ಮನಸ್ಸಾಕ್ಷಿ ಒಂದು ಹೊರೆಯೊ ಇಲ್ಲವೆ ಆಸ್ತಿಯೊ?
‘ನನ್ನ ಮನಸ್ಸಾಕ್ಷಿಯು ನನ್ನನ್ನು ಪೀಡಿಸುತ್ತಾ ಇದೆ!’ ಆಗಾಗ್ಗೆ, ಕಾರ್ಯತಃ ನಮ್ಮಲ್ಲಿ ಎಲ್ಲರೂ ಮನಸ್ಸಾಕ್ಷಿಯ ಚುಚ್ಚುನೋವುಗಳನ್ನು ಅನುಭವಿಸುತ್ತೇವೆ. ಅಂತಹ ಅನಿಸಿಕೆಗಳು, ಬರಿಯ ಮಾನಸಿಕ ಅಹಿತದಿಂದ ಹಿಡಿದು, ತೀವ್ರಯಾತನೆಯ ಕಷ್ಟಾನುಭವದ ವರೆಗೆ ವ್ಯಾಪಿಸಬಹುದು. ಪಾಪಪ್ರಜ್ಞೆಯುಳ್ಳ ಮನಸ್ಸಾಕ್ಷಿಯು, ಖಿನ್ನತೆಯನ್ನು ಇಲ್ಲವೆ ಅಗಾಧವಾದ ವೈಫಲ್ಯದ ಪ್ರಜ್ಞೆಯನ್ನು ಕೂಡ ಉಂಟುಮಾಡಬಲ್ಲದು.
ಹಾಗಾದರೆ, ಈ ಯಥಾದೃಷ್ಟಿಯಿಂದ ವೀಕ್ಷಿಸಲ್ಪಟ್ಟಾಗ, ಮನಸ್ಸಾಕ್ಷಿಯು ಒಂದು ಹೊರೆಯಾಗಿರುವುದಿಲ್ಲವೊ? ಅದೊಂದು ಹೊರೆಯಾಗಿದೆ ಎಂದು ಕೆಲವರಿಗೆ ಅನಿಸಬಹುದು. ಐತಿಹಾಸಿಕವಾಗಿ ಹೆಚ್ಚಿನ ಸಂಸ್ಕೃತಿಗಳು, ಅನೇಕ ವೇಳೆ ಮನಸ್ಸಾಕ್ಷಿಯನ್ನು ಒಂದು ಸ್ವಭಾವಸಿದ್ಧ, ಪ್ರಕೃತಿಜನ್ಯ ಸಾಮರ್ಥ್ಯವಾಗಿ ಪರಿಗಣಿಸಿದವು. ಅದು ದೇವರಿಂದಲೇ ನೇರವಾಗಿ ಕೊಡಲ್ಪಟ್ಟ ಒಂದು ನೈತಿಕ ಮಾರ್ಗದರ್ಶಿಯಾಗಿತ್ತೆಂದು ಅನೇಕರು ನೆನಸಿದರು. ಆದುದರಿಂದ ಮನಸ್ಸಾಕ್ಷಿಯು, “ಮನುಷ್ಯನಲ್ಲಿ ದೇವರ ಇರುವು,” “ನಮ್ಮ ಮೂಲಭೂತ ಸ್ವಭಾವ,” ಮತ್ತು “ದೈವವಾಣಿ”ಯೆಂದು ಸಹ ಕರೆಯಲ್ಪಟ್ಟಿದೆ.
ಆದರೆ, ಇತ್ತೀಚಿನ ವರ್ಷಗಳಲ್ಲಿ, ಮನಸ್ಸಾಕ್ಷಿಯು ಬಹುಮಟ್ಟಿಗೆ ಒಂದು ಅರ್ಜಿತ ಸಾಮರ್ಥ್ಯ—ಹೆತ್ತವರ ಹಾಗೂ ಸಾಮಾಜಿಕ ಪ್ರಭಾವದ ಒಂದು ಫಲಿತಾಂಶ—ವಾಗಿದೆ ಎಂದು ಪ್ರತಿಪಾದಿಸುವುದು ಜನಪ್ರಿಯವಾಗಿ ಪರಿಣಮಿಸಿದೆ. ಉದಾಹರಣೆಗೆ, ಒಂದು ಮಗುವು ಅನಪೇಕ್ಷಿತ ವರ್ತನೆಯಿಂದ ದೂರವಿರಲು ಕಲಿತುಕೊಳ್ಳುವುದು ಮುಖ್ಯವಾಗಿ ಶಿಕ್ಷೆಯ ಭಯದಿಂದ ಎಂಬುದಾಗಿ ಮನಶ್ಶಾಸ್ತ್ರಜ್ಞರು ವಾದಿಸುತ್ತಾರೆ. ಹೀಗೆ, ಮನಸ್ಸಾಕ್ಷಿ ಎಂಬುದಾಗಿ ನಾವು ಕರೆಯುವಂತಹದ್ದು, ನಮ್ಮ ಹೆತ್ತವರ ವೈಯಕ್ತಿಕ ಮೌಲ್ಯಗಳು ಮತ್ತು ನಂಬಿಕೆಗಳ ಹೀರಿಕೊಳ್ಳುವಿಕೆಯಾಗಿದೆ ಎಂದು ಅವರು ನಂಬುತ್ತಾರೆ. ಇತರರು, ಮೌಲ್ಯಗಳನ್ನು ಮತ್ತು ಮಟ್ಟಗಳನ್ನು ರವಾನಿಸುವುದರಲ್ಲಿ ಸಾಮಾನ್ಯವಾಗಿ ಸಮಾಜವು ವಹಿಸುವ ಪಾತ್ರಕ್ಕೆ ಸೂಚಿಸುತ್ತಾರೆ. ಕೆಲವರು ಮನಸ್ಸಾಕ್ಷಿಯ ಚುಚ್ಚುನೋವನ್ನು, ನಾವು ಮಾಡಬಯಸುವ ಮತ್ತು ನಾವು ಮಾಡಲೇಬೇಕೆಂದು ಒತ್ತಾಯಪಡಿಸುವ ಒಂದು ದುರ್ಭರ ಸಮಾಜದ ನಡುವಿನ ಘರ್ಷಣೆಯಾಗಿ ವೀಕ್ಷಿಸುತ್ತಾರೆ!
ಮನಸ್ಸಾಕ್ಷಿಯ ಕುರಿತಾದ ಸಿದ್ಧಾಂತಗಳ ಎದುರಿನಲ್ಲೂ, ಮತ್ತೆ ಮತ್ತೆ ಜನರು, ಹೆತ್ತವರು, ಕುಟುಂಬಗಳು, ಮತ್ತು ಇಡೀ ಸಮುದಾಯಗಳನ್ನು—ಹಾಗೆ ಮಾಡುವಂತೆ ಅವರ ಮನಸ್ಸಾಕ್ಷಿಯು ಅವರಿಗೆ ಹೇಳಿದ ಕಾರಣ—ಎದುರಿಸಿದ್ದಾರೆ. ಕೆಲವರು ಮನಸ್ಸಾಕ್ಷಿಗೋಸ್ಕರ ತಮ್ಮ ಜೀವವನ್ನು ಕೂಡ ಬಲಿಯರ್ಪಿಸಲು ಸಿದ್ಧರಾಗಿದ್ದಾರೆ! ಮತ್ತು ಲೋಕದ ಸಂಸ್ಕೃತಿಗಳ ಮಧ್ಯೆಯಿರುವ ಅಗಾಧವಾದ ಭಿನ್ನತೆಗಳ ಎದುರಿನಲ್ಲೂ, ಕೊಲೆ, ಕಳ್ಳತನ, ವ್ಯಭಿಚಾರ, ಸುಳ್ಳಾಡುವಿಕೆ, ಮತ್ತು ಅಗಮ್ಯಗಮನದಂತಹ ಕೃತ್ಯಗಳು, ಬಹುಮಟ್ಟಿಗೆ ವಿಶ್ವವ್ಯಾಪಕವಾಗಿ ತಪ್ಪೆಂದು ವೀಕ್ಷಿಸಲ್ಪಡುತ್ತವೆ. ಇದು, ಮನಸ್ಸಾಕ್ಷಿಯು ಸ್ವಭಾವಸಿದ್ಧವಾದದ್ದು, ಪ್ರಕೃತಿಜನ್ಯವಾದದ್ದೆಂಬುದನ್ನು ಸುವ್ಯಕ್ತಗೊಳಿಸಲಾರದೊ?
ಮನಸ್ಸಾಕ್ಷಿ—ಬೈಬಲಿನ ನೋಟ
ಈ ವಿಷಯದ ಬಗ್ಗೆ ನಿಜವಾದ ಅಧಿಕಾರವನ್ನು ಪಡೆದಿರುವವನು ಯೆಹೋವ ದೇವರಾಗಿದ್ದಾನೆ. ಎಷ್ಟೆಂದರೂ, “ನಮ್ಮನ್ನು ಉಂಟುಮಾಡಿದವನು ಆತನೇ [ದೇವರೇ].” (ಕೀರ್ತನೆ 100:3) ಆತನು ನಮ್ಮ ರಚನೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾನೆ. ಮನುಷ್ಯನು, ದೇವರ “ಸ್ವರೂಪ”ದಲ್ಲಿ ನಿರ್ಮಿಸಲ್ಪಟ್ಟನೆಂದು ದೇವರ ವಾಕ್ಯವಾದ ಬೈಬಲು ವಿವರಿಸುತ್ತದೆ. (ಆದಿಕಾಂಡ 1:26) ಮನುಷ್ಯನು ಸರಿತಪ್ಪುಗಳ ಪ್ರಜ್ಞೆಯೊಂದಿಗೆ ಸೃಷ್ಟಿಸಲ್ಪಟ್ಟನು; ಆದಿಯಿಂದಲೇ ಮನಸ್ಸಾಕ್ಷಿಯು, ಮನುಷ್ಯನ ಸ್ವಭಾವದ ಒಂದು ಅಂತರ್ಗತ ಭಾಗವಾಗಿತ್ತು.—ಆದಿಕಾಂಡ 2:16, 17ನ್ನು ಹೋಲಿಸಿರಿ.
ಅಪೊಸ್ತಲ ಪೌಲನು, ರೋಮಾಪುರದವರಿಗೆ ಬರೆದ ತನ್ನ ಪತ್ರದಲ್ಲಿ ಇದನ್ನು ದೃಢಪಡಿಸುತ್ತಾನೆ. ಅವನು ಬರೆದುದು: “[ದೇವರ] ಧರ್ಮಶಾಸ್ತ್ರವಿಲ್ಲದ ಅನ್ಯಜನರು ಸ್ವಾಭಾವಿಕವಾಗಿ ಧರ್ಮಶಾಸ್ತ್ರದಲ್ಲಿ ಹೇಳಿದಂತೆ ನಡೆದರೆ ಅವರು ಧರ್ಮಶಾಸ್ತ್ರವಿಲ್ಲದವರಾಗಿದ್ದರೂ ತಾವೇ ತಮಗೆ ಧರ್ಮಪ್ರಮಾಣವಾಗಿದ್ದಾರೆ; ಹೇಗಂದರೆ ಅವರು ಧರ್ಮಶಾಸ್ತ್ರದ ಮುಖ್ಯ ತಾತ್ಪರ್ಯ ತಮ್ಮ ಹೃದಯದಲ್ಲಿ ಬರೆದದೆ ಎಂಬದನ್ನು ತೋರ್ಪಡಿಸುತ್ತಾರೆ. ಇದಕ್ಕೆ ಅವರ ಮನಸ್ಸು ಸಹ ಸಾಕ್ಷಿ ನುಡಿಯುತ್ತದೆ; ಅವರ ಯೋಚನೆಗಳು ವಾದಿಪ್ರತಿವಾದಿಗಳಂತೆ—ಇದು ತಪ್ಪೆಂದು ತಪ್ಪಲ್ಲವೆಂದು ಸೂಚಿಸುತ್ತವೆ.” (ರೋಮಾಪುರ 2:14, 15) ಯೆಹೂದ್ಯರಿಗೆ ಕೊಡಲ್ಪಟ್ಟ ದೈವಿಕ ಧರ್ಮಶಾಸ್ತ್ರಕ್ಕನುಸಾರ ಬೆಳೆಸಲ್ಪಡದಿದ್ದ ಅನೇಕರು, ದೇವರ ಧರ್ಮಶಾಸ್ತ್ರದ ಮೂಲತತ್ವಗಳಲ್ಲಿ ಕೆಲವನ್ನು ಇನ್ನೂ ಅನುಸರಿಸಿದರು—ಸಾಮಾಜಿಕ ಒತ್ತಡದಿಂದಲ್ಲ, “ಸ್ವಾಭಾವಿಕವಾಗಿ”—ಎಂಬುದನ್ನು ಗಮನಿಸಿರಿ!
ಹಾಗಾದರೆ, ಒಂದು ಹೊರೆಯಾಗಿರುವುದಕ್ಕೆ ತೀರ ವ್ಯತಿರಿಕ್ತವಾಗಿ, ಮನಸ್ಸಾಕ್ಷಿಯು ಒಂದು ದೈವಿಕ ಕೊಡುಗೆ, ಒಂದು ಆಸ್ತಿಯಾಗಿದೆ. ಅದು ನಮಗೆ ಸಂಕಟವನ್ನು ಉಂಟುಮಾಡಬಲ್ಲದು ನಿಜ. ಆದರೆ ಯೋಗ್ಯವಾಗಿ ಅದಕ್ಕೆ ಕಿವಿಗೊಡುವಾಗ, ಅದು ಆಳವಾದ ತೃಪ್ತಿ ಮತ್ತು ಆಂತರಿಕ ಶಾಂತಿಯ ಅನಿಸಿಕೆಗಳಿಂದಲೂ ನಮಗೆ ಪ್ರತಿಫಲ ನೀಡಬಲ್ಲದು. ಅದು ನಮ್ಮನ್ನು ಮಾರ್ಗದರ್ಶಿಸಿ, ಸಂರಕ್ಷಿಸಿ, ಪ್ರಚೋದಿಸಬಲ್ಲದು. ದಿ ಇಂಟರ್ಪ್ರೆಟರ್ಸ್ ಬೈಬಲ್ ಹೇಳಿಕೆ ನೀಡುವುದು: “ವ್ಯಕ್ತಿಯೊಬ್ಬನು, ತಾನು ಮಾಡುವ ಮತ್ತು ಮಾಡಬೇಕೆಂದು ಭಾವಿಸಿಕೊಳ್ಳುವುದರ ನಡುವಿನ ಅಂತರವನ್ನು ಮುಚ್ಚಲು ಪ್ರಯತ್ನಿಸುವಾಗ ಮಾತ್ರ, ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯವನ್ನು ಸಂರಕ್ಷಿಸಿಕೊಳ್ಳಸಾಧ್ಯವಿದೆ.” ಒಬ್ಬನು ಆ ಅಂತರವನ್ನು ಹೇಗೆ ಮುಚ್ಚಬಲ್ಲನು? ನಮ್ಮ ಮನಸ್ಸಾಕ್ಷಿಯನ್ನು ರೂಪಿಸಿ, ತರಬೇತುಗೊಳಿಸುವುದು ಸಾಧ್ಯವೊ? ಈ ಪ್ರಶ್ನೆಗಳು, ಮುಂದಿನ ಲೇಖನದಲ್ಲಿ ಪರಿಗಣಿಸಲ್ಪಡುವವು.