ನಿಮ್ಮ ಮನಸ್ಸಾಕ್ಷಿಯನ್ನು ತರಬೇತುಗೊಳಿಸುವ ವಿಧ
“ಶುದ್ಧವಾದ ಮನಸ್ಸಾಕ್ಷಿಯು, ಅತ್ಯುತ್ತಮವಾದ ತಲೆದಿಂಬಾಗಿದೆ.” ಈ ಹಳೆಯ ನಾಣ್ಣುಡಿಯು ಒಂದು ಮಹತ್ವದ ನಿಜತ್ವವನ್ನು ಎತ್ತಿತೋರಿಸುತ್ತದೆ: ನಮ್ಮ ಮನಸ್ಸಾಕ್ಷಿಗೆ ನಾವು ಕಿವಿಗೊಡುವಾಗ, ನಾವು ಆಂತರಿಕ ಶಾಂತಿ ಮತ್ತು ಸಾಮರಸ್ಯವನ್ನು ಅನುಭವಿಸುತ್ತೇವೆ.
ಆದರೆ, ಎಲ್ಲರೂ ಹಾಗೆ ಮಾಡಲು ಆರಿಸಿಕೊಳ್ಳುವುದಿಲ್ಲ. ಆ್ಯಡಾಲ್ಫ್ ಹಿಟ್ಲರ್, ಮನಸ್ಸಾಕ್ಷಿ ಎಂಬುದಾಗಿ ವಿದಿತವಾಗಿರುವ, ಕೆಳಮಟ್ಟದ ಭ್ರಾಂತಿ, ಇಲ್ಲವೆ ಭ್ರಮೆಯಿಂದ ಮನುಷ್ಯನನ್ನು ವಿಮೋಚಿಸುವ ಆಯೋಗವನ್ನು ಸ್ವತಃ ಅಂಗೀಕರಿಸಿದನು. ಅವನ ಭೀತಿಯ ಆಳಿಕೆಯು, ಮನುಷ್ಯರು ತಮ್ಮ ಮನಸ್ಸಾಕ್ಷಿಯನ್ನು ತ್ಯಜಿಸುವಾಗ, ಎಷ್ಟು ಕ್ರೂರಿಗಳಾಗಸಾಧ್ಯವಿದೆ ಎಂಬುದರ ಒಂದು ಮರಗಟ್ಟಿಸುವ ನಸುನೋಟವನ್ನು ಒದಗಿಸುತ್ತದೆ. ಇಂದಿನ ಅನೇಕ ಹಿಂಸಾತ್ಮಕ ಅಪರಾಧಿಗಳು—ಮರುಕವಿಲ್ಲದೆ ಬಲಾತ್ಕಾರ ಸಂಭೋಗ ಮತ್ತು ಕೊಲೆ ಮಾಡುವವರು—ಏಕಪ್ರಕಾರವಾಗಿ ನಿಷ್ಠುರರಾಗಿದ್ದಾರೆ. ಈ ಅಪರಾಧಿಗಳಲ್ಲಿ ಹೆಚ್ಚಿನವರು ಬಹಳ ಎಳೆಯರಾಗಿದ್ದಾರೆ. ಆದುದರಿಂದಲೇ, ಈ ಸಂಗತಿಯನ್ನು ಅಧ್ಯಯನಿಸುತ್ತಿರುವ ಒಂದು ಪುಸ್ತಕವು, ಮನಸ್ಸಾಕ್ಷಿಯಿಲ್ಲದ ಮಕ್ಕಳು (ಇಂಗ್ಲಿಷ್) ಎಂಬ ಉಪಶಿರೋನಾಮವನ್ನು ಹೊಂದಿತ್ತು.
ಅಧಿಕಾಂಶ ಜನರು ಒಂದು ಹಿಂಸಾತ್ಮಕ ಅಪರಾಧವನ್ನು ಗೈಯುವುದರ ಬಗ್ಗೆ ಎಂದಿಗೂ ಯೋಚಿಸಲಾರರಾದರೂ, ಅನೇಕರಿಗೆ ಲೈಂಗಿಕ ಅನೈತಿಕತೆಯಲ್ಲಿ ತೊಡಗುವುದು, ಸುಳ್ಳಾಡುವುದು, ಇಲ್ಲವೆ ಮೋಸಮಾಡುವುದರ ಬಗ್ಗೆ ಯಾವುದೇ ಅಳುಕು ಇರುವುದಿಲ್ಲ. ನೈತಿಕ ಮಟ್ಟಗಳು ಲೋಕವ್ಯಾಪಕವಾಗಿ ಕ್ಷೀಣಿಸುತ್ತಾ ಇವೆ. ಸತ್ಯ ಆರಾಧನೆಯಲ್ಲಾಗಲಿದ್ದ ಮಹಾ ಧರ್ಮಭ್ರಷ್ಟತೆಯನ್ನು ಸೂಚಿಸುತ್ತಾ, ಕೆಲವು ಕ್ರೈಸ್ತರು ಲೋಕದ ಪ್ರಭಾವಕ್ಕೆ ಒಳಗಾಗಿ, ಹೀಗೆ “ಸ್ವಂತ ಮನಸ್ಸಿನಲ್ಲಿ ಅಪರಾಧಿಗಳೆಂಬ ಬರೆಯುಳ್ಳವ”ರಾಗುವರೆಂದು ಅಪೊಸ್ತಲ ಪೌಲನು ಬರೆದನು. (1 ತಿಮೊಥೆಯ 4:2) ಭ್ರಷ್ಟತೆಯ ಬೆದರಿಕೆಯು ಇಂದು, ಈ “ಕಡೇ ದಿವಸಗಳಲ್ಲಿ” ಇನ್ನೂ ಮಹತ್ತರವಾಗಿದೆ. (2 ತಿಮೊಥೆಯ 3:1) ಆದುದರಿಂದ ತಮ್ಮ ಮನಸ್ಸಾಕ್ಷಿಯನ್ನು ಸಂರಕ್ಷಿಸಲು ಕ್ರೈಸ್ತರು ಹೆಣಗಾಡಬೇಕು. ಅದನ್ನು ತರಬೇತುಗೊಳಿಸುವ ಹಾಗೂ ವಿಕಸಿಸಿಕೊಳ್ಳುವ ಮೂಲಕ ನಾವು ಇದನ್ನು ಮಾಡಬಲ್ಲೆವು.
ಮನಸ್ಸು, ಹೃದಯ, ಮತ್ತು ನಿಮ್ಮ ಮನಸ್ಸಾಕ್ಷಿ
ಅಪೊಸ್ತಲ ಪೌಲನು ಹೇಳಿದ್ದು: “ಈ ಮಾತನ್ನು ಸುಳ್ಳಾಡದೆ ಕ್ರಿಸ್ತನ ಮುಂದೆ ಸತ್ಯವಾಗಿ ಹೇಳುತ್ತೇನೆ; ಪವಿತ್ರಾತ್ಮಾಧೀನವಾಗಿರುವ ನನ್ನ ಮನಸ್ಸೇ ಸಾಕ್ಷಿ.” (ರೋಮಾಪುರ 9:1) ಆದುದರಿಂದ ಮನಸ್ಸಾಕ್ಷಿಯು ಸಾಕ್ಷಿನೀಡಬಲ್ಲದು. ಅದು ನಡತೆಯ ರೀತಿಯನ್ನು ಪರಿಶೀಲಿಸಿ, ಅದನ್ನು ಒಪ್ಪಬಲ್ಲದು ಇಲ್ಲವೆ ಖಂಡಿಸಬಲ್ಲದು. ಸರಿ ಹಾಗೂ ತಪ್ಪಿನ ವಿಷಯದಲ್ಲಿರುವ ನಮ್ಮ ಪ್ರಜ್ಞೆಯಲ್ಲಿ ಹೆಚ್ಚಿನದ್ದು, ನಮ್ಮ ಸೃಷ್ಟಿಕರ್ತನಿಂದ ನಮ್ಮಲ್ಲಿ ಇರಿಸಲ್ಪಟ್ಟಿದೆ. ಆದರೂ, ನಮ್ಮ ಮನಸ್ಸಾಕ್ಷಿಯನ್ನು ರೂಪಿಸಿ, ತರಬೇತುಗೊಳಿಸಸಾಧ್ಯವಿದೆ. ಹೇಗೆ? ದೇವರ ವಾಕ್ಯದಿಂದ ನಿಷ್ಕೃಷ್ಟ ಜ್ಞಾನವನ್ನು ನಾವು ಪಡೆದುಕೊಳ್ಳುವ ಮೂಲಕವೇ. “ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ” ಎಂದು ಅಪೊಸ್ತಲ ಪೌಲನು ಹೇಳುತ್ತಾನೆ. (ರೋಮಾಪುರ 12:2) ನಿಮ್ಮ ಮನಸ್ಸಿನಲ್ಲಿ ನೀವು ದೇವರ ಆಲೋಚನೆಗಳನ್ನು ಮತ್ತು ಚಿತ್ತವನ್ನು ನೆಲೆಗೊಳಿಸಿದಂತೆ, ನಿಮ್ಮ ಮನಸ್ಸಾಕ್ಷಿಯು ಹೆಚ್ಚು ದೈವಿಕವಾದ ವಿಧದಲ್ಲಿ ಕಾರ್ಯನಡಿಸಲು ಆರಂಭಿಸುತ್ತದೆ.
ಯೆಹೋವನ ಸಾಕ್ಷಿಗಳು ಲೋಕದ ಸುತ್ತಲೂ ಲಕ್ಷಾಂತರ ಜನರಿಗೆ, ‘ಯೆಹೋವ ದೇವರು ಮತ್ತು ಯೇಸು ಕ್ರಿಸ್ತನ ಕುರಿತಾದ ಜ್ಞಾನವನ್ನು ಪಡೆದುಕೊಳ್ಳಲು’ ಸಹಾಯ ಮಾಡಿದ್ದಾರೆ. (ಯೋಹಾನ 17:3) ತಮ್ಮ ಉಚಿತ ಮನೆ ಬೈಬಲ್ ಅಧ್ಯಯನದ ಏರ್ಪಾಡಿನ ಮೂಲಕ, ಲೈಂಗಿಕತೆ, ಮದ್ಯಪಾನೀಯಗಳು, ವಿವಾಹ, ವ್ಯಾಪಾರ ವ್ಯವಹಾರಗಳು, ಮತ್ತು ಅನೇಕ ಇತರ ವಿಷಯಗಳ ಕುರಿತಾದ ಯೆಹೋವ ದೇವರ ಮಟ್ಟಗಳನ್ನು ಅವರು ಪ್ರಾಮಾಣಿಕ ಹೃದಯದ ಜನರಿಗೆ ಕಲಿಸುತ್ತಾರೆ.a (ಜ್ಞಾನೋಕ್ತಿ 11:1; ಮಾರ್ಕ 10:6-12; 1 ಕೊರಿಂಥ 6:9, 10; ಎಫೆಸ 5:28-33) ಈ ‘ನಿಷ್ಕೃಷ್ಟ ಜ್ಞಾನವನ್ನು’ ಪಡೆದುಕೊಳ್ಳುವುದು, ಒಂದು ದೈವಿಕ ಮನಸ್ಸಾಕ್ಷಿಯನ್ನು ವಿಕಸಿಸಿಕೊಳ್ಳುವುದರಲ್ಲಿ ಒಂದು ಪ್ರಾಮುಖ್ಯ ಹೆಜ್ಜೆಯಾಗಿದೆ. (ಫಿಲಿಪ್ಪಿ 1:9) ಕ್ರೈಸ್ತನೊಬ್ಬನು ಬೈಬಲಿನ ಪ್ರೌಢ ತಿಳಿವಳಿಕೆಯನ್ನು ಪಡೆದ ಮೇಲೂ, ಅವನ ಮನಸ್ಸಾಕ್ಷಿಯು ಸ್ವಸ್ಥವಾಗಿ ಉಳಿಯಬೇಕಾದರೆ, ಅವನು ಕ್ರಮವಾಗಿ ತನ್ನ ಮನಸ್ಸನ್ನು ದೇವರ ವಾಕ್ಯದಿಂದ ಪೋಷಿಸಿಕೊಳ್ಳುವುದನ್ನು ಮುಂದುವರಿಸಬೇಕೆಂಬುದು ನಿಶ್ಚಯ.—ಕೀರ್ತನೆ 1:1-3.
ಬೈಬಲು ಮನಸ್ಸಾಕ್ಷಿಯನ್ನು, ನಮ್ಮ ಅನಿಸಿಕೆಗಳು ಮತ್ತು ಭಾವನೆಗಳನ್ನು ಒಳಗೊಳ್ಳುವ ಸಾಂಕೇತಿಕ ಹೃದಯದೊಂದಿಗೂ ಸಂಬಂಧಿಸುತ್ತದೆ. (ರೋಮಾಪುರ 2:15) ಮನಸ್ಸಾಕ್ಷಿಯು ಸರಿಯಾಗಿ ಕಾರ್ಯನಡಿಸಬೇಕಾದರೆ, ಮನಸ್ಸು ಮತ್ತು ಹೃದಯವು ಒಟ್ಟಿಗೆ ಸುಸಂಗತವಾಗಿ ಕೆಲಸಮಾಡಬೇಕು. ಅದರ ಅರ್ಥ, ನಿಮ್ಮ ಮನಸ್ಸಿನೊಳಗೆ ಮಾಹಿತಿಯನ್ನು ತುಂಬಿಸುವುದಕ್ಕಿಂತ ಹೆಚ್ಚಿನದ್ದನ್ನು ಮಾಡುವುದಾಗಿದೆ. ನಿಮ್ಮ ಹೃದಯವನ್ನೂ—ನಿಮ್ಮ ಆಂತರಿಕ ಅನಿಸಿಕೆಗಳು, ಅಭಿಲಾಷೆಗಳು, ಮತ್ತು ಬಯಕೆಗಳು—ನೀವು ರೂಪಿಸಬೇಕು. ಹೀಗಿರುವುದರಿಂದ, ಜ್ಞಾನೋಕ್ತಿಗಳ ಪುಸ್ತಕವು, “ಹೃದಯವನ್ನು . . . ತಿರುಗಿಸು,” “ಮನಸ್ಸಿಡು,” ಮತ್ತು “ಮನಸ್ಸನ್ನು . . . ನಡೆಯಿಸು” ಎಂಬಂತಹ ಅಭಿವ್ಯಕ್ತಿಗಳನ್ನು ಉಪಯೋಗಿಸುತ್ತದೆ. (ಜ್ಞಾನೋಕ್ತಿ 2:2; 23:19; 27:23) ನಿಮ್ಮ ಹೃದಯವನ್ನು ರೂಪಿಸುವ ಒಂದು ವಿಧವು, ಶಾಸ್ತ್ರವಚನಗಳ ಮನನಮಾಡುವಿಕೆ ಮತ್ತು ಪುನರಾಲೋಚನೆಯ ಮೂಲಕವೇ. “ನಿನ್ನ ಕಾರ್ಯಗಳನ್ನೆಲ್ಲಾ ಧ್ಯಾನಿಸು [“ಮನನಮಾಡು,” NW]ವೆನು; ನಿನ್ನ ಪ್ರವರ್ತನೆಗಳನ್ನು ಸ್ಮರಿಸುವೆನು,” ಎಂಬುದಾಗಿ ಕೀರ್ತನೆ 77:12 ಹೇಳುತ್ತದೆ. ಮನನಮಾಡುವುದು, ನಮ್ಮ ಅತ್ಯಂತ ಆಂತರಿಕ ಅನಿಸಿಕೆಗಳನ್ನು ಮತ್ತು ಉದ್ದೇಶಗಳನ್ನು ತಲಪುವಂತೆ ನಮಗೆ ಸಹಾಯ ಮಾಡುತ್ತದೆ.
ದೃಷ್ಟಾಂತಕ್ಕೆ, ಹೊಗೆಸೊಪ್ಪಿನ ಗೀಳಿನಂತಹ ಒಂದು ಅಶುದ್ಧ ಚಟ ನಿಮಗಿದೆ ಎಂದು ಭಾವಿಸಿಕೊಳ್ಳಿ. ಹೆಚ್ಚಿನ ಜನರಂತೆ, ಆರೋಗ್ಯಕ್ಕೆ ಅದರಿಂದಾಗುವ ಗಂಡಾಂತರಗಳ ಒಳ್ಳೆಯ ಅರಿವು ನಿಮಗೆ ನಿಸ್ಸಂದೇಹವಾಗಿಯೂ ಇದೆ. ಆದರೂ, ಮಿತ್ರರ ಹಾಗೂ ಕುಟುಂಬದವರ ಪ್ರೇರೇಪಣೆಗಳ ಎದುರಿನಲ್ಲೂ, ಅದನ್ನು ಬಿಟ್ಟುಬಿಡುವುದು ಕಷ್ಟಕರವೆಂದು ನೀವು ಕಂಡುಕೊಂಡಿದ್ದೀರಿ. ಈ ಸಂಬಂಧದಲ್ಲಿ ಬೈಬಲಿನ ಸಂದೇಶದ ಕುರಿತು ಮನನಮಾಡುವುದು ನಿಮ್ಮ ಮನಸ್ಸಾಕ್ಷಿಯನ್ನು ಹೇಗೆ ಬಲಪಡಿಸಸಾಧ್ಯವಿದೆ?
ಒಂದು ಉದಾಹರಣೆಯೋಪಾದಿ, 2 ಕೊರಿಂಥ 7:1ರಲ್ಲಿ ಕಂಡುಕೊಳ್ಳಲ್ಪಡುವ ಅಪೊಸ್ತಲ ಪೌಲನ ಮಾತುಗಳ ಕುರಿತು ಮನನಮಾಡಲು ಪ್ರಯತ್ನಿಸಿರಿ: “ಪ್ರಿಯರೇ, ಈ ವಾಗ್ದಾನಗಳು ನಮಗಿರುವದರಿಂದ ನಾವು ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತ್ವವನ್ನು ಸಿದ್ಧಿಗೆ ತರುವದಕ್ಕೆ ಪ್ರಯತ್ನಿಸೋಣ.” ಈ ಮಾತುಗಳ ಅರ್ಥವನ್ನು ಗ್ರಹಿಸಿಕೊಳ್ಳಿರಿ. ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ, ‘ಪೌಲನು ಸೂಚಿಸುವ “ಈ ವಾಗ್ದಾನ”ಗಳಾದರೂ ಏನಾಗಿವೆ?’ ಪೂರ್ವಾಪರ ಸಂದರ್ಭವನ್ನು ಓದುವ ಮೂಲಕ, ಮುಂಚಿನ ವಚನಗಳು ಹೀಗೆ ಹೇಳುವುದನ್ನು ನೀವು ಗಮನಿಸುವಿರಿ: “ಅನ್ಯಜನರ ಮಧ್ಯದಲ್ಲಿಂದ ಹೊರಟು ಬಂದು ಪ್ರತ್ಯೇಕವಾಗಿರಿ; ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು [“ಯೆಹೋವನು,” NW] ಹೇಳುತ್ತಾನೆ. ಇದಲ್ಲದೆ—ನಾನು ನಿಮ್ಮನ್ನು ಸೇರಿಸಿಕೊಂಡು ನಿಮಗೆ ತಂದೆಯಾಗಿರುವೆನು; ನೀವು ನನಗೆ ಕುಮಾರ ಕುಮಾರಿಯರು ಆಗಿರುವಿರೆಂದು ಸರ್ವಶಕ್ತನಾದ ಕರ್ತನು [“ಯೆಹೋವನು,” NW] ಹೇಳುತ್ತಾನೆ.”—2 ಕೊರಿಂಥ 6:17, 18.
‘ಶರೀರಾತ್ಮಗಳ ಕಲ್ಮಶದಿಂದ ನಮ್ಮನ್ನು ಶುದ್ಧಗೊಳಿಸಿ’ಕೊಳ್ಳುವ ಪೌಲನ ಆಜ್ಞೆಗೆ ಈಗ ಹೆಚ್ಚಿನ ಬಲವಿದೆ! ಇದನ್ನು ಮಾಡಲಿಕ್ಕಾಗಿರುವ ಶಕ್ತಿಶಾಲಿ ಪ್ರಚೋದನೆಯಾಗಿ, ದೇವರು ‘ನಮ್ಮನ್ನು ಸೇರಿಸಿಕೊಳ್ಳುವ’ ವಾಗ್ದಾನ ಮಾಡುತ್ತಾನೆ, ಅಂದರೆ, ಆತನ ರಕ್ಷಣಾತ್ಮಕ ಪರಾಮರಿಕೆಯ ಕೆಳಗೆ ನಮ್ಮನ್ನು ಇರಿಸುತ್ತಾನೆ. ‘ಆತನೊಂದಿಗೆ ಒಂದು ನಿಕಟ ಸಂಬಂಧದಲ್ಲಿ—ಒಬ್ಬ ತಂದೆಯೊಂದಿಗೆ ಮಗನ ಇಲ್ಲವೆ ಮಗಳ ಸಂಬಂಧ—ನಾನು ಆನಂದಿಸುವೆನೊ?’ ಎಂದು ನೀವು ನಿಮ್ಮನ್ನೇ ಕೇಳಿಕೊಳ್ಳಬಹುದು. ಒಬ್ಬ ವಿವೇಕಿ, ಪ್ರೀತಿಪರ ದೇವರಿಂದ ‘ಸೇರಿಸಿಕೊಳ್ಳಲ್ಪಡುವ’ ಇಲ್ಲವೆ ಪ್ರೀತಿಸಲ್ಪಡುವ ವಿಚಾರವು ಬಹಳಷ್ಟು ಆಕರ್ಷಕವಾಗಿರುವುದಿಲ್ಲವೊ? ಆ ವಿಚಾರವು ನಿಮಗೆ ಅಸಂಗತವಾಗಿ ತೋರುವಲ್ಲಿ, ಪ್ರೀತಿಪರ ತಂದೆಯಂದಿರು ತಮ್ಮ ಮಕ್ಕಳ ಕಡೆಗೆ ಪ್ರೀತಿ ಮತ್ತು ಮಮತೆಯನ್ನು ವ್ಯಕ್ತಪಡಿಸುವ ವಿಧವನ್ನು ಗಮನಿಸಿರಿ. ಈಗ, ನಿಮ್ಮ ಹಾಗೂ ಯೆಹೋವನ ನಡುವೆ ಅಂತಹ ಒಂದು ಬಂಧವು ಅಸ್ತಿತ್ವದಲ್ಲಿರುವುದನ್ನು ಊಹಿಸಿಕೊಳ್ಳಿರಿ! ನೀವು ಅದರ ಕುರಿತು ಹೆಚ್ಚಾಗಿ ಮನನಮಾಡಿದಷ್ಟು, ಅಂತಹ ಒಂದು ಸಂಬಂಧಕ್ಕಾಗಿರುವ ಅಭಿಲಾಷೆಯು ಹೆಚ್ಚಾಗಿ ಬೆಳೆಯುತ್ತದೆ.
ಆದರೆ ಗಮನದಲ್ಲಿಡಿ: ನೀವು ‘ಅಶುದ್ಧವಾದ ಯಾವದನ್ನೂ ಮುಟ್ಟದೆ’ ಇದ್ದರೆ ಮಾತ್ರ, ದೇವರೊಂದಿಗೆ ನಿಕಟತೆಯು ಸಾಧ್ಯ. ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಹೊಗೆಸೊಪ್ಪಿನ ಗೀಳು, ದೇವರು ಖಂಡಿಸುವ “ಅಶುದ್ಧವಾದ” ವಿಷಯಗಳಲ್ಲಿ ಒಂದಾಗಿರುವುದಿಲ್ಲವೊ? ಅದರ ಬಳಕೆಯು, ನನ್ನನ್ನು ಎಲ್ಲ ಬಗೆಯ ಆರೋಗ್ಯ ಅಪಾಯಗಳಿಗೆ ಒಡ್ಡುತ್ತಾ, “ಶರೀರಾತ್ಮಗಳ ಕಲ್ಮಶ”ವಾಗಿರುವುದಿಲ್ಲವೊ? ಯೆಹೋವನು ಶುದ್ಧನಾದ, ಇಲ್ಲವೆ “ಪರಿಶುದ್ಧ” ದೇವರಾಗಿರುವುದರಿಂದ, ಈ ವಿಧದಲ್ಲಿ ಉದ್ದೇಶಪೂರ್ವಕವಾಗಿ ನನ್ನನ್ನೇ ನಾನು ಕಳಂಕಿಸಿಕೊಳ್ಳುವುದನ್ನು ಆತನು ಮೆಚ್ಚಸಾಧ್ಯವಿದೆಯೊ?’ (1 ಪೇತ್ರ 1:15, 16) ಪೌಲನು ಮಾನಸಿಕ ಪ್ರವೃತ್ತಿ ಇಲ್ಲವೆ ‘ಒಬ್ಬನ ಆತ್ಮದ ಕಲ್ಮಶದ’ ವಿರುದ್ಧವೂ ಎಚ್ಚರಿಸುತ್ತಾನೆಂಬುದನ್ನು ಗಮನಿಸಿರಿ. ನಿಮ್ಮನ್ನೇ ಹೀಗೆ ಕೇಳಿಕೊಳ್ಳಿರಿ: ‘ಈ ಗೀಳು ನನ್ನ ಆಲೋಚನೆಯ ಮೇಲೆ ಅಧಿಕಾರ ನಡೆಸುತ್ತದೊ? ನನ್ನ ಬಯಕೆಯನ್ನು ಪೂರೈಸಲು—ಬಹುಶಃ ನನ್ನ ಆರೋಗ್ಯ, ನನ್ನ ಕುಟುಂಬ, ಅಥವಾ ದೇವರೊಂದಿಗಿನ ನನ್ನ ನಿಲುವನ್ನೂ ಗಂಡಾಂತರಕ್ಕೆ ಈಡುಮಾಡುತ್ತಾ—ಏನು ಮಾಡುವುದಕ್ಕೂ ನಾನು ಸಿದ್ಧನಾಗಿರುವೆನೊ? ನನ್ನ ಜೀವನವನ್ನು ಹಾನಿಗೊಳಿಸುವಂತೆ ನಾನು ಎಷ್ಟರ ಮಟ್ಟಿಗೆ ನನ್ನ ಹೊಗೆಸೊಪ್ಪಿನ ಗೀಳಿಗೆ ಅನುಮತಿ ನೀಡಿದ್ದೇನೆ?’ ಕ್ಷೋಭೆಗೊಳಿಸುವಂತಹ ಈ ಪ್ರಶ್ನೆಗಳನ್ನು ಎದುರಿಸುವುದು, ಗೀಳನ್ನು ಬಿಟ್ಟುಬಿಡಲು ನಿಮಗೆ ಬೇಕಾದ ಧೈರ್ಯವನ್ನು ಕೊಡಬಹುದು!
ನಿಶ್ಚಯವಾಗಿಯೂ, ಹೊಗೆಸೊಪ್ಪಿನ ಗೀಳನ್ನು ಜಯಿಸಲು ನಿಮಗೆ ಇತರರಿಂದ ಸಹಾಯ ಮತ್ತು ಬೆಂಬಲವು ಬೇಕಾಗಬಹುದು. ಆದರೂ, ಬೈಬಲಿನ ಕುರಿತು ಮನನಮಾಡುವುದು, ಗೀಳಿನಿಂದ ನಿಮ್ಮನ್ನು ವಿಮುಕ್ತಗೊಳಿಸಿಕೊಳ್ಳಲಿಕ್ಕಾಗಿ ನಿಮ್ಮ ಮನಸ್ಸಾಕ್ಷಿಯನ್ನು ತರಬೇತುಗೊಳಿಸಲು ಮತ್ತು ಬಲಪಡಿಸಲು ಹೆಚ್ಚಿನದ್ದನ್ನು ಮಾಡಬಲ್ಲದು.
ನಾವು ತಪ್ಪುಮಾಡುವಾಗ
ಸರಿಯಾದದ್ದನ್ನು ಮಾಡುವ ನಮ್ಮ ಅತ್ಯುತ್ತಮ ಪ್ರಯತ್ನಗಳ ಎದುರಿನಲ್ಲೂ, ಕೆಲವೊಮ್ಮೆ ನಮ್ಮ ಅಪರಿಪೂರ್ಣತೆಗಳು ನಮ್ಮ ಮೇಲೆ ಜಯ ಸಾಧಿಸುತ್ತವೆ, ಮತ್ತು ನಾವು ತಪ್ಪುಮಾಡುತ್ತೇವೆ. ಆಗ ನಮ್ಮ ಮನಸ್ಸಾಕ್ಷಿಯು ನಮ್ಮನ್ನು ಕಾಡಿಸುವುದು, ಆದರೆ ಅದನ್ನು ಕಡೆಗಣಿಸಲು ಪ್ರಯತ್ನಿಸುವಂತೆ ನಾವು ಶೋಧಿಸಲ್ಪಡಬಹುದು. ಅಥವಾ ನಾವು ಎಷ್ಟೊಂದು ನಿರಾಶರಾಗಬಹುದೆಂದರೆ, ದೇವರನ್ನು ಸೇವಿಸಲಿಕ್ಕಾಗಿರುವ ಎಲ್ಲ ಪ್ರಯತ್ನಗಳನ್ನು ಬಿಟ್ಟುಬಿಡಲು ನಾವು ಬಯಸುತ್ತೇವೆ. ಆದಾಗಲೂ, ರಾಜ ದಾವೀದನ ವಿದ್ಯಮಾನವನ್ನು ಜ್ಞಾಪಿಸಿಕೊಳ್ಳಿ. ಬತ್ಷೆಬೆಯೊಂದಿಗೆ ವ್ಯಭಿಚಾರವನ್ನು ಗೈದ ತರುವಾಯ, ಅವನ ಮನಸ್ಸಾಕ್ಷಿಯು ಅವನನ್ನು ಬಾಧಿಸಿತು. ತಾನು ಅನುಭವಿಸಿದ ಹಿಂಸೆಯನ್ನು ಅವನು ಹೀಗೆ ವರ್ಣಿಸುತ್ತಾನೆ: “ಹಗಲಿರುಳು ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿತ್ತು; ಬೇಸಿಗೆಯ ನೀರಿನಂತೆ ನನ್ನ ಶರೀರದ ಸಾರವೆಲ್ಲಾ ಬತ್ತಿಹೋಯಿತು.” (ಕೀರ್ತನೆ 32:4) ವೇದನಾಮಯವೊ? ಖಂಡಿತವಾಗಿಯೂ! ಆದರೂ ಈ ದೈವಿಕ ದುಃಖವು, ಪಶ್ಚಾತ್ತಾಪ ಪಡುವಂತೆ ಮತ್ತು ದೇವರೊಂದಿಗೆ ಸಮಾಧಾನ ಮಾಡಿಕೊಳ್ಳುವಂತೆ ದಾವೀದನನ್ನು ಪ್ರೇರಿಸಿತು. (2 ಕೊರಿಂಥ 7:10ನ್ನು ಹೋಲಿಸಿರಿ.) ಕ್ಷಮೆಗಾಗಿರುವ ದಾವೀದನ ಸಂಕಟಮಯ ವಿನಂತಿಯು, ಅವನ ಪ್ರಾಮಾಣಿಕ ಪಶ್ಚಾತ್ತಾಪದ ಹೇರಳವಾದ ಪುರಾವೆಯನ್ನು ಕೊಡುತ್ತದೆ. ತನ್ನ ಮನಸ್ಸಾಕ್ಷಿಗೆ ಅವನು ಪ್ರತಿಕ್ರಿಯಿಸಿದ ಕಾರಣ, ಪರಿವರ್ತನೆ ಹೊಂದುವಂತೆ ಮತ್ತು ಕಟ್ಟಕಡೆಗೆ ತನ್ನ ಆನಂದವನ್ನು ಪುನಃ ಪಡೆದುಕೊಳ್ಳುವಂತೆ ದಾವೀದನಿಗೆ ಸಹಾಯವು ನೀಡಲ್ಪಟ್ಟಿತು.—ಕೀರ್ತನೆ 51.
ಇಂದು, ಅದೇ ಸಂಗತಿಯು ಸಂಭವಿಸಬಲ್ಲದು. ಕೆಲವರು ಗತಕಾಲಗಳಲ್ಲಿ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಸಿಸಿದರು, ಆದರೆ ತಮ್ಮ ಜೀವಿತಗಳು ದೇವರ ಉನ್ನತ ಮಟ್ಟಗಳೊಂದಿಗೆ ಸುಸಂಗತವಾಗಿರಲಿಲ್ಲವೆಂದು ಅವರು ತಿಳಿದುಕೊಂಡಾಗ, ಅಭ್ಯಾಸಿಸುವುದನ್ನು ನಿಲ್ಲಿಸಿದರು. ಬಹುಶಃ ಅವರು ವಿಧಿವತ್ತಾದ ಮದುವೆಯಿಲ್ಲದೆ, ವಿರುದ್ಧ ಲಿಂಗದ ಒಬ್ಬ ವ್ಯಕ್ತಿಯೊಂದಿಗೆ ಜೀವಿಸುತ್ತಿದ್ದರು ಇಲ್ಲವೆ ಅಶುದ್ಧ ಚಟಗಳಿಗೆ ದಾಸರಾಗಿದ್ದರು. ಅವರ ಮನಸ್ಸಾಕ್ಷಿಯು ಅವರನ್ನು ಬಾಧಿಸಿತು!
ಇಂತಹ ಒಂದು ಪರಿಸ್ಥಿತಿಯಲ್ಲಿ ನೀವು ಇರುವುದಾದರೆ, ಪಂಚಾಶತ್ತಮದ ದಿನದಂದು ಅಪೊಸ್ತಲ ಪೇತ್ರನು ನುಡಿದ ಮಾತುಗಳನ್ನು ಪರಿಗಣಿಸಿರಿ. ತನ್ನ ಸಹದೇಶೀಯರಾದ ಯೆಹೂದ್ಯರ ಪಾಪಗಳನ್ನು ಅವನು ಬಯಲುಪಡಿಸಿದಾಗ, ಅವರ “ಹೃದಯದಲ್ಲಿ ಅಲಗು ನೆಟ್ಟಂತಾ”ಯಿತು. ಬಿಟ್ಟುಕೊಡುವ ಬದಲು, ಪಶ್ಚಾತ್ತಾಪ ಪಡಬೇಕೆಂಬ ಪೇತ್ರನ ಸಲಹೆಗೆ ಅವರು ಕಿವಿಗೊಟ್ಟರು ಮತ್ತು ದೇವರ ಅನುಗ್ರಹವನ್ನು ಪಡೆದುಕೊಂಡರು. (ಅ. ಕೃತ್ಯಗಳು 2:37-41) ನೀವೂ ಅದನ್ನೇ ಮಾಡಬಲ್ಲಿರಿ! ನಿಮ್ಮ ಮನಸ್ಸಾಕ್ಷಿಯು ನಿಮ್ಮನ್ನು ಬಾಧಿಸುವುದರಿಂದ ಸತ್ಯವನ್ನು ಬಿಟ್ಟುಬಿಡುವ ಬದಲಿಗೆ, ‘ಪಶ್ಚಾತ್ತಾಪಪಟ್ಟು ತಿರುಗಿಕೊಳ್ಳು’ವಂತೆ ನಿಮ್ಮ ಮನಸ್ಸಾಕ್ಷಿಯು ನಿಮ್ಮನ್ನು ಪ್ರಚೋದಿಸಲಿ. (ಅ. ಕೃತ್ಯಗಳು 3:19) ದೃಢಸಂಕಲ್ಪ ಮತ್ತು ಪ್ರಯತ್ನದೊಂದಿಗೆ, ದೇವರ ಅನುಗ್ರಹವನ್ನು ಪಡೆದುಕೊಳ್ಳಲು, ನೀವು ಬೇಕಾದ ಬದಲಾವಣೆಗಳನ್ನು ಮಾಡಬಲ್ಲಿರಿ.
“ಒಳ್ಳೇ ಮನಸ್ಸಾಕ್ಷಿಯುಳ್ಳವರಾಗಿರಿ”
ಯೆಹೋವನ ಮಾರ್ಗಗಳನ್ನು ಕಲಿಯಲು ನೀವು ಈಗ ತಾನೇ ಆರಂಭಿಸುತ್ತಿರಲಿ ಇಲ್ಲವೆ ಒಬ್ಬ ಪ್ರೌಢ ಕ್ರೈಸ್ತರಾಗಿದ್ದು ಅನೇಕ ವರ್ಷಗಳ ಅನುಭವ ನಿಮಗಿರಲಿ, ಪೇತ್ರನ ಬುದ್ಧಿವಾದವು ಸೂಕ್ತವಾದದ್ದಾಗಿದೆ: “ಒಳ್ಳೇ ಮನಸ್ಸಾಕ್ಷಿಯುಳ್ಳವರಾಗಿರಿ.” (1 ಪೇತ್ರ 3:16) ಅದೊಂದು ಹೊರೆಯಲ್ಲ, ಆಸ್ತಿಯಾಗಿದೆ. ದೇವರ ವಾಕ್ಯವಾದ ಬೈಬಲಿನಲ್ಲಿ ಅಡಕವಾಗಿರುವ ವಿವೇಕದಿಂದ ನಿಮ್ಮ ಮನಸ್ಸು ಹಾಗೂ ಹೃದಯವನ್ನು ಪೋಷಿಸುವ ಮೂಲಕ ಅದನ್ನು ತರಬೇತುಗೊಳಿಸಿರಿ. ನಿಮ್ಮ ಮನಸ್ಸಾಕ್ಷಿಯು ನಿಮ್ಮನ್ನು ಎಚ್ಚರಿಸುವಾಗ ಅದಕ್ಕೆ ಕಿವಿಗೊಡಿರಿ. ಒಬ್ಬನ ಮನಸ್ಸಾಕ್ಷಿಗೆ ವಿಧೇಯರಾಗುವುದರಿಂದ ಬರಬಲ್ಲ ಆಂತರಿಕ ಮನಶ್ಶಾಂತಿಯನ್ನು ಅನುಭವಿಸಿರಿ.
ನಿಮ್ಮ ಮನಸ್ಸಾಕ್ಷಿಯನ್ನು ತರಬೇತುಗೊಳಿಸಿ, ಅದನ್ನು ರೂಪಿಸುವುದು ಸುಲಭವಾದ ಕೆಲಸವಲ್ಲವೆಂಬುದು ಒಪ್ಪತಕ್ಕದ್ದೇ. ಆದಾಗಲೂ, ನಿಮಗೆ ನೆರವು ನೀಡುವಂತೆ ನೀವು ಯೆಹೋವ ದೇವರಿಗೆ ಪ್ರಾರ್ಥಿಸಬಲ್ಲಿರಿ. ಆತನ ಸಹಾಯದಿಂದ, ನೀವು ದೇವರನ್ನು “ಒಳ್ಳೇಮನಸ್ಸಾಕ್ಷಿ ನಿಷ್ಕಪಟವಾದ ನಂಬಿಕೆ ಎಂಬಿವುಗಳಿಂದ” ಸೇವಿಸಲು ಶಕ್ತರಾಗುವಿರಿ.—1 ತಿಮೊಥೆಯ 1:5.
[ಅಧ್ಯಯನ ಪ್ರಶ್ನೆಗಳು]
a ಉಚಿತ ಮನೆ ಬೈಬಲ್ ಅಧ್ಯಯನವನ್ನು ಪಡೆಯಲು ನೀವು ಆಸಕ್ತರಾಗಿರುವುದಾದರೆ, ಯೆಹೋವನ ಸಾಕ್ಷಿಗಳ ಸ್ಥಳೀಯ ಸಭೆಯನ್ನು ಸಂಪರ್ಕಿಸಲು ಇಲ್ಲವೆ ಈ ಪತ್ರಿಕೆಯ ಪ್ರಕಾಶಕರಿಗೆ ಬರೆಯಲು ಹಿಂಜರಿಯಬೇಡಿ.
[ಪುಟ 6 ರಲ್ಲಿರುವ ಚಿತ್ರ]
ದೇವರ ವಾಕ್ಯವನ್ನು ಓದಿ, ಮನನಮಾಡುವುದು, ನಮ್ಮ ಮನಸ್ಸಾಕ್ಷಿಯನ್ನು ತರಬೇತುಗೊಳಿಸಲು ನಮಗೆ ಸಹಾಯ ಮಾಡುತ್ತದೆ