ಒಂದು ಬಲವಾದ ಕ್ರೈಸ್ತ ಪರಂಪರೆಗಾಗಿ ಆಭಾರಿ
ಗ್ವೆನ್ ಗೂಚ್ರವರು ಹೇಳಿದಂತೆ
ಶಾಲೆಯಲ್ಲಿದ್ದಾಗ ನಾನು, ‘ತನ್ನ ಮಹಿಮೆಯಲ್ಲಿ ಆಸನಾರೂಢನಾಗಿರುವ ಮಹಾ ಯೆಹೋವನು’ ಎಂಬ ಪದಗಳೊಂದಿಗೆ ಸ್ತೋತ್ರಗೀತೆಯನ್ನು ಹಾಡುತ್ತಿದ್ದೆ. ‘ಈ ಯೆಹೋವನು ಯಾರು?’ ಎಂದು ನಾನು ಅನೇಕವೇಳೆ ಕುತೂಹಲಪಡುತ್ತಿದ್ದೆ.
ನನ್ನ ಅಜ್ಜಅಜ್ಜಿಯಂದಿರು ದೇವಭಯವುಳ್ಳವರಾಗಿದ್ದರು. ಈ ಶತಮಾನದ ಆದಿಭಾಗದಲ್ಲಿ ಅವರು ಬೈಬಲ್ ವಿದ್ಯಾರ್ಥಿಗಳೊಂದಿಗೆ—ಆಗ ಯೆಹೋವನ ಸಾಕ್ಷಿಗಳು ಹೀಗೆ ಜ್ಞಾತರಾಗಿದ್ದರು—ಕೂಡಿಕೊಂಡಿದ್ದರು. ನನ್ನ ತಂದೆಯವರು ಒಬ್ಬ ಯಶಸ್ವಿ ವ್ಯಾಪಾರಿಯಾಗಿದ್ದರಾದರೂ, ತಮಗೆ ಒಪ್ಪಿಸಲ್ಪಟ್ಟಿದ್ದ ಕ್ರೈಸ್ತ ಪರಂಪರೆಯನ್ನು ಅವರು ಆರಂಭದಲ್ಲಿ ತಮ್ಮ ಮೂವರು ಮಕ್ಕಳಿಗೆ ದಾಟಿಸಲಿಲ್ಲ.
ನನ್ನ ಅಣ್ಣ ಡಗ್ಲಸ್, ನನ್ನ ತಂಗಿ ಆ್ಯನ್, ಮತ್ತು ನನಗೆ ತಂದೆಯವರು ಆತನ ಕಾರ್ಯಗಳು ಮತ್ತು ದೇವರು ಯಾರು? (ಇಂಗ್ಲಿಷ್) ಎಂಬ ಶಿರೋನಾಮವುಳ್ಳ ಪುಸ್ತಿಕೆಗಳನ್ನು ಕೊಟ್ಟಾಗಲೇ ನನಗೆ ಯೆಹೋವ ಎಂಬುದು ನಿಜ ದೇವರ ಹೆಸರಾಗಿದೆ ಎಂದು ತಿಳಿದುಬಂತು. (ಕೀರ್ತನೆ 83:18) ನಾನು ರೋಮಾಂಚಿತಳಾದೆ! ಆದರೆ ತಂದೆಯ ಆಸಕ್ತಿಯನ್ನು ಪುನಃ ಹೊತ್ತಿಸಿದಂತಹ ಸಂಗತಿ ಯಾವುದಾಗಿತ್ತು?
1938ರಲ್ಲಿ, ರಾಷ್ಟ್ರಗಳು ಯುದ್ಧಕ್ಕಾಗಿ ಸಿದ್ಧರಾಗುತ್ತಿರುವುದನ್ನು ತಂದೆಯವರು ನೋಡಿದಾಗ, ಲೋಕದ ಸಮಸ್ಯೆಗಳನ್ನು ಬಗೆಹರಿಸಲು ಮಾನವ ಪ್ರಯತ್ನಗಳಿಗಿಂತ ಹೆಚ್ಚಿನದ್ದು ಬೇಕಾಗುವುದೆಂಬುದನ್ನು ಅವರು ಗ್ರಹಿಸಿಕೊಂಡರು. ಅಜ್ಜಿ ಅವರಿಗೆ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟ ಶತ್ರುಗಳು (ಇಂಗ್ಲಿಷ್) ಎಂಬ ಪುಸ್ತಕವನ್ನು ಕೊಟ್ಟರು. ಅದನ್ನು ಓದುವ ಮೂಲಕ, ಮಾನವಕುಲದ ನಿಜ ಶತ್ರು ಪಿಶಾಚನಾದ ಸೈತಾನನಾಗಿದ್ದಾನೆ ಮತ್ತು ಕೇವಲ ದೇವರ ರಾಜ್ಯವು ಲೋಕ ಶಾಂತಿಯನ್ನು ತರಸಾಧ್ಯವಿದೆಯೆಂಬುದನ್ನು ಅವರು ತಿಳಿದುಕೊಂಡರು.a—ದಾನಿಯೇಲ 2:44; 2 ಕೊರಿಂಥ 4:4.
ಯುದ್ಧವು ಸಮೀಪಿಸಿದಂತೆ, ನಮ್ಮ ಕುಟುಂಬವು, ಉತ್ತರ ಲಂಡನ್ನ ವುಡ್ ಗ್ರೀನ್ನಲ್ಲಿ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದಲ್ಲಿದ್ದ ಕೂಟಗಳಿಗೆ ಹಾಜರಾಗಲಾರಂಭಿಸಿತು. ಜೂನ್ 1939ರಲ್ಲಿ ನಾವು, ಆಗ ವಾಚ್ ಟವರ್ ಸೊಸೈಟಿಯ ಅಧ್ಯಕ್ಷರಾಗಿದ್ದ ಜೋಸೆಫ್ ಎಫ್. ರದರ್ಫರ್ಡ್ರವರು ನೀಡಿದಂತಹ “ಸರಕಾರ ಮತ್ತು ಶಾಂತಿ” ಎಂಬ ಬಹಿರಂಗ ಭಾಷಣವನ್ನು ಕೇಳಿಸಿಕೊಳ್ಳಲು ಹತ್ತಿರದಲ್ಲೇ ಇದ್ದ ಆಲೆಕ್ಸಾಂಡ್ರ ಪ್ಯಾಲೆಸ್ಗೆ ಹೋದೆವು. ನ್ಯೂ ಯಾರ್ಕ್ ನಗರದ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ ಕೊಡಲ್ಪಟ್ಟ ರದರ್ಫರ್ಡ್ರ ಭಾಷಣವು, ಲಂಡನ್ ಮತ್ತು ಇತರ ಪ್ರಮುಖ ನಗರಗಳಿಗೆ ರೇಡಿಯೊ ಮೂಲಕ ಪ್ರಸಾರಮಾಡಲ್ಪಟ್ಟಿತು. ನಾವು ಭಾಷಣವನ್ನು ಎಷ್ಟು ಸ್ಪಷ್ಟವಾಗಿ ಕೇಳಿಸಿಕೊಳ್ಳಸಾಧ್ಯವಿತ್ತೆಂದರೆ, ನ್ಯೂ ಯಾರ್ಕ್ನಲ್ಲಿ ಒಂದು ಪುಂಡರ ದೊಂಬಿ ಗಲಭೆಯನ್ನುಂಟುಮಾಡಿದಾಗ, ಅದು ನಮ್ಮ ಸಭಾಂಗಣದಲ್ಲಿಯೇ ಆಗುತ್ತಿದೆಯೊ ಎಂದು ನೋಡಲಿಕ್ಕಾಗಿ ನಾನು ಸುತ್ತಲೂ ಕಣ್ಣಾಡಿಸಿದೆ!
ಬೈಬಲ್ ಸತ್ಯಕ್ಕಾಗಿ ತಂದೆಯವರ ಹುರುಪು
ಪ್ರತಿ ಶನಿವಾರ ಸಂಜೆ, ನಮ್ಮ ಇಡೀ ಕುಟುಂಬವು ಬೈಬಲ್ ಅಭ್ಯಾಸವೊಂದರಲ್ಲಿ ಜೊತೆಯಾಗಿ ಪಾಲ್ಗೊಳ್ಳಬೇಕೆಂದು ತಂದೆಯವರು ಪಟ್ಟುಹಿಡಿದರು. ನಮ್ಮ ಅಭ್ಯಾಸವು, ಮುಂದಿನ ದಿನದಂದು ಚರ್ಚೆಗಾಗಿ ನಿಗದಿಪಡಿಸಲ್ಪಟ್ಟ ದ ವಾಚ್ಟವರ್ ಪತ್ರಿಕೆಯಲ್ಲಿನ ಬೈಬಲ್ ವಿಷಯದ ಮೇಲೆ ಕೇಂದ್ರೀಕರಿಸಿತು. 1939ರ ಮೇ 1ರ ದ ವಾಚ್ಟವರ್ ಪತ್ರಿಕೆಯಲ್ಲಿ ಚರ್ಚಿಸಲ್ಪಟ್ಟ ಯೆಹೋಶುವನ ಮತ್ತು ಆಯಿ ಪಟ್ಟಣದ ಮುತ್ತಿಗೆಯ ವೃತ್ತಾಂತವು, ಈ ದಿನದ ವರೆಗೂ ನನ್ನ ಮನಸ್ಸಿನಲ್ಲಿ ಕಣ್ಣಿಗೆ ಕಟ್ಟುವಂಥ ರೀತಿಯಲ್ಲಿದ್ದು, ಈ ಅಭ್ಯಾಸಗಳು ಬೀರಿದಂತಹ ಪ್ರಭಾವವನ್ನು ದೃಷ್ಟಾಂತಿಸುತ್ತದೆ. ಆ ವೃತ್ತಾಂತದಿಂದ ನನ್ನ ಆಸಕ್ತಿಯು ಎಷ್ಟು ಕೆರಳಿಸಲ್ಪಟ್ಟಿತೆಂದರೆ, ನಾನು ನನ್ನ ಸ್ವಂತ ಬೈಬಲಿನಲ್ಲಿ ಎಲ್ಲ ರೆಫರೆನ್ಸ್ಗಳನ್ನು ಪರಿಶೀಲಿಸಿ ನೋಡಿದೆ. ಅಂತಹ ಸಂಶೋಧನೆಯು ಸ್ತಬ್ಧಗೊಳಿಸುವಂಥದ್ದಾಗಿರುವುದನ್ನು ನಾನು ಕಂಡುಕೊಂಡೆ ಮತ್ತು ಈಗಲೂ ನನಗೆ ಹಾಗೆಯೇ ಅನಿಸುತ್ತದೆ.
ನಾವೇನನ್ನು ಕಲಿಯುತ್ತಿದ್ದೆವೊ ಅದನ್ನು ಇತರರೊಂದಿಗೆ ಹಂಚಿಕೊಳ್ಳುತ್ತಿರುವುದು, ಬೈಬಲ್ ಬೋಧನೆಗಳನ್ನು ನನ್ನ ಹೃದಯದಲ್ಲಿ ಬೇರೂರುವಂತೆ ಮಾಡಿತು. ಒಂದು ದಿನ ತಂದೆಯವರು ನನಗೆ ರೆಕಾರ್ಡುಮಾಡಲ್ಪಟ್ಟಿದ್ದ ಬೈಬಲ್ ಪ್ರಸಂಗವುಳ್ಳ ಒಂದು ಫೋನೊಗ್ರಾಫನ್ನು, ಬೈಬಲ್ ಅಭ್ಯಾಸಕ್ಕಾಗಿ ನಾವು ಉಪಯೋಗಿಸುತ್ತಿದ್ದ ಒಂದು ಪುಸ್ತಿಕೆಯನ್ನು ಮತ್ತು ಒಬ್ಬ ವೃದ್ಧ ಮಹಿಳೆಯ ವಿಳಾಸವನ್ನು ನನಗೆ ಕೊಟ್ಟರು. ಅನಂತರ ಅವರು ನನಗೆ ಆಕೆಯನ್ನು ಭೇಟಿಮಾಡುವಂತೆ ಹೇಳಿದರು.
“ನಾನೇನು ಹೇಳುವೆ, ಮತ್ತು ಏನು ಮಾಡುವೆ?” ಎಂದು ನಾನು ಕೇಳಿದೆ.
“ಅದೆಲ್ಲವೂ ಅದರಲ್ಲಿದೆ. ಕೇವಲ ರೆಕಾರ್ಡನ್ನು ಹಾಕು, ಪ್ರಶ್ನೆಗಳನ್ನು ಓದು, ಮನೆಯಾಕೆ ಉತ್ತರಗಳನ್ನು ಓದುವಂತೆ ಮಾಡು, ಮತ್ತು ಅನಂತರ ಶಾಸ್ತ್ರವಚನಗಳನ್ನು ಓದು,” ಎಂದು ತಂದೆಯವರು ಉತ್ತರಿಸಿದರು.
ನಾನು ಅವರು ಹೇಳಿದಂತೆ ಮಾಡಿದೆ, ಮತ್ತು ಈ ರೀತಿಯಲ್ಲಿ ನಾನು ಒಂದು ಬೈಬಲ್ ಅಭ್ಯಾಸವನ್ನು ನಡಿಸಲು ಕಲಿತುಕೊಂಡೆ. ನನ್ನ ಶುಶ್ರೂಷೆಯಲ್ಲಿ ಈ ರೀತಿಯಲ್ಲಿ ಶಾಸ್ತ್ರವಚನಗಳನ್ನು ಉಪಯೋಗಿಸುವ ಮೂಲಕ, ನಾನು ಅವುಗಳನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳಲಾರಂಭಿಸಿದೆ.
ಯುದ್ಧ ವರ್ಷಗಳ ಪಂಥಾಹ್ವಾನ
1939ರಲ್ಲಿ IIನೆಯ ವಿಶ್ವ ಯುದ್ಧವು ಆರಂಭವಾಯಿತು, ಮತ್ತು ಮುಂದಿನ ವರ್ಷ ನಾನು ಯೆಹೋವನನ್ನು ಸೇವಿಸುವ ನನ್ನ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನವನ್ನು ಪಡೆದುಕೊಂಡೆ. ನಾನು ಕೇವಲ 13 ವರ್ಷ ಪ್ರಾಯದವಳಾಗಿದ್ದೆ. ಆಗ ನಾನು, ಒಬ್ಬ ಪಯನೀಯರಳು—ಪೂರ್ಣ ಸಮಯದ ಶುಶ್ರೂಷಕರನ್ನು ಹಾಗೆ ಕರೆಯಲಾಗುತ್ತದೆ—ಆಗುವಂತೆ ನಿರ್ಧರಿಸಿದೆ. ನಾನು 1941ರಲ್ಲಿ ಶಾಲೆಯನ್ನು ಬಿಟ್ಟು, ಲೆಸ್ಟರ್ ಅಧಿವೇಶನದ ಸಮಯದಲ್ಲಿ, ಪೂರ್ಣ ಸಮಯದ ಸಾರುವ ಚಟುವಟಿಕೆಯಲ್ಲಿ ಡಗ್ಲಸ್ನೊಂದಿಗೆ ಜೊತೆಗೂಡಿದೆ.
ಅದರ ಮುಂದಿನ ವರ್ಷ, ತಂದೆಯವರು ಯುದ್ಧದ ಕಡೆಗಿನ ತಮ್ಮ ಶುದ್ಧಾಂತಃಕರಣದ ಆಕ್ಷೇಪಣೆಗಾಗಿ ಸೆರೆಮನೆಗೆ ಹಾಕಲ್ಪಟ್ಟರು. ನಾವು ಮಕ್ಕಳು ನಮ್ಮ ತಾಯಿಯವರಿಗೆ ಸಹಾಯಮಾಡಲು ಒಟ್ಟುಸೇರಿದೆವು. ಯುದ್ಧದ ಆ ಕಷ್ಟದ ಸಮಯದಲ್ಲಿ ನಮ್ಮ ಮನೆಯ ಉಸ್ತುವಾರಿ ವಹಿಸಲಿಕ್ಕಾಗಿ ಅವರಿಗೆ ಸಹಾಯ ಮಾಡಿದೆವು. ತದನಂತರ, ತಂದೆಯವರು ಸೆರೆಮನೆಯಿಂದ ಬಿಡುಗಡೆ ಮಾಡಲ್ಪಟ್ಟ ಕೂಡಲೇ, ಡಗ್ಲಸ್ನನ್ನು ಮಿಲಿಟರಿ ಸೇವೆಗಾಗಿ ಕರೆನೀಡಲಾಯಿತು. ಒಂದು ಸ್ಥಳಿಕ ವಾರ್ತಾಪತ್ರದ ಶಿರೋನಾಮವು ಹೀಗೆ ತಿಳಿಸಿತು, “ತಂದೆಯಂತೆ ಮಗನು ಸೆರೆಮನೆಯನ್ನು ಆಯ್ದುಕೊಂಡ ಕಾರಣ.” ನಿಜ ಕ್ರೈಸ್ತರು ತಮ್ಮ ಜೊತೆ ಮಾನವರನ್ನು ಕೊಲ್ಲುವುದರಲ್ಲಿ ಭಾಗವಹಿಸದಿರುವ ಕಾರಣವನ್ನು ಒದಗಿಸಲು ಒಂದು ಅವಕಾಶವು ಒದಗಿಸಲ್ಪಟ್ಟಿದ್ದ ಕಾರಣದಿಂದ ಒಂದು ಒಳ್ಳೆಯ ಸಾಕ್ಷಿಯು ಫಲಿಸಿತು.—ಯೋಹಾನ 13:35; 1 ಯೋಹಾನ 3:10-12.
ಆ ಯುದ್ಧದ ವರ್ಷಗಳಲ್ಲಿ, ಪೂರ್ಣ ಸಮಯದ ಶುಶ್ರೂಷೆಯಲ್ಲಿದ್ದ ಅನೇಕ ಸಾಕ್ಷಿಗಳು ನಮ್ಮ ಮನೆಯಲ್ಲಿ ಕ್ರಮವಾದ ಅತಿಥಿಗಳಾಗಿದ್ದರು. ಮತ್ತು ಅವರ ಭಕ್ತಿವೃದ್ಧಿಪಡಿಸುವ ಬೈಬಲ್ ಆಧಾರಿತ ಚರ್ಚೆಗಳು ಒಂದು ಶಾಶ್ವತ ಪ್ರಭಾವವನ್ನು ಬಿಟ್ಟುಹೋದವು. ಆ ನಂಬಿಗಸ್ತ ಕ್ರೈಸ್ತ ಸಹೋದರರಲ್ಲಿ, ಈಗ ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಯ ಸದಸ್ಯರಾಗಿರುವ ಜಾನ್ ಬಾರ್ ಮತ್ತು ಆಲ್ಬರ್ಟ್ ಶ್ರೋಡರ್ರವರು ಇದ್ದರು. ನನ್ನ ಹೆತ್ತವರು ನಿಜವಾಗಿಯೂ ಅತಿಥಿಸತ್ಕಾರಭಾವದವರಾಗಿದ್ದರು, ಮತ್ತು ನಾವು ಕೂಡ ಹಾಗೆ ಇರುವಂತೆ ನಮಗೆ ಕಲಿಸಿದರು.—ಇಬ್ರಿಯ 13:2.
ಉತ್ತರವನ್ನು ಒದಗಿಸಲು ಸಿದ್ಧಳು
ನಾನು ಪಯನೀಯರ್ ಸೇವೆಯನ್ನು ಆರಂಭಿಸಿದ ಸ್ವಲ್ಪ ಸಮಯದೊಳಗೆ, ನಾನು ಮನೆ ಮನೆಯ ಶುಶ್ರೂಷೆಯಲ್ಲಿ ಹಿಲ್ಡಳನ್ನು ಭೇಟಿಯಾದೆ. ಅವಳು ಕೋಪದಿಂದ ಹೇಳಿದ್ದು: “ನನ್ನ ಗಂಡನು ನಿಮ್ಮಂತಹ ಜನರಿಗಾಗಿ ಅಲ್ಲಿ ಯುದ್ಧದಲ್ಲಿ ಹೋರಾಡುತ್ತಾ ಇದ್ದಾನೆ! ಯುದ್ಧಕ್ಕಾಗಿ ನೀವು ಯಾವುದೇ ಕೆಲಸವನ್ನು ಮಾಡುವುದಿಲ್ಲವೇಕೆ?”
“ನಾನೇನನ್ನು ಮಾಡುತ್ತಿದ್ದೇನೊ ಅದರ ಕುರಿತಾಗಿ ನಿಮಗೆಷ್ಟು ತಿಳಿದಿದೆ? ನಾನು ನಿಮ್ಮ ಬಳಿ ಏಕೆ ಬಂದಿದ್ದೇನೆಂದು ನಿಮಗೆ ತಿಳಿದಿದೆಯೊ?” ಎಂದು ನಾನು ಕೇಳಿದೆ.
“ಒಳ್ಳೇದು, ನೀನು ಒಳಗೆ ಬಂದು ನನಗೆ ಹೇಳು,” ಎಂದು ಅವಳು ಉತ್ತರಿಸಿದಳು.
ಹೆಚ್ಚಾಗಿ ದೇವರ ಹೆಸರಿನಲ್ಲಿ ನಡಿಸಲ್ಪಡುತ್ತಿದ್ದ ಘೋರ ಕೃತ್ಯಗಳಿಂದಾಗಿ ನರಳುತ್ತಿರುವ ಜನರಿಗಾಗಿ ನಾವು ನಿಜವಾದ ನಿರೀಕ್ಷೆಯನ್ನು ಒದಗಿಸುತ್ತಿದ್ದೇವೆಂದು ನಾನು ವಿವರಿಸಲು ಶಕ್ತಳಾದೆ. ಹಿಲ್ಡ ಗಣ್ಯತಾಭಾವದಿಂದ ಕಿವಿಗೊಟ್ಟಳು ಮತ್ತು ಅವಳು ನನ್ನ ಪ್ರಥಮ ಕ್ರಮವಾದ ಬೈಬಲ್ ವಿದ್ಯಾರ್ಥಿಯಾದಳು. ಅವಳು ಈಗ 55ಕ್ಕಿಂತಲೂ ಹೆಚ್ಚು ವರ್ಷಗಳಿಂದ ಒಬ್ಬ ಸಕ್ರಿಯ ಸಾಕ್ಷಿಯಾಗಿರುತ್ತಾಳೆ.
ಯುದ್ಧದ ಅಂತ್ಯದ ಸಮಯದಲ್ಲಿ, ನಾನು ನೈರುತ್ಯ ಇಂಗ್ಲೆಂಡಿನಲ್ಲಿ, ಡಾರ್ಚೆಸ್ಟರ್ ಎಂಬ ಒಂದು ಪಟ್ಟಣದಲ್ಲಿ ಒಂದು ಹೊಸ ಪಯನೀಯರ್ ನೇಮಕವನ್ನು ಪಡೆದುಕೊಂಡೆ. ನಾನು ಮನೆಯಿಂದ ದೂರ ವಾಸಿಸುತ್ತಿದ್ದುದು ಇದೇ ಪ್ರಥಮ ಬಾರಿಯಾಗಿತ್ತು. ನಮ್ಮ ಚಿಕ್ಕ ಸಭೆಯು, “ಹಳೆಯ ಚಹ ಮನೆ”ಯೆಂದು ಕರೆಯಲ್ಪಟ್ಟ 16ನೆಯ ಶತಮಾನದ ಕಟ್ಟಡವಾದ ಒಂದು ರೆಸ್ಟೊರಾಂಟ್ನಲ್ಲಿ ಒಟ್ಟುಸೇರುತ್ತಿತ್ತು. ನಮ್ಮ ಪ್ರತಿಯೊಂದು ಕೂಟಕ್ಕಾಗಿ ನಾವು ಮೇಜುಗಳನ್ನು ಮತ್ತು ಕುರ್ಚಿಗಳನ್ನು ಪುನಃ ಓರಣಗೊಳಿಸಬೇಕಾಗುತ್ತಿತ್ತು. ನನಗೆ ಅಭ್ಯಾಸವಾಗಿಹೋಗಿದ್ದ ರಾಜ್ಯ ಸಭಾಗೃಹಕ್ಕಿಂತ ಅದು ತೀರ ಭಿನ್ನವಾಗಿತ್ತು. ಹಾಗಿದ್ದರೂ, ಅದೇ ರೀತಿಯ ಆತ್ಮಿಕ ಆಹಾರ ಮತ್ತು ಕ್ರೈಸ್ತ ಸಹೋದರ ಸಹೋದರಿಯರ ಪ್ರೀತಿಪರ ಸಹವಾಸವು ಇಲ್ಲಿರುತ್ತಿತ್ತು.
ಆ ಸಮಯದಷ್ಟಕ್ಕೆ ನನ್ನ ಹೆತ್ತವರು ಲಂಡನ್ನ ದಕ್ಷಿಣಕ್ಕೆ, ಟನ್ಬ್ರಿಡ್ಜ್ ವೆಲ್ಸ್ಗೆ ಸ್ಥಳಾಂತರಿಸಿದರು. ತಂದೆಯವರು, ಆ್ಯನ್ ಮತ್ತು ನಾನು ಜೊತೆಯಾಗಿ ಪಯನೀಯರ್ ಸೇವೆಯನ್ನು ಮಾಡಲು ಸಾಧ್ಯವಾಗುವಂತೆ ನಾನು ಮನೆಗೆ ಹಿಂದಿರುಗಿದೆ. ನಮ್ಮ ಸಭೆಯು ಬೇಗನೆ, 12ರಿಂದ 70 ಮಂದಿ ಸಾಕ್ಷಿಗಳ ವರೆಗೆ ಬೆಳೆಯಿತು. ಆದುದರಿಂದ ನಮ್ಮ ಕುಟುಂಬವು, ರಾಜ್ಯ ಘೋಷಕರ ಅಗತ್ಯವು ಇನ್ನೂ ಹೆಚ್ಚಾಗಿರುವ ದಕ್ಷಿಣ ಕರಾವಳಿಯಲ್ಲಿನ ಬ್ರೈಟನ್ಗೆ ಸ್ಥಳಾಂತರಿಸಲು ಕೇಳಿಕೊಳ್ಳಲ್ಪಟ್ಟಿತು. ನಮ್ಮ ಪಯನೀಯರ್ ಕುಟುಂಬದೊಂದಿಗೆ ಸಾರುವುದರಲ್ಲಿ ಅನೇಕರು ಹುರುಪಿನಿಂದ ಜೊತೆಗೂಡಿದರು, ಮತ್ತು ಯೆಹೋವನು ನಮ್ಮ ಕೆಲಸವನ್ನು ಹೇರಳವಾಗಿ ಆಶೀರ್ವದಿಸುತ್ತಿರುವುದನ್ನು ನಾವು ಕಂಡೆವು. ಆ ಒಂದು ಸಭೆಯು ಬೇಗನೆ ಮೂರು ಸಭೆಗಳಾಯಿತು!
ಒಂದು ಅನಿರೀಕ್ಷಿತ ಆಮಂತ್ರಣ
1950ರ ಬೇಸಗೆಕಾಲದಲ್ಲಿ ನಮ್ಮ ಕುಟುಂಬವು, ನ್ಯೂ ಯಾರ್ಕ್ ನಗರದ ಯಾಂಕಿ ಸ್ಟೇಡಿಯಮ್ನಲ್ಲಿ ನಡೆದ ದೇವಪ್ರಭುತ್ವದ ಅಭಿವೃದ್ಧಿ ಅಂತರಾಷ್ಟ್ರೀಯ ಸಮ್ಮೇಳನಕ್ಕೆ ಹಾಜರಾದ ಬ್ರಿಟನಿನ 850 ಪ್ರತಿನಿಧಿಗಳ ನಡುವೆ ಇತ್ತು. ಆ ಅಧಿವೇಶನಕ್ಕೆ ಇತರ ದೇಶಗಳಿಂದ ಹಾಜರಾಗಲಿದ್ದ ಅನೇಕ ಪಯನೀಯರರಿಗೆ, ನ್ಯೂ ಯಾರ್ಕ್ ಸೌತ್ ಲ್ಯಾನ್ಸಿಂಗ್ನ ಹತ್ತಿರದಲ್ಲಿದ್ದ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ಗೆ ಹಾಜರಾಗಲು ಒಂದು ಅರ್ಜಿಯನ್ನು ಕಳುಹಿಸಲಾಯಿತು. ಅವರಲ್ಲಿ ಡಗ್ಲಸ್, ಆ್ಯನ್ ಮತ್ತು ನಾನು ಇದ್ದೆವು! ನಾನು ತುಂಬಿಸಿದಂತಹ ಅರ್ಜಿಯನ್ನು ಅಂಚೆಪಟ್ಟಿಗೆಯಲ್ಲಿ ಹಾಕುತ್ತಿದ್ದಾಗ, ‘ಈಗ ನಾನು ನಿಜವಾಗಿಯೂ ಏನನ್ನೊ ಸಾಧಿಸಿದ್ದೇನೆ! ನನ್ನ ಜೀವನವು ಯಾವ ದಿಕ್ಕಿನಲ್ಲಿ ಸಾಗುವುದೊ?’ ಎಂದು ನಾನು ಯೋಚಿಸುತ್ತಿದ್ದುದು ನನಗೆ ನೆನಪಿದೆ. ಆದರೂ ಇದು ನನ್ನ ದೃಢನಿರ್ಧಾರವಾಗಿತ್ತು: “ಇಗೋ, ನಾನಿದ್ದೇನೆ! ನನ್ನನ್ನು ಕಳುಹಿಸು.” (ಯೆಶಾಯ 6:8) ಡಗ್ಲಸ್ ಮತ್ತು ಆ್ಯನ್ರೊಂದಿಗೆ ಗಿಲ್ಯಡ್ನ 16ನೆಯ ತರಗತಿಗೆ ಹಾಜರಾಗಲಿಕ್ಕಾಗಿ ಅಧಿವೇಶನದ ನಂತರ ಹಿಂದೆ ಉಳಿಯುವಂತೆ ನನಗೊಂದು ಆಮಂತ್ರಣ ಸಿಕ್ಕಿದಾಗ, ನಾನು ರೋಮಾಂಚಿತಳಾದೆ. ನಾವು ಲೋಕದ ಯಾವುದೇ ಭಾಗಕ್ಕೂ ಮಿಷನೆರಿಗಳಾಗಿ ಕಳುಹಿಸಲ್ಪಡುವ ಸಾಧ್ಯತೆಯಿದೆಯೆಂಬುದು ನಮಗೆಲ್ಲರಿಗೂ ಚೆನ್ನಾಗಿ ತಿಳಿದಿತ್ತು.
ನಾವೆಲ್ಲರೂ ಅಧಿವೇಶನದಲ್ಲಿ ಕುಟುಂಬದೋಪಾದಿ ಜೊತೆಯಾಗಿ ಆನಂದಿಸಿದ ನಂತರ, ನಮ್ಮ ಹೆತ್ತವರು ಇಂಗ್ಲೆಂಡ್ಗೆ—ಇಬ್ಬರೇ ಆಗಿ—ಹಿಂದಿರುಗುವ ಸಮಯ ಬಂತು. ಅವರು ಮಾರಿಟೇನೀಯ ಹಡಗಿನಲ್ಲಿ ಮನೆಗೆ ಹಿಂದಿರುಗಿದಾಗ ನಾವು ಮೂವರು ಮಂದಿ ಮಕ್ಕಳು ಅವರಿಗೆ ವಿದಾಯ ಹೇಳಿದೆವು. ಅದೆಷ್ಟು ಭಾವನಾತ್ಮಕವಾದ ಅಗಲಿಕೆಯಾಗಿತ್ತು!
ಮಿಷನೆರಿ ನೇಮಕಗಳು
ಗಿಲ್ಯಡ್ನ 16ನೆಯ ತರಗತಿಯು, ಲೋಕದ ಎಲ್ಲ ಭಾಗಗಳಿಂದ ಬಂದ 120 ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟಿತ್ತು. ಅವರಲ್ಲಿ ಕೆಲವರು ನಾಸಿ ಕೂಟ ಶಿಬಿರಗಳಲ್ಲಿ ಕಷ್ಟಾನುಭವಿಸಿದ್ದರು. ನಮ್ಮ ತರಗತಿಗೆ ಸ್ಪ್ಯಾನಿಷ್ ಭಾಷೆ ಕಲಿಸಲ್ಪಡುತ್ತಿದ್ದುದರಿಂದ, ದಕ್ಷಿಣ ಅಮೆರಿಕದ ಯಾವುದೊ ಸ್ಪ್ಯಾನಿಷ್ ಭಾಷೆಯನ್ನಾಡುವ ದೇಶಕ್ಕೆ ನೇಮಿಸಲ್ಪಡುವುದನ್ನು ನಾವು ನಿರೀಕ್ಷಿಸಿದೆವು. ಡಗ್ಲಸ್ನನ್ನು ಜಪಾನ್ಗೆ, ಮತ್ತು ಆ್ಯನ್ ಹಾಗೂ ನಾನು ಸಿರಿಯಕ್ಕೆ ನೇಮಿಸಲ್ಪಟ್ಟಿದ್ದೇವೆಂಬುದನ್ನು ತಿಳಿದುಕೊಂಡಾಗ ನಮಗಾದ ಆಶ್ಚರ್ಯವನ್ನು ಊಹಿಸಿಕೊಳ್ಳಿರಿ. ಆದುದರಿಂದ ಆ್ಯನ್ ಮತ್ತು ನಾನು ಆ್ಯರಬಿಕ್ ಭಾಷೆಯನ್ನು ಕಲಿಯಬೇಕಾಯಿತು. ಮತ್ತು ನಮ್ಮ ನೇಮಕವು ಲೆಬನಾನ್ಗೆ ಬದಲಾಯಿಸಲ್ಪಟ್ಟಾಗಲೂ ನಾವು ಇದನ್ನೇ ಮಾಡಬೇಕಾಯಿತು. ನಮ್ಮ ವೀಸಾಗಳಿಗಾಗಿ ಕಾಯುತ್ತಿದ್ದಾಗ, ಆ್ಯರಬಿಕ್ ಭಾಷೆಯ ಕಾವಲಿನಬುರುಜು ಪತ್ರಿಕೆಗಾಗಿ ವಾಚ್ ಟವರ್ ಸೊಸೈಟಿಯ ಟೈಪ್ಸೆಟರ್ ಆಗಿದ್ದ ಜಾರ್ಜ್ ಶಾಕಶೀರೀಯವರಿಂದ ನಾವು ವಾರದಲ್ಲಿ ಎರಡು ಸಲ ಆ್ಯರಬಿಕ್ ಭಾಷೆಯ ಪಾಠಗಳನ್ನು ಪಡೆದುಕೊಂಡೆವು.
ನಾವು ತರಗತಿಯಲ್ಲಿ ಯಾವುದರ ಕುರಿತಾಗಿ ಕಲಿತಿದ್ದೆವೊ ಆ ಬೈಬಲ್ ದೇಶಕ್ಕೆ ಹೋಗುವುದು ಎಷ್ಟೊಂದು ರೋಮಾಂಚಕಾರಿಯಾಗಿತ್ತು! ಕೀತ್ ಮತ್ತು ಜಾಯ್ಸ್ ಚೂ, ಎಡ್ನ ಸ್ಟ್ಯಾಕ್ಹೌಸ್, ಆಲಿವ್ ಟರ್ನರ್, ಡೊರೀನ್ ವಾರ್ಬಟನ್, ಮತ್ತು ಡಾರಿಸ್ ವುಡ್ ನಮ್ಮೊಂದಿಗೆ ಅಲ್ಲಿಗೆ ಬಂದರು. ನಾವು ಎಷ್ಟೊಂದು ಸಂತೋಷದ ಮಿಷನೆರಿ ಕುಟುಂಬವಾಗಿ ಪರಿಣಮಿಸಿದೆವು! ನಮಗೆ ಭಾಷೆಯ ಸಂಬಂಧದಲ್ಲಿ ಹೆಚ್ಚು ನೆರವನ್ನು ನೀಡಲಿಕ್ಕಾಗಿ ಒಬ್ಬ ಸ್ಥಳಿಕ ಸಾಕ್ಷಿಯು ನಮ್ಮ ಮಿಷನೆರಿ ಮನೆಯನ್ನು ಸಂದರ್ಶಿಸುತ್ತಿದ್ದನು. ನಮ್ಮ ದೈನಂದಿನ ಕಲಿಸುವಿಕೆಯ ಅವಧಿಯಲ್ಲಿ, ನಾವು ಒಂದು ಸಂಕ್ಷಿಪ್ತ ನಿರೂಪಣೆಯನ್ನು ಅಭ್ಯಾಸಮಾಡಿ, ಅನಂತರ ಹೊರಹೋಗಿ ಅದನ್ನು ನಮ್ಮ ಸಾರುವ ಕಾರ್ಯದಲ್ಲಿ ಉಪಯೋಗಿಸುತ್ತಿದ್ದೆವು.
ನಮ್ಮ ಪ್ರಥಮ ಎರಡು ವರ್ಷಗಳನ್ನು ನಾವು, ಒಂದು ಸ್ಥಾಪಿತ ಸಭೆಯಿದ್ದ ಟ್ರಿಪೊಲಿಯಲ್ಲಿ ಕಳೆದೆವು. ಜಾಯ್ಸ್, ಎಡ್ನ, ಆಲಿವ್, ಡೊರೀನ್, ಡಾರಿಸ್, ಆ್ಯನ್ ಮತ್ತು ನಾನು ಸ್ಥಳಿಕ ಸಾಕ್ಷಿಗಳ ಪತ್ನಿಯರು ಮತ್ತು ಪುತ್ರಿಯರಿಗೆ, ಕೂಟಗಳಲ್ಲಿ ಹಾಗೂ ಸಾರ್ವಜನಿಕ ಶುಶ್ರೂಷೆಯಲ್ಲಿ ಭಾಗವಹಿಸಲಿಕ್ಕಾಗಿ ನೆರವನ್ನು ನೀಡಿದೆವು. ಅಷ್ಟರ ವರೆಗೆ, ನಮ್ಮ ಕ್ರೈಸ್ತ ಸಹೋದರ ಸಹೋದರಿಯರು, ಸ್ಥಳಿಕ ಪದ್ಧತಿಯನ್ನು ಅನುಸರಿಸುತ್ತಾ, ಕೂಟಗಳಲ್ಲಿ ಜೊತೆಯಾಗಿ ಕುಳಿತುಕೊಳ್ಳುತ್ತಿರಲಿಲ್ಲ, ಮತ್ತು ಈ ಕ್ರೈಸ್ತ ಸಹೋದರಿಯರು ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಪಾಲಿಗರಾಗುತ್ತಿದ್ದುದು ವಿರಳ. ನಮ್ಮ ಸಾರ್ವಜನಿಕ ಸಾರುವಿಕೆಯಲ್ಲಿ ಭಾಷೆಯ ವಿಷಯದಲ್ಲಿ ನಮಗೆ ಅವರ ನೆರವಿನ ಅಗತ್ಯವಿತ್ತು, ಮತ್ತು ಅವರು ಸ್ವತಃ ಈ ಕೆಲಸದಲ್ಲಿ ಪಾಲಿಗರಾಗುವಂತೆ ನಾವು ಅವರನ್ನು ಉತ್ತೇಜಿಸಿದೆವು.
ಮುಂದೆ ಆ್ಯನ್ ಮತ್ತು ನಾನು, ಸೈಡನ್ನ ಪ್ರಾಚೀನ ನಗರದಲ್ಲಿದ್ದ, ಸಾಕ್ಷಿಗಳ ಒಂದು ಚಿಕ್ಕ ಗುಂಪಿಗೆ ಸಹಾಯ ಮಾಡಲು ನೇಮಿಸಲ್ಪಟ್ಟೆವು. ಸ್ವಲ್ಪ ಸಮಯದೊಳಗೆ, ರಾಜಧಾನಿಯಾದ ಬೇರೂಟ್ಗೆ ಹಿಂದಿರುಗುವಂತೆ ನಮ್ಮನ್ನು ಕೇಳಿಕೊಳ್ಳಲಾಯಿತು. ಅಲ್ಲಿರುವ ಆರ್ಮೇನಿಯನ್ ಭಾಷೆಯನ್ನಾಡುವ ಸಮುದಾಯದೊಳಗೆ ಬೈಬಲ್ ಸತ್ಯದ ಬೀಜಗಳು ಬಿತ್ತಲ್ಪಟ್ಟಿದ್ದವು, ಆದುದರಿಂದ ನಾವು ಅವರಿಗೆ ಸಹಾಯ ಮಾಡಲು ಆ ಭಾಷೆಯನ್ನು ಕಲಿತುಕೊಂಡೆವು.
ನೇಮಕದ ಬದಲಾವಣೆಗಳು
ನಾನು ಇಂಗ್ಲೆಂಡನ್ನು ಬಿಟ್ಟುಹೋಗುವ ಮುಂಚೆ ವಿಲ್ಫ್ರೆಡ್ ಗೂಚ್ ಅನ್ನು ಭೇಟಿಯಾಗಿದ್ದೆ. ಅವರು ಲಂಡನ್ ಬೆತೆಲಿನಲ್ಲಿ ಸೇವೆ ಸಲ್ಲಿಸಿದ್ದ ಒಬ್ಬ ಹುರುಪಿನ, ಸಹಾನುಭೂತಿಯುಳ್ಳ ಸಹೋದರರಾಗಿದ್ದರು. ವಿಲ್ಫ್, ಗಿಲ್ಯಡ್ನ 15ನೆಯ ತರಗತಿಯ ಒಬ್ಬ ಸದಸ್ಯರಾಗಿದ್ದರು. ಆ ತರಗತಿಯು 1950ರ ಯಾಂಕಿ ಸ್ಟೇಡಿಯಮ್ ಅಧಿವೇಶನದಲ್ಲಿ ಪದವಿಪ್ರಾಪ್ತಿ ಪಡೆಯಿತು. ಅವರ ಮಿಷನೆರಿ ನೇಮಕವು, ನೈಜೀರಿಯದಲ್ಲಿನ ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸ್ ಆಗಿತ್ತು. ಮತ್ತು ನಾವು ಸ್ವಲ್ಪ ಸಮಯದ ವರೆಗೆ ಪತ್ರ ವ್ಯವಹಾರ ನಡೆಸಿದೆವು. 1955ರಲ್ಲಿ ನಾವಿಬ್ಬರೂ ಲಂಡನ್ನಲ್ಲಿ ನಡೆದ “ವಿಜಯಿ ರಾಜ್ಯ” ಎಂಬ ಅಧಿವೇಶನಕ್ಕೆ ಹಾಜರಾದೆವು, ಮತ್ತು ತದನಂತರ ಸ್ವಲ್ಪ ಸಮಯದೊಳಗೆ ನಮಗೆ ನಿಶ್ಚಿತಾರ್ಥವಾಯಿತು. ಮುಂದಿನ ವರ್ಷವೇ ನಾವು ಘಾನದಲ್ಲಿ ವಿವಾಹವಾದೆವು, ಮತ್ತು ನಾನು ವಿಲ್ಫ್ರನ್ನು, ನೈಜೀರಿಯದ ಲೇಗಾಸ್ನಲ್ಲಿ ಅವರ ಮಿಷನೆರಿ ನೇಮಕದಲ್ಲಿ ಅವರೊಂದಿಗೆ ಜೊತೆಗೂಡಿದೆ.
ನಾನು ಆ್ಯನ್ಳನ್ನು ಲೆಬನನ್ನಲ್ಲಿ ಬಿಟ್ಟುಬಂದ ಬಳಿಕ, ಜೆರೂಸಲೇಮ್ನಲ್ಲಿ ಬೈಬಲ್ ಸತ್ಯವನ್ನು ಕಲಿತಿದ್ದ ಒಬ್ಬ ಒಳ್ಳೆಯ ಕ್ರೈಸ್ತ ಸಹೋದರನನ್ನು ಅವಳು ವಿವಾಹವಾದಳು. ನನ್ನ ಹೆತ್ತವರು ನಮ್ಮ ಮದುವೆಗಳಿಗೆ ಬರಲು ಶಕ್ತರಾಗಿರಲಿಲ್ಲ, ಯಾಕಂದರೆ ಡಗ್ಲಸ್, ಆ್ಯನ್ ಮತ್ತು ನಾನು ಲೋಕದ ವಿಭಿನ್ನ ಭಾಗಗಳಲ್ಲಿ ಮದುವೆಯಾದೆವು. ಆದರೂ, ನಾವೆಲ್ಲರೂ ನಮ್ಮ ದೇವರಾದ ಯೆಹೋವನನ್ನು ಸಂತೋಷದಿಂದ ಸೇವಿಸುತ್ತಿದ್ದೇವೆಂಬುದನ್ನು ತಿಳಿದುಕೊಳ್ಳಲು ಅವರು ಸಂತೃಪ್ತರಾಗಿದ್ದರು.
ನೈಜೀರಿಯದಲ್ಲಿ ಕೆಲಸ
ಲೇಗಾಸ್ನಲ್ಲಿದ್ದ ಬ್ರಾಂಚ್ ಆಫೀಸ್ನಲ್ಲಿ, ನಮ್ಮ ಬ್ರಾಂಚ್ ಕುಟುಂಬದ ಎಂಟು ಸದಸ್ಯರ ಕೋಣೆಗಳನ್ನು ಶುಚಿಗೊಳಿಸಲು ಹಾಗೂ ಅವರಿಗೆ ಊಟ ತಯಾರಿಮಾಡಲು ಮತ್ತು ಅವರ ಬಟ್ಟೆಗಳನ್ನು ಒಗೆದು ಮಡಿಮಾಡುವ ಕೆಲಸವನ್ನು ನನಗೆ ನೇಮಿಸಲಾಯಿತು. ನಾನು ಕೇವಲ ಒಬ್ಬ ಗಂಡನನ್ನಲ್ಲ ಬದಲಾಗಿ ಒಂದು ತತ್ಕ್ಷಣದ ಕುಟುಂಬವನ್ನೂ ಪಡೆದುಕೊಂಡಿದ್ದೇನೆಂಬಂತೆ ನನಗೆ ತೋರಿತು!
ವಿಲ್ಫ್ ಮತ್ತು ನಾನು ಯೊರಬ ಭಾಷೆಯಲ್ಲಿ ಸಂಕ್ಷಿಪ್ತವಾದ ಬೈಬಲ್ ನಿರೂಪಣೆಗಳನ್ನು ಕಲಿತುಕೊಂಡೆವು ಮತ್ತು ನಮ್ಮ ಪ್ರಯತ್ನಗಳಿಗಾಗಿ ನಾವು ಬಹುಮಾನಿಸಲ್ಪಟ್ಟೆವು. ನಾವು ಸಂಪರ್ಕಿಸಿದಂತಹ ಒಬ್ಬ ಯುವ ವಿದ್ಯಾರ್ಥಿಯ, ಒಬ್ಬ ಮಗ ಮತ್ತು ಒಬ್ಬಳು ಮಗಳು ಈಗ, ಸುಮಾರು 400 ಸದಸ್ಯರಿರುವ ನೈಜೀರಿಯಾದ ದೊಡ್ಡ ಬೆತೆಲಿನಲ್ಲಿ ಸೇವೆಸಲ್ಲಿಸುತ್ತಿದ್ದಾರೆ.
1963ರಲ್ಲಿ, ನ್ಯೂ ಯಾರ್ಕ್ನ ಬ್ರೂಕ್ಲಿನ್ನಲ್ಲಿ ವಿಶೇಷ ಶಿಕ್ಷಣದ ಹತ್ತು ತಿಂಗಳ ವ್ಯಾಸಂಗಕ್ಕಾಗಿ ವಿಲ್ಫ್ ಒಂದು ಆಮಂತ್ರಣವನ್ನು ಪಡೆದುಕೊಂಡರು. ಅದನ್ನು ಮುಗಿಸಿದ ಬಳಿಕ ಅವರನ್ನು ಅನಿರೀಕ್ಷಿತವಾಗಿ ಪುನಃ ಇಂಗ್ಲೆಂಡಿಗೆ ನೇಮಿಸಲಾಯಿತು. ನಾನು ನೈಜೀರಿಯದಲ್ಲಿ ಹಿಂದೆ ಉಳಿದಿದ್ದೆ, ಮತ್ತು ವಿಲ್ಫ್ರನ್ನು ಲಂಡನ್ನಲ್ಲಿ ಜೊತೆಗೂಡಲು ಕೇವಲ 14 ದಿನಗಳ ಮುಂಚೆ ಸೂಚನೆಯನ್ನು ಕೊಡಲಾಯಿತು. ಮಿಶ್ರಿತ ಭಾವನೆಗಳೊಂದಿಗೆ ನಾನು ಹೊರಟೆ, ಯಾಕಂದರೆ ನೈಜೀರಿಯವು ಅಷ್ಟೊಂದು ಸಂತೋಷದಾಯಕವಾದ ನೇಮಕವಾಗಿತ್ತು. 14 ವರ್ಷಗಳ ವರೆಗೆ ವಿದೇಶದಲ್ಲಿ ಸೇವೆಸಲ್ಲಿಸಿದ ಬಳಿಕ, ಪುನಃ ಇಂಗ್ಲೆಂಡಿನ ಜೀವಿತಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತಗಲಿತು. ಆದರೆ, ನಾವು ಪುನಃ ಒಮ್ಮೆ ನಮ್ಮ ವೃದ್ಧ ಹೆತ್ತವರ ಹತ್ತಿರದಲ್ಲಿರಲು ಮತ್ತು ಅವರನ್ನು ಪರಾಮರಿಸುವುದರಲ್ಲಿ ಸಹಾಯಮಾಡಲು ಶಕ್ತರಾಗಿರಲು ಆಭಾರಿಗಳಾಗಿದ್ದೆವು.
ನಮ್ಮ ನಿರೀಕ್ಷೆಯಿಂದ ಪೋಷಿಸಲ್ಪಟ್ಟಿರುವುದು
1980ರಂದಿನಿಂದ, ವಿಲ್ಫ್ ಸೋನ್ ಮೇಲ್ವಿಚಾರಕರಾಗಿ ಅನೇಕ ದೇಶಗಳಿಗೆ ಪ್ರಯಾಣಿಸಿದಾಗ ಅವರೊಂದಿಗೆ ಹೋಗುವ ಸುಯೋಗವು ನನಗಿತ್ತು. ನಾನು ವಿಶೇಷವಾಗಿ ನೈಜೀರಿಯಕ್ಕೆ ಮಾಡುವ ನಮ್ಮ ಪುನರ್ಭೇಟಿಗಳಿಗಾಗಿ ಎದುರುನೋಡುತ್ತಿದ್ದೆ. ತದನಂತರ ನಾವು ಸ್ಕಾಂಡಿನೇವಿಯಾ, ವೆಸ್ಟ್ ಇಂಡೀಸ್, ಮತ್ತು ಲೆಬನನ್ ಅನ್ನು ಸೇರಿಸಿ ಮಧ್ಯ ಪೂರ್ವಕ್ಕೂ ಹೋದೆವು. ಸಂತೋಷದ ಸ್ಮರಣೆಗಳನ್ನು ಪುನಃ ನೆನಪಿಗೆ ತರುವುದು ಮತ್ತು ಅವರು ಯುವ ಹದಿವಯಸ್ಕರಾಗಿದ್ದಾಗ ನನಗೆ ಪರಿಚಯವಿದ್ದವರು ಕ್ರೈಸ್ತ ಹಿರಿಯರಾಗಿ ಸೇವೆಸಲ್ಲಿಸುತ್ತಿರುವುದನ್ನು ನೋಡುವುದು ಒಂದು ವಿಶೇಷ ರೋಮಾಂಚನಕಾರಿ ವಿಷಯವಾಗಿತ್ತು.
ವಿಷಾದಕರವಾಗಿ, ನನ್ನ ಪ್ರಿಯ ಗಂಡನು 1992ರ ವಸಂತಕಾಲದಲ್ಲಿ ಮೃತಪಟ್ಟರು. ಅವರಿಗೆ ಕೇವಲ 69 ವರ್ಷ ವಯಸ್ಸಾಗಿತ್ತು. ಅದು ಇಷ್ಟೊಂದು ಅನಿರೀಕ್ಷಿತವಾಗಿ ಸಂಭವಿಸಿದುದರಿಂದ ವಿಶೇಷವಾಗಿ ಒಂದು ದುರ್ಭರ ಆಘಾತವಾಗಿತ್ತು. ವಿವಾಹದ 35 ವರ್ಷಗಳ ಬಳಿಕ, ಹೊಂದಿಕೊಂಡು ಹೋಗಲು ಸಮಯವು ತಗಲಿತು. ಆದರೆ ನನ್ನ ಲೋಕವ್ಯಾಪಕ ಕ್ರೈಸ್ತ ಕುಟುಂಬದಿಂದ ನಾನು ತುಂಬ ಸಹಾಯ ಮತ್ತು ಪ್ರೀತಿಯನ್ನು ಪಡೆದುಕೊಂಡಿದ್ದೇನೆ. ನಾನು ಚಿಂತನೆಮಾಡಬಹುದಾದ ಎಷ್ಟೋ ಸಂತೋಷಗೊಳಿಸುವಂತಹ ಅನುಭವಗಳಿವೆ.
ನನ್ನ ಹೆತ್ತವರಿಬ್ಬರೂ, ಕ್ರೈಸ್ತ ಸಮಗ್ರತೆಯ ಒಂದು ಉತ್ಕೃಷ್ಟ ಮಾದರಿಯನ್ನಿಟ್ಟರು. ತಾಯಿಯು 1981ರಲ್ಲಿ ಮತ್ತು ತಂದೆಯವರು 1986ರಲ್ಲಿ ಸತ್ತರು. ಡಗ್ಲಸ್ ಮತ್ತು ಆ್ಯನ್ ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುತ್ತಾ ಇದ್ದಾರೆ. ಡಗ್ಲಸ್ ಮತ್ತು ಅವನ ಹೆಂಡತಿ ಕ್ಯಾಮ್ ಪುನಃ ಲಂಡನ್ನಲ್ಲಿದ್ದಾರೆ. ತಂದೆಯವರ ಪರಾಮರಿಕೆಯನ್ನು ಮಾಡಿದ ನಂತರ ಅವರು ಅಲ್ಲಿಯೇ ಉಳಿದುಕೊಂಡರು. ಆ್ಯನ್ ಮತ್ತು ಅವಳ ಕುಟುಂಬವು ಅಮೆರಿಕದಲ್ಲಿದೆ. ನಾವೆಲ್ಲರೂ ನಮ್ಮ ದೇವದತ್ತ ನಿರೀಕ್ಷೆ ಮತ್ತು ಪರಂಪರೆಯನ್ನು ತುಂಬ ಗಣ್ಯಮಾಡುತ್ತೇವೆ. ಜೀವದಿಂದಿರುವವರು, ತಮ್ಮ ಪುನರುತ್ಥಿತ ಪ್ರಿಯ ವ್ಯಕ್ತಿಗಳೊಂದಿಗೆ ಯೆಹೋವನ ಐಹಿಕ ಕುಟುಂಬದ ಸದಸ್ಯರೋಪಾದಿ ಸದಾಕಾಲ ಸೇವಿಸುತ್ತಾ ಇರುವ ಸಮಯಕ್ಕೆ ಎದುರು ನೋಡುತ್ತಾ ನಾವು “ಕಾಯುವ ಮನೋಭಾವವನ್ನು ತೋರಿಸು”ವುದನ್ನು (NW) ಮುಂದುವರಿಸುತ್ತೇವೆ.—ಪ್ರಲಾಪಗಳು 3:24.
[ಪಾದಟಿಪ್ಪಣಿ]
a ನನ್ನ ತಂದೆ, ಅರ್ನೆಸ್ಟ್ ಬೀವರ್ರವರ ಜೀವನ ಕಥೆಯು, 1980ರ ಮಾರ್ಚ್ 15ನೆಯ ದ ವಾಚ್ಟವರ್ ಪತ್ರಿಕೆಯಲ್ಲಿ ತೋರಿಬಂತು.
[ಪುಟ 23 ರಲ್ಲಿರುವ ಚಿತ್ರ]
ಪ್ರದಕ್ಷಿಣವಾಗಿ ಮೇಲೆ ಎಡದಿಂದ ಆರಂಭಿಸುತ್ತಾ:
ಎನ್ಫಿಲ್ಡ್ ರಾಜ್ಯ ಸಭಾಗೃಹದಲ್ಲಿ, 13ನೆಯ ವಯಸ್ಸಿನಲ್ಲಿ ಗ್ವೆನ್ ಒಂದು ಆದರ್ಶಪ್ರಾಯ ಅಭ್ಯಾಸವನ್ನು ಪ್ರತ್ಯಕ್ಷಾಭಿನಯಿಸುತ್ತಿರುವುದು
1951ರಲ್ಲಿ ಲೆಬನನ್ನ ಟ್ರಿಪೊಲಿಯಲ್ಲಿ ಮಿಷನೆರಿ ಕುಟುಂಬ
ಮರಣದಲ್ಲಿ ಅಗಲಿದ ತಮ್ಮ ಗಂಡ ವಿಲ್ಫ್ರೊಂದಿಗೆ ಗ್ವೆನ್