ದೇವರ ವಾಕ್ಯದಲ್ಲಿನ ನಮ್ಮ ನಂಬಿಕೆಯನ್ನು ಬಲಪಡಿಸುವುದು
ಇನ್ನಾವುದೇ ಪುಸ್ತಕಕ್ಕಿಂತಲೂ ಹೆಚ್ಚಾಗಿ ಬೈಬಲನ್ನು ಅಧಿಕಾಂಶ ಜನರು ಓದಿದ್ದಾರೆ. ಆದರೆ ಅದರ ಸಂದೇಶದಲ್ಲಿ ಎಷ್ಟು ಮಂದಿ ನಂಬಿಕೆಯನ್ನು ಪ್ರದರ್ಶಿಸಿದ್ದಾರೆ? “ಎಲ್ಲರಲ್ಲಿ ಕ್ರಿಸ್ತನಂಬಿಕೆಯಿಲ್ಲವಲ್ಲಾ” ಎಂದು ಬೈಬಲು ತಾನೇ ವಿವರಿಸುತ್ತದೆ. (2 ಥೆಸಲೊನೀಕ 3:2) ಜನ್ಮತಃ ನಮ್ಮಲ್ಲಿ ನಂಬಿಕೆಯಿರುವುದಿಲ್ಲವೆಂಬುದು ಸ್ಪಷ್ಟ. ಅದನ್ನು ಬೆಳೆಸಿಕೊಳ್ಳಬೇಕು. ಯಾರಲ್ಲಿ ಕೊಂಚವೇ ನಂಬಿಕೆಯು ಇದೆಯೋ ಆ ಜನರು ಸಹ ಅದರ ಮಹತ್ವವನ್ನು ಕಡೆಗಣಿಸಬಾರದು. ನಂಬಿಕೆಯು ಕ್ಷೀಣಿಸುತ್ತಾ ಹೋಗಿ, ನಂತರ ಇಲ್ಲದೆಹೋಗಸಾಧ್ಯವಿದೆ. ಆದುದರಿಂದ, “ನಂಬಿಕೆಯಲ್ಲಿ ಸ್ವಸ್ಥರಾಗಿ” ಉಳಿಯಲು ಪ್ರಯತ್ನದ ಅಗತ್ಯವಿದೆ.—ತೀತ 2:2, NW.
ಆದುದರಿಂದ, ಸಕಾರಣದಿಂದಲೇ ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಯು, 1997/98ರ ಜಿಲ್ಲಾ ಅಧಿವೇಶನಗಳ ಸರಣಿಗಾಗಿ, “ದೇವರ ವಾಕ್ಯದಲ್ಲಿ ನಂಬಿಕೆ” ಎಂಬ ಮುಖ್ಯವಿಷಯವನ್ನು ಆರಿಸಿಕೊಂಡಿತು. ಹೀಗೆ ಲಕ್ಷಾಂತರ ಸಾಕ್ಷಿಗಳು ಹಾಗೂ ಇನ್ನಿತರರು ದೇವರ ವಾಕ್ಯದಲ್ಲಿನ ತಮ್ಮ ನಂಬಿಕೆಯನ್ನು ಬಲಪಡಿಸಲು ಒಟ್ಟುಗೂಡುವ ಸುಯೋಗವನ್ನು ಪಡೆದಿದ್ದಾರೆ.
ದೇವರ ವಾಕ್ಯವು ಸತ್ಯವಾಗಿದೆ—ನಮ್ಮ ನಂಬಿಕೆಯ ಆಧಾರ
ಇದು ಅಧಿವೇಶನದ ಮೊದಲ ದಿನದ ಮುಖ್ಯವಿಷಯವಾಗಿತ್ತು. ಹಾಜರಿದ್ದ ಸರ್ವರಿಗೂ ಇದು ಪ್ರಶಂಸೆಯ ಮಾತುಗಳೊಂದಿಗೆ ಆರಂಭವಾಯಿತು. ಅಧಿವೇಶನದಲ್ಲಿ ಉಪಸ್ಥಿತರಿರುವುದು, ಬೈಬಲಿಗಾಗಿರುವ ಗೌರವದ ಪುರಾವೆಯಾಗಿತ್ತು. ಆದರೂ, ನಮ್ಮ ನಂಬಿಕೆಯ ಗುಣಮಟ್ಟದ ಕುರಿತು ಆಲೋಚನೆಯನ್ನು ಕೆರಳಿಸುವ ಪ್ರಶ್ನೆಗಳು ಮುಂದಿಡಲ್ಪಟ್ಟವು: ‘ದೇವರ ವಾಕ್ಯವನ್ನು ಪ್ರಮಾಣ ಗ್ರಂಥವಾಗಿ ಉಪಯೋಗಿಸುತ್ತಾ, ನಾವು ನಮ್ಮ ನಂಬಿಕೆಗಳನ್ನು ಸಮರ್ಥಿಸಲು ಶಕ್ತರಾಗಿದ್ದೇವೊ? ಬೈಬಲನ್ನು, ಸಭಾ ಕೂಟಗಳನ್ನು, ಮತ್ತು ಬೈಬಲಾಧಾರಿತ ಪ್ರಕಾಶನಗಳ ಮಹತ್ವವನ್ನು ಎಂದೂ ಕಡೆಗಣಿಸದೆ, ಆ ಆತ್ಮಿಕ ಆಹಾರವನ್ನು ನಾವು ಗಣ್ಯಮಾಡುತ್ತೇವೊ? ಪ್ರೀತಿ, ನಿಷ್ಕೃಷ್ಟ ಜ್ಞಾನ, ಮತ್ತು ವಿವೇಚನಾಶಕ್ತಿಯಲ್ಲಿ ನಾವು ಅಭಿವೃದ್ಧಿಯನ್ನು ಮಾಡುತ್ತಿದ್ದೇವೊ?’ “ನಾವು ನಮ್ಮನ್ನು ಪರಿಶೋಧಿಸಿಕೊಳ್ಳುವಂತೆ ಹಾಗೂ ವ್ಯಕ್ತಿಗತವಾಗಿ ನಮ್ಮಲ್ಲಿರುವ ನಂಬಿಕೆಯ ಪ್ರಮಾಣವನ್ನು ಹಾಗೂ ಗುಣಮಟ್ಟವನ್ನು ಪರೀಕ್ಷಿಸಿಕೊಳ್ಳುವಂತೆ ನಮಗೆ ಸಹಾಯ ಮಾಡಲಿಕ್ಕಾಗಿ, ‘ದೇವರ ವಾಕ್ಯದಲ್ಲಿ ನಂಬಿಕೆ’ ಎಂಬ ಈ ಜಿಲ್ಲಾ ಅಧಿವೇಶನವು ತಯಾರಿಸಲ್ಪಟ್ಟಿದೆ” ಎಂಬುದನ್ನು ವಿವರಿಸುತ್ತಾ, ಜಾಗರೂಕತೆಯಿಂದ ಕಿವಿಗೊಡುವಂತೆ ಭಾಷಣಕರ್ತನು ಎಲ್ಲರನ್ನೂ ಉತ್ತೇಜಿಸಿದನು.
“ನೋಟದಿಂದಲ್ಲ, ನಂಬಿಕೆಯಿಂದ ನಡೆಯುವುದು” ಎಂಬುದು ಮುಖ್ಯ ಭಾಷಣದ ಶೀರ್ಷಿಕೆಯಾಗಿತ್ತು. (2 ಕೊರಿಂಥ 5:7, NW) “ಯೆಹೋವನ ಸಾಕ್ಷಿಗಳಾಗುವವರ ನಂಬಿಕೆಯು ಅವಿಚಾರಿತ ನಂಬಿಕೆಯಲ್ಲ” ಎಂದು ಭಾಷಣಕರ್ತನು ಹೇಳಿದನು. ಇದು ಎಷ್ಟು ಸತ್ಯ! ನಿಜವಾದ ನಂಬಿಕೆಯು ಕುರುಡಲ್ಲ. ಇದು ವಾಸ್ತವಾಂಶಗಳ ಮೇಲೆ ಆಧಾರಿತವಾದದ್ದಾಗಿದೆ. ಇಬ್ರಿಯ 11:1 ಹೇಳುವುದು: “ನಂಬಿಕೆಯೊ ನಾವು ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದೂ ಕಣ್ಣಿಗೆ ಕಾಣದವುಗಳನ್ನು ನಿಜವೆಂದು ತಿಳುಕೊಳ್ಳುವದೂ ಆಗಿದೆ.” ಭಾಷಣಕರ್ತನು ಗಮನಿಸಿದ್ದು: “ನಾವು ನಿಜವಾಗಿಯೂ ನಂಬಿಕೆಯಿಂದ ನಡೆಯಲಿರುವುದಾದರೆ, ನಮಗೆ ಸಾಧಾರವುಳ್ಳ ನಂಬಿಕೆಯ ಅಗತ್ಯವಿದೆ.” ನಾವು ನೋಟದಿಂದಲ್ಲ, ನಂಬಿಕೆಯಿಂದ ನಡೆಯುತ್ತೇವಾದ ಕಾರಣ, ಯೆಹೋವನು ತನ್ನ ಉದ್ದೇಶದ ಪ್ರತಿಯೊಂದು ಅಂಶವನ್ನು ಹೇಗೆ ಮತ್ತು ಯಾವಾಗ ನೆರವೇರಿಸುತ್ತಾನೆಂಬುದರ ಕುರಿತಾದ ವಿವರಗಳು ನಮಗೆ ಅಗತ್ಯವಿಲ್ಲ. ಈಗಾಗಲೇ ನಮಗೆ ಆತನ ಕುರಿತಾಗಿ ಏನು ತಿಳಿದಿದೆಯೋ ಅದು, ತನ್ನ ವಾಗ್ದಾನಗಳನ್ನು ಪ್ರೀತಿಯಿಂದ ಹಾಗೂ ನೀತಿಯಿಂದ ನೆರವೇರಿಸುವ ಆತನ ಬಲದಲ್ಲಿ ನಮಗೆ ಸಂಪೂರ್ಣ ದೃಢವಿಶ್ವಾಸವನ್ನು ಕೊಡುತ್ತದೆ.
“ಕ್ರೈಸ್ತ ಯುವ ಜನರು—ಸಭೆಯ ಒಂದು ಅತಿ ಮುಖ್ಯ ಭಾಗ” ಎಂಬ ಭಾಷಣವು, ಯುವ ಜನರು ಯೆಹೋವನ ದೃಷ್ಟಿಯಲ್ಲಿ ಎಷ್ಟು ಅಮೂಲ್ಯರಾಗಿದ್ದಾರೆಂಬುದನ್ನು ಅವರಿಗೆ ನೆನಪಿಸಿತು. ಇಡೀ ಬೈಬಲನ್ನು ಓದುವುದು ಹಾಗೂ ಸಮರ್ಪಣೆ ಮತ್ತು ದೀಕ್ಷಾಸ್ನಾನಕ್ಕಾಗಿರುವ ಆವಶ್ಯಕತೆಗಳನ್ನು ಮುಟ್ಟುವಂತಹ ಗುರಿಗಳನ್ನು ಬೆನ್ನಟ್ಟುವ ಮೂಲಕ, ಆತ್ಮಿಕವಾಗಿ ಬೆಳೆಯುವಂತೆ ಅವರಿಗೆ ಪ್ರೋತ್ಸಾಹ ನೀಡಲಾಯಿತು. ಹೆಚ್ಚಿನ ಶಿಕ್ಷಣದ ಬೆನ್ನಟ್ಟುವಿಕೆಯು, ಒಬ್ಬನ ಹೆತ್ತವರೊಂದಿಗೆ ನಿರ್ಧರಿಸಬೇಕಾದ ಒಂದು ವೈಯಕ್ತಿಕ ವಿಷಯವಾಗಿದೆಯಾದರೂ, ಒಂದುವೇಳೆ ಹೆಚ್ಚಿನ ಶಿಕ್ಷಣವನ್ನು ಮಾಡತೊಡಗಿದರೆ, ಅದು ಯಾವಾಗಲೂ ದೇವರನ್ನು ಹೆಚ್ಚು ಪರಿಣಾಮಕರವಾಗಿ ಸೇವಿಸಲು ಸಿದ್ಧರಾಗಿರುವ ಉದ್ದೇಶವುಳ್ಳದ್ದಾಗಿರಬೇಕು. ನಮ್ಮ ನಂಬಿಕೆಗೆ ಸಂಬಂಧಿಸಿದ “ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳು”ವಾಗ (NW), ಐಹಿಕ ಶಿಕ್ಷಣವು ಪ್ರಯೋಜನದಾಯಕವಾದ ಒಂದು ಉದ್ದೇಶವನ್ನು ಪೂರೈಸಬಲ್ಲದು.—ಫಿಲಿಪ್ಪಿ 1:9, 10.
ತದನಂತರ, “ಯಾರ ಮಟ್ಟಗಳನ್ನು ನೀವು ಪಾಲಿಸುತ್ತೀರಿ?” ಎಂಬ ವಸ್ತುವಿಷಯದ ಕುರಿತಾದ ಮೂರು ಭಾಷಣಗಳ ಭಾಷಣಮಾಲೆಯು ಸಾದರಪಡಿಸಲ್ಪಟ್ಟಿತು. ದೇವರ ವಾಕ್ಯದಲ್ಲಿ ನಂಬಿಕೆಯು, ಬೈಬಲ್ ಮಟ್ಟಗಳಿಗೆ ಅಂಟಿಕೊಳ್ಳುವಂತೆ ನಮ್ಮನ್ನು ಪ್ರಚೋದಿಸುತ್ತದೆ. ಕ್ರೈಸ್ತರು ಯೆಹೋವನ ನಿಯಮಗಳಿಗೂ ಮೂಲತತ್ವಗಳಿಗೂ ವಿಧೇಯರಾಗುತ್ತಾರೆ. ದೃಷ್ಟಾಂತಕ್ಕಾಗಿ, ಅಶ್ಲೀಲವಾದ ಹಾಗೂ ನಿಂದಾತ್ಮಕ ಮಾತುಗಳನ್ನು ಉಪಯೋಗಿಸಬಾರದೆಂದು ಶಾಸ್ತ್ರಗಳು ನಮಗೆ ಬುದ್ಧಿಹೇಳುತ್ತವೆ. (ಎಫೆಸ 4:31, 32) ಭಾಷಣಕರ್ತನು ಕೇಳಿದ್ದು: “ಸಿಟ್ಟುಗೊಂಡಾಗ ಅಥವಾ ಕಿರುಕುಳಗೊಂಡಾಗ, ನೀವು ನಿಮ್ಮ ಸಂಗಾತಿಯ ಮೇಲೆ ಅಥವಾ ನಿಮ್ಮ ಮಕ್ಕಳ ಮೇಲೆ ಕಿರುಚಾಡುತ್ತೀರೊ?” ನಿಶ್ಚಯವಾಗಿಯೂ ಅದು ಅಕ್ರೈಸ್ತ ನಡತೆಯಾಗಿದೆ. ನಮ್ಮ ವೈಯಕ್ತಿಕ ತೋರಿಕೆಯ ವಿಷಯದಲ್ಲಿಯೂ ದೇವರು ಮಟ್ಟಗಳನ್ನಿಟ್ಟಿದ್ದಾನೆ. ಕ್ರೈಸ್ತರು “ಸಭ್ಯತೆಯೊಂದಿಗೆ, ಸುವ್ಯವಸ್ಥಿತವಾದ ಉಡುಪಿ”ನಿಂದ (NW) ತಮ್ಮನ್ನು ಅಲಂಕರಿಸಿಕೊಳ್ಳಬೇಕು. (1 ತಿಮೊಥೆಯ 2:9, 10) “ಸಭ್ಯತೆ” ಎಂಬ ಶಬ್ದವು, ಸ್ವ-ಗೌರವದ ವಿಚಾರವನ್ನು, ಸನ್ಮಾನ, ಸ್ತಿಮಿತತೆ, ಮತ್ತು ಮಿತಭಾವದ ಪ್ರಜ್ಞೆಯನ್ನು ವ್ಯಕ್ತಪಡಿಸುತ್ತದೆ. ನಾವು ಇತರರಿಗಾಗಿರುವ ಪ್ರೀತಿಯಿಂದ ಪ್ರಚೋದಿತರಾಗಿದ್ದೇವೆ, ಮತ್ತು ನಾವು ಬೈಬಲ್ ಮೂಲತತ್ವಗಳಿಂದ ಹಾಗೂ ಯಾವುದು ಸೂಕ್ತವಾಗಿದೆಯೋ ಅದರ ಪ್ರಜ್ಞೆಯಿಂದ ಪ್ರಚೋದಿಸಲ್ಪಡುತ್ತೇವೆ.
ಮುಂದಿನ ಎರಡು ಭಾಷಣಗಳು, ಇಬ್ರಿಯ 3:7-15 ಹಾಗೂ 4:1-16ರ ಒಂದೊಂದು ವಚನದ ಪರಿಣಗನೆಯನ್ನು ಒಳಗೂಡಿದ್ದವು. “ಪಾಪದ ಮೋಸಕರ ಶಕ್ತಿಯಿಂದ ಕಠಿನ”ರಾಗುವ (NW) ಅಪಾಯದ ವಿರುದ್ಧ ಈ ಬೈಬಲ್ ಭಾಗಗಳು ನಮಗೆ ಎಚ್ಚರಿಕೆ ಕೊಡುತ್ತವೆ. (ಇಬ್ರಿಯ 3:13) ಪಾಪದ ವಿರುದ್ಧವಾದ ನಮ್ಮ ಹೋರಾಟದಲ್ಲಿ ನಾವು ಹೇಗೆ ಯಶಸ್ವಿಯಾಗಬಲ್ಲೆವು? ಯೆಹೋವನು ತನ್ನ ವಾಕ್ಯದ ಮೂಲಕ ನಮಗೆ ಸಹಾಯ ಮಾಡುತ್ತಾನೆ. ನಿಜವಾಗಿಯೂ, “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, . . . ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ.”—ಇಬ್ರಿಯ 4:12.
ಅಧಿವೇಶನದ ಮೊದಲ ದಿನದ ಅಂತಿಮ ಭಾಷಣವು, “ಸಕಲ ಜನರಿಗಾಗಿರುವ ಒಂದು ಗ್ರಂಥ” ಎಂಬುದಾಗಿತ್ತು. ಅದು ಬೈಬಲಿನ ಯಥಾರ್ಥತೆ, ನಿಷ್ಕೃಷ್ಟತೆ, ಹಾಗೂ ಪ್ರಾಯೋಗಿಕ ಮೌಲ್ಯವನ್ನು ಎತ್ತಿ ತೋರಿಸಿತು. ಸಕಲ ಜನರಿಗಾಗಿರುವ ಒಂದು ಗ್ರಂಥ ಎಂಬ ಶೀರ್ಷಿಕೆಯಿರುವ ಒಂದು ಹೊಸ 32 ಪುಟದ ಬ್ರೋಷರಿನ ಬಿಡುಗಡೆಯ ಕುರಿತು ಭಾಷಣಕರ್ತನು ಪ್ರಕಟಿಸುವುದನ್ನು ಕೇಳುವುದು ಎಷ್ಟು ರೋಮಾಂಚನೀಯವಾಗಿತ್ತು! ಈ ಹೊಸ ಪ್ರಕಾಶನವು, ಯಾರಿಗೆ ವಿದ್ಯಾಭ್ಯಾಸವಿದ್ದರೂ ಬೈಬಲಿನ ಕುರಿತು ಕೊಂಚವೇ ತಿಳಿದಿದೆಯೋ ಅಂತಹ ಜನರಿಗಾಗಿ ವಿಶೇಷವಾಗಿ ತಯಾರಿಸಲ್ಪಟ್ಟಿದೆ. ಆ ಭಾಷಣವು ಈ ಮಾತುಗಳೊಂದಿಗೆ ಮುಕ್ತಾಯಗೊಂಡಿತು: “ಜನರು ದೇವರ ವಾಕ್ಯವನ್ನು ತಾವಾಗಿಯೇ ಪರೀಕ್ಷಿಸುವ ಅಗತ್ಯವಿದೆ. ಅವರೇ ನೇರವಾದ ಪರೀಕ್ಷೆಯನ್ನು ನಡೆಸುವುದಾದರೆ, ಈ ಅದ್ವಿತೀಯ ಪುಸ್ತಕವಾಗಿರುವ ಬೈಬಲು, ನಿಜವಾಗಿಯೂ ಸಕಲ ಜನರಿಗಾಗಿರುವ ಒಂದು ಪುಸ್ತಕವಾಗಿದೆಯೆಂದು ಅವರು ಗ್ರಹಿಸುವರು ಎಂಬ ದೃಢವಿಶ್ವಾಸ ನಮಗಿದೆ!”
‘ನಮ್ಮ ನಂಬಿಕೆಯನ್ನು ಪರಿಪೂರ್ಣಗೊಳಿಸುವವ’ನನ್ನು ಅನುಕರಿಸಿರಿ
ಅಧಿವೇಶನದ ಎರಡನೆಯ ದಿನದ ಈ ಮುಖ್ಯವಿಷಯವು, ‘ನಮ್ಮ ನಂಬಿಕೆಯನ್ನು ಪರಿಪೂರ್ಣಗೊಳಿಸುವವ’ನಾದ (NW) ಯೇಸು ಕ್ರಿಸ್ತನ ಕಡೆಗೆ ನಮ್ಮ ಗಮನವನ್ನು ಸೆಳೆಯಿತು. ನಾವು ‘ಅವನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸ’ಬೇಕು. (ಇಬ್ರಿಯ 12:2; 1 ಪೇತ್ರ 2:21) ಕ್ರೈಸ್ತಪ್ರಪಂಚದಲ್ಲಿನ ಅನೇಕರಿಗೆ ಹೀಗೆ ಹೇಳಲಾಗುತ್ತದೆ: ‘ಕರ್ತನಾದ ಯೇಸುವಿನಲ್ಲಿ ನಂಬಿಕೆಯಿಡಿರಿ, ನೀವು ರಕ್ಷಿಸಲ್ಪಡುವಿರಿ!’ ಆದರೆ ನಂಬಿಕೆಯಲ್ಲಿ ಕೇವಲ ಇಷ್ಟೇ ಒಳಗೂಡಿದೆಯೊ? ‘ಕ್ರಿಯೆಗಳಿಲ್ಲದ ನಂಬಿಕೆಯು ಸತ್ತದ್ದೇ’ ಎಂದು ಬೈಬಲು ಘೋಷಿಸುತ್ತದೆ. (ಯಾಕೋಬ 2:26) ಆದುದರಿಂದ, ಯೇಸುವಿನಲ್ಲಿ ನಂಬಿಕೆಯಿಡುವುದು ಮಾತ್ರವಲ್ಲ, ಅವನು ಮಾಡಿದ ಕೆಲಸಗಳನ್ನು—ವಿಶೇಷವಾಗಿ ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಮೂಲಕ—ನಾವು ಮಾಡಬೇಕು.
ಬೆಳಗ್ಗಿನ ಕಾರ್ಯಕ್ರಮವು ಸೌವಾರ್ತಿಕ ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸಿತು. ಪೌಲನಂತೆ, ನಾವು ರಕ್ಷಣೆಯ ಸುವಾರ್ತೆಯನ್ನು ಘೋಷಿಸಲು ಕಾತುರರಾಗಿರಬೇಕು. (ರೋಮಾಪುರ 1:14-16) ಯೇಸು ಎಲ್ಲ ಕಡೆಗಳಲ್ಲಿದ್ದ ಜನರಿಗೆ ಸಾರಿದನು. ನಮ್ಮ ಕ್ರಮವಾದ ಮನೆ ಮನೆಯ ಸೇವೆಯು ಫಲಿತಾಂಶಗಳನ್ನು ಉತ್ಪಾದಿಸುತ್ತಿರುವುದಾದರೂ, ನಾವು ಸಂದರ್ಶಿಸುವಾಗ ಹೆಚ್ಚೆಚ್ಚು ಜನರು ಮನೆಯಲ್ಲಿರುವುದಿಲ್ಲ. (ಅ. ಕೃತ್ಯಗಳು 20:20) ಅನೇಕರು ಶಾಲೆಯಲ್ಲಿರುತ್ತಾರೆ, ಕೆಲಸಮಾಡುತ್ತಿರುತ್ತಾರೆ, ಖರೀದಿಮಾಡುತ್ತಿರುತ್ತಾರೆ, ಅಥವಾ ಪ್ರಯಾಣಿಸುತ್ತಿರುತ್ತಾರೆ. ಆದುದರಿಂದ, ನಾವು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಎಲ್ಲೆಲ್ಲಿ ಜನರನ್ನು ಕಂಡುಕೊಳ್ಳಬಹುದೋ ಅಲ್ಲೆಲ್ಲ ಸಹ ಸಾರುವ ಅಗತ್ಯವಿದೆ.
“ಸತ್ಯದಲ್ಲಿ ಬೇರೂರಿಸಲ್ಪಟ್ಟವರೂ ನೆಲೆಗೊಂಡವರೂ ಆಗಿರಿ” ಎಂಬ ಭಾಷಣವು, ದೀಕ್ಷಾಸ್ನಾನವನ್ನು ಪಡೆದುಕೊಳ್ಳುತ್ತಿರುವ—ಪ್ರತಿ ದಿನ ಸರಾಸರಿ 1,000ಕ್ಕಿಂತಲೂ ಹೆಚ್ಚು ಮಂದಿ—ಹೊಸ ಶಿಷ್ಯರ ದೊಡ್ಡ ಸಂಖ್ಯೆಯ ಕುರಿತು ನಮಗೆ ಜ್ಞಾಪಕಹುಟ್ಟಿಸಿತು! ಈ ಹೊಸಬರು ನಂಬಿಕೆಯಲ್ಲಿ ಚೆನ್ನಾಗಿ ಬೇರೂರಿಸಲ್ಪಟ್ಟವರೂ ನೆಲೆಗೊಂಡವರೂ ಆಗುವುದು ಅತ್ಯಾವಶ್ಯಕವಾಗಿದೆ. (ಕೊಲೊಸ್ಸೆ 2:6, 7) ಅಕ್ಷರಾರ್ಥಕವಾದ ಬೇರುಗಳು ನೀರನ್ನು ಹಾಗೂ ಪೌಷ್ಠಿಕ ಆಹಾರವನ್ನು ಹೀರಿಕೊಳ್ಳುತ್ತವೆ, ಮತ್ತು ಅದೇ ಸಮಯದಲ್ಲಿ ಆ ಗಿಡಕ್ಕೆ ಸ್ಥಿರತೆಯನ್ನು ಅಥವಾ ಆಧಾರವನ್ನು ಒದಗಿಸುತ್ತವೆ ಎಂಬುದನ್ನು ಭಾಷಣಕರ್ತನು ವಿವರಿಸಿದನು. ತದ್ರೀತಿಯಲ್ಲಿ, ಒಳ್ಳೆಯ ಅಭ್ಯಾಸ ರೂಢಿಗಳು ಹಾಗೂ ಹಿತಕರವಾದ ಸಹವಾಸದ ಮೂಲಕ, ಹೊಸ ಶಿಷ್ಯರು ಸತ್ಯದಲ್ಲಿ ನೆಲೆಗೊಳ್ಳಸಾಧ್ಯವಿದೆ.
ಈ ಸಲಹೆಯು ದೀಕ್ಷಾಸ್ನಾನದ ಅಭ್ಯರ್ಥಿಗಳಿಗೆ ವಿಶೇಷವಾಗಿ ಸೂಕ್ತವಾಗಿತ್ತು. ಹೌದು, ಅಧಿವೇಶನದ ಎರಡನೆಯ ದಿನದಂದು, ಯೇಸುವಿನ ಮಾದರಿಯನ್ನು ಅನುಸರಿಸುತ್ತಾ, ಹೊಸ ಶಿಷ್ಯರ ದೊಡ್ಡ ಗುಂಪುಗಳು ದೀಕ್ಷಾಸ್ನಾನವನ್ನು ಪಡೆದುಕೊಂಡವು. “ದೇವರ ವಾಕ್ಯದಲ್ಲಿ ನಂಬಿಕೆಯು ದೀಕ್ಷಾಸ್ನಾನಕ್ಕೆ ನಡೆಸುತ್ತದೆ” ಎಂಬ ಭಾಷಣವು, ನೀರಿನಲ್ಲಿ ಸಂಪೂರ್ಣವಾಗಿ ಮುಳುಗುವುದು, ಅವರು ತಮ್ಮ ಹಿಂದಿನ ಸ್ವಾರ್ಥಪರ ಜೀವನರೀತಿಯ ವಿಷಯದಲ್ಲಿ ಸಾಯುವುದರ ಕುರಿತಾದ ಸರಿಯಾದ ಸಂಕೇತವಾಗಿದೆ ಎಂಬುದನ್ನು ಅಭ್ಯರ್ಥಿಗಳಿಗೆ ನೆನಪಿಸಿತು. ಅವರು ನೀರಿನಿಂದ ಮೇಲೆಬ್ಬಿಸಲ್ಪಡುವುದು, ಅವರು ದೇವರ ಚಿತ್ತವನ್ನು ಮಾಡಲಿಕ್ಕಾಗಿ ಸಜೀವಗೊಳಿಸಲ್ಪಟ್ಟಿರುವುದನ್ನು ಸೂಚಿಸುತ್ತದೆ.
“ನಂಬಿಕೆಗಾಗಿ ಕಠಿನವಾದ ಹೋರಾಟವನ್ನು ನಡಿಸಿರಿ” ಎಂಬ ಭಾಷಣವು, ಬೈಬಲಿನ ಯೂದ ಪುಸ್ತಕದ ಮೇಲಾಧಾರಿತವಾಗಿತ್ತು. ಅನೈತಿಕತೆ, ದಂಗೆಕೋರತನ ಮತ್ತು ಧರ್ಮಭ್ರಷ್ಟತೆಗಳಂತಹ ಹಾನಿಕರ ಪ್ರಭಾವಗಳನ್ನು ಪ್ರತಿರೋಧಿಸುವ ಮೂಲಕ, ನಮ್ಮ ನಂಬಿಕೆಯನ್ನು ಕಾಪಾಡಿಕೊಳ್ಳುವಂತೆ ನಾವು ಪ್ರೋತ್ಸಾಹಿಸಲ್ಪಟ್ಟೆವು. ತದನಂತರ, ಹೆತ್ತವರಿಗೆ—ವಿಶೇಷವಾಗಿ ತಂದೆಗಳಿಗೆ—“ನಿಮ್ಮ ಮನೆವಾರ್ತೆಗಾಗಿ ಒದಗಿಸುವಿಕೆಯನ್ನು ಮಾಡಿರಿ” ಎಂಬ ಭಾಷಣದಲ್ಲಿ ವಿಶೇಷವಾದ ಗಮನವು ಕೊಡಲ್ಪಟ್ಟಿತು. ಕುಟುಂಬದ ಆತ್ಮಿಕ, ಶಾರೀರಿಕ, ಹಾಗೂ ಭಾವನಾತ್ಮಕ ಆವಶ್ಯಕತೆಗಳನ್ನು ಒದಗಿಸುವುದು, ಒಂದು ಶಾಸ್ತ್ರೀಯ ಹಂಗಾಗಿದೆ. (1 ತಿಮೊಥೆಯ 5:8) ಇದಕ್ಕೆ ಸಮಯ, ಸಂವಾದ, ಹಾಗೂ ಆಪ್ತತೆಯ ಅಗತ್ಯವಿದೆ. ತಮ್ಮ ಮಕ್ಕಳನ್ನು ಸತ್ಯದಲ್ಲಿ ಬೆಳೆಸಲಿಕ್ಕಾಗಿ ಕ್ರೈಸ್ತ ಹೆತ್ತವರು ಮಾಡುವ ಎಲ್ಲ ಕಠಿನ ಶ್ರಮದಿಂದ ಯೆಹೋವನು ನಿಶ್ಚಯವಾಗಿಯೂ ಪ್ರಸನ್ನನಾಗಿದ್ದಾನೆ.
“ಯೆಹೋವನ ಮಂದಿರಕ್ಕೆ ಹೋಗೋಣ” ಎಂಬ ಮುಂದಿನ ಭಾಷಣಮಾಲೆಯು, ಕ್ರೈಸ್ತ ಕೂಟಗಳಿಗಾಗಿ ಗಣ್ಯತೆಯನ್ನು ಕಟ್ಟಿತು. ಅವು ಈ ಲೋಕದ ಚಿಂತೆಗಳಿಂದ ನಮಗೆ ವಿರಾಮವನ್ನು ಕೊಡುತ್ತವೆ. ಕೂಟಗಳಲ್ಲಿ ನಾವು ಪರಸ್ಪರ ಉತ್ತೇಜನವನ್ನು ವಿನಿಮಯಮಾಡಿಕೊಳ್ಳುವ ಸದವಕಾಶವನ್ನು ಪಡೆದಿರುತ್ತೇವೆ, ಮತ್ತು ನಮ್ಮ ಜೊತೆವಿಶ್ವಾಸಿಗಳ ಕಡೆಗಿರುವ ನಮ್ಮ ಪ್ರೀತಿಯನ್ನು ನಾವು ಪ್ರದರ್ಶಿಸಸಾಧ್ಯವಿದೆ. (ಇಬ್ರಿಯ 10:24, 25) ಬೋಧಕರೋಪಾದಿ ನಮ್ಮ ಕೌಶಲಗಳನ್ನು ಹರಿತಗೊಳಿಸಲು ಸಹ ಕೂಟಗಳು ಸಹಾಯ ಮಾಡುತ್ತವೆ, ಮತ್ತು ದೇವರ ಉದ್ದೇಶದ ಕುರಿತಾದ ನಮ್ಮ ತಿಳಿವಳಿಕೆಯನ್ನೂ ಅವು ಹೆಚ್ಚಿಸುತ್ತವೆ. (ಜ್ಞಾನೋಕ್ತಿ 27:17) ನಾವೆಂದಿಗೂ ಸಭೆಯಿಂದ ನಮ್ಮನ್ನು ಪ್ರತ್ಯೇಕಿಸಿಕೊಳ್ಳದಿರೋಣ, ಮತ್ತು ಯೇಸುವಿನ ಮಾತುಗಳನ್ನು ನಾವು ಜ್ಞಾಪಿಸಿಕೊಳ್ಳೋಣ: “ಇಬ್ಬರು ಮೂವರು ನನ್ನ ಹೆಸರಿನಲ್ಲಿ ಎಲ್ಲಿ ಕೂಡಿಬಂದಿರುತ್ತಾರೋ ಅಲ್ಲಿ ಅವರ ನಡುವೆ ನಾನು ಇದ್ದೇನೆ.”—ಮತ್ತಾಯ 18:20.
“ನಿಮ್ಮ ನಂಬಿಕೆಯ ಗುಣಮಟ್ಟವು—ಈಗ ಪರೀಕ್ಷಿಸಲ್ಪಡುತ್ತಿದೆ” ಎಂಬುದು ಆ ದಿನದ ಕೊನೆಯ ಭಾಷಣವಾಗಿತ್ತು. ಶೋಧಿಸಲ್ಪಡದ ನಂಬಿಕೆಗೆ ಯಾವುದೇ ಯೋಗ್ಯತಾರ್ಹ ಬೆಲೆಯಿಲ್ಲ, ಮತ್ತು ಅದರ ಗುಣಮಟ್ಟವು ಅಜ್ಞಾತವಾಗಿ ಉಳಿಯುತ್ತದೆ. ಅದು ಇನ್ನೂ ಹಣ ತೆಗೆದಿಲ್ಲದ ಚೆಕ್ಗೆ ಸಮಾನವಾಗಿದೆ. ಅದರಲ್ಲಿ ಕಂಡುಬರುವ ಮೊತ್ತಕ್ಕೆ ಅದು ನಿಜವಾಗಿಯೂ ಸಮಾನವಾಗಿದೆಯೊ? ಅಂತೆಯೇ, ನಮ್ಮ ನಂಬಿಕೆಗೆ ಆಧಾರವಿದೆ ಮತ್ತು ನೈಜವಾದ ಗುಣಮಟ್ಟವಿದೆ ಎಂಬುದನ್ನು ರುಜುಪಡಿಸಲಿಕ್ಕಾಗಿ ಅದನ್ನು ಪರೀಕ್ಷಿಸಬೇಕಾಗಿದೆ. (1 ಪೇತ್ರ 1:6, 7) ಭಾಷಣಕರ್ತನು ಹೇಳಿದ್ದು: “ಕೆಲವೊಮ್ಮೆ, ನಮ್ಮ ಕ್ರೈಸ್ತ ನಂಬಿಕೆಗಳನ್ನು ಹಾಗೂ ಜೀವನದ ರೀತಿಯನ್ನು ತಪ್ಪಾಗಿ ನಿರೂಪಿಸುತ್ತಾ, ವಾರ್ತಾ ಮಾಧ್ಯಮವೂ ಅಧಿಕಾರಿಗಳೂ ನಮ್ಮ ಮೇಲೆ ಸುಳ್ಳು ಪಟ್ಟಿಗಳನ್ನು ಹೆಣೆಯುವಂತೆ ವೈದಿಕ ವರ್ಗದವರಿಂದ ಹಾಗೂ ಧರ್ಮಭ್ರಷ್ಟರಿಂದ ವಂಚಿಸಲ್ಪಡುತ್ತಾರೆ. . . . ಸೈತಾನನಿಂದ ಮಂಕುಮಾಡಲ್ಪಟ್ಟವರು ನಮ್ಮನ್ನು ಬೆದರಿಸಲು, ಕುಗ್ಗಿಸಲು, ಹಾಗೂ ಸುವಾರ್ತೆಯ ನಿಮಿತ್ತ ನಾವು ನಾಚಿಕೆಪಡುವಂತೆ ಮಾಡಲು ನಾವು ಬಿಟ್ಟುಕೊಡುವೆವೋ? ಸತ್ಯದ ಕುರಿತಾದ ಮಿಥ್ಯಾಪವಾದಗಳು, ನಮ್ಮ ಕ್ರಮದ ಕೂಟದ ಹಾಜರಿಯನ್ನು ಹಾಗೂ ನಮ್ಮ ಸಾರುವ ಚಟುವಟಿಕೆಯನ್ನು ಬಾಧಿಸುವಂತೆ ನಾವು ಬಿಟ್ಟುಕೊಡುವೆವೋ? ಅಥವಾ ನಾವು ಸ್ಥಿರವಾಗಿ ನಿಂತು, ಯೆಹೋವನ ಹಾಗೂ ಅವನ ರಾಜ್ಯದ ಕುರಿತಾದ ಸತ್ಯವನ್ನು ಪ್ರಕಟಪಡಿಸುತ್ತಾ ಮುಂದುವರಿಯಲು ಎಂದಿಗಿಂತಲೂ ಹೆಚ್ಚಾಗಿ ಧೈರ್ಯ ಹಾಗೂ ದೃಢನಿಶ್ಚಯದಿಂದ ಇರುವೆವೋ?”
ನಂಬಿಕೆಯಿಂದ ಬದುಕಿರಿ
ಅಧಿವೇಶನದ ಮೂರನೆಯ ದಿನದ ಮುಖ್ಯವಿಷಯವು ಪೌಲನ ಮಾತುಗಳ ಮೇಲಾಧಾರಿತವಾಗಿತ್ತು: “ಇದಲ್ಲದೆ ಕರ್ಮಮಾರ್ಗದಿಂದ ಯಾವನೂ ದೇವರ ಸನ್ನಿಧಿಯಲ್ಲಿ ನೀತಿವಂತನಾಗುವದಿಲ್ಲವೆಂಬದು ಸ್ಪಷ್ಟವಾಗಿದೆ. ಯಾಕಂದರೆ ನೀತಿವಂತನು ನಂಬಿಕೆಯಿಂದಲೇ ಬದುಕುವನೆಂದು ಬರೆದದೆ.” (ಗಲಾತ್ಯ 3:11) “ನಮ್ಮ ದಿನಕ್ಕಾಗಿ ಯೋವೇಲನ ಪ್ರವಾದನಾ ಮಾತುಗಳು” ಎಂಬ ಭಾಷಣಮಾಲೆಯು, ಬೆಳಗ್ಗಿನ ಕಾರ್ಯಕ್ರಮದ ಮುಖ್ಯಾಂಶಗಳಲ್ಲಿ ಒಂದಾಗಿತ್ತು. ಯೋವೇಲನ ಪುಸ್ತಕವು ನಮ್ಮ ದಿನಕ್ಕೆ ಸೂಚಿಸುತ್ತದೆ ಮತ್ತು ತುರ್ತುಪ್ರಜ್ಞೆಯಿಂದ ಹೀಗೆ ಹೇಳುತ್ತದೆ: “ಯೆಹೋವನ ದಿನವು ಸಮೀಪಿಸಿತು; ಅಯ್ಯೋ, ದಿನವೇ! ಅದು ಸರ್ವಶಕ್ತನಿಂದ ನಾಶನದಿನವಾಗಿಯೇ ಬರುವದು.” (ಯೋವೇಲ 1:15) ನಿಧಾನಿಸದ ಮಿಡತೆಗಳ ರೀತಿಗೆ ಸಮನಾಗಿ, ಈ ಅಂತ್ಯಕಾಲದಲ್ಲಿ ರಾಜ್ಯ ಘೋಷಣೆಯನ್ನು ಯಾವುದೂ ತಡೆಯದಂತೆ ಅಭಿಷಿಕ್ತ ಕ್ರೈಸ್ತರು ಕಾರ್ಯವೆಸಗಿದ್ದಾರೆ.
“ಯೆಹೋವನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದು” ಎಂದು ಹೇಳುವ ಮೂಲಕ ಯೋವೇಲ ಪುಸ್ತಕವು ನಿರೀಕ್ಷೆಯನ್ನು ಸಹ ಕೊಡುತ್ತದೆ. (ಯೋವೇಲ 2:32) ಇದು, ಕೇವಲ ಯೆಹೋವನ ಹೆಸರನ್ನು ಉಪಯೋಗಿಸುವುದಕ್ಕಿಂತಲೂ ಹೆಚ್ಚಿನದ್ದನ್ನು ಅರ್ಥೈಸುತ್ತದೆ. ಹೃತ್ಪೂರ್ವಕವಾದ ಪಶ್ಚಾತ್ತಾಪದ ಅಗತ್ಯವಿದೆ, ಮತ್ತು ತಪ್ಪುಗೈಯುವಿಕೆಯನ್ನು ತೊರೆಯುವುದನ್ನು ಇದು ಒಳಗೂಡುತ್ತದೆ. (ಯೋವೇಲ 2:12, 13) ತಡಮಾಡಲು ಸಮಯವೇ ಇಲ್ಲ, ಏಕೆಂದರೆ ಯೆಹೋವನು ಬೇಗನೆ ಜನಾಂಗಗಳ ಮೇಲೆ—ಯೆಹೂದದ ರಾಜನಾದ ಯೆಹೋಷಾಫಾಟನ ದಿನಗಳಲ್ಲಿ ಮೋವಾಬ್ಯರು, ಅಮ್ಮೋನಿಯರು, ಮತ್ತು ಸೇಯೀರ್ಪರ್ವತಪ್ರದೇಶದವರ ಮೇಲೆ ಆತನು ನ್ಯಾಯತೀರ್ಪನ್ನು ವಿಧಿಸಿದಂತೆಯೇ—ನ್ಯಾಯತೀರ್ಪನ್ನು ವಿಧಿಸಲಿದ್ದಾನೆ.—2 ಪೂರ್ವಕಾಲವೃತ್ತಾಂತ 20:1-30; ಯೋವೇಲ 3:2, 12.
“ಯೆಹೋವನನ್ನು ಕಾದುಕೊಂಡಿರುವ ಮೂಲಕ ನಂಬಿಕೆಯನ್ನು ತೋರಿಸಿರಿ” ಎಂಬ ಭಾಷಣದಿಂದ ಎಲ್ಲರೂ ಉತ್ತೇಜಿಸಲ್ಪಟ್ಟರು. ಈಗ, ಅಂತ್ಯದ ಸಮಯದ ಅಂತಿಮ ಭಾಗದಲ್ಲಿ, ನಾವು ಯೆಹೋವನ ವಾಗ್ದಾನಗಳಲ್ಲಿ ಅನೇಕ ವಾಗ್ದಾನಗಳ ನೆರವೇರಿಕೆಯನ್ನು ನೋಡಸಾಧ್ಯವಿದೆ ಮತ್ತು ಇನ್ನೂ ಮುಂದಕ್ಕೆ ನೆರವೇರಲಿರುವ ವಿಷಯಗಳಲ್ಲಿ ನಾವು ತೀವ್ರವಾಗಿ ಆಸಕ್ತರಾಗಿದ್ದೇವೆ. ಯೆಹೋವನು ವಾಗ್ದಾನಿಸಿರುವ ಎಲ್ಲ ಸಂಗತಿಗಳು ಸಂಭವಿಸುವವೆಂಬುದನ್ನು ಜ್ಞಾಪಕದಲ್ಲಿಡುತ್ತಾ, ಯೆಹೋವನ ಜನರು ತಾಳ್ಮೆಯುಳ್ಳವರಾಗಿ ಮುಂದುವರಿಯಬೇಕು.—ತೀತ 2:13; 2 ಪೇತ್ರ 3:9, 10.
ಬೆಳಗ್ಗಿನ ಕಾರ್ಯಕ್ರಮವು “ನಿಮ್ಮ ಕಣ್ಣನ್ನು ಸರಳವಾಗಿಟ್ಟುಕೊಳ್ಳಿರಿ” ಎಂಬ ಡ್ರಾಮದೊಂದಿಗೆ ಅಂತ್ಯಗೊಂಡಿತು. ಈ ವಾಸ್ತವಿಕರೂಪದ ನಾಟಕೀಕರಣವು, ಪ್ರಾಪಂಚಿಕ ಬೆನ್ನಟ್ಟುವಿಕೆಗಳ ವಿಷಯದಲ್ಲಿ ನಮಗಿರುವ ಮನೋಭಾವವನ್ನು ಪರೀಕ್ಷಿಸಲು ನಮ್ಮನ್ನು ಉತ್ತೇಜಿಸಿತು. ನಾವು ಎಲ್ಲಿಯೇ ಜೀವಿಸುತ್ತಿರಲಿ, ನಾವು ನಮ್ಮ ಜೀವನವನ್ನು ವ್ಯಾಕುಲತೆಯಿಂದ ಮುಕ್ತವಾಗಿಡಲು ಬಯಸುವಲ್ಲಿ, ನಮ್ಮ ಕಣ್ಣನ್ನು ಸರಳವಾಗಿಡುವಂತೆ ಯೇಸು ಕೊಟ್ಟ ಸಲಹೆಯನ್ನು ನಾವು ಅನುಸರಿಸಬೇಕು. ಅದನ್ನು ದೇವರ ರಾಜ್ಯದ ಮೇಲೆ ಸ್ಪಷ್ಟವಾಗಿ ಕೇಂದ್ರೀಕರಿಸಬೇಕು.—ಮತ್ತಾಯ 6:22.
ಬಹಿರಂಗ ಭಾಷಣಕ್ಕೆ, “ನಂಬಿಕೆ ಮತ್ತು ನಿಮ್ಮ ಭವಿಷ್ಯ” ಎಂಬ ಕುತೂಹಲ ಕೆರಳಿಸುವ ಶೀರ್ಷಿಕೆಯಿತ್ತು. ಲೋಕದ ಸಮಸ್ಯೆಗಳನ್ನು ಬಗೆಹರಿಸಲು ಮಾನವ ಮುಖಂಡರುಗಳ ಅಸಾಮರ್ಥ್ಯದ ಪುರಾವೆಯನ್ನು ಅದು ಕೊಟ್ಟಿತು. (ಯೆರೆಮೀಯ 10:23) ಹೆಚ್ಚು ದೊಡ್ಡ ಮತ್ತು ಹೆಚ್ಚು ಹಾನಿಕರವಾದ ಪ್ರಮಾಣದಲ್ಲಿ ಮನುಷ್ಯನ ಇತಿಹಾಸವು ಪುನರಾವೃತ್ತಿಯಾಗುತ್ತ ಇರುತ್ತದೆ. ಭವಿಷ್ಯತ್ತಿನ ಕುರಿತಾಗಿ ಯೆಹೋವನ ಸಾಕ್ಷಿಗಳಿಗೆ ಹೇಗನಿಸುತ್ತದೆ? ನಂಬಿಗಸ್ತ ಮಾನವಕುಲಕ್ಕೆ ದೇವರ ರಾಜ್ಯದ ಕೆಳಗೆ ಒಂದು ಉಜ್ವಲ ಭವಿಷ್ಯತ್ತಿದೆಯೆಂದು ನಾವು ನಂಬುತ್ತೇವೆ. (ಮತ್ತಾಯ 5:5) ತನ್ನ ವಾಕ್ಯದಲ್ಲಿ ನಂಬಿಕೆಯಿರುವವರೆಲ್ಲರ ಪ್ರಯೋಜನಕ್ಕಾಗಿ ದೇವರು ತನ್ನ ವಾಗ್ದಾನಗಳನ್ನು ನೆರವೇರಿಸುವನು. ಆ ವಾಕ್ಯವು ಪ್ರೇರಿಸುವುದು: “ಯೆಹೋವನು ಸಿಕ್ಕುವ ಕಾಲದಲ್ಲಿ ಆತನನ್ನು ಆಶ್ರಯಿಸಿರಿ, ಆತನು ಸಮೀಪದಲ್ಲಿರುವಾಗ ಆತನಿಗೆ ಬಿನ್ನಹಮಾಡಿರಿ.”—ಯೆಶಾಯ 55:6.
ನಮ್ಮ ದಿನದ ನೋಟದಲ್ಲಿ ಯೇಸು ಒಂದು ಅತ್ಯಾವಶ್ಯಕ ಪ್ರಶ್ನೆಯನ್ನು ಎಬ್ಬಿಸಿದನು. ಅವನು ಕೇಳಿದ್ದು: “ಮನುಷ್ಯಕುಮಾರನು ಬಂದಾಗ ಭೂಮಿಯ ಮೇಲೆ ನಂಬಿಕೆಯನ್ನು ಕಾಣುವನೋ?” (ಲೂಕ 18:8) ಕೊನೆಯ ಭಾಷಣವು ಅಧಿವೇಶನದ ಕಾರ್ಯಕ್ರಮವನ್ನು ಪುನರ್ವಿಮರ್ಶಿಸಿತು ಮತ್ತು ನಾವು ಒಂದು ನಂಬಿಕೆಹೀನ ಮತ್ತು ಪ್ರಾಪಂಚಿಕಭಾವದ ಲೋಕದಲ್ಲಿ ಜೀವಿಸುತ್ತಿರುವುದಾದರೂ ದೇವರ ವಾಕ್ಯದಲ್ಲಿನ ನಂಬಿಕೆಯು ಇನ್ನೂ ಅಸ್ತಿತ್ವದಲ್ಲಿದೆಯೆಂಬುದಕ್ಕೆ ಅದು ಹೇಗೆ ಸಾಕ್ಷ್ಯವನ್ನು ಒದಗಿಸಿತೆಂಬುದನ್ನು ತೋರಿಸಿತು.
ಆದರೂ, ನಾವು ನಮ್ಮನ್ನೇ ವೈಯಕ್ತಿಕವಾಗಿ ಹೀಗೆ ಕೇಳಿಕೊಳ್ಳಸಾಧ್ಯವಿದೆ, ‘ದೇವರಲ್ಲಿ ಮತ್ತು ಆತನ ವಾಕ್ಯದಲ್ಲಿ ಅಚಲವಾದ ನಂಬಿಕೆಯುಳ್ಳವರಲ್ಲಿ ನಾನೊಬ್ಬನೊ?’ “ದೇವರ ವಾಕ್ಯದಲ್ಲಿ ನಂಬಿಕೆ” ಎಂಬ ಜಿಲ್ಲಾ ಅಧಿವೇಶನವು, ನಾವು ಆ ಪ್ರಶ್ನೆಗೆ ಹೌದು ಎಂದು ಉತ್ತರಿಸುವಂತೆ ಸಹಾಯಮಾಡಬೇಕು. ಮತ್ತು ಆತನಲ್ಲಿ ಹಾಗೂ ಆತನ ಪ್ರೇರಿತ ವಾಕ್ಯವಾದ ಬೈಬಲಿನಲ್ಲಿ ನಮ್ಮ ನಂಬಿಕೆಯನ್ನು ಬಲಪಡಿಸಿರುವುದಕ್ಕಾಗಿ ಯೆಹೋವನಿಗೆ ನಾವೆಷ್ಟು ಕೃತಜ್ಞರಾಗಿದ್ದೇವೆ!
[ಪುಟ 24 ರಲ್ಲಿರುವ ಚಿತ್ರ]
ಸಾವಿರಾರು ಪ್ರತಿನಿಧಿಗಳಿಗೆ ಸ್ಥಳವನ್ನು ಒದಗಿಸಲು ಅನೇಕ ಸ್ವಯಂಸೇವಕರು ಹರ್ಷಭಾವದಿಂದ ಕೆಲಸಮಾಡಿದರು
[ಪುಟ 25 ರಲ್ಲಿರುವ ಚಿತ್ರ]
ಆಡಳಿತ ಮಂಡಳಿಯ ಎಲ್. ಎ. ಸ್ವಿಂಗಲ್ ಹೊಸ ಬ್ರೋಷರನ್ನು ಬಿಡುಗಡೆಮಾಡುತ್ತಿರುವುದು
[ಪುಟ 25 ರಲ್ಲಿರುವ ಚಿತ್ರ]
ಇದರಂತಹ ದೊಡ್ಡ ಕ್ರೀಡಾಂಗಣಗಳು ಲೋಕದ ಸುತ್ತಲೂ ಉಪಯೋಗಿಸಲ್ಪಟ್ಟವು
[ಪುಟ 26 ರಲ್ಲಿರುವ ಚಿತ್ರ]
ಯೆಹೋವನಿಗೆ ತಾವು ಮಾಡಿರುವ ಸಮರ್ಪಣೆಯ ಸಂಕೇತವಾಗಿ ಅನೇಕರು ದೀಕ್ಷಾಸ್ನಾನಪಡೆದರು
[ಪುಟ 27 ರಲ್ಲಿರುವ ಚಿತ್ರ]
ಅಧಿವೇಶನಗಾರರು ಹರ್ಷಭರಿತರಾಗಿ ರಾಜ್ಯ ಗೀತಗಳನ್ನು ಹಾಡಿದರು. ಒಳಸೇರಿಕೆ: “ನಿಮ್ಮ ಕಣ್ಣನ್ನು ಸರಳವಾಗಿಟ್ಟುಕೊಳ್ಳಿರಿ” ಎಂಬ ಡ್ರಾಮ