ನೀವು ಅವರ ಘನತೆಯನ್ನು ಗೌರವಿಸುತ್ತೀರೊ?
ನಂಬಲಾರದಷ್ಟು ಕೊಳಕಾದ ಹಾಗೂ ದುರ್ವಾಸನೆಯುಳ್ಳ ಸ್ಥಳದಲ್ಲಿ, ಪ್ರಾಣಿಗಳಂತೆ ಒಟ್ಟುಗೂಡಿಸಲ್ಪಟ್ಟ ಆಫ್ರಿಕದ ಮೂಲನಿವಾಸಿಗಳನ್ನು, ಹಡಗಿನ ಸರಕಿನಂತೆ ಅಮೆರಿಕಕ್ಕೆ ಕಳುಹಿಸಲಾಯಿತು. ಕಡಿಮೆಪಕ್ಷ ಅವರಲ್ಲಿ ಅರ್ಧದಷ್ಟು ಮಂದಿ, ತಮ್ಮ ಗಮ್ಯಸ್ಥಾನವನ್ನು ತಲಪುವ ಮುನ್ನವೇ ಸಾಯುವಂತೆ ನಿರೀಕ್ಷಿಸಲಾಗಿತ್ತು. ಒಬ್ಬರು ಇನ್ನೊಬ್ಬರನ್ನು ಪುನಃ ಎಂದಿಗೂ ನೋಡದಂತೆ, ಕುಟುಂಬ ಸದಸ್ಯರು ನಿರ್ದಯವಾಗಿ ಪ್ರತ್ಯೇಕಿಸಲ್ಪಟ್ಟರು. ತನ್ನ ಜೊತೆಮಾನವನ ಕಡೆಗಿನ ಮಾನವನ ನಿರ್ದಯ ವರ್ತನೆಯಲ್ಲಿ, ಗುಲಾಮ ವ್ಯಾಪಾರವು ಅತ್ಯಂತ ಕರಾಳವಾದ ಘಟನೆಯಾಗಿತ್ತು. ಪರಾಕ್ರಮಶಾಲಿಗಳಾದ ವಿಜಯಿಗಳು ಅಭದ್ರರಾದ ಸ್ಥಳೀಯ ಜನರನ್ನು ಕ್ರೂರವಾಗಿ ಸ್ವಾಧೀನಪಡಿಸಿಕೊಂಡಾಗ, ಅಂತಹ ಇನ್ನಿತರ ಘಟನೆಗಳು ಸಂಭವಿಸಿದವು.
ಒಬ್ಬ ವ್ಯಕ್ತಿಯಿಂದ ಘನತೆಯನ್ನು ಕಸಿದುಕೊಳ್ಳುವುದು, ಶಾರೀರಿಕ ಹೊಡೆತಗಳಿಂದ ಪೀಡಿಸುವುದಕ್ಕಿಂತಲೂ ಹೆಚ್ಚು ಪಾಶವೀಯವಾಗಿರಸಾಧ್ಯವಿದೆ. ಅದು ಮಾನವ ಮನೋವೃತ್ತಿಗೆ ಧ್ವಂಸಕಾರಕವಾದದ್ದಾಗಿದೆ. ಹೆಚ್ಚಿನ ದೇಶಗಳಲ್ಲಿ ಗುಲಾಮಗಿರಿಯು ರದ್ದುಮಾಡಲ್ಪಟ್ಟಿದೆಯಾದರೂ, ಬಹುಶಃ ಇನ್ನೂ ಹೆಚ್ಚು ನವಿರಾದ ರೂಪಗಳಲ್ಲಿ, ಮಾನವ ಘನತೆಯನ್ನು ಶಿಥಿಲಗೊಳಿಸುವ ಕಾರ್ಯವು ಮುಂದುವರಿಯುತ್ತಾ ಇದೆ.
ಇನ್ನೊಂದು ಕಡೆಯಲ್ಲಿ, ನಿಜ ಕ್ರೈಸ್ತರು, ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು’ ಎಂಬ ಯೇಸು ಕ್ರಿಸ್ತನ ಬುದ್ಧಿವಾದಕ್ಕೆ ಲಕ್ಷ್ಯಕೊಡಲು ಹೆಣಗಾಡುತ್ತಾರೆ. ಆದುದರಿಂದ ಅವರು ತಮ್ಮನ್ನು ಹೀಗೆ ಪ್ರಶ್ನಿಸಿಕೊಳ್ಳುತ್ತಾರೆ: ‘ಇತರರ ವೈಯಕ್ತಿಕ ಘನತೆಯನ್ನು ನಾನು ಗೌರವಿಸುತ್ತೇನೊ?’—ಲೂಕ 10:27.
ಘನತೆಯು ದೃಷ್ಟಾಂತಿಸಲ್ಪಟ್ಟದ್ದು
ಒಂದು ಶಬ್ದಕೋಶಕ್ಕನುಸಾರ, ಯೋಗ್ಯರಾಗಿರುವುದು, ಸನ್ಮಾನಿಸಲ್ಪಡುವುದು, ಅಥವಾ ಗಣ್ಯತಾಭಾವದಿಂದ ವೀಕ್ಷಿಸಲ್ಪಡುವುದರ ಗುಣ ಅಥವಾ ಸ್ಥಿತಿಯೇ ಘನತೆಯಾಗಿದೆ. ವಿಶ್ವದ ಪರಮಾಧಿಕಾರಿಯಾದ ಯೆಹೋವ ದೇವರ ಅಂತಸ್ತಿನ ಕುರಿತಾದ ಎಂತಹ ಸೂಕ್ತವಾದ ವರ್ಣನೆ! ನಿಜವಾಗಿಯೂ, ಆಗಿಂದಾಗ್ಗೆ ಶಾಸ್ತ್ರವಚನಗಳು ಯೆಹೋವನನ್ನು ಹಾಗೂ ಆತನ ಪರಮಾಧಿಕಾರವನ್ನು ಘನತೆಯೊಂದಿಗೆ ಜೊತೆಗೂಡಿಸುತ್ತವೆ. ಮೋಶೆ, ಯೆಶಾಯ, ಯೆಹೆಜ್ಕೇಲ, ದಾನಿಯೇಲ, ಅಪೊಸ್ತಲ ಯೋಹಾನ, ಮತ್ತು ಇನ್ನಿತರರು, ಸರ್ವೋನ್ನತನ ಹಾಗೂ ಆತನ ಸ್ವರ್ಗೀಯ ಆಸ್ಥಾನದ ಪ್ರೇರಿತ ದರ್ಶನಗಳನ್ನು ಪಡೆದುಕೊಳ್ಳುವಷ್ಟು ಸುಯೋಗಿತರಾಗಿದ್ದರು. ಮತ್ತು ಅವರ ವರ್ಣನೆಗಳು, ಭಯಭಕ್ತಿಪ್ರೇರಕವಾದ ಮಹಿಮೆ ಹಾಗೂ ಘನತೆಯನ್ನು ಸಮಂಜಸವಾಗಿ ಚಿತ್ರಿಸಿದವು. (ವಿಮೋಚನಕಾಂಡ 24:9-11; ಯೆಶಾಯ 6:1; ಯೆಹೆಜ್ಕೇಲ 1:26-28; ದಾನಿಯೇಲ 7:9; ಪ್ರಕಟನೆ 4:1-3) ಸ್ತುತಿಯ ಒಂದು ಪ್ರಾರ್ಥನೆಯಲ್ಲಿ ರಾಜ ದಾವೀದನು ಹೇಳಿದ್ದು: “ಯೆಹೋವಾ, ಮಹಿಮಪ್ರತಾಪವೈಭವ ಪರಾಕ್ರಮಪ್ರಭಾವಗಳು ನಿನ್ನವು; ಭೂಮ್ಯಾಕಾಶಗಳಲ್ಲಿರುವದೆಲ್ಲಾ ನಿನ್ನದೇ.” (1 ಪೂರ್ವಕಾಲವೃತ್ತಾಂತ 29:11) ನಿಜವಾಗಿಯೂ ಸ್ವತಃ ಯೆಹೋವ ದೇವರಿಗಿಂತ ಇನ್ನಾರೂ ಸನ್ಮಾನ ಹಾಗೂ ಗಣ್ಯತೆಗೆ ಹೆಚ್ಚು ಯೋಗ್ಯರಾಗಿಲ್ಲ.
ತನ್ನ ಸ್ವರೂಪ ಹಾಗೂ ಹೋಲಿಕೆಯಲ್ಲಿ ಮನುಷ್ಯನನ್ನು ಉಂಟುಮಾಡಿದ್ದರಲ್ಲಿ, ಯೆಹೋವನು ಮಾನವರಿಗೆ ಸ್ವಲ್ಪ ಮಟ್ಟಿಗಿನ ಯೋಗ್ಯತಾರ್ಹತೆ, ಸ್ವಗೌರವ, ಹಾಗೂ ಘನತೆಯನ್ನು ದಯಪಾಲಿಸಿದನು. (ಆದಿಕಾಂಡ 1:26) ಆದುದರಿಂದ, ಇತರರೊಂದಿಗಿನ ನಮ್ಮ ವ್ಯವಹಾರಗಳಲ್ಲಿ, ನಾವು ಪ್ರತಿಯೊಬ್ಬ ವ್ಯಕ್ತಿಗೆ ಸಲ್ಲತಕ್ಕ ಸನ್ಮಾನ ಹಾಗೂ ಗೌರವವನ್ನು ಕೊಡಬೇಕು. ನಾವು ಹಾಗೆ ಮಾಡುವಾಗ, ಕಾರ್ಯತಃ ನಾವು ಮಾನವ ಘನತೆಯ ಮೂಲನಾದ ಯೆಹೋವ ದೇವರನ್ನು ಅಂಗೀಕರಿಸುತ್ತಿದ್ದೇವೆ.—ಕೀರ್ತನೆ 8:4-9.
ಕುಟುಂಬ ಸಂಬಂಧಗಳಲ್ಲಿ ಘನತೆ
ಒಬ್ಬ ವಿವಾಹಿತ ಪುರುಷನಾಗಿದ್ದ ಅಪೊಸ್ತಲ ಪೇತ್ರನು, ದೈವಪ್ರೇರಣೆಯಿಂದ, ಕ್ರೈಸ್ತ ಗಂಡಂದಿರು ತಮ್ಮ ಹೆಂಡತಿಯರಿಗೆ “ಅವರು ದುರ್ಬಲರೋ ಎಂಬಂತೆ ಸನ್ಮಾನವನ್ನು” (NW) ಕೊಡುವಂತೆ ಬುದ್ಧಿಹೇಳಿದನು. (1 ಪೇತ್ರ 3:7; ಮತ್ತಾಯ 8:14) “ಇನ್ನೊಂದು ಕಡೆಯಲ್ಲಿ, ಹೆಂಡತಿಯು ತನ್ನ ಗಂಡನಿಗೆ ಆಳವಾದ ಗೌರವವನ್ನು ತೋರಿಸಬೇಕು” (NW) ಎಂದು ಅಪೊಸ್ತಲ ಪೌಲನು ಸಲಹೆ ನೀಡಿದನು. (ಎಫೆಸ 5:33) ಆದುದರಿಂದ, ವಿವಾಹದಲ್ಲಿ ಒಬ್ಬನ ಸಂಗಾತಿಯ ವೈಯಕ್ತಿಕ ಘನತೆಗಾಗಿರುವ ಸನ್ಮಾನ ಹಾಗೂ ಗೌರವವು, ಒಂದು ಬೈಬಲ್ ಆವಶ್ಯಕತೆಯಾಗಿದೆ. ಯಾವ ವಿಧಗಳಲ್ಲಿ ಇದನ್ನು ತೋರಿಸಸಾಧ್ಯವಿದೆ?
ಬೆಳೆಯುತ್ತಿರುವ ಸಸ್ಯವೊಂದನ್ನು ನೀರು ಚೈತನ್ಯಗೊಳಿಸುವಂತೆಯೇ, ಗಂಡ ಹಾಗೂ ಹೆಂಡತಿಯ ನಡುವೆ ಹಿತಕರವಾದ ಮಾತು ಹಾಗೂ ದಯಾಪರ ಭಾವಾಭಿನಯಗಳು—ಸಾರ್ವಜನಿಕವಾಗಿ ಹಾಗೂ ಖಾಸಗಿಯಾಗಿ—ಅವರ ಅನ್ಯೋನ್ಯವಾದ ಸಂಬಂಧಗಳನ್ನು ಪೋಷಿಸಬಲ್ಲವು. ಇದಕ್ಕೆ ವ್ಯತಿರಿಕ್ತವಾಗಿ, ಅನೇಕವೇಳೆ ಟಿವಿಯ ಕಾಮಿಡಿ ಸೀರಿಯಲ್ಗಳಲ್ಲಿ ಕೇಳಿಸಿಕೊಳ್ಳುವ ಕಟುವಾದ, ಅವಮಾನಕರ ಶಾಬ್ದಿಕ ದಾಳಿಗಳು ಅಥವಾ ಗೇಲಿಮಾಡುವ, ಅಣಕದ ಹೀನಯವಾದ ಹೇಳಿಕೆಗಳು ವಿನಾಶಕರವಾಗಿವೆ. ಅವು ಅಯೋಗ್ಯತೆ, ಖಿನ್ನತೆ, ಮತ್ತು ಅಸಮಾಧಾನದ ಅಪಾಯಕರ ಅನಿಸಿಕೆಗಳನ್ನು ಆರಂಭಿಸಬಲ್ಲವು; ಸುಲಭವಾಗಿ ವಾಸಿಯಾಗದ ಭಾವನಾತ್ಮಕ ಗಾಯಗಳನ್ನೂ ಅವು ಉಂಟುಮಾಡಬಲ್ಲವು.
ಇತರರ ವೈಯಕ್ತಿಕ ಘನತೆಯನ್ನು ಗೌರವಿಸುವುದು, ಅವರು ಹೇಗಿದ್ದಾರೋ ಹಾಗೆಯೇ ಅವರನ್ನು ಸ್ವೀಕರಿಸುವುದನ್ನು ಅರ್ಥೈಸುತ್ತದೆ—ಅವರನ್ನು ಯಾವುದೋ ಒಂದು ಪೂರ್ವಭಾವಿ ಆದರ್ಶದೊಳಗೆ ಸರಿಹೊಂದಿಸಲು ಪ್ರಯತ್ನಿಸುವುದಲ್ಲ ಅಥವಾ ಇತರರೊಂದಿಗೆ ಅನುಚಿತವಾದ ಹೋಲಿಕೆಗಳನ್ನು ಮಾಡುವುದಲ್ಲ. ಇದು ವಿಶೇಷವಾಗಿ ಗಂಡಂದಿರು ಹಾಗೂ ಹೆಂಡತಿಯರ ನಡುವೆ ಪ್ರಾಮುಖ್ಯವಾದದ್ದಾಗಿದೆ. ಎಲ್ಲಿ ಮಾತುಕತೆ ಹಾಗೂ ಅಭಿವ್ಯಕ್ತಿಗಳು ಸರಾಗವಾಗಿ ಹಾಗೂ ಸುಲಭವಾಗಿ ಹೊರಬರುತ್ತವೋ ಹಾಗೂ ಎಲ್ಲಿ ತಮ್ಮನ್ನು ಟೀಕಿಸಲಾಗುತ್ತದೆ ಅಥವಾ ಬಯ್ಯಲಾಗುತ್ತದೆ ಎಂಬ ಭಯವಿರುವುದಿಲ್ಲವೋ ಅಲ್ಲಿ ಅನ್ಯೋನ್ಯತೆಯು ಅಭಿವೃದ್ಧಿಯಾಗುತ್ತದೆ. ವಿವಾಹದಲ್ಲಿ ಒಬ್ಬನು ತನ್ನ ಸಹಜ ಮನೋಸ್ಥಿತಿಯಲ್ಲಿ ಇರಶಕ್ತನಾದಾಗ, ಕ್ರೂರವೂ ಕಠೋರವೂ ಆಗಿರುವ ಹೊರಗಣ ಲೋಕದಿಂದ ಮನೆಯು ನಿಜವಾಗಿಯೂ ರಕ್ಷಣಸ್ಥಾನವಾಗಿ ಪರಿಣಮಿಸುತ್ತದೆ.
ಮಕ್ಕಳು ತಮ್ಮ ಹೆತ್ತವರನ್ನು ಗೌರವಿಸುವ ಹಾಗೂ ಅವರಿಗೆ ವಿಧೇಯರಾಗುವ ಶಾಸ್ತ್ರೀಯ ಆಜ್ಞೆಯ ಕೆಳಗಿದ್ದಾರೆ. ಪ್ರತಿಯಾಗಿ, ವಿವೇಕಿಗಳೂ ಪ್ರೀತಿಪರರೂ ಆದ ಹೆತ್ತವರು ತಮ್ಮ ಮಕ್ಕಳ ಘನತೆಯನ್ನು ಗ್ರಹಿಸುವುದು ಒಳ್ಳೆಯದು. ಸುನಡತೆಗಾಗಿ ಹೃತ್ಪೂರ್ವಕವಾದ ಪ್ರಶಂಸೆ, ಇದರೊಂದಿಗೆ ಅಗತ್ಯವಿರುವಾಗ ತಾಳ್ಮೆಯಿಂದ ಕೊಡಲ್ಪಡುವ ಶಿಸ್ತು, “ಯೆಹೋವನ ಮಾನಸಿಕ ಕ್ರಮಪಡಿಸುವಿಕೆ”ಯನ್ನು (NW) ನೀಡುವುದರಲ್ಲಿ ಚೆನ್ನಾಗಿ ಕಾರ್ಯನಡಿಸುತ್ತದೆ. ಸತತವಾದ ಟೀಕೆ, ಕೂಗಾಟ, “ಮೂರ್ಖ” ಅಥವಾ “ಬುದ್ಧಿಹೀನ” ಎಂಬಂತಹ ಅಪಮಾನಕರ ಹೆಸರುಗಳಿಂದ ಕರೆಯವುದು, ಅವರನ್ನು ರೇಗಿಸುತ್ತದಷ್ಟೆ.—ಎಫೆಸ 6:4.
ಮೂವರು ಗಂಡುಮಕ್ಕಳು ಹಾಗೂ ಮೂವರು ಹೆಣ್ಣುಮಕ್ಕಳನ್ನು ಬೆಳೆಸುತ್ತಿರುವ, ಒಬ್ಬ ಕ್ರೈಸ್ತ ಹಿರಿಯನು ಹಾಗೂ ತಂದೆಯು ಹೇಳುವುದು: “ರಾಜ್ಯ ಸಭಾಗೃಹದಲ್ಲಿ, ಸಾಧ್ಯವಿರುವಷ್ಟು ನಿಶ್ಶಬ್ದವಾಗಿ ಅಗತ್ಯವಿದ್ದ ಶಿಸ್ತನ್ನು ನಾವು ಕೊಟ್ಟೆವು. ಸಾಮಾನ್ಯವಾಗಿ ಒಂದು ಮೊಣಕೈ ತಿವಿತ, ಕಟುವಾದ ಎಚ್ಚರಿಕೆಯ ದುರುಗುಟ್ಟು ಸಾಕಾಗುತ್ತಿತ್ತು. ಹೆಚ್ಚು ಗಂಭೀರವಾದ ಶಿಸ್ತು ಅಗತ್ಯವಿರುತ್ತಿದ್ದಲ್ಲಿ, ನಮ್ಮ ಮನೆಯಲ್ಲಿಯೇ ಖಾಸಗಿಯಾಗಿ, ಕೂಟದಲ್ಲಿರುವ ಇತರ ಮಕ್ಕಳು ಇಲ್ಲದಿರುವಾಗ ನಾವು ಶಿಸ್ತನ್ನು ಕೊಡುತ್ತಿದ್ದೆವು. ಈಗ ಮಕ್ಕಳು ದೊಡ್ಡವರಾಗಿರುವುದರಿಂದ, ಪ್ರತಿಯೊಬ್ಬರಿಗೆ ಅವರ ವೈಯಕ್ತಿಕ ಆವಶ್ಯಕತೆಗಳಿಗನುಸಾರ, ದೇವರ ವಾಕ್ಯದಿಂದ ಪ್ರೀತಿಪೂರ್ಣವಾದ, ವಿವೇಕಯುತ ಸಲಹೆಯನ್ನು ಕೊಡುವುದನ್ನು ಶಿಸ್ತು ಒಳಗೊಳ್ಳುತ್ತದೆ. ಈ ವೈಯಕ್ತಿಕ ವಿಷಯಗಳಲ್ಲಿ ನಾವು ಗೋಪ್ಯತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಹೀಗೆ ಖಾಸಗಿ ವಿಚಾರದಲ್ಲಿ ಹಾಗೂ ಘನತೆಯ ವಿಷಯದಲ್ಲಿ ಪ್ರತಿ ಮಗುವಿನ ಹಕ್ಕಿಗೆ ಗೌರವವನ್ನು ತೋರಿಸುತ್ತೇವೆ.”
ಕುಟುಂಬದೊಳಗಿನ ನಡೆನುಡಿಯಲ್ಲಿ ಒಳ್ಳೆಯ ಶಿಷ್ಟಾಚಾರಕ್ಕಾಗಿರುವ ಅಗತ್ಯವನ್ನು ಅಲಕ್ಷಿಸಬಾರದು. ಆಪ್ತತೆಯು, “ದಯವಿಟ್ಟು,” “ಉಪಕಾರ,” “ಕ್ಷಮಿಸಬೇಕು,” ಮತ್ತು “ತಪ್ಪಾಯಿತು” ಎಂಬಂತಹ ಮಾತುಗಳನ್ನು ನಾವು ಅಲಕ್ಷಿಸುವಂತೆ ಮಾಡಬಾರದು. ಒಬ್ಬನ ಸ್ವಂತ ಘನತೆಯನ್ನು ಕಾಪಾಡಿಕೊಳ್ಳುವುದರಲ್ಲಿ ಹಾಗೂ ಇತರರ ಘನತೆಯನ್ನು ಗೌರವಿಸುವುದರಲ್ಲಿ—ಎರಡರಲ್ಲಿಯೂ—ಒಳ್ಳೆಯ ಶಿಷ್ಟಾಚಾರವು ಮೂಲಭೂತ ಆವಶ್ಯಕತೆಯಾಗಿದೆ.
ಕ್ರೈಸ್ತ ಸಭೆಯಲ್ಲಿ
“ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ ಕೊಡುವೆನು” ಎಂದು ಯೇಸು ಹೇಳಿದನು. (ಮತ್ತಾಯ 11:28) ದಬ್ಬಾಳಿಕೆಗೆ ಒಳಗಾದವರು, ಖಿನ್ನರಾದವರು, ಚಿಕ್ಕ ಮಕ್ಕಳು ಸಹ, ಯೇಸುವಿನ ಕಡೆಗೆ ತಡೆಯಲಸಾಧ್ಯವಾದಷ್ಟು ಮಟ್ಟಿಗೆ ಸೆಳೆಯಲ್ಪಟ್ಟರು. ಆ ದಿನದ ಅಹಂಕಾರಿಗಳೂ ಸ್ವನೀತಿವಂತರೂ ಆದ ವೈದಿಕರು ಹಾಗೂ ಮುಖಂಡರಿಂದ ಅವರು ತುಚ್ಛೀಕರಿಸಲ್ಪಟ್ಟಿದ್ದರು. ಆದರೆ ಅವರು ಯೇಸುವಿನಲ್ಲಿ, ತಮಗೆ ಸಲ್ಲತಕ್ಕ ಘನತೆಯನ್ನು ಕೊಟ್ಟಂತಹ ಯಾರೋ ಒಬ್ಬನನ್ನು ಕಂಡುಕೊಂಡರು.
ಯೇಸುವಿನ ಅನುಕರಣೆಯಲ್ಲಿ, ನಾವು ಕೂಡ ನಮ್ಮ ಜೊತೆ ವಿಶ್ವಾಸಿಗಳಿಗೆ ಚೈತನ್ಯದ ಮೂಲವಾಗಿರಲು ಬಯಸುತ್ತೇವೆ. ಇದರ ಅರ್ಥ, ನಮ್ಮ ನಡೆನುಡಿಗಳಿಂದ ಅವರ ಭಕ್ತಿವೃದ್ಧಿಮಾಡಲಿಕ್ಕಾಗಿರುವ ಸಂದರ್ಭಗಳಿಗಾಗಿ ಎದುರುನೋಡುವುದೇ ಆಗಿದೆ. ನಮ್ಮ ಸಂಭಾಷಣೆಯಲ್ಲಿ, ದಯಾಪರವಾದ ಹಾಗೂ ಸಕಾರಾತ್ಮಕ ಹೇಳಿಕೆಗಳೊಂದಿಗೆ ಪ್ರಾಮಾಣಿಕವಾಗಿ ಉದಾರಿಗಳಾಗಿರುವುದು ಯಾವಾಗಲೂ ಸೂಕ್ತವಾದದ್ದಾಗಿದೆ. (ರೋಮಾಪುರ 1:11, 12; 1 ಥೆಸಲೊನೀಕ 5:11) ನಾವು ಏನು ಹೇಳುತ್ತೇವೆ ಹಾಗೂ ಅದನ್ನು ಹೇಗೆ ಹೇಳುತ್ತೇವೆ ಎಂಬ ವಿಷಯದಲ್ಲಿ ಜಾಗರೂಕರಾಗಿರುವುದರ ಮೂಲಕ, ಇತರರ ಅನಿಸಿಕೆಗಳ ವಿಷಯದಲ್ಲಿ ನಾವು ಸಂವೇದನಾತ್ಮಕರಾಗಿದ್ದೇವೆ ಎಂಬುದನ್ನು ತೋರಿಸುತ್ತೇವೆ. (ಕೊಲೊಸ್ಸೆ 4:6) ಕ್ರೈಸ್ತ ಕೂಟಗಳಲ್ಲಿ ಸರಿಯಾದ ಉಡುಗೆ ಹಾಗೂ ಸಭ್ಯಾಚಾರಗಳು ಸಹ, ನಮ್ಮ ದೇವರ, ಆತನ ಆರಾಧನೆಯ, ಹಾಗೂ ನಮ್ಮ ಜೊತೆ ಆರಾಧಕರ ಘನತೆಗಾಗಿ ಅಪಾರ ಗೌರವವನ್ನು ಪ್ರತಿಬಿಂಬಿಸುತ್ತವೆ.
ಯೇಸು ಜನರ ಸೇವೆಮಾಡುತ್ತಿದ್ದಾಗಲೂ, ಅವರ ಘನತೆಯನ್ನು ಗೌರವಿಸಿದನು. ಅವನು ಎಂದೂ ಇತರರಿಗೆ ಕೆಟ್ಟ ಹೆಸರು ಬರುವಂತೆ ಮಾಡುವ ಮೂಲಕ ಅಥವಾ ಅವರನ್ನು ಅಪಮಾನಗೊಳಿಸುವ ಮೂಲಕ ತನ್ನ ಅಂತಸ್ತನ್ನು ಹೆಚ್ಚಿಸಿಕೊಳ್ಳಲಿಲ್ಲ. ವಾಸಿಯಾಗಲಿಕ್ಕಾಗಿ ಕುಷ್ಠ ರೋಗಿಯೊಬ್ಬನು ಯೇಸುವಿನ ಬಳಿಗೆ ಬಂದಾಗ, ಅವನು ಆ ಕುಷ್ಠ ರೋಗಿಯನ್ನು ಅಶುದ್ಧನು ಅಥವಾ ಅನರ್ಹನೆಂದು ಹೇಳಿ ಹಿಂದೆ ಕಳುಹಿಸಿಬಿಡಲಿಲ್ಲ, ಅಥವಾ ತನ್ನ ಕಡೆಗೆ ಗಮನವನ್ನು ಸೆಳೆಯುವ ಮೂಲಕ ತನ್ನ ಸ್ವರೂಪ ಪ್ರದರ್ಶನಮಾಡಿಕೊಳ್ಳಲಿಲ್ಲ. ಬದಲಾಗಿ, “ಸ್ವಾಮೀ, ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡ ಬಲ್ಲೆ” ಎಂದು ಆ ಕುಷ್ಠ ರೋಗಿಯು ಯೇಸುವಿನ ಬಳಿ ವಿನಂತಿಸಿಕೊಂಡಾಗ, “ನನಗೆ ಮನಸ್ಸುಂಟು” ಎಂದು ಹೇಳುವ ಮೂಲಕ ಅವನು ಆ ಕುಷ್ಠ ರೋಗಿಯನ್ನು ಘನತೆಗೇರಿಸಿದನು. (ಲೂಕ 5:12, 13) ಅಗತ್ಯದಲ್ಲಿರುವವರಿಗೆ ಸಹಾಯ ಮಾಡುವುದು ಮಾತ್ರವಲ್ಲ, ಅವರು ಒಂದು ಹೊರೆಯಾಗಿಲ್ಲ, ಬದಲಾಗಿ ಅವರ ಅಗತ್ಯವಿದೆ ಹಾಗೂ ಅವರು ಪ್ರೀತಿಸಲ್ಪಡುತ್ತಾರೆಂದು ಅವರಿಗೆ ಪುನರಾಶ್ವಾಸನೆ ನೀಡುವುದು ನಮಗೆಷ್ಟು ಆಹ್ಲಾದಕರವಾಗಿದೆ! ಈ ಲೋಕದಲ್ಲಿ, ನಾಚಿಕೆ ಸ್ವಭಾವದ, ಖಿನ್ನರಾದ, ಹಾಗೂ ಅಶಕ್ತ ಜನರು ಸಾಮಾನ್ಯವಾಗಿ ಅಲಕ್ಷಿಸಲ್ಪಡುತ್ತಾರೆ, ಧಿಕ್ಕರಿಸಲ್ಪಡುತ್ತಾರೆ, ಅಥವಾ ಅಪಮಾನಗೊಳಿಸಲ್ಪಡುತ್ತಾರೆ. ಆದರೆ ಅವರು ತಮ್ಮ ಕ್ರೈಸ್ತ ಸಹೋದರರು ಹಾಗೂ ಸಹೋದರಿಯರ ನಡುವೆ ನಿಜವಾದ ಸಾಹಚರ್ಯ ಹಾಗೂ ಅಂಗೀಕಾರವನ್ನು ಕಂಡುಕೊಳ್ಳಬೇಕು. ಈ ಮನೋವೃತ್ತಿಗೆ ನೆರವನ್ನು ನೀಡಲಿಕ್ಕಾಗಿ ನಾವು ನಮ್ಮ ಪಾಲನ್ನು ನಿರ್ವಹಿಸಬೇಕು.
ಯೇಸು ತನ್ನ ಶಿಷ್ಯರನ್ನು “ತನ್ನವ”ರೋಪಾದಿ ಪ್ರೀತಿಸಿದನು ಮತ್ತು ಅವರ ಕುಂದುಕೊರತೆಗಳು ಹಾಗೂ ವ್ಯಕ್ತಿತ್ವದ ವಿಚಿತ್ರ ನಡವಳಿಕೆಗಳ ಎದುರಿನಲ್ಲಿಯೂ “ಕೊನೆಯ ವರೆಗೂ ಅವರನ್ನು ಪ್ರೀತಿಸಿದನು.” (ಯೋಹಾನ 13:1, NW) ಅವರಲ್ಲಿ ಅವನು ಶುದ್ಧವಾದ ಹೃದಯಗಳನ್ನು ಹಾಗೂ ತನ್ನ ತಂದೆಯ ಕಡೆಗೆ ಪೂರ್ಣಪ್ರಾಣದ ಭಕ್ತಿಯನ್ನು ಕಂಡನು. ತದ್ರೀತಿಯಲ್ಲಿ, ನಮ್ಮ ಜೊತೆ ಆರಾಧಕರು ನಮಗಿಷ್ಟವಾದ ರೀತಿಯಲ್ಲಿ ಕೆಲಸಗಳನ್ನು ಮಾಡುವುದಿಲ್ಲವೆಂಬ ಕಾರಣದಿಂದ ಅಥವಾ ಅವರ ಹವ್ಯಾಸಗಳು ಇಲ್ಲವೆ ವ್ಯಕ್ತಿತ್ವಗಳು ನಮ್ಮನ್ನು ರೇಗಿಸುತ್ತವೆಂಬ ಕಾರಣದಿಂದ ನಾವು ಅವರ ಮೇಲೆ ದುಷ್ಟ ಹೇತುಗಳನ್ನು ಹೊರಿಸಬಾರದು. ನಮ್ಮ ಸಹೋದರರ ಘನತೆಗಾಗಿರುವ ಗೌರವವು, ಅವರು ಸಹ ಯೆಹೋವನನ್ನು ಪ್ರೀತಿಸುತ್ತಾರೆ ಮತ್ತು ಒಳ್ಳೆಯ ಹೇತುಗಳಿಂದ ಆತನನ್ನು ಸೇವಿಸುತ್ತಾರೆಂದು ನಂಬುತ್ತಾ, ಅವರು ಹೇಗಿದ್ದಾರೋ ಹಾಗೆಯೇ ಅವರನ್ನು ಪ್ರೀತಿಸುವಂತೆ ಹಾಗೂ ಅವರನ್ನು ಅಂಗೀಕರಿಸುವಂತೆ ನಮ್ಮನ್ನು ಪ್ರಚೋದಿಸುವುದು.—1 ಪೇತ್ರ 4:8-10.
ವಿಶೇಷವಾಗಿ ಹಿರಿಯರು, ತಮ್ಮ ಪರಾಮರಿಕೆಗೆ ಒಪ್ಪಿಸಲ್ಪಟ್ಟಿರುವವರಿಗೆ ಅನಗತ್ಯವಾದ ಚಿಂತೆಯನ್ನು ಉಂಟುಮಾಡದಿರುವಂತೆ ಜಾಗರೂಕರಾಗಿರತಕ್ಕದ್ದು. (1 ಪೇತ್ರ 5:2, 3) ಪಾಪಕ್ಕೆ ವಶವಾಗಿರುವ ಒಬ್ಬ ಸಭಾ ಸದಸ್ಯನನ್ನು ಭೇಟಿಯಾಗುವಾಗ, ಹಿರಿಯರು ದಯಾಭಾವದಿಂದ ಹಾಗೂ ಪರಿಗಣನೆಯಿಂದ ತಮ್ಮ ಮಾತುಗಳನ್ನು ಮೃದುಗೊಳಿಸುವುದು ಮತ್ತು ಅನಗತ್ಯವಾಗಿ ಪೇಚಾಟವನ್ನುಂಟುಮಾಡುವ ಪ್ರಶ್ನೆಗಳನ್ನು ಕೇಳದಿರುವುದು ಒಳ್ಳೆಯದು. (ಗಲಾತ್ಯ 6:1) ಗಂಭೀರವಾದ ತಿದ್ದುಪಾಟು ಅಥವಾ ಶಿಸ್ತು ಕೊಡಲ್ಪಡುವಾಗಲೂ, ಅವರು ತಪ್ಪಿತಸ್ಥನ ಯೋಗ್ಯವಾದ ಘನತೆಯನ್ನು ಹಾಗೂ ಸ್ವಗೌರವವನ್ನು ಸನ್ಮಾನಿಸುವುದನ್ನು ಮುಂದುವರಿಸುತ್ತಾರೆ.—1 ತಿಮೊಥೆಯ 5:1, 2.
ವೈಯಕ್ತಿಕ ಘನತೆಯನ್ನು ಕಾಪಾಡಿಕೊಳ್ಳುವುದು
ದೇವರ ಸ್ವರೂಪ ಹಾಗೂ ಹೋಲಿಕೆಯಲ್ಲಿ ಉಂಟುಮಾಡಲ್ಪಟ್ಟವರಾಗಿದ್ದು, ನಮ್ಮ ದೈನಂದಿನ ಜೀವಿತಗಳಲ್ಲಿ ನಾವು ಸಾಧ್ಯವಿರುವಷ್ಟು ಹೆಚ್ಚು ಮಟ್ಟಿಗೆ ದೇವರ ಮಹಿಮಾಯುತ ಗುಣಗಳನ್ನು—ಆತನ ಘನತೆಯನ್ನೂ ಒಳಗೊಂಡು—ಪ್ರತಿಫಲಿಸಬೇಕು. (ಆದಿಕಾಂಡ 1:26) ತದ್ರೀತಿಯಲ್ಲಿ, “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬ ಆಜ್ಞೆಯಲ್ಲಿ ಅಡಕವಾಗಿರುವ ವಿಷಯವು, ಸಮತೂಕ ಮಟ್ಟದ ವೈಯಕ್ತಿಕ ಘನತೆ ಹಾಗೂ ಸ್ವಗೌರವಕ್ಕಾಗಿರುವ ಆವಶ್ಯಕತೆಯೇ ಆಗಿದೆ. (ಮತ್ತಾಯ 22:39) ವಾಸ್ತವಾಂಶವೇನೆಂದರೆ, ಇತರರು ನಮಗೆ ಗೌರವವನ್ನು ತೋರಿಸುವಂತೆ ಹಾಗೂ ಘನತೆಯನ್ನು ಕೊಡುವಂತೆ ನಾವು ಬಯಸುವಲ್ಲಿ, ನಾವು ಅದಕ್ಕೆ ಅರ್ಹರಾಗಿದ್ದೇವೆ ಎಂಬುದನ್ನು ನಾವು ತೋರಿಸಬೇಕು.
ಸ್ವಗೌರವ ಹಾಗೂ ವೈಯಕ್ತಿಕ ಘನತೆಯನ್ನು ಕಾಪಾಡಿಕೊಳ್ಳುವುದರಲ್ಲಿರುವ ಪ್ರಮುಖ ಅಂಶವು ಯಾವುದೆಂದರೆ, ಒಂದು ಒಳ್ಳೆಯ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳುವುದೇ. ಒಂದು ದೂಷಿತ ಮನಸ್ಸಾಕ್ಷಿ ಹಾಗೂ ದೋಷಿಭಾವದ ಮನೋವೇದನೆಗಳು, ಅಯೋಗ್ಯಭಾವ, ಆಶಾಭಂಗ, ಮತ್ತು ಖಿನ್ನತೆಯ ಅನಿಸಿಕೆಗಳಿಗೆ ಸುಲಭವಾಗಿ ಮುನ್ನಡೆಸಬಲ್ಲವು. ಆದುದರಿಂದ, ವ್ಯಕ್ತಿಯೊಬ್ಬನು ಒಂದು ಗಂಭೀರವಾದ ತಪ್ಪನ್ನು ಮಾಡಿರುವಲ್ಲಿ, ಅವನು ಪಶ್ಚಾತ್ತಾಪಪಡಲಿಕ್ಕಾಗಿ ಆ ಕೂಡಲೆ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು ಮತ್ತು “ಯೆಹೋವನ ಮೂಲಕ . . . ಚೈತನ್ಯದಾಯಕ ಕಾಲ”ವನ್ನು (NW) ಆನಂದಿಸಲಿಕ್ಕಾಗಿ, ಹಿರಿಯರಿಂದ ಆತ್ಮಿಕ ಸಹಾಯವನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು. ಈ ಚೈತನ್ಯದಾಯಕ ವಿಷಯದಲ್ಲಿ, ಒಬ್ಬನ ವೈಯಕ್ತಿಕ ಘನತೆ ಹಾಗೂ ಸ್ವಗೌರವಗಳ ಪುನಃಸ್ಸ್ಥಾಪನೆಯೂ ಸೇರಿದೆ.—ಅ. ಕೃತ್ಯಗಳು 3:19.
ಆದರೆ ನಮ್ಮ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯನ್ನು ಯಾವುದೂ ಮಲಿನಗೊಳಿಸದಂತೆ ಅಥವಾ ದುರ್ಬಲಗೊಳಿಸದಂತೆ ಕಾಪಾಡಿಕೊಳ್ಳಲಿಕ್ಕಾಗಿ ಸತತವಾದ ಪ್ರಯತ್ನವನ್ನು ಮಾಡುವುದು ಹೆಚ್ಚು ಉತ್ತಮವಾದದ್ದಾಗಿದೆ. ನಮ್ಮ ದೈನಂದಿನ ಜೀವಿತದ ಎಲ್ಲ ಕ್ಷೇತ್ರಗಳಲ್ಲಿ—ತಿನ್ನುವುದು, ಕುಡಿಯುವುದು, ವ್ಯಾಪಾರ, ಮನೋರಂಜನೆ, ವಿರುದ್ಧ ಲಿಂಗಜಾತಿಯ ಜನರೊಂದಿಗಿನ ವ್ಯವಹಾರಗಳು—ಆತ್ಮನಿಯಂತ್ರಣವನ್ನು ರೂಢಿಸಿಕೊಳ್ಳುವುದು, ಒಂದು ಒಳ್ಳೆಯ ಮನಸ್ಸಾಕ್ಷಿಯನ್ನು ಇಟ್ಟುಕೊಳ್ಳಲು ನಮಗೆ ಸಹಾಯ ಮಾಡುವುದು ಮತ್ತು ನಮ್ಮ ಜೀವಿತಗಳಲ್ಲಿ ದೇವರ ಮಹಿಮೆ ಹಾಗೂ ಘನತೆಯನ್ನು ಪ್ರತಿಫಲಿಸುವಂತೆ ನಮ್ಮನ್ನು ಶಕ್ತರನ್ನಾಗಿ ಮಾಡುವುದು.—1 ಕೊರಿಂಥ 10:31.
ನಮ್ಮ ತಪ್ಪುಗಳ ಕುರಿತಾದ ದೋಷಿಭಾವವು ಕಡಿಮೆಯಾಗದಿರುವುದಾದರೆ ಆಗೇನು? ಅಥವಾ ಅನುಭವಿಸಲ್ಪಟ್ಟ ನಿಂದೆಗಳ ಸ್ಮರಣೆಗಳು ಸತತವಾಗಿ ವೇದನಾಭರಿತವಾಗಿರುವುದಾದರೆ ಆಗೇನು? ಈ ಭಾವನೆಗಳು ನಮ್ಮ ವೈಯಕ್ತಿಕ ಘನತೆಯನ್ನು ಜಜ್ಜಿಬಿಡಸಾಧ್ಯವಿದೆ ಮತ್ತು ತೀವ್ರವಾದ ಖಿನ್ನತೆಯನ್ನು ಉಂಟುಮಾಡಸಾಧ್ಯವಿದೆ. ಕೀರ್ತನೆ 34:18ರಲ್ಲಿ ಕಂಡುಬರುವ ರಾಜ ದಾವೀದನ ಮಾತುಗಳು ಎಷ್ಟು ಸಾಂತ್ವನದಾಯಕವಾಗಿವೆ: “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ. ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ”! ತನ್ನ ಸೇವಕರು ಖಿನ್ನತೆಯೊಂದಿಗೆ ಹಾಗೂ ಅಯೋಗ್ಯ ಭಾವನೆಗಳೊಂದಿಗೆ ಹೆಣಗಾಡಬೇಕಾಗಿರುವಾಗ, ಯೆಹೋವನು ಅವರನ್ನು ಉದ್ಧರಿಸಲು ಸಿದ್ಧನೂ ಸ್ವಇಚ್ಛೆಯುಳ್ಳವನೂ ಆಗಿದ್ದಾನೆ. ಆತನಿಗೆ ಮೊರೆಯಿಡುವುದು ಹಾಗೂ ಇದರೊಂದಿಗೆ ಕ್ರೈಸ್ತ ಹೆತ್ತವರು, ಹಿರಿಯರು, ಮತ್ತು ಸಭೆಯಲ್ಲಿರುವ ಇತರ ಪ್ರೌಢ ವ್ಯಕ್ತಿಗಳಂತಹ ಆತ್ಮಿಕವಾಗಿ ಅರ್ಹರಾದವರಿಂದ ಸಹಾಯವನ್ನು ಪಡೆದುಕೊಳ್ಳಲು ಪ್ರಯತ್ನಿಸುವುದು, ಸ್ವಗೌರವವನ್ನು ಹಾಗೂ ವೈಯಕ್ತಿಕ ಘನತೆಯನ್ನು ಪುನಃ ಪಡೆದುಕೊಳ್ಳಲಿಕ್ಕಾಗಿರುವ ಒಂದು ಮಾರ್ಗವಾಗಿದೆ.—ಯಾಕೋಬ 5:13-15.
ಇನ್ನೊಂದು ಕಡೆಯಲ್ಲಿ, ವೈಯಕ್ತಿಕ ಘನತೆ ಹಾಗೂ ದುರಹಂಕಾರದ ನಡುವಿನ ರೇಖೆಯನ್ನು ದಾಟುವುದರ ವಿರುದ್ಧ ನಾವು ಜಾಗ್ರತೆ ವಹಿಸಬೇಕು. ಶಾಸ್ತ್ರೀಯ ಸಲಹೆಯೇನೆಂದರೆ, “ಯಾರೂ [ತನ್ನ] ಯೋಗ್ಯತೆಗೆ ಮೀರಿ ತನ್ನನ್ನು ಭಾವಿಸಿಕೊಳ್ಳದೆ ದೇವರು ಒಬ್ಬೊಬ್ಬನಿಗೆ ಎಂಥೆಂಥ ವಿಶ್ವಾಸ ಬಲವನ್ನು ಕೊಟ್ಟನೋ ಅದಕ್ಕೆ ತಕ್ಕ ಹಾಗೆ ನ್ಯಾಯವಾದ ಅಭಿಪ್ರಾಯದಿಂದ ತನ್ನನ್ನು ಭಾವಿಸಿಕೊಳ್ಳಬೇಕು.” (ರೋಮಾಪುರ 12:3) ಸ್ವಗೌರವವನ್ನು ಬೆಳೆಸಿಕೊಳ್ಳುವುದು ಸೂಕ್ತವಾಗಿರುವಾಗ, ನಮ್ಮ ಸ್ವಂತ ಯೋಗ್ಯತೆಯನ್ನು ಅತಿಶಯಿಸಲು ಅಥವಾ ಇತರರ ಮುಂದೆ ಪ್ರತಿಷ್ಠೆಯನ್ನು ಪಡೆಯಲಿಕ್ಕಾಗಿ ಕೆಲವರು ಮಾಡುವ ಸ್ವಾರ್ಥಪರ ಹಾಗೂ ಮಿತಿಮೀರಿದ ಪ್ರಯತ್ನಗಳೊಂದಿಗೆ ಮಾನವ ಘನತೆಯನ್ನು ಗೊಂದಲಗೊಳಿಸಲು ನಾವು ಬಯಸುವುದಿಲ್ಲ.
ಹೌದು, ಇನ್ನೊಬ್ಬ ವ್ಯಕ್ತಿಯ ಘನತೆಗಾಗಿರುವ ಗೌರವವು ಒಂದು ಕ್ರೈಸ್ತ ಆವಶ್ಯಕತೆಯಾಗಿದೆ. ನಮ್ಮ ಕುಟುಂಬ ಸದಸ್ಯರು ಹಾಗೂ ನಮ್ಮ ಜೊತೆ ಕ್ರೈಸ್ತರು—ಎಲ್ಲರೂ, ನಮ್ಮ ಗೌರವ, ಸನ್ಮಾನ ಮತ್ತು ಮಾನ್ಯತೆಗೆ ಯೋಗ್ಯರೂ ಅರ್ಹರೂ ಆಗಿದ್ದಾರೆ. ನಮ್ಮಲ್ಲಿ ಪ್ರತಿಯೊಬ್ಬರಿಗೆ ಯೆಹೋವನು ಸ್ವಲ್ಪ ಮಟ್ಟಿಗಿನ ಘನತೆ ಹಾಗೂ ಸನ್ಮಾನವನ್ನು ಕೊಟ್ಟಿದ್ದಾನೆ. ನಾವು ಅದನ್ನು ಅಂಗೀಕರಿಸಿ, ಕಾಪಾಡಿಕೊಳ್ಳಬೇಕು. ಆದರೆ ಎಲ್ಲಕ್ಕಿಂತಲೂ ಮಿಗಿಲಾಗಿ, ನಮ್ಮ ಸ್ವರ್ಗೀಯ ಪಿತನಾದ ಯೆಹೋವ ದೇವರ ಅತಿಶಯವಾದ ಘನತೆ ಹಾಗೂ ಮಹಿಮೆಗಾಗಿ ನಾವು ಅಗಾಧವಾದ ಭಯಭಕ್ತಿಯನ್ನು ಬೆಳೆಸಿಕೊಳ್ಳಬೇಕು.
[ಪುಟ 31 ರಲ್ಲಿರುವ ಚಿತ್ರ]
ಯುವ ಜನರು ದುರ್ಬಲರಾಗಿರುವವರಿಗಾಗಿ ಗೌರವವನ್ನು ತೋರಿಸಸಾಧ್ಯವಿದೆ