ವಾಚಕರಿಂದ ಪ್ರಶ್ನೆಗಳು
ಮತ್ತಾಯ 24:34ರಲ್ಲಿನ “ಸಂತತಿ” ಎಂಬ ಪದದ ಕುರಿತಾದ ಇತ್ತೀಚಿನ ಸದ್ಯೋಚಿತವಾದ ತಿಳಿವಳಿಕೆಯು, ವಿಷಯಗಳ ವ್ಯವಸ್ಥೆಯ ಅಂತ್ಯವನ್ನು ದೂರದ ಭವಿಷ್ಯತ್ತಿಗೆ ಮುಂದೂಡಸಾಧ್ಯವಿದೆಯೆಂಬ ವಿಚಾರವನ್ನು ಅನುಮತಿಸುತ್ತದೆಂದು ಹೇಳಸಾಧ್ಯವಿದೆಯೆ?
ವಿಷಯವು ಖಂಡಿತವಾಗಿಯೂ ಹಾಗಿಲ್ಲ. ವ್ಯತಿರಿಕ್ತವಾಗಿ, ಈ ವಿಷಯದ ಕುರಿತಾಗಿ ಇತ್ತೀಚೆಗೆ ತಿದ್ದಲ್ಪಟ್ಟಿರುವ ತಿಳಿವಳಿಕೆಯು, ನಾವು ಸತತವಾಗಿ ಅಂತ್ಯದ ನಿರೀಕ್ಷಣೆಯಲ್ಲಿರುವಂತೆ ಸಹಾಯಮಾಡಬೇಕು. ಅದು ಹೇಗೆ?
ಒಳ್ಳೇದು, ನವೆಂಬರ್ 1, 1995ರ ಕಾವಲಿನಬುರುಜು ಪತ್ರಿಕೆಯು ವಿವರಿಸಿದಂತೆ, ಯೇಸು “ಈ ಸಂತತಿ” ಎಂಬ ಅಭಿವ್ಯಕ್ತಿಯನ್ನು, ಸಮಕಾಲೀನ ದುಷ್ಟ ಜನರಿಗೆ ಅನ್ವಯಿಸಿದನು. (ಮತ್ತಾಯ 11:7, 16-19; 12:39, 45; 17:14-17; ಅ. ಕೃತ್ಯಗಳು 2:5, 6, 14, 40) ಅದು, ಒಂದು ನಿರ್ದಿಷ್ಟ ತಾರೀಖಿನೊಂದಿಗೆ ಆರಂಭಿಸುವ ಒಂದು ನಿರ್ಧರಿತ ಕಾಲಾವಧಿಯ ಕುರಿತಾದ ಒಂದು ವರ್ಣನೆಯಾಗಿರಲಿಲ್ಲ.
ವಾಸ್ತವದಲ್ಲಿ, ಕಾವಲಿನಬುರುಜು ಪತ್ರಿಕೆಯ ಅದೇ ಸಂಚಿಕೆಯಲ್ಲಿನ “ವಾಚಕರಿಂದ ಪ್ರಶ್ನೆಗಳು” ಎಂಬ ಲೇಖನವು, ಎರಡು ಮುಖ್ಯ ವಿಷಯಗಳ ಮೇಲೆ ಕೇಂದ್ರೀಕರಿಸಿತು: “ಒಂದು ಜನರ ಸಂತತಿಯನ್ನು, ಒಂದು ಗೊತ್ತಾದ ನಿಶ್ಚಿತ ಸಂಖ್ಯೆಯ ವರ್ಷಗಳಿರುವ ಕಾಲಾವಧಿಯಾಗಿ ವೀಕ್ಷಿಸಸಾಧ್ಯವಿಲ್ಲ” ಮತ್ತು, “ಒಂದು ಸಂತತಿಯ ಜನರು ಸಂಬಂಧಕವಾಗಿ ಒಂದು ಸಂಕ್ಷಿಪ್ತ ಕಾಲಾವಧಿಯ ತನಕ ಜೀವಿಸುತ್ತಾರೆ.”
“ಸಂತತಿ” ಎಂಬ ಪದವನ್ನು ನಾವು ಅನೇಕಸಲ ಈ ರೀತಿಯಲ್ಲಿ ಬಳಸುತ್ತೇವೆ. ಉದಾಹರಣೆಗೆ, ‘ನಪೋಲಿಯನ್‌ನ ಸಂತತಿಯ ಸೈನಿಕರಿಗೆ ವಿಮಾನಗಳ ಮತ್ತು ಪರಮಾಣು ಬಾಂಬ್‌ಗಳ ಕುರಿತು ಏನೂ ತಿಳಿದಿರಲಿಲ್ಲ’ ಎಂದು ನಾವು ಹೇಳಬಹುದು. ನಪೋಲಿಯನ್ ಜನಿಸಿದ ವರ್ಷದಲ್ಲೇ ಜನಿಸಿದ ಸೈನಿಕರಿಗೆ ಮಾತ್ರ ನಾವು ಸೂಚಿಸುತ್ತಿರುವೆವೊ? ನಪೋಲಿಯನ್ ಸಾಯುವುದಕ್ಕೆ ಮುಂಚೆ ಸತ್ತ ಆ ಫ್ರೆಂಚ್ ಸೈನಿಕರಿಗೆ ಮಾತ್ರವೇ ನಾವು ಸೂಚಿಸುತ್ತಿರುವೆವೊ? ಖಂಡಿತವಾಗಿಯೂ ಇಲ್ಲ; ಅಲ್ಲದೆ, “ಸಂತತಿ” ಎಂಬ ಶಬ್ದದ ಅಂತಹ ಬಳಕೆಯ ಮೂಲಕ, ನಾವು ಒಂದು ನಿಶ್ಚಿತ ಸಂಖ್ಯೆಯ ವರ್ಷಗಳನ್ನು ಸ್ಥಾಪಿಸಲು ಪ್ರಯತ್ನಿಸುತ್ತಲೂ ಇಲ್ಲ. ಆದರೂ, ನಪೋಲಿಯನ್‌ನ ಸಮಯದಿಂದ ಹಿಡಿದು, ಭವಿಷ್ಯತ್ತಿನಲ್ಲಿ ನೂರಾರು ವರ್ಷಗಳಿಗಲ್ಲ, ಬದಲಾಗಿ ಸಂಬಂಧಕವಾಗಿ ಒಂದು ಸಂಕ್ಷಿಪ್ತ ಅವಧಿಗೆ ನಾವು ಸೂಚಿಸುತ್ತಿರುವೆವು.
ಯೇಸು ಎಣ್ಣೆಯ ಮರಗಳ ಗುಡ್ಡದಲ್ಲಿ ಕೊಟ್ಟ ತನ್ನ ಪ್ರವಾದನೆಯಲ್ಲಿ ಏನಂದನೊ ಅದರ ಕುರಿತಾದ ನಮ್ಮ ತಿಳಿವಳಿಕೆಯೂ ತತ್ಸಮಾನವಾಗಿದೆ. ಆ ಪ್ರವಾದನೆಯ ವಿಭಿನ್ನ ವೈಶಿಷ್ಟ್ಯಗಳ ನೆರವೇರಿಕೆಯು, ಈ ವ್ಯವಸ್ಥೆಯ ಅಂತ್ಯವು ಹತ್ತಿರವಿದೆಯೆಂಬುದನ್ನು ರುಜುಪಡಿಸುತ್ತದೆ. (ಮತ್ತಾಯ 24:32, 33) ಪ್ರಕಟನೆ 12:9, 10ಕ್ಕನುಸಾರ, 1914ರಲ್ಲಿ ದೇವರ ಸ್ವರ್ಗೀಯ ರಾಜ್ಯದ ಸ್ಥಾಪನೆಯೊಂದಿಗೆ, ಸೈತಾನನು ಭೂಮಿಯ ಪರಿಸರಕ್ಕೆ ದೊಬ್ಬಲ್ಪಟ್ಟನೆಂಬುದನ್ನು ನೆನಪಿಸಿಕೊಳ್ಳಿರಿ. ಸೈತಾನನು ಈಗ ಮಹಾ ರೌದ್ರವುಳ್ಳವನಾಗಿದ್ದಾನೆಂದು ಪ್ರಕಟನೆಯು ಕೂಡಿಸುತ್ತದೆ. ಏಕೆ? ಏಕೆಂದರೆ, “ತನಗಿರುವ ಕಾಲವು ಸ್ವಲ್ಪವೆಂದು” ಅವನಿಗೆ ತಿಳಿದಿದೆ. (ಓರೆಅಕ್ಷರಗಳು ನಮ್ಮವು.)—ಪ್ರಕಟನೆ 12:12.
ಆದುದರಿಂದ ನವೆಂಬರ್ 1ರ ಕಾವಲಿನಬುರುಜುವಿನಲ್ಲಿ “ಎಚ್ಚರವಾಗಿರಿ”! ಎಂಬ ಉಪಶೀರ್ಷಿಕೆಯಿದ್ದದ್ದು ಸೂಕ್ತವಾಗಿತ್ತು. ಅದರ ಕೆಳಗಿನ ಪ್ಯಾರಗ್ರಾಫ್ ಯುಕ್ತವಾಗಿಯೇ ಹೇಳಿದ್ದು: “ಘಟನೆಗಳು ಸಂಭವಿಸುವ ಆ ಸರಿಯಾದ ಸಮಯವನ್ನು ನಾವು ತಿಳಿಯುವ ಅಗತ್ಯವಿಲ್ಲ. ಬದಲಾಗಿ, ಎಚ್ಚರವಾಗಿರುವುದು, ದೃಢವಾದ ನಂಬಿಕೆಯನ್ನು ಬೆಳೆಸಿಕೊಳ್ಳುವುದು, ಮತ್ತು ಯೆಹೋವನ ಸೇವೆಯಲ್ಲಿ ಕಾರ್ಯಮಗ್ನರಾಗಿರುವುದರ ಮೇಲೆ ನಮ್ಮ ಕೇಂದ್ರಬಿಂದುವಿರಬೇಕು—ಒಂದು ತಾರೀಖನ್ನು ಲೆಕ್ಕಮಾಡುವ ಮೇಲಲ್ಲ.” ಅನಂತರ ಅದು ಯೇಸುವಿನ ಮಾತುಗಳನ್ನು ಉದ್ಧರಿಸಿತು: “ಆ ಕಾಲವು ಯಾವಾಗ ಬರುವದೋ ನಿಮಗೆ ಗೊತ್ತಿಲ್ಲವಾದ್ದರಿಂದ ನೋಡಿಕೊಳ್ಳಿರಿ, ಜಾಗರೂಕರಾಗಿರಿ. . . . ಎಚ್ಚರವಾಗಿರಿ . . . ನಾನು ನಿಮಗೆ ಹೇಳಿದ್ದನ್ನು ಎಲ್ಲರಿಗೂ ಹೇಳುತ್ತೇನೆ, ಎಚ್ಚರವಾಗಿರಿ.”—ಮಾರ್ಕ 13:33, 37.