ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w97 3/1 ಪು. 14-19
  • ಎಚ್ಚರವಾಗಿರುವವರು ಧನ್ಯರು!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಎಚ್ಚರವಾಗಿರುವವರು ಧನ್ಯರು!
  • ಕಾವಲಿನಬುರುಜು—1997
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಕಳ್ಳನಂತೆ ಬರುವುದು
  • ನಾವು ಎಚ್ಚರವಾಗಿರಬಲ್ಲ ವಿಧ
  • ಸಮಯವು ಮೀರಿಹೋಗುತ್ತಿದೆ
  • ನಾವು ಖಂಡಿತವಾಗಿಯೂ ಎಚ್ಚರವಾಗಿರಬೇಕು!
  • “ಎಚ್ಚರವಾಗಿರಿ”!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಯೆಹೋವನ ದಿನಕ್ಕಾಗಿ ನೀವು ಸಿದ್ಧರಾಗಿದ್ದೀರೆಂಬುದನ್ನು ತೋರಿಸಿಕೊಡಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • “ಅಂತ್ಯ ಕಾಲದಲ್ಲಿ” ಎಚ್ಚರವಾಗಿರ್ರಿ
    ಕಾವಲಿನಬುರುಜು—1992
  • “ಎಚ್ಚರವಾಗಿರ್ರಿ”
    2000 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ಕಾವಲಿನಬುರುಜು—1997
w97 3/1 ಪು. 14-19

ಎಚ್ಚರವಾಗಿರುವವರು ಧನ್ಯರು!

“ಇಗೋ, ನಾನು ಕಳ್ಳನಂತೆ ಬರುತ್ತಿದ್ದೇನೆ, . . . ಎಚ್ಚರವಾಗಿರುವವನು ಮತ್ತು ತನ್ನ ಹೊರ ಉಡುಪುಗಳನ್ನು ಕಾಪಾಡಿಕೊಳ್ಳುವವನು ಧನ್ಯನು.”—ಪ್ರಕಟನೆ 16:15, NW.

1. ಯೆಹೋವನ ದಿನವು ಹತ್ತಿರವಿರುವುದರಿಂದ ನಾವು ಏನನ್ನು ನಿರೀಕ್ಷಿಸಬಲ್ಲೆವು?

ಯೆಹೋವನ ಮಹಾದಿನವು ಹತ್ತಿರವದೆ, ಮತ್ತು ಅದು ಯುದ್ಧವನ್ನು ಅರ್ಥೈಸುತ್ತದೆ! ದರ್ಶನದಲ್ಲಿ ಅಪೊಸ್ತಲ ಯೋಹಾನನು, “ದೆವ್ವಗಳಿಂದ ಪ್ರೇರಿಸಲ್ಪಟ್ಟ” ಕಪ್ಪೆಗಳಂತಹ “ಅಭಿವ್ಯಕ್ತಿಗಳು” ಭೂಮಿಯ ಎಲ್ಲ “ರಾಜರ” ಅಥವಾ ಪ್ರಭುಗಳ ಬಳಿಗೆ ಹೋಗುವುದನ್ನು ಕಂಡನು. ಏನನ್ನು ಮಾಡಲು? “ಸರ್ವಶಕ್ತ ದೇವರ ಮಹಾ ದಿನದ ಯುದ್ಧಕ್ಕೆ ಅವರನ್ನು ಒಟ್ಟುಗೂಡಿಸಲು”! ಯೋಹಾನನು ಕೂಡಿಸಿದ್ದು: “ಅವು ಅವರನ್ನು ಇಬ್ರಿಯ ಭಾಷೆಯಲ್ಲಿ ಹರ್ಮಗೆದೋನ್‌ ಎಂಬ ಹೆಸರುಳ್ಳ ಸ್ಥಳಕ್ಕೆ ಕೂಡಿಸಿದವು.”—ಪ್ರಕಟನೆ 16:13-16, NW.

2. ಮಾಗೋಗದ ಗೋಗನು ಯಾರು, ಮತ್ತು ಅವನು ಯೆಹೋವನ ಜನರನ್ನು ಆಕ್ರಮಿಸುವಾಗ ಏನು ಸಂಭವಿಸುವುದು?

2 ಬೇಗನೆ, ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲನ್ನು ನಾಶಮಾಡುವಂತೆ, ಯೆಹೋವನು ಈ ವ್ಯವಸ್ಥೆಯ ರಾಜಕೀಯ ಘಟಕಾಂಶವನ್ನು ಪ್ರೇರಿಸುವನು. (ಪ್ರಕಟನೆ 17:1-5, 15-17) ಆಗ ಮಾಗೋಗದ ಗೋಗನು, ಈ ಭೂಮಿಯ ಪರಿಸರಕ್ಕೆ ದೊಬ್ಬಲ್ಪಟ್ಟ ಪಿಶಾಚನಾದ ಸೈತಾನನು, ತನ್ನ ತಂಡಗಳನ್ನು ಕೂಡಿಸಿಕೊಂಡು, ಯೆಹೋವನ ಶಾಂತಿಪೂರ್ಣ, ಅರಕ್ಷಿತರೆಂದು ತೋರುವ ಜನರ ಮೇಲೆ ಸಂಪೂರ್ಣ ಆಕ್ರಮಣವನ್ನು ಮಾಡುವನು. (ಯೆಹೆಜ್ಕೇಲ 38:1-12) ಆದರೆ ತನ್ನ ಜನರನ್ನು ಕಾಪಾಡಲು ದೇವರು ಕ್ರಿಯೆಗೈಯುವನು. ಅದು “ಯೆಹೋವನ . . . ಭಯಂಕರವಾದ ಮಹಾದಿನ”ದ ಆರಂಭವನ್ನು ಗುರುತಿಸುವುದು.—ಯೋವೇಲ 2:31; ಯೆಹೆಜ್ಕೇಲ 38:18-20.

3. ಯೆಹೆಜ್ಕೇಲ 38:21-23ರಲ್ಲಿ ಮುಂತಿಳಿಸಲ್ಪಟ್ಟ ವಿಕಸನಗಳನ್ನು ನೀವು ಹೇಗೆ ವರ್ಣಿಸುವಿರಿ?

3 ಹೌದು, ಯೆಹೋವನು ತನ್ನ ಜನರನ್ನು ಕಾಪಾಡುವನು ಮತ್ತು ಹರ್ಮಗೆದೋನ್‌ ಅಥವಾ ಅರ್ಮಗೆದೋನ್‌ ಎಂಬುದಾಗಿ ಕರೆಯಲ್ಪಡುವ ಲೋಕ ಸನ್ನಿವೇಶವನ್ನು ನಾವು ತಲಪುವಾಗ, ಸೈತಾನನ ವ್ಯವಸ್ಥೆಯ ಪ್ರತಿಯೊಂದು ಕಡೆಯ ಅವಶೇಷವನ್ನು ನಾಶಮಾಡುವನು. ಯೆಹೆಜ್ಕೇಲ 38:21-23ರಲ್ಲಿರುವ ಪ್ರವಾದನಾತ್ಮಕ ಮಾತುಗಳನ್ನು ಓದಿ, ದೃಶ್ಯವನ್ನು ಚಿತ್ರಿಸಿಕೊಳ್ಳಿರಿ. ಉಕ್ಕಿಹರಿಯುವ ಬಿರುಮಳೆಯನ್ನು, ವಿಧ್ವಂಸಕ ಆಲಿಕಲ್ಲುಗಳನ್ನು, ಮಿಂಚುವೇಗದ ಬೆಂಕಿಯನ್ನು, ಮಾರಕವಾದ ಅಂಟು ರೋಗವನ್ನು ಬರಮಾಡಲು ಯೆಹೋವನು ತನ್ನ ಶಕ್ತಿಯನ್ನು ಉಪಯೋಗಿಸುತ್ತಾನೆ. ಗೋಗನ ತಂಡಗಳು ಒಬ್ಬರ ವಿರುದ್ಧವಾಗಿ ಮತ್ತೊಬ್ಬರು ಹೋರಾಡುತ್ತಾ ಗಲಿಬಿಲಿಗೊಳ್ಳುವಾಗ, ಎಲ್ಲೆಡೆಯೂ ಅತಿಯಾದ ಭೀತಿಯಿರುತ್ತದೆ. ತನ್ನ ಸೇವಕರನ್ನು ರಕ್ಷಿಸಲು ಅಲೌಕಿಕ ಸಾಧನಗಳನ್ನು ಯೆಹೋವನು ಉಪಯೋಗಿಸಿದಂತೆ ಸರ್ವಶಕ್ತ ದೇವರ ಬದುಕಿ ಉಳಿದಿರುವ ವೈರಿಗಳೆಲ್ಲ ವಧಿಸಲ್ಪಡುತ್ತಾರೆ. ಮುಂತಿಳಿಸಲ್ಪಟ್ಟ “ಮಹಾ ಸಂಕಟ”ವು (NW) ಪೂರ್ತಿಗೊಂಡ ಬಳಿಕ, ಸೈತಾನನ ಭಕ್ತಿಹೀನ ವ್ಯವಸ್ಥೆಯಲ್ಲಿ ಯಾವ ವಿಷಯವೂ ಉಳಿದಿರುವುದಿಲ್ಲ. (ಮತ್ತಾಯ 24:21) ಆದರೂ, ಮರಣ ಯಾತನೆಯಲ್ಲಿಯೂ ತಮ್ಮ ವಿಪತ್ತಿಗೆ ಯಾರು ಹೊಣೆಗಾರನೆಂದು ದುಷ್ಟರು ಅರಿತುಕೊಳ್ಳುವರು. ನಮ್ಮ ವಿಜಯೀ ದೇವರು ಸ್ವತಃ ಹೇಳುವುದು: “ನಾನೇ ಯೆಹೋವನು ಎಂದು ತಿಳಿದುಕೊಳ್ಳು”ವರು. ಈ ಅಸಾಧಾರಣ ಘಟನೆಗಳು ನಮ್ಮ ದಿನದಲ್ಲಿ, ಯೇಸುವಿನ ಸಾನ್ನಿಧ್ಯದ ಸಮಯದಲ್ಲಿ ಸಂಭವಿಸುವವು.

ಕಳ್ಳನಂತೆ ಬರುವುದು

4. ಈ ದುಷ್ಟ ವಿಷಯಗಳ ವ್ಯವಸ್ಥೆಯನ್ನು ನಾಶಮಾಡಲು ಯೇಸು ಯಾವ ವಿಧದಲ್ಲಿ ಬರುವನು?

4 ಮಹಿಮಾನ್ವಿತ ಕರ್ತನಾದ ಯೇಸು ಕ್ರಿಸ್ತನು ಹೇಳಿದ್ದು: “ಇಗೋ, ನಾನು ಕಳ್ಳನಂತೆ ಬರುತ್ತಿದ್ದೇನೆ.” ಕಳ್ಳನಂತಹ ಬರುವಿಕೆಯು ಹಠಾತ್ತನೆ, ಹೆಚ್ಚಿನ ಜನರು ನಿದ್ರಿಸುತ್ತಿರುವಾಗ, ಒಂದು ಅನಿರೀಕ್ಷಿತ ಸಮಯದಲ್ಲಾಗಿರುತ್ತದೆ. ಈ ದುಷ್ಟ ವ್ಯವಸ್ಥೆಯನ್ನು ನಾಶಪಡಿಸಲು ಯೇಸು ಕಳ್ಳನಂತೆ ಬರುವಾಗ, ನಿಜವಾಗಿಯೂ ಎಚ್ಚರವಾಗಿರುವವರನ್ನು ಅವನು ಕಾಪಾಡುವನು. ಅವನು ಯೋಹಾನನಿಗೆ ಹೇಳಿದ್ದು: “ತಾನು ನಗ್ನನಾಗಿ ನಡೆಯದಂತೆ ಮತ್ತು ಜನರು ತನ್ನ ನಾಚಿಕೆಗೇಡಿತನವನ್ನು ನೋಡದಂತೆ ಎಚ್ಚರವಾಗಿರುವವನು ಮತ್ತು ತನ್ನ ಹೊರ ಉಡುಪುಗಳನ್ನು ಕಾಪಾಡಿಕೊಳ್ಳುವವನು ಧನ್ಯನು.” (ಪ್ರಕಟನೆ 16:15, NW) ಆ ಮಾತುಗಳ ಅರ್ಥವೇನು? ಮತ್ತು ನಾವು ಆತ್ಮಿಕವಾಗಿ ಹೇಗೆ ಎಚ್ಚರವಾಗಿರಬಲ್ಲೆವು?

5. ಯೇಸು ಭೂಮಿಯಲ್ಲಿದ್ದಾಗ ದೇವಾಲಯದ ಸೇವೆಗಾಗಿ ಯಾವ ಏರ್ಪಾಡು ಅಸ್ತಿತ್ವದಲ್ಲಿತ್ತು?

5 ಸಾಮಾನ್ಯವಾಗಿ, ಕಾವಲುಗಾರನೊಬ್ಬನು ಕೆಲಸದ ಸಮಯದಲ್ಲಿ ನಿದ್ರೆಹೋಗುವಾಗ ಅವನನ್ನು ಬತ್ತಲೆಮಾಡಲಾಗುತ್ತಿರಲಿಲ್ಲ. ಆದರೆ ಯೇಸು ಭೂಮಿಯ ಮೇಲಿದ್ದಾಗ ಮತ್ತು ಯೆರೂಸಲೇಮಿನ ದೇವಾಲಯದಲ್ಲಿ ಯಾಜಕರ ಮತ್ತು ಲೇವಿಯರ ವಿಭಾಗಗಳು ಸೇವೆಸಲ್ಲಿಸುತ್ತಿದ್ದಾಗ, ಯೆರೂಸಲೇಮಿನ ದೇವಾಲಯದಲ್ಲಿ ಅದು ಸಂಭವಿಸಿತು. ಸಾ.ಶ.ಪೂ. 11ನೆಯ ಶತಮಾನದಲ್ಲಿ ರಾಜ ದಾವೀದನು, ಇಸ್ರಾಯೇಲಿನ ನೂರಾರು ಯಾಜಕರನ್ನು ಮತ್ತು ಅವರ ಸಾವಿರಾರು ಲೇವಿ ಕುಲದ ಸಹಾಯಕರನ್ನು 24 ವಿಭಾಗಗಳುಳ್ಳ ಒಂದು ಸಂಘಟನೆಯಾಗಿ ರೂಪಿಸಿದನು. (1 ಪೂರ್ವಕಾಲವೃತ್ತಾಂತ 24:1-18) ತರಬೇತುಪಡೆದ ಒಂದು ಸಾವಿರಕ್ಕಿಂತಲೂ ಹೆಚ್ಚಿನ ಕಾರ್ಮಿಕರಿದ್ದ ಪ್ರತಿಯೊಂದು ವಿಭಾಗವು, ವರ್ಷಕ್ಕೆ ಎರಡು ಬಾರಿ—ಪ್ರತಿಸಲ ಒಂದು ಸಂಪೂರ್ಣ ವಾರದ ತನಕ—ದೇವಾಲಯದ ಸೇವಾ ವೈಶಿಷ್ಟ್ಯಗಳನ್ನು ನಿರ್ವಹಿಸುವುದರಲ್ಲಿ ಸರದಿಗಳನ್ನು ತೆಗೆದುಕೊಂಡಿತು. ಪರ್ಣಶಾಲೆಗಳ ಉತ್ಸವದಲ್ಲಾದರೊ, ಕೆಲಸಕ್ಕಾಗಿ ಎಲ್ಲ 24 ವಿಭಾಗಗಳವರು ಉಪಸ್ಥಿತರಿದ್ದರು. ಪಸ್ಕದ ಉತ್ಸವಗಳಲ್ಲೂ ಹೆಚ್ಚಿನ ಸಹಾಯವು ಬೇಕಾಗುತ್ತಿತ್ತು.

6. “ಎಚ್ಚರವಾಗಿರುವವನು ಮತ್ತು ತನ್ನ ಹೊರ ಉಡುಪುಗಳನ್ನು ಕಾಪಾಡಿಕೊಳ್ಳುವವನು ಧನ್ಯನು” ಎಂದು ಯೇಸು ಹೇಳಿದಾಗ, ಅವನು ಯಾವ ವಿಷಯವನ್ನು ಸೂಚಿಸಿಹೇಳಿರಬಹುದು?

6 “ಎಚ್ಚರವಾಗಿರುವವನು ಮತ್ತು ತನ್ನ ಹೊರ ಉಡುಪುಗಳನ್ನು ಕಾಪಾಡಿಕೊಳ್ಳುವವನು ಧನ್ಯನು” ಎಂಬುದಾಗಿ ಯೇಸು ಹೇಳಿದಾಗ, ಆ ಸಮಯದಲ್ಲಿ, ದೇವಾಲಯದಲ್ಲಿ ಕಾವಲು ಕೆಲಸವನ್ನೊಳಗೊಂಡ ಒಂದು ಕಾರ್ಯವಿಧಾನದ ಕುರಿತು ಅವನು ಸೂಚಿಸಿಹೇಳುತ್ತಿದ್ದಿರಬಹುದು. ಯೆಹೂದಿ ಮಿಷ್ನಾ ಹೇಳುವುದು: “ಯಾಜಕರು ದೇವಾಲಯದ ಮೂರು ಸ್ಥಳಗಳಲ್ಲಿ ಕಾವಲಿಟ್ಟರು: ಅಬ್ಟಿನಸ್‌ ಮನೆತನದ ಕೋಣೆ, ಜ್ವಾಲೆಯ ಕೋಣೆ, ಮತ್ತು ಅಗ್ನಿಕುಂಡದ ಕೋಣೆಯ ಬಳಿಯಲ್ಲಿ; ಮತ್ತು ಲೇವಿಯರು ಇಪ್ಪತ್ತೊಂದು ಸ್ಥಳಗಳಲ್ಲಿ: ದೇವಾಲಯ ಬೆಟ್ಟದ ಐದು ದ್ವಾರಗಳಲ್ಲಿ ಐವರು, ನಾಲ್ವರು ಅದರ ಒಳಗಿನ ನಾಲ್ಕು ಮೂಲೆಗಳಲ್ಲಿ, ದೇವಾಲಯ ಅಂಗಳದ ಐದು ದ್ವಾರಗಳಲ್ಲಿ ಐವರು, ನಾಲ್ವರು ಅದರ ಹೊರಗಿನ ನಾಲ್ಕು ಮೂಲೆಗಳಲ್ಲಿ, ಒಬ್ಬನು ಅರ್ಪಣೆಗಳ ಕೋಣೆಯ ಬಳಿ, ಮತ್ತು ಒಬ್ಬನು ತೆರೆಯ ಕೋಣೆಯ ಬಳಿ, ಮತ್ತು ಒಬ್ಬನು ಕೃಪಾಸನವಿರುವ ಸ್ಥಳದ ಹಿಂದೆ [ಮಹಾಪವಿತ್ರಸ್ಥಾನದ ಹಿಂಗೋಡೆಯ ಹೊರಗೆ]. ದೇವಾಲಯ ಬೆಟ್ಟದ ಅಧಿಕಾರಿಯು—ಅವನ ಮುಂದೆ ಬೆಳಗಿದ ದೀಪಗಳೊಂದಿಗೆ—ಪ್ರತಿ ಕಾವಲುಗಾರನಲ್ಲಿಗೆ ತನಿಖೆಗಾಗಿ ಸುತ್ತಾಡಿಬರುತ್ತಿದ್ದನು, ಮತ್ತು ಕಾವಲುಗಾರನಲ್ಲಿ ಯಾವನಾದರೂ ಎದ್ದುನಿಂತು, ‘ದೇವಾಲಯ ಬೆಟ್ಟದ ಅಧಿಕಾರಿಯೇ, ನಿನಗೆ ಶುಭವಾಗಲಿ!’ ಎಂದು ಹೇಳದಿದ್ದಲ್ಲಿ ಮತ್ತು ಅವನು ನಿದ್ರಿಸುತ್ತಿದ್ದನೆಂಬುದು ವ್ಯಕ್ತವಾಗುವಲ್ಲಿ, ಅಧಿಕಾರಿಯು ಅವನನ್ನು ತನ್ನ ಕೋಲಿನಿಂದ ಹೊಡೆಯುತ್ತಿದ್ದನು, ಮತ್ತು ಕಾವಲುಗಾರನ ಉಡುಪನ್ನು ಸುಟ್ಟುಬಿಡುವ ಹಕ್ಕು ಅವನಿಗಿತ್ತು.”—ದ ಮಿಷ್ನಾ, ಮಿಡಾತ್‌ (“ಅಳತೆಗಳು”), 1, 1-2 ಪ್ಯಾರಗ್ರಾಫ್‌ಗಳು, ಹರ್ಬಟ್‌ ಡ್ಯಾನ್ಬಿ ಅವರಿಂದ ಭಾಷಾಂತರಿಸಲ್ಪಟ್ಟದ್ದು.

7. ದೇವಾಲಯದಲ್ಲಿ ಕಾವಲು ಕೆಲಸಕ್ಕಾಗಿದ್ದ ಯಾಜಕರು ಮತ್ತು ಲೇವಿಯರು ಏಕೆ ಎಚ್ಚರವಾಗಿರಬೇಕಿತ್ತು?

7 ಸೇವೆಸಲ್ಲಿಸುವ ವಿಭಾಗದ ಅನೇಕ ಲೇವಿಯರು ಮತ್ತು ಯಾಜಕರು, ಕಾವಲಿಡಲು ಮತ್ತು ದೇವಾಲಯದ ಅಂಗಳಗಳೊಳಗೆ ಯಾವನೇ ಅಶುದ್ಧನು ಪ್ರವೇಶಿಸುವುದನ್ನು ತಡೆಯಲು ಇಡೀ ರಾತ್ರಿ ಎಚ್ಚರವಾಗಿರುತ್ತಿದ್ದರು. “ದೇವಾಲಯ ಬೆಟ್ಟದ ಅಧಿಕಾರಿ” ಅಥವಾ “ದೇವಾಲಯದ ಅಧಿಪತಿ”ಯು ರಾತ್ರಿಯ ಕಾವಲುಗಳಲ್ಲಿ ಎಲ್ಲ 24 ಸ್ಥಳಗಳನ್ನು ಸುತ್ತಾಡಿಕೊಂಡು ಬರುತ್ತಿದ್ದ ಕಾರಣ, ಪ್ರತಿಯೊಬ್ಬ ಕಾವಲುಗಾರನು ಅನಿರೀಕ್ಷಿತವಾಗಿ ಹಿಡಿಯಲ್ಪಡಲು ಬಯಸದಿದ್ದಲ್ಲಿ, ತನ್ನ ನೇಮಕದಲ್ಲಿ ಎಚ್ಚರವಾಗಿರಬೇಕಿತ್ತು.—ಅ. ಕೃತ್ಯಗಳು 4:2.

8. ಕ್ರೈಸ್ತನೊಬ್ಬನ ಸಾಂಕೇತಿಕ ಹೊರ ಉಡುಪುಗಳಾವುವು?

8 ಅಭಿಷಿಕ್ತ ಕ್ರೈಸ್ತರು ಮತ್ತು ಅವರ ಜೊತೆ ಸೇವಕರು ಆತ್ಮಿಕವಾಗಿ ಎಚ್ಚರವಾಗಿದ್ದು, ತಮ್ಮ ಸಾಂಕೇತಿಕ ಹೊರ ಉಡುಪುಗಳನ್ನು ಕಾಪಾಡಿಕೊಳ್ಳಬೇಕು. ಇವು ಯೆಹೋವನ ಆತ್ಮಿಕ ದೇವಾಲಯದಲ್ಲಿನ ಶುಶ್ರೂಷೆಗೆ ನಮ್ಮ ನೇಮಕಾತಿಯ ಬಾಹ್ಯ ಪ್ರಮಾಣಗಳಾಗಿವೆ. ಇದನ್ನು ಗ್ರಹಿಸಿಕೊಳ್ಳುತ್ತಾ, ರಾಜ್ಯ ಘೋಷಕರೋಪಾದಿ ನಮ್ಮ ಕರ್ತವ್ಯಗಳನ್ನು ಮಾಡಲು ಮತ್ತು ನಮ್ಮ ಸುಯೋಗಗಳನ್ನು ನೆರವೇರಿಸಲು ನಮಗೆ ಸಹಾಯ ಮಾಡಲಿಕ್ಕಾಗಿ ದೇವರ ಪವಿತ್ರಾತ್ಮ ಅಥವಾ ಸಕ್ರಿಯ ಶಕ್ತಿ ನಮಗಿದೆ. ದೇವರ ಶುಶ್ರೂಷಕರೋಪಾದಿ ನಮ್ಮ ನೇಮಕವನ್ನು ಅಲಕ್ಷಿಸುವುದು, ಮಹಾ ಆತ್ಮಿಕ ದೇವಾಲಯದ ಅಧಿಪತಿಯಾದ ಯೇಸು ಕ್ರಿಸ್ತನಿಂದ ಹಿಡಿಯಲ್ಪಡುವ ಅಪಾಯದಲ್ಲಿ ನಮ್ಮನ್ನು ಇರಿಸುವುದು. ಆ ಸಮಯದಲ್ಲಿ ನಾವು ಆತ್ಮಿಕವಾಗಿ ನಿದ್ರಿಸುತ್ತಿರುವಲ್ಲಿ, ನಾವು ಸಾಂಕೇತಿಕವಾಗಿ ಬತ್ತಲೆಮಾಡಲ್ಪಟ್ಟು, ನಮ್ಮ ಅಲಂಕಾರಿಕ ಉಡುಪುಗಳು ಸುಟ್ಟುಹಾಕಲ್ಪಡುವವು. ಆದುದರಿಂದ ನಾವು ಹೇಗೆ ಆತ್ಮಿಕವಾಗಿ ಎಚ್ಚರವಾಗಿರಬಲ್ಲೆವು?

ನಾವು ಎಚ್ಚರವಾಗಿರಬಲ್ಲ ವಿಧ

9. ಕ್ರೈಸ್ತ ಪ್ರಕಾಶನಗಳ ಸಹಾಯದಿಂದ ಬೈಬಲಿನ ಅಧ್ಯಯನವು ಏಕೆ ಅಷ್ಟು ಪ್ರಾಮುಖ್ಯವಾಗಿದೆ?

9 ಕ್ರೈಸ್ತ ಪ್ರಕಾಶನಗಳ ಸಹಾಯದಿಂದ ಶಾಸ್ತ್ರಗಳ ಶ್ರದ್ಧಾಪೂರ್ವಕ ಅಧ್ಯಯನವು, ಆತ್ಮಿಕ ಜಾಗೃತಿಗೆ ಒಂದು ಉತ್ತೇಜಕವಾಗಿದೆ. ಅಂತಹ ಅಧ್ಯಯನವು ನಮ್ಮನ್ನು ಶುಶ್ರೂಷೆಗೆ ಸಜ್ಜುಗೊಳಿಸುವುದು, ಸಂದಿಗ್ಧ ಸಮಯಗಳನ್ನು ಎದುರಿಸಲು ಸಹಾಯಮಾಡುವುದು, ಮತ್ತು ಅನಂತ ಸಂತೋಷಕ್ಕಿರುವ ಮಾರ್ಗವನ್ನು ನಮಗೆ ತೋರಿಸುವುದು. (ಜ್ಞಾನೋಕ್ತಿ 8:34, 35; ಯಾಕೋಬ 1:5-8) ನಮ್ಮ ಅಧ್ಯಯನವು ಸಂಪೂರ್ಣವೂ ಪ್ರಗತಿಪರವೂ ಆಗಿರಬೇಕು. (ಇಬ್ರಿಯ 5:14–6:3) ಕ್ರಮವಾಗಿ ಸೇವಿಸಲ್ಪಟ್ಟ ಒಳ್ಳೆಯ ಆಹಾರವು, ಎಚ್ಚರವಾಗಿಯೂ ಜಾಗರೂಕರಾಗಿಯೂ ಇರುವಂತೆ ನಮಗೆ ಸಹಾಯಮಾಡಬಲ್ಲದು. ನ್ಯೂನಪೋಷಣೆಯ ಒಂದು ಚಿಹ್ನೆಯಾಗಿರಬಹುದಾದ ಆಲಸ್ಯವನ್ನು ಅದು ತಡೆಗಟ್ಟಬಲ್ಲದು. ಆತ್ಮಿಕವಾಗಿ ನ್ಯೂನಪೋಷಿತರೂ, ತೂಕಡಿಸುವವರೂ ಆಗಿರಲು ನಮಗೆ ಯಾವ ಕಾರಣವೂ ಇರುವುದಿಲ್ಲ, ಏಕೆಂದರೆ ದೇವರು ಅಭಿಷಿಕ್ತ ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ಆತ್ಮಿಕ ಆಹಾರಕ್ಕಾಗಿ ಹೇರಳವಾದ ಒದಗಿಸುವಿಕೆಯನ್ನು ಮಾಡುತ್ತಿದ್ದಾನೆ. (ಮತ್ತಾಯ 24:45-47) ವೈಯಕ್ತಿಕ ಹಾಗೂ ಕುಟುಂಬ ಅಧ್ಯಯನದ ಮೂಲಕ ಆತ್ಮಿಕ ಆಹಾರದ ಕ್ರಮವಾದ ಸೇವನೆಯು, ಎಚ್ಚರವಾಗಿರುವ ಮತ್ತು “ನಂಬಿಕೆಯಲ್ಲಿ ಸ್ವಸ್ಥಚಿತ್ತರಾಗಿರುವ” ಒಂದು ವಿಧವಾಗಿದೆ.—ತೀತ 1:13.

10. ಆತ್ಮಿಕವಾಗಿ ಎಚ್ಚರವಾಗಿರಲು ಕ್ರೈಸ್ತ ಕೂಟಗಳು, ಸಮ್ಮೇಳನಗಳು, ಮತ್ತು ಅಧಿವೇಶನಗಳು ನಮಗೆ ಹೇಗೆ ಸಹಾಯಮಾಡುತ್ತವೆ?

10 ನಾವು ಆತ್ಮಿಕವಾಗಿ ಎಚ್ಚರವಾಗಿರುವಂತೆ, ಕ್ರೈಸ್ತ ಕೂಟಗಳು, ಸಮ್ಮೇಳನಗಳು ಮತ್ತು ಅಧಿವೇಶನಗಳು ಸಹಾಯಮಾಡುತ್ತವೆ. ಅವು ‘ಪರಸ್ಪರ ಪ್ರೀತಿ ಮತ್ತು ಸತ್ಕಾರ್ಯಗಳಿಗೆ ಪ್ರೇರೇಪಿಸಲು’ ಉತ್ತೇಜನ ಹಾಗೂ ಅವಕಾಶಗಳನ್ನು ಒದಗಿಸುತ್ತವೆ. ವಿಶೇಷವಾಗಿ “ದಿನವು ಸಮೀಪಿಸುತ್ತಾ ಬರುತ್ತದೆ ಎಂದು . . . ನೋಡುವದರಿಂದ” ನಾವು ಕ್ರಮವಾಗಿ ಒಟ್ಟುಸೇರಬೇಕು. ಆ ದಿನವು ಈಗ ನಿಜವಾಗಲೂ ಹತ್ತಿರವದೆ. ಅದು, “ಯೆಹೋವನ ದಿನ,” ಆತನು ತನ್ನ ಪರಮಾಧಿಕಾರವನ್ನು ಎತ್ತಿಹಿಡಿಯುವ ದಿನವಾಗಿದೆ. ಆ ದಿನವು ನಮಗೆ ನಿಜವಾಗಿಯೂ ಪ್ರಾಮುಖ್ಯವಾಗಿರುವಲ್ಲಿ—ಮತ್ತು ಅದು ಪ್ರಾಮುಖ್ಯವಾಗಿರಬೇಕು—ನಾವು ‘ಸಭೆಯಾಗಿ ಕೂಡಿಕೊಳ್ಳುವದನ್ನು ಬಿಟ್ಟುಬಿಡ’ಲಾರೆವು.—ಇಬ್ರಿಯ 10:24, 25; 2 ಪೇತ್ರ 3:10.

11. ಆತ್ಮಿಕ ಜಾಗೃತಿಗೆ ಕ್ರೈಸ್ತ ಶುಶ್ರೂಷೆಯು ಆವಶ್ಯಕವೆಂದು ಏಕೆ ಹೇಳಸಾಧ್ಯವಿದೆ?

11 ಕ್ರೈಸ್ತ ಶುಶ್ರೂಷೆಯಲ್ಲಿನ ಹೃತ್ಪೂರ್ವಕವಾದ ಭಾಗವಹಿಸುವಿಕೆಯು ಆತ್ಮಿಕ ಜಾಗೃತಿಗೆ ಆವಶ್ಯಕವಾಗಿದೆ. ಸುವಾರ್ತೆಯನ್ನು ಸಾರುವುದರಲ್ಲಿ ಕ್ರಮವಾದ ಹಾಗೂ ಹುರುಪುಳ್ಳ ಪಾಲ್ಗೊಳ್ಳುವಿಕೆ, ನಮ್ಮನ್ನು ಜಾಗರೂಕವಾಗಿಡುತ್ತದೆ. ನಮ್ಮ ಶುಶ್ರೂಷೆಯು ದೇವರ ವಾಕ್ಯ, ಆತನ ರಾಜ್ಯ ಮತ್ತು ಆತನ ಉದ್ದೇಶಗಳ ಕುರಿತು ಜನರೊಂದಿಗೆ ಮಾತಾಡಲು ನಮಗೆ ಅನೇಕ ಅವಕಾಶಗಳನ್ನು ಒದಗಿಸುತ್ತದೆ. ಮನೆಯಿಂದ ಮನೆಗೆ ಸಾಕ್ಷಿನೀಡಿ, ಪುನರ್ಭೇಟಿಗಳನ್ನು ಮಾಡಿ, ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬಂತಹ ಪ್ರಕಾಶನಗಳಲ್ಲಿ ಮನೆ ಬೈಬಲ್‌ ಅಧ್ಯಯನಗಳನ್ನು ನಡೆಸುವುದು ತೃಪ್ತಿದಾಯಕವಾಗಿದೆ. ಪೌಲನು ತಮಗೆ “ಸಭೆಯಲ್ಲಿಯೂ ಮನೆಮನೆಯಲ್ಲಿಯೂ” ಕಲಿಸಿದ್ದನೆಂದು, ಪ್ರಾಚೀನ ಎಫೆಸದಲ್ಲಿದ್ದ ಹಿರಿಯರು ಸಾಕ್ಷಿನೀಡಸಾಧ್ಯವಿತ್ತು. (ಅ. ಕೃತ್ಯಗಳು 20:20, 21) ನಿಶ್ಚಯವಾಗಿಯೂ, ಯೆಹೋವನ ಕೆಲವು ನಂಬಿಗಸ್ತ ಸಾಕ್ಷಿಗಳಿಗೆ ತಮ್ಮ ಶುಶ್ರೂಷೆಯನ್ನು ಯಾವುದೊ ವಿಧದಲ್ಲಿ ತಡೆಯುವ ಗಂಭೀರವಾದ ಆರೋಗ್ಯ ಸಮಸ್ಯೆಗಳಿವೆ, ಆದರೆ ಯೆಹೋವನ ಮತ್ತು ಆತನ ಅರಸುತನದ ಕುರಿತು ಇತರರಿಗೆ ಹೇಳಲು ಅವರು ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ ಮತ್ತು ಹಾಗೆ ಮಾಡುವುದರಿಂದ ಹೆಚ್ಚಿನ ಆನಂದವನ್ನು ಪಡೆದುಕೊಳ್ಳುತ್ತಾರೆ.—ಕೀರ್ತನೆ 145:10-14.

12, 13. ಯಾವ ಕಾರಣಗಳಿಗಾಗಿ ನಾವು ಆಹಾರ ಮತ್ತು ಪಾನೀಯದಲ್ಲಿ ಅತಿಲೋಲುಪತೆಯನ್ನು ದೂರೀಕರಿಸಬೇಕು?

12 ಅತಿಲೋಲುಪತೆಯನ್ನು ದೂರೀಕರಿಸುವುದು, ಆತ್ಮಿಕವಾಗಿ ಎಚ್ಚರವಾಗಿರಲು ನಮಗೆ ಸಹಾಯಮಾಡುವುದು. ತನ್ನ ಸಾನ್ನಿಧ್ಯದ ಕುರಿತು ಮಾತಾಡುವಾಗ, ಯೇಸು ತನ್ನ ಅಪೊಸ್ತಲರನ್ನು ಹೀಗೆ ಪ್ರೇರಿಸಿದನು: “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಉರ್ಲಿನಂತೆ ಫಕ್ಕನೆ ಬಂದೀತು. ಆ ದಿವಸವು ಭೂನಿವಾಸಿಗಳೆಲ್ಲರ ಮೇಲೆ ಬರುವದು.” (ಲೂಕ 21:7, 34, 35) ಹೊಟ್ಟೆಬಾಕತನ ಮತ್ತು ಕುಡಿಕತನವು ಬೈಬಲ್‌ ತತ್ವಗಳಿಗೆ ವಿರುದ್ಧವಾಗಿವೆ. (ಧರ್ಮೋಪದೇಶಕಾಂಡ 21:18-21) ಜ್ಞಾನೋಕ್ತಿ 23:20, 21 ಹೇಳುವುದು: “ಕುಡುಕರಲ್ಲಿಯೂ ಅತಿಮಾಂಸಭಕ್ಷಕರಲ್ಲಿಯೂ ಸೇರದಿರು. ಕುಡುಕನೂ ಹೊಟ್ಟೆಬಾಕನೂ ದುರ್ಗತಿಗೆ ಬರುವರು; ನಿದ್ರಾಸಕ್ತಿಯು ಹರಕು ಬಟ್ಟೆಗಳನ್ನು ಹೊದಿಸುವದು.”—ಜ್ಞಾನೋಕ್ತಿ 28:7.

13 ಮಿತಿಮೀರಿದ ತಿನ್ನುವಿಕೆ ಹಾಗೂ ಭಾರಿ ಕುಡಿತವು ಆ ಮಟ್ಟವನ್ನು ಇನ್ನೂ ತಲಪಿರದಿದ್ದರೂ, ಅವು ಒಬ್ಬ ವ್ಯಕ್ತಿಯನ್ನು ತೂಕಡಿಸುವಂತೆ, ದೇವರ ಚಿತ್ತವನ್ನು ಮಾಡುವುದರ ಕುರಿತು ಸೋಮಾರಿಯೂ ನಿರ್ಲಕ್ಷ್ಯನೂ ಆಗಿರುವಂತೆ ಮಾಡಬಲ್ಲದು. ಕುಟುಂಬ ಜೀವನ, ಆರೋಗ್ಯ, ಮುಂತಾದವುಗಳನ್ನೊಳಗೊಂಡ ಚಿಂತೆಗಳಿರುವುದು ಸ್ವಾಭಾವಿಕ. ಆದರೂ, ನಾವು ಜೀವಿತದಲ್ಲಿ ರಾಜ್ಯಾಭಿರುಚಿಗಳನ್ನು ಪ್ರಥಮವಾಗಿಡುವಲ್ಲಿ ಮತ್ತು ನಮ್ಮ ಸ್ವರ್ಗೀಯ ತಂದೆಯು ನಮಗಾಗಿ ಒದಗಿಸುವನೆಂಬ ಭರವಸೆ ನಮಗಿರುವಲ್ಲಿ ನಾವು ಸಂತೋಷಿತರಾಗಿರುವೆವು. (ಮತ್ತಾಯ 6:25-34) ಇಲ್ಲವಾದರೆ, “ಆ ದಿನವು” ನಮ್ಮ ಮೇಲೆ “ಉರ್ಲಿನಂತೆ,” ಬಹುಶಃ ನಮ್ಮನ್ನು ಅನಿರೀಕ್ಷಿತವಾಗಿ ಹಿಡಿಯುವ ಒಂದು ಮೋಸದ ಪಾಶ ಅಥವಾ ಪ್ರಾಣಿಗಳನ್ನು ಆಕರ್ಷಿಸುವ ಮತ್ತು ನಂತರ ಇದ್ದಕ್ಕಿದ್ದಹಾಗೆ ಹಿಡಿದುಕೊಳ್ಳುವಂತಹ ಒಂದು ಸೆಳೆ ಪಾಶದಂತೆ ಬರುವುದು. ನಾವು ಎಚ್ಚರದಿಂದಿರುವಲ್ಲಿ, “ಅಂತ್ಯದ ಸಮಯ”ದಲ್ಲಿ ಜೀವಿಸುತ್ತಾ ಇದ್ದೇವೆಂಬ ಸಂಪೂರ್ಣ ಅರಿವುಳ್ಳವರಾಗಿರುವಲ್ಲಿ ಇದು ಸಂಭವಿಸದು.—ದಾನಿಯೇಲ 12:4.

14. ನಾವು ಏಕೆ ಮನಃಪೂರ್ವಕವಾಗಿ ಪ್ರಾರ್ಥಿಸಬೇಕು?

14 ಆತ್ಮಿಕ ಜಾಗೃತಿಗೆ ಮನಃಪೂರ್ವಕವಾದ ಪ್ರಾರ್ಥನೆಯು ಮತ್ತೊಂದು ಸಹಾಯಕವಾಗಿದೆ. ತನ್ನ ಮಹಾ ಪ್ರವಾದನೆಯಲ್ಲಿ ಯೇಸು ಮತ್ತೂ ಪ್ರೇರಿಸಿದ್ದು: “ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ.” (ಲೂಕ 21:36) ಹೌದು, ಮನುಷ್ಯಕುಮಾರನಾದ ಯೇಸು ಈ ದುಷ್ಟ ವಿಷಯಗಳ ವ್ಯವಸ್ಥೆಯನ್ನು ನಾಶಮಾಡಲು ಬಂದಾಗ, ನಾವು ಯಾವಾಗಲೂ ಯೆಹೋವನ ಪಕ್ಷದಲ್ಲಿದ್ದು, ಒಂದು ಸ್ವೀಕರಣೀಯ ನಿಲುವನ್ನು ಅನುಭವಿಸಸಾಧ್ಯವಾಗಬೇಕೆಂದು ನಾವು ಪ್ರಾರ್ಥಿಸೋಣ. ನಮ್ಮ ಸ್ವಂತ ಪ್ರಯೋಜನ ಹಾಗೂ ನಾವು ಯಾರಿಗಾಗಿ ಪ್ರಾರ್ಥಿಸುತ್ತೇವೊ ಆ ಜೊತೆ ವಿಶ್ವಾಸಿಗಳ ಒಳಿತಿಗಾಗಿ, ನಾವು ‘ಪ್ರಾರ್ಥನೆಯಲ್ಲಿ ಎಚ್ಚರವಾಗಿ’ ಇರಬೇಕು.—ಕೊಲೊಸ್ಸೆ 4:2; ಎಫೆಸ 6:18-20.

ಸಮಯವು ಮೀರಿಹೋಗುತ್ತಿದೆ

15. ಸುನೀತಿಯನ್ನು ಸಾರುವವರೋಪಾದಿ ನಮ್ಮ ಸೇವೆಯಿಂದ ಏನು ಸಾಧಿಸಲ್ಪಡುತ್ತದೆ?

15 ನಾವು ಯೆಹೋವನ ಮಹಾದಿನಕ್ಕಾಗಿ ಕಾಯುವಾಗ, ಆತನ ಸೇವೆಯಲ್ಲಿ ಸಾಧ್ಯವಾದುದೆಲ್ಲವನ್ನು ಮಾಡಲು ನಾವು ನಿಸ್ಸಂದೇಹವಾಗಿ ಬಯಸುತ್ತೇವೆ. ಇದರ ಕುರಿತು ನಾವು ಆತನಲ್ಲಿ ಮನಃಪೂರ್ವಕವಾಗಿ ಪ್ರಾರ್ಥಿಸುವುದಾದರೆ, “ಚಟುವಟಿಕೆಗೆ ನಡೆಸುವ ಒಂದು ಮಹಾ ದ್ವಾರವು” (NW) ನಮಗಾಗಿ ತೆರೆಯಲ್ಪಡಬಹುದು. (1 ಕೊರಿಂಥ 16:8, 9) ದೇವರ ನೇಮಿತ ಸಮಯದಲ್ಲಿ, ಯೇಸು ನ್ಯಾಯತೀರಿಸಿ, ನಿತ್ಯಜೀವಕ್ಕೆ ಯೋಗ್ಯರಾಗಿರುವ ನೀತಿವಂತ “ಕುರಿಗಳನ್ನು,” ಅನಂತ ನಾಶನಕ್ಕೆ ಅರ್ಹರಾಗಿರುವ ಭಕ್ತಿಹೀನ “ಆಡು”ಗಳಿಂದ ಬೇರ್ಪಡಿಸುವನು. (ಯೋಹಾನ 5:22) ಕುರಿಗಳನ್ನು ಆಡುಗಳಿಂದ ಬೇರ್ಪಡಿಸುವವರು ನಾವಲ್ಲ. ಆದರೆ ಸುನೀತಿಯನ್ನು ಸಾರುವವರೋಪಾದಿ ನಮ್ಮ ಸೇವೆಯು ಈಗ, ದೇವರಿಗೆ ಸೇವೆಸಲ್ಲಿಸುವ ಒಂದು ಜೀವನವನ್ನು ಜನರು ಆರಿಸಿಕೊಳ್ಳುವಂತೆ ಮತ್ತು ಹೀಗೆ ಯೇಸು “ತನ್ನ ಮಹಿಮೆಯಲ್ಲಿ ಬರುವಾಗ” ಜೀವಕ್ಕೆ ಬೇರ್ಪಡಿಸಲ್ಪಡುವ ನಿರೀಕ್ಷೆಯುಳ್ಳವರಾಗಿರುವ ಅವಕಾಶವನ್ನು ನೀಡುತ್ತಿದೆ. ಈ ವಿಷಯಗಳ ವ್ಯವಸ್ಥೆಗಾಗಿ ಉಳಿದಿರುವ ಕೊಂಚ ಸಮಯವು, ‘ನಿತ್ಯಜೀವಕ್ಕೆ ಯೋಗ್ಯ ಪ್ರವೃತ್ತಿ’ಯುಳ್ಳವರಿಗಾಗಿ ನಾವು ಹುಡುಕುವಾಗ ಪೂರ್ಣಹೃದಯದ ಚಟುವಟಿಕೆಗಾಗಿರುವ ಅಗತ್ಯವನ್ನು ತೀವ್ರಗೊಳಿಸುತ್ತದೆ.—ಮತ್ತಾಯ 25:31-46; ಅ. ಕೃತ್ಯಗಳು 13:48.

16. ನಾವು ಏಕೆ ಹುರುಪುಳ್ಳ ರಾಜ್ಯ ಘೋಷಕರಾಗಿರಬೇಕು?

16 ನೋಹನ ದಿನದ ಲೋಕಕ್ಕೆ ಸಮಯವು ಮೀರಿಹೋಗಿತ್ತು, ಮತ್ತು ಅದು ಬೇಗನೆ ಈ ವಿಷಯಗಳ ವ್ಯವಸ್ಥೆಗೂ ಮೀರಿಹೋಗಲಿದೆ. ಆದುದರಿಂದ ನಾವು ಹುರುಪುಳ್ಳ ರಾಜ್ಯ ಘೋಷಕರಾಗಿರೋಣ. ನಮ್ಮ ಸಾರುವ ಕಾರ್ಯವು ವೃದ್ಧಿಯಾಗುತ್ತಾ ಇದೆ ಏಕೆಂದರೆ, ಪ್ರತಿವರ್ಷ ಲಕ್ಷಾಂತರ ಜನರು ದೇವರಿಗೆ ತಮ್ಮ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನ ಪಡೆದುಕೊಳ್ಳುತ್ತಿದ್ದಾರೆ. ಅವರು ಯೆಹೋವನ ಆಶೀರ್ವದಿತ ಸಂಸ್ಥೆಯ ಭಾಗವಾಗುತ್ತಿದ್ದಾರೆ—“ಆತನ ಪ್ರಜೆಯೂ ಆತನು ಪಾಲಿಸುವ ಹಿಂಡೂ” ಆಗುತ್ತಿದ್ದಾರೆ. (ಕೀರ್ತನೆ 100:3) “ಯೆಹೋವನ ಭಯಂಕರವಾದ ಮಹಾದಿನದ” ಮುಂಚೆ ಅನೇಕರಿಗೆ ನಿರೀಕ್ಷೆಯನ್ನು ತರುವ ರಾಜ್ಯ ಸಾರುವ ಕೆಲಸದಲ್ಲಿ ಪಾಲಿಗರಾಗುವುದು ಎಂತಹ ಒಂದು ಆನಂದವಾಗಿದೆ!

17, 18. (ಎ) ನಾವು ಸಾರಿದಂತೆ, ಕೆಲವರಿಂದ ಯಾವ ಪ್ರತಿಕ್ರಿಯೆಯನ್ನು ನಿರೀಕ್ಷಿಸಬೇಕು? (ಬಿ) ಕುಚೋದ್ಯಗಾರರನ್ನು ಖಂಡಿತವಾಗಿಯೂ ಯಾವುದು ನಾಶಮಾಡುವುದು?

17 ನೋಹನಂತೆ, ನಮಗೆ ದೇವರ ಬೆಂಬಲ ಮತ್ತು ಸಂರಕ್ಷಣೆಯಿದೆ. ಹೌದು, ಆ ಜನರು, ರೂಪಾಂತರಗೊಂಡ ದೇವದೂತರು, ಮತ್ತು ನೆಫೀಲಿಯರು ನೋಹನ ಸಂದೇಶವನ್ನು ಹೀಯಾಳಿಸಿದ್ದಿರಬಹುದಾದರೂ, ಅದು ಅವನನ್ನು ಸಾರುವುದರಿಂದ ತಡೆಯಲಿಲ್ಲ. ಇಂದು, ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಾ ಇದ್ದೇವೆಂಬ ಅತಿಶಯಿಸುವ ಪ್ರಮಾಣಕ್ಕೆ ಸೂಚಿಸುವಾಗ ಕೆಲವರು ಹೀಯಾಳಿಸುತ್ತಾರೆ. (2 ತಿಮೊಥೆಯ 3:1-5) ಅಂತಹ ಕುಚೋದ್ಯವು ಕ್ರಿಸ್ತನ ಸಾನ್ನಿಧ್ಯದ ಕುರಿತಾದ ಬೈಬಲ್‌ ಪ್ರವಾದನೆಯ ನೆರವೇರಿಕೆಯಲ್ಲಿದೆ. ಏಕೆಂದರೆ ಪೇತ್ರನು ಬರೆದುದು: “ಕಡೇ ದಿವಸಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು ಕುಚೋದ್ಯ ಮಾಡುತ್ತಾ—ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ನಮ್ಮ ಪಿತೃಗಳು ನಿದ್ರೆಹೊಂದಿದ ದಿನ ಮೊದಲುಗೊಂಡು ಸಮಸ್ತವೂ ಲೋಕಾದಿಯಿಂದಿದ್ದ ಹಾಗೆಯೇ ಇರುತ್ತದಲ್ಲಾ ಎಂದು ಹೇಳು”ವರು. (ಓರೆಅಕ್ಷರಗಳು ನಮ್ಮವು.)—2 ಪೇತ್ರ 1:16; 3:3, 4.

18 ಪ್ರಚಲಿತ ದಿನದ ಕುಚೋದ್ಯಗಾರರು ಹೀಗೆ ನೆನಸಬಹುದು: ‘ಸೃಷ್ಟಿಯ ಸಮಯದಿಂದ ಏನೂ ಬದಲಾಗಿರುವುದಿಲ್ಲ. ಜನರು ತಿನ್ನುತ್ತಾ, ಕುಡಿಯುತ್ತಾ, ವಿವಾಹವಾಗುತ್ತಾ, ಮತ್ತು ಮಕ್ಕಳನ್ನು ಬೆಳೆಸುತ್ತಾ, ಜೀವನವು ಸಾಗುತ್ತಾ ಮುಂದುವರಿಯುತ್ತದೆ. ಯೇಸು ಉಪಸ್ಥಿತನಿರುವುದಾದರೂ, ಅವನು ನನ್ನ ದಿನದಲ್ಲಿ ನ್ಯಾಯವಿಧಿಸಲಾರನು.’ ಅವರ ಯೋಚನೆಯು ಎಷ್ಟು ತಪ್ಪಾಗಿದೆ! ಈ ನಡುವೆ ಅವರು ಇತರ ಕಾರಣಗಳಿಂದ ಸಾಯದಿದ್ದಲ್ಲಿ, ಜಲಪ್ರಳಯದಲ್ಲಿನ ಘೋರ ನಾಶನವು ನೋಹನ ದಿನದಲ್ಲಿನ ಆ ದುಷ್ಟ ಸಂತತಿಗೆ ಅಂತ್ಯವನ್ನು ತಂದಂತೆಯೇ, ಯೆಹೋವನ ಭಯಂಕರವಾದ ದಿನವು ಖಂಡಿತವಾಗಿಯೂ ಅವರ ನಾಶನವನ್ನು ತರುವುದು.—ಮತ್ತಾಯ 24:34.

ನಾವು ಖಂಡಿತವಾಗಿಯೂ ಎಚ್ಚರವಾಗಿರಬೇಕು!

19. ಶಿಷ್ಯರನ್ನಾಗಿ ಮಾಡುವ ನಮ್ಮ ಚಟುವಟಿಕೆಗಳನ್ನು ನಾವು ಹೇಗೆ ವೀಕ್ಷಿಸಬೇಕು?

19 ನಾವು ಯೆಹೋವನಿಗೆ ಸಮರ್ಪಿತರಾಗಿರುವಲ್ಲಿ, ಅಯೋಗ್ಯವಾದ ವಿವೇಚನೆಯಿಂದ ನಾವೆಂದಿಗೂ ನಿದ್ದೆಮಾಡುವಂತಾಗದಿರಲಿ. ಇದು ಎಚ್ಚರವಾಗಿರುವ, ದೈವಿಕ ಪ್ರವಾದನೆಯಲ್ಲಿ ನಂಬಿಕೆಯನ್ನು ಇಡುವ, ಮತ್ತು “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ” ಮಾಡುವ ನಿಯೋಗವನ್ನು ಕಾರ್ಯರೂಪಕ್ಕೆ ತರುವ ಸಮಯವಾಗಿದೆ. (ಮತ್ತಾಯ 28:19, 20) ಈ ವ್ಯವಸ್ಥೆಯು ತನ್ನ ಅಂತಿಮ ಕೊನೆಯನ್ನು ಎದುರಿಸಿದಂತೆ, ಯೇಸು ಕ್ರಿಸ್ತನ ನಾಯಕತ್ವದಲ್ಲಿ ಯೆಹೋವ ದೇವರನ್ನು ಸೇವಿಸುವ ಮತ್ತು ಅಂತ್ಯವು ಬರುವ ಮುಂಚೆ “ರಾಜ್ಯದ ಈ ಸುವಾರ್ತೆಯನ್ನು” ಸಾರುವ ಲೋಕವ್ಯಾಪಕ ಕೆಲಸದಲ್ಲಿ ಭಾಗವಹಿಸುವುದಕ್ಕಿಂತ ಹೆಚ್ಚಿನ ಸುಯೋಗ ನಮಗಿರಸಾಧ್ಯವಿಲ್ಲ.—ಮತ್ತಾಯ 24:14; ಮಾರ್ಕ 13:10.

20. ಕಾಲೇಬ ಮತ್ತು ಯೆಹೋಶುವರಿಂದ ಯಾವ ಮಾದರಿಯು ಇಡಲ್ಪಟ್ಟಿತು, ಮತ್ತು ಅವರ ಮಾರ್ಗಕ್ರಮವು ನಮಗಾಗಿ ಏನನ್ನು ಸೂಚಿಸುತ್ತದೆ?

20 ಯೆಹೋವನ ಜನರಲ್ಲಿ ಕೆಲವರು ಆತನನ್ನು ದಶಕಗಳಿಂದ, ಬಹುಶಃ ಒಂದು ಜೀವಮಾನವೆಲ್ಲಾ ಸೇವಿಸುತ್ತಿದ್ದಾರೆ. ಮತ್ತು ನಾವು ಇತ್ತೀಚೆಗೆ ಸತ್ಯಾರಾಧನೆಯನ್ನು ಸ್ವೀಕರಿಸಿದ್ದರೂ, ನಾವು “ಯೆಹೋವನನ್ನು ಮನಃಪೂರ್ವಕವಾಗಿ ಅನುಸರಿಸಿದ” ಇಸ್ರಾಯೇಲ್ಯನಾದ ಕಾಲೇಬನಂತೆ ಇರೋಣ. (ಧರ್ಮೋಪದೇಶಕಾಂಡ 1:34-36) ಐಗುಪ್ತದ ದಾಸತ್ವದಿಂದ ಇಸ್ರಾಯೇಲಿನ ಬಿಡುಗಡೆಯಾದ ಸ್ವಲ್ಪ ಸಮಯದಲ್ಲೇ ವಾಗ್ದತ್ತ ದೇಶವನ್ನು ಪ್ರವೇಶಿಸಲು ಅವನು ಮತ್ತು ಯೆಹೋಶುವನು ಸಿದ್ಧರಾಗಿದ್ದರು. ಆದರೆ ಸಾಧಾರಣವಾಗಿ ವಯಸ್ಕ ಇಸ್ರಾಯೇಲ್ಯರಲ್ಲಿ ನಂಬಿಕೆಯ ಕೊರತೆಯಿತ್ತು ಮತ್ತು ಅವರು ಆ ಅರಣ್ಯದಲ್ಲಿ—ಎಲ್ಲಿ ಅವರು ಸತ್ತರೊ—40 ವರ್ಷಗಳನ್ನು ಕಳೆಯಬೇಕಿತ್ತು. ಆ ಸಮಯದಲ್ಲೆಲ್ಲ ಕಾಲೇಬ ಮತ್ತು ಯೆಹೋಶುವರು ಅವರೊಂದಿಗೆ ತೊಂದರೆಗಳನ್ನು ತಾಳಿಕೊಂಡರು, ಆದರೆ ಕಟ್ಟಕಡೆಗೆ ಆ ಇಬ್ಬರು ಪುರುಷರು ವಾಗ್ದತ್ತ ದೇಶವನ್ನು ಪ್ರವೇಶಿಸಿದರು. (ಅರಣ್ಯಕಾಂಡ 14:30-34; ಯೆಹೋಶುವ 14:6-15) ನಾವು ‘ಯೆಹೋವನನ್ನು ಮನಃಪೂರ್ವಕವಾಗಿ ಅನುಸರಿಸು’ವುದಾದರೆ ಮತ್ತು ಆತ್ಮಿಕವಾಗಿ ಎಚ್ಚರವಾಗಿರುವುದಾದರೆ, ದೇವರ ವಾಗ್ದಾನಿತ ಹೊಸ ಲೋಕವನ್ನು ಪ್ರವೇಶಿಸುವ ಆನಂದ ನಮಗಿರುವುದು.

21. ನಾವು ಆತ್ಮಿಕವಾಗಿ ಎಚ್ಚರವಾಗಿರುವುದಾದರೆ ನಮ್ಮ ಅನುಭವವು ಏನಾಗಿರುವುದು?

21 ನಾವು ಅಂತ್ಯದ ಸಮಯದಲ್ಲಿ ಜೀವಿಸುತ್ತಾ ಇದ್ದೇವೆಂದು ಮತ್ತು ಯೆಹೋವನ ಮಹಾದಿನವು ಹತ್ತಿರವದೆ ಎಂಬುದನ್ನು ಪ್ರಮಾಣವು ಸ್ಪಷ್ಟವಾಗಿ ರುಜುಪಡಿಸುತ್ತದೆ. ಇದು ತೂಕಡಿಸುವ ಮತ್ತು ದೈವಿಕ ಚಿತ್ತವನ್ನು ಮಾಡುವುದರಲ್ಲಿ ನಿರ್ಲಕ್ಷ್ಯರಾಗಿರುವ ಸಮಯವಲ್ಲ. ನಾವು ಆತ್ಮಿಕವಾಗಿ ಎಚ್ಚರವಾಗಿದ್ದು, ಕ್ರೈಸ್ತ ಶುಶ್ರೂಷಕರು ಮತ್ತು ಯೆಹೋವನ ಸೇವಕರಾಗಿ ನಮ್ಮ ಗುರುತಿನ ಉಡುಪುಗಳನ್ನು ಕಾಪಾಡಿಕೊಂಡರೆ ಮಾತ್ರ ನಾವು ಆಶೀರ್ವದಿಸಲ್ಪಡುವೆವು. ‘ಎಚ್ಚರವಾಗಿದ್ದು, ನಂಬಿಕೆಯಲ್ಲಿ ದೃಢವಾಗಿ ನಿಂತು, ಶೂರರಾಗಿ, ಬಲಗೊಳ್ಳುವುದು’ ನಮ್ಮ ದೃಢಸಂಕಲ್ಪವಾಗಿರಲಿ. (1 ಕೊರಿಂಥ 16:13) ಯೆಹೋವನ ಸೇವಕರೋಪಾದಿ ನಮ್ಮಲ್ಲಿ ಪ್ರತಿಯೊಬ್ಬರೂ ಸ್ಥಿರಚಿತ್ತರೂ ಧೈರ್ಯವಂತರೂ ಆಗಿರುವಂತಾಗಲಿ. ಆಗ ನಾವು ಯೆಹೋವನ ಮಹಾದಿನವು ತಾಕುವಾಗ ಸಿದ್ಧರಾಗಿರುವವರಲ್ಲಿ ಒಬ್ಬರಾಗಿದ್ದು, ಎಚ್ಚರವಾಗಿರುವ ಸಂತೋಷಿತರ ಪಂಕ್ತಿಗಳಲ್ಲಿ ನಂಬಿಗಸ್ತಿಕೆಯಿಂದ ಸೇವೆಸಲ್ಲಿಸುತ್ತಾ ಇರುವೆವು.

ನೀವು ಹೇಗೆ ಉತ್ತರಿಸುವಿರಿ?

◻ ನಮ್ಮ ಸಾಂಕೇತಿಕ ಹೊರ ಉಡುಪುಗಳನ್ನು ನೀವು ಹೇಗೆ ಅರ್ಥನಿರೂಪಿಸುವಿರಿ, ಮತ್ತು ನಾವು ಅವುಗಳನ್ನು ಹೇಗೆ ಕಾಪಾಡಿಕೊಳ್ಳಸಾಧ್ಯವಿದೆ?

◻ ಆತ್ಮಿಕವಾಗಿ ಎಚ್ಚರವಾಗಿರುವ ಕೆಲವು ವಿಧಗಳಾವುವು?

◻ ನಾವು ಏಕೆ ಕುಚೋದ್ಯಗಾರರನ್ನು ನಿರೀಕ್ಷಿಸಬೇಕು, ಮತ್ತು ನಾವು ಅವರನ್ನು ಹೇಗೆ ವೀಕ್ಷಿಸಬೇಕು?

◻ ಈ ಕಡೇ ದಿವಸಗಳಲ್ಲಿ ಶಿಷ್ಯರನ್ನಾಗಿ ಮಾಡುವ ನಮ್ಮ ಕೆಲಸವನ್ನು ನಾವು ಹೇಗೆ ವೀಕ್ಷಿಸಬೇಕು?

[ಪುಟ 16 ರಲ್ಲಿರುವ ಸಂಕ್ಷಿಪ್ತ ವಿವರಣೆ]

ಕ್ರೈಸ್ತರು ಎಚ್ಚರವಾಗಿ ಉಳಿಯುವಂತೆ ಮತ್ತು ತಮ್ಮ ಕರ್ತವ್ಯಗಳನ್ನು ನಡೆಸಿಕೊಂಡು ಹೋಗುವಂತೆ ಸಹಾಯ ಮಾಡಲು, ಅವರಿಗೆ ದೇವರ ಪವಿತ್ರಾತ್ಮವಿದೆ

[ಪುಟ 15 ರಲ್ಲಿರುವ ಚಿತ್ರ]

ನೀವು ಆತ್ಮಿಕವಾಗಿ ಎಚ್ಚರವಾಗಿದ್ದು, ನಿಮ್ಮ ಸಾಂಕೇತಿಕ ಹೊರ ಉಡುಪುಗಳನ್ನು ಕಾಪಾಡಿಕೊಳ್ಳಲು ನಿಶ್ಚಯಿಸಿಕೊಂಡಿದ್ದೀರೊ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ