ನೀವು ದೇವರ ಮಿತ್ರರೊ? ನಿಮ್ಮ ಪ್ರಾರ್ಥನೆಗಳು ಪ್ರಕಟಪಡಿಸುವ ಸಂಗತಿ
ನೀವು ಎಂದಾದರೂ ಆಕಸ್ಮಿಕವಾಗಿ ಇಬ್ಬರು ವ್ಯಕ್ತಿಗಳು ಸಂಭಾಷಿಸುವುದನ್ನು ಕದ್ದುಕೇಳಿದ್ದೀರೊ? ಅವರ ಸಂಬಂಧದ ಸ್ವರೂಪವನ್ನು—ಅವರು ಆತ್ಮೀಯರಾಗಿದ್ದರೊ ಇಲ್ಲವೆ ಅಪರಿಚಿತರಾಗಿದ್ದರೊ, ಕೇವಲ ಪರಿಚಿತರೊ ಇಲ್ಲವೆ ಆಪ್ತರೊ, ಒಬ್ಬರನ್ನೊಬ್ಬರು ನೆಚ್ಚುವ ಮಿತ್ರರೊ ಎಂಬುದನ್ನು—ನಿರ್ಧರಿಸಲು ನಿಮಗೆ ಬಹಳ ಹೊತ್ತು ಹಿಡಿಯಲಿಲ್ಲವೆಂಬುದರಲ್ಲಿ ಸಂದೇಹವಿಲ್ಲ. ತದ್ರೀತಿಯಲ್ಲಿ, ನಮ್ಮ ಪ್ರಾರ್ಥನೆಗಳು ದೇವರೊಂದಿಗಿನ ನಮ್ಮ ಸಂಬಂಧವನ್ನು ಪ್ರಕಟಪಡಿಸಬಲ್ಲವು.
ದೇವರು “ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ” ಎಂಬುದಾಗಿ ಬೈಬಲ್ ನಮಗೆ ಆಶ್ವಾಸನೆ ನೀಡುತ್ತದೆ. (ಅ. ಕೃತ್ಯಗಳು 17:27) ವಾಸ್ತವವಾಗಿ, ಆತನನ್ನು ಅರಿತುಕೊಳ್ಳುವಂತೆ ಆತನು ನಮ್ಮನ್ನು ಆಮಂತ್ರಿಸುತ್ತಾನೆ. ನಾವು ಆತನ ಮಿತ್ರರೂ ಆಗಿರಬಲ್ಲೆವು. (ಕೀರ್ತನೆ 34:8; ಯಾಕೋಬ 2:23) ನಾವು ಆತನೊಂದಿಗೆ ನಿಜವಾದ ಆತ್ಮೀಯತೆಯನ್ನು ಅನುಭವಿಸಬಲ್ಲೆವು! (ಕೀರ್ತನೆ 25:14) ದೇವರೊಂದಿಗಿನ ನಮ್ಮ ಸಂಬಂಧವು, ಅಪರಿಪೂರ್ಣ ಮಾನವರಾದ ನಾವು ಪಡೆಯಸಾಧ್ಯವಿರುವ ಅತ್ಯಮೂಲ್ಯವಾದ ವಿಷಯವೆಂಬುದು ಸ್ಪಷ್ಟ. ಮತ್ತು ಯೆಹೋವನು ನಮ್ಮ ಮಿತ್ರತ್ವವನ್ನು ಅಮೂಲ್ಯವೆಂದೆಣಿಸುತ್ತಾನೆ. ಇದು ವ್ಯಕ್ತವಾಗಿದೆ, ಏಕೆಂದರೆ ಆತನೊಂದಿಗಿನ ನಮ್ಮ ಮಿತ್ರತ್ವವು ಆತನ ಏಕಜಾತ ಪುತ್ರನಲ್ಲಿ, ಯಾರು ನಮ್ಮ ಪರವಾಗಿ ತನ್ನ ಜೀವವನ್ನು ಕೊಟ್ಟನೊ ಅವನಲ್ಲಿರುವ ನಮ್ಮ ನಂಬಿಕೆಯ ಮೇಲೆ ಆಧರಿಸಿದೆ.—ಕೊಲೊಸ್ಸೆ 1:19, 20.
ಆದುದರಿಂದ ನಮ್ಮ ಪ್ರಾರ್ಥನೆಗಳು ಯೆಹೋವನಿಗಾಗಿ ಗಾಢವಾದ ಪ್ರೀತಿ ಮತ್ತು ಗಣ್ಯತೆಯನ್ನು ಪ್ರತಿಬಿಂಬಿಸಬೇಕು. ನಿಮ್ಮ ಪ್ರಾರ್ಥನೆಗಳು ಭಕ್ತಿಯುಕ್ತವಾಗಿವೆಯಾದರೂ, ಸ್ವಲ್ಪಮಟ್ಟಿಗೆ ಹೃತ್ಪೂರ್ವಕ ಭಾವನೆಯಿಲ್ಲದಿರುವವುಗಳಾಗಿ ನಿಮಗೆ ಎಂದಾದರೂ ಅನಿಸಿವೆಯೊ? ಇದು ಅಸಾಮಾನ್ಯವಲ್ಲ. ವಿಷಯಗಳನ್ನು ಸುಧಾರಿಸಲಿಕ್ಕಾಗಿರುವ ಕೀಲಿ ಕೈ ಯಾವುದು? ಯೆಹೋವ ದೇವರೊಂದಿಗಿನ ನಿಮ್ಮ ಮಿತ್ರತ್ವವನ್ನು ಪೋಷಿಸುವುದು.
ಪ್ರಾರ್ಥನೆಗಾಗಿ ಸಮಯವನ್ನು ಕಂಡುಕೊಳ್ಳುವುದು
ಪ್ರಪ್ರಥಮವಾಗಿ, ಒಂದು ಮಿತ್ರತ್ವವನ್ನು ಪೋಷಿಸಲು ಹಾಗೂ ಬೆಳೆಸಲು ಸಮಯವು ತಗಲುತ್ತದೆ. ನೀವು ಪ್ರತಿದಿನ ಅನೇಕ ಜನರನ್ನು—ನೆರೆಯವರು, ಸಹಕಾರ್ಮಿಕರು, ಬಸ್ ಚಾಲಕರು, ಮತ್ತು ಅಂಗಡಿಯ ಕರಣಿಕರನ್ನು ವಂದಿಸಬಹುದು ಇಲ್ಲವೆ ಅವರೊಂದಿಗೆ ಸಂಭಾಷಿಸಲೂಬಹುದು. ಆದರೂ, ನೀವು ಇಂತಹವರೊಂದಿಗೆ ನಿಜವಾಗಿಯೂ ಮಿತ್ರರಾಗಿದ್ದೀರಿ ಎಂಬುದನ್ನು ಇದು ಅರ್ಥೈಸುವುದೇ ಇಲ್ಲ. ನೀವು ಯಾರಾದರೊಬ್ಬರೊಂದಿಗೆ ಸುದೀರ್ಘವಾಗಿ ಮಾತಾಡುತ್ತಾ, ಮೇಲು ಮೇಲಿನ ವಿಷಯಗಳಿಂದ ನಿಮ್ಮ ಆಂತರಿಕ ಅನಿಸಿಕೆಗಳು ಮತ್ತು ಆಲೋಚನೆಗಳ ಅಭಿವ್ಯಕ್ತಿಯ ವರೆಗೆ ಸಾಗಿದಂತೆ ಮಿತ್ರತ್ವವು ಬೆಳೆಯುತ್ತದೆ.
ತದ್ರೀತಿಯಲ್ಲಿ, ನಾವು ಯೆಹೋವನ ಸಮೀಪಕ್ಕೆ ಬರುವಂತೆ ಪ್ರಾರ್ಥನೆಯು ಸಹಾಯ ಮಾಡುತ್ತದೆ. ಆದರೆ ಅದಕ್ಕೆ ಸಾಕಷ್ಟು ಸಮಯವನ್ನು ಮೀಸಲಾಗಿಡಬೇಕು; ಊಟದ ಸಮಯಗಳಲ್ಲಿ ಮಾಡಲ್ಪಡುವ ಕೃತಜ್ಞತೆಯ ಚಿಕ್ಕ ಪ್ರಾರ್ಥನೆಗಿಂತ ಹೆಚ್ಚಿನ ವಿಷಯದ ಅಗತ್ಯವಿದೆ. ನೀವು ಯೆಹೋವನೊಂದಿಗೆ ಹೆಚ್ಚಾಗಿ ಮಾತಾಡಿದಷ್ಟು, ನಿಮ್ಮ ಸ್ವಂತ ಅನಿಸಿಕೆಗಳು, ಉದ್ದೇಶಗಳು, ಮತ್ತು ಕೃತ್ಯಗಳನ್ನು ಸ್ಪಷ್ಟೀಕರಿಸಲು ನೀವು ಹೆಚ್ಚಾಗಿ ಶಕ್ತರಾಗಿರುವಿರಿ. ದೇವರ ಆತ್ಮವು ಆತನ ವಾಕ್ಯದಲ್ಲಿರುವ ಮೂಲತತ್ವಗಳನ್ನು ನಿಮ್ಮ ನೆನಪಿಗೆ ತಂದ ಹಾಗೆ, ಕಠಿನ ಸಮಸ್ಯೆಗಳಿಗೆ ಪರಿಹಾರಗಳು ಸ್ವತಃ ಕಾಣಿಸಿಕೊಳ್ಳುತ್ತವೆ. (ಕೀರ್ತನೆ 143:10; ಯೋಹಾನ 14:26) ಅಲ್ಲದೆ, ನೀವು ಪ್ರಾರ್ಥಿಸಿದಂತೆ, ಯೆಹೋವನು ನಿಮಗೆ ಹೆಚ್ಚು ನೈಜ ವ್ಯಕ್ತಿಯಾಗುತ್ತಾನೆ, ಮತ್ತು ನಿಮ್ಮ ವಿಷಯದಲ್ಲಿ ಆತನಿಗಿರುವ ಪ್ರೀತಿಯ ಆಸಕ್ತಿ ಮತ್ತು ಚಿಂತೆಯ ಹೆಚ್ಚಾದ ಅರಿವು ನಿಮಗಾಗುತ್ತದೆ.
ನಿಮ್ಮ ಪ್ರಾರ್ಥನೆಗಳಿಗೆ ನೀವು ಒಂದು ಉತ್ತರವನ್ನು ಪಡೆಯುವಾಗ ಇದು ವಿಶೇಷವಾಗಿ ಸತ್ಯವಾಗಿರುತ್ತದೆ. ಯೆಹೋವನು “ತನ್ನ ಶಕ್ತಿಯ ಪ್ರಕಾರ ನಾವು ಬೇಡುವದಕ್ಕಿಂತಲೂ ಯೋಚಿಸುವದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತ”ನಾಗಿದ್ದಾನೆ! (ಎಫೆಸ 3:20) ಇದು, ದೇವರು ನಿಮ್ಮ ವಿಷಯದಲ್ಲಿ ಅದ್ಭುತಗಳನ್ನು ಮಾಡುವನೆಂಬುದನ್ನು ಅರ್ಥೈಸುವುದಿಲ್ಲ. ಹಾಗಿದ್ದರೂ, ತನ್ನ ಲಿಖಿತ ವಾಕ್ಯ, ನಂಬಿಗಸ್ತ ಆಳು ವರ್ಗದ ಪ್ರಕಾಶನಗಳು, ಇಲ್ಲವೆ ಪ್ರೀತಿಯ ಸಹೋದರ ಸಹೋದರಿಯರ ಬಾಯಿಗಳ ಮೂಲಕ, ನಿಮಗೆ ಬೇಕಾದ ಬುದ್ಧಿವಾದ ಇಲ್ಲವೆ ನಿರ್ದೇಶನವನ್ನು ಆತನು ಒದಗಿಸಬಹುದು. ಅಥವಾ ತಾಳಿಕೊಳ್ಳಲು ಇಲ್ಲವೆ ಒಂದು ಪ್ರಲೋಭನೆಯನ್ನು ಪ್ರತಿರೋಧಿಸಲು ಬೇಕಾದ ಬಲವನ್ನು ಆತನು ನಿಮಗೆ ಕೊಡಬಹುದು. (ಮತ್ತಾಯ 24:45; 2 ತಿಮೊಥೆಯ 4:17) ಇಂತಹ ಅನುಭವಗಳು ನಮ್ಮ ಹೃದಯಗಳಲ್ಲಿ, ನಮ್ಮ ಸ್ವರ್ಗೀಯ ಮಿತ್ರನಿಗಾಗಿ ಗಣ್ಯತೆಯನ್ನು ತುಂಬಿಸುತ್ತವೆ!
ಆದುದರಿಂದ ಒಬ್ಬ ವ್ಯಕ್ತಿಯು ಪ್ರಾರ್ಥನೆಗಾಗಿ ಸಮಯವನ್ನು ಬದಿಗಿರಿಸಬೇಕು. ಈ ಒತ್ತಡಭರಿತ ದಿನಗಳಲ್ಲಿ ಸಮಯದ ಕೊರತೆಯಿದೆ, ನಿಜ. ಆದರೆ ನೀವು ಯಾರಾದರೊಬ್ಬರ ಬಗ್ಗೆ ನಿಜವಾಗಿಯೂ ಚಿಂತಿಸುವಾಗ, ಆ ವ್ಯಕ್ತಿಯೊಂದಿಗೆ ವ್ಯಯಿಸಲು ನೀವು ಸಾಮಾನ್ಯವಾಗಿ ಸಮಯವನ್ನು ಕಂಡುಕೊಳ್ಳುತ್ತೀರಿ. ಕೀರ್ತನೆಗಾರನು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ ವಿಧವನ್ನು ಗಮನಿಸಿರಿ: “ದೇವರೇ, ಬಾಯಾರಿದ ಜಿಂಕೆಯು ನೀರಿನ ತೊರೆಗಳನ್ನು ಹೇಗೋ ಹಾಗೆಯೇ ನನ್ನ ಮನವು ನಿನ್ನನ್ನು ಬಯಸುತ್ತದೆ. ನನ್ನ ಮನಸ್ಸು ದೇವರಿಗಾಗಿ, ಚೈತನ್ಯಸ್ವರೂಪನಾದ ದೇವರಿಗಾಗಿ ಹಾರೈಸುತ್ತದೆ; ನಾನು ಯಾವಾಗ ಹೋಗಿ ದೇವರ ಸನ್ನಿಧಿಯಲ್ಲಿ ಸೇರುವೆನೋ?” (ಕೀರ್ತನೆ 42:1, 2) ದೇವರೊಂದಿಗೆ ಮಾತಾಡುವ ತದ್ರೀತಿಯ ಬಯಕೆ ನಿಮಗಿದೆಯೊ? ಹಾಗಿರುವಲ್ಲಿ, ಹಾಗೆ ಮಾಡಲು ಸಮಯವನ್ನು ಕೊಂಡುಕೊಳ್ಳಿರಿ!—ಎಫೆಸ 5:16ನ್ನು ಹೋಲಿಸಿರಿ.
ಉದಾಹರಣೆಗೆ, ಪ್ರಾರ್ಥಿಸಲು ಒಂದಿಷ್ಟು ಖಾಸಗಿ ಸಮಯವನ್ನು ಪಡೆದಿರುವ ಸಲುವಾಗಿ ನೀವು ಬೆಳಗ್ಗೆ ಬೇಗನೆ ಏಳಲು ಪ್ರಯತ್ನಿಸಬಹುದು. (ಕೀರ್ತನೆ 119:147) ಕೆಲವೊಮ್ಮೆ ನೀವು ನಿದ್ರಾಹೀನ ರಾತ್ರಿಗಳನ್ನು ಕಳೆಯುತ್ತೀರೊ? ಹಾಗಾದರೆ, ಕೀರ್ತನೆಗಾರನಂತೆ, ಅಂತಹ ತೊಂದರೆಯ ಸಮಯಗಳನ್ನು ನೀವು ದೇವರಿಗೆ ನಿಮ್ಮ ಚಿಂತೆಗಳನ್ನು ವ್ಯಕ್ತಪಡಿಸುವ ಒಂದು ಅವಕಾಶವಾಗಿ ವೀಕ್ಷಿಸಸಾಧ್ಯವಿದೆ. (ಕೀರ್ತನೆ 63:6) ಅಥವಾ ಅದು, ದಿನದಲ್ಲಿ ಹಲವಾರು ಸಂಕ್ಷಿಪ್ತ ಪ್ರಾರ್ಥನೆಗಳನ್ನು ಮಾಡುವ ವಿಷಯವಾಗಿರಬಹುದು ಅಷ್ಟೇ. ಕೀರ್ತನೆಗಾರನು ದೇವರಿಗೆ ಹೇಳಿದ್ದು: “ದಿನವೆಲ್ಲಾ ನಿನಗೆ ಮೊರೆಯಿಡುತ್ತೇನೆ.”—ಕೀರ್ತನೆ 86:3.
ನಮ್ಮ ಪ್ರಾರ್ಥನೆಗಳ ಗುಣಮಟ್ಟವನ್ನು ಸುಧಾರಿಸುವುದು
ಕೆಲವೊಮ್ಮೆ ನಿಮ್ಮ ಪ್ರಾರ್ಥನೆಗಳ ಅವಧಿಯನ್ನು ಹೆಚ್ಚಿಸುವುದು ಕೂಡ ಸಹಾಯಕಾರಿ ಎಂದು ನೀವು ಕಂಡುಕೊಳ್ಳುವಿರಿ. ಒಂದು ಸಂಕ್ಷಿಪ್ತ ಪ್ರಾರ್ಥನೆಯಲ್ಲಿ ನೀವು ಆಳವಿಲ್ಲದ ವಿಷಯಗಳ ಕುರಿತು ಮಾತಾಡುವ ಪ್ರವೃತ್ತಿಯನ್ನು ತೋರಿಸಬಹುದು. ಆದರೆ ನೀವು ದೀರ್ಘವಾದ ಮತ್ತು ಗಾಢವಾದ ಪ್ರಾರ್ಥನೆಗಳನ್ನು ನುಡಿಯುವಾಗ, ನಿಮ್ಮ ಆಲೋಚನೆಗಳು ಮತ್ತು ಆಂತರಿಕ ಅನಿಸಿಕೆಗಳನ್ನು ಹೆಚ್ಚು ಮನಃಪೂರ್ವಕವಾಗಿ ವ್ಯಕ್ತಪಡಿಸುತ್ತೀರಿ. ಯೇಸು ಕಡಿಮೆ ಪಕ್ಷ ಒಮ್ಮೆ, ಒಂದು ಇಡೀ ರಾತ್ರಿಯನ್ನು ಪ್ರಾರ್ಥನೆಯಲ್ಲಿ ಕಳೆದನು. (ಲೂಕ 6:12) ನಿಮ್ಮ ಸ್ವಂತ ಪ್ರಾರ್ಥನೆಗಳನ್ನು ಅವಸರದಿಂದ ಮುಗಿಸುವುದನ್ನು ನೀವು ದೂರವಿರಿಸುವಾಗ, ಅವು ಹೆಚ್ಚು ಆತ್ಮೀಯ ಹಾಗೂ ಅರ್ಥಭರಿತವಾಗಿ ಪರಿಣಮಿಸುವುದನ್ನು ನೀವು ಕಂಡುಕೊಳ್ಳುವಿರೆಂಬುದರಲ್ಲಿ ಸಂದೇಹವಿಲ್ಲ.
ನಿಮ್ಮಲ್ಲಿ ಹೇಳಲು ಸ್ವಲ್ಪವೇ ವಿಷಯವು ಇರುವಾಗ ಅಸಂಬದ್ಧವಾಗಿ ಮಾತಾಡಬೇಕೆಂಬುದನ್ನು ಇಲ್ಲವೆ ಅರ್ಥವಿಲ್ಲದೆ ಹೇಳಿದ್ದನ್ನೇ ಹೇಳಬೇಕೆಂಬುದನ್ನು ಇದು ಅರ್ಥೈಸುವುದಿಲ್ಲ. ಯೇಸು ಎಚ್ಚರಿಸಿದ್ದು: “ಪ್ರಾರ್ಥನೆಮಾಡುವಾಗ ಅಜ್ಞಾನಿಗಳ ಹಾಗೆ ಹೇಳಿದ್ದನ್ನೇ ಸುಮ್ಮಸುಮ್ಮನೆ ಹೇಳಬೇಡ; ಅವರು ಬಹಳ ಮಾತುಗಳನ್ನಾಡಿದರೆ ತಮ್ಮ ಪ್ರಾರ್ಥನೆಯನ್ನು ದೇವರು ಕೇಳುತ್ತಾನೆಂದು ನೆನಸುತ್ತಾರೆ. ಆದದರಿಂದ ನೀವು ಅವರ ಹಾಗೆ ಆಗಬೇಡಿರಿ. ನೀವು ನಿಮ್ಮ ತಂದೆಯನ್ನು ಬೇಡಿಕೊಳ್ಳುವದಕ್ಕಿಂತ ಮುಂಚೆಯೇ ನಿಮಗೆ ಏನೇನು ಅಗತ್ಯವೆಂಬದು ಆತನಿಗೆ ತಿಳಿದದೆ.”—ಮತ್ತಾಯ 6:7, 8.
ನೀವು ಯಾವ ವಿಷಯಗಳ ಬಗ್ಗೆ ಚರ್ಚಿಸಬಯಸುತ್ತೀರಿ ಎಂಬುದನ್ನು ಮುಂಚಿತವಾಗಿಯೇ ಪರ್ಯಾಲೋಚಿಸುವಾಗ, ಪ್ರಾರ್ಥನೆಯು ಹೆಚ್ಚು ಅರ್ಥಭರಿತವಾಗಿರುತ್ತದೆ. ಸಾಧ್ಯತೆಗಳು ಅಂತ್ಯವಿಲ್ಲದವುಗಳಾಗಿವೆ—ಶುಶ್ರೂಷೆಯಲ್ಲಿನ ನಮ್ಮ ಆನಂದಗಳು, ನಮ್ಮ ಬಲಹೀನತೆಗಳು ಮತ್ತು ಅಪರಿಪೂರ್ಣತೆಗಳು, ನಮ್ಮ ನಿರಾಶೆಗಳು, ನಮ್ಮ ಆರ್ಥಿಕ ಚಿಂತೆಗಳು, ಕೆಲಸದಲ್ಲಿ ಇಲ್ಲವೆ ಶಾಲೆಯಲ್ಲಿನ ಒತ್ತಡಗಳು, ನಮ್ಮ ಕುಟುಂಬಗಳ ಕ್ಷೇಮ, ಮತ್ತು ನಮ್ಮ ಸ್ಥಳೀಯ ಸಭೆಯ ಆತ್ಮಿಕ ಸ್ಥಿತಿ, ಹೇಳಬಹುದಾದ ಕೆಲವೇ ವಿಷಯಗಳು.
ನೀವು ಪ್ರಾರ್ಥಿಸುವಾಗ ಕೆಲವೊಮ್ಮೆ ನಿಮ್ಮ ಮನಸ್ಸು ಅಲೆದಾಡುವ ಪ್ರವೃತ್ತಿಯುಳ್ಳದ್ದಾಗಿದೆಯೊ? ಹಾಗಿರುವಲ್ಲಿ, ಮನಸ್ಸನ್ನು ಕೇಂದ್ರೀಕರಿಸಲು ಹೆಚ್ಚಿನ ಪ್ರಯತ್ನಮಾಡಿ. ಎಷ್ಟಾದರೂ, ಯೆಹೋವನು ‘ನಮ್ಮ ಮೊರೆಗೆ ಲಕ್ಷ್ಯ’ಕೊಡಲು ಸಿದ್ಧನಾಗಿದ್ದಾನೆ. (ಕೀರ್ತನೆ 17:1) ನಮ್ಮ ಸ್ವಂತ ಪ್ರಾರ್ಥನೆಗಳಿಗೆ ಲಕ್ಷ್ಯಕೊಡಲಿಕ್ಕಾಗಿ ನಾವು ಶ್ರದ್ಧಾಯುಕ್ತ ಪ್ರಯತ್ನವನ್ನು ಮಾಡಲು ಸಿದ್ಧರಾಗಿರಬಾರದೊ? ಹೌದು, ‘ಪವಿತ್ರಾತ್ಮಕ್ಕೆ ಸಂಬಂಧಪಟ್ಟವುಗಳ ಮೇಲೆ ಮನಸ್ಸಿಡಿರಿ’ ಮತ್ತು ಅಲೆದಾಡುವಂತೆ ಅದಕ್ಕೆ ಅನುಮತಿ ನೀಡಬೇಡಿ.—ರೋಮಾಪುರ 8:5.
ನಾವು ಯೆಹೋವನನ್ನು ಸಂಬೋಧಿಸುವ ವಿಧಾನವೂ ಪ್ರಾಮುಖ್ಯವಾದದ್ದು. ಆತನನ್ನು ನಾವು ಒಬ್ಬ ಮಿತ್ರನಂತೆ ಪರಿಗಣಿಸಬೇಕೆಂದು ಆತನು ಬಯಸುತ್ತಾನಾದರೂ, ನಾವು ವಿಶ್ವದ ಪರಮಾಧಿಕಾರಿಯೊಂದಿಗೆ ಮಾತಾಡುತ್ತಿದ್ದೇವೆಂಬುದನ್ನು ನಾವು ಎಂದಿಗೂ ಮರೆಯಬಾರದು. ಪ್ರಕಟನೆ 4 ಮತ್ತು 5ನೆಯ ಅಧ್ಯಾಯಗಳಲ್ಲಿ ಚಿತ್ರಿಸಲ್ಪಟ್ಟಿರುವ ಭಯಭಕ್ತಿಪ್ರೇರಕ ದೃಶ್ಯವನ್ನು ಓದಿ ಮನನಮಾಡಿರಿ. ಅಲ್ಲಿ ಯೋಹಾನನು, ನಾವು ಪ್ರಾರ್ಥನೆಯಲ್ಲಿ ಸಮೀಪಿಸುವಾತನ ವೈಭವವನ್ನು ಒಂದು ದರ್ಶನದಲ್ಲಿ ಕಂಡನು. “ಸಿಂಹಾಸನದ ಮೇಲೆ ಕೂತ್ತಿದ್ದವ”ನನ್ನು ಸಮೀಪಿಸಿ, ಪ್ರವೇಶಪಡೆಯಲು ಶಕ್ತರಾಗಿರುವ ಎಂತಹ ಒಂದು ಸುಯೋಗ ನಮಗಿದೆ! ನಮ್ಮ ಭಾಷೆಯು ಅನಾದರದ ಇಲ್ಲವೆ ಘನತೆಯಿಲ್ಲದ ಭಾಷೆಯಾಗಿ ಪರಿಣಮಿಸುವಂತೆ ನಾವು ಎಂದಿಗೂ ಬಯಸಬಾರದು. ಬದಲಿಗೆ ‘ನಮ್ಮ ಮಾತುಗಳೂ ನಮ್ಮ ಹೃದಯದ ಧ್ಯಾನವೂ ಯೆಹೋವನಿಗೆ ಸಮರ್ಪಕವಾಗಿ’ ಮಾಡಲು, ನಾವು ಒಟ್ಟುಗೂಡಿಸಿದ ಪ್ರಯತ್ನಮಾಡಬೇಕು.—ಕೀರ್ತನೆ 19:14.
ಆದರೆ, ನಾವು ಅಲಂಕಾರಿಕ ನುಡಿಯಿಂದ ಯೆಹೋವನನ್ನು ಪ್ರಭಾವಿಸುವುದಿಲ್ಲ ಎಂಬುದನ್ನು ಗ್ರಹಿಸಬೇಕು. ಆತನು ನಮ್ಮ ಗೌರವಪೂರ್ಣ, ಹೃತ್ಪೂರ್ವಕ ಅಭಿವ್ಯಕ್ತಿಗಳಿಂದ—ಅವು ಎಷ್ಟೇ ಸರಳವಾಗಿ ವ್ಯಕ್ತಗೊಳಿಸಲ್ಪಟ್ಟರೂ—ಪ್ರಸನ್ನನಾಗುತ್ತಾನೆ.—ಕೀರ್ತನೆ 62:8.
ಅಗತ್ಯದ ಸಮಯಗಳಲ್ಲಿ ಸಾಂತ್ವನ ಮತ್ತು ಅರ್ಥಮಾಡಿಕೊಳ್ಳುವಿಕೆ
ನಮಗೆ ಸಹಾಯ ಮತ್ತು ಸಾಂತ್ವನದ ಅಗತ್ಯವಿದ್ದಾಗ, ನಾವು ಅನೇಕ ವೇಳೆ ಬೆಂಬಲ ಮತ್ತು ಸಹಾನುಭೂತಿಗಾಗಿ ಒಬ್ಬ ಆಪ್ತ ಮಿತ್ರನ ಕಡೆಗೆ ತಿರುಗುತ್ತೇವೆ. ಯಾವ ಮಿತ್ರನೂ ಯೆಹೋವನಿಗಿಂತ ಹೆಚ್ಚು ಸುಲಭಲಭ್ಯನಾಗಿರುವುದಿಲ್ಲ. ಆತನು “ಇಕ್ಕಟ್ಟಿನಲ್ಲಿ ನಮಗೆ ವಿಶೇಷಸಹಾಯಕನು.” (ಕೀರ್ತನೆ 46:1) “ಸಕಲವಿಧವಾಗಿ ಸಂತೈಸುವ ದೇವ”ರೋಪಾದಿ ನಾವು ಅನುಭವಿಸುತ್ತಿರುವ ವಿಷಯವನ್ನು ಬೇರೆ ಯಾವುದೇ ವ್ಯಕ್ತಿಗಿಂತಲೂ ಹೆಚ್ಚು ಉತ್ತಮವಾಗಿ ಆತನು ಅರ್ಥಮಾಡಿಕೊಳ್ಳುತ್ತಾನೆ. (2 ಕೊರಿಂಥ 1:3, 4; ಕೀರ್ತನೆ 5:1; 31:7) ಮತ್ತು ದುಃಸ್ಥಿತಿಯಲ್ಲಿರುವವರಿಗಾಗಿ ಆತನಲ್ಲಿ ನಿಜವಾದ ಅನುಭೂತಿ ಮತ್ತು ಅನುಕಂಪವಿದೆ. (ಯೆಶಾಯ 63:9; ಲೂಕ 1:77, 78) ಯೆಹೋವನನ್ನು ಅರ್ಥಮಾಡಿಕೊಳ್ಳುವ ಒಬ್ಬ ಮಿತ್ರನಂತೆ ಗ್ರಹಿಸಿಕೊಳ್ಳುತ್ತಾ, ಆತನೊಂದಿಗೆ ಉತ್ಸಾಹದಿಂದ, ಉದ್ರಿಕ್ತವಾಗಿ ಮಾತಾಡಲು ನಮಗೆ ನಿರಾತಂಕವೆನಿಸುತ್ತದೆ. ನಮ್ಮ ಅತಿ ಗಾಢವಾದ ಭೀತಿಗಳು ಮತ್ತು ವ್ಯಾಕುಲತೆಗಳನ್ನು ವ್ಯಕ್ತಪಡಿಸುವಂತೆ ನಾವು ಪ್ರೇರಿಸಲ್ಪಡುತ್ತೇವೆ. ಹೀಗೆ ನಾವು ಯೆಹೋವನ ಸ್ವಂತ ‘ಸಂತೈಸುವಿಕೆಯಿಂದಲೇ ನಮ್ಮ ಪ್ರಾಣಕ್ಕೆ ಸಂತೋಷ’ವುಂಟಾಗುವುದನ್ನು ಪ್ರತ್ಯಕ್ಷವಾಗಿ ಅನುಭವಿಸುತ್ತೇವೆ.—ಕೀರ್ತನೆ 94:18, 19.
ಕೆಲವೊಮ್ಮೆ ನಮ್ಮ ತಪ್ಪುಗಳ ಕಾರಣ ನಾವು ದೇವರನ್ನು ಸಮೀಪಿಸಲು ಅನರ್ಹರೆಂದು ನಮಗನಿಸಬಹುದು. ಆದರೆ ನಿಮ್ಮ ಆಪ್ತ ಮಿತ್ರನೊಬ್ಬನು ನಿಮ್ಮ ವಿರುದ್ಧ ತಪ್ಪುಮಾಡಿ, ಕ್ಷಮೆಗಾಗಿ ಬೇಡಿಕೊಳ್ಳುವುದಾದರೆ ಆಗೇನು? ಆ ಮಿತ್ರನನ್ನು ಸಂತೈಸಿ, ಅವನಿಗೆ ಪುನರಾಶ್ವಾಸನೆ ನೀಡುವಂತೆ ನೀವು ಪ್ರೇರಿಸಲ್ಪಡುವುದಿಲ್ಲವೊ? ಹಾಗಿರುವಲ್ಲಿ, ಯೆಹೋವನು ಇದಕ್ಕಿಂತ ಕಡಿಮೆಯಾದದ್ದನ್ನು ಮಾಡುವನೆಂದು ನೀವು ಏಕೆ ನಿರೀಕ್ಷಿಸಬೇಕು? ಮಾನವ ಅಪರಿಪೂರ್ಣತೆಯ ಕಾರಣ ಪಾಪಮಾಡುವ ತನ್ನ ಮಿತ್ರರನ್ನು ಆತನು ಉದಾರ ಮನಸ್ಸಿನಿಂದ ಕ್ಷಮಿಸುತ್ತಾನೆ. (ಕೀರ್ತನೆ 86:5; 103:3, 8-11) ಇದರ ಅರಿವು ನಮಗಿರುವುದರಿಂದ, ಆತನಲ್ಲಿ ನಮ್ಮ ತಪ್ಪುಗಳನ್ನು ಮುಕ್ತವಾಗಿ ನಿವೇದಿಸಿಕೊಳ್ಳುವುದರಿಂದ ನಾವು ಹಿಂಜರಿಯುವುದಿಲ್ಲ; ಆತನ ಪ್ರೀತಿ ಮತ್ತು ಕರುಣೆಯ ವಿಷಯದಲ್ಲಿ ನಾವು ಭರವಸೆಯಿಂದಿರಬಲ್ಲೆವು. (ಕೀರ್ತನೆ 51:17) ನಮ್ಮ ಕೊರತೆಗಳಿಂದಾಗಿ ನಾವು ಖಿನ್ನರಾಗಿರುವುದಾದರೆ, 1 ಯೋಹಾನ 3:19, 20ರ ಮಾತುಗಳಿಂದ ನಾವು ಸಾಂತ್ವನ ಪಡೆದುಕೊಳ್ಳಸಾಧ್ಯವಿದೆ: “ನಾವು ಸತ್ಯಕ್ಕೆ ಸೇರಿದವರೆಂಬದು ಇದರಿಂದಲೇ ನಮಗೆ ತಿಳಿಯುತ್ತದೆ. ಮತ್ತು ನಮ್ಮ ಹೃದಯವು ಯಾವ ವಿಷಯದಲ್ಲಿಯಾದರೂ ನಮ್ಮನ್ನು ದೋಷಿಗಳೆಂದು ನಿರ್ಣಯಿಸಿದರೂ ದೇವರು ನಮ್ಮ ಹೃದಯಕ್ಕಿಂತ ದೊಡ್ಡವನಾಗಿದ್ದು ಎಲ್ಲವನ್ನೂ ಬಲ್ಲವನಾಗಿದ್ದಾನೆಂದು ನಾವು ತಿಳಿದು ದೇವರ ಸಮಕ್ಷಮದಲ್ಲಿ ನಮ್ಮ ಹೃದಯವನ್ನು ಸಮಾಧಾನಪಡಿಸುವೆವು.”
ಹಾಗಿದ್ದರೂ, ದೇವರ ಪ್ರೀತಿಯ ಪರಾಮರಿಕೆಯನ್ನು ಅನುಭವಿಸಲು ನಾವು ದುಃಸ್ಥಿತಿಯಲ್ಲಿರುವ ಅಗತ್ಯವಿಲ್ಲ. ನಮ್ಮ ಆತ್ಮಿಕ ಹಾಗೂ ಭಾವನಾತ್ಮಕ ಕ್ಷೇಮವನ್ನು ಬಾಧಿಸಬಹುದಾದ ಯಾವುದೇ ವಿಷಯದಲ್ಲಿ ಯೆಹೋವನು ಆಸಕ್ತನಾಗಿದ್ದಾನೆ. ಹೌದು, ಪ್ರಾರ್ಥನೆಯಲ್ಲಿ ಉಲ್ಲೇಖಿಸಲ್ಪಡಲು ನಮ್ಮ ಅನಿಸಿಕೆಗಳು, ಆಲೋಚನೆಗಳು, ಮತ್ತು ಚಿಂತೆಗಳು ತೀರ ಕ್ಷುಲ್ಲಕವೆಂದು ನಾವು ಎಂದಿಗೂ ನೆನಸುವ ಅಗತ್ಯವಿಲ್ಲ. (ಫಿಲಿಪ್ಪಿ 4:6) ನೀವು ಒಬ್ಬ ಆಪ್ತ ಮಿತ್ರನೊಂದಿಗೆ ಇರುವಾಗ, ನಿಮ್ಮ ಜೀವಿತದ ಪ್ರಧಾನ ಘಟನೆಗಳನ್ನು ಮಾತ್ರ ಚರ್ಚಿಸುತ್ತೀರೊ? ಸಂಬಂಧಸೂಚಕವಾಗಿ ಚಿಕ್ಕಪುಟ್ಟ ಚಿಂತೆಗಳನ್ನೂ ನೀವೂ ಹಂಚಿಕೊಳ್ಳುವುದಿಲ್ಲವೊ? ತದ್ರೀತಿಯಲ್ಲಿ, “ಆತನು ನಿಮಗೋಸ್ಕರ ಚಿಂತಿಸುತ್ತಾನೆ” ಎಂಬ ವಿಷಯವು ತಿಳಿದಿದ್ದು, ಯೆಹೋವನೊಂದಿಗೆ ನಿಮ್ಮ ಜೀವಿತದ ಯಾವುದೇ ವಿಷಯದ ಬಗ್ಗೆ ಮಾತಾಡಲು ನಿಮಗೆ ಮುಕ್ತ ಅನಿಸಿಕೆ ಆಗಸಾಧ್ಯವಿದೆ.—1 ಪೇತ್ರ 5:7.
ನೀವು ಮಾತಾಡುವಂತಹದ್ದೆಲ್ಲವೂ ನಿಮ್ಮ ಕುರಿತಾಗಿಯೇ ಇರುವಲ್ಲಿ ಒಂದು ಮಿತ್ರತ್ವವು ಬಹುಶಃ ಬಹಳ ಸಮಯ ಬಾಳಲಾರದು. ತದ್ರೀತಿಯಲ್ಲಿ, ನಮ್ಮ ಪ್ರಾರ್ಥನೆಗಳು ಸ್ವಾರ್ಥಮಗ್ನವಾಗಿರಬಾರದು. ಯೆಹೋವನಿಗಾಗಿ ಮತ್ತು ಆತನ ಅಭಿರುಚಿಗಳಿಗಾಗಿ ಪ್ರೀತಿ ಮತ್ತು ಚಿಂತೆಯನ್ನೂ ನಾವು ವ್ಯಕ್ತಪಡಿಸಬೇಕು. (ಮತ್ತಾಯ 6:9, 10) ಪ್ರಾರ್ಥನೆಯು, ದೇವರಿಂದ ಸಹಾಯವನ್ನು ವಿನಂತಿಸಿಕೊಳ್ಳುವ ಅವಕಾಶ ಮಾತ್ರವಲ್ಲ, ಕೃತಜ್ಞತೆಗಳನ್ನೂ ಸ್ತುತಿಯನ್ನೂ ನುಡಿಯುವ ಒಂದು ಸಂದರ್ಭವಾಗಿದೆ. (ಕೀರ್ತನೆ 34:1; 95:2) ಕ್ರಮವಾದ ವೈಯಕ್ತಿಕ ಅಧ್ಯಯನದ ಮೂಲಕ “ಜ್ಞಾನವನ್ನು ಪಡೆದುಕೊಳ್ಳುವುದು” (NW) ಈ ವಿಷಯದಲ್ಲಿ ನಮಗೆ ಸಹಾಯ ಮಾಡುವುದು. ಏಕೆಂದರೆ ಇದು, ಯೆಹೋವನ ಮತ್ತು ಆತನ ಮಾರ್ಗಗಳ ಒಳ್ಳೆಯ ಪರಿಚಯ ನಮಗಾಗುವಂತೆ ಸಹಾಯ ಮಾಡುತ್ತದೆ. (ಯೋಹಾನ 17:3) ಕೀರ್ತನೆಗಳ ಪುಸ್ತಕವನ್ನು ಓದಿ, ಇತರ ನಂಬಿಗಸ್ತ ಸೇವಕರು ಯೆಹೋವನ ಮುಂದೆ ತಮ್ಮನ್ನು ಹೇಗೆ ವ್ಯಕ್ತಪಡಿಸಿಕೊಂಡರೆಂಬುದನ್ನು ಗಮನಿಸುವುದು ವಿಶೇಷವಾಗಿ ಸಹಾಯಕಾರಿ ಎಂದು ನೀವು ಕಂಡುಕೊಳ್ಳಬಹುದು.
ಯೆಹೋವನ ಮಿತ್ರತ್ವವು ನಿಜವಾಗಿಯೂ ಒಂದು ಅಮೂಲ್ಯವಾದ ಕೊಡುಗೆಯಾಗಿದೆ. ನಮ್ಮ ಪ್ರಾರ್ಥನೆಗಳನ್ನು ಇನ್ನಷ್ಟು ಆತ್ಮೀಯ, ಹೃತ್ಪೂರ್ವಕ, ಹಾಗೂ ವೈಯಕ್ತಿಕವಾಗಿ ಮಾಡುವ ಮೂಲಕ ನಾವು ಅದನ್ನು ಗಣ್ಯಮಾಡುತ್ತೇವೆಂದು ತೋರಿಸುವಂತಾಗಲಿ. ಆಗ, ಕೀರ್ತನೆಗಾರನಿಂದ ವ್ಯಕ್ತಗೊಳಿಸಲ್ಪಟ್ಟ ಸಂತೋಷವನ್ನು ನಾವು ಅನುಭವಿಸುವೆವು. ಅವನು ಪ್ರಕಟಿಸಿದ್ದು: “ನಿನ್ನ ಸನ್ನಿಧಿಯಲ್ಲಿ ಸೇವೆಮಾಡುವದಕ್ಕೋಸ್ಕರ ಯಾರನ್ನು ಆರಿಸಿಕೊಳ್ಳುತ್ತೀಯೋ ಅವರೇ ಧನ್ಯರು.”—ಕೀರ್ತನೆ 65:4.
[ಪುಟ 28 ರಲ್ಲಿರುವ ಚಿತ್ರ]
ನಾವು ದಿನದ ಆದ್ಯಂತ, ಅವಕಾಶವು ಉದ್ಭವಿಸುವಾಗಲೆಲ್ಲ ದೇವರಿಗೆ ಪ್ರಾರ್ಥಿಸಸಾಧ್ಯವಿದೆ