ರಾಜ್ಯ ಘೋಷಕರು ವರದಿಮಾಡುತ್ತಾರೆ
ದೆವ್ವ ಪ್ರಭಾವದಿಂದ ಮುಕ್ತರಾಗುವುದು
ಪ್ರೇತವ್ಯವಹಾರವಾದದ ಆಚರಣೆಯು, ಕೋಟಿಗಟ್ಟಲೆ ಜನರ ಜೀವಿತಗಳ ಮೇಲೆ ದೀರ್ಘ ಕಾಲದಿಂದ ಅಧಿಕಾರ ನಡೆಸಿದೆ. ಆದರೆ ಅದರಿಂದ ಮುಕ್ತರಾಗಸಾಧ್ಯವಿದೆ! ಇದೇ ಸಂಗತಿಯು, ಪ್ರಾಚೀನ ನಗರವಾದ ಎಫೆಸದಲ್ಲಿದ್ದ ಅನೇಕರೊಂದಿಗೆ ಸಂಭವಿಸಿತು. ಬೈಬಲ್ ವೃತ್ತಾಂತಕ್ಕನುಸಾರ, “ಮಾಟ ಮಂತ್ರಗಳನ್ನು ನಡಿಸಿದವರಲ್ಲಿ ಅನೇಕರು ತಮ್ಮ ಪುಸ್ತಕಗಳನ್ನು ತಂದು ಕೂಡಿಸಿ ಎಲ್ಲರ ಮುಂದೆ ಸುಟ್ಟುಬಿಟ್ಟರು. . . . ಈ ರೀತಿಯಾಗಿ ಕರ್ತನ [“ಯೆಹೋವನ,” NW] ವಾಕ್ಯವು ಬಹಳವಾಗಿ ಹೆಚ್ಚುತ್ತಾ ಪ್ರಬಲವಾಯಿತು.”—ಅ. ಕೃತ್ಯಗಳು 19:19, 20.
ತದ್ರೀತಿಯಲ್ಲಿ ಇಂದು, ಕ್ರೈಸ್ತ ಸಭೆಯು ಬೆಳವಣಿಗೆಯನ್ನು ಅನುಭವಿಸುತ್ತಿದೆ. ಎಫೆಸದ ವಿಶ್ವಾಸಿಗಳ ಸಂಬಂಧದಲ್ಲಿ ಸತ್ಯವಾಗಿದ್ದಂತೆಯೇ, ಇಂದು ವಿಶ್ವಾಸಿಗಳಾಗುವವರಲ್ಲಿ ಈ ಹಿಂದೆ ಭೂತಶ್ರದ್ಧೆಯನ್ನು ಆಚರಿಸಿದವರೂ ಇದ್ದಾರೆ. ಸಿಂಬಾಬ್ವೆಯಿಂದ ಬಂದ ಈ ಮುಂದಿನ ಅನುಭವವು ಇದನ್ನು ದೃಷ್ಟಾಂತಿಸುತ್ತದೆ.
ಗಾಗಾ (ಅಜ್ಜಿ) ಮಟೂಪಾ, ತನ್ನ ಪ್ರೇತವ್ಯವಹಾರಾತ್ಮಕ ಶಕ್ತಿಗಳಿಗಾಗಿ ಸುಪ್ರಸಿದ್ಧಳಾಗಿದ್ದಳು. ತನ್ನ ಸಾಂಪ್ರದಾಯಿಕ ಔಷಧಿಯಿಂದ ಅವಳು ಅವರನ್ನು ಗುಣಪಡಿಸುವಂತೆ, ಸಾಂಬಿಯ, ಬೋಟ್ಸವಾನ, ಮತ್ತು ದಕ್ಷಿಣ ಆಫ್ರಿಕದಷ್ಟು ದೂರ ದೂರದ ದೇಶಗಳಿಂದ ಜನರು ಬಂದರು. ಒಬ್ಬ ನಾನ್ಗಾ ಇಲ್ಲವೆ ಮಂತ್ರವಾದಿಯಾಗುವುದು ಹೇಗೆಂದು ಸಹ ಗಾಗಾ ಮಟೂಪಾ ಇತರರಿಗೆ ಕಲಿಸಿದಳು. ಮತ್ತು ಕೆಲವೊಮ್ಮೆ ಅವಳು ಜನರ ಮೇಲೆ ಮಂತ್ರ ಹಾಕುತ್ತಿದ್ದಳು!
ಒಂದು ಆದಿತ್ಯವಾರ ಬೆಳಗ್ಗೆ, ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ತೊಡಗಿದ್ದ ಯೆಹೋವನ ಸಾಕ್ಷಿಗಳಿಂದ ಗಾಗಾ ಮಟೂಪಾ ಸಂದರ್ಶಿಸಲ್ಪಟ್ಟಳು. ನೀತಿಯ ಒಂದು ಹೊಸ ಲೋಕ—ಸಕಲ ದುಷ್ಟ ಪ್ರಭಾವಗಳಿಂದ ಮುಕ್ತವಾದ ಒಂದು ಲೋಕ—ದ ಕುರಿತಾದ ಬೈಬಲಿನ ವಾಗ್ದಾನದ ಬಗ್ಗೆ, ಅವರೊಂದಿಗೆ ನಡೆಸಿದ ಚರ್ಚೆಯಲ್ಲಿ ಅವಳು ಸಂಪೂರ್ಣವಾಗಿ ಆನಂದಿಸಿದಳು. ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವನ್ನು ಅವಳು ಸ್ವೀಕರಿಸಿ, ಗೃಹ ಬೈಬಲ್ ಅಧ್ಯಯನಕ್ಕಾಗಿ ಒಪ್ಪಿಕೊಂಡಳು.a ಕೇವಲ ಮೂರು ಅಧ್ಯಯನಗಳ ತರುವಾಯ, ಅವಳು ಕೂಟಗಳಿಗೆ ಹಾಜರಾಗತೊಡಗಿದಳು.
ಬೈಬಲಿನ ಅವಳ ಅಧ್ಯಯನದ ಮೂಲಕ, ತನ್ನ ವಿಶೇಷ ಶಕ್ತಿಗಳು ಯೆಹೋವನ ಪರಮಾಧಿಕಾರದ ವಿರುದ್ಧ ದಂಗೆಯೆದ್ದಿದ್ದ ದುಷ್ಟಾತ್ಮ ಜೀವಿಗಳಿಂದ ಬಂದವೆಂದು ಗಾಗಾ ಮಟೂಪಾ ತಿಳಿದುಕೊಂಡಳು. (2 ಪೇತ್ರ 2:4; ಯೂದ 6) ಮತ್ತು ಈ ದೆವ್ವಗಳು, ತಮ್ಮಿಂದ ಸಾಧ್ಯವಿರುವ ಪ್ರತಿಯೊಬ್ಬನನ್ನು ಯೆಹೋವನ ವಿರುದ್ಧ ಮತ್ತು ಸತ್ಯಾರಾಧನೆಯ ವಿರುದ್ಧವಾಗಿ ತಿರುಗಿಸಲು ದೃಢನಿರ್ಧಾರಮಾಡಿವೆ ಎಂಬುದನ್ನೂ ಅವಳು ತಿಳಿದುಕೊಂಡಳು. ಈ ದುಷ್ಟಾತ್ಮ ಜೀವಿಗಳನ್ನು ಮಂತ್ರಹಾಕಿ ಎಬ್ಬಿಸುವುದರ ಮೇಲೆ ಅವಳ ಜೀವನೋಪಾಯವು ಅವಲಂಬಿಸಿದ್ದ ಕಾರಣ, ಅವಳು ಮುಂದೆ ಏನು ಮಾಡುವಳು?
ಗಾಗಾ ಮಟೂಪಾ, ತನ್ನೆಲ್ಲ ತಾಯಿತಿಗಳು ಮತ್ತು ಪ್ರೇತವ್ಯವಹಾರಾತ್ಮಕ ಸಾಮಾನುಗಳನ್ನು ತೊರೆದುಬಿಡುವ ಬಯಕೆಯನ್ನು ವ್ಯಕ್ತಪಡಿಸಿದಳು. ಇದರಲ್ಲಿ ಅವಳ ವಿಶೇಷವಾದ ತಲೆಯುಡಿಗೆ ಮತ್ತು “ಮಾತನಾಡುವ ಗೂಳಿಯ ಕೊಂಬುಗಳು”—ಯಾವುವನ್ನು ಅವಳು ತನ್ನ ನಾನ್ಗಾ ವಾಸಿಮಾಡುವಿಕೆಗಳಲ್ಲಿ ಉಪಯೋಗಿಸಿದಳೊ, ಅವು—ಸೇರಿದ್ದವು. ಗಾಗಾ ಮಟೂಪಾ, ಏಕೈಕ ಸತ್ಯ ಹಾಗೂ ಜೀವಂತ ದೇವರಾದ ಯೆಹೋವನನ್ನು ಸೇವಿಸಸಾಧ್ಯವಾಗುವಂತೆ, ಇಂತಹ ವಸ್ತುಗಳನ್ನೆಲ್ಲ ತೊರೆದುಬಿಡಲು ಬಯಸಿದಳು.
ಅವಳ ಸಂಬಂಧಿಕರಲ್ಲಿ ಕೆಲವರಾದರೊ ಇದಕ್ಕೆ ಆಕ್ಷೇಪಿಸಿದರು, ಏಕೆಂದರೆ ಅವಳು ಅವರಿಗೆ ಆರ್ಥಿಕ ಬೆಂಬಲ ನೀಡಿದಳು. ಆ ವಸ್ತುಗಳನ್ನು, ಅವಳ ಅಲೌಕಿಕ ಶಕ್ತಿಗಳೊಂದಿಗೆ—ಸತತವಾದ ಲಾಭವನ್ನು ಅವರು ಗಳಿಸಸಾಧ್ಯವಾಗುವಂತೆ—ಅವರಿಗೆ ವರ್ಗಾಯಿಸುವಂತೆ ಅವರು ಅವಳಲ್ಲಿ ಬೇಡಿಕೊಂಡರು. ಗಾಗಾ ಮಟೂಪಾ ನಿರಾಕರಿಸಿದಳು.
ಯೆಹೋವನ ಸಾಕ್ಷಿಗಳ ಸ್ಥಳಿಕ ಸಭೆಯ ಸಹಾಯದಿಂದ, ಮೂರು ದೊಡ್ಡ ಚೀಲಗಳಷ್ಟು ಪ್ರೇತವ್ಯವಹಾರಾತ್ಮಕ ಸಾಮಾನುಗಳನ್ನು ಅವಳು ಶೇಖರಿಸಿ, ಎಲ್ಲವನ್ನು ಸುಟ್ಟುಬಿಟ್ಟಳು. ದೆವ್ವ ಆರಾಧನೆಯ ಸಲಕರಣೆಗಳನ್ನು ಜ್ವಾಲೆಗಳು ಆವರಿಸಿದಂತೆ, ಗಾಗಾ ಮಟೂಪಾ ಉದ್ಗರಿಸಿದ್ದು: “ನೋಡಿ! ಆ ಕೊಂಬಿಗೆ ತನ್ನನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವಿಲ್ಲ.”
ಸಕಾಲದಲ್ಲಿ, ಗಾಗಾ ಮಟೂಪಾ ಯೆಹೋವನಿಗೆ ತಾನು ಮಾಡಿದ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಹರ್ಷಭರಿತಳಾಗಿ ಸಂಕೇತಿಸಿಕೊಂಡಳು. ತನ್ನ ಜೀವನೋಪಾಯವನ್ನು ಈಗ ಅವಳು ಹೇಗೆ ನಡೆಸುತ್ತಾಳೆ? ತರಕಾರಿಗಳನ್ನು ಮಾರುವ ಮೂಲಕ. ಹೌದು, ದೇವರ ವಾಕ್ಯದ ಶಕ್ತಿಯಿಂದ, ಒಬ್ಬನು ದೆವ್ವ ಆರಾಧನೆಯಿಂದ ಮುಕ್ತನಾಗಬಲ್ಲನು. “ಇಷ್ಟೊಂದು ಸ್ವತಂತ್ರಳಾಗಿರುವ ಅನಿಸಿಕೆ ನನಗೆ ಹಿಂದೆಂದೂ ಆಗಿರಲಿಲ್ಲ” ಎಂಬುದಾಗಿ ಗಾಗಾ ಮಟೂಪಾ ಹೇಳುತ್ತಾಳೆ.
[ಪಾದಟಿಪ್ಪಣಿ]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.