ನೀವು ಒಬ್ಬ ಆಶಾವಾದಿಯೋ ನಿರಾಶಾವಾದಿಯೋ?
“ಅದು ಅತ್ಯುತ್ತಮ ಕಾಲವಾಗಿತ್ತು, ಅದು ಅತಿ ಕೆಟ್ಟ ಕಾಲವಾಗಿತ್ತು, . . . ಅದು ನಿರೀಕ್ಷೆಯ ವಸಂತಋತುವಾಗಿತ್ತು, ಹತಾಶೆಯ ಶಿಶಿರಋತುವಾಗಿತ್ತು, ಸಮಸ್ತವೂ ನಮ್ಮ ಮುಂದಿತ್ತು, ಶೂನ್ಯವೂ ನಮ್ಮ ಮುಂದಿತ್ತು.” ಚಾರ್ಲ್ಸ್ ಡಿಕನ್ಸ್ರವರ ಏ ಟೇಲ್ ಆಫ್ ಟೂ ಸಿಟಿಸ್ (ಎರಡು ನಗರಗಳ ಕಥೆ) ಎಂಬ ಸಾಹಿತ್ಯಿಕ ಕೃತಿಯ ಆರಂಭದ ಪದಗಳು, ಘಟನೆಗಳು ಹೇಗೆ ನಮ್ಮ ಆಲೋಚನಾಶಕ್ತಿ, ನಮ್ಮ ಭಾವನೆಗಳ, ಹಾಗೂ ನಮ್ಮ ಹೊರನೋಟದ ಮೇಲೆ ಪರಿಣಾಮ ಬೀರಬಲ್ಲವು ಎಂಬುದರ ವ್ಯತ್ಯಾಸವನ್ನು ಕೌಶಲಭರಿತವಾಗಿ ತೋರಿಸುತ್ತವೆ.
ಸೂಚಿಸಲ್ಪಟ್ಟ ಎರಡು ನಗರಗಳು, ಫ್ರೆಂಚ್ ಕ್ರಾಂತಿಯ ಗಲಭೆಯ ಸಮಯದಲ್ಲಿನ ಲಂಡನ್ ಹಾಗೂ ಪ್ಯಾರಿಸ್ ನಗರಗಳಾಗಿದ್ದವು. ದಬ್ಬಾಳಿಕೆಗೊಳಗಾಗಿದ್ದ 18ನೇ ಶತಮಾನದ ನಾಗರಿಕರಿಗಾದರೋ, ಆ ಕ್ರಾಂತಿಯ ಮಾನವ ಹಕ್ಕುಗಳ ಘೋಷಣೆಯು ನಿಜವಾಗಿಯೂ, “ನಿರೀಕ್ಷೆಯ ವಸಂತಋತು”ವಾಗಿತ್ತು. ಆದರೆ ಹಿಂದಿನ ಸರಕಾರದ ಆಡಳಿತದಲ್ಲಿ ಅಥವಾ ಪದಚ್ಯುತಿಗೊಳ್ಳುತ್ತಿದ್ದ ರಾಜಕೀಯ ವ್ಯವಸ್ಥೆಯಲ್ಲಿದ್ದವರಿಗಾದರೋ, ಇದು ಮೃತ್ಯು ಹಾಗೂ ನಾಶನಕ್ಕೆ ನಡೆಸುವ “ಹತಾಶೆಯ ಶಿಶಿರಋತು”ವಾಗಿತ್ತು.
ಆಶಾವಾದವೋ ನಿರಾಶಾವಾದವೋ? ಎಲ್ಲವೂ ನೀವು ವಿವಾದಾಂಶದ ಯಾವ ಪಕ್ಕದಲ್ಲಿದ್ದಿರೋ ಅದರ ಮೇಲೆ ಅವಲಂಬಿತವಾಗಿತ್ತು. ಮತ್ತು ಅದು ಇನ್ನೂ ಅವಲಂಬಿತವಾಗಿದೆ.
ಸ್ವಪರಿಶೀಲನೆಯ ಒಂದು ಸಮಯ
ನೀವು ಒಬ್ಬ ಆಶಾವಾದಿಯಾಗಿದ್ದೀರೋ? ಅತ್ಯುತ್ತಮವಾದುದನ್ನು ಸದಾ ಮುಂಭಾವಿಸುತ್ತಾ, ಜೀವಿತದ ಗೆಲುವಿನ ಮುಖವನ್ನು ನೀವು ನೋಡುತ್ತೀರೋ? ಅಥವಾ ಉತ್ತಮವಾದುದಕ್ಕೆ ಆಶಿಸುತ್ತಿರುವುದಾದರೂ ಅದೇ ಸಮಯದಲ್ಲಿ ಕೆಟ್ಟ ಪರಿಣಾಮವನ್ನು ಮುನ್ನೋಡುತ್ತಾ, ನಿಮ್ಮ ನೋಟಗಳ ಕಡೆಗೆ ಒಂದು ನಕಾರಾತ್ಮಕ ದೃಷ್ಟಿಕೋನವನ್ನು ತೆಗೆದುಕೊಳ್ಳುತ್ತಾ, ನಿರಾಶಾವಾದಿಗಳಾಗಿರುವ ಒಲವುಳ್ಳವರಾಗಿದ್ದೀರೋ?
ಅರವತ್ತು ವರ್ಷಗಳ ಹಿಂದೆ ಅಮೆರಿಕದ ಕಾದಂಬರಿಕಾರ ಜೇಮ್ಸ್ ಬ್ರಾಂಚ್ ಕ್ಯಾಬಲ್, ಎರಡು ಪರಸ್ಪರ ವಿರುದ್ಧ ತತ್ತ್ವಗಳನ್ನು ಈ ರೀತಿಯಲ್ಲಿ ಸಾರಾಂಶಿಸಿದನು: “ಆಶಾವಾದಿಯು, ನಾವು ಅತ್ಯುತ್ತಮವಾದ ಮಾನವ ಸಮಾಜದಲ್ಲಿ ಜೀವಿಸುತ್ತಿದ್ದೇವೆ ಎಂದು ಘೋಷಿಸುತ್ತಾನೆ; ಹಾಗೂ ನಿರಾಶಾವಾದಿಯು ಇದು ಸತ್ಯವಾಗಿದೆ ಎಂದು ಭಯಪಡುತ್ತಾನೆ.” ಈ ದೃಷ್ಟಿಕೋನವು ನಂಬಲಸಾಧ್ಯವಾದ ವಿಷಯವಾಗಿದೆ ಎಂದು ನೀವು ನೆನಸುವುದಾದರೆ, ಕೆಳಗೆ ಕೊಡಲ್ಪಟ್ಟಿರುವ ಇಂದಿನ ಲೋಕದ ಕೇವಲ ಮೂರು ಅಂಶಗಳ ಸಾಧಕಬಾಧಕಗಳನ್ನು ಪರಿಶೀಲಿಸಿರಿ. ಅನಂತರ, ನಿಮ್ಮ ಪ್ರತಿಕ್ರಿಯೆಗಳನ್ನು ವಿಶ್ಲೇಷಿಸಿ, ನಿಮ್ಮನ್ನೇ ಹೀಗೆ ಕೇಳಿಕೊಳ್ಳಿರಿ, ‘ನಾನು ಒಬ್ಬ ಆಶಾವಾದಿಯೋ ನಿರಾಶಾವಾದಿಯೋ?’
ನಿರಂತರ ಶಾಂತಿ: ನೀವು ಲೋಕದಲ್ಲಿ ಗಲಭೆಗೊಳಗಾಗಿರುವ ಎಷ್ಟು ಸ್ಥಳಗಳನ್ನು ಹೆಸರಿಸಬಲ್ಲಿರಿ? ಐರ್ಲಂಡ್, ಹಿಂದಿನ ಯುಗೊಸ್ಲಾವಿಯ, ಮಧ್ಯ ಪೂರ್ವ ದೇಶಗಳು, ಬುರುಂಡಿ, ರುಆಂಡ—ಇವುಗಳು ಬೇಗನೆ ನೆನಪಿಗೆ ಬರುವಂಥ ಸ್ಥಳಗಳಾಗಿವೆ. ಶಾಶ್ವತ, ಭೌಗೋಲಿಕ ಶಾಂತಿಯನ್ನು ಖಾತ್ರಿಪಡಿಸಲಿಕ್ಕಾಗಿ ಇವುಗಳು ಹಾಗೂ ಇತರ ಹೋರಾಟಗಳು ಎಂದಾದರೂ ಬಗೆಹರಿಸಲ್ಪಡುವವೋ? ಲೋಕವು ಶಾಂತಿಯ ಕಡೆಗೆ ಸಾಗುತ್ತಿದೆಯೋ?
ಆರ್ಥಿಕ ಸ್ಥಿರತೆ: ಐರೋಪ್ಯ ಒಕ್ಕೂಟ ದೇಶಗಳು, 1999ರಷ್ಟಕ್ಕೆ ಹಣಕಾಸಿನ ಒಕ್ಕೂಟಕ್ಕಾಗಿ ಆಶಿಸುತ್ತಾ, ಮಿತಿಮೀರಿದ ಹಣದುಬ್ಬರ ಹಾಗೂ ಜನತೆಯಿಂದ ಸಾಲತೆಗೆದುಕೊಳ್ಳುವುದರಲ್ಲಿ ಇರುವ ಸಮಸ್ಯೆಗಳೊಂದಿಗೆ ವ್ಯವಹರಿಸಲು ಗಂಭೀರತರನಾದ ಹೆಜ್ಜೆಗಳನ್ನು ತೆಗೆದುಕೊಳ್ಳುತ್ತಿವೆ. ಬೇರೆ ಕಡೆಗಳಲ್ಲೂ, ಭ್ರಷ್ಟತೆಯು, ಅಮೆರಿಕದ ಹಾಗೂ ಆಫ್ರಿಕದ ಅನೇಕ ರಾಷ್ಟ್ರಗಳ ಆರ್ಥಿಕ ಸ್ವರೂಪವನ್ನು ಸವೆಯಿಸುತ್ತಿದೆ. ಇಲ್ಲಿ ಮಿತಿಮೀರಿದ ಹಣದುಬ್ಬರವು ಹೆಚ್ಚುಕಡಿಮೆ ಸಹಿಸಲಸಾಧ್ಯವಾದ ಹೊರೆಯನ್ನು ಹಾಕುತ್ತದೆ ಹಾಗೂ ಕುಲಸಂಬಂಧವಾದ ಸಮಸ್ಯೆಗಳು ಇನ್ನೂ ಜನರನ್ನು ಇಬ್ಭಾಗಗೊಳಿಸುತ್ತಿವೆ. ಲೋಕದ ಆರ್ಥಿಕ ಸ್ಥಿರತೆಯು ತೀರ ಹತ್ತಿರದಲ್ಲಿದೆಯೋ?
ನಿರುದ್ಯೋಗ: 1997ರ ರಾಷ್ಟ್ರೀಯ ಚುನಾವಣೆಯಲ್ಲಿ, ಎಲ್ಲ ರಾಜಕೀಯ ಪಕ್ಷಗಳಿಗೆ, ಅವರ ಕಾರ್ಯಸೂಚಿಗಳಲ್ಲಿ ಪೂರ್ಣ ಉದ್ಯೋಗಕ್ಕೆ ಆದ್ಯತೆಯನ್ನು ಕೊಡುವಂತೆ ಪ್ರೇರೇಪಿಸಲಿಕ್ಕಾಗಿ ಬ್ರಿಟಿಷ್ ಚರ್ಚುಗಳು ಒಟ್ಟುಗೂಡಿದವು. ಆದರೆ ಲೋಕದ ಎಲ್ಲ ಕಾರ್ಮಿಕ ವರ್ಗದಲ್ಲಿ ಹೆಚ್ಚುಕಡಿಮೆ 30 ಪ್ರತಿಶತ ಕಾರ್ಮಿಕರಿಗೆ ಕೆಲಸವಿಲ್ಲ ಅಥವಾ ಸಾಕಷ್ಟು ಕೆಲಸವಿಲ್ಲದಿರುವಾಗ, ಶಾಶ್ವತವಾದ, ಪೂರ್ಣ ಉದ್ಯೋಗವು—ವಿಶೇಷವಾಗಿ ಯುವಜನರಿಗೆ—ಇರಸಾಧ್ಯವೋ?
ನಿರಾಶಾವಾದಿ ಅನಿಸಿಕೆಯಾಗುವುದು ಎಷ್ಟು ಸುಲಭ! ಆದರೂ ಒಂದು ಉಜ್ವಲವಾದ ಮುಖವಿದೆ ಮತ್ತು ಒಂದು ಆಶಾವಾದಿ ಹೊರನೋಟವನ್ನು ವಿಕಸಿಸಿಕೊಳ್ಳುವುದು ಹೇಗೆ ಸಾಧ್ಯವೆಂಬುದನ್ನು ಪರಿಗಣಿಸುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ.
[ಪುಟ 3 ರಲ್ಲಿರುವ ಚಿತ್ರ]
ಫ್ರೆಂಚ್ ಕ್ರಾಂತಿ
[ಕೃಪೆ]
ಲೋಕದ ಚಿತ್ರಾತ್ಮಕ ಇತಿಹಾಸ ಎಂಬ ಇಂಗ್ಲಿಷ್ ಪುಸ್ತಕದಿಂದ