ಇತರರ ಮೇಲೆ ಭರವಸೆಯಿಡಲು ನೀವು ಭಯಪಡುತ್ತೀರೋ?
‘ನಾನು ಮಾತನಾಡಬಹುದಾದ ಯಾರೊಬ್ಬರೂ ಇಲ್ಲ. ಜನರು ಅರ್ಥಮಾಡಿಕೊಳ್ಳುವುದಿಲ್ಲ. ಅವರು ತಮ್ಮ ಸ್ವಂತ ಸಮಸ್ಯೆಗಳೊಂದಿಗೆ ತೀರ ಕಾರ್ಯಮಗ್ನರಾಗಿದ್ದಾರೆ. ನನ್ನ ಸಮಸ್ಯೆಗಳಿಗಾಗಿ ಅವರಲ್ಲಿ ಸಮಯವಿಲ್ಲ.’ ಅನೇಕರು, ಆ ರೀತಿ ಭಾವಿಸುವುದರಿಂದ, ಅವರು ತಮ್ಮ ಆಲೋಚನೆಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳುತ್ತಾರೆ. ಅವರು ಹೇಗಿದ್ದಾರೆಂದು ಇತರರು ಕೇಳುವಾಗ, ಅವರು ಅನೇಕ ವೇಳೆ ಹೇಳಬಯಸುತ್ತಾರಾದರೂ ಹೇಳುವುದಿಲ್ಲ. ಅವರು ಮುಚ್ಚುಮರೆಯಿಲ್ಲದೆ ತಮ್ಮನ್ನು ವ್ಯಕ್ತಪಡಿಸಿಕೊಳ್ಳಲಾರರು.
ನಿಜ, ಇತರರಿಂದ ಸಹಾಯ ಬೇಕಾಗಿರದವರೂ ಇದ್ದಾರೆ. ಹಾಗಿದ್ದರೂ, ಅನೇಕರಿಗೆ ವಿಪರೀತವಾಗಿ ಸಹಾಯದ ಆವಶ್ಯಕತೆಯಿದೆ, ಆದರೆ ತಮ್ಮ ಅತಿ ವೈಯಕ್ತಿಕವಾದ ಆಲೋಚನೆಗಳನ್ನು, ಭಾವನೆಗಳನ್ನು, ಮತ್ತು ಅನುಭವಗಳನ್ನು ಪ್ರಕಟಪಡಿಸಲು ಅವರಿಗೆ ಭಯವಿದೆ. ಅವರಲ್ಲಿ ನೀವು ಒಬ್ಬರಾಗಿದ್ದೀರೋ? ನೀವು ಭರವಸೆಯಿಡಸಾಧ್ಯವಿರುವ ಯಾರೊಬ್ಬರೂ, ನಿಜವಾಗಿಯೂ ಇಲ್ಲವೋ?
ಭಯವನ್ನು ಅರ್ಥಮಾಡಿಕೊಳ್ಳುವುದು
ಇಂದಿನ ಲೋಕದಲ್ಲಿ ಅಪನಂಬಿಕೆಯ ಒಂದು ವಾತಾವರಣವಿದೆ. ಯುವ ಜನರು ತಮ್ಮ ಹೆತ್ತವರೊಂದಿಗೆ ಮಾತನಾಡುವುದಿಲ್ಲ. ಹೆತ್ತವರು ಒಬ್ಬರೊಂದಿಗೊಬ್ಬರು ಮಾತನಾಡಲಾರರು. ಅಧಿಕಾರದಲ್ಲಿರುವವರೊಂದಿಗೆ ಕೇವಲ ಕೆಲವರೇ ಮಾತನಾಡಬಯಸುತ್ತಾರೆ. ಇತರರಲ್ಲಿ ಮನಸ್ಸನ್ನು ತೋಡಿಕೊಳ್ಳಲು ಸಾಧ್ಯವಾಗದ ಕಾರಣ, ಕೆಲವರು ತಮ್ಮ ಸಮಸ್ಯೆಗಳಿಂದ ಪಾರಾಗಲು ಮದ್ಯಸಾರ, ಮಾದಕ ಪದಾರ್ಥ, ಅಥವಾ ಒಂದು ಒರಟು ಜೀವನ ಶೈಲಿಯನ್ನು ಬೆನ್ನಟ್ಟುತ್ತಾರೆ.—ಜ್ಞಾನೋಕ್ತಿ 23:29-35; ಯೆಶಾಯ 56:12.
ವೈದಿಕರು, ವೈದ್ಯರು, ಚಿಕಿತ್ಸಕರು, ಹಾಗೂ ಶಿಕ್ಷಕರಂಥ ಅಧಿಕಾರದಲ್ಲಿರುವ ಜನರ ಮೇಲಿನ ಭರವಸೆಯು, ಅಪ್ರಾಮಾಣಿಕತೆ ಮತ್ತು ಅನೈತಿಕತೆಯ ಅಂತ್ಯವಿಲ್ಲದ ಪ್ರಕಟನೆಗಳಿಂದ ಕದಲಿಸಲ್ಪಟ್ಟಿದೆ. ಉದಾಹರಣೆಗೆ, 10 ಪ್ರತಿಶತಕ್ಕಿಂತಲೂ ಅಧಿಕ ವೈದಿಕರು ಲೈಂಗಿಕ ದುರ್ನಡತೆಯಲ್ಲಿ ಒಳಗೊಂಡಿದ್ದಾರೆ ಎಂಬುದಾಗಿ ಒಂದು ಅಂದಾಜು ಹೇಳುತ್ತದೆ. ಒಬ್ಬ ಬರಹಗಾರ ತಿಳಿಸುವುದು, ಈ “ಭರವಸೆಯ ನಾಶಕರು ಮಾನವ ಸಂಬಂಧಗಳಲ್ಲಿ ದೊಡ್ಡ ಕಮ್ಮರಿಹಳ್ಳಗಳನ್ನೂ, ಬಿರುಕುಗಳನ್ನೂ, ತೋಡುತ್ತಾರೆ.” ಇದು ಅವರ ಸಭೆಗಳನ್ನು ಹೇಗೆ ಬಾಧಿಸುತ್ತದೆ? ಅದು ಭರವಸೆಯನ್ನು ನಾಶಮಾಡುತ್ತದೆ.
ನೀತಿತತ್ತ್ವಗಳ ವ್ಯಾಪಕವಾದ ಕುಸಿತವು, ಕುಟುಂಬದಲ್ಲಿನ ಬಿಕ್ಕಟ್ಟಿಗೂ ನಡಿಸಿದೆ. ಅಪಸಾಮಾನ್ಯವಾಗಿ ಕಾರ್ಯನಡಿಸುವ ಕುಟುಂಬಗಳು ಹೆಚ್ಚುಕಡಿಮೆ ಸರ್ವಸಾಮಾನ್ಯವಾಗಿವೆ, ಅಪರೂಪವಲ್ಲ. ಮನೆಯು ಒಮ್ಮೆ ಪೋಷಿಸುವ ವಾತಾವರಣವಾಗಿತ್ತು. ಇಂದು, ಅದು ಅನೇಕ ವೇಳೆ ಒಂದು ಭೋಜನ ಸಮಯದ ಪೆಟ್ರೋಲ್ ಪಂಪಿಗಿಂತ ಹೆಚ್ಚೇನೂ ಆಗಿರುವುದಿಲ್ಲ. “ಮಮತೆಯಿಲ್ಲದ” ಕುಟುಂಬವೊಂದರಲ್ಲಿ ಒಂದು ಮಗುವು ಬೆಳೆಯುವಾಗ, ಪ್ರೌಢವಯಸ್ಸಿನಲ್ಲಿ, ಇತರರಲ್ಲಿ ಭರವಸೆಯನ್ನಿಡಲು ಅಸಮರ್ಥತೆಯೇ, ಒಂದು ಸಾಮಾನ್ಯ ಪರಿಣಾಮವಾಗಿರುತ್ತದೆ.—2 ತಿಮೊಥೆಯ 3:3.
ಇನ್ನೂ ಹೆಚ್ಚಾಗಿ, ಲೋಕ ಪರಿಸ್ಥಿತಿಗಳು ಹಾಳಾಗುತ್ತಾ ಹೋದಂತೆ, ನಾವು ಸಂಭವನೀಯ ಆಘಾತದ ಅನುಭವಗಳಿಗೆ ಹೆಚ್ಚೆಚ್ಚಾಗಿ ಒಡ್ಡಲ್ಪಡುತ್ತಿದ್ದೇವೆ. ತದ್ರೀತಿಯ ಸಂದರ್ಭದಲ್ಲಿ, ಪ್ರವಾದಿಯಾದ ಮೀಕನು ಬರೆದದ್ದು: “ಆಪ್ತನಲ್ಲಿ ಭರವಸವಿಡದಿರು.” (ಮೀಕ 7:5) ಒಂದು ಚಿಕ್ಕ ನಿರಾಶೆ, ನಿಮ್ಮ ಭರವಸೆಗೆ ದ್ರೋಹ, ಅಥವಾ ಜೀವಕ್ಕೆ ಬೆದರಿಕೆಯನ್ನೊಡ್ಡುವಂತಹ ಒಂದು ಪ್ರಧಾನವಾದ ಘಟನಾವಳಿಯ ನಂತರ ನಿಮಗೆ ಅದೇ ರೀತಿಯ ಅನಿಸಿಕೆಯಾಗಬಹುದು. ಪುನಃ ಇತರರ ಮೇಲೆ ಭರವಸೆಯಿಡುವುದನ್ನು ನೀವು ಕಷ್ಟಕರವಾಗಿ ಕಂಡುಕೊಳ್ಳುತ್ತೀರಿ ಮತ್ತು ಪ್ರತಿದಿನವೂ, ಒಂದು ಭಾವನಾತ್ಮಕ ಗೋಡೆಯ ಹಿಂಬದಿಯಲ್ಲಿ ಜೀವಿಸುತ್ತಾ, ನೀವು ಭಾವನಾತ್ಮಕವಾಗಿ ಜಡಹಿಡಿದಂತಾಗುವಿರಿ. (ಕೀರ್ತನೆ 102:1-7ನ್ನು ಹೋಲಿಸಿರಿ.) ನಿಜ, ಅಂತಹ ಒಂದು ಮನೋಭಾವವು, ನೀವು ಕಾರ್ಯನಡಿಸುವಂತೆ ಸಹಾಯಮಾಡಬಹುದಾದರೂ, ನಿಮ್ಮ “ಮನೋವ್ಯಥೆ”ಯು ಜೀವಿತದಲ್ಲಿನ ಯಾವುದೇ ನಿಜ ಸಂತೋಷವನ್ನು ಕಸಿದುಕೊಳ್ಳುತ್ತದೆ. (ಜ್ಞಾನೋಕ್ತಿ 15:13) ನಿಜತ್ವವೇನೆಂದರೆ, ನೀವು ಆತ್ಮಿಕ, ಭಾವನಾತ್ಮಕ, ಮಾನಸಿಕ, ಹಾಗೂ ಶಾರೀರಿಕ ರೀತಿಯಲ್ಲಿ ಆರೋಗ್ಯದಿಂದ ಇರಬೇಕಾದರೆ, ಆ ಗೋಡೆಯನ್ನು ತೆಗೆದುಹಾಕಿ, ಜನರ ಮೇಲೆ ಭರವಸೆಯನ್ನಿಡಲು ನೀವು ಕಲಿತುಕೊಳ್ಳಬೇಕು. ಅದು ಸಾಧ್ಯವೋ? ಹೌದು.
ಗೋಡೆಯು ಏಕೆ ತೆಗೆದುಹಾಕಲ್ಪಡಬೇಕು?
ಇತರರಲ್ಲಿ ಮನಸ್ಸನ್ನು ತೋಡಿಕೊಳ್ಳುವುದು, ಒಂದು ತೊಂದರೆಗೊಳಗಾದ ಹೃದಯಕ್ಕೆ ಬಿಡುಗಡೆಯನ್ನು ತರುತ್ತದೆ. ಹನ್ನಳಿಗೆ ಈ ಅನುಭವವಾಯಿತು. ಅವಳು ಒಂದು ಒಳ್ಳೆಯ ಮದುವೆಯ ಜೀವಿತವನ್ನು ಅನುಭವಿಸುತ್ತಿದ್ದಳು, ಒಂದು ಭದ್ರವಾದ ಮನೆ ಆಕೆಗಿತ್ತು, ಆದರೆ ಅವಳು ಆಳವಾಗಿ ತೊಂದರೆಗೀಡಾಗಿದ್ದಳು. ಅವಳು “ಬಹುದುಃಖದಿಂದ ಇದ್ದರೂ,” ವಿವೇಕದಿಂದ ತೀವ್ರವಾಗಿ “ಯೆಹೋವನಿಗೆ ಪ್ರಾರ್ಥಿಸಲು ಆರಂಭಿಸಿದಳು,” ಅದು ಅವಳ ಮೌನ ತುಟಿಯನ್ನು ನಡುಗಿಸಿತು. ಹೌದು, ಅವಳು ಯೆಹೋವನಲ್ಲಿ ಗುಟ್ಟನ್ನು ತಿಳಿಸಿದಳು. ಆಮೇಲೆ ಅವಳು ದೇವರ ಪ್ರತಿನಿಧಿಯಾದ ಏಲಿಯ ಬಳಿ ತನ್ನ ಮನಸ್ಸನ್ನು ತೋಡಿಕೊಂಡಳು. ಯಾವ ಫಲಿತಾಂಶದೊಂದಿಗೆ? “[ಹನ್ನಳು] ಹೊರಟುಹೋಗಿ ಊಟಮಾಡಿದಳು. ಆ ಮೇಲೆ ಆಕೆಯ ಮೋರೆಯಲ್ಲಿ ದುಃಖವು ಕಾಣಲಿಲ್ಲ.”—1 ಸಮುವೇಲ 1:1-18.
ವ್ಯಕ್ತಿಗತ ವಿಷಯಗಳನ್ನು ತಿಳಿಯಪಡಿಸುವುದರ ಲಾಭವನ್ನು ಹೆಚ್ಚಿನ ಸಂಸ್ಕೃತಿಗಳು ಅರಿತಿವೆ. ಉದಾಹರಣೆಗೆ, ತದ್ರೀತಿಯ ಸನ್ನಿವೇಶಗಳಲ್ಲಿ ಇದ್ದವರೊಂದಿಗೆ ವಿಚಾರಗಳನ್ನು ಮತ್ತು ಅನುಭವಗಳನ್ನು ಹಂಚಿಕೊಳ್ಳುವುದು ಪ್ರಯೋಜನಕರವಾಗಿ ಪರಿಣಮಿಸಸಾಧ್ಯವಿದೆ. ಸಂಶೋಧಕರು ಮುಕ್ತಾಯಗೊಳಿಸುವುದು: “ಭಾವನಾತ್ಮಕ ಬೇರ್ಪಡಿಸುವಿಕೆ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ—ಮಾನಸಿಕವಾಗಿ ಸ್ವಸ್ಥರಾಗಿರಬೇಕಾದರೆ ನಾವು ವಿಷಯಗಳನ್ನು ಪ್ರಕಟಪಡಿಸಲೇಬೇಕು.” ವೈಜ್ಞಾನಿಕ ಸಂಶೋಧನೆಯ ಬೆಳೆಯುತ್ತಿರುವ ಒಂದು ಗುಂಪು, ಹೀಗೆ ಹೇಳುವ ಈ ಪ್ರೇರಿತ ಜ್ಞಾನೋಕ್ತಿಯ ಸತ್ಯತೆಯನ್ನು ದೃಢಪಡಿಸುತ್ತದೆ: “ಜನರಲ್ಲಿ ಸೇರದವನು ಸ್ವೇಚ್ಛಾನುಸಾರ ನಡೆಯುತ್ತಾ ಸಮಸ್ತ ಸುಜ್ಞಾನಕ್ಕೂ ರೇಗುವನು.”—ಜ್ಞಾನೋಕ್ತಿ 18:1.
ನೀವು ಇತರರಿಗೆ ತಿಳಿಯಪಡಿಸದಿದ್ದರೆ, ಅವರು ನಿಮಗೆ ಹೇಗೆ ಸಹಾಯ ಮಾಡಬಲ್ಲರು? ಯೆಹೋವ ದೇವರು ಹೃದಯಗಳನ್ನು ಓದುವವನಾಗಿರುವಾಗ, ನಿಮ್ಮ ಕುಟುಂಬಕ್ಕೂ, ಸ್ನೇಹಿತರಿಗೂ ನಿಮ್ಮ ಆಂತರಿಕ ಆಲೋಚನೆಗಳೂ, ಭಾವನೆಗಳೂ, ನೀವು ಹೇಳಿದ ಹೊರತು, ಒಂದು ಮುಚ್ಚಿದ ಪುಸ್ತಕದಂತಿದೆ. (1 ಪೂರ್ವಕಾಲವೃತ್ತಾಂತ 28:9) ಸಮಸ್ಯೆಯಲ್ಲಿ, ದೇವರ ನಿಯಮಕ್ಕೆ ವಿರುದ್ಧವಾದ ಒಂದು ಅಪರಾಧ ಒಳಗೊಂಡಿರುವಾಗ, ವಿಷಯವನ್ನು ಮುಚ್ಚಿಕೊಳ್ಳುವುದು ಅದನ್ನು ಇನ್ನೂ ಕೆಟ್ಟದ್ದನ್ನಾಗಿ ಮಾಡುತ್ತದೆ.—ಜ್ಞಾನೋಕ್ತಿ 28:13.
ನಿಶ್ಚಯವಾಗಿಯೂ, ನೋಯಿಸಿಕೊಳ್ಳುವ ಅಪಾಯಗಳಿಗಿಂತ, ತೊಂದರೆಯನ್ನು ಇತರರೊಂದಿಗೆ ತೋಡಿಕೊಳ್ಳುವುದರಿಂದ ಆಗುವ ಲಾಭವು ಹೆಚ್ಚು ಬೆಲೆಯುಳ್ಳದ್ದಾಗಿದೆ. ನಿಶ್ಚಯವಾಗಿಯೂ, ನಾವು ವೈಯಕ್ತಿಕ ವಿಷಯಗಳನ್ನು ಗೊತ್ತುಗುರಿಯಿಲ್ಲದೆ ಬಯಲುಪಡಿಸಬೇಕು ಎಂಬುದನ್ನು ಅದು ಅರ್ಥೈಸುವುದಿಲ್ಲ. (ಹೋಲಿಸಿರಿ ನ್ಯಾಯಸ್ಥಾಪಕರು 16:18; ಯೆರೆಮೀಯ 9:4; ಲೂಕ 21:16.) “ಒಬ್ಬರನ್ನೊಬ್ಬರು ಚೂರುಚೂರಾಗಿ ಮುರಿದುಹಾಕಲು ಗೊತ್ತುಮಾಡಿದ ಗೆಳೆಯರಿದ್ದಾರೆ” ಎಂಬುದಾಗಿ ಜ್ಞಾನೋಕ್ತಿ 18:24 (NW) ಎಚ್ಚರಿಸುತ್ತಾ ಕೂಡಿಸುವುದು: “ಸಹೋದರನಿಗಿಂತಲೂ ಹತ್ತಿರ ಹೊಂದಿಕೊಳ್ಳುವ ಮಿತ್ರನುಂಟು.” ನೀವು ಅಂತಹ ಒಬ್ಬ ಮಿತ್ರನನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ?
ನಿಮ್ಮ ಕುಟುಂಬದಲ್ಲಿ ಭರವಸೆಯಿಡಿರಿ
ನಿಮಗೆ ಒಂದು ಸಮಸ್ಯೆಯಿದ್ದರೆ, ಅದನ್ನು ನಿಮ್ಮ ವಿವಾಹ ಸಂಗಾತಿಯೊಡನೆ ಅಥವಾ ನಿಮ್ಮ ಹೆತ್ತವರೊಡನೆ ನೀವು ಚರ್ಚಿಸಲು ಪ್ರಯತ್ನಿಸಿದ್ದೀರೋ? “ಅನೇಕ ಸಮಸ್ಯೆಗಳ ಕುರಿತಾಗಿ, ಅಗತ್ಯವಿರುವುದು ಅದರ ಕುರಿತು ಆಳವಾದ ಸಂಭಾಷಣೆಯೇ,” ಎಂಬುದಾಗಿ ಒಬ್ಬ ನುರಿತ ಸಲಹೆಗಾರನು ಒಪ್ಪಿಕೊಳ್ಳುತ್ತಾನೆ. (ಜ್ಞಾನೋಕ್ತಿ 27:9) ‘ತಮ್ಮಂತೆಯೇ ತಮ್ಮ ಹೆಂಡತಿಯರನ್ನು ಪ್ರೀತಿಸುವ’ ಕ್ರೈಸ್ತ ಪತಿಯರೂ, “ತಮ್ಮ ಗಂಡಂದಿರಿಗೆ ಅಧೀನರಾಗಿರುವ” ಹೆಂಡತಿಯರೂ, ಹಾಗೂ “ಕರ್ತನಿಗೆ [“ಯೆಹೋವನಿಗೆ,” NW] ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ ಅವರನ್ನೂ ಸಾಕಿಸಲಹಿರಿ” ಎಂಬ ದೇವ ನೇಮಿತ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಹೆತ್ತವರೂ, ಸಹಾನುಭೂತಿಯುಳ್ಳ ಕೇಳುಗರು ಮತ್ತು ಸಹಾಯಕಾರಿ ಸಲಹೆಗಾರರಾಗಲು ಶ್ರಮಪಟ್ಟು ದುಡಿಯುವರು. (ಎಫೆಸ 5:22, 33; 6:4) ಶಾರೀರಿಕ ರೀತಿಯಲ್ಲಿ ಯೇಸುವಿಗೆ ಹೆಂಡತಿಯಾಗಲಿ, ಮಕ್ಕಳಾಗಲಿ ಇಲ್ಲದಿದ್ದರೂ, ಅವನು ಈ ವಿಷಯದಲ್ಲಿ ಎಂತಹ ಒಂದು ಅದ್ಭುತಕರ ಉದಾಹರಣೆಯನ್ನು ಇಟ್ಟನು!—ಮಾರ್ಕ 10:13-16; ಎಫೆಸ 5:25-27.
ಆ ಸಮಸ್ಯೆಯು ಕುಟುಂಬದೊಳಗೆ ನಿರ್ವಹಿಸಲ್ಪಡುವುದಕ್ಕಿಂತ ದೊಡ್ಡದಾಗಿರುವಲ್ಲಿ ಆಗೇನು? ಕ್ರೈಸ್ತ ಸಭೆಯಲ್ಲಿ ನಾವು ಎಂದಿಗೂ ಒಬ್ಬಂಟಿಗರಾಗಿರುವ ಅವಶ್ಯವಿಲ್ಲ. ಅಪೊಸ್ತಲ ಪೌಲನು ಹೇಳಿದ್ದು: “ಯಾವನಾದರೂ ಬಲವಿಲ್ಲದವನಾದರೆ ನಾನು ಅವನೊಂದಿಗೆ ಬಲವಿಲ್ಲದವನಾಗದೆ ಇರುವೆನೋ?” (2 ಕೊರಿಂಥ 11:29) ಅವನು ಸಲಹೆ ನೀಡಿದ್ದು: “ಒಬ್ಬರು ಮತ್ತೊಬ್ಬರ ಭಾರವನ್ನು ಹೊತ್ತುಕೊಳ್ಳಲಿ.” (ಗಲಾತ್ಯ 6:2; ರೋಮಾಪುರ 15:1) ನಮ್ಮ ಆತ್ಮಿಕ ಸಹೋದರ ಸಹೋದರಿಯರ ನಡುವೆ, “ಆಪತ್ತಿನಲ್ಲಿ ಸಾರ್ಥಕ”ವಾಗಿರುವ ಒಬ್ಬನಿಗಿಂತ ಹೆಚ್ಚು “ಸಹೋದರ”ರನ್ನು ನಾವು ಖಂಡಿತವಾಗಿಯೂ ಕಂಡುಕೊಳ್ಳಸಾಧ್ಯವಿದೆ.—ಜ್ಞಾನೋಕ್ತಿ 17:17.
ಸಭೆಯಲ್ಲಿ ಭರವಸೆಯಿಡಿರಿ
ಭೂವ್ಯಾಪಕವಾಗಿ ಯೆಹೋವನ ಸಾಕ್ಷಿಗಳ 80,000ಕ್ಕಿಂತಲೂ ಹೆಚ್ಚಿನ ಸಭೆಗಳಲ್ಲಿ, “ನಿಮ್ಮ ಸಂತೋಷಕ್ಕೆ . . . ಸಹಾಯಕರಾಗಿ” ಸೇವೆ ಸಲ್ಲಿಸುವ ದೀನ ಪುರುಷರಿದ್ದಾರೆ. (2 ಕೊರಿಂಥ 1:24) ಇವರು ಹಿರಿಯರು. ಯೆಶಾಯನು ತಿಳಿಸುವುದು: “ಪ್ರತಿಯೊಬ್ಬನು ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ ಹಾಗೂ ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ ಇರುವನು.” ಹಿರಿಯರು ಹಾಗೆಯೇ ಇರುವಂತೆ ಪ್ರಯತ್ನಿಸುತ್ತಾರೆ.—ಯೆಶಾಯ 32:2; 50:4; 1 ಥೆಸಲೊನೀಕ 5:14.
‘ಪವಿತ್ರಾತ್ಮದಿಂದ ನೇಮಕ’ವಾಗುವ ಮುನ್ನ ಹಿರಿಯರು ಶಾಸ್ತ್ರೀಯ ಆವಶ್ಯಕತೆಗಳನ್ನು ಮುಟ್ಟುತ್ತಾರೆ. ಇದನ್ನು ತಿಳಿದಿರುವುದು, ಅವರಲ್ಲಿ ನಿಮ್ಮ ಭರವಸೆಯನ್ನು ಬಲಪಡಿಸುವುದು. (ಅ. ಕೃತ್ಯಗಳು 20:28; 1 ತಿಮೊಥೆಯ 3:2-7; ತೀತ 1:5-9) ನೀವು ಒಬ್ಬ ಹಿರಿಯನೊಂದಿಗೆ ಯಾವುದನ್ನು ಚರ್ಚಿಸುವಿರೊ, ಅದು ನಿಶ್ಚಯವಾಗಿ ಗುಪ್ತವಾಗಿರುತ್ತದೆ. ವಿಶ್ವಾಸಪಾತ್ರನಾಗಿರುವುದು ಅವನ ಅರ್ಹತೆಗಳಲ್ಲಿ ಒಂದಾಗಿರುತ್ತದೆ.—ಹೋಲಿಸಿರಿ ವಿಮೋಚನಕಾಂಡ 18:21; ನೆಹೆಮೀಯ 7:2.
ಸಭೆಯಲ್ಲಿರುವ ಹಿರಿಯರು “ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ.” (ಇಬ್ರಿಯ 13:17) ಇದು, ಈ ಪುರುಷರಲ್ಲಿ ನೀವು ಭರವಸೆಯಿಡುವಂತೆ ನಿಮ್ಮನ್ನು ಪ್ರೇರಿಸುವುದಿಲ್ಲವೊ? ಸ್ವಾಭಾವಿಕವಾಗಿ, ಎಲ್ಲ ಹಿರಿಯರು ಒಂದೇ ರೀತಿಯ ಗುಣಗಳಲ್ಲಿ ಅತ್ಯುತ್ತಮರಾಗಿರುವುದಿಲ್ಲ. ಕೆಲವರು ಇತರರಿಗಿಂತ ಹೆಚ್ಚು ಸಮೀಪಿಸಸಾಧ್ಯವಿರುವವರು, ದಯೆಯುಳ್ಳವರು, ಅಥವಾ ತಿಳಿವಳಿಕೆಯುಳ್ಳವರಾಗಿ ಕಂಡುಬರಬಹುದು. (2 ಕೊರಿಂಥ 12:15; 1 ಥೆಸಲೊನೀಕ 2:7, 8, 11) ನಿಮಗೆ ಯಾವ ಒಬ್ಬ ಹಿರಿಯನೊಂದಿಗೆ ನಿರಾತಂಕವೆನಿಸುತ್ತದೊ, ಅವನೊಂದಿಗೆ ಯಾಕೆ ಮನಸ್ಸನ್ನು ತೋಡಿಕೊಳ್ಳಬಾರದು?
ಈ ಪುರುಷರು ಹಣಪಡೆಯುವ ವೃತ್ತಿಪರರಲ್ಲ. ಬದಲಾಗಿ, ಅವರು ನಿಮ್ಮ ಸಹಾಯಕ್ಕಾಗಿ ಯೆಹೋವನಿಂದ ಒದಗಿಸಲ್ಪಟ್ಟ “ಪುರುಷರಲ್ಲಿ ದಾನಗಳು” ಆಗಿದ್ದಾರೆ. (ಎಫೆಸ 4:8, 11-13, NW; ಗಲಾತ್ಯ 6:1) ಹೇಗೆ? ಬೈಬಲನ್ನು ಕೌಶಲದಿಂದ ಉಪಯೋಗಿಸುತ್ತಾ, ಅವರು ಅದರ ವಾಸಿಕಾರಕ ಶಕ್ತಿಯನ್ನು ನಿಮ್ಮ ವೈಯಕ್ತಿಕ ಪರಿಸ್ಥಿತಿಗೆ ಅನ್ವಯಿಸುವರು. (ಕೀರ್ತನೆ 107:20; ಜ್ಞಾನೋಕ್ತಿ 12:18; ಇಬ್ರಿಯ 4:12, 13) ಅವರು ನಿಮ್ಮೊಂದಿಗೆ ಮತ್ತು ನಿಮಗಾಗಿ ಪ್ರಾರ್ಥಿಸುವರು. (ಫಿಲಿಪ್ಪಿ 1:9; ಯಾಕೋಬ 5:13-18) ಅಂತಹ ಪ್ರೀತಿಯ ಸಲಹೆಗಾರರಿಂದ ಬರುವ ಸಹಾಯವು, ಪೀಡಿತ ಭಾವನೆಯನ್ನು ಗುಣಪಡಿಸಲು ಮತ್ತು ಮನಶ್ಶಾಂತಿಯನ್ನು ಪುನಃಸ್ಥಾಪಿಸಲು ಬಹಳಷ್ಟನ್ನು ಮಾಡಸಾಧ್ಯವಿದೆ.
ಭರವಸೆಯ ಸಂಬಂಧಗಳನ್ನು ಕಟ್ಟುವ ವಿಧ
ಸಹಾಯಕ್ಕಾಗಿ, ಬುದ್ಧಿವಾದಕ್ಕಾಗಿ, ಅಥವಾ ಕೇವಲ ಒಂದು ಆಲಿಸುವ ಕಿವಿಗಾಗಿ ಕೇಳಿಕೊಳ್ಳುವುದು ಬಲಹೀನತೆಯ ಅಥವಾ ಸೋಲಿನ ಸೂಚನೆಯಲ್ಲ. ಅದು, ನಾವು ಅಪರಿಪೂರ್ಣರು ಮತ್ತು ಯಾರಲ್ಲಿಯೂ ಎಲ್ಲ ಉತ್ತರಗಳಿಲ್ಲ ಎಂಬುದರ ಕೇವಲ ಒಂದು ವಾಸ್ತವಿಕ ಅಂಗೀಕಾರವಾಗಿದೆ. ನಿಶ್ಚಯವಾಗಿ, ನಮಗಿರುವ ಅತ್ಯಂತ ಮಹಾ ಸಲಹೆಗಾರನೂ, ಅಂತರಂಗ ಮಿತ್ರನೂ ನಮ್ಮ ಸ್ವರ್ಗೀಯ ತಂದೆಯಾದ ಯೆಹೋವ ದೇವರಾಗಿದ್ದಾನೆ. ಹೀಗೆ ಬರೆದ ಕೀರ್ತನೆಗಾರನೊಂದಿಗೆ ನಾವು ಸಮ್ಮತಿಸುತ್ತೇವೆ: “ಯೆಹೋವನು ನನಗೆ ಬಲವೂ ಗುರಾಣಿಯೂ ಆಗಿದ್ದಾನೆ; ನಾನು ಆತನಲ್ಲಿ ಭರವಸವಿಟ್ಟೆನು, ನನಗೆ ಸಹಾಯವು ಉಂಟಾಯಿತು.” (ಕೀರ್ತನೆ 28:7) ಆತನು ನಮಗೆ ಕಿವಿಗೊಡುತ್ತಾನೆ ಮತ್ತು ಚಿಂತಿಸುತ್ತಾನೆ ಎಂಬ ಭರವಸೆಯಿಂದ ನಾವು ಯಾವುದೇ ಸಮಯದಲ್ಲಿ ಮುಚ್ಚುಮರೆಯಿಲ್ಲದೆ, ಆತನಿಗೆ ಪ್ರಾರ್ಥನೆಯಲ್ಲಿ ‘ನಮ್ಮ ಹೃದಯವನ್ನು ಬಿಚ್ಚ’ಸಾಧ್ಯವಿದೆ.—ಕೀರ್ತನೆ 62:7, 8; 1 ಪೇತ್ರ 5:7.
ಆದರೆ ಸಭೆಯಲ್ಲಿರುವ ಹಿರಿಯರ ಮತ್ತು ಇತರರ ಮೇಲೆ ಭರವಸೆಯಿಡಲು ನೀವು ಹೇಗೆ ಕಲಿಯಸಾಧ್ಯವಿದೆ? ಮೊದಲಾಗಿ, ನಿಮ್ಮನ್ನೇ ಪರೀಕ್ಷಿಸಿಕೊಳ್ಳಿ. ನಿಮ್ಮ ಭಯಗಳು ದೃಢವಾಗಿ ನೆಲೆಯೂರಿವೆಯೋ? ನೀವು ಇತರರ ಹೇತುಗಳನ್ನು ಸಂಶಯಿಸುತ್ತೀರೋ? (1 ಕೊರಿಂಥ 13:4, 7) ನೋಯಿಸಿಕೊಳ್ಳುವ ಅಪಾಯವನ್ನು ಕನಿಷ್ಠಗೊಳಿಸುವ ದಾರಿಯಿದೆಯೋ? ಹೌದು. ಹೇಗೆ? ಒಂದು ಆತ್ಮಿಕ ಪರಿಸರದಲ್ಲಿ ಭರವಸಯೋಗ್ಯರಾದ ಇತರರನ್ನು ವೈಯಕ್ತಿಕವಾಗಿ ತಿಳಿದುಕೊಳ್ಳಲು ಪ್ರಯತ್ನಿಸಿರಿ. ಸಭಾ ಕೂಟಗಳಲ್ಲಿ ಅವರೊಂದಿಗೆ ಮಾತನಾಡಿರಿ. ಮನೆಮನೆಯ ಶುಶ್ರೂಷೆಯಲ್ಲಿ ಒಂದಾಗಿ ಭಾಗವಹಿಸಿರಿ. ಭರವಸೆಯು, ಗೌರವದಂತೆ ಗಳಿಸಲ್ಪಡಬೇಕು. ಆದುದರಿಂದ ತಾಳ್ಮೆಯಿಂದಿರಿ. ಉದಾಹರಣೆಗೆ, ಒಬ್ಬ ಆತ್ಮಿಕ ಕುರುಬನನ್ನು ನೀವು ತಿಳಿದುಕೊಳ್ಳುವಾಗ, ಅವನಲ್ಲಿ ನಿಮ್ಮ ಭರವಸೆಯು ಬೆಳೆಯುವುದು. ನಿಮ್ಮ ಚಿಂತೆಗಳನ್ನು ಕ್ರಮೇಣವಾಗಿ ಪ್ರಕಟಪಡಿಸಿರಿ. ಸೂಕ್ತವಾದ, ಸಹಾನುಭೂತಿಯ, ಮತ್ತು ವಿವೇಚನೆಯ ವಿಧದಲ್ಲಿ ಅವನು ಪ್ರತಿಕ್ರಿಯಿಸುವುದಾದರೆ ಆಮೇಲೆ ನೀವು ಹೆಚ್ಚಿನ ವಿಷಯವನ್ನು ಬಯಲುಮಾಡಲು ಪ್ರಯತ್ನಿಸಬಹುದು.
ಒಬ್ಬರೊಂದಿಗೊಬ್ಬರ ತಮ್ಮ ಸಂಬಂಧಗಳಲ್ಲಿ ದೇವರ ಅಕ್ಕರೆಯ ಗುಣಗಳನ್ನು ಅನುಸರಿಸಲು ಯೆಹೋವನ ಸಹ ಆರಾಧಕರು, ವಿಶೇಷವಾಗಿ ಕ್ರೈಸ್ತ ಹಿರಿಯರು, ಕಷ್ಟಪಟ್ಟು ಕೆಲಸಮಾಡುತ್ತಾರೆ. (ಮತ್ತಾಯ 5:48) ಇದು, ಸಭೆಯಲ್ಲಿ ಭರವಸೆಯ ಒಂದು ವಾತಾವರಣದಲ್ಲಿ ಪರಿಣಮಿಸುತ್ತದೆ. ಬಹಳ ಕಾಲದಿಂದ ಹಿರಿಯರಾಗಿದ್ದ ಒಬ್ಬರು ತಿಳಿಸುವುದು: “ಸಹೋದರರು ಒಂದು ವಿಷಯವನ್ನು ತಿಳಿದುಕೊಳ್ಳಬೇಕು: ಒಬ್ಬ ವ್ಯಕ್ತಿಯು ಏನೇ ಮಾಡಲಿ, ಹಿರಿಯನು ಅವನ ಕಡೆಗಿರುವ ತನ್ನ ಕ್ರೈಸ್ತ ಪ್ರೀತಿಯನ್ನು ಕಳೆದುಕೊಳ್ಳುವುದಿಲ್ಲ. ಏನು ಮಾಡಲ್ಪಟ್ಟಿದೆಯೋ ಅದನ್ನು ಅವನು ಇಷ್ಟಪಡಲಿಕ್ಕಿಲ್ಲವಾದರೂ ಅವನು ತನ್ನ ಸಹೋದರನನ್ನು ಇನ್ನೂ ಪ್ರೀತಿಸುತ್ತಾನೆ ಮತ್ತು ಅವನಿಗೆ ಸಹಾಯ ಮಾಡಲಪೇಕ್ಷಿಸುತ್ತಾನೆ.”
ಆದುದರಿಂದ ಸಮಸ್ಯೆಯೊಂದಿಗೆ ಒಂಟಿಗನಾಗಿದ್ದೇನೆಂಬ ಅನಿಸಿಕೆಯುಳ್ಳವನಾಗುವ ಅಗತ್ಯವಿಲ್ಲ. ನಿಮ್ಮ ಹೊರೆಯನ್ನು ನಿಭಾಯಿಸಲು ನಿಮಗೆ ಸಹಾಯ ಮಾಡಸಾಧ್ಯವಿರುವ “ಆತ್ಮಿಕ ಅರ್ಹತೆಗಳು”ಳ್ಳ ಯಾರೊಂದಿಗಾದರೂ ಮಾತಾಡಿರಿ. (ಗಲಾತ್ಯ 6:1, NW) ನೆನಪಿನಲ್ಲಿಡಿರಿ, “ಕಳವಳವು ಮನಸ್ಸನ್ನು ಕುಗ್ಗಿಸುವದು,” ಆದರೆ “ಸವಿನುಡಿಯು ಜೇನುಕೊಡ; ಅದು ಆತ್ಮಕ್ಕೆ ಸಿಹಿ, ಎಲುಬಿಗೆ ಕ್ಷೇಮ.”—ಜ್ಞಾನೋಕ್ತಿ 12:25; 16:24.
[ಪುಟ 26 ರಲ್ಲಿರುವ ಚೌಕ]
ಯಾವನೇ ಕ್ರೈಸ್ತನು, ಒಬ್ಬ ಸಂಬಂಧಿಕನಿಗೆ, ಒಬ್ಬ ಗೆಳೆಯನಿಗೆ, ಅಥವಾ ಒಬ್ಬ ಆತ್ಮಿಕ ಸಹೋದರನಿಗೆ ಸಹಾಯಮಾಡುವಂತೆ ಕೇಳಿಕೊಳ್ಳಲ್ಪಡಬಹುದು. ಹೇಗೆ ಸಹಾಯಮಾಡುವುದು ಎಂದು ನಿಮಗೆ ತಿಳಿದಿದೆಯೋ?
ಒಬ್ಬ ಪರಿಣಾಮಕಾರಿ ಸಲಹೆಗಾರನು
ಸಮೀಪಿಸಸಾಧ್ಯವಿರುವವನು ಆಗಿರುತ್ತಾನೆ: ಮತ್ತಾಯ 11:28, 29; 1 ಪೇತ್ರ 1:22; 5:2, 3
ಸರಿಯಾದ ಸನ್ನಿವೇಶವನ್ನು ಆರಿಸಿಕೊಳ್ಳುತ್ತಾನೆ: ಮಾರ್ಕ 9:33-37
ಸಮಸ್ಯೆಯನ್ನು ಗ್ರಹಿಸಿಕೊಳ್ಳಲು ಪ್ರಯತ್ನಿಸುತ್ತಾನೆ: ಲೂಕ 8:18; ಯಾಕೋಬ 1:19
ವಿಪರೀತವಾಗಿ ಪ್ರತಿಕ್ರಿಯಿಸುವುದಿಲ್ಲ: ಕೊಲೊಸ್ಸೆ 3:12-14
ವೇದನಾಮಯ ಭಾವಗಳನ್ನು ನಿಭಾಯಿಸಲು ಸಹಾಯಮಾಡುತ್ತಾನೆ: 1 ಥೆಸಲೊನೀಕ 5:14; 1 ಪೇತ್ರ 3:8
ತನ್ನ ಮಿತಿಗಳನ್ನು ತಿಳಿದುಕೊಳ್ಳುತ್ತಾನೆ: ಗಲಾತ್ಯ 6:3; 1 ಪೇತ್ರ 5:5
ನಿರ್ದಿಷ್ಟ ಸಲಹೆಯನ್ನು ಕೊಡುತ್ತಾನೆ: ಕೀರ್ತನೆ 19:7-9; ಜ್ಞಾನೋಕ್ತಿ 24:26
ಗೋಪ್ಯತೆಯನ್ನು ಕಾಪಾಡುತ್ತಾನೆ: ಜ್ಞಾನೋಕ್ತಿ 10:19; 25:9