ನಿಜ ಸಂತೋಷ ಕೀಲಿ ಕೈ ಯಾವುದು?
ಮಾನವರು ಸಂತೋಷದಿಂದಿರಬೇಕೆಂದು ಉದ್ದೇಶಿಸಲಾಗಿತ್ತು. ನಾವೇಕೆ ಅದರ ಕುರಿತು ನಿಶ್ಚಿತರಾಗಿರಸಾಧ್ಯವಿದೆ? ಒಳ್ಳೆಯದು, ಮನುಷ್ಯನ ಆರಂಭವನ್ನು ಪರಿಗಣಿಸಿರಿ.
ಯೆಹೋವ ದೇವರು ಪ್ರಥಮ ಮಾನವ ಜೊತೆಯನ್ನು, ಸಂತೋಷವನ್ನು ಅನುಭವಿಸುವ ಸಾಮರ್ಥ್ಯದೊಂದಿಗೆ ಸೃಷ್ಟಿಸಿದನು. ಆದಾಮಹವ್ವರು ಒಂದು ಪ್ರಮೋದವನದಲ್ಲಿ, ಏದೆನ್ ಎಂಬುದಾಗಿ ಕರೆಯಲ್ಪಟ್ಟ, ಆಹ್ಲಾದಕರವಾದ ಒಂದು ತೋಟದಲ್ಲಿ ಇರಿಸಲ್ಪಟ್ಟರು. ಜೀವಿತಕ್ಕೆ ಅಗತ್ಯವಿರುವ ಸಕಲ ಭೌತಿಕ ವಿಷಯಗಳನ್ನು ಸೃಷ್ಟಿಕರ್ತನು ಅವರಿಗೆ ಒದಗಿಸಿದನು. ಆ ತೋಟದಲ್ಲಿ “ನೋಟಕ್ಕೆ ರಮ್ಯವಾಗಿಯೂ ಊಟಕ್ಕೆ ಅನುಕೂಲವಾಗಿಯೂ ಇರುವ ಎಲ್ಲಾ ತರದ ಮರ”ಗಳಿದ್ದವು. (ಆದಿಕಾಂಡ 2:9) ಆದಾಮಹವ್ವರು ಆರೋಗ್ಯವಂತರೂ ಬಲಿಷ್ಠರೂ ಮತ್ತು ಸುಂದರರೂ ಆಗಿದ್ದರು. ಅವರು ಪರಿಪೂರ್ಣರೂ ನಿಜವಾಗಿಯೂ ಸಂತೋಷಿತರೂ ಆಗಿದ್ದರು.
ಆದಾಗ್ಯೂ, ಅವರ ಸಂತೋಷಕ್ಕೆ ಕೀಲಿ ಕೈ ಯಾವುದಾಗಿತ್ತು? ಅದು, ಅವರ ಪ್ರಮೋದವನೀಯ ಮನೆ ಇಲ್ಲವೆ ಬಹುಶಃ ಅವರ ಶಾರೀರಿಕ ಪರಿಪೂರ್ಣತೆಯಾಗಿತ್ತೊ? ದೇವರಿಂದ ಬಂದ ಈ ಕೊಡುಗೆಗಳು, ಅವರ ಜೀವಿತದ ಸುಖಾನುಭವಕ್ಕೆ ಖಂಡಿತವಾಗಿ ನೆರವು ನೀಡಿದವು. ಆದರೆ ಅವರ ಸಂತೋಷವು, ಇಂತಹ ಸ್ಥೂಲ ವಿಷಯಗಳ ಮೇಲೆ ಅವಲಂಬಿಸಿರಲಿಲ್ಲ. ಏದೆನ್ ತೋಟವು ಒಂದು ಸುಂದರ ಉದ್ಯಾನವನಕ್ಕಿಂತಲೂ ಹೆಚ್ಚಿನದ್ದಾಗಿತ್ತು. ಅದೊಂದು ಪೂಜ್ಯಸ್ಥಾನ, ದೇವರನ್ನು ಆರಾಧಿಸುವ ಸ್ಥಳವಾಗಿತ್ತು. ಅವರ ಅನಂತ ಸಂತೋಷಕ್ಕಾಗಿದ್ದ ಕೀಲಿ ಕೈ, ಸೃಷ್ಟಿಕರ್ತನೊಂದಿಗೆ ಒಂದು ಪ್ರೀತಿಯ ಸಂಬಂಧವನ್ನು ಸ್ಥಾಪಿಸಿ, ಅದನ್ನು ಕಾಪಾಡಿಕೊಂಡುಹೋಗುವ ಅವರ ಸಾಮರ್ಥ್ಯವಾಗಿತ್ತು. ಸಂತೋಷಿತರಾಗಿರಲು, ಅವರು ಪ್ರಥಮವಾಗಿ ಆತ್ಮಿಕ ಪ್ರವೃತ್ತಿಯುಳ್ಳವರಾಗಿರಬೇಕಿತ್ತು.—ಮತ್ತಾಯ 5:3ನ್ನು ಹೋಲಿಸಿರಿ.
ಆತ್ಮಿಕತೆ ಸಂತೋಷಕ್ಕೆ ನಡೆಸುತ್ತದೆ
ಆರಂಭದಲ್ಲಿ ಆದಾಮನಿಗೆ, ದೇವರೊಂದಿಗೆ ಒಂದು ಆತ್ಮಿಕ ಸಂಬಂಧವಿತ್ತು. ಅದು ಒಬ್ಬ ತಂದೆಯೊಂದಿಗೆ ಒಬ್ಬ ಮಗನಿಗಿರುವಂತಹ, ಒಂದು ಪ್ರೀತಿಪರ, ಕೋಮಲ ಸಂಬಂಧವಾಗಿತ್ತು. (ಲೂಕ 3:38) ಏದೆನ್ ತೋಟದಲ್ಲಿ ಆದಾಮಹವ್ವರಿಗೆ, ಆರಾಧನೆಯನ್ನು ಸಲ್ಲಿಸಲು ತಮಗಿದ್ದ ಬಯಕೆಯನ್ನು ತೃಪ್ತಿಪಡಿಸುವಂತೆ ಅನುಮತಿ ನೀಡಿದ ಆದರ್ಶಪ್ರಾಯ ಪರಿಸ್ಥಿತಿಗಳು ಅವರಿಗಿದ್ದವು. ಯೆಹೋವನಿಗೆ ಮನಪೂರ್ವಕವಾದ, ಪ್ರೀತಿಯ ವಿಧೇಯತೆಯಿಂದಾಗಿ, ಪ್ರಾಣಿ ಸೃಷ್ಟಿಯು ತರಸಾಧ್ಯವಿರುವುದಕ್ಕಿಂತಲೂ ಹೆಚ್ಚು ಮಿಗಿಲಾದ ಘನತೆ ಮತ್ತು ಮಹಿಮೆಯನ್ನು ಅವರು ದೇವರಿಗೆ ತರಲಿದ್ದರು. ಅವರು ದೇವರನ್ನು ಆತನ ಅದ್ಭುತಕರ ಗುಣಗಳಿಗಾಗಿ ಬೌದ್ಧಿಕವಾಗಿ ಸ್ತುತಿಸಸಾಧ್ಯವಿತ್ತು ಮತ್ತು ಆತನ ಪರಮಾಧಿಕಾರವನ್ನು ಬೆಂಬಲಿಸಸಾಧ್ಯವಿತ್ತು. ಅವರು ಯೆಹೋವನ ಪ್ರೀತಿಪರ ಹಾಗೂ ಕೋಮಲವಾದ ಆರೈಕೆಯನ್ನು ಸಹ ಪಡೆಯುತ್ತಾ ಮುಂದುವರಿಯಸಾಧ್ಯವಿತ್ತು.
ಸೃಷ್ಟಿಕರ್ತನೊಂದಿಗಿನ ಈ ಆಪ್ತ ಸ್ನೇಹ ಹಾಗೂ ಆತನ ನಿಯಮಗಳಿಗೆ ವಿಧೇಯತೆಯು, ನಮ್ಮ ಪ್ರಥಮ ಹೆತ್ತವರಿಗೆ ಯಥಾರ್ಥವಾದ ಸಂತೋಷವನ್ನು ತಂದಿತು. (ಲೂಕ 11:28) ಸಂತೋಷಕ್ಕಿರುವ ಕೀಲಿ ಕೈಯನ್ನು ಕಂಡುಹಿಡಿಯುವ ಮೊದಲು, ಪ್ರಯೋಗ ನಡೆಸುತ್ತಾ ಅನೇಕ ವರ್ಷಗಳ ವರೆಗೆ ಜೀವಿಸುವಂತೆ ಆದಾಮಹವ್ವರಿಂದ ಅಪೇಕ್ಷಿಸಲ್ಪಡಲಿಲ್ಲ. ಅವರು ಸೃಷ್ಟಿಸಲ್ಪಟ್ಟ ಗಳಿಗೆಯಿಂದಲೇ ಸಂತೋಷಿತರಾಗಿದ್ದರು. ದೇವರೊಂದಿಗೆ ಸಮಾಧಾನದಿಂದಿರುವುದು ಮತ್ತು ಆತನ ಅಧಿಕಾರಕ್ಕೆ ಅಧೀನರಾಗಿರುವುದು ಅವರನ್ನು ಸಂತೋಷಿತರನ್ನಾಗಿ ಮಾಡಿತು.
ಆದರೆ, ಅವರು ದೇವರಿಗೆ ಅವಿಧೇಯರಾದ ಕ್ಷಣದಲ್ಲೇ ಆ ಸಂತೋಷವು ಕೊನೆಗೊಂಡಿತು. ದಂಗೆಯೇಳುವ ಮೂಲಕ, ಆದಾಮಹವ್ವರು ಯೆಹೋವನೊಂದಿಗಿನ ತಮ್ಮ ಆತ್ಮಿಕ ಸಂಬಂಧವನ್ನು ಕಡಿದುಕೊಂಡರು. ಅವರು ಇನ್ನೆಂದೂ ದೇವರ ಮಿತ್ರರಾಗಿರಲಿಲ್ಲ. (ಆದಿಕಾಂಡ 3:17-19) ಅವರು ತೋಟದಿಂದ ಹೊರಹಾಕಲ್ಪಟ್ಟ ದಿನದಿಂದಲೇ ಯೆಹೋವನು ಅವರೊಂದಿಗಿನ ಎಲ್ಲ ಸಂವಾದವನ್ನು ನಿಲ್ಲಿಸಿಬಿಟ್ಟನೆಂದು ತೋರುತ್ತದೆ. ಅವರು ತಮ್ಮ ಪರಿಪೂರ್ಣತೆಯನ್ನು, ಸದಾಕಾಲ ಜೀವಿಸುವ ಪ್ರತೀಕ್ಷೆಯನ್ನು, ಮತ್ತು ತಮ್ಮ ತೋಟದ ಮನೆಯನ್ನು ಕಳೆದುಕೊಂಡರು. (ಆದಿಕಾಂಡ 3:23) ಆದರೆ ಹೆಚ್ಚು ಪ್ರಾಮುಖ್ಯವಾಗಿ, ಅವರು ದೇವರೊಂದಿಗಿನ ತಮ್ಮ ಸಂಬಂಧವನ್ನು ಕಳೆದುಕೊಂಡದ್ದರಿಂದ, ಸಂತೋಷದ ಕೀಲಿ ಕೈಯನ್ನು ಅವರು ಕಳೆದುಕೊಂಡರು.
ಆಯ್ಕೆಮಾಡಲಿಕ್ಕಾಗಿರುವ ನಮ್ಮ ಸಾಮರ್ಥ್ಯ
ಸಾಯುವ ಮೊದಲು, ಆದಾಮಹವ್ವರು ತಮ್ಮ ಮಾನವ ವಿಶೇಷ ಗುಣಗಳನ್ನು, ಹುಟ್ಟು ಮನಸ್ಸಾಕ್ಷಿಯನ್ನು, ಮತ್ತು ಆತ್ಮಿಕತೆಗಾಗಿರುವ ಸಾಮರ್ಥ್ಯವನ್ನು ತಮ್ಮ ಸಂತಾನಕ್ಕೆ ದಾಟಿಸಿದರು. ಮಾನವ ಕುಟುಂಬವು ಪ್ರಾಣಿಗಳ ಮಟ್ಟಕ್ಕೆ ಇಳಿಸಲ್ಪಡಲಿಲ್ಲ. ಪ್ರಾಣಿಗಳಿಗೆ ಅಸದೃಶವಾಗಿ ನಾವು ಸೃಷ್ಟಿಕರ್ತನೊಂದಿಗೆ ಸಂಧಾನಮಾಡಿಕೊಳ್ಳಸಾಧ್ಯವಿದೆ. (2 ಕೊರಿಂಥ 5:18) ಬುದ್ಧಿಶಕ್ತಿಯುಳ್ಳ ಜೀವಿಗಳೋಪಾದಿ, ದೇವರಿಗೆ ವಿಧೇಯರಾಗಬೇಕೊ ಇಲ್ಲವೊ ಎಂಬ ಆಯ್ಕೆಯನ್ನು ಮಾಡುವ ಶಕ್ತಿ ಮಾನವರಿಗೆ ಇಂದಿಗೂ ಇದೆ. ಇದು, ಅನೇಕ ಶತಮಾನಗಳ ತರುವಾಯ, ಹೊಸದಾಗಿ ರೂಪುಗೊಂಡ ಇಸ್ರಾಯೇಲ್ ರಾಷ್ಟ್ರಕ್ಕೆ, ಯೆಹೋವನು ಜೀವ ಇಲ್ಲವೆ ಮರಣದ ಆಯ್ಕೆಯನ್ನು ನೀಡಿದಾಗ ದೃಷ್ಟಾಂತಿಸಲ್ಪಟ್ಟಿತು. ದೇವರು ತನ್ನ ವದನಕನಾದ ಮೋಶೆಯ ಮೂಲಕ ಹೇಳಿದ್ದು: “ನಾನು ಜೀವಮರಣಗಳನ್ನೂ ಆಶೀರ್ವಾದಶಾಪಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ.”—ಧರ್ಮೋಪದೇಶಕಾಂಡ 30:15-18.
ಈಗಲೂ, ಆದಿಯ ಪ್ರಮೋದವನವು ಕಳೆದುಹೋಗಿ ಸಾವಿರಾರು ವರ್ಷಗಳು ತೀರಿದ ಬಳಿಕವೂ, ಮಾನವರಾದ ನಮಗೆ ಸರಿಯಾದ ಆಯ್ಕೆಯನ್ನು ಮಾಡುವ ಸಾಮರ್ಥ್ಯವು ಇನ್ನೂ ಇದೆ. ನಮಗೊಂದು ಕ್ರಿಯಾತ್ಮಕ ಮನಸ್ಸಾಕ್ಷಿ ಹಾಗೂ ದೇವರ ನಿಯಮಗಳಿಗೆ ವಿಧೇಯರಾಗುವ ಮೂಲ ಸಾಮರ್ಥ್ಯವಿದೆ. ಬೈಬಲು, “ನಮ್ಮ ಆಂತರ್ಯ” ಮತ್ತು “ಅಂತರಾತ್ಮ”ದ ಕುರಿತಾಗಿ ಮಾತಾಡುತ್ತದೆ. (2 ಕೊರಿಂಥ 4:16; ರೋಮಾಪುರ 7:22) ಈ ಅಭಿವ್ಯಕ್ತಿಗಳು, ದೇವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸಲು, ಆತನು ಯೋಚಿಸುವ ವಿಧದಲ್ಲಿ ಯೋಚಿಸಲು, ಆತ್ಮಿಕರಾಗಿರಲು ನಮ್ಮೆಲ್ಲರಲ್ಲಿರುವ ಸ್ವಾಭಾವಿಕ ಸಾಮರ್ಥ್ಯಕ್ಕೆ ಸಂಬಂಧಿಸುತ್ತವೆ.
ನಮ್ಮ ನೈತಿಕ ಸ್ವರೂಪ ಹಾಗೂ ಮನಸ್ಸಾಕ್ಷಿಯ ಸಂಬಂಧದಲ್ಲಿ, ಅಪೊಸ್ತಲ ಪೌಲನು ಬರೆದುದು: “ಧರ್ಮಶಾಸ್ತ್ರವಿಲ್ಲದ ಅನ್ಯಜನರು ಸ್ವಾಭಾವಿಕವಾಗಿ ಧರ್ಮಶಾಸ್ತ್ರದಲ್ಲಿ ಹೇಳಿದಂತೆ ನಡೆದರೆ ಅವರು ಧರ್ಮಶಾಸ್ತ್ರವಿಲ್ಲದವರಾಗಿದ್ದರೂ ತಾವೇ ತಮಗೆ ಧರ್ಮಪ್ರಮಾಣವಾಗಿದ್ದಾರೆ; ಹೇಗಂದರೆ ಅವರು ಧರ್ಮಶಾಸ್ತ್ರದ ಮುಖ್ಯ ತಾತ್ಪರ್ಯ ತಮ್ಮ ಹೃದಯದಲ್ಲಿ ಬರೆದದೆ ಎಂಬದನ್ನು ತೋರ್ಪಡಿಸುತ್ತಾರೆ. ಇದಕ್ಕೆ ಅವರ ಮನಸ್ಸು ಸಹ ಸಾಕ್ಷಿ ನುಡಿಯುತ್ತದೆ; ಅವರ ಯೋಚನೆಗಳು ವಾದಿಪ್ರತಿವಾದಿಗಳಂತೆ—ಇದು ತಪ್ಪೆಂದು ತಪ್ಪಲ್ಲವೆಂದು ಸೂಚಿಸುತ್ತವೆ.”—ರೋಮಾಪುರ 2:14, 15.
ದೈವಿಕ ವಿವೇಕ ಮತ್ತು ವಿಧೇಯತೆ—ಕೀಲಿ ಕೈ
ಆದರೂ ಒಬ್ಬನು ಹೀಗೆ ಕೇಳಬಹುದು, ‘ನಮ್ಮೆಲ್ಲರಲ್ಲೂ ದೇವರನ್ನು ಆರಾಧಿಸುವ, ಮತ್ತು ಫಲಸ್ವರೂಪವಾಗಿ ಯಥಾರ್ಥವಾದ ಸಂತೋಷವನ್ನು ಅನುಭವಿಸುವ ಸ್ವಾಭಾವಿಕ ಪ್ರವೃತ್ತಿಯಿರುವಲ್ಲಿ, ಅಸಂತೋಷವು ಏಕೆ ಇಷ್ಟೊಂದು ವ್ಯಾಪಕವಾಗಿದೆ?’ ಅದು ಏಕೆಂದರೆ, ಸಂತೋಷವಾಗಿರಲು ನಮ್ಮಲ್ಲಿ ಪ್ರತಿಯೊಬ್ಬರೂ ಆತ್ಮಿಕತೆಯನ್ನು ಬೆಳೆಸಿಕೊಳ್ಳಬೇಕು. ಆದಿಯಲ್ಲಿ ಮನುಷ್ಯನು ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟನಾದರೂ, ಅವನು ತನ್ನ ಸೃಷ್ಟಿಕರ್ತನಿಂದ ವಿಮುಖನಾಗಿದ್ದಾನೆ. (ಎಫೆಸ 4:17, 18) ಆದಕಾರಣ, ನಮ್ಮಲ್ಲಿ ಪ್ರತಿಯೊಬ್ಬರೂ ದೇವರೊಂದಿಗೆ ಒಂದು ಆತ್ಮಿಕ ಸಂಬಂಧವನ್ನು ಸ್ಥಾಪಿಸಿ, ಅದನ್ನು ಕಾಪಾಡಿಕೊಂಡುಹೋಗಲು ಖಚಿತವಾದ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು. ಅಂತಹ ಒಂದು ಸಂಬಂಧವು ತನ್ನಷ್ಟಕ್ಕೆ ತಾನೇ ವಿಕಸನಗೊಳ್ಳಲಾರದು.
ಆತ್ಮಿಕತೆಯ ವಿಕಾಸದಲ್ಲಿ, ಯೇಸು ಪ್ರಾಮುಖ್ಯವಾದ ಎರಡು ಮೂಲತತ್ವಗಳನ್ನು ರೇಖಿಸಿದನು. ಒಂದು, ದೇವರ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವುದು, ಮತ್ತು ಇನ್ನೊಂದು, ಆತನ ಚಿತ್ತಕ್ಕೆ ವಿಧೇಯತೆಯಿಂದ ಅಧೀನರಾಗುವುದೇ. (ಯೋಹಾನ 17:3) ದೇವರ ವಾಕ್ಯವನ್ನು ಉದ್ಧರಿಸುತ್ತಾ, ಯೇಸು ಹೇಳಿದ್ದು: “ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು ಎಂದು ಬರದದೆ.” (ಮತ್ತಾಯ 4:4) ಮತ್ತೊಂದು ಸಂದರ್ಭದಲ್ಲಿ ಯೇಸು ಹೇಳಿದ್ದು: “ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೇ ನನ್ನ ಆಹಾರವು.” (ಯೋಹಾನ 4:34) ಸಂತೋಷಕ್ಕಾಗಿ ಒಂದು ಪ್ರಯೋಗಾತ್ಮಕ ಶೋಧವನ್ನು ನಡೆಸುತ್ತಾ, ನಾವು ಅನೇಕ ದಶಕಗಳನ್ನು ವ್ಯಯಿಸಬೇಕಾಗಿಲ್ಲ. ಅನುಭವವು ಸಂತೋಷಕ್ಕೆ ಕೀಲಿ ಕೈಯಾಗಿರುವುದಿಲ್ಲ. ಬದಲಿಗೆ, ದೈವಿಕ ವಿವೇಕ ಮತ್ತು ನಮ್ಮ ಸೃಷ್ಟಿಕರ್ತನಿಗೆ ವಿಧೇಯತೆಯು ಮಾತ್ರ ಜೀವಿತದಲ್ಲಿನ ನಿಜವಾದ ಆನಂದಕ್ಕೆ ನಡೆಸಬಲ್ಲದು.—ಕೀರ್ತನೆ 19:7, 8; ಪ್ರಸಂಗಿ 12:13.
ದೈವಿಕ ವಿವೇಕವನ್ನು ಪ್ರಯೋಗಿಸುವುದರ ಮೂಲಕ ಮತ್ತು ದೇವರ ಮುಂದೆ ಉತ್ತಮವಾದ ನಿಲುವನ್ನು ಪಡೆದುಕೊಂಡಿರುವ ಮೂಲಕ ಬರುವ ಸಂತೋಷವು, ನಮ್ಮ ನಿಲುಕಿಗೆ ಸಿಗದಂತಹದ್ದೇನಲ್ಲವೆಂಬುದು ಸ್ಪಷ್ಟ. (ಅ. ಕೃತ್ಯಗಳು 17:26, 27) ಯೆಹೋವನ ಮತ್ತು ಆತನ ಉದ್ದೇಶದ ಜ್ಞಾನವು ಪ್ರತಿಯೊಬ್ಬರಿಗೂ ದೊರೆಯುವಂತಹದ್ದಾಗಿದೆ. ಅನೇಕ ಭಾಷೆಗಳಲ್ಲಿ ನೂರಾರು ಕೋಟಿಗಳಷ್ಟು ಪ್ರತಿಗಳೊಂದಿಗೆ, ಬೈಬಲು ಲೋಕದ ಅತ್ಯಂತ ವ್ಯಾಪಕವಾಗಿ ವಿತರಿಸಲ್ಪಟ್ಟ ಪುಸ್ತಕವಾಗಿಯೇ ಉಳಿದಿದೆ. ನೀವು ದೇವರ ಮಿತ್ರರಾಗಿ, ಯಥಾರ್ಥವಾದ ಸಂತೋಷವನ್ನು ಅನುಭವಿಸುವಂತೆ ಬೈಬಲು ನಿಮಗೆ ಸಹಾಯಮಾಡಬಲ್ಲದು, ಏಕೆಂದರೆ ಶಾಸ್ತ್ರವಚನಗಳು ನಮಗೆ ಹೇಳುವುದು, “ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವರು ಭಾಗ್ಯವಂತರು [“ಸಂತೋಷಿತರು,” NW].”—ಕೀರ್ತನೆ 144:15.
[ಪುಟ 6 ರಲ್ಲಿರುವ ಚೌಕ]
ಸಂತೋಷದ ಕಡೆಗೆ ತೆಗೆದುಕೊಳ್ಳಬೇಕಾದ ಹೆಜ್ಜೆಗಳು
1. ಆತ್ಮಿಕತೆಯನ್ನು ಗಣ್ಯಮಾಡಿ, ಅದನ್ನು ಬೆಳೆಸಿಕೊಳ್ಳಿರಿ. ಯೇಸು ಹೇಳಿದ್ದು: “ದೇವರ ವಾಕ್ಯವನ್ನು ಕೇಳಿ ಅದಕ್ಕೆ ಸರಿಯಾಗಿ ನಡಕೊಳ್ಳುವವರೇ ಧನ್ಯರು [“ಸಂತೋಷಿತರು,” Nw].”—ಲೂಕ 11:28.
2. ಸಿರಿತನ ಇಲ್ಲವೆ ಸುಖಭೋಗಗಳಿಗಿಂತಲೂ, ದೇವರ ಸಮ್ಮತಿಯೇ ಹೆಚ್ಚು ಮಹತ್ವದ್ದೆಂಬುದನ್ನು ಗ್ರಹಿಸಿರಿ. ಪೌಲನು ಬರೆದುದು: “ಸಂತುಷ್ಟಿಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ. . . . ನಮಗೆ ಅನ್ನವಸ್ತ್ರಗಳಿದ್ದರೆ ಸಾಕು.”—1 ತಿಮೊಥೆಯ 6:6-8.
3. ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯನ್ನು ಬೆಳೆಸಿಕೊಳ್ಳಲು ಮತ್ತು ಅದಕ್ಕನುಸಾರ ಪ್ರತಿಕ್ರಿಯಿಸಲು ಪ್ರಯಾಸಪಡಿರಿ.—ರೋಮಾಪುರ 2:14, 15.
4. ಯೆಹೋವ ದೇವರಿಗೆ ವಿಧೇಯರಾಗಿರಲು ದೃಢನಿರ್ಧಾರ ಮಾಡಿರಿ, ಹೀಗೆ ಆತನ ಜನರಲ್ಲಿ ಒಬ್ಬರಾಗಿರುವ ಯೋಗ್ಯತೆಯನ್ನು ಪಡೆದುಕೊಳ್ಳುವಿರಿ. ಪುರಾತನ ದಾವೀದನು ಬರೆದುದು: “ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವರು ಭಾಗ್ಯವಂತರು [“ಸಂತೋಷಿತರು,” Nw].”—ಕೀರ್ತನೆ 144:15.
[ಪುಟ 7 ರಲ್ಲಿರುವ ಚಿತ್ರ]
“ತಮ್ಮ ಆತ್ಮಿಕ ಅಗತ್ಯದ ಅರಿವುಳ್ಳವರು ಸಂತೋಷಿತರು.”—ಮತ್ತಾಯ 5:3 (NW)