ಮಹಾನ್ ಕಾನ್ಸ್ಟೆಂಟೀನ್—ಕ್ರೈಸ್ತತ್ವದ ಸಮರ್ಥಕನೋ?
ಇತಿಹಾಸವು “ಮಹಾನ್” ಎಂಬ ಪದದಿಂದ ಸಿಂಗರಿಸಿರುವ ಕೆಲವು ವ್ಯಕ್ತಿಗಳ ಹೆಸರುಗಳಲ್ಲಿ ರೋಮನ್ ಚಕ್ರವರ್ತಿಯಾದ ಕಾನ್ಸ್ಟೆಂಟೀನ್ ಒಬ್ಬನಾಗಿದ್ದಾನೆ. ಕ್ರೈಸ್ತಪ್ರಪಂಚವು, “ಸಂತ,” “ಹದಿಮೂರನೆಯ ಅಪೊಸ್ತಲ,” “ಅಪೊಸ್ತಲರಿಗೆ ಸರಿಸಮಾನನಾದ ಪವಿತ್ರನು” ಮತ್ತು ‘ಇಡೀ ಲೋಕದಲ್ಲಿಯೇ ಅತ್ಯಂತ ಮಹಾ ಬದಲಾವಣೆಯನ್ನು ಪೂರೈಸಲಿಕ್ಕೆ ದೇವರ ವಿಶೇಷಾನುಗ್ರಹದಿಂದ ಆಯ್ಕೆಮಾಡಲ್ಪಟ್ಟವನು’ ಎಂಬ ಅಭಿವ್ಯಕ್ತಿಗಳನ್ನು ಕೂಡಿಸಿದೆ. ವಿರುದ್ಧ ದೃಷ್ಟಿಕೋನದಿಂದ ನೋಡುವಾಗ, ಕೆಲವರು ಕಾನ್ಸ್ಟೆಂಟೀನನ್ನು, “ರಕ್ತಸಿಕ್ತ, ಅಸಂಖ್ಯಾತ ಘೋರಾಪರಾಧಗಳನ್ನು ಮಾಡಿರುವವನೂ ಮೋಸಗಾರನೂ ಆಗಿ ಗುರುತಿಸಲ್ಪಟ್ಟ, . . . ಒಬ್ಬ ಘೋರ ನಿರಂಕುಶ ಪ್ರಭು, ಘೋರ ಪಾತಕಗಳ ದೋಷಿ” ಎಂದು ವರ್ಣಿಸುತ್ತಾರೆ.
ಮಹಾನ್ ಕಾನ್ಸ್ಟೆಂಟೀನ್, ಕ್ರೈಸ್ತಮತದ ಅತ್ಯಂತ ಪ್ರಮುಖ ಉಪಕಾರಿಗಳಲ್ಲಿ ಒಬ್ಬನಾಗಿದ್ದನೆಂಬುದಾಗಿ ಕ್ರೈಸ್ತರೆಂದು ಪ್ರತಿಪಾದಿಸಿಕೊಳ್ಳುವ ಅನೇಕರಿಗೆ ಕಲಿಸಲಾಗಿದೆ. ಕ್ರೈಸ್ತರನ್ನು ರೋಮನ್ ಹಿಂಸೆಯ ಸಂಕಟದಿಂದ ಮುಕ್ತಗೊಳಿಸಿ, ಧಾರ್ಮಿಕ ಸ್ವಾತಂತ್ರ್ಯವನ್ನು ಕೊಟ್ಟದ್ದಕ್ಕಾಗಿ ಅವರು ಅವನಿಗೆ ಮನ್ನಣೆಯನ್ನು ಕೊಡುತ್ತಾರೆ. ಅಷ್ಟುಮಾತ್ರವಲ್ಲದೆ, ಅವನು ಕ್ರೈಸ್ತ ಚಳವಳಿಯನ್ನು ಮುಂದಕ್ಕೆ ತರಲು ಒಂದು ಬಲವಾದ ಅಭಿಲಾಷೆಯಿದ್ದ, ಯೇಸು ಕ್ರಿಸ್ತನ ಒಬ್ಬ ನಂಬಿಗಸ್ತ ಹೆಜ್ಜೆಜಾಡಿನ ಅನುಯಾಯಿಯಾಗಿದ್ದನು ಎಂದು ವ್ಯಾಪಕವಾಗಿ ನಂಬಲಾಗುತ್ತದೆ. ಈಸ್ಟರ್ನ್ ಆರ್ತೊಡಾಕ್ಸ್ ಚರ್ಚು ಮತ್ತು ಕಾಪ್ಟಿಕ್ ಚರ್ಚು ಕಾನ್ಸ್ಟೆಂಟೀನನ್ನು ಮತ್ತು ಅವನ ತಾಯಿಯಾದ ಹೆಲೆನಳನ್ನು—ಇಬ್ಬರನ್ನು—“ಸಂತರು” ಎಂದು ಘೋಷಿಸಿವೆ. ಅವರ ಹಬ್ಬವು ಜೂನ್ 3ರಂದು ಅಥವಾ ಚರ್ಚಿನ ಕ್ಯಾಲೆಂಡರಿಗನುಸಾರ ಮೇ 21ರಂದು ಆಚರಿಸಲ್ಪಡುತ್ತದೆ.
ಮಹಾನ್ ಕಾನ್ಸ್ಟೆಂಟೀನ್ ನಿಜವಾಗಿಯೂ ಯಾರಾಗಿದ್ದನು? ಧರ್ಮಪ್ರವರ್ತಕರ ಅನಂತರ ಕ್ರೈಸ್ತತ್ವದ ವಿಕಸನೆಯಲ್ಲಿ ಅವನ ಪಾತ್ರವೇನಾಗಿತ್ತು? ಈ ಪ್ರಶ್ನೆಗಳಿಗೆ ಇತಿಹಾಸ ಮತ್ತು ವಿದ್ವಾಂಸರು ಉತ್ತರಿಸುವಂತೆ ಬಿಡುವುದು ತುಂಬ ಜ್ಞಾನೋದಯಕರ ವಿಷಯವಾಗಿದೆ.
ಐತಿಹಾಸಿಕ ಕಾನ್ಸ್ಟೆಂಟೀನ್
ಕಾನ್ಸ್ಟಾನ್ಟ್ಯುಸ್ ಕ್ಲಾರಸ್ನ ಪುತ್ರನಾದ ಕಾನ್ಸ್ಟೆಂಟೀನ್, ಸರ್ಬಿಯದ ನೇಸಸ್ನಲ್ಲಿ ಸುಮಾರು ಸಾ.ಶ. 275ನೇ ವರ್ಷದಲ್ಲಿ ಜನಿಸಿದನು. ಸಾ.ಶ. 295ರಲ್ಲಿ ಅವನ ತಂದೆ ರೋಮಿನ ಪಶ್ಚಿಮ ಪ್ರಾಂತದ ಚಕ್ರವರ್ತಿಯಾದಾಗ, ಅವನು ಚಕ್ರವರ್ತಿ ಗಲಿರೀಯಸ್ ಆಜ್ಞೆಗಳ ಮೇರೆಗೆ ಡ್ಯಾನ್ಯೂಬ್ ನದಿಯ ಹತ್ತಿರ ಹೋರಾಡುತ್ತಿದ್ದನು. ಸಾ.ಶ. 306ನೇ ವರ್ಷದಲ್ಲಿ ಬ್ರಿಟನಿನಲ್ಲಿ ಸಾಯುತ್ತಿದ್ದ ತನ್ನ ತಂದೆಯನ್ನು ನೋಡಲು ಕಾನ್ಸ್ಟೆಂಟೀನ್ ಹಿಂದಿರುಗಿದನು. ಅವನ ತಂದೆಯು ಸತ್ತ ಅನಂತರ ಶೀಘ್ರವೇ, ಸೇನೆಯು ಕಾನ್ಸ್ಟೆಂಟೀನನ್ನು ಒಬ್ಬ ಚಕ್ರವರ್ತಿಯ ಪದವಿಗೆ ಏರಿಸಿತು.
ಆ ಸಮಯದಲ್ಲಿ, ಇತರ ಐದು ಮಂದಿ ತಾವು ಆಗಸ್ಟಿ (ಚಕ್ರವರ್ತಿ)ಗಳಾಗಿದ್ದೆವೆಂದು ಹೇಳಿಕೊಂಡರು. ಸಾ.ಶ. 306 ಮತ್ತು 324ರ ಮಧ್ಯಾವಧಿಯು, ನಿರಂತರವಾದ ಆಂತರಿಕ ಯುದ್ಧದ ಒಂದು ಸಮಯವಾಗಿತ್ತು. ಈ ಅವಧಿಯ ಅನಂತರ ಕಾನ್ಸ್ಟೆಂಟೀನನು ಏಕ ಚಕ್ರವರ್ತಿಯಾದನು. ಎರಡು ಮಿಲಿಟರಿ ಕದನಗಳಲ್ಲಿನ ವಿಜಯವು, ಕಾನ್ಸ್ಟೆಂಟೀನನಿಗೆ ರೋಮನ್ ಇತಿಹಾಸದಲ್ಲಿ ಒಂದು ಸ್ಥಾನವನ್ನು ಖಾತ್ರಿಪಡಿಸಿದವು ಮತ್ತು ರೋಮನ್ ಸಾಮ್ರಾಜ್ಯದ ಏಕಮಾತ್ರ ರಾಜನನ್ನಾಗಿ ಮಾಡಿದವು.
ಸಾ.ಶ. 312ರಲ್ಲಿ ಕಾನ್ಸ್ಟೆಂಟೀನ್ ತನ್ನ ವಿರೋಧಿಯಾದ ಮಾಕ್ಸೆನ್ಟ್ಯುಸ್ನನ್ನು ರೋಮಿನ ಹೊರಭಾಗದಲ್ಲಿರುವ ಮಿಲ್ವಿಯನ್ ಬ್ರಿಡ್ಜ್ನ ಕದನದಲ್ಲಿ ಸೋಲಿಸಿದನು. ಆ ಕದನದಲ್ಲಿ, ಇನ್ ಹಾಕ್ ಸೀಗ್ನೋ ವಿಂಕೆಸ್—“ಈ ಚಿಹ್ನೆಯಿಂದ ವಿಜಯಿಶಾಲಿಯಾಗು” ಎಂದು ಅರ್ಥೈಸುವ—ಲ್ಯಾಟಿನ್ ಪದಗಳುಳ್ಳ ಪ್ರಜ್ವಲಿಸುವ ಶಿಲುಬೆಯಾಕಾರವು ಸೂರ್ಯನ ಕೆಳಗೆ ಕಾಣಿಸಿಕೊಂಡಿತು ಎಂದು ಕ್ರೈಸ್ತ ಸಮರ್ಥಕರು ಪ್ರತಿಪಾದಿಸಿದರು. ಕನಸಿನಲ್ಲಿ, ಕಾನ್ಸ್ಟೆಂಟೀನನಿಗೆ ತನ್ನ ಪಡೆಗಳ ಗುರಾಣಿಗಳ ಮೇಲೆ ಗ್ರೀಕ್ ಭಾಷೆಯಲ್ಲಿ ಕ್ರಿಸ್ತನ ಹೆಸರಿನ ಪ್ರಥಮ ಎರಡು ಅಕ್ಷರಗಳನ್ನು ಹಾಕಲು ಹೇಳಲಾಯಿತೆಂದು ಸಹ ನಂಬಲಾಗುತ್ತದೆ. ಆದರೆ ಈ ಕಥೆಗೆ ಅನೇಕ ಕಾಲಾಭಾಸಗಳಿವೆ. ಕ್ರೈಸ್ತತ್ವದ ಇತಿಹಾಸ (ಇಂಗ್ಲಿಷ್) ಎಂಬ ಪುಸ್ತಕವು ಹೇಳುವುದು: “ಈ ದರ್ಶನದ ನಿಖರವಾದ ಸಮಯ, ಸ್ಥಳ ಹಾಗೂ ವಿವರಗಳ ಕುರಿತು ವಿರೋಧಾಭಿಪ್ರಾಯಗಳಿವೆ.” ರೋಮಿನಲ್ಲಿ ಕಾನ್ಸ್ಟೆಂಟೀನನ್ನು ಸ್ವಾಗತಿಸಿದ ಒಂದು ವಿಧರ್ಮಿ ಶಾಸನಸಭೆಯು, ಅವನನ್ನು ಮುಖ್ಯ ಆಗಸ್ಟಸ್ ಮತ್ತು ಪಾಂಟಿಫೆಕ್ಸ್ ಮ್ಯಾಕ್ಸಿಮಸ್ ಆಗಿ, ಅಂದರೆ ಆ ಸಾಮ್ರಾಜ್ಯದ ವಿಧರ್ಮಿ ಧರ್ಮದ ಮುಖ್ಯ ಯಾಜಕನನ್ನಾಗಿ ಪ್ರಕಟಪಡಿಸಿತು.
ಸಾ.ಶ. 313ರಲ್ಲಿ ಕಾನ್ಸ್ಟೆಂಟೀನ್, ಪೂರ್ವ ಪ್ರಾಂತಗಳ ರಾಜನಾದ ಚಕ್ರವರ್ತಿ ಲಿಸಿನೀಯಸ್ನೊಂದಿಗೆ ಒಂದು ಪಾಲುದಾರಿಕೆಯನ್ನು ಏರ್ಪಡಿಸಿದನು. ಮಿಲನ್ ಆಜ್ಞೆಯ ಮೇರೆಗೆ, ಅವರು ಒಟ್ಟಿಗೆ ಎಲ್ಲ ಧಾರ್ಮಿಕ ಗುಂಪುಗಳಿಗೆ ಆರಾಧನೆಯ ಸ್ವಾತಂತ್ರ್ಯವನ್ನು ಮತ್ತು ಸಮಾನ ಹಕ್ಕುಗಳನ್ನು ನೀಡಿದರು. ಆದರೆ ಅನೇಕ ಇತಿಹಾಸಕಾರರು, ಇದೊಂದು ಕೇವಲ ಮಾಮೂಲು ಅಧಿಕೃತ ಪತ್ರವಾಗಿತ್ತೆಂದು ಮತ್ತು ಕ್ರೈಸ್ತತ್ವದ ಕಡೆಗೆ ರಾಜ್ಯನೀತಿಯ ಒಂದು ಬದಲಾವಣೆಯನ್ನು ಸೂಚಿಸುತ್ತಿದ್ದ ಒಂದು ದೊಡ್ಡ ಸಾಮ್ರಾಜ್ಯ ವ್ಯವಸ್ಥೆಯ ದಾಖಲೆಯಲ್ಲವೆಂದು ಹೇಳುತ್ತಾ, ಈ ದಾಖಲೆಯ ಪ್ರಮುಖತೆಗೆ ಮಹತ್ತ್ವವನ್ನು ಕೊಡುವುದಿಲ್ಲ.
ಮುಂದಿನ ಒಂದೆರೆಡು ವರ್ಷಗಳಲ್ಲಿ, ಕಾನ್ಸ್ಟೆಂಟೀನ್ ತನ್ನ ಕೊನೆಯ ಉಳಿದ ಪ್ರತಿಸ್ಪರ್ಧಿಯಾದ ಲಿಸಿನೀಯಸ್ನನ್ನು ಸೋಲಿಸಿ, ರೋಮನ್ ರಾಜ್ಯದ ಅವಿರೋಧಿ ರಾಜನಾದನು. ಸಾ.ಶ. 325ರಲ್ಲಿ, ಇನ್ನೂ ಅಸ್ನಾನಿತನಾಗಿದ್ದಾಗಲೇ, ಅವನು “ಕ್ರೈಸ್ತ” ಚರ್ಚಿನ ಪ್ರಥಮ ಮಹಾ ವಿಶ್ವಕ್ರೈಸ್ತ ಸಭೆಯ ಮೇಲ್ವಿಚಾರಣೆಯನ್ನು ನಡೆಸಿದನು. ಇದು ಏರಿಯಸ್ನ ಸಿದ್ಧಾಂತವನ್ನು ಖಂಡಿಸಿತು ಮತ್ತು ನೈಸೀನ್ ವಿಶ್ವಾಸಪ್ರಮಾಣ ಎಂದು ಕರೆಯಲ್ಪಟ್ಟ ಆವಶ್ಯಕ ವಿಶ್ವಾಸಗಳ ಹೇಳಿಕೆಯನ್ನು ನೀಡಿತು.
ಸಾ.ಶ. 337ರ ವರ್ಷದಲ್ಲಿ ಕಾನ್ಸ್ಟೆಂಟೀನ್ ಮಾರಕವಾಗಿ ಅಸ್ವಸ್ಥನಾದನು. ತನ್ನ ಜೀವಿತದ ಆ ಕೊನೆಯ ಗಳಿಗೆಯಲ್ಲಿ, ಅವನು ದೀಕ್ಷಾಸ್ನಾನ ಪಡೆದುಕೊಂಡನು ಮತ್ತು ಅನಂತರ ಅವನು ಕೊನೆಯುಸಿರೆಳೆದನು. ಅವನ ಸಾವಿನ ಅನಂತರ ಶಾಸನಸಭೆಯು ಅವನನ್ನು ಒಬ್ಬ ರೋಮನ್ ದೇವತೆಯೆಂದು ಘೋಷಿಸಿತು.
ಕಾನ್ಸ್ಟೆಂಟೀನ್ನ ತಂತ್ರದಲ್ಲಿ ಧರ್ಮ
ಧರ್ಮದ ಕಡೆಗೆ ಮೂರನೆಯ ಮತ್ತು ನಾಲ್ಕನೆಯ ಶತಮಾನದ ರೋಮನ್ ಚಕ್ರವರ್ತಿಗಳಿಗಿದ್ದ ಸಾಮಾನ್ಯ ಮನೋಭಾವವನ್ನು ಗಮನಕ್ಕೆ ತಂದುಕೊಂಡು, ಇಸ್ಡಾರೀಯ ಟು ಎಲಿನಿಕೂ ಎತ್ನೂಸ್ (ಗ್ರೀಕ್ ರಾಷ್ಟ್ರದ ಇತಿಹಾಸ) ಎಂಬ ಪುಸ್ತಕವು ಹೇಳುವುದು: “ಚಕ್ರಾಧಿಪತ್ಯದ ಗದ್ದುಗೆಯೇರಿದವರಿಗೆ ಅಂಥ ಒಂದು ಗಾಢವಾದ ಧಾರ್ಮಿಕ ಮನೋಭಾವವಿಲ್ಲದೆ ಇದ್ದಾಗಲೂ, ಅವರು ಚಾಲ್ತಿಯಲ್ಲಿದ್ದ ಜನರ ಆಲೋಚನೆಗೆ ನೆರವನ್ನೀಯುತ್ತಾ, ತಮ್ಮ ಕಾರ್ಯಗಳಿಗೆ ಕಡಿಮೆಪಕ್ಷ ಒಂದು ಧಾರ್ಮಿಕ ವೈಶಿಷ್ಟ್ಯವನ್ನು ಕೊಡಲಿಕ್ಕಾಗಿ, ತಮ್ಮ ರಾಜಕೀಯ ಯೋಜನೆಗಳ ಚೌಕಟ್ಟಿನಲ್ಲೇ ಧರ್ಮಕ್ಕೆ ಅಗ್ರಸ್ಥಾನವನ್ನು ಕೊಡುವ ಆವಶ್ಯಕತೆಯನ್ನು ಕಂಡುಕೊಂಡರು.”
ನಿಶ್ಚಯವಾಗಿಯೂ, ಕಾನ್ಸ್ಟೆಂಟೀನ್ ತನ್ನ ಕಾಲಕ್ಕೆ ಹೊಂದಿಕೊಂಡಿದ್ದ ಒಬ್ಬ ವ್ಯಕ್ತಿಯಾಗಿದ್ದನು. ತನ್ನ ವೃತ್ತಿಜೀವನದ ಪ್ರಾರಂಭದಲ್ಲಿ ಅವನಿಗೆ ಸ್ವಲ್ಪ “ದೈವಿಕ” ಸಹಾಯದ ಅಗತ್ಯವಿತ್ತು ಮತ್ತು ಇದನ್ನು ಕಳೆಗುಂದುತ್ತಿದ್ದ ರೋಮನ್ ದೇವತೆಗಳು ಒದಗಿಸಸಾಧ್ಯವಿರಲಿಲ್ಲ. ಅದರ ಧರ್ಮ ಮತ್ತು ಇತರ ಸಂಸ್ಥಾಪನೆಗಳನ್ನು ಸೇರಿಸಿ, ಆ ಸಾಮ್ರಾಜ್ಯವು ಅವನತಿಯ ಹಾದಿಯಲ್ಲಿತ್ತು ಮತ್ತು ಅದನ್ನು ಪುನಃಸಂಚಯಿಸಲಿಕ್ಕಾಗಿ ನವೀನವೂ ಚೈತನ್ಯದಾಯಕವೂ ಆದ ಯಾವುದೋ ವಿಷಯದ ಅಗತ್ಯವಿತ್ತು. ಈಡ್ರೀಯ ಎನ್ಸೈಕ್ಲೊಪೀಡಿಯ ಹೇಳುವುದು: “ಕಾನ್ಸ್ಟೆಂಟೀನ್ ವಿಶೇಷವಾಗಿ ಕ್ರೈಸ್ತತ್ವದಲ್ಲಿ ಅಭಿರುಚಿಯುಳ್ಳವನಾಗಿದ್ದನು ಏಕೆಂದರೆ ಅದು ಅವನ ವಿಜಯವನ್ನು ಬೆಂಬಲಿಸಿತು ಮಾತ್ರವಲ್ಲದೆ ಅವನ ಸಾಮ್ರಾಜ್ಯದ ಪುನರ್ಸಂಘಟನೆಗೆ ಸಹ ಬೆಂಬಲವನ್ನು ನೀಡಿತು. ಪ್ರತಿಯೊಂದು ಕಡೆಯಲ್ಲೂ ಇದ್ದ ಕ್ರೈಸ್ತ ಚರ್ಚುಗಳು ಅವನ ರಾಜಕೀಯ ಬೆಂಬಲವಾಗಿ ಪರಿಣಮಿಸಿದವು. . . . ಆ ಸಮಯಗಳಲ್ಲಿನ ಮಹಾನ್ ಮಠಾಧಿಪತಿಗಳಿಂದ ತನ್ನನ್ನು ಸುತ್ತುವರಿಸಿಕೊಂಡನು . . . , ಮತ್ತು ಅವರು ತಮ್ಮ ಐಕ್ಯವನ್ನು ಅಖಂಡವಾಗಿಟ್ಟುಕೊಳ್ಳುವಂತೆ ಅವನು ಕೇಳಿಕೊಂಡನು.”
“ಕ್ರೈಸ್ತ” ಧರ್ಮವನ್ನು—ಪತಿತಗೊಂಡು, ಅಷ್ಟರಲ್ಲೇ ತುಂಬ ಭ್ರಷ್ಟಗೊಂಡಿದ್ದರೂ—ಸಾಮ್ರಾಜ್ಯದ ಪರಮಾಧಿಕಾರಕ್ಕಾಗಿರುವ ತನ್ನ ಮಹಾ ಯೋಜನೆಗೆ, ಒಂದು ನವಚೈತನ್ಯವೂ ಐಕ್ಯಗೊಳಿಸುವ ಶಕ್ತಿಯೂ ಆಗಿ ಪರಿಣಾಮಕಾರಿತ್ವದಿಂದ ಉಪಯೋಗಿಸಸಾಧ್ಯವಿದೆ ಎಂಬುದನ್ನು ಕಾನ್ಸ್ಟೆಂಟೀನ್ ಗ್ರಹಿಸಿದನು. ತನ್ನ ಸ್ವಂತ ರಾಜಕೀಯ ಉದ್ದೇಶಗಳ ಅಭಿವೃದ್ಧಿಗಾಗಿ ನೆರವನ್ನು ಪಡೆದುಕೊಳ್ಳಲಿಕ್ಕಾಗಿ ಧರ್ಮಭ್ರಷ್ಟ ಕ್ರೈಸ್ತತ್ವದ ಆಧಾರಗಳನ್ನು ಸ್ವೀಕರಿಸುತ್ತಾ, ಅವನು ಜನರನ್ನು ಒಂದು “ಕ್ಯಾಥೊಲಿಕ್,” ಅಥವಾ ಸಾರ್ವತ್ರಿಕ ಧರ್ಮದ ಕೆಳಗೆ ಒಗ್ಗೂಡಿಸಲು ನಿರ್ಣಯಿಸಿದನು. ವಿಧರ್ಮಿ ಸಂಪ್ರದಾಯಗಳು ಮತ್ತು ಆಚರಣೆಗಳಿಗೆ “ಕ್ರೈಸ್ತ” ಹೆಸರುಗಳು ಕೊಡಲ್ಪಟ್ಟವು. ಮತ್ತು “ಕ್ರೈಸ್ತ” ಪಾದ್ರಿಗಳಿಗೆ ವಿಧರ್ಮಿ ಪಾದ್ರಿಗಳ ಸ್ಥಾನಮಾನ, ಸಂಬಳ ಮತ್ತು ಪ್ರಾಬಲ್ಯವನ್ನು ಕೊಡಲಾಯಿತು.
ರಾಜಕೀಯ ಕಾರಣಗಳಿಗಾಗಿ ಧಾರ್ಮಿಕ ಸಾಮರಸ್ಯವನ್ನು ಹುಡುಕುತ್ತಾ, ಕಾನ್ಸ್ಟೆಂಟೀನ್ ಭಿನ್ನಾಭಿಪ್ರಾಯಗಳ ಹೇಳಿಕೆಗಳನ್ನು ತಾತ್ತ್ವಿಕ ಸತ್ಯದ ಆಧಾರದ ಮೇಲಲ್ಲ ಬದಲಾಗಿ, ಹೆಚ್ಚಿನ ಜನರ ಒಪ್ಪಿಗೆಯ ಆಧಾರದ ಮೇಲೆ ಬೇಗನೆ ಅದುಮಿಬಿಡುತ್ತಿದ್ದನು. ವಿಭಜನೆಗೊಂಡಿದ್ದ “ಕ್ರೈಸ್ತ” ಚರ್ಚಿನೊಳಗಿದ್ದ ಅಗಾಧವಾದ ತತ್ತ್ವಾತ್ಮಕ ಭಿನ್ನತೆಗಳು, ಅವನಿಗೆ, “ದೇವರು ಕಳುಹಿಸಿದ” ಮಧ್ಯಸ್ಥನೋಪಾದಿ ಹಸ್ತಕ್ಷೇಪಮಾಡಲು ಅವಕಾಶವನ್ನು ನೀಡಿತು. ಉತ್ತರ ಆಫ್ರಿಕದಲ್ಲಿರುವ ಡಾನಟಿವ್ ಹಿಂಬಾಲಕರು ಮತ್ತು ಸಾಮ್ರಾಜ್ಯದ ಪೂರ್ವಭಾಗದಲ್ಲಿರುವ ಏರಿಯಸ್ನ ಹಿಂಬಾಲಕರೊಂದಿಗಿನ ತನ್ನ ವ್ಯವಹಾರಗಳಿಂದ, ಒಂದು ದೃಢ, ಏಕೀಕೃತ ನಂಬಿಕೆಯನ್ನು ಮುಂತರಲು ಮನವೊಲಿಕೆಯು ಸಾಕಾಗುವುದಿಲ್ಲವೆಂಬುದನ್ನು ಅವನು ಬೇಗನೆ ಕಂಡುಹಿಡಿದನು.a ಏರಿಯನ್ ವಾಗ್ವಾದವನ್ನು ಪರಿಹರಿಸುವ ಪ್ರಯತ್ನದಲ್ಲಿ ಅವನು ಚರ್ಚಿನ ಇತಿಹಾಸದಲ್ಲಿಯೇ ಪ್ರಥಮ ವಿಶ್ವಕ್ರೈಸ್ತ ಸಭೆಯನ್ನು ಕರೆದನು.—“ಕಾನ್ಸ್ಟೆಂಟೀನ್ ಮತ್ತು ನೈಸೀಯ ಮಹಾಸಭೆ” ಎಂಬ ರೇಖಾಚೌಕವನ್ನು ನೋಡಿರಿ.
ಕಾನ್ಸ್ಟೆಂಟೀನ್ನ ಸಂಬಂಧದಲ್ಲಿ, ಇತಿಹಾಸಕಾರನಾದ ಪಾಲ್ ಜಾನ್ಸನ್ ಹೇಳುವುದು: “ಕ್ರೈಸ್ತತ್ವವನ್ನು ಸೈರಿಸಿಕೊಳ್ಳುವುದಕ್ಕಾಗಿ ಅವನ ಮುಖ್ಯ ಕಾರಣಗಳಲ್ಲಿ ಒಂದು, ಅದು ಸಿದ್ಧಾಂತದ ಕುರಿತು ಚರ್ಚಿನ ಕಾರ್ಯನೀತಿಯ ಮೇಲೆ ಕಾನ್ಸ್ಟೆಂಟೀನನಿಗೆ ಮತ್ತು ರಾಜ್ಯಕ್ಕೆ ಸಂಪೂರ್ಣ ನಿಯಂತ್ರಣವನ್ನು ಕೊಟ್ಟಿದ್ದೇ ಆಗಿರಬಹುದು.”
ಅವನು ಎಂದಾದರೂ ಒಬ್ಬ ಕ್ರೈಸ್ತನಾದನೋ?
“ಕಾನ್ಸ್ಟೆಂಟೀನ್ ಸೂರ್ಯದೇವತೆಯ ಆರಾಧನೆಯನ್ನು ಎಂದೂ ತೊರೆಯಲಿಲ್ಲ ಮತ್ತು ಅವನು ತನ್ನ ನಾಣ್ಯಗಳ ಮೇಲೆ ಸೂರ್ಯನ ಚಿಹ್ನೆಯನ್ನು ಇರಿಸಿದ್ದನು” ಎಂದು ಜಾನ್ಸನ್ ಹೇಳುತ್ತಾರೆ. ಕ್ಯಾಥೊಲಿಕ್ ಎನ್ಸೈಕ್ಲೊಪೀಡಿಯ ಗಮನಿಸುವುದು: “ಕಾನ್ಸ್ಟೆಂಟೀನ್ ಎರಡೂ ಧರ್ಮಗಳ ಕಡೆಗೆ ಸಮಾನ ಒಲವನ್ನು ತೋರಿಸಿದನು. ಪಾಂಟಿಫೆಕ್ಸ್ ಮ್ಯಾಕ್ಸಿಮಸ್ನಂತೆ ಅವನು ವಿಧರ್ಮಿ ಆರಾಧನೆಯ ಕಾಳಜಿವಹಿಸಿದನು ಮತ್ತು ಅದರ ಹಕ್ಕುಗಳನ್ನು ಸಂರಕ್ಷಿಸಿದನು.” “ಕಾನ್ಸ್ಟೆಂಟೀನ್ ಎಂದೂ ಒಬ್ಬ ಕ್ರೈಸ್ತನಾಗಲಿಲ್ಲ” ಎಂದು ಈಡ್ರೀಯ ಎನ್ಸೈಕ್ಲೊಪೀಡಿಯ ಹೇಳುತ್ತದೆ. ಅದು ಕೂಡಿಸುವುದು: “ಕಾನ್ಸ್ಟೆಂಟೀನನ ಆತ್ಮಚರಿತ್ರೆಯನ್ನು ಬರೆದ ಸೀಸರೀಯದ ಯೂಸೀಬೀಅಸನು, ಅವನು ಜೀವಿತದ ಕೊನೆಯ ಕ್ಷಣಗಳಲ್ಲಿ ಒಬ್ಬ ಕ್ರೈಸ್ತನಾದನು ಎಂದು ಹೇಳುತ್ತಾನೆ. ದೀಕ್ಷಾಸ್ನಾನದ ಈ ಕೃತ್ಯವು ವಿಶ್ವಾಸವನ್ನುಂಟುಮಾಡುವುದಿಲ್ಲ ಏಕೆಂದರೆ, ಅದಕ್ಕೆ ಮುಂಚಿನ ದಿನವೇ [ಕಾನ್ಸ್ಟೆಂಟೀನ್] ಸ್ಯೂಸ್ ದೇವನಿಗೆ ಯಾಗ ಮಾಡಿದ್ದನು. ಏಕೆಂದರೆ ಅವನಿಗೆ ಪಾಂಟಿಫೆಕ್ಸ್ ಮ್ಯಾಕ್ಸಿಮಸ್ ಪದವಿಯೂ ಇತ್ತು.”
ಸಾ.ಶ. 337ರಲ್ಲಿ ಅವನ ಮೃತ್ಯುವಿನ ದಿನದ ತನಕ, ಕಾನ್ಸ್ಟೆಂಟೀನ್ ಧಾರ್ಮಿಕ ವಿಷಯಗಳ ಪರಮ ಪ್ರಧಾನ ಮುಖಂಡನು, ಪಾಂಟಿಫೆಕ್ಸ್ ಮ್ಯಾಕ್ಸಿಮಸ್ ಎಂಬ ವಿಧರ್ಮಿ ಪದವಿಯನ್ನು ಹೊಂದಿದ್ದನು. ಅವನ ದೀಕ್ಷಾಸ್ನಾನದ ವಿಷಯದಲ್ಲಿ ಹೀಗೆ ಕೇಳುವುದು ವಿವೇಕಯುತವಾಗಿದೆ, ಶಾಸ್ತ್ರವಚನಗಳಲ್ಲಿ ಕೇಳಿಕೊಳ್ಳಲ್ಪಟ್ಟಂತೆ, ದೀಕ್ಷಾಸ್ನಾನದ ಮುಂಚೆ ನಿಜವಾದ ಪಶ್ಚಾತ್ತಾಪ ಮತ್ತು ಪರಿವರ್ತನೆಯು ತೋರಿಸಲ್ಪಟ್ಟಿತೋ? (ಅ. ಕೃತ್ಯಗಳು 2:38, 40, 41) ಯೆಹೋವ ದೇವರಿಗೆ ಕಾನ್ಸ್ಟೆಂಟೀನ್ನ ಸಮರ್ಪಣೆಯ ಸಂಕೇತವಾಗಿ ಅದು ಒಂದು ಸಂಪೂರ್ಣ ನೀರಿನ ನಿಮಜ್ಜನವಾಗಿತ್ತೋ?—ಅ. ಕೃತ್ಯಗಳು 8:36-39ನ್ನು ಹೋಲಿಸಿರಿ.
ಒಬ್ಬ “ಸಂತ”ನೋ?
ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೀಗೆ ಹೇಳುತ್ತದೆ: “ಕಾನ್ಸ್ಟೆಂಟೀನನಿಗೆ [ಮಹಾನ್] ಎಂಬ ಬಿರುದು ಕೊಡಲ್ಪಟ್ಟದ್ದು, ಒಬ್ಬ ವ್ಯಕ್ತಿಯೋಪಾದಿ ಅವನ ಗುಣದಿಂದಲ್ಲ, ಬದಲಾಗಿ ಅವನ ಸಾಧನೆಗಳ ಕಾರಣದಿಂದಲೇ. ಅವನ ವ್ಯಕ್ತಿತ್ವಕ್ಕನುಸಾರ ಬೆಲೆಕಟ್ಟುವುದಾದರೆ, ಅವನು ಪುರಾತನ ಅಥವಾ ಆಧುನಿಕ ಸಮಯಗಳಲ್ಲಿ ಯಾರಿಗೆ [ಮಹಾನ್] ಉಪನಾಮವು ಕೊಡಲ್ಪಟ್ಟಿದೆಯೋ ಅವರೆಲ್ಲರಲ್ಲಿ ಅವನು ತೀರ ಕೀಳ್ಮಟ್ಟದಲ್ಲಿದ್ದಾನೆ.” ಮತ್ತು ಕ್ರೈಸ್ತತ್ವದ ಇತಿಹಾಸ (ಇಂಗ್ಲಿಷ್) ಎಂಬ ಪುಸ್ತಕವು ನಮಗೆ ತಿಳಿಸುವುದು: “ಅವನ ಹಿಂಸಾತ್ಮಕ ಸಿಡುಕುಸ್ವಭಾವ ಹಾಗೂ ಕೋಪದಲ್ಲಿನ ಅವನ ಕ್ರೂರತ್ವದ ವರದಿಗಳು ಹಿಂದೆಯೇ ಕೊಡಲ್ಪಟ್ಟಿದ್ದವು. . . . ಮಾನವ ಜೀವಕ್ಕಾಗಿ ಅವನಿಗೆ ಯಾವುದೇ ಗೌರವವಿರಲಿಲ್ಲ. . . . ಅವನಿಗೆ ವಯಸ್ಸಾದಂತೆ ಅವನ ಖಾಸಗಿ ಜೀವನವು ಘೋರವಾಗಿ ಪರಿಣಮಿಸಿತು.”
ಸ್ಪಷ್ಟವಾಗಿಯೇ ಕಾನ್ಸ್ಟೆಂಟೀನ್ಗೆ ಗಂಭೀರತರವಾದ ವ್ಯಕ್ತಿತ್ವ ಸಮಸ್ಯೆಗಳಿದ್ದವು. “ಕೋಪದಿಂದ ಸಿಡಿದುಬೀಳುತ್ತಿದ್ದ ಅವನ ಸ್ವಭಾವವೇ ಅನೇಕ ವೇಳೆ ಅವನು ಪಾತಕಗಳನ್ನು ನಡೆಸುವುದಕ್ಕೆ ಕಾರಣವಾಗಿತ್ತು” ಎಂದು ಒಬ್ಬ ಇತಿಹಾಸದ ಸಂಶೋಧಕನು ಹೇಳುತ್ತಾನೆ. (“ರಾಜವಂಶೀಯ ಕೊಲೆಗಳು” ಎಂಬ ರೇಖಾಚೌಕವನ್ನು ನೋಡಿರಿ.) ಯೂರೋಪಿನ ಇತಿಹಾಸ (ಇಂಗ್ಲಿಷ್) ಎಂಬ ತನ್ನ ಪುಸ್ತಕದಲ್ಲಿ ಇತಿಹಾಸಕಾರ ಏಚ್. ಫಿಶರ್, ಕಾನ್ಸ್ಟೆಂಟೀನ್ “ಒಬ್ಬ ಕ್ರೈಸ್ತ ಸ್ವಭಾವ”ವುಳ್ಳ ವ್ಯಕ್ತಿಯಾಗಿರಲಿಲ್ಲ ಎಂದು ವಾದಿಸುತ್ತಾನೆ. ನಿಜಾಂಶಗಳು ಅವನು “ಹೊಸ ವ್ಯಕ್ತಿತ್ವ”ವನ್ನು (NW) ಧರಿಸಿಕೊಂಡ ಮತ್ತು ಯಾರಲ್ಲಿ ದೇವರಾತ್ಮ ಫಲವನ್ನು—ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಉಪಕಾರ, ನಂಬಿಕೆ, ಸಾಧುತ್ವ, ಶಮೆದಮೆ—ಕಂಡುಕೊಳ್ಳಸಾಧ್ಯವೋ ಆ ನಿಜ ಕ್ರೈಸ್ತನ ಸ್ವಭಾವವನ್ನು ತೋರಿಸುವುದಿಲ್ಲ.—ಕೊಲೊಸ್ಸೆ 3:9, 10; ಗಲಾತ್ಯ 5:22, 23.
ಅವನ ಪ್ರಯತ್ನಗಳ ಪರಿಣಾಮಗಳು
ವಿಧರ್ಮಿ ಪಾಂಟಿಫೆಕ್ಸ್ ಮ್ಯಾಕ್ಸಿಮಸ್, ಅಂದರೆ ರೋಮನ್ ಸಾಮ್ರಾಜ್ಯದ ಧಾರ್ಮಿಕ ಮುಖಂಡನೋಪಾದಿ ಕಾನ್ಸ್ಟೆಂಟೀನ್ ಧರ್ಮಭ್ರಷ್ಟ ಚರ್ಚಿನ ಬಿಷಪರನ್ನು ತನ್ನ ಕಡೆಗೆ ಸೆಳೆದುಕೊಳ್ಳಲು ಪ್ರಯತ್ನಿಸಿದನು. ಅವನು ಅವರಿಗೆ ರೋಮನ್ ಸರಕಾರೀ ಧರ್ಮದ ಅಧಿಕಾರಿಗಳಾಗಿ ಅಧಿಕಾರದ ಸ್ಥಾನಗಳನ್ನು, ಪ್ರಮುಖತೆ ಮತ್ತು ಸಂಪತ್ತನ್ನು ನೀಡಿದನು. ಕ್ಯಾಥೊಲಿಕ್ ಎನ್ಸೈಕ್ಲೊಪೀಡಿಯ ಒಪ್ಪಿಕೊಳ್ಳುವುದು: “ಕೆಲವು ಬಿಷಪರು ಆಸ್ಥಾನದ ಭವ್ಯತೆಯ ಕಾರಣ ಕುರುಡಾಗಿಸಲ್ಪಟ್ಟು, ಚಕ್ರವರ್ತಿಯನ್ನು ದೇವರ ದೇವದೂತನೋಪಾದಿ, ಪವಿತ್ರ ವ್ಯಕ್ತಿಯೋಪಾದಿ ಸ್ತುತಿಸುವ ಮತ್ತು ಅವನು ದೇವರ ಪುತ್ರನಂತೆ ಸ್ವರ್ಗದಲ್ಲಿ ಆಳುವನೆಂದು ಭವಿಷ್ಯನುಡಿಯುವಷ್ಟರ ಮಟ್ಟಿಗೂ ಹೋದರು.”
ಧರ್ಮಭ್ರಷ್ಟ ಕ್ರೈಸ್ತತ್ವವು ರಾಜಕೀಯ ಸರಕಾರದ ಅನುಗ್ರಹದ ಕೆಳಗೆ ಬಂದಾಗ, ಅದು ಹೆಚ್ಚೆಚ್ಚು ಈ ಲೋಕದ, ಈ ಐಹಿಕ ವ್ಯವಸ್ಥೆಯ ಭಾಗವಾಯಿತು ಮತ್ತು ಯೇಸು ಕ್ರಿಸ್ತನ ಬೋಧನೆಗಳಿಂದ ದೂರ ಸರಿಯಿತು. (ಯೋಹಾನ 15:19; 17:14, 16; ಪ್ರಕಟನೆ 17:1, 2) ಫಲಿತಾಂಶವಾಗಿ, ಸುಳ್ಳು ಸಿದ್ಧಾಂತಗಳು ಮತ್ತು ಆಚರಣೆಗಳೊಂದಿಗೆ—ತ್ರಯೈಕ್ಯ, ಪ್ರಾಣದ ಅಮರತ್ವ, ನರಕಾಗ್ನಿ, ಪರ್ಗೆಟರಿ, ಸತ್ತವರಿಗಾಗಿ ಪ್ರಾರ್ಥನೆಗಳು, ಜಪಮಾಲೆ, ಮೂರ್ತಿ, ಪ್ರತಿಮೆಗಳಂಥ ವಸ್ತುಗಳ ಉಪಯೋಗ—“ಕ್ರೈಸ್ತತ್ವ”ವನ್ನು ಒಂದುಗೂಡಿಸಲಾಯಿತು.—2 ಕೊರಿಂಥ 6:14-18ನ್ನು ಹೋಲಿಸಿರಿ.
ಕಾನ್ಸ್ಟೆಂಟೀನ್ನಿಂದ ಚರ್ಚು ನಿರಂಕುಶಾಧಿಕಾರಿಯಾಗಿರುವ ಒಲವನ್ನು ಸಹ ಪಡೆದುಕೊಂಡಿತು. ವಿದ್ವಾಂಸರಾದ ಹೆಂಡರ್ಸನ್ ಮತ್ತು ಬಕ್ ಹೇಳುವುದು: “ಸುವಾರ್ತೆಯ ಸರಳತೆಯು ಕೆಡಿಸಲ್ಪಟ್ಟಿತು, ಆಡಂಬರದ ಸಂಸ್ಕಾರಗಳು ಮತ್ತು ವ್ರತಾಚರಣೆಗಳು ಪರಿಚಯಿಸಲ್ಪಟ್ಟವು, ಕ್ರೈಸ್ತತ್ವದ ಶಿಕ್ಷಕರಿಗೆ ಲೌಕಿಕ ಗೌರವಗಳು ಮತ್ತು ಸಂಬಳಗಳು ಕೊಡಲ್ಪಟ್ಟವು ಹಾಗೂ ಕ್ರಿಸ್ತನ ರಾಜ್ಯವು ಹೆಚ್ಚುಕಡಿಮೆ ಈ ಲೋಕದ ರಾಜ್ಯವಾಗಿ ಪರಿವರ್ತನೆಗೊಂಡಿತು.”
ನಿಜ ಕ್ರೈಸ್ತತ್ವವು ಎಲ್ಲಿದೆ?
ಐತಿಹಾಸಿಕ ನಿಜಾಂಶಗಳು ಕಾನ್ಸ್ಟೆಂಟೀನ್ನ “ಮಹತ್ವ”ದ ಹಿಂದಿರುವ ಸತ್ಯವನ್ನು ಹೊರಗೆಡಹುತ್ತವೆ. ಸತ್ಯ ಕ್ರೈಸ್ತ ಸಭೆಯ ಶಿರಸ್ಸಾದ ಯೇಸು ಕ್ರಿಸ್ತನಿಂದ ಸ್ಥಾಪಿಸಲ್ಪಡುವ ಬದಲು, ಕ್ರೈಸ್ತಪ್ರಪಂಚವು ಭಾಗಶಃ ರಾಜಕೀಯ ಔಚಿತ್ಯ ಮತ್ತು ಒಬ್ಬ ವಿಧರ್ಮಿ ಚಕ್ರವರ್ತಿಯ ಕುಟಿಲ ವಿಧಾನಗಳ ಫಲಿತಾಂಶವಾಗಿದೆ. ಉಚಿತವಾಗಿಯೇ, ಇತಿಹಾಸಕಾರನಾದ ಪಾಲ್ ಜಾನ್ಸನ್ ಕೇಳುವುದು: “ಸಾಮ್ರಾಜ್ಯವು ಕ್ರೈಸ್ತತ್ವಕ್ಕೆ ಮಣಿಯಿತೋ ಇಲ್ಲವೇ ಕ್ರೈಸ್ತತ್ವವು ತನ್ನನ್ನು ಸಾಮ್ರಾಜ್ಯಕ್ಕೆ ಮಾರಿಕೊಂಡಿತೋ?”
ಶುದ್ಧ ಕ್ರೈಸ್ತತ್ವಕ್ಕೆ ಅಂಟಿಕೊಳ್ಳಲು ನಿಜವಾಗಿಯೂ ಬಯಸುವವರೆಲ್ಲರಿಗೂ, ಇಂದಿರುವ ಸತ್ಯ ಕ್ರೈಸ್ತ ಸಭೆಯನ್ನು ಗುರುತಿಸಿ, ಅದರೊಂದಿಗೆ ಸಹವಾಸಿಸುವಂತೆ ಸಹಾಯಮಾಡಸಾಧ್ಯವಿದೆ. ಯೆಹೋವನ ಸಾಕ್ಷಿಗಳು ಲೋಕವ್ಯಾಪಕವಾಗಿ ಪ್ರಾಮಾಣಿಕ ಹೃದಯದ ಜನರಿಗೆ ಸತ್ಯ ಕ್ರೈಸ್ತತ್ವವನ್ನು ಗುರುತಿಸಿ, ಸ್ವೀಕಾರಯೋಗ್ಯ ವಿಧದಲ್ಲಿ ದೇವರನ್ನು ಆರಾಧಿಸುವಂತೆ ಕಲಿಸಲು ಸಂಪೂರ್ಣ ರೀತಿಯಲ್ಲಿ ಸಿದ್ಧಮನಸ್ಸುಳ್ಳವರಾಗಿದ್ದಾರೆ.—ಯೋಹಾನ 4:23, 24.
[ಪಾದಟಿಪ್ಪಣಿ]
a ಡಾನಟಿಸ್ಮ್ ಎಂಬುದು ಸಾ.ಶ. ನಾಲ್ಕನೇ ಮತ್ತು ಐದನೆಯ ಶತಮಾನಗಳ ಒಂದು “ಕ್ರೈಸ್ತ” ಪಂಥವಾಗಿತ್ತು. ಧಾರ್ಮಿಕ ಸಂಸ್ಕಾರಗಳ ಸಪ್ರಮಾಣತೆ ಪಾದ್ರಿಯ ನೈತಿಕ ನಡವಳಿಕೆಯ ಮೇಲೆ ಅವಲಂಬಿಸುತ್ತದೆ ಮತ್ತು ಗಂಭೀರತರದ ಪಾಪದ ದೋಷಿಗಳಾದ ಜನರನ್ನು ಚರ್ಚು ತನ್ನ ಸದಸ್ಯತ್ವದಿಂದ ತೆಗೆದುಹಾಕಬೇಕೆಂದು ಅದರ ಅನುಯಾಯಿಗಳು ಪ್ರತಿಪಾದಿಸಿದರು. ಏರಿಯನಿಸಮ್ ಯೇಸು ಕ್ರಿಸ್ತನ ದೈವಿಕತ್ವವನ್ನು ನಿರಾಕರಿಸಿದ ನಾಲ್ಕನೆಯ ಶತಮಾನದ ಒಂದು “ಕ್ರೈಸ್ತ” ಚಳವಳಿಯಾಗಿತ್ತು. ದೇವರು ಹುಟ್ಟಲಿಲ್ಲ ಮತ್ತು ಅವನಿಗೆ ಆರಂಭವಿಲ್ಲವೆಂದು ಏರಿಯಸನು ಕಲಿಸಿದನು. ಪುತ್ರನು ಹುಟ್ಟಿದ್ದರಿಂದ, ತಂದೆಯಂತೆ ಅದೇ ಅರ್ಥದಲ್ಲಿ ಅವನು ದೇವರಾಗಸಾಧ್ಯವಿಲ್ಲ. ಪುತ್ರನು ನಿತ್ಯತೆಯಿಂದ ಅಸ್ವಿತ್ವದಲ್ಲಿರಲಿಲ್ಲ ಬದಲಾಗಿ ಸೃಷ್ಟಿಸಲ್ಪಟ್ಟು, ತಂದೆಯ ಚಿತ್ತದಿಂದ ಅಸ್ತಿತ್ವದಲ್ಲಿದ್ದಾನೆ.
[ಪುಟ 28 ರಲ್ಲಿರುವ ಚೌಕ]
ಕಾನ್ಸ್ಟೆಂಟೀನ್ ಮತ್ತು ನೈಸೀಯ ಮಹಾಸಭೆ
ಅಸ್ನಾನಿತ ಚಕ್ರವರ್ತಿಯಾದ ಕಾನ್ಸ್ಟೆಂಟೀನನು ನೈಸೀಯದ ಮಹಾಸಭೆಯಲ್ಲಿ ಯಾವ ಪಾತ್ರವನ್ನು ವಹಿಸಿದನು? ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುವುದು: “ಚರ್ಚೆಗಳನ್ನು ಸಕ್ರಿಯವಾಗಿ ಮಾರ್ಗದರ್ಶಿಸುತ್ತಾ, ಕಾನ್ಸ್ಟೆಂಟೀನ್ ಸ್ವತಃ ಅಧ್ಯಕ್ಷತೆ ವಹಿಸಿದನು . . . ಚಕ್ರವರ್ತಿಗೆ ಭಯಭಕ್ತಿಯನ್ನು ತೋರಿಸುತ್ತಾ, ಕೇವಲ ಇಬ್ಬರನ್ನು ಹೊರತುಪಡಿಸಿ ಎಲ್ಲ ಬಿಷಪರು, ಸೂತ್ರಗಳಿಗೆ ಹಸ್ತಾಕ್ಷರವನ್ನು ಹಾಕಿದರು. ಅವರಲ್ಲಿ ಹೆಚ್ಚಿನವರು ತಮ್ಮ ಮನಸ್ಸಿಗೆ ವಿರುದ್ಧವಾಗಿ ಹಾಗೆ ಮಾಡಿದರು.”
ಎರಡು ತಿಂಗಳುಗಳ ಬಿರುಸಿನ ಧಾರ್ಮಿಕ ವಾಗ್ವಾದದ ಅನಂತರ, ಈ ವಿಧರ್ಮಿ ರಾಜಕಾರಣಿಯು ಹಸ್ತಕ್ಷೇಪಮಾಡಿದನು ಮತ್ತು ಯೇಸು ದೇವರಾಗಿದ್ದಾನೆ ಎಂದು ಹೇಳಿದವರ ಪರವಹಿಸಲು ನಿರ್ಣಯಮಾಡಿದನು. ಹಾಗೇಕೆ? “ಮೂಲಭೂತವಾಗಿ ಕಾನ್ಸ್ಟೆಂಟೀನನಿಗೆ ಗ್ರೀಕ್ ದೇವತಾಶಾಸ್ತ್ರದಲ್ಲಿ ಕೇಳಲ್ಪಡುತ್ತಿದ್ದ ಯಾವುದೇ ಪ್ರಶ್ನೆಗಳ ತಿಳಿವಳಿಕೆಯಿರಲಿಲ್ಲ” ಎಂದು ಕ್ರೈಸ್ತ ಸಿದ್ಧಾಂತದ ಒಂದು ಪುಟ್ಟ ಇತಿಹಾಸ (ಇಂಗ್ಲಿಷ್) ಹೇಳುತ್ತದೆ. ಆದರೆ ಅವನಿಗೆ ಇಷ್ಟು ಮಾತ್ರ ಚೆನ್ನಾಗಿ ತಿಳಿದಿತ್ತೇನೆಂದರೆ, ಧಾರ್ಮಿಕ ವಿಭಜನೆಯು ತನ್ನ ಸಾಮ್ರಾಜ್ಯಕ್ಕೆ ಬೆದರಿಕೆಯಾಗಿದೆ. ಮತ್ತು ಅವನು ತನ್ನ ಸಾಮ್ರಾಜ್ಯವನ್ನು ಭದ್ರಪಡಿಸಲು ದೃಢನಿಶ್ಚಯವುಳ್ಳವನಾಗಿದ್ದನು.
ನೈಸೀಯದಲ್ಲಿ ಕಾನ್ಸ್ಟೆಂಟೀನ್ನ ನೇತೃತ್ವದಲ್ಲಿ ಬರೆಯಲ್ಪಟ್ಟ ಕೊನೆಯ ದಾಖಲೆಯ ಸಂಬಂಧದಲ್ಲಿ, ಇಸ್ಡಾರೀಯ ಟು ಎಲಿಂಕೂ ಎತ್ನೂಸ್ (ಗ್ರೀಕ್ ರಾಷ್ಟ್ರದ ಇತಿಹಾಸ) ಗಮನಿಸುವುದು: “ಸೈದ್ಧಾಂತಿಕ ವಿಚಾರಗಳ ಕಡೆಗೆ [ಕಾನ್ಸ್ಟೆಂಟೀನನ] ತಾತ್ಸಾರವನ್ನು, ಏನೇ ಆದರೂ ಚರ್ಚಿನೊಳಗೆ ಐಕ್ಯವನ್ನು ಪುನಃಸ್ಥಾಪಿಸಲು ಪ್ರಯತ್ನಿಸುವುದರಲ್ಲಿನ ಅವನ ಹಟಮಾರಿತನ ಮತ್ತು ‘ಕ್ರೈಸ್ತೇತರರ ಬಿಷಪ್ನ’ ರೀತಿಯಲ್ಲಿ ಯಾವುದೇ ಧಾರ್ಮಿಕ ವಿಷಯದ ಕುರಿತು ಅಂತಿಮ ನಿರ್ಧಾರವನ್ನು ಮಾಡುತ್ತಿದ್ದ ಅವನ ನಿಶ್ಚಿತಾಭಿಪ್ರಾಯವನ್ನು . . . ತೋರಿಸುತ್ತದೆ.” ಆ ಮಹಾಸಭೆಯಲ್ಲಿ ಮಾಡಲ್ಪಟ್ಟ ನಿರ್ಣಯಗಳ ಹಿಂದೆ ದೇವರ ಆತ್ಮವು ಇದ್ದಿರಸಾಧ್ಯವೋ?—ಅ. ಕೃತ್ಯಗಳು 15:28, 29ನ್ನು ಹೋಲಿಸಿರಿ.
[ಪುಟ 29 ರಲ್ಲಿರುವ ಚೌಕ]
ರಾಜವಂಶೀಯ ಕೊಲೆಗಳು
ಈ ತಲೆಬರಹದ ಕೆಳಗೆ, ಇಸ್ಡಾರೀಯ ಟು ಎಲಿಂಕೂ ಎತ್ನೂಸ್ (ಗ್ರೀಕ್ ರಾಷ್ಟ್ರದ ಇತಿಹಾಸ)ವು, “ಕಾನ್ಸ್ಟೆಂಟೀನ್ ಮಾಡಿದ ಅಸಹ್ಯಕರವಾದ ಕುಟುಂಬ ಪಾತಕಗಳನ್ನು” ವರ್ಣಿಸುತ್ತದೆ. ತನ್ನ ರಾಜವಂಶವನ್ನು ಸ್ಥಾಪಿಸಿದ ಕೂಡಲೇ, ಅವನು ಅನಿರೀಕ್ಷಿತ ಸಾಧನೆಗಳಲ್ಲಿ ಹೇಗೆ ಆನಂದಿಸಬೇಕೆಂಬುದನ್ನು ಮರೆತುಬಿಟ್ಟನು ಮತ್ತು ಅವನ ಸುತ್ತುಮುತ್ತಲಿನ ಅಪಾಯಗಳ ಅರಿವುಳ್ಳವನಾದನು. ಸಂದೇಹ ಸ್ವಭಾವದವನಾಗಿದ್ದುದರಿಂದ ಮತ್ತು ಪ್ರಾಯಶಃ ಮುಖಸ್ತುತಿಕಾರರಿಂದ ಪ್ರೇರಿಸಲ್ಪಟ್ಟದ್ದರಿಂದ, ಅವನು ಮೊದಲು ತನ್ನ ಸೋದರಳಿಯನಾದ ಲಿಸಿನೀಯೇನಸ್ನ—ಅವನು ಆಗಲೇ ವಧಿಸಿದ್ದ ಸಹ ಚಕ್ರವರ್ತಿಯ ಪುತ್ರನ—ಮೇಲೆ ಸಂಶಯ ತಾಳಿದನು. ಅವನ ಕೊಲೆಯನ್ನು ಅನುಸರಿಸಿ ಕಾನ್ಸ್ಟೆಂಟೀನನ ಸ್ವಂತ ಜೇಷ್ಠಪುತ್ರನಾದ ಕ್ರಿಸ್ಪಸ್ನ ವಧೆಯು ನಡೆಯಿತು. ಕ್ರಿಸ್ಪಸ್ನ ಮಲತಾಯಿ ಫಾಸ್ಟಳು, ತನ್ನ ಸ್ವಂತ ಮಗನ ಪೂರ್ತಿ ಅಧಿಕಾರಕ್ಕೆ ಅವನು ತಡೆಯಂತೆ ತೋರಿದ್ದರಿಂದ ಅವನನ್ನು ವಧಿಸಿದ್ದಳು.
ಫಾಸ್ಟಳ ಈ ಕೃತ್ಯವು ಕೊನೆಗೆ ಆಕೆಯ ಸ್ವಂತ ನಾಟಕೀಯ ಮೃತ್ಯುವಿಗೆ ಕಾರಣವಾಯಿತು. ಅಂತ್ಯದ ತನಕ ತನ್ನ ಪುತ್ರನಾದ ಕಾನ್ಸ್ಟೆಂಟೀನನ ಮೇಲೆ ಪ್ರಭಾವವನ್ನು ಬೀರಿದ್ದ ರಾಣಿ ಹೆಲೆನಳು, ಈ ಕೊಲೆಯಲ್ಲಿ ಒಳಗೂಡಿದ್ದಳೆಂದು ತೋರುತ್ತದೆ. ಕಾನ್ಸ್ಟೆಂಟೀನನ್ನು ಆಗಾಗ್ಗೆ ನಿಯಂತ್ರಿಸಿದ ಅವಿವೇಕತನದ ಭಾವನೆಗಳು ಸಹ, ಅವನ ಮಿತ್ರರು ಮತ್ತು ಸಹವಾಸಿಗಳಲ್ಲಿ ಅನೇಕರನ್ನು ಕೊಲ್ಲುವುದಕ್ಕೆ ನೆರವನ್ನು ನೀಡಿದವು. ಮಧ್ಯ ಯುಗಗಳ ಇತಿಹಾಸ (ಇಂಗ್ಲಿಷ್) ಎಂಬ ಪುಸ್ತಕವು ಸಮಾಪ್ತಿಗೊಳಿಸುವುದು: “ಅವನ ಸ್ವಂತ ಪುತ್ರನ ಮತ್ತು ಪತ್ನಿಯ ಮರಣದಂಡನೆಯು—ವಾಸ್ತವದಲ್ಲಿ ಕೊಲೆಯು—ಕ್ರೈಸ್ತತ್ವದಲ್ಲಿರುವ ಯಾವುದೇ ಆತ್ಮಿಕ ಪ್ರಭಾವದಿಂದ ಅವನು ಸ್ಪರ್ಶಿಸಲ್ಪಟ್ಟಿರಲಿಲ್ಲವೆಂಬುದನ್ನು ಸೂಚಿಸುತ್ತದೆ.”
[ಪುಟ 30 ರಲ್ಲಿರುವ ಚಿತ್ರ]
ರೋಮ್ನಲ್ಲಿರುವ ಈ ಕಮಾನು ಕಾನ್ಸ್ಟೆಂಟೀನನ್ನು ಮಹಿಮೆಪಡಿಸಲು ಉಪಯೋಗಿಸಲ್ಪಟ್ಟಿದೆ
[ಪುಟ 26 ರಲ್ಲಿರುವ ಚಿತ್ರ]
Musée du Louvre, Paris