ಸಂತೋಷ ಅತಿಯಾಗಿ ನುಣುಚಿಕೊಳ್ಳುವಂತಹದ್ದು
ಕೋಪ, ಕಳವಳ, ಮತ್ತು ಖಿನ್ನತೆ, ದೀರ್ಘ ಸಮಯದಿಂದ ವೈಜ್ಞಾನಿಕ ತನಿಖೆಯ ವಿಷಯವಾಗಿ ಪರಿಣಮಿಸಿವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ, ಪ್ರಮುಖ ವಿಜ್ಞಾನಿಗಳು ತಮ್ಮ ಸಂಶೋಧನೆಯನ್ನು, ಸಕಾರಾತ್ಮಕವೂ ಅಪೇಕ್ಷಣೀಯವೂ ಆಗಿರುವ ಒಂದು ಮಾನವ ಅನುಭವ—ಸಂತೋಷ—ದ ಮೇಲೆ ಕೇಂದ್ರೀಕರಿಸುತ್ತಾ ಇದ್ದಾರೆ.
ಜನರನ್ನು ಹೆಚ್ಚು ಸಂತೋಷಿತರನ್ನಾಗಿ ಯಾವುದು ಮಾಡಬಹುದು? ಅವರು ಮತ್ತಷ್ಟು ಯುವ ವ್ಯಕ್ತಿಗಳಾಗಿ, ಶ್ರೀಮಂತರಾಗಿ, ಆರೋಗ್ಯವಂತರಾಗಿ, ಎತ್ತರವಾಗಿ, ಇಲ್ಲವೆ ತೆಳ್ಳಗಾಗಿ ಇರುತ್ತಿದ್ದಲ್ಲಿ, ಹೆಚ್ಚು ಸಂತೋಷಿತರಾಗಿರುತ್ತಿದ್ದರೊ? ಯಥಾರ್ಥವಾದ ಸಂತೋಷಕ್ಕೆ ಕೀಲಿ ಕೈ ಯಾವುದಾಗಿದೆ? ಆ ಪ್ರಶ್ನೆಯನ್ನು ಉತ್ತರಿಸುವುದು ಅಸಾಧ್ಯವಾಗಿರದಿದ್ದರೂ ಕಷ್ಟಕರವೆಂದು ಹೆಚ್ಚಿನ ಜನರು ಕಂಡುಕೊಳ್ಳುತ್ತಾರೆ. ಸಂತೋಷವನ್ನು ಕಂಡುಕೊಳ್ಳುವ ವಿಷಯದಲ್ಲಿನ ಬಹುವ್ಯಾಪಕವಾದ ವೈಫಲ್ಯವನ್ನು ಪರಿಗಣಿಸುತ್ತಾ, ಸಂತೋಷಕ್ಕೆ ಯಾವುದು ಕೀಲಿ ಕೈ ಆಗಿಲ್ಲ ಎಂಬ ಪ್ರಶ್ನೆಯನ್ನು ಉತ್ತರಿಸುವುದು ಬಹುಶಃ ಹೆಚ್ಚು ಸುಲಭವೆಂದು ಕೆಲವರು ಕಂಡುಕೊಳ್ಳುವರು.
ದೀರ್ಘ ಸಮಯದ ವರೆಗೆ, ಪ್ರಮುಖ ಮನಶಾಸ್ತ್ರಜ್ಞರು ಆತ್ಮಾಭಿಮುಖವಾದ ತತ್ವಜ್ಞಾನವನ್ನು ಸಂತೋಷಕ್ಕೆ ಕೀಲಿ ಕೈಯಾಗಿ ಶಿಫಾರಸ್ಸು ಮಾಡಿದರು. ತಮ್ಮ ವ್ಯಕ್ತಿಗತ ಅಗತ್ಯಗಳನ್ನು ತೃಪ್ತಿಪಡಿಸುವುದರ ಮೇಲೆ ಸಂಪೂರ್ಣವಾಗಿ ಕೇಂದ್ರೀಕರಿಸುವರೆ ಅವರು ಅಸಂತೋಷಿತರನ್ನು ಉತ್ತೇಜಿಸಿದರು. “ವ್ಯಕ್ತಿವೈಶಿಷ್ಟ್ಯವುಳ್ಳವರಾಗಿರಿ,” “ಸ್ವಅರಿವುಳ್ಳವರಾಗಿರಿ,” ಮತ್ತು “ಆತ್ಮಾನ್ವೇಷಕರಾಗಿರಿ” ಎಂಬಂತಹ ಆಕರ್ಷಣೀಯ ವಾಕ್ಸರಣಿಗಳು, ಮನೋರೋಗ ಚಿಕಿತ್ಸೆಯಲ್ಲಿ ಉಪಯೋಗಿಸಲ್ಪಟ್ಟಿವೆ. ಆದರೂ, ಈ ಮನೋಭಾವವನ್ನು ಪ್ರವರ್ಧಿಸಿದ ಮನಶಾಸ್ತ್ರಜ್ಞರಲ್ಲೇ ಕೆಲವರು, ಇಂತಹ ವ್ಯಕ್ತಿವೈಶಿಷ್ಟ್ಯವುಳ್ಳ ಮನೋಭಾವವು ಬಾಳುವ ಸಂತೋಷವನ್ನು ತರುವುದಿಲ್ಲವೆಂಬುದನ್ನು ಈಗ ಒಪ್ಪಿಕೊಳ್ಳುತ್ತಾರೆ. ಆತ್ಮದುರಭಿಮಾನವು ಖಂಡಿತವಾಗಿ ನೋವು ಮತ್ತು ಅಸಂತೋಷವನ್ನು ತರುವುದು. ಸ್ವಾರ್ಥಪರತೆಯು ಸಂತೋಷಕ್ಕೆ ಕೀಲಿ ಕೈಯಾಗಿರುವುದಿಲ್ಲ.
ಅಸಂತೋಷಕ್ಕಿರುವ ಕೀಲಿ ಕೈ
ಸುಖಾನುಭವದ ಬೆನ್ನಟ್ಟುವಿಕೆಯಲ್ಲಿ ಸಂತೋಷವನ್ನು ಕಂಡುಕೊಳ್ಳಲು ಹುಡುಕುತ್ತಿರುವವರು, ತಪ್ಪಾದ ಸ್ಥಳದಲ್ಲಿ ಹುಡುಕುತ್ತಿದ್ದಾರೆ. ಪ್ರಾಚೀನ ಇಸ್ರಾಯೇಲಿನ ವಿವೇಕಿ ಅರಸನಾದ ಸೊಲೊಮೋನನ ಉದಾಹರಣೆಯನ್ನು ಪರಿಗಣಿಸಿರಿ. ಬೈಬಲಿನ ಪ್ರಸಂಗಿ ಪುಸ್ತಕದಲ್ಲಿ ಅವನು ವಿವರಿಸುವುದು: “ನನ್ನ ಕಣ್ಣು ಬಯಿಸಿದ್ದೆಲ್ಲವನ್ನೂ ಅದಕ್ಕೆ ನಾನು ಒಪ್ಪಿಸದೆ ಬಿಡಲಿಲ್ಲ; ಯಾವ ಸಂತೋಷವನ್ನನುಭವಿಸುವದಕ್ಕೂ ನನ್ನ ಹೃದಯವನ್ನು ತಡೆಯಲಿಲ್ಲ; ಏಕಂದರೆ ನನ್ನ ಹೃದಯವು ನನ್ನ ಕಾರ್ಯಗಳಲ್ಲೆಲ್ಲಾ ಹರ್ಷಿಸುತ್ತಿತ್ತು; ನನ್ನ ಪ್ರಯಾಸದಿಂದೆಲ್ಲಾ ನನಗಾದ ಲಾಭವು ಇದೇ.” (ಪ್ರಸಂಗಿ 2:10) ಸೊಲೊಮೋನನು ತನಗಾಗಿ ಮನೆಗಳನ್ನು ಕಟ್ಟಿಸಿದನು, ದ್ರಾಕ್ಷಿತೋಟಗಳನ್ನು ನೆಟ್ಟನು, ಮತ್ತು ತನಗಾಗಿ ತೋಟಗಳನ್ನು, ಉದ್ಯಾನವನಗಳನ್ನು, ಮತ್ತು ನೀರಿನ ಕೊಳಗಳನ್ನು ಮಾಡಿಸಿದನು. (ಪ್ರಸಂಗಿ 2:4-6) ಅವನು ಒಮ್ಮೆ ಕೇಳಿದ್ದು: “ನನ್ನ ಅನ್ನಪಾನಗಳಿಗಿಂತಲೂ ಉತ್ತಮವಾದದ್ದನ್ನು ಯಾರು ಅನುಭವಿಸುತ್ತಾರೆ?” (ಪ್ರಸಂಗಿ 2:25, NW) ಅವನು ಅತ್ಯುತ್ತಮ ಗಾಯಕರು ಹಾಗೂ ಸಂಗೀತಗಾರರಿಂದ ಮನೋರಂಜಿಸಲ್ಪಟ್ಟನು, ಮತ್ತು ಆ ದೇಶದ ಅತ್ಯಂತ ಸುಂದರ ಸ್ತ್ರೀಯರ ಸಾಹಚರ್ಯವನ್ನು ಅನುಭವಿಸಿದನು.—ಪ್ರಸಂಗಿ 2:8.
ವಿಷಯವು ಏನೆಂದರೆ, ಆನಂದಕರ ಚಟುವಟಿಕೆಗಳ ಸಂಬಂಧದಲ್ಲಿ ಸೊಲೊಮೋನನು ಹಿಂಜರಿಯಲಿಲ್ಲ. ಜೀವನದಲ್ಲಿ ಹೇರಳವಾದ ಸುಖಾನುಭವಗಳನ್ನು ಅನುಭವಿಸಿದ ಬಳಿಕ, ಅವನು ಯಾವ ತೀರ್ಮಾನಕ್ಕೆ ಬಂದನು? ಅವನು ಹೇಳಿದ್ದು: “ಆಗ ನನ್ನ ಕೈಯಿಂದ ನಡಿಸಿದ ಎಲ್ಲಾ ಕೆಲಸಗಳಲ್ಲಿಯೂ ನಾನು ಪಟ್ಟ ಪ್ರಯಾಸದಲ್ಲಿಯೂ ದೃಷ್ಟಿಯಿಟ್ಟೆನು; ಆಹಾ, ಗಾಳಿಯನ್ನು ಹಿಂದಟ್ಟಿದ ಹಾಗೆ ಸಮಸ್ತವೂ ವ್ಯರ್ಥವಾಯಿತು, ಲೋಕದಲ್ಲಿ ಯಾವ ಲಾಭವೂ ಕಾಣಲಿಲ್ಲ.”—ಪ್ರಸಂಗಿ 2:11.
ಆ ವಿವೇಕಿ ಅರಸನ ಕಂಡುಹಿಡಿಯುವಿಕೆಗಳು, ಈ ದಿನದ ವರೆಗೂ ನಿಷ್ಕೃಷ್ಟವಾಗಿ ಉಳಿದಿವೆ. ದೃಷ್ಟಾಂತಕ್ಕಾಗಿ, ಅಮೆರಿಕದಂತಹ ಒಂದು ಸಂಪದ್ಭರಿತ ರಾಷ್ಟ್ರವನ್ನು ತೆಗೆದುಕೊಳ್ಳಿ. ಕಳೆದ 30 ವರ್ಷಗಳಲ್ಲಿ, ಅಮೆರಿಕನರು ವಾಹನಗಳು ಮತ್ತು ಟೆಲಿವಿಷನ್ಗಳಂತಹ ತಮ್ಮ ಭೌತಿಕ ಸ್ವತ್ತುಗಳ ಸಂಖ್ಯೆಯನ್ನು ಕಾರ್ಯತಃ ಇಮ್ಮಡಿಗೊಳಿಸಿದ್ದಾರೆ. ಆದರೂ, ಮಾನಸಿಕ ಆರೋಗ್ಯ ಪರಿಣತರಿಗನುಸಾರ, ಅಮೆರಿಕನರು ಬಹಳ ಸಂತೋಷಿತರಾಗಿರುವುದಿಲ್ಲ. ಒಂದು ಪತ್ರಿಕೆಗನುಸಾರ, “ಅದೇ ಸಮಯಾವಧಿಯಲ್ಲಿ, ಖಿನ್ನತೆಯ ಪ್ರಮಾಣಗಳು ಗಗನಕ್ಕೇರಿವೆ. ಹದಿವಯಸ್ಕರ ಆತ್ಮಹತ್ಯೆಯು ಮೂರು ಪಟ್ಟು ಹೆಚ್ಚಾಗಿದೆ. ವಿವಾಹ ವಿಚ್ಛೇದದ ಪ್ರಮಾಣಗಳು ಎರಡು ಪಟ್ಟು ವೃದ್ಧಿಸಿವೆ.” ಸುಮಾರು 50 ವಿಭಿನ್ನ ರಾಷ್ಟ್ರಗಳ ಜನಸಂಖ್ಯೆಗಳಲ್ಲಿ, ಹಣ ಮತ್ತು ಸಂತೋಷದ ನಡುವಿನ ಪರಸ್ಪರ ಸಂಬಂಧವನ್ನು ಅಭ್ಯಸಿಸಿದ ಬಳಿಕ, ಇತ್ತೀಚೆಗೆ ಸಂಶೋಧಕರು ತದ್ರೀತಿಯ ತೀರ್ಮಾನಗಳಿಗೆ ಬಂದಿದ್ದಾರೆ. ಸರಳವಾಗಿ ಹೇಳುವುದಾದರೆ, ನೀವು ಸಂತೋಷವನ್ನು ಖರೀದಿಸಸಾಧ್ಯವಿಲ್ಲ.
ಇದಕ್ಕೆ ತದ್ವಿರುದ್ಧವಾಗಿ, ಸಿರಿತನದ ಬೆನ್ನಟ್ಟುವಿಕೆಯನ್ನು ಯೋಗ್ಯವಾಗಿಯೇ ಅಸಂತೋಷಕ್ಕಿರುವ ಕೀಲಿ ಕೈಯೆಂದು ಕರೆಯಸಾಧ್ಯವಿದೆ. ಅಪೊಸ್ತಲ ಪೌಲನು ಎಚ್ಚರಿಸಿದ್ದು: “ಐಶ್ವರ್ಯವಂತರಾಗಬೇಕೆಂದು ಮನಸ್ಸುಮಾಡುವವರು ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರನಾಶನಗಳಲ್ಲಿ ಮುಳುಗಿಸುತ್ತವೆ. ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ಅದರಿಂದ ಕ್ರಿಸ್ತನಂಬಿಕೆಯನ್ನು ಬಿಟ್ಟು ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.”—1 ತಿಮೊಥೆಯ 6:9, 10.
ಸಿರಿತನವಾಗಲಿ, ಆರೋಗ್ಯವಾಗಲಿ, ಯೌವನವಾಗಲಿ, ಸೌಂದರ್ಯವಾಗಲಿ, ಅಧಿಕಾರವಾಗಲಿ, ಇಲ್ಲವೆ ಇವುಗಳ ಯಾವುದೇ ಸಂಯೋಜನೆಯಾಗಲಿ, ಬಾಳುವ ಸಂತೋಷದ ಖಾತರಿಯನ್ನು ಕೊಡಸಾಧ್ಯವಿಲ್ಲ. ಏಕೆ ಸಾಧ್ಯವಿಲ್ಲ? ಏಕೆಂದರೆ ಕೆಟ್ಟ ಸಂಗತಿಗಳು ಸಂಭವಿಸುವುದನ್ನು ತಡೆಗಟ್ಟುವ ಶಕ್ತಿ ನಮಗಿಲ್ಲ. ಅರಸ ಸೊಲೊಮೋನನು ಸೂಕ್ತವಾಗಿಯೇ ಗಮನಿಸಿದ್ದು: “ಮನುಷ್ಯನೋ ತನ್ನ ಕಾಲಗತಿಯನ್ನು ತಿಳಿಯನಷ್ಟೆ; ಮೀನುಗಳು ಕೆಟ್ಟ ಬಲೆಗೂ ಪಕ್ಷಿಗಳು ಜಾಲಕ್ಕೂ ಸಿಕ್ಕಿಬೀಳುವ ಹಾಗೆ ನರಜನ್ಮದವರು ತಮ್ಮ ಮೇಲೆ ತಟ್ಟನೆ ಬೀಳುವ ಕೆಟ್ಟ ಕಾಲಪಾಶಕ್ಕೆ ಸಿಕ್ಕಿಕೊಳ್ಳುವರು.”—ಪ್ರಸಂಗಿ 9:12.
ನುಣುಚಿಕೊಳ್ಳುವಂತಹ ಒಂದು ಗುರಿ
ಎಷ್ಟೇ ಪ್ರಮಾಣದ ವೈಜ್ಞಾನಿಕ ಸಂಶೋಧನೆಯೂ, ಸಂತೋಷಕ್ಕಾಗಿರುವ ಮಾನವ ನಿರ್ಮಿತ ಸೂತ್ರ ಇಲ್ಲವೆ ತಂತ್ರದ ಪ್ರಸ್ತಾಪವನ್ನು ಮಾಡಸಾಧ್ಯವಿಲ್ಲ. ಸೊಲೊಮೋನನು ಹೀಗೂ ಹೇಳಿದ್ದು: “ನಾನು ಲೋಕದಲ್ಲಿ ತಿರಿಗಿ ದೃಷ್ಟಿಸಲು ವೇಗಿಗಳಿಗೆ ಓಟದಲ್ಲಿ ಗೆಲವಿಲ್ಲ, ಬಲಿಷ್ಠರಿಗೆ ಯುದ್ಧದಲ್ಲಿ ಜಯವಾಗದು, ಜ್ಞಾನಿಗಳಿಗೆ ಅನ್ನ ಸಿಕ್ಕದು, ವಿವೇಕಿಗಳಿಗೆ ಧನ ಲಭಿಸದು, ಪ್ರವೀಣರಿಗೆ ದಯೆ ದೊರೆಯದು, ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ ಎಂದು ತಿಳಿದುಕೊಂಡೆನು.”—ಪ್ರಸಂಗಿ 9:11.
ಈ ಮೇಲಿನ ಮಾತುಗಳೊಂದಿಗೆ ಸಮ್ಮತಿಸುವ ಅನೇಕರು, ನಿಜವಾಗಿಯೂ ಸಂತೋಷಕರವಾದ ಜೀವನವನ್ನು ನಿರೀಕ್ಷಿಸುವುದು ಅವಾಸ್ತವಿಕವೆಂದು ತೀರ್ಮಾನಿಸಿದ್ದಾರೆ. “ಸಂತೋಷವು ಒಂದು ಕಾಲ್ಪನಿಕ ಸ್ಥಿತಿಯಾಗಿದೆ” ಎಂದು ಒಬ್ಬ ಪ್ರಖ್ಯಾತ ಶಿಕ್ಷಕನು ತಿಳಿಸಿದನು. ಸಂತೋಷಕ್ಕಿರುವ ಕೀಲಿ ಕೈ, ಒಂದು ನಿಗೂಢವಾದ ರಹಸ್ಯವಾಗಿದ್ದು, ಆ ರಹಸ್ಯವನ್ನು ಅನಾವರಣಗೊಳಿಸುವ ಸಾಮರ್ಥ್ಯವು, ವೈಚಾರಿಕ ವರವನ್ನು ಪಡೆದಿರುವ ಕೆಲವು ಯೋಗಿಗಳಿಗೆ ಮಾತ್ರ ಸೀಮಿತವಾಗಿರಬಹುದೆಂದು ಇತರರು ನಂಬುತ್ತಾರೆ.
ಆದರೂ, ಸಂತೋಷದ ತಮ್ಮ ಅನ್ವೇಷಣೆಯಲ್ಲಿ, ಜನರು ವಿವಿಧ ಜೀವನ ಶೈಲಿಗಳೊಂದಿಗೆ ಪ್ರಯೋಗ ನಡೆಸುವುದನ್ನು ಮುಂದುವರಿಸುತ್ತಾರೆ. ತಮ್ಮ ಪೂರ್ವಿಕರ ವೈಫಲ್ಯದ ಎದುರಿನಲ್ಲೂ ಇಂದು ಅನೇಕರು, ತಮ್ಮ ಅಸಂತೋಷಕ್ಕಿರುವ ಮದ್ದಿನಂತೆ, ಸಿರಿತನ, ಅಧಿಕಾರ, ಆರೋಗ್ಯ, ಇಲ್ಲವೆ ಸುಖಾನುಭವವನ್ನು ಇನ್ನೂ ಬೆನ್ನಟ್ಟುತ್ತಾರೆ. ಹುಡುಕಾಟವು ಮುಂದುವರಿಯುತ್ತಾ ಹೋಗುತ್ತದೆ, ಏಕೆಂದರೆ ಬಾಳುವ ಸಂತೋಷವು ಕೇವಲ ಒಂದು ಕಾಲ್ಪನಿಕ ಸ್ಥಿತಿಯಲ್ಲವೆಂದು ಹೆಚ್ಚಿನ ಜನರು ಹೃದಯಾಂತರಾಳದಲ್ಲಿ ನಂಬುತ್ತಾರೆ. ಸಂತೋಷವು ನುಣುಚಿಕೊಳ್ಳುವಂತಹ ಒಂದು ಕನಸಲ್ಲವೆಂಬ ಭರವಸೆಯು ಅವರಿಗಿದೆ. ಹಾಗಾದರೆ ನೀವು ಹೀಗೆ ಕೇಳಿಕೊಳ್ಳಬಹುದು, ‘ನಾನು ಅದನ್ನು ಹೇಗೆ ಕಂಡುಕೊಳ್ಳಬಲ್ಲೆ?’