ನ್ಯಾಯಯುತವಾದ ಒಂದು ಲೋಕ ಒಂದು ಕನಸಲ್ಲ!
“ನ್ಯಾಯವು, ಭೂಮಿಯ ಮೇಲಿನ ಮನುಷ್ಯನಿಗೆ ಮಹತ್ತಾದ ಚಿಂತೆಯ ವಿಷಯವಾಗಿದೆ,” ಎಂದು ಅಮೆರಿಕನ್ ರಾಜ್ಯನೀತಿಜ್ಞನಾದ ಡ್ಯಾನಿಯಲ್ ವೆಬ್ಸ್ಟರ್ ಗಮನಿಸಿದನು. ಮತ್ತು ಬೈಬಲ್ ತಿಳಿಸುವುದು: “ಯೆಹೋವನು ನ್ಯಾಯವನ್ನು ಮೆಚ್ಚುವವನು.” (ಕೀರ್ತನೆ 37:28) ದೇವರ ಹೋಲಿಕೆಯಲ್ಲಿ ರಚಿಸಲ್ಪಟ್ಟ ಪ್ರಥಮ ಮಾನವ ದಂಪತಿಗಳಲ್ಲಿ ನ್ಯಾಯದ ಪ್ರಜ್ಞೆಯನ್ನು ಸೇರಿಸಿ, ದೈವಿಕ ಗುಣಗಳಿದ್ದವು.—ಆದಿಕಾಂಡ 1:26, 27.
‘ಸ್ವಾಭಾವಿಕವಾಗಿ ಧರ್ಮಶಾಸ್ತ್ರದಲ್ಲಿ ಹೇಳಿದಂತೆ ನಡೆಯುವ ಧರ್ಮಶಾಸ್ತ್ರವಿಲ್ಲದ ಅನ್ಯಜನರ’ ಕುರಿತಾಗಿಯೂ ಶಾಸ್ತ್ರಗಳು ಮಾತಾಡುತ್ತವೆ. ಹೀಗೆ ಅವರು, “ಧರ್ಮಶಾಸ್ತ್ರದ ಮುಖ್ಯ ತಾತ್ಪರ್ಯ ತಮ್ಮ ಹೃದಯದಲ್ಲಿ ಬರೆದದೆ ಎಂಬದನ್ನು ತೋರ್ಪಡಿಸುತ್ತಾರೆ. ಇದಕ್ಕೆ ಅವರ ಮನಸ್ಸು ಸಹ ಸಾಕ್ಷಿ ನುಡಿಯುತ್ತದೆ; ಅವರ ಯೋಚನೆಗಳು ವಾದಿಪ್ರತಿವಾದಿಗಳಂತೆ—ಇದು ತಪ್ಪೆಂದು ತಪ್ಪಲ್ಲವೆಂದು ಸೂಚಿಸುತ್ತವೆ.” (ರೋಮಾಪುರ 2:14, 15) ಹೌದು, ಮಾನವರಿಗೆ ಮನಸ್ಸಾಕ್ಷಿಯ ಸಾಮರ್ಥ್ಯವು—ಸರಿ ಮತ್ತು ತಪ್ಪಿನ ಒಂದು ಆಂತರಿಕ ಪ್ರಜ್ಞೆಯು—ಕೊಡಲ್ಪಟ್ಟಿದೆ. ಸ್ಪಷ್ಟವಾಗಿ, ನ್ಯಾಯಕ್ಕಾಗಿರುವ ಅಗತ್ಯವು ಮನುಷ್ಯನಲ್ಲಿ ಜನ್ಮಸಿದ್ಧವಾಗಿದೆ.
ನ್ಯಾಯಕ್ಕಾಗಿರುವ ಅಗತ್ಯದೊಂದಿಗೆ ನಿಕಟವಾಗಿ ಸಂಬಂಧಿಸಿರುವ ವಿಷಯವು, ಸಂತೋಷಕ್ಕಾಗಿ ಮನುಷ್ಯನ ಅನ್ವೇಷಣೆಯಾಗಿದೆ. ಯಾಕಂದರೆ ಕೀರ್ತನೆ 106:3 ಘೋಷಿಸುವುದು: “ಯಾವಾಗಲೂ ನ್ಯಾಯವನ್ನು ಕಾಪಾಡುವವರೂ ನೀತಿಯನ್ನು ಪಾಲಿಸುವವರೂ ಧನ್ಯರು.” ಹಾಗಾದರೆ, ಮನುಷ್ಯನು ನ್ಯಾಯಯುತವಾದ ಒಂದು ಲೋಕವನ್ನು ತರಲು ಶಕ್ತನಾಗಿರುವುದಿಲ್ಲವೇಕೆ?
ಮನುಷ್ಯನು ಏಕೆ ವಿಫಲನಾಗಿದ್ದಾನೆ?
ನ್ಯಾಯಯುತವಾದ ಲೋಕವೊಂದನ್ನು ಸಾಧಿಸುವ ವೈಫಲ್ಯಕ್ಕಾಗಿರುವ ಒಂದು ಮೂಲಭೂತ ಕಾರಣವು, ನಾವು ನಮ್ಮ ಪ್ರಥಮ ಹೆತ್ತವರಾದ ಆದಾಮ ಹವ್ವರಿಂದ ಬಾಧ್ಯತೆಯಾಗಿ ಪಡೆದಿರುವ ದೋಷವಾಗಿದೆ. ಬೈಬಲ್ ವಿವರಿಸುವುದು: “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.” (ರೋಮಾಪುರ 5:12) ಆ ದೋಷವು ಪಾಪವಾಗಿದೆ. ದೋಷರಹಿತವಾಗಿ ಸೃಷ್ಟಿಸಲ್ಪಟ್ಟಿದ್ದರೂ, ಆದಾಮ ಹವ್ವರು ದೇವರ ವಿರುದ್ಧ ದಂಗೆಯೇಳಲು ನಿರ್ಧರಿಸಿದರು ಮತ್ತು ಹೀಗೆ ತಮ್ಮನ್ನೇ ಪಾಪಿಗಳನ್ನಾಗಿ ಮಾಡಿಕೊಂಡರು. (ಆದಿಕಾಂಡ 2:16, 17; 3:1-6) ಇದರಿಂದಾಗಿ, ಅವರು ತಮ್ಮ ಮಕ್ಕಳಿಗೆ, ಪಾಪಪೂರ್ಣ, ತಪ್ಪಾದ ಪ್ರವೃತ್ತಿಗಳ ಆಸ್ತಿಯನ್ನು ಬಿಟ್ಟುಹೋದರು.
ಲೋಭ ಮತ್ತು ಪೂರ್ವಾಗ್ರಹದಂತಹ ವ್ಯಕ್ತಿತ್ವ ಲಕ್ಷಣಗಳು, ಪಾಪಪೂರ್ಣ ಪ್ರವೃತ್ತಿಗಳ ಕೆಲಸಗಳಲ್ಲವೊ? ಮತ್ತು ಈ ಲಕ್ಷಣಗಳು, ಲೋಕದಲ್ಲಿನ ಅನ್ಯಾಯಗಳಿಗೆ ನೆರವು ನೀಡುವುದಿಲ್ಲವೊ? ಅಷ್ಟೇಕೆ, ಉದ್ದೇಶಪೂರ್ವಕವಾದ ಪರಿಸರೀಯ ದುರುಪಯೋಗಗಳು ಮತ್ತು ಆರ್ಥಿಕ ದಬ್ಬಾಳಿಕೆಯ ಬುಡದಲ್ಲಿ ಲೋಭವಿದೆ. ಕುಲಸಂಬಂಧವಾದ ಕಲಹ ಮತ್ತು ಜಾತೀಯ ಅನ್ಯಾಯಗಳ ಹಿಂದೆ ನಿಶ್ಚಯವಾಗಿಯೂ ಪೂರ್ವಾಗ್ರಹವಿದೆ! ಅಂತಹ ಲಕ್ಷಣಗಳು, ಜನರನ್ನು ಕದಿಯುವಂತೆ, ಮೋಸಗೊಳಿಸುವಂತೆ, ಮತ್ತು ಇತರರಿಗೆ ಹಾನಿಮಾಡುವಂತಹ ರೀತಿಯಲ್ಲಿ ವರ್ತಿಸುವಂತೆಯೂ ಪ್ರೇರೇಪಿಸುತ್ತವೆ.
ನಮ್ಮ ಪಾಪಪೂರ್ಣ ಪ್ರವೃತ್ತಿಗಳ ಕಾರಣದಿಂದ, ನ್ಯಾಯವನ್ನು ಪ್ರಯೋಗಿಸಲಿಕ್ಕಾಗಿ ಮತ್ತು ಒಳ್ಳೇದನ್ನು ಮಾಡಲಿಕ್ಕಾಗಿರುವ ಅತ್ಯುತ್ತಮವಾಗಿ ಪ್ರಚೋದಿಸಲ್ಪಟ್ಟ ಪ್ರಯತ್ನಗಳು ಕೂಡ ಅನೇಕವೇಳೆ ವಿಫಲವಾಗುತ್ತವೆ. ಸ್ವತಃ ಅಪೊಸ್ತಲ ಪೌಲನು ನಿವೇದಿಸಿದ್ದು: “ನಾನು ಮೆಚ್ಚುವ ಒಳ್ಳೇ ಕಾರ್ಯವನ್ನು ಮಾಡದೆ ಮೆಚ್ಚದಿರುವ ಕೆಟ್ಟ ಕಾರ್ಯವನ್ನೇ ಮಾಡುವವನಾಗಿದ್ದೇನೆ.” ಆ ಹೋರಾಟವನ್ನು ವಿವರಿಸುತ್ತಾ ಅವನು ಹೇಳುವುದು: “ಅಂತರಾತ್ಮದೊಳಗೆ ದೇವರ ನಿಯಮದಲ್ಲಿ ಆನಂದಪಡುವವನಾಗಿದ್ದೇನೆ. ಆದರೆ ನನ್ನ ಅಂಗಗಳಲ್ಲಿ ಬೇರೊಂದು ನಿಯಮ ಉಂಟೆಂದು ನೋಡುತ್ತೇನೆ. ಅದು ನನ್ನ ಮನಸ್ಸಿನಲ್ಲಿರುವ ನಿಯಮಕ್ಕೆ ವಿರುದ್ಧವಾಗಿ ಕಾದಾಡಿ ನನ್ನನ್ನು ಸೆರೆಹಿಡಿದು ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ವಶಮಾಡುವಂಥದಾಗಿದೆ.” (ರೋಮಾಪುರ 7:19-23) ಬಹುಶಃ ಇಂದು ನಮಗೆ ಅದೇ ರೀತಿಯ ಸಂಘರ್ಷವಿದೆ. ಅನ್ಯಾಯಗಳು ಪದೇ ಪದೇ ಸಂಭವಿಸುವುದು ಈ ಕಾರಣಕ್ಕಾಗಿಯೇ.
ಆಳ್ವಿಕೆಯನ್ನು ನಡಿಸುವ ಮನುಷ್ಯನ ವಿಧವೂ ಲೋಕದಲ್ಲಿನ ಅನ್ಯಾಯಕ್ಕೆ ನೆರವು ನೀಡಿದೆ. ಪ್ರತಿಯೊಂದು ದೇಶದಲ್ಲಿ, ನಿಯಮಗಳು ಇವೆ ಹಾಗೂ ಅವುಗಳನ್ನು ಜಾರಿಗೆ ತರುವವರು ಇದ್ದಾರೆ. ಮತ್ತು ಖಂಡಿತವಾಗಿ, ನ್ಯಾಯಾಧೀಶರೂ ನ್ಯಾಯಾಲಯಗಳೂ ಇವೆ. ನೀತಿನಿಷ್ಠೆಯುಳ್ಳ ಕೆಲವು ಮನುಷ್ಯರು, ಮಾನವ ಹಕ್ಕುಗಳನ್ನು ಎತ್ತಿಹಿಡಿಯಲು ಮತ್ತು ಎಲ್ಲರಿಗೂ ಸಮವಾದ ನ್ಯಾಯವಿದೆಯೆಂಬುದನ್ನು ನೋಡಿಕೊಳ್ಳಲು ಪ್ರಯತ್ನಿಸಿದ್ದಾರೆಂಬುದು ನಿಶ್ಚಯ. ಆದರೂ, ಅವರ ಪ್ರಯತ್ನಗಳಲ್ಲಿ ಹೆಚ್ಚಿನವು ವಿಫಲವಾಗಿವೆ. ಏಕೆ? ಅವರ ವೈಫಲ್ಯದಲ್ಲಿ ಒಳಗೂಡಿರುವ ವಿಭಿನ್ನ ಅಂಶಗಳನ್ನು ಸಾರಾಂಶಿಸಿ, ಯೆರೆಮೀಯ 10:23 ಸೂಚಿಸುವುದು: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” ದೇವರಿಂದ ದೂರಸರಿದು ಮನುಷ್ಯನು, ನೀತಿ ಮತ್ತು ನ್ಯಾಯಯುತವಾದ ಒಂದು ಲೋಕವನ್ನು ಸ್ಥಾಪಿಸಲು ಅಸಮರ್ಥನಾಗಿದ್ದಾನೆ.—ಜ್ಞಾನೋಕ್ತಿ 14:12; ಪ್ರಸಂಗಿ 8:9.
ನ್ಯಾಯಯುತವಾದ ಒಂದು ಲೋಕವನ್ನು ನಿರ್ಮಿಸಲು ಮನುಷ್ಯನು ಮಾಡುವ ಪ್ರಯತ್ನಕ್ಕೆ ಒಂದು ದೊಡ್ಡ ತಡೆಯು, ಪಿಶಾಚನಾದ ಸೈತಾನನು. ಆ ದಂಗೆಕೋರ ದೇವದೂತನಾದ ಸೈತಾನನು, ಮೂಲ ‘ಕೊಲೆಗಾರನು’ ಮತ್ತು ‘ಸುಳ್ಳುಗಾರನು’ ಆಗಿದ್ದಾನೆ ಮತ್ತು “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ” ಎಂದು ಬೈಬಲು ಸ್ಪಷ್ಟವಾಗಿ ತಿಳಿಸುತ್ತದೆ. (ಯೋಹಾನ 8:44; 1 ಯೋಹಾನ 5:19) ಅಪೊಸ್ತಲ ಪೌಲನು ಅವನನ್ನು “ಈ ಪ್ರಪಂಚದ ದೇವರು” ಆಗಿ ಗುರುತಿಸುತ್ತಾನೆ. (2 ಕೊರಿಂಥ 4:3, 4) ನೀತಿಯನ್ನು ದ್ವೇಷಿಸುವವನಾಗಿದ್ದು, ದುಷ್ಟತನವನ್ನು ಪ್ರವರ್ಧಿಸಲು ಸಾಧ್ಯವಿರುವುದೆಲ್ಲವನ್ನು ಸೈತಾನನು ಮಾಡುತ್ತಾನೆ. ಅವನು ಈ ಲೋಕವನ್ನು ನಿಯಂತ್ರಿಸುವಷ್ಟು ಸಮಯ, ಎಲ್ಲ ವಿಧಗಳ ಅನ್ಯಾಯಗಳು ಮತ್ತು ಅವುಗಳ ಫಲಸ್ವರೂಪವಾಗಿ ಬರುವ ಕೇಡುಗಳು ಮಾನವಕುಲವನ್ನು ದಾಸತ್ವದಲ್ಲಿಡುವವು.
ಮಾನವ ಸಮಾಜದಲ್ಲಿ ಅನ್ಯಾಯವು ಅನಿವಾರ್ಯವೆಂಬುದು ಇದೆಲ್ಲದರ ಅರ್ಥವೊ? ನ್ಯಾಯಯುತವಾದ ಒಂದು ಲೋಕವು, ಒಂದು ಅಸಾಧ್ಯ ಕನಸೊ?
ನ್ಯಾಯಯುತವಾದ ಲೋಕ ಒಂದು ವಾಸ್ತವಿಕತೆ—ಹೇಗೆ?
ನ್ಯಾಯಯುತವಾದ ಲೋಕದ ನಿರೀಕ್ಷೆಯು ಒಂದು ವಾಸ್ತವಿಕತೆಯಾಗಲು, ಅನ್ಯಾಯದ ಕಾರಣಗಳನ್ನು ನಿರ್ಮೂಲಗೊಳಿಸಸಾಧ್ಯವಿರುವ ಒಂದು ಮೂಲಕ್ಕೆ ಮಾನವಕುಲವು ನೋಡಬೇಕು. ಆದರೆ ಯಾರು ಪಾಪವನ್ನು ಬೇರುಸಹಿತ ಕಿತ್ತುಹಾಕಿ, ಸೈತಾನನನ್ನು ಹಾಗೂ ಅವನ ಆಳ್ವಿಕೆಯನ್ನು ನಿರ್ಮೂಲಮಾಡಬಲ್ಲರು? ಸ್ಪಷ್ಟವಾಗಿಯೇ, ಯಾವುದೇ ಮಾನವನು ಅಥವಾ ಯಾವುದೇ ಮಾನವ ಕಾರ್ಯಭಾರವು ಅಂತಹ ಒಂದು ದುಸ್ಸಾಧ್ಯ ಕೆಲಸವನ್ನು ಸಾಧಿಸಲಾರದು. ಕೇವಲ ಯೆಹೋವ ದೇವರು ಅದನ್ನು ಮಾಡಬಲ್ಲನು! ಆತನ ಕುರಿತಾಗಿ ಬೈಬಲು ತಿಳಿಸುವುದು: “ನಮ್ಮ ಶರಣನಾದ ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು; ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ.” (ಧರ್ಮೋಪದೇಶಕಾಂಡ 32:4) ಮತ್ತು “ನ್ಯಾಯವನ್ನು ಮೆಚ್ಚುವವ”ನಾಗಿದ್ದು, ಮಾನವಕುಲವು ನ್ಯಾಯಯುತವಾದ ಲೋಕವೊಂದರಲ್ಲಿ ಜೀವನವನ್ನು ಆನಂದಿಸಬೇಕೆಂಬುದನ್ನು ಯೆಹೋವನು ಬಯಸುತ್ತಾನೆ.—ಕೀರ್ತನೆ 37:28.
ನ್ಯಾಯಯುತವಾದ ಲೋಕವೊಂದನ್ನು ತರಲಿಕ್ಕಾಗಿರುವ ದೇವರ ಏರ್ಪಾಡಿನ ಕುರಿತಾಗಿ ಮಾತಾಡುತ್ತಾ, ಅಪೊಸ್ತಲ ಪೇತ್ರನು ಬರೆದುದು: “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.” (2 ಪೇತ್ರ 3:13) ಈ “ನೂತನಾಕಾಶಮಂಡಲ”ವು ಹೊಸ ಪ್ರಾಕೃತಿಕ ಆಕಾಶಗಳಲ್ಲ. ದೇವರು ನಮ್ಮ ಪ್ರಾಕೃತಿಕ ಆಕಾಶಗಳನ್ನು ಪರಿಪೂರ್ಣವಾಗಿ ರಚಿಸಿದನು, ಮತ್ತು ಅವು ಆತನಿಗೆ ಮಹಿಮೆಯನ್ನು ತರುತ್ತವೆ. (ಕೀರ್ತನೆ 8:3; 19:1, 2) ‘ನೂತನಾಕಾಶಮಂಡಲವು’ ಭೂಮಿಯ ಮೇಲೆ ಒಂದು ಹೊಸ ಆಳಿಕೆಯಾಗಿದೆ. ಸದ್ಯದ ‘ಆಕಾಶಮಂಡಲವು’ ಮಾನವ ನಿರ್ಮಿತ ಸರಕಾರಗಳಿಂದ ರಚಿತವಾಗಿದೆ. ಬಲು ಬೇಗನೆ, ದೇವರ ಅರ್ಮಗೆದೋನ್ ಯುದ್ಧದಲ್ಲಿ, ಇವು “ನೂತನಾಕಾಶಮಂಡಲ”—ಆತನ ಸ್ವರ್ಗೀಯ ರಾಜ್ಯ ಅಥವಾ ಸರಕಾರ—ದಿಂದ ಸ್ಥಾನಪಲ್ಲಟಗೊಳಿಸಲ್ಪಡುವವು. (ಪ್ರಕಟನೆ 16:14-16) ಆ ರಾಜ್ಯದ ರಾಜನು ಯೇಸು ಕ್ರಿಸ್ತನಾಗಿದ್ದಾನೆ. ಮಾನವ ಆಳ್ವಿಕೆಗೆ ಒಂದು ಚಿರಸ್ಥಾಯಿ ಅಂತ್ಯವನ್ನು ತರುತ್ತಾ, ಈ ಸರಕಾರವು ಅನಂತಕಾಲದ ವರೆಗೆ ಆಳುವುದು.—ದಾನಿಯೇಲ 2:44.
ಹಾಗಾದರೆ, “ನೂತನಭೂಮಂಡಲ” ಏನಾಗಿದೆ? ಅದೊಂದು ಹೊಸ ಗ್ರಹವಲ್ಲ. ಯಾಕಂದರೆ ದೇವರು ಈ ಭೂಮಿಯನ್ನು ಮಾನವ ನಿವಾಸಕ್ಕೆ ತಕ್ಕದ್ದಾಗಿ ರಚಿಸಿದನು ಮತ್ತು ಅದು ಸದಾಕಾಲ ಬಾಳಬೇಕೆಂಬುದು ಆತನ ಚಿತ್ತವಾಗಿದೆ. (ಕೀರ್ತನೆ 104:5) “ನೂತನಭೂಮಂಡಲವು” ಜನರ ಒಂದು ಹೊಸ ಸಮಾಜವನ್ನು ಸೂಚಿಸುತ್ತದೆ. (ಆದಿಕಾಂಡ 11:1; ಕೀರ್ತನೆ 96:1) ನಾಶಗೊಳಿಸಲ್ಪಡಲಿರುವ “ಭೂಮಿ”ಯು (NW), ತಮ್ಮನ್ನು ಈ ದುಷ್ಟ ವಿಷಯಗಳ ವ್ಯವಸ್ಥೆಯ ಭಾಗವನ್ನಾಗಿ ಮಾಡಿಕೊಳ್ಳುವ ಜನರಿಂದ ರಚಿತವಾಗಿರುವುದು. (2 ಪೇತ್ರ 3:7) ಅವರನ್ನು ಸ್ಥಾನಪಲ್ಲಟಗೊಳಿಸುವ “ನೂತನಭೂಮಂಡಲವು,” ದುಷ್ಟತನವನ್ನು ದ್ವೇಷಿಸುವ ಮತ್ತು ನೀತಿ ನ್ಯಾಯವನ್ನು ಪ್ರೀತಿಸುವ ದೇವರ ನಿಜ ಸೇವಕರಿಂದ ರಚಿತವಾಗಿರುವುದು. (ಕೀರ್ತನೆ 37:10, 11) ಹೀಗೆ, ಸೈತಾನನ ಲೋಕವು ಇಲ್ಲದೆ ಹೋಗುವುದು.
ಆದರೆ ಸೈತಾನನಿಗೆ ಏನು ಕಾದಿರುತ್ತದೆ? ಅಪೊಸ್ತಲ ಯೋಹಾನನು ಮುಂತಿಳಿಸಿದ್ದು: “ಅವನು [ಕ್ರಿಸ್ತ ಯೇಸು] ಪಿಶಾಚನೂ ಸೈತಾನನೂ ಆಗಿರುವ ಪುರಾತನಸರ್ಪವೆಂಬ ಘಟಸರ್ಪನನ್ನು ಹಿಡಿದು ಸಾವಿರ ವರುಷ ಬಂಧನದಲ್ಲಿಟ್ಟನು. ಆ ಸಾವಿರ ವರುಷ ತೀರುವ ತನಕ ಸೈತಾನನು ಇನ್ನೂ ಜನಗಳನ್ನು ಮರುಳುಗೊಳಿಸದ ಹಾಗೆ ದೇವದೂತನು ಅವನನ್ನು ಅಧೋಲೋಕದಲ್ಲಿ ದೊಬ್ಬಿ ಬಾಗಿಲು ಮುಚ್ಚಿ ಅದಕ್ಕೆ ಮುದ್ರೆಹಾಕಿದನು.” (ಪ್ರಕಟನೆ 20:1-3) ಮಾನವಕುಲದ ಮೇಲೆ, ಸರಪಣಿಯಿಂದ ಬಂಧಿಸಲ್ಪಟ್ಟಿರುವ ಸೈತಾನನ ಪ್ರಭಾವವು, ಒಂದು ಆಳವಾದ ಬಂದೀಖಾನೆಯಲ್ಲಿರುವ ಸೆರೆವಾಸಿಯ ಪ್ರಭಾವದಷ್ಟೇ ಆಗಿರುವುದು. ನ್ಯಾಯಯುತವಾದ ಲೋಕವೊಂದರ ಮುನ್ಸೂಚಕವಾಗಿ ಬರಲಿರುವ ಅದು, ಮಾನವಕುಲಕ್ಕೆ ಎಂತಹ ಉಪಶಮನವಾಗಿರುವುದು! ಮತ್ತು ಸಾವಿರ ವರ್ಷಗಳ ಅಂತ್ಯದಲ್ಲಿ, ಸೈತಾನನು ಅಸ್ತಿತ್ವದಿಂದ ತೆಗೆದುಹಾಕಲ್ಪಡುವನು.—ಪ್ರಕಟನೆ 20:7-10.
ಆದರೆ, ಬಾಧ್ಯತೆಯಾಗಿ ಬಂದಿರುವ ಪಾಪದ ಕುರಿತಾಗಿ ಏನು? ಪಾಪವನ್ನು ಕಿತ್ತುಹಾಕಲಿಕ್ಕಾಗಿರುವ ಆಧಾರವನ್ನು ಯೆಹೋವನು ಈಗಾಗಲೇ ಒದಗಿಸಿದ್ದಾನೆ. “ಮನುಷ್ಯಕುಮಾರನು [ಯೇಸು ಕ್ರಿಸ್ತನು] . . . ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡು [“ಪ್ರಾಯಶ್ಚಿತ್ತ,” NW] ಕೊಡುವದಕ್ಕೂ ಬಂದನು.” (ಮತ್ತಾಯ 20:28) “ಪ್ರಾಯಶ್ಚಿತ್ತ” ಎಂಬ ಪದವು, ಬಂಧಿಗಳ ಬಿಡುಗಡೆಗಾಗಿ ಅವಶ್ಯವಾಗಿರುವ ಬೆಲೆಯನ್ನು ಸೂಚಿಸುತ್ತದೆ. ಮಾನವಕುಲವನ್ನು ವಿಮೋಚಿಸಲಿಕ್ಕಾಗಿರುವ ಪ್ರಾಯಶ್ಚಿತ್ತವಾಗಿ ಯೇಸು, ತನ್ನ ಪರಿಪೂರ್ಣ ಮಾನವ ಜೀವದ ಬೆಲೆಯನ್ನು ತೆತ್ತನು.—2 ಕೊರಿಂಥ 5:14; 1 ಪೇತ್ರ 1:18, 19.
ಯೇಸುವಿನ ಪ್ರಾಯಶ್ಚಿತ್ತ ಯಜ್ಞವು, ನಮಗೆ ಈಗಲೂ ಪ್ರಯೋಜನವನ್ನು ತರಸಾಧ್ಯವಿದೆ. ಅದರಲ್ಲಿ ನಂಬಿಕೆಯನ್ನಿಡುವ ಮೂಲಕ, ನಾವು ದೇವರ ಮುಂದೆ ಒಂದು ಶುದ್ಧ ನಿಲುವಿನಲ್ಲಿ ಆನಂದಿಸಬಲ್ಲೆವು. (ಅ. ಕೃತ್ಯಗಳು 10:43; 1 ಕೊರಿಂಥ 6:11) ದೇವರ ರಾಜ್ಯದ ಆಳಿಕೆಯ ಕೆಳಗೆ, ಮಾನವಕುಲಕ್ಕಾಗಿ ಪಾಪದಿಂದ ಸಂಪೂರ್ಣವಾದ ಚೇತರಿಸುವಿಕೆಯನ್ನು ಪ್ರಾಯಶ್ಚಿತ್ತವು ಸಾಧ್ಯಮಾಡುವುದು. ಬೈಬಲಿನ ಕೊನೆಯ ಪುಸ್ತಕವು, ದೇವರ ಸಿಂಹಾಸನದಿಂದ ಹೊರಡುವ ಒಂದು ಸಾಂಕೇತಿಕ “ಜೀವಜಲದ ನದಿಯನ್ನು” ವರ್ಣಿಸುತ್ತದೆ. ಮತ್ತು ಅದರ ತೀರಗಳುದ್ದಕ್ಕೂ “ಜನಾಂಗದವರನ್ನು ವಾಸಿಮಾಡುವದಕ್ಕೆ ಪ್ರಯೋಜನವಾಗಿ”ರುವ ಎಲೆಗಳುಳ್ಳ ಸಾಂಕೇತಿಕ ಹಣ್ಣಿನ ಮರಗಳಿವೆ. (ಪ್ರಕಟನೆ 22:1, 2) ಬೈಬಲು ಇಲ್ಲಿ ಏನನ್ನು ಚಿತ್ರಿಸುತ್ತದೊ ಅದು ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಆಧಾರದ ಮೇಲೆ ಪಾಪದಿಂದ ಮಾನವಕುಲವು ಚೇತರಿಸಿಕೊಳ್ಳಲಿಕ್ಕಾಗಿರುವ ಸೃಷ್ಟಿಕರ್ತನ ಅದ್ಭುತಕರವಾದ ಒದಗಿಸುವಿಕೆಯನ್ನು ಪ್ರತಿನಿಧಿಸುತ್ತದೆ. ಈ ಒದಗಿಸುವಿಕೆಯ ಇಡೀ ಅನ್ವಯವು, ವಿಧೇಯ ಮಾನವರನ್ನು ಪಾಪ ಮತ್ತು ಮರಣದಿಂದ ಬಿಡುಗಡೆಗೊಳಿಸುವುದು.
ನ್ಯಾಯಯುತವಾದ ಲೋಕವೊಂದರಲ್ಲಿ ಜೀವನ
ರಾಜ್ಯದಾಳಿಕೆಯ ಕೆಳಗೆ ಜೀವನವು ಹೇಗಿರುವುದೆಂಬುದರ ಕುರಿತಾಗಿ ಯೋಚಿಸಿರಿ. ಪಾತಕ ಮತ್ತು ಹಿಂಸಾಚಾರವು ಗತಕಾಲದ ಸಂಗತಿಗಳಾಗಿರುವವು. (ಜ್ಞಾನೋಕ್ತಿ 2:21, 22) ಆರ್ಥಿಕ ಅನ್ಯಾಯವು ಇಲ್ಲದೆ ಹೋಗಿರುವುದು. (ಕೀರ್ತನೆ 37:6; 72:12, 13; ಯೆಶಾಯ 65:21-23) ಸಾಮಾಜಿಕ, ಜಾತೀಯ, ಬುಡಕಟ್ಟು ಮತ್ತು ಕುಲಸಂಬಂಧಿತ ಪಕ್ಷಪಾತದ ಎಲ್ಲ ಜಾಡುಗಳು ಅಳಿಸಿಹಾಕಲ್ಪಡುವವು. (ಅ. ಕೃತ್ಯಗಳು 10:34, 35) ಯುದ್ಧಗಳು ಮತ್ತು ಯುದ್ಧೋದ್ಯಮದ ಶಸ್ತ್ರಗಳು ಇನ್ನು ಮುಂದೆ ಇಲ್ಲದಿರುವವು. (ಕೀರ್ತನೆ 46:9) ಮೃತಪಟ್ಟ ಲಕ್ಷಾಂತರ ಮಂದಿ ಅನ್ಯಾಯದಿಂದ ಮುಕ್ತವಾಗಿರುವ ಲೋಕವೊಂದರಲ್ಲಿ ಜೀವಕ್ಕೆ ಪುನಸ್ಥಾಪಿಸಲ್ಪಡುವರು. (ಅ. ಕೃತ್ಯಗಳು 24:15) ಎಲ್ಲರೂ ಪರಿಪೂರ್ಣ ಮತ್ತು ತುಡಿಯುತ್ತಿರುವ ಆರೋಗ್ಯದಲ್ಲಿ ಆನಂದಿಸುವರು. (ಯೋಬ 33:25; ಪ್ರಕಟನೆ 21:3, 4) “[ಯೇಸು ಕ್ರಿಸ್ತನು] ಸದ್ಧರ್ಮವನ್ನು ಪ್ರಚುರಪಡಿಸಿ ಸಿದ್ಧಿಗೆತರುವನು” ಎಂದು ಬೈಬಲ್ ನಮಗೆ ಆಶ್ವಾಸನೆಯನ್ನೀಯುತ್ತದೆ.—ಯೆಶಾಯ 42:3.
ಅಷ್ಟರ ವರೆಗೆ, ಅನ್ಯಾಯವು ನಮ್ಮ ಮೇಲೆ ಎರಗಬಲ್ಲದು, ಆದರೆ ಪ್ರತಿಯಾಗಿ ನಾವೆಂದೂ ಅನ್ಯಾಯವಂತರಾಗದಿರೋಣ. (ಮೀಕ 6:8) ಅನ್ಯಾಯವು ಸಹಿಸಲ್ಪಡಬೇಕಾದಾಗಲೂ, ನಾವು ಒಂದು ಸಕಾರಾತ್ಮಕ ಹೊರನೋಟವನ್ನು ಕಾಪಾಡಿಕೊಳ್ಳೋಣ. ವಾಗ್ದಾನಿತ ನ್ಯಾಯಯುತವಾದ ಲೋಕವು ಬೇಗನೆ ಒಂದು ವಾಸ್ತವಿಕತೆಯಾಗುವುದು. (2 ತಿಮೊಥೆಯ 3:1-5; 2 ಪೇತ್ರ 3:11-13) ಸರ್ವಶಕ್ತನಾದ ದೇವರು ತನ್ನ ಮಾತನ್ನು ಕೊಟ್ಟಿದ್ದಾನೆ, ಮತ್ತು ಅದು ‘ನೆರವೇರುವುದು.’ (ಯೆಶಾಯ 55:10, 11) ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆಂಬುದನ್ನು ಕಲಿಯುವ ಮೂಲಕ, ಆ ನ್ಯಾಯಯುತವಾದ ಲೋಕದಲ್ಲಿನ ಜೀವನಕ್ಕಾಗಿ ತಯಾರಿಸುವ ಸಮಯವು ಇದೇ ಆಗಿದೆ.—ಯೋಹಾನ 17:3; 2 ತಿಮೊಥೆಯ 3:16, 17.
[ಪುಟ 7 ರಲ್ಲಿರುವ ಚಿತ್ರ]
ದೇವರ ವಾಗ್ದಾನಿತ ಹೊಸ ಲೋಕದಲ್ಲಿ ಅನ್ಯಾಯದ ಎಲ್ಲ ಜಾಡುಗಳು ಅಳಿಸಿಹಾಕಲ್ಪಡುವುವು