‘ಒಬ್ಬರಿಗೊಬ್ಬರು ಉದಾರವಾಗಿ ಕ್ಷಮಿಸುತ್ತಾ ಇರ್ರಿ’
“ಒಬ್ಬರಿಗೊಬ್ಬರು ಸೈರಿಸಿಕೊಂಡು [“ಒಬ್ಬರನ್ನೊಬ್ಬರು ಉದಾರವಾಗಿ,” NW] ಕ್ಷಮಿಸಿರಿ.”—ಕೊಲೊಸ್ಸೆ 3:13.
1. (ಎ) ನಾವು ಇತರರನ್ನು “ಏಳು ಸಾರಿ” ಕ್ಷಮಿಸಬೇಕೆಂದು ಪೇತ್ರನು ಸಲಹೆಕೊಟ್ಟಾಗ, ತಾನು ಉದಾರಭಾವದವನಾಗಿದ್ದೇನೆಂದು ಅವನು ಏಕೆ ನೆನಸಿದ್ದಿರಬಹುದು? (ಬಿ) ನಾವು “ಏಳೆಪ್ಪತ್ತು ಸಾರಿ” ಕ್ಷಮಿಸಬೇಕೆಂದು ಯೇಸು ಹೇಳಿದಾಗ ಅವನೇನನ್ನು ಅರ್ಥೈಸಿದನು?
“ಸ್ವಾಮೀ, ನನ್ನ ಸಹೋದರನು ನನಗೆ ತಪ್ಪುಮಾಡುತ್ತಾ ಬಂದರೆ ನಾನು ಎಷ್ಟು ಸಾರಿ ಅವನಿಗೆ ಕ್ಷಮಿಸಬೇಕು? ಏಳು ಸಾರಿಯೋ”? (ಮತ್ತಾಯ 18:21) ತನ್ನ ಈ ಸಲಹೆಯಿಂದಾಗಿ ತಾನು ತುಂಬ ಉದಾರಭಾವದವನಾಗಿದ್ದೇನೆಂದು ಪೇತ್ರನು ನೆನಸಿದ್ದಿರಬಹುದು. ಒಬ್ಬ ವ್ಯಕ್ತಿಯು, ಒಂದೇ ತಪ್ಪಿಗೆ ಮೂರಕ್ಕಿಂತಲೂ ಹೆಚ್ಚು ಬಾರಿ ಕ್ಷಮೆಯನ್ನು ನೀಡಬಾರದೆಂಬುದಾಗಿ ಆ ಸಮಯದಲ್ಲಿನ ರಬ್ಬಿಗಳ ಸಂಪ್ರದಾಯವು ಹೇಳಿತು.a ಹೀಗಿರುವಾಗ, ಯೇಸು ಈ ರೀತಿಯಲ್ಲಿ ಉತ್ತರಿಸಿದಾಗ ಪೇತ್ರನಿಗಾದ ಆಶ್ಚರ್ಯವನ್ನು ಊಹಿಸಿಕೊಳ್ಳಿರಿ: “ಏಳು ಸಾರಿ ಎಂದಲ್ಲ, ಏಳೆಪ್ಪತ್ತು ಸಾರಿ ಎಂದು ನಿನಗೆ ಹೇಳುತ್ತೇನೆ”! (ಮತ್ತಾಯ 18:22) ಏಳನ್ನು ಪುನರಾವರ್ತಿಸುವುದರ ಅರ್ಥವು, “ಅಪರಿಮಿತವಾಗಿ” ಎಂದು ಹೇಳುವುದಕ್ಕೆ ಸಮಾನವಾಗಿತ್ತು. ಯೇಸುವಿನ ದೃಷ್ಟಿಯಲ್ಲಿ, ಒಬ್ಬ ಕ್ರೈಸ್ತನು ಇತರರನ್ನು ಎಷ್ಟು ಬಾರಿ ಕ್ಷಮಿಸಬೇಕೊ ಅದಕ್ಕೆ ಕಾರ್ಯತಃ ಯಾವ ಮಿತಿಯೇ ಇಲ್ಲ.
2, 3. (ಎ) ಇತರರನ್ನು ಕ್ಷಮಿಸುವುದು ಕಷ್ಟಕರವಾಗಿ ತೋರಬಹುದಾದ ಕೆಲವು ಸನ್ನಿವೇಶಗಳು ಯಾವುವು? (ಬಿ) ಇತರರನ್ನು ಕ್ಷಮಿಸುವುದು ನಮಗೆ ಪ್ರಯೋಜನಕರವೆಂದು ನಾವು ಏಕೆ ಭರವಸೆಯಿಂದಿರಬಲ್ಲೆವು?
2 ಆದಾಗಲೂ, ಆ ಸಲಹೆಯನ್ನು ಅನ್ವಯಿಸುವುದು ಯಾವಾಗಲೂ ಸುಲಭವಾಗಿರುವುದಿಲ್ಲ. ನಮ್ಮಲ್ಲಿ ಅನ್ಯಾಯದ ಹಾನಿಯ ನೋವನ್ನು ಯಾರು ಅನುಭವಿಸಿಲ್ಲ? ಪ್ರಾಯಶಃ ನೀವು ಭರವಸೆಯಿಟ್ಟಿದ್ದ ಒಬ್ಬ ವ್ಯಕ್ತಿಯು ಒಂದು ಗುಟ್ಟನ್ನು ಹೊರಗೆಡಹಿದ್ದಾನೆ. (ಜ್ಞಾನೋಕ್ತಿ 11:13) ನಿಕಟ ಸ್ನೇಹಿತನೊಬ್ಬನ ಅವಿಚಾರದ ಮಾತುಗಳು ನಿಮ್ಮನ್ನು ‘ಕತ್ತಿಯಂತೆ ತಿವಿ’ದಿರಬಹುದು. (ಜ್ಞಾನೋಕ್ತಿ 12:18) ನೀವು ಪ್ರೀತಿಸಿರುವ ಅಥವಾ ಭರವಸೆಯಿಟ್ಟಿರುವ ಒಬ್ಬ ವ್ಯಕ್ತಿಯಿಂದ ನಿಂದಾತ್ಮಕ ಉಪಚಾರವು, ಆಳವಾದ ಗಾಯಗಳನ್ನು ಉಂಟುಮಾಡಿರಬಹುದು. ಇಂತಹ ಸಂಗತಿಗಳು ಸಂಭವಿಸುವಾಗ, ನಮ್ಮ ಸ್ವಾಭಾವಿಕ ಪ್ರತಿಕ್ರಿಯೆಯು ಕೋಪಗೊಳ್ಳುವುದಾಗಿರುತ್ತದೆ. ತಪ್ಪನ್ನು ಮಾಡಿದವನೊಂದಿಗೆ ಮಾತಾಡುವುದನ್ನು ನಿಲ್ಲಿಸುವ, ಸಾಧ್ಯವಿರುವಲ್ಲಿ ಅವನನ್ನು ಪೂರ್ತಿಯಾಗಿ ದೂರವಿರಿಸುವ ಪ್ರವೃತ್ತಿ ನಮಗಿರಬಹುದು. ಅವನನ್ನು ಕ್ಷಮಿಸುವುದು, ನಮಗೆ ಹಾನಿಮಾಡಿದ್ದಕ್ಕಾಗಿ ಅವನನ್ನು ಶಿಕ್ಷಿಸದೆ ಬಿಟ್ಟುಬಿಡುತ್ತಿರುವಂತೆ ತೋರಬಹುದು. ಆದರೆ, ತೀವ್ರ ಅಸಮಾಧಾನವನ್ನು ಪೋಷಿಸಿಕೊಳ್ಳುವುದರಿಂದ ನಾವು ನಮ್ಮನ್ನೇ ಹಾನಿಗೊಳಪಡಿಸಿಕೊಳ್ಳುತ್ತೇವೆ.
3 ಆದುದರಿಂದ ಯೇಸು ನಮಗೆ—“ಏಳೆಪ್ಪತ್ತು ಸಾರಿ”—ಕ್ಷಮಿಸುವಂತೆ ಕಲಿಸುತ್ತಾನೆ. ನಿಶ್ಚಯವಾಗಿಯೂ ಅವನ ಬೋಧನೆಗಳು ನಮಗೆ ಎಂದೂ ಹಾನಿಯನ್ನು ತಾರವು. ಅವನು ಕಲಿಸಿದ್ದೆಲ್ಲವೂ, ‘ನಾವು ಪ್ರಯೋಜನ ಪಡೆದುಕೊಳ್ಳುವಂತೆ ಕಲಿಸುವಾತ’ನಾದ (NW) ಯೆಹೋವನಿಂದ ಬಂದವುಗಳಾಗಿವೆ. (ಯೆಶಾಯ 48:17; ಯೋಹಾನ 7:16, 17) ತರ್ಕಬದ್ಧವಾಗಿ, ಇತರರನ್ನು ಕ್ಷಮಿಸುವುದು ನಮಗೆ ಪ್ರಯೋಜನಕರವಾಗಿರಲೇಬೇಕು. ನಾವು ಏಕೆ ಕ್ಷಮಿಸಬೇಕು ಮತ್ತು ನಾವದನ್ನು ಹೇಗೆ ಮಾಡಸಾಧ್ಯವಿದೆಯೆಂಬುದನ್ನು ನಾವು ಚರ್ಚಿಸುವ ಮೊದಲು, ಕ್ಷಮಾಪಣೆ ಏನಾಗಿದೆ ಮತ್ತು ಅದು ಏನಾಗಿಲ್ಲವೆಂಬುದನ್ನು ಸ್ಪಷ್ಟಪಡಿಸುವುದು ಸಹಾಯಕರವಾಗಿರಬಹುದು. ಕ್ಷಮೆಯ ಕುರಿತಾದ ನಮ್ಮ ಕಲ್ಪನೆಯು, ಇತರರು ನಮ್ಮ ವಿರುದ್ಧ ತಪ್ಪುಮಾಡುವಾಗ ಕ್ಷಮಿಸುವ ನಮ್ಮ ಸಾಮರ್ಥ್ಯದೊಂದಿಗೆ ಸ್ವಲ್ಪ ಸಂಬಂಧವನ್ನು ಹೊಂದಿರಬಹುದು.
4. ಇತರರನ್ನು ಕ್ಷಮಿಸುವುದು ಏನನ್ನು ಅರ್ಥೈಸುವುದಿಲ್ಲ, ಆದರೆ ಯಾವ ರೀತಿಯಲ್ಲಿ ಕ್ಷಮೆಯ ಅರ್ಥವನ್ನು ನಿರೂಪಿಸಲಾಗಿದೆ?
4 ವ್ಯಕ್ತಿಗತವಾದ ತಪ್ಪುಗಳಿಗಾಗಿ ಇತರರನ್ನು ಕ್ಷಮಿಸುವುದು, ಅವರೇನನ್ನು ಮಾಡಿದ್ದಾರೊ ಅದನ್ನು ನಾವು ಅಲಕ್ಷಿಸುತ್ತಿದ್ದೇವೆ ಅಥವಾ ಕಡೆಗಣಿಸುತ್ತಿದ್ದೇವೆಂಬುದನ್ನು ಅರ್ಥೈಸುವುದಿಲ್ಲ; ಅಥವಾ ಇತರರು ನಮ್ಮಿಂದ ಅನುಚಿತವಾದ ಲಾಭವನ್ನು ಪಡೆಯುವಂತೆ ಬಿಡುವುದನ್ನೂ ಅರ್ಥೈಸುವುದಿಲ್ಲ. ಎಷ್ಟೆಂದರೂ ಯೆಹೋವನು ನಮ್ಮನ್ನು ಕ್ಷಮಿಸುವಾಗ, ಆತನು ನಿಶ್ಚಯವಾಗಿಯೂ ನಮ್ಮ ಪಾಪಗಳನ್ನು ಕ್ಷುಲ್ಲಕವೆಂದೆಣಿಸುವುದಿಲ್ಲ, ಮತ್ತು ಪಾಪಪೂರ್ಣ ಮಾನವರು ಆತನ ಕರುಣೆಯನ್ನು ತುಳಿಯುವಂತೆ ಆತನು ಎಂದೂ ಅನುಮತಿಸನು. (ಇಬ್ರಿಯ 10:29) ಶಾಸ್ತ್ರಗಳ ಒಳನೋಟ (ಇಂಗ್ಲಿಷ್) ಪುಸ್ತಕಕ್ಕನುಸಾರ, ಕ್ಷಮೆಯನ್ನು “ತಪ್ಪುಮಾಡಿದವನನ್ನು ಕ್ಷಮಿಸುವ ಕೃತ್ಯ; ಅವನ ತಪ್ಪಿನ ಕಾರಣ ಅವನ ವಿಷಯದಲ್ಲಿ ಅಸಮಾಧಾನಪಡುವುದನ್ನು ನಿಲ್ಲಿಸುವುದು ಮತ್ತು ಪರಿಹಾರಕ್ಕಾಗಿರುವ ಎಲ್ಲ ಬೇಡಿಕೆಯನ್ನು ಬಿಟ್ಟುಕೊಡುವುದು” ಎಂದು ಅರ್ಥನಿರೂಪಿಸಲಾಗಿದೆ. (ಸಂಪುಟ 1, ಪುಟ 861)b ಇತರರನ್ನು ಕ್ಷಮಿಸಲಿಕ್ಕಾಗಿ ಬೈಬಲು ನಮಗೆ ದೃಢವಾದ ಕಾರಣಗಳನ್ನು ಒದಗಿಸುತ್ತದೆ.
ಇತರರನ್ನು ಏಕೆ ಕ್ಷಮಿಸಬೇಕು?
5. ಎಫೆಸ 5:1ರಲ್ಲಿ ಇತರರನ್ನು ಕ್ಷಮಿಸಲಿಕ್ಕಾಗಿ ಯಾವ ಪ್ರಾಮುಖ್ಯ ಕಾರಣವು ಕೊಡಲ್ಪಟ್ಟಿದೆ?
5 ಇತರರನ್ನು ಕ್ಷಮಿಸಲಿಕ್ಕಾಗಿರುವ ಒಂದು ಪ್ರಾಮುಖ್ಯ ಕಾರಣವು, ಎಫೆಸ 5:1ರಲ್ಲಿ (NW) ಸೂಚಿಸಲ್ಪಟ್ಟಿದೆ: “ಆದುದರಿಂದ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ದೇವರನ್ನು ಅನುಕರಿಸುವವರಾಗಿರಿ.” ಯಾವ ವಿಧದಲ್ಲಿ ನಾವು ‘ದೇವರನ್ನು ಅನುಕರಿಸುವವರು’ ಆಗತಕ್ಕದ್ದು? “ಆದುದರಿಂದ” ಎಂಬ ಪದವು ಆ ಅಭಿವ್ಯಕ್ತಿಯನ್ನು ಹಿಂದಿನ ವಚನದೊಂದಿಗೆ ಜೋಡಿಸುತ್ತದೆ. ಅದು ಹೇಳುವುದು: “ಒಬ್ಬರಿಗೊಬ್ಬರು ದಯಾಪರರೂ, ಕೋಮಲವಾಗಿ ಕನಿಕರಿಸುವವರಾಗಿಯೂ, ದೇವರು ನಿಮ್ಮನ್ನು ಕ್ರಿಸ್ತನ ಮೂಲಕ ಉದಾರವಾಗಿ ಕ್ಷಮಿಸಿದಂತೆ ಒಬ್ಬರಿಗೊಬ್ಬರು ಉದಾರವಾಗಿ ಕ್ಷಮಿಸುವವರಾಗಿಯೂ ಇರ್ರಿ.” (ಎಫೆಸ 4:32, NW) ಹೌದು, ಕ್ಷಮೆಯ ವಿಷಯದಲ್ಲಿ ನಾವು ದೇವರನ್ನು ಅನುಕರಿಸುವವರಾಗಿರಬೇಕು. ಒಬ್ಬ ಚಿಕ್ಕ ಹುಡುಗನು ತನ್ನ ತಂದೆಯಂತಿರಲು ಪ್ರಯತ್ನಿಸುವಂತೆಯೇ, ಯೆಹೋವನು ಅತಿಯಾಗಿ ಪ್ರೀತಿಸುವ ಮಕ್ಕಳೋಪಾದಿ ನಾವು, ನಮ್ಮ ಕ್ಷಮಿಸುವ ಸ್ವರ್ಗೀಯ ತಂದೆಯಂತಾಗಲು ಬಯಸತಕ್ಕದ್ದು. ಸ್ವರ್ಗದಿಂದ ಕೆಳಗೆ ನೋಡಿ, ಭೂಮಿಯ ಮೇಲಿನ ತನ್ನ ಮಕ್ಕಳು ಒಬ್ಬರನ್ನೊಬ್ಬರು ಕ್ಷಮಿಸುವ ಮೂಲಕ ತನ್ನಂತಾಗಲು ಪ್ರಯತ್ನಿಸುತ್ತಿರುವುದನ್ನು ನೋಡುವುದು ಯೆಹೋವನ ಹೃದಯವನ್ನು ಎಷ್ಟು ಹರ್ಷಗೊಳಿಸುತ್ತಿರಬೇಕು!—ಲೂಕ 6:35, 36; ಹೋಲಿಸಿರಿ ಮತ್ತಾಯ 5:44-48.
6. ಯೆಹೋವನ ಕ್ಷಮೆ ಮತ್ತು ನಮ್ಮ ಕ್ಷಮೆಯ ನಡುವೆ ಯಾವ ರೀತಿಯ ದೊಡ್ಡ ವ್ಯತ್ಯಾಸವಿದೆ?
6 ಯೆಹೋವನು ಕ್ಷಮಿಸುವಂತೆ ಒಂದು ಪರಿಪೂರ್ಣ ಅರ್ಥದಲ್ಲಿ ನಾವೆಂದೂ ಕ್ಷಮಿಸಲಾರೆವು ಎಂಬುದು ಒಪ್ಪತಕ್ಕ ಮಾತು. ಆದರೆ ನಾವು ಒಬ್ಬರನ್ನೊಬ್ಬರು ಕ್ಷಮಿಸಲಿಕ್ಕಾಗಿ ಇನ್ನೂ ಹೆಚ್ಚಿನ ಕಾರಣವಿದೆ. ಇದನ್ನು ಪರಿಗಣಿಸಿರಿ: ಯೆಹೋವನ ಕ್ಷಮೆ ಮತ್ತು ನಮ್ಮ ಕ್ಷಮೆಯ ನಡುವೆ ಒಂದು ದೊಡ್ಡ ವ್ಯತ್ಯಾಸವಿದೆ. (ಯೆಶಾಯ 55:7-9) ನಮ್ಮ ವಿರುದ್ಧ ಪಾಪಮಾಡಿದವರನ್ನು ನಾವು ಕ್ಷಮಿಸುವಾಗ, ಅನೇಕವೇಳೆ, ಇಂದೊ ಮುಂದೊ ನಮ್ಮನ್ನು ಕ್ಷಮಿಸುವ ಮೂಲಕ ಅವರು ನಮಗೆ ಆ ಉಪಕಾರವನ್ನು ಹಿಂದಿರುಗಿಸುವ ಅಗತ್ಯವಿರಬಹುದು ಎಂಬ ಅರಿವಿನೊಂದಿಗೆ ಅದನ್ನು ಮಾಡುತ್ತೇವೆ. ಮನುಷ್ಯರ ವಿಷಯದಲ್ಲಿ ಅದು ಯಾವಾಗಲೂ ಪಾಪಿಗಳು ಪಾಪಿಗಳನ್ನು ಕ್ಷಮಿಸುವ ವಿದ್ಯಮಾನವಾಗಿರುತ್ತದೆ. ಯೆಹೋವನಿಗಾದರೋ, ಕ್ಷಮೆಯು ಯಾವಾಗಲೂ ಒಂದೇ ದಿಕ್ಕಿನದ್ದಾಗಿರುತ್ತದೆ. ಆತನು ನಮ್ಮನ್ನು ಕ್ಷಮಿಸುತ್ತಾನೆ, ಆದರೆ ನಾವೆಂದೂ ಆತನನ್ನು ಕ್ಷಮಿಸುವ ಅಗತ್ಯವಿರುವುದಿಲ್ಲ. ಪಾಪವನ್ನು ಮಾಡದ ಯೆಹೋವನು ನಮ್ಮನ್ನು ಇಷ್ಟೊಂದು ಪ್ರೀತಿಪೂರ್ವಕವಾಗಿ ಮತ್ತು ಸಂಪೂರ್ಣವಾಗಿ ಕ್ಷಮಿಸಬಲ್ಲನಾದರೆ, ಪಾಪಪೂರ್ಣ ಮನುಷ್ಯರಾದ ನಾವು ಒಬ್ಬರನ್ನೊಬ್ಬರು ಕ್ಷಮಿಸಲು ಪ್ರಯತ್ನಿಸಬಾರದೊ?—ಮತ್ತಾಯ 6:12.
7. ಕರುಣೆಗಾಗಿ ಒಂದು ಆಧಾರವಿರುವಾಗ ಇತರರನ್ನು ಕ್ಷಮಿಸಲು ನಾವು ನಿರಾಕರಿಸುವಲ್ಲಿ, ಅದು ಯೆಹೋವನೊಂದಿಗಿನ ನಮ್ಮ ಸ್ವಂತ ಸಂಬಂಧವನ್ನು ಹೇಗೆ ಪ್ರತಿಕೂಲವಾಗಿ ಬಾಧಿಸಬಲ್ಲದು?
7 ಇನ್ನೂ ಹೆಚ್ಚು ಪ್ರಾಮುಖ್ಯವಾಗಿ, ಕರುಣೆಗಾಗಿ ಒಂದು ಆಧಾರವಿರುವಾಗ ನಾವು ಇತರರನ್ನು ಕ್ಷಮಿಸಲು ನಿರಾಕರಿಸುವಲ್ಲಿ, ಅದು ದೇವರೊಂದಿಗಿನ ನಮ್ಮ ಸ್ವಂತ ಸಂಬಂಧವನ್ನು ಪ್ರತಿಕೂಲವಾಗಿ ಬಾಧಿಸಬಲ್ಲದು. ನಾವು ಒಬ್ಬರನ್ನೊಬ್ಬರು ಕ್ಷಮಿಸಬೇಕೆಂದು ಯೆಹೋವನು ನಮ್ಮನ್ನು ಕೇವಲ ಕೇಳಿಕೊಳ್ಳುವುದಿಲ್ಲ, ನಾವು ಹಾಗೆ ಮಾಡುವಂತೆ ಆತನು ನಿರೀಕ್ಷಿಸುತ್ತಾನೆ. ಶಾಸ್ತ್ರಗಳಿಗನುಸಾರ, ನಾವು ಕ್ಷಮಿಸುವವರಾಗಿರಲಿಕ್ಕಾಗಿರುವ ಪ್ರಚೋದನೆಯ ಅರ್ಧಾಂಶವು, ಯೆಹೋವನು ನಮ್ಮನ್ನು ಕ್ಷಮಿಸಬಹುದು ಎಂಬ ಕಾರಣಕ್ಕೋಸ್ಕರವಾಗಿದೆ, ಅಥವಾ ಆತನು ನಮ್ಮನ್ನು ಕ್ಷಮಿಸಿದ್ದಾನೆ ಎಂಬ ಕಾರಣದಿಂದಾಗಿದೆ. (ಮತ್ತಾಯ 6:14; ಮಾರ್ಕ 11:25; ಎಫೆಸ 4:32; 1 ಯೋಹಾನ 4:11) ಹಾಗಾದರೆ, ನಾವು ಇತರರನ್ನು ಕ್ಷಮಿಸಲಿಕ್ಕಾಗಿ ದೃಢವಾದ ಕಾರಣವಿರುವಾಗ ಹಾಗೆ ಮಾಡಲು ಮನಸ್ಸಿಲ್ಲದವರಾಗಿರುವಲ್ಲಿ, ನಾವು ಯೆಹೋವನಿಂದ ಅಂತಹ ಕ್ಷಮೆಯನ್ನು ನಿಜವಾಗಿಯೂ ಹೇಗೆ ನಿರೀಕ್ಷಿಸಸಾಧ್ಯವಿದೆ?—ಮತ್ತಾಯ 18:21-35.
8. ಕ್ಷಮಿಸುವವರಾಗಿರುವುದು ನಮ್ಮ ಪರಮ ಹಿತಾಸಕ್ತಿಯಲ್ಲಿ ಫಲಿಸುತ್ತದೆ ಏಕೆ?
8 ಯೆಹೋವನು ತನ್ನ ಜನರಿಗೆ “ಅವರು ನಡೆಯ ಬೇಕಾದ [“ಒಳ್ಳೆಯ,” NW] ಮಾರ್ಗವನ್ನು” ಕಲಿಸುತ್ತಾನೆ. (1 ಅರಸುಗಳು 8:36) ನಾವು ಒಬ್ಬರನ್ನೊಬ್ಬರು ಕ್ಷಮಿಸುವಂತೆ ಆತನು ನಮಗೆ ಉಪದೇಶಿಸುವಾಗ, ಆತನ ಹೃದಯದಲ್ಲಿ ನಮ್ಮ ಪರಮ ಹಿತಾಸಕ್ತಿಯು ಇದೆಯೆಂಬ ಭರವಸೆ ನಮಗಿರಸಾಧ್ಯವಿದೆ. ಸಕಾರಣದಿಂದಲೇ ಬೈಬಲ್ ನಮಗೆ “ಕೋಪವನ್ನು ಬಿಟ್ಟುಕೊಡುವಂತೆ” (NW) ಹೇಳುತ್ತದೆ. (ರೋಮಾಪುರ 12:19) ತೀವ್ರ ಅಸಮಾಧಾನವು, ಜೀವನದಲ್ಲಿ ಒಯ್ಯಲಿಕ್ಕಾಗಿ ಒಂದು ಭಾರವಾದ ಹೊರೆಯಾಗಿದೆ. ನಾವು ಅದಕ್ಕೆ ಅವಕಾಶಮಾಡಿಕೊಡುವಾಗ, ಅದು ನಮ್ಮ ಯೋಚನೆಗಳಲ್ಲಿ ತುಂಬಿರುತ್ತದೆ, ನಮ್ಮ ಶಾಂತಿಯನ್ನು ಕಸಿದುಕೊಳ್ಳುತ್ತದೆ ಮತ್ತು ನಮ್ಮ ಆನಂದವನ್ನು ಅದುಮಿಬಿಡುತ್ತದೆ. ಈರ್ಷ್ಯೆಯಂತೆ, ದೀರ್ಘ ಸಮಯದ ಕೋಪವು, ನಮ್ಮ ಶಾರೀರಿಕ ಆರೋಗ್ಯದ ಮೇಲೆ ಒಂದು ಹಾನಿಕಾರಕ ಪ್ರಭಾವವನ್ನು ಬೀರಬಲ್ಲದು. (ಜ್ಞಾನೋಕ್ತಿ 14:30) ಮತ್ತು ನಾವು ಇದೆಲ್ಲವನ್ನೂ ಅನುಭವಿಸುತ್ತಿರುವಾಗ, ತಪ್ಪುಮಾಡಿದವನು ನಮ್ಮ ಸಂಕ್ಷೋಭೆಯ ಕುರಿತಾಗಿ ಪೂರ್ತಿಯಾಗಿ ಅರಿವಿಲ್ಲದವನಾಗಿರಬಹುದು! ಕೇವಲ ಇತರರ ಪ್ರಯೋಜನಕ್ಕಾಗಿ ಮಾತ್ರವಲ್ಲ, ನಮ್ಮ ಸ್ವಂತ ಪ್ರಯೋಜನಕ್ಕಾಗಿಯೂ ನಾವು ಅವರನ್ನು ಧಾರಾಳವಾಗಿ ಕ್ಷಮಿಸುವ ಅಗತ್ಯವಿದೆಯೆಂದು ನಮ್ಮ ಪ್ರೀತಿಯುಳ್ಳ ಸೃಷ್ಟಿಕರ್ತನಿಗೆ ತಿಳಿದಿದೆ. ಖಂಡಿತವಾಗಿಯೂ, ಕ್ಷಮಿಸಲಿಕ್ಕಾಗಿರುವ ಬೈಬಲಿನ ಸಲಹೆಯು ‘ನಡೆಯಬೇಕಾದ ಒಳ್ಳೆಯ ಮಾರ್ಗ’ ಆಗಿದೆ.
‘ಒಬ್ಬರನ್ನೊಬ್ಬರು ಸೈರಿಸಿಕೊಳ್ಳುತ್ತಾ ಇರ್ರಿ’
9, 10. (ಎ) ಯಾವ ರೀತಿಯ ಸನ್ನಿವೇಶಗಳು ಅನಿವಾರ್ಯವಾಗಿ ಔಪಚಾರಿಕ ಕ್ಷಮೆಯನ್ನು ಅವಶ್ಯಪಡಿಸುವುದಿಲ್ಲ? (ಬಿ) ‘ಒಬ್ಬರನ್ನೊಬ್ಬರು ಸೈರಿಸಿಕೊಳ್ಳುತ್ತಾ ಇರ್ರಿ’ ಎಂಬ ವಾಕ್ಸರಣಿಯಿಂದ ಏನು ಸೂಚಿಸಲ್ಪಟ್ಟಿದೆ?
9 ಶಾರೀರಿಕ ಗಾಯಗಳು, ಚಿಕ್ಕಪುಟ್ಟ ಪೆಟ್ಟುಗಳಿಂದ ಹಿಡಿದು ದೊಡ್ಡ ಗಾಯಗಳಾಗಿರಬಹುದು, ಮತ್ತು ಎಲ್ಲವೂ ಒಂದೇ ಮಟ್ಟದ ಗಮನವನ್ನು ಅವಶ್ಯಪಡಿಸುವುದಿಲ್ಲ. ಇದು ನೊಂದ ಅನಿಸಿಕೆಗಳೊಂದಿಗೆ ಸದೃಶವಾಗಿದೆ—ಕೆಲವು ಗಾಯಗಳು ಇತರ ಗಾಯಗಳಿಗಿಂತ ಹೆಚ್ಚು ದೊಡ್ಡವಾಗಿರುತ್ತವೆ. ಇತರರೊಂದಿಗಿನ ನಮ್ಮ ಸಂಬಂಧಗಳಲ್ಲಿ ನಾವು ಅನುಭವಿಸುವ ಪ್ರತಿಯೊಂದು ಚಿಕ್ಕಪುಟ್ಟ ಪೆಟ್ಟಿನ ಕುರಿತಾಗಿ ನಾವು ನಿಜವಾಗಿಯೂ ಒಂದು ರಾದ್ದಾಂತವನ್ನು ಎಬ್ಬಿಸುವ ಅಗತ್ಯವಿದೆಯೊ? ಚಿಕ್ಕಪುಟ್ಟ ರೇಗಿಸುವಿಕೆಗಳು, ಅವಗಣನೆಗಳು, ಮತ್ತು ಕಾಟಗಳು ಜೀವನದ ಭಾಗವಾಗಿವೆ ಮತ್ತು ಔಪಚಾರಿಕವಾದ ಕ್ಷಮೆಯನ್ನು ಅವಶ್ಯಪಡಿಸುವುದಿಲ್ಲ. ಪ್ರತಿಯೊಂದು ಕ್ಷುಲ್ಲಕ ವೈಫಲ್ಯಕ್ಕಾಗಿ ಇತರರನ್ನು ದೂರವಿರಿಸುವ ಮತ್ತು ಅವರನ್ನು ಪುನಃ ಒಮ್ಮೆ ಒಂದು ಮರ್ಯಾದಿತ ರೀತಿಯಲ್ಲಿ ಉಪಚರಿಸುವ ಮುಂಚೆ ಅವರು ನಮ್ಮಿಂದ ಕ್ಷಮೆಯನ್ನು ಕೇಳಬೇಕೆಂದು ಪಟ್ಟುಹಿಡಿಯುವವರಾಗಿ ನಾವು ಜ್ಞಾತರಾಗಿರುವಲ್ಲಿ, ಅವರು ನಮ್ಮ ಜೊತೆಯಲ್ಲಿ ಇರುವಾಗ ತುಂಬ ಜಾಗರೂಕರಾಗಿರುವಂತೆ ಅಥವಾ ನಮ್ಮಿಂದ ಸುರಕ್ಷಿತವಾದ ಅಂತರವನ್ನಿಡುವಂತೆ ನಾವು ಅವರನ್ನು ಒತ್ತಾಯಿಸಬಹುದು!
10 ಇದಕ್ಕೆ ಬದಲಾಗಿ, “ವಿವೇಚನೆಯುಳ್ಳವರಾಗಿರುವ ಸತ್ಕೀರ್ತಿಯನ್ನು ಪಡೆ”ದಿರುವುದು ಹೆಚ್ಚು ಉತ್ತಮ. (ಫಿಲಿಪ್ಪಿ 4:5, ಫಿಲಿಪ್ಸ್) ಒಕ್ಕಟ್ಟಿನಿಂದ ಸೇವೆ ಸಲ್ಲಿಸುತ್ತಿರುವ ಅಪರಿಪೂರ್ಣ ಜೀವಿಗಳಾಗಿರುವುದರಿಂದ, ಆಗಾಗ್ಗೆ ನಮ್ಮ ಸಹೋದರರು ನಮ್ಮನ್ನು ರೇಗಿಸಬಹುದು ಮತ್ತು ನಾವು ಅದನ್ನೇ ಅವರಿಗೆ ಮಾಡಬಹುದೆಂಬುದನ್ನು ನಾವು ಸಮಂಜಸವಾಗಿಯೇ ನಿರೀಕ್ಷಿಸಸಾಧ್ಯವಿದೆ. ಕೊಲೊಸ್ಸೆ 3:13 ನಮಗೆ ಬುದ್ಧಿಹೇಳುವುದು: ‘ಒಬ್ಬರನ್ನೊಬ್ಬರು ಸೈರಿಸಿಕೊಳ್ಳುತ್ತಾ ಇರ್ರಿ.’ ಆ ಅಭಿವ್ಯಕ್ತಿಯು, ಇತರರೊಂದಿಗೆ ತಾಳ್ಮೆಯುಳ್ಳವರಾಗಿರುವುದನ್ನು, ನಾವು ಅವರಲ್ಲಿ ಇಷ್ಟಪಡದಿರುವ ಸಂಗತಿಗಳನ್ನು ಅಥವಾ ನಮ್ಮನ್ನು ರೇಗಿಸುವಂತಹದ್ದಾಗಿ ನಾವು ಕಂಡುಕೊಳ್ಳಬಹುದಾದ ಸ್ವಭಾವಲಕ್ಷಣಗಳನ್ನು ಸಹಿಸಿಕೊಳ್ಳುವುದನ್ನು ಸೂಚಿಸುತ್ತದೆ. ಅಂತಹ ತಾಳ್ಮೆ ಮತ್ತು ಸೈರಣೆಯು, ಇತರರೊಂದಿಗಿನ ನಮ್ಮ ವ್ಯವಹಾರಗಳಲ್ಲಿ ನಮ್ಮ ವಿರುದ್ಧ ಆಗುವ ಚಿಕ್ಕಪುಟ್ಟ ತಪ್ಪುಗಳನ್ನು—ಸಭೆಯ ಶಾಂತಿಯನ್ನು ಕದಡಿಸದೆ—ನಿಭಾಯಿಸಲು ಸಹಾಯಮಾಡಬಲ್ಲದು.—1 ಕೊರಿಂಥ 16:14.
ಗಾಯಗಳು ಹೆಚ್ಚು ದೊಡ್ಡವಾಗಿರುವಾಗ
11. ಇತರರು ನಮ್ಮ ವಿರುದ್ಧ ಪಾಪಗೈಯುವಾಗ, ಅವರನ್ನು ಕ್ಷಮಿಸಲು ನಮಗೆ ಯಾವುದು ಸಹಾಯಮಾಡಬಲ್ಲದು?
11 ಆದಾಗಲೂ, ಒಂದು ಗಮನಾರ್ಹವಾದ ಗಾಯವನ್ನು ಉಂಟುಮಾಡುತ್ತಾ, ಇತರರು ನಮ್ಮ ವಿರುದ್ಧ ಪಾಪಮಾಡುವಲ್ಲಿ ಆಗೇನು? ಪಾಪವು ತೀರ ಗಂಭೀರವಾಗಿರದಿರುವಲ್ಲಿ, ‘ಒಬ್ಬರಿಗೊಬ್ಬರು ಉದಾರವಾಗಿ ಕ್ಷಮಿಸುವವರಾಗಿರಿ’ ಎಂಬ ಬೈಬಲಿನ ಸಲಹೆಯನ್ನು ಅನ್ವಯಿಸುವುದು ನಮಗೆ ಅಷ್ಟು ಕಷ್ಟವಾಗಲಿಕ್ಕಿಲ್ಲ. (ಎಫೆಸ 4:32) ಕ್ಷಮಿಸಲಿಕ್ಕಾಗಿರುವ ಅಂತಹ ಸಿದ್ಧಮನಸ್ಸು, ಪೇತ್ರನ ಈ ಪ್ರೇರಿತ ಮಾತುಗಳಿಗೆ ಹೊಂದಿಕೆಯಲ್ಲಿದೆ: “ಮೊಟ್ಟಮೊದಲು ನಿಮ್ಮನಿಮ್ಮೊಳಗೆ ಯಥಾರ್ಥವಾದ ಪ್ರೀತಿಯಿರಲಿ; ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.” (1 ಪೇತ್ರ 4:8) ನಾವು ಕೂಡ ಪಾಪಿಗಳಾಗಿದ್ದೇವೆಂಬುದನ್ನು ಮನಸ್ಸಿನಲ್ಲಿಡುವುದು, ಇತರರ ತಪ್ಪುಗಳನ್ನು ಕ್ಷಮಿಸಲು ನಮ್ಮನ್ನು ಶಕ್ತಗೊಳಿಸುವುದು. ಹೀಗೆ ನಾವು ಕ್ಷಮಿಸುವಾಗ, ಅಸಮಾಧಾನವನ್ನು ಪೋಷಿಸುವ ಬದಲಿಗೆ ನಾವು ಅದನ್ನು ಬಿಟ್ಟುಬಿಡುತ್ತೇವೆ. ಫಲಸ್ವರೂಪವಾಗಿ, ತಪ್ಪುಮಾಡಿದವನೊಂದಿಗಿನ ನಮ್ಮ ಸಂಬಂಧವು ಯಾವುದೇ ರೀತಿಯ ಶಾಶ್ವತ ಹಾನಿಯನ್ನು ಅನುಭವಿಸದು, ಮತ್ತು ನಾವು ಸಭೆಯ ಅಮೂಲ್ಯವಾದ ಶಾಂತಿಯನ್ನು ಸಂರಕ್ಷಿಸಲಿಕ್ಕಾಗಿಯೂ ಸಹಾಯಮಾಡುವೆವು. (ರೋಮಾಪುರ 14:19) ಸಕಾಲದಲ್ಲಿ, ತಪ್ಪುಮಾಡಿದವನು ಮಾಡಿದಂತಹ ಸಂಗತಿಯ ಸ್ಮರಣೆಯು ಪ್ರಾಯಶಃ ಮಾಸಿಹೋಗಬಹುದು.
12. (ಎ) ನಮ್ಮನ್ನು ತೀವ್ರವಾಗಿ ನೋಯಿಸಿರುವ ಒಬ್ಬರನ್ನು ಕ್ಷಮಿಸಲಿಕ್ಕಾಗಿ ನಾವು ಯಾವ ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳುವ ಅಗತ್ಯವಿರಬಹುದು? (ಬಿ) ಎಫೆಸ 4:26ರಲ್ಲಿರುವ ಮಾತುಗಳು, ನಾವು ವಿಷಯಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಬೇಕೆಂಬುದನ್ನು ಹೇಗೆ ಸೂಚಿಸುತ್ತವೆ?
12 ಆದರೆ, ಯಾರಾದರೊಬ್ಬರು ನಮ್ಮನ್ನು ಬಹಳವಾಗಿ ಘಾಸಿಗೊಳಿಸುತ್ತಾ ಹೆಚ್ಚು ಗಂಭೀರವಾದ ರೀತಿಯಲ್ಲಿ ಪಾಪಮಾಡುವಲ್ಲಿ ಆಗೇನು? ಉದಾಹರಣೆಗಾಗಿ, ಒಬ್ಬ ಭರವಸಾರ್ಹ ಸ್ನೇಹಿತನು, ನೀವು ಅವನನ್ನು ನಂಬಿ, ಅವನ ಬಳಿ ಹೇಳಿದಂತಹ ತೀರ ವೈಯಕ್ತಿಕವಾದ ವಿಷಯಗಳಲ್ಲಿ ಕೆಲವನ್ನು ಬಹಿರಂಗಗೊಳಿಸಿರಬಹುದು. ನಿಮಗೆ ತೀವ್ರವಾದ ನೋವು, ಪೇಚಾಟ ಮತ್ತು ದ್ರೋಹಬಗೆಯಲ್ಪಟ್ಟ ಅನಿಸಿಕೆಯಾಗುತ್ತದೆ. ನೀವು ಅದನ್ನು ತೊಲಗಿಸಲು ಪ್ರಯತ್ನಿಸಿದ್ದೀರಿ, ಆದರೂ ಆ ವಿಚಾರವು ಹೋಗುವುದೇ ಇಲ್ಲ. ಅಂತಹ ವಿದ್ಯಮಾನದಲ್ಲಿ, ಸಮಸ್ಯೆಯನ್ನು ಇತ್ಯರ್ಥಗೊಳಿಸಲು, ತಪ್ಪುಮಾಡಿದವನೊಂದಿಗೆ ಪ್ರಾಯಶಃ ಮಾತಾಡುವ ಮೂಲಕ ನೀವು ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳುವ ಅಗತ್ಯವಿರಬಹುದು. ಈ ವಿಷಯವು ವ್ಯಥೆಯನ್ನುಂಟುಮಾಡುವ ಅವಕಾಶವನ್ನು ಪಡೆಯುವ ಮುಂಚೆಯೇ ಇದನ್ನು ಮಾಡುವುದು ವಿವೇಕಯುತ. ಪೌಲನು ನಮಗೆ ಬುದ್ಧಿಹೇಳಿದ್ದು: “ಕೋಪಮಾಡಬೇಕಾದರೂ ಪಾಪ [ಅಂದರೆ, ಕೋಪವನ್ನು ಇಟ್ಟುಕೊಳ್ಳುವುದು ಅಥವಾ ಕೋಪದಿಂದ ವರ್ತಿಸುವುದು] ಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ.” (ಎಫೆಸ 4:26) ಪೌಲನ ಮಾತುಗಳಿಗೆ ಅರ್ಥವನ್ನು ಕೂಡಿಸುವ ವಾಸ್ತವಾಂಶವೇನೆಂದರೆ, ಯೆಹೂದ್ಯರ ನಡುವೆ ಸೂರ್ಯಾಸ್ತಮಾನವು, ಒಂದು ದಿನದ ಅಂತ್ಯ ಮತ್ತು ಒಂದು ಹೊಸ ದಿನದ ಆರಂಭವನ್ನು ಸಂಕೇತಿಸುತ್ತಿತ್ತು. ಆದುದರಿಂದ ಸಲಹೆಯೇನೆಂದರೆ, ವಿಷಯವನ್ನು ಶೀಘ್ರವಾಗಿ ಇತ್ಯರ್ಥಗೊಳಿಸಿರಿ!—ಮತ್ತಾಯ 5:23, 24.
13. ನಮ್ಮ ವಿರುದ್ಧ ತಪ್ಪುಮಾಡಿರುವ ಒಬ್ಬರನ್ನು ನಾವು ಸಮೀಪಿಸುವಾಗ ನಮ್ಮ ಉದ್ದೇಶವೇನಾಗಿರಬೇಕು, ಮತ್ತು ಅದನ್ನು ಪೂರೈಸಲು ಯಾವ ಸಲಹೆಗಳು ನಮಗೆ ಸಹಾಯಮಾಡಸಾಧ್ಯವಿದೆ?
13 ತಪ್ಪುಮಾಡಿದವನನ್ನು ನೀವು ಹೇಗೆ ಸಮೀಪಿಸಬೇಕು? “ಶಾಂತಿಯನ್ನು ಹುಡುಕಿ ಅದನ್ನು ಬೆನ್ನಟ್ಟಿರಿ,” ಎಂದು 1 ಪೇತ್ರ 3:11 ಹೇಳುತ್ತದೆ. ಹಾಗಾದರೆ ನಿಮ್ಮ ಉದ್ದೇಶವು, ಕೋಪವನ್ನು ವ್ಯಕ್ತಪಡಿಸುವುದಲ್ಲ, ಬದಲಾಗಿ ನಿಮ್ಮ ಸಹೋದರನೊಂದಿಗೆ ಮತ್ತೆ ಸ್ನೇಹಬೆಳೆಸುವುದಾಗಿದೆ. ಆ ಉದ್ದೇಶಕ್ಕೋಸ್ಕರ, ಕಟುವಾದ ಮಾತುಗಳು ಮತ್ತು ಹಾವಭಾವಗಳನ್ನು ಹೋಗಲಾಡಿಸುವುದು ಉತ್ತಮ. ಇವು, ಆ ಇನ್ನೊಬ್ಬ ವ್ಯಕ್ತಿಯಿಂದ ತದ್ರೀತಿಯ ಪ್ರತಿಕ್ರಿಯೆಯನ್ನು ಉಂಟುಮಾಡಬಹುದು. (ಜ್ಞಾನೋಕ್ತಿ 15:18; 29:11) ಇದಕ್ಕೆ ಕೂಡಿಸಿ, “ನೀನು ಯಾವಾಗಲೂ . . . !” ಅಥವಾ “ನೀನು ಎಂದೂ . . . !” ಎಂಬಂಥ ಅತಿಶಯ ಹೇಳಿಕೆಗಳನ್ನು ಹೋಗಲಾಡಿಸಿರಿ. ಅಂತಹ ಅತಿಶಯ ಹೇಳಿಕೆಗಳು, ಅವನು ರಕ್ಷಣಾತ್ಮಕನಾಗುವಂತೆ ಮಾಡಬಹುದಷ್ಟೇ. ಬದಲಿಗೆ, ನಿಮ್ಮ ಸ್ವರ ಮತ್ತು ಮುಖಭಾವವು, ನಿಮ್ಮನ್ನು ಬಹಳವಾಗಿ ನೋಯಿಸಿರುವ ಒಂದು ಸಂಗತಿಯನ್ನು ನೀವು ಬಗೆಹರಿಸಲು ಬಯಸುತ್ತೀರಿ ಎಂಬ ಸಂದೇಶವನ್ನು ವ್ಯಕ್ತಪಡಿಸುತ್ತಿರುವಂತಿರಲಿ. ಏನು ಸಂಭವಿಸಿದೆಯೊ ಅದರ ಕುರಿತಾಗಿ ನಿಮಗೆ ಹೇಗನಿಸುತ್ತದೆ ಎಂಬುದನ್ನು ನಿರ್ದಿಷ್ಟವಾಗಿ ವಿವರಿಸಿರಿ. ಇನ್ನೊಬ್ಬ ವ್ಯಕ್ತಿಯು ತನ್ನ ಕೃತ್ಯಗಳಿಗಾಗಿ ವಿವರಣೆ ನೀಡಲು ಒಂದು ಅವಕಾಶವನ್ನು ಕೊಡಿರಿ. ಅವನಿಗೆ ಏನನ್ನು ಹೇಳಲಿಕ್ಕಿದೆಯೊ ಅದಕ್ಕೆ ಕಿವಿಗೊಡಿರಿ. (ಯಾಕೋಬ 1:19) ಅದು ಯಾವ ಒಳಿತನ್ನು ಮಾಡುವುದು? ಜ್ಞಾನೋಕ್ತಿ 19:11 ವಿವರಿಸುವುದು: “ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ; ಪರರ ದೋಷವನ್ನು ಲಕ್ಷಿಸದಿರುವದು ಅವನಿಗೆ ಭೂಷಣ.” ಆ ಇನ್ನೊಬ್ಬ ವ್ಯಕ್ತಿಯ ಅನಿಸಿಕೆಗಳನ್ನು ಮತ್ತು ಅವನ ಕೃತ್ಯಗಳಿಗಾಗಿರುವ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು, ಅವನ ಕಡೆಗಿನ ನಕಾರಾತ್ಮಕವಾದ ಯೋಚನೆಗಳು ಮತ್ತು ಅನಿಸಿಕೆಗಳನ್ನು ತೆಗೆದುಹಾಕಬಹುದು. ಮತ್ತೆ ಸ್ನೇಹವನ್ನು ಬೆಳೆಸುವ ಹಾಗೂ ಆ ಮನೋಭಾವವನ್ನು ಕಾಪಾಡಿಕೊಳ್ಳುವ ಗುರಿಯಿಂದ ನಾವು ಆ ಸನ್ನಿವೇಶವನ್ನು ಸಮೀಪಿಸುವಾಗ, ಯಾವುದೇ ತಪ್ಪಭಿಪ್ರಾಯವು ಬಗೆಹರಿಸಲ್ಪಡಬಹುದು, ಸೂಕ್ತವಾದ ಕ್ಷಮಾಯಾಚನೆಗಳು ಮಾಡಲ್ಪಡಬಹುದು, ಮತ್ತು ಕ್ಷಮೆಯು ನೀಡಲ್ಪಡಬಹುದು.
14. ನಾವು ಇತರರನ್ನು ಕ್ಷಮಿಸುವಾಗ, ನಾವು ಅದನ್ನು ಯಾವ ಅರ್ಥದಲ್ಲಿ ಮರೆತುಬಿಡಬೇಕು?
14 ಇತರರನ್ನು ಕ್ಷಮಿಸುವುದು, ಏನು ಸಂಭವಿಸಿದೆಯೊ ಅದನ್ನು ನಾವು ವಾಸ್ತವವಾಗಿ ಮರೆಯಬೇಕೆಂಬುದನ್ನು ಅರ್ಥೈಸುತ್ತದೊ? ಈ ಸಂಬಂಧದಲ್ಲಿ, ಹಿಂದಿನ ಲೇಖನದಲ್ಲಿ ಚರ್ಚಿಸಿದಂತೆ, ಯೆಹೋವನ ಸ್ವಂತ ಮಾದರಿಯನ್ನು ಜ್ಞಾಪಿಸಿಕೊಳ್ಳಿರಿ. ಯೆಹೋವನು ನಮ್ಮ ಪಾಪಗಳನ್ನು ಮರೆತುಬಿಡುತ್ತಾನೆಂದು ಬೈಬಲ್ ಹೇಳುವಾಗ, ಆತನು ಅವುಗಳನ್ನು ಜ್ಞಾಪಿಸಿಕೊಳ್ಳಲು ಅಶಕ್ತನೆಂಬುದನ್ನು ಇದು ಅರ್ಥೈಸುವುದಿಲ್ಲ. (ಯೆಶಾಯ 43:25) ಬದಲಿಗೆ, ಆತನು ಒಮ್ಮೆ ಕ್ಷಮಿಸಿಬಿಟ್ಟನೆಂದರೆ, ಆ ಪಾಪಗಳನ್ನು ಭವಿಷ್ಯತ್ತಿನಲ್ಲಿ ಯಾವುದೋ ಸಮಯದಲ್ಲಿ ನಮ್ಮ ವಿರುದ್ಧ ಎತ್ತಿಹಿಡಿಯದ ಅರ್ಥದಲ್ಲಿ ಆತನು ಮರೆತುಬಿಡುತ್ತಾನೆ. (ಯೆಹೆಜ್ಕೇಲ 33:14-16) ತದ್ರೀತಿಯಲ್ಲಿ, ಜೊತೆ ಮಾನವರನ್ನು ಕ್ಷಮಿಸುವುದು, ಅವರೇನನ್ನು ಮಾಡಿದ್ದಾರೋ ಅದನ್ನು ನಾವು ಜ್ಞಾಪಿಸಿಕೊಳ್ಳಲು ಅಶಕ್ತರಾಗಿರುವೆವು ಎಂಬುದನ್ನು ಅರ್ಥೈಸುವುದಿಲ್ಲ. ಆದಾಗಲೂ, ನಾವು ಅದನ್ನು ಪುನಃ ಭವಿಷ್ಯತ್ತಿನಲ್ಲಿ ತಪ್ಪುಮಾಡಿದವನ ವಿರುದ್ಧ ಎತ್ತಿಹಿಡಿಯುವುದಿಲ್ಲ ಅಥವಾ ಮೇಲೆತರುವುದಿಲ್ಲವೆಂಬ ಅರ್ಥದಲ್ಲಿ ನಾವು ಅದನ್ನು ಮರೆಯಲು ಸಾಧ್ಯವಿದೆ. ಈ ರೀತಿಯಲ್ಲಿ ವಿಷಯವು ಇತ್ಯರ್ಥಗೊಳಿಸಲ್ಪಟ್ಟಿರಲಾಗಿ, ಅದರ ಕುರಿತಾಗಿ ಹರಟೆಯಾಡುವುದು ಸೂಕ್ತವಲ್ಲ; ಅಥವಾ ತಪ್ಪುಮಾಡಿದವನನ್ನು ಬಹಿಷ್ಕೃತನೋ ಎಂಬಂತೆ ಉಪಚರಿಸುತ್ತಾ, ಪೂರ್ಣವಾಗಿ ಅವನನ್ನು ದೂರವಿರಿಸುವುದು ಪ್ರೀತಿಪರವಾಗಿರದು. (ಜ್ಞಾನೋಕ್ತಿ 17:9) ಅವನೊಂದಿಗಿನ ನಮ್ಮ ಸಂಬಂಧವು ಗುಣವಾಗಲು ಸ್ವಲ್ಪ ಸಮಯ ತಗಲಬಹುದು ನಿಜ; ಹಿಂದಿನಷ್ಟೇ ಆಪ್ತತೆಯನ್ನು ನಾವು ಅನುಭವಿಸಲಿಕ್ಕಿಲ್ಲ. ಆದರೆ ನಾವು ಇನ್ನೂ ಅವನನ್ನು ನಮ್ಮ ಕ್ರೈಸ್ತ ಸಹೋದರನೋಪಾದಿ ಪ್ರೀತಿಸುತ್ತೇವೆ ಮತ್ತು ಹಿತಕರವಾದ ಸಂಬಂಧಗಳನ್ನು ಪುನಸ್ಸ್ಥಾಪಿಸಲಿಕ್ಕಾಗಿ ಬಹಳಷ್ಟು ಪ್ರಯತ್ನಿಸುತ್ತೇವೆ.—ಲೂಕ 17:3ನ್ನು ಹೋಲಿಸಿರಿ.
ಕ್ಷಮಿಸುವುದು ಅಸಾಧ್ಯವಾಗಿ ತೋರುವಾಗ
15, 16. (ಎ) ಕ್ರೈಸ್ತರು, ಪಶ್ಚಾತ್ತಾಪಪಡದ ಒಬ್ಬ ತಪ್ಪಿತಸ್ಥನನ್ನು ಕ್ಷಮಿಸುವಂತೆ ಅವಶ್ಯಪಡಿಸಲ್ಪಡುತ್ತಾರೊ? (ಬಿ) ಕೀರ್ತನೆ 37:8ರಲ್ಲಿ ಕಂಡುಬರುವ ಬೈಬಲಿನ ಬುದ್ಧಿವಾದವನ್ನು ನಾವು ಹೇಗೆ ಅನ್ವಯಿಸಿಕೊಳ್ಳಸಾಧ್ಯವಿದೆ?
15 ಇತರರು ಅತ್ಯಂತ ದೊಡ್ಡದಾದ ಗಾಯವನ್ನು ಉಂಟುಮಾಡುವ ರೀತಿಯಲ್ಲಿ ನಮ್ಮ ವಿರುದ್ಧ ಪಾಪಮಾಡುವಲ್ಲಿ ಮತ್ತು ಆಗಲೂ ತಪ್ಪುಮಾಡಿದವನಿಂದ ಪಾಪದ ಅಂಗೀಕಾರ, ಪಶ್ಚಾತ್ತಾಪ ಮತ್ತು ಕ್ಷಮಾಯಾಚನೆ ಇಲ್ಲದಿರುವಲ್ಲಿ ಆಗೇನು? (ಜ್ಞಾನೋಕ್ತಿ 28:13) ಯೆಹೋವನು ಪಶ್ಚಾತ್ತಾಪರಹಿತ, ಕಠಿನಮನಸ್ಸಿನ ಪಾಪಿಗಳನ್ನು ಕ್ಷಮಿಸುವುದಿಲ್ಲವೆಂದು ಶಾಸ್ತ್ರಗಳು ಸ್ಪಷ್ಟವಾಗಿ ಸೂಚಿಸುತ್ತವೆ. (ಇಬ್ರಿಯ 6:4-6; 10:26, 27) ನಮ್ಮ ಕುರಿತಾಗಿ ಏನು? ಶಾಸ್ತ್ರಗಳ ಒಳನೋಟ (ಇಂಗ್ಲಿಷ್) ಪುಸ್ತಕವು ಹೇಳುವುದು: “ದ್ವೇಷಭರಿತ, ಉದ್ದೇಶಪೂರ್ವಕ ಪಾಪವನ್ನು ಪಶ್ಚಾತ್ತಾಪವಿಲ್ಲದೆ ನಡೆಸುತ್ತಿರುವವರಿಗೆ ಕ್ಷಮೆನೀಡುವಂತೆ ಕ್ರೈಸ್ತರು ಆಗತ್ಯಪಡಿಸಲ್ಪಡುವುದಿಲ್ಲ. ಅಂತಹವರು ದೇವರ ಶತ್ರುಗಳಾಗಿ ಪರಿಣಮಿಸುತ್ತಾರೆ.” (ಸಂಪುಟ 1, ಪುಟ 862) ತೀರ ಅನ್ಯಾಯವಾದ, ಅಸಹ್ಯ ಅಥವಾ ಘೋರವಾದ ದುರುಪಚಾರಕ್ಕೆ ಬಲಿಯಾಗಿರುವ ಯಾವ ಕ್ರೈಸ್ತನಿಗೂ, ಪಶ್ಚಾತ್ತಾಪಪಡದ ಒಬ್ಬ ತಪ್ಪಿತಸ್ಥನನ್ನು ಕ್ಷಮಿಸಲು ಅಥವಾ ಮನ್ನಿಸಲು ಒತ್ತಾಯಿಸಲ್ಪಟ್ಟಿರುವ ಅನಿಸಿಕೆಯಾಗಬಾರದು.—ಕೀರ್ತನೆ 139:21, 22.
16 ಕ್ರೂರವಾದ ದುರುಪಚಾರಕ್ಕೆ ಬಲಿಯಾದವರು, ನೊಂದವರು ಮತ್ತು ಕುಪಿತರು ಆಗಬಹುದೆಂಬುದು ಗ್ರಾಹ್ಯ. ಆದಾಗಲೂ, ಕೋಪ ಮತ್ತು ತೀವ್ರ ಅಸಮಾಧಾನಕ್ಕೆ ಅಂಟಿಕೊಳ್ಳುತ್ತಾ ಇರುವುದು ನಮಗೆ ತೀರ ಹಾನಿಕರವಾಗಿರಬಲ್ಲದೆಂಬುದನ್ನು ಜ್ಞಾಪಿಸಿಕೊಳ್ಳಿರಿ. ಎಂದೂ ಕೇಳದಿರುವ ಒಂದು ತಪ್ಪೊಪ್ಪಿಕೆ ಅಥವಾ ಕ್ಷಮಾಯಾಚನೆಗಾಗಿ ನಾವು ಕಾಯುತ್ತಾ ಇರುವಲ್ಲಿ, ನಾವು ಹೆಚ್ಚೆಚ್ಚು ಕ್ಷೋಭೆಗೊಳ್ಳುವೆವಷ್ಟೆ. ನಮ್ಮ ಮನಸ್ಸು ಮಾಡಲ್ಪಟ್ಟ ಅನ್ಯಾಯದಿಂದ ತುಂಬಿರಲಾಗಿ, ನಮ್ಮ ಆತ್ಮಿಕ, ಭಾವನಾತ್ಮಕ ಮತ್ತು ಶಾರೀರಿಕ ಆರೋಗ್ಯದ ಮೇಲೆ ಹಾನಿಕರ ಪರಿಣಾಮಗಳನ್ನು ಬೀರುವುದರೊಂದಿಗೆ ಆ ಕೋಪವು ನಮ್ಮೊಳಗೆ ಕುದಿಯುತ್ತಾ ಇರಬಹುದು. ಕಾರ್ಯತಃ, ನಮಗೆ ಹಾನಿಮಾಡಿದವನು ನಮಗೆ ಹಾನಿಮಾಡುತ್ತಾ ಇರುವಂತೆ ನಾವು ಅನುಮತಿಸುತ್ತೇವೆ. ವಿವೇಕಯುತವಾಗಿ, ಬೈಬಲ್ ಸಲಹೆ ಕೊಡುವುದು: “ಕೋಪವನ್ನು ಅಣಗಿಸಿಕೋ; ರೋಷವನ್ನು ಬಿಡು.” (ಕೀರ್ತನೆ 37:8) ಆದುದರಿಂದ, ಕೆಲವು ಕ್ರೈಸ್ತರು ತಾವು ಸಕಾಲದಲ್ಲಿ, ತೀವ್ರ ಅಸಮಾಧಾನವನ್ನು ಇಟ್ಟುಕೊಳ್ಳುವುದನ್ನು ನಿಲ್ಲಿಸುವ ಅರ್ಥದಲ್ಲಿ ಕ್ಷಮಿಸಲಿಕ್ಕಾಗಿ ಒಂದು ನಿರ್ಣಯವನ್ನು ಮಾಡಲು ಶಕ್ತರಾಗಿದ್ದೇವೆಂಬುದನ್ನು ಕಂಡುಕೊಂಡಿದ್ದಾರೆ. ಇದರ ಅರ್ಥ ಅವರು ತಪ್ಪಿನ ಗಾಂಭೀರ್ಯವನ್ನು ಕಡಿಮೆಗೊಳಿಸುವುದಲ್ಲ, ಬದಲಾಗಿ ಕೋಪದಿಂದ ಉರಿಯುವುದನ್ನು ನಿರಾಕರಿಸುವುದೇ. ನ್ಯಾಯವಂತನಾದ ದೇವರ ಹಸ್ತಗಳಲ್ಲಿ ವಿಷಯವನ್ನು ಸಂಪೂರ್ಣವಾಗಿ ಬಿಟ್ಟುಬಿಡುತ್ತಾ, ಅವರು ತುಂಬ ಉಪಶಮನವನ್ನು ಅನುಭವಿಸಿದರು ಮತ್ತು ತಮ್ಮ ಜೀವನದೊಂದಿಗೆ ಮುಂದುವರಿಯಲು ಶಕ್ತರಾಗಿದ್ದರು.—ಕೀರ್ತನೆ 37:28.
17. ಪ್ರಕಟನೆ 21:4ರಲ್ಲಿ ದಾಖಲಿಸಲ್ಪಟ್ಟಿರುವ ಯೆಹೋವನ ವಾಗ್ದಾನವು ಯಾವ ಸಾಂತ್ವನದಾಯಕ ಆಶ್ವಾಸನೆಯನ್ನು ಒದಗಿಸುತ್ತದೆ?
17 ಒಂದು ಗಾಯವು ತುಂಬ ದೊಡ್ಡದಾಗಿರುವಾಗ, ಕಡಿಮೆಪಕ್ಷ ಈ ವಿಷಯಗಳ ವ್ಯವಸ್ಥೆಯಲ್ಲಿ, ನಾವು ಅದನ್ನು ನಮ್ಮ ಮನಸ್ಸಿನಿಂದ ಸಂಪೂರ್ಣವಾಗಿ ಅಳಿಸಿಹಾಕುವುದರಲ್ಲಿ ಯಶಸ್ವಿಯಾಗದಿರಬಹುದು. ಆದರೆ ಯೆಹೋವನು ಒಂದು ಹೊಸ ಲೋಕವನ್ನು ವಾಗ್ದಾನಿಸುತ್ತಾನೆ. ಅಲ್ಲಿ ಆತನು “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” (ಪ್ರಕಟನೆ 21:4) ಆ ಸಮಯದಲ್ಲಿ ನಾವೇನನ್ನು ನೆನಪಿಸಿಕೊಳ್ಳುವೆವೋ ಅದು, ಈಗ ನಮ್ಮ ಹೃದಯಗಳನ್ನು ಭಾರಗೊಳಿಸಬಹುದಾದಂತಹ ತೀವ್ರ ನೋವು ಅಥವಾ ವೇದನೆಯನ್ನು ಉಂಟುಮಾಡದಿರಬಹುದು.—ಯೆಶಾಯ 65:17, 18.
18. (ಎ) ನಮ್ಮ ಸಹೋದರ ಸಹೋದರಿಯರೊಂದಿಗಿನ ನಮ್ಮ ವ್ಯವಹಾರಗಳಲ್ಲಿ ಕ್ಷಮಿಸುವವರಾಗಿರುವ ಅಗತ್ಯವಿದೆ ಏಕೆ? (ಬಿ) ಇತರರು ನಮ್ಮ ವಿರುದ್ಧ ಪಾಪಗೈಯುವಾಗ, ಯಾವ ಅರ್ಥದಲ್ಲಿ ನಾವು ಕ್ಷಮಿಸಿ ಮರೆತುಬಿಡಬಲ್ಲೆವು? (ಸಿ) ಇದು ನಮಗೆ ಹೇಗೆ ಪ್ರಯೋಜನವನ್ನುಂಟುಮಾಡುತ್ತದೆ?
18 ಅಷ್ಟರ ವರೆಗೆ, ಅಪರಿಪೂರ್ಣರೂ ಪಾಪಪೂರ್ಣರೂ ಆದ ಮಾನವರಾಗಿರುವ ಸಹೋದರ ಸಹೋದರಿಯರೋಪಾದಿ ನಾವು ಜೊತೆಯಾಗಿ ಜೀವಿಸಬೇಕು ಮತ್ತು ಕೆಲಸಮಾಡಬೇಕು. ನಾವೆಲ್ಲರೂ ತಪ್ಪುಗಳನ್ನು ಮಾಡುತ್ತೇವೆ. ಆಗಿಂದಾಗ್ಗೆ ನಾವು ಒಬ್ಬರು ಇನ್ನೊಬ್ಬರನ್ನು ನಿರಾಶೆಗೊಳಿಸುತ್ತೇವೆ ಮತ್ತು ನೋಯಿಸುತ್ತೇವೆ ಕೂಡ. ನಾವು ಇತರರನ್ನು, ‘ಏಳು ಸಾರಿ ಅಲ್ಲ, ಏಳೆಪ್ಪತ್ತು ಸಾರಿ’ ಕ್ಷಮಿಸುವ ಅಗತ್ಯವಿರುವುದೆಂದು ಯೇಸುವಿಗೆ ಚೆನ್ನಾಗಿಯೇ ತಿಳಿದಿತ್ತು! (ಮತ್ತಾಯ 18:22) ಯೆಹೋವನು ಕ್ಷಮಿಸುವಷ್ಟು ಸಂಪೂರ್ಣವಾಗಿ ನಾವು ಕ್ಷಮಿಸಲಾರೆವೆಂಬುದು ನಿಜ. ಆದರೂ, ಹೆಚ್ಚಿನ ವಿದ್ಯಮಾನಗಳಲ್ಲಿ ನಮ್ಮ ಸಹೋದರರು ನಮ್ಮ ವಿರುದ್ಧ ಪಾಪಮಾಡುವಾಗ, ತೀವ್ರ ಅಸಮಾಧಾನವನ್ನು ಜಯಿಸುವ ಅರ್ಥದಲ್ಲಿ ನಾವು ಕ್ಷಮಿಸಸಾಧ್ಯವಿದೆ, ಮತ್ತು ಭವಿಷ್ಯತ್ತಿನಲ್ಲಿ ಅನಿರ್ದಿಷ್ಟವಾಗಿ ಆ ವಿಷಯವನ್ನು ಅವರ ವಿರುದ್ಧ ಎತ್ತಿಹಿಡಿಯದಿರುವ ಅರ್ಥದಲ್ಲಿ ನಾವು ಅದನ್ನು ಮರೆತುಬಿಡಸಾಧ್ಯವಿದೆ. ಈ ರೀತಿಯಲ್ಲಿ ನಾವು ಕ್ಷಮಿಸಿ ಮರೆತುಬಿಡುವಾಗ, ಸಭೆಯ ಶಾಂತಿಯನ್ನು ಮಾತ್ರವಲ್ಲ, ನಮ್ಮ ಸ್ವಂತ ಹೃದಮನಗಳ ಶಾಂತಿಯನ್ನೂ ಸಂರಕ್ಷಿಸಿಕೊಳ್ಳಲು ನಾವು ಸಹಾಯಮಾಡುತ್ತೇವೆ. ಎಲ್ಲಕ್ಕಿಂತಲೂ ಮಿಗಿಲಾಗಿ, ನಮ್ಮ ಪ್ರೀತಿಪೂರ್ಣ ದೇವರಾದ ಯೆಹೋವನು ಮಾತ್ರವೇ ಒದಗಿಸಸಾಧ್ಯವಿರುವ ಶಾಂತಿಯನ್ನು ನಾವು ಅನುಭವಿಸುವೆವು.—ಫಿಲಿಪ್ಪಿ 4:7.
[ಅಧ್ಯಯನ ಪ್ರಶ್ನೆಗಳು]
a ಬ್ಯಾಬಿಲೋನ್ಯನ್ ಟ್ಯಾಲ್ಮುಡ್ಗನುಸಾರ, ರಬ್ಬಿಗಳ ಒಂದು ಸಂಪ್ರದಾಯವು ಹೀಗೆ ತಿಳಿಸಿತು: “ಒಬ್ಬ ಪುರುಷನು ಒಂದು ತಪ್ಪನ್ನು ಮೊದಲನೆ ಬಾರಿ, ಎರಡನೇ ಬಾರಿ ಮತ್ತು ಮೂರನೇ ಬಾರಿ ಮಾಡುವಾಗ ಅವನು ಕ್ಷಮಿಸಲ್ಪಡುತ್ತಾನೆ, ನಾಲ್ಕನೇ ಬಾರಿ ಅವನು ಕ್ಷಮಿಸಲ್ಪಡುವುದಿಲ್ಲ.” (ಯೊಮಾ 86ಬಿ) ಇದು ಆಮೋಸ 1:3; 2:6; ಮತ್ತು ಯೋಬ 33:29ರಂತಹ ವಚನಗಳ ತಪ್ಪಾದ ತಿಳಿವಳಿಕೆಯ ಮೇಲೆ ಆಂಶಿಕವಾಗಿ ಆಧಾರಿತವಾಗಿತ್ತು.
b ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.
ಪುನರ್ವಿಮರ್ಶೆಗಾಗಿ ಪ್ರಶ್ನೆಗಳು
◻ ಇತರರನ್ನು ಕ್ಷಮಿಸಲು ನಾವು ಸಿದ್ಧಮನಸ್ಸಿನವರಾಗಿರಬೇಕು ಏಕೆ?
◻ ಯಾವ ರೀತಿಯ ಸನ್ನಿವೇಶಗಳು, ನಾವು ‘ಒಬ್ಬರನ್ನೊಬ್ಬರು ಸೈರಿಸಿಕೊಳ್ಳುವಂತೆ’ ಕರೆನೀಡುತ್ತವೆ?
◻ ಇತರರ ಪಾಪಗಳಿಂದ ನಾವು ತೀವ್ರವಾಗಿ ನೋಯಿಸಲ್ಪಟ್ಟಿರುವಾಗ, ವಿಷಯವನ್ನು ಶಾಂತಿಯುತವಾಗಿ ಇತ್ಯರ್ಥಗೊಳಿಸಲು ನಾವೇನನ್ನು ಮಾಡಸಾಧ್ಯವಿದೆ?
◻ ನಾವು ಇತರರನ್ನು ಕ್ಷಮಿಸುವಾಗ, ನಾವು ಯಾವ ಅರ್ಥದಲ್ಲಿ ಮರೆತುಬಿಡಬೇಕು?
[ಪುಟ 16 ರಲ್ಲಿರುವ ಚಿತ್ರ]
ನಾವು ತೀವ್ರ ಅಸಮಾಧಾನವನ್ನು ಇಟ್ಟುಕೊಂಡಿರುವಾಗ, ತಪ್ಪುಮಾಡಿದವನು ನಮ್ಮ ಸಂಕ್ಷೋಭೆಯ ಕುರಿತಾಗಿ ಪೂರ್ಣವಾಗಿ ಅರಿವಿಲ್ಲದವನಾಗಿರಬಹುದು
[ಪುಟ 17 ರಲ್ಲಿರುವ ಚಿತ್ರ]
ಮತ್ತೆ ಸ್ನೇಹಬೆಳೆಸಲು ನೀವು ಇತರರನ್ನು ಸಮೀಪಿಸುವಾಗ, ತಪ್ಪಭಿಪ್ರಾಯಗಳು ಸುಲಭವಾಗಿ ಬಗೆಹರಿಸಲ್ಪಡಬಹುದು