ಹತಾಶೆಯ ನಡುವೆಯೂ ನಿರೀಕ್ಷೆಯನ್ನು ಕಂಡುಕೊಳ್ಳುವ ವಿಧ
ನಿಮಗೆ ಈ ಕೆಳಗಿನ ಅನುಭವಗಳಾಗಲಿಕ್ಕಿವೆಯೆಂದು ಊಹಿಸಿಕೊಳ್ಳಿರಿ: ನಿಮ್ಮ ಎಲ್ಲಾ ಭೌತಿಕ ಸ್ವತ್ತುಗಳು ನಾಶವಾಗುತ್ತಾ, ನೀವು ನಿರ್ಗತಿಕರಾಗುತ್ತೀರಿ. ನಿಮ್ಮ ಮಕ್ಕಳು—ನಿಮ್ಮ ಜೀವನದ ಆನಂದ—ಇನ್ನಿಲ್ಲ. ನಿಮ್ಮ ಸಂಗಾತಿಯು ನಿಮಗೆ ನೈತಿಕ ಬೆಂಬಲವನ್ನು ಕೊಡುತ್ತಿಲ್ಲ. ನಿಮ್ಮ ಆರೋಗ್ಯವು ಅಕ್ಷರಶಃ ಕುಸಿದಿದೆ. ಪ್ರತಿದಿನವೂ ಅಪಾರ ಯಾತನೆಯ ಒಂದು ಕಠಿನ ಪರೀಕ್ಷೆಯಾಗಿದೆ.
ಅದು ನಿಮ್ಮ ಸನ್ನಿವೇಶವಾಗುವಲ್ಲಿ, ಜೀವಿಸುತ್ತಾ ಇರಲು ನೀವು ಒಂದು ಕಾರಣವನ್ನು ಕಂಡುಕೊಳ್ಳಬಲ್ಲಿರೊ? ಅಥವಾ ನೀವು ಹತಾಶೆಗೆ ಬಲಿಬೀಳುವಿರೊ?
ಈಗೀಗ ವರ್ಣಿಸಲ್ಪಟ್ಟಿರುವ ದುಃಖಕರ ದೆಶೆಯು, ಬೈಬಲ್ ಸಮಯಗಳಲ್ಲಿ ಜೀವಿಸಿದಂತಹ ಒಬ್ಬ ಪುರುಷನಾದ ಯೋಬನ ನಿಜ ಜೀವನ ಅನುಭವವಾಗಿತ್ತು. (ಯೋಬ, ಅಧ್ಯಾಯಗಳು 1, 2) ಅತಿ ಖಿನ್ನವಾದ ಹಂತವೊಂದರಲ್ಲಿ, ಯೋಬನು ಪ್ರಲಾಪಿಸಿದ್ದು: “ನನ್ನ ಜೀವವೇ ನನಗೆ ಬೇಸರವಾಗಿದೆ.” ಅವನು ಮರಣವನ್ನು ಒಂದು ಪರಿಹಾರದೋಪಾದಿ ಸ್ವಾಗತಿಸಿದ್ದಾನು. (ಯೋಬನು 10:1; 14:13) ಬೃಹತ್ತಾದ ಕಷ್ಟಾನುಭವದ ಎದುರಿನಲ್ಲೂ, ಯೋಬನು ದೇವರ ಕಡೆಗೆ ತನ್ನ ಸಮಗ್ರತೆಯನ್ನು ಕಾಪಾಡಿಕೊಂಡನು. ಆದುದರಿಂದ ಯೆಹೋವನು “ಯೋಬನ ಮೊದಲನೆಯ ಸ್ಥಿತಿಗಿಂತಲೂ ಅವನ ಕಡೆಯ ಸ್ಥಿತಿಯನ್ನು . . . ಹೆಚ್ಚಾಗಿ ಆಶೀರ್ವದಿಸಿದನು.” ಈ ರೀತಿಯಲ್ಲಿ ಅವನು “ಮುಪ್ಪಿನ ಮುದುಕನಾಗಿ,” ಸಮಾಧಾನದಿಂದ ಸತ್ತನು.—ಯೋಬನು 42:12, 17.
ಯೋಬನು ತಾಳ್ಮೆಯಲ್ಲಿ ಒಂದು ಮಾದರಿಯನ್ನು ಇಟ್ಟನು. ಇದು ಈ ದಿನದ ವರೆಗೂ ಪ್ರಶಂಸಿಸಲ್ಪಟ್ಟಿದೆ. ಅವನ ಸಂಕಷ್ಟಗಳು ಅವನ ವ್ಯಕ್ತಿತ್ವವನ್ನು ಪರಿಷ್ಕರಿಸಿದವು ಮತ್ತು ಇತರರನ್ನು ಸುಕೃತ್ಯಗಳನ್ನು ಮಾಡುವಂತೆ ಪ್ರಚೋದಿಸಿದವು. (ಯಾಕೋಬ 5:10, 11) ಎಲ್ಲಕ್ಕಿಂತಲೂ ಪ್ರಾಮುಖ್ಯವಾಗಿ, ಯೋಬನ ದೋಷವಿಲ್ಲದ ಸಮಗ್ರತೆಯು, ಯೆಹೋವನ ಹೃದಯವನ್ನು ಹರ್ಷಿಸುವಂತೆ ಮಾಡಿತು. (ಜ್ಞಾನೋಕ್ತಿ 27:11) ಹೀಗೆ, ಅಪಾರ ಯಾತನೆಯ ಒಂದು ಘೋರ ಸ್ವಪ್ನವು, ಕಟ್ಟಕಡೆಗೆ, ದೈವಭಕ್ತಿ, ನಂಬಿಕೆ ಮತ್ತು ಸಮಗ್ರತೆಯ ಒಂದು ಪ್ರಚಂಡ ವಿಜಯವಾಗಿ ಪರಿಣಮಿಸಿತು. ಇದು ಯೋಬನಿಗೆ ಮತ್ತು ಅವನ ಮಾದರಿಯಿಂದ ಪ್ರಚೋದಿಸಲ್ಪಟ್ಟವರೆಲ್ಲರಿಗೆ ಆಶೀರ್ವಾದಗಳನ್ನು ತಂದಿದೆ.
ವಿಭಿನ್ನ ಸಂಕಷ್ಟಗಳ ಹೊರತೂ ನಿರೀಕ್ಷೆ
ಯೋಬನಿಂದ ಅನುಭವಿಸಲ್ಪಟ್ಟ ಸಂಕಷ್ಟಗಳಿಗೆ ಹೋಲುವಂತಹ ಸಂಕಷ್ಟಗಳನ್ನು ನೀವು ಅನುಭವಿಸಬಹುದು. ಒಬ್ಬ ಪ್ರಿಯ ವ್ಯಕ್ತಿಯ ನಷ್ಟವು ನಿಮ್ಮನ್ನು ಭಾವನಾತ್ಮಕವಾಗಿ ಧ್ವಂಸಗೊಳಿಸಿರಬಹುದು. ತೀವ್ರ ಅಸ್ವಸ್ಥತೆಯು, ನಿಮ್ಮ ಅಸ್ತಿತ್ವವನ್ನು ಒಂದು ವೇದನಾಭರಿತ ಕಠಿನ ಪರೀಕ್ಷೆಯಾಗಿ ಮಾಡಿರಬಹುದು. ನಿಮ್ಮ ಇಡೀ ಜೀವನ ರೀತಿಯು, ಹೃದಯಬಿರಿಯುವ ವಿಚ್ಛೇದವೊಂದರಿಂದಾಗಿ ಶಿಥಿಲಗೊಳ್ಳುತ್ತಿರುವಂತೆ ತೋರಬಹುದು. ಆರ್ಥಿಕ ಸೋಲುಗಳು ನಿಮ್ಮನ್ನು ನಿರ್ಗತಿಕರನ್ನಾಗಿ ಮಾಡಿರಬಹುದು. ಸತ್ಯಾರಾಧನೆಯ ದ್ವೇಷಪೂರ್ಣ ವಿರೋಧಿಗಳಿಂದ ನೀವು ಕಟುವಾದ ಹಿಂಸೆಗೆ ಗುರಿಯಾಗಿರಬಹುದು. ನಿಮ್ಮ ಸಂಕಷ್ಟಗಳನ್ನು ನಿಭಾಯಿಸಲಿಕ್ಕಾಗಿರುವ ಹೋರಾಟವು, ನಿಮ್ಮ ಭವಿಷ್ಯತ್ತು ನಿರೀಕ್ಷಾಹೀನವಾಗಿದೆಯೆಂದು ನೀವು ಭಾವಿಸುವಂತೆ ಮಾಡಿರಬಹುದು.—1 ಪೇತ್ರ 1:6.
ಹತಾಶೆಗೆ ಬಲಿಬೀಳುವ ಬದಲಿಗೆ, ನಿಮ್ಮನ್ನೇ ಕೇಳಿಕೊಳ್ಳಿ, ‘ನಾನೇಕೆ ಕಷ್ಟಾನುಭವಿಸುತ್ತಿದ್ದೇನೆ?’ ಪಿಶಾಚನಾದ ಸೈತಾನನಾಗಿರುವ ‘ಕೆಡುಕನ ವಶದಲ್ಲಿರುವ’ ಒಂದು ಲೋಕದಲ್ಲಿ ನೀವು ಜೀವಿಸುತ್ತಿರುವುದರಿಂದ ನೀವು ಕಷ್ಟಾನುಭವಿಸುತ್ತಿದ್ದೀರಿ. (1 ಯೋಹಾನ 5:19) ಫಲಸ್ವರೂಪವಾಗಿ, ಎಲ್ಲರೂ ಕಷ್ಟಾನುಭವಿಸುತ್ತಾರೆ. ರಾಜ್ಯದ ಸಂದೇಶದ ಕಡೆಗಿನ ಪಿಶಾಚ ಪ್ರೇರಿತ ದ್ವೇಷ, ಇತರರ ಪ್ರೀತಿರಹಿತ ಮಾತುಗಳು, ಅಥವಾ ಈ ‘ಕಠಿನ ಕಾಲಗಳಲ್ಲಿ’ ಬಹಳಷ್ಟು ಸಾಮಾನ್ಯವಾಗಿರುವ ಭಕ್ತಿಹೀನ ನಡತೆಯ ಭಯಗೊಳಿಸುವ ಕೃತ್ಯಗಳಿಂದ ನಾವು ಒಂದಲ್ಲ ಒಂದು ರೀತಿಯಲ್ಲಿ ಬಾಧಿಸಲ್ಪಟ್ಟಿದ್ದೇವೆ.—2 ತಿಮೊಥೆಯ 3:1-5.
ನಿಮ್ಮ ಜೀವನದಲ್ಲಿ ಯಾವುದೊ ದುರಂತಮಯ ಸಂಗತಿಯು ನಡೆದಿರುವಲ್ಲಿ, ನೀವು “ಕಾಲ ಮತ್ತು ಮುಂಗಾಣದ ಸಂಭವ”ದ (NW) ಒಂದು ಬಲಿಯಾಗಿರಬಹುದು. (ಪ್ರಸಂಗಿ 9:11) ಇನ್ನೊಂದು ಕಡೆ, ಬಾಧ್ಯತೆಯಾಗಿ ಬಂದಿರುವ ನಮ್ಮ ಸ್ವಂತ ಪಾಪಪೂರ್ಣತೆಯಿಂದಾಗಿ, ಕೆಲವೊಮ್ಮೆ ಜೀವಿತದಲ್ಲಿ ವಿಷಯಗಳು ದಾರಿತಪ್ಪುತ್ತವೆ. (ರೋಮಾಪುರ 5:12) ನೀವು ಗುರುತರವಾಗಿ ತಪ್ಪುಮಾಡಿರುವಲ್ಲಿಯೂ, ಪಶ್ಚಾತ್ತಾಪಪಟ್ಟು ಆತ್ಮಿಕ ಸಹಾಯವನ್ನು ಹುಡುಕಿರುವಲ್ಲಿ, ನೀವು ದೇವರಿಂದ ತೊರೆಯಲ್ಪಟ್ಟಿದ್ದೀರೆಂದು ಭಾವಿಸಬೇಡಿರಿ. (ಕೀರ್ತನೆ 103:10-14; ಯಾಕೋಬ 5:13-15) ಬೇರೆ ಯಾರಿಗಿಂತಲೂ ಹೆಚ್ಚಾಗಿ, ಆತನು ನಮ್ಮ ಕುರಿತಾಗಿ ಕಾಳಜಿ ವಹಿಸುತ್ತಾನೆ. (1 ಪೇತ್ರ 5:6, 7) “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ. ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ” ಎಂಬ ಭರವಸೆ ನಿಮಗಿರಬಲ್ಲದು. (ಕೀರ್ತನೆ 34:18) ನಿಮ್ಮ ಸಂಕಷ್ಟವು ಎಷ್ಟೇ ದುರಂತಮಯ ಅಥವಾ ಕಠಿನವಾಗಿರಲಿ, ಅದರೊಂದಿಗೆ ವ್ಯವಹರಿಸಲು ಯೆಹೋವನು ನಿಮಗೆ ವಿವೇಕವನ್ನು ಕೊಡಬಲ್ಲನು. (ಯಾಕೋಬ 1:5-8) ಯೆಹೋವನು ಎಲ್ಲಾ ಗಾಯಗಳನ್ನು ಗುಣಪಡಿಸಬಲ್ಲನೆಂಬುದನ್ನು ಯಾವಾಗಲೂ ಜ್ಞಾಪಿಸಿಕೊಳ್ಳಿರಿ. ನಿಮಗೆ ಆತನ ಅನುಗ್ರಹವಿರುವಾಗ, ಜೀವದ ಬಹುಮಾನವನ್ನು ಗಳಿಸುವುದರಿಂದ ಯಾವುದೇ ವಿಷಯವು ನಿಮ್ಮನ್ನು ತಡೆಗಟ್ಟಸಾಧ್ಯವಿಲ್ಲ.—ರೋಮಾಪುರ 8:38, 39.
ಸಂಕಷ್ಟಗಳಿಂದ ಏನಾದರೂ ಒಳಿತು ಬರಸಾಧ್ಯವೊ?
“ಪ್ರತಿ ಕೇಡಿನಲ್ಲಿಯೂ ಒಳ್ಳೆಯದರ ಭರವಸೆ ಸ್ವಲ್ಪ ಇರುತ್ತದೆ” ಎಂಬ ಒಂದು ಹಳೆಯ ನಾಣ್ಣುಡಿಯಿದೆ. ವಿಷಯಗಳು ಎಷ್ಟೇ ಕೆಟ್ಟವುಗಳಾಗಿರಲಿ, ನಿರೀಕ್ಷೆಗಾಗಿ ನೀವು ಯಾವಾಗಲೂ ಒಂದು ಕಾರಣವನ್ನು ಕಂಡುಕೊಳ್ಳುವಿರಿ ಎಂಬುದನ್ನು ಹೇಳಲು ಅದೊಂದು ಸರಳ ವಿಧಾನ. ದೇವರ ವಾಕ್ಯದಲ್ಲಿ ಬರೆದಿರುವ ಎಲ್ಲ ವಿಷಯದ ಹಿಂದಿನ ಉದ್ದೇಶವು, ನಾವು ‘ಆದರಣೆಯನ್ನು ಹೊಂದುವುದು’ ಆಗಿದೆ. (ರೋಮಾಪುರ 15:4) ನಿಮ್ಮ ದೆಶೆಯು ಎಷ್ಟೇ ಕಠಿನವಾಗಿರಲಿ, ಬೈಬಲಿನಲ್ಲಿರುವ ವಾಗ್ದಾನಗಳು ಮತ್ತು ಮೂಲತತ್ತ್ವಗಳು ನಿಮಗೆ ನವೀಕರಿಸಲ್ಪಟ್ಟ ಆನಂದ ಮತ್ತು ನಿರೀಕ್ಷೆಯನ್ನು ತರಬಲ್ಲವು.
ದೇವರನ್ನು ಪ್ರೀತಿಸುವವರ ಮುಂದೆ ಇಡಲ್ಪಟ್ಟಿರುವ ನಿತ್ಯ ಆಶೀರ್ವಾದಗಳಿಗೆ ಹೋಲಿಕೆಯಲ್ಲಿ, ‘ಸಂಕಟವು ಕ್ಷಣಮಾತ್ರದ್ದೂ ಹಗುರವಾದದ್ದೂ’ ಆಗಿದೆಯೆಂದು ಶಾಸ್ತ್ರಗಳು ತೋರಿಸುತ್ತವೆ. (2 ಕೊರಿಂಥ 4:16-18) ಸಂಕಷ್ಟಗಳ ನಡುವೆ ವಿಕಸಿಸಲ್ಪಟ್ಟ ದೈವಿಕ ಗುಣಗಳು, ಪ್ರಖ್ಯಾತಿ ಅಥವಾ ಪ್ರಾಪಂಚಿಕ ಐಶ್ವರ್ಯಕ್ಕಿಂತ ತೀರ ಹೆಚ್ಚು ಬೆಲೆಯುಳ್ಳವುಗಳು ಎಂದೂ ಬೈಬಲ್ ಸೂಚಿಸುತ್ತದೆ. (1 ಯೋಹಾನ 2:15-17) ಹೀಗೆ, ಕಷ್ಟಾನುಭವವೂ ಒಂದು ಒಳ್ಳೆಯ ಉದ್ದೇಶವನ್ನು ಪೂರೈಸಬಲ್ಲದು. (ಇಬ್ರಿಯ 5:8) ವಾಸ್ತವದಲ್ಲಿ, ಸಂಕಷ್ಟಗಳ ಸಮಯದಲ್ಲಿ ಕಲಿಯಲ್ಪಟ್ಟ ಸಂಗತಿಗಳನ್ನು ಅನ್ವಯಿಸಿಕೊಳ್ಳುವುದು, ನಿಮಗೆ ಅನಿರೀಕ್ಷಿತ ಆಶೀರ್ವಾದಗಳನ್ನು ತರಸಾಧ್ಯವಿದೆ.
ಒಂದು ಕಷ್ಟಕರ ಸಂಕಷ್ಟವು ನಿಮ್ಮ ನಡವಳಿಕೆಯಲ್ಲಿ ನಿಮ್ಮನ್ನು ಹೆಚ್ಚು ದಯಾಪರರೂ ಕಡಿಮೆ ಉತ್ಕಟರೂ ಆಗುವಂತೆ ಮಾಡಬಹುದು. ಗತಕಾಲದಲ್ಲಿ, ಇತರರಿಗೆ ಕಿರಿಕಿರಿಯನ್ನುಂಟುಮಾಡಿದ ಮತ್ತು ನಿಮ್ಮ ಆತ್ಮಿಕ ಪ್ರಗತಿಯನ್ನೂ ತಡೆಗಟ್ಟಿದ ಒಂದು ವ್ಯಕ್ತಿತ್ವ ಲಕ್ಷಣ ನಿಮಗಿತ್ತೆಂದು ನೀವು ಒಪ್ಪಿಕೊಳ್ಳಬಹುದು. ಪ್ರಾಯಶಃ ಅದು ಅಹಂಭಾವವಾಗಿತ್ತು. ಯಾವುದೊ ಅಪತ್ತಿನಿಂದ ಬಾಧಿಸಲ್ಪಟ್ಟ ನಂತರ, ನೀವು ಎಷ್ಟು ದುರ್ಬಲರಾಗಿದ್ದೀರಿ ಮತ್ತು ನಿಮಗೆ ಇತರರ ಅಗತ್ಯ ಎಷ್ಟು ಇದೆ ಎಂಬುದು ತಟ್ಟನೆ ನಿಮ್ಮ ಅರಿವಿಗೆ ಬರಬಹುದು. ನಿಮ್ಮ ಸಂಕಷ್ಟವು ನಿಮಗೆ ಆ ಪಾಠವನ್ನು ಕಲಿಸಿರುವುದಾದರೆ ಮತ್ತು ನೀವು ಅಗತ್ಯವಿರುವ ಬದಲಾವಣೆಗಳನ್ನು ಮಾಡಿರುವಲ್ಲಿ, ಅದು ನಿಮಗೆ ಪ್ರಯೋಜನವನ್ನು ತಂದಿದೆ.
ಗತಕಾಲದಲ್ಲಿ, ನಿಮಗೆ ನಿಮ್ಮ ಕೋಪವನ್ನು ನಿಯಂತ್ರಿಸುವುದು ಕಷ್ಟವಾಗಿದ್ದರಿಂದ, ಇತರರಿಗೆ ನಿಮ್ಮೊಂದಿಗೆ ವ್ಯವಹರಿಸಲು ಕಷ್ಟಕರವಾಗಿದ್ದಿರುವುದಾದರೆ ಆಗೇನು? ಇದು ನಿಮ್ಮ ಆರೋಗ್ಯದ ಸಂಬಂಧದಲ್ಲಿ ಸ್ವಲ್ಪ ಕ್ಲೇಶವನ್ನೂ ಉಂಟುಮಾಡಿರಬಹುದು. (ಜ್ಞಾನೋಕ್ತಿ 14:29, 30) ಈಗಲಾದರೋ, ಆತ್ಮನಿಯಂತ್ರಣವನ್ನು ತೋರಿಸಲು ನಿಮಗೆ ಸಹಾಯ ಮಾಡುವಂತೆ ನೀವು ದೇವರಾತ್ಮದ ಮೇಲೆ ಆತುಕೊಳ್ಳುವುದರಿಂದ, ಪರಿಸ್ಥಿತಿಯು ಹೆಚ್ಚು ಉತ್ತಮವಾಗಿರಬಹುದು.—ಗಲಾತ್ಯ 5:22, 23.
ಇತರರಂತೆ, ನಿಮಗೆ ಒಂದು ಸಮಯದಲ್ಲಿ, ತಪ್ಪನ್ನು ಮಾಡುವವರ ಕಡೆಗೆ ಕರುಣೆಯುಳ್ಳವರಾಗಿರಲು ಬೇಕಾದಂತಹ ಕನಿಕರದ ಕೊರತೆ ಇದ್ದಿರಬಹುದು. ಆದರೆ ಕರುಣೆಯ ಮಹತ್ತಾದ ಅಗತ್ಯವಿದ್ದಂತಹ ಒಂದು ಪರಿಸ್ಥಿತಿಯಲ್ಲಿ ನೀವೇ ಬಿದ್ದಲ್ಲಿ, ನೀವು ಈಗ ಇತರರ ಕಡೆಗೆ ಹೆಚ್ಚು ಕರುಣೆಯುಳ್ಳವರಾಗಿರುವ ಪ್ರವೃತ್ತಿಯವರಾಗಿರಬಹುದು. ನಿಮಗೆ ತೋರಿಸಲ್ಪಟ್ಟ ಹೃದಯೋಲ್ಲಾಸದ ಸಹಾನುಭೂತಿ, ಚಿಂತೆ ಮತ್ತು ಕರುಣೆಯು, ನೀವೂ ಪಶ್ಚಾತ್ತಾಪಿ ತಪ್ಪಿತಸ್ಥರ ಕಡೆಗೆ ತದ್ರೀತಿಯ ಗುಣಗಳನ್ನು ಪ್ರದರ್ಶಿಸಬೇಕೆಂಬುದನ್ನು ಅರಿಯುವಂತೆ ಮಾಡಿದೆ. ನಿಮ್ಮ ದುಃಖವು ನಿಮ್ಮ ವ್ಯಕ್ತಿತ್ವದಲ್ಲಿರುವ ಈ ಬಲಹೀನತೆಗಳನ್ನು ತಿದ್ದುವಂತೆ ಪ್ರಚೋದಿಸಿರುವಲ್ಲಿ, ನಿಮ್ಮ ಅನುಭವದಿಂದ ನೀವು ಪಡೆದಿರುವ ಒಂದು ಪ್ರಯೋಜನವು ಇದಾಗಿದೆ. “ಕರುಣೆಯು ನ್ಯಾಯತೀರ್ಮಾನವನ್ನು ಗೆದ್ದು ಹಿಗ್ಗುತ್ತದೆ” ಎಂಬುದನ್ನು ನೀವು ಕಲಿತಿರಿ.—ಯಾಕೋಬ 2:13; ಮತ್ತಾಯ 5:7.
ಕ್ರೈಸ್ತ ಸಭೆಯಿಂದ ನೀಡಲ್ಪಟ್ಟ ಶಿಸ್ತು, ನೀವು ನೆಚ್ಚಿನ ಸುಯೋಗಗಳನ್ನು ಮತ್ತು ಇತರರ ಗೌರವವನ್ನು ಕಳೆದುಕೊಳ್ಳುವುದರಲ್ಲಿ ಫಲಿಸಿರುವುದಾದರೆ ಆಗೇನು? ಹತಾಶೆಗೆ ಬಲಿಬೀಳಬೇಡಿರಿ. ಶಿಸ್ತುಕ್ರಮವು ಸಭೆಯನ್ನು ಶುದ್ಧವಾಗಿಡಲು ಸಹಾಯಮಾಡುತ್ತದೆ, ಆದರೆ ಅದರ ಉದ್ದೇಶಗಳಲ್ಲಿ, ತಪ್ಪಿತಸ್ಥನ ಆತ್ಮಿಕ ಪುನಸ್ಸ್ಥಾಪನೆಯೂ ಸೇರಿದೆ. ಒಪ್ಪಿಕೊಳ್ಳಬೇಕಾದ ವಿಷಯವೇನೆಂದರೆ, “ಯಾವ ಶಿಕ್ಷೆಯಾದರೂ ತತ್ಕಾಲಕ್ಕೆ ಸಂತೋಷಕರವಾಗಿ ತೋಚದೆ ದುಃಖಕರವಾಗಿ ತೋಚುತ್ತದೆ; ಆದರೂ ತರುವಾಯ ಅದು ಶಿಕ್ಷೆಹೊಂದಿದವರಿಗೆ [“ಅದರಿಂದ ತರಬೇತಿಗೊಳಿಸಲ್ಪಟ್ಟವರಿಗೆ,” NW] ನೀತಿಯೆಂಬ ಫಲವನ್ನು ಕೊಟ್ಟು ಮನಸ್ಸಿಗೆ ಸಮಾಧಾನವನ್ನು ಉಂಟುಮಾಡುತ್ತದೆ.” (ಇಬ್ರಿಯ 12:11) ಶಿಸ್ತು ಒಂದು ಧ್ವಂಸಕಾರಿ ಹೊಡೆತವಾಗಿರಬಹುದಾದರೂ, ಅದು ನಮ್ರನಾದ ಪಶ್ಚಾತ್ತಾಪಿ ವ್ಯಕ್ತಿಯನ್ನು ನಿರೀಕ್ಷೆಯಿಲ್ಲದೆ ಬಿಡುವುದಿಲ್ಲ. ಪುರಾತನ ಇಸ್ರಾಯೇಲಿನ ರಾಜನಾದ ದಾವೀದನು, ತಪ್ಪಿಗಾಗಿ ಕಠಿನವಾಗಿ ಶಿಸ್ತುಗೊಳಿಸಲ್ಪಟ್ಟನು. ಆದರೆ ಅವನು ಪಶ್ಚಾತ್ತಾಪಿಯಾಗಿದ್ದನು ಮತ್ತು ಕಟ್ಟಕಡೆಗೆ, ಗಮನಾರ್ಹವಾದ ನಂಬಿಕೆಯ ಒಬ್ಬ ಮನುಷ್ಯನೆಂಬ ವಿಶೇಷ ಪ್ರಶಂಸೆಯನ್ನು ಪಡೆದನು.—2 ಸಮುವೇಲ 12:7-12; ಕೀರ್ತನೆ 32:5; ಇಬ್ರಿಯ 11:32-34.
ಒಂದು ಸಂಕಷ್ಟವು ನಿಮ್ಮ ಹೊರನೋಟದ ಮೇಲೆ ಒಂದು ಗಾಢವಾದ ಪರಿಣಾಮವನ್ನು ಬೀರಬಲ್ಲದು. ಗತಕಾಲದಲ್ಲಿ, ನಿಮ್ಮ ಗಮನವು ಪ್ರಾಪಂಚಿಕ ಗುರಿಗಳು ಮತ್ತು ಸಾಧನೆಗಳ ಮೇಲೆ ಕೇಂದ್ರೀಕೃತವಾಗಿದ್ದಿರಬಹುದು. ಇವು ನಿಮಗೆ ಈ ಲೋಕದಲ್ಲಿ ಪ್ರಸಿದ್ಧಿ ಮತ್ತು ಸಾಮಾಜಿಕ ಅಂತಸ್ತನ್ನು ತಂದಿರಬಹುದು. ಹಣಕಾಸಿನ ಸೋಲು ಅಥವಾ ಭೌತಿಕ ನಷ್ಟಗಳೊಂದಿಗೆ ಸಂಬಂಧಿಸಿದ ಒಂದು ಸಂಕಷ್ಟವು, ಪ್ರಾಯಶಃ ನಿಮ್ಮ ಯೋಚನೆಗಳನ್ನು ಹೆಚ್ಚು ಪ್ರಾಮುಖ್ಯವಾದ ವಿಷಯಗಳ ಮೇಲೆ ಕೇಂದ್ರೀಕರಿಸಿದೆ. (ಫಿಲಿಪ್ಪಿ 1:10ನ್ನು ಹೋಲಿಸಿರಿ.) ಆತ್ಮಿಕ ಮೌಲ್ಯಗಳು ಮತ್ತು ಪವಿತ್ರ ಸೇವೆಯಲ್ಲಿನ ಗುರಿಗಳು ಮಾತ್ರ, ನಿಜ ಆನಂದ ಮತ್ತು ಬಾಳುವ ತೃಪ್ತಿಯನ್ನು ತರುವಂತಹ ಸಂಗತಿಗಳಾಗಿವೆಯೆಂಬುದು ನಿಮಗೆ ಈಗ ಅರಿವಿಗೆ ಬಂದಿದೆ.
ಯೆಹೋವನಲ್ಲಿ ಭರವಸೆಯಿಡಿರಿ
ಯೆಹೋವನಿಗೆ ಪವಿತ್ರ ಸೇವೆಯನ್ನು ಸಲ್ಲಿಸುವುದು, ನಿಮ್ಮ ಕ್ರೈಸ್ತ ನಂಬಿಕೆಗಳನ್ನು ವಿರೋಧಿಸುವವರಿಂದ ಹಿಂಸೆ ಮತ್ತು ಕಷ್ಟಾನುಭವದಲ್ಲಿ ಫಲಿಸಬಹುದು. ಈ ಸಂಕಷ್ಟದಿಂದಾಗಿ ನೀವು ಮನಗುಂದಿದವರಾಗಬಹುದು, ಆದರೆ ಅದರಿಂದ ಒಳಿತು ಫಲಿಸಸಾಧ್ಯವಿದೆ. ಈ ಪರೀಕ್ಷೆಯು ನಿಮ್ಮ ನಂಬಿಕೆಯನ್ನು ಬಲಪಡಿಸಬಹುದು. ಇನ್ನೂ ಹೆಚ್ಚಾಗಿ, ಹಿಂಸೆಯನ್ನು ಅನುಭವಿಸುತ್ತಿರುವ ಇನ್ನಿತರರು ನಿಮ್ಮ ಪಟ್ಟುಹಿಡಿಯುವಿಕೆಯನ್ನು ನೋಡಿ ಉತ್ತೇಜಿಸಲ್ಪಟ್ಟು, ಬಲಪಡಿಸಲ್ಪಡಬಹುದು. ನಿಮ್ಮ ಒಳ್ಳೆಯ ನಡತೆಯ ಪ್ರತ್ಯಕ್ಷಸಾಕ್ಷಿಗಳು, ದೇವರನ್ನು ಮಹಿಮೆಪಡಿಸುವಂತೆ ಪ್ರಚೋದಿಸಲ್ಪಡಬಹುದು. ನಿಮ್ಮ ವಿರೋಧಕರೂ ನಾಚಿಕೆಪಟ್ಟು ನಿಮ್ಮ ಸುಕೃತ್ಯಗಳನ್ನು ಅಂಗೀಕರಿಸಬಹುದು!—1 ಪೇತ್ರ 2:12; 3:16.
ಹಿಂಸಿಸಲ್ಪಡುವಾಗ ಹತಾಶೆಪಡುವುದನ್ನು ದೂರಮಾಡಲು, ನೀವು ಯೆಹೋವನಲ್ಲಿ ಭರವಸೆಯಿಡಬೇಕು. ಸಂಕಟದಿಂದ ಪರಿಹಾರವು ಬರುವುದು ನಿಶ್ಚಯವೆಂದು ಆತನ ವಾಕ್ಯವು ತೋರಿಸುತ್ತದೆ. ಆದರೆ ಅದು ನೀವು ಇಷ್ಟಪಡುವಷ್ಟು ಬೇಗನೆ ಬರದಿರಬಹುದು. ಅಷ್ಟರ ತನಕ, “ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳಬೇಡಿರಿ.” (2 ಥೆಸಲೊನೀಕ 3:13) ಸಂಕಷ್ಟಗಳನ್ನು ನಿಭಾಯಿಸಲು ಮತ್ತು ತಾಳಿಕೊಳ್ಳಲು ಇರುವ ಮಾರ್ಗಗಳಿಗಾಗಿ ಹುಡುಕುತ್ತಾ ಇರಿ. ವಿಷಯಗಳು ನಿರೀಕ್ಷಾಹೀನವಾಗಿ ತೋರುವಾಗಲೂ, “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು.” (ಕೀರ್ತನೆ 55:22) ಸ್ವಕನಿಕರದಲ್ಲಿ ನಿಮ್ಮನ್ನು ಮುಳುಗಿಸಿಕೊಳ್ಳುವ ಬದಲಿಗೆ, ಯೆಹೋವನ ಪರಿಚಯವಿರಲು, ಆತನ ಜನರ ನಡುವೆ ಒಂದು ಸ್ಥಾನವನ್ನು ಪಡೆದಿರಲು ಮತ್ತು ಅಂತ್ಯವಿಲ್ಲದ ಜೀವನದ ನಿರೀಕ್ಷೆಯನ್ನು ಹೊಂದಿರಲು ನೀವು ಎಷ್ಟು ಆಶೀರ್ವದಿತರಾಗಿದ್ದೀರೆಂಬುದರ ಕುರಿತಾಗಿ ಯೋಚಿಸಿರಿ.—ಯೋಹಾನ 3:16, 36.
ನಿಮ್ಮ ಮನಸ್ಸನ್ನು ಅತ್ಯಾವಶ್ಯಕವಾದ ವಿಷಯಗಳ ಮೇಲೆ ಕೇಂದ್ರೀಕರಿಸಿರಿ. ತಾಳಿಕೊಳ್ಳಲು ಬಲಕ್ಕಾಗಿ ಕೇಳಿಕೊಳ್ಳುತ್ತಾ, ಪ್ರತಿದಿನ ಯೆಹೋವನನ್ನು ಪ್ರಾರ್ಥನೆಯಲ್ಲಿ ಸಮೀಪಿಸಿರಿ. (ಫಿಲಿಪ್ಪಿ 4:6, 7, 13) ನಿಮಗೆ ಕಷ್ಟಾನುಭವವನ್ನು ಉಂಟುಮಾಡುತ್ತಿರುವವರ ವಿರುದ್ಧ ಪ್ರತೀಕಾರ ತೋರಿಸುವ ಯಾವುದೇ ಯೋಚನೆಯನ್ನು ತೆಗೆದುಹಾಕಿರಿ. ವಿಷಯಗಳನ್ನು ಯೆಹೋವನ ವಶಕ್ಕೆ ಒಪ್ಪಿಸಿರಿ. (ರೋಮಾಪುರ 12:19) ಕ್ರೈಸ್ತ ಗುಣಗಳನ್ನು ವಿಕಸಿಸಿಕೊಳ್ಳುತ್ತಾ, ನಿಮ್ಮ ವ್ಯಕ್ತಿತ್ವವನ್ನು ಪರಿಷ್ಕರಿಸುವ ಮಾರ್ಗಗಳಿಗಾಗಿ ಹುಡುಕುತ್ತಾ ಇರಿ. (2 ಪೇತ್ರ 1:5-8) ನಿಮ್ಮ ಆತ್ಮಿಕ ಅಗತ್ಯಗಳ ಕುರಿತಾಗಿ ಪ್ರೀತಿಯಿಂದ ಕಾಳಜಿವಹಿಸುವ ಹಿರಿಯರನ್ನು ಸೇರಿಸಿ, ಇತರರು ನಿಮಗಾಗಿ ಮಾಡಿರುವ ಎಲ್ಲಾ ಸಂಗತಿಗಳನ್ನು ಗಣ್ಯಮಾಡಿರಿ. (ಇಬ್ರಿಯ 13:7, 17) ದೇವರಿಗೆ ನಂಬಿಗಸ್ತರಾಗಿರಿ, ಮತ್ತು ಜೀವನದ ಬಹುಮಾನದ ಮೇಲೆ—ಮರಣವೂ ಅದನ್ನು ನಿಮ್ಮಿಂದ ಕಸಿದುಕೊಳ್ಳಲಾರದು ಎಂಬ ಭರವಸೆಯಿಂದ—ನಿಮ್ಮ ದೃಷ್ಟಿಯನ್ನಿಡಿರಿ.—ಯೋಹಾನ 5:28, 29; 17:3.
ನೀವು ಈಗ ತುಂಬ ದುಃಖ ಅಥವಾ ಕಠಿನವಾದ ಸಂಕಷ್ಟಗಳನ್ನು ಅನುಭವಿಸುತ್ತಿರುವಲ್ಲಿ, ‘ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಿಸವಿಡಿರಿ.’ ಮತ್ತು ಕಟ್ಟಕಡೆಗೆ ಸಮೃದ್ಧವಾದ ಆನಂದವು ನಿಮ್ಮ ದುಃಖ ಹಾಗೂ ಕಷ್ಟವನ್ನು ಸ್ಥಾನಪಲ್ಲಟಗೊಳಿಸುವುದು. (ಜ್ಞಾನೋಕ್ತಿ 3:5, 6; ಯೋಹಾನ 16:20) ದೇವರು ಯೋಬನನ್ನು ಆಶೀರ್ವದಿಸಿದಂತೆ ನಿಮ್ಮನ್ನು ಆಶೀರ್ವದಿಸುವಾಗ, ತೀವ್ರ ದುಃಖವನ್ನು ಸಂತೋಷವು ಸ್ಥಾನಪಲ್ಲಟಗೊಳಿಸುವುದು. ನಿಮ್ಮ ಬಹುಮಾನಕ್ಕೆ ಹೋಲಿಸುವಾಗ, ಸದ್ಯದ ದಿನದ ಕಷ್ಟಾನುಭವಗಳು ಏನೂ ಅಲ್ಲ. (ರೋಮಾಪುರ 8:18ನ್ನು ಹೋಲಿಸಿರಿ.) ನಿಮ್ಮ ನಂಬಿಗಸ್ತ ತಾಳಿಕೊಳ್ಳುವಿಕೆಯು ಇತರರನ್ನು ಉತ್ತೇಜಿಸಬಲ್ಲದು ಮತ್ತು “ಹೊಸ ವ್ಯಕ್ತಿತ್ವ”ದೊಂದಿಗೆ ಬರುವಂತಹ ಮನೋಹರವಾದ ಕ್ರೈಸ್ತ ಗುಣಗಳನ್ನು ವಿಕಸಿಸಿಕೊಳ್ಳುವಂತೆ ನಿಮಗೆ ಸಹಾಯ ಮಾಡುವುದು. (ಎಫೆಸ 4:23, 24; ಕೊಲೊಸ್ಸೆ 3:10, 12-14) ಹಾಗಾದರೆ, ಅಪೊಸ್ತಲ ಪೇತ್ರನ ವಿವೇಕಯುತವಾದ ಬುದ್ಧಿವಾದದಿಂದ ಧೈರ್ಯವನ್ನು ತಂದುಕೊಳ್ಳಿರಿ: “ಹೀಗಿರಲಾಗಿ ದೇವರ ಚಿತ್ತಾನುಸಾರ ಬಾಧೆಪಡುವವರು ಒಳ್ಳೇದನ್ನು ಮಾಡುವವರಾಗಿದ್ದು ತಮ್ಮ ಆತ್ಮಗಳನ್ನು ನಂಬಿಗಸ್ತನಾದ ಸೃಷ್ಟಿಕರ್ತನಿಗೆ ಒಪ್ಪಿಸಲಿ.”—1 ಪೇತ್ರ 4:19.
[ಪುಟ 23 ರಲ್ಲಿರುವ ಚಿತ್ರ]
ಯೋಬನಂತಿರಿ. ಎಂದೂ ನಿರೀಕ್ಷಾಹೀನರಾಗಬೇಡಿ
[ಪುಟ 24 ರಲ್ಲಿರುವ ಚಿತ್ರ]
ನಿಮ್ಮ ಪೂರ್ಣ ಹೃದಯದಿಂದ ಯೆಹೋವನಲ್ಲಿ ಭರವಸೆಯಿಡಿರಿ