ಅದ್ಭುತಕರ ಗುಣಪಡಿಸುವಿಕೆಗಳು ಇನ್ನೂ ಸಂಭವಿಸುತ್ತವೊ?
“ಯೇಸುವಿನಲ್ಲಿ ವಿಶ್ವಾಸವಿಟ್ಟು ಗುಣಹೊಂದಿರಿ!” ಇದರಂತಹ ಗುರಿನುಡಿಗಳು, ಇವ್ಯಾಂಜೆಲಿಕಲ್ ಚರ್ಚಿನ ಒಬ್ಬ ಸದಸ್ಯನಾದ ಆಲೀಷಾಂಡ್ರೆನನ್ನು, ತನ್ನ ಕಾಯಿಲೆಗೆ ಔಷಧಿಯನ್ನು ತೆಗೆದುಕೊಳ್ಳುವುದು, ನಂಬಿಕೆಯ ಕೊರತೆಯನ್ನು ಸೂಚಿಸುವುದೆಂದು ನಂಬುವಂತೆ ಮಾಡಿದವು. ತನಗೆ ಅವಶ್ಯವಾಗಿದ್ದ ಅದ್ಭುತಕರ ಗುಣಪಡಿಸುವಿಕೆಯನ್ನು ತನ್ನ ನಂಬಿಕೆಯೇ ಮಾಡುವುದೆಂದು ಅವನಿಗೆ ಮನವರಿಕೆಯಾಯಿತು. ಒಬ್ಬ ಉತ್ಸುಕ ಕ್ಯಾಥೊಲಿಕ್ ಸ್ತ್ರೀಯಾದ ಬೆನೆಡೀಟ, ಬ್ರೆಸಿಲ್ನ ಸಾವೂ ಪೌಲೊದ ರಾಜ್ಯದಲ್ಲಿರುವ ಆಪಾರೆಸಿಡ ಡ ನಾರ್ಟೆಯ ಆರಾಧನಮಂದಿರದಲ್ಲಿ ನಡೆಯುವ, ವಾಸಿಮಾಡುವಿಕೆಯ ಅದ್ಭುತಗಳ ಕುರಿತು ಕೇಳಿದಾಗ, ಗಾಢವಾಗಿ ಪ್ರೇರಿಸಲ್ಪಟ್ಟಳು. ತನ್ನ ದೊಡ್ಡಮ್ಮ ತನಗೆ ಕಲಿಸಿದ್ದ ಕೆಲವು ಮಂತ್ರಪಠನಗಳನ್ನು ಉಪಯೋಗಿಸುತ್ತಾ, ಬೆನೆಡೀಟ ರೋಗಗ್ರಸ್ಥರನ್ನು ವಾಸಿಮಾಡುವ ಶಕ್ತಿಗಾಗಿ ಆಪಾರೆಸಿಡದ ಮಾತೆ, ಸಂತ ಆ್ಯಂಟನಿ, ಮತ್ತು ಇತರ “ಸಂತ”ರಿಗೆ ಪ್ರಾರ್ಥಿಸಿದಳು.
ಸುವ್ಯಕ್ತವಾಗಿ, ಈ 20ನೆಯ ಶತಮಾನದ ಕೊನೆಯ ಭಾಗದಲ್ಲಿಯೂ, ಅನೇಕ ಜನರು ಅದ್ಭುತಕರ ಗುಣಪಡಿಸುವಿಕೆಗಳಲ್ಲಿ ಇನ್ನೂ ನಂಬಿಕೆಯನ್ನಿಡುತ್ತಾರೆ—ಆದರೆ ಏಕೆ? ಬಹುಶಃ ಕೆಲವರು, ತಮ್ಮ ಪ್ರಿಯ ಜನರ, ವಿಶೇಷವಾಗಿ ತಮ್ಮ ಮಕ್ಕಳ ಅನಾರೋಗ್ಯ, ವೇದನೆ, ಮತ್ತು ಕಷ್ಟಾನುಭವವನ್ನು ಪರಿಹರಿಸಲಿಕ್ಕಾಗಿ ವೈದ್ಯರು ಹೆಚ್ಚನ್ನು ಮಾಡಲು ಅಶಕ್ತರಾದಾಗ ನಿರಾಶರಾಗುತ್ತಾರೆ. ಅಸ್ಥಿಗತ ಕಾಯಿಲೆಗಳಿಂದ ನರಳುತ್ತಿರುವವರು, ಆಧುನಿಕ ಔಷಧೋಪಚಾರದ ದುಬಾರಿ ವೆಚ್ಚದ ನೋಟದಲ್ಲಿ ಭಕ್ತಿಚಿಕಿತ್ಸೆಯನ್ನು ಕೋರುವುದರಲ್ಲಿ ತಮಗೆ ಯಾವ ನಷ್ಟವೂ ಇಲ್ಲವೆಂದು ಭಾವಿಸಬಹುದು. ವಿಭಿನ್ನ ಚರ್ಚುಗಳು ಮತ್ತು ವ್ಯಕ್ತಿಗಳು, ಏಡ್ಸ್, ಖಿನ್ನತೆ, ಕ್ಯಾನ್ಸರ್, ಬುದ್ಧಿವಿಕಲತೆ, ಅಧಿಕ ರಕ್ತದೊತ್ತಡ, ಮತ್ತು ಇತರ ಅನೇಕ ವ್ಯಾಧಿಗಳಿಗೆ ರೋಗನಿವಾರಣೆಗಳನ್ನು ನೀಡುತ್ತಿರುವುದನ್ನು ಕೆಲವರು ಟಿವಿಯಲ್ಲಿ ನೋಡುತ್ತಾರೆ. ಇಂತಹ ಹೇಳಿಕೆಗಳಲ್ಲಿ ಅವರಿಗೆ ನಂಬಿಕೆ ಇರಲಿ ಇಲ್ಲದಿರಲಿ, ಅವರು ಇವುಗಳ ಕಡೆಗೆ ಕೊನೆಯ ಉಪಾಯವಾಗಿ ತಿರುಗಬಹುದು. ತಮ್ಮ ಅನಾರೋಗ್ಯವು ದುಷ್ಟಾತ್ಮಗಳಿಂದ ಉಂಟಾಗಿದೆಯೆಂದು ನಂಬುವ ಇನ್ನೂ ಇತರರಿಗೆ, ತಮಗೆ ಸಹಾಯಮಾಡುವ ಶಕ್ತಿ ಸಾಂಪ್ರದಾಯಿಕ ಔಷಧಿಯಲ್ಲಿಲ್ಲವೆಂದು ಅನಿಸಬಹುದು.
ಇನ್ನೊಂದು ಕಡೆಯಲ್ಲಿ, ಸತ್ತ “ಸಂತ”ರಿಂದ ಇಲ್ಲವೆ ಜೀವಂತ ಚಿಕಿತ್ಸಕರಿಂದ ಮಾಡಲ್ಪಡುವ ಅದ್ಭುತ ಗುಣಪಡಿಸುವಿಕೆಗಳ ವಿಚಾರವನ್ನು ಬಲವಾಗಿ ವಿರೋಧಿಸುವವರು, ಅದನ್ನು ಖಂಡಿಸುವವರು ಸಹ ಇದ್ದಾರೆ. ಸಾರ್ನಲ್ ಡಾ ಟಾರ್ಡಗನುಸಾರ, ಪ್ರತಿರಕ್ಷಾ ಶಾಸ್ತ್ರಜ್ಞ ಡ್ರಾಯುಸ್ಯೂ ವಾರೆಲ ಅವರಿಗೆ ಅನಿಸುವುದೇನೆಂದರೆ, ಈ ವಿಶ್ವಾಸವು “ಅಜಾಗರೂಕರ ಮತ್ತು ಹತಾಶರಾದವರ ನಂಬಿಕೆಯನ್ನು ಹುಸಿಯಾಗಿಸುತ್ತದೆ.” ಅವರು ಕೂಡಿಸುವುದು: “ಅದ್ಭುತಗಳಲ್ಲಿ ನಿರೀಕ್ಷೆಯಿಡುತ್ತಾ, ಅನೇಕರು ಈ ವಂಚಕರಿಂದಾಗಿ ಗುರುತರವಾದ ವೈದ್ಯಕೀಯ ಚಿಕಿತ್ಸೆಯನ್ನು ತೊರೆದುಬಿಡಬಹುದು.” ಮತ್ತು ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ವಿವರಿಸುವುದು: “ಗತಕಾಲದಲ್ಲಿ, ಅಸಾಂಪ್ರದಾಯಿಕ ವಾಸಿಮಾಡುವಿಕೆಗಳನ್ನು, ಪವಿತ್ರ ಸ್ಥಳಗಳು ಮತ್ತು ಧಾರ್ಮಿಕ ಸಂಸ್ಕಾರಗಳೊಂದಿಗೆ ಸಂಬಂಧಿಸಲಾಯಿತು, ಮತ್ತು ವೈದ್ಯಕೀಯ ವಿಜ್ಞಾನವು ಇಂತಹ ಎಲ್ಲ ವಾಸಿಮಾಡುವಿಕೆಗಳನ್ನು, ಅನುಕೂಲಕರ ಪರಿಸ್ಥಿತಿಗಳ ಕೆಳಗೆ ಕೆಲಸಮಾಡುವ ಸಂಮೋಹ ವಿಧಾನದ ಸಾಮಾನ್ಯ ಪ್ರಕ್ರಿಯೆಗೆ ಆರೋಪಿಸುವ ಪ್ರವೃತ್ತಿಯುಳ್ಳದ್ದಾಗಿದೆ.” ಆದರೂ, ತಾವು ನಿಜವಾಗಿಯೂ ಒಂದು ಅದ್ಭುತದಿಂದ ಗುಣಹೊಂದಿದ್ದೇವೆಂದು ನಂಬುವ ಅನೇಕರು ಇದ್ದಾರೆ. ಅವರ ವಿಷಯದಲ್ಲಿ ವಾಸಿಮಾಡುವಿಕೆಯು ಪರಿಣಾಮಕಾರಿಯಾಗಿತ್ತು!
ಬೈಬಲಿನೊಂದಿಗೆ ಪರಿಚಿತರಾಗಿರುವವರು, ಯೇಸು ಕ್ರಿಸ್ತನು ಅನೇಕ ಸಂದರ್ಭಗಳಲ್ಲಿ ರೋಗಗ್ರಸ್ಥರನ್ನು ವಾಸಿಮಾಡಿದನೆಂದು, ‘ದೇವರ ಶಕ್ತಿ’ಯಿಂದ ಇದನ್ನು ಮಾಡಿದನೆಂಬುದನ್ನು ತಿಳಿದವರಾಗಿದ್ದಾರೆ. (ಲೂಕ 9:42, 43) ಆದುದರಿಂದ, ‘ದೇವರ ಶಕ್ತಿಯು ಇನ್ನೂ ಕಾರ್ಯನಡಿಸುತ್ತಾ, ಇಂದು ಅದ್ಭುತಕರ ವಾಸಿಮಾಡುವಿಕೆಗಳನ್ನು ಉಂಟುಮಾಡುತ್ತಿದೆಯೊ?’ ಎಂದು ಅವರು ಕುತೂಹಲಪಡಬಹುದು. ಹಾಗಿರುವಲ್ಲಿ, ಗುಣಪಡಿಸುವ ಪ್ರಯತ್ನಗಳು ವಾಗ್ದಾನಿತ ಫಲಿತಾಂಶಗಳನ್ನು ತರುವುದರಲ್ಲಿ ವಿಫಲವಾಗುವುದೇಕೆ? ಅದು ರೋಗಿಯಲ್ಲಿ ಸಾಕಷ್ಟು ನಂಬಿಕೆಯಿಲ್ಲದ ಕಾರಣದಿಂದಲೊ ಅಥವಾ ಅವನ ದಾನವು ಸಾಕಷ್ಟು ದೊಡ್ಡ ಮೊತ್ತದ್ದಾಗಿಲ್ಲವೆಂಬ ಕಾರಣದಿಂದಲೊ? ಕ್ರೈಸ್ತನೊಬ್ಬನು ಒಂದು ವೇದನಾಮಯ ಇಲ್ಲವೆ ಬಹುಶಃ ಗುಣವಾಗದ ರೋಗದಿಂದ ಕಷ್ಟಾನುಭವಿಸುತ್ತಿರುವಾಗ, ಒಂದು ಅದ್ಭುತಕರ ಗುಣಪಡಿಸುವಿಕೆಯನ್ನು ಕೋರುವುದು ಯೋಗ್ಯವೊ? ಮತ್ತು ಯೇಸು ನಡೆಸಿದಂತಹ, ವಿಫಲವಾಗದ ಅದ್ಭುತಕರ ಗುಣಪಡಿಸುವಿಕೆಗಳು ಪುನಃ ಎಂದಾದರೂ ಸಂಭವಿಸುವವೊ? ಈ ಪ್ರಮುಖ ಪ್ರಶ್ನೆಗಳಿಗೆ ಉತ್ತರಗಳನ್ನು, ನೀವು ಮುಂದಿನ ಲೇಖನದಲ್ಲಿ ಕಂಡುಕೊಳ್ಳಬಲ್ಲಿರಿ.