ನಿಜ ಶಾಂತಿ—ಯಾವ ಮೂಲದಿಂದ?
“[ಯೆಹೋವನು] ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ.”—ಕೀರ್ತನೆ 46:9.
1. ಯೆಶಾಯನ ಪ್ರವಾದನೆಯಲ್ಲಿ ಶಾಂತಿಯ ಕುರಿತಾದ ಯಾವ ಅದ್ಭುತಕರ ವಾಗ್ದಾನವನ್ನು ನಾವು ಕಂಡುಕೊಳ್ಳುತ್ತೇವೆ?
“ಧರ್ಮದಿಂದ ಸಮಾಧಾನವು ಫಲಿಸುವದು, ಶಾಂತಿ ನಿರ್ಭಯಗಳು ಧರ್ಮದ ನಿತ್ಯಪರಿಣಾಮವಾಗಿರುವವು. ನನ್ನ ಜನರು ಸಮಾಧಾನನಿವಾಸದಲ್ಲಿಯೂ ನಿರ್ಭಯನಿಲಯಗಳಲ್ಲಿಯೂ ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.” (ಯೆಶಾಯ 32:17, 18) ಎಂತಹ ಸುಂದರವಾದ ಒಂದು ವಾಗ್ದಾನ! ಅದು ದೇವರ ಮೂಲಕ ಬರಲಿರುವ ನಿಜ ಶಾಂತಿಯ ಒಂದು ವಾಗ್ದಾನವಾಗಿದೆ.
2, 3. ನಿಜ ಶಾಂತಿಯನ್ನು ವರ್ಣಿಸಿರಿ.
2 ಆದರೂ, ನಿಜ ಶಾಂತಿ ಎಂದರೇನು? ಅದು ಕೇವಲ ಯುದ್ಧದ ಇಲ್ಲದಿರುವಿಕೆ ಆಗಿದೆಯೊ? ಅಥವಾ ರಾಷ್ಟ್ರಗಳು ಮುಂದಿನ ಯುದ್ಧಕ್ಕಾಗಿ ತಯಾರಿಸುವ ಒಂದು ಸಮಯಾವಧಿ ಮಾತ್ರ ಅದಾಗಿದೆಯೊ? ನಿಜ ಶಾಂತಿ ಕೇವಲ ಒಂದು ಕನಸೊ? ಆ ಪ್ರಶ್ನೆಗಳಿಗೆ ನಾವು ವಿಶ್ವಸನೀಯ ಉತ್ತರಗಳನ್ನು ಪಡೆದುಕೊಳ್ಳಬೇಕಾಗಿದೆ. ಮೊದಲನೆಯದಾಗಿ, ನಿಜ ಶಾಂತಿಯು ಒಂದು ಕನಸಿಗಿಂತಲೂ ಹೆಚ್ಚಾದ ವಿಷಯವಾಗಿದೆ. ದೇವರ ವಾಗ್ದತ್ತ ಶಾಂತಿಯು, ಈ ಲೋಕವು ಊಹಿಸಸಾಧ್ಯವಿರುವ ಯಾವುದೇ ವಿಷಯಕ್ಕಿಂತ ಮಿಗಿಲಾಗಿದೆ. (ಯೆಶಾಯ 64:4) ಅದು ಕೆಲವು ವರ್ಷಗಳು ಇಲ್ಲವೆ ಕೆಲವು ದಶಕಗಳ ವರೆಗೆ ಇರುವ ಶಾಂತಿಯಲ್ಲ. ಅದು ಸದಾಕಾಲ ಬಾಳುತ್ತದೆ! ಮತ್ತು ಅದು, ಕೆಲವು ಸುಯೋಗಪಡೆದ ವ್ಯಕ್ತಿಗಳಿಗಾಗಿ ಮಾತ್ರ ಇರುವ ಶಾಂತಿಯಲ್ಲ, ಅದು ಸ್ವರ್ಗ ಹಾಗೂ ಭೂಮಿಯನ್ನು, ದೇವದೂತರು ಹಾಗೂ ಮಾನವರನ್ನು ಒಳಗೊಳ್ಳುತ್ತದೆ. ಅದು ಎಲ್ಲ ರಾಷ್ಟ್ರಗಳು, ಕುಲಸಂಬಂಧಿತ ಗುಂಪುಗಳು, ಭಾಷೆಗಳು, ಮತ್ತು ಬಣ್ಣಗಳ ಜನರಿಗೆ ವಿಸ್ತರಿಸುತ್ತದೆ. ಸರಹದ್ದುಗಳಾಗಲಿ, ಅಡ್ಡಗಟ್ಟುಗಳಾಗಲಿ, ವೈಫಲ್ಯಗಳಾಗಲಿ ಒಬ್ಬನಿಂದ ನಿಜ ಶಾಂತಿಯನ್ನು ಕಸಿದುಕೊಳ್ಳವು.—ಕೀರ್ತನೆ 72:7, 8; ಯೆಶಾಯ 48:18.
3 ನಿಜ ಶಾಂತಿ, ಪ್ರತಿದಿನದ ಶಾಂತಿಯನ್ನು ಅರ್ಥೈಸುತ್ತದೆ. ಅದು, ನೀವು ಪ್ರತಿದಿನ ಬೆಳಗ್ಗೆ ಯುದ್ಧದ ವಿಚಾರವಿಲ್ಲದೆ, ನಿಮ್ಮ ಭವಿಷ್ಯತ್ತು, ನಿಮ್ಮ ಮಕ್ಕಳ ಭವಿಷ್ಯತ್ತು, ನಿಮ್ಮ ಮೊಮ್ಮಕ್ಕಳ ಭವಿಷ್ಯತ್ತಿನ ಕುರಿತಾಗಿ ಯಾವ ಚಿಂತೆಯೂ ಇಲ್ಲದೆ ಎದ್ದೇಳುವುದನ್ನು ಅರ್ಥೈಸುತ್ತದೆ. ಅದು ಸಂಪೂರ್ಣ ಮನಶ್ಶಾಂತಿಯನ್ನು ಅರ್ಥೈಸುತ್ತದೆ. (ಕೊಲೊಸ್ಸೆ 3:15) ಅದು, ಇನ್ನುಮುಂದೆ ಅಪರಾಧವಾಗಲಿ, ಹಿಂಸಾಚಾರವಾಗಲಿ, ವಿಭಾಜಿತ ಕುಟುಂಬಗಳಾಗಲಿ, ನಿರ್ಗತಿಕ ಜನರಾಗಲಿ, ಹೊಟ್ಟೆಗಿಲ್ಲದೆ ಅಥವಾ ಚಳಿಯಿಂದ ಸೆಡೆತು ಸಾಯುವ ಜನರಾಗಲಿ, ಹತಾಶೆಯಾಗಲಿ, ಆಶಾಭಂಗವಾಗಲಿ ಇರುವುದಿಲ್ಲ ಎಂಬುದನ್ನು ಅರ್ಥೈಸುತ್ತದೆ. ಇನ್ನೂ ಉತ್ತಮವಾದ ವಿಷಯವೇನೆಂದರೆ, ದೇವರ ಶಾಂತಿಯು, ಅನಾರೋಗ್ಯ, ವೇದನೆ, ದುಃಖ, ಅಥವಾ ಮರಣವೂ ಇಲ್ಲದ ಒಂದು ಲೋಕವನ್ನು ಅರ್ಥೈಸುತ್ತದೆ. (ಪ್ರಕಟನೆ 21:4) ನಿಜ ಶಾಂತಿಯನ್ನು ಸದಾಕಾಲ ಅನುಭವಿಸುವ ಎಂತಹ ಒಂದು ಮಹತ್ತರವಾದ ನಿರೀಕ್ಷೆ ನಮಗಿದೆ! ನಾವೆಲ್ಲರೂ ಹಾತೊರೆಯುವಂತಹ ರೀತಿಯ ಶಾಂತಿ ಮತ್ತು ಸಂತೋಷವು ಇದೇ ಆಗಿರುವುದಿಲ್ಲವೊ? ನಾವು ಪ್ರಾರ್ಥಿಸಿ, ಶ್ರಮಿಸಬೇಕಾದ ರೀತಿಯ ಶಾಂತಿ ಇದೇ ಆಗಿರುವುದಿಲ್ಲವೊ?
ಮನುಷ್ಯಜಾತಿಯ ವಿಫಲಗೊಂಡ ಪ್ರಯತ್ನಗಳು
4. ರಾಷ್ಟ್ರಗಳು ಶಾಂತಿಗಾಗಿ ಯಾವ ಪ್ರಯತ್ನಗಳನ್ನು ಮಾಡಿವೆ, ಮತ್ತು ಯಾವ ಫಲಿತಾಂಶಗಳೊಂದಿಗೆ?
4 ಶತಮಾನಗಳಿಂದಲೂ, ಮನುಷ್ಯರು ಮತ್ತು ರಾಷ್ಟ್ರಗಳು ಶಾಂತಿಯ ಕುರಿತು ಮಾತಾಡಿ, ಶಾಂತಿಯ ಬಗ್ಗೆ ಚರ್ಚೆ ನಡೆಸಿ, ನೂರಾರು ಶಾಂತಿ ಸಂಧಾನಗಳಿಗೆ ಸಹಿಹಾಕಿವೆ. ಇದರಿಂದಾದ ಪರಿಣಾಮವೇನು? ಕಳೆದ 80 ವರ್ಷಗಳಲ್ಲಿ, ಯಾವುದೊ ರಾಷ್ಟ್ರ ಇಲ್ಲವೆ ಗುಂಪು ಯುದ್ಧದಲ್ಲಿ ಒಳಗೂಡದೆ ಇದ್ದಂತಹ ಸಮಯವು ಕಾರ್ಯತಃ ಇದ್ದದ್ದೇ ಇಲ್ಲ. ಸ್ಪಷ್ಟವಾಗಿ, ಶಾಂತಿಯು ಮಾನವಜಾತಿಯ ಹಿಡಿತಕ್ಕೆ ಸಿಕ್ಕದೇ ಹೋಗಿದೆ. ಆದುದರಿಂದ, ಪ್ರಶ್ನೆಯು ಏನೆಂದರೆ, ಅಂತಾರಾಷ್ಟ್ರೀಯ ಶಾಂತಿಯನ್ನು ಸ್ಥಾಪಿಸಲಿಕ್ಕಾಗಿರುವ ಮನುಷ್ಯನ ಸಕಲ ಪ್ರಯತ್ನಗಳು ವಿಫಲಗೊಂಡಿರುವುದೇಕೆ, ಮತ್ತು ಬಾಳುವಂತಹ ನಿಜ ಶಾಂತಿಯನ್ನು ತರುವ ವಿಷಯದಲ್ಲಿ ಮನುಷ್ಯನು ಅಸಮರ್ಥನಾಗಿರುವುದೇಕೆ?
5. ಮಾನವಜಾತಿಯ ಶಾಂತಿಯ ಪ್ರಯತ್ನಗಳು ಏಕರೂಪವಾಗಿ ವಿಫಲಗೊಂಡಿವೆ ಏಕೆ?
5 ಸರಳವಾದ ಉತ್ತರವು ಏನೆಂದರೆ, ಮಾನವಜಾತಿಯು, ನಿಜ ಶಾಂತಿಯ ಸರಿಯಾದ ಮೂಲದ ಕಡೆಗೆ ತಿರುಗಿರುವುದಿಲ್ಲ. ಪಿಶಾಚನಾದ ಸೈತಾನನ ಪ್ರಭಾವದ ಕೆಳಗೆ, ಮನುಷ್ಯರು ತಮ್ಮ ಸ್ವಂತ ಬಲಹೀನತೆಗಳು ಮತ್ತು ದುರ್ಗುಣಗಳು—ತಮ್ಮ ಲೋಭ ಹಾಗೂ ಹೆಬ್ಬಯಕೆ, ಅಧಿಕಾರ ಮತ್ತು ಶ್ರೇಷ್ಠತ್ವಕ್ಕಾಗಿರುವ ತಮ್ಮ ಅತ್ಯಾಶೆ—ಇವುಗಳಿಗೆ ಬಲಿಬೀಳುವ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಅವರು ಉನ್ನತ ಕಲಿಕೆಯ ಸಂಘಗಳಿಗೆ ಹೋಗಿದ್ದಾರೆ, ಮತ್ತು ಸಂಸ್ಥೆಗಳನ್ನೂ ಯೋಚನಾ ಸಂಘಗಳನ್ನೂ ಸ್ಥಾಪಿಸಿದ್ದಾರೆ. ಇವು ದಬ್ಬಾಳಿಕೆ ಹಾಗೂ ನಾಶನದ ಹೆಚ್ಚು ಸಾಧನಗಳ ಕುರಿತು ಮಾತ್ರ ಯೋಚಿಸಿವೆ. ಮಾನವರು ಯಾವ ಮೂಲದ ಕಡೆಗೆ ನಿರ್ದೇಶಿಸಲ್ಪಟ್ಟಿದ್ದಾರೆ? ಅವರು ಯಾವ ಕಡೆಗೆ ನೋಡಿದ್ದಾರೆ?
6, 7. (ಎ) ಜನಾಂಗ ಸಂಘವು ತನಗಾಗಿ ಯಾವ ದಾಖಲೆಯನ್ನು ಸ್ಥಾಪಿಸಿಕೊಂಡಿತು? (ಬಿ) ವಿಶ್ವ ಸಂಸ್ಥೆಯ ದಾಖಲೆಯು ಏನಾಗಿದೆ?
6 ಹಿಂದೆ 1919ರಲ್ಲಿ, ರಾಷ್ಟ್ರಗಳು ಶಾಶ್ವತ ಶಾಂತಿಯನ್ನು ಸ್ಥಾಪಿಸಲು ಜನಾಂಗ ಸಂಘದಲ್ಲಿ ತಮ್ಮ ಭರವಸೆಯನ್ನಿಟ್ಟವು. ಆ ನಿರೀಕ್ಷೆಯು, 1935ರಲ್ಲಿ ಇಥಿಯೋಪಿಯದ ಮೇಲೆ ಮುಸ್ಸೊಲಿನಿ ಮಾಡಿದ ಆಕ್ರಮಣದಿಂದ ಮತ್ತು ಸ್ಪೆಯ್ನ್‌ನಲ್ಲಿ, 1936ರಲ್ಲಿ ಆರಂಭವಾದ ಒಳಯುದ್ಧದಿಂದ ನುಚ್ಚುನೂರಾಯಿತು. 1939ರಲ್ಲಿ, IIನೆಯ ಜಾಗತಿಕ ಯುದ್ಧದ ಆರಂಭದೊಂದಿಗೆ, ಜನಾಂಗ ಸಂಘವು ಕಾರ್ಯಮಾಡುವುದನ್ನು ನಿಲ್ಲಿಸಿತು. ನಾಮಮಾತ್ರದ ಶಾಂತಿಯು, 20 ವರ್ಷಗಳ ಕಾಲವೂ ಉಳಿದಿರಲಿಲ್ಲ.
7 ವಿಶ್ವ ಸಂಸ್ಥೆಯ ಕುರಿತೇನು? ಭೂವ್ಯಾಪಕವಾಗಿ ಬಾಳುವ ಶಾಂತಿಯ ಯಾವುದೇ ನಿಜವಾದ ನಿರೀಕ್ಷೆಯನ್ನು ಅದು ಒದಗಿಸಿದೆಯೊ? ಖಂಡಿತವಾಗಿಯೂ ಇಲ್ಲ. 1945ರಲ್ಲಿ ಅದರ ಆರಂಭದಂದಿನಿಂದ, 150ಕ್ಕಿಂತಲೂ ಹೆಚ್ಚಿನ ಯುದ್ಧಗಳು ಮತ್ತು ಸಶಸ್ತ್ರ ಹೋರಾಟಗಳು ನಡೆದಿವೆ! ಯುದ್ಧ ಹಾಗೂ ಅದರ ಮೂಲಗಳ ವಿಷಯವಾಗಿ ಅಭ್ಯಸಿಸುವ, ಒಬ್ಬ ಕನೇಡಿಯನ್ ವಿದ್ಯಾರ್ಥಿಯಾದ ಗ್ವಿನ್ ಡೈಅರ್ ಯುಎನ್ ಅನ್ನು, “ಬೇಟೆ ಕಾವಲುಗಾರರಾಗಿ ಪರಿವರ್ತನೆ ಹೊಂದಿದ ಕದ್ದು ಬೇಟೆಯಾಡುವವರ ಒಂದು ಸಂಘ, ಸಂತರ ಒಂದು ಸಭೆಯಲ್ಲ,” ಮತ್ತು “ಬಹಳಷ್ಟು ಮಾತುಕತೆ ನಡೆಯುವ ಆದರೆ ಯಾವುದೇ ಗಣನೀಯ ಕ್ರಮ ಕೈಕೊಳ್ಳಲ್ಪಡದ ಒಂದು ಶಕ್ತಿಹೀನ ಸಂಘ” ಎಂಬುದಾಗಿ ವರ್ಣಿಸಿದುದರಲ್ಲಿ ಯಾವ ಆಶ್ಚರ್ಯವೂ ಇರುವುದಿಲ್ಲ.—ಯೆರೆಮೀಯ 6:14; 8:15ನ್ನು ಹೋಲಿಸಿರಿ.
8. ಶಾಂತಿಯ ಕುರಿತಾದ ತಮ್ಮ ಮಾತುಕತೆಗಳ ಎದುರಿನಲ್ಲಿಯೂ, ರಾಷ್ಟ್ರಗಳು ಏನನ್ನು ಮಾಡುತ್ತಿವೆ? (ಯೆಶಾಯ 59:8)
8 ಶಾಂತಿಯ ಕುರಿತಾದ ಅವರ ಮಾತುಕತೆಯ ಎದುರಿನಲ್ಲಿಯೂ, ರಾಷ್ಟ್ರಗಳು ಶಸ್ತ್ರಗಳನ್ನು ಕಂಡುಹಿಡಿಯುವುದನ್ನು ಮತ್ತು ತಯಾರಿಸುವುದನ್ನು ಮುಂದುವರಿಸಿವೆ. ಶಾಂತಿ ಸಭೆಗಳನ್ನು ಪ್ರಾಯೋಜಿಸುವ ದೇಶಗಳೇ, ಅನೇಕ ವೇಳೆ ಆಯುಧಗಳ ತಯಾರಿಯಲ್ಲಿ ಮುಂದಾಳುತ್ವವನ್ನು ವಹಿಸಿರುತ್ತವೆ. ಈ ದೇಶಗಳಲ್ಲಿನ ಶಕ್ತಿಶಾಲಿ ವಾಣಿಜ್ಯ ಲಾಭಗಳು, ಅತ್ಯಂತ ಘೋರ ಸಿಡಿಮದ್ದುಗಳನ್ನು ಸೇರಿಸಿ, ಮಾರಕ ಯುದ್ಧಸಾಧನಗಳ ಉತ್ಪಾದನೆಯನ್ನು ಪ್ರವರ್ಧಿಸುತ್ತವೆ. ಈ ಸಿಡಿಮದ್ದುಗಳು ಪ್ರತಿ ವರ್ಷ ಸುಮಾರು 26,000 ಅಯೋಧ ವಯಸ್ಕರನ್ನು ಮತ್ತು ಮಕ್ಕಳನ್ನು ಕೊಲ್ಲುತ್ತವೆ ಇಲ್ಲವೆ ಊನಮಾಡುತ್ತವೆ. ಲೋಭ ಮತ್ತು ಭ್ರಷ್ಟಾಚಾರ ಪ್ರಚೋದಕ ಶಕ್ತಿಗಳಾಗಿವೆ. ಲಂಚ ಮತ್ತು ಕಮಿಷನ್‌ಗಳು ಅಂತಾರಾಷ್ಟ್ರೀಯ ಸಶಸ್ತ್ರ ಉದ್ಯಮದ ಒಂದು ಸಮಗ್ರ ಭಾಗವಾಗಿವೆ. ಕೆಲವು ರಾಜಕಾರಣಿಗಳು ಈ ಮೂಲದಿಂದಲೇ ತಮ್ಮನ್ನು ಐಶ್ವರ್ಯವಂತರನ್ನಾಗಿ ಮಾಡಿಕೊಳ್ಳುತ್ತಾರೆ.
9, 10. ಯುದ್ಧಗಳು ಮತ್ತು ಮಾನವ ಪ್ರಯತ್ನಗಳ ಕುರಿತಾಗಿ ಲೌಕಿಕ ಪರಿಣತರು ಏನನ್ನು ಗಮನಿಸಿದ್ದಾರೆ?
9 ಡಿಸೆಂಬರ್ 1995ರಲ್ಲಿ, ಪೋಲಿಷ್ ಭೌತವಿಜ್ಞಾನಿ ಮತ್ತು ಶಾಂತಿಗಾಗಿ ನೋಬೆಲ್ ಪಾರಿತೋಷಕವನ್ನು ಪಡೆದುಕೊಂಡ ಯೂಸೆಫ್ ರೋಟ್‌ಬ್ಲಾಟ್, ಶಸ್ತ್ರಾಸ್ತ್ರ ಪೈಪೋಟಿಯನ್ನು ಕೊನೆಗೊಳಿಸುವಂತೆ ರಾಷ್ಟ್ರಗಳಿಗೆ ಕರೆನೀಡಿದರು. ಅವರು ಹೇಳಿದ್ದು: “[ಒಂದು ಹೊಸ ಶಸ್ತ್ರಾಸ್ತ್ರ ಪೈಪೋಟಿಯನ್ನು] ತಡೆಗಟ್ಟುವ ಏಕಮಾತ್ರ ವಿಧವು, ಒಟ್ಟಾರೆ ಯುದ್ಧವನ್ನು ರದ್ದುಮಾಡುವುದೇ ಆಗಿದೆ.” ಇದು ಸಂಭವಿಸುವ ಸಾಧ್ಯತೆಯಿದೆ ಎಂದು ನೀವು ನೆನಸುತ್ತೀರೊ? 1928ರಿಂದೀಚೆಗೆ, ಭಿನ್ನತೆಗಳನ್ನು ಬಗೆಹರಿಸುವ ಒಂದು ವಿಧವಾಗಿ ಯುದ್ಧವನ್ನು ತೊರೆದುಬಿಡುತ್ತಾ, 62 ರಾಷ್ಟ್ರಗಳು ಕೆಲ್ಲಾಗ್ ಬ್ರಿಆ್ಯಂಡ್ ಒಪ್ಪಂದವನ್ನು ಸ್ಥಿರೀಕರಿಸಿದವು. ಆ ಒಪ್ಪಂದವು ಬೆಲೆಯಿಲ್ಲದ್ದಾಗಿತ್ತೆಂದು IIನೆಯ ಜಾಗತಿಕ ಯುದ್ಧವು ಸ್ಪಷ್ಟವಾಗಿ ಪ್ರದರ್ಶಿಸಿತು.
10 ನಿರ್ವಿವಾದವಾಗಿ ಯುದ್ಧವು, ಮಾನವಜಾತಿಯ ಇತಿಹಾಸದ ಪಥದಲ್ಲಿ ಒಂದು ನಿರಂತರವಾದ ಮುಗ್ಗರಿಸುವ ಕಲ್ಲಾಗಿ ಪರಿಣಮಿಸಿದೆ. ಗ್ವಿನ್ ಡೈಅರ್ ಬರೆದಂತೆ, “ಮಾನವ ನಾಗರಿಕತೆಯಲ್ಲಿ ಯುದ್ಧವು ಒಂದು ಕೇಂದ್ರೀಯ ಸಂಸ್ಥೆಯಾಗಿದೆ, ಮತ್ತು ಅದು ಮಾನವಜಾತಿಯಷ್ಟೇ ಹಳೆಯದ್ದಾಗಿದೆ.” ಹೌದು, ಕಾರ್ಯತಃ ಪ್ರತಿಯೊಂದು ನಾಗರಿಕತೆ ಹಾಗೂ ಸಾಮ್ರಾಜ್ಯಕ್ಕೆ, ಅದರ ಸನ್ಮಾನ್ಯ ಮಿಲಿಟರಿ ನಾಯಕರು, ಅದರ ಕಾಯಂಸೇನೆಗಳು, ಅದರ ಪ್ರಸಿದ್ಧ ಕದನಗಳು, ಅದರ ಪವಿತ್ರವಾದ ಮಿಲಿಟರಿ ಸಂಸ್ಥೆಗಳು ಮತ್ತು ಆಯುಧಗಳ ಸಂಗ್ರಹವಿದ್ದವು. ಹಾಗಿದ್ದರೂ, ನಮ್ಮ ಶತಮಾನವು—ವಿಧ್ವಂಸಕತೆ ಹಾಗೂ ಜೀವದ ನಷ್ಟದಲ್ಲಿ, ಎರಡರಲ್ಲಿಯೂ—ಬೇರೆ ಯಾವುದೇ ಶತಮಾನಕ್ಕಿಂತಲೂ ಹೆಚ್ಚಾಗಿ, ಯುದ್ಧದಿಂದ ಗುರುತಿಸಲ್ಪಟ್ಟಿದೆ.
11. ಶಾಂತಿಯ ತಮ್ಮ ಶೋಧನೆಯಲ್ಲಿ, ಯಾವ ಮೂಲಭೂತ ಅಂಶವನ್ನು ಲೋಕ ಮುಖಂಡರು ಕಡೆಗಣಿಸಿದ್ದಾರೆ?
11 ಲೋಕದ ಮುಖಂಡರು ಯೆರೆಮೀಯ 10:23ರ ಮೂಲಭೂತ ವಿವೇಕವನ್ನು ಕಡೆಗಣಿಸಿರುವುದು ಸ್ಪಷ್ಟ: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” ದೇವರನ್ನು ಕಡೆಗಣಿಸುವಲ್ಲಿ, ನಿಜ ಶಾಂತಿಯು ಇರಸಾಧ್ಯವಿಲ್ಲ. ಹಾಗಾದರೆ, ಒಂದು ಸುಸಂಸ್ಕೃತ ಸಮಾಜದಲ್ಲಿ ಯುದ್ಧವು ಅನಿವಾರ್ಯವೆಂಬುದನ್ನು ಇವೆಲ್ಲವೂ ಅರ್ಥೈಸುತ್ತವೊ? ಶಾಂತಿ—ನಿಜ ಶಾಂತಿ—ಯು ಅಸಾಧ್ಯವಾದ ಒಂದು ಕನಸೆಂಬುದನ್ನು ಇದು ಅರ್ಥೈಸುತ್ತದೊ?
ಮೂಲ ಕಾರಣವನ್ನು ಪತ್ತೆಹಚ್ಚುವುದು
12, 13. (ಎ) ಯುದ್ಧದ ಮೂಲಭೂತ, ಅದೃಶ್ಯ ಕಾರಣದ ಕುರಿತು, ಬೈಬಲ್ ಏನನ್ನು ಪ್ರಕಟಪಡಿಸುತ್ತದೆ? (ಬಿ) ಲೋಕದ ಸಮಸ್ಯೆಗಳಿಗಾಗಿರುವ ನಿಜವಾದ ಪರಿಹಾರದಿಂದ ಸೈತಾನನು ಮಾನವಜಾತಿಯ ಗಮನವನ್ನು ಹೇಗೆ ದೂರಮಾಡಿದ್ದಾನೆ?
12 ಆ ಪ್ರಶ್ನೆಗಳನ್ನು ಉತ್ತರಿಸಲು, ಯುದ್ಧದ ಕಾರಣಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯ ನಮಗಿದೆ. ದಂಗೆಕೋರ ದೂತನಾದ ಸೈತಾನನು ಆದಿಯ ‘ಕೊಲೆಗಾರನು’ ಮತ್ತು ‘ಸುಳ್ಳುಗಾರನು’ ಆಗಿದ್ದು, “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ” ಎಂಬುದಾಗಿ ಬೈಬಲು ಸ್ಪಷ್ಟವಾಗಿ ಹೇಳುತ್ತದೆ. (ಯೋಹಾನ 8:44; 1 ಯೋಹಾನ 5:19) ತನ್ನ ಯೋಜನೆಗಳನ್ನು ಪ್ರವರ್ಧಿಸಲು ಅವನು ಇನ್ನೇನನ್ನು ಮಾಡಿದ್ದಾನೆ? ನಾವು 2 ಕೊರಿಂಥ 4:3, 4ರಲ್ಲಿ ಓದುವುದು: “ನಾವು ಸಾರುವ ಸುವಾರ್ತೆಯು ಕೆಲವರಿಗೆ ಮರೆಯಾಗಿರುವದಾದರೆ ನಾಶನಮಾರ್ಗದಲ್ಲಿರುವವರಿಗೇ ಮರೆಯಾಗಿರುವದು. ಇವರಲ್ಲಿ ದೇವರ ಪ್ರತಿರೂಪವಾಗಿರುವ ಕ್ರಿಸ್ತನ ಪ್ರಭಾವವನ್ನು ತೋರಿಸುವ ಸುವಾರ್ತೆಯ ಪ್ರಕಾಶವು ಉದಯವಾಗಬಾರದೆಂದು ಈ ಪ್ರಪಂಚದ ದೇವರು ನಂಬಿಕೆಯಿಲ್ಲದವರ ಮನಸ್ಸನ್ನು ಮಂಕುಮಾಡಿದನು.” ಲೋಕದ ಸಮಸ್ಯೆಗಳಿಗೆ ಪರಿಹಾರವಾಗಿರುವ, ದೇವರ ರಾಜ್ಯದಿಂದ ಮಾನವಜಾತಿಯ ಗಮನವನ್ನು ದೂರ ಸೆಳೆಯಲು ಸಾಧ್ಯವಿರುವುದೆಲ್ಲವನ್ನೂ ಸೈತಾನನು ಮಾಡುತ್ತಾನೆ. ವಿಭಾಜಕವಾದ ಸಾಮಾಜಿಕ, ರಾಜಕೀಯ, ಮತ್ತು ಧಾರ್ಮಿಕ ವಾದಾಂಶಗಳಿಂದ ಅವನು ಜನರನ್ನು ವಂಚಿಸುತ್ತಾನೆ ಮತ್ತು ಪಕ್ಕದಾರಿಗೆ ಸೆಳೆಯುತ್ತಾನೆ. ಆ ಕಾರಣ, ಈ ವಿಷಯಗಳು ದೇವರ ಆಳ್ವಿಕೆಗಿಂತ ಹೆಚ್ಚು ಪ್ರಾಮುಖ್ಯವಾಗಿ ತೋರುತ್ತವೆ. ಇತ್ತೀಚಿನ, ರಾಷ್ಟ್ರೀಯವಾದದ ಲೋಕವ್ಯಾಪಕ ಉಕ್ಕೇರುವಿಕೆಯು ಒಂದು ಉದಾಹರಣೆಯಾಗಿದೆ.
13 ಪಿಶಾಚನಾದ ಸೈತಾನನು ರಾಷ್ಟ್ರೀಯವಾದ ಮತ್ತು ಜಾತಿವಾದವನ್ನು, ಒಂದು ರಾಷ್ಟ್ರ, ಕುಲ, ಅಥವಾ ಜಾತಿಯು ಇತರ ರಾಷ್ಟ್ರ, ಕುಲ, ಅಥವಾ ಜಾತಿಗಳಿಗಿಂತ ಶ್ರೇಷ್ಠ ಎಂಬ ನಂಬಿಕೆಯನ್ನು ಪ್ರವರ್ಧಿಸುತ್ತಾನೆ. ಶತಮಾನಗಳ ವರೆಗೆ ಅದುಮಲ್ಪಟ್ಟ, ಆಳವಾಗಿ ಬೇರೂರಿದ ದ್ವೇಷಗಳು, ಹೆಚ್ಚು ಯುದ್ಧಗಳು ಹಾಗೂ ಕಲಹಗಳಿಗೆ ಉತ್ತೇಜನ ನೀಡಲು ಪುನರುಜ್ಜೀವಿಸಲ್ಪಡುತ್ತಿವೆ. ಯುನೆಸ್ಕೋದ ಡೈರೆಕ್ಟರ್ ಜನರಲ್, ಫೆಡರಿಕೊ ಮೇಯರ್ ಈ ಪ್ರವೃತ್ತಿಯ ಕುರಿತು ಎಚ್ಚರಿಸಿದ್ದು: “ಎಲ್ಲಿ ಸಹನೆಯು ಪ್ರಚಲಿತವಾಗಿತ್ತೊ ಅಲ್ಲಿಯೂ ಅನ್ಯರ ದ್ವೇಷದ ಕಡೆಗಿನ ಹೊರಳಿಕೆಯು ಹೆಚ್ಚು ವ್ಯಕ್ತವಾಗುತ್ತಿದೆ, ಮತ್ತು ಗತಕಾಲದ ವಿಷಯವಾಗಿ ತೋರಿದ್ದ ವೀರದೇಶಾಭಿಮಾನ ಇಲ್ಲವೆ ಜಾತೀಯ ಹೇಳಿಕೆಗಳು ಆಗಿಂದಾಗ್ಗೆ ಕೇಳಿಬರುತ್ತಿವೆ.” ಇದರಿಂದಾದ ಪರಿಣಾಮವೇನು? ಹಿಂದಿನ ಯುಗೋಸ್ಲಾವಿಯದಲ್ಲಾದ ಬೀಭತ್ಸ ಕಗ್ಗೊಲೆಗಳು ಮತ್ತು ರುಆಂಡದಲ್ಲಾದ ಜಾತೀಯ ರಕ್ತಪಾತವು, ಲೋಕ ವಾರ್ತೆಗಳಾಗಿ ಪರಿಣಮಿಸಿದ ಇಂತಹ ವಿಕಸನಗಳಲ್ಲಿ ಕೇವಲ ಎರಡಾಗಿವೆ.
14. ನಮ್ಮ ಸಮಯದಲ್ಲಿ ಯುದ್ಧ ಮತ್ತು ಅದರ ಪರಿಣಾಮವನ್ನು ಪ್ರಕಟನೆ 6:4 ಹೇಗೆ ಚಿತ್ರಿಸುತ್ತದೆ?
14 ಈ ವ್ಯವಸ್ಥೆಯ ಅಂತ್ಯದ ಸಮಯದಲ್ಲಿ, ಯುದ್ಧವನ್ನು ಸಂಕೇತಿಸುವ ಕೆಂಪು ಕುದುರೆಯು ಭೂಮಿಯ ಆದ್ಯಂತ ದೌಡಾಯಿಸುವುದು ಎಂದು ಬೈಬಲು ಮುಂತಿಳಿಸಿತು. ನಾವು ಪ್ರಕಟನೆ 6:4ರಲ್ಲಿ (NW) ಹೀಗೆ ಓದುತ್ತೇವೆ: “ಮತ್ತು ಇನ್ನೊಂದು ಹೊರಟು ಬಂತು, ಅಗ್ನಿವರ್ಣದ ಕುದುರೆ, ಮತ್ತು ಅದರ ಮೇಲೆ ಕೂತಿದ್ದವನಿಗೆ, ಅವರು ಒಬ್ಬರು ಇನ್ನೊಬ್ಬರನ್ನು ಹತಿಸಬೇಕೆಂದು ಭೂಮಿಯಿಂದ ಶಾಂತಿಯನ್ನು ತೆಗೆದುಬಿಡುವಂತೆ ಅನುಗ್ರಹಿಸಲ್ಪಟ್ಟಿತು; ಮತ್ತು ಅವನಿಗೆ ಒಂದು ದೊಡ್ಡ ಕತ್ತಿಯನ್ನು ಕೊಡಲಾಯಿತು.” 1914ರಂದಿನಿಂದ ಈ ಸಾಂಕೇತಿಕ ರಾಹುತನು “ಶಾಂತಿಯನ್ನು ತೆಗೆದು”ಬಿಡುವುದನ್ನು ನಾವು ನೋಡಿದ್ದೇವೆ, ಮತ್ತು ರಾಷ್ಟ್ರಗಳು ಹೋರಾಡುತ್ತಾ, ಯುದ್ಧ ಮಾಡುತ್ತಾ ಮುಂದುವರಿದಿವೆ.
15, 16. (ಎ) ಯುದ್ಧಗಳು ಹಾಗೂ ಕೊಲ್ಲುವಿಕೆಗಳ ವಿಷಯದಲ್ಲಿ ಧರ್ಮದ ಪಾತ್ರವು ಏನಾಗಿದೆ? (ಬಿ) ಧರ್ಮಗಳು ಮಾಡಿರುವ ವಿಷಯವನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ?
15 ಉಪೇಕ್ಷಿಸಲ್ಪಡಬಾರದ ಒಂದು ಸಂಗತಿಯು, ಈ ಯುದ್ಧಗಳು ಹಾಗೂ ಕೊಲ್ಲುವಿಕೆಗಳಲ್ಲಿನ ಧರ್ಮದ ಪಾತ್ರವೇ. ಮಾನವಜಾತಿಯ ರಕ್ತಮಯ ಇತಿಹಾಸಕ್ಕೆ, ತಪ್ಪುದಾರಿಗೆ ನಡೆಸುವ ಸುಳ್ಳು ಧರ್ಮದ ಪ್ರಭಾವವು ಹೆಚ್ಚಿನ ಮಟ್ಟದಲ್ಲಿ ಕಾರಣವೆಂದು ಅಧ್ಯಾರೋಪಿಸಸಾಧ್ಯವಿದೆ. ಕ್ಯಾತೊಲಿಕ್ ದೇವತಾಶಾಸ್ತ್ರಜ್ಞ ಹಾನ್ಸ್ ಕುಂಗ್ ಬರೆದುದು: “[ಧರ್ಮಗಳ] ನಕಾರಾತ್ಮಕ ಹಾಗೂ ನಾಶಕಾರಿ ಪ್ರಭಾವದ ನೋಟದಲ್ಲಿ, ಯುದ್ಧವನ್ನು ಉತ್ತೇಜಿಸುವುದರಲ್ಲಿ ಅವುಗಳಿಗೆ ಒಂದು ಮಹತ್ತರವಾದ ಪಾಲು ಇತ್ತು ಮತ್ತು ಇನ್ನೂ ಇದೆ ಎಂಬುದು ಸುನಿಶ್ಚಿತ. ಹೆಚ್ಚಿನ ಕ್ಷೋಭೆ, ರಕ್ತಮಯ ಕಲಹಗಳು ಮತ್ತು ನಿಶ್ಚಯವಾಗಿಯೂ ‘ಧಾರ್ಮಿಕ ಯುದ್ಧಗಳಿಗೆ’ ಧರ್ಮಗಳು ಹೊಣೆಯುಳ್ಳವುಗಳಾಗಿವೆ; . . . ಮತ್ತು ಇದು ಎರಡು ಜಾಗತಿಕ ಯುದ್ಧಗಳ ವಿಷಯದಲ್ಲಿಯೂ ಸತ್ಯವಾಗಿದೆ.”
16 ಕೊಲ್ಲುವಿಕೆಗಳು ಹಾಗೂ ಯುದ್ಧಗಳಲ್ಲಿನ ಸುಳ್ಳು ಧರ್ಮದ ಪಾತ್ರವನ್ನು ಯೆಹೋವ ದೇವರು ಹೇಗೆ ವೀಕ್ಷಿಸುತ್ತಾನೆ? ಸುಳ್ಳು ಧರ್ಮದ ವಿಷಯದಲ್ಲಿ, ಪ್ರಕಟನೆ 18:5ರಲ್ಲಿ (NW) ದಾಖಲುಮಾಡಲ್ಪಟ್ಟ ದೇವರ ಆಪಾದನೆಯು ಹೇಳುವುದು: “ಅವಳ ಪಾಪಗಳು ರಾಶಿಯಾಗಿ ಒಟ್ಟು ಸೇರಿ ಆಕಾಶದ ತನಕವೂ ಬೆಳೆದಿವೆ, ಮತ್ತು ದೇವರು ಅವಳ ಅನ್ಯಾಯ ಕೃತ್ಯಗಳನ್ನು ಮನಸ್ಸಿಗೆ ತಂದುಕೊಂಡಿದ್ದಾನೆ.” ಲೋಕದ ರಾಜಕೀಯ ಪ್ರಭುಗಳೊಂದಿಗೆ ಸುಳ್ಳು ಧರ್ಮದ ಭಾಗಿತ್ವವು ಇಂತಹ ರಕ್ತದೋಷದಲ್ಲಿ, ಒಟ್ಟುಗೂಡಿಸಲ್ಪಟ್ಟ ಪಾಪಗಳ ಮೊತ್ತದಲ್ಲಿ ಫಲಿಸಿದೆ; ಇದನ್ನು ದೇವರು ಕಡೆಗಣಿಸಸಾಧ್ಯವಿಲ್ಲ. ನಿಜ ಶಾಂತಿಯನ್ನು ತರುವ ಪ್ರಕ್ರಿಯೆಯಲ್ಲಿ ಆತನು ಬೇಗನೆ ಈ ಮುಗ್ಗರಿಸುವ ತಡೆಯನ್ನು ಸಂಪೂರ್ಣವಾಗಿ ನಿರ್ಮೂಲಮಾಡುವನು.—ಪ್ರಕಟನೆ 18:21.
ಶಾಂತಿಯನ್ನು ಪಡೆದುಕೊಳ್ಳಲಿಕ್ಕಾಗಿರುವ ಮಾರ್ಗ
17, 18. (ಎ) ನಿತ್ಯ ಶಾಂತಿಯು ಸಾಧ್ಯವೆಂಬುದನ್ನು ನಂಬುವುದು, ಕೇವಲ ಒಂದು ಅವಾಸ್ತವಿಕ ಕನಸಾಗಿರುವುದಿಲ್ಲ ಏಕೆ? (ಬಿ) ನಿಜ ಶಾಂತಿಯು ಬರುವುದೆಂಬುದನ್ನು ಖಚಿತಪಡಿಸಿಕೊಳ್ಳಲು ಯೆಹೋವನು ಈಗಾಗಲೇ ಏನನ್ನು ಮಾಡಿದ್ದಾನೆ?
17 ವಿಶ್ವ ಸಂಸ್ಥೆಯೆಂಬಂತಹ ನಿಯೋಗಗಳ ಮುಖಾಂತರ ಮನುಷ್ಯರು ನಿಜ ಹಾಗೂ ಬಾಳುವ ಶಾಂತಿಯನ್ನು ತರಸಾಧ್ಯವಿಲ್ಲದಿದ್ದರೆ, ಯಾವ ಮೂಲದಿಂದ ನಿಜ ಶಾಂತಿಯು ಬರುವುದು, ಮತ್ತು ಹೇಗೆ? ನಿತ್ಯ ಶಾಂತಿಯು ಸಾಧ್ಯವೆಂದು ನಂಬುವುದು ಕೇವಲ ಒಂದು ಅವಾಸ್ತವಿಕ ಕನಸಾಗಿದೆಯೊ? ನಾವು ಶಾಂತಿಯ ಸರಿಯಾದ ಮೂಲಕ್ಕೆ ತಿರುಗುವಲ್ಲಿ, ಅದೊಂದು ಅವಾಸ್ತವಿಕವಾದ ಕನಸಾಗಿರುವುದಿಲ್ಲ. ಮತ್ತು ಆ ಮೂಲವು ಯಾರು? ಯೆಹೋವನು “ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ; ಬಿಲ್ಲುಗಳನ್ನೂ ಭಲ್ಲೆಯಗಳನ್ನೂ ಮುರಿದುಹಾಕಿದ್ದಾನೆ; ರಥಗಳನ್ನು ದಹಿಸಿಬಿಟ್ಟಿದ್ದಾನೆ,” ಎಂದು ನಮಗೆ ಹೇಳುವ ಮೂಲಕ ಕೀರ್ತನೆ 46:9 ಉತ್ತರ ನೀಡುತ್ತದೆ. ಮತ್ತು ಯೆಹೋವನು ಯುದ್ಧಗಳನ್ನು ಅಂತ್ಯಗೊಳಿಸಿ, ನಿಜ ಶಾಂತಿಯನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದ್ದಾನೆ. ಹೇಗೆ? 1914ರಲ್ಲಿ ತನ್ನ ಹಕ್ಕುಳ್ಳ ರಾಜ್ಯ ಸಿಂಹಾಸನದ ಮೇಲೆ ಕ್ರಿಸ್ತ ಯೇಸುವನ್ನು ಪ್ರತಿಷ್ಠಾಪಿಸುವ ಮತ್ತು ಶಾಂತಿಗಾಗಿ ಮಾನವಜಾತಿಯ ಇತಿಹಾಸದಲ್ಲಿಯೇ ಅತ್ಯಂತ ಮಹತ್ತರವಾದ ಶೈಕ್ಷಣಿಕ ಕಾರ್ಯಾಚರಣೆಯನ್ನು ಪ್ರವರ್ಧಿಸುವ ಮೂಲಕವೇ. ಯೆಶಾಯ 54:13ರ (NW) ಪ್ರವಾದನಾತ್ಮಕ ಮಾತುಗಳು ನಮಗೆ ಆಶ್ವಾಸನೆ ನೀಡುವುದು: “ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗಿರುವರು, ಮತ್ತು ನಿನ್ನ ಪುತ್ರರ ಶಾಂತಿಯು ಹೇರಳವಾಗಿರುವುದು.”
18 ಈ ಪ್ರವಾದನೆಯು, ಕಾರಣ ಕಾರ್ಯಭಾವದ ಸಿದ್ಧಾಂತ—ಅಂದರೆ, ಪ್ರತಿಯೊಂದು ಪರಿಣಾಮಕ್ಕೆ ಅದರ ಕಾರಣವಿದೆ ಎಂಬುದನ್ನು ದೃಷ್ಟಾಂತಿಸುತ್ತದೆ. ಈ ಪ್ರವಾದನೆಯ ವಿಷಯದಲ್ಲಿ, ಯೆಹೋವನ ಬೋಧನೆಯು—ಕಾರಣವಾಗಿದ್ದು—ಯುದ್ಧಸದೃಶ ಜನರನ್ನು, ದೇವರೊಂದಿಗೆ ಶಾಂತಿಯಲ್ಲಿರುವ ಶಾಂತಿಪ್ರಿಯ ಜನರನ್ನಾಗಿ ರೂಪಾಂತರಿಸುತ್ತದೆ. ಪರಿಣಾಮವು, ಜನರನ್ನು ಶಾಂತಿಪ್ರಿಯರನ್ನಾಗಿ ಮಾಡುವ ಹೃದಯ ಪರಿವರ್ತನೆಯಾಗಿದೆ. ಜನರ ಹೃದಮನಗಳನ್ನು ಪರಿವರ್ತಿಸುವ ಈ ಬೋಧನೆಯು, ಲಕ್ಷಾಂತರ ಜನರು “ಶಾಂತಿಯ ಪ್ರಭು” (NW) ಯೇಸು ಕ್ರಿಸ್ತನ ಮಾದರಿಯನ್ನು ಅನುಸರಿಸಿದಂತೆ, ಈಗಲೂ ಲೋಕವ್ಯಾಪಕವಾಗಿ ಹಬ್ಬುತ್ತಿದೆ.—ಯೆಶಾಯ 9:6.
19. ಯೇಸು ನಿಜ ಶಾಂತಿಯ ಬಗ್ಗೆ ಏನನ್ನು ಕಲಿಸಿದನು?
19 ಯೇಸು ನಿಜ ಶಾಂತಿಯ ಬಗ್ಗೆ ಏನನ್ನು ಕಲಿಸಿದನು? ಅವನು ರಾಷ್ಟ್ರಗಳ ನಡುವೆ ಇರುವ ಶಾಂತಿಯ ಕುರಿತಾಗಿ ಮಾತ್ರವಲ್ಲ, ಬದಲಿಗೆ ತಮ್ಮ ಸಂಬಂಧಗಳಲ್ಲಿ ಜನರ ನಡುವೆ ಇರುವ ಶಾಂತಿ ಮತ್ತು ಒಂದು ಒಳ್ಳೆಯ ಮನಸ್ಸಾಕ್ಷಿಯಿಂದ ಬರುವ ಆಂತರಿಕ ಶಾಂತಿಯ ಕುರಿತಾಗಿ ಮಾತಾಡಿದನು. ಯೋಹಾನ 14:27ರಲ್ಲಿ ಯೇಸು ತನ್ನ ಹಿಂಬಾಲಕರಿಗೆ ನುಡಿದ ಮಾತುಗಳನ್ನು ನಾವು ಓದುತ್ತೇವೆ: “ಶಾಂತಿಯನ್ನು ನಿಮಗೆ ಬಿಟ್ಟುಹೋಗುತ್ತೇನೆ, ನನ್ನಲ್ಲಿರುವಂಥ ಶಾಂತಿಯನ್ನು ನಿಮಗೆ ಕೊಡುತ್ತೇನೆ; ಲೋಕವು ಕೊಡುವ ರೀತಿಯಿಂದ ನಾನು ನಿಮಗೆ ಕೊಡುವದಿಲ್ಲ. ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ಹೆದರದಿರಲಿ.” ಯೇಸುವಿನ ಶಾಂತಿಯು ಲೋಕದ ಶಾಂತಿಗಿಂತ ಹೇಗೆ ಭಿನ್ನವಾಗಿತ್ತು?
20. ಯಾವ ಮಾಧ್ಯಮದ ಮೂಲಕ ಯೇಸು ನಿಜ ಶಾಂತಿಯನ್ನು ತರುವನು?
20 ಪ್ರಥಮವಾಗಿ, ಯೇಸುವಿನ ಶಾಂತಿಯು ಅವನ ರಾಜ್ಯ ಸಂದೇಶದೊಂದಿಗೆ ನಿಕಟವಾಗಿ ಸೇರಿತ್ತು. ಯೇಸು ಮತ್ತು 1,44,000 ಸಹರಾಜರಿಂದ ರಚಿತವಾದ ನೀತಿಯ ಸ್ವರ್ಗೀಯ ಸರಕಾರವು, ಯುದ್ಧ ಹಾಗೂ ಯುದ್ಧವನ್ನು ಹರಡುವವರಿಗೆ ಅಂತ್ಯವನ್ನು ತರುವುದೆಂದು ಅವನಿಗೆ ಗೊತ್ತಿತ್ತು. (ಪ್ರಕಟನೆ 14:1, 3) ಅದು ತನ್ನ ಪಕ್ಕದಲ್ಲಿ ಸತ್ತ ಆ ದುಷ್ಟನಿಗೆ ತಾನು ನೀಡಿದಂತಹ ಶಾಂತಿಪೂರ್ಣ ಪ್ರಮೋದವನೀಯ ಪರಿಸ್ಥಿತಿಗಳನ್ನು ತರುವುದೆಂದು ಅವನಿಗೆ ಗೊತ್ತಿತ್ತು. ಯೇಸು ಅವನಿಗೆ ಸ್ವರ್ಗೀಯ ರಾಜ್ಯದಲ್ಲಿ ಒಂದು ಸ್ಥಾನವನ್ನು ನೀಡಲಿಲ್ಲ, ಬದಲಿಗೆ ಅವನು ಹೇಳಿದ್ದು: “ನನ್ನ ಸಂಗಡ ಪ್ರಮೋದವನದಲ್ಲಿರುವಿ ಎಂದು, ಇಂದು ನಿನಗೆ ಸತ್ಯವಾಗಿ ಹೇಳುತ್ತೇನೆ.”—ಲೂಕ 23:43, (NW).
21, 22. (ಎ) ಅದ್ಭುತಕರವಾಗಿ ಪೋಷಿಸುವ ಯಾವ ನಿರೀಕ್ಷೆ ನಿಜ ಶಾಂತಿಯಲ್ಲಿ ಒಳಗೊಂಡಿದೆ? (ಬಿ) ಆ ಆಶೀರ್ವಾದವನ್ನು ಪ್ರತ್ಯಕ್ಷವಾಗಿ ನೋಡಲು ನಾವು ಏನು ಮಾಡಬೇಕು?
21 ಯೇಸುವಿಗೆ, ತನ್ನಲ್ಲಿ ನಂಬಿಕೆಯನ್ನಿಡುವ ಎಲ್ಲ ಶೋಕಿತ ಜನರಿಗಾಗಿ ತನ್ನ ರಾಜ್ಯವು ಸಾಂತ್ವನವನ್ನು ತರುವುದೆಂಬುದೂ ಗೊತ್ತಿತ್ತು. ಅವನ ಶಾಂತಿಯಲ್ಲಿ, ಅದ್ಭುತಕರವಾಗಿ ಪೋಷಿಸುವ ಪುನರುತ್ಥಾನದ ಆ ನಿರೀಕ್ಷೆಯು ಸೇರಿರುತ್ತದೆ. ಯೋಹಾನ 5:28, 29ರಲ್ಲಿ ಕಂಡುಕೊಳ್ಳಲ್ಪಡುವ ಅವನ ಉತ್ತೇಜನದಾಯಕ ಮಾತುಗಳನ್ನು ಜ್ಞಾಪಿಸಿಕೊಳ್ಳಿರಿ: “ಅದಕ್ಕೆ ಆಶ್ಚರ್ಯಪಡಬೇಡಿರಿ; ಸಮಾಧಿಗಳಲ್ಲಿರುವವರೆಲ್ಲರು ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ. ಒಳ್ಳೇದನ್ನು ಮಾಡಿದವರಿಗೆ ಜೀವಕ್ಕಾಗಿ ಪುನರುತ್ಥಾನವಾಗುವದು; ಕೆಟ್ಟದ್ದನ್ನು ನಡಿಸಿದವರಿಗೆ ತೀರ್ಪಿಗಾಗಿ ಪುನರುತ್ಥಾನವಾಗುವದು.”
22 ಆ ಸಮಯಕ್ಕಾಗಿ ನೀವು ಎದುರುನೋಡುತ್ತೀರೊ? ಮರಣದಲ್ಲಿ ಪ್ರಿಯ ವ್ಯಕ್ತಿಗಳನ್ನು ನೀವು ಕಳೆದುಕೊಂಡಿದ್ದೀರೊ? ಅವರನ್ನು ಪುನಃ ನೋಡಲು ನೀವು ಹಾತೊರೆಯುತ್ತೀರೊ? ಹಾಗಾದರೆ ಯೇಸು ನೀಡುವ ಶಾಂತಿಯನ್ನು ಸ್ವೀಕರಿಸಿಕೊಳ್ಳಿರಿ. ಯೇಸುವಿಗೆ, “ಕಡೇ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ಎದ್ದುಬರುವನೆಂದು ನಾನು ಬಲ್ಲೆ” ಎಂಬುದಾಗಿ ಹೇಳಿದ ಲಾಜರನ ಸಹೋದರಿಯಾದ ಮಾರ್ಥಳಲ್ಲಿದ್ದಂತಹ ರೀತಿಯ ನಂಬಿಕೆ ನಿಮ್ಮಲ್ಲಿರಲಿ. ಆದರೆ ಮಾರ್ಥಳಿಗೆ ಯೇಸು ನೀಡಿದ, ಹುರಿದುಂಬಿಸುವ ಉತ್ತರವನ್ನು ಗಮನಿಸಿರಿ: “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನನ್ನು ನಂಬುವವನು ಸತ್ತರೂ ಬದುಕುವನು; ಮತ್ತು ಬದುಕುತ್ತಾ ನನ್ನನ್ನು ನಂಬುವ ಪ್ರತಿಯೊಬ್ಬನು ಎಂದಿಗೂ ಸಾಯುವದಿಲ್ಲ; ಇದನ್ನು ನಂಬುತ್ತೀಯಾ?”—ಯೋಹಾನ 11:24-26.
23. ನಿಜ ಶಾಂತಿಯನ್ನು ಪಡೆದುಕೊಳ್ಳುವುದರಲ್ಲಿ, ದೇವರ ವಾಕ್ಯದ ನಿಷ್ಕೃಷ್ಟ ಜ್ಞಾನವು ಏಕೆ ಆವಶ್ಯಕ?
23 ಆ ವಾಗ್ದಾನದಲ್ಲಿ ನೀವು ಸಹ ನಂಬಿ, ಪ್ರಯೋಜನ ಪಡೆದುಕೊಳ್ಳಬಲ್ಲಿರಿ. ಹೇಗೆ? ದೇವರ ವಾಕ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವ ಮೂಲಕವೇ. ನಿಷ್ಕೃಷ್ಟ ಜ್ಞಾನದ ಪ್ರಮುಖತೆಯನ್ನು ಅಪೊಸ್ತಲ ಪೌಲನು ಹೇಗೆ ಒತ್ತಿಹೇಳಿದನೆಂಬುದನ್ನು ಗಮನಿಸಿರಿ: “ನಾವು . . . ನಿಮಗೋಸ್ಕರ ಪ್ರಾರ್ಥಿಸುವದನ್ನು ಬಿಡದೆ ನೀವು ಸಕಲ ಆತ್ಮೀಯ ಜ್ಞಾನವನ್ನೂ ಗ್ರಹಿಕೆಯನ್ನೂ ಹೊಂದಿ ಕರ್ತನ ಚಿತ್ತದ ವಿಷಯವಾದ ತಿಳುವಳಿಕೆಯಿಂದ ತುಂಬಿಕೊಂಡು ಆತನಿಗೆ ಯೋಗ್ಯರಾಗಿ ನಡೆದು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿಸುವವರಾಗಿರಬೇಕೆಂತಲೂ ನೀವು ಸಕಲಸತ್ಕಾರ್ಯವೆಂಬ ಫಲವನ್ನು ಕೊಡುತ್ತಾ ದೇವಜ್ಞಾನದಿಂದ ಅಭಿವೃದ್ಧಿಯಾಗುತ್ತಿರಬೇಕೆಂತಲೂ . . . ದೇವರನ್ನು ಬೇಡಿಕೊಳ್ಳುತ್ತೇವೆ.” (ಕೊಲೊಸ್ಸೆ 1:9, 10, 12) ಯೆಹೋವ ದೇವರು ನಿಜ ಶಾಂತಿಯ ಮೂಲನೆಂದು ಈ ನಿಷ್ಕೃಷ್ಟ ಜ್ಞಾನವು ನಿಮಗೆ ಮನಗಾಣಿಸುವುದು. “ನಾನು ನಿರ್ಭಯವಾಗಿರುವದರಿಂದ [“ಶಾಂತಿಯಲ್ಲಿ,” NW] ಮಲಗಿಕೊಂಡು ಕೂಡಲೆ ನಿದ್ದೆಮಾಡುವೆನು; ಯಾಕಂದರೆ ಯೆಹೋವನೇ, ನಾನು ಯಾವ ಅಪಾಯವೂ ಇಲ್ಲದೆ ಸುರಕ್ಷಿತನಾಗಿರುವಂತೆ ನೀನು ಕಾಪಾಡುತ್ತೀ,” ಎಂದು ಹೇಳುವುದರಲ್ಲಿ ಕೀರ್ತನೆಗಾರನನ್ನು ಸೇರುವಂತಾಗಲು ನೀವು ಈಗ ಏನನ್ನು ಮಾಡಬೇಕೆಂಬುದನ್ನೂ ಅದು ನಿಮಗೆ ಹೇಳುವುದು.—ಕೀರ್ತನೆ 4:8.
ನೀವು ವಿವರಿಸಬಲ್ಲಿರೊ?
◻ ಶಾಂತಿಗಾಗಿ ಮಾನವರು ಮಾಡಿದ ಪ್ರಯತ್ನಗಳು ಏಕರೂಪವಾಗಿ ವಿಫಲಗೊಂಡಿವೆ ಏಕೆ?
◻ ಯುದ್ಧದ ಮೂಲ ಕಾರಣವೇನು?
◻ ಬಾಳುವ ಶಾಂತಿಯು ಒಂದು ಅವಾಸ್ತವಿಕ ಕನಸಾಗಿರುವುದಿಲ್ಲ ಏಕೆ?
◻ ನಿಜ ಶಾಂತಿಯ ಮೂಲವು ಯಾವುದು?
[ಪುಟ 8 ರಲ್ಲಿರುವ ಚಿತ್ರ]
ನಿಜ ಶಾಂತಿ ಒಂದು ಕನಸಲ್ಲ. ಅದು ದೇವರ ವಾಗ್ದಾನವಾಗಿದೆ
[ಪುಟ 10 ರಲ್ಲಿರುವ ಚಿತ್ರ]
1914ರಂದಿನಿಂದ, ಅಗ್ನಿವರ್ಣದ ಕುದುರೆಯ ಸಾಂಕೇತಿಕ ರಾಹುತನು, ಭೂಮಿಯಿಂದ ಶಾಂತಿಯನ್ನು ತೆಗೆದುಬಿಟ್ಟಿದ್ದಾನೆ
[ಪುಟ 11 ರಲ್ಲಿರುವ ಚಿತ್ರ]
ಧರ್ಮ ಮತ್ತು ಯುಎನ್ ಶಾಂತಿಯನ್ನು ತರಬಲ್ಲವೊ?
[ಕೃಪೆ]
UN photo