ಬೈಬಲು ನಮಗೆ ಲಭ್ಯವಾದ ವಿಧ—ಭಾಗ ಮೂರು
ಬರ್ಮ, 1824—ಅರಸನ ಅಧಿಕಾರಿಗಳು ಆ್ಯಡನೈರಮ್ ಮತ್ತು ಆ್ಯನ್ ಜಡ್ಸನ್ರ ಮಿಷನೆರಿ ಗೃಹವನ್ನು ಆಗ ತಾನೆ ಅಡಿಮೇಲುಮಾಡಿ ಹುಡುಕಿ, ಬೆಲೆಬಾಳುವಂತಹದ್ದೆಂದು ಅವರು ನೆನಸಿದ ಪ್ರತಿಯೊಂದು ವಸ್ತುವನ್ನು ತೆಗೆದುಕೊಂಡು ಹೋಗಿದ್ದರು. ಆದರೆ ಅತ್ಯಮೂಲ್ಯ ನಿಧಿಯೊಂದು—ಆ್ಯನ್ ಗುಪ್ತವಾಗಿ ಮನೆಯಡಿ ಹೂತಿಟ್ಟಿದ್ದ ಭಾಷಾಂತರಿತ ಬೈಬಲ್ ಹಸ್ತಪ್ರತಿ—ಅವರಿಗೆ ಸಿಕ್ಕಿರಲಿಲ್ಲ. ಭಾಷಾಂತರಕಾರನಾದ ಆ್ಯಡನೈರಮ್, ಬೇಹುಗಾರಿಕೆಯ ಆಪಾದಿತನಾಗಿ, ಸೊಳ್ಳೆ ತುಂಬಿದ ಸೆರೆಮನೆಯಲ್ಲಿ ಸಂಕೋಲೆ ತೊಡಿಸಲ್ಪಟ್ಟವನಾಗಿ ಬಿದ್ದಿದ್ದಾನೆ. ಈಗ ತೇವವು ಆ ಹಸ್ತಪ್ರತಿಯನ್ನು ನಾಶಗೊಳಿಸುವ ಬೆದರಿಕೆಯನ್ನು ಹಾಕುತ್ತದೆ. ಅದನ್ನು ಹೇಗೆ ಕಾಪಾಡಸಾಧ್ಯವಿದೆ? ಆ್ಯನ್ ಅದನ್ನು ಒಂದು ಗಟ್ಟಿ ತಲೆದಿಂಬಿನ ಒಳಗೆ ಇಟ್ಟು ಹೊಲಿದು, ಸೆರೆಮನೆಯಲ್ಲಿದ್ದ ತನ್ನ ಗಂಡನಿಗೆ ಕೊಡುತ್ತಾಳೆ. ಆ ತಲೆದಿಂಬು ಸುರಕ್ಷಿತವಾಗಿ ಉಳಿಯುತ್ತದೆ. ಅದರ ಒಳಗಿದ್ದ ಹಸ್ತಪ್ರತಿಗಳು ಪ್ರಥಮ ಬರ್ಮೀಸ್ ಬೈಬಲಿನ ಭಾಗವಾಗುತ್ತವೆ.
ಇತಿಹಾಸದಲ್ಲೆಲ್ಲ ಬೈಬಲು ಇಂತಹ ಅನೇಕ ಸಾಹಸಗಳನ್ನು ಅನುಭವಿಸಿತ್ತು. ಹಿಂದಣ ಸಂಚಿಕೆಗಳಲ್ಲಿ, ಬೈಬಲನ್ನು ಬರೆದು ಮುಕ್ತಾಯಗೊಳಿಸಿದ ಮೇಲೆ 1600ಗಳ ಆರಂಭದ ತನಕ ಅದರ ಭಾಷಾಂತರ ಮತ್ತು ವಿತರಣೆಯನ್ನು ನಾವು ಪರಿಗಣಿಸಿದೆವು. ಅಂದಿನಿಂದ ಇಂದಿನ ತನಕ ಬೈಬಲು ಯಾವ ಅನುಭವವನ್ನು ಪಡೆದಿದೆ? ಅದು ಎಂದಾದರೂ ಸಕಲರಿಗೂ ಲಭ್ಯವಾದೀತೆ? ವಾಚ್ ಟವರ್ ಸೊಸೈಟಿ ಇದರಲ್ಲಿ ಯಾವ ಪಾತ್ರವನ್ನು ವಹಿಸಿದೆ?
ಮಿಷನೆರಿಗಳು ಮತ್ತು ಬೈಬಲ್ ಸೊಸೈಟಿಗಳು
ಅನೇಕಾನೇಕ ದೇಶಗಳು, 1600ಗಳು ಮತ್ತು 1700ಗಳಲ್ಲಿ ಬೈಬಲ್ ವಾಚನದಲ್ಲಿ ಬಲವಾದ ಅತ್ಯಾಸಕ್ತಿಯನ್ನು ತೋರಿಸಿದವು. ಈ ಅವಧಿಯಲ್ಲಿ ವಿಶೇಷವಾಗಿ ಇಂಗ್ಲೆಂಡ್, ಬೈಬಲಿನಿಂದ ಗಾಢವಾಗಿ ಪ್ರಭಾವಿಸಲ್ಪಟ್ಟಿತು. ವಾಸ್ತವವಾಗಿ, ಆ ದೇಶದಲ್ಲಿ ಬೈಬಲ್ ಕಥೆಗಳು ಮತ್ತು ಬೋಧನೆಗಳು, ಕಾರ್ಯತಃ ಪ್ರತಿಯೊಬ್ಬರ—ಅರಸನಿಂದ ಹಿಡಿದು ನೇಗಿಲು ಹೊಡೆಯುವ ಹುಡುಗನ ವರೆಗೂ—ಆಲೋಚನೆಗಳನ್ನು ವ್ಯಾಪಿಸಿದವು. ಆದರೆ, ಬೈಬಲಿನ ಪ್ರಭಾವವು ಇನ್ನೂ ಹೆಚ್ಚು ವ್ಯಾಪಕವಾಗಿತ್ತು. ಆಗ ಇಂಗ್ಲೆಂಡ್ ಸಮುದ್ರಯಾನ ವ್ಯಾಪಾರ ಮತ್ತು ವಸಾಹತು ಶಕ್ತಿಯಾಗಿತ್ತು. ಮತ್ತು ಕೆಲವು ಆಂಗ್ಲರು ತಮ್ಮ ಪ್ರಯಾಣಗಳಲ್ಲಿ ಬೈಬಲನ್ನು ತಮ್ಮೊಂದಿಗೆ ಒಯ್ದರು. ಇದು ವ್ಯಾಪಕವಾದ ಬೈಬಲ್ ಚಳವಳಿಗೆ ಆಧಾರವನ್ನು ಒದಗಿಸಿತು.
1700ಗಳ ಅಂತ್ಯಭಾಗದಲ್ಲಿ, ಬೈಬಲು ಇಂಗ್ಲೆಂಡಿನ ಕೆಲವರನ್ನು, ಬ್ರಿಟಿಷ್ ಸಾಮ್ರಾಜ್ಯದ ದೂರದ ದೇಶಗಳ ದೇಶೀಯರ ಆತ್ಮಿಕಾವಶ್ಯಕತೆಗಳ ಕುರಿತು ಚಿಂತಿಸುವಂತೆ ಪ್ರಚೋದಿಸಿತು. ಆದರೆ ಈ ಚಿಂತೆಯು ಸಾರ್ವತ್ರಿಕವಾಗಿರಲಿಲ್ಲ ಎಂಬುದು ಖಂಡಿತ. ಅನೇಕ ಚರ್ಚ್ ಮುಖಂಡರು ವಿಧಿಯ ಪೂರ್ವನಿಶ್ಚಯದಲ್ಲಿ ನಂಬಿಕೆಯಿಟ್ಟಿದ್ದರು. ಆದಕಾರಣ ಕೆಲವು ಜನರು ರಕ್ಷಿಸಲ್ಪಡದಿರುವುದು ದೇವರ ಇಚ್ಫೆಯೆಂದು ಅವರು ಪರಿಗಣಿಸಿದರು. ಭಾರತಕ್ಕೆ ಒಂದು ಮಿಷನನ್ನು ಕಳುಹಿಸುವ ಬೆಂಬಲಾರ್ಥವಾಗಿ ಭಾವೀ ಮಿಷನೆರಿ, ವಿಲ್ಯಮ್ ಕ್ಯಾರೀ ಭಾವೋದ್ರಿಕ್ತವಾದ ಭಾಷಣವನ್ನು ಕೊಟ್ಟಾಗ, ಯಾವನೋ ಒಬ್ಬನು ಗದರಿಸುತ್ತ ಕೂಗಿದ್ದು: “ಯುವಕನೇ, ಕುಳಿತುಕೊ; ದೇವರು ಅಕ್ರೈಸ್ತರನ್ನು ಪರಿವರ್ತನೆ ಮಾಡಬಯಸುವಾಗ ನಿನ್ನ ಸಹಾಯವಿಲ್ಲದೆಯೇ ಪರಿವರ್ತಿಸುವನು!” ಆದರೂ, ಕ್ಯಾರೀ 1793ರಲ್ಲಿ ಭಾರತಕ್ಕೆ ಸಮುದ್ರಮಾರ್ಗವಾಗಿ ಹೊರಟನು. ವಿಸ್ಮಯಕರವಾಗಿ, ಅವನು ಕಟ್ಟಕಡೆಗೆ ಭಾರತದ 35 ಭಾಷೆಗಳಿಗೆ ಇಡೀ ಬೈಬಲನ್ನು ಅಥವಾ ಬೈಬಲಿನ ಭಾಗಗಳನ್ನು ಭಾಷಾಂತರಿಸಿದನು.
ಸ್ಥಳಿಕ ಭಾಷೆಗಳಲ್ಲಿರುವ ಬೈಬಲೇ ತಮ್ಮ ಅತಿ ಪ್ರಾಥಮಿಕ ಉಪಕರಣವೆಂಬುದನ್ನು ಮಿಷನೆರಿಗಳು ಗ್ರಹಿಸಿಕೊಂಡರು. ಆದರೂ, ಬೈಬಲುಗಳನ್ನು ಯಾರು ಒದಗಿಸುವರು? ಆಸಕ್ತಿಕರವಾಗಿ, ಜಗತ್ತಿನಾದ್ಯಂತ ಬೈಬಲುಗಳನ್ನು ಪ್ರಸರಿಸುವ ಒಂದು ಚಳವಳಿಯು, ಮೇರಿ ಜೋನ್ಸ್ ಎಂಬ 16 ವಯಸ್ಸಿನ ವೆಲ್ಷ್ ದೇಶದ ಹುಡುಗಿಯಿಂದ ಅಜ್ಞಾತವಾಗಿ ಕಿಡಿಗೆದರಿಸಲ್ಪಟ್ಟಿತು. ಮೇರಿ 1800ರಲ್ಲಿ ಒಬ್ಬ ಪಾದ್ರಿಯಿಂದ ವೆಲ್ಷ್ ಭಾಷೆಯ ಬೈಬಲನ್ನು ಖರೀದಿಸಲು ಬರಿಗಾಲಿನಲ್ಲಿ 40 ಕಿಲೊಮೀಟರುಗಳಷ್ಟು ದೂರದ ವರೆಗೆ ನಡೆದುಕೊಂಡುಹೋದಳು. ಆಕೆ ಆರು ವರ್ಷಗಳ ತನಕ ತನ್ನ ಹಣವನ್ನು ಕೂಡಿಸಿಟ್ಟಿದ್ದಳು, ಮತ್ತು ಬೈಬಲುಗಳೆಲ್ಲ ಮಾರಲ್ಪಟ್ಟಿವೆಯೆಂದು ಮೇರಿಗೆ ತಿಳಿದಾಗ, ಆಕೆ ಮನಮುದುಡಿದವಳಾಗಿ ಬಿಕ್ಕಿ ಬಿಕ್ಕಿ ಅತ್ತಳು. ಇದರಿಂದ ಗಾಢವಾಗಿ ಮನಕರಗಿದವನಾಗಿ, ಆ ಪಾದ್ರಿಯು ತನ್ನ ಸ್ವಂತ ಬೈಬಲುಗಳಲ್ಲಿ ಒಂದನ್ನು ಮೇರಿಗೆ ಕೊಟ್ಟನು.
ಆ ಬಳಿಕ, ಆ ಪಾದ್ರಿಯು ಬೈಬಲುಗಳು ಬೇಕಾಗಿದ್ದ ಅನೇಕರ ವಿಷಯದಲ್ಲಿ ಚಿಂತಿಸಿ, ಲಂಡನ್ನಲ್ಲಿದ್ದ ತನ್ನ ಸ್ನೇಹಿತರೊಂದಿಗೆ ಈ ಸಮಸ್ಯೆಯನ್ನು ಚರ್ಚಿಸಿದನು. ಇದರ ಪರಿಣಾಮವು, 1804ರಲ್ಲಿ ಬ್ರಿಟಿಷ್ ಆ್ಯಂಡ್ ಫಾರೀನ್ ಬೈಬಲ್ ಸೊಸೈಟಿಯ ರಚನೆಯೇ. ಇದರ ಆಧಾರವಚನವು ಸರಳವಾದುದಾಗಿತ್ತು: ಜನರಿಗೆ ತಮ್ಮ ಸ್ವಂತ ಭಾಷೆಗಳಲ್ಲಿ ಕೊಳ್ಳಲು ಸಾಧ್ಯವಿರುವ ಬೈಬಲುಗಳನ್ನು, “ಟಿಪ್ಪಣಿ ಅಥವಾ ಹೇಳಿಕೆಗಳಿಲ್ಲದೆ” ಮುದ್ರಿಸಿ ಒದಗಿಸಲಿಕ್ಕಾಗಿಯೇ. ಅಂಚುಗಳಲ್ಲಿ ವ್ಯಾಖ್ಯಾನಗಳನ್ನು ಕೊಡದಿರುವ ಮೂಲಕ, ತಾತ್ತ್ವಿಕ ವಿವಾದಗಳನ್ನು ತಪ್ಪಿಸಬಹುದೆಂದು ಸೊಸೈಟಿಯ ಸ್ಥಾಪಕರು ಹಾರೈಸಿದರು. ಆದರೆ ಈ ಬೈಬಲ್ ಸೊಸೈಟಿಯು ಅನೇಕ ಬಾರಿ, ಅವಿಶ್ವಸನೀಯ ಬರಹಗಳು (ಅಪಾಕ್ರಿಫ), ನಿಮಜ್ಜನದ ಮೂಲಕ ದೀಕ್ಷಾಸ್ನಾನ ಮತ್ತು ತ್ರಯೈಕ್ಯ ಬೋಧನೆಯ ಕುರಿತ ವಿವಾದದ ಕಾರಣ ಒಡೆಯಲಿಕ್ಕಿತ್ತು.
ಈ ಆರಂಭಿಕ ಉತ್ಸಾಹವು ಬೇಗನೆ ಹರಡಿತು ಮತ್ತು 1813ರೊಳಗೆ ಜರ್ಮನಿ, ನೆದರ್ಲೆಂಡ್ಸ್, ಡೆನ್ಮಾರ್ಕ್ ಮತ್ತು ರಷ್ಯದಲ್ಲಿ ಉಪಾಂಗ ಸೊಸೈಟಿಗಳು ರಚಿಸಲ್ಪಟ್ಟಿದ್ದವು. ಸಕಾಲದಲ್ಲಿ, ಬೇರೆ ದೇಶಗಳಲ್ಲಿದ್ದ ಬೈಬಲ್ ಸೊಸೈಟಿಗಳನ್ನು ಕೂಡಿಸಲಾಯಿತು. ಆದಿ ಬೈಬಲ್ ಸೊಸೈಟಿಗಳು ತಮ್ಮ ಉದ್ದೇಶಗಳನ್ನು ಸೂತ್ರೀಕರಿಸಿದಾಗ, ಜಗತ್ತಿನ ಅಧಿಕಾಂಶ ಭಾಗವು ಕೆಲವು ಮುಖ್ಯ ಭಾಷೆಗಳನ್ನು ಮಾತ್ರ ಉಪಯೋಗಿಸಿತೆಂದು ಅವರು ನೆನಸಿದರು. ಸಾವಿರಾರು ಭಾಷೆಗಳಿದ್ದವೆಂದು ಅವರು ಕನಸಿನಲ್ಲಿಯೂ ನೆನಸಿರಲಿಲ್ಲ! ದೇಶಭಾಷೆಗೆ ನೇರವಾಗಿ ಭಾಷಾಂತರಿಸಲು ಸಾಪೇಕ್ಷವಾಗಿ ಕೆಲವೇ ಭಾಷಾಂತರಕಾರರು ಹೀಬ್ರು ಮತ್ತು ಗ್ರೀಕ್ ಭಾಷೆಗಳನ್ನು ತಿಳಿದಿದ್ದರು. ಆದುದರಿಂದ, ಬ್ರಿಟಿಷ್ ಆ್ಯಂಡ್ ಫಾರೀನ್ ಬೈಬಲ್ ಸೊಸೈಟಿಯು ಭಾಷಾಂತರಗಳನ್ನು ಪ್ರಾಯೋಜಿಸಿದಾಗ, ಭಾಷಾಂತರಕಾರರು ಅನೇಕ ವೇಳೆ ತಮ್ಮ ಕೆಲಸವನ್ನು ಇಂಗ್ಲಿಷ್ ಭಾಷೆಯ ಕಿಂಗ್ ಜೇಮ್ಸ್ ವರ್ಷನ್ನ ಆಧಾರದಿಂದ ಮಾಡಿದರು.
ಒಬ್ಬ ಭಾಷಾಂತರಕಾರನ ಪರೀಕ್ಷೆಗಳು
ಬೈಬಲಿನ ಅಧಿಕಾಂಶ ಭಾಗವು ಪ್ರತಿನಿತ್ಯದ ಅನುಭವಗಳ ಮೇಲೆ ಆಧಾರಿಸಿದ ಕಥನಗಳನ್ನು ಮತ್ತು ದೃಷ್ಟಾಂತಗಳನ್ನು ಒಳಗೊಂಡಿರುತ್ತದೆ. ಇದು ಭಾಷಾಂತರವನ್ನು, ತತ್ತ್ವಜ್ಞಾನದ ಸೈದ್ಧಾಂತಿಕ ಭಾಷೆಯಲ್ಲಿ ಬರೆದುದನ್ನು ಭಾಷಾಂತರಿಸುವುದಕ್ಕಿಂತ ಹೆಚ್ಚು ಸುಲಭವಾಗಿಸುತ್ತದೆ. ಆದರೂ ಕಾಲಜ್ಞಾನಕ್ಕನುಸಾರ, ಮಿಷನೆರಿಗಳ ಆದಿ ಪ್ರಯತ್ನಗಳು ಕೆಲವು ಬಾರಿ ಗಲಿಬಿಲಿಗೊಳಿಸುವ ಅಥವಾ ಹಾಸ್ಯಭರಿತ ಭಾಷಾಂತರಗಳನ್ನು ಉಂಟುಮಾಡಿದವು. ಉದಾಹರಣೆಗೆ, ಒಂದು ಭಾಷಾಂತರವು, ಭಾರತದ ಒಂದು ಭಾಗದಲ್ಲಿದ್ದ ಜನರಿಗೆ, ದೇವರು ನೀಲಬಣ್ಣದ ವ್ಯಕ್ತಿಯೆಂಬ ಭಾವನೆಯನ್ನು ಕೊಟ್ಟಿತು. “ಪರಲೋಕದಲ್ಲಿರುವ ತಂದೆ” ಎಂಬ ಅಭಿವ್ಯಕ್ತಿಯಲ್ಲಿ, “ಪರಲೋಕದಲ್ಲಿರುವ” ಎಂಬ ಪದಕ್ಕೆ “ಆಕಾಶದ ಬಣ್ಣವುಳ್ಳ”—ಅಕ್ಷರಾರ್ಥದ ಆಕಾಶಮಂಡಲ—ಎಂಬ ಅರ್ಥವಿತ್ತು!
ಭಾಷಾಂತರಕಾರನಿಗಿರುವ ಅಡಚಣೆಗಳ ಕುರಿತು, ಆ್ಯಡನೈರಮ್ ಜಡ್ಸನ್ 1819ರಲ್ಲಿ ಬರೆದುದು: ‘ಭೂಮಿಯ ಆಚೆಪಕ್ಕದಲ್ಲಿರುವ ಜನರ, ಯಾರ ಭಾಷಾಭಿವ್ಯಕ್ತಿಗಳು ಸಂಪೂರ್ಣವಾಗಿ ಹೊಸದಾಗಿವೆಯೊ ಅಂತಹ ಜನರ ಭಾಷೆಯನ್ನು, ಯಾವುದರ ಎಲ್ಲ ಅಕ್ಷರಗಳೂ ಪದಗಳೂ ನಾವು ಎಂದಾದರೂ ಕೇಳಿರುವ ಯಾವುದೇ ಭಾಷೆಗೆ ಯಾವ ಹೋಲಿಕೆಯೂ ಇಲ್ಲದಿರುವ ಭಾಷೆಯನ್ನು, ಶಬ್ದ ನಿಘಂಟು ಅಥವಾ ದ್ವಿಭಾಷಿಯು ಇಲ್ಲದಿರುವ ಭಾಷೆಯನ್ನು ಮತ್ತು ದೇಶೀಯ ಶಿಕ್ಷಕನನ್ನು ಪಡೆದುಕೊಳ್ಳುವ ಮೊದಲು ನಮಗೆ ಸ್ವಲ್ಪ ತಿಳಿಯಲೇ ಬೇಕಾಗಿರುವ ಒಂದು ಭಾಷೆಯನ್ನು ನಾವು ತೆಗೆದುಕೊಳ್ಳುವಾಗ, ಬಹಳ ಕೆಲಸವೆಂದೇ ಅದರ ಅರ್ಥ!’ ಜಡ್ಸನ್ರಂತಹ ಭಾಷಾಂತರಕಾರರ ಕೆಲಸವು ಬೈಬಲಿನ ಲಭ್ಯತೆಯನ್ನು ಮಹತ್ತರವಾಗಿ ಹೆಚ್ಚಿಸಿತು.—12ನೆಯ ಪುಟದಲ್ಲಿರುವ ಚಾರ್ಟನ್ನು ನೋಡಿ.
ಭಾಷಾಂತರದ ಕಠಿನ ಕೆಲಸದಲ್ಲಿ ಆ್ಯನ್ ಜಡ್ಸನ್ ತನ್ನ ಗಂಡನಿಗೆ ಸಹಾಯಮಾಡಿದಳು. ಆದರೆ ಜಡ್ಸನ್ ದಂಪತಿಗಳು ಪಾಂಡಿತ್ಯದ ಪರೀಕ್ಷೆಗಳಿಗಿಂತ ಹೆಚ್ಚಿನದ್ದನ್ನು ಎದುರಿಸಿದರು. ಅರಸನ ಅಧಿಕಾರಿಗಳು ಆ್ಯಡನೈರಮನನ್ನು ಜೈಲಿಗೆ ಕರೆದೊಯ್ದಾಗ, ಆ್ಯನ್ ತುಂಬುಗರ್ಭಿಣಿಯಾಗಿದ್ದಳು. ಆಕೆ ಧೈರ್ಯದಿಂದ, 21 ತಿಂಗಳುಗಳ ತನಕ ತನ್ನ ಗಂಡನ ಪರವಾಗಿ ಪ್ರತಿಕೂಲ ಮನಸ್ಸಿನ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದಳು. ಕಾಯಿಲೆಯೊಂದಿಗೆ ಅನುಭವಿಸಿದ ಉಗ್ರ ಪರೀಕ್ಷೆ ಆಕೆಗೆ ಆರೋಗ್ಯನಷ್ಟವನ್ನು ತಂದಿತು. ಆ್ಯಡನೈರಮನ ಬಿಡುಗಡೆಯಾಗಿ ಸ್ವಲ್ಪದರಲ್ಲೇ, ಅವನ ಧೀರೆ ಆ್ಯನ್ ಮತ್ತು ಅವರ ಚಿಕ್ಕ ಮಗಳು ಜ್ವರದಿಂದ ಸತ್ತುಹೋದರು. ಆ್ಯಡನೈರಮ್ ದುಃಖದಿಂದ ಎದೆಯೊಡೆದವನಾದನು. ಹಾಗಿದ್ದರೂ, ಅವನು ಬಲಕ್ಕಾಗಿ ದೇವರ ಕಡೆಗೆ ನೋಡಿ, ಭಾಷಾಂತರಿಸುತ್ತ ಮುಂದುವರಿದು, 1835ರಲ್ಲಿ ಬರ್ಮೀಸ್ ಬೈಬಲನ್ನು ಮುಗಿಸಿದನು. ಏತನ್ಮಧ್ಯೆ, ಬೈಬಲಿನ ವಿರುದ್ಧವಾಗಿ ಇತರ ಮೋಸದ ಪಂಥಾಹ್ವಾನಗಳು ಬೆಳೆಯುತ್ತಿದ್ದವು.
ವಿವಾದವು ಬೈಬಲನ್ನು ಸುತ್ತುವರಿಯುತ್ತದೆ
1800ಗಳು, ಬೈಬಲು ಕೆಲವು ಬಾರಿ ಕೇಂದ್ರೀಯ ಪಾತ್ರವನ್ನು ವಹಿಸಿದ ಮಹಾ ಸಾಮಾಜಿಕ ಮತ್ತು ರಾಜಕೀಯ ವಿವಾದವನ್ನು ಕಂಡವು. ದೃಷ್ಟಾಂತಕ್ಕೆ, ರಷ್ಯನ್ ಬೈಬಲ್ ಸೊಸೈಟಿಯು ಸಾರ್ ದೊರೆ ಮತ್ತು ರಷ್ಯನ್ ಆರ್ಥೊಡಕ್ಸ್ ಚರ್ಚಿನಿಂದ ಪೋಷಣೆ ಪಡೆದು ಆರಂಭಗೊಂಡಿತ್ತಾದರೂ, ಸಮಯಾನಂತರ ಆ ಪೋಷಕರು ಅದನ್ನು ವಿಸರ್ಜಿಸಿ, ಸೊಸೈಟಿಗೆ ನಿಷೇಧ ಹಾಕಿದರು. (ಆ ಸೊಸೈಟಿಯ ವಿರೋಧಿಗಳಿಂದ ಒಂದು ವರ್ಷದ ಹಿಂದೆ ಆಗಲೇ ಸಾವಿರಾರು ಬೈಬಲುಗಳು ಸುಡಲ್ಪಟ್ಟಿದ್ದವು.) ಆದಿಕ್ರೈಸ್ತರು ಅಷ್ಟೊಂದು ಉತ್ಸುಕತೆಯಿಂದ ಆರಂಭಿಸಿದ ಬೈಬಲಿನ ಸಾರ್ವತ್ರಿಕ ವಿತರಣೆಯನ್ನು ಈಗ ಆರ್ಥೊಡಕ್ಸ್ ಪಾದ್ರಿಗಳು ಹುರುಪಿನಿಂದ ಅಂತ್ಯಗೊಳಿಸಲು ಪ್ರಯತ್ನಿಸಿದರು. ಬೈಬಲು, ಚರ್ಚಿನ ಮತ್ತು ಸರಕಾರದ ಅಧಿಕಾರವನ್ನು ಅಪಾಯಕ್ಕೊಳಪಡಿಸಿತೆಂದು 19ನೆಯ ಶತಮಾನದ ಆರ್ಥೊಡಕ್ಸ್ ನೇತಾರರು ಪಟ್ಟುಹಿಡಿದು ಹೇಳಿದರು. ಹಾಸ್ಯವ್ಯಂಗ್ಯವಾಗಿ, ತಲೆದೋರಿದ ರಾಜಕೀಯ ಕ್ರಾಂತಿಕಾರಕ ಚಳವಳಿಯು, ಬೈಬಲನ್ನು ಅಧಿಕಾರಿಗಳಿಗೆ ಅಪಾಯಕರವಾಗಿ ಅಲ್ಲ, ಜನತೆಯನ್ನು ಅಧೀನತೆಯಲ್ಲಿಡಲು ಚರ್ಚ್ ಮತ್ತು ಸರಕಾರದ ಆಯುಧವೆಂದೆಣಿಸಿತು. ಬೈಬಲು ಎರಡೂ ಕಡೆಯಿಂದ ಆಕ್ರಮಣಕ್ಕೊಳಗಾಯಿತು!
ತರುವಾಯದ ವರುಷಗಳು ಸಹ ಬೈಬಲಿನ ಮೇಲೆ ಹೆಚ್ಚಿನ “ಬೌದ್ಧಿಕ” ಆಕ್ರಮಣಗಳನ್ನು ನೋಡಿದವು. ಚಾರ್ಲ್ಸ್ ಡಾರ್ವಿನ್ 1831ರಲ್ಲಿ, ವಿಕಾಸವಾದಕ್ಕೆ ನಡೆಸಿದ ತನ್ನ ಕಾರ್ಯಯಾತ್ರೆಯನ್ನು ಮಾಡಿದನು. ಮಾರ್ಕ್ಸ್ ಮತ್ತು ಎಂಗೆಲ್ಸ್ 1848ರಲ್ಲಿ, ಕ್ರೈಸ್ತತ್ವವು ಶೋಷಣೆಯ ಉಪಕರಣವೆಂದು ಚಿತ್ರಿಸಿದ ಕಮ್ಯೂನಿಸ್ಟ್ ಮ್ಯಾನಿಫೆಸ್ಟೊವನ್ನು ಹೊರಡಿಸಿದರು. ಅಲ್ಲದೆ, ಈ ಅವಧಿಯಲ್ಲಿ ಮೂಲ ರಚನಾ ವಿಮರ್ಶಕರು ಶಾಸ್ತ್ರಗಳ ವಿಶ್ವಾಸಾರ್ಹತೆಯನ್ನು ಮತ್ತು ಬೈಬಲ್ ವ್ಯಕ್ತಿಗಳ ಐತಿಹಾಸಿಕ ನಿಜತ್ವವನ್ನು—ಯೇಸುವಿನ ಕುರಿತಾದ ಐತಿಹಾಸಿಕ ನಿಜತ್ವವನ್ನೂ—ಸಂದೇಹಿಸಿದರು! ಆದರೆ ಕೆಲವು ಮಂದಿ ಬುದ್ಧಿಜೀವಿಗಳು ದೇವರನ್ನು ಮತ್ತು ಬೈಬಲನ್ನು ತಳ್ಳಿಹಾಕಿದ ಆ ಕಲ್ಪನೆಗಳ ತರ್ಕದೋಷಗಳನ್ನು ಗುರುತಿಸಿ, ಬೈಬಲಿನ ಭರವಸಾರ್ಹತೆಯನ್ನು ದೃಢೀಕರಿಸುವ ಪಾಂಡಿತ್ಯಪೂರ್ಣ ವಿಧಗಳನ್ನು ಹುಡುಕಿದರು. ಇವರಲ್ಲಿ ಒಬ್ಬನು ಪ್ರತಿಭಾಶಾಲಿ ಜರ್ಮನ್ ಬಹುಭಾಷಾಪಂಡಿತನಾದ ಕಾನ್ಸ್ಟಾಂಟೀನ್ ವಾನ್ ಟಿಷನ್ಡಾರ್ಫ್.
ಶೋಧಗಳು ಬೈಬಲ್ ಗ್ರಂಥಪಾಠಗಳನ್ನು ದೃಢಪಡಿಸಲು ಸಹಾಯಮಾಡುತ್ತವೆ
ಟಿಷನ್ಡಾರ್ಫ್ ಹಳೆಯ ಬೈಬಲ್ ಹಸ್ತಪ್ರತಿಗಳನ್ನು ಹುಡುಕುತ್ತ, ಬೈಬಲಿನ ಮೂಲ ಗ್ರಂಥಪಾಠವನ್ನು ಪ್ರಶ್ನಾತೀತವಾಗಿ ಸ್ಥಾಪಿಸುವರೆ ಮಧ್ಯಪೂರ್ವದಲ್ಲಿ ಪ್ರಯಾಣಮಾಡಿದನು. 1859ರಲ್ಲಿ, ಡಾರ್ವಿನ್ ಜೀವಿಗಳ ಮೂಲೋತ್ಪತ್ತಿ (ಇಂಗ್ಲಿಷ್) ಎಂಬ ಪುಸ್ತಕವನ್ನು ಪ್ರಕಟಿಸಿದ ವರ್ಷದಲ್ಲೇ, ಟಿಷನ್ಡಾರ್ಫ್ ಸೀನಾಯಿ ಪರ್ವತದ ತಗ್ಗಿನಲ್ಲಿನ ಒಂದು ಸಂನ್ಯಾಸಿ ಮಠದಲ್ಲಿ ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಜ್ಞಾತವಾಗಿದ್ದ ಅತಿ ಹಳೆಯ ಪೂರ್ತಿ ಪ್ರತಿಯನ್ನು ಪತ್ತೆಹಚ್ಚಿದನು. ಅದು ಕೋಡೆಕ್ಸ್ ಸೈನೈಟಿಕಸ್ ಎಂದು ಪ್ರಸಿದ್ಧವಾಗಿದೆ. ಜೆರೋಮನು ಲ್ಯಾಟಿನ್ ವಲ್ಗೇಟ್ ಅನ್ನು ಪೂರ್ಣಗೊಳಿಸುವುದಕ್ಕೆ ಸುಮಾರು 50 ವರ್ಷಗಳಿಗೆ ಮೊದಲು ಅದನ್ನು ಪ್ರಾಯಶಃ ತಯಾರಿಸಲಾಗಿತ್ತು. ಆ ಸಂನ್ಯಾಸಿ ಮಠದಿಂದ ಆ ಕೋಡೆಕ್ಸ್ನ ತೆಗೆಯೋಣದ ಔಚಿತ್ಯವು ಈಗಲೂ ಚರ್ಚಿಸಲ್ಪಡುತ್ತಿದೆಯಾದರೂ, ಟಿಷನ್ಡಾರ್ಫ್ ಅದನ್ನು ಪ್ರಕಟಪಡಿಸಿ, ಹೀಗೆ ಅದು ವಿದ್ವಾಂಸರಿಗೆ ಲಭ್ಯವಾಗುವಂತೆ ಮಾಡಿದನು.a
ಸೈನೈಟಿಕಸ್ ಅತಿ ಹಳೆಯ ಮೂಲ ಭಾಷಾ ಹಸ್ತಪ್ರತಿಗಳಲ್ಲಿ ಒಂದಾಗಿದ್ದುದರಿಂದ, ಗ್ರೀಕ್ ಶಾಸ್ತ್ರಗಳು ಕಾರ್ಯತಃ ಬದಲಾಗದೆ ಉಳಿದಿವೆಯೆಂದು ತೋರಿಸಿದ್ದು ಮಾತ್ರವಲ್ಲ, ತರುವಾಯದ ಹಸ್ತಪ್ರತಿಗಳೊಳಗೆ ನುಸುಳಿದ್ದ ದೋಷಗಳನ್ನು ಬಯಲುಪಡಿಸುವರೆ ಪಂಡಿತರಿಗೆ ಸಹಾಯವನ್ನೂ ಮಾಡಿತು. ಉದಾಹರಣೆಗೆ, 1 ತಿಮೊಥೆಯ 3:16ರಲ್ಲಿ ಸೈನೈಟಿಕಸ್ ಯೇಸುವನ್ನು ಸೂಚಿಸಿ ಹೀಗನ್ನುತ್ತದೆ: “ಅವನು ಶರೀರದಲ್ಲಿ ಕಾಣಿಸಿಕೊಂಡನು.” “ಅವನು” ಎಂಬುದರ ಬದಲಾಗಿ, ಆಗ ಜ್ಞಾತವಾಗಿದ್ದ ಅಧಿಕಾಂಶ ಹಸ್ತಪ್ರತಿಗಳು “ಅವನು” ಎಂಬುದಕ್ಕಾಗಿರುವ ಗ್ರೀಕ್ ಪದವನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸುವ ಮೂಲಕ “ದೇವರು” ಎಂಬುದಕ್ಕಿರುವ ಸಂಕ್ಷಿಪ್ತ ರೂಪವನ್ನು ತೋರಿಸಿದವು. ಆದರೂ, “ದೇವರು” ಎಂದಿರುವ ಯಾವುದೇ ಗ್ರೀಕ್ ಹಸ್ತಪ್ರತಿಗಿಂತ ಅನೇಕ ವರ್ಷಗಳ ಮೊದಲು ಸೈನೈಟಿಕಸ್ ಅನ್ನು ತಯಾರಿಸಲಾಗಿತ್ತು. ಹೀಗೆ, ತ್ರಯೈಕ್ಯ ಬೋಧನೆಯನ್ನು ಬೆಂಬಲಿಸಲಿಕ್ಕಾಗಿ ಒಳಸೇರಿಸಲ್ಪಟ್ಟಿತು ಎಂದು ವ್ಯಕ್ತವಾಗುವ ತರುವಾಯದ ಗ್ರಂಥಪಾಠ ಮಾಲಿನ್ಯವನ್ನು ಇದು ತಿಳಿಯಪಡಿಸಿತು.
ಟಿಷನ್ಡಾರ್ಫ್ನ ಸಮಯದಿಂದೀಚೆಗೆ ಹೆಚ್ಚು ಹಸ್ತಪ್ರತಿಗಳು ಬೆಳಕಿಗೆ ಬಂದಿವೆ. ಇಂದು, ಹೀಬ್ರು ಶಾಸ್ತ್ರಗಳ ಜ್ಞಾತ ಹಸ್ತಪ್ರತಿಗಳ ಮೊತ್ತವು ಸುಮಾರು 6,000 ಮತ್ತು ಗ್ರೀಕ್ ಶಾಸ್ತ್ರಗಳ ಹಸ್ತಪ್ರತಿಗಳು 13,000ಕ್ಕೂ ಹೆಚ್ಚು. ಇವುಗಳ ತುಲನಾತ್ಮಕ ಅಧ್ಯಯನವು, ದೃಢನಿಶ್ಚಯವಾಗಿ ಭರವಸವಿಡಸಾಧ್ಯವಿರುವ ಮೂಲಭಾಷೆಯ ಒಂದು ಗ್ರಂಥಪಾಠದಲ್ಲಿ ಪರಿಣಮಿಸಿದೆ. ವಿದ್ವಾಂಸ ಎಫ್. ಎಫ್. ಬ್ರೂಸ್ ಹೇಳುವಂತೆ: “ಪಾಠಾಂತರವು . . . ಐತಿಹಾಸಿಕ ನಿಜತ್ವದ ಅಥವಾ ಕ್ರೈಸ್ತ ವಿಶ್ವಾಸ ಮತ್ತು ಆಚರಣೆಯ ಯಾವುದೇ ಪ್ರಾಮುಖ್ಯ ಪ್ರಶ್ನೆಗಳನ್ನು ಪ್ರಭಾವಿಸುವುದಿಲ್ಲ.” ಬೈಬಲ್ ಭಾಷಾಂತರವು ಇನ್ನೂ ಅನೇಕ ಭಾಷೆಗಳಲ್ಲಿ ಮುಂದುವರಿದಾಗ, ಈ ವರ್ಧಿಸಿದ ಜ್ಞಾನವು ಜನರಿಗೆ ಹೇಗೆ ಲಾಭದಾಯಕವಾಗಿರಸಾಧ್ಯವಿತ್ತು?
ವಾಚ್ ಟವರ್ ಸೊಸೈಟಿ ಮತ್ತು ಬೈಬಲ್
1881ರಲ್ಲಿ, ಬೈಬಲ್ ಬೋಧಕರ ಮತ್ತು ವಿದ್ಯಾರ್ಥಿಗಳ, ಚಿಕ್ಕದಾದರೂ ಶ್ರದ್ಧಾವಂತ ಗುಂಪೊಂದು ಆ ಬಳಿಕ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಗಿ ಪರಿಣಮಿಸಿದ ಒಂದು ಸಂಘವನ್ನು ರಚಿಸಿತು. ಪ್ರಥಮವಾಗಿ, ಬೇರೆ ಬೈಬಲ್ ಸೊಸೈಟಿಗಳು ತಯಾರಿಸಿದ ಬೈಬಲ್ಗಳನ್ನು—ಟಿಷನ್ಡಾರ್ಫ್ನ ಗ್ರೀಕ್ ಶಾಸ್ತ್ರಗಳನ್ನು ಸಹ—ಅವರು ವಿತರಿಸಿದರು. ಆದರೆ 1890ರೊಳಗೆ ಅವರು, ಬೈಬಲಿನ ಅನೇಕ ಆವೃತ್ತಿಗಳಲ್ಲಿ ಮೊದಲನೆಯದನ್ನು ಪ್ರಾಯೋಜಿಸುತ್ತ, ಬೈಬಲ್ ಪ್ರಕಾಶನ ಕಾರ್ಯದೊಳಗೆ ನೇರವಾಗಿ ಪ್ರವೇಶಿಸಿದ್ದರು. 1926ರಲ್ಲಿ ಸೊಸೈಟಿಯು ತನ್ನ ಸ್ವಂತ ಪ್ರೆಸ್ಗಳಲ್ಲಿ ಬೈಬಲನ್ನು ಮುದ್ರಿಸಲು ಪ್ರಾರಂಭಿಸಿತು. ಆದರೆ ಬೈಬಲಿನ ಸದ್ಯೋಚಿತ ಭಾಷಾಂತರವೊಂದರ ಆವಶ್ಯಕತೆಯು ಹೆಚ್ಚು ವ್ಯಕ್ತವಾಗತೊಡಗಿತು. ಹಿಂದಿನ ಶತಮಾನದ ಶೋಧಗಳ ಮತ್ತು ಪಾಂಡಿತ್ಯಗಳ ಮೂಲಕ ಸಂಪಾದಿಸಿದ ಜ್ಞಾನವನ್ನು ಒಂದು ಅರ್ಥವಾಗಸಾಧ್ಯವಿರುವ ಮತ್ತು ಜನರು ಕೊಳ್ಳಸಾಧ್ಯವಿರುವ ಬೈಬಲಿನಲ್ಲಿ ಸಂಘಟಿಸಸಾಧ್ಯವಿತ್ತೊ? ಈ ಧ್ಯೇಯವುಳ್ಳದ್ದಾಗಿ, ಆ ಸೊಸೈಟಿಯ ಒಡನಾಡಿಗಳು 1946ರಲ್ಲಿ ಶಾಸ್ತ್ರಗಳ ಹೊಸ ಭಾಷಾಂತರವೊಂದನ್ನು ತಯಾರಿಸಲು ಹೊರಟರು.
ಒಂದು ಭಾಷಾಂತರ, ಅನೇಕ ಭಾಷೆಗಳು
ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ ಅನ್ನು ಇಂಗ್ಲಿಷ್ನಲ್ಲಿ ತಯಾರಿಸಲು, ಅನುಭವಸ್ಥರಾದ ಅಭಿಷಿಕ್ತರ ಒಂದು ಭಾಷಾಂತರ ಕಮಿಟಿಯನ್ನು ಸಂಘಟಿಸಲಾಯಿತು. ಅದನ್ನು ಆರು ಸಂಪುಟಗಳಲ್ಲಿ ಪ್ರಕಾಶಿಸಿ, ಕ್ರಿಶ್ಚಿಯನ್ ಗ್ರೀಕ್ ಶಾಸ್ತ್ರದಿಂದ ಆರಂಭಗೊಂಡು, 1950ರಿಂದ 1960ರ ತನಕ ಬಿಡುಗಡೆಮಾಡಲಾಯಿತು. ಇದನ್ನು 1963ರಿಂದ ಹೆಚ್ಚಿನ 27 ಭಾಷೆಗಳಲ್ಲಿ ಭಾಷಾಂತರಿಸಲಾಗಿದ್ದು, ಇನ್ನೂ ಹೆಚ್ಚು ಭಾಷೆಗಳಲ್ಲಿ ಅದು ಪ್ರಗತಿ ಹೊಂದುತ್ತಿದೆ. ಇಂಗ್ಲಿಷಿಗೆ ಇದ್ದ ಗುರಿಯೇ ಬೇರೆ ಭಾಷೆಗಳದ್ದೂ ಆಗಿದೆ. ಮೊದಲನೆಯದಾಗಿ, ಭಾಷಾಂತರವು ಮೂಲ ಅರ್ಥಗಳಿಗೆ ಎಷ್ಟು ಸಾಧ್ಯವೊ ಅಷ್ಟು ಹತ್ತಿರವಾಗಿದ್ದು, ನಿಷ್ಕೃಷ್ಟವಾಗಿರಬೇಕು. ಒಂದು ಪ್ರತ್ಯೇಕ ತಾತ್ತ್ವಿಕ ಅರ್ಥವಿವರಣೆಗೆ ಹೊಂದಿಸಲು ಅದರ ಅರ್ಥವನ್ನು ಓಲಿಸಬಾರದು. ಎರಡನೆಯದಾಗಿ, ಸಾಮಂಜಸ್ಯವನ್ನು ಕಾಪಾಡಬೇಕು. ಪೂರ್ವಾಪರವು ನ್ಯಾಯಸಮ್ಮತವಾಗಿ ಅನುಮತಿಸುವಷ್ಟರ ಮಟ್ಟಿಗೆ, ಭಾಷಾಂತರವು ಪ್ರತಿ ಪ್ರಮುಖ ಪದಕ್ಕೆ ಒಂದೇ ಸಮಾನಪದವನ್ನು ಇಟ್ಟುಕೊಳ್ಳಬೇಕು. ಬೈಬಲ್ ಲೇಖಕರು ನಿರ್ದಿಷ್ಟ ಪದಗಳನ್ನು ಹೇಗೆ ಬಳಸಿದರೆಂಬುದನ್ನು ವಾಚಕರು ತಿಳಿಯುವಂತೆ ಇಂತಹ ಭಾಷಾಂತರವು ಸಹಾಯಮಾಡುತ್ತದೆ. ಮೂರನೆಯದಾಗಿ, ಭಾಷಾಂತರವು ಅರ್ಥವನ್ನು ಅಸ್ಪಷ್ಟಗೊಳಿಸದೆ ಇರುವಷ್ಟರ ಮಟ್ಟಿಗೆ, ಎಷ್ಟು ಸಾಧ್ಯವೋ ಅಷ್ಟು ಅಕ್ಷರಶಃವಾಗಿರಬೇಕು. ಅಕ್ಷರಶಃ ಭಾಷಾಂತರವು ಓದುಗರಿಗೆ ಮೂಲಭಾಷೆಗಳ ಮತ್ತು ಕೂಡಿರುವ ಆಲೋಚನಾಶಕ್ತಿಗಳ ರುಚಿಗೆ ಹೆಚ್ಚು ಒತ್ತಾದ ಪ್ರವೇಶವನ್ನು ನೀಡುತ್ತದೆ. ಮತ್ತು ನಾಲ್ಕನೆಯದಾಗಿ, ಜನಸಾಮಾನ್ಯರು ಓದಿ, ಅರ್ಥಮಾಡಿಕೊಳ್ಳಸಾಧ್ಯವಿರುವಂತೆ ಅದು ಸುಲಭವಾಗಿರಬೇಕು.
ಇಂಗ್ಲಿಷ್ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ನ ತುಸು ಅಕ್ಷರಾರ್ಥಕ ಶೈಲಿಯು ಇದನ್ನು ಇತರ ಭಾಷೆಗಳಿಗೆ ಭಾಷಾಂತರಿಸಲು ಸುಗಮಗೊಳಿಸುತ್ತದೆ. ಈ ಉದ್ದೇಶಕ್ಕಾಗಿ ಸೊಸೈಟಿಯ ಭಾಷಾಂತರ ತಂಡಗಳು ತಮ್ಮ ಕೆಲಸವನ್ನು ವೇಗದಿಂದ ಮುಂದುವರಿಸಲು ಮತ್ತು ಅದನ್ನು ಹೆಚ್ಚು ನಿಷ್ಕೃಷ್ಟಗೊಳಿಸಲು ಈಗ ಆಧುನಿಕ ಕಂಪ್ಯೂಟರೀಕೃತ ಉಪಕರಣಗಳನ್ನು ಉಪಯೋಗಿಸುತ್ತವೆ. ಈ ವ್ಯವಸ್ಥೆಯು ಭಾಷಾಂತರಕಾರರಿಗೆ ಅವರು ಪ್ರತಿ ಪ್ರಮುಖ ಪದಕ್ಕೆ ಸಮಾನವಾದ ದೇಶಭಾಷೆಯ ಪದಗಳ ಪಟ್ಟಿಗಳನ್ನು ಮಾಡುವಂತೆ ಸಹಾಯಮಾಡುತ್ತದೆ. ಬೈಬಲಿನ ಪ್ರತಿಯೊಂದು ಹೀಬ್ರು ಮತ್ತು ಗ್ರೀಕ್ ಪದದ ಇಂಗ್ಲಿಷ್ ಭಾಷಾಂತರವನ್ನು ಸಹ ಅಭ್ಯಸಿಸಲು ಇದು ಅವರನ್ನು ಸಮರ್ಥರನ್ನಾಗಿಸುತ್ತದೆ.
ಹೀಬ್ರು ಮತ್ತು ಗ್ರೀಕ್ನಿಂದ ನೇರವಾಗಿ ಭಾಷಾಂತರಿಸುವ ಬದಲಾಗಿ ಇಂಗ್ಲಿಷಿನಿಂದ ಭಾಷಾಂತರಿಸುವುದು ಪ್ರಮುಖ ಪ್ರಯೋಜನಗಳನ್ನು ನೀಡುತ್ತದೆ. ಭಾಷಾಂತರದ ಅವಧಿಯನ್ನು ಅದು ಕಡಮೆಗೊಳಿಸುವುದಲ್ಲದೆ, ಎಲ್ಲ ಭಾಷೆಗಳಲ್ಲಿ ಅಭಿವ್ಯಕ್ತಿಗಳ ಹೆಚ್ಚಿನ ಐಕ್ಯವನ್ನು ಇದು ಸಾಧ್ಯವಾಗಿಸುತ್ತದೆ. ಏಕೆ? ಏಕೆಂದರೆ, ಒಂದು ಹಳೆಯ ಭಾಷೆಯಿಂದ ವಿವಿಧ ಆಧುನಿಕ ಭಾಷೆಗಳಿಗೆ ಭಾಷಾಂತರಿಸುವ ಬದಲಾಗಿ, ಒಂದು ಆಧುನಿಕ ಭಾಷೆಯಿಂದ ಇನ್ನೊಂದಕ್ಕೆ ನಿಷ್ಕೃಷ್ಟವಾಗಿ ಭಾಷಾಂತರಿಸುವುದು ಹೆಚ್ಚು ಸುಲಭವಾಗಿರುತ್ತದೆ. ಅಲ್ಲದೆ, ಭಾಷಾಂತರಕಾರರು ಆಧುನಿಕ ಭಾಷೆಗಳನ್ನಾಡುವ ದೇಶಸ್ಥರನ್ನು ವಿಚಾರಿಸಬಲ್ಲರು. ಆದರೆ ಸಾವಿರಾರು ವರ್ಷಗಳಿಗೆ ಹಿಂದೆ ಮಾತಾಡುತ್ತಿದ್ದ ಭಾಷೆಗಳ ಸಂಬಂಧದಲ್ಲಿ ಇದು ಸಾಧ್ಯವಾಗುವುದಿಲ್ಲ.
ಸಕಲ ಜನಾಂಗಗಳಿಗಾಗಿ ಸುವಾರ್ತೆ
ಬೈಬಲು ಭೂಮಿಯಲ್ಲಿ ಅತಿ ವ್ಯಾಪಕವಾಗಿ ಲಭ್ಯವಿರುವ ಗ್ರಂಥವಾಗುವಂತೆ ಮಾಡಲು ಸಹಾಯಮಾಡಿರುವ ಆ ದೃಢಾಭಿಪ್ರಾಯದ ಪುರುಷ ಮತ್ತು ಸ್ತ್ರೀಯರ ಕುರಿತು ಬಹಳಷ್ಟನ್ನು ಬರೆಯಸಾಧ್ಯವಿದೆ. ಕಳೆದ ಶತಮಾನಗಳಲ್ಲಿ, ಕಡಮೆ ಪಕ್ಷ 400 ಕೋಟಿಗಳಿಗಿಂತ ಹೆಚ್ಚು ಬೈಬಲುಗಳು ಮತ್ತು ಬೈಬಲಿನ ಭಾಗಗಳು, ಜಗತ್ತಿನ ಜನಸಂಖ್ಯೆಯಲ್ಲಿ 90 ಪ್ರತಿಶತಕ್ಕೂ ಹೆಚ್ಚು ಜನರು ಆಡುವ ಎರಡು ಸಾವಿರಗಳಿಗೂ ಹೆಚ್ಚು ಭಾಷೆಗಳಲ್ಲಿ ಮುದ್ರಿಸಲ್ಪಟ್ಟಿವೆ!
ನಮ್ಮ ದಿನದಲ್ಲಿನ ದೇವರ ರಾಜ್ಯದ ಲೋಕವ್ಯಾಪಕ ಘೋಷಣೆಯನ್ನು ಬೈಬಲು ಮುಂತಿಳಿಸಿತು. ಈ ಕಾರಣದಿಂದ, ಬೈಬಲು ಈಗ ಹೆಚ್ಚುಕಡಮೆ ಲೋಕವ್ಯಾಪಕವಾಗಿ ಲಭ್ಯವಾಗುವಂತೆ ಯೆಹೋವ ದೇವರು ತಾನೇ ಹಸ್ತಕ್ಷೇಪಮಾಡಿ ಜನರನ್ನು ನಡೆಸಿದ್ದಾನೆ. (ಮತ್ತಾಯ 13:47, 48; 24:14) ಬೈಬಲಿನ ಗತಕಾಲಗಳ ಭಯರಹಿತ ಭಾಷಾಂತರಕಾರರು ಮತ್ತು ಪ್ರಕಾಶಕರು ದೇವರ ವಾಕ್ಯವನ್ನು—ನೈತಿಕವಾಗಿ ಅಂಧಕಾರದಲ್ಲಿರುವ ಜಗತ್ತಿನಲ್ಲಿ ಅಧ್ಯಾತ್ಮಿಕ ಜ್ಯೋತಿಯ ಏಕಮಾತ್ರ ಮೂಲವನ್ನು ನಮಗೆ ಕೊಡಲು ತಮ್ಮ ಸರ್ವಸ್ವವನ್ನೂ ಅಪಾಯಕ್ಕೊಳಪಡಿಸಿದರು. ಅವರ ಮಾದರಿಯು ನಿಮ್ಮನ್ನು, ಅವರು ಪ್ರದರ್ಶಿಸಿದಷ್ಟೇ ಮನವರಿಕೆಯಿಂದ ಆ ವಾಕ್ಯವನ್ನು ಓದುವಂತೆ, ಅದಕ್ಕನುಸಾರ ಜೀವಿಸುವಂತೆ ಮತ್ತು ಅದರಲ್ಲಿ ಭಾಗಿಗಳಾಗುವಂತೆ ಪ್ರಚೋದಿಸುವಂತಾಗಲಿ. ಹೌದು, ಪ್ರತಿದಿನ, ನಿಮ್ಮಲ್ಲಿರುವ ಭರವಸಾರ್ಹವಾದ ಬೈಬಲಿನ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಿರಿ!—ಯೆಶಾಯ 40:6-8.
[ಅಧ್ಯಯನ ಪ್ರಶ್ನೆಗಳು]
a ಅಕ್ಟೋಬರ್ 15, 1988ರ ದ ವಾಚ್ಟವರ್ನಲ್ಲಿ “ಕೋಡೆಕ್ಸ್ ಸೈನೈಟಿಕಸ್ ಅನ್ನು ಕಾಪಾಡುವುದು” ಎಂಬ ಲೇಖನವನ್ನು ನೋಡಿ.
[ಪುಟ 12 ರಲ್ಲಿರುವ ಚಿತ್ರ]
ಬೈಬಲ್ ಭಾಷಾಂತರದಲ್ಲಿ ಬೆಳವಣಿಗೆ
(For fully formatted text, see publication)
ಭಾಷೆಗಳ
ಸಂಖ್ಯೆ
1 ಯೆಹೂದ್ಯರು ಹೀಬ್ರು ಶಾಸ್ತ್ರಗಳನ್ನು ಗ್ರೀಕ್ಗೆ ಭಾಷಾಂತರಿಸಲು ಆರಂಭಿಸಿದರು
ಸು. 280 ಸಾ.ಶ.ಪೂ.
12 ಜೆರೋಮನು ಲ್ಯಾಟಿನ್ ವಲ್ಗೇಟನ್ನು ಸು. 400 ಸಾ.ಶ.ದಲ್ಲಿ ಪೂರ್ಣಗೊಳಿಸುತ್ತಾನೆ
35 ಗೂಟನ್ಬರ್ಗ್ ಸು. 1455ರಲ್ಲಿ ಪ್ರಥಮ ಮುದ್ರಿತ ಬೈಬಲನ್ನು ಪೂರ್ಣಗೊಳಿಸುತ್ತಾನೆ
81 ಬ್ರಿಟಿಷ್ ಆ್ಯಂಡ್ ಫಾರೀನ್ ಬೈಬಲ್ ಸೊಸೈಟಿ 1804ರಲ್ಲಿ ಸ್ಥಾಪನೆ
ವರ್ಷಾನುಸಾರ ಭಾಷೆಗಳ ಅಂದಾಜು ಸಂಖ್ಯೆ
522
1900
600
700
800
900
1,049
1950
1,100
1,200
1,300
1,471
1970
2,123
1996
2,200
2,300
2,400
[ಕೃಪೆ]
ಮೂಲಗಳು: Christianity Today, United Bible Society
[Credit Line on page 9]
Mountain High Maps® Copyright © 1995 Digital Wisdom, Inc.
[ಪುಟ 8 ರಲ್ಲಿರುವ ಚಿತ್ರ]
ಜಡ್ಸನ್ನನ್ನು ಬಿಗಿದು ಎಳೆದೊಯ್ಯಲಾಯಿತೂ
[ಕೃಪೆ]
ಜೆಸಿ ಪೇಜ್ರಿಂದ ಬರೆಯಲ್ಪಟ್ಟ Judson the Hero of Burma ಪುಸ್ತಕದಿಂದ
[ಪುಟ 10 ರಲ್ಲಿರುವ ಚಿತ್ರ]
ಟಿಷನ್ಡಾರ್ಫ್ ಸೀನಾಯಿ ಪರ್ವತ ತಗ್ಗಿನಲ್ಲಿರುವ ಈ ಸಂನ್ಯಾಸಿ ಮಠದಲ್ಲಿ ಒಂದು ಅಮೂಲ್ಯ ಹಸ್ತಪ್ರತಿಯನ್ನು ಕಾಪಾಡಿದನು
[ಕೃಪೆ]
Pictorial Archive (Near Eastern History) Est.