ಮೂಲತತ್ತ್ವವನ್ನು ವಿವೇಚಿಸಿ ತಿಳಿದುಕೊಳ್ಳುವುದು ಪಕ್ವತೆಯನ್ನು ಪ್ರತಿಬಿಂಬಿಸುತ್ತದೆ
ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ. ನೀವು ಬಿತ್ತುವುದನ್ನೇ ಕೊಯ್ಯುತ್ತೀರಿ. (1 ಕೊರಿಂಥ 15:33; ಗಲಾತ್ಯ 6:7) ಭೌತಿಕವಾಗಿಯಾಗಲಿ ಆಧ್ಯಾತ್ಮಿಕವಾಗಿಯಾಗಲಿ, ಮೇಲಿನ ಪ್ರತಿಯೊಂದು ಹೇಳಿಕೆಯು ಒಂದು ಮೂಲಸತ್ಯದ—ಮೂಲತತ್ತ್ವದ—ಆದರ್ಶವಾಗಿದೆ ಮತ್ತು ಪ್ರತಿಯೊಂದೂ, ನಿಯಮಗಳಿಗೆ ಆಧಾರವನ್ನೊದಗಿಸುತ್ತದೆ. ನಿಯಮಗಳಾದರೋ ಇಂದು ಇದ್ದು ನಾಳೆ ಇಲ್ಲದೆ ಹೋಗಬಹುದು. ಅವುಗಳಿಗೆ ನಿರ್ದಿಷ್ಟವಾಗಿರುವ ಪ್ರವೃತ್ತಿಯೂ ಇದೆ. ಆದರೆ ಮೂಲತತ್ತ್ವಗಳೊ, ವಿಶಾಲವಾಗಿರುತ್ತವೆ, ಮತ್ತು ಅವು ಸದಾಕಾಲ ಬಾಳಬಲ್ಲವು. ಆದುದರಿಂದ, ಸಾಧ್ಯವಿರುವಲ್ಲೆಲ್ಲ ಮೂಲತತ್ತ್ವಾನುಸಾರ ಯೋಚಿಸಬೇಕೆಂದು ದೇವರ ವಾಕ್ಯವು ನಮ್ಮನ್ನು ಪ್ರೋತ್ಸಾಹಿಸುತ್ತದೆ.
ವೆಬ್ಸ್ಟರ್ಸ್ ಥರ್ಡ್ ನ್ಯೂ ಇಂಟರ್ನ್ಯಾಷನಲ್ ಡಿಕ್ಷನೆರಿ ಒಂದು ಮೂಲತತ್ತ್ವವನ್ನು, “ಒಂದು ಸಾಮಾನ್ಯ ಅಥವಾ ಮೂಲಸತ್ಯ: ಇತರ ವಿಷಯಗಳು ಯಾವುದರ ಮೇಲೆ ಆಧಾರಗೊಂಡಿವೆಯೊ ಅಥವಾ ಇತರ ವಿಷಯಗಳು ಯಾವುದರಿಂದ ಉದ್ಭವಿಸಿವೆಯೊ ಅಂತಹ ಒಂದು ವ್ಯಾಪಕವಾದ ಮತ್ತು ಮೂಲ ನಿಯಮ, ತತ್ತ್ವ ಅಥವಾ ಊಹೆ” ಎಂದು ಅರ್ಥವಿವರಿಸುತ್ತದೆ. ದೃಷ್ಟಾಂತಕ್ಕೆ, ಒಂದು ಮಗುವಿಗೆ ಒಬ್ಬನು “ನೀನು ಆ ಸ್ಟೋವನ್ನು ಮುಟ್ಟಬಾರದು” ಎಂಬ ನಿಯಮವನ್ನು ಕೊಡಬಹುದು. ಆದರೆ ವಯಸ್ಕನಿಗೆ, “ಆ ಸ್ಟೋವ್ ಬಿಸಿಯಿದೆ” ಎಂಬ ಹೇಳಿಕೆ ಸಾಕು. ಈ ಎರಡನೆಯ ಹೇಳಿಕೆ ಹೆಚ್ಚು ಮೂಲಭೂತವಾಗಿರುವುದನ್ನು ಗಮನಿಸಿರಿ. ಏಕೆಂದರೆ ಅದು ಒಬ್ಬನು ಮಾಡಬಹುದಾಗಿರುವುದಕ್ಕೆ—ಅಡುಗೆಮಾಡುವುದಕ್ಕೆ, ಬೇಕ್ಮಾಡುವುದಕ್ಕೆ, ಅಥವಾ ಸ್ಟೋವನ್ನು ಆರಿಸುವುದಕ್ಕೆ ಅನ್ವಯಿಸುತ್ತದೆ. ಅದು ಒಂದು ಅರ್ಥದಲ್ಲಿ ಒಂದು ಮೂಲತತ್ತ್ವವಾಗಿರುತ್ತದೆ.
ಜೀವನದ ಮುಖ್ಯ ಮೂಲತತ್ತ್ವಗಳು ನಿಶ್ಚಯವಾಗಿಯೂ ಆಧ್ಯಾತ್ಮಿಕವಾಗಿವೆ; ದೇವರನ್ನು ನಾವು ಆರಾಧಿಸುವುದಕ್ಕೆ ಮತ್ತು ನಮ್ಮ ಸಂತೋಷಕ್ಕೆ ಅವು ಅನ್ವಯಿಸುತ್ತವೆ. ಆದರೆ ಕೆಲವರು, ಮೂಲತತ್ತ್ವಗಳನ್ನು ವಿವೇಚಿಸಲು ಬೇಕಾಗುವ ಪ್ರಯತ್ನದಿಂದ ಹಿಂದೆ ಸರಿಯುತ್ತಾರೆ. ಒಂದು ನಿರ್ಣಯವನ್ನು ಎದುರಿಸುವಾಗ, ಅವರು ಒಂದು ನಿಯಮದ ಅನುಕೂಲತೆಯನ್ನು ಇಷ್ಟಪಡುತ್ತಾರೆ. ಇದು ಅವಿವೇಕತನವಾಗಿದೆ ಮತ್ತು ಬೈಬಲ್ ಸಮಯಗಳ ಪುರಾತನ ನಂಬಿಗಸ್ತ ಜನರ ಮಾದರಿಗೆ ವ್ಯತಿರಿಕ್ತವಾಗಿದೆ.—ರೋಮಾಪುರ 15:4.
ದೈವಿಕ ಮೂಲತತ್ತ್ವವುಳ್ಳ ಪುರುಷರು
ಅಪರಿಪೂರ್ಣ ಪುರುಷರಲ್ಲಿ, ಹೇಬೆಲನನ್ನು ದೈವಿಕ ಮೂಲತತ್ತ್ವಗಳ ಅತ್ಯಂತ ಮೊದಲನೆಯ ಪುರುಷನೆಂದು ಕರೆಯಸಾಧ್ಯವಿದೆ. ಅವನು “ಸಂತಾನ”ದ ಕುರಿತ ವಾಗ್ದಾನದ ವಿಷಯದಲ್ಲಿ ತುಂಬ ಆಲೋಚನೆಮಾಡಿ, ಪಾಪದಿಂದ ವಿಮೋಚನೆಯು ರಕ್ತಯಜ್ಞವನ್ನು ಒಳಗೂಡಿರುತ್ತದೆಂದು ಗ್ರಹಿಸಿದ್ದಿರುವುದು ಸಂಭವನೀಯ. (ಆದಿಕಾಂಡ 3:15) ಹೀಗೆ ಅವನು ದೇವರಿಗೆ “ತನ್ನ ಹಿಂಡಿನಿಂದ ಚೊಚ್ಚಲಕುರಿಗಳನ್ನು” ಅರ್ಪಿಸಿದನು. “ಅವುಗಳ ಕೊಬ್ಬನ್ನು” ಎಂಬ ವಾಕ್ಸರಣಿಯು, ಹೇಬೆಲನು ಯೆಹೋವನಿಗೆ ತನ್ನ ಅತ್ಯುತ್ತಮವಾದುದನ್ನು ಕೊಟ್ಟನೆಂಬುದನ್ನು ತೋರಿಸುತ್ತದೆ. ಆದರೂ, ದೇವರು ಯಜ್ಞಗಳ ಕುರಿತು ಸವಿವರವಾದ ಆವಶ್ಯಕತೆಗಳನ್ನು ಸ್ಪಷ್ಟಪಡಿಸಲು, ಹೇಬೆಲನು ಮರಣಪಟ್ಟು ಎರಡು ಸಾವಿರ ವರ್ಷಗಳಿಗೂ ಹೆಚ್ಚು ಸಮಯ ಹಿಡಿಯಲಿಕ್ಕಿತ್ತು. ಈ ದೇವಭಯದ ಸುನಡತೆಯ ಪುರುಷನಾದ ಹೇಬೆಲನಿಗೆ ವೈದೃಶ್ಯವಾಗಿ, ಅವನ ಅಣ್ಣನಾದ ಕಾಯಿನನು ದೇವರಿಗೆ ಯಜ್ಞಮಾಡುವುದರಲ್ಲಿ ಯಾಂತ್ರಿಕ ಮನೋಭಾವದವನಾಗಿದ್ದನು. ಆದರೆ ಅವನ ಮನೋಭಾವವು ತೃಪ್ತಿಕರವಾದದ್ದಾಗಿರಲಿಲ್ಲ, ಅವನ ಅರ್ಪಣೆಯ ಸಂಬಂಧದಲ್ಲಿ ಯಾವುದೊ, ತಾತ್ತ್ವಿಕ ಕೊರತೆಯ ಹೃದಯವನ್ನು ಸೂಚಿಸಿತು.—ಆದಿಕಾಂಡ 4:3-5.
ನೋಹನೂ ದೈವಿಕ ತತ್ತ್ವವಿದ್ದ ಪುರುಷನಾಗಿದ್ದನು. ತೇಲುಪೆಟ್ಟಿಗೆಯನ್ನು ಕಟ್ಟುವಂತೆ ದೇವರು ಅವನಿಗೆ ನಿರ್ದಿಷ್ಟವಾಗಿ ಆಜ್ಞಾಪಿಸಿದನೆಂದು ಬೈಬಲಿನ ದಾಖಲೆಯು ತೋರಿಸುತ್ತದಾದರೂ, ಇತರರಿಗೆ ಸಾರಬೇಕೆಂಬ ಆಜ್ಞೆಯನ್ನು ನಾವು ಅಲ್ಲಿ ಓದುವುದಿಲ್ಲ. ಆದರೂ, “ಸುನೀತಿಯನ್ನು ಸಾರುವವನು” ಎಂದು ನೋಹನು ಕರೆಯಲ್ಪಟ್ಟಿದ್ದಾನೆ. (2 ಪೇತ್ರ 2:5) ನೋಹನು ಸಾರುವಂತೆ ದೇವರು ಪ್ರಾಯಶಃ ನಿರ್ದೇಶಿಸಿದ್ದಿರಬಹುದಾದರೂ, ಅವನ ತತ್ತ್ವಪ್ರಜ್ಞೆ ಮತ್ತು ನೆರೆಯವರ ಮೇಲಿನ ಪ್ರೀತಿ, ಅವನನ್ನು ಹಾಗೆ ಮಾಡುವಂತೆ ಪ್ರಚೋದಿಸಿತೆಂಬುದು ನಿಸ್ಸಂಶಯ. ನಾವು ನೋಹನ ಸಮಯಗಳಂತಹ ಸಮಯಗಳಲ್ಲಿ ಜೀವಿಸುವುದರಿಂದ, ಅವನ ಉತ್ತಮ ಮನೋಭಾವ ಮತ್ತು ಆದರ್ಶವನ್ನು ನಾವು ಅನುಕರಿಸೋಣ.
ತನ್ನ ದಿನಗಳ ವೈದಿಕರಿಗೆ ಅಸದೃಶವಾಗಿ, ತಾತ್ತ್ವಿಕವಾಗಿ ಯೋಚಿಸುವಂತೆ ಯೇಸು ಜನರಿಗೆ ಕಲಿಸಿದನು. ಅವನ ಪರ್ವತ ಪ್ರಸಂಗವು ಇದಕ್ಕೆ ದೃಷ್ಟಾಂತವಾಗಿದೆ. ಅದರ ಇಡೀ ಧಾಟಿಯು ಮೂಲತತ್ತ್ವಕ್ಕೆ ಕರೆಯಾಗಿತ್ತು. (ಮತ್ತಾಯ, ಅಧ್ಯಾಯಗಳು 5-7) ಯೇಸು ಈ ವಿಧದಲ್ಲಿ ಕಲಿಸಿದ್ದು ಏಕೆಂದರೆ, ತನಗಿಂತ ಮೊದಲು ಜೀವಿಸಿದ್ದ ಹೇಬೆಲ ಮತ್ತು ನೋಹರಂತೆ ಅವನು ದೇವರನ್ನು ನಿಜವಾಗಿಯೂ ತಿಳಿದಿದ್ದನು. ಅವನು ಹುಡುಗನಾಗಿದ್ದಾಗಲೂ, “ಮನುಷ್ಯರು ಆಹಾರ ಮಾತ್ರದಿಂದಲ್ಲ, ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುತ್ತಾರೆ” (NW) ಎಂಬ ಮೂಲಸತ್ಯವನ್ನು ಪೂಜ್ಯವಾದುದಾಗಿ ಭಾವಿಸಿದನು. (ಧರ್ಮೋಪದೇಶಕಾಂಡ 8:3; ಲೂಕ 2:41-47) ಹೌದು, ದೈವಿಕ ತತ್ತ್ವವುಳ್ಳ ವ್ಯಕ್ತಿಯಾಗಿರುವುದಕ್ಕಿರುವ ಕೀಲಿ ಕೈ ನಿಜವಾಗಿಯೂ ಯೆಹೋವನನ್ನು, ಆತನ ಇಷ್ಟಾನಿಷ್ಟಗಳನ್ನು ಮತ್ತು ಆತನ ಉದ್ದೇಶಗಳನ್ನು ತಿಳಿಯುವುದೇ ಆಗಿದೆ. ದೇವರ ಕುರಿತ ಈ ಆಧಾರತತ್ತ್ವಗಳು ನಮ್ಮ ಜೀವಿತಗಳನ್ನು ಆಳುವಾಗ, ಅವು ಕಾರ್ಯತಃ, ಸಜೀವವಾದ ಮೂಲತತ್ತ್ವಗಳಾಗುತ್ತವೆ.—ಯೆರೆಮೀಯ 22:16; ಇಬ್ರಿಯ 4:12.
ಮೂಲತತ್ತ್ವಗಳು ಮತ್ತು ಹೃದಯ
ಒಂದು ನಿಯಮವನ್ನು ಕೇವಲ ಅನಿಚ್ಫೆಯಿಂದ, ಪ್ರಾಯಶಃ ಅವಿಧೇಯತೆಗೆ ದೊರೆಯಬಹುದಾದ ಶಿಕ್ಷೆಯ ಭಯದಿಂದ ಪಾಲಿಸುವುದು ಸಾಧ್ಯ. ಆದರೆ ಮೂಲತತ್ತ್ವಕ್ಕೆ ವಿಧೇಯತೆಯು ಈ ಮನೋಭಾವಕ್ಕೆ ಅನವಕಾಶವನ್ನು ಕೊಡುತ್ತದೆ, ಏಕೆಂದರೆ ಮೂಲತತ್ತ್ವಗಳಿಂದ ಆಳಲ್ಪಡುವುದೆಂದರೆ ಹೃದಯದಿಂದ ಪ್ರತಿವರ್ತನೆ ತೋರಿಸುವುದೆಂಬುದು ಅವುಗಳ ಸಾರದಲ್ಲಿಯೇ ಅಡಕವಾಗಿದೆ. ಹೇಬೆಲ ಮತ್ತು ನೋಹರಂತೆ, ಮೋಶೆಯ ಧರ್ಮಶಾಸ್ತ್ರದ ಒಡಂಬಡಿಕೆಯ ಸ್ಥಾಪನೆಗೆ ಮೊದಲು ಜೀವಿಸಿದ ಯೋಸೇಫನನ್ನು ಪರಿಗಣಿಸಿರಿ. ಪೋಟೀಫರನ ಹೆಂಡತಿಯು ಯೋಸೇಫನನ್ನು ದುರ್ಮಾರ್ಗಕ್ಕೆ ಪ್ರೇರಿಸಲು ಪ್ರಯತ್ನಿಸಿದಾಗ, ಅವನು ಉತ್ತರಕೊಟ್ಟದ್ದು: “ನಾನು ಇಂಥಾ ಮಹಾದುಷ್ಕೃತ್ಯವನ್ನು ನಡಿಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ.” ಹೌದು, ಗಂಡ ಹೆಂಡತಿ “ಒಂದೇ ಶರೀರ”ವಾಗಿದ್ದಾರೆ ಎಂಬ ಮೂಲತತ್ತ್ವವು ಯೋಸೇಫನಿಗೆ ತಿಳಿದಿತ್ತು.—ಆದಿಕಾಂಡ 2:24; 39:9.
ಇಂದು ಲೋಕವು ನೈತಿಕ ಮೂಲತತ್ತ್ವಗಳಿಲ್ಲದ್ದಾಗಿದೆ. ಅದು ಹಿಂಸಾಚಾರ ಮತ್ತು ದುರಾಚಾರಗಳನ್ನು ಹೊಟ್ಟೆಬಾಕನಂತೆ ಕಬಳಿಸುತ್ತದೆ. ಕ್ರೈಸ್ತನೂ ಅದೇ ಕಳಪೆ ಆಹಾರವನ್ನು—ಚಲನ ಚಿತ್ರಗಳು, ವಿಡಿಯೋಗಳು ಅಥವಾ ಪುಸ್ತಕಗಳನ್ನು, ಪ್ರಾಯಶಃ ಗುಪ್ತವಾಗಿ ರುಚಿನೋಡುವಂತೆ ಪ್ರೇರಿಸಲ್ಪಡುವ ಅಪಾಯವಿದೆ. ಹಾಗಾದರೆ, ತತ್ತ್ವದೃಷ್ಟಿಯಿಂದ, ಬರಲಿರುವ “ಮಹಾ ಸಂಕಟದಲ್ಲಿ” ದೇವರು ನಿಷ್ಠರನ್ನು ಮಾತ್ರ ಸಂರಕ್ಷಿಸುವನೆಂಬುದನ್ನು ಜ್ಞಾಪಿಸಿಕೊಂಡು, ನಾವು ಯೋಸೇಫನಂತೆ ಕೆಟ್ಟದ್ದನ್ನು ತಳ್ಳಿಹಾಕುವುದು ಎಷ್ಟು ಪ್ರಶಂಸಾರ್ಹವಾಗಿದೆ. (ಮತ್ತಾಯ 24:21) ಹೌದು, ನಾವು ಆಂತರ್ಯದಲ್ಲಿ ಏನಾಗಿದ್ದೇವೆಂಬುದನ್ನು ತೋರಿಸುವುದು, ಮುಖ್ಯವಾಗಿ ನಾವು ಏಕಾಂತದಲ್ಲಿ—ಸಾರ್ವಜನಿಕವಾಗಿ ಅಲ್ಲ—ಏನಾಗಿರುತ್ತೇವೆ ಎಂಬುದೇ.—ಕೀರ್ತನೆ 11:4; ಜ್ಞಾನೋಕ್ತಿ 15:3.
ಆದಕಾರಣ, ನಾವು ಬೈಬಲ್ ಮೂಲತತ್ತ್ವಗಳಿಂದ ನಡೆಸಲ್ಪಡುವುದಾದರೆ, ದೇವರ ನಿಯಮಗಳಲ್ಲಿರಬಹುದಾದ ತಪ್ಪಿಸಿಕೊಳ್ಳಲಿಕ್ಕಾಗಿರುವ ಪಾರುಗಂಡಿಗಳಿಗಾಗಿ ಹುಡುಕುವುದೂ ಇಲ್ಲ, ಒಂದು ಪ್ರತ್ಯೇಕ ನಿಯಮವನ್ನು ನಿಜವಾಗಿಯೂ ಮುರಿಯದೆ ಎಷ್ಟರ ಮಟ್ಟಿಗೆ ಮುಂದುವರಿಯಬಹುದೆಂದು ನೋಡಪ್ರಯತ್ನಿಸುವುದೂ ಇಲ್ಲ. ಅಂತಹ ಆಲೋಚನೆಯು ಆತ್ಮಪರಾಜಿತವಾಗಿದ್ದು, ಕೊನೆಗೆ ನಮ್ಮನ್ನು ನೋಯಿಸುತ್ತದೆ.
ನಿಯಮವನ್ನು ಪರೀಕ್ಷಿಸಿ
ಒಬ್ಬ ಕ್ರೈಸ್ತನ ಜೀವಿತದಲ್ಲಿ ನಿಯಮಗಳು ಪ್ರಾಮುಖ್ಯ ಪಾತ್ರವನ್ನು ವಹಿಸುತ್ತವೆಂಬುದು ನಿಶ್ಚಯ. ನಮ್ಮನ್ನು ಕಾಪಾಡುವಂತೆ ಸಹಾಯಮಾಡಲು ಇರುವ ಕಾವಲುಗಾರರಂತೆ ಅವು ಇವೆ ಮತ್ತು ಅವುಗಳ ಅಸ್ತಿವಾರದಲ್ಲಿ ಅನೇಕ ಪ್ರಮುಖ ಮೂಲತತ್ತ್ವಗಳಿವೆ. ಈ ಮೂಲತತ್ತ್ವಗಳನ್ನು ಗ್ರಹಿಸುವುದರಲ್ಲಿನ ವೈಫಲ್ಯವು, ಸಂಬಂಧಿತ ನಿಯಮಗಳಿಗೆ ನಮಗಿರುವ ಪ್ರೀತಿಯನ್ನು ತಣ್ಣಗಾಗಿಸಬಹುದು. ಪುರಾತನ ಇಸ್ರಾಯೇಲ್ ಜನಾಂಗವು ಇದನ್ನು ಪ್ರದರ್ಶಿಸಿತು.
ದೇವರು ಇಸ್ರಾಯೇಲ್ಯರಿಗೆ ದಶಾಜ್ಞೆಗಳನ್ನು ಕೊಟ್ಟನು. ಇವುಗಳಲ್ಲಿ ಮೊದಲನೆಯದು, ಯೆಹೋವನಲ್ಲದೆ ಇನ್ನಾವ ದೇವನನ್ನೂ ಆರಾಧಿಸುವುದನ್ನು ನಿಷೇಧಿಸಿತು. ಯೆಹೋವನು ಸಕಲ ವಸ್ತುಗಳನ್ನು ಸೃಷ್ಟಿಸಿದನೆಂಬುದು ಈ ನಿಯಮದ ಮರೆಯಲ್ಲಿರುವ ಮೂಲಸತ್ಯವಾಗಿದೆ. (ವಿಮೋಚನಕಾಂಡ 20:3-5) ಆದರೆ ಆ ಜನಾಂಗ ಈ ಮೂಲತತ್ತ್ವಕ್ಕನುಸಾರ ಜೀವಿಸಿತೊ? ಯೆಹೋವನು ತಾನೇ ಉತ್ತರಕೊಡುವುದು: “‘ನೀನೇ ನಮ್ಮ ತಂದೆ’ [ಎಂದರು ಇಸ್ರಾಯೇಲ್ಯರು] ಒಂದು ಮರದ ಕೊರಡಿಗೆ ಮತ್ತು ಒಂದು ಕಲ್ಲಿಗೆ ‘ತಾಯಿ’ [ಎಂದು ಕೂಗಿದರು]. ಆದರೆ ನನ್ನ [ಯೆಹೋವನ] ಕಡೆಗೆ ಅವರು ಬೆನ್ನುಗಳನ್ನು ಹಾಕಿ, ನನ್ನಿಂದ ತಮ್ಮ ಮುಖಗಳನ್ನು ತಿರುಗಿಸಿದ್ದಾರೆ.” (ಯೆರೆಮೀಯ 2:27, ದ ನ್ಯೂ ಇಂಗ್ಲಿಷ್ ಬೈಬಲ್) ಎಂತಹ ಕಲ್ಲೆದೆಯ ಮತ್ತು ಸ್ವೇಚ್ಛಾಚಾರದ ಮೂರ್ಖತನ! ಮತ್ತು ಯೆಹೋವನ ಹೃದಯವನ್ನು ಇದೆಷ್ಟು ನೋಯಿಸಿತು!—ಕೀರ್ತನೆ 78:40, 41; ಯೆಶಾಯ 63:9, 10.
ದೇವರ ನಿಯಮಗಳು ಕ್ರೈಸ್ತರಿಗೂ ಇವೆ. ಉದಾಹರಣೆಗೆ, ಅವರು ವಿಗ್ರಹಾರಾಧನೆ, ಲೈಂಗಿಕ ದುರಾಚಾರ ಮತ್ತು ರಕ್ತದ ದುರುಪಯೋಗದಿಂದ ದೂರವಿರಬೇಕು. (ಅ. ಕೃತ್ಯಗಳು 15:28, 29) ನಾವು ಇದರ ಕುರಿತು ಯೋಚಿಸುವಾಗ, ಇಂತಹ ಆಧಾರಭೂತ ಮೂಲತತ್ತ್ವಗಳನ್ನು ನೋಡಬಲ್ಲೆವು: ದೇವರು ನಮ್ಮ ಏಕನಿಷ್ಠ ಭಕ್ತಿಗೆ ಅರ್ಹನು; ನಾವು ನಮ್ಮ ವಿವಾಹಸಂಗಾತಿಗೆ ನಿಷ್ಠಾವಂತರಾಗಿರಬೇಕು; ಮತ್ತು ಯೆಹೋವನು ನಮ್ಮ ಜೀವದಾತನು. (ಆದಿಕಾಂಡ 2:24; ವಿಮೋಚನಕಾಂಡ 20:5; ಕೀರ್ತನೆ 36:9) ಈ ನಿರ್ದೇಶನಗಳ ಹಿಂದಿರುವ ಮೂಲತತ್ತ್ವಗಳನ್ನು ನಾವು ಗ್ರಹಿಸಿಕೊಂಡು ಗಾಢವಾಗಿ ಮಾನ್ಯಮಾಡುವಲ್ಲಿ, ಅವು ನಮ್ಮ ಸ್ವಂತ ಒಳಿತಿಗಾಗಿ ಇವೆಯೆಂದು ನಾವು ನೋಡುತ್ತೇವೆ. (ಯೆಶಾಯ 48:17) ನಮಗೆ ದೇವರ “ಆಜ್ಞೆಗಳು ಭಾರವಾದವುಗಳಲ್ಲ.”—1 ಯೋಹಾನ 5:3.
ಇಸ್ರಾಯೇಲ್ಯರು ಒಂದು ಕಾಲದಲ್ಲಿ ದೇವರ ಆಜ್ಞೆಗಳನ್ನು ಅಲಕ್ಷಿಸಿದರೂ, ಯೇಸುವಿನ ಸಮಯದೊಳಗೆ ಅವರ “ನ್ಯಾಯ ಪಂಡಿತರು”ಗಳಾಗಿದ್ದ ಶಾಸ್ತ್ರಿಗಳು ಇನ್ನೊಂದು ವೈಪರೀತ್ಯಕ್ಕೆ ಹೋಗಿದ್ದರು. ಅವರು ವಿಧಿಗಳ ಮತ್ತು ಸಂಪ್ರದಾಯಗಳ ರಾಶಿಯನ್ನೇ ಹಾಕಿದ್ದರು. ಇದು ಶುದ್ಧಾರಾಧನೆಗೆ ತಡೆಯೊಡ್ಡಿ ದೈವಿಕ ಮೂಲತತ್ತ್ವಗಳನ್ನು ಮರೆಮಾಡಿತು. (ಮತ್ತಾಯ 23:2, NEB) ವೈಫಲ್ಯ, ಆಶಾರಾಹಿತ್ಯ ಅಥವಾ ಕಪಟಾಚಾರಗಳು ಅನಿವಾರ್ಯವೆಂದು ಜನರಿಗೆ ಅನಿಸಿತು. (ಮತ್ತಾಯ 15:3-9) ಮತ್ತು ಮಾನವನಿರ್ಮಿತ ಕಟ್ಟಳೆಗಳಲ್ಲಿ ಅನೇಕ ಕಟ್ಟಳೆಗಳು ಕರುಣಾರಹಿತವಾಗಿದ್ದವು. ಬತ್ತಿಹೋಗಿದ್ದ ಕೈಯುಳ್ಳ ಒಬ್ಬ ಮನುಷ್ಯನನ್ನು ಗುಣಪಡಿಸಲಿಕ್ಕಿದ್ದಾಗ, ಯೇಸು ಅಲ್ಲಿದ್ದ ಫರಿಸಾಯರಿಗೆ, “ಸಬ್ಬತ್ ದಿನದಲ್ಲಿ ಯಾವದನ್ನು ಮಾಡುವದು ನ್ಯಾಯ? ಮೇಲನ್ನು ಮಾಡುವದೋ . . . ?” ಎಂದು ಕೇಳಿದನು. ಅವರು ತಾಳಿದ ಮೌನವು ಅಲ್ಲವೆಂದು ಉತ್ತರಿಸಿತು ಮತ್ತು ಇದು ಯೇಸುವನ್ನು, “ಅವರ ಮನಸ್ಸು ಕಲ್ಲಾಗಿರುವದನ್ನು ಕಂಡು ದುಃಖ”ಪಡುವಂತೆ ಮಾಡಿತು. (ಮಾರ್ಕ 3:1-6) ಫರಿಸಾಯರು ಕಷ್ಟಕ್ಕೀಡಾಗಿರುವ ಅಥವಾ ಗಾಯಗೊಂಡಿರುವ ಸಾಧುಪ್ರಾಣಿ (ಹಣಕಾಸಿನ ಹೂಡಿಕೆ)ಯ ಸಹಾಯಕ್ಕೆ ಬರಬಹುದಾದರೂ, ಒಬ್ಬ ಪುರುಷನ ಅಥವಾ ಒಬ್ಬ ಸ್ತ್ರೀಯ ಸಹಾಯಕ್ಕೆ—ಅದು ಜೀವಮರಣಗಳ ಪ್ರಶ್ನೆಯಾಗಿಲ್ಲದಿದ್ದರೆ—ಎಂದಿಗೂ ಬರುತ್ತಿರಲಿಲ್ಲ. ನಿಜವಾಗಿಯೂ, ಅವರು ಮಾನವ ಕಟ್ಟಳೆಗಳು ಮತ್ತು ಪ್ರಕ್ರಿಯೆಗಳಲ್ಲಿ ಎಷ್ಟು ಗೀಳಿನವರಾಗಿದ್ದರೆಂದರೆ, ಒಂದು ವರ್ಣಚಿತ್ರದ ಮೇಲೆ ಓಡಾಡುತ್ತಿರುವ ಇರುವೆಗಳಂತೆ ಅವರು ಇಡೀ ಚಿತ್ರವನ್ನು, ದೈವಿಕ ಮೂಲತತ್ತ್ವಗಳನ್ನು ನೋಡಲು ತಪ್ಪಿಹೋದರು.—ಮತ್ತಾಯ 23:23, 24.
ಆದರೂ, ಚಿಕ್ಕ ಮಕ್ಕಳ ಹೃದಯಗಳು ಯಥಾರ್ಥವಾಗಿರುವಲ್ಲಿ, ಬೈಬಲ್ ಮೂಲತತ್ತ್ವಗಳಿಗೆ ಮಾನ್ಯತೆ ತೋರಿಸುವ ಮೂಲಕ ಅವರೂ ಯೆಹೋವನಿಗೆ ಘನತೆಯನ್ನು ತರಬಲ್ಲರು. ಹದಿಮೂರು ವರ್ಷ ಪ್ರಾಯದ ರೆಬೆಕಳ ಉಪಾಧ್ಯಾಯರು, ಯಾರು ಜೂಜಾಡುತ್ತಾರೆಂದು ತರಗತಿಯಲ್ಲಿ ಕೇಳಿದರು. ತಾವು ಆಡುವುದಿಲ್ಲವೆಂದು ಹೆಚ್ಚಿನವರಂದರು. ಆದರೂ, ವಿವಿಧ ವಿದ್ಯಮಾನಗಳ ಕುರಿತು ಹೇಳಲ್ಪಟ್ಟಾಗ, ರೆಬೆಕಳನ್ನು ಬಿಟ್ಟು ಉಳಿದವರೆಲ್ಲರೂ, ತಾವು ಒಂದಲ್ಲ ಒಂದು ವಿಧದಲ್ಲಿ ಜೂಜಾಡುವೆವೆಂಬುದನ್ನು ಒಪ್ಪಿಕೊಂಡರು. ಉಪಾಧ್ಯಾಯರು ರೆಬೆಕಳನ್ನು, ಅವಳು ಒಂದು ಒಳ್ಳೆಯ ಉದ್ದೇಶಕ್ಕಾಗಿ ಒಂದು 20 ಸೆಂಟುಗಳ ಲಾಟರಿ ಟಿಕೆಟನ್ನು ಕೊಳ್ಳುವಳೊ ಎಂದು ಕೇಳಿದರು. ರೆಬೆಕ ಇಲ್ಲವೆಂದು ಹೇಳಿ, ಹಾಗೆ ಮಾಡುವುದು ಜೂಜಾಡುವುದರ ಒಂದು ವಿಧವೆಂಬುದಕ್ಕೆ ಶಾಸ್ತ್ರೀಯ ಕಾರಣಗಳನ್ನು ಕೊಟ್ಟಳು. ಆಗ ಆಕೆಯ ಉಪಾಧ್ಯಾಯರು ಇಡೀ ಕ್ಲಾಸಿಗೆ ಹೇಳಿದ್ದು: ‘ನನ್ನ ಅಭಿಪ್ರಾಯದಲ್ಲಿ, ಇಲ್ಲಿರುವವರಲ್ಲಿ ರೆಬೆಕ ಒಬ್ಬಳೇ, ನಿಜಾರ್ಥದಲ್ಲಿ “ಮೂಲತತ್ತ್ವ”ಗಳುಳ್ಳವಳು.’ ಹೌದು, “ಅದು ನನ್ನ ಧರ್ಮಕ್ಕೆ ವಿರುದ್ಧ” ಎಂದಷ್ಟೇ ರೆಬೆಕಳು ಹೇಳಬಹುದಾಗಿತ್ತು. ಆದರೆ ಆಕೆ ಅದಕ್ಕಿಂತಲೂ ಹೆಚ್ಚು ಗಾಢವಾಗಿ ಚಿಂತಿಸಿದಳು—ಜೂಜಾಟ ಏಕೆ ತಪ್ಪಾಗಿದೆ ಮತ್ತು ತಾನು ಅದರಲ್ಲಿ ಏಕೆ ಭಾಗವಹಿಸಲಿಲ್ಲ ಎಂಬುದರ ಕಾರಣದ ಕುರಿತು ಆಕೆ ಉತ್ತರಕೊಡಲು ಸಾಧ್ಯವಾಯಿತು.
ಹೇಬೆಲ, ನೋಹ, ಯೋಸೇಫ ಮತ್ತು ಯೇಸುವಿನಂತಹ ಮಾದರಿಗಳು, ದೇವರನ್ನು ಆರಾಧಿಸುವುದರಲ್ಲಿ ನಾವು ನಮ್ಮ “ಯೋಚನಾ ಸಾಮರ್ಥ್ಯ” ಮತ್ತು “ವಿವೇಚನಾ ಶಕ್ತಿ”ಯನ್ನು ಬಳಸುವ ಮೂಲಕ ಹೇಗೆ ಪ್ರಯೋಜನ ಪಡೆದುಕೊಳ್ಳುತ್ತೇವೆಂಬುದನ್ನು ತೋರಿಸುತ್ತವೆ. (ಜ್ಞಾನೋಕ್ತಿ 2:11; ರೋಮಾಪುರ 12:1) “[ಅವರಲ್ಲಿರುವ] ದೇವರ ಮಂದೆಯನ್ನು ಕಾಯು”ವಾಗ, ಕ್ರೈಸ್ತ ಹಿರಿಯರು ಯೇಸುವನ್ನು ಅನುಕರಿಸುವುದು ಹಿತಕರ. (1 ಪೇತ್ರ 5:2) ಯೇಸು ಉತ್ತಮವಾಗಿ ದೃಷ್ಟಾಂತಿಸಿದಂತೆ, ಯೆಹೋವನ ಪರಮಾಧಿಕಾರದ ಕೆಳಗೆ ಸಮೃದ್ಧಿಹೊಂದುವವರು, ದೈವಿಕ ಮೂಲತತ್ತ್ವಗಳನ್ನು ಪ್ರೀತಿಸುವವರೇ.—ಯೆಶಾಯ 65:14.