪ್ರಾಯಶಃ ಅತಿ ತೀಕ್ಷ್ಣವಾಗಿ ವಿವಾದಿಸಲ್ಪಡುವ ಸ್ವಾತಂತ್ರ್ಯವು, ಧರ್ಮ ಸ್ವಾತಂತ್ರ್ಯವಾಗಿದೆ. “ಒಬ್ಬನ ಆಯ್ಕೆಯ ನಂಬಿಕೆಯಲ್ಲಿ ವಿಶ್ವಾಸವನ್ನಿಟ್ಟು, ಅದನ್ನು ಅನುಸರಿಸುವ ಹಕ್ಕು” ಎಂಬುದಾಗಿ ಇದನ್ನು ಅರ್ಥ ನಿರೂಪಿಸಲಾಗಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಗನುಸಾರ, “ಪ್ರತಿಯೊಬ್ಬನಿಗೂ ಆಲೋಚನೆಯ, ಮನಸ್ಸಾಕ್ಷಿಯ, ಹಾಗೂ ಧರ್ಮದ ಸ್ವಾತಂತ್ರ್ಯವಿದೆ.” ಇದರಲ್ಲಿ ಒಬ್ಬ ವ್ಯಕ್ತಿಗೆ, “ತನ್ನ ಧರ್ಮ ಅಥವಾ ನಂಬಿಕೆಯನ್ನು ಬದಲಾಯಿಸುವ” ಹಕ್ಕಿನೊಂದಿಗೆ “ತನ್ನ ಧರ್ಮ ಅಥವಾ ನಂಬಿಕೆಯನ್ನು, ಕಲಿಸುವುದರಲ್ಲಿ, ಆಚರಣೆಯಲ್ಲಿ, ಆರಾಧನೆಯಲ್ಲಿ ಹಾಗೂ ಅನುಕರಣೆಯಲ್ಲಿ ವ್ಯಕ್ತಪಡಿಸುವ” ಸ್ವಾತಂತ್ರ್ಯವೂ ಸೇರಿದೆ.—ಕಟ್ಟಳೆ 18.
ನಿಶ್ಚಯವಾಗಿ, ತನ್ನ ಪ್ರಜೆಗಳಿಗಾಗಿ ನಿಜವಾದ ಆಸಕ್ತಿಯನ್ನು ತೋರಿಸುವ ಯಾವುದೇ ರಾಷ್ಟ್ರವು ಅಂತಹ ಸ್ವಾತಂತ್ರ್ಯವನ್ನು ಅನುಮತಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ದುಃಖಕರವಾಗಿ, ಇದು ಯಾವಾಗಲೂ ಸಂಭವಿಸುವುದಿಲ್ಲ. “ಧರ್ಮವು ಅನೇಕ ಜನರ ಅತ್ಯಂತ ಆಳವಾದ ಭಾವನೆಗಳನ್ನು ಪ್ರಭಾವಿಸುತ್ತದೆ,” ಎಂಬುದಾಗಿ ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ದಾಖಲಿಸುತ್ತದೆ. “ಕೆಲವು ಸರಕಾರಗಳಿಗೆ ಒಂದು ಧರ್ಮದೊಂದಿಗೆ ಆಪ್ತ ಸಂಬಂಧವಿದೆ ಮತ್ತು ಅವು ಇತರ ನಂಬಿಕೆಗಳ ಜನರನ್ನು ರಾಜಕೀಯ ಅಧಿಕಾರಕ್ಕೆ ಒಂದು ಬೆದರಿಕೆಯಾಗಿ ಭಾವಿಸುತ್ತವೆ. ಧರ್ಮವು ದೇವರಿಗೆ ಸಲ್ಲಿಸುವ ಸ್ವಾಮಿನಿಷ್ಠೆಯನ್ನು, ರಾಜ್ಯಕ್ಕೆ ತೋರಿಸುವ ವಿಧೇಯತೆಗಿಂತಲೂ ಮೇಲಿನ ಸ್ಥಾನದಲ್ಲಿಡಬಹುದಾದುದರಿಂದಲೂ ಒಂದು ಸರಕಾರವು ಧರ್ಮವನ್ನು ರಾಜಕೀಯಕ್ಕೆ ಒಂದು ಗಂಡಾಂತರವಾಗಿ ಭಾವಿಸಬಹುದು.”
ಈ ಕಾರಣಗಳಿಗಾಗಿ ಕೆಲವು ಸರಕಾರಗಳು ಧರ್ಮಾಚರಣೆಯ ಮೇಲೆ ನಿರ್ಬಂಧಗಳನ್ನು ಇಡುತ್ತವೆ. ಕೆಲವು ಸರಕಾರಗಳು ಯಾವುದೇ ನಂಬಿಕೆಯ ಆಚರಣೆಯನ್ನು ನಿರುತ್ತೇಜಿಸುತ್ತವೆ. ಇತರ ಸರಕಾರಗಳು, ಧಾರ್ಮಿಕ ಸ್ವಾತಂತ್ರ್ಯವನ್ನು ಬೆಂಬಲಿಸುವುದಾಗಿ ಹೇಳಿಕೊಂಡರೂ, ಎಲ್ಲ ಧಾರ್ಮಿಕ ಚಟುವಟಿಕೆಗಳ ಮೇಲೆ ಒಂದು ಬಿಗಿಯಾದ ಹಿಡಿತವನ್ನು ಇಡುತ್ತವೆ.
ಉದಾಹರಣೆಗೆ, ಅನೇಕ ವರುಷಗಳಿಂದ ಮೆಕ್ಸಿಕೊದಲ್ಲಿದ್ದ ಪರಿಸ್ಥಿತಿಯನ್ನು ಗಮನಿಸಿರಿ. ಸಂವಿಧಾನವು ಧಾರ್ಮಿಕ ಸ್ವಾತಂತ್ರ್ಯದ ಖಾತರಿಯನ್ನು ಕೊಟ್ಟಿತಾದರೂ, ಅದು ಷರತ್ತು ಹಾಕಿದ್ದು: “ಸಾರ್ವಜನಿಕ ಆರಾಧನೆಗಾಗಿ ಉಪಯೋಗಿಸಲ್ಪಡುವ ಚರ್ಚುಗಳು, ಫೆಡರಲ್ ಸರಕಾರದಿಂದ ಪ್ರತಿನಿಧೀಕರಿಸಲ್ಪಟ್ಟಿರುವ ರಾಷ್ಟ್ರದ ಸ್ವತ್ತಾಗಿವೆ, ಯಾವುದನ್ನು ಹಾಗೆ ಉಪಯೋಗಿಸುತ್ತ ಮುಂದುವರಿಯಬಹುದೆಂಬುದು ಅದು ನಿರ್ಧರಿಸುತ್ತದೆ.” 1991ರಲ್ಲಿ ಈ ನಿರ್ಬಂಧವನ್ನು ಅಂತ್ಯಗೊಳಿಸಲು ಸಂವಿಧಾನವನ್ನು ತಿದ್ದುಪಡಿಸಲಾಯಿತು. ಆದರೂ, ವಿವಿಧ ದೇಶಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ವಿವಿಧ ರೀತಿಯಲ್ಲಿ ಅರ್ಥವಿವರಿಸಬಹುದು ಎಂಬುದನ್ನು ಈ ಉದಾಹರಣೆಯು ಚಿತ್ರಿಸುತ್ತದೆ.
ಇನ್ನೊಂದು ರೀತಿಯ ಧಾರ್ಮಿಕ ಸ್ವಾತಂತ್ರ್ಯ
ನೀವು ಜೀವಿಸುತ್ತಿರುವ ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಅಸ್ತಿತ್ವದಲ್ಲಿದೆಯೆ? ಹಾಗಿದ್ದರೆ, ಅದು ಹೇಗೆ ಸ್ಪಷ್ಟೀಕರಿಸಲ್ಪಟ್ಟಿದೆ? ನೀವು ಇಚ್ಛಿಸುವ ರೀತಿಯಲ್ಲಿ ನೀವು ದೇವರನ್ನು ಆರಾಧಿಸಬಹುದೊ, ಅಥವಾ ರಾಜ್ಯ ಧರ್ಮದ ಸದಸ್ಯರಾಗುವಂತೆ ನೀವು ಒತ್ತಾಯಿಸಲ್ಪಟ್ಟಿದ್ದೀರೊ? ಧಾರ್ಮಿಕ ಸಾಹಿತ್ಯವನ್ನು ಓದುವಂತೆ ಮತ್ತು ಪ್ರಸಾರಮಾಡುವಂತೆ ನೀವು ಅನುಮತಿಸಲ್ಪಟ್ಟಿದ್ದೀರೊ, ಅಥವಾ ಅಂತಹ ಮುದ್ರಿತ ವಿಷಯವು ಸರಕಾರದಿಂದ ಬಹಿಷ್ಕರಿಸಲ್ಪಟ್ಟಿದೆಯೊ? ನಿಮ್ಮ ವಿಶ್ವಾಸದ ಕುರಿತು ನೀವು ಇತರರೊಂದಿಗೆ ಮಾತನಾಡಬಹುದೊ, ಅಥವಾ ಇದು ಅವರ ಧಾರ್ಮಿಕ ಹಕ್ಕುಗಳ ಉಲ್ಲಂಘನೆಯೆಂದು ಪರಿಗಣಿಸಲ್ಪಡುತ್ತದೊ?
ಈ ಪ್ರಶ್ನೆಗಳಿಗೆ ಉತ್ತರವು ನೀವು ಎಲ್ಲಿ ಜೀವಿಸುತ್ತೀರೊ ಅದರ ಮೇಲೆ ಹೊಂದಿಕೊಂಡಿದೆ. ಹಾಗಿದ್ದರೂ, ಆಸಕ್ತಿಕರವಾಗಿ, ಯಾವುದೇ ಸ್ಥಳಕ್ಕೆ ಹೊಂದಿಕೊಳ್ಳದ ಒಂದು ವಿಧದ ಧಾರ್ಮಿಕ ಸ್ವಾತಂತ್ರ್ಯವಿದೆ. ಸಾ. ಶಾ. 32ರ ವರುಷದಲ್ಲಿ ಯೇಸು ಯೆರೂಸಲೇಮಿನಲ್ಲಿದ್ದಾಗ ತನ್ನ ಶಿಷ್ಯರಿಗೆ ಹೇಳಿದ್ದು: “ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡವರಾದರೆ ನಿಜವಾಗಿ ನನ್ನ ಶಿಷ್ಯರಾಗಿದ್ದು ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು.”—ಯೋಹಾನ 8:31, 32.
ಈ ಹೇಳಿಕೆಯನ್ನು ಯೇಸು ಯಾವ ಅರ್ಥದಲ್ಲಿ ಹೇಳಿದನು? ಅವನಿಗೆ ಕಿವಿಗೊಡುತ್ತಿದ್ದ ಯೆಹೂದ್ಯರು, ರೋಮನರ ಅಧಿಕಾರದಿಂದ ಬಿಡುಗಡೆಯನ್ನು ಹಾರೈಸುತ್ತಿದ್ದರು. ಆದರೆ ಯೇಸು ರಾಜಕೀಯ ದಬ್ಬಾಳಿಕೆಯಿಂದ ಸಿಗುವ ಸ್ವಾತಂತ್ರ್ಯದ ವಿಷಯವಾಗಿ ಚರ್ಚಿಸುತ್ತಿರಲಿಲ್ಲ. ಬದಲಾಗಿ, ನಾವು ಮುಂದಿನ ಲೇಖನದಲ್ಲಿ ಪರಿಗಣಿಸಲಿರುವಂತೆ, ಅವನು ತನ್ನ ಶಿಷ್ಯರಿಗೆ ಅದಕ್ಕಿಂತಲೂ ಹೆಚ್ಚು ಉತ್ತಮವಾದ ವಿಷಯವನ್ನು ವಾಗ್ದಾನಿಸುತ್ತಿದ್ದನು.