ಏಹೂದ ನಂಬಿಗಸ್ತನೂ ಧೈರ್ಯವಂತನೂ ಆದ ಒಬ್ಬ ಮನುಷ್ಯ
ಇಸ್ರಾಯೇಲ್ಯರು ವಾಗ್ದತ್ತ ದೇಶದಲ್ಲಿ ಮೊದಲು ಕಾಲಿರಿಸಿದ ಸಮಯದಂದಿನಿಂದ ಅನೇಕ ವರ್ಷಗಳು ಗತಿಸಿಹೋಗಿದ್ದವು. ಮೋಶೆಯೂ ಅವನ ಉತ್ತರಾಧಿಕಾರಿಯಾದ ಯೆಹೋಶುವನೂ ಸತ್ತುಹೋಗಿ ಬಹಳ ಕಾಲವಾಗಿತ್ತು. ಅಂಥ ನಂಬಿಗಸ್ತ ಪುರುಷರ ಅನುಪಸ್ಥಿತಿಯಲ್ಲಿ, ಶುದ್ಧ ಆರಾಧನೆಗಾಗಿರುವ ಗಣ್ಯತೆಯು ಬಿದ್ದುಹೋಯಿತು. ಇಸ್ರಾಯೇಲ್ಯರು ಬಾಳ್ ಹಾಗೂ ಪವಿತ್ರ ಸ್ತಂಭಗಳನ್ನು (ಅಶೇರ ದೇವತೆ) ಆರಾಧಿಸಲೂ ಪ್ರಾರಂಭಿಸಿದ್ದರು.a ಫಲಿತಾಂಶವಾಗಿ, ಯೆಹೋವನು ತನ್ನ ಜನರನ್ನು ಎಂಟು ವರ್ಷಗಳ ತನಕ ಸಿರಿಯದವರ ಕೈಗೆ ಒಪ್ಪಿಸಿಬಿಟ್ಟನು. ಆಗ ಇಸ್ರಾಯೇಲ್ಯರು ಸಹಾಯಕ್ಕಾಗಿ ದೇವರಲ್ಲಿ ಮೊರೆಯಿಟ್ಟರು. ದಯಾಪೂರ್ಣವಾಗಿ ಆತನು ಕಿವಿಗೊಟ್ಟನು. ತನ್ನ ಜನರನ್ನು ಬಿಡುಗಡೆಗೊಳಿಸಲು, ಯೆಹೋವನು ಒಬ್ಬ ನ್ಯಾಯಸ್ಥಾಪಕನನ್ನು, ಒತ್ನೀಯೇಲನನ್ನು ಎಬ್ಬಿಸಿದನು.—ನ್ಯಾಯಸ್ಥಾಪಕರು 3:7-11.
ಈ ಘಟನೆಗಳು ಇಸ್ರಾಯೇಲ್ಯರಿಗೆ ಒಂದು ಮೂಲಭೂತ ಸತ್ಯವನ್ನು ಕಲಿಸಿದ್ದಿರಬೇಕಿತ್ತು—ಯೆಹೋವನಿಗೆ ತೋರಿಸುವ ವಿಧೇಯತೆಯು ಆಶೀರ್ವಾದಗಳನ್ನು ತರುತ್ತದೆ. ಆದರೆ ಅವಿಧೇಯತೆಯು ಶಾಪಗಳಲ್ಲಿ ಫಲಿಸುತ್ತದೆ. (ಧರ್ಮೋಪದೇಶಕಾಂಡ 11:26-28) ಆದರೂ, ಇಸ್ರಾಯೇಲಿನ ಜನರು ಈ ಪಾಠವನ್ನು ಕಲಿತುಕೊಳ್ಳಲು ತಪ್ಪಿಹೋದರು. ಶಾಂತಿಯ 40 ವರ್ಷ ಅವಧಿಯ ಬಳಿಕ, ಅವರು ಪುನಃ ಶುದ್ಧ ಆರಾಧನೆಯನ್ನು ತೊರೆದುಬಿಟ್ಟರು.—ನ್ಯಾಯಸ್ಥಾಪಕರು 3:12.
ಮೋವಾಬ್ಯರಿಂದ ಹಠಾತ್ತಾಗಿ ಹಿಡಿಯಲ್ಪಟ್ಟದ್ದು
ಈ ಬಾರಿ ಯೆಹೋವನು, ತನ್ನ ಜನರು ಮೋವಾಬ್ಯರ ಅರಸನಾದ ಎಗ್ಲೋನನ ಕೈಯಲ್ಲಿ ಸಿಕ್ಕಿಹಾಕಿಕೊಳ್ಳುವಂತೆ ಬಿಟ್ಟುಬಿಟ್ಟನು. ಬೈಬಲು ಅವನನ್ನು “ಬಲು ಕೊಬ್ಬಿದವನು” ಎಂದು ವರ್ಣಿಸುತ್ತದೆ. ಅಮ್ಮೋನ್ ಹಾಗೂ ಅಮಾಲೇಕ್ಯರ ಸಹಾಯದಿಂದ ಎಗ್ಲೋನನು ಇಸ್ರಾಯೇಲನ್ನು ಆಕ್ರಮಿಸಿ, ಯೆರಿಕೋವಿನಲ್ಲಿ ತನ್ನ ಅರಮನೆಯನ್ನು—“ಖರ್ಜೂರನಗರವನ್ನು”—ಸ್ಥಾಪಿಸಿದನು. ಇಸ್ರಾಯೇಲಿನಿಂದ ಜಯಿಸಲ್ಪಟ್ಟ ಪ್ರಥಮ ಕಾನಾನ್ಯ ನಗರದಲ್ಲಿ ಈಗ, ಸುಳ್ಳು ದೇವನಾದ ಕೆಮೋಷನನ್ನು ಆರಾಧಿಸಿದ ವ್ಯಕ್ತಿಯ ಮುಖ್ಯಕಾರ್ಯಾಲಯವು ನೆಲೆಸಿದುದು ಎಂಥ ಹಾಸ್ಯಾಸ್ಪದ ವಿಷಯ!b—ನ್ಯಾಯಸ್ಥಾಪಕರು 3:12, 13, 17.
ಮುಂದಿನ 18 ವರ್ಷಗಳ ತನಕ ಎಗ್ಲೋನನು ಇಸ್ರಾಯೇಲ್ಯರನ್ನು—ಸ್ಫುಟವಾಗಿ ಅವರಿಂದ ವಿಪರೀತ ತೆರಿಗೆಯನ್ನು ತಗಾದೆಮಾಡುತ್ತಾ—ಪೀಡಿಸಿದನು. ನಿಯತಕಾಲಿಕ ಕಪ್ಪಕಾಣಿಕೆಯನ್ನು ಕೇಳಿಕೊಳ್ಳುವ ಮೂಲಕ, ಇಸ್ರಾಯೇಲ್ನ ಸಂಪನ್ಮೂಲಗಳನ್ನು ಬರಿದುಮಾಡುತ್ತಿರುವಾಗ, ಮೋವಾಬ್ ತನ್ನ ಸ್ವಂತ ಆರ್ಥಿಕ ಸ್ಥಾನವನ್ನು ಬಲಪಡಿಸಿಕೊಂಡಿತು. ಗ್ರಾಹ್ಯವಾಗಿಯೇ, ದೇವರ ಜನರು ಬಿಡುಗಡೆಗಾಗಿ ಮೊರೆಯಿಟ್ಟರು ಮತ್ತು ಪುನಃ ಒಮ್ಮೆ ಯೆಹೋವನು ಕಿವಿಗೊಟ್ಟನು. ಆತನು ಅವರಿಗಾಗಿ ಮತ್ತೊಬ್ಬ ರಕ್ಷಕನನ್ನು—ಈ ಬಾರಿ ಬೆನ್ಯಾಮೀನ್ ಕುಲದ ಏಹೂದ ಎಂಬವನನ್ನು—ಎಬ್ಬಿಸಿದನು. ಇಸ್ರಾಯೇಲಿನ ಮೇಲೆ ನಡೆಸಲ್ಪಡುತ್ತಿದ್ದ ಎಗ್ಲೋನನ ದಬ್ಬಾಳಿಕೆಯನ್ನು ಕೊನೆಗೊಳಿಸಲು, ಮುಂದಿನ ಕಪ್ಪಕಾಣಿಕೆಯನ್ನು ನೀಡುವ ದಿನದಂದು ಕ್ರಿಯೆಗೈಯಲು ಏಹೂದನು ಯೋಜಿಸಿದನು.—ನ್ಯಾಯಸ್ಥಾಪಕರು 3:14, 15.
ತನ್ನ ಧೈರ್ಯವಂತ ನಿರ್ವಹಣೆಗಾಗಿ ಸಿದ್ಧಪಡಿಸಿಕೊಳ್ಳಲು, ಏಹೂದನು ಒಂದು ಮೊಳ ಉದ್ದವಿದ್ದ ಇಬ್ಬಾಯಿ ಕತ್ತಿಯನ್ನು ಮಾಡಿದನು. ಅದು ಒಂದು ಚಿಕ್ಕ ಮೊಳವಾಗಿದ್ದಲ್ಲಿ, ಆ ಆಯುಧವು ಸುಮಾರು 38 ಸೆಂಟಿಮೀಟರುಗಳಷ್ಟು ಉದ್ದವಿತ್ತು. ಕೆಲವರು ಅದನ್ನು ಒಂದು ಕಠಾರಿಯಾಗಿ ಪರಿಗಣಿಸಾರು. ವ್ಯಕ್ತವಾಗಿಯೇ ಕತ್ತಿಯ ಅಲಗು ಹಾಗೂ ಹಿಡಿಯ ನಡುವೆ ಯಾವುದೇ ಅಡ್ಡಪಟ್ಟಿಯಿರಲಿಲ್ಲ. ಆದುದರಿಂದ, ಏಹೂದನು ತನ್ನ ಚಿಕ್ಕ ಕತ್ತಿಯನ್ನು, ತನ್ನ ವಸ್ತ್ರದ ಮಡಿಕೆಗಳಲ್ಲಿ ಬಚ್ಚಿಟ್ಟುಕೊಳ್ಳಸಾಧ್ಯವಿತ್ತು. ಇನ್ನೂ ಹೆಚ್ಚಾಗಿ, ಏಹೂದನು ಎಡಚನಾಗಿದ್ದುದರಿಂದ, ಅವನಿಗೆ ತನ್ನ ಕತ್ತಿಯನ್ನು ತನ್ನ ಬಲಭಾಗದ ನಡುಕಟ್ಟಿನಲ್ಲಿ ಇಟ್ಟಕೊಳ್ಳಸಾಧ್ಯವಾಯಿತು—ಸಾಮಾನ್ಯವಾಗಿ ಅದು ಒಂದು ಆಯುಧವನ್ನಿಡುವ ಸ್ಥಳವಲ್ಲ.—ನ್ಯಾಯಸ್ಥಾಪಕರು 3:15, 16.
ಏಹೂದನ ಯುಕ್ತಿಯು ಗಂಡಾಂತರದ ವಿಷಯವಾಗಿತ್ತು. ಉದಾಹರಣೆಗೆ, ರಾಜನ ಸೇವಕರು, ಆಯುಧಗಳಿಗಾಗಿ ಏಹೂದನನ್ನು ಪರೀಕ್ಷಿಸುತ್ತಿದ್ದಲ್ಲಿ ಆಗೇನು? ಅವರು ಪರೀಕ್ಷಿಸದಿದ್ದರೂ, ತಮ್ಮ ರಾಜನನ್ನು ಒಂಟಿಯಾಗಿ ಒಬ್ಬ ಇಸ್ರಾಯೇಲ್ಯನೊಂದಿಗೆ ಖಂಡಿತವಾಗಿಯೂ ಬಿಡುತ್ತಿರಲಿಲ್ಲ! ಒಂದು ವೇಳೆ ಅವರು ಬಿಟ್ಟಿದ್ದಲ್ಲಿ, ಎಗ್ಲೋನನನ್ನು ಸಾಯಿಸಸಾಧ್ಯವಿತ್ತಾದರೂ, ಏಹೂದನು ಹೇಗೆ ತಪ್ಪಿಸಿಕೊಳ್ಳುವನು? ಎಗ್ಲೋನನ ಸೇವಕರು ಏನು ಸಂಭವಿಸಿತೆಂಬುದನ್ನು ಕಂಡುಹಿಡಿಯುವ ಮುನ್ನ ಏಹೂದನು ಎಷ್ಟು ದೂರ ಓಡಸಾಧ್ಯವಿತ್ತು?
ಇಂಥ ವಿವರಗಳ ಬಗ್ಗೆ ಏಹೂದನು ಚಿಂತನೆಮಾಡಿದನೆಂಬುದರಲ್ಲಿ ಸಂದೇಹವಿಲ್ಲ. ಪ್ರಾಯಶಃ ಅನೇಕ ವಿಪತ್ಕಾರಕ ಫಲಿತಾಂಶಗಳನ್ನೂ ಅವನು ಕಲ್ಪಿಸಿಕೊಂಡಿದ್ದಿರಬಹುದು. ಆದರೂ, ಅವನು ಧೈರ್ಯವನ್ನು ಪ್ರದರ್ಶಿಸುತ್ತಾ, ಯೆಹೋವನಲ್ಲಿ ನಂಬಿಕೆಯನ್ನಿಡುತ್ತಾ, ತನ್ನ ಯೋಜನೆಯೊಂದಿಗೆ ಮುಂದುವರಿದನು.
ಏಹೂದನು ಎಗ್ಲೋನನನ್ನು ಸಂಧಿಸುತ್ತಾನೆ
ಮುಂದಿನ ಕಪ್ಪಕಾಣಿಕೆಯನ್ನು ನೀಡುವ ದಿನವು ಬಂತು. ಏಹೂದನೂ ಅವನ ಆಳುಗಳೂ ರಾಜನ ಅರಮನೆಯನ್ನು ಪ್ರವೇಶಿಸಿದರು. ಸ್ವಲ್ಪ ಸಮಯದಲ್ಲಿಯೇ, ಅವರು ರಾಜ ಎಗ್ಲೋನನ ಮುಂದೆ ನಿಂತಿದ್ದರು. ಆದರೆ ಆಕ್ರಮಣಮಾಡಲಿಕ್ಕಾಗಿ ಏಹೂದನಿಗೆ ಇನ್ನೂ ಸಮಯವು ಬಂದಿರಲಿಲ್ಲ. ಕಪ್ಪಕಾಣಿಕೆಯನ್ನು ನೀಡಿದ ಬಳಿಕ, ಏಹೂದನು ಕಪ್ಪಕಾಣಿಕೆಯನ್ನು ಹೊರುವ ಆಳುಗಳನ್ನು ಹಿಂದಿರುಗಿ ಕಳುಹಿಸಿಬಿಟ್ಟನು.—ನ್ಯಾಯಸ್ಥಾಪಕರು 3:17, 18.
ಎಗ್ಲೋನನನ್ನು ಕೊಲ್ಲುವುದರಲ್ಲಿ ಏಹೂದನು ಏಕೆ ವಿಳಂಬಿಸಿದನು? ಅವನು ಭಯಕ್ಕೊಳಗಾದನೋ? ಇಲ್ಲವೇ ಇಲ್ಲ! ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತರಲು, ಏಹೂದನಿಗೆ ರಾಜನೊಂದಿಗೆ ಒಂದು ಖಾಸಗಿ—ಈ ಆರಂಭದ ಭೇಟಿಯಲ್ಲಿ ಅವನಿಗೆ ಅನುಮತಿಸದ ಯಾವುದೋ ವಿಷಯ—ಭೇಟಿಯ ಅಗತ್ಯವಿತ್ತು. ಇನ್ನೂ ಹೆಚ್ಚಾಗಿ, ಏಹೂದನು ತ್ವರಿತವಾಗಿ ಪಲಾಯನಮಾಡುವ ಅಗತ್ಯವಿತ್ತು. ಕಪ್ಪಕಾಣಿಕೆಯನ್ನು ಹೊರುವ ಇಡೀ ಪರಿವಾರಕ್ಕಿಂತಲೂ ಒಬ್ಬ ಮನುಷ್ಯನು ತಪ್ಪಿಸಿಕೊಳ್ಳುವುದು ಬಹಳ ಸುಲಭ. ಆದುದರಿಂದ ಏಹೂದನು ತನ್ನ ಸಮಯಕ್ಕಾಗಿ ಕಾದನು. ಎಗ್ಲೋನನೊಂದಿಗೆ ಮಾಡಿದ ಆ ಸಂಕ್ಷಿಪ್ತ ಭೇಟಿಯು, ಅರಮನೆಯ ವಿನ್ಯಾಸದೊಂದಿಗೆ ಪರಿಚಿತನಾಗಲು ಹಾಗೂ ರಾಜನ ಭದ್ರತೆಯು ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವನಿಗೆ ಸಾಧ್ಯಮಾಡಿತು.
“ಗಿಲ್ಗಾಲಿನಲ್ಲಿರುವ ವಿಗ್ರಹಸ್ಥಳ”ವನ್ನು ತಲಪಿದ ಅನಂತರ, ಏಹೂದನು ತನ್ನ ಪುರುಷರನ್ನು ಬಿಟ್ಟುಬಿಟ್ಟು, ಎಗ್ಲೋನನ ಅರಮನೆಗೆ ಮತ್ತೆ ಹಿಂದಿರುಗಿದನು. ಸುಮಾರು ಎರಡು ಕಿಲೊಮೀಟರುಗಳ ಆ ನಡಿಗೆಯು, ಏಹೂದನಿಗೆ ತನ್ನ ಕಾರ್ಯದ ಕುರಿತಾಗಿ ಆಲೋಚಿಸಲು ಹಾಗೂ ಯೆಹೋವನ ಆಶೀರ್ವಾದಕ್ಕಾಗಿ ಪ್ರಾರ್ಥಿಸಲು ತುಸು ಸಮಯವನ್ನು ಕೊಟ್ಟಿತು.—ನ್ಯಾಯಸ್ಥಾಪಕರು 3:19.
ಏಹೂದನು ಹಿಂದಿರುಗುತ್ತಾನೆ
ಏಹೂದನು ಅರಮನೆಯೊಳಕ್ಕೆ ಮತ್ತೆ ಸ್ವಾಗತಿಸಲ್ಪಟ್ಟನೆಂಬುದು ಸ್ಫುಟ. ಈ ಹಿಂದೆ ಅವನು ಕೊಟ್ಟ ಉದಾರವಾದ ಕಪ್ಪಕಾಣಿಕೆಯು, ಎಗ್ಲೋನನನ್ನು ಹಿತಕರವಾದ ಮನಸ್ಥಿತಿಯಲ್ಲಿರುವಂತೆ ಮಾಡಿದ್ದಿರಬಹುದು. ಆರಂಭದ ಭೇಟಿಯು ಸಂಕ್ಷಿಪ್ತವಾಗಿದ್ದಿರಬಹುದಾದರೂ, ಅದು ಏಹೂದನಿಗೆ ರಾಜನೊಂದಿಗೆ ಒಂದು ವಿಶ್ವಾಸದ ಸಂಬಂಧವನ್ನು ಸ್ಥಾಪಿಸಲು ಸಾಕಷ್ಟು ಅವಕಾಶವನ್ನು ನೀಡಿತು. ವಿಷಯವು ಏನೇ ಆಗಿರಲಿ, ಏಹೂದನು ಮತ್ತೆ ಎಗ್ಲೋನನ ಸಮಕ್ಷಮದಲ್ಲಿದ್ದನು.
“ಅರಸೇ, ನಿನಗೆ ತಿಳಿಸತಕ್ಕದ್ದೊಂದು ರಹಸ್ಯವದೆ” ಎಂದು ಏಹೂದನು ಹೇಳಿದನು. ಅವನು ಇಷ್ಟು ದೂರ ಬಂದುದರ ನಿಜಾಂಶವು, ಯೆಹೋವನು ಅವನನ್ನು ಮಾರ್ಗದರ್ಶಿಸುತ್ತಿದ್ದನು ಎಂಬುದರ ಸೂಚನೆಯಾಗಿತ್ತು. ಆದರೂ, ಸಮಸ್ಯೆಯೊಂದಿತ್ತು. ಏಹೂದನು ಹೇಳಬೇಕಾಗಿದ್ದ “ರಹಸ್ಯ”ವು ರಾಜನ ಸೇವಕರ ಸಮಕ್ಷಮದಲ್ಲಿ ಹೇಳಲ್ಪಡಸಾಧ್ಯವಿರಲಿಲ್ಲ. ಯೆಹೋವನು ಹಸ್ತಕ್ಷೇಪ ಮಾಡುತ್ತಿದ್ದಲ್ಲಿ, ಏಹೂದನಿಗೆ ತತ್ಕ್ಷಣವೇ ಆ ಸಹಾಯದ ಅಗತ್ಯವಿತ್ತು. “ನಿಶ್ಶಬ್ದ” ಎಂದು ರಾಜನು ಆಜ್ಞಾಪಿಸಿದನು. ಈ “ರಹಸ್ಯ”ವನ್ನು ಯಾರೂ ಕೇಳಿಸಿಕೊಳ್ಳಬಾರದೆಂದು ಎಗ್ಲೋನನು ಬಯಸಿದನಾದುದರಿಂದ, ಅವನು ತನ್ನ ಸೇವಕರನ್ನು ಹೊರಡಿಸಿಬಿಟ್ಟನು. ಏಹೂದನಿಗೆ ಆದ ಸಮಾಧಾನವನ್ನು ಕಲ್ಪಿಸಿಕೊಳ್ಳಿ!—ನ್ಯಾಯಸ್ಥಾಪಕರು 3:19.
ಏಹೂದನು ಎಗ್ಲೋನನ ಹತ್ತಿರ ಬಂದು, “ನಿನಗೆ ಹೇಳಬೇಕಾದದ್ದೊಂದು ದೇವೋಕ್ತಿಯಿದೆ [“ದೇವರ ಉಕ್ತಿ,” NW]” ಎಂದು ಹೇಳಿದಾಗ, ಎಗ್ಲೋನನು ತನ್ನ ಮೇಲುಪ್ಪರಿಗೆಯಲ್ಲಿ ಕುಳಿತುಕೊಂಡಿದ್ದನು. ‘ದೇವರು’ ಎಂದು ಹೇಳುವ ಮೂಲಕ ಏಹೂದನು, ಕೆಮೋಷನ ಬಗ್ಗೆ ಸೂಚಿಸುತ್ತಿದ್ದನೋ? ಎಗ್ಲೋನನು ಹಾಗೆ ತಿಳಿದಿದ್ದಿರಬಹುದು. ಕುತೂಹಲಿಯಾಗಿ, ಅವನು ತನ್ನ ಸಿಂಹಾಸನದಿಂದ ಎದ್ದುಬಂದು, ನಿರೀಕ್ಷಣೆಯಿಂದ ನಿಂತುಕೊಂಡನು. ಪ್ರಾಯಶಃ ಆಕ್ರಮಣದ ಕುರಿತು ರಾಜನಿಗೆ ಶಂಕೆ ಹುಟ್ಟಿಸದ ಹಾಗೆ ಜಾಗರೂಕತೆಯಿಂದ ಏಹೂದನು ಸಮೀಪಿಸಿದನು. ಆಗ, ತ್ವರಿತಗತಿಯಲ್ಲಿ, “ಏಹೂದನು ಎಡಗೈ ಚಾಚಿ ಬಲಗಡೆಯ ಸೊಂಟಕ್ಕೆ ಕಟ್ಟಿದ್ದ ಕತ್ತಿಯನ್ನು ಹಿರಿದು ಅವನ ಹೊಟ್ಟೆಯಲ್ಲಿ ತಿವಿದನು. ಅಲಗೂ ಹಿಡಿಯೂ ಹೊಟ್ಟೆಯೊಳಗೆ ಹೊಕ್ಕವು. ಅವನು ಕತ್ತಿಯನ್ನು ಹೊರಗೆ ತೆಗೆಯದ್ದರಿಂದ ಕೊಬ್ಬು ಅಲಗನ್ನು ಸುತ್ತಿಕೊಂಡಿತು; ಮಲವು ಹೊರಗೆ ಬಂದಿತು.”—ನ್ಯಾಯಸ್ಥಾಪಕರು 3:20-22.
ಹತ್ತಿರದಲ್ಲಿಯೇ ಸುಳಿದಾಡುತ್ತಿದ್ದ ರಾಜನ ಸೇವಕರು ಕೋಲಾಹಲವನ್ನೆಬ್ಬಿಸಲಿಲ್ಲ. ಆದರೂ ಏಹೂದನು ಇನ್ನೂ ಅಪಾಯದಲ್ಲಿದ್ದನು. ಯಾವುದೇ ಕ್ಷಣದಲ್ಲಿ ಎಗ್ಲೋನನ ಸೇವಕರು ಒಳಕ್ಕೆ ಧಾವಿಸಿ, ತಮ್ಮ ಬಿದ್ದುಹೋಗಿರುವ ರಾಜನ ಮೃತದೇಹವನ್ನು ಕಂಡುಹಿಡಿಯಬಹುದಿತ್ತು. ಏಹೂದನಿಗೆ ಅಲ್ಲಿಂದ ಬೇಗನೆ ತಪ್ಪಿಸಿಕೊಳ್ಳುವ ಅಗತ್ಯವಿತ್ತು! ಬಾಗಿಲುಗಳಿಗೆ ಬೀಗಹಾಕುತ್ತಾ, ಮೇಲುಪ್ಪರಿಗೆಯ ಗಾಳಿಗಂಡಿಯ ಮುಖಾಂತರ ಅವನು ತಪ್ಪಿಸಿಕೊಂಡನು.—ನ್ಯಾಯಸ್ಥಾಪಕರು 3:23, 24ಎ.
ಕಂಡುಹಿಡಿತ ಹಾಗೂ ಪರಾಜಯ
ಬೇಗನೆ ಎಗ್ಲೋನನ ಸೇವಕರು ಕುತೂಹಲಿಗಳಾದರು. ಆದರೂ ರಾಜನ ಖಾಸಗಿ ಸಂಧಿಸುವಿಕೆಯನ್ನು ಅಡ್ಡಪಡಿಸುವುದರಿಂದ ಅವನ ಕೋಪವನ್ನು ಎದುರಿಸುವ ಧೈರ್ಯವನ್ನು ಅವರು ಮಾಡಲಿಲ್ಲ. ಅನಂತರ ಅವರು ಮೇಲುಪ್ಪರಿಗೆಯ ಬಾಗಿಲುಗಳಿಗೆ ಬೀಗಹಾಕಿರುವುದನ್ನು ಗಮನಿಸಿದರು. “ಅರಸನು ತಂಪಾದ ಕೋಣೆಗೆ ಸೇರಿದ ಪಾಯಖಾನೆಗೆ ಹೋಗಿರಬೇಕು,” ಎಂದು ಅವರು ಸಮರ್ಥಿಸಿಕೊಂಡರು. ಆದರೂ, ಸಮಯವು ಗತಿಸಿದಂತೆ, ಬರಿಯ ಕುತೂಹಲವು ಆತಂಕದ ಆಂದೋಲನವಾಗಿ ಪರಿಣಮಿಸಿತು. ಎಗ್ಲೋನನ ಸೇವಕರು ಇನ್ನುಮುಂದೆ ಕಾಯಲು ಸಾಧ್ಯವಾಗಲಿಲ್ಲ. “ಬೀಗದ ಕೈಯನ್ನು ತೆಗೆದುಕೊಂಡು ಬಾಗಲನ್ನು ತೆರೆಯಲು ಇಗೋ ಅವರ ಒಡೆಯನು ಸತ್ತು ಬಿದ್ದಿದ್ದನು.”—ನ್ಯಾಯಸ್ಥಾಪಕರು 3:25.
ಅಷ್ಟರೊಳಗೆ ಏಹೂದನು ತಪ್ಪಿಸಿಕೊಂಡಿದ್ದನು. ಅವನು ಗಿಲ್ಗಾಲಿನಲ್ಲಿರುವ ವಿಗ್ರಹಸ್ಥಳವನ್ನು ದಾಟಿ, ಕಟ್ಟಕಡೆಗೆ ಅವನು ಸೆಯೀರಾ ಎಂಬಲ್ಲಿಗೆ, ಎಫ್ರಾಯೀಮ್ ಪರ್ವತಪ್ರದೇಶಕ್ಕೆ ಬಂದು ತಲಪಿದನು. ಏಹೂದನು ಒಟ್ಟಾಗಿ ಇಸ್ರಾಯೇಲ್ ಪುರುಷರನ್ನು ಕರೆದು, ಮೋವಾಬ್ಯರ ವಿರುದ್ಧವಾಗಿ ಐಕ್ಯ ಆಕ್ರಮಣವನ್ನು ಮಾಡಲು ಅವರನ್ನು ಮುನ್ನಡೆಸಿದನು. “ಪುಷ್ಟರೂ ಪರಾಕ್ರಮಿಗಳೂ ಆದ ಸುಮಾರು ಹತ್ತು ಸಾವಿರ ಮಂದಿ ಮೋವಾಬ್ಯರನ್ನು ಒಬ್ಬನೂ ತಪ್ಪಿಸಿಕೊಳ್ಳದಂತೆ ಹತಮಾಡಿದರು” ಎಂದು ವೃತ್ತಾಂತವು ಹೇಳುತ್ತದೆ. ಮೋವಾಬನ್ನು ಸೋಲಿಸಿದ ಪರಿಣಾಮವಾಗಿ, ಇಸ್ರಾಯೇಲಿನ ದೇಶಕ್ಕೆ 80 ವರ್ಷಗಳ ತನಕ ಮುಂದೆ ಯಾವುದೇ ಕ್ಷೋಭೆಯಿರಲಿಲ್ಲ.—ನ್ಯಾಯಸ್ಥಾಪಕರು 3:26-30.
ಏಹೂದನ ಮಾದರಿಯಿಂದ ಕಲಿಯುವುದು
ದೇವರಲ್ಲಿಟ್ಟಿದ್ದ ನಂಬಿಕೆಯು ಏಹೂದನನ್ನು ಪ್ರೇರೇಪಿಸಿತು. ಇಬ್ರಿಯ 11ನೇ ಅಧ್ಯಾಯವು ಅವನನ್ನು, ‘ನಂಬಿಕೆಯ ಮೂಲಕ ರಾಜ್ಯಗಳನ್ನು ಸ್ವಾಧೀನಮಾಡಿಕೊಂಡ, . . . ಯುದ್ಧದಲ್ಲಿ ಪರಾಕ್ರಮಶಾಲಿಗಳಾದ, ಪರರ ದಂಡುಗಳನ್ನು ಓಡಿಸಿಬಿಟ್ಟ’ವರಲ್ಲಿ ಒಬ್ಬನಾಗಿ ನಿರ್ದಿಷ್ಟವಾಗಿ ಉಲ್ಲೇಖಿಸುವುದಿಲ್ಲ. (ಇಬ್ರಿಯ 11:33, 34) ಆದರೂ, ಏಹೂದನು ನಂಬಿಕೆಯಲ್ಲಿ ಕ್ರಿಯೆಗೈದಂತೆ ಹಾಗೂ ಎಗ್ಲೋನನ ದಬ್ಬಾಳಿಕೆಯ ಶಕ್ತಿಯಿಂದ ಇಸ್ರಾಯೇಲನ್ನು ಬಿಡುಗಡೆಗೊಳಿಸಿದಂತೆ, ಯೆಹೋವನು ಅವನನ್ನು ಬೆಂಬಲಿಸಿದನು.
ಏಹೂದನಲ್ಲಿದ್ದ ಗುಣಗಳಲ್ಲಿ ಒಂದು ಗುಣ ಧೈರ್ಯವಾಗಿತ್ತು. ಅಕ್ಷರಾರ್ಥಕವಾದ ಕತ್ತಿಯನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಲು ಅವನು ಧೈರ್ಯಶಾಲಿಯಾಗಿರಬೇಕಿತ್ತು. ದೇವರ ಪ್ರಚಲಿತ ದಿನದ ಸೇವಕರೋಪಾದಿ ನಾವು, ಅಂಥ ಒಂದು ಕತ್ತಿಯನ್ನು ತೆಗೆದುಕೊಳ್ಳುವುದಿಲ್ಲ. (ಯೆಶಾಯ 2:4; ಮತ್ತಾಯ 26:52) ಆದರೂ, ನಾವು “ಪವಿತ್ರಾತ್ಮನ . . . ಕತ್ತಿಯ,” ದೇವರ ವಾಕ್ಯದ ಉಪಯೋಗವನ್ನು ಮಾಡುತ್ತೇವೆ. (ಎಫೆಸ 6:17) ಏಹೂದನು ತನ್ನ ಆಯುಧವನ್ನು ಬಳಸುವುದರಲ್ಲಿ ನುರಿತ ವ್ಯಕ್ತಿಯಾಗಿದ್ದನು. ನಾವು ಕೂಡ ರಾಜ್ಯದ ಸುವಾರ್ತೆಯನ್ನು ಪ್ರಚಾರಮಾಡಿದಂತೆ, ದೇವರ ವಾಕ್ಯವನ್ನು ಉಪಯೋಗಿಸುವುದರಲ್ಲಿ ಕೌಶಲಭರಿತರಾಗಿರುವ ಅಗತ್ಯವಿದೆ. (ಮತ್ತಾಯ 24:14) ಬೈಬಲಿನ ವೈಯಕ್ತಿಕ ಅಧ್ಯಯನ, ಕ್ರೈಸ್ತ ಕೂಟಗಳಲ್ಲಿ ಕ್ರಮವಾದ ಉಪಸ್ಥಿತಿ, ಶುಶ್ರೂಷೆಯಲ್ಲಿ ಹುರುಪಿನ ಭಾಗವಹಿಸುವಿಕೆ, ಹಾಗೂ ನಮ್ಮ ಸ್ವರ್ಗೀಯ ತಂದೆಯ ಮೇಲಿನ ಪ್ರಾರ್ಥನಾಪೂರ್ವಕ ಅವಲಂಬನೆಯು, ನಿಜವಾಗಿಯೂ ನಂಬಿಗಸ್ತನೂ ಧೈರ್ಯವಂತನೂ ಆದ ಮನುಷ್ಯನಾದ ಏಹೂದನಿಂದ ಪ್ರದರ್ಶಿಸಲ್ಪಟ್ಟ ಗುಣಗಳನ್ನು ಅನುಕರಿಸಲು ನಮಗೆ ಸಹಾಯಮಾಡುವುದು.
[ಅಧ್ಯಯನ ಪ್ರಶ್ನೆಗಳು]
a ಪವಿತ್ರ ಸ್ತಂಭಗಳು ಶಿಶ್ನ ಪ್ರತೀಕಗಳಾಗಿದ್ದಿರಬಹುದು. ಅವು ತೀರ ಅನೈತಿಕ ಲೈಂಗಿಕ ವಿಷಯ ಲೋಲುಪ್ತಿಗಳೊಂದಿಗೆ ಸಂಬಂಧಿಸಿದ್ದವು.—1 ಅರಸುಗಳು 14:22-24.
b ಕೆಮೋಷ್ ಮೋವಾಬ್ಯರ ಮುಖ್ಯ ದೇವರು. (ಅರಣ್ಯಕಾಂಡ 21:29; ಯೆರೆಮೀಯ 48:46) ಕಡಿಮೆ ಪಕ್ಷ ಕೆಲವು ವಿದ್ಯಮಾನಗಳಲ್ಲಿ, ಪ್ರಾಯಶಃ ಈ ಅಸಹ್ಯಕರವಾದ ಸುಳ್ಳು ದೇವನಿಗೆ ಮಕ್ಕಳನ್ನು ಬಲಿಕೊಡಲಾಗುತ್ತಿತ್ತು.—2 ಅರಸುಗಳು 3:26, 27.
[ಪುಟ 31 ರಲ್ಲಿರುವ ಚಿತ್ರ]
ಏಹೂದನೂ ಅವನ ಆಳುಗಳೂ ರಾಜ ಎಗ್ಲೋನನಿಗೆ ಕಪ್ಪಕಾಣಿಕೆಯನ್ನು ಒಪ್ಪಿಸಿದರು
[ಕೃಪೆ]
ನಕಲು ಪ್ರತಿ: Illustrirte Pracht - Bibel/Heilige Schrift des Alten und Neuen Testaments, nach der deutschen Uebersetzung D. Martin Luther’s