ವಾಚಕರಿಂದ ಪ್ರಶ್ನೆಗಳು
ಕುರಿ ಮತ್ತು ಆಡುಗಳ ಕುರಿತಾದ ಯೇಸುವಿನ ಸಾಮ್ಯದ ನಮ್ಮ ಅಧ್ಯಯನದಿಂದ ನಾವು ರೋಮಾಂಚಗೊಂಡೆವು. ಅಕ್ಟೋಬರ್ 15, 1995ರ “ಕಾವಲಿನಬುರುಜು” ಪತ್ರಿಕೆಯಲ್ಲಿ ಸಾದರಗೊಳಿಸಲ್ಪಟ್ಟ ಹೊಸ ತಿಳಿವಳಿಕೆಯ ಪರಿಗಣನೆಯಲ್ಲಿ, ಇಂದು ಯೆಹೋವನ ಸಾಕ್ಷಿಗಳು ಬೇರ್ಪಡಿಸುವ ಒಂದು ಕೆಲಸದಲ್ಲಿ ಪಾಲಿಗರಾಗುತ್ತಿದ್ದಾರೆಂದು ನಾವು ಇನ್ನೂ ಹೇಳಸಾಧ್ಯವೊ?
ಹೌದು. ಅನೇಕರು ಇದರ ಕುರಿತು ಕುತೂಹಲಪಟ್ಟಿರುವುದು ಗ್ರಾಹ್ಯವೇ, ಏಕೆಂದರೆ ಮತ್ತಾಯ 25:31, 32 ಹೇಳುವುದು: “ಇದಲ್ಲದೆ ಮನುಷ್ಯಕುಮಾರನು ತನ್ನ ಮಹಿಮೆಯಿಂದ ಎಲ್ಲಾ ದೇವದೂತರೊಂದಿಗೆ ಕೂಡಿಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕೂತುಕೊಳ್ಳುವನು; ಮತ್ತು ಎಲ್ಲಾ ದೇಶಗಳ ಜನರು ಆತನ ಮುಂದೆ ಕೂಡಿಸಲ್ಪಡುವರು. ಕುರುಬನು ಆಡುಗಳನ್ನೂ ಕುರಿಗಳನ್ನೂ ಬೇರೆಬೇರೆಮಾಡುವ ಪ್ರಕಾರ ಆತನು ಅವರನ್ನು ಬೇರೆಬೇರೆ” ಮಾಡುವನು. ಈ ವಚನಗಳು ಮಹಾ ಸಂಕಟದ ಆರಂಭದ ಅನಂತರಕ್ಕೆ ಏಕೆ ಅನ್ವಯಿಸುತ್ತವೆಂದು ಅಕ್ಟೋಬರ್ 15, 1995ರ ಕಾವಲಿನಬುರುಜು ತೋರಿಸಿತು. ಯೇಸು ತನ್ನ ಮಹಿಮೆಯಲ್ಲಿ ತನ್ನ ದೇವದೂತರೊಂದಿಗೆ ಆಗಮಿಸಿ, ನ್ಯಾಯತೀರ್ಪಿನ ಸಿಂಹಾಸನದ ಮೇಲೆ ಕೂತುಕೊಳ್ಳುವನು. ಅನಂತರ ಅವನು ಜನರನ್ನು ಬೇರ್ಪಡಿಸುವನು. ಯಾವ ಅರ್ಥದಲ್ಲಿ? ಆ ಸಮಯಕ್ಕೆ ಮೊದಲು ಜನರು ಏನು ಮಾಡಿದರೊ ಇಲ್ಲವೆ ಮಾಡಲಿಲ್ಲವೊ ಅದರ ಮೇಲೆ ಆಧಾರಿಸಿ, ಅವನು ನಿರ್ಣಯಗಳನ್ನು ವಿಧಿಸುವನು.
ನಾವು ಇದನ್ನು ಒಂದು ನ್ಯಾಯವಿಚಾರಣೆಗೆ ನಡೆಸುವ ಕಾನೂನುಬದ್ಧ ಪ್ರಕ್ರಿಯೆಯ ವಿಕಸನಕ್ಕೆ ಹೋಲಿಸಸಾಧ್ಯವಿದೆ. ನ್ಯಾಯಾಲಯವು ವಿಚಾರಣೆಮಾಡಿ ಒಂದು ತೀರ್ಪನ್ನು ನೀಡುವ ಮೊದಲು, ಒಂದು ವಿಸ್ತೃತ ಅವಧಿಯಲ್ಲಿ ಪುರಾವೆಯು ಶೇಖರವಾಗುತ್ತದೆ. ಈಗ ಜೀವಂತರಾಗಿರುವ ಜನರು ಕುರಿಗಳಾಗಿರುವರೊ ಇಲ್ಲವೆ ಆಡುಗಳಾಗಿರುವರೊ ಎಂಬ ಪುರಾವೆಯು, ಒಂದು ದೀರ್ಘ ಸಮಯದಿಂದ ಶೇಖರವಾಗುತ್ತಿದೆ. ಮತ್ತು ಇದಕ್ಕೆ ಹೆಚ್ಚನ್ನು ಇನ್ನೂ ಕೂಡಿಸಲಾಗುತ್ತಿದೆ. ಆದರೆ ಯೇಸು ತನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವಾಗ, ವಿಚಾರಣೆಯು ಪೂರ್ಣಗೊಳ್ಳುವುದು. ಅವನು ತೀರ್ಪನ್ನು ವಿಧಿಸಲು ಸಿದ್ಧನಿರುವನು. ಜನರು ನಿತ್ಯ ನಾಶನಕ್ಕೆ ಇಲ್ಲವೆ ನಿತ್ಯ ಜೀವನಕ್ಕೆ ಬೇರ್ಪಡಿಸಲ್ಪಡುವರು.
ಆದಾಗಲೂ, ಮತ್ತಾಯ 25:32ರಲ್ಲಿ ಉಲ್ಲೇಖಿಸಲ್ಪಟ್ಟಿರುವ, ಜೀವ ಅಥವಾ ಮರಣಕ್ಕೆ ಜನರ ಬೇರ್ಪಡಿಸುವಿಕೆಯು ಭವಿಷ್ಯದಲ್ಲಿ ಸಂಭವಿಸುವುದೆಂಬ ನಿಜತ್ವವು, ಅದರ ಮೊದಲು ಯಾವುದೇ ರೀತಿಯ ಬೇರ್ಪಡಿಸುವಿಕೆ ಇಲ್ಲವೆ ವಿಂಗಡಿಸುವಿಕೆ ಸಂಭವಿಸುವುದಿಲ್ಲ ಎಂಬುದನ್ನು ಅರ್ಥೈಸುವುದಿಲ್ಲ. ಅದರ ಮುಂಚೆ ಸಂಭವಿಸುವ ಒಂದು ಬೇರ್ಪಡಿಸುವ ಕೆಲಸದ ಕುರಿತು, ಬೈಬಲು ಮತ್ತಾಯ 13ನೆಯ ಅಧ್ಯಾಯದಲ್ಲಿ ತಿಳಿಸುತ್ತದೆ. ಆಸಕ್ತಿಕರವಾಗಿ ಒಬ್ಬನೇ ಸತ್ಯ ದೇವರ ಆರಾಧನೆಯಲ್ಲಿ ಐಕ್ಯರು (ಇಂಗ್ಲಿಷ್) ಎಂಬ ಪುಸ್ತಕವು, ಪುಟಗಳು 179-80ರಲ್ಲಿ ಇದನ್ನು “ಜನರ ಬೇರ್ಪಡಿಸುವಿಕೆ” ಎಂಬ ಶೀರ್ಷಿಕೆಯ ಕೆಳಗೆ ವಿವರಿಸುತ್ತದೆ.a ಆ ಪುಸ್ತಕವು ಹೇಳುವುದು: “ಯೇಸುವು ವಿಷಯಗಳ ವ್ಯವಸ್ಥೆಯ ಸಮಾಪ್ತಿಯೊಂದಿಗೆ ಪ್ರಧಾನವಾಗಿ ಜೊತೆಸೇರಿಸಿದ ಇನ್ನಿತರ ಗಮನಾರ್ಹ ಘಟನೆಗಳೂ ಇವೆ. ಇವುಗಳಲ್ಲಿ ಒಂದು, ‘ಕೆಡುಕನ ಪುತ್ರರು’ ಆಗಿರುವವರಿಂದ ‘ರಾಜ್ಯದ ಪುತ್ರರು’ ಆಗಿರುವರನ್ನು ಪ್ರತ್ಯೇಕಿಸುವುದು ಆಗಿದೆ. ಯೇಸು ಇದರ ಕುರಿತು, ಒಬ್ಬ ವೈರಿಯು ಹಣಜಿಯನ್ನು ಬಿತ್ತಿದ್ದ ಗೋದಿ ಹೊಲದ ಕುರಿತ ತನ್ನ ಸಾಮ್ಯದಲ್ಲಿ ಮಾತಾಡಿದನು.”
ಪುಸ್ತಕವು, ಮತ್ತಾಯ 13:24-30ರಲ್ಲಿ ಕೊಡಲ್ಪಟ್ಟಿರುವ ಮತ್ತು 36-43 ವಚನಗಳಲ್ಲಿ ವಿವರಿಸಲ್ಪಟ್ಟಿರುವ ಯೇಸುವಿನ ದೃಷ್ಟಾಂತಕ್ಕೆ ಸೂಚಿಸುತ್ತಾ ಇತ್ತು. ಗೋಧಿಯ ಒಳ್ಳೆಯ ಬೀಜಗಳು ರಾಜ್ಯದ ಪುತ್ರರನ್ನು ಪ್ರತಿನಿಧಿಸುತ್ತವೆ, ಆದರೆ ಹಣಜಿಗಳು ಕೆಡುಕನ ಪುತ್ರರನ್ನು ಸೂಚಿಸುತ್ತವೆ ಎಂಬುದನ್ನು 38ನೆಯ ವಚನದಲ್ಲಿ ಗಮನಿಸಿರಿ. ‘ವಿಷಯಗಳ ವ್ಯವಸ್ಥೆಯ ಸಮಾಪ್ತಿ’ಯಲ್ಲಿ—ನಾವು ಈಗ ಜೀವಿಸುತ್ತಿರುವ ಸಮಯದಲ್ಲಿ—ಹಣಜಿಗಳು ಒಟ್ಟುಸೇರಿಸಲ್ಪಡುತ್ತವೆ ಎಂಬುದನ್ನು 39 ಮತ್ತು 40ನೆಯ ವಚನಗಳು ತೋರಿಸುತ್ತವೆ. ಅವು ಬೇರ್ಪಡಿಸಲ್ಪಟ್ಟು, ಕೊನೆಯದಾಗಿ ಸುಡಲ್ಪಡುತ್ತವೆ, ನಾಶಗೊಳಿಸಲ್ಪಡುತ್ತವೆ.
ದೃಷ್ಟಾಂತವು ಅಭಿಷಿಕ್ತ ಕ್ರೈಸ್ತರೊಂದಿಗೆ (ಕುರಿ ಮತ್ತು ಆಡುಗಳ ಸಾಮ್ಯದಲ್ಲಿ ಇವರು ಯೇಸುವಿನ ಸಹೋದರರೆಂದು ಕರೆಯಲ್ಪಟ್ಟಿದ್ದಾರೆ) ವ್ಯವಹರಿಸುತ್ತದೆ. ಆದರೂ, ನಮ್ಮ ಸಮಯದಲ್ಲಿ ಒಂದು ಮಹತ್ತರವಾದ ಬೇರ್ಪಡಿಸುವಿಕೆಯು ಖಂಡಿತವಾಗಿ ಸಂಭವಿಸುತ್ತದೆ ಎಂಬ ವಿಷಯವು ಸ್ಪಷ್ಟವಾಗಿದೆ. ಇದರಲ್ಲಿ ಅಭಿಷಿಕ್ತರು, ಕ್ರೈಸ್ತರೆಂದು ಹೇಳಿಕೊಳ್ಳುವ ಆದರೆ ತಾವು “ಕೆಡುಕನ ಪುತ್ರರು” ಎಂಬುದಾಗಿ ರುಜುಪಡಿಸಿಕೊಳ್ಳುವ ಜನರಿಂದ ಬೇರ್ಪಡಿಸಲ್ಪಡುವರು.
ಜನರು ವಿಂಗಡಿಸಲ್ಪಡುವ ಇಲ್ಲವೆ ಬೇರ್ಪಡಿಸಲ್ಪಡುವ ಇತರ ಉದಾಹರಣೆಗಳನ್ನೂ ಯೇಸು ಒದಗಿಸಿದನು. ವಿನಾಶಕ್ಕೆ ನಡೆಸುವ ಅಗಲವಾದ ದಾರಿಯ ಕುರಿತು ಅವನು ಹೇಳಿದ ವಿಷಯವನ್ನು ಜ್ಞಾಪಿಸಿಕೊಳ್ಳಿ: “ಅದರಲ್ಲಿ ಹೋಗುವವರು ಬಹು ಜನ.” (ಮತ್ತಾಯ 7:13) ಅದು ಕೇವಲ ಅಂತಿಮ ಪರಿಣಾಮದ ಕುರಿತಾದ ಒಂದು ಹೇಳಿಕೆಯಾಗಿರಲಿಲ್ಲ. ಜೀವಕ್ಕೆ ನಡೆಸುವ ಇಕ್ಕಟ್ಟಾದ ದಾರಿಯನ್ನು ಕಂಡುಕೊಳ್ಳುವ ಕೆಲವು ಜನರ ವಿಷಯದಲ್ಲಿ ಈಗ ಸತ್ಯವಾಗಿರುವಂತೆಯೇ, ಅದು ಒಂದು ಮುಂದುವರಿಯುವ ವಿಕಸನದ ಕುರಿತಾದ ಹೇಳಿಕೆಯಾಗಿತ್ತು. ತನ್ನ ಅಪೊಸ್ತಲರನ್ನು ಕಳುಹಿಸುವಾಗಲೂ, ಅವರು ಅರ್ಹರಾಗಿರುವ ಕೆಲವರನ್ನು ಕಂಡುಕೊಳ್ಳುವರೆಂದು ಯೇಸು ಹೇಳಿದ ವಿಷಯವನ್ನು ಜ್ಞಾಪಿಸಿಕೊಳ್ಳಿ. ಇತರರು ಅರ್ಹರಾಗಿರಲಾರರು, ಮತ್ತು ಇಂತಹ ಜನರ “ವಿರೋಧವಾಗಿ ಸಾಕ್ಷಿಯಾಗಿರ”ಲಿಕ್ಕಾಗಿ ಅಪೊಸ್ತಲರು ತಮ್ಮ ಕಾಲಿಗೆ ಹತ್ತಿದ ಧೂಳನ್ನು ಝಾಡಿಸಬೇಕಿತ್ತು. (ಲೂಕ 9:5) ಕ್ರೈಸ್ತರು ಇಂದು ತಮ್ಮ ಸಾರ್ವಜನಿಕ ಶುಶ್ರೂಷೆಯನ್ನು ಪೂರೈಸುತ್ತಿರುವಾಗ ತದ್ರೀತಿಯ ಸಂಗತಿಯು ಸಂಭವಿಸುತ್ತದೆಂಬುದು ಸತ್ಯವಲ್ಲವೊ? ಕೆಲವರು ಚೆನ್ನಾಗಿ ಪ್ರತಿಕ್ರಿಯಿಸುತ್ತಾರೆ, ಇತರರಾದರೊ ನಾವು ಕೊಂಡೊಯ್ಯುವ ದೈವಿಕ ಸಂದೇಶವನ್ನು ತಿರಸ್ಕರಿಸುತ್ತಾರೆ.
ಕಾವಲಿನಬುರುಜು ಪತ್ರಿಕೆಯಲ್ಲಿ ಕುರಿ ಮತ್ತು ಆಡುಗಳ ವಿಷಯವಾಗಿ ಚರ್ಚಿಸುತ್ತಿದ್ದ ಲೇಖನಗಳು ಗಮನಿಸಿದ್ದು: “ಆ ದೃಷ್ಟಾಂತದಲ್ಲಿ ವರ್ಣಿಸಿರುವ ನ್ಯಾಯತೀರಿಸುವಿಕೆಯು ಸಮೀಪ ಭವಿಷ್ಯತ್ತಿನಲ್ಲಿರುವುದಾದರೂ, ಮಹತ್ವದ ಯಾವುದೋ ವಿಷಯವು ಈಗ ಸಹ ಸಂಭವಿಸುತ್ತಿದೆ. ಕ್ರೈಸ್ತರಾದ ನಾವು, ಜನರ ಮಧ್ಯೆ ವಿಭಜನೆಯನ್ನುಂಟುಮಾಡುವ ಒಂದು ಸಂದೇಶವನ್ನು ಘೋಷಿಸುವ, ಜೀವರಕ್ಷಕ ಕೆಲಸದಲ್ಲಿ ತೊಡಗಿದ್ದೇವೆ. (ಮತ್ತಾಯ 10:32-39).” ಮತ್ತಾಯ 10ನೆಯ ಅಧ್ಯಾಯದಲ್ಲಿರುವ ಆ ಭಾಗದಲ್ಲಿ, ತನ್ನನ್ನು ಹಿಂಬಾಲಿಸುವುದು ವಿಭಜನೆಗೆ—ಮಗನ ವಿರುದ್ಧವಾಗಿ ತಂದೆಯು, ತಾಯಿಯ ವಿರುದ್ಧವಾಗಿ ಮಗಳು—ಕಾರಣವಾಗಿರುವುದೆಂದು ಯೇಸು ಹೇಳಿರುವುದಾಗಿ ನಾವು ಓದುತ್ತೇವೆ.
ಅಂತಿಮವಾಗಿ, ಕ್ರಿಸ್ತನ ಆತ್ಮಾಭಿಷಿಕ್ತ ಸಹೋದರರು ರಾಜ್ಯ ಸಂದೇಶದ ಲೋಕವ್ಯಾಪಕ ಸಾರುವ ಕಾರ್ಯದ ನುಗ್ಗುಮೊನೆಯಾಗಿ ಕೆಲಸಮಾಡಿದ್ದಾರೆ. ಜನರು ಅದನ್ನು ಕೇಳಿ ಅನುಕೂಲವಾಗಿ ಇಲ್ಲವೆ ಅನನುಕೂಲವಾಗಿ ಪ್ರತಿಕ್ರಿಯಿಸಿದಂತೆ, ತಮ್ಮನ್ನೇ ಗುರುತಿಸಿಕೊಳ್ಳುತ್ತಿದ್ದಾರೆ. ಮಾನವರಾದ ನಾವು, ಮತ್ತಾಯ 25ನೆಯ ಅಧ್ಯಾಯದಲ್ಲಿ ತಿಳಿಸಲ್ಪಟ್ಟಿರುವ ಅರ್ಥದಲ್ಲಿ ‘ಈ ವ್ಯಕ್ತಿಯು ಕುರಿಯಾಗಿದ್ದಾನೆ, ಅವನು ಆಡಾಗಿದ್ದಾನೆ’ ಎಂಬುದಾಗಿ ಹೇಳಸಾಧ್ಯವಿಲ್ಲ, ಮತ್ತು ನಾವು ಹಾಗೆ ಹೇಳಬಾರದು. ಆದರೂ, ನಾವು ಜನರ ಬಳಿಗೆ ಸುವಾರ್ತೆಯನ್ನು ಕೊಂಡೊಯ್ಯುವುದು, ಅವರ ಸ್ಥಾನವು ಯಾವುದು, ಅವರು ಯಾವ ರೀತಿಯ ಜನರು ಮತ್ತು ಯೇಸುವಿನ ಸಹೋದರರ ವಿಷಯದಲ್ಲಿ ಅವರು ಪ್ರತಿಕ್ರಿಯಿಸುವುದು ಹೇಗೆಂದು ಅವರು ತೋರಿಸುವಂತೆ ಅದು ಅನುಮತಿಸುತ್ತದೆ. ಆದಕಾರಣ, ನ್ಯಾಯಾಲಯದ ಒಂದು ಮೊಕದ್ದಮೆಗಾಗಿ ಹೆಚ್ಚುತ್ತಿರುವ ಪುರಾವೆಯಂತೆ, ಯೇಸುವಿನ ಸಹೋದರರನ್ನು ಬೆಂಬಲಿಸುವವರು ಮತ್ತು ಅವರನ್ನು ಬೆಂಬಲಿಸಲು ನಿರಾಕರಿಸುವವರ ನಡುವಿನ ವಿಭಜನೆಯು ಸುವ್ಯಕ್ತವಾಗುತ್ತಿದೆ. (ಮಲಾಕಿಯ 3:18) ಕಾವಲಿನಬುರುಜು ತೋರಿಸಿದಂತೆ, ಯೇಸು ಬೇಗನೆ ತನ್ನ ಸಿಂಹಾಸನದ ಮೇಲೆ ಕುಳಿತು, ತೀರ್ಪು ನೀಡುವನು. ಆಗ ಜನರು ನ್ಯಾಯವಾಗಿ ಕೊನೆಯ ಅರ್ಥದಲ್ಲಿ ಜೀವಕ್ಕೆ ಇಲ್ಲವೆ ನಾಶನಕ್ಕೆ ಬೇರ್ಪಡಿಸಲ್ಪಡುವರು.
[ಅಧ್ಯಯನ ಪ್ರಶ್ನೆಗಳು]
a ವಾಚ್‌ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ 1983ರಲ್ಲಿ ಪ್ರಕಾಶಿತ.