ಕ್ರಿಸ್ಮಸ್ ಐಹಿಕ ರಜಾದಿನವೊ ಧಾರ್ಮಿಕ ಹಬ್ಬವೊ?
ಚೈನಾದಲ್ಲಿ ಅವನು ಕ್ರಿಸ್ಮಸ್ ಅಜ್ಜನೆಂದು ಕರೆಯಲ್ಪಡುತ್ತಾನೆ. ಗ್ರೇಟ್ ಬ್ರಿಟನ್ನಲ್ಲಿ, ಅವನು ಕ್ರಿಸ್ಮಸ್ ತಾತನೆಂದು ವಿದಿತನು. ರಷ್ಯದಲ್ಲಿನ ಜನರು ಹಿಮ ತಾತನೆಂಬ ಹೆಸರನ್ನು ಬಳಸುತ್ತಾರೆ, ಮತ್ತು ಅಮೆರಿಕದಲ್ಲಿ ಅವನು ಸ್ಯಾಂಟಾ ಕ್ಲಾಸ್ ಎಂಬ ಅಡ್ಡಹೆಸರಿನಿಂದ ಕರೆಯಲ್ಪಡುತ್ತಾನೆ.
ಬೊಜ್ಜು ಹೊಟ್ಟೆ ಮತ್ತು ಹಿಮಶ್ವೇತ ವರ್ಣದ ಗಡ್ಡವುಳ್ಳ ಈ ತಮಾಷೆಯ ಮುದುಕನನ್ನು ಅನೇಕರು, ಕ್ರಿಸ್ಮಸ್ ಹಬ್ಬದ ಸಾಕ್ಷಾತ್ ವ್ಯಕ್ತೀಕರಣವೊ ಎಂಬಂತೆ ವೀಕ್ಷಿಸುತ್ತಾರೆ. ಆದರೆ ಸ್ಯಾಂಟಾ ಕ್ಲಾಸ್, ಮೈರಾ (ಆಧುನಿಕ ದಿನದ ಟರ್ಕಿಯಲ್ಲಿರುವ)ದ ನಾಲ್ಕನೆಯ ಶತಮಾನದ ಒಬ್ಬ ಬಿಷಪನೊಂದಿಗೆ ಸಂಬಂಧಿಸಲ್ಪಟ್ಟ ಸಂಪ್ರದಾಯಗಳ ಮೇಲೆ ಆಧರಿಸಿರುವ ಒಂದು ಪುರಾಣಕಥೆ, ಒಂದು ಮಿಥ್ಯೆಯೆಂಬುದು ಸುವಿದಿತವೂ ಹೌದು.
ಉತ್ಸವಗಳ ಮೇಲೆ, ಪದ್ಧತಿಗಳು ಹಾಗೂ ಸಂಪ್ರದಾಯಗಳು ಯಾವಾಗಲೂ ಒಂದು ಶಕ್ತಿಶಾಲಿ ಪ್ರಭಾವವನ್ನು ಬೀರಿವೆ, ಮತ್ತು ಕ್ರಿಸ್ಮಸ್ ಇದಕ್ಕೆ ಹೊರತಾಗಿ ಇರುವುದಿಲ್ಲ. ಸ್ಯಾಂಟಾ ಮಿಥ್ಯೆಯು, ಒಂದು ಜನಪ್ರಿಯ ರಜಾದಿನಕ್ಕೆ ಸಂಬಂಧಿಸಲ್ಪಟ್ಟ ಜಾನಪದ ಕಥೆಯ ಕೇವಲ ಒಂದು ದೃಷ್ಟಾಂತವಾಗಿದೆ. ಕ್ರಿಸ್ಮಸ್ ಪದ್ಧತಿಗಳು ಬೈಬಲಿನಲ್ಲಿ ದಾಖಲುಮಾಡಲ್ಪಟ್ಟ ಘಟನೆಗಳ ಮೇಲೆ ಆಧರಿಸಿವೆಯೆಂದು ಕೆಲವು ಜನರು ಪ್ರತಿಪಾದಿಸುವುದಾದರೂ, ವಾಸ್ತವವಾಗಿ ಈ ಪದ್ಧತಿಗಳಲ್ಲಿ ಹೆಚ್ಚಿನವುಗಳಿಗೆ ವಿಧರ್ಮಿ ಮೂಲಗಳಿವೆ.
ಮತ್ತೊಂದು ದೃಷ್ಟಾಂತವು ಕ್ರಿಸ್ಮಸ್ ಗಿಡವಾಗಿದೆ. ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುವುದು: “ವಿಧರ್ಮಿ ಯೂರೋಪಿನವರಲ್ಲಿ ಸರ್ವಸಾಧಾರಣವಾಗಿದ್ದ ವೃಕ್ಷ ಪೂಜೆಯು, ಅವರು ಕ್ರೈಸ್ತತ್ವಕ್ಕೆ ಮತಾಂತರಗೊಂಡ ಬಳಿಕವೂ, ಹೊಸ ವರ್ಷದ ಸಮಯದಲ್ಲಿ ಮನೆ ಮತ್ತು ಕಣಜವನ್ನು ಸದಾ ಹಸುರಾದ ಸಸ್ಯಗಳಿಂದ ಅಲಂಕರಿಸುವ—ಪಿಶಾಚನನ್ನು ಹೆದರೋಡಿಸುವ ಮತ್ತು ಕ್ರಿಸ್ಮಸ್ ಸಮಯದಲ್ಲಿ ಹಕ್ಕಿಗಳಿಗಾಗಿ ಒಂದು ಗಿಡವನ್ನು ನೆಡುವ—ಸ್ಕಾಂಡಿನೇವಿಯದ ಪದ್ಧತಿಗಳಲ್ಲಿ ಬದುಕಿ ಉಳಿಯಿತು.”
ಹಾಲಿಗಿಡ ಇಲ್ಲವೆ ಇತರ ಸದಾ ಹಸುರಾದ ಹಸುರೆಲೆ ಸಸ್ಯಗಳ ಹಾರಗಳನ್ನು ಮಾಡುವುದು, ಮತ್ತೊಂದು ಜನಪ್ರಿಯ ಕ್ರಿಸ್ಮಸ್ ಸಂಪ್ರದಾಯವಾಗಿದೆ. ಇದು ಕೂಡ ವಿಧರ್ಮಿ ಆರಾಧನೆಯಲ್ಲಿ ಆಳವಾಗಿ ಬೇರೂರಿದೆ. ಪ್ರಾಚೀನ ರೋಮ್ ನಿವಾಸಿಗಳು, ಸ್ಯಾಟರ್ನ್ ದೇವತೆಯ ಮಹೋತ್ಸವ—ಕೃಷಿ ದೇವತೆಯಾದ ಸ್ಯಾಟರ್ನ್ಗೆ ಸಮರ್ಪಿತವಾದ ಏಳು ದಿನದ ಮಧ್ಯಚಳಿಗಾಲದ ಉತ್ಸವ—ದಲ್ಲಿ ದೇವಾಲಯಗಳನ್ನು ಅಲಂಕರಿಸಲು ಹಾಲಿ ಕೊಂಬೆಗಳನ್ನು ಬಳಸಿದರು. ಈ ವಿಧರ್ಮಿ ಉತ್ಸವವು ವಿಶೇಷವಾಗಿ ಅದರ ಅನಿರ್ಬಂಧಿತ ಆನಂದೋತ್ಸವ ಹಾಗೂ ಕಾಮುಕತನಕ್ಕಾಗಿ ಪ್ರಸಿದ್ಧವಾಗಿತ್ತು.
ಮಿಸ್ಲ್ಟೋ (ಇಲ್ಲಿ ಚಿತ್ರಿಸಲ್ಪಟ್ಟ)ವಿನ ಸಣ್ಣ ಕೊಂಬೆಯ ಕೆಳಗೆ ಮುತ್ತಿಡುವ ಕ್ರಿಸ್ಮಸ್ ಪದ್ಧತಿಯು ಕೆಲವರಿಗೆ ಪ್ರಣಯಾತ್ಮಕವಾಗಿ ತೋರಬಹುದಾದರೂ, ಅದು ಮಧ್ಯ ಯುಗಗಳ ಸ್ವಭಾವಕ್ಕೆ ಮರುಕೊಳಿಸುವ ವಿಷಯವಾಗಿದೆ. ಮಿಸ್ಲ್ಟೋ ಗಿಡಕ್ಕೆ ಮಾಂತ್ರಿಕ ಶಕ್ತಿಗಳಿವೆಯೆಂದು ಪ್ರಾಚೀನ ಬ್ರಿಟನಿನ ಮಾಂತ್ರಿಕರು ನಂಬಿದರು; ಆದಕಾರಣ, ಅದನ್ನು ದೆವ್ವಗಳು, ವಶೀಕರಣ ಮಂತ್ರಗಳು, ಮತ್ತು ಇತರ ಪ್ರಕಾರಗಳ ದುಷ್ಟತನದ ವಿರುದ್ಧ ಸಂರಕ್ಷಣೆಯಾಗಿ ಬಳಸಲಾಯಿತು. ಸಕಾಲದಲ್ಲಿ, ಮಿಸ್ಲ್ಟೋ ಗಿಡದ ಕೆಳಗೆ ಮುತ್ತಿಡುವುದು, ವಿವಾಹಕ್ಕೆ ನಡೆಸುವುದೆಂಬ ಮೂಢನಂಬಿಕೆಯು ವಿಕಾಸಗೊಂಡಿತು. ಈ ಆಚರಣೆಯು, ಕ್ರಿಸ್ಮಸ್ ಸಮಯದಲ್ಲಿ ಕೆಲವು ಜನರ ನಡುವೆ ಇನ್ನೂ ಜನಪ್ರಿಯವಾಗಿದೆ.
ಇವು, ವಿಧರ್ಮಿ ಬೋಧನೆಗಳಿಂದ ಪ್ರಭಾವಿಸಲ್ಪಟ್ಟಿರುವ ಇಲ್ಲವೆ ನೇರವಾಗಿ ಅವುಗಳಿಂದ ಉದ್ಭವಿಸಿರುವ ಆಧುನಿಕ ಕ್ರಿಸ್ಮಸ್ ಸಂಪ್ರದಾಯಗಳಲ್ಲಿ ಕೆಲವಾಗಿವೆ. ಆದರೂ, ಇದೆಲ್ಲವು ಹೇಗೆ ಬಂತೆಂದು ನೀವು ಆಶ್ಚರ್ಯಪಡಬಹುದು. ಕ್ರಿಸ್ತನ ಜನನವನ್ನು ಗೌರವಿಸುತ್ತದೆಂದು ಹೇಳಿಕೊಳ್ಳುವ ಒಂದು ರಜಾದಿನವು, ಕ್ರೈಸ್ತೇತರ ಪದ್ಧತಿಗಳೊಂದಿಗೆ ಇಷ್ಟೊಂದು ಸಿಕ್ಕಿಬಿದ್ದದ್ದು ಹೇಗೆ? ಇದಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾಗಿ, ದೇವರು ಈ ವಿಷಯವನ್ನು ಹೇಗೆ ವೀಕ್ಷಿಸುತ್ತಾನೆ?
[ಪುಟ 2 ರಲ್ಲಿರುವ ಚಿತ್ರ ಕೃಪೆ]
ಪುಟ 3: ಸ್ಯಾಂಟಾ ಕ್ಲಾಸ್: Thomas Nast/Dover Publications, Inc., 1978; ಪುಟ 3ರಲ್ಲಿರುವ ಮಿಸ್ಲ್ಟೋ ಮತ್ತು ಪುಟ 4ರಲ್ಲಿರುವ ದೃಷ್ಟಾಂತ: Discovering Christmas Customs and Folklore by Margaret Baker, published by Shire Publications, 1994